(ನಡು ಮನೆಯ ಬಾಗಿಲ ಒಳಬದಿಯನಲ್ಲಿ ಗಂಗಾಬಾಯಿ ನಿಂತಿದ್ದಾಳೆ. ಶಾಮರಾಯರು ಕಚೇರಿಯಿಂದ ಬಂದು ಪಡಸಾಲೆಯೊಳಕ್ಕೆ ಪ್ರವೇಶಿಸುವರು. ಸಮಯ ಸಂಜೆಯ ಆರು ಗಂಟೆ. ಬೇಸಿಗೆಯ ಕಾಲ, ಗಂಗಾಬಾಯಿ ಒಬ್ಬಳೇ ಮಾತನಾಡುವಳು; ಕೇಳುವವರು ಶಾಮರಾಯೆರೊಬ್ಬರೆ)

“ಅಯ್ಯಽ! ಈಗ ಬಿಟ್ಚಿತೇನು ಹಾಂಗಾದರ ಕಚೇರಿ…? ಯಾವಾಗ ಹನ್ನೊಂದು ಘಂಟೇಕ್ಕ ಸುರುವು ಆದ್ರ ಸಂತೆನಕಾ ದುಡದು ದುಡದು ಜೀವ ಸಣ್ಣ ಆಗತ್ತದ…! ಬಿಸಿಲಂತೂ ಹೇಳೂಹಾಗಿಲ್ಲ…. ಸದರಾ ಶರ್ಟು ಎರಡೂ ತೊಯ್ದು ಹೋದ್ಹಾಂಗ ಕಾಣಸ್ತಾವ! ತರ್ರಿ ಎರಡೂ ತರ್ರಿ ಒಣಗಲಿಕ್ಕೆ ಹಾಕತೀನಿ.

ಸ್ನಾನ ಮಾಡತೀರೋ ಏನು ಬರೇ ಕೈಕಾಲು ತೊಳಕೋತೀರೋ ?… ಫಳಾರ ಮಾಡಲಿಕ್ಕೆ ಏಳ್ರಿ…; ಈಗ ಬರತಾರ ಮತ್ತ ಮಾರವಾಡ್ಯಾರು- ಲೆಖ್ಖದ ಗಂಟು ತಗೊಂಡು…! ಸುಡ್ಲಿ ತಾಯಿ! ಮುಂಜಾನೆ ಕಚೇರಿ; ಮಧ್ಯಾನ ಕಚೇರಿ ಮತ್ತ ಸಂಜೀನ್ಯಾಗ ಸುದ್ದಾ ಇವರ ಕಾಟ ಅದಽನಽ! ನೀವಂತ ಇಷ್ಟೆಲ್ಲಾ ತಾಳಿಕೋತೀರಿ….. ಮತ್ತೊಬ್ಬರ್‍ಯಾರಾದರೂ ಆಗಿದ್ದರ ಮೂರುದಿನಾ ಏನೂ ಪುರೋಸತಿದ್ದಿಲ್ಲ. ನಡೀರಿ… ನೀರ ಮನೆಗೆ!
* * * *

“ಅಯ್ಯ… ಬಿಡ್ರಿ ಸಾಕು, ಥಣ್ಣಗಿನ ನೀರು ಭಾಳ ಸುರುವಿಕೊಳ್ಳ ಬ್ಯಾಡ್ರಿ! ಥಂಡಿಗಿಂಡ್ಯಾದೀತು. ಅಲ್ಲೇ ಮಳೀಗೆ ಟಾವೇಲ ಅದ ತೊಗೊಂಡು ಒರಿಸಿಕೊಳ್ರಿ!”
