ರಾವು ಕೊರುಂಗು

ರಾವು ಕೊರುಂಗು

Ravu Koranguರಾವೋ ರಾವು ಕೊರುಂಗು

ರಾವಾಂದೇನ್ ದಾನ್‍ಪೇ

ಪುಟ್ಟಣ್ಣನಿಗೆ ಈ ಕೊಕ್ಕರೆ ಹಾಡೆಂದರೆ ತುಂಬಾ ಇಷ್ಟ. ಅವನು ಆಗಾಗ ಗುನುಗುನಿಸುವ ಹಾಡದು. ಭತ್ತದ ಗದ್ದೆಯಲ್ಲಿ ನೇಜಿ ನೆಡುವಾಗ ಹೇಳುವ ಹಾಡನ್ನು ಶಾಲೆಯಲ್ಲೂ ಹೇಳುವುದು ಪುಟ್ಟಣ್ಣನ ಅಭ್ಯಾಸ. ಮೇಸ್ಟ್ರು ಒಮ್ಮೆ ಅವನಲ್ಲಿ ಹಾಡಲು ಹೇಳಿದ್ದರು. ಅವನು ಗಟ್ಟಿ ಸ್ವರದಲ್ಲಿ “ರಾವೋ ರಾವು ಕೊರುಂಗು” ಹಾಡಿದ್ದ. ಅವನ ಸ್ನೇಹಿತರು ಗೊಳ್ಳೆಂದು ನಕ್ಕಿದ್ದರು. ಮೇಸ್ಟ್ರಿಗೂ ನಗು ಬಂದಿತ್ತು. ಕೊಕ್ಕರೆ ಹಾಡೊಂದನ್ನೇ ಕಲಿತರೆ ಸಾಲದು. ಬೇರೆಯದ್ದನ್ನೂ ಕಲಿಯಬೇಕು ಎಂದವರು ಪುಟ್ಟಣ್ಣನ ಬೆನ್ನು ತಟ್ಟಿದ್ದರು. ಪುಟ್ಟಣ್ಣ ಮನಗೆ ಬಂದವನೇ ತಾಯಲ್ಲಿ ತನ್ನ ಕೊರುಂಗು ಹಾಡನ್ನು ಮೇಸ್ಟ್ರು ಮೆಚ್ಚಿಕೊಂಡಿದ್ದಾರೆಂದು ಹೇಳಿ ಕುಣಿಯುತ್ತಾ ಗದ್ದೆಗಳತ್ತ ಓಡಿದ್ದ. ಕೊಕ್ಕರೆಗಳನ್ನು ನೋಡಲು!

ಪಿಂಗಾರ ಗುಡ್ಡದ ಬುಡದಲ್ಲಿ ಅವನ ಮನೆ. ಎದುರಲ್ಲಿ ಏಳೆಂಟು ಸಣ್ಣ ಸಣ್ಣ ಗದ್ದೆಗಳು. ಅದರಾಚೆಗೆ ಜುಳು ಜುಳು ಹರಿಯುವ ತಪಸ್ವಿನಿ. ಅವನು ತಪಸ್ವಿನಿ ದಡದಲ್ಲಿ ನಿಂತು ಗದ್ದೆಯನ್ನು, ತನ್ನ ಮನೆಯನ್ನು ಅದರ ಹಿಂದೆ ಬೃಹದಾಕಾರದಲ್ಲಿ ತಲೆ ಎತ್ತಿ ನಿಂತಿರುವ ಪಿಂಗಾರ ಗುಡ್ಡವನ್ನು ನೋಡುತ್ತಾ ನಿಲ್ಲುವ. ಗುಡ್ಡದ ತಲೆಯೊಂದನ್ನು ಬಿಟ್ಟರೆ ಬೇರೆಲ್ಲೆಲ್ಲೂ ದೊಡ್ಡ ಮರಗಳು. ಆಚೀಚೆ ಕಾಡುಗಳೊ. ಆ ಕಾಡುಗಳಲ್ಲಿ ಆನೆಗಳಿವೆ. ದನಗಳನ್ನು ಹಿಡಿಯುವ ಚಿಟ್ಟೆ ಹುಲಿಗಳಿವೆ. ಮನೆಯಂಗಳಕ್ಕೆ ಬಂದು ನರವೋಳು ಕಾಯಿ ತಿಂದುಕೊಂಡು ಹೋಗುವ ಕಡವೆಗಳಿವೆ; ಜಿಂಕೆ, ಕಾಡುಕುರಿ, ನವಿಲು, ಮೊಲಗಳಿವೆ. ರಾತ್ರಿ ಹೊತ್ತು ನದಿಗೂ ಅವು ಬರುತ್ತವೆ. ಅವನಿಗೆ ಹೆದರಿಕಯಾಗುತ್ತಿರಲಿಲ್ಲ. ಅಪ್ಪ ಹೇಳಿದ್ದ. “ನಾವಾಗಿ ಅವುಗಳ ತಂಟೆಗೆ ಹೋಗದಿದ್ದರೆ ಆನೆ, ಹುಲಿ, ಹಾವು ನಮ್ಮ ತಂಟೆಗೆ ಬರುವುದಿಲ್ಲ. ಯಾರು ಸೃಷ್ಟಿಸಿದ್ದೋ ಈ ಕಾಡನ್ನು, ಈ ಗದ್ದೆಯನ್ನು, ಈ ನದಿಯನ್ನು. ಬದುಕಿರುವಷ್ಟು ಕಾಲ ನಾವಿದನ್ನು ನಮ್ಮದು ಎಂದುಕೊಂಡರಾಯಿತು. ಆದರೆ ನಮ್ಮದು ಮಾತ್ರವಲ್ಲ; ಅವುಗಳದ್ದೂ ಎಂದು ತಿಳಿದುಕೊಳ್ಳಬೇಕು” ಎಂಬ ಮಾತುಗಳು ಅವನಲ್ಲಿ ಭದ್ರವಾಗಿ ನೆಲೆಯೂರಿದ್ದವು ಹಕ್ಕಿಗಳು ಭತ್ತದ ತೆನೆಯನ್ನು ಕುಕ್ಕುವಾಗ ಓಡಿಸಲು ಮನಸ್ಸು ಬಾರದಷ್ಟು!

