ಚಂದ್ರನು ಗಗನಾಂಗಣದದಲ್ಲ ಮೆಲ್ಲಮೆಲ್ಲನೆ ಸ೦ಚರಿಸುತ್ತಿದ್ದನು; ಒಮ್ಮೆ ಸಾ೦ದ್ರವಾಗಿದ್ದ ಮೋಡಗಳ ಮರೆಯಲ್ಲಿ ಹುದುಗಿ, ಒಮ್ಮೆ ಮುಗಿಲ್ದೆರೆಯನ್ನು ತೆರೆದು, ತನ್ನ ಮುಖವನ್ನು ತೋರಿಸುತ್ತ ಸ೦ಚರಿಸುತ್ತಿದ್ದನು. ಸ್ನಿಗ್ಧವಾದ ಚಂದ್ರಿಕೆಯು ಡಿಲ್ಲಿಯ ಪುರಾತನ ಕೋಟೆಯ ಹಾಳುಕೊ೦ಪೆಯ ಮೇಲೆ ಬಿದ್ದು ನಗುತಲಿತ್ತು; ನವೀನದುರ್ಗದ ಪ್ರಾಕಾರಗಳು ಶ್ವೇತಶಿಲೆಯಿ೦ದ ನಿರ್ಮಿತವಾದಂ೦ತೆ ಕಂಗೊಳಿಸುತ್ತಲಿದ್ದುವು. ನಗರೋಪಕಂಠದಲ್ಲಿದ್ದ ರಾಜಪುತ್ರರ ಮಂದಿರಗಳೂ ಮನಸಬ್ದಾರರ ಮಹಲುಗಳೂ ಇನ್ನೂ ಶುಭ್ರವಾಗಿ ರಂಜಿಸುತ್ತಲಿದ್ದುವು. ಸಮೀಪದಲ್ಲಿ ಯಮುನಾನದಿಯು ಮಂಜುಘೋಷಿಣಿಯಾಗಿ ಪ್ರವಹಿಸುತ್ತಲಿತ್ತು. ತರಂಗ ಕಲ್ಲೋಲದಿಂದ ನದಿಯಲ್ಲಿ ಚಂದ್ರನು ಸಹಸ್ರಬಿಂಬನಾಗಿ ಬೆಳಗುತ್ತಿದ್ದನು. ಒಂದೆರಡು ದೋಣಿಗಳು ನದಿಯ ಮೇಲೆ ಕ್ರೀಡಿಸುತ್ತಲಿದ್ದುವು. ನದಿಯ ದಡದಲ್ಲಿ ಮನುಷ್ಯ ಸಂಚಾರವಿರಲಿಲ್ಲ. ತರುಣನೊಬ್ಬನು ನದಿಯ ತೀರವನ್ನು ಬಿಟ್ಟು ರಾಜಮಾರ್ಗವಾಗಿ ಹೋಗುತ್ತಿದ್ದನು. ತರುಣನು ಒಮ್ಮೆ ಮೆಲ್ಲಮೆಲ್ಲನೆ ಕಾಲಿಡುತ್ತ, ಒಮ್ಮೆ ಬೇಗ ಬೇಗನೆ ನಡೆಯುತ್ತಿದ್ದನು. ಮಂದವಾದ ಯುಮುನಾಜಲದಲ್ಲಿ ಪ್ರತಿಬಿಂಬಿತವಾದ ಚಂದ್ರನ ಸೌಂದರ್ಯವನ್ನು ವಿನಂದಿಸುವುದಕ್ಕೆ ನಿಲ್ಲದೆ, ಯುವಕನು ರಾಜಮಾರ್ಗವಾಗಿ ಹೋಗುತ್ತಿದ್ದನು. ಅಲ್ಲಲ್ಲಿ ಮನೆಗಳ ಮಹಡಿಗಳನ್ನು ನೋಡುತ್ತ ಮುಂದರಿಯುತ್ತಿದ್ದನು. ತರುಣನು ಯಾರೆಂದು ಸ್ಪಷ್ಟವಾಗಿ ತೋರುತ್ತಿರಲಿಲ್ಲ. ಆಕಾರದಲ್ಲಿ ಕುಳ್ಳನು, ಅಜಾನುಭಾಹುವು; ದೇಹದಲ್ಲಿ ಬಲಾಡ್ಯನು; ದೃಢಕಾಯನು; ಅವನ ನಡಿಗೆಯು ರಾಜಗಮನದಂತಿರಲಿಲ್ಲ. ಹೆಜ್ಜೆಯನ್ನು ದೂರವಿಡುತ್ತ ಯುವಕನು ರಾಜಮಾರ್ಗದ ಕೊನೆಯ ತನಕ ಏಕಾಕಿಯಾಗಿ ಹೋದನು. ಹಠಾತ್ತಾಗಿ ಒಂದು ನಿಮಿಷ ಮಾರ್ಗದ ಮೇಲೆ ತಳುವಿದನು. ಚಂದ್ರನು ಅಸ್ತಮಿಸುವಂತಿದ್ದನು. ಎಲ್ಲಿಂದಲೋ ಮಧುರವಾದ ಸ್ವರವು ವಾಯುತರಂಗದಲ್ಲಿ ತೇಲಿಬರುತ್ತಲಿತ್ತು. ಸ್ವರವು ಎಲ್ಲಿಂದ ಬರುವುದೆಂದು ನೋಡುವುದಕ್ಕೆ ತರುಣನು ಕುತೂಹಲಚಿತ್ತನಾಗಿ ಹಿಂದುಮುಂದು ನೋಡಿದನು. ಒಡನೆ ಒಂದು ಮಂದಿರದ ಉಪ್ಪರಿಗೆಯಿಂದ ಸ್ವರವು ಬೀಸುತ್ತಿರುವುದೆಂದು ಬೋಧೆಯಾಗಿ, ಯುವಕನು ಮಂದಿರದ ಕೆಳಗೆ ಬಂದು ನಿಂತನು. ಹೃದಯಂಗಮವಾದ ಗೀತಸ್ವರವು ಫಕ್ಕನೆ ಸ್ತಬ್ಧವಾಯಿತು. ಅದ್ವಗನು ಮಾರ್ಗದ ಮೇಲೆ ನಿಲ್ಲುವುದು ಸರಿಯಲ್ಲವೆಂದು ಬಗೆದು ಮಹಲಿನ ಬಲಗಡೆಯಲ್ಲಿ ಬೆಳೆದಿದ್ದ ಮರದ ಹಿಂದುಗಡೆಯಲ್ಲಿ ಸರಿದು ನಿಂತನು. ಮರದ ಟೊಂಗೆಯೊಂದು ಉಪ್ಪರಿಗೆಯ ಗೋಡೆಯವರೆಗೆ ವಿಸ್ತರಿಸಿತ್ತು. ಹಾಡು ಉಪ್ಪರಿಗೆಯಿಂದ ಪುನಃ ಕೇಳಿಸಿತು.
ಇಚ್ಛಿತ ವರನನು ತುಚ್ಛಕರಿಸುತ
ಮ್ಲೇಚ್ಛನ ವರಿಸೆಂದು ಉಚ್ಚರಿಪನೆ ತಂದೆ.
ಯುವಾಪುರುಷನು ಕ್ಷುದಿತನಯನನಾಗಿ ಕಾಲಬೆರಳ ಮೇಲೆ ನಿಂತು ತನ್ನ ಕೊರಳನ್ನು ನಿಲ್ಕಿ ನೋಡಿದನು. ಯಾರ ಮುಖವೂ ಅವನ ದೃಷ್ಟಿಪಥದಲ್ಲಿ ತೋರಲಿಲ್ಲವೆಂದು ಚಿಂತಿಸಿ, ಯುವಕನು ಪಕ್ಕದಲ್ಲಿದ್ದ ಮರವನ್ನು ಹತ್ತಿದನು. ಗೀತದ ಮುಂದಿನ ಮಾತುಗಳು ಸರಿಯಾಗಿ ಕೇಳಿಸುತ್ತಲಿದ್ದುವು.
ಎಲ್ಲಿನ ತೊಲರೆವೆನು | ನಲ್ಲನ ಸೇರ್ವೆನು
ಕಲ್ಲಿನ ಕಾಡೊಳು | ನಿಲ್ಲದೆ ಪೋಗುವೆ ||
ಯುವಕನು ಟೊಂಗೆಯನ್ನು ಹತ್ತಿ, ತೆರೆದಿದ್ದ ಕಿಟಕಿಯ ಇದಿರಾಗಿ ತನ್ನ ಮುಖವನ್ನು ಇಟ್ಟು ಇಣಕಿ ನೋಡಿದನು. ಉಪ್ಪರಿಗೆಯ ಕೊಟ್ಟಡಿಯಲ್ಲಿ ದೀಪವೊಂದು ಉರಿಯುತ್ತಲಿತ್ತು. ಅದರ ಬಳಿಯಲ್ಲಿ ಮತ್ತೊಂದು ದೀಪವು ಪ್ರಜ್ವಲಿಸುತ್ತಲಿತ್ತು; ಅನಂಗರಂಗ ಮಯವಾದ ಅಂಗನಾರತ್ನ ಪ್ರದೀಪ.
ಯುವಕನು ಸದ್ದಾಗದಂತೆ ಮರದ ರೆಂಬೆಯಲ್ಲಿ ಅವಿತುಕೊಂಡು ಕಣ್ಣಿಟ್ಟು ನೋಡಿದನು. ರಮಣಿಯ ಹಾಡು ತೀರಿತು. ಕಾಮಿನಿಯು ಚಿಂತಾಕುಲಿತಳಾದಂತೆ ಪರ್ಯಂಕದ ಮೇಲೆ ಒರಗಿದ್ದಳು. ಅವಳ ಅವಕುಂಠ ರಹಿತವಾದ ಮುಖವು ಬಿಳ್ಪೇರಿ ಹೋಗಿತ್ತು. ನೆನೆದ ಕನ್ನಡಿಯಂತೆ ತೋರುವ ಕಪೋಲವೊಂದು ಕೈದಳವನ್ನು ಆಧರಿಸಿತ್ತು. ಸ್ವಪ್ನ ಸಾಮ್ರಾಜ್ಯದ ಸುಖವನ್ನು ಅನುಭವಿಸುವಂತೆ ಅಧರಗಳಲ್ಲಿ ಮಂದಸ್ಮಿತವು ಅಡಗಿತ್ತು. ಹೊಳೆಹೊಳೆವ ಸೀರೆಯ ಅಂಚಲವು ವಕ್ಷೋಭಾಗದಿಂದ ಮೆಲ್ಲಮೆಲ್ಲನೆ ಓಸರಿಸುತ್ತಲಿತ್ತು. ಅವಳ ಅರ್ಧೋನ್ಮೀಲಿತವಾದ ನಯನಗಳ ಕಾಂತಿಯನ್ನು ಕಳುವುದಕ್ಕೆ ದೀಪದ ಕುಡಿಯು ಸಡಗರಿಸುತ್ತಲಿತ್ತು. ದೀಪದ ಅಡಿಯಲ್ಲಿ ಪುಸ್ತಕವೊಂದು ಅರೆತೆರೆದಿತ್ತು. ರಮಣಿಯ ರೂಪಲಾವಣ್ಯಗಳೇನೂ ಅಷ್ಟು ಅಸಾಧಾರಣವಾಗಿರಲಿಲ್ಲ. ಆದರೆ ಅವಳ ಮುಖದಲ್ಲಿಯೂ ಮೈಯಲ್ಲಿಯೂ ಒಂದು ಪ್ರಕಾರವಾದ ಚಿತ್ತಾಕರ್ಷಕವಾದ ಸೌಂದರ್ಯವು ಕವಿದಿತ್ತು. ಇವಳಿಗಿಂತಲೂ ರೂಪವತಿಯವರಾದ ಸ್ತ್ರೀಯರು ಎಷ್ಟೋ ನೋಡಸಿಕ್ಕುವರು. ಆದರೆ ಈ ಮುಖದಲ್ಲಿದ್ದ ಮಾಧುರ್ಯವೂ, ಮೋಹನಶಕ್ತಿಯೂ ಅವುಗಳಲ್ಲಿ ನೋಡಸಿಕ್ಕದು. ಪ್ರಥಮದೃಷ್ಟಿಗೆ ಅವಳ ಮುಖವು ಮನಸ್ಸಿನಲ್ಲಿ ಕನಿಕರವನ್ನೂ ದುಃಖವನ್ನು ಉಂಟುಮಾಡುವುದು. ಮುಖವನ್ನು ದರ್ಶಿಸಿದಷ್ಟಕ್ಕೆ ಅಂತರ್ಯದಲ್ಲಿದ್ದ ಕೋಮಲ ಭಾವವು ಪರಿಸ್ಪುಟವಾಗಿ ನೋಟಕನ ಕಣ್ಮನವನ್ನು ಸೆಳೆದುಬಿಡುವುದು. ಎಷ್ಟು ನೋಡಿದರೂ ಮನಸ್ಸು ತೃಪ್ತಿಗೊಳ್ಳದು. ಶಾಂತವಾಗದು. ಅವಳ ಪ್ರಥಮ ದರ್ಶನದಿಂದ ನೋಟಕನ ಮನಸ್ಸಿನಲ್ಲಿ ಉಂಟಾಗುವ ಸಂತೋಷವು ಪರಕ್ಷಣದಲ್ಲಿಯೇ ಅಲ್ಲಲ್ಲಿ ತೋರಿತೋರದ ವ್ಯಸನಬಿಂದುಗಳಿಂದ ಹೆಪ್ಪುಗಟ್ಟಿಹೋಗುತ್ತಲಿತ್ತು. ವೈಶಾಖಸೂರ್ಯನ ಆ ತಪದಿಂದ ಕಂದಿದ ಕುಂದಿದ ಕೋಮಲವಾದ ಬಳ್ಳಿಯೂ ದವಾನಲದ ಉಷ್ಣಸ್ಪರ್ಶದಿಂದ ಬಾಡಿಬಸವಳಿದ ಕರ್ಣಿಕಾರಪುಷ್ಪವೂ ಯಾವ ಪ್ರಕಾರದಲ್ಲಿ ವಿಷಾದ ವಿನೋದಗಳನ್ನು ಮನಸ್ಸಿನಲ್ಲಿ ಒಂದೇ ಸಲ ಉಂಟು ಮಾಡುವುವೋ ಆ ಭಾವವನ್ನೇ ಈ ಸುಂದರಿಯ ದರ್ಶನವು ಪ್ರೇಕ್ಷಕರ ಹೃದಯದಲ್ಲಿ ಉಂಟು ಮಾಡುತ್ತಲಿತ್ತು.
ಯುವಕನು ದೀಪದ ಜ್ಯೋತಿಯಿಂದ ಇನ್ನೂ ಉಜ್ವಲವಾಗಿ ತೋರುವ ಮುಖವನ್ನು ಸ್ವಲ್ಪ ಹೊತ್ತು ದೃಷ್ಟಿಸುತ್ತ ತನ್ನ ತುಟಿಯೊಳಗೆನೇ ಏನನ್ನೋ ಅನ್ನುತ್ತಿದ್ದನು. ಫಕ್ಕನೆ “ಶೈಲಿನಿ” ಎಂಬ ಮಾತು ಅವನ ಬಾಯಿಂದ ಎಚ್ಚರವಿಲ್ಲದೆ ಕೆಳಕ್ಕೆ ಬಿದ್ದಿತು. ನಿಶ್ಯಬ್ದವಾದ ಕೊಠಡಿಯೊಳಗೆ ಶೈಲಿನಿ ಎಂಬ ಪದವು ಪ್ರತಿಧ್ವನಿತವಾಯಿತು. ವೃಕ್ಷಾರೋಹಿಯು ಏನೆಂದೆನೆಂದು ಅರಿಯದೆ ಅಳುಕಿದನು. ಪುನಃ ಯುವಾಪುರುಷನು “ಶೈಲಿನಿ” ಎಂದು ಕೂಗಿ ಕರೆದನು. ಒಡನೆ ರಮಣಿಯು ಎಚ್ಚರವಾದಂತೆ ಕಣ್ಮರೆಸಿ, ತನ್ನನ್ನು ಯಾರೋ ಕೂಗಿ ಕರೆಯುವರೆಂದು ಎಣಿಸಿ ಸುತ್ತಲೂ ನೋಡಿದಳು. ಕಿಟಕಿಯ ಕಡೆಯಿಂದ ಶೈಲಿನಿ ಎಂಬ ಸ್ವರವು ಮತ್ತೊಮ್ಮೆ ಕೇಳಿಸಿತು. ಯುವತಿಯು ಸಂತೋಷಚಿತ್ತಳಾಗಿ ತನ್ನ ಸೀರೆಯ ಸೆರಗನ್ನು ಸರಿಗೊಳಿಸುತ್ತ, ಗವಾಕ್ಷದ ಕಡೆಗೆ ಹೆಜ್ಜೆಯನ್ನಿಟ್ಟಳು. ನಿದ್ರಾಭಂಗದಿಂದಲೋ ಆಯಾಸದಿಂದಲೋ ತರುಣಿಯ ಕಾಲು ತಡವರಿಸುತ್ತಲಿತ್ತು. ಅವಳು ತನ್ನ ಇದಿರಾಗಿ ಬರುವುದನ್ನು ನೋಡಿ ವೃಕ್ಷಾರೋಹಿಯು “ಶೈಲಿನಿ, ದಾರಿಗನೊಬ್ಬನು ಇರುಳೆಲ್ಲಾ….”
ಶೈಲಿನಿಯು ಕೈಸನ್ನೆ ಮಾಡುವುದನ್ನು ನೋಡಿ ಯುವಕನು ಮಾತು ಮುಂದುವರಿಸಲಿಲ್ಲ. ಅವಳು ಗವಾಕ್ಷದ ಬಳಿಗೆ ಬಂದು ಮುಖವನ್ನು ಹೊರಚಾಚಿ “ನೀನು ಇಷ್ಟು ಸಾಹಸವನ್ನು ಏಕೆ ಮಾಡಿದೆ?” ಎಂದು ಕೇಳಿದಳು.
ಯುವಕ:- “ನಿನಗೋಸ್ಕರ”
ಶೈಲಿನಿ:- “ನನಗೋಸ್ಕರ ನೀನು ಅಪಾಯಕ್ಕೆ ಗುರಿಯಾಗಬೇಕೆಂದು ನಾನು ಬಯಸುವುದಿಲ್ಲ.”
ಯುವಕ:- “ಅಪಾಯಕ್ಕೆ ಈ ಮರಾಟನು ಹೆದರುವನೇ? ನನಗೆ ಅಪಾಯ ಬರುವುದು ಯಾರಿಂದ? ನಿನ್ನ ತಂದೆಯಿಂದಲೇ.”
ಶೈಲಿನಿಯು ಮನಗುಂದಿದವಳಾಗಿ, “ಅಪಾಯವು ಯಾರಿಂದಲಾದರೂ ಬರಬಹುದು. ನಿಶೆಯಲ್ಲಿ ಈ ಎತ್ತರವಾದ ಮರವನ್ನು ನೀನು ಹೇಗೆ ಹತ್ತಿದೆ?”
ಯುವಕ:-“ಕಾಮದೇವನೇ ನನ್ನ ಬೆಂಬಲಕ್ಕೆ ಇದ್ದನು. ಅಂದು ನೀನು ಪ್ರತಾಪಗಡದಲ್ಲಿ ಅರಮನೆಯ ಗೋಡೆಯನ್ನು ಹೇಗೆ ಏರಿಬಂದೆ?”
ಶೈಲಿನಿಯು ಒಮ್ಮೆ ಮಾತಾಡಲಿಲ್ಲ. ಬಳಿಕ “ಅದು ಹೋಗಲಿ, ಈಗ ನೀನು ಬಂದುದು
ಅನುಚಿತವಾಯಿತು” ಎಂದಳು.
ಯುವಕ:-“ಹೇಗೆ ಅನುಚಿತವಾಯಿತು?”
ಶೈಲಿನಿ:-“ನನ್ನ ತಂದೆಯು ನನ್ನೊಡನೆ ಮಾತನಾಡುವುದಕ್ಕೆ ಈಗಲೇ ಇಲ್ಲಿಗೆ ಬರುತ್ತಿರುವನು. ನಿನ್ನನ್ನು ನೋಡಿಬಿಟ್ಟರೆ, ನಮ್ಮ ಅವಸ್ಥೆ ಏನಾಗುವುದೋ ಎಂದು ಭಯವಾಗುತ್ತಿದೆ.”
ಯುವಕ:-“ರಜಪೂತ ಸ್ತ್ರೀಯು ಮರಣಕ್ಕೆ ಭೀತಳಾಗುವಳೇ? ಸಖೀ ಶೈಲಿನಿ. ನಾನು ಮರಣಕ್ಕೆ ಸಿದ್ಧನಾಗಿರುವೆನು. ಆದರೆ ಸಾಯುವ ಮೊದಲು ನಿನ್ನೊಡನೆ ಎರಡು ಮಾತುಗಳನ್ನು ಕೇಳಬೇಕೆಂದಿರುವೆನು.”
ಯುವಕನ ಕಾಂಕ್ಷಿತ ಸ್ವರವನ್ನು ಕೇಳಿ ಶೈಲಿನಿಯು ಏನೋ ಯೋಚಿಸುತ್ತ ನಿಂತುಬಿಟ್ಟಳು. ತಂದೆಯು ತನ್ನನ್ನು ನೋಡಲು ಬರುವ ಸಮಯವು ಸಮೀಪಿಸಿತೆಂದು ತಿಳಿದು, ಯುವಕನೊಡನೆ ಪ್ರಣಯಸಲ್ಲಾಪಕ್ಕೆ ಸಮಯವು ಅನುಚಿತವಾಯಿತೆಂದು ಕಾತರಳಾದಳು. ತಂದೆಯು ಇದುವರೆಗೆ ತನ್ನನ್ನು ನೋಡಲು ಬಾರದೆ ಇದ್ದುದರಿಂದ, ಇನ್ನು ಮೇಲೆ ಬರಲಾರನೆಂದು ಒಮ್ಮೆ ನಿಶ್ಚಯಿಸಿ ಶೈಲಿನಿಯು ಯುವಕನನ್ನು ಒಳಕ್ಕೆ ಬರುವಂತೆ ಕೈಸನ್ನೆ ಮಾಡಿದಳು. ಒಡನೆ ಶಿರೀಷಪುಷ್ಪಸದೃಶವಾದ ತನ್ನ ಹಸ್ತವನ್ನು ಹೊರನೀಡಿದಳು. ಯುವಕನು ಪಾಣಿಗ್ರಹಣ ಮಾಡಿ ಕೃತಕೃತ್ಯನಾದನು.
ಶೈಲಿನಿಯು ಎಲ್ಲಿಯೋ ಕಿವಿಗೊಟ್ಟಂತೆ ನೋಡುತ್ತ ಅಪ್ರತಿಭಳಾಗಿ ನಿಂತುಬಿಟ್ಟಳು.
ಯುವಕ:-“ಶೈಲಿನಿ, ನಿನ್ನ ಇಚ್ಛಿತ ವರನು ಯಾರು? ನಿನ್ನ ತಂದೆಯು ಯಾರನ್ನು ತುಚ್ಛಕರಿಸುವನು? ನನ್ನನ್ನೇ?”
ಶೈಲಿನಿಯು ಏನು ಹೇಳಬೇಕೆಂದು ತಿಳಿಯಲಾರದೆ ಹೋದಳು. ಕೂಡಲೇ “ಶೈಲೀ ಶೈಲಿ” ಎಂದು ಕೆಳಗಿನಿಂದ ಯಾರೋ ಕೂಗಿ ಕರೆಯುವುದು ಕೇಳಿಸಿತು. ಶೈಲಿನಿಯು ಯುವಕನ ಕರಪಾಶದಿಂದ ಸಡಿಲಿಸುವುದಕ್ಕೆ ತವಕಗೊಂಡು, ಕೈಯನ್ನು ಹಿಂದೆ ಸೆಳೆದುಬಿಟ್ಟಳು. “ನನ್ನ ತಂದೆಯು ಈಗಲೇ ಮೇಲೆ ಬರುವನು, ಇನ್ನು ನಿಲ್ಲಬೇಡ” ಎಂದಳು. ಯುವಕನು “ತಂದೆ ಹೀನಿಸುವುದು ನನ್ನನ್ನೇ?” ಎಂದು ಪುನಃ ಕೇಳಿದನು.
ಮಹಡಿಯ ಮೆಟ್ಟಲು ಹತ್ತಿ ಯಾರೋ ಬರುವ ಸದ್ದು ಕೇಳಿಸಿತು. ಶೈಲಿನಿಯು ಯುವಕನೊಡನೆ ಮೆಲ್ಲನೆ ಏನನ್ನೂ ಹೇಳಿಬಿಟ್ಟಳು. “ನವಮಿ…ರಾತ್ರಿ…ಶಿಬಿರದ… ಬಳಿಯಲ್ಲಿ” ಎಂಬ ಮೊದಲಿನ ಶಬ್ದಗಳು ಮಾತ್ರ ಯುವಕನ ಕಿವಿಯಲ್ಲಿ ಇಳಿದವು. ಯುವಕನು ಮನಸ್ಸಿನಲ್ಲಿ ಸಂಪೂರ್ಣವಾದ ಅರ್ಥವನ್ನು ಮಾಡಿ, ವೃಕ್ಷದಿಂದ ಕೆಳಕ್ಕೆ ಇಳಿಯಲು ಸಿದ್ಧನಾದನು. ಪುನಃ ಶೈಲಿನಿಯು ಪ್ರಫುಲ್ಲಿತವಾದ ಮುಖ ಸಂದರ್ಶನವನ್ನು ಮಾಡಲೆಳಸಿ, “ನನ್ನನ್ನೇ?” ಎಂದು ಒತ್ತಿ ಕೇಳಿದನು.
ಶೈಲಿನಿಯು ಮನಸ್ಸಿನಲ್ಲಿಯೇ, “ವರಿಸುವೆನು” ಎಂದು ಅಂದುಕೊಂಡಳು. ತತ್‌ಕ್ಷಣದಲ್ಲಿ ಉಪ್ಪರಿಗೆಯ ಬಾಗಿಲನ್ನು ತೆಗೆದು ಯಾರೋ ಒಬ್ಬನು ಒಳಕ್ಕೆ ಬಂದನು. ಬಂದವನು ಶೈಲಿನಿಯ ತಂದೆ; ರಾಠೋರ್ ಸಂಸ್ಥಾನದ ರಾಜನಾದ ರಾಜಸಿಂಹನು.
