ಎಲ್ಲಾ ಜನರ ಹೆಸರಿನಲ್ಲಿ….

ಎಲ್ಲಾ ಜನರ ಹೆಸರಿನಲ್ಲಿ….

ಪ್ರಜಾಪ್ರಭುತ್ವವೆಂದ ಮೇಲೆ ಜನಗಳ ಪಾತ್ರ ಅಪಾರವಾದುದು. ಜನಗಳ ತೊಡಗುವಿಕೆಯಿಂದಲೇ ಪ್ರಜಾಪ್ರಭುತ್ವದ ಸಾರ್ಥಕತೆ. ಈ ದೃಷ್ಟಿಯಿಂದಲೇ ಅಬ್ರಹಾಂ ಲಿಂಕನ್ ಪ್ರಜಾಪ್ರಭುತ್ವವನ್ನು ವಿವರಿಸುವಾಗ ‘ಜನರಿಂದ ಜನರಿಗೋಸ್ಕರ ರಚಿತವಾದ ಜನಗಳ ಸರ್ಕಾರ’ ಎಂದು ಹೇಳಿದ್ದಾರೆ. ಅಂದರೆ ಸರ್ಕಾರ ಜನರಿಗಾಗಿ, ಜನರೇ ಸರ್ಕಾರವಾಗುವ ಪ್ರಕ್ರಿಯೆ ಪ್ರಜಾಪ್ರಭುತ್ವ. ಇದು ಬೆಟ್ಟದಂಥ ಆದರ್ಶವೆಂಬುದು ನಿಜವಾದರೂ, ಇಂಥ ಆಶಯವನ್ನು ಸಾಕಾರಗೊಳಿಸುವ ಪ್ರಯತ್ನಗಳು ಪ್ರಜಾಪ್ರಭುತ್ವದ ಪ್ರಥಮ ಹೆಜ್ಜೆಗಳಾಗುತ್ತವೆ.

