ನಮ್ಮೊಳಗೆ ಅನಾಥರಾಗುತ್ತಿರುವ ನಾವು

ನಮ್ಮೊಳಗೆ ಅನಾಥರಾಗುತ್ತಿರುವ ನಾವು

ಹಿಂಸೆಯ ಯುಗದಲ್ಲಿ ನಾವು ಬದುಕುತ್ತಿದ್ದೇವೆ. ಭೂಮಂಡಲವೇ ಘೋರವಾದ ಮೃತ್ಯುವಿನ ಮಾಲೆಯಿಂದ ಆವೃತವಾಗಿದೆ. ಸದ್ಯದಲ್ಲಿ ಅಮೇರಿಕ ದೇಶ ಅದರಲ್ಲಿ ಹೆಚ್ಚು ಅಪರಾಧಿ. ಸತ್ಯಕ್ಕೆ ದುರ್ಗತಿ; ದ್ವೇಷಕ್ಕೆ ವಿಜಯ; ಪ್ರೇಮ ಅನಾಥ ಶಿಶು. -ಲೂಯಿ ಫಿಷರ್ (ಮಹಾತ್ಮ ಗಾಂಧಿ ೧೦೦ ವರ್ಷಗಳು, ಪುಟ ೬೭)

ಎಲ್ಲ ಸ್ತರಗಳಲ್ಲಿ ವಿಶ್ವದ ನಾಯಕ ಸ್ಥಾನ ಪಡೆದು ಸಮೃದ್ಧಿಯಿಂದ ಬೀಗಬೇಕಾಗಿದ್ದ ಭಾರತ ಭಿಕ್ಷುಕರಂತೆ ಕಂಡಕಂಡ ರಾಷ್ಟ್ರಗಳಿಗೆ ಕೈಚಾಚುತ್ತಾ ದಟ್ಟ ದಾರಿದ್ರ್ಯದಿಂದುಳಿಯಲು, ಒಳಜಗಳಗಳ ದ್ವೇಷಾಸೂಯೆಯ ದಳ್ಳುರಿಯಿಂದ ಹತ್ತಿ ಉರಿಯಲು ಕಾರಣವೇನು?

ಫಂಜಾಬ್-ಖಲಿಸ್ಥಾನ! ಸ್ವರ್ಣಮಂದಿರದ ಸೈನಿಕನ ಕಾರ್ಯಾಚರಣೆ, ಭಯೋತ್ಪಾದಕರಿಂದ ಸ್ವಜನ ಹತ್ಯಾಕಾಂಡ; ಮುಸಲ್ಮಾನರು-ಶಾಬಾನೋ ಬೇಗಂ, ಸರ್ವೋಚ್ಛ ನ್ಯಾಯಾಲಯದ ತೀರ್ಪು, ಷರಿಯತ್ ಪ್ರತಿಪಾದನೆ, ಇಸ್ಲಾಂ ಇತ್ಯಾದಿ: ಹಿಂದೂಗಳ ಹಿಂದೂ ರಾಷ್ಟ್ರಕಲ್ಪನೆ-ಉತ್ತರ ಪ್ರದೇಶದ ರಾಮಜನ್ಮಭೂಮಿ ಅಥವಾ ಬಾಬ್ರಿಮಸೀದಿ; ಪೋಪರ ಭೇಟಿ-ಹಿಂದೂಗಳ ಪ್ರತಿಕ್ರಿಯೆ, ಅಸ್ಸಾಮಿನ ಭಾಷಾ, ತಮಿಳರ ಜಾಫ್ನಾ ಸಮಸ್ಯೆ; ಕರ್ನಾಟಕ- ಮಹಾರಾಷ್ಟ್ರ ಗಡಿವಿವಾದ; ಮೀಸಲಾತಿ ವಿರುದ್ಧ ಎದ್ದಿರುವ ರಾಷ್ಟ್ರ ವ್ಯಾಪೀ ಗದ್ದಲ: ಕಾಶ್ಮೀರದ ರಾಷ್ಟ್ರವಿರೋಧಿ ಕೆಲಸ; ಡಾರ್ಜಿಲಿಂಗ್‌ನ ಘೂರ್ಖ ನಾಡಿನ ಸಮಸ್ಯೆ, ಇತ್ಯಾದಿ ಸ್ವಯಂಕೃತ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ಭಾರತ ಸರ್ವನಾಶದ ದವಡೆಯಲ್ಲಿ ನುಚ್ಚುನೂರಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ: ನಮ್ಮಲ್ಲಿ ನಾವೇ ಬಿತ್ತಿಕೊಂಡಿರುವ ಸ್ವಾರ್ಥ, ಭಯ ಹಾಗೂ ಅಜ್ಞಾನ.

ಅಂದಿನಿಂದ ಇಂದಿನವರೆಗೆ ನಾವು ಒಂದು ಜನಾಂಗದವರು ಎಂಬ ಭಾವನೆಯೆ ನಮ್ಮಲ್ಲಿ ಮೂಡಿಲ್ಲ. ಹಿಂದೂಗಳಾಗಿ, ಮುಸಲ್ಮಾನರಾಗಿ, ಕ್ರಿಶ್ಚಿಯನರಾಗಿ, ಸಿಖ್ಖ್‌ರಾಗಿ, ಜೈನರಾಗಿ ಇತ್ಯಾದಿ ಸಾಲದೆಂಬಂತೆ ತಮಿಳರಾಗಿ, ಮಲೆಯಾಳಿಗಳಾಗಿ, ಕನ್ನಡಿಗರಾಗಿ, ಮರಾಠಿಗಳಾಗಿ, ತೆಲುಗು, ಅಸ್ಸಾಮಿ, ಒರಿಯಾ, ಬಂಗಾಳಿ ಇತ್ಯಾದಿಯಾಗಿ ಉಳಿದು ಯಾರ ಮೈ ಮನದಲ್ಲೂ ನಾನು ಭಾರತೀಯ ಎಂಬ ಅನಿಸಿಕೆ ಕೂಡ ಇಲ್ಲ. ಹೀಗಾಗಿ ಹಿಂದೆ ಪರಕೀಯರ ದಬ್ಬಾಳಿಕೆಗೆ ತುತ್ತಾದ ಭಾರತ ಈಗ ಸ್ವಾಭಿಮಾನಶೂನ್ಯರಾದ ಸ್ವಜನರಿಂದಲೇ ಕೊಲೆ ಸುಲಿಗೆಗೆ, ಅತ್ಯಾಚಾರ ಅನಾಚಾರಗಳಿಗೆ ಈಡಾಗಿದೆ.

