ಮಿಂಚಿನ ದೀಪ

ಮಿಂಚಿನ ದೀಪ

ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು. ನರಕ ಚತುದರ್ಶಿಯ ಹಿಂದಿನ ದಿನ ಊರಿನಲ್ಲಿ ಹಂಡೆತಿಕ್ಕಿ ಬಾವಿಯಿಂದ ಜಗ್ಗಿ ಜಗ್ಗಿ ನೀರು ತುಂಬುವ ತನ್ನ ಬಾಲ್ಯವನ್ನು ಗುಣಶೀಲ ನೆನಪಿಸಿಕೊಳ್ಳುತ್ತ, ಹಂಡೆಗೆ ಚುಕ್ಕಿ ಇಡಲು ತಾನೂ ತನ್ನಕ್ಕ ಜಗಳಾಡಿದ್ದು, ಜೇಡಿಮಣ್ಣಿನ ಬಿಳಿ ಕೆಂಪು ಬಣ್ಣಗರಟದಲ್ಲಿ ಕಲಸಿಟ್ಟು, ಮತ್ತೆ ಹಂಡೆಯ ಕುತ್ತಿಗೆಗೆ ಮಾಲೆ ಕಟ್ಟಲು ಹಳದಿ ಕರವೀರ ಹೂಗಳನ್ನು ಹೊಳೆಯ ಬದಿಯಲ್ಲಿ ಇರುವ ವಲ್ಲೀನಾಯ್ಕನ ಅಂಗಳಕ್ಕೆ ಹೆಕ್ಕಲು ಹೋದಾಗ ಅವನ ನಾಯಿ ಅಟ್ಟಿಸಿಕೊಂಡು ಬರುತ್ತಿದ್ದದು, ಮತ್ತೆ ಚತುದರ್ಶಿ ದಿನ ಇನ್ನು ಕಣ್ಣತುಂಬ ನಿದ್ದೆ ಇದ್ದಾಗಲೇ ಅಜ್ಜಯ್ಯ ದೇವರ ಮುಂದೆ ಕುಳ್ಳಿರಿಸಿ ನೆತ್ತಿಗೆ ಪಚ್ ಪಚ್ ಎಣ್ಣೆ ಹಾಕಿ, ಸುಡು ಸುಡು ಹಂಡೆ ನೀರು ನೆತ್ತಿಯ ಮೇಲೆ ಸುರಿದಾಗ ಎಣ್ಣೆ ನೀರು ಭಾರಕ್ಕೆ ಮತ್ತೆ ಆಳವಾದ ನಿದ್ದೆಯ ಗುಂಗಿಗೆ ಇಳಿಯುತ್ತಿದ್ದನ್ನು, ಆರತಿ ಮಾಡಿಸಿಕೊಳ್ಳುವಾಗ ಅರೆ-ತೆರೆದ ಕಣ್ಣುಗಳಿಂದ ಆರತಿ ನೋಡಿ ಅದರ ಮಿಣಿ ಮಿಣಿ ಬೆಳಕನ್ನು ಕಣ್ಗೊಂಬೆಯೊಳಗೆ ಅಲ್ಲಾಡಿಸುತ್ತ ಮತ್ತೆ ನಿದ್ದೆ ಆಳಕ್ಕಿಳಿಯುವದನ್ನು, ಈ ಮೀಟುವ ಬೆರಳುಗಳಿಂದ ಪ್ರಾಣ ಹುಟ್ಟಿಕೊಳ್ಳುವಂತೆ, ಸರಿದ ರೇಖೆಗಳನ್ನು ಕ್ಯಾನ್ವಾಸಿನ ಮೇಲೆ ತಂತುಗಳನ್ನಾಗಿ ಮೂಡಿಸತೊಡಗಿದಳು.

ಗುಣಶೀಲಳಿಗೆ ಹರಿವ ಜಗತ್ತು ಹೇಗೆ ದಿನವೂ ಹರಿದು ಹೋಗುತ್ತದೆ-ನದಿಯಂತೆ; ತೇಲುತ್ತದೆ ನೆನಪುಗಳು ಎಲೆಗಳು ತೇಲಿದಂತೆ, ಎಲ್ಲೋ ಹಚ್ಚಿದ ಹಣತೆಯ ದೀಪ ತನ್ನ ಕೈಯಲ್ಲಿ ಈ ದಿನ ಮಿನುಗುತ್ತದೆ ಎಂಬ ಭಾವ, ಮೆಲ್ಲಗೆ ಚಳಿಗಾಲದ ಸಂಜೆಯ ಆರ್ದತೆಯಂತೆ ಎದೆಯ ಬೇರುಗಳಿಗೆ, ಇಬ್ಬನಿ ಹನಿ ಇಳಿಸಿದಂತೆ ಅನಿಸಿತೊಡಗಿತು. ತನ್ನಲ್ಲೇ ಈ ಒಂಟಿತನದ ಗುರುತು ಉಳಿಯಬಾರದು. ತನ್ನ ಧ್ಯಾನಕ್ಕೆ ತನ್ನ ಬದುಕಿನ ಒಡಲಿಗೆ, ತನ್ನ ಗೋಲ ಕಣ್ಣಗಳೂ ಆಕಾಶಕ್ಕೆ ಪ್ರತಿದಿನ ದೀಪಾವಳಿ ದೀಪಗಳನ್ನು ಹಚ್ಚಬೇಕು, ಈಗಾಗಲೇ ಮುಕ್ಕಾಲು ದಾರಿ ಕತ್ತಲಲ್ಲಿ ಸಾಗಿದ್ದಾಗಿದೆ. ಉಳಿದ ದಾರಿಯಲ್ಲಿ ಹಣತೆಗಳ ಹಚ್ಚಬೇಕು. ಎಲ್ಲೆಲ್ಲೂ ಹಳದಿಗೊಂಡೆ ಹೂಗಳನ್ನು ಇಡಬೇಕು. ಗೊಂಡೆಹೂ ಬಣ್ಣ, ಹಣತೆ ಬಣ್ಣ ಒಂದಾಗಬೇಕು. ಬೇಸರದ ಕ್ಷಣಗಳನ್ನು ಜಾರಿಸಿ, ದಿವ್ಯದ ಚಿತ್ರದ ಬೆರಗು, ಕವಿತೆಯ ಭಾವ, ಗೀತೆಯ ರಾಗವಾಗಬೇಕು, ಮೆಲ್ಲಗೆ ದೋಣಿ ತೇಲಿಸಬೇಕು, ಸ್ವರೂಪದ ಲಹರಿಯಲ್ಲಿ ಮನಸ್ಸು ಮೋಡವಾಗಬೇಕು, ತೇಲಬೇಕು, ಚಿಕ್ಕಿಗಳ ಸ್ಪರ್ಶದಿಂದ ನೆರಳಾಗಬೇಕು, ಮರದೊಳಗೆ ಮೌನ ಆಗಬೇಕು, ಗುಣಶೀಲಳಿಗೆ ಸಂಜೆಯ ಮೌನದಲ್ಲಿ ಸಾವಿರ ಸಂಭಾಷಣೆಗಳಿದ್ದವು. ಎಲ್ಲಿಯ ಹಂಡೆ? ಎಲ್ಲಿಯ ಹೂಗಳು? ಬಟನ್ ಒತ್ತಿದರೆ ಬಿಸಿನೀರು ಬರುತ್ತದೆ. ಮಾಡಲು ಕೆಲಸವಿಲ್ಲದೇ ಮೈಯ ಒಜ್ಜೆ ಆಗಿದೆ. ಮನೆ ತುಂಬ ಮಕ್ಕಳೇ ಮರಿಗಳೇ? ಬರೀ ಖಾಲಿ ಮನೆ ಒಮ್ಮೆ ಕಸ ಗೂಡಿಸಿದರೆ ಮತ್ತೆ ಮರುದಿವಸ, ನೀರು ತುಂಬುವ ಹಬ್ಬ ಬರೀ ಮನಸ್ಸಿನಲ್ಲೇ ಉಳಿಯಿತು. ಪಕ್ಕದ ಮನೆ ಮಗು ಸತ್ಯನ್ ಇನ್ನೂ ಶಾಲೆಯಿಂದ ಬಂದಿಲ್ಲ ಕಾಂಪೌಂಡಿನ ಮೂಲೆಯಲ್ಲಿದ್ದ ಅಶೋಕ ಮರದಲ್ಲಿ ಗೂಡು ಕಟ್ಟಿದ ಪುರಲೆ ಹಕ್ಕಿ ಇನ್ನೂ ವಾಪಸ್ಸು ಬಂದಿಲ್ಲ. ಅವಳು ಸತ್ಯನ್‌ಗೆ ಪುರಲೇ ಹಕ್ಕಿ ಕಥೆ ದಿನಾಲೂ ಹೇಳುತ್ತಿದ್ದಳು. ಹಕ್ಕಿಯನ್ನು ಒಮ್ಮೊಮ್ಮೆ ತನಗೆ ಹೋಲಿಸಿಕೊಂಡು ನೂರಾರು ಕಲ್ಪನೆಗಳನ್ನು ಕಟ್ಟುತ್ತಿದ್ದಳು. ಮಗು ಬರದ ಸಂಜೆ ಅವಳಿಗೆ ನೀರಸ ಅನಿಸುತ್ತಿತ್ತು. ಓಣಿಯ ಕೊನೆಯ ಕ್ರಾಸ್‌ನಲ್ಲಿರುವ ಸತ್ಯನ್ ಮನೆ ಅವಳಿಗೆ ಪಕ್ಕ ಮನೆ ಆಗಿತ್ತು. ಸತ್ಯನ್ ಬಾರದ ಸಂಜೆ ಅವಳು ಧಾವಿಸುತ್ತಿದ್ದಳು. ‘ಹೊಸ ಕಥೆ ಕಟೀ ನೀ ಬಾರೋ, ಪಪಾಯ ಹಣ್ಣು ತಂದಿಟ್ಟೀನಿ ಬಾರೋ’, ಅಂತ ಪುಸಲಾಯಿಸಿ ಅವನಮ್ಮನ ಅಳುಕಿನ ಒಂದು ನೋಟ ಎದುರಿಸಿ ಅವನನ್ನು ಕರೆತರುತ್ತಿದ್ದಳು. ಈ ದೀಪಾವಳಿ ಹಬ್ಬಕ್ಕೆ ಗುಣಶೀಲ ದೊಡ್ಡ ಬಾಕ್ಸಿನ ತುಂಬ ಪಟಾಕಿ ತಂದಿಟ್ಟಿದ್ದಳು ಗಂಟೆ ಆರಾಯ್ತು, ಸತ್ಯನ್ ಇನ್ನೂ ಏಕೆ ಬಂದಿಲ್ಲ ಅಂತ ಶಥಪಥ ತಿರುಗಾಡುತ್ತಿದ್ದಳು. ಗುಣಶೀಲಳಿಗೆ ಗೇಟಿನ ಸಪ್ಪಳ ಕೇಳಿಸಿತು. ಮಗು ಬಂದಿತು ಅಂತ ಕಾರಂಜಿ ಎದೆಯೊಳಗೆ ಝಲ್ಲೆಂದಿತು. ಆದರೆ ಬಂದವನು ಕೊರಿಯರ್ ಮ್ಯಾನ್ ಆಗಿದ್ದ.

ಗುಣಶೀಲಳಿಗೆ ಆಶ್ಚರ್ಯ ಸಂತೋಷ ಎರಡು ಒಮ್ಮೆಲೇ ಮನಸ್ಸಿನಲ್ಲಿ ಡಿಕ್ಕಿ ಹೊಡೆದುಕೊಂಡವು. ಪಾರ್ಸಲ್ ದೊಡ್ಡದಿದ್ದು, ತನ್ನಂಥವಳಿಗೆ ನಡುವಯಸ್ಸಿನವಳಿಗೆ ಯಾರು ಇಂತಹ ದೊಡ್ಡ ಪಾಕೀಟಿನಲ್ಲಿ ಅದೂ ದೀಪಾವಳಿ ಹಿಂದಿನ ದಿನ ಉಡುಗೊರೆ (ಇಲ್ಲ ಉಡುಗೊರೆ ಇಲ್ಲ ಕೊಡುವ ಬಂಧವೂ ಇಲ್ಲ) ಕಳಿಸಿರಬಹುದು? ಅಂಗಳದ ಗೂಡುದೀಪ ಮೆಲ್ಲಗೆ ಆ ಮುಸ್ಸಂಜೆಯ ಕತ್ತಲೆಗೆ ಹರಿದಾಡಿತ್ತು. ಅವಳು ಭರಭರ ಸಹಿಮಾಡಿ ಪಾರ್ಸಲ್ ತೆಗೆದುಕೊಂಡಳು. ಮೇಲೆ ಶಿವಮೊಗ್ಗದ ಸೀಲ್ ಇತ್ತು. ಖಂಡಿತವಾಗಿ ಅಕ್ಕನ ಚುಲುಬುಲಿ ಮಗಳು ದೀಪಾವಳಿಗೆ ಏನೋ ವಿಶೇಷ ಕಳುಹಿಸಿದ್ದಾಳೆ. ತನ್ನ ಮರುಳುಗಾಡಿನಲ್ಲಿ ಅವಳಿಗೊಂದು ಪುಟ್ಟ ಓಯಾಸೀಸ್ ಕಂಡಿತು.