ಈ ಕಥಾಕಾಲದಲ್ಲಿ ಅವರಂಗಜೇಬನು ಡಿಲ್ಲಿಯ ಸಾಮ್ರಾಟನಾಗಿದ್ದನು. ಅವರಂಗಜೇಬನ ಕಠೋರ ಶಾಸನದಿಂದ ಭಾರತವರ್ಷದಲ್ಲಿ ಸರ್ವತ್ರಭೀತಿಯೂ ಆತಂಕವು ಪಸರಿಸಿದುವು. ಅವನ ಕ್ರೂರವಾದ ಅಧಿಕಾರ ಜಝಾನಿಲದಿಂದ ಪ್ರಚಲಿತವಾದ ಭಾರತಸಾರದ ಜಲದಲ್ಲಿ ರಾಜಪುತ್ರರ ಸ್ವಾತಂತ್ರ್ಯವು ಮುಳುಗಿ ಹೋಗುತ್ತಲಿತ್ತು. ಸ್ವಾಧೀನತೆಯ ಪ್ರಧಾನಭಕ್ತನಾದ ಅಂಬರಸಂಸ್ಥಾನದ ಅಧಿಪತಿಯಾದ ಜಯಸಿಂಹನು ಡಿಲ್ಲಿಯ ಸಿಂಹಾಸನದ ಬಳಿಯಲ್ಲಿ ಬದ್ಧಹಸ್ತನಾಗಿ ನಿಲ್ಲಲು ಒಡಂಬಟ್ಟನು.
ಮಾರವಾಡದ ಯಶವಂತಸಿಂಹನಿಗೂ ರಾಠೋರದ ರಾಜಸಿಂಹನಿಗೂ ಭೇದವನ್ನು ತಂದಿಕ್ಕಿ, ಇಬ್ಬರನ್ನೂ ಅವರಂಗಜೇಬನು ತನ್ನ ಸಿಂಹಾಸನಕ್ಕೆ ಅಲಂಕಾರ ಕಲಶಗಳನ್ನಾಗಿ ಮಾಡಿದನು. ಉತ್ತರ ಹಿಂದೂಸ್ಥಾನದಲ್ಲಿ ಸಿಖ್ ಜನರು ತಮ್ಮನ್ನು ಬಂಧಿಸಿದ ಶೃಂಖಲಗಳನ್ನು ಕಳಚುವುದಕ್ಕೆ ಹುರಿದುಂಬಿಸಿ ಒಟ್ಟುಗೂಡುತ್ತಲಿದ್ದರು. ದಖ್ಖಣದಲ್ಲಿ ಸ್ವತಂತ್ರವಾಗಿದ್ದ ಗೊಲ್ಕೊಂಡ ಮತ್ತು ಬಿಜಾಪುರ ಸಂಸ್ಥಾನಗಳು ಕ್ಷೀಣವಾಗಿ ಅಸ್ತಮಿಸುವಂತಿದ್ದುವು. ಲೋಕೈಕವೀರನಾದ ಶಿವಾಜಿಯು, ಮಹಾರಾಷ್ಟ್ರ ಸಾಮಾಜ್ಯವನ್ನು ಕಟ್ಟುವುದಕ್ಕೆ ಹಿಂದುಗಳನ್ನು ಏಕತ್ರವಾಗಿ ಮಾಡಲು ಪ್ರಯತ್ನಿಸುತ್ತಿದ್ದನು. ಅವನ ಪ್ರಯತ್ನಗಳಿಂದ ಮೊಘಲ ಸಾಮ್ರಾಜ್ಯದ ಕೀಲು ಸಡಿಲಾಗುತ್ತಾ ಬಂದಿತ್ತು. ಭೂಕಂಪನದಿಂದ ಸಂಶೋಭಿತವಾದ ಸಮುದ್ರದ ಅಂತಸ್ಥಳದಿಂದ ನವೀನ ದ್ವೀಪಗಳ ಶಿರ್ಷೋದಯವಾಗುವಂತೆ, ಶಿವಾಜಿಯ ದೋರ್ದಂಡಪ್ರತಾಪದಿಂದ ಪ್ರಾಚೀನ ಹಿಂದೂ ರಾಜ್ಯಗಳ ಭಗ್ನಾವಶೇಷದ ಮೇಲಿಂದ ಮಹಾರಾಷ್ಟ್ರ ರಾಜ್ಯವು ತಲೆಯೆತ್ತುತ್ತಲಿತ್ತು. ಶೈಶವದಲ್ಲಿಯೇ ಅದರ ಗೋಣು ಮುರಿದು ಬಿಡುವುದಕ್ಕೆ ಅವರಂಗಜೇಬನು ಪೇಚಾಡಿದನು. ಅವರಂಗಜೇಬನ ಪೇಚಾಟವು ಬಯಲಾಯಿತು. ಆಪತ್ತು ವಿಪತ್ತುಗಳೇ ಶಿವಾಜಿಯ ಸಾಹಸ ಶೌರ್ಯಗಳಿಗೆ ಸಾಣೆಯ ಕಲ್ಲಾದುವು. ಕಷ್ಟ ಸಂಕಷ್ಟಗಳು ತಗಲಿದಷ್ಟಕ್ಕೆ ಮಹಾರಾಷ್ಟ್ರ ರಾಜ್ಯವು ಬಲವಾಗುತ್ತ, ಬೇರೂರುತ್ತ ಹೋಯಿತು. ಶಿವಾಜಿಯು ಮಕ್ಕಾವಿಗೆ ಹೋಗುವ ಮುಸಲ್ಮಾನ ಯಾತ್ರಿಕರನ್ನು ಸೂರೆಗೊಂಡನು. ಉರಿಯುವ ಗಡ್ಡದ ಇದಿರಿಗೆ ಹುಕ್ಕ ಹಿಡಿದಂತಾಯಿತು. ಕೋಪಾಕುಲಿತವಾದ ಅವರಂಗಜೇಬನು ‘ಪರ್ವತ ಮೂಷಕ’ವನ್ನು ಹಿಡಿಯುವುದಕ್ಕೆ ಮಹಾಸೇನೆಯೊಡನೆ ಜಯಸಿಂಹನನ್ನೂ ದಿಲೇರಿಖಾನನ್ನೂ ದಕ್ಷಿಣ ಹಿಂದುಸ್ಥಾನಕ್ಕೆ ಕಳುಹಿಸಿದನು. ಪುರಂದರದುರ್ಗದಲ್ಲಿ ಮರಾಟರಿಗೂ ಮೊಘಲರಿಗೂ ಘೋರಯುದ್ಧ ನಡೆಯಿತು. ದೀರ್ಘದರ್ಶಿಯಾದ ಶಿವಾಜಿಯು ಏನೋ ಒಂದು ವಿಶೇಷ ಕಾರಣದಿಂದ ಮೊಘಲ್ ಸಾಮ್ರಾಟನೊಡನೆ ಸಂಧಿ ಮಾಡಿಕೊಳ್ಳುವುದು ಕ್ಷೇಮಕರವೆಂದು ಎಣಿಸಿ, ಜಯಸಿಂಹನಿಗೆ ಶರಣಾಗತನಾದನು. ಈ ಸಂಧಿಯ ಪ್ರಕಾರ ಅವರಂಗಜೇಬನು ಶಿವಾಜಿಗೆ ಡಿಲ್ಲಿಗೆ ಬರಬೇಕಾಗಿ ಆಹ್ವಾನ ಪತ್ರವನ್ನು ಬರೆದನು. ಶಿವಾಜಿಯು ತನ್ನ ಆಪ್ತರನ್ನೂ ಅಧಿಕಾರಿಗಳನ್ನೂ ೧,೦೦೦ ಮಂದಿ ಮಾವಳಿಗಳನ್ನೂ ೩,೦೦೦ ಮಂದಿ ರಾವುತರನ್ನೂ ಕೂಡಿಕೊಂಡು ತನ್ನ ಜೇಷ್ಠಪುತ್ರನಾದ ಶಂಭಾಜಿಯೊಡನೆ ಮಹಾಸಂಭ್ರಮದಿಂದ ಡಿಲ್ಲಿಗೆ ಬಂದಿಳಿದಿದ್ದನು.
ಶಿವಾಜಿಯನ್ನು ಇದಿರುಗೊಳ್ಳುವುದಕ್ಕೆ ಅವರಂಗಜೇಬನು ಸ್ವತಃ ಹೋಗಲಿಲ್ಲ. ಅವನು ಜಯಸಿಂಹನ ಮಗನಾದ ರಾಮಸಿಂಹನನ್ನು ಕಳುಹಿಸಿದನೆಂದು ಇತಿಹಾಸವು ಹೇಳುವುದು. ಇದು ನಮಗೆ ತಪ್ಪಾಗಿ ತೋರುತ್ತದೆ. ಸಂಶಯಾತ್ಮಕವಾದ ಅವರಂಗಜೇಬನು ಮಹಾಯೋಧನಾದ ಜಯಸಿಂಹನು ತನ್ನ ಸಿಂಹಾಸನದ ಬಳಿಯಲ್ಲಿರುವುದು ಲೇಸಲ್ಲವೆಂದು ತಿಳಿದು, ಅವನನ್ನು ದಖ್ಖಣಕ್ಕೆ ಕಳುಹಿಸಿದ್ದನು; ಮತ್ತು ಜಯಸಿಂಹನು ತನ್ನ ಮೇಲೆ ಹಠಾತ್ತಾಗಿ ಬೀಳದಂತೆ ಅವನ ಮಗನಾದ ರಾಮಸಿಂಹನನ್ನು ಬಂಧಿಯಾಗಿ ಇಟ್ಟಿದ್ದನು. ಇಂತಹನು ತನ್ನ ಪ್ರತಿದ್ವಂದ್ವಿಯಾದ ಶಿವಾಜಿಯೊಡನೆ ಒಳಸಂಚು ನಡೆಯಿಸುವುದು ಸಂಭವನೀಯವೆಂದು ತಿಳಿದು ಸಾಮ್ರಾಟನು ಅವನ ಕೈಗೆ ವಿಶೇಷ ಅಧಿಕಾರವನ್ನು ಹಚ್ಚುತ್ತಿರಲಿಲ್ಲ; ಮಾತ್ರವಲ್ಲ, ರಾಠೋರ್ ಸಂಸ್ಥಾನಾಧಿಪತಿಯಾದ ರಾಜಸಿಂಹನು ಇಂತಹ ಕಾರ್ಯಗಳಲ್ಲಿ ತನಗೆ ಅನುಕೂಲವೆಂದು ಸಮ್ರಾಟನು ತಿಳಿಯಲು ಅನೇಕ ಕಾರಣಗಳಿದ್ದುವು. ಹಾಗೂ ರಾಜಸಿಂಹನು ತನಗೆ ಅವರಂಗಜೇಬನೇ ಆಶ್ರಯದಾತಾರನೆಂದು ನಂಬಿ, ಅವನ ಮೇಲೆ ಶ್ರದ್ಧಾಭಕ್ತಿಗಳನ್ನಿಟ್ಟಿದ್ದನು. ಹೆಚ್ಚೇಕೆ? ರಾಜಸಿಂಹನು ತನ್ನ ಮಗಳಾದ ಶೈಲಿನಿಯನ್ನು ಕಾರಣಾಂತರಗಳಿಂದ ಸಮ್ರಾಟನ ಶ್ರೀಮಂತಪುತ್ರನಾದ ಮುಆಜಮ್‌ನಿಗೆ (ಭಾವಿ ಶಹ ಅಲಮ್) ಕೊಡಲು ಉದ್ಯುಕ್ತನಾಗಿದ್ದನು. ತನ್ನನ್ನು ಇದಿರುಗೊಳ್ಳುವುದಕ್ಕೆ ಸಮ್ರಾಟನು ತಾನೇ ಬಾರದೆ ತೋರಿಸಿದ ಅನಾದರವು ಶಿವಾಜಿಗೆ ತಿಳಿಯದಿರಲಿಲ್ಲ. ಅನಾದರಭಾವಕ್ಕೆ ಪ್ರತಿಕಾರಮಾಡಲು ಅದು ಸಮಯವಲ್ಲವೆಂದು ಆತನು ಸುಮ್ಮನಿದ್ದನು.
ಶಿವಾಜಿಯು ಅವರಂಗಜೇಬನ ಸಂದರ್ಶನಕ್ಕೆ ಹೋಗಲು ನಿಶ್ಚಯಿಸಿದ ಮೊದಲಿನ ದಿವಸದ ರಾತ್ರಿಯಲ್ಲಿ ಪೂರ್ವೋಕ್ತ ಸಲ್ಲಾಪ ನಡೆಯಿತು. ರಾಜಸಿಂಹನು ಮಹಡಿಯ ಮೆಟ್ಟಲನ್ನು ಹತ್ತಿ ಶೈಲಿನಿಯ ಕೊಟ್ಟಡಿಯನ್ನು ಪ್ರವೇಶಿಸಿದನು. ರಾಜಸಿಂಹನು ಪಕ್ಕದಲ್ಲಿದ್ದ ಆಸನವನ್ನು ತೆಗೆದುಕೊಂಡನು. ಶೈಲಿನಿಯು ತಂದೆಯ ಸಮ್ಮುಖದಲ್ಲಿ ವಿನೀತಭಾವದಿಂದ ನಿಂತಳು. ಸ್ವಲ್ಪ ಹೊತ್ತು ಇಬ್ಬರೂ ಮಾತೆತ್ತಲಿಲ್ಲ. ಬಳಿಕ ರಾಜಸಿಂಹನು ಎತ್ತಿದ ಹುಬ್ಬುಗಳಿಂದ “ಮಗು, ಶೈಲಿ, ರಾಜಕಾರ್ಯದಿಂದ ನಿನ್ನೊಡನೆ ಹಲವು ದಿನಗಳಿಂದ ಮಾತನಾಡಲು ಬಿಡುವಾಗಲಿಲ್ಲ. ಪಿತೃಭಕ್ತಿಯು ನಿನ್ನ ಹೃದಯದಲ್ಲಿ ಇರುವುದಾದರೆ, ಎರಡು ಬುದ್ಧಿವಾದಗಳನ್ನು ಹೇಳಬೇಕೆಂದಿದ್ದೇನೆ” ಎಂದನು.
ಶೈಲಿನಿ:- “ಅಪ್ಪಾ, ಮಗಳು ತಂದೆಯ ಮಾತನ್ನು ಸಲ್ಲಿಸಬೇಕಾದಲ್ಲಿ ನಾನು ನಿನ್ನ ಅನುಜ್ಞೆಯನು ಮನ್ನಿಸದೆ ಇರಲಾರೆನು.”
ರಾಜಸಿಂಹನು ಮೆಲ್ಲನೆ ನಗುತ್ತ “ಪುಟ್ಟಮ್ಮಣ್ಣಿ, ನಾನು ಮುದುಕನಾದೆನು. ನನಗೆ ೬೫ ವರ್ಷ ತುಂಬಿತು. ಇನ್ನು ಹೆಚ್ಚು ಕಾಲ ಬದುಕಲಾರೆನು. ಪ್ರಬುದ್ಧಳಾದ ನೀನು ಸುಖವಂತಳಾಗಿದ್ದರೆ ನನ್ನ ಮುಪ್ಪನ್ನು ನಿಶ್ಚಿಂತೆಯಿಂದ ಕಳೆಯುವೆನು.”
ಶೈಲಿನಿ:-ಮುಪ್ಪಿನಲ್ಲಿ ನಿನಗೆ ಯಾವುದೊಂದು ಚಿಂತೆಬಾರದೆ ಇರಲಿ ಎಂದು ನಾನು ದೇವರೊಡನೆ ಪ್ರಾರ್ಥಿಸುವೆನು. ನಿನ್ನ ವೃದ್ಧಾಪ್ಯವು ಸಂತೋಷಮಯವಾಗುವಂತೆ
ಆತನು ಕರುಣಿಸಲಿ.”
ರಾಜಸಿಂಹ:-“ನೀನು ಮೊಘಲ್ ಸಾಮ್ರಾಜ್ಯದ ರಾಣಿಯಾಗುವುದರಿಂದ ಉಂಟಾಗುವಷ್ಟು ಸಂತೋಷವನ್ನು ನನಗೆ ವೃದ್ಧಾಪ್ಯದಲ್ಲಿ ಮತ್ತಾವುದೂ ಕೊಡಲಾರದು.”
ಶೈಲಿನಿ:-“ಅಪ್ಪಾ, ನನಗೆ ರಾಣಿಯಾಗುವಷ್ಟು ಬೇಸರವು ಬೇರೊಂದಿಲ್ಲವೆಂದು ನಾನು ಮೊದಲೇ ನಿನಗೆ ತಿಳಿಸಿರುವೆನಷ್ಟೆ.”
ರಾಜಸಿಂಹ:-“ನೀನು ಅಂದು ವಿಚಾರ ಮಾಡಿರಲಿಲ್ಲ. ನೀನು ವಿಚಾರ
ಮಾಡಬೇಕೆಂದು ಸಾಕಷ್ಟು ಅವಕಾಶ ಕೊಟ್ಟೆನು.”
“ವಿಚಾರ ಮಾಡಿದ್ದಷ್ಟಕ್ಕೆ ರಾಜಪತ್ನಿಯಾಗುವುದಕ್ಕಿಂತಲೂ ಬಡವನ ತೊತ್ತಾಗುವುದು ಲೇಸೆಂದು ದೃಢವಾಗುವುದು.”
ರಾಜಸಿಂಹನು ಸ್ವಲ್ಪ ಬೆಚ್ಚನಾಗಿ “ಶೈಲಿನಿ, ಸಾಮ್ರಾಜ್ಯದ ಚಕ್ರವರ್ತಿನಿ ಎನ್ನಿಸಿಕೊಳ್ಳುವುದಕ್ಕಿಂತಲೂ ಅಧಿಕವಾದ ಶ್ರೇಯಸ್ಸು ನಿನಗೆ ಮತ್ತೊಂದಿರುವುದೇ? ಚಕ್ರವರ್ತಿಯ ಮಾವನೆನ್ನಿಸಿಕೊಳ್ಳುವುದಕ್ಕಿಂತಲೂ ವಿಶೇಷವಾದ ಬಹುಮಾನ ನನಗೆ ಬೇರೊಂದುಂಟೇ? ರಾಜಕುಲದವರೆಂದು ಹೇಳಿಸಿಕೊಳ್ಳುವುದಕ್ಕಿಂತಲೂ ಅಧಿಕತರವಾದ ಕೀರ್ತಿಯೂ ಗೌರವವೂ ನಮ್ಮ ವಂಶಕ್ಕೆ ಯಾವುವು? ನೀನು ಆಡಿದ್ದೇ ನ್ಯಾಯ; ನೀನು ಮಾಡಿದ್ದೇ ಧರ್ಮ, ಹೀಗಿರಲು ಸಾಮಾನ್ಯ ಪುರುಷರಿಗೆ ನಿನ್ನ ಕೈಕೊಟ್ಟು ನಮ್ಮ ಕುಲಕ್ಕೆ ಕಲಂಕವನ್ನು ತಂದಿಕ್ಕಬೇಡ, ಕಂಡೆಯಾ?” ಎಂದನು.
ಶೈಲಿನಿಯು ಉದ್ರೇಕದಿಂದ “ಅಪ್ಪಾ, ನೀನೆನ್ನುವ ದುರ್ಗತಿಗೆ ಈ ದೇಹವು ಇಳಿಯುವ ಮೊದಲೇ ಅದರಿಂದ ಪ್ರಾಣವು ಹಾರಿಹೋಗಲಿ, ಅಕ್ಬರನಿಗೆ ಹೆಣ್ಣುಕೊಟ್ಟ ರಾಜಪುತ್ರರಿಗೆ ಯಾವ ಗೌರವವು ಹೆಚ್ಚಿತು? ರಾಜಾಮಾನಸಿಂಹನ ಮಗಳು ಸಲೀಮನ ಪತ್ನಿಯಾಗಿ ಯಾವ ಪ್ರಖ್ಯಾತಿಯನ್ನು ಹೊಂದಿದಳು? ಪ್ರಕೃತದಲ್ಲಿ ಅವರಂಗಜೇಬನ ಪತ್ನಿಯಾದ ಉದಿಪುರಿಯು ಹಗಲಿರುಳು ಕಣ್ಣೀರು ಮಿಡಿಯುವಳೇಕೆ? ಅವರಂಗಜೇಬನ ಚಿನ್ನದ ಕೋಳಕ್ಕೆ ಕೈಯೊಡ್ಡಿದ ನಮ್ಮ ಕುಲಕ್ಕೆ ಯಾವ ಯಶಸ್ಸು ಬಂದಿತು? ಅಪ್ಪಾ, ನಾನು ಯಥಾರ್ಥವಾಗಿ ಹೇಳುವೆನು. ನಾನು ಬಡ ಒಕ್ಕಲಿಗನ ಮನೆಯಲ್ಲಿ ಹುಟ್ಟಬಾರದಿತ್ತೆ? ನನಗೆ ಬೇಕಾದವನನ್ನು ವರಿಸಿ ಸುಖವಾಗಿರುತ್ತಿದ್ದೆನು. ನಿನ್ನ ಉದರದಲ್ಲಿ ಜನಿಸಿ ಕಾಗೆಯನ್ನು ವರಿಸಬೇಕೆ?” ಎಂದಳು.
ರಾಜಸಿಂಹನು ಅಡಗಿಸಿದ ಸಿಟ್ಟಿನಿಂದ “ಮುಆಜಮನಿಗಿಂತಲೂ ನಿನಗೆ ಯೋಗ್ಯನಾದ ವರನು ಮತ್ತೊಬ್ಬನಿಲ್ಲ. ಅವನ ಪಾಣಿಗ್ರಹಣವೇ ನಮ್ಮ ವಂಶೋದ್ಧರಣ. ಮಗು, ಕಂಡವರನ್ನು ಕೈಹಿಡಿದು ಕುಲವನ್ನು ಕಳಂಕಿಸಬೇಡ” ಎಂದು ಬಿರುಗಣ್ಣಿನಿಂದ ನೋಡಿದನು.
ಶೈಲಿನಿಯು ಧೈರ್ಯಗೊಂಡು “ಅಪ್ಪಾ, ನಿನ್ನೊಡನೆ ಬಾಯಿಬಿಟ್ಟು ಹೇಳಿದರೆ, ಲಜ್ಜಾಹೀನಳೆಂದು ನೀನು ಭಾವಿಸುವುದಿಲ್ಲವಾದರೆ ನಾನು ಖಂಡಿತವಾಗಿ ಹೇಳುವೆನು; ಹಿಂದೂ ರಾಜಾಧಿರಾಜರನ್ನು ಬಿಟ್ಟು, ನಮ್ಮ ಸಂಸ್ಥಾನದ ಸ್ವಾತಂತ್ರ್ಯವನ್ನು ಮೊಘಲರಿಗೆ ಎಂದು ಬಲಿಕೊಟ್ಟೆವೋ ಆಗಲೇ ನಮ್ಮ ಕುಲವು ಕಳಂಕಿತವಾಗಿದೆ” ಎಂದಳು.
ರಾಜಸಿಂಹನು ಕೋಪವನ್ನು ತಡೆಯಲಾರದೆ ಎದ್ದುನಿಂತನು, ಮಗಳ ಮಾರ್ನುಡಿಗೆ ನಿಮಿಷದ ಮೇಲೆ ಉತ್ತರ ಕೊಡಲಾರದೆ ನೀರವನಾದನು. ಒಂದು ನಿಮಿಷದ ಮೇಲೆ ಹಿಂದೂ ರಾಜಾಧಿರಾಜನು ಯಾರೆಂದು ಮಗಳೊಡನೆ ಗರ್ಜಿಸಿ ಕೇಳಿದನು. ಶೈಲಿನಿಯು ಮಂದಸ್ವರದಿಂದ, ಭವಾನಿಭಕ್ತನಾದ ರಾಮದಾಸರ ಶಿಷ್ಯನಾದ ಶಿವಾಜಿಯನ್ನು ಮುಕ್ತ ಕಂಠದಿಂದ ಹೊಗಳಿದಳು. ಶಿವಾಜಿಯು ವಿಶ್ವಾಸಘಾತುಕನಾದ, ಧರ್ಮದ್ರೋಹಿಯಾದ, ತುಂಡು ಪಾಳೆಯಗಾರನೆಂದು ತಂದೆಯು ತರ್ಕಿಸಿದನು. ಶೈಲಿನಿಯು ಅಲ್ಲಿಯೂ ಬಿಡದೆ,
ಕುಲಸಂಹಾರಕನಾದ ಪಾಷಂಡನಾದ ಅವರಂಗಜೇಬನು ಹಿಂದುಗಳ ಅರಸನಲ್ಲವೆಂದೂ, ಶಿವಾಜಿಯೇ, ಭಾತರವರ್ಷದ ಮಹಾರಾಜನೆಂದೂ ಬಿಗಿಹಿಡಿದು ಸಕಾರಣವಾಗಿ ತೋರಿಸಿದಳು. ಮಗಳ ಮಾತುಗಳಿಗೆ ಮರುಮಾತನಾಡದೆ ರಾಜಸಿಂಹನು ಕೆಳಕ್ಕೆ ಇಳಿದನು. ಇಳಿದು ಹೋಗುವಾಗ, ಮರಾಟನ ಮೂರ್ತಿಯು ಶೈಲಿನಿಯ ಹೃದಯಮಂದಿರದಲ್ಲಿ ಪ್ರತಿಷ್ಠಿತವಾಗಿರುವುದೆಂದು ನಿಶ್ಚಯಮಾಡಿಕೊಂಡು ಹೋದನು. ಕೋಪಾನಲದಿಂದ ದಗ್ಧವಾದ ಅವನ ಮನಸ್ಸು ಶೈಲಿನಿಯ “ಇಚ್ಛಿತವರ”ನನ್ನು ಸರಿಯಾಗಿ ಕಂಡುಹಿಡಿಯಲಾರದೆ ಹೋಯಿತು.