ಹಿಂದೂಧರ್ಮ ತನ್ನ ಹೊಟ್ಟೆಯಲ್ಲಿ ಹುದುಗಿಸಿಕೊಂಡಿರುವ ಅನಿಷ್ಟವರ್ಣವ್ಯವಸ್ಥೆ ಭಾರತದ ಇಂದಿನ ಈ ಎಲ್ಲ ಸ್ಥಿತಿಗೆ ಕಾರಣವಾಗಿದೆ. ಚಾತುರ್ವರ್ಣ ವ್ಯವಸ್ಥೆಯಿಂದಾಗಿ ಜ್ಞಾನ ಕೇವಲ ಕೈಹಿಡಿಯ ಸ್ವಾರ್ಥ ಜನರಲ್ಲಿ ಸೀಮಿತಗೊಂಡು ಬಹುಸಂಖ್ಯಾತ ಕ್ರಿಯಾತ್ಮಕ ಕೈಗಳನ್ನು ವಂಚಿಸಲು ಕಾರಣವಾಯಿತು. (ಹೆಚ್ಚಿನ ವಿವರಕ್ಕೆ ಭಗವಾನ್ ಆವರ ಶಂಕಾರಚಾರ್ಯ ಮತ್ತು ಪ್ರತಿಗಾಮಿತನ (೪ ನೆಯ ವಿಸ್ತೃತ ಮುದ್ರಣ) ದಲ್ಲಿ ಹಿಂದೂಧರ್ಮದ ವಿವರಣೆ ನೋಡಿ). ತನ್ನ ಶ್ರಮರಹಿತ ಸ್ವಾರ್ಥಗಳಿಕೆಗಾಗಿ ಕರ್ಮಸಿದ್ಧಾಂತವನ್ನು ಸೃಷ್ಟಿಸಿ ಆ ಸುಳಿಯಲ್ಲಿ ದೇಶವನ್ನು ಸಿಕ್ಕಿಸುವುದಲ್ಲದೆ ತಾನೂ ಸಿಕ್ಕಿಕೊಂಡಿತು. ಮಣ್ಣಿನ ಜನರಲ್ಲಿ ಬೆರೆತು ಬೆಸೆದುಕೊಂಡಿದ್ದ ಹೃದಯದ ವಿಶ್ವವಿಶಾಲತೆಗೆ (ಹೋಗಿ ಹಳ್ಳಿಯವನೊಬ್ಬನ ಹತ್ತಿರ ಮಾತಾಡು. ಅವನ ಒಳ್ಳೆಯತನ, ಚಾತುರ್ಯ, ನಯ ಎಲ್ಲಾ ಕಾಣುತ್ತೆ. ಸಮಾನತೆಯ ಕಲ್ಪನೆ ಅವನಿಗೆ ಹೊಸದಾಗಿ ಬಂದದ್ದೇನಲ್ಲ. ಈ ಕುತಂತ್ರಿಗಳಾದ ಬ್ರಾಹ್ಮಣರು, ಈ ಪುರೋಹಿತ ವರ್ಗ, ತಮ್ಮ ಬಿಳಿಯ ಚರ್ಮದ ಜಂಬದಲ್ಲಿ ದ್ರಾವಿಡರ ಪೂರ್ಣ ತಾತ್ವಿಕ ಕರ್ಮ ಸಿದ್ಧಂತವನ್ನು – ಅಂದರೆ, ಕಾರ್ಯ ಕ್ರಿಯೆಗಳು ಚಲನಶೀಲವಾದವು, ಎಲ್ಲ ನಿರಂತರ ಚಲನೆಯಲ್ಲಿರುತ್ತವೆ ಮತ್ತು ಎಲ್ಲ ಬದಲಾಗುತ್ತವೆ ಎನ್ನುವುದು – ಅಪಾರ್ಥಮಾಡಿ, ಪ್ರಪಂಚದಲ್ಲಿ ಹುಟ್ಟುಮರುಹುಟ್ಟುಗಳು ಹಿಂದಿನ ಜನ್ಮದ ಪಾಪಪುಣ್ಯಗಳಿಂದ ನಿರ್ಣೀತವಾಗುತ್ತವೆ ಎಂದು ಹರಡದೇ ಹೋಗಿದ್ದರೆ, ಭಾರತ ಪ್ರಜಾಪ್ರಭುತ್ವದ ನಡುವಳಿಕೆಗೊಂದು ಉತ್ತಮ ಉದಾಹರಣೆಯಾಗಿರುತ್ತಿತ್ತು.
– ಮುಲ್ಕ್‌ರಾಜ್ ಆನಂದ್, ಅಸ್ಪೃಶ್ಯ ಪುಟ. ೧೮೬, ೧೯೮೦.

ಪುನರ್ಜನ್ಮದ ಕಲ್ಪನೆಯನ್ನ ಹೇಗೆ, ಏಕೆ ಹುಟ್ಟು ಹಾಕಿದರು ಎನ್ನುವ ಹೆಚ್ಚಿನ ವಿವರಕ್ಕೆ ಓದುಗರು ರಾಹುಲ ಸಾಂಕೃತ್ಯಾಯನರ ವೋಲ್ಗಾ-ಗಂಗಾ ಪುಟ, ೧೪೯ (೧೯೮೧)ಅನ್ನು ನೋಡಬಹುದು.)