ಸುತ್ತ ಹಸಿರ ಪ್ರಕೃತಿ, ಮೇಲೆ ನೀಲಿಯಾಕಾಶ. ನಡುವೆ ಹಾರಿ ಹೋಗುವ ಕೊಕ್ಕರೆಗಳ ಹಿಂಡನ್ನು ನೋಡುವುದೆಂದರೆ ಅವನಿಗೆ ಇನ್ನಿಲ್ಲದ ಖುಷಿ. ಎಷ್ಟು ಹೊತ್ತು ಬೇಕಾದರೂ ಕೊಕ್ಕರೆಗಳನ್ನು ಅವನು ನೋಡುತ್ತಾ ನಿಲ್ಲುವ. ಮಳೆಗಾಲದಲ್ಲಂತೂ ಕರಿ ಆಗಸದಲ್ಲಿ ಬಿಳಿ ಬಿಳಿ ಚುಕ್ಕಿಗಳಾಗಿ ಹಾರಿಹೋಗುವ ಕೊಕ್ಕರೆಗಳನ್ನು ನೋಡುವುದೇ ಒಂದು ಸಡಗರ. ಮಿಂಚು ಹೊಡೆದಂತೆ ಆಕಾಶದಿಂದ ಜಕ್ಕೆಂದು ಅವು ಗದ್ದೆಗಳಿಗೆ ಇಳಿಯುವುದು, ಬದುಗಳಲ್ಲಿ ಒಂಟಿ ಗಾಲಲ್ಲಿ ಧ್ಯಾನ ಮಾಡುತ್ತಾ ನಿಲ್ಲುವುದು, ಮೀನು ಕಣ್ಣಿಗ ಬಿದ್ದರೆ ಪುಳ್ಕ ಅಂತ ಕೆಸರಲ್ಲಿ ಕೊಕ್ಕು ಕುತಿಸಿ ಕಚ್ಚಿಕೊಂಡು ಹಾರುವುದು! ತಾನು ಒಂದು ಕೊಕ್ಕರೆಯಾಗಿರುತ್ತಿದ್ದರೆ! ಆಗ ಗೊರಬೆ ಹಾಕಿಕೊಂಡು ಬರಿಗಾಲಲ್ಲಿ ಶಾಲೆಗೆ ಹೋಗಿ ಮೇಸ್ಟ್ರ ಕನ್ನಡ, ಗಣಿತ, ಸಮಾಜ, ವಿಜ್ಞಾನ ಕೇಳಿಸಿಕೊಳ್ಳಬೇಕಿರಲಿಲ್ಲ. ಅರ್ಥವೇ ಆಗದ ಅವನ್ನು ಬಾಯಿಪಾಠ ಮಾಡಬೇಕಿರಲಿಲ್ಲ. ಆಕಾಶದಲ್ಲಿ ಉದ್ದೋ ಉದ್ದಕ್ಕೆ ರೆಕ್ಕೆಯಗಲಿಸಿ ಮನೆಗಳನ್ನು, ಹೊಲಗದ್ದೆಗಳನ್ನು, ತಪಸ್ವಿನಿಯನ್ನು ನೋಡುತ್ತಾ ಹಾರುವುದು. ಜಕ್ಕೆಂದು ಗದ್ದೆಗಳಿಗೆ ಇಳಿಯುವುದು. ಪುಳ್ಕೆಂದು ಕೊಕ್ಕು ಕುತಿಸಿ ಮೀನುಗಳನ್ನು ಕಚ್ಚಿಕೊಂಡು ಹಾರುವುದು. ವ್ಹಾ! ಎಂಥಾ ಸುಖ!

ಕೊಕ್ಕರೆ ಬಿಟ್ಟರೆ ಅವನಿಷ್ಟವಾಗುವಾಗುದು ನದಿ. ಬೇಸಿಗೆಯಲ್ಲಿ ಅವನ ಗದ್ದೆಗಳ ಹತ್ತಿರ ಅದಕ್ಕೊಂದು ಒಡ್ಡು ಹಾಕುತ್ತಾರೆ. ತನಗೆ ಈಜಲು ಬೇಕಾದಷ್ಟು ನೀರು, ಅದರ ಜುಳು ಜುಳು ಶಬ್ದ ಅವನಿಗೆ ತುಂಬಾ ಇಷ್ಟ. ನೀರಿಗೆ ಬಣ್ಣವಿಲ್ಲ, ರುಚಿಯಿಲ್ಲ, ಜೀವವಿಲ್ಲ ಎಂದು ಮೇಸ್ಟ್ರು ಹೇಳುವುದು ಎಷ್ಟು ತಪ್ಪು! ಒಂದೊಂದು ಕಡೆ ಒಂದೊಂದು ಬಣ್ಣ ಪಡಕೊಳ್ಳುತ್ತದೆ ಈ ತಪಸ್ವಿನಿಯ ನೀರು. ಬಾಯಿಗೆ ಹಾಕಿಕೊಂಡಾಗ ತಣ್ಣಗೆ ಏನು ರುಚಿ! ಜೀವವಿಲ್ಲದ ನದಿ ಹರಿಯುವುದು ಹೇಗೆ? ಜುಳು ಜುಳು ಸಂಗೀತ ಹೊರಡಿಸುವುದು ಹೇಗೆ? ಮಳೆಗಾಲದಲ್ಲಿ ಬಣ್ಣ ಬದಲಾಯಿಸಿ ಹೆದರಿಕೆ ಹುಟ್ಟಿಸುವಂತೆ ಗರ್ಜಿಸಿ ಹರಿಯುತ್ತದಲ್ಲಾ, ಅದು ಹೇಗೆ? ನದಿಗೆ ಕೋಪ ಬಂದರೆ ಹಾಗೆ ಗರ್ಜಿಸುವುದಾ ?

ಮಳೆಗಾಲದಲ್ಲಿ ಅವನಿಗೆ ಈಜಲಾಗುತ್ತಿರಲಿಲ್ಲ. ಆಗ ಗದ್ದೆಕೆಲಸದ ಖುಷಿ ಬೇಸಿಗೆಯಲ್ಲಿ ಶುಭ್ರವಾದ ನದಿ ನೀರಲ್ಲಿ ಮುಳುಗಿ ಹಾಸು ಬಂಡೆಗಳುದ್ದಕ್ಕೊ ಈಜುವುದು. ಆಗ ನದಿ ಅವನಲ್ಲಿ ಮಾತಾಡುತ್ತಿದೆಯೆಂದೆನಿಸುತ್ತಿತ್ತು. ನದಿಗೆ ಮಾತು ಬರುತ್ತದಾ? ಅವನು ಅಪ್ಪ, ಅಮ್ಮನಲ್ಲಿ ಕೇಳುತ್ತಿರಲಿಲ್ಲ. ಆದರೆ ಆ ನೀರಿನ ಹರಿವು ಬಾಚಿ ತಬ್ಬುವ ಕೈಗಳ ಹಾಗೆ, ಆ ಜುಳು ಜುಳು ಅಮ್ಮನ ಚೋಗುಳದ ಹಾಗೆ, ನದಿಯ ತಳಭಾಗದ ಹಾಸುಬಂಡೆಗಳು ಹಾಸಿಗೆಯ ಹಾಗೆ. ನದಿಯ ಮಧ್ಯದ ದೊಡ್ಡ ಬಂಡೆಯಲ್ಲಿ ಕೂತರೆ ಉದ್ದೋ ಉದ್ದಕ್ಕೆ ಹರಿಯುವ ನದಿ. ಆಚೀಚೆ ಹಬ್ಬಿದ ಕಾಡು. ಎಲ್ಲೋ ಇಣಿಕಿದಂತೆ ಕಾಣುವ ಮೂರುಕಲ್ಲು ಪರ್ವತ, ಬಸವನ ಭುಜ ಪರ್ವತ. ಮತ್ತೆ ಮನೆಯ ಹಿಂದಿನ ಪಿಂಗಾರ ಗುಡ್ಡ. ಈ ಗುಡ್ಡ ಕುಸಿದರೆ ಏನಾದೀತು? ಈಗ ತಪಸ್ವನಿಯಲ್ಲಿ ಭೋರ್ಗರೆವ ಹಳದಿ ನೀರು ಉಕ್ಕಿದರೆ ಏನಾದೀತು? ಒಂದು ಕ್ಷಣ ಅವನಿಗೆ ಹೆದರಿಕೆಯಾಯಿತು. ಮತ್ತೆ ಗುಡ್ಡವನ್ನು ನೋಡಿದ. ನದಿಯನ್ನು ನೋಡಿದ. ಎಷ್ಟು ಶಾಂತವಾಗಿದೆ. ತಾನು ಇಷ್ಟು ಪ್ರೀತಿಸುವ ಈ ಗುಡ್ಡ ಮತ್ತು ಈ ನದಿ ತನಗೇನೂ ಮಾಡಲಾರದು ಎಂದು ಹಾಯಾಗಿ ಈಜಿದ.

