ಸ್ನೇಹಲತಾ

ಸ್ನೇಹಲತಾ

೧೫-೯-೧೯..

ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.

ಈ ಹದಿನೈದು ದಿನ ನನ್ನ ಮನಸ್ಸು ಬಿರುಗಾಳಿಯಲ್ಲಿ ಸಮುದ್ರವಾಗಿತ್ತು. ನನ್ನ ಆತ್ಮ ಸಂಯಮನದಿಂದ ಈಗ ಶಾಂತತೆ ಪಡೆದಿರುವೆ. ಈ ಶಾಂತ ಮನಸ್ಸು ಚಿರವಾಗಿರಲೆಂದು ಹಾರೈಸುವೆ.

ನನಗೆ ಅತ್ಯಂತ ಶಾಂತತೆಯನ್ನು ತಂದುಕೊಟ್ಟವರು ಆನಂದರಾಯರು. ಅವರು ಬಹಳ ಸರಳ ಮನುಷ್ಯರು. ತಮ್ಮ ರೀತಿ ನೀತಿಗಳಲ್ಲಿ ಎಷ್ಟು ನಯವಾಗಿದ್ದಾರೆ! ನಿಜವಾಗಿಯೂ ಎಲ್ಲರಿಗೂ ಆನಂದ ಕೊಡುವ ಸ್ವಭಾವ ಆನಂದರಾಯರದು!

ರಾತ್ರಿ ೧೨ ಘಂಟೆ! ಹೂಂ, ಇದೇ ಹೊತ್ತು! ಮಳೆ ಧೋ ಧೋ ಹೊಡೆಯುತ್ತಿತ್ತು! ಸ್ನೇಹಲತಾ, ಇಂಥ ಹೊತ್ತಿನಲ್ಲಿ ನೀನು ನನ್ನ ಕೈಬಿಟ್ಟು ಹೋದೆಯಲ್ಲಾ! ನೀನು ಹಾಸಿಗೆಯಲ್ಲಿ ಮಲಗಿದ್ದರೂ, ಬೇಕಾದಷ್ಟು ದಿನ ಇದ್ದರೂ ನಿನ್ನ ಸೇವೆ ಮಾಡಲು ನಾನು ಸಿದ್ಧನಿದ್ದೆ. ಈಗ ಹದಿನೈದು ದಿನ ನಾನೊಬ್ಬನೇ ಕಳೆಯಬೇಕಾದರೆ ನನಗೆ ಎಷ್ಟೋ ಯುಗಗಳನ್ನು ಕಳೆದಂತಾಗಿದೆ. ರಾತ್ರಿ ನಿದ್ದೆಯೇ ಇಲ್ಲ. ನನ್ನ ನೆನಪು ನಿನಗೆ ಆಗುತ್ತದೆಯೇ? ನಾನು ಜೀವಂತವಿದ್ದು ಎಷ್ಟು ಕಷ್ಟಕ್ಕೀಡಾಗಿದ್ದೇನೆ ಬಲ್ಲೆಯಾ? “ಚಿತಾ ದಹತಿ ನಿರ್ಜೀವಂ, ಚಿಂತಾ ದಹತಿ ಜೀವಿತಂ” ಎಂಬುದು ಸತ್ಯ. ಏನು ಹೇಳಲಿ ಸ್ನೇಹಲತಾ?

ನೋಡು ಸ್ನೇಹಲತಾ! ನನ್ನ ಸ್ನೇಹದ ಲತೆ ನನ್ನ ದೇಹವನ್ನು ಸುತ್ತಿ ಕೊಂಡಿವೆ, ಅದರಿಂದಲೇ ನನ್ನ ಜೀವನ. ನಿನ್ನನ್ನು ಮರೆಯಲು ಸಾಧ್ಯವೇ ಇಲ್ಲ. ನೀನು ಆಗ ಅಂದದ್ದು ಈಗ ಮತ್ತೆ ನೆನಪಾಗುತ್ತದೆ. ನಿನಗೆ ಜಡ್ಡು ಬಹಳ ಆದಾಗ “ನಾನು ಸತ್ತ ಮೇಲೂ ಪ್ರೀತಿ ಕಡಿಮೆಯಾಗುವುದಿಲ್ಲವೆ?” ಎಂದು ಕೇಳಿದ್ದಿ. “ಛೀ! ಇದೆಂಥ ಮಾತು!” ಎಂದು ಹೇಳಿದ್ದೆ. “ಮತ್ತೊಬ್ಬಳನ್ನು ಲಗ್ನವಾಗುವುದಿಲ್ಲವೇ?” ಎಂದು ಕೇಳಿದ್ದೆ. “ಇಂಥ ಮಾತುಗಳನ್ನು ಆಡಬೇಡ, ಸುಮ್ಮನೆ ಮಲಗಿಕೋ” ಎಂದು ಸಮಾಧಾನ ಪಡೆಸಿದ್ದೆ. ದೈವ ಎಷ್ಟು ವಿಚಿತ್ರ! ಯಾವದು ಆಗಬಾರದೆಂದು ಬಯಸಿದ್ದೆನೋ ಅದು ಆಗಿ ಹೋಯಿತು.

ಸ್ನೇಹಲತಾ, ನಿನ್ನ ಕೊರಳಾಣೆ ಮಾಡುತ್ತೇನೆ. ನಿನ್ನನ್ನೇ ವರಿಸಿದ್ದೇನೆ. ಕೊನೆಯವರೆಗೂ ಹಾಗೆಯೇ ಬಾಳುವೆ. “ನವೋದಯ” ಪತ್ರಿಕೆಯಲ್ಲಿ ಬಂದಿದೆ ನೀನು ಓದಿರುವೆಯಾ?

ನವೋದಯ ದಿನಪತ್ರಿಕೆ; ೧೪-೯-೧೯.., ಮೊದಲನೆಯ ಪುಟ; ನಾಲ್ಕನೆಯ ಕಾಲಮ್ಮಿನಲ್ಲಿ “ನನ್ನ ಪ್ರಿಯಪತ್ನಿ ಸ್ನೇಹಲತಾ ನನ್ನನ್ನು ಅಗಲಿದ್ದರಿಂದ ನನ್ನ ಸ್ನೇಹಲತೆಯ ಕುಡಿಯನ್ನೆ ಚಿವುಟಿದಂತಾಗಿದೆ. ಅವಳ ಪ್ರೀತಿ ನನ್ನ ಹೃದಯದಲ್ಲಿ ಚಿರಸ್ಥಾಯಿಯಾಗಿದೆ. ನನ್ನ ದುಃಖದಲ್ಲಿ ಸಮಭಾಗಿಗಳಾಗಿ ನನ್ನ ಮತ್ತು ಅವಳ ಗೆಳೆಯ-ಗೆಳತಿಯರು ಕಾಗದ ಬರೆದಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.”