ಕ್ರಿ.ಶಕೆಯ ೧೩೩೩ನೆಯ ವರ್ಷದ ಡಿಲ್ಲಿಯು ಪ್ರಾಚೀನ ಹಿಂದೂರಾಜರ ದಿಲ್ಲಿಯಾಗಿರಲಿಲ್ಲ. ಅದರ ಹೆಸರು ಬೇರೆಯಾದಂತೆ, ಅದರ ಪೂರ್ವಸ್ಥಿತಿಯೂ ಪರಿವರ್ತಿತವಾಗಿತ್ತು. ಅದು ಶಹಾಜಹಾನಾಬಾದ್ ಎಂದು ಪ್ರಖ್ಯಾತಿಗೊಂಡಿತ್ತು. ಮೊಘಲ್ ಚಕ್ರೇಶ್ವರನಾದ ಶಹಾಜಹಾನನು ಪ್ರಾಚೀನ ಡಿಲ್ಲಿಯನ್ನು ಕೆಡವಿ, ತನ್ನ ಹೆಸರಿನ ಮಹಾನಗರವನ್ನು ಯಮುನಾ ನದಿಯ ತೀರದಲ್ಲಿ ಕಟ್ಟಿಸಿದನು. ಕಟ್ಟುವುದಕ್ಕೆ ೯ ವರ್ಷ ಹಿಡಿಯಿತು; ೬೦ ಲಕ್ಷ ರೂಪಾಯಿ ತಗಲಿತು. ನಗರದ ಸುತ್ತಲೂ ಸಾಂದ್ರವಾದ ತರುವನಗಳು; ಅಲ್ಲಲ್ಲಿ ಶಾಲಿಸಮೃದ್ಧವಾದ ಹೊಲಗದ್ದೆಗಳು. ಕಲ್ಲಿನ ಪ್ರಾಕಾರವೊಂದು ನಗರವನ್ನು ವೇಷ್ಟಿಸಿತ್ತು-೭ ಮೈಲು ಸುತ್ತಳತೆಯ ಭದ್ರವಾದ ಮಂಡಲಾಕಾರವಾದ ಪ್ರಾಕಾರ, ಪ್ರಾಕಾರದ ಹೊರಗಡೆಯಲ್ಲಿ ಇಕ್ಕಟ್ಟಾದ ಬೀದಿಗಳು ನೆಲವನ್ನು ಸೀಳಿ ಹೋಗಿದ್ದುವು. ಇವುಗಳ ಇಕ್ಕೆಡೆಗಳಲ್ಲಿ ಮನಸಬ್ದಾರರ ಮಂದಿರಗಳು, ಉಮಾಗಳ ಮಹಡಿಗಳು; ರಾಜಾನುಚರರ ಗೃಹಗಳು. ಸ್ವಲ್ಪ ದೂರದಲ್ಲಿ ರಾಜಭಟರ ಗುಡಾರಗಳು; ಮುಂದೆ ಮುಂದೆ ವರ್ತಕರ ಅಂಗಡಿಗಳು, ವಾಣಿಜ್ಯಶಾಲೆಗಳು; ಅಲ್ಲಲ್ಲಿ ಬಡಬಗ್ಗರ ಹುಲ್ಲುಗುಡಿಸಲುಗಳು. ಇವುಗಳನ್ನು ಬಿಟ್ಟು ಮಹಾರಾಷ್ಟ್ರ ಶಿಬಿರವು ಪ್ರತ್ಯೇಕವಾದ ಒಂದು ಸ್ಥಳದಲ್ಲಿ ಇಳಿದಿತ್ತು.
ಹಿಂದೆ ಹೇಳಿದ ಘಟನಾವಳಿಯು ನಡೆದ ಮರುದಿನ ಶಿವಾಜಿಯು ಅವರಂಗಜೇಬನ ಸಂದರ್ಶನಕ್ಕೆ ಹೋಗಲು ಸಿದ್ಧನಾಗಿದ್ದನು. ರಾಜಸಿಂಹನು ಬಾದಶಹನ ಆಜ್ಞಾನುಸಾರವಾಗಿ ಶಿವಾಜಿಯನ್ನೂ ಅವನ ಪರಿಜನರನ್ನೂ ಕರೆದುಕೊಂಡು ಹೋಗುವುದಕ್ಕೆ ಮಹಾಸಂಭ್ರಮದೊಡನೆ ಸನ್ನದ್ಧನಾಗಿ ಬಂದನು. ಬಾದಶಹನ ಶ್ರೀಮಂತಪುತ್ರನಾದ ಮುಅಜಮನೂ ರಾಜಸಿಂಹನೊಡನೆ ಬಂದಿದ್ದನು. ರಾಜಸಿಂಹನು ಶಿಬಿರವನ್ನು ಪ್ರವೇಶಿಸಿದನು. ಶಿವಾಜಿಯು ಒಳಕ್ಕೆ ಹೋಗಿ ತನ್ನ “ಗರ್ಭಧಾರಿಣಿಯಾದ ಜೀಜಾಬಾಯಿಯನ್ನೂ ದೀಕ್ಷಾಗುರುವಾದ ರಾಮದಾಸನನ್ನೂ” ಸ್ಮರಿಸಿ ಹೊರಕ್ಕೆ ಬಂದು ಎಲ್ಲರ ಮಾನಮರ್ಯಾದೆಗಳನ್ನು ಸ್ವೀಕರಿಸಿದನು. ಈಗಲೂ ಅವರಂಗಜೇಬನು ಬರಲಿಲ್ಲವೆಂದು ಮನಸ್ಸಿನಲ್ಲಿ ಸ್ವಲ್ಪ ಕುದಿದನು. ಬಳಿಕ ಶಿವಾಜಿಯೂ ರಾಜಸಿಂಹನೂ ಆಲಿಂಗನ ಮಾಡಿಕೊಂಡರು. ಆಲಿಂಗನಕಾಲದಲ್ಲಿ ರಾಜಸಿಂಹನ ಮುಖವು ಸ್ವಲ್ಪ ಭೀತಿವ್ಯಂಜಕವಾಗಿತ್ತು. ಶಿವಾಜಿಯು ರೇಷ್ಮೆಯಪಾಗುವನ್ನು ತಲೆಗೆ ಸುತ್ತಿಕೊಂಡು, ಅವರಂಗಜೇಬನು ಉಚಿತವಾಗಿ ಕಳುಹಿಸಿದ ಅಮೂಲ್ಯವಾದ ‘ಖಿಲಾತನ್ನು’ ತೊಟ್ಟುಕೊಂಡು, ತನ್ನ ಸಹವಾಸಿಯಾದ ಭವಾನಿ ಎಂಬ ಕತ್ತಿಯನ್ನು ಸೊಂಟದಲ್ಲಿ ಬಿಗಿದುಕೊಂಡು, ತನ್ನ ಎಂಟುವರ್ಷದ ಸಂಭಾಜಿಯೊಡನೆ ರಾಜಗಜವನ್ನೇರಿ ಹೊರಟನು; ಅಂಗರಕ್ಷೆಯವರು ಬಳಿಸಂದರು. ಆಪ್ತರೂ ಅನುಚರರೂ ಪಲ್ಲಕ್ಕಿಗಳನ್ನು ಹತ್ತಿದರು. ವಾದ್ಯಗಳ ನಿಸ್ವನ, ಜನಸ್ತೋಮದ ಚೀತ್ಕಾರ, ಅಶ್ವಗಳ ಹೇಷಧ್ವನಿ ಮೊದಲಾದ ವಿವಿಧ ಕೋಲಾಹಲದಲ್ಲಿ ಶಿವಾಜಿಯು ತನ್ನ ಪ್ರಸ್ತಾವನದ ಗೌರವಾರ್ಥವಾದ ತೋಪುಗಳ ಗುಡುಗನ್ನು ಕೇಳಲಿಲ್ಲ. ಶಿವಾಜಿಯು ಮನಸ್ಸಿನ ಖಿನ್ನತೆಯನ್ನು ಮುಖದಲ್ಲಿ ತೋರ್ಪಡಿಸದೆ, ಡಿಲ್ಲಿಯ ಪ್ರಾಚೀನ ವೈಭವವನ್ನು ಎಣಿಸುತ್ತ, ಗಜಾರೋಹಿಯಾಗಿ ಹೋದನು. ಜನಸಂದೋಹವು ನಗರದ ಹೆಬ್ಬಾಗಿಲನ್ನು ದಾಟಿ ಹೋಯಿತು. ಪ್ರಸ್ತರನಿರ್ಮಿತವಾದ, ಗಗನಚುಂಬಿಯಾದ, ನೂರಾರು ಮಿನಾರತುಗಳು ಬುರುಜುಗಳು ಪ್ರಕಾಶವಾದವು. ಲೋಕೋನ್ನತವಾದ ಕುತುಬಮಿನಾರಿನ ಶಿರಸ್ಸು ಸಮೀಪಸ್ಥವಾದಂತೆ ತೋರಿತು. ಜನಸಂದೋಹವು ಜುಮ್ಮಾಮಸೀದಿಯ ಬಳಿಯಿಂದ ಹರಿಯುತ್ತ ಮುಂದರಿಸಿತು. ಈ ಲೋಕೋತ್ತರನಾದ ಮಹಾರಾಷ್ಟ್ರ ವೀರನನ್ನು ನೋಡುವುದಕ್ಕೆ ಹಿಂದೂಸ್ಥಾನದ ಜನರೆಲ್ಲರು ಅಸಂಖ್ಯಾತರಾಗಿ ನಗರದ್ವಾರವನ್ನು ಹಿಡಿದು, ಎರಡು ಬೀದಿಗಳಲ್ಲಿಯೂ ಸಂದಣಿಸಿದ್ದರು. ಆನೆಯು ರಾಜಮಂದಿರದ ಮುಂದುಗಡೆಯ ಚಾಂದಣೀ ಚೌಕಕ್ಕೆ ಬರುತ್ತಲೇ ಜನರ ನುಗ್ಗಾಟವು ಅಧಿಕವಾಯಿತು. ಚೌಕದಲ್ಲಿ ಪಹರೆ ಮಾಡುತ್ತಲಿದ್ದ ರಜಪೂತರು ಕುದುರೆಗಳನ್ನು ಹತ್ತಿ ಸಾಲಾಗಿ ನಿಂತುಬಿಟ್ಟರು. ಜ್ಯೋತಿಷ್ಯರು ತಮ್ಮ ಚಿತ್ರಾಸನಗಳನ್ನು ಬಿಟ್ಟು, ಗಜಾರೋಹಿಯಾದ ಶಿವಾಜಿಯನ್ನು ವಿತದೃಷ್ಟಿಯಿಂದ ನೋಡುತ್ತಲಿದ್ದರು. ವರ್ತಕರು, ವಾಣಿಜ್ಯರು, ವಿಪ್ರರು, ವೀಟಕಾಸ್ತ್ರೀಯರು, ವುಸ್ತಾದರು, ಉಮ್ರಾಗಳು, ವೈಶ್ಯಾಸ್ತ್ರೀಯರು, ವೈದ್ಯರು, ವಂದಿಪುತ್ರರು, ವಸ್ತ್ರಕಾರರು ಮೊದಲಾದ ಸಕಲ ವರ್ಣಾಶ್ರಮದವರು ಚೌಕದಿಂದ ಕೆಳಕ್ಕೆ ಇಳಿದು ಜನಸಂದೋಹದೊಡನೆ ತೆರಳಿದರು. ಶಿವಾಜಿಯು ಅವರಂಗಜೇಬನ ರಾಜಮಂದಿರದ ಬಳಿಯಲ್ಲಿ ಬಂದು ಮುಟ್ಟಿದನು. ಜನಗಳ ನೂಕಾಟವು ಅಧಿಕವಾಯಿತು. ಇದರಿಂದಲೋ ಅಥವಾ ಇನ್ನಾವ ಕಾರಣದಿಂದಲೋ ಶಿವಾಜಿಯ ಗಜವು ಸೊಕ್ಕೇರಿ ಜನಗಳನ್ನೆಲ್ಲಾ ಹಾನಿಮಾಡುವಂತಿತ್ತು. ಶಿವಾಜಿಯು ಗಜಯೋಧನಿಗೆ ತಕ್ಕುದಾದ ಚಾತುರ್ಯದಿಂದ ಅದನ್ನು ಸಮಾಧಾನಗೊಳಿಸಿದನು. ನಂತರ ಕೆಳಗೆ ಇಳಿದನು. ಆದರೂ ಗೌರವಾರ್ಥದ ತೋಪುಗಳು ಹಾರಲಿಲ್ಲ. ಶಿವಾಜಿಯು ಮುಖವನ್ನೆತ್ತಿ ಮೇಲೆ ನೋಡಿದನು. ರಾಜದ್ವಾರದ ಬಳಿಯಲ್ಲಿ ಶಿಲಾಗಜಗಳ ಮೇಲೆ ಅಕ್ಬರನು ಇರಿಸಿದ ಪುತ್ತಳಿ ಮತ್ತು ಜಯಮಲ್ಲ ಎಂಬ ರಾಜಪುತ್ರ ವೀರರ ಪ್ರತಿಮೆಗಳನ್ನು ದೃಷ್ಟಿಸಿದನು. ಮನಸ್ಸಿನ ಖಿನ್ನತೆಯು ಇಮ್ಮಡಿಸಿದಂತಾಯಿತು. ಪ್ರತಿಮೆಗಳ ಮೇಲಿಂದ ದೃಷ್ಟಿಯನ್ನು ಹಿಂತೆಗೆಯಲಾರದೆ ಶಿವಾಜಿಯು ತಾನೂ ಪ್ರತಿಮೆಯಂತೆ ನಿಂತುದನ್ನು ಕಂಡು, ರಾಜಸಿಂಹನು ಮುಆಜಮ್‌ನೊಡನೆ ಶಿವಾಜಿಯ ಬಳಿಗೆ ಬಂದನು.
ರಾಜಸಿಂಹ:-“ಮುಂದೆ ದಯಮಾಡಬೇಕು.”
ಶಿವಾಜಿಯು ಉಚ್ಚಸ್ವರದಿಂದ “ಬಾದಶಹರು ಇನ್ನೂ ಬರಲಿಲ್ಲವೇಕೆ?” ಎಂದು ಕೇಳಿದನು.
ರಾಜಸಿಂಹನು “ಬಾದಶಹರ ಪಕ್ಷವಾಗಿ ಯುವರಾಜರು ಬಂದಿರುವರು” ಎಂದು ಹೇಳಿ ಮುಆಜಮನನ್ನು ತೋರಿಸಿ. ಕೈಕೊಟ್ಟು ಶಿವಾಜಿಯನ್ನು ಸನ್ಮಾನಪೂರ್ವಕವಾಗಿ ಚಾಂದಿರಸ್ತೆಗೆ (ಬೆಳ್ಳಿಯ ಬೀದಿಗೆ) ಕರೆದು ತಂದನು.
ರಸ್ತೆಯ ಉಭಯಪಾರ್ಶ್ವಗಳಲ್ಲಿ ಜರತಾರಿನ ವಸ್ತ್ರಶಾಲೆಗಳು, ರೇಷ್ಮೆ ಬಟ್ಟೆಯ ಅಂಗಡಿಗಳು ಆಯುಧಶಾಲೆಗಳು, ಮದ್ದುಗುಂಡನ್ನು ತಯಾರಿಸುವ ಆಲಯಗಳು ತೋರಿಬಂದುವು. ಶಿವಾಜಿಯು ಪಾದಚಾರಿಯಾಗಿ ಮುಂದುಗಡೆಯಲ್ಲಿದ್ದ ರಾಜಾಂಗಣವನ್ನು ಸೇರಿದನು.
ಅವರಂಗಜೇಬನು “ಆಮ್‌ಖಾಸ್ ಖಾನೆಯಲ್ಲಿ (ಆಸ್ಥಾನ ಮಂದಿರ) ಸಿಂಹಾಸನಾ ರೂಢನಾಗಿದ್ದನು. ತನ್ನ ವೈಭವದಿಂದಲೂ ಮಹತ್ವದಿಂದಲೂ ಶಿವಾಜಿಯನ್ನು ಬೆರಗು ಗೊಳಿಸಬೇಕೆಂದು ಬಾದಶಹನು “ಆಮ್‌ಖಾಸ್ ಖಾನೆ”ಯನ್ನು ಈ ದಿನ ಪರಿಷ್ಕಾರ ಗೊಳಿಸಿದ್ದನು. ಮಂದಿರದ ಆಕಾರವು ಪರಿಪಾಟಿಯಾಗಿತ್ತು. ಸುತ್ತಲೆಲ್ಲಾ ಧನುಸ್ಸಿನ ಆಕೃತಿಯ ಅಲಂಕೃತವಾದ ಕಮಾನುಗಳು, ರೇಷ್ಮೆಯಿಂದ ಹೊದಿಸಿದ್ದ ಅಂತಸ್ತು; ಇದಕ್ಕೆ ಆಧಾರವಾಗಿ ನಿಂತ ಚಿನ್ನದ ವರಕಿನ ಕಂಬಗಳು; ಈ ಸ್ತಂಭಗಳಲ್ಲಿ ಚಿತ್ರಿತವಾದ ಕೃತ್ರಿಮ ಪುಷ್ಪಗಳು, ಲತೆಗಳು, ನಿಕುಂಜಗಳು, ಮಂದಿರದ ಉಭಯಪಾರ್ಶ್ವಗಳಲ್ಲಿ ಒಂದರ ಮೇಲೆ ಒಂದಾಗಿ ಉನ್ನತವಾದ ಮೂರು ವೇದಿಕೆಗಳು, ಸುವರ್ಣಕೃತವಾದ ರಜತಮಯವಾದ, ಚಂದ್ರಕಾಂತನಿರ್ಮಿತವಾದ ಮೂರು ವೇದಿಕೆಗಳು, ಮಾಂಡಲೀಕರೂ ರಾಜಕುಲದವರೂ ಎತ್ತರವಾದ ವೇದಿಕೆಯನ್ನು ಏರಿದ್ದರು. ಮಿಕ್ಕವರೆಲ್ಲರು ಉಳಿದ ಎರಡು ಜಗುಲಿಗಳ ಮೇಲೆ ಪದವಿಗೆ ಅನುಸಾರವಾಗಿ ಕುಳಿತಿದ್ದರು. ಮಂದಿರದ ಒಂದು ಭಾಗದಲ್ಲಿ ‘ಜಾರುಕಾ’ ಎಂಬ ವಿಶಾಲವಾದ ಕಿಟಕಿ; ದ್ವಾರಗಳಿಲ್ಲದ, ಕಂಜಾನವಿಲ್ಲದ ಕಿಟಕಿ. ಇಲ್ಲಿಯೇ ಮೊಘಲ ಚಕ್ರವರ್ತಿಗಳು ದಿನಂಪ್ರತಿ ಒಂದು ಸಲ ಬಂದು, ಪ್ರಜೆಗಳಿಗೆ ದೃಶ್ಯರಾಗುತ್ತಿದ್ದರು. ‘ಜಾರುಕ’ದ ಹಿಂದೆ ಸ್ವಯಂ ಬಾದಶಹನು ವಿರಾಜಮಾನನಾಗಿದ್ದನು. ಜಾತಿ ಸುವರ್ಣ ನಿರ್ಮಿತವಾದ, ಅಮೂಲ್ಯ ನವರತ್ನಪ್ರೋಕ್ಷಿತವಾದ, ದ್ವಾದಶ ಕಾಂಚನ ಸ್ತಂಭಾದೃತವಾದ ಮಯೂರಾಸನವನ್ನು ಮೊಘಲ್ ಚಕ್ರೇಶ್ವರನು ಆರೋಹಿಸಿದ್ದನು. ಅವರಂಗಜೇಬನು ತನ್ನ ಜೀವಕಾಲದಲ್ಲಿ ಮಯೂರಪೀಠವನ್ನು ಏರಿದ್ದು ಈ ಸಲವೇ. “ಶಿವಾಜಿಯು ಮಾಯಾವಿ” ಎಂದೆಣಿಸಿ, ಲೋಹಕವಚವನ್ನೂ ಅಸ್ತ್ರಶಸ್ತ್ರಗಳನ್ನು ತೊಟ್ಟು ಮೈಗಾವಲನ್ನಿಟ್ಟುಕೊಂಡು ಸಿಂಹಾಸನದಲ್ಲಿ ಅವನು ಕುಳಿತಿದ್ದನು. ಜನಸ್ತೋಮದಲ್ಲಿ ಶಿವಾಜಿ ಯಾರೆಂದು ಅವರಂಗಜೇಬನು ತನ್ನವರೊಡನೆ ಕೇಳಿದನು. ಸಮೀಪದಲ್ಲಿದ್ದ ರಜಪೂತ ಮಾಂಡಲಿಕ ನೊಬ್ಬನು ಕೈಜೋಡಿಸಿ ನಿಂತು, ಪ್ರತಿಭಾಮಯನಾದ ಮುಖವುಳ್ಳವನಾಗಿಯೂ, ಶುಕನಾಸನಾಗಿಯೂ, ಸ್ವಲ್ಪ ನೀಲವರ್ಣನಾಗಿಯೂ, ಅಜಾನುಬಾಹುವಾಗಿಯೂ, ಕುಬ್ಬನಾಗಿಯೂ ಇದ್ದು, ಗಂಭೀರಗತಿಯಿಂದ ಬರುತ್ತಿದ್ದ ಶಿವಾಜಿಯನ್ನು ತೋರಿಸಿದನು. ಶಿವಾಜಿಯು ಆಸ್ಥಾನಮಂದಿರದಲ್ಲಿ ಪದಾರ್ಪಣ ಮಾಡಿದನು. ಒಮ್ಮೆ ತಟಸ್ಥನಾಗಿ ನಿಂತು “ಆಮ್ ಖಾಸ್ ಖಾನೆ”ಯ ಸೌಭಾಗ್ಯ ಸೌರಂಭವನ್ನು ನೋಡಿದನು; ಆದರೆ ನೋಡಿ ಸಾಮಾನ್ಯರಂತೆ ಬೆರಗಾಗಲಿಲ್ಲ; ಅವರಂಗಜೇಬನು ಮನಸ್ವಿಯಾಗಿ ಇದನ್ನೆಲ್ಲಾ ಮಾಡಿರುವನು ಎಂದು ಕೂಡಲೇ ತಿಳಿದುಬಿಟ್ಟನು. ಅವನ ದೃಷ್ಟಿಗಳು ಸುವರ್ಣ ವೇದಿಕೆಯ ಮೇಲಿದ್ದ ರಾಜಪೂತರ ಕಡೆಗೆ ತಿರುಗಿದವು. ಅಷ್ಟರಲ್ಲಿ ರಾಜಸಿಂಹನು ಹತ್ತಿರಕ್ಕೆ ಬಂದು, “ರಾಜರೇ, ಇಲ್ಲಿಂದ ಮುಂದರಿಸಬೇಕಾದರೆ ಬಾದಶಹರಿಗೆ ನೆಲವನ್ನು ಮುಟ್ಟಿ ಮೂರು ಸಲ ಸಲಾಂ ಮಾಡುವುದು ಪದ್ಧತಿಯಾಗಿದೆ” ಎಂದನು. ಶಿವಾಜಿಯು ರಾಜಸಿಂಹವನ್ನು ನೋಡಿದನು. ಬಳಿಕ ಉಚ್ಚಸ್ವರದಿಂದ “ಇದು ನಮ್ಮಿಂದಾಗದು; ಈ ಜನ್ಮದಲ್ಲಿ ಯಾವ ಮುಸಲ್ಮಾನನಿಗೂ ನಾವು ಸಲಾಂ ಮಾಡಿಲ್ಲ. ಇನ್ನು ಮುಂದೆಯೂ ಮಾಡಲಾರೆವು” ಎಂದನು.
ರಾಜಸಿಂಹನು ವ್ಯಗ್ರವಾಗಿ ಕಳವಳದಿಂದ, “ಇದೊಂದು ಕಠಿಣ ಸಮಸ್ಯೆಯಾಗಿದೆಯಲ್ಲ. ಸಾಮ್ರಾಟರು ಕೋಪಿಸಿಕೊಂಡರೆ ಕಾರ್ಯವು ಕೆಡುವುದು” ಎಂದನು.
ಶಿವಾಜಿಯು ತನ್ನ ಎಡಕ್ಕೆ ಇದ್ದ ರಾಜಪುತ್ರರನ್ನು ನೋಡಿ “ಇವರೆಲ್ಲರು ಅದೇ ಪ್ರಕಾರವಾಗಿ ಮಾಡಿ, ತಮ್ಮ ಆಸನವನ್ನು ಏರಿದರೇ?” ಎಂದು ಕೇಳಿದನು.
ರಾಜಸಿಂಹನು ಬಾದಶಹನ ಕಡೆಗೆ ನೋಡುತ್ತ, ಶಿವಾಜಿಯೊಡನೆ “ಹಾಗೆ ಮಾಡದೆ ಮುಂದರಿಸಕೂಡದು” ಎಂದನು. ಅವರಂಗಜೇಬನು ಪಕ್ಕದಲ್ಲಿದ್ದ ರಾಜಪುತ್ರರೊಡನೆ ಏನನ್ನೋ ಮಾತನಾಡುತ್ತಿದ್ದನು.
ಶಿವಾಜಿಯು ಸ್ವಲ್ಪ ಹೊತ್ತು ಮನಸ್ಸಿನಲ್ಲಿಯೇ ಚಿಂತಿಸಿದನು. ಬಳಿಕ ರಾಜಸಿಂಹ ನೊಡನೆ “ಈ ಮಾತು ಮನ್ನಿಸಬೇಕಾಗುವುದು. ಇಲ್ಲವಾದರೆ ಕೆಲಸವು ಕೆಟ್ಟು ಹೋಗುವುದು ಎಂಬುದು ನಿಜ” ಎಂದನು.
ಶಿವಾಜಿಯು ಮುಂದೆ ಬಂದು ಮೂರು ಸಲ ಸಲಾಂ ಮಾಡಿದನು; ಆದರೆ ನೆಲವನ್ನು ಮುಟ್ಟಿ ಕೈ ಮುಗಿಯಲಿಲ್ಲ. ಅವರಂಗಜೇಬನು ಅದನ್ನು ಓರೆಗಣ್ಣಿನಿಂದ ನೋಡದೆ ಹೋಗಲಿಲ್ಲ. ರಾಜಸಿಂಹನು ತುಟಿಯೊಳಗೆ ನಗುವಂತಿದ್ದನು. ಶಿವಾಜಿಗೆ ಆಸನವನ್ನು ಮೊದಲೇ ಏರ್ಪಡಿಸಿದ್ದರೂ ಬಾದಶಹನು ರಾಜಸಿಂಹನೊಡನೆ ರಾಜರು ಕುಳಿತುಕೊಳ್ಳುವುದಕ್ಕೆ ಎಲ್ಲಿ ಆಸನವನ್ನು ಮಾಡಿರುವೆ?” ಎಂದು ಕೇಳಿದನು.