ಪುಟ್ಟನ ಅಪ್ಪ ಹುಕ್ರನಿಗೆ ಮಗನದ್ದೇ ಚಿಂತೆ. ಅವನಿಗೆ ಒಂದಷ್ಟು ಹಾಡು ಬರುತ್ತಿತ್ತು. “ಚಿಕ್ಕಪ್ರಾಯದ ಬಾಲೆ ಚದುರೆ ನಿನ್ನಂಗವಾ” ಎಂದು ಯಕ್ಷಗಾನದ ಹಾಡನ್ನು ಅವನು ಹಾಡುತ್ತಿದ್ದ. ಯಾವ್ಯಾವುದೋ ಭಜನೆ, ಸಿನಿಮಾದ ಹಾಡು ಹೇಳತ್ತಿದ್ದ. ಶಾಲೆಗೆ ಹೋಗುವವರಿಗೆ ಸಿನೆಮಾ ಹಾಡು ಬರಬೇಕು ಎನ್ನುತ್ತಿದ್ದ. ಮಗ ಒಳ್ಳೊಳ್ಳೆಯ ಹಾಡು ಕಲಿಯಬೇಕು. ದೊಡ್ಡ ಆಫೀಸರಾಗ ಬೇಕು. ಆದರೆ ಪುಟ್ಟಣ್ಣನಿಗೆ ಸಿನಿಮಾದ ಒಂದೇ ಒಂದು ಹಾಡು ಬರುವುದಿಲ್ಲ. ಶಾಲೆಯ ಹೆಸರೆತ್ತಿದರೆ ಮುಖ ಕಿವುಚುತ್ತಾನೆ. ಯಾವಾಗಲೂ ಗುಡ್ಡ, ನೇಜಿ, ಕೊಕ್ಕರೆ, ಕಾಳ, ಬೊಳ್ಳ, ಓ ಬೇಲೆ, ದೂಜಿ ಕೆಮ್ಮಯಿರ, ಮಂಜೊಟ್ಟಿಗೋಣ ಎಂದು ಹೊತ್ತು ತೆಗೆಯುತ್ತಾನೆ. ಮಗ ಸರಿಯಾಗೋದು ಯಾವಾಗ ಎನ್ನುವುದೇ ಹುಕ್ರನ ಚಿಂತೆ.

ಮಳೆಗಾಲದ ಒಂದು ದಿನ ಹುಕ್ರ ಚಿಂತೆಯಲ್ಲಿ ಕುಳಿತಿರುವಾಗ ಪುಟ್ಟಣ್ಣ ಏದುಸಿರು ಬಿಡುತ್ತಾ ಬಂದ. ಅಪ್ಪನನ್ನು ನೋಡಿ ಹಲ್ಲು ಬಿಟ್ಟ: “ಆಪ್ಪಾ ನೋಡಿದ್ದೀಯಾ? ಇವತ್ತು ಒಂದು ರಾಸಿ ಕೊರುಂಗುಗಳು. ಗದ್ದೆಯಿಡೀ ಅವುಗಳದ್ದೇ ಕಾರುಬಾರು. ಮೀನತರುಗಳು ಕಣ್ಣಿಗೆ ಬಿದ್ದದ್ದೇ ಪುಳ್ಕಾಂತ ನೀರಿನಲ್ಲಿ ದೂಂಚಿ ಕೊಕ್ಕನ್ನು ಮುಳುಗಿಸಿ ಕಚ್ಚಿಕೊಂಡು ಹಾರುವುದನ್ನು ನೋಡಬೇಕು! ಅಪ್ಪಾ ನೀರು ಎರ್ಕಿಕೊಂಡೇ ಹೋಗುತ್ತಿದೆ. ಹ್ಹೋ! ಎಷ್ಟು ಕಪ್ಪೆ, ಮೀನು, ಆಮೆ ಮತ್ತು ಡೆಂಜಿಗಳು! ಒಂದು ಡೆಂಜಿಯ ದೊಡ್ಡ ಕೊಂಬಕಾಲು. ಆಬ್ಬಾ ನೋಡಿದರೆ ಹೆದರಿಕೆಯಾಗುತ್ತದೆ… !”

ಆಟಿಯ ಮಳೆಯ ಹಾಗೆ ಪುಟ್ಟಣ್ಣನ ಮಾತು ನಿಲ್ಲುವ ಲಕ್ಷಣ ಕಾಣದಿದ್ದಾಗ ಹುಕ್ರನಿಗೆ ಸಿಟ್ಟು ಬಂತು: ಒಮ್ಮೆ ನಿಲ್ಲಿಸ್ತೀಯಾ ನಿನ್ನ ಪಿರಿಪಿರಿ? ಇಂಥ ಮಳೆಗೆ ನೀನು ಹೊರಗೆ ಹೋದದ್ದು ಯಾಕೆ? ಆ ಚೋಂಕ್ರಿನಲ್ಲಿ ಹೊರಳಾಡಿ ಮನಗೆ ಬರುತ್ತಿ. ನಿನ್ನ ಚಡ್ಡಿ ನೋಡು. ಸೊಂಟದಲ್ಲಿ ನಿಲ್ಲುವುದಿಲ್ಲ ಅದು. ಕಾಲ ಬೆರಳುಗಳೆಲ್ಲ ಹುಳ ತಿಂದು ರಾತ್ರಿ ಬೊಬ್ಬೆ ಹಾಕುತ್ತಿ. ಅಕ್ಕೋ, ಅಕ್ಕೋ ನೋಡು. ನಿನ್ನ ಕಾಲಲ್ಲಿ ಎರಡು ಉಂಬುರುಗಳು ನೇತಾಡುತ್ತಿವೆ. ನಿನಗೆ ಮತಿಗೆಟ್ಟಿದೆಯಾ ಹೇಗೆ? ನೇಜಿ ಶುರುವಾಗುವಾಗ ನೀನು ಮರ್ಯಾದೆಯಿಂದ ಶಾಲೆಗೆ ಹೋಗು.”