ಈ ಸುದ್ದಿಯನ್ನು ವಿಶೇಷ “ಬಾರ್ಡರ” ಹಾಕಿಕೊಟ್ಟಿದ್ದಾರೆ. ಈ ದಿನಾಂಕದ ಪತ್ರಿಕೆಯನ್ನು ತೆಗೆದುಕೊಂಡು ಒಳಗೆ ಇಟ್ಟಿದ್ದೇನೆ.

೧೬-೯-೧೯….

“ಆಫೀಸಿನ ಕೆಲಸ ಬಹಳವಾಗಿದೆ, ಪತ್ರಿಕಾ ವ್ಯವಸಾಯದಲ್ಲಿ ಕೆಲಸ ಮಾಡುವವರ ಗತಿ ಹೀಗೆಯೇ!” ಹೀಗೆ ನನ್ನ ಮಿತ್ರರು ಹೇಳಿದರು. ನನಗೇನೂ ಹಾಗೆ ಅನಿಸುವದಿಲ್ಲ. ಸ್ನೇಹಲತಾ ಇರುವಾಗ ಹಾಗೆ ಅನಿಸುತ್ತಿತ್ತು. ಈಗ ಆಫೀಸಿನಲ್ಲಿಯೇ ಇನ್ನೂ ಇರಬೇಕು ಎನಿಸುತ್ತದೆ. ರಾತ್ರಿಪಾಳಿ ಬಂದರಂತೂ ಇನ್ನು ಉತ್ತಮ. ಹೊತ್ತು ಹೇಗಾದರೂ ಹೋಗುವದು.

ಹಗಲು ಪಾಳಿ ಮುಗಿಸಿಕೊಂಡು ಕೋಣೆಗೆ ಬಂದೆ. ಆನಂದರಾಯರ ಮನೆಯಲ್ಲಿ ಚಹಾಪಾನವಾಯಿತು. ಚಹಾ ಚೆನ್ನಾಗಿತ್ತು. ಚಹಾ ಮಾಡಿದವರಾರೆಂದು ಕೇಳಿದಾಗ ರಾಯರು ಮುಗುಳು ನಗೆ ನಕ್ಕರು!

ನಾನು ಹೀಗೆಯೇ ಇಲ್ಲಿ ಎಷ್ಟು ದಿನ ಇರಬೇಕು? ಆನಂದರಾಯರು, ಕೊಣೆಯ ಬಾಡಿಗೆಯನ್ನು ಹೇಳಲೊಲ್ಲರು. ಮೊದಲಿನ ಮನೆಗೆ …? ಛೇ, ಅಲ್ಲಿಗೆ ಹೋಗುವದು ಸಾಧ್ಯವೇ ಇಲ್ಲ. ಅದನ್ನು ಬಿಟ್ಟ ಸುದ್ದಿಯನ್ನು ಮಾಲಕರಿಗೆ ತಿಳಿಸಿಬಿಡಬೇಕು. ಸ್ನೇಹಲತೆಯ ಜಡ್ಡಿನ ಸಲುವಾಗಿ ಊರ ಬಿಟ್ಟು ಅಷ್ಟು ದೂರ ತೋಟದಲ್ಲಿಯ ಬಂಗಲೆಯನ್ನು ಹಿಡಿದೆ. ಈಗ ಅಲ್ಲಿ ಹೇಗೆ ಇರುವುದು…… ? ಸಧ್ಯ ಈ ಕೋಣೆ ಚೆನ್ನಾಗಿದೆ. ಎಲ್ಲ ಸೌಕರ್ಯಗಳೂ ಇವೆ. ಅನಂದರಾಯರು ಬಾಡಿಗೆ ತೆಗೆದುಕೊಂಡರೆ ಹಿತವಾಗುವದು. ಆನಂದರಾಯರು ಈ ದಿನ ಸಂಜೆ ನನ್ನ ವ್ಯವಸಾಯವ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ನನ್ನ ಲೇಖನಗಳು ಅವರ ಮನಸ್ಸಿಗೆ ಬಹಳ ಸೇರುತ್ತಿವೆಯಂತೆ. ಅಹುದು; ಅಂತೆಯೆ ಅವರು ಮೊದಲ ಸಲ ನನ್ನ ಭೆಟ್ಟಿ ಯಾದಾಗ, ಕಾವ್ಯ ವಿಮರ್ಶೆಯ ಮೇಲೆ ನಾನು ಬರೆದ ಲೇಖನದ ಬಗ್ಗೆ ಹೊಗಳಿ ಮಾತನಾಡಿದರು. ನೋಡಿದರೆ ಆನಂದರಾಯರು ವಕೀಲರು. ಅವರಿಗೆ ಕಾವ್ಯ ಮತ್ತು ಕಾವ್ಯವಿಮರ್ಶೆಯಲ್ಲಿ ಇಷ್ಟು ಆಸಕ್ತಿ ಹೇಗೆ ಬಂದಿದೆಯೊ! ಇಂಥ ವಕೀಲರು ಇರುವುದು ತೀರಕಡಿಮೆ. ವಕೀಲರು ಸಾಹಿತ್ಯಕ್ಕಿಂತ ರಾಜಕಾರಣದಲ್ಲಿ ಭಾಗವಹಿಸುವುದು ಬಹಳ. ಸ್ನೇಹಲತಾ! ಸ್ನೇಹಲತಾ! ಸ್ನೇಹಲತಾ! ನಿನ್ನ ಹೆಸರು ಅನೇಕ ಸಲ ಬರೆದರೂ ನನಗೆ ಸಮಾಧಾನವಿಲ್ಲ. ನಿನ್ನನ್ನು ನೆನೆಯದೆ ನಾನು ನಿದ್ದೆಹೋಗುವುದು ಅಶಕ್ಯ.

೧೭-೯-೧೯..

