ಗೊಂದಲ

ಗೊಂದಲ

ಈ ಊರಿಗೆ ನೀವು ಅಪ್ಪಿತಪ್ಪಿ ಬಂದೀರಿ. ಯಾವುದೋ ಗುಂಗನಾಗ ಬರಬರಾನ ದಾರಿಗಡ್ಡ ಚಾಚಿದ ಜಾಲಿ ಕಂಟಿ ನಿಮ್ಮ ಅಂಗಿ ಪರಚಿ ಬರಮಾಡಿಕೊಂಡಿತು. ಗಕ್ಕನ ನಿಂತು ಜಗ್ಗಿದ್ದನ್ನ ಬಿಡಿಸೋ ಪಜೀತಿ ನೋಡಿದ ಮಂದಿ ಹುಳ್ಳುಳ್ಳಗ ನಗಾಕ ಹತ್ತಿದ್ದರು. ಅದೂ ಅಲ್ದಾ ನೀವು ಅಗಸಿ ಬಾಗಲಾಗಿಂದ ಮುಂದಮುಂದ ಇಟ್ಟ ಹೆಜ್ಜೆಗೂಳಿಗೆ ಯಾಕಽ ಒಂಥರಾ ಮತ್ತು ಸೇರಕಂಡಾಂಗ ಕಾಣಾಕ ಹತ್ತೇತಿ. ಹಂಗ ನಿಸೂರ ಹೋದ್ರ ಅದು ಜಾಲಿ ಮುಳ್ಳು ನಿಮ್ಮ ಮೆತ್ತನ್ನ ಚಪ್ಪಲಿಗಳಿಗೂ ಯಾಮಾರಿಸಿ ಅಂಗಾಲಿಗೆ ಚುಚ್ಚಿಯಾವು. ಹುಷಾರಾಗಿ ಹೆಜ್ಜೆ ಊರಬೇಕು. ಚುಚ್ಚಿದ್ದ ಹೌದಾದ್ರ ಆ ಕ್ಷಣಕ್ಕ ನಿಮಗ ಕಣ್ಣು ಕತ್ಲ ಬಂದು ಹಾದಿ ಕಾಣದಾಂಗ ಆಗಬಹುದು.

ಇದು ಇತ್ಲಾಗ ಊರೂ ಅಲ್ಲ, ಅತ್ತಾಗ ಕಾಡೂ ಅಲ್ಲ. ಇಂಥ ಊರಾಗ ಹುಟ್ಟಿ ಬೇರು ಇಳಿಸಿಕೊಂಡ ಮಂದೀ ನಡುವ ಒಂದೆರ್‍ಡ ದಿನ ನಿಂತು ನೋಡಿದರೆ ನಿಮಗದು ಅರಿವಾಗ್ತದ. ಖಾಲಿ ಇದ್ದಲ್ಲೆಲ್ಲ ಜಾಲಿ ಬೆಳೆದರ ಅದರ ಕೂಟ ಕಾಂಗ್ರೆಸ್‌ ಹುಲ್ಲೂ ಗುದಮುರಗಿ ಹಾಕೇತಿ. ಮಿಕ್ಕ ಜಾಗದಾಗ ಮೇಲ್ಮುದ್ದಿ ಮಾಳಗಿ ಮನಿಗಳೂ, ಗುಡಿಸಲುಗಳೂ ತಲೆ ಎತ್ತಿ ಎತ್ತು, ಎಮ್ಮಿ, ದನ-ಕರ, ಕುರಿ, ಕೋಳಿ, ನಾಯಿ ಜತೀಗೆ ಜನರ ಬದುಕೂ ಕಲೆತು ‘ಮಿಡ್ನಾಪುರ’ ಅಂತ ಕರಿಸಿಕೊಂಡಿರೋ ಊರ ನಡೂಕ ನೀವೀಗ ನಿಂತೀರಿ. ಇಲ್ಲಿ ಬಸಂದೇರ ಗುಡಿ, ದ್ಯಾಮವ್ವನ ಕಟ್ಟಿ ಊರ ನಡುವ ಇದ್ರ, ಹನುಮಪ್ಪ ಊರ ಹೊರಗ ನಿಂತಾನ.

ಊರಿಡೀ ಸಡಗರ ಪಡೋದು ಕಾರ್ತೀಕ ಮಾಸದಾಗ ಎಳಿಯೋ ತೇರನ್ಯಾಗ. ಪಂಚಮೀ ಹುಡಗೀರ ಹಬ್ಬ ಆದ್ರ, ಬಸವ ಜಯಂತಿ ದಿನ ಹುಡುಗೂರಿಗೆ ಬಯುಲಾಟದ ಅಬ್ಬರ. ಬೆಳತನಕ ಕೂತು ನಲೀತಾರ!

ಮಿಡ್ನಾಪುರದಾಗ ನೋಡಕ್ಕಂತ ಹೋದ್ರ ಯಾರು ಯಾರನ್ನೂ ನಂಬೋದಿಲ್ಲ. ಅದರ ಮ್ಯಾಲಮ್ಯಾಲ ಎಲ್ಲರೂ ಎಲ್ಲರಿಗಾಗಿ ಇದ್ದಾಂಗ ಕಾಣ್ತಾರ. ಊರಾಗ ಒಬ್ಬರಿಗೊಬ್ಬರು ಅಳಿಯ-ಮಾವ, ಅತ್ತಿ-ಸೊಸಿ ಅಂತ ಕೂಗಿ ಕರೆದು ಸಮನ್ವಯತೆ ತೋರಸ್ತಾರ. ಪರಸ್ಪರ ಅವಲಂಬನೆ ಇರೋದ್ರಿಂದ ಹೀಂಗ ಬದ್ಧತೆ ಇರೂದು ಅನಿವಾರ್ಯ ಆಗಿ ಜನ ಅಪ್ಪಿತಪ್ಪಿ ಜಗ್ಗಾಡಿದರೂ ಹಗ್ಗ ಹರೀದಾಂಗ ನೋಡಕ್ಯಂತಾರ. ಊರಾಗ ಎಲ್ಲರೂ ಕಿವುಡರು ಅನ್ನೋ ಥರ ಜೋರಾಗಿ ಒದರಿ ಮಾತಾಡಿಕೊಳ್ತಾರ. ಹೇಳೋದನ್ನ ನಾಲ್ಕಾರು ಬಾರಿ ಹೇಳಿದರೆ ಮಂದಿ ಅರ್ಥವಾದಾಂಗ ಗೋಣು ಹಾಕುತಾರ. ಆದರೆ, ಅರ್ಥವಾದದ್ದು ಏನಪಾ ಅಂದ್ರ ‘ಗೊರ್ತಿಲ್ಲ’ ಎಂದು ಎತ್ತಾಗೋ ನೋಡಕ್ಕಂತ ತಲೀ ಅಲ್ಲಾಡಿಸತಾರ. ಇಲ್ಲಿ ಕೆಲವೊಮ್ಮೆ ಎಲ್ಲಾ ಗೊತ್ತಿದ್ದರೂ ಗೊತ್ತಿಲ್ಲದಾಂಗ ಇರಬೇಕಾಗ್ತದ. ಅದಕ ಮುಗ್ಧರಾಗಿ ಬದುಕಿದರೆ ಬಾಳು ಹಸನು ಆಗೋದನ್ನ ಕೆಲವು ಮಂದಿ ಕಂಡುಕೊಂಡಾರ. ಅಂತವ್ರ್‍ಆಗ ಮೈಲಾರಿನೂ ಒಬ್ಬ.

ಅದೋ ಅಲ್ಲಿ ಬೇವಿನ ಕಟ್ಟಿಗೆ ಕುಂತಾನಲ್ಲ ಅವನಽ ಮೈಲಾರಿ. ಮೈಲಾರಿ ನಮ್ಮ-ನಿಮ್ಮಾಂಗಲ್ಲ. ಅಜಮಾಸು ನಾಲತ್ತರ ಪ್ರಾಯದ ಉದ್ದೋಕ ಬೆಳೆದ ಅಸಾಮಿ. ಆತ ಮದುವೀ ಆಗಿಲ್ಲ. ಆಗಾಗ ಹೇಪಳ್ಯಾನಾಂಗ ಮಾಡದಕ್ಕೆ ಸರೀಕರು ಅವಗ ‘ಹುಚ್ಚ’, ‘ಹುಂಬ’ – ಪದಗುಳ ಹಚ್ಚಿ ಮಾತಾಡಿಸತಾರ. ಹಂಗಂದ್ರ ಅವಗ ಸಿಟ್ಟಿಲ್ಲ, ಬ್ಯಾಸರಿಲ್ಲ. ಆದ್ರ ನಾ ಹೇಳ್ತಿನಿ ‘ಅವ ಹುಚ್ಚ ಅಲ್ಲ, ಬಾಳ್ ಶಾಣ್ಯಾ.’