ಅಜ್ಞಾನ ಕೋಟೆಯಲ್ಲಿ ಕೂಡಿಹಾಕಿ ನಿರ್ವೀರ್ಯರನ್ನಾಗಿಸಿತು. ಇಂದೂ ಕೂಡ ಕರ್ಮಸಿದ್ಧಾಂತ ಭಾರತದ ನಾಡಿಯನ್ನು ಭದ್ರವಾಗಿ ಹಿಡಿದು ಉಸಿರುಗಟ್ಟಿಸುತ್ತಿದೆ: ಚಲನಶೀಲ ಬದುಕನ್ನು ಜಡಗಟ್ಟಿಸಿದೆ. ವಿಕಾಸದ ಸಹಜ ಕ್ರಿಯೆಯನ್ನು ಕತ್ತರಿಸಿ ಸಂಪ್ರದಾಯ ಸಾರ್ವಭೌಮತ್ವ ವಹಿಸುತ್ತಾ ವಿಶ್ವದ ಇತರ ರಾಷ್ಟ್ರಗಳು ದಾಪುಗಾಲು ಹಾಕುತ್ತ ನಡೆದರೆ ಭಾರತ ಕುಗ್ಗಿ ಕುಸಿಯುತ್ತಿದೆ.” (When the whole world particularly the European world,is pursuing astornautics, India is speed in the filth of astrology. Russians and Americans calculate the position of the stars and the planets in order to invent Spaceships or rockets, while Indians do so in order to predict whether the child shall be male or female or whether the marriage should at all come off. – Dr. Rammanohar Lohia, Notes and Comments, Vol I, p.೩೦೪, ೧೯೭೨) ಜ್ಯೋತಿಷಿಗಳ ಕೃತ್ರಿಮದ ಕಪಿಮುಷ್ಟಿಗೆ ಸಿಕ್ಕಿ ಶ್ರಮಜೀವಿಗಳ ಮನಸ್ಸು ಜಡಗಟ್ಟಿ ತುಕ್ಕು ಹಿಡಿದು ಬದುಕು ಭ್ರಮೆಗೆ ಒಳಗಾಗಿದೆ. ಹೀಗಾಗಿ ಮೂಲ ಸಂಸ್ಕೃತಿಯ ಸಾರವನ್ನು ಹೀರಿಕೊಳ್ಳದೆ ಬರಿಯ ನೊರೆಯ ಘೋಷಣೆಗಳಲ್ಲೆ ಉಳಿದು ಬೆದರಿಕೆಗೆ ಬೆನ್ನು ಮಾಡುವ ಪ್ರವೃತ್ತಿ ಬೆಳೆದಿದೆ. ಮಹಾನ್‌ ವ್ಯಕ್ತಿಗಳ ಗ್ರಂಥಗಳನ್ನು ಓದಿ ಅರಗಿಸಿಕೊಳ್ಳಲಾಗಾಗದೆ ಅವರ ಹೆಸರನ್ನಷ್ಟೇ ಕೂಗಿ ಬೊಬ್ಬೆ ಹಾಕುವ ಪ್ರವೃತ್ತಿ ಬೆಳೆಯುತ್ತಿದೆ. ಹೀಗಾಗಿ ವಿವೇಕಾನಂದರ ಬ್ಯಾಡ್ಜ್ ಧರಿಸಿ ಓಡಾಡುವ ಆರ್ ಎಸ್ ಎಸ್ ಇಲ್ಲ ವಿಶ್ವ ಹಿಂದೂ ಪರಿಷತ್ತಿನವನಾಗಲೀ, ಡಾ. ಆಂಬೇಡ್ಕರ್ ಪಟಹಿಡಿದು ಹೊರಡುವ ದಲಿತ ಸಂಘರ್ಪ ಸಮಿತಿಯ ಸದಸ್ಯನಾಗಲೀ, ಜಮಾ-ಅತೆ ಇಸ್ಲಾಂಮಿನ ಸದಸ್ಯನಾಗಲೀ ಯಾರೂ ಅವರುಗಳ ಬಗ್ಗ ಏನೂ ತಿಳಿಯದವರಾಗಿದ್ದು ಸ್ವವಂಚನೆಗೆ ಒಳಗಾಗಿದ್ದಾರೆ. ಹೀಗೆ ಸ್ವವಂಚನೆಗೆ ಒಳಗಾದ ಜನರಲ್ಲಿ ಉಳ್ಳವರು ಹೆಚ್ಚು ಹೆಚ್ಚು ಲಪಟಾಯಿಸುತ್ತಾ ಬಡವರು ಅತಿ ಬಡವರಾಗಿಯೆ ಉಳಿಯುವ ದುರಂತ ಸೃಷ್ಟಿಯಾಗಿದೆ. ಇಂಥ ನಾಡಲ್ಲಿ ಯಾವುದೇ ಮತಧರ್ಮಗಳು ಉಳ್ಳವರ ಶೋಕಿಗೆ ಇಂಬುಗೊಟ್ಟು ಬಡವರಿಗೆ ಭಯದ-ಆಚರಣೆಯಾಗಿ ಉಳಿದು ಶೋಪಣೆಗೆ ಒತ್ತು ಕೊಟ್ಟು ಒಂದು ರೋಗಿಷ್ಟ ಸಮಾಜದ ಎಲ್ಲಾ ಸ್ವರೂಪಗಳನ್ನು ಪಡೆದುಕೊಳ್ಳುತ್ತದೆ. ಭ್ರಷ್ಟಾಚಾರ ವಂಚನೆಗಳು ಮೈಗೂಡಿ ಪುಷ್ಟಿಗೊಂಡಂತೆ ತಿಮ್ಮಪ್ಪನ ಹುಂಡಿ ದಂಡಿಯಾಗಿ ಬೆಳೆಯುತ್ತದೆ; ಮನೆ ಮಾಡಿಕೊಂಡಿರುವ ಮೌಢ್ಯದಿಂದಾಗಿ ಧರ್ಮಸ್ಥಳದ ಅಣ್ಣಪ್ಪನ ಆರ್ಭಟ ಹೆಚ್ಚಾಗಿ ಮಂಜುನಾಥ, ತಿಮ್ಮಪ್ಪರಿಗೆ ಮಂಡೆಗಳು ದುಂಡಗಾಗುತ್ತವೆ. ಅಂಥ ನಾಡಲ್ಲಿ ಲಂಚ ದಕ್ಷಿಣೆಯ ಸ್ವರೂಪ ಪಡೆದುಕೊಂಡು, ಶೋಷಣೆ ದೈವ ವರವಾಗಿ ಉಳಿದು ಹಾದರ ಆದರಕ್ಕೆ ಪಾತ್ರವಾಗುತ್ತದೆ. ಯಾವ ಶ್ರಮವೂ ಇಲ್ಲದೆ ತನ್ನಡೆಗೆ ಹರಿದು ಬರುವ ದಕ್ಷಿಣೆ, ಲಂಚಗಳಿಗಾಗಿ ಸಮರ್ಪಿಸಿಕೊಂಡ ದುರ್ಬಲ ಮನಸ್ಸುಗಳು ಮೇಲ್ವರ್ಗದ ಹೆಮ್ಮೆಯಲ್ಲಿ ಹಾಗೂ ಅಧಿಕಾರದ ಅಮಲಿನಲ್ಲಿ ಉಳಿದು ಕೆಳವರ್ಗದ ಅಜ್ಞಾನವನ್ನು ಬಂಡವಾಳವಾಗಿಸಿಕೊಂಡು ಮೆರೆಯುತ್ತವೆ. ಆದಕಾರಣ ಪುರೋಹಿತರ, ಜ್ಯೋತಿಷಿಗಳ ಸಂಬಂಧವನ್ನು ಪೂರ್ಣವಾಗಿ ತೊಡೆದುಹಾಕಿ ಜ್ಞಾನವಂತರಾಗುವುದರ ಮೂಲಕ ಅಧಿಕಾರದ ಮೇಲು ಕೀಳಿನ ಅಮಲನ್ನು ಇಳಿಸಬೇಕು. (ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರ ಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧಗಳನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲಾ ನೆಚ್ಚುವುದು ದೌರ್ಬಲ್ಯದ ಚಿಹ್ನೆ… ಒಬ್ಬ ಹಣಕ್ಕಾಗಿ ಮತ್ತೊಬ್ಬನನ್ನು ಮೋಸ ಮಾಡಿದರೆ ಅವನನ್ನು ಮೋಸಗಾರ ಎನ್ನುವಿರಿ. ಇತರರನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಪಾಪಿಗಳು ಎಂದು ಮೋಸಗೊಳಿಸುವವರು ಎಂತಹ ಪಾಪಿಗಳು? – ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ಸಂಪುಟ ೪, ಪುಟ ೨೯೭-೩೦೧. ನೀವು ಮತ್ತೊಬ್ಬನಿಗೆ ಕೊಟ್ಟ ಪ್ರತಿಯೊಂದು ದುರ್ಬಲ ಆಲೊಂಚನೆಗೂ ಬಡ್ಡಿ ಸಹಿತ ಅನುಭವಿಸಬೇಕಾಗಿದೆ. -ಸ್ವಾಮಿ ವಿ. ಕೃ. ಶ್ರೇಣಿ , ೮-೨೪೪.)

