ಆರೋಪ – ೫

ಆರೋಪ – ೫

ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍

ಅಧ್ಯಾಯ ೯

ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯಕರ್ತನೊಬ್ಬ ನಾಗೂರಿಗೆ ಬಂದು ಮುಷ್ಕರದ ಕರಪತ್ರಗಳನ್ನು ಹಂಚತೊಡಗಿದ. ಓದುಬಾರದವರಿಗೆ ಓದಿ ಹೇಳುತ್ತಿದ್ದ. ಮುಂದಿನ ವಾರದಿಂದ-ಅಷ್ಟರೊಳಗಾಗಿ ಬೇಡಿಕೆಗಳ ಮಾನ್ಯವಾಗದಿದ್ದರೆ-ಎಲ್ಲ ಕಾರ್ಮಿಕರು ಮುಷ್ಕರ ಹೂಡಬೇಕೆಂದು ಯೂನಿಯನುಗಳ ಜಂಟಿ ಸಮಿತಿ ಕರೆಕೊಟ್ಟಿತ್ತು. ಬೇಡಿಕೆಗಳು ಹಲವಿದ್ದುವು-ಬೋನಸು, ಹೆಚ್ಚಿನ ಕೂಲಿ, ಮೆಡಿಕಲ್ ಎಲವೆನ್ಸು, ಪ್ರೋವಿಡೆಂಟ್ ಫಂಡು ಇತ್ಯಾದಿ. ಕಂಪೆನಿ ಮಾಲೀಕರು ಹಾರಿಕೆಯ ಉತ್ತರ ಕೊಡುತ್ತಲೇ ಬಂದಿದ್ದರು. ಆದರೆ ಈಗ ಯೂನಿಯನುಗಳು ಬಲವಾಗುತ್ತ ಬರುತ್ತಿದ್ದುವು.

ಕೆಲವು ತಿಂಗಳ ಹಿಂದೆ ಇದೇ ಕಾರ್ಯಕರ್ತ ಬಂದು ನಾಗೂರಿನ ಬೀಡಿ ಕಾರ್ಮಿಕರನ್ನು ತನ್ನ ಯೂನಿಯನಿಗೆ ಮೆಂಬರುಗಳನ್ನಾಗಿ ಮಾಡಿ ಹೋಗಿದ್ದ. ಮೆಂಬರುಶಿಪ್ಪಿಗೆ ತಲಾ ಒಂದೊಂದು ರೂಪಾಯಿ ಎಲ್ಲರಿಂದಲೂ ಎತ್ತಿಕೊಂಡಿದ್ದ. ಹಾಗೆ ಮೆಂಬರಾದವಳಲ್ಲಿ ಲಕ್ಷ್ಮಿಯೂ ಒಬ್ಬಳು, ಯೂನಿಯನಿನ ಹೆಸರನ್ನು ಅವಳು ಮರೆತಿದ್ದಳು. ಯೂನಿಯನ್ ಸೇರಿದರೆ ಹಲವು ಅನುಕೂಲತೆಗಳಿರುತ್ತವೆ ಎಂದು ಆತ ಹೇಳಿದ್ದ. ಆದರೆ ಅದೇನು ಅನುಕೂಲತೆಗಳೋ-ಎಲ್ಲರೂ ಇದನ್ನು ಮರೆತಿದ್ದರು.

ಈಗ ಆತ ಮತ್ತೆ ಬಂದು ಕರಪತ್ರಗಳನ್ನು ಹಂಚಲು ತೊಡಗಿದಾಗ ಎಲ್ಲರೂ ಅವನನ್ನು ಪ್ರಶ್ನೆಗಳೊಂದಿಗೆ ಆಕ್ರಮಿಸಿದರು. ಒಂದೊಂದು ರೂಪಾಯಿ ನಮ್ಮಿಂದ ಚಂದಾ ಎತ್ತಿದಿರಲ್ಲ ಅದೇನಾಯಿತು? ಮುಷ್ಕರ ಹೂಡಿದರೆ ಹೊಟ್ಟೆಪಾಡೇನು? ನಂತರ ಡಿಪೊ ಮುಚ್ಚಿಬಿಟ್ಟರೆ ಮಾಡುವುದೇನು? ಮುಷ್ಕರದಿಂದ ಬೋನಸ್ ಸಿಗೋದು ಖಂಡಿತವೆ? ಕೆಲಸದಿಂದಲೇ ವಜಾಮಾಡಿದರೆ ಗತಿಯೇನು? ಕಾರ್ಮಿಕರ ಮುಖದಲ್ಲಿ ಕಾತರ, ಭಯ, ಹಾದರ ಮಾಡುತ್ತಿದ್ದೇವೋ ಎನ್ನುವಂಥ ಗೋಪ್ಯ, ಈ ತನಕ ಎಂದೂ ಮುಷ್ಕರದಲ್ಲಿ ಭಾಗವಹಿಸಿದವರಲ್ಲ ಅವರು.