* * * *

“ಒಡೀ ಹ್ಯಾಂಗ ಆಗ್ಯಾವ?… ಆಂ ನೋಡ್ರೀ, ನಾಯಕರ ಕೇಸಪ್ಪ ಭಾಳ ಹರೇಮಿ!… ಮಾತಿನ್ಯಾಗಂತೂ ಅವನ ಕೈ ಹಿಡ್ಯಾವರು ಯಾರೂ ಇಲ್ಲ…; ಇಂದ ಮಧ್ಯಾಂದಾಗ ಭೆಂಡವಾಲೀ ಜೋಡು ತೊಗೊಂಡು ಬಂದಿದ್ದ – ಮುತ್ತಿನ್ನೂ!…. ‘ಗಂಡಸರು ಮನ್ಯಾಗಿಲ್ಲ…. ನೀ ಬರಬ್ಯಾಡ.’ ಅಂತ ಹೇಳಿಬಿಟ್ಟೆ.-ಆತಗ….! ಕೇಸಪ್ಪಾ ಎಷ್ಟ ರಿಪೀ ಇದ್ದಾನ ನಿಮಗ ಗೊತ್ತಿಲ್ಲ ಕಾಣಸ್ತದ…! ‘ನೋಡ್ಯಾರೆ ನೋಡ್ರಿ; ಮುತ್ತು ಭಾಳ ಅಗ್ಗ ಆಗ್ಯಾವ…. ಕಣ್ಣಿಲೆ ಒಮ್ಮೆ ನೋಡ್ರಿ, ಆ ಮ್ಯಾಲೆ ಬ್ಯಾಡಾ ಅಂದೀರಂತ….!’ ಅಂತ ಹೇಳ ಹೇಳತಽ ಪಡಸಾಲೀ ಕಟ್ಟಿಮ್ಯಾಲ ಕೂತ ಥೈಲೀನಽ ಬಿಚ್ಚಿದ…; -ಖಾರ್ ಸಜ್ಜಿಗಿ ಹಾಕಲಿ? – ನಾ ಭೆಂಡವಾಲಿ ನೋಡೂದೇ ಇಲ್ಲಾಽಂತ ಹೇಳಿದೆ. ಅದೇ ವ್ಯಾಳ್ಯಾದಾಗಽ ನಮ್ಮ ಕಾಧೊಟೆ ಬಯ್ಯಕ್ಕ ಬಂದಿದ್ರು- ಸುಮ್ಮನಽ ಭೆಟ್ಟಗಂತ! ‘ಅವರಿಗೆ ತೋರಿಸ್ತೀನಿ ನಿಮಗೇನೂ ತೋರಸೂದಿಲ್ಲ’ ಅಂತ ಕೂತಬಿಟ್ಟ ಕೇಸಪ್ಪ! ಮುತ್ತು ಇಷ್ಟೊಂದು ಅಗ್ಗ ಆಗ್ಯಾವಂತ ನನಗ ಗೊತ್ತೇ ಇದ್ದಿದ್ದಿಲ್ಲಾ….; ಛೆಲೊ ತೊಗರೀ ಕಾಳಿನಷ್ಟು ಅವ-ಒಂದೊಂದು ಮುತ್ತು ‘ಕಿವಿಯೊಳಗಽ ಇಟಕೊಂಡು ನೋಡ್ರಿ’ ಅಂತ ಅನ್ಲಿಕ್ಕೆ ಹತ್ತಿದ ಕೇಸಪ್ಪ. ಬಯ್ಯಕ್ಕಗ ‘ನಾ ಮುದುಕಿ ನನಗ್ಯಾತಕ್ಕ ಬೇಕಽ ತಾಯೀ! ನೀ ಇಟುಗೊ’ ಅಂತ ನನಗ ಆಗ್ರಹ ನಡಿಸಿದರು ಬಯ್ಯಕ್ಕ! ಮೊಸರು ಹಾಕಲೇನು ಇನ್ನಷ್ಟು?