ಜನಾಂಗವಾಗಿ ಬೆಸೆದುಕೊಂಡು ಒಂದಾಗಿ ಅದರ ಸಾರವನ್ನು ಹೀರಲಾಗದ ದುರ್ಬಲ ಮನಸ್ಸಿನ- ಮೇಲ್ವರ್ಗ ಎಂಬ ಬರಿಯ ಹೆಮ್ಮೆಯವರ ಬೋಧನೆಯಿಂದ ದುರ್ಬಲ ವ್ಯಕ್ತಿಗಳು ರೂಪುಗೊಳ್ಳುತ್ತಾರೆ. ಅವರು ಹೆಚ್ಚಿದಂತೆ ದುರ್ಬಲತೆ ಸಾರ್ವತ್ರಿಕ ಗುಣವಾಗುತ್ತದೆ. ದುರ್ಬಲತೆಯನ್ನು ತನ್ನ ಸಾರ್ವತ್ರಿಕೆ ಗುಣವಾಗಿಸಿಕೊಂಡ ಭಾರತ ಯಾವ ಸಾಹಸ ಯಾತ್ರೆಯನ್ನು ಕೈಗೊಂಡಿಲ್ಲ. ಕೈಗೊಂಡಿಡ್ಡರೆ ಆಸ್ಟ್ರೇಲಿಯಾ ಅನ್ಯರ ಪಾಲಾಗುತ್ತಿರಲಿಲ್ಲ; ಪಾಕಿಸ್ಥಾನ, ಬಾಂಗ್ಲಾಗಳು ಮುಸ್ಲಿಮ ರಾಷ್ಟ್ರಗಳಾಗಲು ಸಾಧ್ಯವಾಗುತ್ತಿರಲಿಲ್ಲ. ಇಂದಿಗೂ ಸಮುದ್ರವನ್ನೊಳಗೊಂಡ ಒಂದು ಸಾಹಸ ಚಲನಚಿತ್ರವನ್ನು ತೆಗೆಯಲು ಸಾಧ್ಯವಾಗಿಲ್ಲ ಎಂದರೆ ನಾಚಿಕೆಗೇಡಿನ ವಿಷಯ. ಇಂಥ ದುರ್ಬಲತೆ ಉಲ್ಬಣಗೊಂಡಾಗ ದೇಶ, ಸಮಾಜಕ್ಕಿಂತ ವೈಯಕ್ತಿಕ ಸ್ವಾರ್ಥ ಪ್ರಧಾನವಾಗಿ ತನ್ನತನವನ್ನು ಕಳೆದುಕೊಂಡು ಪರಕೀಯವಾಗುತ್ತದೆ. ಪರಕೀಯ ಮನಸ್ಸು, ಹೃದಯಗಳು ಎಂದೆಂದಿಗೂ ಸ್ವತಂತ್ರವಾಗಿ ವರ್ತಿಸಲು ಸಾಧ್ಯವಾಗದೆ ಗುಲಾಮ ಪ್ರವೃತ್ತಿಯಲ್ಲೆ ಉಳಿದುಬಿಡುತ್ತವೆ. ಹೀಗಾಗಿ ದುರ್ಬಲತೆಯೆ ನಿಜವಾದ ಬಲ ಎನ್ನುವ ಭ್ರಮೆಗೆ ಸಿಲುಕಿ ಆತ್ಯಂತ ಕ್ರೂರ ಕೆಲಸಗಳಿಗೆ ತೊಡಗಿಸಿಕೊಂಡು ಅಭಿಮಾನಶೂನ್ಯರಾದವರಿಗೆ ಹುಟ್ಟಿಸಿದ ಮಕ್ಕಳಿಗೆ ಶಾಲೆ ಕಟ್ಟಿಸಲು ಇರದ ಶಕ್ತಿ ಬೆಟ್ಟ ಕಡಿದು ಪರದೇಶಗಳಿಗೆ ಕಲ್ಲಿನ ಗುಡ್ಡೆಗಳನ್ನೆ ಸಾಗಿಸುವ ಸಾಹಸ ಶಕ್ತಿ ಬರುತ್ತದೆ; ನಮ್ಮ ಪುರಾತನ ಶಿಲ್ಪಸೌಂದರ್ಯವನ್ನು ಸವಿಯುವ ಶಕ್ತಿಗೆ ಬದಲು ಕದ್ದು ಮಾರುವ ಇಲ್ಲ ಪಾರ್ಥೇನಿಯಂ ತಾಣವಾಗಿಸುವ ತನ ಮೈಗೂಡುತ್ತದೆ, ಕುದುರೆಮುಖದ ಕಬ್ಬಣದ ಆದಿರನ್ನು (ತನ್ನ ಶ್ರೇಷ್ಠತಮ ನಿಧಿಗಳನ್ನು ರಫ್ತುಮಾಡಿಬಿಟ್ಟು ಭಾರತ ತನ್ನನ್ನೇ ಬಡವಾಗಿಸಿಕೊಂಡಿದೆ -ಲೂಯಿ ಫಿಷರ್, ಮಹಾತ್ಮ ಗಾಂಧಿ ೧೦೦ ವರ್ಷಗಳು, ಪು ೬೮) ಕರಗಿಸಲಾರದೆ ಹರಾಜುಹಾಕಿ ಕುದುರೆಮೂತಿಯ ಮಂಗಗಳಾಗಿ ಹಾದಿ ಹಾದಿಯಲ್ಲಿ ಹಾದರಕ್ಕೆ ತೊಡಗುವ ದಾರುಣಸ್ಥಿತಿಗೆ ಒಳಗಾಗಿದ್ದೇವೆ. ಹೀಗೆ ನಮ್ಮಲ್ಲೇ ನಮ್ಮನ್ನು ಇಲ್ಲವಾಗಿಸಿಕೊಂಡ ನಮಗೆ ಮಡಿ, ಮುಟ್ಟಬೇಡಿ, ಮುಟ್ಟಬೇಡಿ ಎನ್ನುತ್ತಲೇ ಆತ್ಮವತ್ ಸರ್ವಭೂತೇಷು ಎನ್ನುವ ಒಣ ವೇದಾಂತದ ಬೊಗಳೆ ಬಿಡುವುದು ಅನಿವಾರ್ಯವಾಗುತ್ತದೆ. ಇಂಥ ಅನಿವಾರ್ಯತೆಯಿಂದ ಮೈಮನಗಳಲ್ಲಿ ತುಂಬಿಕೊಂಡ ಸ್ವಾರ್ಥ ತನ್ನ ನಾಲಗೆಯನ್ನು ಚಾಚಿಕೊಂಡು ಸಿಕ್ಕಲ್ಲಿ ನೆಕ್ಕಲು ಸದಾ ಸಿದ್ದವಾಗುತ್ತದೆ. (Off guard, I have heard people talk of nothing but salaries and incomes and promotions and cuts and profits, everything selfish and nothing national. Who is responsible? There is no doubt that certain inherent features of the Hindu faith like caste and premature universalism are ultimatly responsible. – Dr. Rammanohar Lohia, notes and comments, Vol 1, p. 304 ) ಕಡೆಗೆ ಪ್ರಧಾನಿಯ ಆಪ್ತಕಾರ್ಯಾಲಯದಲ್ಲಿ ಬೀಡುಬಿಟ್ಟು ಆನ್ಯರಾಷ್ಟ್ರಗಳಿಗೆ ದೇಶವನ್ನು ಮಾರಾಟಮಾಡುವ ನೀಚ ಮಟ್ಟಕ್ಕೆ ಇಳಿಯುತ್ತದೆ. ಪ್ರಧಾನಿಯ ಆಪ್ತ ಕಾರ್ಯಾಲಯದ ಗೂಢಾಚಾರರು ಕೈಗೊಂಡ ರಾಷ್ಟ್ರವಿರೋಧಿ ಕೆಲಸ ಕೂಡ ಇತಿಹಾಸದ ಪುನರಾವರ್ತನೆ ಅಷ್ಟೆ.(1 The north-western region of India was the gate way of all invaders and here it was that the Brahamans had one of their most important strong-holds for many centuries, holding constant communication with foreigners such as the Greeks, the Turks, the Scythisns, the Chinese and the Huns. Whenever the Brahmans wanted the help of foreigners to bring about the downfall of a king or a dynasty which they disliked, their position of vantage in north western India afforded facilities as well as a strong temptation to invite or encourage the invasion of foreigners…. History of Hindu Imperialism by Swami Dharma Theerthaji Maharaj, p.96 Delhi 1946) ಇಂಥ ನೀಚರ ಬಗ್ಗೆ ನಾಡಿನ ಜನ ಜಾಗೃತರಾಗಬೇಕು. ಆಪ್ತ ಕಾರ್ಯಾಲಯದಲ್ಲಿ ಬ್ರಾಹ್ಮಣರೆ ಹೆಚ್ಚಾಗಿರುವುದು ಅದರ ಮತ್ತೊಂದು ವಿಶೇಷ.

ಜನವರಿ ೧೯೮೫ರಲ್ಲಿ ಬೆಳಕಿಗೆ ಬಂದ ಗೂಢಚಾರ ಮೊಕದ್ದಮೆಯಲ್ಲಿ ಸೇರಿರುವ ಟಿ. ಎನ್. ಖೆರ್, ಪಿ. ಗೋಪಾಲನ್, ಕೆ. ಮಲ್ಹೋತ್ರ ಮೂವರು ಪ್ರಧಾನದುಂತ್ರಿಯವರ ಕಛೇರಿಯಲ್ಲಿದ್ದ ಗೂಢಚಾರರು; ಶಂಕರನ್, ರಾಷ್ಟ್ರಪತಿಯವರ ಪತ್ರಿಕಾ ಕಾರ್ಯದರ್ಶಿ ಕಛೇರಿಗೆ ಸೇರಿದವರು; ಜಗದೀತ್ ಚಂದರ್- ರಕ್ಷಣಾ ಉತ್ಪಾದನಾ ಇಲಾಖೆಯವರು; ಸಿ. ಎಲ್. ಚಂದ್ರನ್, ಜಗದೀಶ್ ತಿವಾರಿ ಈ ಇಬ್ಬರೂ ವಾಣಿಜ್ಯ ಖಾತೆಯ ಆರ್ಥಿಕ ವಿಚಾರಗಳ ಇಲಾಖೆಗೆ ಸೇರಿದವರು; ಜೆ. ಸಿ. ಅರೋರ – ರಕ್ಷಣಾ ಖಾತೆಯವರು; ಕುಮಾರ್ ನಾರಾಯಣ್ (ಸಿ.ಕೆ.ವಿ. ಅಯ್ಯರ್ ಪುತ್ರ) ಖಾಸಗಿ ವ್ಯಾಪಾರೋದ್ಯಮಿ; – ಇವರೆಲ್ಲ ಬ್ರಾಹ್ಮಣ ಜಾತಿಗೆ ಸೇರಿದವರು. ಭಾರತ ಸರ್ಕಾರದ ಸಚಿವ ಸಂಪುಟದ ಮತ್ತು ರಕ್ಷಣಾ ಇಲಖೆಯ ರಹಸ್ಯ ಪತ್ರಗಳನ್ನು ಫ್ರಾನ್ಸ್‌ಗೆ ತನ್ಮೂಲಕ ಅಮೆರಿಕೆಯ ಸಿ. ಐ. ಎ. ಗೆ ಮಾರಾಟಮಾಡುವಾಗ ದಸ್ತಗಿರಿಯಾದರೆಂಬ ಆರೋಪ ದಾಖಲಾಗಿದೆ – ನೋಡಿ Dalit Voice, Feb. 1-15, 1985, Bangalore