ಓಣಿಯ ಕೊನೆಯ ತುದಿಯ ಕಡೆಗೆ ಒಮ್ಮೆ ಕಣ್ಣು ಹಾಯಿಸಿ, ಸತ್ಯನ್‍ನ ಕೆಂಪು ಅಂಗಿ ಕಾಣಿಸದೇ ಗುಣಶೀಲ ಪಾಕೀಟು ಒಡೆಯುವ ಸಂಭ್ರಮದಲ್ಲಿ ಒಳಬಂದಳು. ಪಾರ್ಸೆಲ್ ಬಿಚ್ಚಿದವಳಿಗೆ ಬರೀ ಹೂವಿನ ಬುಟ್ಟಿಗಳಿಂದ ತುಂಬಿದ ಗ್ರೀಟಿಂಗ್ ಕಾರ್ಡ್ ಮತ್ತೆ ಮಿಂಚಿನ ಜರಿಯ ಹಾಳೆಯಲ್ಲಿ ಪ್ಯಾಕ್ ಮಾಡಿದ ಪುಟ್ಟ ರಟ್ಟಿನ ಡಬ್ಬಿ ಕಾಣಿಸಿತು. ಪಲ್ಲವಿ ರಾಗವಾಗಿ ಬಿಂಬಿಸಿದ್ದಳು. ದೀಪಾವಳಿ ಶುಭಾಶಯಗಳನ್ನು – ಬತ್ತಿದ ಬನಶಂಕರಿ ಹೊಂಡದಲ್ಲಿ ಬಳಬಳ ಅಂತ ನೀರು ಉಕ್ಕಿ ಬಂದಂತಾಯ್ತು ಗುಣಶೀಲಗಳಿಗೆ. ಆಗುಂಬೆಯ ಮೋಡಗಳೆಲ್ಲ ಹಾರಿ ಹಾರಿ ಬಂದು ಬಯಲು ಸೀಮೆಯ ಬಯಲೆಲ್ಲಾ ತೋಯಿಸಿದಂತಾಯ್ತು – ಭರಭರ ಮಳೆ ಹನಿಗಳ ಉದುರಿಸಿ ಅವಳು ಪಲ್ಲವಿಯ ರಾಗಗಳಿಗೆ ಧಕ್ಕೆ ಮಾಡದಂತೆ ನಿಧಾನವಾಗಿ ಮಿಂಚುವ ಪೇಪರನ್ನು ಬಿಚ್ಚಿದಳು. ಗುಣಶೀಲಳಿಗೆ ಒಮ್ಮೆಲೇ ಮೈಯಲ್ಲಿ ಮಿಂಚಿನ ಸ್ಪರ್ಶವಾಯ್ತು. ಅವಳು ಮೆಲ್ಲಗೆ ಡಬ್ಬಿಯೊಳಗೆ ಕೈ ಹಾಕಿ ಹೊರತೆಗೆದಾಗ ಫಳ ಫಳ ಚಿಕ್ಕಿಗಳ ಮಿಂಚಿನ ಪುಡಿಯಿಂದ ಮಿಂದ, ಮಿಂಚಿನ ಗೋಲಾಕಾರದ ದೀಪ ಅದಾಗಿತ್ತು. ಅದು ನೇರಳೆ ಬಣ್ಣ ಹೊಂದಿತ್ತು. ಕೆಳಗೆ ಸ್ಮೆಲಿಂಗ್ ಲೈಟ್ ಅಂತ ನಮೂದಿಸಿತ್ತು. ಗುಣಶೀಲ ಅಂಗೈಯಲ್ಲಿ ದೀಪ ಹಿಡಿದಾಗ ಅದರ ಮಿಂಚಿನ ಪುಡಿ ಕೈತುಂಬ ಅಂಟಿಕೊಂಡು ಕೈಯಲ್ಲಾ ಮಿಂಚಿಂಗ್; ಕಣ್ಣಿಲ್ಲ ಮಿಂಚಿಂಗ್; ಬಯಲೆಲ್ಲಾ ಮಿಂಚಿಂಗ್; ದೀಪಾವಳಿಯ ಹಬ್ಬದ ಹಣತೆಗಳೆಲ್ಲಾ ಮಿಂಚಿಂಗ್; ಅಲ್ಲಿಗೆ ಆಗ ಬಂದ ಸತ್ಯನ್ ಕಣ್ಣುಗಳು ಕೂಡಾ ಮಿಂಚಿಂಗ್!

“ಅಯ್ಯೋ ಶೀಲಾ ಆಂಟಿ ಎಷ್ಟು ಚೆಂದದ ದೀಪ ಅದೆ, ಯಾರು ಕಳಸ್ಯಾರು? ನಂಗೆ ಕೊಡ, ನಾನು ಹಚ್ಚತೀನಿ”. “ಇಲ್ಲಾ ಸತ್ಯನ್ ನಾಳೆ ಬೆಳಿಗ್ಗೆ ಸ್ನಾನ ಮಾಡಿ ಆರತಿ ಮಾಡಿಸಿಕೊಳ್ಳುತ್ತೀಯಲ್ಲ ಆವಾಗ ಹಚ್ಚೋಣ. ಇದು ಪರಿಮಳದ ದೀಪ. ಪಲ್ಲವಿ ಕಳಿಸಿದ್ದಾಳೆ.” “ಪರಿಮಳ ಅಂದ್ರ ವಾಸನೀ ಏನ”, “ಹೂಂ ಸುವಾಸಿನಿ ದೀಪ ಹಚ್ಚಿದರ ಒಂದು ಥರಾ ಹೂವಿನ ವಾಸನಿ ಬರತದ”. “ಅಂದ್ರ ಇದ್ರಾಗ ಹೂವಿನೆಣ್ಣೆ ಹಾಕಿಯಾರು ಏನ”. “ಮೊದಲು ಕಾಲು ತೊಳಕೊಂಡು ಬಾ. ಪಪ್ಪಾಯಿ ಹಣ್ಣು ಕಟ್‌ ಮಾಡಿ ಇಟ್ಟೀನಿ. ನನಗೆ ಇವತ್ತ ಎರಡು ಖುಷಿ, ಹಣ್ಣು ಮತ್ತು ಪಟಾಕಿ” ಸತ್ಯನ್‌ಗೆ ತೀವ್ರ ಆಸೆಯಿಂದ ಪಪ್ಪಾಯಿ ಹೋಳುಗಳು ಕೆಂಪು ಬಣ್ಣದ ಪಟಾಕಿ ಸರ ಎರಡೂ ಯಾಕೋ ಇವತ್ತು ಆಕರ್ಷಕ ಅನಿಸಲಿಲ್ಲ. ಅವನು ಗುಣಶೀಲಾ ಆಂಟಿ ಜತನದಿಂದ ರಟ್ಟಿನ ಡಬ್ಬಿಯಲ್ಲಿ ಇಡುತ್ತಿದ್ದ ನೇರಳೆ ಬಣ್ಣದ ಸುತ್ತಲೂ ಮಿಂಚು ಅಂಟಿಸಿದ ಗೋಲಾಕಾರದ ದೀಪಗಳನ್ನು ನೋಡುತ್ತ ಬಗ್ಗಿ ಬಗ್ಗಿ ನೋಡುತ್ತ ನಿಂತುಬಿಟ್ಟ. ಗುಣಶೀಲ ತನ್ನ ಕೈಗೆ ಅಂಟಿದ ಮಿಂಚು ಚೂರುಗಳನ್ನು ಸತ್ಯನ್‌ನ ಮುದ್ದು ಮುಖಕ್ಕೆ ಒರೆಸಿದಳು. ಒಮ್ಮೊಮ್ಮೆ ನೀಲಿ ಆಕಾಶದ ಕೋಟಿ ನಕ್ಷತ್ರಗಳೂ ಮಗುವಿನ ಮುಖದಲ್ಲಿ ಮಿನುಗಿದವು, ಮಿನುಗುವ ಮುಖ ಹೊತ್ತ ಸತ್ಯನ್ ಪಪ್ಪಾಯಿ ಹೋಳುಗಳ ಬಾಯಲ್ಲಿ ಹಾಕಲು ಗುಣಶೀಲಳ ಕೈ ಹಿಡಿದು ಎಳೆದುಕೊಂಡು, ಕೊಡುಬಾರ, ಕೊಡುಬಾರ ಅಂತ ಅಡುಗೆ ಮನೆಯ ಕಡೆಗೆ ಎಳೆಯ ಹತ್ತಿದ, ಪೂರ್ತಿ ಕತ್ತಲಾಗಿತ್ತು; ಆಗ ಅವಳು ಕಥೆ ಹೆಣೆಯಲು ಪ್ರಾರಂಭಿಸಿದಳು; ಸತ್ಯನ್‌ಗಾಗಿ; ಅವಳ ಕಂದ ಕೃಷ್ಣನಿಗಾಗಿ.

ಅರೆತರೆದ ತುಟಿಯಿಂದ ಇನ್ನೂ ಮಾತು ಹೊರಬೀಳಿರಲಿಲ್ಲ. ಸತ್ಯನ್ ಹೇಳಿದ, “ರಾಜರ ಕಥೆ ಹೇಳು ಆಂಟಿ ಆನೆಯ ಮೇಲೆ ಅಂಬಾರಿಯ ಮೇಲೆ ಏರಿ ಯುದ್ಧಕ್ಕೆ ಹೊರಟವರ ಕಥೆ ಹೇಳು, ಅರಮನೆ ತುಂಬ ಇರುವ ಗಿಳಿಗಳ ಕಥೆ ಹೇಳು”. ಹೆಣೆಯಲು ಬೇಸತ್ತು ಅವನಿಗೊಂದು ಫ್ಯಾಂಟಸಿ ವಿಚಾರ ತಿಳಿಸಿದಳು. “ಮಿಂಚುವ ದೀಪ ಇವತ್ತು ರಾತ್ರಿ ಹಚ್ಚುತ್ತೇವೆ, ಅಲ್ಲ ನಾವಿಬ್ಬರೂ ಗಪ್ ಚುಪ್ ಅದರ ವಾಸನೆ ಮತ್ತು ಬೆಳಕಿಂದ ಇಡೀ ಬಾದಾಮಿ ಅರಮನೆ ಕೋಟೆಗಳನ್ನು ನೋಡಿ ಬರೋಣ ಪುಟ್ಟ ಅದು ಖರೇ ಖರೇ ಮ್ಯಾಜಿಕ್ ಅದ “ಅಂತ ಹೇಳಿಬಿಟ್ಟಳು. ಅಷ್ಟು ಹೇಳಿದ್ದೇ ತಡ ಸತ್ಯನ್ ಹೊಸ ವರಸೆ ಶುರು ಮಾಡಿಬಿಟ್ಟ. “ನಾ ಇವತ್ತ ರಾತ್ರಿ ಇಲ್ಲೇ ವಸ್ತಿ ಇರಾಂವ್. ಅವ್ವಗೆ ಹೇಳು ಬಾ, ಈಗಲೇ ಹೇಳು ಬಾ” ಅಂತ ಮತ್ತೊಂದು ರಗಳೆ ತಗಾದೆ ತೆಗೆದೇ ಬಿಟ್ಟ. ಅವಳಿಗೆ ಆಗ ತೀವ್ರವಾಗಿ ಅನಿತೊಡಗಿತು. ಸುಮ್ಮನೆ ಒಬ್ಬ ರಾಜನ ಕಥೆ ಹೇಳಲಿಲ್ಲ. ಅಂತ ಸತ್ಯನ್ ಪಂಚತಂತ್ರ ಕಥೆಗಳ ಸೀರಿಯಲ್ ಪ್ರತಿ ಅದಿತ್ಯವಾರ ತಪ್ಪದೇ ಅವಳ ಮನೆಗೆ ಬಂದು ಬಣ್ಣದ ಟಿ.ವಿ.ಯಲ್ಲಿ ನೋಡುತ್ತಿದ್ದ.

ತಿಂಗಳ ಮಗುವಿನಿಂದ ಎದೆಗವಚಿಕೊಂಡ ಸತ್ಯನ್ ಈ ಆರು ವರ್ಷಗಳಲ್ಲಿ ಅದನ್ನು ಸೂಕ್ಷ್ಮ ಚುರುಕ ಆಗಿದ್ದನೆಂದರೆ, ಆತನು ಕೇಳದ ಪ್ರಶ್ನೆಗಳೇ ಇಲ್ಲ, ವಿಚಾರಿಸಿದ ವಿಷಯವಿಲ್ಲ, ಅವನ ಅಪ್ಪ ಅಮ್ಮ ಗದರುತ್ತಿದ್ದರು. “ನಮ್ಮ ತಲೆ ತಿನ್ನಬೇಡ, ನಿಮ್ಮ ಶೀಲಾ ಅಂಟಿಯ ಮನೆಗೆ ಹೋಗು, ನಿನ್ನ ಹಿಡಿಯುವುದು ನಮಗಾಗುವುದಿಲ್ಲ. ಶೀಲ ಆಂಟಿನೇ ಬರೋಬರಿ ನಿನಗೆ” ಸತ್ಯನ್ ಶಾಲೆ ಬಿಟ್ಟ ನಂತರ ನೇರವಾಗಿ ಗುಣಶೀಲಳ ಮನೆಗೆ ಹಾಜರಾಗುತ್ತಿದ್ದ.