ಕಾರ್ಯಕರ್ತ ಎಲ್ಲರನ್ನೂ ಕರೆದು ಮೀಟಿಂಗ್ ಏರ್ಪಡಿಸಿದ. ಅದರಲ್ಲಿ ಮಾತಾಡುವುದಕ್ಕೆ ಇನ್ನಷ್ಟು ಕಾರ್ಯಕರ್ತರು ಬಂದರು. ಮುಷ್ಕರ ಯಾಕೆ, ಹೇಗೆ ಮತ್ತದರ ಪರಿಣಾಮಗಳೇನು ಎಂಬ ಬಗ್ಗೆ ತಿಳಿವಳಿಕೆ ಹೇಳಿದರು, ಬೇಡಿಕೆಗಳ ಬಗ್ಗೆ ಯಾರಿಗೂ ಎರಡು ಮಾತಿಲ್ಲ. ಕೆಲಸಕ್ಕೆ ತಕ್ಕ ಕೂಲಿ ಸಿಗಬೇಕು ಎಂಬುದು ನ್ಯಾಯವೇ. ಬೋನಸಿನ ಸಂಗತಿಯೂ ಹಾಗೆಯೇ ಫ್ಯಾಕ್ಟರಿಗಳಲ್ಲಿ, ಸಿಗರೇಟು ಕಂಪೆನಿಗಳಲ್ಲಿ ಬೋನಸು ಸಿಗುತ್ತಿರುವಾಗ ಬೀಡಿ ಕಾರ್ಮಿಕರಿಗೆ ಯಾಕೆ ಕೊಡಬಾರದು? ಬೀಡಿಯಲ್ಲಿ ಅಪಾರ ಲಾಭವಿದೆ. ಅದರ ಮಾಲೀಕರು ಕಾರ್ಮಿಕರ ರಕ್ತಹೀರಿ ಬಹುದೊಡ್ಡ ಶ್ರೀಮಂತರಾಗಿದ್ದಾರೆ. ಕಾರ್ಮಿಕರ ಹಿತರಕ್ಷಣೆ ಈಗ ಕಾರ್ಮಿಕರ ಕೈಯಲ್ಲೇ ಇದೆ. ಈ ಮುಷ್ಕರದಲ್ಲಿ ಪ್ರತಿಯೊಬ್ಬ ಕಾರ್ಮಿಕನೂ ಸಕ್ರಿಯ ಭಾಗವಹಿಸಬೇಕು, ಬೇಡಿಕೆಗಳು ಕೈಗೂಡುವ ತನಕ ಮುಷ್ಕರ ನಿಲ್ಲುವುದಿಲ್ಲ. ಅದು ತನಕ ಯಾರೂ ಬೀಡಿ ಡಿಪೋಗಳ ಹತ್ತಿರ ಕೂಡ ಹೋಗಬಾರದು.

ಮುಷ್ಕರವನ್ನು ಮುರಿಯುವ ಪ್ರಯತ್ನದ ಬಗ್ಗೆ ಕಾರ್ಯಕರ್ತರು ಎಚ್ಚರಿಸಿದರು. ಇದು ಎಲ್ಲರೂ ಒಗ್ಗಟ್ಟಾಗಿ ನಡೆಸಬೇಕಾದ ಹೋರಾಟ. ಕಂಪೆನಿ ಮಾಲೀಕರು ಕೆಲವು ಕೂಲಿಗಾರರಿಗೆ ಆಸೆ ಆಮಿಷಗಳನ್ನೂ, ಸುಳ್ಳು ಸುದ್ದಿಗಳನ್ನು ಹರಡಿಸಿ ಅಥವಾ ಯೂನಿಯನ್ ಲೀಡರುಗಳ ವಿರುದ್ಧ ಪೋಲೀಸರಿಗೆ ರಿಪೋರ್ಟು ಮಾಡಿ ಮುಷ್ಕರವನ್ನು ಮುರಿಯಲು ನೋಡಬಹುದು. ಇದೆಲ್ಲವನ್ನೂ ಎದುರಿಸಿ ಕೊನೆತನಕ ಹೋರಾಡುವುದಕ್ಕೆ ಎಲ್ಲರೂ ಬದ್ಧರಾಗಿರಬೇಕು. ಎಲ್ಲರೂ ಮುಷ್ಕರದಲ್ಲಿ ಭಾಗವಹಿಸುತ್ತಿರುವುದರಿಂದ ಯಾರನ್ನು ಕೆಲಸದಿಂದ ತೆಗೆದು ಹಾಕುವ ಪ್ರಶ್ನೆಯೇ ಏಳುವುದಿಲ್ಲ.

ಇನ್ನು ಹೊಟ್ಟೆಯ ಪ್ರಶ್ನೆ, ಮುಷ್ಕರದ ಅವಧಿಯಲ್ಲಿ ಪ್ರತಿಯೊಬ್ಬ ಕಾರ್ಮಿಕನಿಗೂ ದಿನಕ್ಕೆರಡು ರೂಪಾಯಿಗಳಂತೆ ಆಪತ್ಕಾಲ ಭತ್ಯವನ್ನು ನೀಡಲು ಜಂಟಿ ಸಮಿತಿ ತೀರ್ಮಾನಿಸಿದೆ. ಇದಕ್ಕೊಸ್ಕರ ಜನರಿಂದ ಉದಾರ ಚಂದಾ ಎತ್ತುವ ಕಾರ್ಯಕ್ರಮವಿದೆ, ಕಾರ್ಮಿಕರು ಹೊಟ್ಟೆಗಿಲ್ಲದೆ ಸಾಯುವ ಪ್ರಶ್ನೆಯೇ ಇಲ್ಲ. ಎರಡು ರೂಪಾಯಿ ಸಾಲದು ನಿಜ. ಆದರೆ ಎಲ್ಲರೂ ಸ್ವಲ್ಪ ತ್ಯಾಗಕ್ಕೆ ತಯಾರಾಗಿರಬೇಕು. ಹಾಗಿದ್ದರೆ ಮುಷ್ಕರದ ಅಗತ್ಯ ಬೇಗನೆ ಇಲ್ಲದಾಗುತ್ತದೆ.

