ನಾನೇ ಟೀಚರ್‍ ಆಗಿದ್ರೆ
ಅಪ್ಪ ಅಮ್ಮ ಎಲ್ಲರಿಗೂ
ಸರಿಯಾಗ್ ಪರೀಕ್ಷೆ ಮಾಡ್ತಿದ್ದೆ
ಕರೆಕ್ಟು ಮಾರ್ಕ್ಸ್ ಕೊಡ್ತಿದ್ದೆ!

ಅಪ್ಪನ ಜೋರಿಗೆ ಇಪ್ಪತ್ತು
ಅಜ್ಜಿಯ ಮುದ್ದಿಗೆ ಎಪ್ಪತ್ತು
ಚಿವುಟೀ ಗುದ್ದಿ ಅಳಿಸೋ ಅಣ್ಣನ
ಕೀಟಲೆ ಬುದ್ಧಿಗೆ ಒಂಬತ್ತು!

ಆಟ ಆಡಿಸೋ ಅಕ್ಕನಿಗೆ
ಏಕ್‌ದಂ ಫಸ್ಟ್‌ಕ್ಲಾಸ್ ಅರವತ್ತು
ಕುಣಿಸೀ ನಗಿಸೀ ಕಥೆಗಳ ಹೇಳೋ
ಮೀನಾ ಮಿಸ್ಸಿಗೆ ಎಂಬತ್ತು!

ನಮ್ಮನೆ ಬಿಲ್ಲಿ ಬಿರ್ಜುಮರೀಗೆ
ಸುಮ್ಮನೆ ಎಂಬತ್ತಾರು.
ಜಾಮೂನಂಥ ಅಮ್ಮನ ಮುದ್ದಿಗೆ
ಮಾತ್ರ ನೂರಕ್ ನೂರು!
*****