ಈ ದಿನ ಆನಂದರಾಯರ ಮನೆಯಲ್ಲಿ ಒಂದು ವಿಶೇಷ ಸಂಗತಿ ನಡೆಯಿತು. ನಾವು ಕೋಣೆಯಲ್ಲಿ ಕುಳಿತು ಮಾತನಾಡುವಾಗ ಹೊರಗೆ ಯಾರೋ ಗುಣು-ಗುಣು ಹಾಡುವುದು ಕೇಳ ಬಂದಿತು. ಆ ಧ್ವನಿಯ ಬಗ್ಗೆ ಕೇಳಿದೆ. ಆನಂದರಾಯರು ಕೂಡಲೇ ಅವಳನ್ನು ಕರೆಯಿಸಿ ಹಾಡುಹೇಳಲು ಆಜ್ಞಾಪಿಸಿದರು. ಅವಳು ಮೊದಲು ನಾಚಿಕೊಂಡಳು. ಮಹಿಳೆಯರಿಗೆ ಇದು ಸಹಜವಾದುದು. ತರುವಾಯ ಪೇಟಿ ತೆಗೆದುಕೊ೦ಡು ಹಾಡಿದಳು. ಕಂಠ ಎಷ್ಟು ಮಧುರವಾಗಿತ್ತು! ಅದು ಅವಳು ಹಾಡಿದದು “ನನ್ನ ಹಾಡು.” ಅವಳ ಹಾಡುಗಾರಿಕೆ ನನ್ನ ಮನಸ್ಸಿಗೆ ಅತ್ಯಂತ ಸುಖದಾಯಕವಿತ್ತು. ಇನ್ನು ಬೇಸರಿಕೆ ಬಂದಾಗ ಆ ಹಾಡುಗಳನ್ನು ಕೇಳಬೇಕು.

೨೨-೯-೧೯..

ನಾಲ್ಕು ದಿನ ದಿನಚರಿ ಬರೆಯುವದಾಗಲಿಲ್ಲ ಪರ‌ಊರಿನಲ್ಲಿರುವಾಗ ಹೇಗೆ ಬರೆಯುವದಾಗುವದು ? ನಾನು ಮಾಡಿದ ಭಾಷಣ ಎಲ್ಲರಿಗೂ ಮನಸ್ಸಿಗೆ ಬಂದಂತೆ ತೋರಿತು. “ಜೀವನದಲ್ಲಿ ಸ್ತ್ರೀಯರ ಸ್ಥಿತಿಗತಿ”ಗಳ ಬಗ್ಗೆ ಹೇಳುವಾಗ, ಮುಖ್ಯತಃ ಸ್ತ್ರೀಯರು ಬಹಳ ತಲ್ಲೀನರಾಗಿ ಕೇಳುತ್ತಿದ್ದರು. ವಿಷಯವೂ ಹಾಗೆಯೇ ಇತ್ತು. ಅಹುದು-ಪತಿ ಸತ್ತರೆ ಸ್ತ್ರೀಯರ ಗೋಳು ಹೇಳತೀರದಷ್ಟಿದೆ. ಸಮಾಜದಲ್ಲಿ ಅವರಿಗೆ ಎಂಥ ನಿಂದ್ಯರಸ್ಥಾನ! ಅವರು ಸುಶೋಭಿತರಾಗಿ, ಮತ್ತೊಮ್ಮೆ ಮದುವೆಯಾಗಿ ಸುಖವಾಗಿ ಕಾಲಕಳೆಯಲಾರರು ! ಅದೇ ಗಂಡಸರ ಸ್ಥಿತಿ ಹಾಗಲ್ಲ. ಅವರಿಗೆ ಮುಕ್ತದ್ವಾರ. ನನ್ನ ಈ ಮಾತು ಕೇಳಿ ಸ್ತ್ರೀಯರು ಸುಮ್ಮನೆ ಇದ್ದರು. ಒಮ್ಮೊಮ್ಮೆ ಅನಿಸುತ್ತದೆ- ಸ್ತ್ರೀಯರು ವಿಚಾರವನ್ನೇ ಮಾಡುವುದಿಲ್ಲವೋ ಏನೊ!

ಚಿಕ್ಕ ಊರಿನಲ್ಲಿ ಸಹ ಅದೆಷ್ಟು ಜನ ಸ್ತ್ರೀಯರು ಅಲ್ಲಿ ನೆರೆದಿದ್ದರು! ಬಹುತರ ಗುಡಿಯಲ್ಲಿ ನನ್ನ ಭಾಷಣವಿದ್ದಿತೆಂದೇ ಹಾಗೆ ಇರಬಹುದು, ಇರಲಿ.

ಭಾಷಣ ಮುಗಿದ ಮೇಲೆ ಗುಂಡಕ್ಕ ಭೆಟ್ಟಿಯಾಗಿದ್ದಳು. ನನ್ನ ದುಃಖದ ಸುದ್ಧಿ ಕೇಳಿ ಬಹಳ ಮರುಗಿದರು. ಕಣ್ಣಲ್ಲಿ ನೀರು ತಂದಳು ಸ್ನೇಹಲತೆಯ ಸಂಗಡ ಮದುವೆಯಾಗುವಾಗ ಅದು ಪ್ರೀತಿಯ ವಿವಾಹವೆಂದು, ಇದೇ ಗುಂಡಕ್ಕ ಎಷ್ಟು ವಿರೋಧಿಸಿದ್ದಳು! ಈಗ ಅವಳೇ ಅಂಥವಳೇ ಕಣ್ಣೀರನ್ನು ಸುರಿಸಿದಳು. ಸಂಪ್ರದಾಯದ ಹೆಂಗಸರಲ್ಲಿ ಇದೊಂದು ದೊಡ್ಡಗುಣ ಅನಬೇಕು ಹಾಗೆ ನನಗೆ ಅನಿಸುತ್ತದೆ.

ಆ ಊರಲ್ಲಿ ನನಗೆ ಪರಿಚಿತ ಜನ ಬಹಳ. ಗೋದಕ್ಕನ ಭೆಟ್ಟಿಯೂ ಆಗಿತ್ತು. ಅವಳು ಎಲ್ಲ ಕಥೆ ಕೇಳಿಕೊ೦ಡಳು. ಹೊರಡುವಾಗ ಒಂದು ಮಾತು ಹೇಳಿದಳು. “ಮದುವೆಯ ವಿಚಾರ ಏನಾದರೂ?” ಆ ಮಾತನ್ನು ನಾನು ಒಮ್ಮೆಲೆ ತಿರಸ್ಕರಿಸಿ ಬಿಟ್ಟೆ. ಗೋದಕ್ಕ ಮತ್ತೆ ಹೇಳಿದಳು- “ಇಲ್ಲ, ಎಳೆ ಹುಡುಗ. ಸಾಯುವವರೆಗೆ ಹೀಗೇ ಇರಬೇಕೆ?” ಪಾಪ! ಗೋದಕ್ಕನಿಗೇನು ಗೊತ್ತು! ಹೆಂಗರುಳು! ಹಾಗೆ ಹೇಳಿದಳು. ಏಕಾಕಿಯಾಗಿ ಜೀವನ ಸಾಗಿಸಲು ಸಾಧ್ಯವಿಲ್ಲವೇ? ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. “ಬ್ರಹ್ಮಚರ್ಯವೇ ಜೀವನ” ಈ ಗ್ರಂಥವನ್ನು ಇಂದೇ ಓದಲು ಆರಂಭಿಸಿದ್ದೇನೆ.