ಹೀಗೆ ಕಾರ್ಯಕರ್ತರು ಕಾರ್ಮಿಕರನ್ನು ಮುಷ್ಕರಕ್ಕೆ ಸಿದ್ಧಗೊಳಿಸಿದರು.
ನಿರೀಕ್ಷಿಸಿದಂತೆ ಮುಷ್ಕರ ಆರಂಭವೂ ಆಯಿತು. ನಾಗೂರು ಪೇಟೆಯ ನಡುವೆ ಚಿಕ್ಕದೊಂದು ಸಾರ್ವಜನಿಕ ಸಭೆ, ಕಾರ್ಮಿಕ ಮುಂದಾಳುಗಳು ಭಾಷಣ ನಂತರ ಮೆರವಣಿಗೆ, ಸ್ಲೋಗನುಗಳ ಕೂಗಾಟ ಹೆಚ್ಚೇನೂ ಜನರಿಲ್ಲ. ಒಂದೈವತ್ತು ಮಂದಿ ಇದ್ದರು. ಮುಂದಾಳುಗಳ ಉತ್ಸಾಹ ಹಿಂಬಾಲಕರಿಗೆ ಇದ್ದಂತಿರಲಿಲ್ಲ. ಅವರಿಗೆಲ್ಲ ಇದು ಹೊಸತೊಂದು ಅನುಭವ. ತಮ್ಮದೇ ಊರಲ್ಲಿ ಹೀಗೆ ಗಲಾಟೆ ಮಾಡಿಕೊಂಡು ಹೋಗುವುದಕ್ಕೆ ಅವರಿಗೆ ನಾಚಿಕೆಯೆನಿಸುತ್ತಿತ್ತು. ಮನಸ್ಸಿಲ್ಲದ ಮನಸ್ಸಿನಿಂದ ಸ್ಲೊಗನುಗಳನ್ನು ಹೇಳುತ್ತಿದ್ದರು.

ಯಾರೂ ಕೆಲಸಕ್ಕೆ ಹೋಗಲಿಲ್ಲ. ಬೀಡಿ ಡಿಪೋದ ಮುಂದೆ ಸ್ವಲ್ಪ ಹೊತ್ತು ಧರಣಿಹೂಡಿ ನಂತರ ಚದುರಿದರು.

ಇಡಿಯ ಜಿಲ್ಲೆಯಲ್ಲೇ ಮುಷ್ಕರ ನಡೆದಿತ್ತು.

ಆದರೆ ನಾಗೂರಿನ ಮಂದಿಗೆ ಇದೆಲ್ಲಾ ಹೊಸದು. ಹೆಚ್ಚಿನದೆಂದರೆ ಅವರಿಗೆ ಇಲೆಕ್ಷನ್ ಮೀಟಿಂಗುಗಳು, ಮೆರವಣಿಗೆಗಳು ಗೊತ್ತು. ಆದರೆ ಕೆಲಸಗಾರರು ಆ ಊರಲ್ಲಿ ಮುಷ್ಕರ ಹೂಡುವುದು ಇದೇ ಮೊದಲು. ಇದೆಲ್ಲಾ ಸರಿಯಲ್ಲವೆಂಬ ಭಯ, ಸರಕಾರಕ್ಕೆ ಇದು ಸೇರುವುದಿಲ್ಲವೆಂಬ ಅಳುಕು. ಆದ್ದರಿಂದ ಮುಷ್ಕರಗಾರರು ಡಬ್ಬ ಹಿಡಿದುಕೊಂಡು ಓಡಾಡಿದರೂ ನಿರೀಕ್ಷಿಸಿದಷ್ಟು ಚಂದಾ ಎತ್ತಲು ಸಾಧ್ಯವಾಗಲಿಲ್ಲ. ಮುಷ್ಕರ ಈ ಊರಿನ ವಿರುದ್ಧವಲ್ಲ, ಎಲ್ಲೋ ಇರುವ ಯಾವುದೋ ಕಂಪೆನಿ ಮಾಲೀಕರ ವಿರುದ್ಧ ಎಂದುಕೊಂಡವರು ಒಂದೆರಡು ರೂಪಾಯಿಗಳನ್ನು ಮುಷ್ಕರಗಾರರಿಗೆ ಕೊಟ್ಟರು.

ಎಲ್ಲ ಕೆಲಸಗಾರರಂತೆ ಲಕ್ಷ್ಮಿಯೂ ಮುಷ್ಕರದಲ್ಲಿ ಭಾಗವಹಿಸಿದ್ದಳು. ನಾಚಿ ಕೊಂಡೇ ಮೆರವಣಿಗೆಯಲ್ಲಿ ನಡೆದಿದ್ದಳು. ಧರಣಿ ಕುಳಿತಿದ್ದಳು, ಯೂನಿಯನ್ ಕಾರ್ಯಕರ್ತರು ಕೊಟ್ಟ ಎರಡು ರೂಪಾಯಿ ಭತ್ಯವನ್ನು ತೆಗೆದುಕೊಂಡು ಮನೆಗೆ ಹೋಗಿದ್ದಳು. ಮುಷ್ಕರ ಕೊನೆಗೊಳ್ಳುವತನಕ ಹೀಗೆಯೇ ದಿನಗಳೆಯ ಬೇಕು. ಮಾಡುವುದಕ್ಕೆ ಕೆಲಸವಿಲ್ಲ. ಬೇರೇನೂ ಕೆಲಸಕ್ಕೆ ಹೋಗುವಂತಿಲ್ಲ. ಎರಡೇ ದಿನಗಳಲ್ಲಿ ಅವಳಿಗೆ ಬೇಸರ ಬಂದುಬಿಟ್ಟಿತು.