ನಮ್ಮ ದೇಶದ ದುರಂತವೆಂದರೆ ಸರ್ಕಾರವೇ ಬೇರೆ, ಜನರೇ ಬೇರೆ ಎಂಬ ಭಾವನೆ ಬಲಿಯುವಂತೆ, ಜನರು ‘ಬಲಿ’ಯಾಗುವಂತೆ ರೂಪುಗೊಳ್ಳುತ್ತಿರುವ ವ್ಯವಸ್ಥೆ. ಇಲ್ಲಿ ಎಲ್ಲರೂ ಜನರ ಬಗ್ಗೆಯೇ ಮಾತನಾಡುತ್ತಾರಾದರೂ ನಿಜವಾದ ಅರ್ಥದಲ್ಲಿ ಸರ್ಕಾರ ಜನರ ಭಾಗವಾಗುವುದು ಕಡಿಮೆ ; ಜನರ ಆಶೋತ್ತರಗಳ ಸಾರಥ್ಯವಹಿಸುವ ಪ್ರಾಮಾಣಿಕತೆ ಕಡಿಮೆ; ಕಡೆಗೆ ಜನರ ನೆನಪೇ ಕಡಿಮೆ. ಆದರೆ ಎಲ್ಲಾ ನಡೆಯುವುದು ಜನರ ಹೆಸರಿನಲ್ಲೇ. ಸರ್ಕಾರ ಮತ್ತು ಜನತೆಯ ನಡುವೆ ಬೆಳೆಯುತ್ತಿರುವ ಅಂತರ ಪ್ರಜಾಪ್ರಭುತ್ವವನ್ನು ಒಂದು ಅಣಕು ಮಾದರಿಯನ್ನಾಗಿ ಮಾಡುತ್ತಿದೆ. ಚುನಾವಣೆಯೊಂದೇ ಪ್ರಜಾಪ್ರಭುತ್ವದ ಅಂತಿಮ ಸಾಧನ ಮತ್ತು ಸಾಧನೆ ಎಂಬಂತಾಗುತ್ತಿದೆ. ಚುನಾವಣೆ ಪ್ರಜಾಪ್ರಭುತ್ವ ಪ್ರಕ್ರಿಯೆಯ ಒಂದು ಪ್ರಧಾನ ಅಂಗವಷ್ಟೇ ಹೊರತು ಅದು ಪೂರ್ಣ ಪ್ರಜಾಪ್ರಭುತ್ವವಲ್ಲ ಎಂಬ ಅರಿವು ಮೂಡುವವರೆಗೆ ಈ ದೇಶದ ಚಿಂತನಶೀಲತೆಗೂ ಗರ ಬಡಿದಿರುತ್ತದೆಯೆಂದೇ ನನ್ನ ಭಾವನೆ. ಚುನಾವಣೆಯಲ್ಲಿ ಜನರು ತಮ್ಮ ಹಕ್ಕನ್ನು ಚಲಾಯಿಸುತ್ತಾರೆ ; ತಮ್ಮ ಪರವಾಗಿ ತಮ್ಮ ಪ್ರತಿನಿಧಿಗಳಿಗೆ ಅಧಿಕಾರ ನಡೆಸುವ ಅವಕಾಶವನ್ನು ಕಲ್ಪಿಸುತ್ತಾರೆ. ಹೀಗೆ ಜನರೇ ಪ್ರಭುಗಳಾಗಿ ಆಡಳಿತ ನಡೆಸುತ್ತಾರೆ – ಇದೆಲ್ಲ ಕಾಗದದ ಮೇಲೆ ತುಂಬಾ ಚೆನ್ನಾಗಿರುತ್ತದೆ. ಆದರೆ ಈ ದೇಶದ ಸಾಮಾನ್ಯ ಜನತೆ ಅಭಾದಿತವಾಗಿ ತನ್ನ ಮತದಾನದ ಹಕ್ಕನ್ನು ಚಲಾಯಿಸುವ ‘ಸ್ವಾತಂತ್ರ್ಯ’ವನ್ನು ಪಡೆದಿದ್ದಾರೆಯೇ ? ನಮ್ಮ ಹಳ್ಳಿಗಳು ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯವನ್ನು ಪಡೆದು ಸಾಮಾನ್ಯ ಜನರು ಬಾಹ್ಯ ನಿಯಂತ್ರಣವಿಲ್ಲದೆ ಹಕ್ಕನ್ನು ಸ್ಥಾಪಿಸುವ ಸನ್ನಿವೇಶ ಇದೆಯೇ? ಹೊಟ್ಟೆ ಬಟ್ಟೆಗಾಗಿ ಹಗಲಿರುಳು ಪರಿತಪಿಸುವ ಪರಿಸ್ಥಿತಿ ಇರುವಾಗ ಚುನಾವಣೆ ಮೌಲಿಕತೆ ಮನಸ್ಸಿನಲ್ಲಿ ಬೇರೂರಿ ಬೆಳೆಯಲು ಸಾಧ್ಯವೇ ? ಕಡೆಗೆ ‘ಯಾರು ಬಂದರೂ ರಾಗಿ ಬೀಸೋದು ತಪ್ಪೋದಿಲ್ಲ’ ಎಂದು ನಿಟ್ಟುಸಿರು ಬಿಡುವ ಜನಸಾಮಾನ್ಯರು ನಮ್ಮ ಪ್ರಜಾಪ್ರಭುತ್ವಕ್ಕೆ ಸವಾಲಾಗುವ ಅಸಹಾಯಕ ಸ್ಥಿತಿ ತಲುಪುತ್ತಿಲ್ಲವೆ ? ಪ್ರಜಾಪ್ರಭುತ್ವದ ಬಗ್ಗೆ ಬೇಕೆಂದಾಗ ಭಾಷಣ ಬಿಗಿದು ಸರಿಯಾದ ಸಂದರ್ಭದಲ್ಲಿ ಒಂಟಿ ಸನ್ನಿ ಹಿಡಿದವರಂತೆ ಆಡುವ ಬುದ್ಧಿವಂತ ಸಿನಿಕರು ಈ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುತ್ತಿಲ್ಲವೆ? ಇಂಥ ಹತ್ತಾರು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಲೇ ಪ್ರಜಾಪ್ರಭುತ್ವವು ಬಲಗೊಳ್ಳಬೇಕಾಗಿದೆ ; ನಿಜವಾದ ಅರ್ಥದಲ್ಲಿ ಜನಪ್ರಭುತ್ವವಾಗಬೇಕಾಗಿದೆ.