ಊರಾಗಿನ ಯಾವುದಽ ಕೆಟ್ಟ ಉಸಾಬರಿಗೂ ಅವನಿಲ್ಲ. ಒಣ ರಾಜಕೀಯ ಅಂದ್ರ ಅಂವಗ ಆಗಬರಾಣಿಲ್ಲ. ಅದು ಊರ ಜನರ ಹುಟ್ಟು-ಸಾವಿರ್‍ಲಿ, ಮದವಿ-ಮುಂಜಿನ ಇರ್‍ಲಿ, ಅವನು ಇನ್ನಿಲ್ಲದಾಂಗ ಹಚಗಂತಿದ್ದ. ಕಂಡ ಕಂಡವರ ಮನ್ಯಾಗ ಉಂಡ ಬೆಳೆದ ಮೈಲಾರಿ, ಊರ ಸಮಸ್ತರಲ್ಲಿ ಒಂದಾಗಿ ಹೆಗಲಿಗೆ ಹೆಗಲು ಕೊಡತಾನ. ಅವನೊಳಗ ಕಾಣದ ನಾಜೂಕುತನಾನ ಚೌಚಾಷ್ಟಿಗೆ ಕೆಲವರು ಬಳಸಿಕೊಂಡ್ರ, ಇನ್ನಾ ಕೆಲವರಿಗೆ ಅಂವ ‘ಹಾಲುಂಡಿ’ ಇದ್ದಾಂಗ. ‘ಆಟಕ್ಕ ಅದಾನ, ಲೆಕ್ಕಕ್ಕಿಲ್ಲ.’ ಸದರೀ ಮನಷಾ ಏಟು ಸದರ ಅದಾನಂದ್ರೂ ತನ್ನ ಬುಡಕ್ಕೆ ಕೈಹಚ್ಚೋರನ್ನ ಮಟ್ಟ ಹಾಕದಽ ಬಿಡತಿರಲಿಲ್ಲ.

ಮೈಲಾರಿ ವಾರಽ ಬೇಸ್ತ್ವಾರ ಕೂಡೋ ಊರ ಸಂತೇಲಿ ಪುಟ್ಟಿ-ಚೀಲ ಎತ್ತಿಳಿಸಿ ಹಮಾಲಿ ದಂಧೆ ಮಾಡತಿದ್ದ. ಉಳಕೀ ದಿನ ಆಟೀಟು ಹೊಲದಾಗಿನ ದಗದ ಬಿಟ್ರ, ಮತ್ತ ಮಂದೀ ಮನೀದು ಕಾರ್ಯೇವುಗಳಿಗೆ ಬಿಡದಾಂಗ ಹಾಜರಿ ಹಾಕತಿದ್ದ. ಮೈಲಾರಿಗೆ ಎಲೆ ಅಡಕೀ ಕೊಟ್ಟು ಕರೀತಿದ್ರಽ ಮತ್ತಽ. ಬಂದ ಕೂಡ್ಲೆ ‘ಬಂದೇನಪಾ ಮೈಲಾರಿ’ ಅನ್ನೋ ಬೆಣ್ಣೆಯಂಥ ಮಾತಿಗೆ ಉಬ್ಬಿ ಹೋಗತಿದ್ದ. ಚಹಾ ಸೀಪಿಸಿ ದನಾ ದುಡಿಸಿಗಂಡಾಂಗ ದುಡಿಸಿಕೋತಿದ್ರು. ಮಗ, ಹೊಳಗೀ ಊಟಂದ್ರ ಆಟು ಪ್ರಾಣಾ ಬಿಡತಿದ್ದ, ಉಂಡು ಹೋಗುವಾಗ ಕೈಯಾಗ ಇಟ್ಟ ರೊಕ್ಕಾನ ಬಕ್ಕಣಕ್ಕ ಇಳೇ ಬಿಟ್ಟು ಮಾತಾಡದಾ ಹೊಂಟು ಹೋಗುತ್ತಿದ್ದ.

ಮಿಡ್ನಾಪುರದಾಗ ಮೊದ್ಲು ಮುಲ್ಕಿವರೆಗೆ ಸಾಲಿ ಇತ್ತು. ಇದ್ಽ ಸಾಲ್ಯಾಗ ಮೈಲಾರಿ ಮುಲ್ಕಿ ಮಟ ಓದಿ ನಿಲ್ಲಿಸಿದ್ದ. ಸರ್ಕಾರಿ ಸಾಲಿ ಅಂದ್ರ ಇಬ್ರಽ ಮಾಸ್ತರು ಏಳೂ ಈಯತ್ತೆದಾಗ ಇರೋ ಹುಡುಗರ ನೋಡಕ್ಯಾ ಬೇಕು. ಹಂಗಾಗಿ ಲಗಾಮಿಲ್ಲದ ಈಗಿನ ಹುಡುಗರು ಸಾಲೀ ಗುಡ್ಯಾಗ ಪಾಟೀ ಚೀಲ ಇಟ್ಟು ದನಾ ಕಾಯಾಕ ಹೋಗ್ತಾರ. ಮೈಲಾರಿ ಕಲಿಯೋದು ನಿಂದ್ರಿಸಿದ ಏಟೋ ವರ್ಷದ ಮ್ಯಾಲ ಖಾಸಗಿ ಹಾಯಸ್ಕೂಲ ಊರಾಗ ತೆರೆದಾರ. ಅನುದಾನಿತ ಹಾಯಸ್ಕೂಲ ಅಂದ್ರೆ, ಹತ್ತ ಜನ ಮಾಸ್ತರು ಇದ್ರೂ ಹತ್ತಽ ಹುಡುಗರು ಅವರಿಗೆ ತೊಡಿತಟ್ಟಿ ಹಾಜರೀ ಬರಸ್ತಾರ.

ಊರ ನಡಬರಕ ನಿಂತೀರಿ ಅಂದ್ರಲ್ಲ, ಇಲ್ಲಿ ಯಾವ ಬೀದಿಗೂ ಗಟಾರ ಇಲ್ಲ. ಇವರ ಬಚ್ಚಲ ನೀರು ಅವರ ಮುಂಬಾಗಲಕ್ಕೆ ಹರಿದು ಹೋಗಿ ನಿಂತ್ರ, ಅವರ ಹರನಾಳಗಿ ನೀರು ಇವರ ಮನಿ ಒಳಗ ಬರತಾವ. ನೋಡಕ್ಯಂತ ಹೋದಾಂಗೆಲ್ಲಾ ಒಂದಕ್ಕೊಂದು ತಳಕು ಹಾಕ್ಕೊಂಡು ಗೊಂದಲದ ಗೂಡಾಗಿ ಬಿಡತೈತಿ, ದುನಿಯಾನ ಗೊಂದಲದಾಗ ಸಿಕ್ಕಂಡಾಗ ಇದೇನು ಮಹಾ ಅಂತೀರೇನು?

ಇನ್ನು ಮಳೆಗಾಲದಾಗ ಉಪ್ಪರಸಲು ಗೋಡೆಗೆ ನಿಂತ ಮೇಲ್ಮುದ್ದಿ ಮನಿಗಳು ಜಂತುವಾನ ಹತ್ತಿ ತಟವಟ ಅಂತಿರತದ, ಅದರ ತ್ಯಾವಸಕ್ಕೆ ಕರಲು ಮಣ್ಣಿನ ಮಾಳಗಿ ಕವುಚಿ ಬೀಳೋದು ಮಾಮೂಲು, ಆಗ ಒಂದೆಲ್ಡು ಹೆಣಗಳೂ ಬೀಳ್ತಾವ. ಅದು ಬ್ಯಾಸಗ್ಯಾಗ ಸುಡೋ ಬಿಸಿಲು ಬೆಂಕಿ ತಾಕಿಸಿದಾಂಗ ಸುಡತಿರತದ. ಅಲ್ಲಲ್ಲಿ ಎಗ್ಗಿಲ್ಲದ ಹಾಯುವ ಕೊಚ್ಚೆಯಾಗ ಬಿದ್ದು ಉಳ್ಳಾಡ ಹಂದಿಗಳು ಅಲ್ಲಿಂದನ ಮಿದುಳು ಜ್ವರ ಹರಡತಾಂವ. ರಕ್ತ ಹೀರೋ ಗುಂಗಾಡಿನಿಂದ ನಿತ್ಯ ಕಾಡೋ ವಾಂತಿ ಬೇಧಿ ಅಲ್ಲದಾ ಬೀಡುಬಿಟ್ಟ ಕ್ಷಯಕ್ಕೆ ನೆಗೆದು ಬೀಳೋರಿಗೆ ಅಳೋರು ಇಲ್ಲದಾಗೇತಿ. ಇಲ್ಲೊಂದು ಅಸಲೀ ಗುಟ್ಟು ಏನಪಾ ಅಂದ್ರ, ಮಿಡ್ನಾಪುರದ ಶಾಸಕನಿಂದ ಮೊದಲ್ಗೊಂಡು ಬೀದಿ ಉಡಗಂವನ ತನಕ ಮೂಲವ್ಯಾಧಿ ಸರ್ವವ್ಯಾಪಿ ಅದ.