ಅನೇಕ ಜೀವಿಗಳು ಬಹು ದಿನಗಳು ಅನವರತ ಶ್ರಮದಿಂದ ಸೃಜಿಸಿದ ಹುತ್ತಕ್ಕೆ ಬಂದು ಸೇರುವ ಹಾವಿನಂತೆ ಭವ್ಯವಾದ ವೇದಾಂತ ಧರ್ಮಕ್ಕೆ ವಿಷವನ್ನು ತುಂಬಿಕೊಂಡ ಪುರೋಹಿತವರ್ಗ ಹಾವಿನೋಪಾದಿಯಲ್ಲಿ ಬಂದು ಬೀಡು ಬಿಟ್ಟಿದೆ. ಭೂಮಿಯಲ್ಲಿ ಆಳವಾಗಿ ಬೇರುಬಿಟ್ಟು ತನ್ನ ಶ್ರಮದಿಂದ ಭೂಮಿಯ ಸಾರಹೀರಿ ಬೆಳೆವ ಮರಕ್ಕೆ ಹತ್ತಿದ ಬಂದಳಿಕೆಯಂತೆ ಈ ದೇಶದ ಮಣ್ಣಿನ ಜನರ ಶ್ರಮದ ಮೇಲೆ ಪುರೋಹಿತಶಾಹಿ ಬಂದು ಅಮರಿಕೊಂಡಿದೆ. ಮರಮರೆಯಾಗಿ ಬಂದಳಿಕೆಯದೇ ಮೆರವಣಿಗೆ. ಬಂದಳಿಕೆಯನ್ನು ಸವರಿ ಸರಿಪಡಿಸದಿದ್ದರೆ ಮೂಲಮರವೆ ಕಳೆದುಕೊಂಡು ಸರ್ವನಾಶವಾಗುವ ಅಪಾಯವನ್ನು ಆದಷ್ಣು ಬೇಗ ಅರಿತುಕೊಳ್ಳಬೇಕಾಗಿದೆ. ಬಡಾಯಿ ಎಂದೂ ಬಂಡವಾಳವಾಗುವುದಿಲ್ಲ. ಟೊಳ್ಳಾಗಿರುವ ಮರ ತನ್ನ ಗಾತ್ರದ ಘೋಷಣೆಯನ್ನು ಎಷ್ಟೇ ರಂಜನೀಯವಾಗಿ ಮಾಡಿಕೊಂಡರೂ ಟೊಳ್ಳು ಟೊಳ್ಳೆ. ಕಳೆದುಕೊಂಡ ಟೊಳ್ಳುಹೃದಯದ ವ್ಯಕ್ತಿಗಳು ಸಮಾಜಕ್ಕೆ ಸಹಕಾರಿಯಾಗುವ ಬದಲು ಅತ್ಯಂತ ಆಪಾಯಕಾರಿಗಳಾಗುತ್ತಾರೆ. (A premature universalist or a cosmopolite is one who is continually talking and thinking of a world of man’s brotherhood or humanity in a situation where there is a gross inequality within and among people, the result is a total decay of conscience. The caste system further reinforces this situation with the result that Indians are willing to cut each others throat. -Dr. Lohia, Notes and Comments, Vol 1, p.305) ಅವರ ಪುಷ್ಟಿಗೊಳ್ಳದ ಹುಸಿ ಹೃದಯಗಳಿಂದ ಆಕರ್ಷಣೀಯವಾದ ಅಮರವಾಣಿಗಳು ಅಂಬರ ತುಂಬುವಷ್ಟು ಪುಂಖಾನುಪುಂಖವಾಗಿ ಬಂದರೂ ಅವು ಅತ್ತಿಹಣ್ಣಿನಂತೆ: ನೋಡಲಷ್ಟೆ, ಬಿಚ್ಚಿದರೆ ಬಣ್ಣಗೇಡು. ಇವರು ತಮ್ಮ ಅಂತಃಸಾಕ್ಷಿಯನ್ನು ಕೊಂದು ಸುಂದರ ಪದಗಳ ಆಕರ್ಷಣೀಯ ಮಾತುಗಳ ರಾಕ್ಷಸರಾಗುತ್ತಾರೆ. ಬಾಹ್ಯದ ಎಲ್ಲ ಆಕರ್ಷಣೆಯ ಒಳಗೆ ಅಡಗಿ ಕುಳಿತ ಈ ನೀಚ ಹೃದಯಗಳು ಪರಸ್ಪರ ವಂಚಿಸುತ್ತಾ ವಂಚನೆಗೂ ಒಳಗಾಗುತ್ತವೆ.

ಜಾತಿ ಮತ್ತು ವರ್ಗ ದೇಶದ ಅವನತಿಯ ಎರಡು ನೇಣುಗಂಬಗಳು. ಇವು ತಮ್ಮ ಒಳದಾಹವನ್ನು ನಿರ್ಲಜ್ಜೆಯಿಂದ ಎಂಥ ಸಂದರ್ಭದಲ್ಲೂ ಅತ್ಯಂತ ಸೂಕ್ಷ್ಮವಾಗಿ ಆಗುಮಾಡಿಕೊಳ್ಳುತ್ತವೆ. ದೇಶ ದಿವಾಳಿಯಾದರೂ ಅದು ತನ್ನ ತಾಯಿಗ್ಗಂಡತನವನ್ನು ಮುಚ್ಚುಮರೆಯಿಲ್ಲದೆ ಪ್ರದರ್ಶಿಸುತ್ತಿದೆ. ಈ ದೇಶದ ನರನಾಡಿಗಳಲ್ಲಿ ಹರಿಯುತ್ತಿರುವ ರಕ್ತದ ಕಣಕಣಕ್ಕೆ ಜಾತಿ ಮತ್ತು ವರ್ಗ ಪ್ರಜ್ಞೆ ಇಳಿದಿರುವಷ್ಟು ಆಳಕ್ಕೆ ನಿಜವಾದ ಸಂಸ್ಕೃತಿಯ ಸಾರ ಹರಿದು ಹರಡಿಕೊಂಡಿಲ್ಲ. ಸಂಸ್ಕೃತಿಶೂನ್ಯವಾದ ಮನಸ್ಸುಗಳು ಫಲ ಕೊಡದ ಮರದಂತೆ, ದೇಶದ ಸಾರವನ್ನೆಲ್ಲಾ ಹೀರಿ ಬಂಜರುಗೈದುಬಿಡುತ್ತದೆ. ಪರಾರ್ಥವನ್ನು ತೊರೆದು ಸ್ವಾರ್ಥಕ್ಕಾಗಿ ಸಾರ ಹೀರುವುದು ಅಂತರಂಗದ ಉಸಿರಾದಾಗ ಅಡಿಗಡಿಗೆ, ನುಡಿನುಡಿಗೆ ಸುಳ್ಳಿನ ಸರಮಾಲೆಯನ್ನು ಹೆಣೆಯುತ್ತಾ ಸಾಗುವ ಅನಿವಾರ್ಯತೆಗೆ ಸಿಕ್ಕಿ ಅದರಿಂದುದ್ಭವವಾಗುವ ಅನಿಷ್ಟ ಪರಂಪರೆಗೆ ಇಡೀ ಸಮಾಜವನ್ನು ದೂಡಿ ಭಸ್ಮಾಸುರನಂತೆ ತಾನೂ ಬಲಿಯಾಗುತ್ತದೆ. (ಬ್ರಾಹ್ಮಣರು ತೀವ್ರ ದುರ್ಮಾರ್ಗವರ್ತಿಗಳಾದರು. ಸ್ವಾರ್ಥ ದೃಷ್ಟಿಯಿಂದ ಅನೇಕ ವಿಚಿತ್ರವಾದ ವೇದಗಳಲ್ಲಿಲ್ಲದ ದುರಾಚಾರ, ಅಧರ್ಮ ಮತ್ತು ಕುಯುಕ್ತಿಗಳನ್ನು ತಮ್ಮ ಪ್ರತಿಷ್ಠೆ ಕಾಪಾಡಿಕೊಳ್ಳುವುದಕ್ಕಾಗಿ ಪ್ರಚಾರಕ್ಕೆ ತಂದರು. ಈಗ ಅದರ ಫಲವನ್ನುಣ್ಣುತ್ತಿದ್ದಾರೆ.
-ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ಸಂಪುಟ ೧೦, ಪುಟ ೨೪೨)