ರಾಜಸಿಂಹನು ಶಿವಾಜಿಗೆ ಕೈಕೊಟ್ಟು ಬಾದಶಹನ ಬಲಗಡೆಯಲ್ಲಿದ್ದ ಸುವರ್ಣ ವೇದಿಕೆಯ ಮೂಲೆಯಲ್ಲಿ ಕುಳ್ಳಿರಿಸಿದನು. ಶಿವಾಜಿಯು ಫಕ್ಕನೆ ಆಸನದಿಂದ ಕೆಳಕ್ಕೆ ದುಮುಕಿ, “ನಮ್ಮ ಬಲಗಡೆಯಲ್ಲಿ ಇರುವವರು ಯಾರು?” ಎಂದು ಗಂಭೀರಧ್ವನಿಯಿಂದ ಕೇಳಿದನು.
ಬಲಗಡೆಯಲ್ಲಿದ್ದ ರಜಪೂತ ಸರದಾರರೂ ಉಮ್ರಾಗಳೂ ಸಂಧಿಗ್ಧ ಮಾನಸರಾಗಿ ನೋಡಿದರು. ಆದರೂ ಬಾದಶಹನು ಶಾಂತಚಿತ್ತನಾಗಿ ನೋಡುತ್ತಿದ್ದನು.
ಶಿವಾಜಿಯು ಪ್ರಶ್ನೆಗೆ ಉತ್ತರವಾಗಿ ರಾಜಸಿಂಹನು “ತಮ್ಮ ಬಲಗಡೆಯಲ್ಲಿದ್ದವರು ಮಾರವಾಡ ಸಂಸ್ಥಾನಾಧಿಪರಾದ ಯಶವಂತ ಸಿಂಹರು” ಎಂದು ಹುಸಿನಗುವಿನಿಂದ ಹೇಳಿದನು.
ಇದನ್ನು ಕೇಳಿದನೋ ಇಲ್ಲವೋ ಶಿವಾಜಿಯು ಕಿಡಿಕಿಡಿಯಾಗಿ ಉರಿದನು. ಅವಮಾನ ಶೂಲವನ್ನು ಮೈಯೊಳಗೆ ತಿವಿದು ತಿರುಪಿದಂತೆ ಉದ್ರೇಕಿತನಾದನು. ಆದರೂ ಅವಮಾನ್ಯಜನ್ಯವಾದ ಕೋಪವನ್ನಾಗಲೀ, ವ್ಯಥೆಯನ್ನಾಗಲೀ ತೋರಿಸದೆ, ಗಂಭೀರಸ್ವರದಿಂದ “ಯಶವಂತ ಸಿಂಹನ ಸಹಪಂಕ್ತಿಯಲ್ಲಿ ಕುಳಿತುಕೊಳ್ಳಲು ನಮ್ಮ ಯೋಗ್ಯತೆಯು ಎಂತಹುದು? ಸ್ವದೇಶವತ್ಸಲರಾದ, ಸ್ವಾತಂತ್ರ್ಯಪರಾಯಣರಾದ, ಸ್ವಧರ್ಮ ರಕ್ಷಕರಾದವರು ಯಾರಾದರೂ ಈ ಆಸ್ಥಾನದಲ್ಲಿ ಇದ್ದರೆ, ಆ ಬಡಪಾಪಿಗಳೊಡನೆ ಕೈಕಟ್ಟಿ ನಿಲ್ಲಲು ನಾವು ಯೋಗ್ಯರಲ್ಲದೆ, ಮೊಘಲ್ ಸಂಸ್ಥಾನದ ಜಹಗೀರುದಾರರೆಂಬ ದೊಡ್ಡ ದೊಡ್ಡ ಬಿರುದನ್ನು ತಾಳಿರುವ ಮಹಾರಜಪೂತರ ಬಳಿ ಸೇರುವುದಕ್ಕೆ ನಮ್ಮಲ್ಲಿ ಯೋಗ್ಯತೆ ಇಲ್ಲ! ಯಶವಂತಸಿಂಹ ಮೊದಲಾದವರು ತಮ್ಮೊಳಗೆ ನಾವು ಒಬ್ಬರೆಂದು ತಿಳಿದಿರಬಹುದು. ಬಾದಶಹರು ಎಲ್ಲರಿಗೂ ಮಾನಮರ್ಯಾದೆಗಳನ್ನು ಕೊಟ್ಟರು. ಪ್ರತಿಯಾಗಿ ಹಿಂದುಗಳು ತಮ್ಮ ರಾಜಮರ್ಯಾದೆಗಳನ್ನು ಬಾದಶಹರಿಗೆ ಬಿಟ್ಟುಕೊಟ್ಟರು. ಆದರೆ ಈ ಗೌರವವು ಚಿತ್ತೂರಿನ ರಾಣಾವಿಗೂ ಮಹಾರಾಷ್ಟ್ರದ ಶಿವಾಜಿಗೂ ಬರಲಿಲ್ಲ. ಅಂತಹ ಗೌರವದ ಅಪೇಕ್ಷೆ ಇದ್ದಲ್ಲಿ ನಾವು ಈ ಯಶವಂತ ಸಿಂಹ, ರಾಮಸಿಂಹ ಮೊದಲಾದವರ ಸಂಗಡ ಕುಳಿತುಕೊಳ್ಳುವೆವು. ಅಲ್ಲದೆ, ಪ್ರಕೃತದಲ್ಲಿ ಅಂತಹ ಬಹುಮಾನಗಳನ್ನು ಆಶಿಸುವುದಿಲ್ಲ” ಎಂದನು.
ಬಾದಶಹನ ಪಕ್ಕದಲ್ಲಿದ್ದ ರಜಪೂತರೆಲ್ಲರೂ ಅಧೋವದನರಾದರು. ರಾಜಸಿಂಹನು ಮಾತನಾಡಲಾರದೆ ಮೋರೆ ತಗ್ಗಿಸಿ ನಿಂತನು. ಬಾದಶಹನು ಶಿವಾಜಿಯು ಆಡಿದ ಭಾಷೆಯ ಜ್ಞಾನ ಶೂನ್ಯನಾದರೂ, ಸಂದರ್ಭಾನುಸಾರದಿಂದ ಅದರ ಅರ್ಥವನ್ನು ಸ್ವಲ್ಪ ತಿಳಿದು ರಾಜಸಿಂಹನೊಡನೆ “ಇದೇನು ಸಂಗತಿ?” ಎಂದು ಕೇಳಿದನು.
ರಾಜಸಿಂಹನು ನತಶಿರಸ್ಕನಾಗಿ “ವನಸಿಂಹವು ಬೋನಿನಲ್ಲಿ ಸಿಕ್ಕಿಕೊಂಡಿದೆ” ಎಂದನು.
ಅವರಂಗಜೇಬನು ನಗುತ್ತ, “ಅದಕ್ಕೋಸ್ಕರ ಬೊಬ್ಬಿಡುತ್ತಿದೆಯೇ? ವನ್ಯಸ್ಥಿತಿಯಲ್ಲಿದ್ದಾಗ ಮೃಗಗಳನ್ನು ನೋಡುವುದು ಸರಿಯಲ್ಲ” ಎಂದನು.
ರಾಜಸಿಂಹನು “ಮೃಗವನ್ನು ಈಗ ನಾನು ಏನು ಮಾಡಲಿ” ಎಂದು ಮೆಲ್ಲನೆ ಕೇಳಿದನು.
ಅವರಂಗಜೇಬ:-“ಅದನ್ನು ಕೊಂಡುಹೋಗಿ ಶಾಂತವಾದ ಬಳಿಕ ಮರಳಿ ತರಬಹುದಷ್ಟೆ.”
ಇಷ್ಟಕ್ಕೆ ಶಿವಾಜಿಯು ಅಲ್ಲಿ ನಿಲ್ಲಲಾರದೆ ‘ಅಮ್ ಖಾಸ್ ಖಾನೆ’ಯಿಂದ ಹಿಂದೆರಳಿದನು. ಬಾದಶಹನಿಗೆ ನಮಸ್ಕಾರ ಮಾಡದೆ, ರಾಜಪುತ್ರರನ್ನು ಕಣ್ಣೆತ್ತಿ ನೋಡದೆ, ಅವನು ಹೋಗಿಬಿಟ್ಟನು. ಅವನ ಹಿಂದೆ ಅವನ ಪರಿಜನರೂ ನಡೆದುಬಿಟ್ಟರು. ಶಿವಾಜಿಯು ಆಕಸ್ಮಾತ್ತಾಗಿ ಅಲಕ್ಷವಾಗಿ ಆಸ್ಥಾನವನ್ನು ಬಿಟ್ಟು ಹೋದುದನ್ನು ನೋಡುತ್ತಲೇ, ಅವರಂಗಜೇಬನ ಕೋಪವು ಮಿತಿಮೀರಿತು. ಆದರೂ ಸ್ಥಿರಚಿತ್ತನಾಗಿದ್ದು, ಮೌನವಾಗಿದ್ದು ತನ್ನ ಮುಖ ಮುದ್ರೆಯನ್ನು ಬದಲಿಸಲಿಲ್ಲ. ಅವರೆಲ್ಲರೂ ಹೋದಬಳಿಕ ಅವರಂಗಜೇಬನು ರಾಜಸಿಂಹ ನನ್ನು ಕರೆದು, “ಹೋದವರು ಎಲ್ಲಿ ತಾನೇ ಇಳಿಯುವವರು?” ಎಂದು ಕೇಳಿದನು.
ರಾಜಸಿಂಹ:- “ಖಾವಂದರ ಅಪ್ಪಣೆಯಂತೆ ಅವರಿಗೋಸ್ಕರ ಕೋಟೆಯ ಒಳಗೆ ಮೊದಲೇ ಸಜ್ಜುಗೊಳಿಸಿದ್ದ ‘ದಿಲ್‌ಖುಷ್’ ಮಂದಿರದಲ್ಲಿ ಅವರನ್ನು ಇಳಿಸಿದ್ದೇನೆ.”
ಅವರಂಗಜೇಬನು “ಹಾಗಾದರೆ ನಡೆ, ವಿಳಂಬಿಸಬೇಡ, ಶಿವಾಜಿಯನ್ನು ಅಲ್ಲಿ ಇಳಿಸಿದ ಬಳಿಕ ನಮ್ಮನ್ನು ನೋಡಲು ನೀನು ಅರಮನೆಗೆ ಬರಬೇಕು. ರಾಜಕಾರ್ಯ ಗೌರವವು ಹೆಚ್ಚಿದೆ” ಎಂದು ಹೇಳಿ ಸುಮ್ಮನಾದನು.
ಶಿವಾಜಿಯು ಪೂರ್ವದ ಇಂದ್ರಪ್ರಸ್ತದ ಸೌಭಾಗ್ಯವನ್ನೆಲ್ಲಾ ನೋಡುತ್ತ ಆರ್ಯಪುತ್ರರ ಆಸ್ಥಾನದಲ್ಲಿ ಮೊಘಲರು ಸ್ಟೇಚ್ಛೆಯಿಂದ ರಾಜದಂಡವನ್ನು ಪರಿಪಾಲಿಸುವುದನ್ನು ಯೋಚಿಸುತ್ತ, ರಾಜಪುತ್ರರಿಗೂ ಇತರ ಹಿಂದುಗಳಿಗೂ ತಗಲಿದ ಹೀನಾವಸ್ಥೆಯನ್ನು ಕುರಿತು ದುಃಖಿಸುತ್ತ ಮೆಲ್ಲಮೆಲ್ಲನೆ ಹೋಗುತ್ತಿದ್ದನು. ರಾಜಸಿಂಹನು ತನ್ನ ಸಮೀಪಸ್ಥನಾದುದನ್ನು ನೋಡಿ ಶಿವಾಜಿಯು “ಬಾದಶಹನು ಎಂಥಹನು? ನಮ್ಮನ್ನೂ ಯಶವಂತಸಿಂಹನನ್ನೂ ಒಂದು ಮಾಡಿದನಲ್ಲ” ಎಂದು ಕೇಳಿದನು.
ರಾಜಸಿಂಹನು “ಅರಮನೆಯಲ್ಲಿದ್ದಾಗ ಅಲ್ಲಿನ ಪದ್ಧತಿಗನುಸಾರವಾಗಿ ನಡೆಯದೆ ಆಗಲಾರದು. ಅದು ಹೋಗಲಿ, ಈಗ ತಾವು ಸುರಕ್ಷಿತವಾಗಿ ತಮ್ಮ ಊರನ್ನು ಸೇರಿದರೆ ಸಾಕು. ನನ್ನ ಭಾರವನ್ನು ಇಳಿಸಿದಂತಾಗುವುದು” ಎಂದು ದೈನ್ಯದಿಂದ ಬೇಡಿಕೊಂಡನು.
ಶಿವಾಜಿಯು ಈ ಮಾತುಗಳ ಸೂಕ್ಷ್ಮಾರ್ಥವನ್ನು ಗ್ರಹಿಸಿಕೊಂಡು, ತನಗೋಸ್ಕರ ಅಣಿಮಾಡಿದ್ದ ಮಂದಿರವನ್ನು ಸೇರಿದನು. ಈ ರೀತಿಯಲ್ಲಿ ಕ್ರಿ ಶಕೆಯ ೧೬೬೬ರಲ್ಲಿ ಶಿವಾಜಿಯು ಬಾದಶಹನಿಗೆ ಮೊತ್ತಮೊದಲು ಕೊಟ್ಟ ಸಂದರ್ಶನವು ಕಟ್ಟಕಡೆಯದಾಯಿತು. ಯಾವ ದಿವಸ ಶಿವಾಜಿಯು ಅವರಂಗಜೇಬನ ಸಂದರ್ಶನಾರ್ಥವಾಗಿ ಹೋಗಿದ್ದನೋ ಆ ದಿವಸವೇ ಶೈಲಿನಿಯು ಕೋಟೆಯೊಳಗೆ ರಾಜಸಿಂಹನಿಗೋಸ್ಕರ ಸಜ್ಜುಗೊಳಿಸಿದ್ದ ಮಂದಿರದ ಉಪ್ಪರಿಗೆಯನ್ನು ಏರಿದ್ದಳು. ಶಿವಾಜಿಯು ಶಿಬಿರವನ್ನು ಮುಟ್ಟಿದನು. ಬಾದಶಹನ ಆಜ್ಞಾನುಸಾರವಾಗಿ ರಾಜಸಿಂಹನು ಅರಮನೆಗೆ ಹಿಂದೆರಳಿದನು. ಆದರೂ ಶೈಲಿನಿಯು ಮಹಡಿಯಿಂದ ಕೆಳಕ್ಕೆ ಇಳಿಯಲಿಲ್ಲ. ರಾತ್ರಿದೇವಿಯು ತನ್ನ ಭಯಾನಕ ರೂಪವನ್ನು ಧರಿಸಿ ಬರುವಾಗ ಒಂದೆರಡು ನಕ್ಷತ್ರಗಳು ಆಕಾಶದಲ್ಲಿ ಕಣ್ಣು ಮಿಟುಕಿಸುತ್ತಿದ್ದವು. ಆದರೂ ಶೈಲಿನಿಯು ಅಲ್ಲಿಯೇ ನಿಂತಿದ್ದಳು. ತಂದೆಯು ಬಾದಶಹನನ್ನು ಬೀಳ್ಕೊಂಡು ಮರಳಿ ಬಂದನು. ಬರುತ್ತಲೇ ಮಗಳನ್ನು ನೋಡುವುದಕ್ಕೆ ಮಹಡಿಯನ್ನು ಹತ್ತಿದನು. ಶೈಲಿನಿಯು ಸುಮ್ಮನೆ ನಿಂತಿರುವುದನ್ನು ಕಂಡು, “ಮಗು, ಇನ್ನೂ ನಿದ್ದೆ ಹೋಗಲಿಲ್ಲವೇಕೆ?” ಎಂದು ಕೇಳಿದನು.
ಶೈಲಿನಿ:- “ಅಪ್ಪಾ, ನೀನು ಬರಲಿಲ್ಲವೆಂದು ಕಾದಿದ್ದೆನು.”
ರಾಜಸಿಂಹ:- “ಮುಆಜಮನು ನನ್ನ ಸಂಗಡ ಬರುವೆನೆಂದು ನೀನು ತಿಳಿದೆಯಾ?”
ಶೈಲಿನಿ:- “ಮುಆಜಮನು ಈ ಮನೆಗೆ ಏಕೆ ತಾನೆ ಬರುವನು? ಇದು ‘ಶರಾಬ್ ಖಾನೆ’ ಅಲ್ಲವೆಂದೇ ನಾನು ಹೇಳಿದೆನು.”
ರಾಜಸಿಂಹನು ಹುಬ್ಬುಗಂಟಿಕ್ಕಿ “ಅಲ್ಲ, ಇದು ಶೈಲಿನಿ ಮಂದಿರ. ಇಲ್ಲಿಯೇ ಹೆಂಡತಿಯನ್ನು ನೋಡುವ ಹಾಗೆ ಅವನು ಬರಬೇಕೆಂದಿದ್ದನು.”
ಶೈಲಿನಿ ಪ್ರತಿಯಾಗಿ “ಅಪ್ಪಾ, ಹೆಂಡ ತಿಂದು ನೋಡುವುದಕ್ಕೆ ಇದು ‘ಶರಾಬ್ ಖಾನೆ’ ಅಲ್ಲವೆಂದೇ ನಾನು ಹೇಳಿದೆನು.”
ರಾಜಸಿಂಹ:-”ಅಮ್ಮಾ ಉದ್ದುರುಟು ಮಾತಾಡಬೇಡ. ಸುಮ್ಮನೆ ಹಟ ಹಿಡಿದು ಹುಚ್ಚಳಾಗಬೇಡ, ಕಂಡೆಯಾ?”
ಶೈಲಿನಿ:-“ಅಪ್ಪಾ, ಹಟಹಿಡಿಯುವವರೆಲ್ಲರೂ ಹುಚ್ಚರಾದರೆ, ಲೋಕದಲ್ಲಿ ಬುದ್ಧಿವಂತರು ಯಾರು ತಾನೆ ಇರುವರು?”
ರಾಜಸಿಂಹ:-“ಮಗು, ನಾನು ನಿನ್ನ ಅರ್ಥವನ್ನೆಲ್ಲಾ ತಿಳಿದಿರುವೆನು. ಆದರೆ ಒಂದು ಮಾತನ್ನು ಮರೆಯಬೇಡ. ಮರಾಟರು ಶೂದ್ರರು.”
ಶೈಲಿನಿ:-“ನಾನು ಅದಕ್ಕಿಂತಲೂ ಹೆಚ್ಚಾಗಿ ಬಲ್ಲೆನು. ಮುಸಲ್ಮಾನರು ಮ್ಲೇಚ್ಛರು.
ರಾಜಸಿಂಹರು ಉಚ್ಚಸ್ವರದಿಂದ “ಮಗು, ಶೈಲಿನಿ, ನಾನು ನಿನ್ನನ್ನು ಯಾವಾಗ ಪ್ರತಾಪಗಡಕ್ಕೆ ಕೊಂಡುಹೋದನೋ ಅಂದಿನಿಂದ ನೀನು ಹೀಗೆ ವರ್ತಿಸತೊಡಗಿರುವೆ. ಈಗ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ನನ್ನ ಹಣೆಯಲ್ಲಿ ಬರೆದಂತಾಗುವುದು. ಈ ನಿನ್ನ ನಡತೆಯು ನನಗೆ ಹಿತಕರವಲ್ಲ. ನೀನು ಅನ್ಯರ ಹಸ್ತಗತಳಾಗಿ, ನಿನ್ನೊಡನೆ ನನ್ನನ್ನೂ ನಮ್ಮ ಕುಲವನ್ನೂ ಅಳಿಸಿಬಿಡುವುದಕ್ಕಿಂತಲೂ, ನಾನು ಹೇಳಿದಂತೆ ನಡೆದುಕೊಳ್ಳುವುದು ಒಳ್ಳೆಯದಲ್ಲವೇ? ಅವರಂಗಜೇಬನ ಬಂಧಿಯಾನ ಶೂದ್ರ ಮರಾಟನ ಕಪಟಪ್ರೇಮಪಾಶದಲ್ಲಿ ನೀನು ಬಿದ್ದು ಸಾಯುವುದಕ್ಕಿಂತಲೂ ಸಾಕ್ಷಾತ್ ಭಾರತ ಬಾದಶಾಹಿಯ ಪುತ್ರನಾದ, ವಿಕ್ರಮಸಂಪನ್ನನಾದ ಮುಅಜಮನ ಯಥಾರ್ಥ ಪ್ರಣಯಭಾಜನೆಯಾಗಿ, ಭಾಗ್ಯಶಾಲಿನಿ ಎನಿಸಿಕೊಳ್ಳುವುದು ಲೇಸಲ್ಲವೇ? ತುಚ್ಚನಾದ ಆ ಮಾವಳಿಗನೆಲ್ಲಿ? ರಜಪೂತ ಕನೈಯಾದ ಶೈಲಿನಿ ಎಲ್ಲಿ? ಈಚೆಗೆ ನಿನ್ನ ನಡತೆ ನನಗೆ ಅಸಹ್ಯವಾಗುತ್ತಬಂದಿದೆ. ಅನ್ನಾಹಾರಾದಿಗಳಲ್ಲಿ ಅಲಕ್ಷ್ಯ, ಮನೆಯವರ
ಮೇಲೆ ಔದಾಸೀನ್ಯ, ನನ್ನೊಡನೆ ಅವಿಧೇಯತೆ, ಮುಅಜಮನ ವಿಷಯದಲ್ಲಿ ತಾತ್ಸಾರ, ನಿನ್ನ ಆತ್ಮಸಂಭಾಷಣೆ, ನಿನ್ನ ಅಂತರಂಗ ಪಲಾಯನ ಇವೆಲ್ಲವೂ ವಿಪರೀತವನ್ನು ಸೂಚಿಸುತ್ತಿವೆ. ಬಾದಶಹರ ರಾಜಕಾರ್ಯ ಗೌರವ, ಶಿವಾಜಿಯ ಆಗಮನ, ಮುಅಜಮನ ನಿರ್ಬಂಧ, ನಿನ್ನ ಹುಚ್ಚುಹಟ – ಇವೆಲ್ಲವುಗಳಿಂದ ನನ್ನ ಬುದ್ಧಿಯು ಮುಂಗಾಣದು” ಎಂದು ಹೇಳಿದನು.
ಶೈಲಿನಿಯು ಈ ವಾಕ್ಯಪರಂಪರೆಯಿಂದ ಕದಲದೆ, “ಅಪ್ಪಾ, ಶಿವಾಜಿಯು ಅವರಂಗಜೇಬನ ಬಂಧಿ ಎಂದು ನೀನು ಹೇಳಿದೆ. ಅವಮಾನ ಮಾಡಿದ್ದು ಸಾಲದೆ ಅವನನ್ನು ಮೋಸದಿಂದ ಬಂಧಿಯಾಗಿ ಮಾಡಿದನೇ?” ಎಂದು ಕೇಳಿದಳು.
ರಾಜಸಿಂಹನು ಮೈದೆಗೆದು, “ಶಿವಾಜಿ ಬಂಧಿಯಾಗಿರುವನೆಂದು ನಾನು ಹೇಳಿದೆನೇ? ನನ್ನ ಮನಸ್ಸು ಸರಿಯಾಗಿಲ್ಲ. ನಿದ್ದೆಗಣ್ಣುಗಳಿಂದ ಏನು ಹೇಳಿರುವೆನೆಂದು ಅರಿಯೆನು” ಎಂದು ಹೇಳಿ ಉಪ್ಪರಿಗೆಯಿಂದ ಇಳಿದುಹೋದನು.
ಶೈಲಿನಿಯು ತಂದೆಯ ಮಾತುಗಳನ್ನು ಮನಸ್ಸಿನಲ್ಲಿ ಮಥಿಸುತ್ತ, ಕುಳಿತಲ್ಲಿಯೇ ಗೊಡೆಗೆ ಒರಗಿ ನಿದ್ದೆ ಹೋದಳು.
ರಾಜಸಿಂಹನು ಎಚ್ಚರತಪ್ಪಿ ಹೇಳಿದಂತೆ, ಶಿವಾಜಿಯು ಢಿಲ್ಲಿಯಲ್ಲಿ ಸೆರೆಯಾಗಿದ್ದನು. ಶಿವಾಜಿಯು ತಪ್ಪಿಸಿಕೊಳ್ಳದಂತೆಯೂ, ರಾಜಪುತ್ರರೊಡನೆ ಒಳಸಂಚು ನಡೆಯಿಸದಂತೆಯೂ ಅವರಂಗಜೇಬನು ಅವನ ಮೇಲೆ ಹೊಂಚು ಹಾಕಿದ್ದನು. ಪಹರೆಯಲ್ಲಿ ಶಿವಾಜಿಯ ಬಂಧನವು ಸೂಚಿತವಾಗಿರದಿದ್ದರೂ ಅವನು ಕೋಟೆಯನ್ನು ದಾಟುವುದಾದರೆ, ಅವರಂಗಜೇಬನ ಸೈನಿಕರ ಕತ್ತಿಗಳು ಒರೆಯಿಂದ ಹಾರಲು ಸಿದ್ಧವಾಗಿದ್ದುವು. ಮೂರು ದಿನಗಳಿಂದ ಮೊಘಲ್ ಸೈನಿಕರು ಆಯುಧಪಾಣಿಗಳಾಗಿ ಹಗಲಿರುಳು ತನ್ನ ಶಿಬಿರವನ್ನು ಬಿಡದೆ ಕಾಯುವುದನ್ನು ಶಿವಾಜಿಯು ನೋಡಿದನು. ಈ ಮೈಗಾವಲಿನ ಅರ್ಥವನ್ನು ಅವನು ತಿಳಿಯದೆ ಹೋಗಲಿಲ್ಲ. ಈ ಸಂಕಷ್ಟಕರವಾದ ಸಮಸ್ಯೆಯಿಂದ ರಕ್ತಪಾತವಿಲ್ಲದೆ ಹೇಗೆ ಪಾರಾಗಬೇಕೆಂದು ಅವನು ಒಂದೆರಡು ದಿನ ವಿಚಾರಮಾಡಿದನು. ರಹಸ್ಯದಲ್ಲಿ ಪಲಾಯನ ಮಾಡುವುದಕ್ಕೆ ಅವನ ಬಳಿಯ ದಳವು ಅಧಿಕವಾಗಿತ್ತು; ಅವರನ್ನೆಲ್ಲಾ ಕಟ್ಟಿಕೊಂಡರೆ, ಪಲಾಯನದಲ್ಲಿ ಗುಟ್ಟು ನಿಲ್ಲಲಾರದು. ಬಹಿರಂಗ ಯುದ್ಧವನ್ನು ಮಾಡುವುದಕ್ಕೆ ದಳವು ಅಲ್ಪವಾಗಿತ್ತು; ಅಲ್ಪಸೇನೆಯನ್ನು ನಂಬಿ ಯುದ್ಧಮಾಡುವುದು ಹುಚ್ಚುತನವೆಂದು ಶಿವಾಜಿ ಎಣಿಸಿದನು.