ಆದರೆ ಇಂದು ಓಟು ಪಡೆದು ‘ಸರ್‍ಕಾರ’ವಾಗುವ ಪಕ್ಷ ಮತ್ತು ಪ್ರತಿನಿಧಿಗಳು ಆಳುವ ವರ್ಗದ ಆಶಯಕ್ಕೆ ಹತ್ತಿರವಾಗಿ ಜನರಿಂದ ದೂರವಾಗುತ್ತಿದ್ದಾರೆ. ಸರ್ಕಾರದಲ್ಲಿ ಪಾಲ್ಗೊಳ್ಳದ ಪಕ್ಷ ಮತ್ತು ಪ್ರತಿನಿಧಿಗಳು ಇದಕ್ಕಿಂತ ಹೆಚ್ಚು ಭಿನ್ನವಾಗಿ ವರ್ತಿಸುತ್ತಿಲ್ಲ. ಎರಡೂ ಕಡೆ ಕೆಲವು ಆರೋಗ್ಯಕರ ಅಪವಾದಗಳು ಇರಬಹುದಾದರೂ ಒಟ್ಟಾರೆಯಾಗಿ ಜನರು ನಂಬಿಕೆ ಕಳೆದುಕೊಳ್ಳುವಂಥ ವಾತಾವರಣ ರೂಪುಗೊಳ್ಳುತ್ತಿದೆ. ಇಂಥ ವಾತಾವರಣವು ಪ್ರಜಾಪ್ರಭುತ್ವ ಬೇರುಗಳನ್ನು ಸಡಿಲಿಸುತ್ತದೆ. ಅಥವಾ ಪ್ರಜಾಪ್ರಭುತ್ವ ಬೇರುಗಳು ಬಲಗೊಳ್ಳುವ ಸನ್ನಿವೇಶವೇ ಸೃಷ್ಟಿಯಾಗುವುದಿಲ್ಲ.

ಇಷ್ಟಾದರೂ ಇಲ್ಲಿ ಎಲ್ಲವೂ ಜನರ ಹೆಸರಿನಲ್ಲೇ ನಡೆಯುತ್ತದೆ. ಚುನಾವಣೆ ನಡೆಯುವುದು ಜನರ ಹೆಸರಿನಲ್ಲಿ, ಸರ್ಕಾರ ರಚಿತವಾಗುವುದು ಜನರ ಹೆಸರಿನಲ್ಲಿ; ದರಬಾರು ನಡೆಸುವುದು ಜನರ ಹೆಸರಿನಲ್ಲಿ; ಕೋಟ್ಯಾಂತರ ಖರ್ಚಾಗುವುದು ಜನರ ಹೆಸರಿನಲ್ಲಿ. ವಿರೋಧಪಕ್ಷಗಳು ಜೋರು ಮಾಡುವುದು ಜನರ ಹೆಸರಿನಲ್ಲಿ. ಕಡೆಗೆ ದುಡ್ಡು ಹೊಡೆಯುವುದು ಜನರ ಹೆಸರಿನಲ್ಲೇ.

ಜನರು ಲಂಚ ಕೊಡದಿದ್ದರೆ ನಾವೆಲ್ಲಿ ತೆಗೆದುಕೊಳ್ಳುತ್ತೇವೆಂದು ಹೇಳುತ್ತ ಎಲ್ಲವನ್ನೂ ಜನರ ಮೇಲೆ ಹಾಕುವ ಲಂಚಕೋರರು, ಜನರು ಸರಿಯಾದವರಿಗೆ ಓಟು ಕೊಟ್ಟಿದ್ದಾರೆ ಈ ಸ್ಥಿತಿ ಬರುತ್ತಿರಲಿಲ್ಲವೆಂದು ವಿಶ್ಲೇಷಿಸುವ ಓಟು ಮಾಡದ ಬುದ್ಧಿಜೀವಿಗಳು, ಜನರಿಗೆ ಸೌಲಭ್ಯ ಒದಗಿಸುವುದಕ್ಕಾಗಿ ತಮ್ಮ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವ ಪರೋಪಜೀವಿಗಳು- ಹೀಗೆ ಎಲ್ಲರೂ ಬೊಟ್ಟು ಮಾಡಿ ತೋರಿಸುವುದು ಜನಗಳನ್ನು.