ಗುಣಶೀಲಾಳಿಗೆ ದೀಪಾವಳಿ ಅಷ್ಟಕ್ಕಷ್ಟೇ ಹಬ್ಬ ಯಾಕೆಂದರೆ ಅವಳು ಈ ನಲವತ್ತು ವರ್ಷ ಆಯುಷ್ಯದಲ್ಲಿ ಎಂದೂ ಹೊಸಬಟ್ಟೆ ಹಾಕಿಕೊಂಡು ಪಟಾಕಿ ಹಾರಿಸಿರಲಿಲ್ಲ. ಅಜ್ಜಾ ಪಟಾಕಿ ಕೊಡಿಸುತ್ತಿರಲಿಲ್ಲ. ‘ಪಟಾಕಿ ಹೊಡೆದರೂ ದುಡ್ಡು ಸುಟ್ಟ ಹಾಗೆ ಅದರಿಂದ ಹೊಟ್ಟೆ ತುಂಬುತ್ತಾ’ ಅಜ್ಜಯ್ಯಾ ಚಾವಡಿ ತುಂಬ ತುಂಬಿದ ಮೊಮ್ಮಕ್ಕಳ ಹಿಂಡು ನೋಡಿ ಹೇಳುತ್ತಿದ್ದರು. ಅವಳಪಯ್ಯ ಅಲೆಮಾರಿ, ದೀಪಾವಳಿ ಒಂದೇ. ಈದ ಒಂದೇ. ಗುಣಶೀಲಗಳಿಗೆ ಅಲ್ಲಿ ಇಲ್ಲಿ ಕೆಲಸ ಮಾಡಿ ತಮ್ಮ ತಂಗಿಯವರಿಗೆ ಒಪತ್ತಿನ ಊಟ ಹೊಂದಿಸುವದರಲ್ಲಿ ಕಣ್ಣಿಗೆ ಕಾಡಿಗೆ ಹಚ್ಚಲು ಆಗಲೇ ಇಲ್ಲ. ಇನ್ನು ಪಟಾಕಿ ಎಲ್ಲಿಂದ ತಂದಾಳು? ಆದರೆ ಸತ್ಯನ್‌ನ ಕಣ್ಣುಗಳಿಗೆ ಬೆಳಕಿನ ದಾರಿ ಮುಚ್ಚಬಾರದು ಎಂಬ ಪ್ರೀತಿಯಲ್ಲಿ ಅವನಿಗೋಸ್ಕರ ಡಬ್ಬಿ ತುಂಬ ಸರಮಾಲೆ ಪಟಾಕಿ ತಂದಿಟ್ಟಿದ್ದಳು. ಈ ಥಳಕು ಬೆಳಕು ಏಕಾಂತದ ಕನಸುಗಳನ್ನು ಪರದೆಯ ಮೇಲೆ ಮೂಡಿಸಲು ಬೇಕೇ ಎಂಬುದು ಅವಳ ವಿಚಾರವಾಗಿತ್ತು. ಈ ಬಯಲು ದಾರಿಯಲ್ಲಿ ಅವಳಿಗೆ ಹಬ್ಬದ ಚೈತನ್ಯ ಎಂಬಂತೆ ಈ ದಿನ ಮಿಂಚಿನ ದೀಪ ಉಡುಗೊರೆ ಬಂದಿತ್ತು. ಗುಣಶೀಲ ಎಂದುಕೊಂಡಳು, ಬದುಕು ಕಠಿಣವಲ್ಲ ನಡೆದಷ್ಟೂ ನಡೆವ ಅನಂತ ದಾರಿಯಲ್ಲಿ ಬೆಳಕಿನ ಬೀಜ ಕಿರಣಗಳಿವೆ. ಕಣ್ಣು ತುಂಬುತ್ತವೆ, ದಾರಿ ನೇರವಾಗಿಸುತ್ತವೆ. ಸವಿದಷ್ಟೂ ಸವಿಯುವ ಕನಸುಗಳು ಮೈಲುಗಲ್ಲಾಗುತ್ತವೆ.

ಸತ್ಯನ್ ದೀಪಾವಳಿ ದಿವಸ ಕೆಂಪು ಕುರ್ತಾ ಪೈಜಾಮ್ ಧರಿಸಿ ಪಟಾಕಿಗಳ ಸರಮಾಲೆ ಗುಣಶೀಲಳ ಮನೆ ಅಂಗಳದಲ್ಲಿ ಹಚ್ಚಿದ, ಓಣಿಯ ಜನಕ್ಕೆ ಆಶ್ಚರ್ಯ! ಯಾರೊಂದಿಗೂ ಬೆರೆಯದ ಗುಣಶೀಲ ಇವತ್ತು ಒಬ್ಬಳೆ ಪಟಾಕಿ ಹಾರಿಸುತ್ತಿದ್ದಾಳಲ್ಲ! ‘ಗೂಡುದೀಪ ಹಚ್ಚು ಗೂಡು ದೀಪ ಹಚ್ಚು’ ಸತ್ಯನ್ ಅವಳ ಅಂಗಳದಲ್ಲಿ ನಕ್ಷತ್ರಾಕಾರದ ತೂಗು ದೀಪ ಹಚ್ಚಿಸಿಯೇ ಬಿಟ್ಟ. ದೀಪದ ಹೊರಕವಚದ ತೂತುಗಳಿಂದ ಅಂದವಾದ ಗುಂಡ ಗುಂಡಗಿನ ನೆರಳು ಅಂಗಳದ ತುಂಬೆಲ್ಲಾ ಬಿದ್ದಿತು. ಸತ್ಯನ್ ಗುಳುಂ ಗುಳುಂ ಜಾಮೂನು ನುಂಗಿ ಟಬ್ ಟಬ್ ಪಟಾಕಿ ಹೊಡೆದ. ಅವನ ಕರೆಯಲು ಬಂದರೆ ನಾಳೆ ಪಾಡ್ಯದ ಆರತಿ ಮುಗಿಸಿ ದೋಸೆ ತಿಂದುಕೊಂಡೆ ಬರಾಂವ’ ಮೊಂಡು ಹಠಮಾಡಿ ಅವಳ ಆ ರಾತ್ರಿ ಉಳಿದ. ದೀಪಾವಳಿಯ ರಾತ್ರಿಯ ನಕ್ಷತ್ರಗಳೆಲ್ಲಾ ಅವಳ ಅಂಗಳದಲ್ಲಿ ಚೆಲ್ಲಿ ಹಾಸಿದ್ದವು, ಒಂದು ಕೋಮಲ ಮಕಮಲ್ಲ ಚಾದರ, ಸತ್ಯನ್ ಹಾಗೂ ಗುಣಶೀಲ ಆ ರಾತ್ರಿ ಬಹಳ ಉತ್ಸುಕರಾಗಿ ಪಲ್ಲವಿ ಕಳುಹಿಸಿದ ಮಿಂಚಿನ ದೀಪ ಹಚ್ಚಿಟ್ಟರು. ಇತಿಹಾಸ ವರ್ತಮಾನ ಒಂದಾಯಿತು. ಮಿಂಚಿನ ದೀಪ ವಿಚಿತ್ರವಾದ ಕೇದಿಗೆ ಹೂವಿನ ಪರಿಮಳ ಸೂಸಲು ಪ್ರಾರಂಭಿಸಿತು. ಸತ್ಯನ್ ತನ್ನ ಕುತೂಹಲ ತಣಿಯುವವರೆಗೆ ಆ ದೀಪದ ಬೆಳಕಿನ ಮುಂದೆ ಕುಳಿತ. ಕುಳಿತಲ್ಲೇ ಅವ ಭಾರವಾದ ಕಣ್ಣುಗಳ ಮುಚ್ಚಿ ಹಾಗೆಯೇ ಆ ದೇವರ ಮನೆಯ ಕೆಂಪು ನೆಲದ ಮೇಲೆ ಒರಗಿಬಿಟ್ಟಿದ. ಹಾಲು ಹೆಪ್ಪುಹಾಕಿ ಬಂದ ಗುಣಶೀಲಳಿಗೆ ಮಗು ನೆಲದ ಮೇಲೆ ಮಲಗಿದ್ದು ನೋಡಿ. ‘ಅಯ್ಯೋ ಪುಟ್ಟಾ ಬೆಳಗಿನಿಂದ ಪಟಾಕಿ ಹಾರಿಸಿ, ಹಾರಿಸಿ ದಣಿದಿದ್ದೀಯಾ, ಬಾ ಕಂದ ಮಲಗೋಣ ಅಂತ ಹತ್ತಿ ಹೂವನ್ನು ಎದೆಗವಚಿಕೊಂಡಂತೆ ಸತ್ಯನ್‌ನ್ನು ಮಲಗುವ ಕೋಣೆಗೆ ಕರೆದೊಯ್ದು ಹಾಸಿಗೆ ಮೇಲೆ ಮಲಗಿಸಿದಾಗ ಯಾಕೋ ಈ ದೀಪಾವಳಿ ಉಲ್ಲಾಸ ಎನಿಸಿತು ಅವಳಿಗೆ.

ಆ ದೀಪಾವಳಿ ರಾತ್ರಿ ಬೃಹತ್‌ ಬಂಡೆಗಳನ್ನು ಕೊರೆದು ನಿರ್ಮಿಸಲಾದ ಕಲ್ಮನೆಗಳಿಗೆ ಗುಣಶೀಲ ಸ್ವಪ್ನಲೋಕದಲ್ಲಿ ತೇಲಿದ ಹಾಗೆ ಸತ್ಯನ್ ಹಾಗೂ ಮಿಂಚಿನ ದೀಪಗಳೊಂದಿಗೆ ಪ್ರವೇಶಿಸಿದ್ದಳು. ಸತ್ಯನ್ ದುಬುದುಬು ಅಂತ ಓಡಿ ಹೋದ, ಗುಣಶೀಲ ‘ನಿಲ್ಲು ಸತ್ಯನ್’ ದೀಪ ಹಿಡಿದು ನೀನು ಮುಂದೆ ಓಡಿದರೆ ನಾನ್ಹೇಗೆ ಮೆಟ್ಟಿಲುಗಳನ್ನು ಹತ್ತಲಿ’ ಅಂತ ಅಲವತ್ತುಕೊಂಡಾಗ ಸತ್ಯನ್ ಆಗಲೇ ನಟರಾಜನ ಮೂರ್ತಿಯ ಮುಂದುಗಡೆ ದೀಪ ಹಿಡಿದು ನಿಂತು ಬಿಟ್ಟಿದ್ದ. ಕತ್ತಲೆಯ ಅಮವಾಸ್ಯೆ ರಾತ್ರಿ ನಕ್ಷತ್ರಗಳು ಮಿನುಗುತ್ತಿದ್ದವು. ಎತ್ತರದಿಂದ ಕಂಡಾಗ ಪುಟ್ಟ ಪುಟ್ಟ ಜೋಡಿಸಿಟ್ಟ ಮನೆಗಳಿಂದ ದೀಪಾವಳಿಯ ಆಕಾಶಮುಟ್ಟಿಯಲ್ಲಿರುವ ದೀಪಗಳು ಮಿನುಗುತ್ತಿದ್ದವು. “ಅಯ್ಯೋ ಶೀಲಾ ಆಂಟಿ ಇಲ್ಲಿ ನೋಡು ಬಾ ಎಷ್ಟೊಂದು ಕೈಗಳಿದ್ದ ಮನುಷ್ಯ ಅದಾನ” ಸತ್ಯನ್ ಮಿಂಚಿನ ದೀಪದಲ್ಲಿ ಕೆಂಪಗೆ ಪ್ರತಿಫಲಿಸುತ್ತಿದ್ದ ನಟರಾಜನ ಮೂರ್ತಿಯನ್ನು ತೋರಿಸಿದಾಗ ಅವಳೆಂದಳು, ‘ಅದು ನಾಟ್ಯ ಮಾಡುವ ಶಿವನ ಭಂಗಿ, ಶಿವ ದೇವರು ನಿನಗೆ ಗೊತ್ತಲ್ಲ ಮರಿ.’ “ಹೋಗೇ ದೇವರ ಎಲ್ಲಾದರೂ ಡ್ಯಾನ್ಸ್ ಮಾಡ್ತಾನೇನು. ಹೀಂಗ್ಯಾಕೆ ಕೈಗಳನ್ನು ಜೋಡಿಸ್ಯಾರು. ನೀನು ಖರೇ ಹೇಳು” ಅವ ಪೀಡಿಸಿದಾಗ ಆರು ವರ್ಷದ ಸತ್ಯನ್‌ನಿಗೆ ಇತಿಹಾಸ ಸತ್ಯಗಳನ್ನು ಹ್ಯಾಂಗೆ ಕಥೆ ಹೆಣೆದು ಹೇಳಬೇಕು ಅಂತ ತಿಳಿಯಲಿಲ್ಲ ಅವಳಿಗೆ.