೨೩-೯-೧೯..

ಇಂದೇ ಮೇಲಿಗೆ ಆನಂದರಾಯರು ಮುಂಬೈಗೆ ಹೋದರು. ನನ್ನ ಅರ್ಜಿಗಳನ್ನೆಲ್ಲ ತೆಗೆದುಕೊಂಡು ಹೋಗಿದ್ದಾರೆ. ಸರಕಾರೀ ಪ್ರಚಾರ ಪತ್ರಿಕೆಯ ಸಂಪಾದಕ ಮಂಡಲದಲ್ಲಿ ಸೇರ್ಪಡೆಯಾಗುವಂತೆ ಯತ್ನಿಸುವರಂತೆ! ಸರಕಾರೀ ನೌಕರೀ; ಮೇಲಾಗಿ ಹೆಚ್ಚಿನ ಪಗಾರ; ನನ್ನ ದೈವ ಹೇಗಿದೆಯೋ ನೋಡಬೇಕು. ಇದೆಲ್ಲ ಶೇಖಮಹಮ್ಮದನ ಲೆಖ್ಖ ಆಗಬಾರದು ಅಷ್ಟೆ.
ಏನೇ ಆದರೂ ಆನಂದರಾಯರು ನನ್ನ ಸಲುವಾಗಿ ಇಷ್ಟು ಚಿಂತಿಸುವದನ್ನು ನೋಡಿ ಅತೀವ ಹರ್ಷವಾಗುತ್ತದೆ. ಇಷ್ಟೆಲ್ಲ ಯಾರು ಮಾಡುವರು? ಸ್ನೇಹಲತೆಯ ಸಂಗಡ ಪ್ರೀತಿ ವಿವಾಹವಾಯಿತೆಂದು ನನ್ನ ಬಂಧುಬಳಗದವರೂ ನನ್ನನ್ನು ಮಾತನಾಡಿಸುವದನ್ನೇ ಬಿಟ್ಟುಬಿಟ್ಟಿದ್ದಾರೆ. ಅವಳು ಮೂರು ವರ್ಷವೇ ಇದ್ದಳು ನೂರು ವರ್ಷ ಇರಲಿಲ್ಲ. ನಮ್ಮ ಜನರೆ ಏನಾದರೂ ಮಾಟವನ್ನೇ ಮಾಡಿಸಿದರೋ ಏನೋ! ಕ್ಷಯದಿಂದ ಸಾಯಬೇಕಾದರೆ! ಇರಲಿ, ಆದುದು ಆಗಿಹೋಯಿತು. ಈಗಾದರೂ ಒಂದು ಒಳ್ಳೆಯ ಮಾತು! ಇಂಥ ಸಂದರ್ಭದಲ್ಲಿ ಆನಂದರಾಯರ ಸಹವಾಸ ಚೈತನ್ಯ ಕೊಡುತ್ತಿದೆ. ನನ್ನ ಬಗ್ಗೆ ಅವರು ಎಷ್ಟು ಕಾಳಜೀ ತೆಗೆದುಕೊಳ್ಳುತ್ತಾರೆ!

ಜೀವನವ ಕಹಿ ಗುಳಿಗೆಯನ್ನು ಒಬ್ಬನೇ ನುಂಗಬೇಕಿಲ್ಲ. ಅಲ್ಲ – ಜೀವನದ ಕಹಿಯೂ ಕಡಿಮೆಯಾಗುತ್ತದೆ. “ಚೇತರಿಸಿ ಕೊಂಡೇಳೆ, ಚೇತನದ ಚೆಲುವೆ.”

೨೬-೯-೧೯..

ಮತ್ತೆ ಹಲವು ದಿನ ಬರೆಯುವದಾಗಲಿಲ್ಲ. ನನ್ನ ದಿನಚರಿ ಬರೆಯುವ ಕೆಲಸ ಹೀಗೇಕೆ ಆಗುತ್ತಿದೆ?

ಈ ತಲೆಶೂಲಿ ಬಹಳ ತ್ರಾಸು ಕೊಡುತ್ತಿದೆ. ಆಫೀಸಿನಲ್ಲಿ ಕುಳಿತು ಕೆಲಸ ಮಾಡುವುದೇ ಆಗಲೊಲ್ಲದು. ರಾತ್ರಿ ಅಭ್ಯಾಸವೂ ಇಲ್ಲ. ನಿದ್ದೆಯೂ ಚೆನ್ನಾಗಿ ಬರವೊಲ್ಲದು- ಮೈಯೆಲ್ಲ ನೋವು! ಈ ಸಮಯದಲ್ಲಿ ಯಾರಾದರೂ “ಸಂಗಾತಿ” ಇದ್ಧರೆ……..!

ಈದಿನ ಸಂಜೆ ತಲೆಶೂಲಿ ಮತ್ತೆ ಹೆಚ್ಚಾಯಿತು, ಮುಸುಕು ಹಾಕಿ ಕೊಂಡು ಮಲಗಿದೆ. ಸ್ವಲ್ಪ ನಿದ್ದೆ ಬಂದಂತಾಯಿತು. ಏನೋ ಬಳೆಗಳ ಸಪ್ಪಳವಾದಂತಾಯಿತು. ನಾನು ಮುಸುಕು ತೆರೆಯಲೆ ಇಲ್ಲ… ಮತ್ತೆ ಬಾಗಿಲ ಸಪ್ಪಳವಾದಂತಾಯಿತು. “ಯಾರು?” ಎಂದು ಕೇಳುವಂತಾಗದೆ, ಮುಸುಕು ತೆರೆದೆ. ಬಾಗಿಲದಲ್ಲಿ ಆನಂದರಾಯರ ಮಗನಿದ್ದ! “ಚಹಾ ತಗೊಂಡ್ರೇನ್ರೀ?” ಎಂದು ಕೇಳಿದ. ಈ ಬಳೆಗಳ ಸಪ್ಪಳ ನಿಜವೋ ಸುಳ್ಳೊ!