ನಿಜ; ‘ಜನ’ ಎನ್ನುವ ಪರಿಕಲ್ಪನೆಯು ಪ್ರಜಾಪ್ರಭುತ್ವದಲ್ಲಿ ತುಂಬಾ ಪ್ರಧಾನವಾದದ್ದು ; ಪವಿತ್ರವಾದದ್ದು. ಆದರೆ ‘ಜನ’ ಎಂಬ ಪರಿಕಲ್ಪನೆಯ ಪಾವಿತ್ರ್ಯವನ್ನು ಪ್ರಜ್ಞಾಪೂರ್ವಕವಾಗಿ ನಾಶಮಾಡಲು ಪ್ರಜಾಪ್ರಭುತ್ವವನ್ನೇ ಒಂದು ಸಾಧನ ಮಾಡಿಕೊಳ್ಳುತ್ತಿರುವ ಜನ ವಿರೋಧಿ ಶಕ್ತಿಗಳು ವಿಜೃಂಭಿಸುತ್ತಿರುವುದೇ ಒಂದು ವಿಪರ್ಯಾಸ; ಒಂದು ದುರಂತ. ವಾಸ್ತವವಾಗಿ ಯಾವ ಸಮುದಾಯವನ್ನು ನಾವು ‘ಜನ’ ಎಂದು ಗುರುತಿಸುತ್ತೇವೆಯೋ ಆ ’ಜನರು’ ಸಮಾನತೆಯ, ಸಾಮರಸ್ಯದ ಬದುಕನ್ನು ನಡೆಸುವಂತೆ ಮಾಡುವ ಒಂದು ಸಾಧನವೇ ಪ್ರಜಾಪ್ರಭುತ್ವ. ಈ ಅರಿವಿನ ಆಧಾರದಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಯ ಅನುಭವವನ್ನು ಜನರಿಗೆ ತಂದುಕೊಡುವುದು ಪ್ರಜಾಪ್ರಭುತ್ವದ ಮುಖ್ಯ ಗುರಿ. ಆದರೆ ನಮ್ಮಲ್ಲಿ ಜನಮುಖಿ ಆಶಯಗಳು ಹಿಂದಕ್ಕೆ ಸರಿದು ಪ್ರಜಾಪ್ರಭುತ್ವವನ್ನು ಚುನಾವಣೆಯೊಂದೇ ಆಳತೊಡಗಿದೆ; ಚುನಾವಣೆಯನ್ನು ಪ್ರಜಾಪ್ರಭುತ್ವವು ಆಳುತ್ತಿಲ್ಲ. ಯಾವ ಪ್ರಜಾಪ್ರಭುತ್ವದಲ್ಲಿ ಚುನಾವಣೆಯೊಂದೇ ಎಲ್ಲವನ್ನೂ ಆಳತೊಡಗುತ್ತದೆಯೋ ಅಂತಹ ಕಡೆ ಜನಗಳ ಹೆಸರು ವಿಜೃಂಭಿಸುತ್ತದೆ; ಆದರೆ ಜನ ಸಂವೇದನೆ ಸಾಯುತ್ತಾ ಹೋಗುತ್ತದೆ. ನಮ್ಮ ದೇಶದ ಪ್ರಜಾಪ್ರಭುತ್ವದಲ್ಲಿ ಆಗುತ್ತಿರುವುದು ಇದೇ.

ಚುನಾವಣೆ ಬಂದ ಕೂಡಲೇ ದೇಶದ ಸಕಲಾಂಗಗಳೂ ಶ್ರೀಮಂತವಾಗಿ ವಿಜೃಂಭಿಸತೊಡಗುತ್ತವೆ. ಜನರಲ್ಲಿ ಜ್ವರ ಮೂಡಿಸುತ್ತದೆ ; ಸಮೂಹ ಪ್ರಜ್ಞೆಯ ಬದಲು ಸಮೂಹ ಸನ್ನಿ ಹಿಡಿಸಿ ಸಮಯಸಾಧಕತನವನ್ನು ಸಾಧಿಸುತ್ತವೆ. ಹೀಗೆ ಹೇಳುತ್ತ ನಾವು ಚುನಾವಣೆಯನ್ನು ವಿರೋಧಿಸುತ್ತಿಲ್ಲ ; ವಿರೋಧಿಸಬಾರದು. ಆದರೆ ಚುನಾವಣೆಯೊಂದೇ ಆದಿ ಮತ್ತು ಅಂತ್ಯ ಎಂಬ ಕಲ್ಪನೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ಜನಗಳಿಗೆ ಮಾಡುವ ಒಂದು ವಂಚನೆ ಮತ್ತು ಜನರ ಹೆಸರಿನಲ್ಲಿ ಪ್ರಜಾಪ್ರಭುತ್ವಕ್ಕೆ ಮಾಡುವ ಒಂದು ಅನ್ಯಾಯ.