ನಾಲ್ಕು ದಿನಗಳು ಕಳೆದುಹೋದುವು. ರಾಜಸಿಂಹನು ದಿನಕ್ಕೆ ಅನೇಕಾವರ್ತಿ ಮರಾಠರ ಪಾಳಯಕ್ಕೆ ಬಂದು ಹೋಗಿ, ಶಿವಾಜಿಗೆ ಬೇಕು ಬೇಕಾದುದನ್ನು ಒದಗಿಸುತ್ತ, ಆತನು ಉಳುಕೊಂಡ ಮಂದಿರ ವಿಷಯವಾಗಿ ಬಹಳ ಶ್ರಮಗೊಳ್ಳುತ್ತ, ಶಿವಾಜಿಯ ಮಹಾಹಿತಚಿಂಕನೆಂದು ನಟಿಸುತ್ತ ಇರುವುದನ್ನು ಶಿವಾಜಿಯು ತಿಳಿದುಕೊಂಡನು. ಅದಕ್ಕೆ ತಕ್ಕುದಾದ ಪ್ರತಿಕಾರವನ್ನು ಮಾಡಲು ಉದ್ಯೋಗಿಸಿದನು. ಅವನ ಸರ್ವವ್ಯಾಪಕ ಬುದ್ದಿಯ ಮುಂದೆ ಅವರಂಗಜೇಬನ ಪ್ರಯತ್ನಗಳೂ ರಾಜಸಿಂಹನ ಕಾರ್ಯಗಳೂ ಕುಂಠಿತವಾದುವು. ಈ ಸಂದರ್ಭದಲ್ಲಿ ಶಿವಾಜಿಯ ಕುಲದೇವತೆಯಾದ ಭವಾನಿಯು ಅವನ ಮೈಮೇಲೆ ಬಂದು, “ಶಿವಾ, ಹೆದರಬೇಡ, ಯಾವಾತನು ಜನನೀ ಜನ್ಮಭೂಮಿಯನ್ನು ಪ್ರೀತಿಸಿ, ಅದನ್ನು ಉದ್ಧಾರ ಮಾಡಲು ಪ್ರಯತ್ನಿಸುವನೋ, ಅವನು ನನ್ನ ಭಕ್ತನು, ಭಕ್ತರಲ್ಲಿ ಭಕ್ತನು. ಅವನಿಗೆ ಯಾವುದೊಂದು ಆಪತ್ತೂ ತಗಲಲಾರದು. ಅಂತಹನನ್ನು ಹಾಳುಮಾಡಲು ಬಗೆದವರು ಆ ದೇಶವತ್ಸಲನ ವೈಭವ ಪ್ರಭಾವವನ್ನು ನೋಡುವುದಕ್ಕೆ ಉಳಿಯದೆ, ನರಕಕ್ಕೆ ಹೋಗುವರು. ನೀನು ಭಯಪಡಬೇಡ. ನಿನ್ನ ಕೋರಿಕೆಗಳೆಲ್ಲವೂ ಸಿದ್ಧಿಸುವುವು” ಎಂದು ಹೇಳಿದಳು.
ಇದಾದ ಎರಡು ದಿನಗಳ ಬಳಿಕ ಶಿವಾಜಿಯು ರಾಜಸಿಂಹನನ್ನು ಕರೆಯಿಸಿ, “ನಮ್ಮ ಸೈನಿಕರೆಲ್ಲರೂ ಮಾರ್ಗಾಯಾಸದಿಂದ ಮೊದಲೇ ಬಳಲಿದ್ದರು. ಇಲ್ಲಿನ ಹವೆಯು ನಮಗೆ ಹಿತಕರವಾಗುವುದಿಲ್ಲ. ಹಾಗೂ ನೀರೂ ಗಾಳಿಯೂ ನಮ್ಮೆಲ್ಲರ ಆರೋಗ್ಯವನ್ನು ಕೆಡಿಸಿವೆ. ಏನಾದರೂ ಪ್ರಮಾದ ಸಂಭವಿಸಿದರೆ, ನಾವು ಢಿಲ್ಲಿಗೆ ಬಂದುದೇ ತಪ್ಪಾಯಿತೆಂದು ತಿಳಿಯಬೇಕಾಗುವುದು. ನಮ್ಮ ಸೈನಿಕರು ನಮ್ಮ ದೇಹವನ್ನು ನೆರಳಿನಂತೆ ಹಿಂಬಾಲಿಸುತ್ತಾರೆಂಬುದು ನಿಜ; ಆದರೂ ಅವರನ್ನೆಲ್ಲ ಊರಿಗೆ ಕಳುಹಿಸದೆ ನಿರ್ವಾಹವಿಲ್ಲ. ನಾವು ಅವರನ್ನೆಲ್ಲ ಹಿಂದಕ್ಕೆ ಕಳುಹಿಸಬೇಕೆಂದು ನಿಶ್ಚಸಿರುವೆವು. ಅವರಿಗೆ ಬಾದಶಹರ ಹೆಸರಿನಲ್ಲಿ ‘ರಹದಾರಿ’ ಗಳನ್ನು ಕೊಡಿಸಬೇಕಾಗಿ ಅಪೇಕ್ಷಿಸುತ್ತೇನೆ” ಎಂದು ಹೇಳಿದನು. ರಾಜಸಿಂಹನು ಬಾದಶಹನಿಗೆ ಶಿವಾಜಿಯ ಪ್ರಾರ್ಥನೆಯನ್ನು ಅರಿಕೆ ಮಾಡಿದನು. ಅವರಂಗಜೇಬನು ಆ ಪ್ರಸ್ತಾಪಕ್ಕೆ ಒಪ್ಪಿದನು. ಶಿವಾಜಿಯ ಆಪ್ತ ಅನುಚರರಲ್ಲದೆ ಮಿಕ್ಕವರೆಲ್ಲರೂ ಯಜಮಾನನ ನಿರ್ಬಂಧದಿಂದ ಊರಿಗೆ ಮರಳಿದರು.
ಸೈನಿಕರೆಲ್ಲರು ಹಿಂದೆರಳಿದ ಬಳಿಕ ಶಿವಾಜಿಯು ಮೈಯಲ್ಲಿ ಸ್ವಸ್ಥವಿಲ್ಲವೆಂದು ಹಾಸಿಗೆ ಹಿಡಿದು ಮಲಗಿದನು. ಶಿವಾಜಿಯ ಅಸ್ವಸ್ಥತೆಯ ಸುದ್ದಿಯು ಢಿಲ್ಲಿಯಲ್ಲೆಲ್ಲಾ ಹಬ್ಬಿತು. ಜನರು ಶಿವಾಜಿಯನ್ನು ನೋಡುವುದಕ್ಕೆ ಗುಂಪುಗುಂಪಾಗಿ ಶಿಬಿರಕ್ಕೆ ಬಂದರು. ಆದರೆ ರಾಜಸಿಂಹನ ಮುಅಜಮನ ಹೊರತು ಮಿಕ್ಕವರಿಗೆ ಶಿವಾಜಿಯನ್ನು ನೋಡುವುದಕ್ಕೆ ಅಪ್ಪಣೆಯಿರಲಿಲ್ಲ. ಇವರಿಬ್ಬರು ಸಹ ಶಿವಾಜಿಯು ನಿಜವಾಗಿ ಅಸ್ವಸ್ಥನಾಗಿರುವನೋ ಇಲ್ಲವೋ ಎಂದು ಸರಿಯಾಗಿ ತಿಳಿಯದೆ ಹೋದರು. ಶಿವಾಜಿಯ ಅಸ್ವಸ್ಥದಿಂದ ಎಲ್ಲರೂ ದುಃಖಿತರಾದರು. ಅವನ ಕ್ಷೇಮವನ್ನು ಎಲ್ಲರೂ ವಿಚಾರಿಸುತ್ತಿದ್ದರು. ಶೈಲಿನಿಯೂ ಪ್ರತಿದಿನ ತನ್ನ ತಂದೆಯು ಮನೆಗೆ ಬಂದೊಡನೆ ಅದೇ ಪ್ರಶ್ನೆಯನ್ನು ಕೇಳುತ್ತಿದ್ದಳು. ಶಿವಾಜಿಯು ಹೇಗಿರುವನೆಂದು ನೋಡುವುದಕ್ಕೆ ಅವಳ ಪ್ರಾಣವು ತುಡಿದುಕೊಳ್ಳುತ್ತಲಿತ್ತು. ಗುಪ್ತವೇಷದಿಂದ ಅವನಿದ್ದಲ್ಲಿಗೆ ಹೋಗುವೆನೆಂದು ಒಂದು ಸಲ ಯೋಚಿಸಿದಳು. ಒಡನೆ ತನ್ನನ್ನು ಯಾರಾದರೂ ಗುರುತಿಸಿದರೆ, ತನ್ನ ಅವಸ್ಥೆಯೂ ಅನ್ಯರ ಅವಸ್ಥೆಯೂ ಏನಾಗುವುದೆಂದು ಚಿಂತಿಸಿದಳು. ಅಸ್ವಸ್ಥವು ಸ್ವಲ್ಪ ಗುಣವಾದಂತೆ ಸುದ್ದಿ ಎದ್ದಿತು. ತಾನು ಕ್ಷೇಮವನ್ನು ಹೊಂದಿದುದಕ್ಕೆ ಶಿವಾಜಿಯು ಪ್ರತಿ ಬೃಹಸ್ಪತಿವಾರ ಗುರುಪೂಜೆಯನ್ನು ಮಾಡಲಾರಂಭಿಸಿದನು. ಪ್ರತಿ ಗುರುವಾರ ಹಗಲು ಮಹೋತ್ಸವದಿಂದ ಪೂಜೆಯನ್ನು ರಾತ್ರಿ ಭಗವನ್ನಾಮಸಂಕೀರ್ತನವನ್ನೂ ಮಾಡಿ ದೇವರಿಗೆ ನಿವೇದನ ಮಾಡಿದ ಭಕ್ಷ್ಯಾದಿಗಳನ್ನು ದೊಡ್ಡದೊಡ್ಡ ಬಿದಿರಬುಟ್ಟಿಗಳಲ್ಲಿ ತುಂಬಿ, ಬ್ರಾಹ್ಮಣರಿಗೂ ಮುಖ್ಯ ಮುಖ್ಯರಾದ ಅಧಿಕಾರಿಗಳಿಗೂ, ಬೈರಾಗಿಗಳಿಗೂ, ಫಕೀರರಿಗೂ ಹಂಚುವಂತೆ ಆಜ್ಞೆ ಮಾಡಿದನು. ಮೊದಮೊದಲು ಕಾವಲುಗಾರರು ಬುಟ್ಟಿಗಳನ್ನು ಶೋಧಿಸದೆ ಬಿಡುತ್ತಿರಲಿಲ್ಲ. ಪ್ರತಿ ಗುರುವಾರವು ಈ ರೀತಿಯಾಗಿ ಭಕ್ಷದ ಬುಟ್ಟಿಗಳು ಹೋಗಲಾರಂಭಿಸಿದಂತೆ ಮೊಘಲ್ ಕಾವಲುಗಾರರು ತಮ್ಮ ತಮ್ಮ ಕಾರ್ಯದಲ್ಲಿ ಉದಾಸೀನರಾಗಿ, ಪರೀಕ್ಷೆ ಮಾಡದೆಯೇ ಬುಟ್ಟಿಗಳನ್ನು ಬಿಡುತ್ತ ಬಂದರು. ಶಿವಾಜಿಯು ಗುಣಹೊಂದುತ್ತ ಬರುವಷ್ಟಕ್ಕೆ ಈ ಪೂಜೆಯು ಮಹಾವೈಭವದಿಂದ ನಡೆಯತೊಡಗಿತು. ಈ ವೈಭವವು ಹೆಚ್ಚಿದಷ್ಟಕ್ಕೆ ಕಾವಲುಗಾರರ ಕಾರ್ಯ ಸಡಿಲವಾಗುತ್ತ ಬಂದವು. ಶಿವಾಜಿಯು ಯಾವ ಉಪಾಯಗಳಿಂದ ತನ್ನ ಉದ್ದೇಶವನ್ನು ಕೊನೆಗಾಣಿಸಬೇಕೆಂದಿದ್ದನೋ ಆ ಉಪಾಯಗಳು ಫಲಿಸುವುದಕ್ಕೆ ಅನುಕೂಲವಾಗಿ ಸಮಯವು ಬಂದೊದಗಿತು.
ಅವರಂಗಜೇಬನು ಶಿವಾಜಿಯ ಪೂಜಾಕೃತ್ಯಗಳನ್ನು ನೋಡಿ ಮಾಯಾವಿಯಾದನು. ಶಿವಾಜಿಯು ಅವುಗಳನ್ನು ಏಕೆ ನಡೆಯಿಸುವನೆಂದು ರಾಜಸಿಂಹನೊಡನೆ ವಿಚಾರಿಸಿದನು. ರಾಜಸಿಂಹನು ಅವುಗಳಿಂದ ಮೋಸವೇನೂ ಇರಲಾರದೆಂದು ಬಾದಶಹನಿಗೆ ಭರವಸೆಯಿತ್ತನು. ಸಂದೇಹಗ್ರಸ್ತನಾದ ಬಾದಶಹನಿಗೆ ಈ ಉತ್ತರವು ಸಮರ್ಪಕವಾಗಲಿಲ್ಲ. ಶಿವಾಜಿಯ ಮೇಲಿನ ಕಾವಲನ್ನು ಬಿಗಿಮಾಡುವಂತೆ ಅವನು ತನ್ನ ಸೈನಿಕರಿಗೆ ಆಜ್ಞೆ ಮಾಡಿದನು. ಹಾಗೂ ತಾವು ಯೋಚಿಸಿದ ಕಾರ್ಯವನ್ನು ಬೇಗನೆ ನೆರವೇರಿಸಬೇಕೆಂದು ರಾಜಸಿಂಹನಿಗೆ ಸೂಚಿಸಿದನು. ಎಂದಿನಂತೆ ಬೃಹಸ್ಪತಿವಾರವು ಬಂದಿತು. ಪೂಜೆಯು ಸ್ವಲ್ಪ ವಿಳಂಬವಾಗಿ ನಡೆಯಿತು. ರಾತ್ರಿ ೪ ಗಳಿಗೆಯಾಯಿತು. ಭಿಕ್ಷುಕರೂ, ಬಡವರೂ, ಪೀರರೂ, ಫಕೀರರೂ, ಶಿವಾಜಿಯ ಶಿಬಿರವನ್ನು ಮುತ್ತಿಕೊಂಡಿದ್ದರು. ಎಂದಿನಂತೆ ಭಕ್ಷ ಭೋಜ್ಯಗಳನ್ನು ಎಲ್ಲರಿಗೂ ಹಂಚಿದರು. ಬ್ರಾಹ್ಮಣರು ದಕ್ಷಿಣೆಗಳಿಂದ ಸಂತೃಪ್ತರಾಗಿ ಶಿವಾಜಿಯನ್ನು ಹರಸಿ ಹೋದರು. ನೂರಾರು ಬುಟ್ಟಿಗಳನ್ನು ಧರಿಸಿ, ಅನಾಧರೂ ಆಶನಾರ್ಥಿಗಳೂ ಕೋಟೆಯ ಮಾರ್ಗವಾಗಿ ನಡೆದರು. ಇವರ ನಡುವಿನಲ್ಲಿ “ಭೀಮಕಾಯರಾದ ಇಬ್ಬರು ಮಾವಾಳಿಗಳು ಎರಡು ಬುಟ್ಟಿಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮನೆಯಿಂದ ಹೊರಟು, ಢಿಲ್ಲಿಯಿಂದಾಚೆ”ಗೆ ನುಸುಳಿಬಿಟ್ಟರು. ಮುಸಲ್ಮಾನ್ ಕಾವಲುಗಾರರು ತಮಗೆ ಸಿಕ್ಕಿದ ಖಾದ್ಯ ಪದಾರ್ಥಗಳ ವಿಚಾರದಲ್ಲಿ ಮಗ್ನರಾಗಿದ್ದುದರಿಂದ, ಬರುವವರ, ಹೋಗುವವರ ಬುಟ್ಟಿಗಳನ್ನು ಪರೀಕ್ಷಿಸಿ ನೋಡದೆ, ತಲೆಯ ಮೇಲೆ ಬುಟ್ಟಿ ಹೊತ್ತವರನ್ನು ಹೊರಕ್ಕೆ ಹೋಗಬಿಟ್ಟರು. ಕತ್ತಲು ಬಲವಾಗುತ್ತ ಬಂದಿತು. ಕೋಟೆಯ ಹೊರಕ್ಕೆ ಹೋಗುವವರೆಲ್ಲರೂ ಅವಸರಗೊಂಡರು. ಪಹರೆಯವರು ರಾತ್ರಿಯಾಯಿತೆಂದು ಕೋಟೆಯ ಹೆಬ್ಬಾಗಿಲನ್ನು ಮುಚ್ಚಿಬಿಟ್ಟರು. ಇದುವರೆಗೆ ಅಂಬೋಧಿಯಂತೆ ಕಲಕಲಮಯವಾದ ಶಿಬಿರವು ನಿರ್ಜನವಾದ ಕಾಂತಾರದಂತೆ ನಿಶ್ಯಬದ್ಧವಾಯಿತು.
ಕೃಷ್ಣಪಕ್ಷದ ಕಾಳಿಮೆಯ ರಾತ್ರಿ ಆಕಾಶದಿಂದ ಸುರಿವ ತಿಮಿರ ಧಾರೆಯಲ್ಲಿ ಢಿಲ್ಲಿನಗರವು ನೆನೆದುಹೋಗಿ ಮುಸುಕಾಗಿ ತೋರುತ್ತಲಿತ್ತು. ಬಾದಶಹನ ಅರಮನೆಯಿಂದ ಒಬ್ಬ ಯುವಕನು ಹೊರಕ್ಕೆ ಬಂದನು. ಪಹರೆಯವನು ಕೈಯಲ್ಲಿದ್ದ ಆಯುಧವನ್ನು ಎತ್ತಿ ತೋರಿಸಿ, ರಾಜದ್ವಾರವನ್ನು ತೆರೆದುಬಿಟ್ಟನು. ಯುವಕನು ರಾಜಮಾರ್ಗಕ್ಕೆ ಇಳಿದನು. ಅವನ ಹಿಂದುಗಡೆಯಲ್ಲಿಯೇ ರಾಜದ್ವಾರವು ಕಣಕಣ ಶಬ್ದದಿಂದ ಮುಚ್ಚಲ್ಪಟ್ಟಿತು. ಯುವಕನು ಬಾದಶಹನ ಜೇಷ್ಠ ಪುತ್ರನಾದ ಮುಅಜಮ್ ಆಗಿದ್ದನು. ಶಿವಾಜಿಯು ಪೂಜೆಯ ನೆವದಿಂದ ಹಂಚುತ್ತಲಿದ್ದ ಬುಟ್ಟಿಗಳನ್ನು ಪುನಃ ಪರೀಕ್ಷಿಸಬೇಕೆಂದು ಮುಅಜಮನು ಸಾಯಂಕಾಲದಲ್ಲಿಯೇ ಆಜ್ಞಪ್ತನಾಗಿದ್ದನು. ತಂದೆಯ ಈ ಆಜ್ಞೆಯನ್ನು ಶಿರಸಾವಹಿಸುವುದು ಯುವಕನಿಗೆ ಅಸಾಧ್ಯವಾಗಿತ್ತು. ಅದಕ್ಕೆ ಕಾರಣವೊಂದಿತ್ತು. ಸುರಾದೇವಿಯು ಅವನ ಶಿರಸ್ಸಿನಲ್ಲಿ ಅವಿರ್ಭವಿಸಿದ್ದುದರಿಂದ, ಪಿತೃವಿನ ಆಜ್ಞೆಗೆ ಅಲ್ಲಿ ಸ್ಥಳವಿರಲಿಲ್ಲ. ಬಾದಶಹನ ಆಜ್ಞೆಯನ್ನು ಮನಃಪೂರ್ವಕವಾಗಿ ಈ ಸತ್ಪುತ್ರನು ಪಾಲಿಸಿದ್ದರೆ, ಭಾತರವರ್ಷದ ಇತಿಹಾಸವು ಬೇರೊಂದು ರೂಪವನ್ನು ಹೊಂದುತ್ತಿತ್ತು. ಮುಅಜಮನು ನೆಟ್ಟಗೆ ಶಿವಾಜಿಯ ಶಿಬಿರದ ಕಡೆಗೆ ನಡೆಯುವ ಬದಲಾಗಿ ತೆರೆಮಸಗಿದ ಕಡಲಿನಲ್ಲಿ ಚುಕ್ಕಾಣಿ ಇಲ್ಲದ ನಾವೆಯಂತೆ ಕಂಡ ಕಂಡ ಕಡೆಗೆ ಅಲೆದನು. ಕೊನೆಗೆ ಈ ನಾವೆಯು ರಾಜಸಿಂಹನ ಮಂದಿರದ ಬಳಿಯಲ್ಲಿ ಬಂದು ನಿಂತಿತು. ರಾಜಸಿಂಹನನ್ನು ಈಗ ತಾನೆ ಅರಮನೆಯಲ್ಲಿ ಸ್ವತಃ ನೋಡಿದ್ದರೂ, ಮುಅಜಮನು ಅವನನ್ನು ಕುರಿತು ಮನೆಯೊಳಗೆ ವಿಚಾರಿಸಿದನು. ರಾಜಸಿಂಹನು ಮನೆಯಲ್ಲಿ ಇಲ್ಲದಿದ್ದರೂ ಮುಅಜಮನು ಅನೇಕ ಸಲ ಶೈಲಿನಿಯೊಡನೆ ಮಾತುಕತೆ ಮಾಡುವುದಕ್ಕೆ ಅವನ ಮನೆಗೆ ಬಂದು ಹೋಗುತ್ತಿದ್ದನು. ಶೈಲಿನಿಯ ಪ್ರಣಯವನ್ನು ಸಾಧಿಸುವುದಕ್ಕೆ ಅವನು ನಾನಾ ಉಪಾಯಗಳನ್ನು ಮಾಡಿದ್ದನು. ಒಂದು ಸಲ ನೂರಾರು ಸುರಾಪೂರಿತ ಸೀಸೆಗಳನ್ನು ತರಿಸಿಕೊಂಡು ಬಂದನು. ಶೈಲಿನಿಯು ಪ್ರಸನ್ನಳಾಗದೆ ಸುರೆಯನ್ನು ತಂದವನೊಡನೆ, “ಇವುಗಳು ನಮ್ಮಲ್ಲಿ ಬಿಕರಿಯಾಗವು. ಅವಕ್ಕೆ ಬಾದಶಹನ ಅಂತಃಪುರದಲ್ಲಿ ಬೆಲೆ ಬರುವುದು” ಎಂದು ಮುಅಜಮನು ಕೇಳುವಂತೆ ಹೇಳಿ ನಡೆದುಬಿಟ್ಟಳು. ಮುಅಜಮನು ಸಿಟ್ಟುಗೊಂಡು ತನ್ನ ಪರಾಕ್ರಮವನ್ನು ತೋರಿಸುವುದಕ್ಕೆ ಮತ್ತಾವುದನ್ನೂ ಕಾಣದೆ, ಸೀಸೆಗಳ ಕೊರಳುಗಳನ್ನು ಮುರಿದು, ಕೆನ್ನೀರನ್ನು ಪಾನಮಾಡಿಬಿಟ್ಟನು. ಇನ್ನೊಮ್ಮೆ ಮುಅಜಮನು ಸ್ವತಃ ಹೋಗದೆ ತನ್ನದೊಂದು ತಸಬೀರನ್ನೂ ಪ್ರಣಯ ಪತ್ರಿಕೆಯನ್ನೂ ಕಳುಹಿಸಿದನು. ಶೈಲಿನಿಯು ಪ್ರತಿಯಾಗಿ “ನಿನ್ನ ಪ್ರಣಯ ಪಾತ್ರಳ ತಸಬೀರು ಇಲ್ಲದೆ ಇದ್ದುದರಿಂದ, ಅದರ ಮಾತ್ರಿಕೆ (ಒರಿಜಿನಲ್ ಕಾಪಿ)ಯನ್ನು ಕಳುಹಿಸಿರುವೆನು” ಎಂದು ಪತ್ರ ಬರೆದು ಸಿಪಾಯಿಯ ಒಡನೆ ಒಂದು ದೊಡ್ಡ ವಾನರಿಯನ್ನು ಕಳುಹಿಸಿದಳು. ಮತ್ತೊಮ್ಮೆ ಮುಅಜಮನು ಶಿವಾಜಿಯ ವೇಷವನ್ನು ಅಳವಡಿಸಿಕೊಂಡು ಶೈಲಿನಿಯ ಮಂದಿರಕ್ಕೆ ಹೋದನು. ಶೈಲಿನಿಯು ಬಂದವನನ್ನು ಕುಳ್ಳಿರಿಸಿ, “ಸಿಂಹಚರ್ಮದಲ್ಲಿ ಕತ್ತೆ” ಎಂಬ ಪಾರಸೀ ಕಥೆಯನ್ನು ಅವನಿಗೆ ಓದಲು ಕೊಟ್ಟು, ತನ್ನ ದಾಸಿಯನ್ನು ಕರೆದು, ಬಂದವನನ್ನು ಸತ್ಕರಿಸೆಂದು ಹೇಳಿ ಹೋಗಿಬಿಟ್ಟಳು. ಶೈಲಿನಿಯ ತಿರಸ್ಕಾರವನ್ನು ಮುಅಜಮನು ರಾಜಸಿಂಹನಿಗೆ ತಿಳಿಸಿದ್ದನು. ಹಾಗೂ ಅವಳು ಶಿವಾಜಿಯನ್ನು ಪ್ರೀತಿಸಿ, ಗುಪ್ತವೇಷದಿಂದ ಮರಾಟರ ಶಿಬಿರಕ್ಕೆ ಹೋಗುತ್ತಿದ್ದಳೆಂದು ಹೇಳಿದ್ದನು. ರಾಜಸಿಂಹನು ಕೋಪಾವಿಷ್ಟನಾಗಿ ಮಗಳನ್ನು ಅವಳ ಚಿಕ್ಕಮನೆಯಲ್ಲಿ ಮುಚ್ಚಿಟ್ಟನು. ಮಹಡಿಯ ಬಳಿಯಲ್ಲಿ ಬೆಳೆದಿದ್ದ ಮರವನ್ನು ಕಡಿದು ಹಾಕಿಸಿದನು. ಶೈಲಿನಿಯ ಸೆರೆಮನೆಯನ್ನು ಒಳಹೋಗಲು ಮುಅಜಮನಿಗಲ್ಲದೆ ಮತ್ಯಾರಿಗೂ ಅಪ್ಪಣೆಯಿರಲಿಲ್ಲ. ಶೈಲಿನಿಯು ಇದುವರೆಗೆ ತನಗೆ ತೋರಿಸಿದ ಅಲಕ್ಷ್ಯಭಾವಕ್ಕೂ ಹಾಸ್ಯಕರವಾದ ಆಚರಣೆಗೂ ತಕ್ಕದಾದ ಶಾಸ್ತಿಯನ್ನು ಮಾಡಬೇಕೆಂದು, ಮುಅಜಮನು ಈ ರಾತ್ರಿ ಶೈಲಿನಿ ಇದ್ದಲ್ಲಿಗೆ ಬಂದಿದ್ದನು.