೨೭-೯-೧೯..

ಈ ದಿನ ವಿಶ್ರಾಂತಿಗಾಗಿ ರಜೆ ಪಡೆದುಕೊಂಡೆ. ಡಾಕ್ಟರರಿಂದ ಔಷಧವನ್ನೂ ತಂದಿರುವೆ. ಹಾಸಿಗೆಯ ಮೇಲೆ ಹೊರಳಾಡಿ ಬೇಸರಿಕೆ ಬಂದಿತು. ಮಧ್ಯಾಹ್ನ ಬಾಗಿಲಲ್ಲಿ ನಿಂತುಕೊಂಡಿದ್ದೆ. ಓಣಿಯಲ್ಲಿ ಹಲವು ಹುಡುಗರು ಪಾರಿವಾಳಗಳನ್ನು ಹಾರಿಸುತ್ತಿದ್ದರು. ಇಂದು ಆಕಾಶವು ಸ್ವಚ್ಛವಿತ್ತು. ಆ ನೀಲಾಕಾಶದಲ್ಲಿ, ಆ ಸೂರ್ಯನ ತೇಜಃಪುಂಜದ ಬೆಳಕಿನಲ್ಲಿ ಪಾರಿವಾಳಗಳು ಹಾರಿಹೋಗುತ್ತಿದ್ದವು. ಚಿಕ್ಕ ಮಗುವಿನ ಹಾಗೆ ನಾನು ಅವುಗಳನ್ನೇ ನೋಡುತ್ತ ನಿಂತೆ. ನಾವೆಲ್ಲ; ಪಾರಿವಾಳಗಳು. ಪ್ರೀತಿಯಿಂದ ಆಟವಾಡಿ ತಮ್ಮ ಗೂಡಿಗೇ ತಿರುಗಿ ಬರುವಂತೆ, ನಾವೂ ದೇವರ ಕಡೆಗೆ ಬರುತ್ತೇವೆ. ಇಂಥ ತತ್ವಜ್ಞಾನದ ವಿಚಾರಗಳೂ ನನ್ನ ತಲೆಯಲ್ಲಿ ಸುಳಿದವು. ಆ ಪಾರಿವಾಳ ಹಾರಿಸುವ ಹುಡುಗ ಒದರಿದ. “ನೋಡಲೇ ನೋಡು, ಅವು ಗಂಡು-ಹೆಣ್ಣು, ಅದಕ್ಕಽ ಎಷ್ಟು ಕೂಡಿಕೊಂಡು ಮ್ಯಾಽಲ ಹಾರಿದವು.” ಪಕ್ಷಿಗಳಲ್ಲಿಯೂ ಪ್ರೇಮ ಇಷ್ಟು ಹೆಚ್ಚಾಗಿದೆ?

ನಾನು ಈ ರೀತಿಯಾಗಿ ಪಕ್ಷಿಗಳನ್ನು ನೋಡುವಾಗ ನನ್ನ ಹಿಂದೆ ಮತ್ತೊಂದು ಪಕ್ಷಿ ಇರುವ ಕಲ್ಪನೆ ನನಗೆ ಬರಲಿಲ್ಲ. ಕಿಡಕಿಯಲ್ಲಿಯ ಅವಳ ಮುಖ ಕಂಡಿತು. ಇಂದೇ ಅವಳು-ಎರಕೊಂಡಿದ್ದಳೋ ಏನೋ! ಮುಖದಲ್ಲಿ ವಿಶೇಷ ಕಳೆಯಿದ್ದಿತು. ಅವಳ ನೋಟ ನನ್ನ ಕಡೆಗೇ ಇದ್ದಿತು. ನಾನು ಮುಖ ಹೊರಳಿಸಿ ನೋಡಿದಾಗ ಒಂದು ಕ್ಷಣದಲ್ಲಿಯೆ ನನಗೆ ಇವೆಲ್ಲ ಹೊಳೆದವು.

೨೮-೯-೧೯..

ಆನಂದರಾಯರ ಸಂಗಡ ವಿಶೇಷ ಮಾತುಕತೆಗಳಾದವು. ನನ್ನ ಕೆಲಸವಾಗುವುದು ಸಂಪೂರ್ಣ ಆಶಾದಾಯಕವಿದೆಯಾಗಿ ಕಂಡುಬರುತ್ತಿದೆ. ನನ್ನ ದೈವ ತೆರಯಬಹುದೆ?

ನನ್ನ ಪ್ರಕೃತಿಯ ಬಗ್ಗೆ ಬಹಳ ಕಾಳಜೀ ತೆಗೆದುಕೊಂಡು ಕೇಳಿದರು. “ನನ್ನ ತಲೆಶೂಲೆ ಹಾಗೆ ಹೋಗುವುದಿಲ್ಲ” ಎಂದರು. ಅವರ ಮಾತಿನ ಮಥಿತಾರ್ಥ ನನಗೆ ಹೊಳೆಯಿತು. ಮುಖ ಕೆಳಗೆ ಮಾಡಿದೆ.

ನಾನು ಅವರ ಕೋಣೆಯಿಂದೆದ್ದು ಹೊರಗೆ ಬರುತ್ತಿರುವಾಗ “ಇವೊತ್ತಾದರೂ ಕೇಳಿದಿರಾ?” ಎಂದು ಹೆಂಗಸರು ಅವರನ್ನು ಒಳಗೆ ಕರೆದು ಕೇಳಿದರು. ಅದು ನನ್ನ ಬಗ್ಗೆಯೇ ಇರಬೇಕೆಂದು ನನಗೆ ನಿಶ್ಚಿತವೆನಿಸಿತು.

ಈ ಬಲೆಯಲ್ಲಿ ನಾನು ಬೀಳಲಿಕ್ಕಿಲ್ಲವೆಂದು ನನಗೆ ಅನಿಸುತ್ತದೆ. ಈಗಂತೂ ಈ ಕೋಣೆ ಬಿಡಲು ಸಾಧ್ಯವಿಲ್ಲ. ಬೇಗ ಮುಂಬೈಗೆ ಹೋಗುವುದಾಗಬಹುದು. ಆ ಮೇಲೆ ಈ ಪ್ರಶ್ನೆಯೆ ಉದ್ಭವಿಸುವುದಿಲ್ಲವಲ್ಲ?

೨೯-೯-೧೯..