ನಮ್ಮ ಬುದ್ಧಿವಂತರು ಎಷ್ಟು ಸೊಗಸಾಗಿ ತಮ್ಮ ಬುದ್ಧಿಯನ್ನು ಬಳಸುತ್ತಾರೆಂದರೆ ಕೆಟ್ಟ ಸರ್ಕಾರ ಬಂದಾಗ ಇದಕ್ಕೆ ಜನರೇ ಕಾರಣ ಎನ್ನುತ್ತಾರೆ. ಅಕಸ್ಮಾತ್ತಾಗಿ ಸರ್ಕಾರದಿಂದ ಒಳ್ಳೆಯ ಕೆಲಸಗಳು ನಡೆದಾಗ ತಮಗೆ ಇಷ್ಟವಾದ ಸರ್ಕಾರಿ ಧುರೀಣರನ್ನು ಹೊಗಳುತ್ತಾರೆ. ಒಮ್ಮೆ ಈ ದೇಶಕ್ಕೆ ಪ್ರಜಾಪ್ರಭುತ್ವವೇ ಸರಿಯಲ್ಲ ಎನ್ನುತ್ತಾರೆ, ಇನ್ನೊಮ್ಮೆ ಪ್ರಜಾಪ್ರಭುತ್ವವೇ ಆದರ್ಶವೆಂದು ಎರಡು ಪಕ್ಷಗಳ ಪ್ರಜಾಪ್ರಭುತ್ವ ಬೇಕೆಂದು ವಾದಿಸುತ್ತಾರೆ; ಸ್ವಲ್ಪ ಸಿಟ್ಟು ಬಂದರೆ ಮಿಲಿಟರಿ ಆಡಳಿತ ಬರಬೇಕೆಂದು ಬಾಗಿಲು ಮುಚ್ಚಿ ಭಾಷಣ ಮಾಡುತ್ತಾರೆ. ಇಂಥ ಬುದ್ಧಿವಂತರಿಂದ ಬೇರೆಯೇ ಆಗಿ ಬದುಕುತ್ತಿರುವ ಸಾಮಾನ್ಯ ಜನರು ಬೆವರಿನಲ್ಲಿ ಬಾಳಿನ ಭವಿಷ್ಯ ಬರೆಯುತ್ತ ಭವಿಷ್ಯವನ್ನು ಕನಸುತ್ತಾರೆ. ಕಡೇಪಕ್ಷ, ಕನಸುಗಳನ್ನು ಜೀವಂತವಾಗಿಡುವ ವ್ಯವಸ್ಥೆ ಪ್ರಜಾಪ್ರಭುತ್ವವೆನ್ನಿಸಿಕೊಳ್ಳಲು ಅರ್ಹವಾಗುವುದಿಲ್ಲ. ಚಿಗುರಿದ ಕನಸುಗಳನ್ನು ಚಿವುಟಿ ಹಾಕುತ್ತಿದ್ದರೂ ಮತ್ತೆ ಮತ್ತೆ ಹುಟ್ಟುವ ಒತ್ತಾಸೆಯೇ ಪ್ರಜಾಪ್ರಭುತ್ವವನ್ನು ಉಳಿಸಬಲ್ಲದು. ಜನರ ಕನಸುಗಳನ್ನು ಸಾಕಾರಗೊಳಿಸುವ ಮೂಲಕ ಸಮಾನತೆಯನ್ನು ಸಮೀಪಿಸಿ ಸ್ವಾತಂತ್ರ್ಯದ ಅನುಭವವನ್ನು ತಂದುಕೊಡುವುದು ಪ್ರಜಾಪ್ರಭುತ್ವವಾಗಬಲ್ಲದು.