ಪುಟ್ಟಣ್ಣನ ತುತ್ತೂರಿಯಿಂದ ಅಪಸ್ವರ ಹೊರಟಿತು. “ಅಪ್ಪಾ ಅದಾಗದು. ನೇಜಿ ತೆಗೆಯುವಾಗ ನಾನಿಲ್ಲೇ ಇರಬೇಕು. ನಾನೂ ನೇಜಿ ನೆಡಬೇಕು. ಓ ಬೇಲೆ, ದೂಜಿಕೆಮ್ಮಯಿರಾ, ಮುಜಟ್ಟಿಗೋಣ, ರಾವು ಕೊರುಂಗು ಹಾಡಬೇಕು. ಕೋರಿಯಂದು ಹಲಗೆ ಮೆಟ್ಟಬೇಕು. ಗದ್ದೆಯಲ್ಲಿ ಹೊರಳಾಡಬೇಕು. ಎಲ್ಲರಿಗೂ ಚೋಂಕ್ರಿ ರಟ್ಟಿಸಬೇಕು. ಊಹ್ಞುಂ! ನಾನು ನೇಜಿ ಮುಗಿಯದೆ ಶಾಲೆಗೆ ಹೋಗುವುದೇ ಇಲ್ಲ.”

ಹುಕ್ರನ ಸಿಟ್ಟು ನೆತ್ತಿಗೇರಿತು: ಸುರು ಮಾಡಿದಿಯಾ ನಿನ್ನ ನಾಗಸ್ವರ? ಗಾಂದಾರಿ ಮೆಣಸಿನಷ್ಟು ಉದ್ದ ಇಲ್ಲ ನೀನೆಂತದ್ದು ನೇಜಿ ತೆಗೆಯುವುದು; ನೀನೆಂತದ್ದು ಹಲಿಗೆ ಮೆಟ್ಟುವುದು? ಚೋಂಕ್ರಿ ಹೊರಳಲಿಕ್ಕೆ ನೀನೇನು ಹುದಿ ಕುರ್ಲೆಯಾ? ಹೊರಳಬೇಕೆಂದಿದ್ದರೆ ಈಗಲೇ ಹೋಗಿ ಹೊರಳು. ಇನ್ನೇನು ಬಾಕಿ ಇದೆ ಹೊರಳೋದಕ್ಕೆ? ನಿನಗೆ ಚರ್ಬಿ ಏರಿದೆ. ಹುಟ್ಟಸಿದ ಅಪ್ಪನಿಗೇ ಎದುರುತ್ತರ ಕೊಡುತ್ತಿ. ನೇಜಿ ದಿವಸ ನೀನು ಅದು ಹೇಗೆ ಗದ್ದಗೆ ಇಳಿಯುತ್ತೀಯೋ ನೋಡುತ್ತೇನೆ”

ಪುಟ್ಟಣ್ಣನ ಗಂಟಲಿನಿಂದ ಈಗ ದೊಡ್ಡ ಸ್ವರ ಹೊರಟಿತು. ಕಣ್ಣುಗಳಿಂದ ಕೆಳಗಿಳಿದ ನೀರು ಮೂಗಿನ ಹೊಳ್ಳೆಗಳಿಂದ ಹೊರಬಂದು ಪ್ರವಾಹದೊಡನೆ ಸುಗಮಿಸಿತು. ನಿಶ್ವಾಸದ ಗಾಳಿಯಿಂದಾಗಿ ಒಂದೆರಡು ಗುಳ್ಳೆಗಳು ಮೂಡಿದವು. ಅವನ ಆವಸ್ಥೆ ನೋಡಿ ತಾಯಿ ಪೂವಮ್ಮನೆಂದಳು: “ಇದು ಎಂಥದ್ದು ನೀವು ಹೇಳುವುದು? ನಮಗೆ ದೇವರು ಬಿಸಾಕಿದ್ದು ಇದು ಒಂದನ್ನು ಮಾತ್ರ. ನಮಗೆ ದೇವರು ಕೊಡುವುದು ಏಣೆಲು ಬೆಳೆ ಮಾತ್ರ. ಸರಿಯಾಗಿ ಮಳೆ ಬಾರದಿದ್ದರೆ ಅದೂ ಇಲ್ಲ. ಅವನಿಗೆ ಆಡಲಿಕ್ಕೆ ಯಾರಿದ್ದಾರೆ? ವರ್ಷಕ್ಕೆ ಒಮ್ಮೆ ಸಂತೋಷಪಡುತ್ತಾನಪ್ಪಾ. ಅದಕ್ಕೂ ಕಲ್ಲು ಹಾಕಬೇಡಿ.”

ಹೆಂಡತಿ ಹೇಳುವಾಗ ಅದಕ್ಕೆ ಪ್ರತಿಯಾಡಲು ಹುಕ್ರನಿಗೆ ಮನಸ್ಸು ಬರಲಿಲ್ಲ “ಆಯ್ತಪ್ಪ. ನೀವು ತಾಯಿ ಮಗ ಯಾವಾಗಲೂ ಒಂದೇ ಪಾರ್ಟಿ” ಎಂದು ಹೇಳಿ ಬೀಡಿ ಹಚ್ಚಿದ.

ರಾತ್ರಿ ಪುಟ್ಟಣ್ಣನಿಗೆ ಖುಶಿಯಲ್ಲಿ ಬಹಳ ಬೇಗ ನಿದ್ದೆ ಬಂತು. ಅವ ನಿದ್ದೆಯಲ್ಲಿ ಏನನ್ನೋ ಗುಣುಗುಣಿಸತೊಡಗಿದ. ಅಪ್ಪ ಅಮ್ಮ ಮಗನ ಹತ್ತಿರಕ್ಕೆ ಬಂದು ಕಿವಿಗೊಟ್ಟರು. ಅವ ಹಾಡತ್ತಿದ್ದ:

“ಕಾಡ ಬರಿಯೇ ಪೋವಡ ಮಗಾ ದೂಜಿಕೆಮ್ಮಯಿರಾ
ಕಾಡ ಪಿಲಿಲಾ ಪತ್ತು ಮಗಾ ದೂಜಿಕೆಮ್ಮಯಿರಾ”
ಅದು ನೇಜಿ ನೆಡುವಾಗ ಹೇಳುವ ಹಾಡು!
* * *

ನೇಜಿ ಕೆಲಸ ಮುಗಿದು ಒಂದು ದಿನ ಹುಕ್ರ ಹೆಂಡತಿಯಲ್ಲಿ ಹೇಳಿದ : “ಗದ್ದೆ ಬೇಸಾಯ ಇನ್ನು ನಮಗೆ ಪೂರೈಸುವ ವಿಷಯ ಅಲ್ಲ. ಹಗಲಿಡೀ ಪೆತ್ತಕಂಜಿ, ಮೇರ್, ಮಂಗಗಳು! ರಾತ್ರೆ ಪಂಜಿ, ಕಡಮ್ಮೆ. ಹಗಲು ರಾತ್ರೀಂತ ಎಷ್ಟು ಗೈಮೆ ಮಾಡಲಾದೀತು? ಎಷ್ಟು ನಿದ್ದೆ ಕೆಡಲಾದೀತು? ಬಜ್ಜೆಯಿ, ಬೀಜ, ಬೀಡಿ, ಕೊಕ್ಕೊ, ರಬ್ಬರು ಎಂದು ಗದ್ದೆ ಕೆಲಸಕ್ಕೆ ಜನ ಸಿಗುದಿಲ್ಲ. ಹೊರಗಿನಿಂದ ಬಂದವರಿಗೆ ಈ ಗದ್ದೆಯ ಕೆಲಸ ಎಲ್ಲಿ ಬರಬೇಕು? ಹೀಗಾದರೆ ನಾವು ಗದ್ದೆ ಕೆಲಸ ಮಾಡಿದ ಹಾಗೆಯೆ!”