ಒಂದು ದಿನ ಪೇಟೆಯಲ್ಲಿ ಅರವಿಂದನ ಭೇಟಿಯಾಯಿತು.
“ಮುಷ್ಕರವೇ?”
“ಹೂಂ”
“ಹಣಕ್ಕೇನು ಮಾಡುತ್ತೀ?”
ಭತ್ಯದ ಸಂಗತಿ ಹೇಳಿದಳು.
“ಸಾಕಾಗುತ್ತದೆಯೆ?”
“ಇಲ್ಲ.”
“ರೂಮಿಗೆ ಬಾ.”
ರೂಮಿಗೆ ಹೋದಳು, ಅರವಿಂದ ಅವಳ ಕೈಯಲ್ಲಿ ಇಪ್ಪತ್ತು ರೂಪಾಯಿಗಳನ್ನಿಟ್ಟ.
“ಇದೆಲ್ಲ ಯಾಕೆ,” ಎಂದು ಕೇಳಿದಳು.
“ನನ್ನ ಬಾಬ್ತು ಇರಲಿ.”
ನಂತರ ಅವಳಿಗೆ ಈ ಹಣ ಯೂನಿಯನಿನ ನಿಧಿಗೆ ಕೊಟ್ಟು ತನಗೆ ಕೊಟ್ಟುದೋ ಎಂದು ತಿಳಿಯದೆ ಗೊಂದಲವಾಯಿತು. ಯೂನಿಯನಿಗಾದರೆ ಚಂದಾ ಎತ್ತಲು ಬರುತ್ತಿರುವವರ ಬಳಿ ಕೊಡುತ್ತಿರಲಿಲ್ಲವೆ? ನನ್ನನ್ನು ಕರೆದು ಯಾಕೆ ಕೊಡಬೇಕಿತ್ತು? ಕೊನೆಗೆ ಹತ್ತು ರೂಪಾಯಿ ಯೂನಿಯನಿಗೆ ಕೊಟ್ಟು, ಹತ್ತನ್ನು ತಾನು ಇಟ್ಟುಕೊಂಡು ಮನಸ್ಸಿಗೆ ಸಮಾಧಾನ ಮಾಡಿಕೊಂಡಳು.

ಮರೀನಾ ಬಹಳ ಉತ್ಸುಕಳಾಗಿದ್ದಳು. ಇಂಥ ಊರಲ್ಲೂ ಮಂದಿ ಎಚ್ಚರಾಗುತ್ತಿದ್ದಾರಲ್ಲ! ಏನೂ ಆಗದಿರುವಲ್ಲಿ ಏನಾದರೂ ಆಗುತ್ತಿದೆಯಲ್ಲ! ಎಂದು ಕೊಂಡಳು. ಮುಷ್ಕರ ಮೊದಲಾಗುವ ದಿನ ಅವಳು ಅರವಿಂದನ ಕೋಣೆಯಲ್ಲಿದ್ದಳು. ಸಭೆ ಮೆರವಣಿಗೆಗಳನ್ನು ಇಬ್ಬರೂ ಅಲ್ಲಿಂದಲೇ ನೋಡಿದರು.

“ನನಗವರೊಂದಿಗೆ ಹೋಗಿ ಸೇರೋಣವೆನಿಸುತ್ತಿದೆ!” ಎಂದಳು ಮರೀನಾ. “ನಿಮಗನಿಸುವುದಿಲ್ಲವೆ?” ಎಂದು ಕೇಳಿದಳು.
ಅವಳ ಮುಖದಲ್ಲಿ ಅಂದು ಶಾಲೆಯಲ್ಲಿ ಸ್ಲೊಗನುಗಳನ್ನು ಬರೆದ ಅದೇ ಉತ್ಸುಕತೆ ತುಂಟತನ ಇದ್ದುವು.
“ಅನಿಸುತ್ತದೆ,” ಎಂದು ಉತ್ತರಿಸಿದ.
“ಆದರೆ ನಾವೇಕೆ ಸೇರುವುದಿಲ್ಲ? ನಮ್ಮನ್ನು ತಡೆಯುವ, ಬರಿಯ ಪ್ರೇಕ್ಷಕರನ್ನಾಗಿ ನಿಲ್ಲಿಸುವ ಸಂಗತಿ ಯಾವುದು? ನಮ್ಮ ವಿದ್ಯಾಭ್ಯಾಸವೆ, ಅಂತಸ್ತೆ, ಜಾತಿಯೆ, ಉದ್ಯೋಗವೆ? ಈ ಮನುಷ್ಯರ ಮುಗ್ಧತನ ನೋಡಿದಿರ? ನಮಗೆ ಯಾಕೆ ಅದಿಲ್ಲ? ಎಲ್ಲೋ ಕಳೆದುಕೊಂಡಿದ್ದೇವೆ ಅಲ್ಲವೆ? ಅದನ್ನು ಮತ್ತೆ ಪಡೆಯುವುದು ಹೇಗೆ?”
ಒಂದು ವಾರವೂ ಕಳೆಯಲಿಲ್ಲ.

ಒಂದುವಾರದೊಳಗಾಗಿಯೆ ಮುಷ್ಕರ ಕುಸಿಯುವುದನ್ನು ಅವರು ತಮ್ಮ ಕಣ್ಣೆದುರೇ ನೋಡಿದರು. ಅನೇಕ ಸುಳ್ಳು ಸುದ್ದಿಗಳು ಹಬ್ಬತೊಡಗಿದುವು. ಅಲ್ಲಲ್ಲಿ ಕಾರ್ಮಿಕರು ಕೆಲಸಕ್ಕೆ ಮರಳುತ್ತಿದ್ದಾರೆ ಎಂಬ ಸುದ್ದಿ ಬಂತು. ಚಂದಾ ಎತ್ತಿ ಕೂಡಿಸಿದ ಹಣ ಸರಿಯಾಗಿ ವಿತರಣೆಯಾಗುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಸತೊಡಗಿದುವು. ಕಂಪೆನಿ ಮಾಲಿಕರು ಒಡನೆಯೇ ಕೆಲಸಕ್ಕೆ ಮರಳುವ ಕಾರ್ಮಿಕರಿಗೆ ಬೋನಸ್ ಕೊಡಲು ಒಪ್ಪಿದ್ದಾರೆಂಬ ಗಾಳಿಸುದ್ದಿಯೂ ಕೇಳಿಸಿತು. ಯೂನಿಯನ್ ಕಾರ್ಯಕರ್ತರ ಮಾತನ್ನು ಯಾರೂ ಕೇಳಲಿಲ್ಲ. ಅರೆ ಹೊಟ್ಟೆಯಲ್ಲಿ ಎಷ್ಟು ದಿನ ಹೀಗೆ ಬದುಕುವುದು? ಒಬ್ಬೊಬ್ಬರಾಗಿ ಡಿಪೋಗೆ ಬಂದು ಬೀಡಿಯೆಲೆ, ತಂಬಾಕು ಒಯ್ಯತೊಡಗಿದರು.