ಇಂದು ನಮ್ಮ ಆಫೀಸದಲ್ಲಿ ವಿಶೇಷ ಚರ್ಚೆ ನನ್ನ ಬಗ್ಗೆ ನಡೆಯಿತು. ಇದಕ್ಕೆ ಕಾರಣ ಜಾಹೀರಾತು. ಒಬ್ಬ ಮನುಷ್ಯ ಒಂದು ಪ್ರಕಟಣೆಯನ್ನು ಜಾಹೀರಾತಿಗಾಗಿ ಕಳುಹಿದ್ದ. ಅವನಿಗೆ ಎರಡು ಹುಡುಗರು; ಮೊದಲನೆಯ ಹೆಂಡತಿ ಸತ್ತಿದ್ದಾಳೆ; ಅವನಿಗೆ ಲಗ್ನವಾಗುವ ಆಶೆಯಿದೆಯಂತೆ ಅದಕ್ಕಾಗಿ ಯೋಗ್ಯ ವಧು ಬೇಕೆಂದು ಪ್ರಕಟಣೆ ಕೊಟ್ಟಿದ್ದನು. ಇದರ ಎಳೆಯನ್ನು ಹಿಡಿದು ನನ್ನ ಮಿತ್ರರು ನನಗೆ ಚೇಷ್ಟೆಮಾಡಿದರು. “ನನಗಂತೂ ಮಕ್ಕಳಿಲ್ಲ. ಏಕೆ ಲಗ್ನವಾಗಬಾರದು?” ಎಂದು ಕೇಳಿದರು. ಬೇರೆ ಬೇರೆ ಹೆಣ್ಣುಗಳ ವರ್ಣನೆಮಾಡಿ, ಅವುಗಳನ್ನು ತಂದುಕೊಡುವದಾಗಿ ಚೇಷ್ಟೆಯಿಂದ ಹೇಳಿದರು. ಇವರ ಮುಂದೆ ನಾನೇನು ಮಾಡಬೇಕು!

೩೦-೯-೧೯..

ಆನಂದರಾಯರೂ ಅವರ ಮಗಳೂ ಕೂಡಿ ತಿರುಗಾಡಲು ಹೊರಟಿದ್ದರು. ನನ್ನನ್ನು ಕರೆದರು. ಒಪ್ಪಿಕೊಳ್ಳಬೇಕಾಯಿತು.

ಒಮ್ಮೆ ಮದುವೆಯಾದ ಮೇಲೆ ಹೆಂಗಸರ ಎದುರು ನಿರ್ಭಿಡೆಯಿಂದ ಮಾತನಾಡಲು ಅನುಕೂಲ. ಏನೂ ಸಂಕೊಂಚವೆನಿಸುವದಿಲ್ಲ. ನನಗೂ ಒಮ್ಮೆ ಮದುವೆಯಾಗಿದೆ ಒಬ್ಬ ಹಿರಿಯನಂತೆಯೇ ಎಲ್ಲವನ್ನೂ ಮಾತ ನಾಡಿದೆ. ಹುಡುಗೆಯೂ ದಿಟ್ಟಸ್ವಭಾವದವಳು. ನಾವೆಲ್ಲರೂ ಹೊರಟಾಗ ನಮ್ಮ ಮಾತುಗಳಲ್ಲಿ ತಾನೂ ದನಿಗೂಡಿಸುವಳು. ಅವಳ ಧ್ವನಿ ಮಧುರವಾಗಿದೆ. ಈ ದಿನ ರಾತ್ರಿ ಊಟವಾದ ಮೇಲೆ ಹಾಡುತ್ತಿದ್ದಳು. ಗಂಧರ್ವ ಲೋಕದಿಂದ ಗಾನದ ತೆರೆಗಳು ಬಂದಂತೆ ಭಾಸವಾಯಿತು.

ನನ್ನ ಮನಸ್ಸು ಹೀಗೇಕೆ? ಅವಳದೇ ಚಿತ್ರ ನನ್ನ ಕಣ್ಣಮುಂದೆ ಏಕೆ? ಛೀ ಮುಸುಕ ಹಾಕಿಕೊಂಡು ಮಲಗಿಬಿಡೋಣ.

೧-೧೦-೧೯….

ಇಂದು ಒಂದು ಅತ್ಯಾನಂದದ ಸಂಗತಿ! ಆನಂದರಾಯರ ಪ್ರಯತ್ನದಿಂದ ಫಲಿಸಿದೆ. ಇನ್ನು ಮುಂಬೈಗೆ ಹೋಗಬೇಕು. ಆದರೆ ಅಲ್ಲಿ ಇರುವ ವ್ಯವಸ್ಥೆ ಹೇಗೆ? ಇದರ ಬಗ್ಗೆಯೇ ಆನಂದರಾಯರು ವಿಚಾರ ತಿಳಿಸುವದಾಗಿ ಹೇಳಿದ್ದಾರೆ.

ಇನ್ನು ನನ್ನ ಲಗ್ನದ ವಿಚಾರ ಏನೂ ಇಲ್ಲವೆಂದು ಭಾವಿಸಿದ್ದೆ. ಆದರೆ ಆನಂದರಾಯರು ಸ್ಪಷ್ಟವಾಗಿ ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಬಿಟ್ಟಿದ್ದಾರೆ. ಏನು ಮಾಡಬೇಕು ತಿಳಿಯದು. ಈಗಂತೂ ನಾನು ಅವರ ಮುಂದೆ ಏನೂ ಉತ್ತರಕೊಟ್ಟಿಲ್ಲ. ಸ್ನೇಹಲತೆಗೆ ವಚನಕೊಟ್ಟಿದ್ದೇನೆ. ಅದನ್ನು ಮುರಿಯುವದೆಂತು? ಇತ್ತಕಡೆ ಆನಂದರಾಯರ ಮಾತನ್ನು ಮೀರುವ ಹಾಗಿಲ್ಲ. ಅವರು ಕಷ್ಟಕಾಲದಲ್ಲಿ ನನಗೆ ಧನ ಸಹಾಯ ಮಾಡಿದ್ದಾರೆ. ಬೇರೆ ರೀತಿಯಿಂದಲೂ ನೆರವಾಗಿದ್ದಾರೆ. ಏನು ಮಾಡಬೇಕು?

೨-೧೦-೧೯..

ಮನಸ್ಸಿನ ತೊಡಕು ಬಿಡಲೊಲ್ಲದು. ಮುಂಬೈಯ ಕೆಲಸ ಬಿಟ್ಟು ಬಿಡಲೇ? ಈ ಕೋಣೆಯನ್ನು ಬಿಟ್ಟುಬಿಡಲೇ ? ಇಲ್ಲಿಂದ ದೂರ ಹೋಗಿ ಬಿಡಲೆ? ಯಾರಾದರೂ ಹುಚ್ಚನೆಂದಾರು!