ಸಂಸ್ಕೃತಿಕಶೂನ್ಯವಾದ ಹೃದಯಗಳಿಗೆ, ಜನಾಂಗದ ಬೆನ್ನೆಲುಬಿಲ್ಲದೆ ಬೆಳೆದ ತೊಗಲು ಗೊಂಬೆಗಳಿಗೆ ಸತ್ವವನ್ನು ಸ್ವೀಕರಿಸುವ ಶಕ್ತಿ ಇಲ್ಲದೆ ಬುದ್ಧಿವಂತಿಕೆಯಿಂದ ಹೊರನೂಕುವ, ಇಲ್ಲಗೈಯುವ ನೀಚತನ ಮೈಮನಗಳನ್ನು ತುಂಬಿಕೊಂಡಿರುತ್ತದೆ. ಹೀಗಾಗಿ ಅನುಕಂಪ ಹೃದಯವನ್ನು ಹೊತ್ತು ಬಂದ ಬುದ್ಧನನ್ನು ಭಾರತದಿಂದ ಪರದೇಶಕ್ಕೆ ಪಲಾಯನ ಮಾಡಿಸುತ್ತಾರೆ; ಗಾಂಧಿಯನ್ನು ಕೊಂದು ಶಾಂತಿ ಸನ್ನಾಹದ ನಾಟಕ ಹೂಡುತ್ತಾರೆ; ಏಕಲವ್ಯನಿಗೆ ವಿದ್ಯೆ ಕೊಡಲು ನಿರಾಕರಿಸಿ ಸ್ವಂತಿಕೆಯಿಂದ ಪುಷ್ಟಿಗೊಂಡ ಅವನ ಬೆರಳನ್ನು ಬಲಿಗೊಂಡು ತಬ್ಬಲಿಯಾಗಿಸುತ್ತಾರೆ. ಅಂತರಂಗದ ಅರಿವಿನ ಕಣ್ಣೆವೆ ತೆರೆಸಿದ ಕನಕದಾಸನನ್ನು ಅಂಗಳದಿಂದ ಹೊರಗಿಟ್ಟು ಅನಾಥನನ್ನಾಗಿಸುತ್ತಾರೆ; ಘಜನಿ ಮಹಮ್ಮದನನ್ನು ಮಂತ್ರದಿಂದಲೆ ಕೊಲ್ಲುವ ಹುಸಿ ಭ್ರಮೆಗೆ ಒಳಗಾಗಿ ದಿವಾಳಿಯಾಗುತ್ತಾರೆ!
(ಕುವೆಂಪು ಅವರ ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ ಸಂಕಲನದ ಧ್ರಾಂ ಧ್ರೀಂ
ಧ್ರೂಂ ಕವನ ನೋಡಿ.) ಮಾನವೀಯ ಹೃದಯದಿಂದ ತುಡಿದ ವಿವೇಕಾನಂದರನ್ನು ಬಾಚಿ ತಬ್ಬಿ ಅವರ ವಿಚಾರ ಪ್ರಚಾರ ಆಗದಂತೆ ತಡೆದು ತಮ್ಮ ಸ್ವಾರ್ಥದ ಗಳಿಕೆಗಾಗಿ ಮುಸ್ಲಿಮರ ವಿರುದ್ಧ ಆಟಂ ಆಗಿಸಿಕೊಳ್ಳುತ್ತಾರೆ; ಪ್ರಾಮಾಣಿಕ ಹೃದಯದ ಡಾ.ಲೋಹಿಯಾ, ಲಾಲ್‌ಬಹದ್ದೂರ್ ಶಾಸ್ತ್ರಿ ಅಂತಹವರನ್ನು ಚಿಕಿತ್ಸೆಯ ಮೊಗವಾಡದೊಳಗೆ ಕೊಲೆಗೆ ಈಡುಮಾಡುತ್ತಾರೆ; ಡಾ. ಅಂಬೇಡ್ಕರ್ ಅಂತಹವರನ್ನು ಪರಧರ್ಮ ಅಪ್ಪಿಕೊಳ್ಳುವಂತೆ ಮಾಡಲು ಸಾಂಬ್ರಾಣಿಯ ಮಾತಿನಲ್ಲಿ ಒಳಗೊಳಗೆ ಮೆಣಸಿನ ಹೊಗೆ ಹಾಕುತ್ತಾರೆ; ದೇಶಬಿಟ್ಟು ತೊಲಗಬೇಕಾದವರೆ (`I would ask every one of you, what do you know about this Varnashrama? Where are the four castes today in this country? Answer me; I do not see the four castes…… there are not four castes here. I see only the Kshatriya do not exist, but only the Brahmin and the Shudras, the shastras say that the Brahmin must not live in a country where there are only Shudras; so depart bag and baggage!‘- The Complete Works of Vivekananda, Vol 3, p. 339-40) ವಿಶ್ವಮಾನವರಾದ ರಾಷ್ಟ್ರಕವಿ ಕುವೆಂಪು ಅವರನ್ನು ಸಹ ದೇಶಬಿಟ್ಟು ತೊಲಗಿ ಎಂದು ಕೀರಲು ಸ್ವರದಲ್ಲಿ ಕಿರುಚಿಕೊಳ್ಳುತ್ತಾರೆ. ಹೀಗೆ ತಮ್ಮೊಳಗೆ ತಾವು ಇಲ್ಲವಾಗಿ ಸರ್ವನಾಶವಾಗುವುದಲ್ಲದೆ ಇತರರಿಗೂ ಮರಣಪ್ರಾಯರಾಗುತ್ತಾರೆ.