ಮರೀನಾ ಅದನ್ನೂ ನೋಡಿದಳು.
“ಇದು ಆರಂಭ,” ಎಂದಳು.
“ನಿಮಗೆ ಹೇಳುವುದಕ್ಕೆ ಮರೆತೆ, ನೀವು ಬರೆದ ಸ್ಲೋಗನುಗಳ ಕೆಳಗೆ ಇನ್ನೊಂದನ್ನು ಯಾರೋ ಬರೆದಿದ್ದಾರೆ!”
“ಹೌದೆ ! ಏನೆಂದು?”
“ಶಾಲೆಗೆ ಧಿಕ್ಕಾರ!?”
“ಗುಡ್!”
ಅರವಿಂದನಿಗನಿಸಿತು : ಈ ಮಂದಿಯ ಮನಸ್ಸಿಗೆ ನಾವು ಮಾತುಕೊಡ ಬಹುದು. ಅದಕ್ಕಿಂತ ಹೆಚ್ಚಿಗೇನು?
*****

ಅಧ್ಯಾಯ ೧೦

ಒಂದು ದಿನ ಆಗಂತುಕನೊಬ್ಬ ಅರವಿಂದನನ್ನು ನೋಡಲು ಬಂದ. ಜುಬ್ಬಾ ಪಾಯಿಜಾಮ ಹಾಕಿಕೊಂಡ ಎತ್ತರದ ಗಂಭೀರ ನಿಲುವಿನ ವ್ಯಕ್ತಿ. ವಯಸ್ಸು ಸುಮಾರು ಮೂವತ್ತೈದು ಇರಬಹುದು. ತನ್ನ ಹೆಸರು ರಾಜಶೇಖರ ಎಂದು ಪರಿಚಯ ಮಾಡಿಸಿಕೊಂಡ. ಈ ಊರಲ್ಲೊಂದು ವಯಸ್ಕರ ಶಿಕ್ಷಣ ಶಿಬಿರ ನಡೆಸುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ಹೇಳಿದ. ಅದಕ್ಕೋಸ್ಕರ ಅರವಿಂದನ ನೆರವನ್ನು ಕೇಳಲು ಬಂದಿದ್ದ.

ಅವನು ತನ್ನ ಯೋಜನೆಯನ್ನು ಅರವಿಂದನ ಮುಂದಿಟ್ಟ. ಶಿಬಿರದ ಅವಧಿ ಐದಾರು ವಾರಗಳು. ಸುಮಾರು ಇಪ್ಪತ್ತು ಮೂವತ್ತು ಮಂದಿ ಅಭ್ಯರ್ಥಿಗಳು ದೊರೆತರೆ ಸಾಕು. ಪಾಠಗಳು ಸಂಜೆ ಹೊತ್ತು, ಶಿಬಿರ ನಡೆಸುವುದಕ್ಕೆ ಒಂದು ಹಾಲ್ ಬೇಕಾಗುತ್ತದೆ. ಹೈಸ್ಕೂಲಿನ ಮ್ಯಾನೇಜರರು ಒಪ್ಪಿದರೆ ಸ್ಕೂಲ್ ಕಟ್ಟಡದಲ್ಲೇ ಮಾಡಬಹುದು.

“ನೀವು ಮ್ಯಾನೇಜರರಿಗೆ ಒಂದು ಮಾತು ಹೇಳುತ್ತೀರಾ?” ಎಂದು ರಾಜಶೇಖರ ಕೇಳಿದ.

ಈ ಊರಿನಲ್ಲಿ ಹೊಸ ಸಂಗತಿಗಳು ನಡೆಯುತ್ತಿರುವುದನ್ನು ಕಂಡು ಅರವಿಂದನಿಗೆ ಖುಶಿಯಾಯಿತು. ಮರೀನಾ ಇದನ್ನು ಮೆಚ್ಚುತ್ತಾಳೆ ಅನಿಸಿತು. ಬಹುಶಃ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಲೂಬಹುದು. ತನಗೂ ಇದೊಂದು ಹೊಸ ಅನುಭವವಾಗುತ್ತದೆ. ಆದರೆ ಊರ ಮಂದಿ? ಅವರಿಗಿದರಲ್ಲಿ ಆಸಕ್ತಿಯಿರುತ್ತದೆಯೆ? ಸಂಜೆ ದಿನದ ಕೆಲಸ ಮುಗಿದಾಗ ಅಂದಿನ ಕೂಲಿ ಇಸಿದುಕೊಂಡು ಸರಾಯಿ ಕುಡಿದು ತಿರುಗುವ ಅನಕ್ಷರಸ್ಥರನ್ನು ಶಿಬಿರಕ್ಕೆ ಆಕರ್ಷಿಸುವುದು ಹೇಗೆ?

ತಟ್ಟನೆ ರಾಜಶೇಖರನ ಸಮಸ್ಯೆ ತನ್ನ ಸಮಸ್ಯೆಯಾಗುತ್ತಿದೆಯಲ್ಲ! ಅನಿಸಿತು.