ಗುಣಶೀಲ ಹೇಳಿದರು “ಸತ್ಯನ್ ನೀನು ದಿನಾಲು ಕುತ್ತಿಗೆಯಲ್ಲಿ ಕಟ್ಟಿಕೊಂಡು ಲಿಂಗಪೂಜೆ ಮಾಡುತ್ತಿಯತಾನೆ? ಲಿಂಗ ಅಂದ್ರೆ ಶಿವ, ಶಿವ ಅಂದ್ರೆ ಇಡೀ ಜಗತ್ತಿಗೆ ದೇವ್ರ. ಶಾಲೆಯಲ್ಲಿ ಸರ್ ಪಾಠ ಮಾಡಿದ್ರ ನಮಗೆ ಎಲ್ಲಾ ತಿಳಿತದ ಅಲ್ಲಾ, ಹಾಂಗ ಶಿವ ಜನರಿಗೆ ಬಹಳ ಹಿಂದೆ ಡ್ಯಾನ್ಸ್ ಕಲಿಸಬೇಕಂತ ಮಾಡಿದ್ದ. ಅದಕ್ಕೆ ಹೀಂಗ ಕುಣಿದ ತೋರಿಸಿದ. ಆವಾಗ ಫೋಟೊ ತೆಗೆಯುವುದು ಇರಲಿಲ್ಲ. ಅದಕ್ಕಿಂತ ಶಿವಗ ಹದಿನೆಂಟು ಕೈಯೊಳಗೆ ಡ್ಯಾನ್ಸ್‌ನ ಎಲ್ಲಾ ಹೆಜ್ಜೆಗಳು ಸ್ಟೈಲ್ ಬರಲೀ ಅಂತ ಹೀಂಗ ಕಲ್ಲಿನಾಗ ಕೆತ್ತಿದಾರ. ನಾವು ಸತ್ತು ಹೋದ್ರೂ ಮುಂದಿನವರಿಗೆ ತಿಳೀಲೀ ಅಂತ ಮಾಡ್ಯಾರ.”. “ನೋಡು ಪುಟ್ಟ ಶಿವನ ಮಕ್ಕಳು ಗಣಪತಿ ಕೂಡಾ ನೃತ್ಯ ಮಾಡುತ್ತಿದ್ದಾನೆ. ಷಣ್ಮುಖ ಮೃದಂಗ ಬಾರಿಸುತ್ತಿದ್ದಾನೆ. ಎಲ್ಲಾ ಋಷಿಮಾನ್ಯರು ಇದ್ದಾರೆ ನೋಡು” “ಹಾಗಾದ್ರ ಅವನ ಹೆಂಡತಿ ಪಾರ್ವತಿ ಎಲ್ಲಿ ಅದಾಳ ಚಿತ್ರದಾಗ” ಸತ್ಯನ್ ಕೇಳಿದಾಗ ಅವಳಿಗೆ ತಲೆ ತಲೆ ಕೆರೆದುಕೊಳ್ಳುವ ಹಾಂಗಾಯ್ತು. ‘ಬಾ ಪುಟ್ಟ ನಿನಗ ಪಾರ್ವತಿ ಮಹಿಷಾ ಮರ್ದಿನಿ ಆಗಿದ್ದು ತೋರುಸ್ತೀನಿ’ ಅವಳು ಮೆಲ್ಲಗೆ ಪುಸಲಾಯಿಸಿದಳು. ಮಿಂಚಿನ ದೀಪದಲ್ಲಿ ಕೆಂಪು ಬಂಡೆಗಳು ಕೆತ್ತಿದ ಉಬ್ಬು ಶಿಲ್ಪಗಳು ವಿಶಿಷ್ಟ ಕಾಂತಿಯಿಂದ ಹೊಳೆಯುತ್ತಿದ್ದವು. ಸತ್ಯನ್ ಹಿಡಿದ ದೀಪದಿಂದ ಮೆಲ್ಲಗೆ ಕೇದಿಗೆಯ ಸುವಾಸನೆ ಇಡೀ ಮೊದಲನೆಯ ಗುಹೆಯನ್ನು ಪಸರಿಸಿಕೊಂಡಿತ್ತು. ಗುಣಶೀಲ ಮಹಿಷ ಮರ್ದಿನಿಯ ಹತ್ತಿರ ಬರುವಷ್ಟರಲ್ಲಿ ಸತ್ಯನ್‌ನಿಗೆ ಅವಳು ಸಂಹರಿಸಿದ ರಾಕ್ಷಸನ ಕಥೆ ಹೇಳಿದಳು.

ಪಾರ್ವತಿಗ್ಯಾಕ ನಾಲ್ಕು ಕೈಗಳಿವೆ ಸತ್ಯನ್ ಪ್ರಶ್ನೆಗಳು ಮುಂದುವರಿಯಿತು. ಅವಳು ಮೆಲ್ಲಗೆ ಸತ್ಯನ್ ಕೈಗಳಿಂದ ಮಿಂಚಿನ ದೀಪವನ್ನು ಹಸ್ತಾಂತರಿಸಿಕೊಂಡಳು. ಸತ್ಯನ್ ಗುಣಶೀಲಳ ಸೀರೆಯ ಸೆರಗು ಹಿಡಿದುಕೊಂಡು ಅವಳು ಅವನನ್ನು ಮುಖ ಮಂಟಪದ ಪಾಶಗೋಡೆಯ ಹತ್ತಿರ ಕರೆದುಕೊಂಡು ಬಂದಳು. ನೋಡು ಸತ್ಯನ್ ಇಲ್ಲಿ ಶಿವ ಪಾರ್ವತಿ ಒಂದಾಗಿದ್ದಾರೆ. ಇದಕ್ಕೆ ಅರ್ಧನಾರೀಶ್ವರ ಎನ್ನುತ್ತಾರೆ. ಇದು ಅರ್ಧ ಶಿವನ ದೇಹ ಇನ್ನರ್ಧ ಪಾರ್ವತಿಯ ದೇಹ. “ಎರಡನ್ನೂ ಹ್ಯಾಂಗೆ ಸೇರಿಸಲಿಕ್ಕೆ ಬರ್‍ತದ” ನಿನಗ ಅದು ದೊಡ್ಡವನಾದ ಮೇಲೆ ಅರ್ಥ ಆಗ್ತದ. ಹೆಣ್ಣು ಗಂಡು ಇಬ್ಬರೂ ಒಂದು ಈ ಸಂಸಾರದಾಗ ಅಂತ ಅದರ ಅರ್ಥ, ಗುಣಶೀಲ ಅರ್ಥೈಸಿ ಮಗುವಿನ ಮನಸ್ಸಿನಾಳಕ್ಕೆ ಇಳಿಯುವ ಹಾಗೆ ಹೇಳಿದರು. ಅಪ್ಪ ಅವ್ವ ಇಬ್ಬರೂ ಬೇಕಲ್ಲ ನಿನಗೆ, ಅಪ್ಪ ಹೆಚ್ಚೇ ಅವ್ವ ಹೆಚ್ಚೇ ನೀನೆ ಹೇಳು, ಸತ್ಯನ್ ಚುರುಕು ಬುದ್ಧಿಯ ಹುಡುಗ “ನನಗೆ ಇಬ್ರೂ ಬೇಕವ್ವ” ಅಂದು ಬಿಟ್ಟ. “ಹಾಂ ಶಿವನೂ ಒಂದೇ ಪಾರ್ವತಿಯೂ ಗೊತ್ತಾಯಿತಲ್ಲ.” ಗುಣಶೀಲಳಿಗೆ ಮಗು ಸ್ಪಂದಿಸಿದ್ದು ಬಹಳ ಖುಶಿ ಅನಿಸಿತು. ಮೆಲ್ಲಗೆ ಬೆಳಿಗ್ಗೆ ಶಾಲೆಯಲ್ಲಿ ಹಾಡಿದ ಹಾಡು ಸಾರೇ ಜಹಾಂ ಸೇ ಅಚ್ಚಾ ಹಾಡನ್ನು ಗುನುಗುಡುತ್ತ ಸತ್ಯನ್ ಅರ್ಧನಾರೀಶ್ವರ ಮೂರ್ತಿಯ ಕಾಲು ಕೈ ತಲೆ ಹಾವು ಮುಟ್ಟುತ್ತ ಜೋರಾಗಿ ಕಿರುಚಿಕೊಂಡ “ಅಯ್ಯೋ ಶೀಲಾ ಆಂಟಿ ಇಲ್ಲಿ ದೆವ್ವ ನಿಂತಾದ” ಅವ ಭೃಂಗಿಯ ಮೂರ್ತಿಯ ಮೇಲೆ ಕಣ್ಣು ಬಿಟ್ಟಿದ್ದ, ‘ಹೆದರಬೇಡ ಪುಟ್ಟ ಅದು ದೆವ್ವ ಅಲ್ಲ. ಭೃಂಗಿ ಎಂಬ ಭಕ್ತ, ಗುಂಗೀಹುಳು ಆಗಿ ಅಷ್ಟೇ ಪ್ರದಕ್ಷಿಣೆ ಮಾಡಿದವ’. ಆಗಿನ ಜನರಿಗೆ ದೇಹದ ಒಳಗೆ ಇರುವ ಮೂಳೆಗಳ ಬಗ್ಗೆ ಗೊತ್ತಿತ್ತು. ಅದಕ್ಕೆ ಶೃಂಗಿಯ ಅಸ್ತಿಪಂಜರ ಕೆತ್ತಿದ್ದಾರೆ. ಬಾ ಎರಡನೆಯ ಗುಹೆಗೆ ಹೋಗೋಣ.” ಮಗು ಕತ್ತಲಲ್ಲಿ ಹೆದರಿ ಕೊಂಡಿತೆಂದು ಅವಳು ಅವನನ್ನು ಬಗಲಿಗೆ ಹತ್ತಿಸಿಕೊಂಡಳು. ಕೈಯಲ್ಲಿ ಮಿಂಚಿನ ದೀಪ ಹಡಿದು ಅವರಿಬ್ಬರೂ ಎರಡನೆಯ ಗುಹೆ ಮೆಟ್ಟಿಲುಗಳನ್ನು ಏರತೊಡಗಿದರು.

ಏನೋ ಝಂ ಅಂತ ಸಪ್ಪಳ ಕೇಳಿಸುತ್ತಲೆ ಸತ್ಯನ್ ಭಯದಿಂದ ಕೇಳಿದ. ಅವು ಕತ್ತಲೆ ರಾತ್ರಿಯಲ್ಲಿ ಒದರುವ ಕೀಟಗಳು ಪುಟ್ಟಾ, ಅದಕ್ಕೆಲ್ಲಾ ಹೆದರುತ್ತಾರಾ, “ಈಗ ರಾಕ್ಷಸ ಬಂದ್ರೆ” ಮತ್ತೆ ಸತ್ಯನ್ ಮುಂದುವರೆದ ಅಗಸ್ತ್ಯ ಋಷಿಗಳು ತಮ್ಮ ಮಂತ್ರಶಕ್ತಿಯಿಂದ ರಾಕ್ಷಸರನ್ನು ಹೀಂಗ ಗುಡ್ಡಾಮಾಡಿ ಒಗೆದಾರ, ಅವರು ಆಗ ಮಾತ್ರ ಇದ್ರು, ಈಗ ನಾವೇ ರಾಕ್ಷಸರು.” ಗುಣಶೀಲ ಮಗುವನ್ನು ಕೈಯಲ್ಲಿ ಬಿಗಿಯಾಗಿ ಕಂಕುಳಿಗೆ ಅವುಚಿಕೊಂಡು ಹೇಳಿದಳು, ಸತ್ಯನ್ ಇದು ವಿಷ್ಣುದೇವರ ಗುಹೆ. ಇಲ್ಲಿರುವುದು ಎಲ್ಲಾ ಪುರಾಣಗಳ ಕಥೆಗಳು. ಇವತ್ತು ದೀಪಾವಳಿ ಅಲ್ಲ, ನಾಳೆ ಬಲಿಪಾಡ್ಯ ಅಲ್ಲ? ನೋಡು ಇದು ತ್ರಿವಿಕ್ರಮ, ವಿಷ್ಣುದೇವರು ಬಲಿಚಕ್ರವರ್ತಿಯ ಭಕ್ತಿಯನ್ನಯ ಪರೀಕ್ಷೆ ಮಾಡಿದ್ದು, ವಿಷ್ಣುದೇವರು ಬಲಿಚಕ್ರವರ್ತಿಗೆ ಮೂರು ಹೆಜ್ಜೆ ಇಡುವಷ್ಟು ಜಾಗ ಕೊಡು ಅಂತ ಕೇಳಿದ್ದು ಒಂದು ಕಾಲು ಇಟ್ಟರೆ ಇಡೀ ಮುಗಿಲೇ ಮುಚ್ಚಿಕೊಂಡಿತಂತೆ, ಇನ್ನೊಂದು ಪಾದ ಇಟ್ಟರೆ ಇಡೀ ಭೂಮಿ ಸಾಲಲಿಲ್ಲ ಅಂತೆ, ಉಳಿದ ಹೆಜ್ಜೆ ಎಲ್ಲಿ ಇಡಲೀ ಅಂತ ಕೇಳಿದ್ದಕ್ಕೆ ನನ್ನ ತಲೀ ಮ್ಯಾಲೆ ಇಡು ಅಂತ ಬಲಿಚಕ್ರವರ್ತಿ ಹೇಳಿದನಂತೆ. ನೋಡು ಸತ್ಯನ್ ವಿಷ್ಣು ಒಂದು ಕಾಲ ಮ್ಯಾಲೆ ಒಂದು ಕಾಲು ಭೂಮಿ ಇನ್ನೊಂದು ಹೆಜ್ಜೆ ಬಲಿ ತಲಿ ಮೇಲೆ. “ದೇವರಿಗೆ ಕೈಕಾಲು ಮೈ ಕೈ ಎಷ್ಟು ಬೇಕಾದಷ್ಟು ಇರ್‍ತಾವ ಏನು.” ಸತ್ಯನ್ ಒಂದು ಸಾಂದರ್ಭಿಕ ಪ್ರಶ್ನೆ ಕೇಳಿಯೇ ಬಿಟ್ಟ. ಅವಳು ಜೋರಾಗಿ ನಗತೊಡಗಿದ್ದು, ಸತ್ಯನ್ ಕೂಡಾ ನಗತೊಡಗಿದ. ಆ ನೀರವ ರಾತ್ರಿಯಲ್ಲಿ ಅವರಿಬ್ಬರ ನಗು ಅಗ ತೀರ್ಥದ ಕೊಳದ ಅಲೆಗಳ ಮೇಲೆ ಹಾಯ್ದು ಪೂರ್ವಕ್ಕಿರುವ ಬೆಟ್ಟಗಳ ಸಾಲುಗಳಿಗೆ ಅಪ್ಪಳಿಸಿತು. ಬೆಟ್ಟ ಮೆಲ್ಲಗೆ ಪ್ರತಿಧ್ವನಿಸಿದವು. ಸತ್ಯನ್ ಹೋ ಅಂತ ಜೋರಾಗಿ ಕೂಗಿದ, ಬೆಟ್ಟ ಪ್ರತ್ಯುತ್ತರ ಕೊಟ್ಟಿತು. ಗುಣಶೀಲ ಗದರಿಕೊಂಡಳು “ಸತ್ಯನ್ ಸುಮ್ಮನಿರು ನೀ ಜೋರಾಗಿ ಕೂಗಿದ್ರೆ, ಕಾವಲುಗಾರ ಬಂದು ನಮ್ಮ ಕೈಯಾಗಿನ ದೀಪ ಕಸಗೊಂಡು, ನಮ್ಮಿಬ್ಬರನ್ನು ಹೊರಗೆ ಹಾಕ್ತಾನ, ಉಳಿದ ಗುಡಿಗಳನ್ನು ಈ ಚೆಂದದ ದೀಪದ ಬೆಳಕಿನಲ್ಲಿ ನೋಡೋಣ ಬ್ಯಾಡವಾ?” ಮಗು ದೀಪವನ್ನು ಕೈಗೆತ್ತಿಕೊಂಡು ಸುಮ್ಮನೆ ಅವಳೊಂದಿಗೆ ಹೆಜ್ಜೆ ಹಾಕಿತು. ಸತ್ಯನ್ ಉದ್ದ ಮೂಗು ಕೆಂಪು ತುಟಿಗಳು ಖುಷಿಯಿಂದ ಅರೆಬಿರಿದಿದ್ದವು. ಅವಳಿಗೆ ಅಂವ ಕಲ್ಪನೆಯ ಸುಂದರವಾಗಿ ಕೆತ್ತಿದ ಮೂರ್ತಿಯಂತೆ ಕಂಡ, ಮಿಂಚಿನ ದೀಪ ಮಗುವಿನ ಮುಖಕ್ಕೆ ವಿಚಿತ್ರವಾದ ತೇಜಸ್ಸು ಮೂಡಿಸಿತ್ತು. ಅವಳು ನೆಲದ ಮೇಲೆ ಕುಳಿತ ದೀಪ ಹಿಡಿದು ಸತ್ಯನನ್ನು ಬಿಗಿಯಾಗಿ ಅಪ್ಪಿ ಅವನ ಹಾಲುಗಲ್ಲಗಳಿಗೆ ಚುಂಬನವನ್ನು ಕೊಟ್ಟಳು. ವಿಷ್ಣುವಿನ ಎಲ್ಲಾ ಆವತಾರಗಳು ಫಕಫಕ ನಕ್ಕವು. “ಸರಿ ಅತ್ಯಾಗ ನೀ ಎಂಜಲಾ ಹಚ್ಚತೀ” ಸತ್ಯನ್ ಕೊಸರಿಕೊಂಡ. ದೀಪಾವಳಿ ಅಮವಾಸ್ಯೆ ನಕ್ಷತ್ರಗಳು ಜೋರಾಗಿ ಮಿನುಗಿದವು.

