ಮೊತ್ತಮೊದಲು ವಿಶ್ವ ಜಲಮಯವಾಗಿತ್ತೆಂದು ಪುರಾಣ ಪುಣ್ಯ ಜನಪದ ಕತೆಗಳು ಸಾರುತ್ತಿವೆ.
ಈಗಲೂ ಭೂಮಿ ಇರುವುದು ಮೂರನೆಯ ಒಂದು ಭಾಗ ಮಾತ್ರ. ಉಳಿದಿದ್ದೆಲ್ಲ ನೀರು, ಬೆಟ್ಟಗುಡ್ಡ, ಕಾಡುಮೇಡು, ಮಾತ್ರ.
ಇತ್ತೀಚೆಗೆ ಕೇಂದ್ರೀಯ ಜಲ ಆಯೋಗದ ವರದಿಯ ಪ್ರಕಾರ ಭವ್ಯ ಭಾರತದಲ್ಲಿ ನೀರಿನ ಲಭ್ಯತೆ ೧೮೬೯ ಶತಕೋಟಿ ಕ್ಯೂಬಿಕ್ (ಟಿಸಿಎಂ) ಮೀಟರ್‌ನಷ್ಟಿದೆ.
ಆದರೆ ಇದರಲ್ಲಿ ಬಳಕೆಗೆ ಯೋಗ್ಯವಾದ ನೀರು ೧೧೨೩ ಟಿಸಿಎಂ ಮಾತ್ರವೆಂಬ ಆತಂಕಕಾರಿ ವಿಷಯವನ್ನು ಬಯಲು ಮಾಡಿದೆ.
ದಿನೇದಿನೇ ನೀರಿನ ಬೇಡಿಕೆಗೆ ಹೋಲಿಸಿದರೆ ಈ ನೀರು ಎಲ್ಲಿಗೂ ಸಾಕಾಗದೆಂದು ಸಚಿವರು ಸದನದಲ್ಲಿ ಹೇಳಿರುವರು.
ಹೌದು! ಈಗೀಗ ಕೆರೆ, ಬಾವಿ, ಆಣೆಕಟ್ಟು, ಹಳ್ಳಕೊಳ್ಳ ಜಲಾಶಯಗಳೆಲ್ಲ ಬತ್ತಿ ಹೋಗಿ ಬೋರುಗಳು ೧,೦೦೦ ಅಡಿ ಆಳಕ್ಕೊದರೂ ನೀರಿನ ಒರತೆಯಿಲ್ಲ! ಇನ್ನು ಹತ್ತು ವರ್ಷ ಕಳೆದರೆ, ಭವ್ಯ ಭಾರತದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಲಿದೆ..!
೨೦೨೫ರ ವೇಳೆಗೆ ದೇಶದ ಎಲ್ಲಾ ಜಲಮೂಲಗಳನ್ನು ಒಟ್ಟು ಗೂಡಿಸಿದರೂ ಭವ್ಯ ಭಾರತದ ನೀರಿನ ದಾಹ ತೀರಿಸಲು ಸಾಧ್ಯವಿಲ್ಲ. ಇತ್ತೀಚಿಗೆ ಸರ್ಕಾರವೇ ಈ ಆಘಾತಕಾರಿ ವಿಷಯವನ್ನು ಖಚಿತ ಪಡಿಸಿದೆ. ಸಂಶೋಧನಾ ವರದಿಯೊಂದನ್ನು ಆಧರಿಸಿ ಜಲಕೇಂದ್ರ ಸಂಪನ್ಮೂಲ ಸಹಾಯಕ ಸಚಿವ ಸನ್ವರ್‌ಲಾಲ್ ಲೋಕಸಭೆಗೆ ಈ ಕುರಿತು ವಿವರ ನೀಡಿ ದೇಶವನ್ನು ತಲ್ಲಣಗೊಳಿಸಿರುವರು.
ಆದ್ದರಿಂದ ರಾಜ್ಯ ಸರ್ಕಾರಗಳು ಜಲ ಸಂರಕ್ಷಣೆ, ಜಲ ಸಂಪನ್ಮೂಲ ನಿರ್ವಹಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿವೆ ಕೇಂದ್ರ ಸರ್ಕಾರ ತಾಂತ್ರಿಕ ಮತ್ತು ಹಣಕಾಸು ನೆರವು ಒದಗಿಸುವ ಮೂಲಕ ಇಂತಹ ಕ್ರಮಗಳಿಗೆ ಮತ್ತಷ್ಟು ಬೆಂಬಲ ನೀಡುವುದೆಂದು ಸಚಿವರು ಈಗಾಗಲೇ ಖಚಿತಪಡಿಸಿರುವರು.
ಆದ್ದರಿಂದ ಪ್ರತಿ ಹಳ್ಳಿ, ತಾಲ್ಲೂಕು, ಜಿಲ್ಲಾ, ರಾಜ್ಯ ಕೇಂದ್ರಗಳಲ್ಲಿ ಮಳೆ ನೀರು ಸಂಗ್ರಹಕ್ಕೆ ಅಗತ್ಯ ಕ್ರಮ ಕೈಗೊಳ್ಳಲೇ ಬೇಕು. ಇರುವ ನೀರನ್ನು ಹಾಲಿನಂತೆ ಜೇನ ಹನಿಯಂತೆ… ತುಪ್ಪದಂತೆ ಖರ್ಚು ಮಾಡುವುದನ್ನು ಎಲ್ಲರೂ ಇನ್ನಾದರೂ ರೂಢಿಸಿಕೊಂಡರೆ ಒಳಿತು ಅಲ್ಲವೇ?
*****