“ಇದರ ಸಕ್ಸಸ್ ಅಥವಾ ಫೈಲಿಯರ್‌ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆರಂಭಿಸೋದು ಮುಖ್ಯ,” ಎಂದ ರಾಜಶೇಖರ.

ಅವನಿಗಿದೆನೂ ಹೊಸ ಅನುಭವವಾಗಿರಲಿಲ್ಲ. ಸುತ್ತುಮುತ್ತಲಿನ ಹಳ್ಳಿಗಳಲ್ಲೂ ಇಂಥದೇ ಶಿಬಿರಗಳನ್ನು ನಡೆಸಿದ್ದ. ಕೆಲವೆಡೆ ಒಳ್ಳೇ ಉತ್ತೇಜನ ಸಿಕ್ಕಿತ್ತು, ಇನ್ನು ಕೆಲವೆಡೆ ಸಿಕ್ಕಿರಲಿಲ್ಲ. ಇದರಿಂದೇನೂ ಅವನು ಹತಾಶನಾಗಿರಲಿಲ್ಲ.

ಅವನ ಗಂಭೀರವಾದ ಮಾತುಗಳನ್ನು ಕೇಳುತ್ತಿದ್ದಂತೆ ಅರವಿಂದ ಅಂದುಕೊಂಡ-ಈತನನ್ನು ಈ ಮೊದಲು ಎಲ್ಲಾದರೂ ನೋಡಿದ್ದೇನೆಯೆ? ಎಲ್ಲಿ? ನಂತರ ಅಸ್ಪಷ್ಟವಾಗಿ ನೆನಪಾಯಿತು. ಮೈಸೂರಲ್ಲಿದ್ದರೂ ಇರಬಹುದೆಂದು. ಯಾವುದೋ ಮೀಟಿಂಗಿಗೆ ಬರುತ್ತೀಯಾ ಎಂದು ಗೆಳೆಯರು ಕರೆದಿದ್ದರು. ಹೂಂ ಎಂದು ಅವರೊಂದಿಗೆ ಹೋಗಿದ್ದ. ಮೀಟಿಂಗ್ ಯಾರದೋ ಮನೆಯ ಅಟ್ಟದಲ್ಲಿ ನಡೆದಿತ್ತು. ಯುನಿವರ್ಸಿಟಿಯ ಹತ್ತಾರು ಹುಡುಗರು, ಹುಡುಗಿಯರು ಇನ್ನು ಯಾರು ಯಾರೋ ಇದ್ದರು. ಆ ಮೀಟಿಂಗಿನಲ್ಲಿ ಮಾತಾಡಿದವನು ಈತನೇ ಇದ್ದರೂ ಇರಬಹುದು ಅನಿಸಿತು. ಅವನೇನು ಮಾತಾಡಿದನೆಂದು ಅರವಿಂದನಿಗೆ ನೆನಪಿರಲಿಲ್ಲ. ಅವನ ಗಮನ ಇನ್ನಾವುದೋ ಸಮಸ್ಯೆಯಲ್ಲಿತ್ತು. ಅಟ್ಟದ ತುಂಬ ಹೊಗೆ, ಹಿಂದೆ ಯಾವುದಾದರೂ ಬೇಕರಿಯೋ ಹೋಟೆಲೋ ಇದ್ದಿರಬಹುದು, ಮೀಟಿಂಗಿನಿಂದ ಬರುವಾಗ ಕೆಲವರು ತಮ್ಮ ತಮ್ಮೊಳಗೇ ಮೀಟಿಂಗಿನ ವಿಷಯವನ್ನು ಚರ್ಚಿಸುತ್ತಿದ್ದರು. ನಂತರ ಅವರೆಲ್ಲ ಬೀಯರು ಕುಡಿಯಲೆಂದು ಬಾರಿಗೆ ಹೊಕ್ಕರು, ಅರವಿಂದ ತಾನು ಬರುವುದಿಲ್ಲವೆಂದ, ಅವರು ಬಲವಂತ ಮಾಡಿದರು. ತನ್ನ ಬಳಿ ಹಣವಿಲ್ಲ ಎಂದರೂ ಬಿಡಲಿಲ್ಲ. ಅವನು ಮದ್ಯ ಸೇವಿಸಿದುದು ಅದೇ ಮೊದಲ ಸಲ. ಬಾರಿನೊಳಗೂ ಚರ್ಚೆ ಮುಂದರಿಯಿತು. ಅವರೆಲ್ಲ ರಾಡಿಕಲಿಸ್ಟರಂತೆ ಕಂಡುಬಂದರು.

“ನೀವೆಂದಾದರೂ ಮೈಸೂರಿನಲ್ಲಿ ಮೀಟಿಂಗ್ ಅಡ್ರೆಸ್ ಮಾಡಿದ್ದೀರ?” ಅರವಿಂದ ಕೇಳಿದ.

“ಮೈಸೂರಿಗೆ ಆಗಾಗ ಹೋಗುತ್ತಿರುತ್ತೇನೆ. ಅಲ್ಲಿ ನನಗೆ ಗೆಳೆಯರಿದ್ದಾರೆ.”