ಗಂಡನ ಮಾತಿಗೆ ಪೂವಮ್ಮ ಹ್ಞೂಂಗುಟ್ಟಿದಳು: “ನನಗೂ ಅದೇ ಗೇನ ಆಗಿಬಿಟ್ಟದೆ. ಇಷ್ಟು ದುಡಿದರೂ ಮನೆಗೆ ನಾಲ್ಕು ಓಡು ಹಾಕಿಸಲು ಆಗಿಲ್ಲ. ಮೈಮೇಲೆ ಪರಿಕಟ್ಟ್ ಸೀರೆ ತಪ್ಪಿದ್ದಿಲ್ಲ”. ಮದುವೆಯವತ್ತು ನೀವು ಕುತ್ತಿಗೆಗೆ ಕಟ್ಟಿದ ಕರಿಮಣಿಗೆ ಬಂಗಾರದ ಒಪ್ಪ ಕೊಡಲಿಕ್ಕು ಸಾಧ್ಯವಾಗಲಿಲ್ಲ. ಯಾವ ಗತಿಗೆಟ್ಟಿಗೆ ಈ ಗೈಮೆ?”

ಪುಟ್ಟಣ್ಣ ಒಮ್ಮೆ ತಾಯಿಯ ಮುಖ ನೋಡಿದ. ಮತ್ತೊಮ್ಮೆ ತಂದೆಯ ಮುಖ ನೋಡಿದ. ಹೌದು! ತಾನು ಇರುವುದು ಒಬ್ಬನೇ ಮಗ. ಒಂದು ಒಳ್ಳೆಯ ಚಡ್ಡಿ ಹೊಲಿಸಿ ಕೊಡಲು ಅಪ್ಪನಲ್ಲಿ ಹಣ ಇರುವುದಿಲ್ಲ. ಕಾಲಿಗೆ ಚಪ್ಪಲಿ ಹಾಕುವ ಭಾಗ್ಯ ಈವರೆಗೆ ಬಂದಿಲ್ಲ. ಮಳೆಗಾಲದಲ್ಲಿ ಒಮ್ಮೊಮ್ಮೆ ಶಾಲೆಗೆ ಕೊಂಡು ಹೋಗುವ ಕೊಡೆಯಿಂದ ಆಕಾಶದಲ್ಲಿ ಹಾರುವ ಕೊರುಂಗುಗಳನ್ನು ಚೆನ್ನಾಗಿ ನೋಡಬಹುದು! ಅಪ್ಪ ಹೇಳುವುದೆಲ್ಲಾ ನಿಜವೇ.

“ಗದ್ದೆ ಕೋರಿಗೆ ಮೊದಲೇ ನಾನು ಗ್ರೆಯಿಸಿಕೊಂಡಿಡ್ಡೆ. ನಾವು ಅಡಿಕೆ ಹಾಕಿದರೆ ಹೇಗೆ? ಕಿಲೆ ಹಾಕಿದಾಗ ಕಾದರಾಯ್ತು. ಬೇಸಿಗೆಯಲ್ಲಿ ಹೊಳೆಗೊಂದು ವಿಲ್ಲಿಯರ್ಸು ಇಡುವಾ. ಕಾಳ ಬೊಳ್ಳರನ್ನು ಮಾರಿದರೆ ಪಂಪಿಗೆ ಹಣವಾಗುತ್ತದೆ.” ಕೈ ಹಿಡಿದವಳು ತನ್ನ ಐಡಿಯಾಕ್ಕೆ ಸಪೋರ್ಟು ಮಾಡಿದುದನ್ನು ನೋಡಿ ಹುಕ್ರ ಉಲ್ಲಾಸಗೊಂಡ.

ಪುಟ್ಟಣ್ಣ ಎವೆಯಿಕ್ಕದೆ ಆಪ್ಪನನ್ನೇ ನೋಡುತ್ತಿದ್ದ. ಹಟ್ಟಿಯಲಿ ಮೊಂಟೆ ಆಡಿಸಿಕೊಂಡು, ಬೈ ತಿಂದುಕೊಂಡಿರುವ ಕಾಳ ಬೊಳ್ಳರನ್ನು ನೆನಪಿಸಿಕೊಂಡ. ಎಂಥಾ ಬೋರಿಗಳು ಅವು! ಮೊದಲ ಬಾರಿಗೆ ನೋಡುವವರ ದೃಷ್ಟಿ ತಾಗಲೇಬೇಕು. ಬೋರಿಗಳ ಚಂದದ ಕೊಂಬುಗಳು. ಆ ಕೊಂಬುಗಳ ಮಧ್ಯೆ, ಗಂಟಲ ಉದ್ದಕ್ಕೆ, ಗಂಗೆದೊಗಲಿಗೆ, ಹಿಂಬದಿಯ ಎರಡು ಕಾಲುಗಳ ಸಂದಿನಲ್ಲಿ ತಾನು ಕೈ ಹಾಕಿ ತುರಿಸುವಾಗ ಅವು ಮೆಲುಕು ಹಾಕುವುದನ್ನೂ ಮರೆತು ನಿಲ್ಲುವುದೇನು! ಅವುಗಳ ಹೊಟ್ಟೆಯುದ್ದಕ್ಕೆ ಅಂಟಿಕೊಂಡು ರಕ್ತಹೀರುವ ಉಣ್ಣಿಗಳನ್ನು ತೆಗೆದು ಕಲ್ಲೊಂದರ ಮೇಲಿಟ್ಟು ಇನ್ನೊಂದು ಕಲ್ಲಿನಿಂದ ಗುದ್ದಿ ಚಟ್ನಿ ಮಾಡುವಾಗ ಪಚಕ್ ಕಪ್ಪು ರಕ್ತ ರಟ್ಟುವುದೇನು? ಆಗ ಬೋರಿಗಳು ಖುಷಿಯಲ್ಲಿ ತಮ್ಮ ದೊರಗು ನಾಲಿಗೆಯಿಂದ ಅವನ ಕೈ, ಮುಖ, ತಲೆ ನೆಕ್ಕುವುದೇನು? ಎಂಥಾ ಚೆಂದದ ಬೋರಿಗಳವು! ಇನ್ನು ಅಪ್ಪ ಅವನ್ನು ಮಾರಿಬಿಡುತ್ತಾನೆ. ಕೊಂಡು ಹೋಗುವವನು ಅವಕ್ಕೆ ಹೊಟ್ಟೆಗೆ ಸರಿಯಾಗಿ ಕೊಡುತ್ತಾನಾ? ಉಣ್ಣಿ ತೆಗೆದು ಕೊಲ್ಲುತ್ತಾನಾ? ಬೋರಿಗಳು ಹೋದರೆ ಗದ್ದೆ ಹೋಗಿ ತೋಟವಾಗಿ ಬಿಡುತ್ತದೆ. ಮತ್ತೆ ಡೆಂಜಿ, ಏಮೆ, ಮೀನು, ಕೊರುಂಗು ಒಂದೂ ಇರುವುದಿಲ್ಲ. ನೆತ್ತರು ಹೀರಿ ಜ್ವರ ಬರಿಸುವ ಉಮಿಲಿಗಳು… ಉಮಿಲಿಗಳು ಮಾತ್ರ. ಪುಟ್ಟಣ್ಣನ ಕಣ್ಣಲ್ಲಿ ನೀರು ತುಂಬತೊಡಗಿತು.

