ಹಕ್ಕಿ ಹಾರುತವ ನೋಡಽಽಽ
ಹಕ್ಕಿ ಪಿಕ್ಕಿ ರಂಗು ಚೆಲ್ಲಿ
ಭೂಮಿ ಮ್ಯಾಗ ಹಸಿರ
ಹಾಸುತ್ತಾವ ನೋಡ ||

ಹಸಿರು ಹಕ್ಕಿ ಉಸಿರನಂಟು
ನೆಂಟಾ ನಂಟು ಬಳಗ
ಕರೆದು ಸುವ್ವಾಲಾಲಿ
ಹಾಡುತ್ತಾವ ನೋಡ ||

ಬಾನಾಡಿಯಾಗ ಬಣ್ಣ
ಬಣ್ಣದ ಒಕುಳಿಯಾಡಿ
ಕಾಮನಬಿಲ್ಲು ಹೂಬಾಣ
ಹೂಡುತಾವ ನೋಡಽಽಽ ||

ಸ್ವಾತಿ ಮುತ್ತಿನ ಹಾಡಿಗೆ
ತಾಳ ಮೇಳ ಕುಣಿತದಲ್ಲಿ
ಇಳೆ ನೀರೆ ತಂಪಾದಳು ನೋಡ ||

ಅಣ್ಣ ತಮ್ಮರ ಮರ
ಅಕ್ಕ ತಂಗೀರ ಮರ
ಗಿಡ ಹೂಬಳ್ಳಿ ಚಿಗುರುತಾವ
ನೋಡಽಽಽ ||

ಹಸಿರ ಸೀರೆ ಉಟ್ಟ ನೀರೆ
ಹೂ ಬಳ್ಳಿ ಕೆಂಪು ಸಿಂಗಾರ
ತರುಣಿ ಬಂಗಾರ ತರುತಾಳೋ ||

ಬಂಗಾರ ತೇರನೇರಿ
ಹೊರಟಾಳೋ ನನ್ನವಳು
ಮುತ್ತಿನಾರತಿ ಎತ್ತಿದವರು
ಮುತ್ತೈದೆಯರು ||
*****