ಅರವಿಂದ ತಾನು ಮೈಸೂರಲ್ಲಿ ಓದಿದುದಾಗಿ ತಿಳಿಸಿದ.
“ಎನು ಓದಿದಿರಿ?”
ಹೇಳಿದ.
“ಶಿಬಿರದಲ್ಲಿ ಪಾಠ ಹೇಳಿ, ಇತಿಹಾಸದ ಇನ್ನೊಂದು ಮುಖ ನಿಮಗೆ ಗೋಚರಿಸುತ್ತದೆ.”
“ನಿಮಗೆ ಮರೀನಾ ಗೊತ್ತೆ?”
“ಯಾರು?”
“ಅವಳೊಬ್ಬ ಪೈಂಟರ್. ಇಂಥ ವಿಷಯಗಳಲ್ಲಿ ಆಸಕ್ತಿಯಿದೆ ಅವಳಿಗೆ.”
ಅರವಿಂದ ಅವಳ ಕುರಿತು ಹೇಳಿದ.
ಶಾಮರಾಯರನ್ನು ಕಂಡು ಶಾಲೆಯ ಕಟ್ಟಡವನ್ನು ಪಡೆದುಕೊಳ್ಳುವುದು ಕಷ್ಟವಾಗಲಿಲ್ಲ. ಬೇಸಿಗೆ ರಜೆ ಸುರುವಾಗಿ ಶಾಲೆಯೂ ಮುಚ್ಚಿತ್ತು. ಆದರೂ ಶಾಮರಾಯರಿಗೆ ಈ ಗಲಾಟೆಯೆಲ್ಲ ಯಾಕೆ ಅನಿಸದೆ ಇರಲಿಲ್ಲ. ಇಂಥ ಊರಿನಲ್ಲಿ ಇದೆಲ್ಲ ಯಾಕೆ? ಓದುವ ಮಕ್ಕಳಿಗೆ ಶಾಲೆಯಿದೆ. ಓದದ ವಯಸ್ಕರು ಇನ್ನು ಓದಿಕಲಿತು ಏನು ಸಾಧಿಸಲಿಕ್ಕಿದೆ? ಸುಮ್ಮಗೇ ಜನರ ತಲೆಯೊಳಗೆ ಆಗ ಹೋಗದ ವಿಚಾರಗಳನ್ನು ತುಂಬುವುದರಿಂದ ಏನು ಬಂತು? ಈ ರಾಜಶೇಖರ ಯಾರು? ಅವನ ನಿಜವಾದ ಉದ್ದೇಶವೇನು? ಈ ಸಂದೇಹಗಳನ್ನು ಅವರು ಸ್ವಲ್ಪದರಲ್ಲಿ ಎತ್ತಿದರು. ಆದರೂ ಒಳ್ಳೆಯ ಕೆಲಸಕ್ಕೆ ಅಡ್ಡಿ ಬರಬಾರದೆಂದು ಸುಮ್ಮನಾದರು. ತಮಗೆ ಸರಿ ಕಾಣಿಸದೆ ಬಂದ ದಿನ ಶಿಬಿರವನ್ನು ಶಾಲೆಯಿಂದ ಎಬ್ಬಿಸಿದರಾಯಿತು ಎಂದುಕೊಂಡರು.

ಶಿಬಿರದ ಕೆಲಸವಿದ್ದುದರಿಂದ ಅರವಿಂದ ರಜೆಯಲ್ಲಿ ಊರಿಗೆ ಹೋಗದೆ ನಾಗೂರಿನಲ್ಲೇ ಉಳಿದುಕೊಂಡ. ಮರೀನಾ ಬಹಳ ಉತ್ಸಾಹದಲ್ಲಿದ್ದಳು. ಅವಳಿಗೆ ರಾಜಶೇಖರನ ವಿಚಾರಗಳು ಹಿಡಿಸಿದುವು. ಶಿಬಿರಕ್ಕೊಸ್ಕರ ಪೋಸ್ಟರುಗಳನ್ನು, ಕಾರ್ಡುಗಳನ್ನು ಬರೆಯುವ ಕೆಲಸ ವಹಿಸಿಕೊಂಡಳು. ಅರವಿಂದನ ಕೋಣೆ ತುಂಬ ಅವಳ ಸಾಮಗ್ರಿಗಳು ತುಂಬಿದುವು-ರಟ್ಟು, ಡ್ರಾಯಿಂಗ್ ಪೇಪರು, ಪೈಂಟು, ಪೆನ್ಸಿಲು, ಬ್ರಶ್ಯು, ಇತ್ಯಾದಿ. ಅವಳ ತಲೆತುಂಬ ಐಡಿಯಾಗಳಿದ್ದುವು. ಕೆಲಸದಲ್ಲಿ ಮಗ್ನಳಾಗಿರುವಾಗ ಮರೀನಾ ತನ್ನದೇ ಜಗತ್ತಿನಲ್ಲಿರುತ್ತಾಳೆ. ಇತರರ ಇರವನ್ನೇ ಮರೆತುಬಿಡುತ್ತಾಳೆ. ಕೆಲಸದಲ್ಲಿ ತಲ್ಲೀನವಾದ ಕಣ್ಣುಗಳು, ಹಣೆಯ ಮೇಲೆ ಬಿದ್ದ ಮುಂಗುರುಳು, ಎಸಳಾದ ಮೂಗು-ಈ ದೃಶ್ಯವನ್ನು ಸವಿದಷ್ಟೂ ಸಾಕೆನಿಸುತ್ತಿರಲಿಲ್ಲ ಅರವಿಂದನಿಗೆ.