…. ವಡೀ ಛಲ್ಲಬ್ಯಾಡ್ರಿ-ನಿಮ್ಮದು ಮೊದಲಽ ಸಿಟ್ಟಿನ ಸ್ವಭಾವ; ನನಗಂತೂ ಅಂಜಿಕೀನೇ ಬಂತು…. ಆ ಬೆಂಡವಾಲೀ ಇಟಗೋಳೂ ವ್ಯಾಳ್ಳಾಕಽ ನೀವೂ ಕಚೇರಿಂದ ಬಂದು ಬಿಟ್ಟದ್ದರ ಅಲ್ಲೇ ಕೂತ ಬಿಡತಿದ್ದೆ ಕಾಲ ಕಳ್ಕೊಂಡು! ಬಯ್ಯಕ್ಕ ಬಿಡ್ಲೇ ಇಲ್ಲ… ಬೆಂಡವಾಲೀ ಇಡಿಸಿ ಕನಡೀ ಮುಂದ ಒಯ್ದು ನಿಂದರಿಸಿದರು…. ‘ಭೆಂಡವಾಲಿ ಭಾಳ ಒಪತಾವ ನೋಡು ನಿನಗ’ ಅಂತ ಹೇಳಿ ಗಲ್ಲದ ಮ್ಯಾಲ ಕೈಯಾಡಿಸಿ ಲಟಕೀ ಮುರದರು -ಬಯ್ಯಕ್ಕ…. ನನಗ ನಾಚಿಕಿಸಾವು ಬಂತು ತಾಯೀ! ಆದರೂ ಕೇಸಪ್ಪಾ ಬ್ಯಾಡಾ ಬ್ಯಾಡಾ ಅಂತಿರೋವಾಗಽ ನಾ ಭೆಂಡವಾಲಿ ಬಿಚ್ಚಿ ಬಿಟ್ಟೆ!…. ನನಗ್ಯಾತಕ್ಕಬೇಕು ಅಂಥಾ ಭಾರಿ ಭೆಂಡವಾಲಿ! ಕಾಕಾ ಅವರು ಕೊಂಡುಕೊಡಬೇಕಾಗಿತ್ತು… ಯೋಳೆಂಟುನೂರು ರೂಪಾಯಿ ಖರ್ಚು ಮಾಡಿ, ಅವರು ಭೆಂಡವಾಲೀ ಕೊಡಿಸಬೇಕಂತ ನಾಯಾಕ ಆಶಾ ಮಾಡಬೇಕು?…. ನಿಮ್ಮಂಥವರ ವಾರಿಗಿ ವಗತಾನ ಇರುವಾಗ (ಆ ವಸ್ತ) ತೊಂಗೊಂಡಽರೆ ಏನು ಮಾಡೂದು?- ಮುತ್ತು ಅಗ್ಗ ಆಗ್ಯಾವ; ಈಗ ಕೊಂಡರ ಕೊಳಬೇಕು- ಇಷ್ಟಽ ಅಪೇಕ್ಷಾ! ಅಯ್ಯಯ್ಯ! ತುಪ್ಪಾ ಹಾಕತೀನಿ ತಡೀರಲ್ಲಾ- ಚಿರೊಟ್ಯಾ ಹಂಗಽ ತಿಂದರ ಹೊಟ್ಟಿ ಕಡೀಲಿಕ್ಕಿಲ್ಲೇನು?- ಕೇಸಪ್ಪಂದು ಎಲ್ಲಾ ಚಮತ್ಕಾರಽ! ಬ್ಯಾಡಾ ಬ್ಯಾಡಾ ಆಂತಿರಲಿಕ್ಕೇ ಬಿಟ್ಟು ಹೋಗ್ಯಾನ ಭೆಂಡವಾಲೀ! ನೋಡ್ರಿ ಬೇಕಾದರ ಇಟುಗೊಂಡೇ ತೋರಸ್ತೀನಿ! (ಇಟುಗೊಂಡು ಬಂದು) ಒಪ್ಪೂದಿಲ್ಲಽ ಭೆಂಡವಾಲಿ? ಹೋಗ್ರಿ ಚಾಷ್ಟಿ, ಮಾಡಿದರ ನಾ ಮಾತಾಡೂದೇ ಇಲ್ಲ…! ಸರಬತ್ತು ಮರತು ಎದ್ದೀರಿ, ಬೆಳ್ಳಿವಾಟಗಾದಾಗಿಂದು ಕೇಳೂದು ಹೌದಲ್ಲೊ ಭೆಂಡವಾಲಿ?’ (ಪಾಪ ಶಾಮಾಯರು! ಬಾಯಲ್ಲಿ ಚಿರೋಟ್ಯಾದ ತುತ್ತು ಇದ್ದದ್ದರಿಂದ ಸುಮ್ಮನೆ ಗೋಣು ಹಾಕದೆ ಬೇರೆ ಉಪಾಯವೇ ಉಳಿಯಲಿಲ್ಲ. ಚಿರೋಟಿಯ ತುಂಬ ತುಪ್ಪದ ಸೂರೆ! ಗಂಗಾಬಾಯವರ ಮುಖ ತುಂಬ ಮುಗಳು ನಗೆ ಸೂರೆ.)
*****