ಇವ್ಯಾವುಕೂ ತಲೀ ಕೆಡೆಸಿಕಣದಾಂಗ, ಮೊದಮೊದ್ಲು ಹಾದಿಗುಂಟ ಮೂಲಾಜಿಲ್ಲದ ನಿಂತು ನೋಡಾ ಕಣ್ಣುಗಳಿಂದ ಆದಷ್ಟು ಮರೆಯಾಗಿ ನಿಲ್ಲಲು ನೀವು ಬಯಸಿದಿರಿ. ಆದರ, ಅದು ಸಾಧ್ಯ ಆಗಲಿಲ್ಲ. ಹಿರೇ ತಲಿಗಳು ನಿಮ್ಮನ್ನ ‘ಏನಪಾ ಯಾವೂರು?’ ಎಂದು ಕೇಳೇ ಕೇಳಿದರು. ಏಕವಚನದ ‘ಏನಪಾ’ ಸಂಬೋಧನೆಯು ಮೈಸೂರು ಸೀಮೆಯಿಂದ ಬಂದ ನಿಮ್ಮ ಮಟ್ಟಕ್ಕ ‘ಧಕ್ಕಿ’ ಅಂತ ಕುಗ್ಗಿದಿರಿ. ‘ಏನಪಾ’ ಪದ ಬೇರೆ ಗಂಡಸರು ‘ತಂದೀ ಸಮಾನ’ ಅನ್ನೋ ಹಿನ್ನೆಲಿಯಿಂದ ಬಂದಿರತದ.

ಮಿಡ್ನಾಪುರದ ಹಿರೇರ ನೆರಳಿನಾಗ ಹಾದರ ಕದ್ದು ಮುಚ್ಚಿ ಮಾತ್ರ ನಡೀತದ. ಇದನ್ನ ಒಪ್ಪಿದ ಮಂದಿಗೆ ಸಽ ಸಽ ‘ಹೆಂಗಸು’ ಅನ್ನೋದು ಲೇವಡಿ ಮಾಡೋದಕ್ಕಲ್ಲ. ಇಲ್ಲಿನ ಜನ ಇಟಗಂಡಿರೋ ಬದುಕು ಅಂಥಾದ್ದು! ರೊಟ್ಟಿ ತಿಂದು ಸರಹೊತ್ತನಕ ಇಸ್ಪೀಟಿಗೆ ಕುಂತರ ಇವನಾಕಿ ಅವನಿಗೆ, ಅವನಾಕಿ ಇವನಿಗೆ ಅದಲಿ ಬದಲಿ ಆಗೋದು ಆಕಸ್ಮಿಕವಲ್ಲ. ಹಂಗಾಗಿ ಯಾರಿಗೋ ಅಪ್ಪ ಅಂದರೆ ಇನ್ನಾರೋ ಓಗೊಡುವುದು ಮಾಮೂಲಾಗೇತಿ. ಜನಕ್ಕೆ ಇಸ್ಪೀಟು ಆಟೊಂದು ಹೊಂದಾಣಿಕೆ ಕಲಿಸೇತಿ.

ಮಿಡ್ನಾಪುರದಾಗ ರೊಕ್ಕಸ್ತರಿಗೆ ಮಾತ್ರ ಬೇಕೆಂದಾಗ ನ್ಯಾಯ ಸಿಗತತಿ ಅನ್ನೋದು ನಿಮಗ ಗೊತ್ತಿರಲಿ. ಇಲ್ಲಿ ತೊಂಬಲ ತಿನ್ನಿಸಲಾರದ ಜನ ಕಟ್ಲೆದಾಗ ಸಿಕ್ಕಂಡು ಒದ್ದಡತಾ ಇರತಾರ.

ಹೀಂಗಽ ಒಮ್ಮೆ ಇಲ್ಲಿನ ಎಸೈ ಬೀದಿ ದೀಪದ ಬೆಳಕಿನಾಗ ಇಸ್ಪೀಟು ಆಡೋವ್ರ ಮ್ಯಾಲ ತನ್ನ ದಕ್ಷತೆ ಪ್ರದರ್ಶಿಸಲು ಖಟ್ಲೆ ಹಾಕಿದ್ದ. ಯಾವುದು ತಯಾರಿ ಇಲ್ಲದಾ ನ್ಯಾಯಾಲಯದಾಗ ಹಾಜರ ಆದ ಎಸೈಗೆ ಜಾಣ ವಕೀಲ ‘ಎಷ್ಟನೇ ಲೈಟಕಂಬದ ತಳಗ ಎಲಿ ಆಡಕ್ಯಂತ ಕುಂತಿದ್ರು?’ ಎಂಬ ಸವಾಲು ಎಸೆದಾಗ ಕಕ್ಕಾಬಿಕ್ಕಿಯಾಗಿದ್ದ. ಕೇಸು ವಜಾ ಆದಾಗ ತಲೆ ತಗ್ಗಿಸೋ ಹಾಂಗ ಆಗಿತ್ತು. ಹಾಗೊಂದು ನಂಬರು ಪ್ರತಿಕಂಬಕ್ಕ ಇರತಾವ ಅನ್ನೋದು ಎಸೈಗೆ ತಿಳಿದದ್ದು ಆವಾಗನ. ಮಿಡ್ನಾಪುರದವರು ಇಸ್ಪೀಟು ಆಡಿ ಬಟ್ಟೆ ಹಾಕಿಸಿಕೊಂಡಿದ್ದು ಈಗ ನೀವು ನಿಂತ ೨೮ನೆಯ ಕಂಬದ ತಳಗಽ. ನೀವು ಇಲ್ಲಿಂದ ಮುಂದಕ ನಡದ್ರೂ ಆ ನೆನಪಿನ ನೆರಳು ನಿಮ್ಮಿಂದ ಮರೆ ಆಗಾಂಗಿಲ್ಲ.

ನಮ್ಮ ಅಜ್ಜಾರ ಕಾಲದಾಗ ದ್ಯಾಮವ್ವನ ಕಟ್ಟೀಗೆ ಕುಂತು ಸರಪಂಚರು ಪಂಚಾಯ್ತಿ ನಡೆಸಿದ್ದರು. ಪಂಚಾಯ್ತಿ ಕೂಡಸಿದ್ದಽ ಹೌದಾದ್ರ ಎಲ್ಡೂ ಕಡಿಗೆ ಯಾಂವಗೂ ಅನ್ಯಾಯ ಮಾಡತಿರಲಿಲ್ಲ. ಆದರ ಈಗಿನ ಪೊಲೀಸರು ತಮ್ಮ ಹದ್ದು ಮೀರಿ ಪಂಚಾಯ್ತಿ ಹೊಣೀ ಹೊತಗಂಡು ಎಲ್ಲಾನೂ ಹಂಡಾವರಣ ಮಾಡಿ ಇಟ್ಟಾರ. ಅದಕಽ ಒಬ್ಬರಿಗೊಬ್ಬರು ರೊಚ್ಚಿರೋ ಎದೆವಾನರು ಕೆರ ಹರಿಯಮಟ ಹೊಡೆದು ಮುಟ್ಟಿಸಿಕೋತಾರ. ಅದನ ದಕ್ಕಿಸಿಕೊಂತಾರ ಮತ್ತಽ. ಅದು ಪೋಲೀಸು-ಕೋರ್ಟು ಅಂದ್ರ ಇಲ್ಲದ ತಂಟೀ ತಕರಾರಿನ ನಡುವ ಕೆಲಸಗೇಡು ಅಂತ ಮಿಡ್ನಾಪುರದ ಜನಕ್ಕ ಗೊತ್ತಾಗೇತಿ.

ಇದಲ್ಲದಾ ಊರ ನಡುವ ಮಟಕಾ ಜೂಜಿನ ಅಡ್ಡೆ ಇಟಗೊಂಡವರ ಹಾವಳಿ ಹೇಳಲಾಸಲ್ಲ. ನಿಮ್ಮ ದಿವ್ಯ ನಿರ್ಲಕ್ಷ್ಯದ ನಡುವೆ ಅಲ್ಲಲ್ಲಿ ಓಸಿ-ಚಾರ್ಟ ಹರವಿ ಕುಂತಾರಲ್ಲ. ಈ ನಂಬರ ಲೆಕ್ಕಾ ಹಾಕೋರದು ಸಾಮಾಜಿಕ ಪಿಡುಗು ಅಂದ್ರ ಯಾರೂ ಒಪ್ಪೋದಿಲ್ಲ. ‘ಪ್ರಜಾವಾಣಿ’ಯ ಗುಂಡಣ್ಣ ಏನಂತಾನಪಾ ಅನ್ಕೋತಾ ಅದೃಷ್ಟದ ನಂಬರು ಬ್ಯಾಟೀ ಆಡ ಮಂದಿ ನಾಲ್ಕಾರು ವಾರಗಳ ಹಿಂದಿನ ‘ಓಪನಿಂಗ’ ಏನು? ‘ಕ್ಲೋಸ್’ ಏನು ಹೊಡದಾನ? – ದಿನಾ ಇಂಥ ಇಂಗ್ಲಿಷ್ ಪದಗಳನ್ನ ತೂಕಕ್ಕೆ ಹಚ್ಚಿ, ನಂಬ್ರ ಹೆಕ್ಕಿ ತೆಗೀತಾರ. ಕತ್ರೀಲಾಲನ ವೈವಾಟಿನ ಮ್ಯಾಲ ಅಗದೀ ನಂಬಕಿ ಇಟ್ಟು, ಸಣ್ಣ ಚೀಟ್ಯಾಗ ದಿನಾ ಲಕ್ಷಲಕ್ಷ ಪಟ್ಟಿ ಆಗತದ.