ಜನ ಬಂದರು-ಬೀಡಿ ಕಾರ್ಮಿಕರು, ಕೂಲಿ ಕೆಲಸಗಾರರು, ಏನೂ ಕೆಲಸ ವಿಲ್ಲದವರು, ಯಾವುದೋ ಕಾರಣದಿಂದ ಶಾಲೆಸೇರಿ ಬಿಟ್ಟವರು. ಕೆಲವರು ನಿಜವಾದ ಆಸಕ್ತಿಯಿಂದ ಬಂದರು. ಇನ್ನು ಕೆಲವರು ಏನು ನಡೆಯುತ್ತಿದೆ ನೋಡೋಣವೆಂಬ ಕುತೂಹಲದಿಂದ ಬಂದವರು. ಬಂದವರಲ್ಲಿ ಬಹಳಷ್ಟು ಮಂದಿ ಉಳಿದು ಕೊಂಡರು. ರಾಜಶೇಖರ ಅವರಿಗೆ ಹೇಳಿದ : ಮನುಷ್ಯರಾದ ನಿಮಗೆ ಒಬ್ಬೊಬ್ಬನಿಗೂ ಒಂದೊಂದು ವ್ಯಕ್ತಿತ್ವವಿದೆ. ಮನುಷ್ಯರಾಗಿ ನೀವು ಎಲ್ಲರಿಗೂ ಸಮಾನರು. ಓದಲು ಬರೆಯಲು ಕಲಿಯಿರಿ. ಆಗ ನಿಮ್ಮ ಮಾತಿಗೆ ಬೆಲೆಬರುತ್ತದೆ. ಧೈರ್ಯದಿಂದ ಮಾತಾಡುವುದು ನಿಮಗೆ ಸಾಧ್ಯವಾಗುತ್ತದೆ.

ಎಲ್ಲರೂ ಕಿವಿಗೊಟ್ಟು ಕೇಳಿದರು.

ರಾಜಶೇಖರ ಶಾಲೆಯಲ್ಲೇ ಕ್ಯಾಂಪು ಮಾಡಿದ, ದಿನದ ಕೆಲಸ ಮುಗಿದ ಮೇಲೆ ಹೋಟೆಲಿಗೆ ಹೋಗಿ ಉಣ್ಣುತ್ತಿದ್ದ. ಕೆಲವು ದಿನ ಮರೀನಾ ಅರವಿಂದನ ಕೋಣೆಯಲ್ಲೇ ಮೂವರಿಗೂ ಊಟ ತಯಾರಿಸುತ್ತಿದ್ದಳು. ವಯಸ್ಕರ ಶಿಕ್ಷಣ ಶಿಬಿರ ನಾಗೂರಿನಲ್ಲಿ ದೊಡ್ಡ ಸುದ್ದಿಯಾಯಿತು. ಯಾರಿಗೂ ಇದು ಹಿಡಿಸಲಿಲ್ಲ. ಜನರಲ್ಲಿ ಅಸಿಸ್ತನ್ನು ಉಂಟುಮಾಡುವ ವಿಧಾನವಲ್ಲವೇ ಇದು ಎಂದು ಕೇಳಿಕೊಂಡರು.

ವೆಂಕಟರಮಣ ಮೂರ್ತಿ ತಾವು ಪರೀಕ್ಷೆಗೆ ಹೋಗುವ ಮುನ್ನ ಬಂದು ಅರವಿಂದನನ್ನು ಭೇಟಿಯಾದರು. ಅರವಿಂದ ಅವರಿಗೆ ಶುಭಾಶಯಗಳನ್ನು ಹೇಳಿದ.

“ಈ ರಾಜಶೇಖರ ಯಾರು?”
ಅರವಿಂದ ಈ ಪ್ರಶ್ನೆಯನ್ನು ಎಂದೂ ಹಾಕಿಕೊಂಡಿರಲಿಲ್ಲ.
“ಗೊತ್ತಿಲ್ಲ” ಎಂದ.
“ಕೆಲವರೆನ್ನುತ್ತಾರೆ ಆತನೊಬ್ಬ ಕಮ್ಯೂನಿಸ್ಟ್ ಏಜೆಂಟ್ ಅಂತ, ನೀವು ಅವನ ಬಗ್ಗೆ ಹುಶಾರಾಗಿರೋದು ಒಳ್ಳೆಯದು,” ಎಂದರು ಮೂರ್ತಿ.

ರಾಜಶೇಖರ ಮಾತ್ರ ಯಾವುದನ್ನೂ ಕಿವಿಗೆ ಹಾಕಿಕೊಂಡಂತೆ ಕಾಣಿಸಲಿಲ್ಲ ಶಿಬಿರ ನಡೆಯುತ್ತಲೇ ಇತ್ತು.

ಆದರೆ ಅರವಿಂದ ಮಾತ್ರ ಅದರಲ್ಲಿ ಕೊನೆತನಕ ಭಾಗವಹಿಸುವುದು ಸಾಧ್ಯವಾಗಲಿಲ್ಲ. ಒಂದು ದಿನ ಅವನಿಗೊಂದು ಪತ್ರ ಬಂತು. ತಾಯಿಗೆ ತೀವ್ರ ಖಾಯಿಲೆ, ಕೂಡಲೇ ಹೊರಟು ಬಾ ಎಂದು ಅಣ್ಣ ಬರೆದಿದ್ದ, ಅರವಿಂದ ತಾರೀಖು ನೋಡಿದ, ಪತ್ರ ತಲುಪಲು ಮೂರು ದಿನಗಳು ತಗಲಿದ್ದುವು. ಅದೇ ದಿನ ಸಾಯಂಕಾಲದ ಬಸ್ಸಿನಲ್ಲಿ ಅವನು ಊರಿಗೆ ಹೊರಟ.

ಬೀಳ್ಕೊಡಲು ಬಸ್ಸಿನ ತನಕ ಬಂದಿದ್ದಳು ಮರೀನಾ, ಬಸ್ಸು ಮರೆಯಾಗುವವರೆಗೂ ಕೈಬೀಸುತ್ತಿದ್ದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೋಸದ ಹೆಣ್ಣು
Next post ಮಲಗು ಮಲಗೆನ್ನೆದೆಯ ಮಂಟಪದ ಮೂರ್ತಿ

ಸಣ್ಣ ಕತೆ

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

 • ಏಡಿರಾಜ

  ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…