ಹೀಗೆ ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ದಿಕ್ಕಿನಲ್ಲಿ ಜನ ಪ್ರತಿನಿಧಿಗಳ ಪಾತ್ರ ದೊಡ್ಡದು. ಎಲ್ಲಿಯವರೆಗೆ ಇವರಲ್ಲಿ ಜನ ಸಂವೇದನೆ ಸಾಕಾರಗೊಳ್ಳುವುದಿಲ್ಲವೊ ಅಲ್ಲಿಯವರೆಗೆ ಪ್ರಜಾಪ್ರಭುತ್ವದ ದುರುಪಯೋಗವನ್ನು ಮಾಡುತ್ತ ಹೋಗುತ್ತಾರೆ. ‘ಜನರು ಬಯಸುವವರೆಗೆ ಅಧಿಕಾರದಲ್ಲಿರುತ್ತೇವೆ. ಬೇಡವೆಂದ ಕೂಡಲೇ ಹೋಗುತ್ತೇವೆ’ ಎಂದು ದೊಡ್ಡದಾಗಿ ಘೋಷಿಸುತ್ತಾರೆ. ‘ಜನರಿಗಾಗಿ ನಾವು ಜಗಳವಾಡುತ್ತಿದ್ದೇವೆ’ ಎಂದು ತಮ್ಮ ಸಂಸದೀಯ ಚಟುವಟಿಕೆಗಳನ್ನು ಆಗೊಮ್ಮೆ ಈಗೊಮ್ಮೆ ಉಗ್ರಗೊಳಿಸುತ್ತಾರೆ. ‘ಜನರ ಹಣ ವ್ಯಯ ಮಾಡುತ್ತಾ ನಾವು ಸುಮ್ಮನೆ ಜಗಳಗಂಟಿತನ ತೋರ ಬಾರದು’ ಎಂದು ಮತ್ತೊಮ್ಮೆ ಮಾತಾಡುತ್ತಾರೆ. ಒಟ್ಟಿನಲ್ಲಿ ತಮ್ಮ ಬೇಕು ಬೇಡಗಳಿಗೆಲ್ಲ ಜನರನ್ನೇ ಕೇಂದ್ರವಾಗಿಸಿಕೊಳ್ಳುತ್ತಾರೆ.

ತಂತಮ್ಮ ಬೇಕು-ಬೇಡಗಳಿಗೆ ಜನರನ್ನೇ ಕೇಂದ್ರವಾಗಿಸಿಕೊಳ್ಳುವ ಪ್ರವೃತ್ತಿಯು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತಗೊಂಡಿಲ್ಲ. ಸಾಹಿತ್ಯ, ಸಿನಿಮಾ ಮುಂತಾದ ಕ್ಷೇತ್ರಗಳಿಗೆ ಇದು ಆವರಿಸಿದೆ. ಅಗ್ಗದ ಸಾಹಿತ್ಯವನ್ನು ಮಾರುಕಟ್ಟೆಗೆ ಬಿಟ್ಟು ಅಭಿರುಚಿಯನ್ನು ಹಾಳು ಮಾಡುವ ಕೆಲಸ ಅವ್ಯಾಹತವಾಗಿ ಸಾಗುತ್ತಿದೆ. ಜನರ ಸುಪ್ತ ಕಾಮನೆಗಳು ಪ್ರಚೋದನೆಗೆಂದೇ ಅವತರಿಸುವ ‘ಪುಸ್ತಕಗಳು’ ಸಾಕಷ್ಟು ಸಂಖ್ಯೆಯಲ್ಲಿವೆ. ಇನ್ನು ಸಿನಿಮಾಗಳ ಬಗ್ಗೆ ಹೆಚ್ಚು ವಿವರಿಸುವ ಅಗತ್ಯವೇ ಇಲ್ಲ. ಸೆಕ್ಸ್ ಮತ್ತು ಹಿಂಸೆಗಳ ಅತಿರೇಕದಿಂದ ವಿಜೃಂಭಿಸುವ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಈ ಪ್ರವೃತ್ತಿಯನ್ನು ಪ್ರಶ್ನೆ ಮಾಡಿದರೆ ಕೂಡಲೇ ಸಿಗುವ ಉತ್ತರ- ‘ಜನರು ಬಯಸುತ್ತಾರೆ. ನಾವು ಕೊಡುತ್ತೇವೆ. ಜನರು ಬಯಸಿದ್ದನ್ನು ಕೊಡುವುದು ತಪ್ಪೇ?’