ಊರಾಗ ಓಸೀ ಒಮ್ಮೊಮ್ಮಿ ಪೊಲೀಸರ ಮೌನದಾಗ ಪಬ್ಲಿಕ್ಕಾಗಿ ನಡಸ್ತಾರ. ಇನ್ನೊಮ್ಮೆ ಅವರ ಕಣ್ತಪ್ಪಿಸಿ ಗುಟ್ಟಾಗಿಯೂ ನಡೆಸಬೇಕಾಗ್ತದ. ಯಾಕಂದರ ಪೊಲೀಸರ ಕಣ್ಣಿಗೆ ಮಟಕಾ ಆಡವರು – ಆಡಸವರು ಈ ಕ್ಷಣಕ್ಕೆ ಬರೋಬರಿ ಅಂತ ಕಾಣಿಸಿದರ, ಮರುಕ್ಷಣಕ್ಕ ಎಲ್ಲರೂ ತಪ್ಪಿತಸ್ಥರಾಗಿ ಕಾಣಸ್ತಾರ. ಹೆಂಗ ಕಂಡರೂ ಪೊಲೀಸರಿಗೆ ಮಾಮೂಲು ತಪ್ಪಿಸಾಂಗಿಲ್ಲ. ಅವರು ಖಟ್ಲೆ ಹಾಕೂದು ಬಿಡಾಂಗಿಲ್ಲ.

ಮಿಡ್ನಾಪುರದಾಗ ಪೊಲೀಸ ವಸತಿಗೃಹ ಇಲ್ಲದಾ ಇರೂದ್ರಿಂದ ಊರಾಗಳ ದುಬಾರಿ ಬಾಡಗಿ ಮನಿಯಿಂದ ಅಡ್ಡಾಡಬೇಕಾಗ್ತದ. ಅದಕ್ಕ ಪೊಲೀಸರು ಒಟ್ಟಾಗಿ ಒಂದು ಕ್ವಾರ್ಟಸ್ರ ಕಟ್ಟಿಸಿಕೊಡ್ರಿ, ಇಲ್ಲಾಂದ್ರ ಓಸಿ ಆಡಸಗೊಡ್ರಿ ಎಂದು ಓಪನ್ ಆಗಿ ಮೇಲಿನವರಿಗೆ ಆವಾಜ್ ಇಡತಾರ. ಮಟಕಾ ಆಡಸೋ ಊರಗೌಡ ಕೊಡೋ ತೊಂಬಲಾದಿಂದ ಮನೀ ಬಾಡಗಿ ನಡೀತದ ಅನ್ನೋದು ಜನರ ಕಾಳಜಿ ಇರಬೇಕಾದವರ ವ್ಯಾಪಾರೀ ಬುದ್ಧಿ.

ನೀವು ರಣಗುಡುವ ಬಿಸಿಲಾಗ, ಹಂಗ ಹೊಲದ ಕಡೀಗೆ ನಡೆದು ಹ್ವಾದ್ರ, ಬೆವರು ಸುರಿಸಿ ದಗದ ಮಾಡವರು ಕಾಣಬರತಾರ, ಅವರಷ್ಟಕ್ಕೆ ಅವರು ಹಂತೀಪದ ಹಾಡಕೋಂತ ಕಮತ ಮಾಡೋದು ಖುಷಿ ಕೊಡತದ. ಅದಽ ರೈತಾಪಿ ಮಂದಿ ಸಂಜೀಮುಂದ ಸಾರಾಯಿ-ಮಟಕಾದಾಗ ತೇಲಾಡೋದು ಯಾರಿಗಾದ್ರೂ ನೋವು ಕೊಡೋ ವಿಚಾರನ. ಇವತ್ತಿಗೂ ಓಸಿ ಆಡಿ ಇವರಾಗ ಉದ್ಧಾರ ಆದಂವ ಇಲ್ಲ. ಒಮ್ಮೊಮ್ಮಿ ನಂಬರ ತಾಗಿದ್ರೂ ಅಡಾವುಡಿ ಮಾಡಿ ಕೇಕಿ ಹೊಡದು ಖಾಲಿ ಕೈಯಾಗ ಮನೀಗೆ ವಕ್ಕರಿಸ್ತಾರೆ. ಯಾಂವ್ ನನ್‌ಮಗ ಈ ಓಸೀನ ಕಂಡು ಹಿಡದನೋ ಯಾಂವ್ ಬಲ್ಲ!

ಇಡೀ ಊರಾಗ ಕ್ಲೋಸ್ ಗೊತ್ತಾದ ಮ್ಯಾಲ ಮಂದಿ ಕವುದಿ ಎಳದು ಈಚಲ ಚಾಪಿಗೆ ಮೈ ಒಪ್ಪಿಸಿಕೊಳ್ಳೋದು. ಸಾಲದ ಭಯಕ್ಕ ಜನ ದಿನಾ ಏಳಾಕಽ ಬ್ಯಾಡಾಽ ಅನ್ನೋ ತೊಡಕಿನಾಗ ಆಕಳಿಸುತ್ತ ಎದ್ದೇಳದು ಎಡಮಗ್ಗಲಿಂದನು. ಎದ್ದ ಮ್ಯಾಲಿನ ಲೆಕ್ಕಾಚಾರ ಓಟೂ ತೊಂಚವಂಚ ಆಗಿ, ವಲ್ಲೀ ಮರ್‍ಯಾಗ ಹಳಸಲು ಮುಕ್ಕಿ ಬದುಕಿಗೆ ಪಾದ ಬೆಳಸ್ತಾರ. ಇಂಥವರ ಮ್ಯಾಲ ದೈವಾನೂ ಮುನಿಸಿಗಂಡು ಮಳೀ ಬೆಳೀ ಆಗದ ಇರೂದು. ಮಳೀ ಬಂದು ಬೆಳೀ ಬೆಳದರ, ಮಾಲಿಗೆ ಬಜಾರದಾಗ ಧಾರಣಿನೂ ಇರಾಂಗಿಲ್ಲ. ಹಂಗಾಗಿ ಆರಕ್ಕ ಏರಾಂಗಿಲ್ಲ. ಮೂರಕ್ಕೆ ಇಳಿಯಾಂಗಿಲ್ಲ ಇವರ ಬದುಕು. ಈಗಿನ ಖಾಯಂ ಗಿರಾಕಿ ಆದ ಬರಗಾಲಕ್ಕೆ ಒಂದಽ ಮುಲಾಜಿಲ್ಲದ ಗುಳೆ ಕೀಳತಾರ. ಇಲ್ಲಾಂದ್ರ ಊರಾಗ ಕಳ್ಳತನ ಕಾಣಿಸಿಕೊಳ್ಳತಽತೀ.

ಸಾಲ ಅಂದಕೂಡ್ಲೆ ನೆನಪಾತು ನೋಡ್ರಿ, ಸಾಲ ಸಿಗತತಿ ಅಂದ್ರ ಮಂದಿ ಹಲ್ಲುಗಿಂಜಿ ನಿಂದ್ರತಾರ. ಅದಕಾಗಿ ವಸೂಲಿನೂ ಹಚ್ಚತಾರ. ಸಾಲಾ ತಗೊಂಡು ಹೋಳಗಿ ಮಾಡಿ ಉಣ್ತಾರ ಈ ಜನ. ಸಾಲ, ಇದ್ರ ತನ್ನ ಮಗಗ ದುಡಿದು ತಿನ್ನಾ ದರದ ಇರತದ; ಹಂಗಾ ತಾನು ಸತ್ತ ಮ್ಯಾಲ ಊರಾಽನ ಜನ ತನ್ನ ನೆನಸಿಕೋತಾರ. ಇಂಥ ಹಂಬಲಕ್ಕ ಎಲ್ಲರೂ ಊರು ತುಂಬಾ ಸಾಲಾ ಎತ್ತಿ ನಿರುಮ್ಮಳ ಸಾಯತಾರ. ಇಲ್ಲಿ ಇಸಗಂಡವ ಈರಭದ್ರ.

ಈಗೀಗ ರಾಜಕೀಯ ಒತ್ತಡಗಳು, ಗುಂಪುಗಾರಿಕೆ, ಗೊಂದಲಗಳಲ್ಲಿ ಸಂಜೀತನ ಕಾಲಾಯಾಪನೆಗೆ ಮಂದಿ ಅಂಟಿಕೊಂಡಾರ. ವಿಕೇಂದ್ರೀಕರಣ ನೀತಿ ನಡುವ ಇಲ್ಲಿ ಅಲಕ್ಷಿತ ಮಂದಿ ಅದಾರ. ಅವರನ್ನ ಮುಂದಕ ತರೋ ಗುತ್ತಿಗೆದಾರರೂ ರಗಡ ಮಂದಿ ಹುಟ್ಟಿಕೊಂಡಾರ. ಆದರೆ ಒಂದು ಮರೀಬಾರದ ಮಾತಂದರ ಮಿಡ್ನಾಪುರದಾಗ ಯಾರಿಗೆ ಯಾರೂ ದಾರಿ ತೋರಿಸ್‌ಬೇಕಿಲ್ಲ! ಅವನ ಕೈ ಅವನ ಬಾಯಿ.