ಈಗ ಪೂವಮ್ಮನೆಂದಳು : “ಒಮ್ಮೊಮ್ಮೆ ಕಾಣುತ್ತದೆ, ಈ ಊರೇ ಬೇಡವೆಂದು. ಮಳೆಗಾಲದಲ್ಲಿ ಒಂದು ಬಸ್ಸಿಲ್ಲ. ಜ್ವರ, ಶೀತ ಆದರೆ ಹತ್ತು ಮೈಲು ನಡೆದು ಹೋಗಬೇಕು ಆಸ್ಪತ್ರೆಗೆ. ಅಪ್ಪನ ಮನೆಯ ಹತ್ತಿರ ಒಳ್ಳೆಯ ಜಾಗವೊಂದಿದೆಯಂತೆ. ಕಾಳ-ಬೊಳ್ಳರೊಡನೆ ಈ ಜಾಗವನ್ನೂ ಮಾರಿಬಿಟ್ಟರೇನು? ಅಲ್ಲೇ ಜಾಗ ಮಾಡಿ ನೂರು ಗಿಡ ಹಾಕಿದರಾಯ್ತು. ಪುಟ್ಟಣ್ಣನಿಗೆ ಒಳ್ಳೆಯ ಶಾಲೆಯೂ ಸಿಗುತ್ತದೆ.”

ಹುಕ್ರ ಏನೂ ಹೇಳಲಿಲ್ಲ. ಅಪ್ಪ ಒಪ್ಪಿ ಬಿಟ್ಟರೆ ಕಾಳ-ಬೊಳ್ಳ ಮಾತ್ರವಲ್ಲ, ಈ ನದಿಯೂ ತನಗೆ ತಪ್ಪಿ ಬಿಡುತ್ತದೆ. ತನ್ನೊಡನೆ ಪಿಸುಗುಟ್ಟುವ ನದಿ. ತನಗೆ ಏನೇನು ಕಲಿಸಿಲ್ಲ ಅದು! ತನ್ನ ತಾಯಿಯ ಹಾಗೆ ಅದು. ಎಷ್ಟು ಸಲ ಈಜುವಾಗ ಅದರೊಡನೆ ತನ್ನ ನೋವನ್ನು ಹೇಳಿಕೊಂಡಿಲ್ಲ! ತನಗೆ ಜತೆಯಲ್ಲಿ ಆಡಲು ಅಕ್ಕ, ಅಣ್ಣ, ತಮ್ಮ, ತಂಗಿ ಇಲ್ಲದ್ದನ್ನು. ತನಗೊಂದು ಒಳ್ಳೆಯ ಅಂಗಿ, ಚಡ್ಡಿ ಅಪ್ಪನಿಂದ ತರಲಾಗದ್ದನ್ನು. ಕಾಲಿಗೊಂದು ಚಪ್ಪಲಿ ಕೊಳ್ಳಲಾಗದ್ದನ್ನು. ಮೇಸ್ಟ್ರ ಪಾಠ ಅರ್ಥವೇ ಆಗದ ನಾಗರಬೆತ್ತದಲ್ಲಿ ದಿನಾ ಸೇವೆ ಮಾಡಿಸಿ ಕೊಳ್ಳುತ್ತಿದ್ದುದನ್ನು. ಸೊಂಟದಲ್ಲಿ ನಿಲ್ಲದ ಚಡ್ಡಿ ಕೆಳಗೆ ಜಾರುವಾಗ ತನ್ನ ಕ್ಲಾಸಿನವರು ಕಿಸಕ್ಕನೇ ನಗುವುದನ್ನು. ತಾನೊಂದು ಬಿಳಿ ಬಿಳೀ ಕೊರುಂಗುವಾಗಿ ನೀಲಿ ಆಕಾಶದಲ್ಲಿ ಉದ್ದೋ ಉದ್ದಕ್ಕೆ ಹಾರಿ ಕಾಡು, ಗುಡ್ಡ, ಬೆಟ್ಟಗಳನ್ನು ನೋಡಲಾಗದ್ದನ್ನು. ಅಜ್ಜನ ಮನೆಯ ಹತ್ತಿರ ನದಿಯಿಲ್ಲ, ಗದ್ದೆಯಿಲ್ಲ, ನೇಜಿ ಇಲ್ಲ, ಓ ಬೇಲೆ ಇಲ್ಲ. ಹೋಗಲಿ ಅಂದರೆ ಕೊರುಂಗುಗಳೇ ಇಲ್ಲ. ಪುಟ್ಟಣ್ಣ ಹೊದ್ದು ಮಲಗಿ ಮೌನವಾಗಿ ಬಿಕ್ಕತೊಡಗಿದ.

ರಾತ್ರೆ ಮೈಯಿಡೀ ನಿಗಿನಿಗಿ ಕೆಂಡವಾಗಿ ನಿದ್ದೆಯಲ್ಲಿ ಅದೇನನ್ನೋ ಬಡಬಡಿಸುತ್ತಿದ್ದ ಮಗನನ್ನು ಮಟ್ಟೆಯಲ್ಲಿ ಹಾಕಿಕೊಂಡು ಪೂವಮ್ಮ ನಟ್ಟಿದಳು. “ಓ”ಅಪ್ಪೆ ಕಲ್ಲುರ್ಟಿ. ಇವ ನನ್ನ ಮಗನಲ್ಲ, ನಿನ್ನ ಮಗ. ನಿನ್ನ ಮಗನನ್ನು ನೀನೇ ಉಳಿಸಿಕೊಳ್ಳಬೇಕು. ನಿನಗೆ ಎರಡು ಕೋಳಿ ಕೊಡುತ್ತೇನೆ.”

ಕಣ್ಣು ತೆರೆಯದೆ ಪುಟ್ಟಣ್ಣ ಗುನುಗುನಿಸುತ್ತಲೇ ಇದ್ದ : “ರಾವೋ ರಾವು ಕೊರುಂಗು…. ರಾವೋ ರಾವು ಕೊರುಂಗು.”