ಸಾಂಸ್ಕೃತಿಕವಾಗಿ ಬೆಸೆದುಕೊಂಡು ಬೆಳೆಯದ ಆತ್ಮವತ್ ಸರ್ವಭೂತೇಷು ಎನ್ನುವುದನ್ನು ಅರಗಿಸಿಕೊಂಡು ಆಚರಣೆಗೆ ತರದೆ, ಬರಿಯ ಬೊಗಳೆ ಬಿಡುವ ಭ್ರಮಾತ್ಮಕ ಬುದ್ಧಿಗಳಿಂದ ಯಾವ ಪರಿಹಾರ ಸಿಗದೆ ಬದಲಿಗೆ ಪರಿಪರಿಯ ಸಂಕಷ್ಟಗಳ ಪರಂಪರೆಯ ಸೃಷ್ಟಿಗೆ ಕಾರಣವಾಗುವುದನ್ನು ಕಾಣುತ್ತೇವೆ. ಪಂಜಾಬಿನ ಸಮಸ್ಯೆಯನ್ನು ೧೯೬೬ ರಿಂದ ಪರಿಹಾರ ಸೂಚಿಸದೆ ಉಳಿಸಿಕೊಂಡು ಬಂದದ್ದು ; ಬೆಳಗಾಂ ಸಮಸ್ಯೆಗೆ ೧೯೬೭ ರಲ್ಲಿ ಮಹಾಜನ್ ವರದಿಯನ್ನು ಅಂತಿಮ ತೀರ್ಪನ್ನಾಗಿಸದೆ ಉಳಿಸಿಕೊಂಡು ಬಂದದ್ದು; (The tragedy around linguistic provinces is the tragedy of small minds trying to play with big things with cleverness, diplomacy and deceit. -Dr.Lohia, Notes and Comments, vol I, p. 306)ಸ್ವಾರ್ಥದ ರಾಜಕಾರಣದಿಂದಲೇ. ಹಾಗೆ ಅಸ್ಸಾಮಿನ ಸಮಸ್ಯೆಯನ್ನು ಕೂಡ. ಶಬಾನೋ ಬೇಗಂ ಕೇಸಿನಲ್ಲಿ ಸರ್ವೊಚ್ಛ ನ್ಯಾಯಾಲಯ ನೀಡಿದ ತೀರ್ಪಿಗೆ ಪ್ರತಿಯಾಗಿ ಲೋಕಸಭೆಯಲ್ಲಿ ಮಂಡಿಸಿದ ವಿವಾಹ ವಿಚ್ಛೇದನ ರಕ್ಷಣೆಯ ಹಕ್ಕಿನ ಕಾಯ್ದೆಯೂ ಸಹ; ಕಾಮನ್ ಸಿವಿಲ್ ಕೋಡ್‌ನ್ನು ಆಚರಣೆಗೆ ತರದೆ ಬರಿಯ ಸಂವಿಧಾನದಲ್ಲೆ ನಿದ್ರಿಸಲು ಹಾಸಿಗೆ ಹಾಸಿರುವುದು ಕೂಡ; ಈ ಅಪಕ್ವ ಮನಸ್ಸಿನ ಸ್ವಾರ್ಥದ ಹುಳುಗಳಿಂದಾಗಿ ದೇಶದಲ್ಲೆಲ್ಲಾ ಸ್ವಾಭಿಮಾನಶೂನ್ಯ ಶಕ್ತಿಗಳು ತಲೆ ಎತ್ತಿ ಛಿದ್ರ ಛಿದ್ರವಾಗಿ ಕೊಲೆ ಸುಲಿಗೆಗೆ ಕಾರಣವಾಗಿ ಭಾರತ ವಿಶ್ವಧರ್ಮದ ಹೆಸರಿನಲ್ಲಿ ಒಂದು ಅತ್ಯಂತ ನೀಚ ರಾಕ್ಷಸ ರಾಜ್ಯಕ್ಕೆ ಉದಾಹರಣೆಯಾಗುತ್ತಿದೆ. (Indians are either Assamie or Tamil or Bihari on one hand or world citizens on the Other and they are not Indians at all. The spirit of division has seized the people of this country -Dr.Lohia, Notes and Comments, Vol.1, p.೩೦೬.) ಹೀಗೆ ಛಿದ್ರಛಿದ್ರವಾದ ಭಾರತೀಯ ಮನಸ್ಸುಗಳಿಂದ ಆಡಳಿತ ಹದಗೆಟ್ಟು ಪ್ರಗತಿಗೆ ಬದಲು ಅಪಗತಿ; ಏಳ್ಗೆಗೆ ಬದಲು ಸರ್ವನಾಶ, (The farthest we emerge out of our self-centredness is to display the narrowest linguistic and regional fanaticism. Inter-state animosity is growing. A nation which is constitutionally united and politically dis-integrated may explode nuclear devices but will never have the inner strength which is so necessary to sustain it in adversity or progress towards prosperity. -N.A,Palkhivala, We the people, p.5) ಸಾರ್ವಜನಿಕ ಇಲಾಖೆಗಳಲ್ಲಿ ಸಾರ್ವಜನಿಕ ಕೆಲಸಗಳಿಗಿಂತ ಸ್ವಾರ್ಥದ ಸೇವೆ ಸಾಂಗವಾಗಿ ಸಾಗುತ್ತಿದೆ. ಒಬ್ಬೊಬ್ಬ ವ್ಯಕ್ತಿಯೂ ಕಟ್ಟಿಸುವ ಕಟ್ಟಡಗಳು ಗಗನಚುಂಬಿಯಾಗಿ ಅದರ ಮುಂದಿರುವ ಸಾರ್ವಜನಿಕ ರಸ್ತೆ ಹಳ್ಳಕೊಳ್ಳಗಳಿಂದ ಮೈತುಂಬಿ ಅನಾಥವಾಗಿರುತ್ತದೆ; ಅಧಿಕಾರಶಾಹಿಯ ಮೋಜಿಗೆ ಅಮೃತಶಿಲೆಯ ಮಹಲುಗಳು ಮುಗಿಲು ಮುಟ್ಟುತ್ತಿದ್ದರೆ ತೆರಿಗೆ ತೆರುವ ಪ್ರಜೆಯ ಗುಡಿಸಲು ಮಳೆಬಂದರೆ ನೆಲ ಚುಂಬಿಸುತ್ತದೆ. (The four costly failures of the government and the people, which are the direct causes of the present sorry spectacle are:

1) Failure to maintain law and order. We have too much government and too little administration; too many public servants and too little public service; too many controls and too little welfare; too many laws and too little justice.

2) Failure to bring the unbounded economic potential of the country to fruition.

3) Failure to make human investment-investment in education, family planning, nutrition and public health……

4) Failure to provide moral leadership. We do not live by bread alone, and we are greater that we know.
-N.A.Palkhivala,We the people p೫)

ಈ ಎಲ್ಲಕ್ಕೂ ಮೂಲ ಕಾರಣ ಜನ ಇನ್ನೂ ಅಜ್ಞಾನದಲ್ಲೇ ಕೊಳೆಯ ಹಾಕುತ್ತಿರುವುದು.