ಜನ ಇವತ್ತು ತಮಗ ಆಗದವರನ್ನ ಎತ್ತಿ ಕಟ್ಟಿ ತಮಾಷೆ ನೋಡಾಕ ಕುಂತಾರ. ಒಳಗೊಳಗ ಕತ್ತೀ ಮಸಿಯೋರು ಒಂದ ಕಡೀಗೆ ಇದ್ರ, ತಮ್ಮ ತಮ್ಮ ಉಸಾಬರಿ ನೋಡಿಕೊಳ್ಳೋರೂ ಇಲ್ಲದಿಲ್ಲ. ಊರಿನ ತಳಬುಡ ಬಲ್ಲ ಗೌಡನಂಥವರು ಊರವರ ಆಯುಸ್ಸು ಗೇಣ ಹಾಕೋದ ಕಾಯಕಾ ಮಾಡಕ್ಯಂಡಾರ. ಜನ ಸೊಗರಾಗಿರೋದು ಇಂಥ ದೊಡ್ಡವರ ಭಯಕ್ಕ ತಳಕು ಹಾಕಿಕೊಂಡಽತೀ. ಧಣೇರು ಏನಂತಾರೋ ಅನ್ನೋ ಹಿಂಜರಿಕೆ ಹುಂಬ ಜನರ ನಿರ್ಣಯಕ್ಕೆ ತೊಡಕಾಗಿ ಕುಂತಽತಿ.

ಈಟೆಲ್ಲಾ ರಂಪಾಟ ಬ್ಯಾಡ ಬ್ಯಾಡ ಅಂದರೂ ನಿಮ್ಮ ಕಣ್ಣಿಗೆ ಕಂಡಾವ. ಈ ಊರಾಗಳ ಕತೀ ಏನಽ ಇದ್ರೂ, ಕಂಡದ್ದನ್ನ ಕಂಡಾಂಗ ಹೇಳದಽ ಇರಾಕಾಗಲ್ಲ. ಹೇಳದಾಽನ ಮೂಲ ವಿಚಾರಕ್ಕ ಬಂದ್ರ, ತೂತ ಗಡಗಿ ಒಳಗ ನೀರ ಹೊತ್ತಾಂಗ ಆಗತಿತ್ತು.

ಅವರಪ್ಪ ಸತ್ತಾಗಿಂದ ಮೈಲಾರಿಗೆ ಒಂದರ ಮ್ಯಾಲೊಂದು ಅಳಲು ಮುಸುಕಿ ಮನುಷಾ ಕುಗ್ಗಿ ಹೋಗಿದ್ದ. ಹಂಗಾಗಿ ಇದ್ದೊಬ್ಬ ತಂಗೀನ ನೆಚಗೊಂಡು ಆಕೀಗೆ ಲಗ್ನಾ ಮಾಡಾಕ ಇನ್ನಿಲ್ಲದ ದಗದ ಹಚಗಂಡಿದ್ದ. ಬಂದ ರೊಕ್ಕಾನೆಲ್ಲಾ ಇಡಗಂಟಾಗಿ ಬಡ್ಡಿ ದುಡಸ್ತಿದ್ದ. ಆದರ ಯಾವುದು ಗಂಡು ನೋಡಿ ಬಂದ್ರೂ, ಇಲ್ಲದ ತೊಡಕು ವಕ್ಕರಿಸಿ, ಸಂಬಂಧ ಕೂಡಿ ಬರತಿರಲಿಲ್ಲ.

ಸರಿದ ದಿನಗಳಲ್ಲಿ ಮೈಲಾರಿಯ ಅಸಹಾಯಕತೆ ಆತನ್ನ ಮೀರಿ ಬೆಳೀತು. ಮುದುಡಿದ ಮನಸಿನಿಂದ ಹೊರಬರದ ಗೀಳಿಗೆ ನಿಷ್ಠನಾಗಿ ಮುಳ್ಳೂರಿದ ಆತಂಕ ಕರಗಲಽ ಇಲ್ಲ. ತಂಗೀಗೆ ಲಗ್ನ ಮಾಡಾಕಾಗ್ಲಿಲ್ಲ ಅಂತ ಹೇಳಿಕೊಳ್ಳಾಕ ಆಗದ ಚಿಂತಿಗೆ ಇಡೀ ಬದುಕು ಹುರುಬರಕಾಗಾಕ ಹತ್ತಿತ್ತು.

ಇಂಥ ದಿನಮಾನದಾಗ ತಂಗೀನೂ ತನಗ ಮದವಿ ವಯಸ್ಸು ದಾಟೇತಿ ತನಗ ಈ ಜನಮದಾಗ ಮದವಿ ಆಗಬರಾಣಿಲ್ಲ ಅನ್ಕೊಳ್ಳಾಕ ಹತ್ತಿದಳು. ಈಗೀಗ ರಾತ್ರೆಲ್ಲಾ ಹೊಳ್ಳಾಡದು ಆಗಿ ವ್ಯಸನ ತಡೀಲಾರದಾಗಿದ್ದಳು.

ಊರ ಗೌಡ ಆಕೀ ಮ್ಯಾಲ ಮೊದಲಿಂದನೂ ಕಣ್ಣು ಹಾಕಿದ್ದ. ಆದರ ತನಗೆ ಅನ್ಯಾಯ ಮಾಡಿದವರನ್ನು ದಂಡಿಸದೆ ಬಿಡದ ಮೈಲಾರಿಯು ಗೌಡಗ ಸದಾ ಕಾಲ್ತೊಡಕಾಗಿದ್ದ. ಭಯದ ನಡೂಽವ ಗೌಡ ಹೊಂಚು ಹಾಕಿ ಕಾಯುತಿದ್ದ.

ತೇರಿನ ದಿನ ಆ ಕ್ಷಣ ಕೂಡಿ ಬಂದಿತ್ತು. ಒಳಗೊಳಗಽ ಕಣ್ಣಾಗ ತುಂಬಿಕೊಳ್ಳೋದ್ರಾಗ ತಳಗ ಮ್ಯಾಲ ಆಗಿಬಿಟ್ಟಿತ್ತು. ಅಂತೂ ಗೌಡ ಆಕೀನ ಗುಟ್ಟಾಗಿ ಬಗಲಿಗೆ ಎಳಕೊಂಡಾಗ, ಕೆಂಡಾನ ಕಟಗೊಂತೀನಿ ಅನಕಂಡಽ ಇರಲಿಲ್ಲ.

ಹುಣ್ಣವೀ ಹಿಂದೆ ಮುಂದ ಇರಬೇಕು. ಮೈಲಾರಿ ತನ್ನ ತಂಗೀಗೆ ಗಂಡು ಖಾಯಂ ಮಾಡಿ ಬಂದದ್ದು ಊರಿಗೆಲ್ಲಾ ಗೊತ್ತಾಗಿತ್ತು. ತನ್ನ ಕುಟುಂಬ ಒಂದು ಹದಕ್ಕೆ ಬಂತು ಅನ್ಕೋತಾ ತನ್ನಷ್ಟಕ್ಕಽ ಖುಷಿ ಪಟ್ಟದ್ದು ಸಹಜ ಇತ್ತು. ಕೂಡಿಟ್ಟ ಹಣ ಇರೋದ್ರಿಂದ ಸಲೀಸಾಗಿ ಮದವಿ ಹೂಡೋ ಕನಸು ಕಾಣಾಕ ಹತ್ತಿದ್ದ.

ದಿಡಗ್ಗನ ಮೈಲಾರಿ ಎಬ್ಬಿಸಿದ ಮದವಿ ಸುದ್ದಿ ತಗೊಳ್ಳಾಕ ಆಗದಾಂಗ ಗೌಡಗ ಒದ್ದಾಟ ಹತ್ತಿಸಿತ್ತು. ತನಗೆ ತ್ರಾಸದಿಂದ ದಕ್ಕಿದ ಬ್ಯಾಟೀ ಕೈಬಿಟ್ಟು ಹೋಗದಾಂಗ ಅಡ್ಡಿಗಾಲು ಕೊಡಾಕ ತುದಿಗಾಲಾಗ ನಿಂತಿದ್ದ.

ಇತ್ತಾಗ ಕೆಂಡ ಹೊಗಿಯಾಡ ಸುಳಿವು ಸಿಕ್ಕು ಮೈಲಾರಿಗೆ ನುಂಗಲಾರದ ತುತ್ತು ಆತು. ಏಟೊಂದು ಆಸೀ, ಇಟಗಂಡು ತಂಗೀಗಾಗಿ ತನ್ನ ಬದುಕನ್ನ ಮುಡಪ ಇಟ್ಟಿದ್ದ. ಊರೆಲ್ಲ ಆಡಕ್ಯಣಾಂಗ ಆಗಿರದು ಅವಗ ಹೆಂಗ ಆಗಿರಬ್ಯಾಡ. ಇಂಥ ಇಕ್ಕಟ್ಟಿನ ವ್ಯಾಳ್ಯಾಕ ಸಾಲಾ ತಗೊಂಡವ ಒಬ್ಬ ನೆಗದು ಬಿದ್ದು ಅರ್ಧ ಇಡಗಂಟು ಬರಬಾದ್ ಆಗಿತ್ತು. ಅನ್ನೊಂಡದ್ದಽ ಒಂದು, ಆದದ್ದಽ ಒಂದು ಆಗಿ ಮೈಲಾರಿಗೆ ಒಡಲಾಗ ತಡೀಲಾರದ ಉರಿ ಹತ್ತಿತು.

ಕೆಟ್ಟ ಹುಳದಂಥ ಗೌಡ ತನ್ನ ವಂಶದ ಮರ್ವಾದಿ ಮಣ್ಣು ಗೂಡಿಸಿದ್ದು ಖರೆ. ಅದರಿಂದಾಗಿ ಹಚಗೊಂಡ ಸಿಟ್ಟಿಗೆ ಮನಸು ಕೆಟ್ಟು ಕೆರ ಆಗಿತ್ತು. ಅಳಕಿಗೆ ತನ್ನೊಳಗ ತಾನು ಬೇಯಾಕ ಹತ್ತಿದ್ದ. ಅದನ್ನ ತನ್ನ ಹತ್ರಾನ ಇಟಗಂಡು ಸಂದು ಕಾಯಾಕ ಹತ್ತಿದ್ದ. ಬೇರಾವ ವಿಚಾರಕ್ಕೂ ಹೊಣೆ ಆಗದ ಮೈಲಾರಿ ಗಳಿಗ್ಗೆ ಗಂಡಾಂತರ ಆಗ್ತಾ ಹೋದ. ಸೂರ್ಯಕಾಂತಿ ಹೂ ಅರಳಿಸೋ ಈ ಕಪ್ಪು ನೆಲದಾಗ ಮೈಲಾರಿ ಇಳಿಸಿಕೊಂಡಿರೋ ಬೇರು ಏಕಾ‌ಏಕಿ ಸಡಿಲ ಆತು, ಕುಂತಲ್ಲಿ ಕುಂದ್ರಲಾರದ, ನಿಂತಲ್ಲಿ ನಿಂದರಲಾರದ ನಡವಳಿಕೆಯಿಂದ ಜನ ಹುಚ್ಚು ಕೆದರೇತಿ ಅನ್ನಾಕ ಹತ್ತಿದರು. ಮೈಲಾರಿ ಕಾಲ್ಮಡಿಯಾಕಾರ ಮಾತ್ರ ನಿರಾಳ ಇದ್ದು, ಹಗಲು ರಾತ್ರಿ ಒಳಗಽ ಕುದೀತಿದ್ದ. ಆತನ ಮನಸಿನ ಚಡಪಡಕೀ ನೋಡಿದ ತಂಗಿ ಹೆದರಿ, ಮಂಡೀಗೆ ಹಣಿ ಹಚ್ಚಿ ಗಪ್ಪ ಕುಂದ್ರಾಕ ಹತ್ತಿದಳು.

ವಾರದ ಸಂತ್ಯಾಗ ಎಲ್ಲಿ ಬೇಕಲ್ಲಿ ಹಣಕತಿದ್ದ ಮೈಲಾರಿ ಮುಖ ಈಗ ಕಾಣದಾಂಗ ಆತು. ಕಟ್ಟ ಕಡೀಗೆ ಅವನು ಜಿದ್ದಿಗೆ ಬಿದ್ದೋನಾಂಗ ಹಲ್ಲು ಮಸೀತಾ ಊರಕೇರಿ ತಿರಗಾಕ ಹತ್ತಿದ. ಹುಡುಗೂರು ರಾತ್ರಿ ಹೊತ್ತನಾಗ ನೋಡಿ ಚೊಣ್ಣ ತೊಯ್ಸಿಕಣಾಕ ಹತ್ತಿದರು. ಊರು ಮಂದಿಗೆಲ್ಲಾ ಮೈಲಾರಿ ಪುಟ್ಟಪೂರಾ ಬಿಡಸಲಾಗದ ಒಡಪ ಆಗ್ತಾ ಹ್ವಾದ.

ಅವತ್ತು ಎಳ್ಳ ಅಮಾಸಿ, ಅಲ್ಲೀತನ ಮೈಲಾರಿ ತನ್ನ ದುಗುಡಾನ ಜತನದಿಂದ ಹತ್ತಿಕ್ಕಿಕೊಂಡು ಬಂದಿದ್ದ. ಅರೆಗತ್ತಲಾಗ ಗೌಡ ಕಣದ ಸಾಲಾಗ ನಡೆದು ಹೋಗಾಕ ಹತ್ತಿದ್ದು ಕಂಡು ಬಂತು. ಮೆತ್ತಗ ಹಿಂಬಾಲ ಬಿದ್ದ. ಸುತ್ತೆಲ್ಲಾ ಮಂದಿ ಸುಳುವು ಇದ್ದಿಲ್ಲ. ಎತ್ತೆತ್ತಿ ಇಡತಿದ್ದ ಗೌಡನ ಹೆಜ್ಜಿಗುಳು ಮೈಲಾರಿನ ಒಮ್ಮಕಲೇ ಕೆಣಕಾಕ ಹತ್ತಿದವು. ಆ ಗಳಿಗ್ಗೆ ಮೈಲಾರಿಗಿರ ರಗತಾ ಓಟೂ ಕುದಿಯಾಕ ಹತ್ತಿತ್ತು. ಒಮ್ಮೆಲೆ ದೆವ್ವ ಬಡದವರಗತೆ ಗೌಡನ್ನ ಹಿಮ್ಮುಖ ತೆಕ್ಕೆ ಬಿದ್ದು ಅಮಚಿಕೊಂಡನು. ಹಿಂದಽ ಅವನ ಚೊಣ್ಣದೊಳಗ ಕೈತೂರಿ ತೊಲ್ಡ ಬಿಕ್ಕ ಹಿಡದಿದ್ದ. ಮೈಲಾರಿಯ ಮಂಗ್ಯಾನ ಮುಟಗಿ ನಡವ ಒಂದರೆಗಳಗಿ ಒಳಗ ದುಗುಡಾ ಹೊರಗ ಬಿದ್ದಿತ್ತು. ಕಂಡಕಂಡವರ ಆಯುಸ್ಸಿಗೆ ಗೇಣು ಹಾಕುತ್ತಿದ್ದ ಗೌಡ ಅಡಬರಸಿ ಬಂದ ಕಂಟಕಕ್ಕೆ ಚೆಲ್ಲು ಬರೆಸಿಕೊಳ್ಳಲಾರದಾಗಿದ್ದ.

ಅದಽ ಹೊತ್ತಿಗೆ ಊರಾಗ ಕೂಡಿದ ಸಂತೀ ಜನ ಗುಡಚಾಪಿ ಕೀಳಾಕ ಹತ್ತಿದ್ರು. ಉಸುರು ಬಿಗಿ ಹಿಡದು ಮೆತ್ತಗಽ ಮನೀ ಸೇರಕ್ಯಂಡ ಮೈಲಾರಿ, ಕವುದಿ ಒಳಗ ಬೆವಿಯಾಕ ಹತ್ತಿದ್ದು ಯಾರಿಗೂ ಕಾಣಾಽ ಕಾರಣಾ ಇರಲಿಲ್ಲ. ಹುಚ್ಚನ ಪಟ್ಟ ಕಟ್ಟಿದ ಮಂದಿಗೆ ಪತ್ತೇ ಹತ್ತದಾಂಗ ತನ್ನ ವರಸೇನ ತೋರಿಸಿ, ಹೊಟ್ಟ್ಯಾಗಿನ ಉರಿ ತಮಣಿ ಮಾಡಿಕಂಡಿದ್ದ.