ಹೆದರಿ ಕಂಗಾಲಾದ ಹುಕ್ರ ಬಲಿಮ್ಮೆಯ ಬೋಳಂತಾಯರಲ್ಲಿಗೆ ಓಡಿ ಕಾಲು ಕಟ್ಟಿಕೊಂಡ. ಅವರದು ದೊಡ್ಡ ಹೊಟ್ಟೆ. ಅದರ ಮೇಲೆ ನೇತಾಡುವ ಜನಿವಾರ. ಅದರ ತುದಿಯಲ್ಲಿ ಬೀಗದ ಕೈ ಗೊಂಚಲು. ಎಂದಿಗೂ ಅಂಗಿ ಹಾಕಿದವರಲ್ಲ. ಹಣೆಯಲ್ಲಿ ದೊಡ್ಡ ನಾಮ. ದೊಡ್ಡ ತಲೆಯ ಹಿಂಬದಿಯಲ್ಲಿ ದೊಡ್ಡ ಜುಟ್ಟು. ಅವರು ಆಗಾಗ ಬಿಚ್ಚುವ ಕಚ್ಚೆವನ್ನು ಸರಿಪಡಿಸಿ ಕೊಳ್ಳುತ್ತಾ ಗಡಿಬಿಡಿಯಲ್ಲಿ ಧಾವಿಸಿ ಬಂದರು. ಬಾಯಿಯಲ್ಲಿ ಮಣ ಮಣ ಮಣ ಹೇಳುತ್ತಾ ಪುಣ್ಯ ನೀರನ್ನು ಸೇಂಚನ ಮಾಡತೊಡಗಿದರು. ಪೂವಮ್ಮ ಕೈಜೋಡಿಸಿ ನಟ್ಟಿದ್ದಳು : “ಓ ದನಿಕ್ಕುಲೇ… ನನ್ನ ಮಗನನ್ನು ಉಳಿಸಿಕೊಡಿ. ಏಳೇಳು ಜನ್ಮ ನಿಮ್ಮ ಸೇವೆ ಮಾಡಿಕೊಂಡಿರುತ್ತೇನೆ”.

ಬಲಿಮ್ಮೆಯ ಬೋಳುತಾಯರು ಗಟ್ಟಿಯಾಗಿ ಮಂತ್ರ ಹೇಳತೊಡಗಿದರು. ಪುಟ್ಟಣ್ಣನ ಬಾಯನ್ನು ಬಲವಂತವಾಗಿ ಅಗಲಿಸಿ ಪುಣ್ಯ ನೀರನ್ನು ಬಿಟ್ಟರು. ಹುಕ್ರ “ನಾರಾಯಣ ದೇವರೇ, ಕೈ ಬುಡಿಯನಾ” ಎಂದು ದೊಡ್ಡ ಸ್ವರ ತೆಗದ. ಪೂವಮ್ಮ ನಡುಗುತ್ತಾ “ಓ ಅಪ್ಪೆ ಕಲ್ಲುರ್ಟಿ, ಬೊಲ್ಪು ತೋಜಾಲ” ಎಂದು ಅಂಗಾಲಾಚಿದಳು.

ಸ್ವಲ್ಪ ಹೊತ್ತಿನಲ್ಲಿ ಪುಟ್ಟಣ್ಣ ಕಣ್ಣು ತೆರೆದ: “ದೇವರು ದೊಡ್ಡವನು. ಸ್ವಲ್ಪ ಸೋಂಕು ಆಗಿತ್ತಷ್ಟೇ. ಪಕ್ಕಿ ಕಡಪ್ಪು ಕೂಡಾ ಆಗಿರಬಹುದು. ಈಗ ವಿಷಗಳಿಗೆ ಮುಗಿದು ಅಮೃತಗಳಿಗೆ ಆರಂಭವಾಗಿದೆ. ಇನ್ನೇನೂ ತೊಂದರೆಯಿಲ್ಲ. ಎಲ್ಲವೂ ಸರಿಯಾಗುತ್ತದೆ.” ಎಂದು ಬಲಿಮ್ಮೆಯ ಬೋಳಂತಾಯರು ಹೊಟ್ಟೆಯಮೇಲೆ ಕೈಯಾಡಿಸಿಕೊಂಡರು.

ಕಣ್ಣ ತೆರೆದ ಪುಟ್ಟಣ್ಣ ಅಪ್ಪನನ್ನೇ ನೋಡಿದ : “ಬೇಡ. ಬೇಡ. ಕಾಳಬೊಳ್ಳರನ್ನು ಮಾರಬೇಡ. ಗದ್ದೆಯನ್ನು ತೋಟ ಮಾಡಬೇಡ. ಗದ್ದೆಯಲ್ಲಿ ಏಮೆಕಿನ್ನಿಗಳು ಆಡಬೇಕು. ಡೆಂಜಿಗಳು ಕೊಂಬ ಕಾಲು ಬಿಡಿಸಿಕೊಂಡು ಓಡಬೇಕು. ಮೀನತರುಗಳು ಈಜಬೇಕು. ಕೊರುಂಗುಗಳು ಹಾರಿ ಬಂದು ಪುಳ್ಯಾಕಿಂತ ಚೋರಲ್ಲಿ ಕೋಕಾಯಿ ಕಂತಿಸಬೇಕು. ನಾನು ರಾವೋ ರಾವು ಕೊರುಂಗು ಹಾಡಬೇಕು. ಓ ಬೇಲೆ ಹೇಳಿ ನೇಜಿ ನೆಡಬೇಕು. ಹಲಿಗೆ ಮೆಟ್ಟಿ ಗದ್ದೆಕೋರಿ ಮಾಡಬೇಕು. ಅಪ್ಪ ತೋಟ ಮಾರಬೇಡ. ಉಮಿಲಿಗಳನ್ನು ತುಂಬಿಸಬೇಡ. ಕಾಳ ಬೊಳ್ಳರು ನನಗೆ ಬೇಕು. ಅವನ್ನು ಮಾರಬೇಡ”. ಆಯಾಸದಿಂದ ಪುಟ್ಟಣ್ಣ ಮಾತು ನಿಲ್ಲಿಸಿದ.

ಬಲಿಮ್ಮೆಯ ಬೋಳಂತಾಯರ ಮುಖ ಬಿರಿಯಿತು : “ಅಲ್ಲ ಮಾರಾಯ ಇದೆಂಥದ್ದಿದು ಹುಕ್ರಾ ? ಗದ್ದೆಯನ್ನು ತೋಟ ಮಾಡ್ತೀಯಾ ? ಬೋರಿಗಳನ್ನು ಮಾರಲು ಹೊರಟಿದ್ದೀಯಾ”

ಹುಕ್ರ ಬಗ್ಗಿಕೊಂಡೇ ಹೇಳಿದ: “ಹೌದು ದನೀ, ಈ ಕಾಲದಲ್ಲಿ, ಗದ್ದೆಯನ್ನು ನಂಬಿದರೆ ಹೊಟ್ಟೆಗ ಹಾಳೆ ಕಟ್ಟಿಕೊಳ್ಳಬೇಕಷ್ಟೇ. ಕೆಲಸಕ್ಕೆ ಸರಿಕಟ್ಟ್ ಜನ ಎಲ್ಲಿ ಸಿಗುತ್ತದೆ ಹೇಳಿ. ಕಷ್ಟಪಟ್ಟು ಬೆಳೆದದ್ದನ್ನು ನಿಮಗೆ ಪಂಜಿ, ಮಂಗ ಇಡಬೇಕೆ ? ರಾತ್ರಿ ಪಗಲ್ ನಿದ್ದೆ ಬಿಟ್ರೂ ಮೂರು ಕಾಸು ಕೈಯಲ್ಲಿ ಉಳಿಯೂದಿಲ್ಲ. ನಾವು ಬದುಕೋದು ಹೇಗೆ ಹೇಳಿ?