ಗುಣಶೀಲ ಮತ್ತು ಸತ್ಯನ್ ಮೂರನೇ ಗುಹೆಯ ಮೆಟ್ಟಿಲುಗಳನ್ನೇರಿ ಮಹಾವಿಷ್ಣು ಗೃಹ ತಲುಪುವ ಮೊದಲು ಬಲಕ್ಕೆ ಒಂದು ಸ್ವಾಭಾವಿಕವಾದ ಗುಹೆಯ ಒಳಗೆ ಹೋಗಿ ಮಿಂಚಿನ ದೀಪವನ್ನು ಮಧ್ಯದಲ್ಲಿ ಇಟ್ಟರು. ಅದು ಬೌದ್ಧ ಗುಹೆ ಆಗಿತ್ತು. ಪದ್ಮಪಾಣಿಯ ಸುತ್ತಲೂ ಮಿಂಚಿನ ದೀಪದ ಹೆರವು ಹೊಂಬೆಳಕು ಪ್ರತಿಫಲಿಸಿ ಪ್ರಭೆ ಸುತ್ತಲೂ ಪಸರಿಸಿ ಬೆಳಕು ಅಲಾತ ಚಕ್ರದಂತೆ ಗುಹೆಯೊಳಗೆ ಹರಡಿಕೊಂಡಿತು. ಬೆಟ್ಟಕ್ಕೆ ಭ್ರಮೆ ಹಿಡಿದಿತ್ತು. ಸತ್ಯನ್ ಬುದ್ಧನಂತೆ ಸ್ವಲ್ಪ ಹೊತ್ತು ಸುಮ್ಮನೆ ಇರೋಣವಾ ಅವಳು ಕೇಳಿದಳು. ಸ್ವಲ್ಪ ಹೊತ್ತು ದಣಿವಾರಿಸಿಕೊಂಡ ಸತ್ಯನ್ ಅಲ್ಲಿ ನೋಡು ಬಾವಲಿಗಳು ಹಾರಾಡಕ ಹತ್ಯಾವ, ಶೀಲಾ ಆಂಟಿ ಅಂದ. ಗುಣಶೀಲ ರಾತ್ರಿಯ ಮೌನದಲ್ಲಿ ನಿರಾಳವಾಗಿ ಕಾಲುಚಾಚಿ ಕುಳಿತಿದ್ದಳು. ಅಗಸ್ತ್ಯ ತೀರ್ಥದ ಹಸಿರು ನೀರಿನ ಕೊಳದಲ್ಲಿ ದೀಪಾವಳಿಯ ಸಾಲು ಚುಕ್ಕೆಗಳು ತೇಲುತ್ತಿದ್ದವು-ಮುಗಿಲಿನಿಂದ ಇಳಿದು ಬಂದು ಅವಳು ಮೆಲ್ಲಗೆ ಸತ್ಯನ್‌ನ ತಲೆಸವರಿ “ಸತ್ಯನ್ ನೀನು ಜಗತ್ತಿನ ವಿಸ್ಮಯವಾಗಬೇಕು; ಆರ್ಚಿಯಾಗಬೇಕು ಉದ್ಧರೇತ ಆತ್ಮಾನಾತ್ಮನಂ” ಅಂದಳು. ಹಾಗಂದ್ರ ‘ಏನು ಮಗು? ಕೇಳಿದಾಗ ಅವಳು ಬುದ್ಧನ ಮುಖವನ್ನು ಜ್ಞಾಪಿಸಿಕೊಂಡು ಮೌನವಾದಳು, ಮಹಾವಿಷ್ಣುಗೃಹಕ್ಕೆ ಅವರಿಬ್ಬರೂ ಬಂದಾಗ ಸತ್ಯನ್ ಆದಿಶೇಷನ ಮೇಲೆ ರಾಜಠೀವಿಯಲ್ಲಿ ಕುಳಿತ ವಿಷ್ಣು ಬಲವಾಗಿ ಆಕರ್ಷಿಸಿಬಿಟ್ಟ, ಶೀಲಾ ಆಂಟಿ ‘ಐದು ಹೆಡಿ ಹಾವು ನೋಡಿ ಐದು ಹಾವು ನೋಡು’ ಅನ್ನತ್ತಾ ವಿಷ್ಣುಮೂರ್ತಿಯ ಹಾವಿನ ಸಿಂಬೆಯ ಮೇಲೆ ಏರಿಬಿಟ್ಟ. ಅವಳು ಎಷ್ಟು ಹೇಳಿದ್ರೂ ಸತ್ಯನ್ ಕೆಳಗಿಳಿಯಲಿಲ್ಲ. ಮಿಂಚಿನ ದೀಪವನ್ನು ಆದಿಶೇಷನ ತಲೆಯ ಮೇಲಿಟ್ಟ. ಹಾವಿನ ತಲೆಗಳು ನೆರಳಲ್ಲಿ ಪ್ರತಿಫಲಿಸಿದವು. ಹಾವಿನ ತಲೆಯ ಮೇಲಿಟ್ಟ ದೀಪದ ಬೆಳಕು ಮೇಲ್ಚಾವಣಿಯಲ್ಲಿ ಕೇಂದ್ರವಾಯ್ತು. ಅಲ್ಲಿದ್ದ ವರ್ಣಬಿತ್ತಿ ಚಿತ್ರಗಳು ಹಸಿರು ಕಂದು ಕೆಂಪು ಬಣ್ಣಗಳಿಂದ ಬಿಡಿಸಲಾಗಿತ್ತು. ಮೊಗಸಾಲೆಯಲ್ಲಿದ್ದ ಆರೂ ಕಂಬಗಳ ಮೇಲೆ ದಂಪತಿಗಳ ಶಿಲ್ಪಗಳು, ಉಸುಕು ಬಸಿರಿನಿಂದ ಹೊರಬಂದು ಚೆಲುವಾದ ನೈಜವಾದ ಜೀವಕಳೆ ಹೊತ್ತಿದ್ದವು.

ಸತ್ಯನ್ ನೋಡು ಸಾವಿರಾರು ವರ್ಷಗಳ ಹಿಂದೆ ಚಾಲುಕ್ಯರು ಸೆಗಣಿ ಗಿಡಮೂಲಿಕೆಗಳಿಂದ ಬಣ್ಣ ಮಾಡುತ್ತಿದ್ದರು. ಗುಣಶೀಲ ಪ್ರತಿ ಕಂಬದ ಚೆಲುವು ತೋರಿಸುತ್ತ ಹೇಳಿದರು. “ದೇವ್ರಯ್ಯಾಕ ಐದು ಹೆಡಿ ಹಾವಿನ ಮ್ಯಾಗ ಕುಳಿತಾನ. ಶಿವನ ಕೊಳ್ಳಾಗ ಒಂದು ಹೆಡಿ ಇರತದ. ಈ ದೇವ್ರಿಗೆ ಎಲ್ಲಿಂದ ಐದು ತಲೆ ಹಾವು ಸಿಕ್ಕಿತು. ಯಾರ ಹತ್ರದ ಹಾವು ದೊಡ್ಡದು ಶೀಲಾ ಆಂಟಿ.”