ಮುಅಜಮನು ಉಪ್ಪರಿಗೆಯನ್ನು ಹತ್ತಿ, ಶೈಲಿನಿಯ ಮಂದಿರದ ಬಾಗಿಲನ್ನು ತೆರೆದು ಒಳಕ್ಕೆ ಕಾಲಿಟ್ಟನು. ಅಚ್ಚರಿಗೊಂಡ ಕಣ್ಣುಗಳಿಂದ ಬಾಯಿಬಿಟ್ಟು ಅಪ್ರತಿಭನಾಗಿ ಅಲ್ಲಿಯೇ ನಿಂತು ನೋಡಿದನು. ಶೈಲಿನಿಯು ಅಲ್ಲಿರಲಿಲ್ಲ. ದುರ್ಜನರ ಅಶುದ್ಧಾಚರಣೆಯಿಂದ ಹಾಳಾದ ಊರಿನಿಂದ ಪುರದೇವತೆಯು ತೊಲಗುವಂತೆ ಶೈಲಿನಿಯು ತನ್ನ ಮನೆಯಿಂದ ಓಡಿಹೋಗಿದ್ದಳು. ಕಣ್ತೆರೆದು ಎಲ್ಲಾ ಕಡೆಗಳಲ್ಲಿ ನೋಡಿದನು. ದೀಪವನ್ನು ಕೈಯಲ್ಲಿ ಕೊಂಡು ಕೊಟ್ಟಡಿಯನ್ನೆಲ್ಲಾ ಹುಡುಕಿದನು. ಉನ್ನತವಾದ ಉಪ್ಪರಿಗೆಯಲ್ಲಿ ಬಂಧಿತಳಾದವಳು ಅಲ್ಲಿಂದ ಹೇಗೆ ಜಾರಿಹೋದಳೆಂದು ನೋಡುತ್ತಿರುವಾಗ ಅವನಿಗೆ ಒಂದಕ್ಕೊಂದು ಜೋಡಾಗಿ ಬಿಗಿದ, ಒಂದು ಕೊನೆಯನ್ನು ಕೊಟ್ಟಡಿಯ ತೊಲೆಗೆ ಸುತ್ತಿ, ಮತ್ತೊಂದನ್ನು ಕಿಟಕಿಯಿಂದ ಕೆಳಗೆ ಇಳಿಬಿಟ್ಟ, ಎರಡು ಪಟ್ಟೆಯ ಸೀರೆಗಳು ಕಂಡು ಬಂದವು. ಶೈಲಿನಿಯು ಇವುಗಳ ಸಹಾಯದಿಂದ ಕೆಳಕ್ಕೆ ಇಳಿದು, ಪಲಾಯನ ಮಾಡಿರ ಬೇಕೆಂದು ಮುಅಜಮನು ತಿಳಿದುಕೊಂಡನು. ಇನ್ನೂ ಕಾಲಕಳೆದರೆ ಕಾರ್ಯವು ಕೆಟ್ಟುಹೋಗುವುದೆಂದು ಎಣಿಸಿ, ಅವಳನ್ನು ಹುಡುಕುವುದಕ್ಕೆ ಹೊರಟನು. ಮೊದಲು ಶೈಲಿನಿಯು ಮರಾಟರ ಶಿಬಿರಕ್ಕೆ ಓಡಿಹೋಗಿರಬಹುದೆಂದು ಅವನು ನಿಶ್ಚಯಿಸಿದನು. ಅವನ ಊಹೆಗೆ ಕಾರಣವಿಲ್ಲದಿರಲಿಲ್ಲ. ಇದು ಅವನ ಮನಸ್ಸಿಗೆ ಹೊಳೆದೊಡನೆ ಅವಳನ್ನು ಹಿಡಿದುತಂದು, ಅವಳ ತಂದೆಯ ವಶದಲ್ಲಿ ಕೊಟ್ಟು ಅವಳು ಮಾಡಿದ ದುಷ್ಕಾರ್ಯವನ್ನು ಅವಳ ಮುಖಕ್ಕೆ ಇಟ್ಟು ತನ್ನ ಪರಾಕ್ರಮವನ್ನು ತೋರಿಸಬೇಕೆಂದು ಅವನು ನಿರ್ಧರಿಸಿ ಕೆಳಕ್ಕೆ ಇಳಿದನು. “ಅಂದು ನಾನು ಕಾಲಿಗೆ ಎರಗಿದಾಗ ನನ್ನನ್ನು ಎಡವಿ ಒದ್ದು ಬಿಟ್ಟಳು. ತಾಯಿ ತಂದೆಗಳಿಗೆ ನಮಸ್ಕರಿಸಿದ ನನ್ನ ಪವಿತ್ರ ಮಸ್ತಕವನ್ನು ಈ ಮೂಳಿಯು ಚೆಂಡಾಡಿದಂತೆ ಒದೆದುಬಿಟ್ಟಳು. ಈ ‘ಹರಾಮ್ ಖೋರಿ’ಯನ್ನು ಮೂಗುದಾರ ಹಿಡಿದು, ಹಟ್ಟಿಗೆ ಒಯ್ಯದೆ ಬಿಡೆನು” ಎಂದು ಮನಸ್ಸಿನಲ್ಲಿಯೇ ಅನ್ನುತ್ತ, ಮುಅಜಮನು ಮಾರ್ಗಕ್ಕೆ
ಬಂದನು.
ರಾತ್ರಿ ೧೦ ಗಳಿಗೆ ಕಳೆಯಿತು. ಪೃಥ್ವಿಗೆ ಗಂಢಾಂಧಕಾರವಾದ ಆವರಣವು ಸುತ್ತಿತ್ತು. ಶಾಂತವಾದ ಢಿಲ್ಲಿನಗರವು ಪೃಕೃತಿಯ ಸುಷುಪ್ತಿಯಲ್ಲಿ ಸ್ವಪ್ನಮಯವಾಗಿತ್ತು. ಮಾರ್ಗಗಳಲ್ಲೆಲ್ಲಾ ನಿರ್ಜನ, ನಿಶ್ಯಬ್ಧ, ಭೂಗಗನಗಳ ಅಂತರವು ಉಜ್ವಲವಾದ ನಕ್ಷತ್ರಗಳಿಂದ ಅಲ್ಲದೆ ತಿಳಿಯಲು ಅಸಾಧ್ಯ. ನೀಲವಾದ ಆಕಾಶದಲ್ಲಿ ಪ್ರಭಾಪುಂಜದಂತಿರುವ ಸಾವಿರಾರು ನಕ್ಷತ್ರಗಳು, ಕರಿಕಂಬಳಿಯಲ್ಲಿ ದಟ್ಟವಾಗಿ ಚಿಮುಕಿಸಿದ ವಜ್ರದ ಗೊಂಚಲುಗಳಂತಿರುವ ನಕ್ಷತ್ರಗಳು. ಈ ನಿಶೆಯಲ್ಲಿ ಶೈಲಿನಿಯು ಒಬ್ಬಳೇ ನಡೆದುಬಿಟ್ಟಿದ್ದಳು. ಎಲ್ಲಿಗೆ ಹೋಗುತ್ತಿದ್ದಳೆಂಬುದು ವಾಚಕರಿಗೆ ತಿಳಿದಿದೆ. ರಾಜಮಾರ್ಗದಿಂದ ಕವಲಾಗಿ ಹೋದ, ಅಳಿಸಿದ ಕಾಲು ಹಾದಿಯನ್ನು ಹಿಡಿದು ಅವಳು ಹೋಗುತ್ತಿದ್ದಳು. ಹಾದಿಯಲ್ಲಿ ಜನಸಂಚಾರವಿರಲಿಲ್ಲ. ಇದ್ದರೂ ಶೈಲಿನಿಯ ಗುರುತು ಯಾರಿಗೂ ಹತ್ತದು. ಮೊದಲೇ ಅಂಧಕಾರ; ಅದರ ಮೇಲೆ ಅವಳು ಗಂಡು ಉಡುಪನ್ನು ಉಟ್ಟುಕೊಂಡಿದ್ದಳು. ಆ ಕಾಲದಲ್ಲಿ ರೋಗಿಗಳ ಚಿಕಿತ್ಸೆಗೆ ಹೋಗುವ ‘ಹಕೀಮರು’ ಯಾವ ಉಡುಪನ್ನು ಧರಿಸಿ ಕೊಳ್ಳುತ್ತಿದ್ದರೋ, ಆ ವೇಷವನ್ನು ಶೈಲಿನಿಯು ಇಂದು ಅಳವಡಿಸಿದ್ದಳು. ಇದೇ ವೇಷದಲ್ಲಿ ಅವಳು ಈ ಮೊದಲು ಒಂದೆರಡು ಸಲ ಮರಾಟರ ಶಿಬಿರಕ್ಕೆ ಹೋಗಿದ್ದಳು. ಅವಳ ‘ಇಚ್ಛಿತವರ’ನು ಸಂಕೇತ ಮಾಡಿದ ರಾತ್ರಿಯಲ್ಲೇ ಶೈಲಿನಿಯು ಅವನ ಆಶಾನುಬದ್ಧಳಾಗಿ ಒಂದು ಗುರವಾರ ಹೋದಳು. ಆದರೆ ಆದಿನ ಶಿವಾಜಿಯು ತನ್ನ ಪರಿಜನರೊಡನೆ ಯಾವುದೋ ಒಂದು ರಾಜ್ಯಾಲೋಚನೆಯನ್ನು ಕುರಿತು ವಿಚಾರಮಗ್ನನಾಗಿದ್ದುದರಿಂದ, ಶೈಲಿನಿಯು ಕೃತಕಾರ್ಯಳಾಗಲಿಲ್ಲ. ಶಿವಾಜಿಯ ಅಸ್ವಸ್ಥವು ಶೈಲಿನಿಯ ಪುನರಾಗಮನಕ್ಕೆ ಕಾರಣವಾಯಿತು. ಶಿವಾಜಿಗೆ ಮೂಲಿಕೆಯನ್ನು ತಂದುಕೊಡುವ ನಿಮಿತ್ತವಾಗಿ ಶೈಲಿನಿಯು ‘ಹಕೀಮ’ ವೇಷದಲ್ಲಿ ಬಂದು ಹೋಗುತ್ತಿದ್ದಳು. ಇದೆಲ್ಲವನ್ನು ಶಿವಾಜಿಯು ಅರಿತಿದ್ದನೋ ಇಲ್ಲವೋ ತಿಳಿಯದು. ಆದರೆ ‘ಹಕೀಮ’ ನನ್ನು ಮರಾಟರು ಶಿಬಿರದಲ್ಲಿ ಪ್ರವೇಶ ಮಾಡುವುದಕ್ಕೆ ಯಾರು ಅಡ್ಡಿ ಮಾಡುತ್ತಿರಲಿಲ್ಲ. ಅವಳು ಒಳಹೋಗಿ ಯಾರೋ ಒಬ್ಬನ ಕೂಡೆ ಮಾತನಾಡಿ ಮರಳಿಹೋಗುತ್ತಿದ್ದಳು. ಈ ಕಥಾಪ್ರಾರಂಭದಲ್ಲಿ, ಯಾರು ರಹಸ್ಯವಾಗಿ ಶೈಲಿನಿಯ ಮಂದಿರದ ಮರ ಹತ್ತಿ ಅವಳ ಪಾಣಿಗ್ರಹಣ ಮಾಡಿದನೋ ಆ ಮಹಾಶಯನೊಡನೆ ಮಾತನಾಡಿ ಶೈಲಿನಿಯು ಮನೆಗೆ ಹಿಂತೆರಳುತ್ತಿದ್ದಳು. ಎರಡು ದಿವಸಗಳ ಹಿಂದೆ, ಇವರಿಬ್ಬರು ಮರಾಟ ಶಿಬಿರದ ಬಳಿಯಲ್ಲಿ ಏಕಾಂತವಾಗಿ ಪ್ರಣಯ ಸಲ್ಲಾಪ ಮಾಡುತ್ತಿದ್ದಾಗ ಮುಅಜಮನು ಶೈಲಿನಿಯ ಗುರುತು ಹಿಡಿದನು. ಮುಅಜಮನು ಅವರ ಸಂಭಾಷಣೆಗೆ ವಿಘ್ನವಾಗಿ ಬಂದುದು ಮಾತ್ರವಲ್ಲ. ಅದಕ್ಕಿಂತಲೂ ಸ್ವಲ್ಪ ದೂರಕ್ಕೆ ಹೋದನು. ಅವಳು ಕೋಪಗೊಂಡು ತನ್ನ ಕೈಬಿಟ್ಟಿದ್ದು ಒಂದು; ಅನ್ಯರಿಗೆ ಕೈಕೊಟ್ಟಿದ್ದು ಒಂದು. ಇವೆರಡರಿಂದ ಮುಅಜಮನು ರೋಷಾವೇಶಗೊಂಡನು. ಅವನು ಶೈಲಿನಿಯ ವಿಷಯವಾಗಿ ರಾಜಸಿಂಹನ ಕಿವಿಯಲ್ಲಿ ದೂರು ಸುರಿದನು. “ಶಿವಾಜಿಯು ನಿನ್ನ ಮಗಳನ್ನು ಎತ್ತಿಕೊಳ್ಳುವನು” ಎಂದು ಗದ್ದಲ ಹಚ್ಚಿದನು. ಮುಅಜಮನು ಈ ಮಾತಿನಿಂದ ಶಿವಾಜಿಯ ಮೇಲೆ ರಾಜಸಿಂಹನಿಗೆ ಇದ್ದ ಆಲಕ್ಷಭಾವವು ದ್ವೇಷವಾಗಿ ಪರಿಣಮಿಸಿತು. ಮಗಳು ಜಾರಿಹೋಗದಂತೆ ರಾಜಸಿಂಹನು ಅವಳನ್ನು ಕೊಟ್ಟಡಿಯಲ್ಲಿ ಮುಚ್ಚಿಟ್ಟನು. ದಿನಕ್ಕೆ ಎರಡು ಬಾರಿ ರಾಜಸಿಂಹನು ಅವಳನ್ನು ನೋಡುವನು; ಆದರೆ ಪೂರ್ವದಂತೆ ಮಾತನಾಡುತ್ತಿರಲಿಲ್ಲ. ರಾಜಸಿಂಹನ ದರ್ಶನವಾಗುತ್ತಲೇ ಬಂಧಿತಳಾದ ಶೈಲಿನಿಯು “ಶಿವಾಜಿ ಮಹಾರಾಜರು ಹೇಗಿರುವರು?” ಎಂದು ಕೇಳುವಳು ತಂದೆಯು ಮಾತಿಲ್ಲದವನಾಗಿ, ಶಿವಾಜಿಯ ಪೂರ್ವಜರ ನಾಮಸ್ಮರಣೆ ಮಾಡುತ್ತ ಮಹಡಿಯಿಂದ ಕೆಳಕ್ಕೆ ಇಳಿದು ಹೋಗುವನು. ಈ ದಿನ ರಾಜಸಿಂಹನು ಕಾರ್ಯಗೌರವದಿಂದ ಅರಮನೆಯಲ್ಲಿ ಹಗಲೆಲ್ಲಾ ತಳುವಿದ್ದನು. ಯಾವ ಕಾರ್ಯ ವಿಶೇಷದಿಂದ ಅವನು ವಿಳಂಬಿಸಿದನೋ ಅದನ್ನು ಶೈಲಿನಿಯು ತಿಳಿದಿದ್ದಳು. ರಾಜಸಿಂಹನು ಹಿಂದಿನ ರಾತ್ರಿ ಮುಅಜಮನೊಡನೆ ಬಾದಶಹನ ಯಾವ ಆಜ್ಞೆಯನ್ನು ತಾವು ಮನ್ನಿಸಬೇಕೆಂಬ ವಿಷಯದಲ್ಲಿ ಮಾತುಕಥೆಯನ್ನು ನಡೆಯಿಸುತ್ತಲಿದ್ದನೋ, ಆ ಮಾತುಗಳನ್ನೆಲ್ಲಾ ಶೈಲಿನಿಯು ಮಹಡಿಯ ಕೊಟ್ಟಡಿಯಲ್ಲಿ ಇದ್ದು ಕೇಳಿದಳು. ಅದಕ್ಕೋಸ್ಕರವೇ ಅವಳ ಹೃದಯವು ಮರಾಟರ ಶಿಬಿರಕ್ಕೆ ಹಾರಿಹೋಗುವುದಕ್ಕೆ ಸಂಕಷ್ಟಗೊಳ್ಳುತ್ತಲಿತ್ತು.
ಶೈಲಿನಿಯು ಕಾಲುನಡೆಯಾಗಿ ಹೋಗುತ್ತಿದ್ದಳು. ಹಾದಿಯಲ್ಲಿ ತಾನೇ ಆತ್ಮಗತ ವಿಚಾರ ಮಾಡುತ್ತಿದ್ದಳು. ಅವಳ ಇದಿರಿಗೆ ಆಕಾಶದಲ್ಲಿ ಚಂದ್ರನು ಉದಯವಾಗುತ್ತಲಿದ್ದನು. ರೋಹಿಣಿ ನಕ್ಷತ್ರವು ಚಂದ್ರನ ಸಮೀಪಕ್ಕೆ ಬರುವಂತೆ ಅವಸರಗೊಳ್ಳುತ್ತಲಿತ್ತು. ಶೈಲಿನಿಯು ನಿಶಾನಾಥನನ್ನು ನೋಡಿ ಏನೇನೋ ಹೇಳತೊಡಗಿದಳು. “ಚಂದ್ರನೇ, ನೀನು ವಿರಹಿಗಳ ವೈರಿ ಎಂಬುದು ನಿಜವೇ? ನೀನು ಕಾಮುಕರ ತಾಪಕಾರಕನೆಂಬುದು ಸತ್ಯವೇ? ಹಾಗಿದ್ದಲ್ಲಿ ಈ ಕತ್ತಲಾದ, ಕಂಗಾಣದ ಹಾದಿಯಲ್ಲಿ ನನ್ನ ಮಾರ್ಗದರ್ಶಕನಾಗಿ ಏಕೆ ಉದಯಿಸುತ್ತಲಿರುವೇ? ನಿನ್ನ ರೋಹಿಣಿಯು ನಿನ್ನ ಸಮೀಪಕ್ಕೆ ಬರುತ್ತಿರುವಳು. ನೀನು ದೂರ ದೂರಕ್ಕೆ ಹೋಗುತ್ತಿರುವುದೇಕೆ? ನನ್ನ ಜೀವಿತೇಶನು ನಿನ್ನಂತೆ ಗಗನದಲ್ಲಿ ಚಲಿಸುತ್ತಿದ್ದರೆ, ನಾನು ರೋಹಿಣಿಯಂತೆ ಅವನನ್ನು ಅನುವರ್ತಿಸುತ್ತಿದ್ದೆನು. ನನ್ನ ಪ್ರಿಯನು ನಿನ್ನಂತೆಯೇ ಇರುವನು; ನಿನ್ನಂತೆಯೇ ಸೌಂದರ್ಯಮಯನು; ಸುಧಾಮಯನು; ಶಾಂತನು ಛೇ. ಛೇ. ಈ ಸಾಮ್ಯವು ಸರಿಹೋಗದು. ಅವನ ಪ್ರೀತಿಯು ನಿನ್ನಂತೆ ದಿನೇ ದಿನೇ ಕುಂದಬಹುದೇ? ನೀನು ರೋಹಿಣಿಯಿಂದ ದೂರಕ್ಕೆ ಮನಸ್ವಿಯಾಗಿ ಸಾರುವಂತೆ, ಅವನ ಪ್ರೀತಿಯು ಗಳಿತವಾಗಬಹುದೇ? ಹಾಗೆ ಪ್ರೇಮವು ಕುಂದದಿದ್ದರೆ ಮೊನ್ನೆ ನನ್ನೊಡನೆ ಏತಕ್ಕೆ ಅಷ್ಟು ಉದಾಸೀನನಾದನು? ನಾವು ಏಕಾಂತದಲ್ಲಿದ್ದರೂ ನನ್ನನ್ನು ಸರಿಯಾಗಿ ಆದರಿಸಲಿಲ್ಲವೇಕೆ? ನನ್ನ ಪ್ರೇಮ ಸಲ್ಲಾಪವನ್ನು ಕಲ್ಲುನುಡಿಗಳಿಂದ ಜಗುಳಿಸಿದನೇಕೆ? “ನನ್ನ ಪ್ರೇಮಪಾಶಕ್ಕೆ ಸಿಕ್ಕಿ ಮೋಸಹೋದೆ” ಎಂದು ಮೈಮರೆತಂತೆ ಹೇಳಿದನೇತಕ್ಕೆ? ನನ್ನನ್ನು ಮಧುರವಾದ ಮಾತುಗಳಿಂದ ಕಳುಹಿಸಿಕೊಡಲಿಲ್ಲವೇಕೆ? ಛೇ. ಮನವೇ, ಕೊಂಚ ತಡೆ, ತಡೆ. ಸುಮ್ಮನೆ ಬಹಳ ದೂರಕ್ಕೆ ಯೋಚಿಸುತ್ತಿರುವೆ. ನೀನೂ ಅವನ ಪಕ್ಷವಾಗಿ ಹೇಳಲಾರೆಯಾ? ಶಿವಾಜಿಯು ಕಾರ್ಯಾಂತರದಲ್ಲಿರಬಹುದು. ದುಷ್ಟ ಅವರಂಗಜೇಬನ ಬಂದಿಯಿಂದ ತಪ್ಪಿಸಿಕೊಳ್ಳುವ ವಿಚಾರದಲ್ಲಿ ಅವನ ಮನಸ್ಸು ಮಗ್ನವಾಗಿದ್ದಿರಬಹುದು. ಹಾಗೆ ಮಗ್ನವಾಗಿತ್ತು ಎಂದು ತಿಳಿಯಲೆ? ಆದರೂ ಈ ಹತಭಾಗಿನಿಗೆ ಆ ಹೃದಯದಲ್ಲಿ ಒಂದು ಎಡೆಯಿಲ್ಲವೇ? ರಾಜ್ಯಕಾರ್ಯವು ವಿಶೇಷವಾದ ಮಾತ್ರಕ್ಕೆ ಅರಸರು ತಮ್ಮ ಪ್ರಾಣವಲ್ಲಭೆಯರನ್ನು ತ್ಯಜಿಸಿಬಿಡುವರೇ? ಬಿಡುವಂತಹವರು ಬಿಡುವರು. ಶ್ರೀರಾಮನು ತನ್ನ ಪತ್ನಿಯನ್ನು ತೊರೆದನು. ದೂರುವವರ ಬಾಯನ್ನು ಮುಚ್ಚುವುದಕ್ಕೆ ರಾಮನು ಜಾನಕಿಯ ಕೈಬಿಟ್ಟನು. ನನ್ನಲ್ಲಿ ದೋಷವೇನು? ಹಗಲೆಲ್ಲಾ ಪತಿದೇವತೆಯ ಧ್ಯಾನ ಮಾಡುತ್ತ, ಎಂದಿಗೆ ಸುಖಿಯಾಗುವೆನು ಎಂದು ಚಿಂತಿಸುತ್ತ ಇರುವುದು ದೋಷವೇ? ಇರುಳೆಲ್ಲಾ ನಿದ್ದೆಯಿಲ್ಲದೆ ನೆಲದ ಮೇಲೆ ಹೊರಳುತ್ತ, ಕನಸು ಕಂಡ ಮಾತ್ರಕ್ಕೆ ಸುಖಿಯೆಂದು ತಿಳಿದು, ಎಚ್ಚರವಾಗಿ, ನೋಡುವುದು ದೋಷವೇ? ತಂದೆಯ ಮಾತನ್ನು ಮೀರಿ, ಅನೇಕ ನೃಪಕುಮಾರರನ್ನು ತ್ಯಜಿಸಿ, ನೀನೇ ಗತಿಯೆಂದು ನಂಬಿದುದು ದೋಷವೇ? ನಾನು ಮೂರ್ಖಳು. ಸುಮ್ಮನೆ ಹುಚ್ಚಳಂತೆ ಮಾತಾಡುವೆನು. ನನ್ನ ಮನಸ್ಸಿಗೆ ಭ್ರಮೆ, ನನ್ನ ಹುಚ್ಚು ಭ್ರಾಂತಿ, ಪತಿಯ ಪ್ರೇಮದಲ್ಲಿ ಸಂಶಯಪಡುವವಳು ಮೂರ್ಖಳಲ್ಲದೆ ಮತ್ತೇನು? ನನ್ನ ವಲ್ಲಭನ ಪ್ರೀತಿಯು ಅಚಲವಾದುದು; ಪರ್ವತದಂತೆ ಅಚಲವಾದುದು. ನಕ್ಷತ್ರದಂತೆ ಸ್ಥಿರವಾದುದು; ಅದು ಅಸ್ಥಿರವೆಂಬುದು ಚಲಿಸುತ್ತಿರುವವನ ಸುಳ್ಳು ಭಾವನೆಯಾಗಿದೆ. ಪತಿಯ ಪ್ರಣಯ ಮುಕುರದಲ್ಲಿ ನಮ್ಮ ಮನೋಭಾವವೇ ಪ್ರತಿಬಿಂಬಿಸುವುದಲ್ಲದೆ ಅದು ತಾನೇ ವರ್ಣರಹಿತವಾದುದು. ನಾನು ಇದನ್ನೆಲ್ಲಾ ಚಿಂತಿಸುವುದಷ್ಟಕ್ಕೆ ನನ್ನ ನಡೆಯು ಹಿಂಚುವುದು. ನನ್ನ ವಿಳಂಬವು ಘೋರ ಪ್ರಮಾದಕ್ಕೆ ಕಾರಣವಾಗುವುದು. ಇಕೋ, ಶಿಬಿರವು ನನ್ನ ಮುಂದೆ ತೋರುವುದು. ಢಿಲ್ಲಿಯೇ! ನಿನಗೆ ನಮಸ್ಕಾರವು. ನಿನ್ನ ಧರ್ಮಾಂಧತೆಗೆ ನಿನ್ನ ಕುಹಕೋಪಾಯಗಳಿಗೆ, ನಿನ್ನ ರಾಜತಂತ್ರಗಳಿಗೆ, ನಿನ್ನ ದುಷ್ಕಾರ್ಯ ಕೌಶಲಕ್ಕೆ ತ್ರಾಹಿ ಎನ್ನುವೆನು. ನಮ್ಮ ಸ್ವಾತಂತ್ರಾಪಹಾರಿಯಾದ ನಗರವೇ, ನಾನು ಇನ್ನು ನಿನ್ನ ಮುಖವನ್ನು ನೋಡಲಾರೆನು. ರಾಜಪುತ್ರರ ಸುವರ್ಣ ಕಾರಾಗೃಹವೇ, ಯಾವಾತನನ್ನು ನಿನ್ನ ಮೋಸದ ಕೈಗಳಿಂದ ಬಂಧಿಸಬೇಕೆಂದು ನೀನು ಉಪಾಯವನ್ನು ಮಾಡುತ್ತಿರುವೆಯೋ ಆತನ ಸಹಾಯದಿಂದಲೇ ನಾನು ನಿನ್ನ ಅಪವಿತ್ರ ಸ್ಥಳದಿಂದ ಮುಕ್ತಳಾಗುವೆನು. ನಿನ್ನ ಆಧೀಶ್ವರಿಯಾಗಿ ನಿನ್ನ ಸಾಮ್ರಾಜ್ಯ ರಥವನ್ನು ನಾನು ನಡೆಸುವುದಕ್ಕೆ ಧಿಕ್ಕಾರವಿರಲಿ. ನಾನು ಶಿವಾಜಿಯ ದಾಸಿಯಾಗಿ ಅವನ ರಾಜ್ಯವೆಂಬ ಮಂದಿರದ ಬಳಿಯಣ ಕಸವನ್ನು ಗುಡಿಸಿ ಈ ಜೀವ ಕಾಲವನ್ನು ಕಳೆಯುವೆನು.”