ಉತ್ತರದ ಮೂಲಕವೇ ಪ್ರಶ್ನೆಯನ್ನು ಮುಂದೊಡ್ಡುವ ಮಾರುಕಟ್ಟೆ ಮಂದಿ ಕೊನೆಗೆ ಬಲಿ ತೆಗೆದುಕೊಳ್ಳುವುದು ಜನರನ್ನು. ತಮ್ಮ ಎಲ್ಲಾ ಕೆಲಸಗಳಿಗೂ ಜನರತ್ತಲೇ ಇವರು ಬೊಟ್ಟು ಮಾಡಿ ತೋರಿಸುತ್ತಾರೆ. ಈ ದೇಶದಲ್ಲಿ ಬಿಟ್ಟಿ ಸಿಕ್ಕಿದವರೆಂದರೆ ‘ಜನರು’. ಜನರ ಹೆಸರಿನಲ್ಲಿ ಪುಢಾರಿಗಳೂ ಬದುಕ ಬಯಸುತ್ತಾರೆ ; ಇವರೂ ಬದುಕು ಬಯಸುತ್ತಾರೆ. ಪುಢಾರಿಗಳಿಗೆ ಪ್ರಜಾಪ್ರಭುತ್ವವು ಮುಖ್ಯವಲ್ಲ; ಅಗ್ಗದ ಸಿನಿಮಾ ಮತ್ತು ಸಾಹಿತ್ಯದವರಿಗೆ ಸದಭಿರುಚಿಯೂ ಮುಖ್ಯವಲ್ಲ. ಮುಖ್ಯವಾದದ್ದು ಲಾಭಕೋರತನ ಮಾತ್ರ.

ಇಷ್ಟು ಹೇಳಿದ ಮೇಲೆ, ಜನಗಳ ಪಾತ್ರದ ಬಗ್ಗೆ ಎಚ್ಚರ ಮಾತನ್ನು ಹೇಳಲೇಬೇಕು. ಜನರು ಬಯಸಿದಂತೆ ಸರ್ಕಾರವಿರುತ್ತದೆಯೆಂಬ ಹೇಳಿಕೆಯಾಗಲಿ, ಜನ ಬಯಸಿದ್ದನ್ನು ನಾವು ಕೊಡುತ್ತೇವೆಂದು ಹೇಳುವ ಮಾರುಕಟ್ಟೆಯ ಮಾತಾಗಲಿ, ನೂರಕ್ಕೆ ನೂರು ಸುಳ್ಳೆಂದು ಸಾರುವಂತಿಲ್ಲ. ನೀವು ಇವರಿಂದ ಒಂದು ಹೊಣೆಗಾರಿಕೆಯನ್ನು ಬಯಸುವುದು ಜನರ ಒಳಿತಿಗಾಗಿ ; ಆರೋಗ್ಯಕರ ಸಮಾಜಕ್ಕಾಗಿ. ಈ ಸಮಾಜದ ಮುಖ್ಯ ಭಾಗವಾದ ಜನರದ್ದು ಜವಾಬ್ದಾರಿಯಾಗಿರುತ್ತದೆ. ಮಾರುಕಟ್ಟೆ ಮಾತುಗಳನ್ನು ಅಲ್ಲಗಳೆಯುವಂತಹ ಅಭಿರುಚಿಯನ್ನು ರೂಪಿಸಿಕೊಳ್ಳುವ ಹಕ್ಕು, ಹೋರಾಟ ಮತ್ತು ಹೊಣೆಗಾರಿಕೆಗಳನ್ನು ವ್ಯಕ್ತಿತ್ವದ ಭಾಗವಾಗಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನದಿಂದ ಜನ ಸಂವೇದನೆಯ ಸೂಕ್ಷ್ಮಗಳನ್ನ ಬಿತ್ತಬೇಕು ; ಬೆಳೆಯಬೇಕು.

ಆಗ ಜನರ ಹೆಸರಿನಲ್ಲಿ ನಡೆಯುವ ವಂಚನೆಗೆ ಒಂದು ಕಡಿವಾಣ ಹಾಕಿದಂತಾಗುತ್ತದೆ.
*****
೨೫-೯-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಳಿ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫

ಸಣ್ಣ ಕತೆ

 • ಬಿರುಕು

  ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

cheap jordans|wholesale air max|wholesale jordans|wholesale jewelry|wholesale jerseys