“ಸತ್ಯನ್ ಅವು ಇತಿಹಾಸದಿಂದ ಬಂದದ ಇತಿಹಾಸ ಆ ಕಾಲದ ಬಗ್ಗೆ ಹೇಳುತ್ತದೆ. ಈಗ ನಮ್ಮ ಮನಿಲೀ ಟಿ.ವಿ. ಕಂಪ್ಯೂಟರ್ ಅದಾವ, ಆವಾಗ ಇರಲಿಲ್ಲ. ಹಾಂಗ ಆವಾಗ ಐದು ಹೆಡಿ ಹಾವು ಇದ್ದಿರಬೇಕು ಇವಾಗ ಗುಣಶೀಲ ಮುಂದು ವರಿಸಿದರಳು. “ಇಷ್ಟ ಚೆಂದದ ಗೊಂಬೆಗಳನ್ನು ಕೆತ್ತಿದವರ ಹೆಸರು ಹೇಳಿದ್ರ ನೀ ನಗುತ್ತಿ ಪುಟ್ಟಾ, ಅವರ ಹೆಸರು ಕೋಂಡಿಮುಂಚಿ, ಪೊಲಮಂಚಿ, ಕಾಂತಿಮಂಚಿ, ಕೋಳಿಮಂಚಿ, ಕಲ್ಕುಣಿಕ, ಆರ್ಯಮಿಂಚಿ, ಓವಜ, ಪಂಚಣ, ನೆಲವರ್ಕಿ… ಹೇಗಿದೆ ಹೆಸರುಗಳು?” ಸತ್ಯನ್ ದೀಪವನ್ನು ಹಿಡಿದುಕೊಂಡು ಕಳ್ಳಮಳೇ ಆಡುವ ತರಹ ‘ಕೋಳಿಮಂಚಿ, ಕೊಂಡಿಮಂಚಿ, ಕೋಳಿಮಂಚಿ, ಕೊಂಡಿಮಂಚಿ ಅಂದುಕೊಳ್ಳುತ್ತ ಇಡೀ ಮೊಗಸಾಲೆಯ ಕಂಬಗಳಿಗೆ ಸುತ್ತ ಹಾಕುತ್ತ ಓಡಾಡತೊಡಗಿದ. ಸತ್ಯನ್‌ ಓಟದ ಬೆಳಕಿಗೆ ಮೂರನೆಯ ಗುಹೆಯ ಎಲ್ಲಾ ನರ್ತಕಿಯರು ಭರತನಾಟ್ಯ ಮಾಡುತ್ತಿದ್ದಂತೆ ಅವಳಿಗೆಸನಿಸತೊಡಗಿತು. ಅವಳು ಅವನಾಟ ನೋಡುತ್ತ ಹಾಗೆ ಸುಮಾರು ಹೊತ್ತು ನಿಂತಳು. ಅಲ್ಲಿ ಮಂಗಳೇಶನ ರಾಜದರ್ಬಾರು ನಡೆದಿತ್ತು. ಅವಳು ಮೆಲ್ಲನೆ ಮಗ್ಗಲು ಬದಲಿಸಿದಳು. ಕೈಮೇಲೆ ತಲೆ ಇರಿಸಿ ಮಲಗಿದ ಸತ್ಯನ್‌ನ ಅವಳನ್ನು ಹೊರಳಿ ಬಿಗಿಯಾಗಿ ತಬ್ಬಿಕೊಂಡ. ಕಣ್ಣುಗಳು ಬಿಡಿಸಲಾಗದ ಭಾರದಿಂದ ಮತ್ತೆ ಕತ್ತಲೊಳಗೆ ಇಳಿದವು. ಮಿಂಚಿನ ದೀಪ ಹಿಡಿದ ಅವಳು ನಾಲ್ಕನೆಯ ಗುಹೆಯಾದ ಜೈನ ಬಸದಿಯ ಮುಂದೆ ನಿಂತಿದ್ದರು. ಎಲ್ಲಾ ಗುಹೆಗಳಲ್ಲಿ ಬಟ್ಟೆ ಆಭರಣಗಳಿಂದ ಅಲಂಕರಿಸಿಕೊಂಡ ಶಿಲಮೂರ್ತಿಗಳನ್ನು ಕಂಡ ಸತ್ಯನ್‌ನಿಗೆ ಈ ಮೂರ್ತಿಗಳು ಡೋಣಾಗಿ, ಬೆತ್ತಲಾಗಿ ನಿಂತಿದ್ದು ಬಹಳ ಆಶ್ಚರ್ಯವಾಯ್ತು. ಆವ ತನ್ನ ಬಾಲಭಾಷೆಯಲ್ಲಿ ಕೇಳಿಯೇ ಬಿಟ್ಟ. “ಹಿಂಗ್ಯಾಕ ಬುಲ್ಲೀಕಾಯಿ ಬಿಟ್ಟಿಕೊಂಡ ನಿಂತಾರ ಇವರೆಲ್ಲಾ ಶೇಮ್ ಶೇಮ್” “ಏಯ್ ಹಾಗೆಲ್ಲಾ ಹೇಳಬಾರದು. ಶಿವ, ವಿಷ್ಣು ಬುದ್ಧನಂತೆ ಮಹಾವೀರ ಕೂಡಾ ದೇವರು ಅಪ್ಪಿ, ಇದು ನೋಡು ಬಾಹುಬಲಿ, ಇದು ನೋಡು ಪಾರ್ಶ್ವನಾಥ, ತಲೀಮ್ಯಾಲೆ ಐದು ಹಾವಿನ ಹೆಡಿ ಐತಲ್ಲ” “ಮತ್ಯಾಕ ಧೋತರ ಉಟ್ಟುಕೊಂಡಿಲ್ಲ” “ಅವರು ಅಂದ್ರ ಜೈನರು ಎಲ್ಲಾ ಆಸೆಗಳನ್ನು ತೊರೆದು ಮುಕ್ತಿಗಾಗಿ ಹೀಗೆ ಬೆತ್ತಲೆ ಆಗ್ತಾರೆ. ಬೆತ್ತಲೆ ಇರುದಂದ್ರೂ ಯಾವುದಕ್ಕೂ ಆಸೆ ಮಾಡದಾಂಗ ಇರೋದು. ಎಲ್ಲಾ ಆಸೆಗಳನ್ನು ಪೂರ್ತಿಯಾಗಿ ತ್ಯಜಿಸೋದು. ಅವರು ತಪಸ್ಸು ಮಾಡ್ತಾರೆ ಪುಟ್ಟಾ ಅವರಿಗೆ ದೇಹದ ಮ್ಯಾಲೆ ಆಸೆ ಇರೋದೆ ಇಲ್ಲಾ”, ಗುಣಶೀಲ ಹೇಳಿದ್ದು ಸತ್ಯನ್ ಮನಸ್ಸಿನಾಳಕ್ಕೆ ಇಳಿಯಲಿಲ್ಲ. ಅವಳು ಹೇಳಿದ್ದು ಅವನಿಗೆ ಅರ್ಥವಾಗಲಿಲ್ಲ. ಅವಳು ಮತ್ತೆ ಹೇಳಿದಳು. ಬೆತ್ತಲೆ ಆಗುವುದೆಂದರೆ ಪ್ರತಿರೋಧ ತೋರಿಸುವುದು ಎಂದು ಬಿಟ್ಟಳು. ಸತ್ಯನ್ ಮನಸ್ಸಿನಲ್ಲಿ ಇಟ್ಟುಕೊಂಡ ಒಂದು ಸತ್ಯವನ್ನು ತಕ್ಷಣ ಪ್ರತಿಕ್ರಿಯಿಸಿದ “ಹಾಂಗಾದ್ರ ಇನ್ನು ಮ್ಯಾಲೆ ನಮ್ಮ ಹಿರೇಮಠ ಮಾಸ್ತರು ಮೂವತ್ರ ತನಕ ಮಗ್ಗಿ ಬಾಯಪಾಠ ಒಪ್ಪಸ ಅಂದ್ರ ನಾ ಕ್ಲಾಸಿನ್ಯಾಗ ಹೀಂಗ ಅಂಗಿ ಚೆಡ್ಡಿ ಬಿಚ್ಚಿ ಬೆತ್ತಲಾಗಿ ನಿಂತ ಬಿಡ್ತೀನಿ ನೋಡು, ಹೋಡಿತಾರ ಹ್ಯಾಂಗ ನಾನು ನೋಡದತೀನಿ” ಅವಳಿಗೆ ದಿಗ್ಭ್ರಾಂತವಾಯ್ತು. ಗುಣಶೀಲ ಮತ್ತೆ ಅವನಿಗೆ ಬೆತ್ತಲೆ ಬಗ್ಗೆ ಕೊರೆಯುವುದಕ್ಕೆ ಹೋಗಲಿಲ್ಲ. ಬಾ ಪುಟ್ಟ ನಾವಿನ್ನೂ ದಕ್ಷಿಣಕೋಟೆ, ಉತ್ತರಕೋಟೆ ನೋಡಬೇಕು ಅನ್ನುತ್ತಾ ಕಡಿದಾದ ಮೆಟ್ಟಿಲುಗಳ ಮಾರ್ಗವನ್ನು ನಿಧಾನವಾಗಿ ಇಳಿಯತೊಡಗಿದಳು. ಕೆಳಗೆ ಅಗಸ್ತ್ಯ ತೀರ್ಥದ ಹಸಿರು ನೀರಲ್ಲಿ ಅವರಿಬ್ಬರ ಬಿಂಬಗಳು ಜೊತೆ ಮಿಂಚಿನ ದೀಪ ಫಳಫಳ ಮಿಂಚಿತು. ಮಿಂಚಿನ ದೀಪವನ್ನು ಅವರಿಬ್ಬರೂ ಅಗಸ್ತ್ಯ ತೀರ್ಥದ ಕೊಳದಲ್ಲಿ ನಿಧಾನವಾಗಿ ತೇಲಿಬಿಟ್ಟರು. ದೀಪ ನಿಧಾನವಾಗಿ ತೇಲತೊಡಗಿತು. ಸತ್ಯನ್ ಕೇಳಿದ ಇಷ್ಟು ದೊಡ್ಡ ಹೊಂಡವನ್ನು ನಾವು ದಾಟುವುದು ಹೇಗೆ ಶೀಲಾ ಆಂಟಿ? ಅವಳೆಂದಳು “ದೀಪವನ್ನು ಪ್ರಾರ್ಥಿಸೋಣ, ನೀನು ಕಣ್ಣುಮುಚ್ಚಿಕೋ ದೀಪ ದೀಪವೇ ಬೆಳಕು, ಬೆಳಕೇ ನಮ್ಮಿಬ್ಬರನ್ನು ಹಾರಾಡುವ ಚಿಟ್ಟೆ ಮಾಡು” ಸತ್ಯನ್, ಗುಣಶೀಲ ಇಬ್ಬರೂ ಕಣ್ಣುಮುಚ್ಚಿಕೊಂಡು ಕೈಮುಗಿದು ಪ್ರಾರ್ಥಿಸಿದರು. ಅವರಿಬ್ಬರೂ ಅಲೆಯಗುಂಟ ಸಾಗಿದ ದೀಪದಂತೆ ತೇಲತೊಡಗಿದರು. ಹಗುರಾಗಿ ಹಾರತೊಡಗಿದರು. ಸತ್ಯನ್ ಕೆಂಪು ಚಿಟ್ಟೆಯಾದ ನೀಲಿ ಚಿಟ್ಟೆಯಾದಳು, ಅವರಿಬ್ಬರೂ ಮಿಂಚಿನ ದೀಪ ಸಂದು ಹೋದ ಅಲೆಗಳಗುಂಟ ಹಾರತೊಡಗಿದರು. ಹೊಂಡದ ಪೂರ್ವ ದಿಕ್ಕಿನಲ್ಲಿರುವ ಭೂತನಾಥ ಗುಡಿಗಳ ಸಮೀಪ ತಲುಪಿದರು. ಸತ್ಯನ್ ಕತ್ತಲಿನ ಕುಷ್ಠರಾಯನ ಗುಡಿಯೊಳಗೆ ಹೋಗಿ ಅಂಟಿಯ ಕೈಗೆ ಸಿಗಬಾರದೆಂದು ಅಡಿಗಿ ಕುಳಿತ ಗುಣಶೀಲ ನೀಲಿಚಿಟ್ಟಿಯಾಗಿ ಹೊಂಡದ ದಂಡೆಯ ಅಲೆಯಲಿ ತೇಲಿ ಬರುವ ಮಿಂಚು ದೀಪ ನೋಡುತ್ತ ಕುಳಿತುಬಿಟ್ಟಳು. ಚಿಕ್ಕಿಗಳು ಅಸಂಖ್ಯ ಚಿಕ್ಕಿಗಳ ಪ್ರತಿಬಿಂಬ ಹೊಂಡದ ಹಸಿರು ನೀರಲಿ ಬಿಂಬಿಸುತ್ತಿತ್ತು.

ಗುಣಶೀಲ ಯೋಚಿಸತೊಡಗಿದಳು ಯಾಕೆ ನಾವಿಬ್ಬರೂ ಚಿಟ್ಟೆಗಳಾದೆವು. ಮಗುವಿನೊಂದಿಗೆ ಹಾರಾಟ ಬೇಕಿತ್ತೇ? ಇದು ಬಂಧ ಇದಕ್ಕೆ ಮನಸ್ಸೇ ಕಾರಣವೇ ಅದಕ್ಕೆ ವಾಲ್ಮೀಕಿ ಹೇಳಿರಬಹುದು ಮನೋ ಹಿ ಹೇತುಃ ಸರ್ವೇಷಾಂ ಇಂದ್ರಿಯಾಣಂ ಪ್ರವೈತ್ತಯಃ ನಾನಿದಾಗಬೇಕು ಎಂಬ ಪವೃತ್ತಿ ಮನುಷ್ಯನನ್ನು ಎಲ್ಲಿಂದಲೋ ಎಲ್ಲಿಗೋ ಒಯ್ಯುತ್ತದೆ, ನನಗೇಕೆ ಈ ಇತಿಹಾಸ ಕೆದಕುವ, ಬೆದಕುವ ಪರಿ, ನನಗೆ ವರ್ತಮಾನದ ಹರಿವಿಗೆ ಇದರ ಬಲಬೇಕೇ? ಇಲ್ಲಾ ಸತ್ಯನ್‌ಗೆ ಇದರ ಪೀಠಬೇಕೆ? ಅವಳ ವಿಚಾರ ಗಾಳಿಗಿಂತ ವೇಗವಾಗಿ ಹರಿಯತೊಡಗಿದಾಗ ಅವಳಿಗೆ ತಟ್ಟಂತ ಸತ್ಯನ್ ನೆನಪಾದ. ಅವಳು ಮೆಟ್ಟಲುಗಳ ಮೇಲಿಂದ ಹಾರಿ ಸತ್ಯನ್ ಅಂತ ಕೂಗತೊಡಗಿದಳು. ಕತ್ತಲಲ್ಲಿ ಮಗು ದಾರಿಯಲ್ಲಿ ತಪ್ಪಿಸಿಕೊಂಡಿತೆಂದು ಅವಳು ಗಾಬರಿಯಾದಳು. ಅವಳು ಮತ್ತೆ ಆತಂಕದಿಂದ ಅವನನ್ನು ಕೂಗಿದಳು. ಆವಾಗ ಮಿಂಚಿನ ದೀಪ ಅಗಸ್ತ್ಯತೀರ್ಥದ ಮಧ್ಯಕ್ಕೆ ಬಂದಿತ್ತು. “ಇಲ್ಲಿ ಬಚ್ಚಿಟ್ಟುಕೊಂಡಿನಿ. ಹುಡುಕಿದರೆ ಬಹುಮಾನ ಮುತ್ತುಗಳು. ಎಲ್ಲೋ ಬಂಡೆಗಳ ಆಳದಿಂದ ಸತ್ಯನ್ ಸ್ವರ ಕೇಳಿಸಿತು. ಅವಳು ನೀಲಿ ಮೈಹೊತ್ತು ತುಂಬ ಹೊತ್ತು ಹಾರಾಡಿದಳು. ಸತ್ಯನ್ ಕುಷ್ಠರಾಯನ ಗುಡಿಯ ಗುಹೆ ಒಳಗೆ ಸಿಕ್ಕ ಅವನನ್ನು ತಬ್ಬಿ, “ಮಗು ನಿನಗೆ ಕನ್ನಡದ ಮೊದಲು ತ್ರಿಪದಿ, ಮೂರುಸಾಲಿನ ಶಾಸನ ಕಪ್ಪೆ ಅರಭಟ್ಟ ಬರದಿದ್ದು ತೋರಿಸ್ತೀನಿ ಬಾ ಅಂತ ಈಶಾನ್ಯ ದಿಕ್ಕಿನೆಡೆಗೆ ಇರುವ ತಟ್ಟುಕೋಟೆಯ ಕಡೆಗೆ ಹಾರತೊಡಗಿದಳು. “ಅವಾನ್ಯಾಕೆ ಕಪ್ಪೆ ಅರಭಟ್ಟ ಅಂವ ಕಪ್ಪಿ ಆಗಿದ್ನ ಹೇಂಗ”, ಸತ್ಯನ ಪ್ರಶ್ನೆಗಳ ಮಾಲೆ ಹಿಡಿಯುತ್ತ ಅವಳನ್ನು ಹಿಂಬಾಲಿಸತೊಡಗಿದ. ಗುಣಶೀಲ ಹೇಳತೊಡಗಿದಳು. ನೋಡು ಸತ್ಯನ್ ಬಾದಾಮಿಯ ಜನರು ಅಪಮಾನವನ್ನು ಸಹಿಸುವವರಲ್ಲ, ಮಾನಭಂಗ ಸಹಿಸುವವರಲ್ಲ, ಒಳ್ಳೆಯವರಿಗೆ ಒಳ್ಳೆಯವರಾಗಿ ದುಷ್ಟರಿಗೆ ದುಷ್ಟರೂ ಆಗಿ ಇರುತ್ತಾರೆ ಅಂತ ಇದರಲ್ಲಿ ಬರೆದಿದ್ದಾರೆ.”