ಬಲಿಮ್ಮೆಯ ಬೋಳಂತಾಯರಿಗೆ ಏನು ಹೇಳಬೇಕೆಂದೇ ಹೊಳೆಯಲಿಲ್ಲ. ಸ್ವಬ್ಬ ಯೋಚಿಸಿ ಅವರೆಂದರು; “ಅದು ಹೌದು ಮರಾಯಾ. ಆದರೆ ನಿನ್ನ ಮಗನ ಕತೆ ನೀನು ನೋಡಬೇಕೋ, ಬೇಡವೋ? ಅವನಿಗೆ ಗದ್ದೆಯ ಮರ್ಲು ಹಿಡಿದಿದೆ. ನೀನು ಕಾಳ ಬೊಳ್ಳರನ್ನು ಮಾರಿದಿಯೋ, ಅವನಿಗೆ ಸನ್ನಿ ಏರುತ್ತದೆ. ಇದೆಲ್ಲಾ ನನ್ನ ಮಂತ್ರಕ್ಕೆ ಬಗ್ಗುವುದಲ್ಲ” ಮಾರಾಯ.

ಈಗ ಪುಟ್ಟಣ್ಣ ಅಮ್ಮನನ್ನು ನೋಡಿದ: “ಬೇಡ ನಾವಿಲ್ಲಿಂದ ಅಜ್ಜನ ಊರಿಗೆ ಹೋಗುವುದು ಬೇಡ. ಈ ಜಾಗ ಮಾರುವುದು ಬೇಡ. ಈ ನದಿಯಲ್ಲಿ ನಾನು ದಿನಾ ಈಜಬೇಕು. ಅದು ನನ್ನಲ್ಲಿ ಮಾತಾಡುತ್ತದೆ. ಅದು ನನಗೆ ಕತೆ ಹೇಳುತ್ತದೆ. ಅದು ನನಗೆ ಈಜು ಕಲಿಸಿದೆ. ಅದರಲ್ಲಿ ನಾನು ಮಾತಾಡುತ್ತೇನೆ. ನನಗೆ ಕಾಳ ಬೊಳ್ಳ ಬೇಕು. ನನಗೆ ಈ ನದಿ ಬೇಕು. ನೀವಿಬ್ಬರು ಎಲ್ಲಿಗೆ ಬೇಕಾದರೂ ಹೋಗಿ. ನಾನಿಲ್ಲಿಂದ ಬರುವುದಿಲ್ಲ.” ಪುಟ್ಟಣ್ಣ ಮತ್ತೆ ಆಯಾಸದಿಂದ ಮಾತು ನಿಲ್ಲಿಸಿದ.

ಬಲಿಮ್ಮೆಯ ಬೋಳಂತಾಯರು ಪೂವಮ್ಮನನ್ನು ನೋಡಿದರು : “ನಿನ್ನ ಗಂಡ ಕಾಳ ಬೊಳ್ಳರನ್ನು ಮಾರಲಿ. ನೀನು ಈ ಜಾಗವನ್ನೇ ಮಾರಿಬಿಡು. ನೀವು ನಿಮ್ಮ ಕಷ್ಟ ಮಾತ್ರ ಹೇಳುತ್ತೀರಿ. ಮಗನ ಇಷ್ಟ ನೋಡುವುದಿಲ್ಲ. ಸರಿ ನಾನು ಬರುತ್ತೇನೆ. ಇನ್ನು ನೀವುಂಟು, ನಿಮ್ಮ ಮಗ ಇದ್ದಾನೆ” ಎಂದು ಗಂಟುಮೂಟೆ ಹೆಗಲಿಗೇರಿಸಿಕೊಂಡು ದುಳುದುಳು ನಡೆದರು.

ಪೂವಮ್ಮ ಗಂಡನನ್ನು ನೋಡಿದಳು. ಹುಕ್ರ ಮಗನನ್ನು ನೋಡಿದ. ಪುಟ್ಟಣ್ಣ ಒಮ್ಮೆ ಅಪ್ಪನನ್ನು, ಇನ್ನೊಮ್ಮೆ ಅಮ್ಮನನ್ನು ನೋಡಿದ. ಕಣ್ಣು ಪಿಟಿ ಪಿಟಿ ಮಾಡಿದ. ಅವನ ಗಂಟಲಿನಿಂದ ಶಬ್ಬಗಳು ಕಷ್ಟದಲ್ಲಿ ಹೊರಬಂದವು.

“ಅಪ್ಪಾ ಕಾಳ ಬೊಳ್ಳರನ್ನು ಮಾರಬೇಡ.
ಗದ್ದೆಯನ್ನು ತೋಟ ಮಾಡಬೇಡ.
ಅಮ್ಮಾ ಈ ಜಾಗ ಮಾರಬೇಡ.
ನದಿಯನ್ನು ಬಿಟ್ಟು ಅಜ್ಜನ ಊರಿಗೆ ಹೋಗಬೇಡ.”

ಅಪ್ಪ-ಅಮ್ಮ ಪುಟ್ಟಣ್ಣನ ಕೈ ಹಿಡಿದುಕೊಂಡು ಪ್ರೀತಿಯಿಂದ ಹೇಳಿದರು : “ಆದೀತು ಮಗಾ. ನಮಗೆ ಗದ್ದೆಯೇ ಇರಲಿ. ನಾವು ನಂಬಿದ ಆ ಕಲ್ಲುರ್ಟಿ ನಮ್ಮ ಕೈ ಬಿಡಲಾರಳು.”

ಈ ಮಾತು ಕೇಳಿ ಪುಟ್ಟಣ್ಣ ಒಮ್ಮೆಲೇ ಚಂಡಿನ ಹಾಗೆ ಮೇಲಕ್ಕೆ ನೆಗೆದ. ಜಾರುವ ಚಡ್ಡಿಯನ್ನು ಸರಿಪಡಿಸಿಕೊಳ್ಳುತ್ತಾ ಗದ್ದೆಯ ಕಡೆ ಓಟಕಿತ್ತ. ಅವನ ಬಾಯಿಯಿಂದ ಹಾಡು ಹೊರಹೊಮ್ಮಿತ್ತು :

“ರಾವೋ ರಾವು ಕೊರುಂಗು
ರಾವಾಂದೇನ್ ದಾನ್‍ಪೇ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೈಬರ್ನಾಟಕ ಮಾತೆ
Next post ಇವಳು ಬಂದಾಗ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

cheap jordans|wholesale air max|wholesale jordans|wholesale jewelry|wholesale jerseys