ಅರಮನೆಯಲ್ಲಿ ಅವರಂಗಜೇಬನು ಈ ರಾತ್ರಿ ಏಕಾಂತದಲ್ಲಿ ರಾಜಕಾರ್ಯವನ್ನು ಕುರಿತು ಆಲೋಚಿಸುತ್ತಲಿದ್ದನು. ಮಂತ್ರಿಗಳು ಯಾರೂ ಅವನ ಬಳಿಯಲ್ಲಿ ಇರಲಿಲ್ಲ. ಬಾದಶಹನ ಬಲಗಡೆಯಲ್ಲಿ ರಾಜಸಿಂಹನು ನಿಂತಿದ್ದನು. ಸ್ವಲ್ಪ ದೂರದಲ್ಲಿ ಇಬ್ಬರು ಸಿಪಾಯರು ಕಾವಲಾಗಿದ್ದರು. ಬಾದಶಹನು ಹಣೆಯಲ್ಲಿ ನಿರಿಗೊಳಿಸಿ, “ನಮ್ಮ ಮನಸ್ಸು ಸ್ವಸ್ಥವಾಗಿಲ್ಲ. ಮರಾಟರ ಶಿಬಿರದಿಂದ ಏನೊಂದೂ ವರ್ತಮಾನ ಬರಲಿಲ್ಲ. ಹೋದ ಮುಅಜಮನು ಇನ್ನೂ ಬರಲಿಲ್ಲ. ನಮಗೆ ಯೋಚನೆ ಹತ್ತಿದೆ” ಎಂದು ಹೇಳಿದನು.
ರಾಜಸಿಂಹ:- “ಅಂತಹ ಯೋಚನೆಗೆ ಆಸ್ಪದವಿಲ್ಲ. ಈ ದೂತನು ಈಗ ತಾನೇ ಪಾಳೆಯದಿಂದ ಬಂದಿರುವನು. ಅವನು ಶಿವಾಜಿಯನ್ನು ಕಣ್ಣಾರೆ ನೋಡಿ
ಬಂದಿರುವನು.”
ಬಾದಶಹನು ಕೈಯಿಂದ ತಲೆಯನ್ನು ಸವರುತ್ತ, “ನೀವೆಲ್ಲರೂ ಹೇಗೆ ಹೇಳಿದರೂ, ನಮ್ಮ ಮನಸ್ಸಿಗೆ ಸಮಾಧಾನವಿಲ್ಲ. ಬೋನಿನಲ್ಲಿ ಬಿದ್ದ ಬೆಟ್ಟದ ಇಲಿಯು ತಪ್ಪಿಸಿಕೊಂಡಿರ ಬಹುದು ಎಂದು ನಮಗೆ ಶಂಕೆ ಉಂಟು. ನಮ್ಮ ಶಂಕೆ ಸುಳ್ಳಾಗಲಾರದು” ಎಂದನು.
ರಾಜಸಿಂಹನು ಸ್ವಲ್ಪ ಹತ್ತಿರಕ್ಕೆ ಬಂದು “ಹುಜೂರ್, ಅಂತಹ ಸಮಯ ಒದಗಿದರೆ ಈ ಸೇವಕನು ಯಾವ ಕಾರ್ಯಕ್ಕೂ ಸಿದ್ಧನಾಗಿರುವನು. ಬೋನು ಬಿಗಿಯಾದುದರಿಂದ, ಇಲಿಯು ತಪ್ಪಿಸಿಕೊಳ್ಳಲಾರದು” ಎಂದು ಸಮಾಧಾಗೊಳಿಸಿದನು.
ಬಾದಶಹನು ಸ್ವಲ್ಪ ಆಲೋಚಿಸುತ್ತ, ಮುಅಜಮನು ಬರುವತನಕ ನೀನು ಇಲ್ಲಿಯೇ ಇರುವೆಯಾ? ಅವನು ವಿಲಾಸಪ್ರಿಯನು; ವಿಲಾಸದಲ್ಲಿ ಮಗ್ನನಾಗಿ ಇರುಳೆಲ್ಲಾ ಕಳೆದರೆ, ಕಾರ್ಯವು ಕೆಟ್ಟುಹೋಗುವುದು” ಎಂದನು.
ರಾಜಸಿಂಹ:- ಅಪ್ಪಣೆಯಾದರೆ ನಾನೇ ಹೋಗುವೆನು.
ಬಾದಶಹನು ಸ್ವಲ್ಪ ಶಾಂತನಾದನು. ರಾಜಸಿಂಹನ ಕಡೆಯ ಮಾತುಗಳಿಂದ ಅವನ ಶಿರಸ್ಸಿನ ಭಾರವು ಕೊಂಚ ಇಳಿದಂತಾಯಿತು. ಒಡನೆ ಅವರಂಗಜೇಬನು ರಾಜಸಿಂಹನನ್ನು ತನ್ನ ಬಳಿಗೆ ಕರೆದು, ಅವನ ಕಿವಿಯಲ್ಲಿ ಏನನ್ನೋ ಉಸುರಿದನು. ರಾಜಸಿಂಹನು ಇನ್ನೂ ಅಲ್ಲಿ ತಡೆಯಲಿಲ್ಲ. ಅವನು ಬಾದಶಹನಿಗೆ ಪ್ರಣಾಮವನ್ನು ಮಾಡಿ, ಅರಮನೆಯಿಂದ ಹೊರಟುಹೋದನು.
ಮಧುರವಾದ ಚಂದ್ರೋದಯ, ಬೆಳದಿಂಗಳಲ್ಲಿ ನನೆದ ಮರಾಟರ ಶಿಬಿರ, ಶಿಬಿರವು ಸುತ್ತಲೆಲ್ಲಾ ರಜತಮಯವಾದಂತಿತ್ತು. ಚಂದ್ರನು ಮೆಲ್ಲಮೆಲ್ಲನೆ ಇಳಿವಷ್ಟಕ್ಕೆ ಚಂದ್ರಿಕೆಯು ಮಂದಿರದ ತೆರೆದ ಕಿಟಕಿಗಳಿಂದ ಹಾಯ್ದ, ಒಳಗಡೆಯ ಕತ್ತಲನ್ನು ತೊಲಗಿಸುತಲಿತ್ತು. ಮಂದಿರದ ‘ಹೋಲ್’ ಒಂದು ಚಂದ್ರಿಕೆಯಿಂದ ಉಜ್ವಲವಾಗಿತ್ತು. ‘ಹೋಲ್’ ಪರಿಷ್ಕಾರವಾಗಿತ್ತು. ಆದರೆ ಎರಡೂ ದ್ವಾರಗಳಲ್ಲಿ ರೇಷ್ಮೆಯ ಪರದೆ, ಪರದೆಯಲ್ಲಿ ಚಿತ್ರಿತವಾದ ಹೂಗಳು, ಕಿಟಕಿಗೆ ಇದ್ದ ಪರದೆಯು ತೆರೆದಿತ್ತು. ಚಂದ್ರನ ಕಿರಣವು ಈ ಕಿಟಕಿಯಿಂದ ನುಸುಳಿ ಬಂದು, ಗೋಡೆಯ ಪಟ್ಟೆತೂಗುಗಳ ಮೇಲೆ ಕುಣಿಯುತಲಿತ್ತು. ಗೋಡೆಯ ಸಮೀಪವಾಗಿ ಪರ್ಯಂತ; ಬೆಳ್ಳಿಯ ಕಾಲುಗಳುಳ್ಳ ಪರ್ಯಂತ; ಮಂಚದ ನಾಲ್ಕು ಕಂಬಗಳೂ ಬೆಳ್ಳಿ; ಇವುಗಳ ಮೇಲೆ ಚಿನ್ನದ ಹುಲಿಯ ಮುಖಗಳು. ಮಂಚದ ಕೆಳಗೆ ಮೆತ್ತಗಾದ, ದಪ್ಪವಾದ ರತ್ನಗಂಬಳಿಯು ಹಾಸಿತ್ತು. ಗೋಡೆಗಳಲ್ಲಿ ಚಿತ್ರಗಳು ಇದ್ದಂತೆಯೇ ರತ್ನಗಂಬಳಿಯ ಮೇಲೂ ಚಿತ್ರಗಳು. ಮಂಚದ ಮೇಲೆ ಹಂಸತೂಲಿಕಾತಲ್ಪ, ಕಿನ್‌ಕಾಪಿಯಿಂದ ರಚಿತವಾದ ಮೃದುವಾದ ಹಾಸಿಗೆ, ಹಾಸಿಗೆಯ ಮೇಲೆ ಡಾಕಾ ಮಲ್‌ಮಲಿನ ಹೊದಿಕೆ, ಹಾಸಿಗೆಯ ಇಕ್ಕೆಡೆಗಳಲ್ಲಿಯ ತಪುಳಿಗ ತಲೆದಿಂಬುಗಳು, ಹಾಸಿಗೆಯ ಮೇಲೆ ಯಾರೂ ಮಲಗಿದಂತೆ ತೋರಲಿಲ್ಲ. ಹೊದಿಕೆಯು ಸುರ್ತುಗೊಂಡಿರಲಿಲ್ಲ. ಅಂತಸ್ತಿನಿಂದ ಬೆಳ್ಳಿಯ ತೂಗುದೀಪವೊಂದು ಮಿಣಮಿಣನೆ ಉರಿಯುತಲಿತ್ತು. ದೀಪಕ್ಕೆ ಚಿನ್ನದ ಸರಪಣಿ; ಗಂಧದ ಎಣ್ಣೆ; ದೀಪದ ಕೆಳಗೆ ಆಜಾನು ಬಾಹುವಾದ ಯುವಕನೊಬ್ಬನು ಏನನ್ನೋ ಯೋಚಿಸುತ್ತ ಕುಳಿತಿದ್ದನು. ಯುವಕನು ಒಂದೇ ತಡವೆ ಕಣ್ಣೆರೆಸುತ್ತ, ಮತ್ತೊಂದು ತಡವೆ ಚಂದ್ರನನ್ನು ನೋಡುತ್ತಲಿದ್ದನು. ನಡುನಡುವೆ “ನಾನೇಕೆ ಹೀಗೆ ಮಾಡಿದೆನು?” ಎನ್ನುವನು. ದೀಪವು ನಂದಿಹೋಗುವಂತಿತ್ತು. ಯುವಕನು ಅದನ್ನು ಸರಿಮಾಡುವುದಕ್ಕೆ ಎದ್ದನು. ಅಷ್ಟರಲ್ಲಿ ಹೊರಕ್ಕೆ ಯಾರೋ ಬಂದಂತೆ ಸದ್ದಾಯಿತು. ಬಂದವನಿಗೆ ಯುವಕನಿದ್ದ ಕೊಟ್ಟಡಿಯನ್ನು ಪ್ರವೇಶಿಸುವುದಕ್ಕೆ ಯಾರೂ ಅಡ್ಡಿಮಾಡಲಿಲ್ಲ. ಬಂದವಳು “ಹಕೀಮನ” ವೇಷದಲ್ಲಿದ್ದ ಶೈಲಿನಿ.
ಯುವಕ:- “ಶೈಲಿನಿ! ನೀನು ಈ ಗಂಭೀರವಾದ ರಾತ್ರಿ ಇಲ್ಲಿ ಬಂದೆ ಏತಕ್ಕೆ?” ಶೈಲಿನಿಯು ಈ ಮಾತಿನಿಂದ ನೀರವಳಾದಳು. ಸಲ್ಲಾಪದ ಪ್ರಾರಂಭದಲ್ಲೇ ಕೇಳಿದ ವಿಪರೀತವಾದ ಪ್ರಶ್ನೆಗೆ ಶೈಲಿನಿಯ ತುಟಿಗಳು ಉತ್ತರವಿಲ್ಲದೆ ಅಲುಗಿದುವು.
ಯುವಕನು “ಏಕೆ ಬಂದೆ? ಏಕೆ ಪ್ರಯಾಸಪಟ್ಟೆ?” ಎಂದು ಮತ್ತೂ ಕೇಳಿದನು. ಶೈಲಿನಿಯು ಸ್ವಲ್ಪ ಧೈರ್ಯಗೊಂಡು “ನಿನ್ನ ಕ್ಷೇಮವನ್ನು ವಿಚಾರಿಸುವುದಕ್ಕೆ ಅವರಂಗಜೇಬನ ಕೃತ್ರಿಮವನ್ನು ತಿಳಿಸುವುದಕ್ಕೆ” ಎಂದಳು.
ಯುವಕನು ನಿಟ್ಟುಸಿರಿಡುತ್ತ “ಎಲ್ಲವೂ ಕೃತ್ರಿಮ” ಎಂದು ಹೇಳಿ ಮನಃ ಉಸಿರುಬಿಟ್ಟನು.
ಶೈಲಿನಿಯ ಹೃದಯವು ಧಡಧಡಿಸತೊಡಗಿತು. ಆದರೂ ಅವಳು ಮನಸ್ಸನ್ನು ಸ್ಥಿರಗೊಳಿಸಿ, ತನ್ನ ಪ್ರಿಯನ ಮಾತನ್ನು ಲಕ್ಷಿಸದಂತೆ ಮಾಡಿ, “ನನ್ನ ತಂದೆಯ ವಿಚಾರವಿಲ್ಲದೆ ಮಾಡಿದ ಕೃತ್ಯಕ್ಕೆ ನೀನು ಇಷ್ಟು…”
ಯುವಕನು ಕಣ್ಣೀರನ್ನು ಕಾಣಿಸದೆ ಒರಸುತ್ತ “ಎಲ್ಲರೂ ವಿಚಾರವಿಲ್ಲದೆ ಕೆಲಸ ಮಾಡುವರು. ನಾನೂ ಹಾಗೆಯೇ, ನೀನೂ ಹಾಗೆಯೇ, ಎಲ್ಲರೂ ಹಾಗೆಯೇ” ಎಂದು ಸ್ತಬ್ದನಾದನು.
ಯುವಕನ ಮಾತುಗಳು ಶಲ್ಯದಂತೆ ಶೈಲಿನಿಯ ಮನಸ್ಸನ್ನು ಚುಚ್ಚಿದವು. ಶೈಲಿನಿಯು ಹತ್ತಿರ ಬಂದು, “ನಾನು ವಿಚಾರವಿಲ್ಲದೆ ಮಾಡಿದ ಕಾರ್ಯವು ಯಾವುದು?” ಎಂದು ಕೇಳಿದಳು.
ಯುವಕನು ತಲೆಯನ್ನು ಕೈಯಿಂದ ಆದರಿಸುತ್ತ “ನ…ನನ್ನನ್ನು…ಪ್ರೀ…ಪ್ರೀತಿಸಿದುದು” ಎಂದು ಹೇಳಿ, ಮುಖವನ್ನು ತಗ್ಗಿಸಿದನು.
ಶೈಲಿನಿಯ ಹೃದಯವು ವಿದೀರ್ಣವಾಗುವಂತಿತ್ತು. ಅವಳು ಕಿಟಕಿಯ ಕಡೆಗೆ ಕಣ್ಣೆತ್ತಿ ನೋಡಿದಳು. ಚಂದ್ರನು ಇದಿರಿಗೆ ತೋರುತ್ತಿರಲಿಲ್ಲ. “ನನ್ನ ಕೃತ್ಯಗಳಲ್ಲಿ ವಿಚಾರವಿಲ್ಲ. ಅದನ್ನು ನಾನು ತಿಳಿದಿರುವೆ. ನನ್ನ ಪ್ರೀತಿಯಲ್ಲಿ ಅವಿಚಾರವು ಯಾವುದು? ತುಂಬಿಯು ಕಮಲದ ಬಳಿಗೈಯುವುದರಲ್ಲಿ ಯಾವ ವಿಚಾರ ಮಾಡುವುದು?”
ಯುವಕ:- “ಕಮಲಪುಷ್ಪವೋ ಕಿಂಶುಪುಷ್ಪವೋ ಎಂದು ನೋಡದೆ ಇರುವುದೇ?”
ಶೈಲಿನಿಯು ಬಾಯಲ್ಲಿ ಮಾತಿಲ್ಲದೆ ಯುವಕನನ್ನೇ ನೋಡುತ್ತ ನಿಂತಳು. ಯುವಕನು ರುದ್ಧಕಂಠನಾದನು. ಹೊರಕ್ಕೆ ಯಾರೋ ಬಂದಂತೆ ಸದ್ದು ಕೇಳಿಸಿತು.
ಒಡನೆ ಶೈಲಿನಿಯ ಕೈಯನ್ನು ಯುವಕನು ತನ್ನ ಕೈಯಿಂದ ಬಿಗಿ ಹಿಡಿದು, “ಶೈಲಿನಿ, ನನ್ನನ್ನು ಕ್ಷಮಿಸು, ಶೈಲಿನಿ, ನನ್ನನ್ನು ಕ್ಷಮಿಸು” ಎಂದು ಹೇಳಿ ಅಳತೊಡಗಿದನು.
ಅಷ್ಟರಲ್ಲಿ ಹೊರಗಿನ ಗದ್ದಲವು ಹೆಚ್ಚಾಯಿತು. ಶೈಲಿನಿಯು ಅವಾಕ್ಕಾದಳು. ಆದರು ಚಿತ್ತಸ್ಥೆರ್ಯದಿಂದ “ರಾಜಾಧಿರಾಜ, ಈ ದಾಸಿಯು ಯಾವುದನ್ನು ಮನ್ನಿಸಬೇಕು? ನಾನು ಕ್ಷಮಿಸುವುದಕ್ಕೆ ಅಪರಾಧವೇನಿದೆ?” ಎಂದು ವಿಸ್ಮಿತನಯನಗಳಿಂದ ಕೇಳಿದಳು.
“ಒಳಗೆ ಹೋಗುವುದಕ್ಕೆ ಯಾರ ಅಪ್ಪಣೆಯೂ ಇಲ್ಲ” ಎಂದು ಹೊರಗಿಂದ ಮಾತುಗಳು ಕೇಳಿಸಿದುವು.
ಯುವಕನು ಒಮ್ಮೆ ಮಾತನಾಡಲಿಲ್ಲ. ಬಳಿಕ ಶೈಲಿನಿಯ ಮುಖವನ್ನು ತುಂಬಾ ನೋಡುತ್ತ “ಶೈಲಿನಿ, ನೀನು ನನ್ನಿಂದ ವಂಚಿತಳಾದೆ. ವಂಚಿತಳಾದೆ. ನೀನು ಹೇಗೆ ವಂಚಿತಳಾದೆ ಎಂದು ನಾನೇ ಬಾಯ್ಬಿಟ್ಟು ಹೇಳುವ ಬದಲಾಗಿ ಈ ಪತ್ರವೇ ತಿಳಿಸುವುದು; ಇದನ್ನು ಓದಿ ನೋಡಿ, ನನ್ನ ಅಪರಾಧವನ್ನು ಕ್ಷಮಿಸು ಎಂದು ಹೇಳಿ, ಅಲ್ಲಿಯೇ ಕೈಗಳಿಂದ ಕಣ್ಣುಮುಚ್ಚಿ ನಿಂತುಬಿಟ್ಟನು.
ಹೊರಕ್ಕೆ ಮುಅಜಮನು ಪಹರೆಯವನನ್ನು ಗದರಿಸಿ, ಒಳಗೆ ಬಂದನು. ಅವನು ಕೊಟ್ಟಡಿಗೆ ಇದಿರಾಗಿ ಬರುವುದನ್ನು ಶೈಲಿನಿಯು ಕಂಡು “ರಾಜಾಧಿರಾಜ, ನನ್ನನ್ನು ರಕ್ಷಿಸು, ರಕ್ಷಿಸು” ಎಂದು ಕೂಗಿದಳು. ಮುಅಜುಮನು ಶೈಲಿನಿಯನ್ನು ಸ್ವರದಿಂದ ಗುರುತಿಸಿದನು. ಅವನು ಒಳಕೊಟ್ಟಡಿಯ ಸಮೀಪಸ್ಥನಾಗಿ “ಶಿವಾಜಿರಾಜ! ಇದೇನು ಅಕೃತ್ಯವನ್ನು ಮಾಡುವೆ?” ಎಂದು ಕೇಳಿದನು.
ಶೈಲಿನಿಯ ಪ್ರಾಣವಲ್ಲಭನು ಮುಂದೆ ಬಂದು, ಶೈಲಿನಿಯನ್ನು ತನ್ನ ಬೆನ್ನ ಹಿಂದೆ ಇರಿಸಿ, “ನನ್ನ ಏಕಾಂತದ ಕೊಟ್ಟಡಿಗೆ ನೀನು ಯಾರ ಅನುಮತಿಯಿಂದ ಪ್ರವೇಶ ಮಾಡಿದೆ?” ಎಂದು ಕೇಳಿದನು. “ಎಲ್ಲವೂ ನಮ್ಮದಾದಲ್ಲಿ ನಾವು ಯಾರೊಡನೆ ಕೇಳಬೇಕು” ಎಂದು ಮುಅಜಮನು ಉತ್ತರಕೊಟ್ಟನು. ಪುನಃ “ನಮ್ಮ ನಗರದಲ್ಲಿ ಹೆಣ್ಣು ಕಳವು ಆಗದಂತೆ ನಾವು ಜಾಗರೂಕರಾಗಿರಬೇಕು” ಎಂದು ಮುಂದವರಿಸಿದನು.
ಅವನ ಪ್ರತಿದ್ವಂದ್ವಿಯು ಉದ್ರೇಕಗೊಂಡನು. ಇಬ್ಬರಿಗೂ ಮಾತಿಗೆ ಮಾತು ಬಂದಿತು. ಮುಸಲ್ಮಾನನು ಕತ್ತಿಯನ್ನು ತೋರಿಸಿದನು. ಒಡನೆ ಹಿಂದುವು ಖಡ್ಗವನ್ನು ಕೈಯಲ್ಲಿ ಹಿಡಿದು, ಕೊಟ್ಟಡಿಯ ಹೊರಕ್ಕೆ ಹೋದನು. ಮುಅಜಮನು ಮುಂದೆ ಓಡತೊಡಗಿದನು. ಮಂದಿರದ ಒಳಕ್ಕೆ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಓಡಿಯೋಡಿ, ಮುಅಜಮನು ಹೊರಕ್ಕೆ ಬಂದು, ಪಹರೆಯವನಿಗೆ “ಬಾಗಿಲನ್ನು ಬಿಗಿ ಮಾಡು” ಎಂದು ಆಜ್ಞೆ ಕೊಟ್ಟನು.