ನಸುಕಿಗೆ ಹಾಳ್ ಮಾರ್‍ಯಾಗ ತಂಬಗಿ ತಗಂಡು ಬಂದ ಹೆಣ್ಣು ಮಕ್ಕಳು ಊರ ಗೌಡ ಪಣುವಿನ ಹತ್ರ ಬಿದ್ದಿದ್ದು ಕಂಡರು. ತಾವು ಬಂದ ಕೆಲಸಾ ಮರತು ಹಿಂದಕ ಓಡೋಡಿ ಬಂದವರಿಗೆ ಅದರು ಹತ್ತಿತ್ತು. ಹಾರಿಬಿದ್ದ ತಲೀ ಮ್ಯಾಲಿನ ಸೆರಗು ಸಂಬಾಳಿಸುತ್ತ ‘ಗೌಡ್ರು ಮೈಮ್ಯಾಲ ಅರವಿಲ್ಲದ ಬಕಬರ್‍ಲ ಬಿದ್ದಾರ’ ಅಂತ ದಮ್‌ಕಟ್ಟಿ ಒದರಿದರು. ದಂಡು ದಂಡು ಜನ ಖಬರಿಲ್ಲದಾ ದೌಡಾಯಿಸಿತು. ದೂರಕ ಕುಂತೂ ಬಗ್ಗಿ ನೋಡಿದವರು ಸುಕಾ ಸುಮ್ಮನಾ ಬಿದ್ದಾನ ಅಂದರು. ಇನ್ನು ಕೆಲವರು ಕುಡದದ್ದು ಹೆಚ್ಚಾಗೇತಿ ಅಂದರು. ಗೌಡನ ಉಸುರು ನಿಂತದ್ದು ಗೊತ್ತಾಗಿರೋದು ಅವನ ಹೇಂತಿ ಬಂದು ‘ಲಬೊಲಬೋ’ ಅಂತ ಹೊಯ್ಕಣಾಕ ಹತ್ತಿದ ಮಾಲಽ.

ಊರಾಗ ಯಾರೂ ಯಾರ ಮ್ಯಾಲೂ ಗುಮಾನಿ ಹಚ್ಚೋ ಕಾರಣಾನಽ ಇರಲಿಲ್ಲ. ಮಾತಿನಾಗ ನಿಧಾನ ವಿಷದಾಂಗ ಇಂಚಿಂಚು ಕೊಲ್ಲೋ ಮಂದಿ ಅದಾರ ಅನ್ನೋದು ಬೇರೆ ವಿಚಾರ. ಎಲ್ಲಾರ ಬಾಯಾಗೂ ‘ಗೌಡಗ ಹಿಂಥಾ ಸಾವು ಬರಬಾರದಾಗಿತ್ತು’ ಅನ್ನೋ ಒಂದಽ ಮಾತು ತುಂಬಿತ್ತು. ಜನರ ಹನಿಗೂಡಿದ ಕಣ್ಣಿಗೆ ಎಳ್ಳಷ್ಟೂ ಸುಳಿಯದ ಸಂಶಯದ ನಡೂವ ಊರಗೌಡ ಮಣ್ಣಾಗ ಮಣ್ಣಾಗಿ ಹ್ವಾದ.

ಇಲ್ಲಿ ಒಂದು ಮುಜಗರದ ವಿಚಾರ ಆಂದ್ರ ಮಿಡ್ನಾಪುರದ ಜನ ವಿನಾಕಾರಣ ಭಯ ಬೀಳೂದು. ಅದನ್ನ ಅವರ ದೌರ್ಬಲ್ಯ ಅನ್ನಾಕೂ ಬರೂದಿಲ್ಲ. ಯಾಕಂದ್ರ ಈ ಊರಾಗ ಜನರನ್ನ ಅಂಜಿಸಿ ಹೇಳೋ ನಾಲಗಿ ತುಂಬ್ಯಾವ. ದ್ಯಾಮವ್ವನ ಮೊರೆ ಇಡತಾನಽ ನಾಳೀಕ ಅನ್ಬೇಕಾರ ಮೈಲಾರಿ ಒಬ್ಬನ್ನ ಬಿಟ್ಟು… ಊರಾಗಿನ ಗಂಡಸರು ಅಂತ ಕರಿಸ್ಕೊಂತಿದ್ದ ಮಂದಿ ಊರು ಬಿಟ್ಟು ಪರಾರಿ ಆಗಿದ್ದರು.

ಪೊಲೀಸರಿಗೆ ಸುದ್ದಿ ತಲಪಿ ತಲಾಶ್ ಮಾಡಾಕ ಹತ್ತಿದರು. ಊರೆಲ್ಲ ತಡಕಾಡಿದರೂ ಹೆಣ್ಣು ಹೆಂಗಸರನ್ನ ಬಿಟ್ಟು ನರಮನುಷಾರ ಸುಳುವಿರಲಿಲ್ಲ. ಪೊಲೀಸರು ಮೈಲಾರಿ ಮ್ಯಾಲ ಸವಾರಿ ಮಾಡಾಕ ನೋಡಿದರು. ಆದ್ರ ಮುದಿಯಾಗೂಳು ‘ಹುಚ್ಚ ಖೋಡಿ ಏನ್ ಮಾಡೀತು ಬಿಡಿ, ಅದನ್ಯಾಕ ತಡವಕ್ಯಂತೀರಿ’ ಅಂತ ಹಲ್ಲಿಲ್ಲದ ಬಾಯಿಂದ ಸಣ್ಣಕ ಗದರಿಸಿದಾಂಗ ಮಾಡಿ ಸಾಗಹಾಕಿದ್ದರು. ಮೈಲಾರಿಗೆ ಒಂದ ಕಡೀಗೆ ಒಳಗೊಳಗಽ ಹೆದರಿಕಿ ಇಲ್ಲದಾ ಇರಲಿಲ್ಲ. ಹೊರಗ ತೋರಗೊಡದಽ ಖರೇವಂದ್ರೂ ತಾನಽ ಮಾಡೀನೋ ಇಲ್ಲೋ ತಿಳಿಲಾರದ ಭ್ರಮೆಗೆ ಬೆಪ್ಪು ಹಿಡಿದು ಮೂಲಿಗೆ ಕುಂದ್ರಾಕ ಶುರುಮಾಡಿದ.

ಅತ್ತ ‘ಕೂಸಿನ ಬಗಲಾಗ ಇಟಗಂಡು ಊರೆಲ್ಲ ತಡಕಿದ್ರಂತ’ ಹಂಗಾತು ಪೊಲೀಸರ ಪಾಡು. ಕೊನೀಗೆ ಅವರು ಕೈ ಒಗದವ್ರ ‘ಸಹಜ ಸಾವು’ ಅಂತ ರಿಪೋರ್ಟ್ ಹಾಕಿ ಕಡತ ಮುಚ್ಚಿದ್ದು ನಿಮಗಽ ಗೊತ್ತಲ್ಲ. ಅದು ಮೇಲಿನವರ ಕೆಂಗಣ್ಣಿಗೂ ಗುರಿಯಾಗಿತ್ತು…

ಈಗ ಎಲ್ಲಾ ತಮಣಿ ಆಗೇದ ಅಂತ ಒಬ್ಬೊಬ್ಬರಾ ಊರಿಗೆ ವಾಪಾಸು ಆಗ್ಯಾರ. ನನಗ ಮೊದಲು ಗೊತ್ತಿತ್ತು. ನೀವೇನು ಅನಾಯಾಸ ಈ ಊರಿಗೆ ಬಂದವರಲ್ಲ. ಪೊಲೀಸರ ಕೈಮೀರಿದ ವ್ಯಾಳ್ಯಾಕ ಖೂನೀ ಗುನೇಕಾರ ಯಾರಂತ ಹುಡುಕಾಕ ಮುದ್ದಾಮ ಬಂದೀರಿ. ಹೌಂದಲ್ಲ? ಕಡತದ ಧೂಳು ಜಾಡಿಸಿ ಮತ್ತೊಮ್ಮೆ ತಲಾಶಕ್ಕೆ ಬಂದೀರಿ. ಮುಂಬಡ್ತಿ ಆಮಿಷ ಒಡ್ಡಿ, ನಿಮಗ ಈ ಹುಕುಮ ಮಾಡ್ಯಾರ ಅನ್ನೂದು ಗೊತ್ತಾಗೇತಿ. ನೀವು ಬಂದು ಹೋಗ್ತಾ ಆಗಾಗ ಮಂದಿ ಮುಕರಿದಲ್ಲೆಲ್ಲಾ ಗುಂಪಿನಾಗ ಒಂದಾಗಾಕ ನೋಡಿದ್ರಿ. ಅವರಿಗೆ ಚಹಾ, ಬೀಡಿ ಗುಟಕಾ ತಿನಿಸಿದಿರಿ. ಜನರೂ ಬೆರಕೀ. ತಗೊಳ್ಳೋದು ತಗಂಡು ಅರಗ ಆಗತಿದ್ರು.

ಎಲ್ಲಾನೂ ಗಂದರಗೋಳನಿಸಿದಾಗ ಕೇರ್‍ಯಾಗ ಉದ್ದಾನುದ್ದಕ್ಕೂ ಅಡ್ಡಾಡದ ಮಂದೀನ ಅರಸೋ ಕಣ್ಣು ನಿಮ್ಮದಾತು. ಆಗಿಂದ ಮೈಲಾರಿನ ಕಂಡಾಗೆಲ್ಲಾ ತಳಗ ಮ್ಯಾಲ ನೋಡಾಕ ಹತ್ತೀರಿ. ಹಂಗ್ಯಾಕ ಕಣ್ಣಳತೆ ಮಾಡ್ತೀರಿ. ಬರಕೊಳ್ಳಿ. ಅಂವ ಐದಡಿ ಆರ ಅಂಗುಲ ಅದಾನ. ಅಷ್ಟಕೂ ಯಾರನೂ ಅಟಕಾಯಿಸದಽ ನೀವು ನಿಮ್ಮ ಶಾಣ್ಯಾತನ ಹಚ್ಚೀರಿ. ಬ್ಯಾರೇರು ಮಾಡಿದ ತಪ್ಪಿಗೆ ಪುರಾವೆ ಬರೆಯೋ ನೀವೀಗ ಹತ್ತತ್ರ ಬಂದೀರಿ. ಆದ್ರ ಈ ಗಳಿಗ್ಗೆ ನೀವು ಮೈಲಾರಿನ ಬಂಧಿಸಿದ್ದಽ ಹೌದಾದ್ರ ಊರ ಜನ ನಿಮ್ಮ ಮ್ಯಾಲಿನ ಆಕ್ರಮಣಕ್ಕ ಮೂಕ ಸಾಕ್ಷಿ ಆಗಬೇಕಾಗದ. ಹಂಗಽ ನಿಮ್ಮ ಲೆಕ್ಕಾಚಾರ ಓಟೂ ಉಪರಾಟೆ ಆಗೋದು ಖರೆ!