ಮನಸ್ಸಿಗೆ ವಿರಾಮವಾಗಲು “Twelfth Night” ಎಂಬ ನಾಟಕ ಓದಲು ಆರಂಭಿಸಿದೆ. “If music be the food of love, give me the excess of it” ಎಂಬುವೇ ಮೊದಲ ವಾಕ್ಯಗಳು. ಈ ಮಾತುಗಳು, ಅವಳ ಚಿತ್ರವನ್ನು ನನ್ನ ಕಣ್ಣೆದುರು ನಿಲ್ಲಿಸಿದವು. ಅವಳು ನನ್ನ ಕವನಗಳನ್ನು ಹಾಡಬೇಕು. ಅವುಗಳನ್ನು ಕೇಳಬೇಕು. ಹೀಗೇ ಹೀಗೆಯೇ ಇರಬೇಕು. ಅಂದರೆ ಎಂಥ ಸುಖಮಯ ಜೀವನ!

ಹಾಂ! ಏನು ಬರೆಯುತ್ತಿದ್ದೇನೆ ನಾನು? ಇದನ್ನು ಯಾರಾದರೂ ನೋಡಿದರೆ? ಛೇ, ದಿನಚರಿಯಲ್ಲಿ ಎಲ್ಲವನ್ನು ಬರೆದುಬಿಡುವೆ.

೩-೧೦-೧೯..

ಆಫೀಸಿನಲ್ಲಿ ಈಗ ನನಗೆ ವಾರ ಪತ್ರಿಕೆಯ ಕೆಲಸ ಬಿದ್ದಿದೆ. ಅದರಲ್ಲಿಯೂ “ಸಿನಿಮಾ ಪುಟ” ನಾನು ಸಂಪಾದಿಸಿ ಕೊಡಬೇಕು. ಏನು, ಅದರಲ್ಲಿ ಪ್ರೇಮದ ಚಿತ್ರಗಳು ಎಷ್ಟು ಇವೆ? ಪ್ರೇಮಕ್ಕೆ ಜಗತ್ತಿನಲ್ಲಿ ಬಹಳ ಮಹತ್ವವಿದೆ. ಆ ಎಲ್ಲ ಚಿತ್ರಗಳನ್ನು ನೋಡುತ್ತ ಚಿರಕಾಲ ಕಳೆದೆ.

ನಿರಾಶ್ರಿತರು ಈ ಊರಿಗೆ ಬಂದಿದ್ದಾರೆ. ಅವರನ್ನು ಸಂದರ್ಶಿಸಿ ಅವರ ಜೀವನದ ಬಗ್ಗೆ ಒಂದು ಲೇಖನ ಬರೆಯಬೇಕಿತ್ತು. ಅವರ ದುಃಖದ ಕತೆಗಳನ್ನು ಕೇಳಿ ಹೃದಯ ಒಡೆದು ಹೋಗುತ್ತದೆ. ಎಲ್ಲವನ್ನೂ ಕಳೆದು ಕೊಂಡು, ಈಗ ಎಲ್ಲಿಯೋ ಅಪರಿಚಿತ ಜಗತ್ತಿನಲ್ಲಿ ವಾಸಮಾಡಬೇಕಾಗಿದೆ. ಒಂದು ಮನೆತನದವರು ಹೇಳಿದ ಮಾತುಗಳು ನನ್ನ ಮನಸ್ಸನ್ನು ಬಹಳ ಆಕರ್ಷಿಸಿದವು. ಏನೇ ತ್ರಾಸವಾದರೂ ಗಂಡ-ಹೆಂಡಿರು ಮತ್ತು ಮಕ್ಕಳು ಕೂಡಿಕೊಂಡು ಸುಖವಾಗಿ ಬಾಳಲು ಬರುವದಂತೆ!!

ಈ ದಿನ ಥಾಮಸ್ ಹಾರ್ಡಿ ಕವಿಯು ಬರೆದ “Yonder a maid and her wight come whispering by; War annals will cloud into night ere their story die” ವಾಕ್ಯಗಳು ಬಹಳ ನೆನಪಾಗುತ್ತವೆ. ಮಾನವ ಪ್ರಣಯ ನಿರಂತರ; ನಿತ್ಯ ನೂತನ.

೪-೧೦-೧೯..

ಮುಂಬಯಿಯಲ್ಲಿ ನನಗೆ ವಸತಿಯ ಏರ್ಪಾಡೂ ಆಯಿತು. ಇನ್ನು ನಾನು ಇಲ್ಲಿಯ ಕೆಲಸ ಬಿಡುವುದರ ಬಗ್ಗೆ ಆಫೀಸಿನಲ್ಲಿ ಹೇಳಬೇಕು. ಬೇಗ ಮುಂಬಯಿಯಲ್ಲಿ ಹೊಸ ಕೆಲಸ ಸ್ವೀಕರಿಸಲು ಹೋಗಬೇಕು.

ಮುಂಬೈಗೆ ಹೋಗುವ ಮೊದಲು ಲಗ್ನವಾಗಿಯೆ ಹೋಗಬೇಕೆಂದು ಅನಂದರಾಯರು ಹೇಳುತ್ತಿದ್ದಾರೆ. ಲಗ್ನದ ಬಗ್ಗೆ ತಮ್ಮ ಜುಲುಮೆ ಇಲ್ಲವೆಂದೂ, ಮನಸ್ಸಿದ್ದರೆ ಮಾಡಿಕೊಳ್ಳಬೇಕೆಂದೂ ಅನ್ನುತ್ತಾರೆ. ಅವರು ಹೀಗೆ ಅಂದರೂ ನಾನು ಸುಮ್ಮನಿರಲು ಹೇಗಾಗುತ್ತದೆ? ಬೇಗ ನಿರ್ಧರಿಸಬೇಕು. ಈ ದಿನ ಅವಳೇ- ಅವಳೆ ಅಂದರೆ ಸರಳಾ- (ಹೆಸರು ಬರೆಯಲು ಏಕೆ ಸಂಶಯ!) ಬಂದು ಚಹಕೊಟ್ಟು ಹೋದಳು.

ಮತ್ತೆ ಅವಳ ಮಾತು! ಅವಳ ನಡಿಗೆ! ಅವಳ ಮುಖ! ಮನಸ್ಸು ಎಷ್ಟು ಬದಲಾಗುತ್ತದೆಯಲ್ಲಾ!!!

ಸ್ನೇಹಲತಾ, ನೀನೇ ನನಗೆ ಮಾರ್ಗವನ್ನು ತೋರಿಸು. ನಿನಗೆ ಶರಣು ಬಂದಿರುವೆ. ಒಬ್ಬನೇ ಬಹಳ ದೂರ ತಿರುಗಾಡಿ ಬಂದೆ! ಆದರೂ ವಿಚಾರ ಬಗೆಹರಿಯಲಿಲ್ಲ.

೫-೧೦-೧೯..

ದಾರಿಯಲ್ಲಿ ಊರಲ್ಲಿ ನನ್ನ ಮಿತ್ರ ದೇ… ಅವರು ಭೆಟ್ಟಿಯಾದರು. ಅವನ ದೈವ ಎಂತಹದೋ! ಲಗ್ನವಾಗಿ ಒಂದು ವರ್ಷದಲ್ಲೇ ಹೆಂಡತಿಯನ್ನು ಕಳೆದುಕೊಂಡಿದ್ದಾನೆ! ಹೀಗೆ ಎರಡು ಸಲವಾಗಿದೆ! ತನ್ನ ದುಃಖವನ್ನು ಕಡಿಮೆ ಮಾಡಿಕೊಳ್ಳಲು ಈಗ ಪ್ರತಿನಿತ್ಯ ಸಂಜೆ ಒಂದೆಡೆಯ ಹೋಗಿ ಕುಳಿತುಕೊಳ್ಳುತ್ತಾನಂತೆ. ಅಲ್ಲಿ ಸಂಗೀತದ ಏರ್ಪಾಡು ಇದೆ. ಒಮ್ಮೊಮ್ಮೆ ರಾತ್ರಿ ೧೦ರ ವರೆಗೂ ಅಲ್ಲಿ ಇರುತ್ತಾನಂತೆ! ನನಗೆ ಸಂಶಯ ಬಂದಿತು. ಆಗ ಅವನೆ ನಕ್ಕು ಹೇಳಿದ. “ಹಾಗೇನೂ ತಿಳಿದುಕೊಳ್ಳಬೇಡ. ಅದು ನನ್ನ ಮಿತ್ರನ ಮನೆ, ಹಾಡುವವನೂ ಅವನೆ. ಆದರೆ ಸಿತಾರಾ ಬಾರಿಸುವವಳು ಅವನ ಮಗಳು. ಎಷ್ಟು ರಮ್ಯ ಬಾರಿಸುವವಳು! ನೋಡು, ಲಗ್ನ ವಾದರೆ ಇಂಥ ಹುಡುಗೆಯರನ್ನೇ ಲಗ್ನವಾಬೇಕು. ಜೀವನದಲ್ಲಿ ಸುಖ ಇದೆ” ಎಂದ. ಸುಖ ಎಲ್ಲಿ ಇದೆ? ದಾರಿಗಳು ಅನೇಕವಿವೆ. ಆದರೆ ಕೈಗಂಬ ಕಾಣಿಸವೊಲ್ಲದು! ಸ್ನೇಹಲತಾ ಉತ್ತರ ಹೇಳು.

೭-೧೦-೧೯..

ನನ್ನ ಮನಸ್ಸಿನ ಗೊಂದಲದಲ್ಲಿ ಏನೂ ಬರೆಯಲಾಗಲಿಲ್ಲ. ಸ್ನೇಹಲತಾ, ನಿನ್ನ ರೂಪ “ಸರಳೆ”ಯಲ್ಲಿದೆ ಎಂದು ನನಗೆ ಎನಿಸುತ್ತಿದೆ. ಇದಕ್ಕೆ ನಿನ್ನ ಒಪ್ಪಿಗೆ ಇದೆಯೆ???

೮-೧೦-೧೯..

ಒಪ್ಪಿಕೊಂಡಿದ್ದೇನೆ. (೧) ಮುಂಬೈಗೆ ಹೋಗುವುದು. (೨) ಆನಂದರಾಯರ ಮಾತು ಕೇಳುವುದು. ಆನಂದರಾಯರ ಮಾತಿನ ವಿರುದ್ಧ ಹೋಗುವುದು ಸಾಧ್ಯವೇ ಇಲ್ಲ. ಅಲ್ಲ, ಪ್ರೀತಿಯೆ ಹೀಗೆ ಇದೆಯೋ ಯಾರಿಗೂ ಹೇಳಲು ಬರುವುದಿಲ್ಲ.

೧೦-೧೦-೧೯….

ಆನಂದರಾಯರಿಗೆ ವಿಜೃಂಭಣೆಯಿಂದ ಮದುವೆ ಮಾಡಬಾರದೆಂದು ಹೇಳಿರುವೆ. ಎಲ್ಲಿಯಾದರೂ ಗುಡಿಯಲ್ಲಿ ಮಂಗಲಕಾರ್ಯ ತೀರಿಸಿಕೊಂಡು ಹೋದರಾಯಿತು. ಅವರೂ ಒಪ್ಪುವರೆಂದು ನಂಬಿರುವೆ.

೧೫-೧೦-೧೯….

ಎಲ್ಲಕಡೆಗೂ ಬೇರೆ ಬೇರೆ ಉತ್ಸಾಹ ಕಂಡು ಬರುತ್ತಿದೆ. ಮುಂಬೈಗೆ ಬಂದು ಕೆಲಸಕ್ಕೆ ಹಾಜರಾಗಿದ್ದೇನೆ. ಮತ್ತೆ ಮದಿವೆಯ ಕಾರ್ಯಕ್ಕೆ ಊರಿಗೆ ಹೋಗಬೇಕು!

ನಾನು ಬೇಡವೆಂದು ಹೇಳಿದ್ದೆ. ಆದರೆ “ನವೋದಯ” ಪತ್ರಿಕೆಯಲ್ಲಿ ಇದೇನು? ಭಾವಚಿತ್ರಗಳು ಬಂದಿವೆ. ಮದುವೆಯ ಆಮಂತ್ರಣ ಎಲ್ಲರಿಗೂ ಹೋಗಿದೆ.

ಭಾವಚಿತ್ರಗಳಿಗೆ ಸುಂದರವಾದ ಬಾರ್ಡರ ಇದೆ. ೧೪-೧೦-೧೯.. ಈ ದಿನಾ೦ಕದ “ನವೋದಯ” ಪತ್ರಿಕೆ ತೆಗೆದಿಡಬೇಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಚಾರ
Next post ಪೆದ್ದು

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…