ನಮ್ಮ ಈ ಎಲ್ಲ ಅನಿಷ್ಟಗಳಿಗೆ, ಇಂದಿಗೂ ನಾವು ನಮ್ಮೊಳಗೇ ಅನಾಥರಾಗುತ್ತಿರುವುದಕ್ಕೆ ಕಾರಣ ನಾವು ನಮ್ಮನ್ನೇ ನಂಬದೆ (ಜನ ತಮ್ಮನ್ನು ತಾವು ನಂಬದೆಯೆ, ಪರರನ್ನು ನಂಬುವುದರಿಂದ ಆನೇಕ ಮತಗಳು ಹುಟ್ಟಿಕೊಳ್ಳುತ್ತವೆ. ನಾನೂ ಪರರನ್ನು ನಂಬಿ ಅರಲಿನಲ್ಲಿ ಮುಳುಗಿ ಹೋದೆ. ಅದರಿಂದ ಪಾರಾಗುತ್ತೇನೆಂಬ ನಂಬಿಕೆಯೆ ನನಗಿರಲಿಲ್ಲ. ಪುರಾತನರು, ನೂತನರು, ಜೂಡರು ಖ್ಲಿಸ್ತಿ, ಪಾಪೂವೇತ್ಸಿ, ಬೆಸ್‌ಪಾವೋವೇತ್ಸಿ, ಅವ್‌ಸ್ತ್ರಿಯಾಕ್, ಮೊಲೊಕಾನ್ ಮತ್ತು ಸ್ಕೋಪ್‌ತ್‌ಸಿ- ಹೀಗೆ ಪ್ರತಿಯೊಂದು ಪಂಥದವರೂ ಆತ್ಮ ಶ್ಲಾಘನೆಯಲ್ಲಿ ತೊಡಗುತ್ತಾರೆ. ಕಣ್ಣಿಲ್ಲದ ನಾಯಿಮರಿಗಳಂತೆ ತೆವಳುತ್ತಾರೆ. ಮತ ಹಲವಾದರೂ ತತ್ವವೊಂದು, ಆತ್ಮವೊಂದು: ನನ್ನಲ್ಲಿರುವ ನಿನ್ನಲ್ಲಿರುವ ಹಾಗೂ ಅವನಲ್ಲಿರುವ ಆತ್ಮವೊಂದೇ ಹೊರತು ಬೇರೆಯಲ್ಲ. ಆದ್ದರಿಂದ ಪ್ರತಿಯೊಬ್ಬರೂ ತನ್ನನ್ನು ತಾನು ನಂಬಿಕೊಳ್ಳುವುದಾದರೆ ಎಲ್ಲರೂ ಒಂದಾಗುತ್ತಾರೆ: ಆಗ ವ್ಯಕ್ತಿಯಲ್ಲಿ ಸಮಷ್ಟಿಯನ್ನೂ, ಸಮಷ್ಟಿಯಲ್ಲಿ ವ್ಯಕ್ತಿಯನ್ನೂ ಕಾಣಲನುಕೂಲವಾಗುತ್ತದೆ. – ಲಿಯೊಟಾಲ್‌ಸ್ಟಾಯ್ ಪುನರುತ್ಥಾನ. ಅನು: ದೇ. ಜವರೇಗೌಡ, ಪುಟ ೫೬೦-೬೧, ೧೯೬೪.) ಮತ ಧರ್ಮಗಳ ಮೌಢ್ಯಕ್ಕೆ ಬಲಿಯಾಗಿರುವುದು. ಮತಗಳು ತಮ್ಮ ಸಂಕುಚಿತ ಬಿಲಗಳಿಂದ ಎಂದಿಗೂ ಹೊರ ಬರುವುದಿಲ್ಲ. ಪೋಪನ ಪ್ರವಾಸವಾಗಲೀ: ಶಾಬಾನೋ ಬೇಗಂ ಕೇಸಾಗಲೀ; ರಾಮ ಜನ್ಮಭೂಮಿಯ ಬಿಡುಗಡೆಯಾಗಲೀ: ಕೇರಳದ ನಿಳಕ್ಕಲ್‌ನಲ್ಲಿನ ದೇವಾಲಯ – ಚರ್ಚ್ ವಿವಾದವಾಗಲೀ; ಮಠಮಾನ್ಯಗಳಲ್ಲಿ ಹೊಗೆಯಾಡುತ್ತಿರುವ ಸ್ವಾಮಿಗಳ ಸಣ್ಣತನವಾಗಲೀ ಇತ್ಯಾದಿ ಇವು ಎಂದೆಂದಿಗೂ ಅನಂತಕ್ಕೆ ಬೆನ್ನುಮಾಡಿದವುಗಳೆ. ವಿಶ್ವದ ಯಾವುದೇ ಮತ ಮತ್ತೊಂದು ಮತದಲ್ಲಿರುವ ಒಳ್ಳೆಯದನ್ನು ಭವ್ಯವಾದುದನ್ನು ತಾನು ಒಪ್ಪಿ ತನ್ನ ಯಾವ ಗ್ರಂಥದಲ್ಲಿಯೂ ಉಲ್ಲೇಖಿಸುವ ಉದಾತ್ತ ಮನೋಭಾವವನ್ನು ತೋರದಿರುವ ಸಂಕುಚಿತ ದೃಷ್ಟಿಯನ್ನು ಕಂಡು ಕನಿಕರವಾಗುತ್ತದೆ. ಆದರೆ ವಿಶ್ವದ ಯಾವುದೇ ಮಹಾನ್ ವ್ಯಕ್ತಿ ಕವಿಯಾಗಲೀ, ದಾರ್ಶನಿಕನಾಗಿರಲೀ ಅವರು ಯಾವುದೇ ಜಾತಿ, ಮತ, ಕುಲ, ಬಣ್ಣ ಬದುಕಿಗೆ ಒಳಗಾಗಿದ್ದರೂ ಲೆಕ್ಕಿಸದೆ ಅವರ ಆದರ್ಶ ವಿಚಾರಗಳನ್ನು ವಿಶ್ವದ ಮತ್ತೊಂದು ಮೂಲೆಯಲ್ಲಿ ಉಲ್ಲೇಖಿಸುವುದನ್ನು ಕಂಡು ಅತ್ಯಂತ ಆಶ್ವರ್ಯವಾಗುತ್ತದೆ. ಮತಕ್ಕೂ ಸಾಹಿತ್ಯ ಕಲೆಗಳಿಗೂ ಇರುವ ಈ ಮೂಲಭೂತ ಮಾನವೀಯ ಗುಣವನ್ನು ಕಂಡುಕೊಂಡು ಆದಷ್ಟು ಜಾಗ್ರತೆ ಮತಗಳ ಹಿಡಿತದಲ್ಲಿರುವ ಬಹುಸಂಖ್ಯಾತ ಜನ ಅವುಗಳ ಸಂಕುಚಿತ ಬಿಲಗಳಿಂದ ಬಿಡಿಸಿಕೊಂಡು ಸಾಹಿತ್ಯ ಕಲೆಗಳ ಹೊಸ ದಿಂಗತಕ್ಕೆ ಒಮ್ಮೆಲೆ ಜಿಗಿಯದಿದ್ದರೆ ನಾವು ನಾವಾಗಲು (I am. Moreover, convinced that success would come to every man who has faith in himself -Roses in December by M.C.Chagla.) ತನ್ಮೂಲಕ ಮನುಷ್ಯರಾಗಿ ಬಾಳಲು ಸಾಧ್ಯವೇ ಇಲ್ಲ. ಮತದ ಮುಷ್ಟಿಗೆ ಸಿಕ್ಕಿದರೆ ಪಂಜಾಬಿನ ಮುಖ್ಯಮಂತ್ರಿ ಬರ್ನಾಲರ ರೀತಿ ಎಲ್ಲ ಗುರುದ್ವಾರಗಳಲ್ಲಿ ಕುಳಿತು ಬೂಟ್ ಪಾಲಿಷ್ ಮಾಡಬೇಕಾಗುತ್ತದೆ; ಖೊಮೇನಿ ರಾಜ್ಯದ ಕುಟುಕರಾಗಬೇಕಾಗುತ್ತದೆ; ಕ್ರಿಶ್ಚಿಯನ್ನರ ಜೊತೆ ಟೀ ಕುಡಿದ ಕಾರಣ ಮತಾಂಶ ಹಿಂದೂಗಳ ಒತ್ತಾಯಕ್ಕೆ ಮಣಿದು ಪ್ರಾಯಶ್ಚಿತ್ತಕ್ಕೆ ಒಳಗಾಗಬೇಕಾಗುತ್ತದೆ; ವಿವೇಕಾನಂದರಂತೆ ಸಿಡಿದು ಸೆಟೆದು ನಿಲ್ಲದಿದ್ದರೆ ಬಾಬಾಗಳ ಬೂದಿಗಾಗಿ, ಮಠಾಧಿಪತಿಗಳ ಎಂಜಲ ಭಿಕ್ಷೆಗಾಗಿ ಸೊಂಟ ಬಗ್ಗಿಸಿ ಕೈಯೊಡ್ಡಿ ನಿಲ್ಲಬೇಕಾಗುತ್ತದೆ; ಶಿಲುಬೆಯಿಂದ ಬಿಡಿಸಿಕೊಳ್ಳಲಾಗದೆ ವಿಲಿವಿಲಿ ಒದ್ದಾಡಬೇಕಾಗುತ್ತದೆ; ಇಸ್ಲಾಂ, ಅಯ್ಯಪ್ಪಸ್ವಾಮಿಯ ಬುರ್ಕಾದಿಂದ ಬಿಡಿಸಿಕೊಂಡು ಹೊರಬರಲಾರದೆ ಸದಾ ಕತ್ತಲೆಯಲ್ಲೆ ಕೊಳೆಯಬೇಕಾಗುತ್ತದೆ.

ನಾಡಿನ ಉಸಿರಿಗೆ ಕಾರಣವಾಗಿರುವ ಬಹುಸಂಖ್ಯಾತ ಶ್ರಮಿಕವರ್ಗ ಮತಧರ್ಮಗಳ ಕಪಿಮುಷ್ಟಿಯಿಂದ ಬಿಡಿಸಿಕೊಂಡು ಈ ದೇಶದ ಸಂಸ್ಕೃತಿಯ ಒಡೆಯರಾಗಿ ವಿಶ್ವಮಾನವತೆಯನ್ನು ಬಿತ್ತಿ ಬೆಳೆಯದೆ ಹೋದರೆ ನಮ್ಮೊಳಗೇ ಅನಾಥರಾಗುತ್ತಿರುವ ನಾವು ಎಂದೆಂದಿಗೂ ನಾವಾಗದೆ ಅನಾಥರಾಗಿಯೆ ಉಳಿಯಬೇಕಾಗುತ್ತದೆ.
*****
ಸೆಪ್ಟೆಂಬರ್ ೧೯೮೬

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ಷಮಾಯಾಧರಿತ್ರಿ
Next post ಹಕ್ಕಿ ಹಾರುತವ ನೋಡ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys