ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ದಿನವಿಡೀ ಭುವಿಯನ್ನು ಬಿಸಿಲಿನ ಜಳದಿಂದ ತೋಯಿಸಿದ್ದ ಸೂರ್ಯ ನಿಧಾನವಾಗಿ ಪಶ್ಚಿಮದಲ್ಲಿ ಮುಳುಗುತ್ತಿದ್ದ. ಸೂರ್ಯನೆಲ್ಲಾದರೂ ಮುಳುಗುವುದು ಸಾಧ್ಯವೆ? ಭೂಮಿಯ ಒಂದು ಮೈಯನ್ನು ಕತ್ತಲೆ ಮಾಡಿ ಮತ್ತೊಂದನ್ನು ಮುತ್ತಿ ತೋಯಿಸುವ ಸೂರ್ಯನ ಈ ಚಕ್ಕಂದ ಅದೆಷ್ಟು ಕತೆ, ಕವನಗಳಿಗೆ ವಸ್ತುವಾಗಿಲ್ಲ? ಕತ್ತಲೆಯೇ ಇಲ್ಲದ ಹಗಲು, ಹಗಲೇ ಇಲ್ಲದ ಕತ್ತಲೆ ಇರುತ್ತಿದ್ದರೆ ಹೇಗಿರುತ್ತಿತ್ತು? ಸೂರ್ಯ ಮುಳುಗುವಂತೆ ಕಂಡರೂ ಮುಳುಗಿರುವುದಿಲ್ಲ. ಒಂದೆಡೆ ಕತ್ತಲಾದರೂ ಇನ್ನೊಂದೆಡೆ ಬೆಳಕಿರುತ್ತದೆ. ಎಂತಹ ಸೋಜಿಗ ಈ ಪ್ರಕೃತಿಯದ್ದು, ಕಣ್ಣಿಗೆ ಕಾಣುವ ಸತ್ಯವೊಂದಾದರೆ ನಿಜವಾದ ಸತ್ಯವೇ ಬೇರೆ. ಹಾಗೆ ನೋಡಿದರೆ ಈ ವಿಶ್ವದಲ್ಲಿ ಪೂರ್ತಿ ಸತ್ಯವೆನ್ನುವುದು ಯಾವುದಾದರೂ ಇದೆಯೆ? ಎಲ್ಲವೂ ಅರ್ಧಸತ್ಯಗಳೇ.

ಸೂರ್ಯ ಕಂತುತ್ತಿದ್ದುದನ್ನು ಮನೆಯ ಹಿಂಬದಿಯ ಎತ್ತರದ ಗುಡ್ಡದಿಂದ ವೀಕ್ಷಿಸುತ್ತಿದ್ದ ನನ್ನ ಮನದಲ್ಲಿ ನೂರಾರು ತುಮುಲಗಳು. ಈಗೇನೋ ತಂಗಾಳಿ ಹಾಯಾಗಿ ಬೀಸುತ್ತಿದೆ. ಬಂಟಮಲೆಯ ತಪ್ಪಲಲ್ಲಿ ಪಕ್ಷಿಗಳ ಕಲರವ. ಪಡುವಣದ ಆಕಾಶದಲ್ಲಿ ಪ್ರಿಯಕರನೆದುರು ನಾಚಿ ನೀರಾಗುವ ಪೋಡಶಿಯ ಕೆನ್ನೆಯ ಬಣ್ಣ ಓಕುಳಿಯಾಡಿದೆ. ಅತ್ತ ಎಡಗಡೆಗೆ ಹಸಿರಾಗಿರಬೇಕಾಗಿದ್ದ ತೋಟ ಹಳದಿ ಬಣ್ಣಕ್ಕೆ ತಿರುಗಿದೆ. ನಟ ಬೇಸಿಗೆ ಯಲ್ಲಿ ಒಂದೂವರೆ ತಿಂಗಳಿಂದ ಒಂದು ಹನಿ ನೀರು ತೋಟಕ್ಕೆ ಬಿಟ್ಟಿಲ್ಲ. ಮೊದಲೇ ಗ್ಯಾಟು. ಗ್ಲೋಬಲೈಜೇಶನು ಎಂದು ಅಡಿಕೆ ಬೆಲೆ ಪಾತಾಳಕ್ಕೆ ಇಳಿದದ್ದು ಬೇರೆ. ಈಗ ಹೀಗೆ ಗಿಡಕಾದರೆ ಮುಂದಿನ ಬೆಳೆ ಬಂದ ಹಾಗೆಯೆ.

ನಮ್ಮ ತೋಟದ ಎಡಬದಿಗೆ ಮೇಲ್ಬದಿಯಲ್ಲಿ ದೊಡ್ಡಪ್ಪನ ತೋಟ. ದೊಡ್ಡಪ್ಪ ತುಂಬಾ ದುಡ್ಡಿರುವವ. ಹಾಗಾಗಿ ಊರಿಗೇ ದೊಡ್ಡಪ್ಪನಾಗಿದ್ದ. ಅಧಿಕಾರದಲ್ಲಿರುವ ಪಕ್ಷಕ್ಕೆ ಮಾತ್ರ ಅವನ ನಿಷ್ಠೆ. ಹಾಗಾಗಿ ಯಾವಾಗಲೂ ಸುಖವಾಗಿದ್ದ. ಬಂಟಮಲೆಯ ಸಮೃದ್ಧ ನೀರಿನ ಐಸಿರಿ ಅವನ ತೋಟವನ್ನು ನಂದನವನವಾಗಿಸಿತ್ತು. ನಮ್ಮ ತೋಟಕ್ಕೆ ನೀರು ಅಲ್ಲಿಂದಲೇ ಹರಿದು ಬರಬೇಕು. ದೊಡ್ಡಪ್ಪನದಕ್ಕಿಂತ ಎಷ್ಟೋ ಸಣ್ಣದು ನಮ್ಮತೋಟ. ಆದರೆ ಅಪ್ಪ ಬೆವರು ಸುರಿಸಿ ದುಡಿದು ಕಂಗಿನಲ್ಲಿ ಬಂಗಾರ ಬೆಳೆದ. ಮನೆಗೆ ಫೋನಾಯಿತು, ಕರೆಂಟು ಬಂತು, ಓಡಾಟಕ್ಕೊಂದು ಸುಜುಕಿ ಕೂಡಾ ಬಂದಾಗ ದೊಡ್ಡಪ್ಪನ ಕಣ್ಣು ಕೆಂಪಾಯಿತು. ಅವನ ತೋಟದಿಂದ ನಮ್ಮಲ್ಲಿಗೆ ಸ್ವಾಭಾವಿಕವಾಗಿ ಬರುತ್ತಿದ್ದ ನೀರನ್ನು ಹೇಳದೆ ಕೇಳದೆ ಬಂದು ಮಾಡಿಬಿಟ್ಟ.

ಸಂಜೆಯ ಹಿತವಾದ ಆ ಮಂದಾನಿಲಕ್ಕೂ ತಲೆಯ ಬಿಸಿಯನ್ನು ಕಡಿಮೆ ಮಾಡುವ ಶಕ್ತಿ ಇರಲಿಲ್ಲ. ವಸಂತ ಮಾಸವಾದುದರಿಂದ ಕೋಗಿಲೆಗಳು ಪಂಚಮನಾದದಲ್ಲಿ ಹಾಡುತ್ತಿದ್ದವು. ಪಕ್ಷಿಗಳು ಗುಂಪು ಗುಂಪಾಗಿ ಕಲರವಗೈಯುತ್ತಾ ಹಿಂದಿರುಗುತ್ತಿದ್ದವು. ಮಧುವನ್ನು ಅರಸಿ ಹೋಗಿದ್ದ ಜೇನುನೊಣಗಳು ಗುಂಯ್ಗಡುತ್ತಾ ವಾಪಾಸಾಗುತ್ತಿದ್ದವು. ವಸಂತದ ಈ ಸಂಜೆ ನಿಜಕ್ಕೂ ಆಹ್ಲಾದಕರ. ಪ್ರಕೃತಿ ಪುರುಷರ ಮಿಲನದ ಕಾಲ. ನಮ್ಮಲ್ಲಿ …..? ದೊಡ್ಡಪ್ಪ ನಮ್ಮನ್ನು ದೂರವೇ ಇರಿಸಬಯಸಿದ್ದರು. ದೊಡ್ಡಪ್ಪನ ಮೂವರು ಮಕ್ಕಳು ದಿನಾ ಇಲ್ಲಿಗೆ ಬಂದು ಆಡಿಕೊಂಡಿರುವವರು. ನಾವೆಲ್ಲ ಒಟ್ಟಾಗಿ ಅದೆಷ್ಟು ಸಲ ಪುನರ್ಪುಳಿ ಮರಹತ್ತಿ ಹುಳಿ ಉದುರಿಸಿ ತಿಂದಿಲ್ಲ? ಗುಡ್ಡದ ಬಲಬದಿಯ ದೊಡ್ಡ ಮಾವಿನ ಮರದಲ್ಲಿ ಕಾಯಿಯಾಗುವುದೇ ತಡ ಗುರಿ ಪರೀಕ್ಷೆಗೆ ತೊಡಗಿಲ್ಲ? ಹಲಸಿನ ಹಣ್ಣು ತಿನ್ನುವುದು ಎರಡೂ ಮನೆಗಳ ಒಂದು ಸಾಮೂಹಿಕ ಕಾರ್ಯಕ್ರಮ. ಅಪ್ಪೆಮಿಡಿ ಮಾವಿನ ಉಪ್ಪಿನಕಾಯಿ ಹಾಕುವುದು, ಹಲಸಿನ ಸೋಳೆ ಉಪ್ಪು ನೀರಲ್ಲಿ ಹಾಕಿಡುವುದು, ಹಲಸಿನ ಬೇಳೆ ಯಿಂದ ಸಾಂತಾಣಿ ಮಾಡುವುದು, ಮಾವಿನ ಹಣ್ಣಿನಿಂದ ಮಾಂಬಳ ಮಾಡುವುದು, ಹಲಸಿನ ಹಪ್ಪಳ ಮಾಡುವುದು ಎಲ್ಲಾ ಒಟ್ಟಿಗೆ. ಆಮೇಲೆ ಸರಿ ಅರ್ಧ ಪಾಲು ಮಾಡಿಕೊಳ್ಳುವುದು. ಹೀಗಿದ್ದವರು ಇಂದು ಮುಖ ಸೊಟ್ಟಿಗೆ ಮಾಡಿ ಅತ್ತ ಸರಿದು ಹೋಗುತ್ತಿದ್ದಾರೆ. ಇಷ್ಟು ಹತ್ತಿರ ವಿರುವವರು ಮಾನಸಿಕವಾಗಿ ಅದೆಷ್ಟು ದೂರವಾಗಿ ಬಿಟ್ಟರು!

ದೊಡ್ಡಪ್ಪನದ್ದು ಒಂದೇ ಹಠ. ಅವರು ಮಾರುತಿ ವ್ಯಾನು ತಗೊಳ್ಳುತ್ತಿದ್ದಾರಂತೆ. ನಮ್ಮ ಮನೆ ಅಂಗಳದಿಂದ ರಸ್ತೆಗೆ ಜಾಗ ಬಿಟ್ಟುಕೊಡಬೇಕೆಂತೆ! ಅಪ್ಪ ನೇರವಾಗಿಯೇ ಹೇಳಿದ. ಇಂದೇನೋ ನಾವು ಚೆನ್ನಾಗಿದ್ದೇವೆ. ನಮ್ಮ ಮಕ್ಕಳ ಕಾಲಕ್ಕಾಗುವಾಗ  ಹೇಗೆಯೊ? ಅಲ್ಲದೆ ಅಂಗಳವನ್ನು ಕಟ್ ಮಾಡಿ ರಸ್ತೆ ಮಾಡಿದರೆ ನಮ್ಮ ಮನೆಯ ಅಂದವೇ ಹೋಗುತ್ತದೆ. ಮನೆಯ ಹಿಂದಿನ ಗುಡ್ಡದ ಬದಿಯಿಂದ ಜಾಗ ಕೊಡುತ್ತೇನೆ ಎಂದರೂ ದೊಡ್ಡಪ್ಪನದು ಒಂದೇ ಹಠ. “ನಾನು ಅಣ್ಣ. ನನ್ನ ಮಾತು ನೀನು ಕೇಳಬೇಕು. ಅದು ಬಿಟ್ಟು ನನಗೆ ಬುದ್ಧಿ ಹೇಳಬೇಡ. ರಸ್ತೆಗೆ ನೀನು ಜಾಗ ಬಿಡದಿದ್ರೆ ನಿನಗೆ ಒಂದು ತೊಟ್ಟು ನೀರಿಲ್ಲ.” ಎಂದು ಧಮಕಿ ಹಾಕಿ ದೊಡ್ಡಪ್ಪ ಹೋದವ ಮತ್ತೆ ಇತ್ತ ಬಂದಿಲ್ಲ. ಹೇಳಿದ ಹಾಗೆ ಒಂದೂ ತೊಟ್ಟು ನೀರು ಬಿಡಲಿಲ್ಲ.

ಸೂರ್ಯ ಕಂತುತ್ತಾ ಕಂತುತ್ತಾ ಹೋಗುತ್ತಿರುವಂತೆ ಗಾಳಿ ಜೋರಾಗಿ ಬೀಸತೊಡಗಿತು. ತೋಟದ ಕಂಗುಗಳು ಅತ್ತಿತ್ತ ತೊಯ್ದಾಡಿದವು. ಮಾತಾಡಲು ಸಾಧ್ಯವಿರುತ್ತಿದ್ದರೆ ಅವು ನೀರಿಲ್ಲದ ಸಂಕಟಕ್ಕೆ ಎಷ್ಟು ಗೋಳು ಹೊಯ್ಯುತ್ತಿದ್ದವೊ? ಈ ದೊಡ್ಡಪ್ಪ….ಅರೆ!

ದೊಡ್ಡಪ್ಪನೇ ಅಲ್ಲವೇ ಅಲ್ಲಿ ಬರುತ್ತಿರುವುದು? ಎಲ್ಲಿಗೆ ದೊಡ್ಡಪ್ಪನ ಸವಾರಿ? ದೊಡ್ಡಹೊಟ್ಟೆ ಎಳೆದುಕೊಂಡು ತೇಕುತ್ತಾ ಬಂದ ದೊಡ್ಡಪ್ಪ ನನ್ನನ್ನು ನೋಡಿ ನಕ್ಕರು. ಈ ನಗುವಿಲ್ಲದೆ ತಿಂಗಳುಗಳೇ ಆಗಿದ್ದವು. ಉಸಿರೆಳೆದು ಕೊಳ್ಳುತ್ತಾ ಬಂದು ನಾನು ಕೂತಿದ್ದ ಬಂಡೆಯ ಮೇಲೆ ಮೈ ಚಾಚಿದರು.

ಎಷ್ಟಾದರೂ ದೊಡ್ಡಪ್ಪ, ನನ್ನ ಮನ ಕರಗಿ ನಾನವರತ್ತ ಧಾವಿಸಿದೆ. ಅವರ ಹತ್ತಿರ ಕೂತು ಗಾಬರಿಯಿಂದ “ಏನು ದೊಡ್ಡಪ್ಪಾ” ಎಂದು ಕೇಳಿದೆ. ದೊಡ್ಡಪ್ಪ ಏದುಸಿರು ಬಿಟ್ಟರು. “ಏನೂ ಇಲ್ವೇ ಹುಡುಗಿ, ಡಾಕ್ಟ್ರ ಹತ್ರ ಹೋಗಿದ್ದಕ್ಕೆ ಅದೇನೋ ಕಾಯ್ಲೆ ಅಂದ್ರು. ಸಂಜೆ ಹೊತ್ತು ಗುಡ್ಡ ಹತ್ತಿಳುದು ವ್ಯಾಯಾಮ ಮಾಡಬೇಕು ಅಂದ್ರು. ಆದ್ರೂ…..ಆದ್ರೂ…..ಕಾಯಿಲೆ ಅಂದ್ಮೇಲೆ ಭೀತಿ ಮೂಡದೆ ಇರ್ತದ್ಯೇ? ಯಾವಾಗ ಸಾಯ್ತಿನೋ ಅಂತ ಹೆದ್ರಿಕೆ ಹುಟ್ಟಿದೆ. ಸಾಯೋವಾಗ ಯಾವ ದ್ವೇಷಾನೂ ಉಳಿಯೋದಿಲ್ಲ. ನಿಮ್ಮ ತೋಟಕ್ಕೆ ನೀರು ಬಿಟ್ಟೇ ಬಂದೆ ನೋಡು.

ಕೂತಲ್ಲಿಂದ ದಢಕ್ಕನೆ ಎದ್ದು ನೋಡಿದೆ. ಕೆಳಗೆ ಜುಳುಜುಳು ನೀರು ಹರಿಯುವ ಸದ್ದು. ಒಣಗಿ ಕಂಗೆಟ್ಟ ಭೂಮಿಗೆ ನೀರ ಸಿಂಚನ. ಅಡಿಕೆ ಗಿಡಗಳ ಬಾಗುವಿಕೆ ಯಲ್ಲಿ ಷೋಡಶಿಯ ಚೈತನ್ಯ! ತಂಪಾದ ಗಾಳಿ ಸುಂಯ್ಯೆಂದು ಬೀಸಿದಾಗ ವಸಂತದ ನವೋಲ್ಲಾಸದ ಹೊಸಲಹರಿ ತನುವಿನಲ್ಲಿ ಮೂಡಿತು. ಇಷ್ಟು ಸುಂದರ ಸಂಜೆ ಇನ್ನೊಂದು ಇರಲು ಸಾಧ್ಯವೇ ಇಲ್ಲ ಎಂದು ಆಗ ಅನ್ನಿಸಿ ದೊಡ್ಡಪ್ಪನ ಕೈಯನ್ನು ಪ್ರೀತಿಯಿಂದ ಅಮುಕಿದೆ.
*****

Latest posts by ವೀಣಾ ಮಡಪ್ಪಾಡಿ (see all)