ನಾನೂ ಹಂಗ ಶೀಲಾ ಆಂಟಿ ಶಾಲ್ಯಾಗ ಪ್ರವೀಣ ಅವನ ಗೆಳೆಯರು ನಮ್ಮ ಜೋಡಿ ಜಗಳ ಆಡಿದರೆ ನಾವು ನುಗ್ಗಿ ಬಡಿತೀವಿ ಅವರನ್ನು. ಅವರು ಪ್ರೀತಿ ಮಾಡಿದರೆ ನಾನು ಪೆನ್ನು, ಪೆನ್ಸಿಲ್ ಕೊಡ್ತೀನಿ, ಇಲ್ಲದಿದ್ದರ ಆಟಕ್ಕೆ ಹೋಗುವಾಗ ಅಡ್ಡಗಾಲು ಹಾಕಿ ಕೆಡುವುತ್ತೀನಿ, ಹಾಂಗ ಅದನಿ ನಾನು… ಗುಣಶೀಲಳಿಗೆ ಅನಿಸತೊಡಗಿತು. ಮಗು ಇತಿಹಾಸದೊಂದಿಗೆ ಒಂದು ವಿಶಿಷ್ಟ ಎಳೆಯೊಂದಿಗೆ ಗುರುತಿಸಿಕೊಂಡಿತು. ಆ ಹೊತ್ತಿಗೆ ಮೂಡಲ ರಾತ್ರಿಯ ಗುಡ್ಡದ ಗಾಳಿ ಮಿಂಚಿನ ದೀಪವನ್ನು ಉತ್ತರ ಕೋಟೆಯ ಕೆಳಭಾಗದಲ್ಲಿರುವ ನೈಸರ್ಗಿಕ ನಿರ್ಮಿತ ಶಿಲ್ಪ ಸಂಗ್ರಹಾಲಯದ ಎದುರು ದಂಡೆಗೆ ತಂದು ನಿಲ್ಲಿಸಿತ್ತು. ಅವಳು ಭಾರದ ತೀವ್ರ ಕಣ್ಣುಗಳ ಬಿಗಿತವನ್ನು ಸಡಿಲಗೊಳಿಸಿ ಗೋಡೆ ದಿಟ್ಟಿಸಿದಳು. ಜೀರೋ ಬಲ್ಲಿನ ಛಾಯೆಯಲ್ಲಿ ಗೋಡೆ ಗಡಿಯಾರ ರಾತ್ರಿ ಒಂದು ಘಂಟೆ ತೋರಿಸುತ್ತಿತ್ತು. ಅವಳು ಸತ್ಯನ್‌ನನ್ನು ಅವಸರಪಡಿಸಿದಳು. ಸತ್ಯನ್ ಬೆಳಗಾಗುವದಕ್ಕೆ ಇನ್ನು ೪-೫ ತಾಸುಗಳಿವೆ. ಬೇಗ ಬೇಗೆ ಶಿಲ್ಪ ಸಂಗ್ರಹಾಲಯ ಉತ್ತರ ಕೋಟೆ ಮಾಲಗಿತ್ತಿ ಶಿವಾಲಯ, ಭಾವನ ಬಂಡೆ ಎಲ್ಲಾ ನೋಡಬೇಕು. ನಾಳೆ ಬಲಿಪಾಡ್ಯ, ಸೆಗಣಿ ಹುಡುಕಿ ಹೊನ್ನಂಬರಿ ಹಳದಿ ಹೂವ ತಂದು ಪಾಂಡವರನ್ನು ಮಾಡಿ ನಿನಗೆ ಆರತಿ ಎತ್ತಬೇಕು. ಮತ್ತನೀ ಪಟಾಕಿ ಹೊಡೆಯಬೇಕಲ್ಲ, ಪಾಯಸ ಮಾಡಬೇಕಲ್ಲ, ನಡೀ ಪುಟ್ಟಾ ಚಲದೀ ಹಾರೋಣ ಎಂದಳು.

ಶಿಲ್ಪಸಂಗ್ರಹಾಲಯದಲ್ಲಿ ನೂರಾರು ಗುಡಿಗಳ ಪ್ರತೀಕಗಳಿದ್ದವು. ಸತ್ಯನ್ ಮೆಲ್ಲನೆ ಎಲ್ಲ ಶಿಖರಗಳ ಮೇಲೆ ಕೂಡುತ್ತ ಹಾರಿ ಹಾರಿ ಬಂದು ಸಂಗ್ರಹಾಲಯದ ಬಾಗಿಲ ಬಳಿ ಇರಿಸಿದ ಲಜ್ಜೆಗೌರಿಯ ಪೀಠದ ಮೇಲೆ ನಗ್ನಗೌರಿಯ, ನಗ್ನ ಅಂಗವನ್ನು ನೋಡುತ್ತ ಕುಳಿತುಬಿಟ್ಟ. ಗುಣಶೀಲಳಿಗೆ ಸಿಂಗ್ಮಂಡ ಫ್ರಾಯ್ಡ್ ನೆನಪಾದ, ವ್ಯಾಸ ನೆನಪಾದರು. ಅವಳು ಜೋರಾಗಿ “ಕಾಮಬಂಧನಮೇವೈಕಂ ನಾನ್ಯದ್ ಅಸ್ತೀಹ ಬಂಧಮ್” ಅಂದು ನುಡಿದಳು. “ತಿಳಿದಿದ್ದಾಂಗ ನೀ ಏನೇನು ಹೇಳಬೇಡ, ಈಕಿ ಯಾಕೆ ಹೀಂಗ ನಾಚಿಕೆ ಇಲ್ಲದಹಾಂಗ ಕುಳಿತಾಳು. ಅಲ್ಲಿ ಗುಹೆಯೊಳಗೆ ಗಂಡುಮಗ ನಿಂತುಕೊಂಡಿದ್ದ, ಬತ್ತಲಾಗಿ, ಇಲ್ಲಿ ಹೆಣ್ಣುಮಗಳು ಕುಂತಾಳ ಕಾಲುಕಿಸಿದು. ಹಿಂಗ್ಯಾಕ ಕಲ್ಲಿನಾಗ ಮೂಡಿಸ್ಯಾರ ಶೀಲಾ ಅಂಟಿ” ಗುಣಶೀಲ ಈ ಸಲ ಅವನಿಗೆ ತಿಳಿಯುವ ಭಾಷೆಯಲ್ಲೇ ಹೇಳಿದರು. ಅಪ್ಪಿ ಇದು ಲಜ್ಜೆಗೌರಿ, ನೀ ಹುಟ್ಟಿದ್ದು ನಾ ಹುಟ್ಟಿದ್ದು ಅವ್ವನ ಹೊಟ್ಟೆಯೊಳಗಿಂದ, ಜಗತ್ತಿನ ಎಲ್ಲರೂ ಹುಟ್ಟಿದ್ದು ಈ ಅಂಗದಿಂದ, ಅದಕ್ಕೆ ತಾಯಿ ಅಂತ ಗೌರಿ ಮೂರ್ತಿ ಕೆತ್ತಿದ್ದಾರೆ. ಇದಕ್ಕೆ ಸಂತಾನ ದೇವತೆ ಅನ್ನುತ್ತಾರೆ. ಎಲ್ಲರೂ ತಾಯಿಯನ್ನು ಪೂಜಿಸುತ್ತಾರೆ. “ಹೌ ಹೇಳ ನಮ್ಮ ಅವ್ವ ಜಳಕ ಮಾಡುವಾಗ ನಾನು ನೋಡಿನ, ಅವ್ವ ಹೇಳಿದ್ದಳು ನಾನು ಅಲ್ಲಿಂದ ಹೊರಗೆ ಬಂದನೀ ಅಂತ” ಹೇಳುತ್ತ ಇನ್ನು ಆಳವಾಗಿ ಲಜ್ಜೆಗೌರಿ ಮೂರ್ತಿಯನ್ನು ನೋಡುತ್ತ ಕುಳಿತುಬಿಟ್ಟ.

“ಬಾ ಪುಟ್ಟ ಹೊಂಡದಲ್ಲಿ ತೇಲಿಬಂದ ಮಿಂಚಿನ ದೀಪವನ್ನು ಪ್ರಾರ್ಥಿಸಿಕೊಂಡು ಮೊದಲಿನ ಹಾಗೆ ಅಗೋಣ. ನನಗೆ ಹಾರಾಡಿ ದಣಿವಾಗಿದೆ, ಕೋಟೆ ಹತ್ತಬೇಕು.” “ಇಲ್ಲ ನೀ ಬೇಕಾದ್ರೆ ಮೊದಲಿನ ಹಂಗ ಆಗು, ನಾ ಮಾತ್ರ ಚಿಟ್ಟಿ ಆಗಿ ನಿನ್ನ ಜೊತೆ ಬರುತ್ತೇನೆ. ನನಗೆ ಇನ್ನೂ ಹಾರಾಡಬೇಕೆಂಬ ಆಸೆ.” “ಹಾಗಾದ್ರೆ ಇಲ್ಲಿ ಕುಳಿತಿರು, ನಾ ಹೋಗಿ ದೀಪ ತರ್‍ತೀನಿ” ಗುಣಶೀಲ ಹಾರಿಹೋಗಿ ದಂಡೆಯ ಉತ್ತರಕ್ಕೆ ಬಂದು ನಿಂತ ದೀಪದೊಳಗೆ ಪ್ರಾರ್ಥನೆ ಮಾಡಿ ಮೊದಲಿನಂತಾಗಿ, ಎರಡೂ ಕೈಯಲ್ಲಿ ಮಿಂಚಿನ ದೀಪ ಹಿಡಿದು ಮೆಟ್ಟಲೇರಿ ಸತ್ಯನ್ ಕುಳಿತ ಲಜ್ಜೆಗೌರಿಯ ಹತ್ತಿರ ಬಂದಳು. ಸತ್ಯನ್‌ಗೆ ಶೀಲಾ ಅಂಟಿ ಲಜ್ಜೇಗೌರಿಯಂತೆ, ದೇವತೆಯಂತೆ ಕಂಡಳು. ಅವಳ ದೊಡ್ಡ ದೊಡ್ಡ ಕಣ್ಣುಗಳು ಹೊಳೆಯುತ್ತಿದ್ದವು. ದೀಪಾವಳಿ ರಾತ್ರಿಯ ಎಲ್ಲಾ ಪಣತಿಗಳು ಒಂದೇ ಕಾಂತಿಯಿಂದ ಅವಳ ಕಣ್ಣುಗಳಿಗೆ ಇಳಿದಿದ್ದವು. ಗುಣಶೀಲ ದೀಪ ಹಿಡಿದು ಅಘಾದವಾದ ಉತ್ತರ ಕೋಟೆಯ ಬಹು ವಿಸ್ತಾರದ ಮೆಟ್ಟಿಲುಗಳನ್ನು ಏರತೊಡಗಿದಳು. ಸತ್ಯನ್ ಕೆಂಪು ಚಿಟ್ಟೆಯಾಗಿ ಅವಳ ಹೆಗಲ ಮೇಲೆ ಕುಳಿತಿದ್ದ, ಕೋಟೆಯಲ್ಲಿ ನಿಗೂಢ ಕತ್ತಲೆ ಇತ್ತು. ಮಿಂಚಿನ ದೀಪ ಬೆಳಕಿನ ಬಂಡೆಗಳು ನಿಯಾನ್ ದೀಪಗಳಂತೆ ಕೆಂಪು ಚೆಲ್ಲಿದವು. ಅವಳು ನೂರಿನ್ನೂರು ಮೆಟ್ಟಿಲುಗಳನ್ನು ಯಾವುದೋ ಹೇಳಲಾಗದ ಹುರುಪಿನಲ್ಲಿ ಹತ್ತುತ್ತಿದ್ದಳು. ಮಂಡಿನೋವು, ತಲೆತಿರುಗು ಮರೆತುಹೋಗಿತ್ತು. “ನಸುಕೆಂಪು ಬಣ್ಣದ ವಿಶಾಲ ಬೆಟ್ಟವನ್ನು ಭಾವನ ಬಂಡೆ ಕೋಟೆ ಎಂದು ಕರೆಯುತ್ತಾರೆ. ಬೃಹತ್ ಆಕಾರದ ಐವತ್ತೆರಡು ಬಂಡೆಗಳಿಂದ ಈ ಕೋಟೆ ನಿರ್ಮಿತವಾಗಿದೆ. ಇದನ್ನು ಮೊದಲನೆಯ ಪುಲಕೇಶಿ ಕಟ್ಟಿದ ಇದಕ್ಕೆ ಗಿರಿದುರ್ಗ ಎಂದೂ ಕರೆಯುತ್ತಾರೆ. ಆಳದಲ್ಲಿ ಎರಡಂತಸ್ತಿನ ರಾಜ ರಾಣಿ ಕುಳಿತುಕೊಳ್ಳುವ ವಾಯುವಿಹಾರ ಮಂಟಪ ಇದೆ. ಕೆಳಗಣ ಶಿವಾಲಯ ಮೇಲಣ ಶಿವಾಲಯ ಇದೆ. ಟಿಪ್ಪು ಸುಲ್ತಾನನ ಖಜಾನೆ ಇದ್ದು ಅಲ್ಲಿ ನೋಡು ಮಾಲಗಿತ್ತು ಶಿವಾಲಯ ಕಾಣುತ್ತದೆ. ಅದನ್ನು ಸೂರ್ಯದೇವಾಲಯ ಅನ್ನುತ್ತಾರೆ. ಕಡೆಗೆ ಆ ಗುಡಿಗೆ ಹೋಗೋಣ, ಅಲ್ಲಿಂದ ಇಳಿದರೆ ಮನೆ ಹತ್ತಿರವಾಗುತ್ತವೆ.” ಗುಣಶೀಲಳ ಕೋಟೆಯ ವಿವರಣೆ ನಡೆದಿತ್ತು. ಮೆಲ್ಲನೆ ಎಡಗೈಯಲ್ಲಿ ಹೆಗಲು ಮುಟ್ಟಿಕೊಂಡಳು. ಸತ್ಯನ್ ಹಾರಿ ಹೋಗಿದ್ದ. ಅವಳು ಹೌಹಾರಿ ಸತ್ಯನ್ ಅಂತ ಕೂಗಿಕೊಂಡಳು. ಬಂಡೆಗಳು ಪ್ರತಿಧ್ವನಿಸಿದವು, ಸತ್ಯನ್ ಎರಡು ಬೃಹದಾಕಾರದ ಮಧ್ಯೆ ಹುಟ್ಟಿಕೊಂಡು ಬೀಳಲು ಬಿಟ್ಟ ಅರಳೀ ಮರದ ಬೇರುಗಳೊಂದಿಗೆ ಜೋಕಾಲಿ ಜೀಕುತ್ತಿದ್ದ. ಸ್ವಲ್ಪ ಜೀಕೆ ಬರ್‍ತೀನಿ ತಡೀ ಅಂದ. ಅವನು ಆಡುತ್ತಿದ್ದ ಆಟವನ್ನು ಅಂಗೈಯಲ್ಲಿ ಮಿಂಚಿನದೀಪ ಹಿಡಿದು ಕುಳಿತು ತಲೆತುಂಬ ನಕ್ಷತ್ರಗಳ ರಾಶಿಹರಡಿಕೊಂಡು ನೋಡತೊಡಗಿದಳು. ಸತ್ಯನ್‌ಗೆ ಆ ಅಪರಾತ್ರಿಯಲ್ಲೂ ಜೋಕಾಲಿ ಜೀಕಿದರೂ ಸಾಕೆನಿಸಲಿಲ್ಲ. ‘ಬಾರೋ ಬಾದಾಮಿ ಮಂಗ್ಯಾಗಳು ಮಾಡಿದ್ದಂಗ ಮಾಡ್ತಿಯಲ್ಲ’ ಅವಳು ಹುಸಿಕೋಪದಿಂದ ಕರೆದಳು. ದೀಪದ ಕೇದಿಗೆ ಪರಿಮಳ ಇಡೀ ಕೋಟೆಯನ್ನು ಆವರಿಸಿತ್ತು. ತುಂಟ ಸತ್ಯನ್ ತಾನಾಗಿ ಹಾರುತ್ತ ಮರಳಿ ಬಂದ. ಅವನಿಗೆ ವಾಪಸ್ಸು ಮನೆಗೆ ಹೋಗುವ ಆಲೋಚನೆಯೇ ಇರಲಿಲ್ಲ.

ಗುಣಶೀಲ ಸತ್ಯನ್ ಹಜರತ್ ಸೈಯವ ಬಾದರಾ ದರ್ಗಾ ಮತ್ತು ಶಿವಪ್ಪಯ್ಯನವರ ಗದ್ದುಗೆ ಬಳಿ ಬಂದರು. ವಿಶಾಲವಾದ ಮರದ ಬಿಳಲುಗಳು ಬಂಡೆಯ ಮೇಲೆ ಹರಡಿದ್ದವು. ಗೋರಿ ಗದ್ದುಗೆ ಅಕ್ಕಪಕ್ಕದಲ್ಲಿದ್ದವು. ಸುಣ್ಣ ಬಳಿದಿದ್ದರು. ಗುಣಶೀಲ ಭಾವೈಕ್ಯದ ಆ ಸ್ಥಳದ ಕುರಿತು ಅವನಿಗೆ ಹೇಳತೊಡಗಿದಳು. ಅವರಿಬ್ಬರೂ ಬಹಳ ದೋಸ್ತರು ಒಬ್ಬರನೊಬ್ಬರು ಬಹಳ ಪ್ರೀತಿ ಮಾಡುತ್ತಿದ್ದರು. ಒಬ್ಬ ಹಿಂದೂ ಒಬ್ಬ ಮುಸ್ಲಿಂ, ಈ ಸಂತರು ಒಮ್ಮೆ ಬರಗಾಲ ಬಂದಾಗ, ಭೂಮಿಗೆ ಪ್ರಾರ್ಥನಾ ಮಾಡಿ ಮಳೆ ಬರಿಸಿದ್ರು, ಇಲ್ಲಿ ಉರುಸು ನಡೆದಾಗ ಗುಡ್ಡದ ಮ್ಯಾಗಿನ ಮಂಗ್ಯಾಗಳಿಗೆ ಮೊದಲು ಊಟಕ್ಕೆ ಹಾಕಿತ್ತಾರೆ. ಸತ್ತ ನಂತರ ಅಜೂ ಬಾಜೂ ಇರಬೇಕಂತ ಇಲ್ಲಿ ಗೋರಿ ಗದ್ದುಗೆ ಎರಡು ಮಾಡ್ಯಾರ, ಅವರಿಬ್ಬರೂ ಜಡ್ಡೇ ಬಂದವರ ಮೈ ಮ್ಯಾಲೆ ಕೈ ಆಡಿಸಿದರ ಜಡ್ಡ ಹೋಗ ಬಿಡ್ತಿತ್ತಂತ ಅಂತಹ ಮಹಾತ್ಮ ಅವರು, ಹೂಂ ಹೂಂ ಗುಡುತ್ತಿದ್ದ ಸತ್ಯನ್ ತಕ್ಷಣ ಕೇಳಿದ ಹಾಂಗಂದ್ರ ಅವರು ಈಗ ಯಾಕ ಹೊರಗ ಬರಬಾರದು? ಅಪ್ಪಿ ಸತ್ತವರೆಲ್ಲಾ ಹ್ಯಾಂಗ ಮತ್ತ ಬದುಕಿಬರುತ್ತಾರೆ. ಅವರು ದೇವ್ರಕಡಿ ಹೋಗುತ್ತಾರೆ? ಆ ಎರಡು ಗದ್ದುಗೆಗಳ ಮಧ್ಯೆ ಗುಣಶೀಲ ಮಿಂಚಿನ ದೀಪ ಉರಿಸಿದಳು. ಅದು ಒಮ್ಮಿಂದೊಮ್ಮೆಲೇ ಜೋರಾಗಿ ಪ್ರಕಾಶಿಸತೊಡಗಿತು. ಅವಳಿಗೆನಿಸಿತು. ನನ್ನ ಮನದ ಕೋಣೆಯಲ್ಲಿ ಈಗ ಸಂಗೀತ ಉಳಿಯುತ್ತಿದೆ. ಯಾರೋ ನನ್ನ ಮನೆಯ ಮನದ ಕದ ತಟ್ಟುತ್ತಿದ್ದಾರೆ. ಅವಳಿಗೆ ನಿರಂತರವಾಗಿ ಯಾವುದೋ ಕಾಣಿಕೆ ಪಡೆಯಲಿದ್ದೇನೆ ಅನ್ನಿಸಿತು. ಅವಳು ಪವಿತ್ರ ಮನದಿಂದ ಗದ್ದುಗೆ ಗೋರಿಗೆ ನಮಸ್ಕರಿಸಿದಳು. ಸತ್ಯನ್ ಕೂಡಾ ಹಾರಿ ಬಂದು ನೆಲದ ಮೇಲೆ ಕುಳಿತು ಮತ್ತೆ ಹಾರಿ ಗೋರಿ ಗದ್ದುಗೆಯ ಸುತ್ತು ಹಾಕತೊಡಗಿದ. ಯಾವುದೋ ಸಂಪತ್ತು ಸತ್ಯನ್ ಗಳಿಸಿಕೊಂಡಿದ್ದಾನೆ ಅನಿಸಿತು. ಅವಳ ಮೈತುಂಬ ಖುಷಿಯ ಕಂಪನಗಳು ಎದ್ದವು. ಅವಳು ತನ್ನ ದೊಡ್ಡ ಕಣ್ಣುಗಳ ಮುಚ್ಚಿ ಓ ದೇವರೆ… ಅಂದಳು.

“ಯಾರಿಗೆ ಯಾರು ಯಾವಾಗ ಅಸರೆ ಆಗುತ್ತಾರೋ? ಬದುಕಿನ ಏರಿಳಿತದಲ್ಲಿ ತನ್ನ ಎದೆ ಆಳಕ್ಕೆ ಇಳಿದ ಒಡನಾಡಿ ಸತ್ಯನ್, ಬದುಕಿನ ಯಾವ ಸುಗಂಧಕ್ಕೆ ಯಾವುದೇ ಗೊಬ್ಬರ! ಮತ್ತದೇ ಗಾಳಿ ಒಡಲು ಕಂಪಿಸಿತು. ಅವಳು ಭಾವಗೀತೆಯಂತೆ ಕಂಪಿಸಿದಳು”. ಇಂದು ನನ್ನ ಆಯುಷ್ಯ ದೀರ್ಘವಾಗಲಿ. ಈ ಇಂದಿಗೆ ಯಾವ ನಿನ್ನೆಯೂ ಇಲ್ಲದಂತಾದರೆ ಅದರ ಅರ್ಥ ಮುಕ್ಕಾಗುತ್ತದೆ. ಇಂದು ನಾನು ಶಕ್ತಿ ಮೀರಿ ನನ್ನ ಆಚೆಗಿರುವುದನ್ನು ತಲುಪಿಯಾಗಿದೆ. ಅವಳು ದೀಪ ಹಿಡಿದು ಸತ್ಯನ್ನ ಹೆಗಲೇರಿಸಿಕೊಂಡು ಉತ್ತರ ಕೋಟೆಯ ಪಶ್ಚಿಮ ದಿಕ್ಕಿನಲ್ಲಿರುವ ಕಡಿದಾದ ಕೋಟೆ ಕೊರಕಲುಗಳನ್ನು ಇಳಿದು, ಮಾಲಗಿತ್ತಿ ಶಿವಾಲಯಕ್ಕೆ ಬಂದು ನಿಂತಳು. ಅಲ್ಲಾ ಹಜಾ ಕೊಡುತ್ತಿದ್ದ ಐದೂ ಮುಕ್ಕಾಲೂ. ಅವಳು ಸೂರ್ಯ ದೇವಾಲಯದ ಪ್ರಾಂಗಣದಲ್ಲಿ ಮಿಂಚಿನ ದೀಪ ಹಿಡಿದು ನಿಂತಳು. ಅವಳಿಗೆ ಮಹಾನದಿಯಂತೆ ಹರಿದು ಬಂದ ನಿಂತಂತೆ ಅನಿಸಿತು.

ಹಕ್ಕಿ ಚಿಲಿಪಿಲಿ ಗೂಡಿನಲ್ಲಿ ಎದ್ದಿತು ಕತ್ತಲೆ ಹರಿದು ಮಂಜು ಮುಂಜಾನೆ ಅರಳತೊಡಗಿತು. ಮಿಂಚಿನ ದೀಪ ಒಂದು ಇಂಚು ಕೂಡಾ ಕರಗಿರಲಿಲ್ಲ. ಅದರ ಕೇದಿಗೆ ಸುವಾಸನೆ ತಿಳಿ ಮುಂಜಾನೆಯ ಮಗುವಿನ ಕೆನ್ನೆಯ ಸ್ಪರ್ಶದಂತೆ, ತಿಳಿ ಹಳದಿ ಆಗಿತ್ತು ಸೂರ್ಯ ಪ್ರಖರವಾಗಿ ಉದಯಿಸಿದ. “ಇಂದು ಒಂದು ದಿನ ನಾನು ಎಷ್ಟೋ ವರ್ಷ ದೊಡ್ಡವನಾಗಿ ಬಿಟ್ಟೆ, ಆ ಸೂರ್ಯನನ್ನು ಹಿಡಿದು ತರುತ್ತೇನೆ.” ಅಂತ ಹೇಳುತ್ತ ಸತ್ಯನ್ ಚಿಟ್ಟೆಯಂತೆ ಸೂರ್ಯನೆಡೆಗೆ ಹಾರಿದ. ಅವಳು “ಸತ್ಯನ್ ಹಾರಬೇಡ ಸತ್ಯನ್ ಹಾರಬೇಡ” ಅಂತ ಜೋರಾಗಿ ಕಿರುಚಿಕೊಂಡಳು. ದೇವರ ಕೋಣೆಗೆ ಬಂದ ಗುಣಶೀಲಳಿಗೆ ಕಂಡಿತು ಮಿಂಚಿನ ದೀಪ ಬಹಳಷ್ಟು ಕಾಂತಿಯುತವಾಗಿ. ಪಲ್ಲವಿಯ ಕನಸುಗಳ ತೇಲಿಸುತ್ತ ಸತ್ಯನ್‌ನ ಚೈತನ್ಯ ಚಿಮ್ಮುತ್ತ ಇನ್ನೂ ಬೆಳಗುತ್ತಿತ್ತು ಪಾಡ್ಯಾದ ಹೊಳಲು ಮುಂಜಾವಿನಲಿ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವಸಂಗಮ
Next post ವಿಷಾದ

ಸಣ್ಣ ಕತೆ

 • ಸ್ನೇಹಲತಾ

  ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ಬೋರ್ಡು ಒರಸುವ ಬಟ್ಟೆ

  ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…