ಮರಾಟನು ಹೊರಕ್ಕೆ ಬಾರದಂತೆ, ಪಹರೆಯವನು ಬಾಗಿಲನ್ನು ಬಿಗಿದುಬಿಟ್ಟನು. ಮರಾಟನು ಉಚ್ಛಸ್ವರದಿಂದ, “ಶೈಲಿನಿ, ಶೈಲಿನಿ, ಪ್ರಮಾದ ಸಂಭವಿಸುವಂತಿದೆ. ಬೇಗನೇ ಓಡಿಬಿಡು. ನಿನ್ನ ಪ್ರಾಣವನ್ನು ರಕ್ಷಿಸಿಕೊಳ್ಳು” ಎಂದು ಹೇಳುತ್ತ ಮತ್ತೊಂದು ಕೊಟ್ಟಡಿಗೆ ಹೋಗಿ, ತೆರೆದಿದ್ದ ಕಿಟಕಿಯನ್ನು ಹತ್ತಲಾರಂಭಿಸಿದನು. ಅದನ್ನು ನೋಡಿ ಮಂದಿರದ ಜಗುಲಿಯ ಮೇಲಿದ್ದ ಮುಅಜಮನು ಓಡತೊಡಗಿದನು. ಶಿಬಿರದ ಸುತ್ತಲಿದ್ದ ಸೈನಿಕರೆಲ್ಲರೂ ಗದ್ದಲದಿಂದ ಸಂಭ್ರಾಂತರಾದರು. ಅಷ್ಟರಲ್ಲಿ ರಾಜಸಿಂಹನು ಮಂದಿರದ ಬಳಿಯಲ್ಲಿ ಇಬ್ಬರು ಸಿಪಾಯರೊಡನೆ ಬಂದು ಇಳಿದನು. ಮರಾಟನು ಕಿಟಕಿಯನ್ನು ಹತ್ತಿ, ಕೈಯಲ್ಲಿದ್ದ ಖಡ್ಗವನ್ನು ಜಳಪಿಸುತ್ತ ಕೆಳಗೆ ಧುಮುಕುವುದಕ್ಕೆ ಸಿದ್ಧನಾಗಿದ್ದನು. ಮುಅಜಮನು ರಾಜಸಿಂಹನನ್ನು ನೋಡಿ. “ಅಯ್ಯಾ, ಶಿವಾಜಿಯು ನನ್ನನ್ನು ಅಟ್ಟಿಸಿ ಕೊಂಡು ಬರುತ್ತಿದ್ದಾನೆ. ಇಕೊ, ನನ್ನನ್ನು ರಕ್ಷಿಸು” ಎಂದು ಚೀರುತ್ತ ಹತ್ತಿರಕ್ಕೆ ಬಂದನು. ರಾಜಸಿಂಹನು ಮರಾಟನನ್ನು ನೋಡಿದನೋ ಇಲ್ಲವೊ ಉಪ್ಪರಿಗೆಯ ಮೇಲೆ ಕಾವಲಿದ್ದ ಸೈನಿಕರಿಗೆ ಕೈಸನ್ನೆ ಮಾಡಿ, “ಕಳಚಿ ಬಿಡು” ಎಂದು ಒದರಿದನು. ನೂರಾರು ಬಂಡಿಗಳ ಗಡಗಡ ಶಬ್ದದ ಚೀತ್ಕಾರವೊಂದು ಮಹಡಿಯಿಂದ ಕೇಳಿಸಿತು. ಮರಾಟನು ಕಿಟಕಿಯಿಂದ ಕೆಳಕ್ಕೆ ಹಾರಿದನು. ಕಣ್ಣು ಮುಚ್ಚುವಷ್ಟರಲ್ಲಿ ಮಂದಿರದ ಉಪ್ಪರಿಗೆಯು ಮಾಡಿನೊಡನೆ ಜರಿದು ಜಾರಿ ಬರುವಂತಿತ್ತು. ಸಾವಿರಾರು ಬೀಳಲುಗಳಿಂದ ಆವರಿಸಿದ್ದ ಉನ್ನತವಾದ ಮಹತ್ತಾದ ಆಲದ ಮರವು ಸಿಡಿಲಘಾತದಿಂದ ಬುಡದೊಡನೆ ನೆಲಕ್ಕೆ ಒರಗುವಂತೆ, ಸೈನಿಕರು ಶೀಘ್ರವಾಗಿ ಗೊಣಸುಗಳನ್ನು ಕಳಚಿಬಿಡುತ್ತಲೇ ಆ ಕೃತ್ರಿಮ ಭವನವು ಓರ್ಗುಡಿಸಿ ಬೀಳತೊಡಗಿತು.
ಮುಅಜಮನು ಕಳವಳದಿಂದ “ಅಯ್ಯೋ, ಅಯ್ಯೋ, ಶೈಲಿನಿಯು ಒಳಗೆ ಇದ್ದಾಳೆ. ನಿನ್ನ ಮಗಳನ್ನು ರಕ್ಷಿಸು” ಎಂದು ಚೀರಿದನು.
ಅದೇ ಸಮಯದಲ್ಲಿ ಶಿಬಿರದ ಅಂತಸ್ತು ಮರಾಟನ ತಲೆಯನ್ನು ಹಳಚಿತು. ಮರಾಟನು ಭಾರದಿಂದ ಮುಂದರಿಸಲಾರದೆ “ಶೈಲಿನಿ, ಶೈ…” ಎನ್ನುತ್ತ ಅಡ್ಡಗೆಡಲಿಕ್ಕಾದನು.
“ಶೈಲಿನಿ” ಎಂಬ ಮಾತು ಕಿವಿಗೆ ಬಿದ್ದಿತೋ ಇಲ್ಲವೋ ರಾಜಸಿಂಹನು ಉನ್ಮತ್ತನಾದನು. ಕೆಲಸವು ಕೈಮೀರಿಹೋಯಿತು. ಯಾರನ್ನು ಬದುಕಿಸುವುದಕ್ಕೂ ಉಪಾಯವಿರಲಿಲ್ಲ. “ಅಮ್ಮಾ, ಶೈಲಿನಿ, ನೀನು ಎಲ್ಲಿ ಇರುವೆ?” ಎಂದು ಕೇಳುತ್ತಾ ರಾಜಸಿಂಹನು ಜೀವದಾಸೆಯಿಲ್ಲದೆ ಒಳಕ್ಕೆ ಹಾರಿದನು. ಸಿಪಾಯನೊಬ್ಬನು ಅವನನ್ನು ತಡಿಸುವುದಕ್ಕೆ ಹೋದನು. ಅವನು ಕೃತಕೃತ್ಯನಾಗಲಿಲ್ಲ. ಎತ್ತರವಾದ ಮಾಡು ಮಹಾಶಬ್ದದೊಡನೆ ನೆಲವನ್ನು ಚುಂಬಿಸಿಬಿಟ್ಟಿತು. ಆ ಭಯಂಕರ ಧ್ವನಿಯು ಆ ಗಂಭಿರವಾದ ರಾತ್ರಿಯಲ್ಲಿ ಅರಣ್ಯ ಮಧ್ಯದಲ್ಲಿ ಉಂಟಾದ ಗುಡುಗಿನಂತೆ ಕೇಳಿಸಿತು
ಮುಅಜಮನು ಅರಮನೆಗೆ ಓಡಿದನು. ಬಾದಶಹನು ಅರಮನೆಯಲ್ಲಿ ನಿದ್ದೆ ಹೋಗದೆ, ರಾಜಸಿಂಹನಿಂದ ಸಮಾಚಾರವನ್ನು ನಿರೀಕ್ಷಿಸುತ್ತಿದ್ದನು. ಮುಅಜಮನು ಬಾದಶಹನ ಬಳಿಗೆ ಬಂದು “ಘೋರ ಪ್ರಮಾದವಾಯಿತು” ಎಂದನು.
ಅವರಂಗಜೇಬನು “ಶಿವಾಜಿಯು ತಪ್ಪಿಸಿಕೊಂಡು ಹೋದನೇ?” ಎಂದು ಕಾಂಕ್ಷಿತಸ್ವರದಿಂದ ಕೇಳಿದನು.
ಮುಅಜಮ್:- “ರಾಜಸಿಂಹನು ಶಿಬಿರವನ್ನು ಬಿಚ್ಚುವಂತೆ ಆಜ್ಞೆ ಮಾಡಿದನು.”
ಬಾದಶಹ:- “ಶಿವಾಜಿಯು ಒಳಗೆ ಇರಲಿಲ್ಲವೇ?”
ಮುಅಜಮ್:- “ಶಿವಾಜಿಯೂ ಇದ್ದನು. ಅವನೊಡನೆ ಶೈಲಿನಿಯೂ ಇದ್ದಳು.”
ಬಾದಶಹ:- “ರಾಜಸಿಂಹನು ಮಗಳನ್ನು ರಕ್ಷಿಸಲಿಲ್ಲವೇ?”
ಮುಅಜಮ್:- “ಮಗಳನ್ನು ರಕ್ಷಿಸುವುದು ಅಸಾಧ್ಯವಾಗಿದ್ದಿತು. ಮಗಳು ಒಳಗೆ ಇರುವಳೆಂದು ಕೇಳುತ್ತಲೇ ರಾಜಸಿಂಹನು ತಾನೂ ಬಲಿಬಿದ್ದನು.”
ಅವರಂಗಜೇಬನು ಇದನ್ನು ಕೇಳುತ್ತಲೇ ಶಿಬಿರದ ಕಡೆಗೆ ಹೊರಟನು. ಸೈನಿಕರಿಗೆ ಆಜ್ಞೆ ಮಾಡಿ ಹಾಳುಕೊಂಪೆಯನ್ನೆಲ್ಲಾ ಬೆಳಗಾಗುವಷ್ಟರಲ್ಲಿ ತೋಡಿಸಿ ತೆಗೆದನು. ನಾಲ್ಕು ಮಂದಿ ರಜಪೂತ ಸೈನಿಕರು ಮರಾಟನ ಶವವನ್ನು ಅವರಂಗಜೇಬನ ಕಾಲಡಿಯಲ್ಲಿ ತಂದಿಟ್ಟರು. ಅವರಂಗಜೇಬನು ಮುಖದಲ್ಲಿ ಸಂತೋಷವನ್ನಾಗಲೀ ದುಃಖವನ್ನಾಗಲೀ ಸ್ಪುಟಮಾಡಲಿಲ್ಲ. ಶಿವಾಜಿಯು ಸತ್ತು ತನ್ನ ಪಾದಾಕ್ರಾಂತನಾದನೆಂದು ಮನಸ್ಸಿನಲ್ಲಿ ತಿಳಿದರೂ, ಬಾದಶಹನು ಶಾಂತನಾಗಿದ್ದನು. ಬಳಿಕ ರಾಜಸಿಂಹ ಶೈಲಿನಿಯರ ಶವಗಳು ತೆಗೆಯಲ್ಪಟ್ಟವು. ಚಂದ್ರಕಾಂತ ಪುತ್ಥಳಿಯು ಚಂದ್ರಕಿರಣದಲ್ಲಿ ನೆನೆದುಹೋದಂತೆ, ಶೈಲಿನಿಯ ದೇಹವನ್ನು ನೋಡುತ್ತ ನಿಂತನು. ಅವಳ ಹಸ್ತದಲ್ಲಿ ಬಿಗಿಹಿಡಿದ ಪತ್ರವೊಂದಿತ್ತು. ಬಾದಶಹನು ಕಾಗದವನು ಓದಿಸಿದನು. ಕಾಗದವು ಈ ಪರಿಯಾಗಿ ಬರೆದಿತ್ತು.-
“ಶೈಲಿನಿ,
ನಿನ್ನನ್ನು ಹೇಗೆ ಸಂಬೋಧಿಸಬೇಕೆಂದು ಇದುವರೆಗೆ ನಿಶ್ಚಯ ಮಾಡಲಾರದವನಾಗಿದ್ದೇನೆ. ಒಂದೆರಡು ಬಾರಿ ನಿನ್ನನ್ನು ಪ್ರಿಯೆ ಪ್ರಿಯೆ, ಎಂದು ಕರೆದಿದ್ದೇನೆ. ಹಾಗೆ ಏಕೆ ಕರೆದೆನೆಂದು ಈಗ ದುಃಖಪಡುತ್ತೇನೆ. ನಾನು ಹತಭಾಗ್ಯನು; ಪಾಪಿಯು; ನನ್ನ ಪಾಪದಿಂದ ನಿನ್ನ ದೇಹವನ್ನು ಪಾಪಮಯವಾಗಿ ಮಾಡಲು ನಾನು ಆಶಿಸುವುದಿಲ್ಲ. ಯಾವ ಕಾಲದಲ್ಲಿ ನೀನು ನನ್ನ ತಂದೆಯೊಡನೆ ಪ್ರತಾಪಗಡಕ್ಕೆ ಬಂದೆಯೋ ಆ ಕಾಲದಲ್ಲಿ ಈ ಪಾಪದ ಬೀಜವು ನನ್ನ ಹೃದಯದಲ್ಲಿ ಉಂಟಾಯಿತು. ನೀನು ಒಂದು ಸಾಯಂಕಾಲ ಪ್ರತಾಪಗಡದ ಉಪವನದಲ್ಲಿ ಏಕಾಕಿಯಾಗಿ ಏನನ್ನೋ ಚಿಂತಿಸುತ್ತ ಕುಳಿತಿದ್ದೆ. ಬಳಿಕ ಚಿಂತನೆಯನ್ನು ಬಿಟ್ಟು ನಿನ್ನ ಪ್ರಾಣೇಶನ ಸ್ಮರಣೆಯನ್ನು ಮಾಡತೊಡಗಿದೆ. ನಿನ್ನ ದೀರ್ಘವಾದ ಕೇಶಧಾಮವು ಬೆನ್ನ ಮೇಲೆ ಗುಂಗುರು ಗುಂಗುರಾಗಿ ಹರಡಿತ್ತು. ಮುಖವು ಕೈದಳದ ಮೇಲೆ ಆಶ್ರಯಿಸಿತ್ತು. ಪ್ರಣಯಜನ್ಯವಾದ ಕಣ್ಣೀರುಗಳು ದರದರನೆ ಸುರಿಯುತ್ತಿದ್ದವು. ಆಗ ನಾನು ಬಳಿಯಲ್ಲಿದ್ದ ನಿಕುಂಜದ ಮರೆಯಲ್ಲಿದ್ದೆನು. ವಿರಹಿಣಿಯಾದ ವನದೇವತೆಯಂತೆ ಒಪ್ಪುತ್ತಲಿದ್ದ ನಿನ್ನ ಮೂರ್ತಿಯನ್ನು ನೋಡಿ ನಾನು ಮುಗ್ಧನಾದೆನು. ನಾನು ಯೋಚಿಸಿದ ಕೃತ್ಯವು ಅಕಾರ್ಯವೆಂದು ನಾನು ಆಗ ತಿಳಿದಿದ್ದರೂ, ನಿನ್ನ ಲಾವಣ್ಯಮಯವಾದ ಶರೀರದ ಕಡೆಯಿಂದ ನನ್ನ ಮನಸ್ಸನ್ನು ನಾನು ಹಿಂದೆಳೆಯಲಾರದೆ ಹೋದೆನು. ನಾನು ಮರೆಯಿಂದ ಹೊರಕ್ಕೆ ಬಂದೆನು. ನೀನು ನನ್ನನ್ನು ನೋಡಿ ಲಜ್ಜಿತಳಾದೆ. ನಾನು ಮಾತನಾಡುವಷ್ಟರಲ್ಲಿ ಕೋಟೆಯ ಘಂಟಾನಾದವಾದುದರಿಂದ, ನಾನು ನಿನ್ನನ್ನು ಬಿಟ್ಟು ಹೋಗಬೇಕಾಯಿತು. ನೀನು ನನ್ನ ಹೃದಯವನ್ನು ಓದಿಬಿಟ್ಟೆ.”
“ಶೈಲಿನಿ, ನಿನ್ನೊಡನೆ ಮುಚ್ಚುಮರೆ ಏಕೆ? ನಿನ್ನ ಪ್ರಣಯ ಸರ್ವಸ್ವವನ್ನು ನನಗೆ ಅರ್ಪಿಸಲಿಕ್ಕೆ ಇದ್ದ ನಿನ್ನೊಡನೆ ಮರೆ ಮೋಸವೇಕೆ? ನನ್ನನ್ನು ಶಿವಾಜಿ ಎಂದು ಭಾವಿಸಿ, ನೀನು ಮೋಸಹೋದೆ. ನಿನ್ನ ಹೃದಯವು ಶಿವಾಜಿ ಮಹಾರಾಜರು ಇರುವಲ್ಲಿ ಅಲ್ಲದೆ ಮತ್ತೆಲ್ಲಿ ಹೋಗುವುದು? ಕಮಲಿನಿಯು ರಾಜಹಂಸನಿಗೆ ಆಶ್ರಯ ಕೊಡುವುದಲ್ಲದೆ ಕಪ್ಪೆಯನ್ನು ಬಯಸುವುದೇ? ನಾನು ಶಿವಾಜಿ ರಾಜರ ಸ್ವಾಮಿಭಕ್ತನಾಗಿದ್ದರೂ ಸ್ವಾಮಿದ್ರೋಹಿಯಾದೆನು. ಮಹಾರಾಜರ ಆಪತ್ತುಗಳಲ್ಲಿ ನಾನು ಅವರಿಗೆ ನೆರವಾಗುವಂತೆ ನನಗೆ ಅವರು ಬಳಿಯಲ್ಲಿ ಆಶ್ರಯ ಕೊಟ್ಟಿದ್ದರು. ನನ್ನ ರೂಪ, ದೇಹ, ಆಕಾರ, ವರ್ಣ ಎಲ್ಲವೂ ಶಿವಾಜಿರಾಜರಂತೆಯೇ, ಅವಳಿಜವಳಿ ಕೂಸುಗಳಲ್ಲಾದರೂ ಸ್ವಲ್ಪ ಭೇದ ತೋರಬಹುದು, ನಮ್ಮಲ್ಲಿರಲಿಲ್ಲ. ಏನೊಂದು ಪ್ರಮಾದ ಸಂಭವಿಸುವ ಹಾಗಿದ್ದರೆ, ರಾಜರು ನನ್ನನ್ನು ತಮ್ಮ ಸ್ಥಾನದಲ್ಲಿ ಇಟ್ಟು ಪ್ರಾಣವನ್ನು ಉಳಿಸಿಕೊಳ್ಳುತ್ತಿದ್ದರು. ರಾಜರು ಒಂದು ಕಾಲ ದಿಲೇರಿಖಾನನ ಹಸ್ತಗತವಾಗುವಂತಿದ್ದರು. ಆಗ ರಾಜರ ಬದಲಿಗೆ ನಾನೇ ಬಹಿರಂಗದಲ್ಲಿ ಕಾರ್ಯವನ್ನು ವಿಚಾರಿಸುತ್ತಿದ್ದೆನು. ಯುದ್ಧದಲ್ಲಿ ರಾಜರಿಗೆ ಏಟು ತಗಲುವ ಹಾಗಿದ್ದರೆ, ಸೈನ್ಯವು ಹಿಂಜಾರದಂತೆ, ನಾನೇ ನಾಯಕನಾಗಬೇಕಾಗುತ್ತಿತ್ತು. ಅಷ್ಟೇಕೆ? ಪ್ರಕೃತದಲ್ಲಿ ಬಾದಶಹರ ಬದಿಯಲ್ಲಿದ್ದ ಶ್ರೀ ಶಿವಾಜಿ ಮಹಾರಾಜರು ತಾವು ತಪ್ಪಿಸಿ ಕೊಂಡುದು ಬಾದಶಹರಿಗೆ ತಿಳಿಯಲು ಸ್ವಲ್ಪ ವಿಳಂಬವಾಗುವಂತೆ, ನನ್ನನ್ನು ಅವರ ಹಾಸಿಗೆಯ ಮೇಲೆ ಮಲಗಬೇಕೆಂದು ಆಜ್ಞೆ ಮಾಡಿದ್ದರು.”
“ಶೈಲಿನೀ, ಬ್ರಹ್ಮಹತ್ಯಕ್ಕಾಗಲಿ, ಪತ್ನಿಹತ್ಯಕ್ಕಾಗಲೀ ಪ್ರಾಯಶ್ಚಿತ್ತವು ಉಂಟು. ಸ್ವಾಮಿ ದ್ರೋಹಕ್ಕೆ ಪ್ರಾಯಶ್ಚಿತ್ತವಿಲ್ಲ. ನಾನು ಶಿವಾಜಿರಾಜರ ಸೇವೆಯಲ್ಲಿ ಸೇರುವಾಗ, ವಿವಾಹ ಮಾಡಿಕೊಳ್ಳುವುದಿಲ್ಲ ಎಂದು ರಾಜಚರಣಗಳನ್ನು ಹಿಡಿದು ಪ್ರಮಾಣ ಮಾಡಿದ್ದೆನು. ಇದಕ್ಕೋಸ್ಕರವೇ ನನ್ನ ಬಡ ತಾಯಿಯನ್ನೂ ತಮ್ಮಂದಿರನ್ನೂ ರಾಜ್ಯದ ವೆಚ್ಚದಿಂದ ಮಹಾರಾಜರು ಪೋಷಿಸುತ್ತಿರುವರು. ನಾನು ಈ ಸ್ಥಿತಿಯಲ್ಲಿ ವಿವಾಹ ಮಾಡಿಕೊಳ್ಳುವುದು ಅನುಚಿತವಾಗಿತ್ತು. ನನ್ನ ವಿವಾಹದಿಂದ ರಾಜಕಾರ್ಯಗಳಿಗೆ ತೊಡಕು ಉಂಟಾಗುವುದೆಂದು ನನಗೆ ಗೊತ್ತಿತ್ತು. ಆದರೆ ಅಂದು ನಿನ್ನ ರೂಪವನ್ನು ನೋಡಿ ನಾನು ಮರುಳಾದೆನು. ನನ್ನನ್ನು ಶಿವಾಜಿಯೆಂದು ಭ್ರಮಿಸಿ ನೀನು ಮರುಳಾದೆ. ನಾನು ಸ್ವಾಮಿ ದ್ರೋಹವನ್ನು ಮಾಡಿದುದು ಅಲ್ಲದೆ ನನ್ನ ಕಪಟವೇಷದಿಂದ ನಿನ್ನ ಹೃದಯವನ್ನೂ ಸೂರೆಗೊಳ್ಳಲಿಕ್ಕೆ ಹತ್ತಿದೆನು. ನನ್ನ ಕಪಟಾಚರಣೆಯು ಶಿವಾಜಿ ಮಹಾರಾಜರಿಗೆ ಪ್ರಕೃತದಲ್ಲಿ ತಿಳಿದಿತ್ತೋ ಇಲ್ಲವೋ ನಾನು ಖಂಡಿತವಾಗಿ ಹೇಳಲಾರೆನು. ಆದರೆ ದಿನೇ ದಿನೇ ನನ್ನ ದ್ರೋಹವು ನನ್ನನ್ನೇ ಚುಚ್ಚತೊಡಗಿತು. ಅಂದಿನಿಂದ ನಿನ್ನನ್ನು ಏಕೆ ಪ್ರೀತಿಸಿದೆನೋ ಎಂದು ವಿಷಾದಗೊಂಡೆನು. ನೀನು ಆ ರಾತ್ರಿ ಗುಪ್ತವೇಷದಿಂದ ಶಿಬಿರಕ್ಕೆ ಬಂದಾಗ ನಿನ್ನ ಮೇಲೆ ಉದಾಸೀನಗೊಳ್ಳಲಿಕ್ಕೆ ಇದೇ ಕಾರಣ.”
“ಶೈಲಿನಿ, ನಾನು ಇನ್ನೂ ಹೇಳುವುದಕ್ಕಿಂತ ನನ್ನ ಶ್ವಾಸವು ನಿಂತುಹೋದರೆ ಚೆನ್ನಾಗಿತ್ತಲ್ಲವೇ? ನಾನು ಇನ್ನು ಬರೆಯುವುದಕ್ಕಿಂತ ನನಗೆ ಕೈಗೆಟ್ಟರೆ ಒಳ್ಳೆಯದಾಗಿತ್ತಲ್ಲವೇ? ನಾನು ನಿನ್ನ ಪಾಣಿಗ್ರಹಣ ಮಾಡಿದ್ದು ಹೊರತು ನಿನ್ನ ಶುದ್ಧ ದೇಹವನ್ನು ನನ್ನ ಅಶುದ್ಧತೆಯಿಂದ ಹಾಳು ಮಾಡಲಿಲ್ಲ. ನಾನು ಸ್ವಾಮಿ ದ್ರೋಹಿ ಎನಿಸಿಕೊಳ್ಳುವುದಕ್ಕಿಂತಲೂ ಕಪಟಪ್ರೇಮಿಯೆಂದಾದರೂ ಜನಗಳಿಂದ ಹೇಳಿಸಿಕೊಳ್ಳುವೆನು. ನೀನು ನನ್ನನ್ನು ಕ್ಷಮಿಸು. ನನ್ನನ್ನು ಶುದ್ಧವಾಗಿ ಮಾಡಿಬಿಡು. ನೀನು ಯಾರನ್ನು ನೋಡಿ ಶಿವಾಜಿಯೆಂದು ಭ್ರಾಂತಿಗೊಂಡೆಯೋ ಆ ಹೀರೋಜಿ ಫರ್ಜಂದ ಎಂಬ ಈ ಪಾಪಿ ಮರಾಟನನ್ನು ಇನ್ನು ಸಂಪೂರ್ಣವಾಗಿ ಮರೆತು ಬಿಡು, ನೀನು ಮರೆತು ಬಿಡುವುದೇ ನನಗೆ ಕ್ಷಮಾಪಣೆಯೆಂದು ಭಾವಿಸುವೆನು.
ಹಿರೋಜಿ ಫರ್ಜಂದ್.”
ಅವರಂಗಜೇಬ್ ಬಾದಶಹನು ಈ ಕಾಗದವನ್ನು ಕೇಳುತ್ತಲೇ ಕೋಪಗೊಂಡನು. ದುಃಖಗೊಂಡನು. ಶಿವಾಜಿ ತಪ್ಪಿಸಿಕೊಂಡನು ಎಂದು ಕೋಪ; ರಾಜಸಿಂಹನು ಮಗಳೊಡನೆ ಸತ್ತನೆಂದು ದುಃಖ. ಶಿವಾಜಿಯ ಬೆನ್ನ ಹಿಂದೆ ಜನಗಳನ್ನು ಕಳುಹಿಸಿದನು. ಶಿವಾಜಿಯ ಹೆಜ್ಜೆ ಹಿಡಿಯಲಿಕ್ಕೆ ಆಗದೆ ಹೋಯಿತು. ಬಾದಶಹನು ಮೂರು ಶವಗಳಿಗೂ ಹಿಂದೂ ದಹನ ಸಂಸ್ಕಾರಗಳನ್ನು ಮಾಡಿಸಿದನು. ಆದರೆ ೧೫ ದಿನಗಳವರೆಗೆ ಅವನು “ಆಮ್‌ಖಾಸ್ ಖಾನೆ” ಯಲ್ಲಿ ಕಾಲಿಡಲಿಲ್ಲವಂತೆ.
*****