ಮಿಡ್ನಾಪುರದವರ ನಡವಳಿಕಿ ಹೆಂಗಽ ಇರಲಿ. ಮೈಲಾರಿ ಮಾತ್ರ ತನ್ನ ತಂಗೀ ಶೀಲಕ್ಕ ಆಟೊಂದು ಕಿಮ್ಮತ್ತು ಕೊಡತಿದ್ದದ್ದು ನಮಗೂ ಗೊತ್ತಿರಲಿಲ್ಲ. ಅಂವ ತಂಗೀ ಮ್ಯಾಲ ಇಟ್ಟಿದ್ದ ಭರವಸೀ, ಪ್ರೀತಿಗೆ ಸರಿಸಾಟಿನಽ ಇಲ್ಲ ಬಿಡ್ರಿ. ಗೌಡ ಮಾಡಿದ ಭಾನಗಡಿಗೆ ತಂಗಿ ಕಾರಣಾ ಆಗಿರಲಿಲ್ಲ. ಗೌಡ ಬಲೆ ಬೀಸಿದ. ಆಕಿ ಬಿದ್ಲು. ತಂಗೀನ ಕೇಳಿ, ನಡೆದ ಹಕೀಕತ್ತು ಆಕೆಯ ಬಾಯಿಂದ ಹೊರಬಿದ್ದ ಮ್ಯಾಲಽ ಮೈಲಾರಿಯ ಸ್ವಾಭಿಮಾನ ಕೆರಳೇದ.

ಪೊಲೀಸರು ಮೈಲಾರಿಗೆ, ಅವನ ತಂಗಿಗೆ ನ್ಯಾಯಾ ಕೊಡತಿರಲಿಲ್ಲ. ಅವರ ಕೈಲಾಗದ್ದನ್ನ ಮೈಲಾರಿ ಮಾಡ್ಯಾನ. ಗೌಡ ಸಂಪಾದಿಸಿದ ಸಾವು ಮೊದಲಽ ಖಾಯಂ ಆಗಿತ್ತು.

ಮೈಲಾರಿನಽ ಕೊಲೆಗಾರ ಅಂತ ನಾನು ಇಲ್ಲೇ ನಿಂತ ಮೆಟ್ಟಿನಾಗ ಹೇಳಿಬಿಡ್ತೀನಿ. ನನ್ನ ಮಾತಿನ ಮ್ಯಾಲೆ, ಕೊಲೆಗಾರ ಸಿಕ್ಕಬಿಟ್ಟ ಅನ್ಕೊಂಡ್ರ ಸಮಾಧಾನಕ್ಕಿಂತ ಹೆಚ್ಚು ಆತಂಕ ನಿಮಗ ಆಗತೈತಿ… ತಡೀರಿ ಸಾಹೇಬ್ರ…

ನಾ ಹೀಂಗಂತೀನಿ ಅಂತ ತಪ್ಪು ತಿಳ್ಕಾಬ್ಯಾಡ್ರಿ ಸರಽ… ನಿಮಗ ಹಚ್ಚಿದ ಕೆಲಸಕ್ಕ ಈಟರ ಮಟ್ಟಿಗೆ ಒತ್ತು ಕೊಡ್ತಾ ಕಾಯ್ದೆಶೀರ್ ನಡೆಯೋವರು, ನೀವು ಬಾ ದಾರ್‍ಯಾಗ ಹೊಳ್ಳಿ ನೋಡಿದಲ್ಲೆಲ್ಲಾ ಕಾನೂನು-ಬಾಹಿರ ಚಟುವಟಿಕೆ ರಾಜಾರೋಷ ನಡೀತಿತ್ತಲ್ಲಾ. ನೋಡಿ ನೋಡೀ ನೀವು ಇಂಥಾ ವಿಚಾರಕ್ಕೆಲ್ಲಾ ತಲೀ ಕೆಡಿಸಿಕಂಡ್ರ ಇಡೀ ದೇಶಾನ ಕಂಬಿ ಎಣಿಸಬೇಕಾಗ್ತದ ಅನಕಂಡಿರಬಹುದು. ಒಳ ಹಿಕಮತ್ತು ಏನಽ ಇದ್ರೂ, ಮ್ಯಾಲ ನೋಟಕ್ಕ ತಪ್ಪು ಕಂಡಾಗ ನಿಮ್ಮ ಹೊಣೆಯಿಂದ ನುಣುಚೋದು ತಪ್ಪಾಗದಿಲ್ಲೇನ್? ಸರಕಾರಿ ಪಗಾರ ತಗೋತೀರಲ್ಲ. ನಿಮಗೂ ಶಿಕ್ಷ ಯಾಕ ಕೊಡಬಾರ್‍ದು? ‘ಒಂದ ಕಣ್ಣಾಗ ಬೆಣ್ಣಿ, ಒಂದ ಕಣ್ಣಾಗ ಸುಣ್ಣ’ ಹಚ್ಚೊ ಸರಕಾರ ಅಂದ್ರ ನಿಮ್ಮ ನಡವಳಕಿ ಪ್ರಶ್ನಿಸಾಂವ ಯಾಂವ ಅದಾನ ತಿಳೀವಲ್ತು…

ಅವೆಲ್ಲ ಯಾಕೀಗ?

ಮೈಲಾರಿ ಕಾನೂನು ಕೈಯಾಗ ತಗೊಂಡಿದ್ದು ತಪ್ಪು ಅಂತ ನಂಗೂ ಗೊತ್ತೈತಿ. ಆದರೂ ನೀವು ಮೈಲಾರಿ ತಂಟೆಗೆ ಹೋಗಬ್ಯಾಡ್ರಿ. ತಲೆಪ್ರತಿಷ್ಠೆಗೆ ಹೋದರ ಆಗಲೆ ಹೇಳಿದಾಂಗ ‘ಕಡಾಯಿಯಿಂದ ಬೆಂಕಿಗೆ ಹಾರಿದಾಂಗ’ ಆಗತದ ನಿಮ್ಮ ಸ್ಥಿತಿ. ಅವನ ವಿಚಾರ ಏನರ ನಿಮ್ಮ ಕಡತದಾಗ ಇದ್ರ ಸುಮ್ನೆ ’ಬಿ’ ರಿಪೋರ್ಟ ಹಾಕಿ ಕೈತೊಳಕೊಳ್ರಲ್ಲಾ. ನಿಮಗೂ ಅಳಾರು… ಯಾಕಂದ್ರ, ಈ ಹಿಂದೊಮ್ಮೆ ಮೈಲಾರಿ ಗೌಡನ ವಿರುದ್ಧ ಸಾಕ್ಷೀ ಹೇಳಿದ್ದ. ಅದನ್ನ ಸುಳ್ಳು ಮಾಡದಕ್ಕೆ ಗೌಡ ಒದಗಿಸಿದ ಪುರಾವೆ ಹಿಡಿದು ಮುನ್ಸಿಫರು ಕೊಟ್ಟ ತೀರ್ಪಿನ ಪ್ರತಿ ನನ್ನ ಹಂತೇಲಿ ಐತಿ!

ನಿಮ್ಮ ಹತ್ರ ಸುತ್ತಿ ಬಳಸಿ ಯಾಕ? ಅಗದೀ ಸರಳ ಮಾತಿನಾಗ ಹೇಳಿ ಮುಗಸ್ತೀನಿ – ಮೈಲಾರಿ ‘ಮಾನಸಿಕ ಅಸ್ವಸ್ಥ’ ಅದಾನ ಅಂತ ನ್ಯಾಯಾಲಯದಾಗ ಸಾಬೀತು ಆಗೇದ!”
*****
(೨೦೦೨ರ ಕನ್ನಡ ಸಾಹಿತ್ಯ ಅಕಾಡೆಮಿಯವರ ಕಥಾಸಾಹಿತ್ಯ ಪ್ರಕಟಣೆಗೆ ಆಯ್ಕೆಯಾಗಿದೆ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಾರಸ್ಯ
Next post ಕೆಟ್ಟಿರುವೆನು ನಾನು

ಸಣ್ಣ ಕತೆ

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

 • ದಾರಿ ಯಾವುದಯ್ಯಾ?

  ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…