ನೆಮ್ಮದಿ

ನೆಮ್ಮದಿ

ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ಪಾದಾಚಾರಿಗಳು, ರಸ್ತೆಯ ಇಕ್ಕೆಲಗಳಲ್ಲೂ ಮಾರಾಟದ ಸಾಮಾಗ್ರಿಗಳನ್ನು ರಾಶಿ ಹಾಕಿ ಗಿರಾಕಿಗಳನ್ನು ತಮ್ಮತ್ತ ಸೆಳೆಯಲು ಕಿರುಚಾಡಿಕೊಂಡು ವಿವಿಧ ಭಂಗಿಗಳಲ್ಲಿ ನಿಂತಿರುವ ಬೀದಿ ಬದಿ ವ್ಯಾಪಾರಿಗಳು, ಸರ್‍ಕಸ್ ಬ್ಯಾಲೆನ್ಸ್ ಮಾಡಿಕೊಂಡು ಸೈಕಲಿನಲ್ಲಿ ಅಡ್ಡಾದಿಡ್ಡಿ ಓಡಾಡುವ ಪಡ್ಡೆ ಹುಡುಗರು, ತಳ್ಳುಗಾಡಿಗಳಲ್ಲಿ ಸಾಮಗ್ರಿಗಳನ್ನು ತುಂಬಿಕೊಂಡು ದಾರಿಗಾಗಿ ಬೊಬ್ಬಿಡುತ್ತಾ ಬೆವರು ಸಾಲುಗಳೊಂದಿಗೆ ತಮ್ಮ ದೇಹ ಧಾರ್‍ಡ್ಯವನ್ನು ಪ್ರದರ್ಶಿಸುತ್ತಾ ಮುನ್ನುಗ್ಗುವ ಕಾರ್ಮಿಕರು, ಐಶಾರಾಮಿ ಕಾರುಗಳು, ದ್ವಿಚಕ್ರ ವಾಹನಗಳು, ಗಗನ ಚುಂಬಿತ ಕಟ್ಟಡಗಳು! ಇವೆಲ್ಲದರ ಮಧ್ಯೆ ಅವನು ನೆಮ್ಮದಿಯನ್ನು ಅರಸುತ್ತಿದ್ದ.

“ರೀ ಯಜಮಾನರೇ, ಸ್ವಲ್ಪ ಸರಿದು ನಿಲ್ರ್‍ಈ. ಅಂಗಡಿಗೆ ಬೆನ್ನು ಮಾಡಿ ನಿಂತರೆ ನಾವು ವ್ಯಾಪಾರ ಮಾಡುವುದು ಹೇಗೆ? ಹೋ! ಪರ ಊರಿಂದ ಬಂದಿರಬೇಕು? ಯಾವೂರು ಸ್ವಾಮಿ ತಮ್ಮದು? ಏನೋ ಕಳಕೊಂಡವರಂತೆ ಹುಡುಕುತ್ತಿದ್ದೀರಿ? ಏನು ಬೇಕಿತ್ತು ನಿಮಗೆ?” ಒಂದೇ ಸಮನೆ ವಟಗುಟ್ಟುವ ಪೇಪರ್ ಸ್ಟಾಲಿನವನ ಮಾತಿಗೆ ಅವನೇನೂ ಅಧೀರನಾಗಲಿಲ್ಲ. ಅವನು ಸ್ವಲ್ಪ ಬದಿಗೆ ಸರಿದು ನಿಂತುಕೊಂಡ. ಗಿರಾಕಿಗಳು ಬೆಳಗ್ಗಿನ ನ್ಯೂಸ್ ಪೇಪರ್‌ಗಾಗಿ ಮತ್ತು ಎದೆಯನ್ನು ಬೆಚ್ಚಗಿಡಲು ಒಂದು ಕಪ್ ಚಹಾ, ಕಾಫಿಗಾಗಿ ಹಾಗೂ ಸಿಗರೇಟಿಗಾಗಿ ಅವನ ಅಂಗಡಿಗೆ ಮುಗಿ ಬೀಳುತ್ತಿದ್ದರು. ಅವನು ಪಟಪಟನೆ ವಿವಿಧ ರೀತಿಯ ನ್ಯೂಸ್ ಪೇಪರ್‌ಗಳನ್ನು ಕೊಡುತ್ತಾ, ಹಣ ವಸೂಲಿ ಮಾಡಿಕೊಂಡು ನಾಲ್ಕು ಕಡೆಗೂ ಕಣ್ಣಾಡಿಸುತ್ತಿದ್ದ. ಮತ್ತೊಮ್ಮೆ “ಏನು ಎಂಬಂತೆ ಆ ಪರಕೀಯನನ್ನು ದಿಟ್ಟಿಸಿದ. ಈಗ ಆ ಪರಕೀಯ ಉತ್ತರಿಸಲೇ ಬೇಕಾಯಿತು. ಅವನು ನಕ್ಕು ಆ ಪೇಪರಿನವನನ್ನು ಕೇಳಿದ.

“ನನಗೆ ನೆಮ್ಮದಿ ಬೇಕಾಗಿತ್ತು.”

ಪೇಪರಿನವನ ಮುಖ ಕಳೆಗುಂದಿತು. ಅವನು ಆ ಪರಕೀಯನನ್ನು ಆಪಾದ ಮಸ್ತಕ ನೋಡಿದ. ಇವನನ್ನು ಯಾವ ವರ್‍ಗಕ್ಕೆ ಸೇರಿಸುವುದೆಂದು ಅರ್‍ಥವಾಗದೆ ತಲೆ ಕೆರೆದುಕೊಂಡ. ಜಾಸ್ತಿ ಆಲೋಚಿಸುವಷ್ಟು ಅವನಿಗೆ ವ್ಯವಧಾನವಿರಲಿಲ್ಲ. ಕೊನೆಗೆ
ಯಾವುದೋ ಒಂದು ದಿನಪತ್ರಿಕೆಯನ್ನು ಅವನ ಕಡೆಗೆ ಎಸೆದ.

“ಇದನ್ನು ಓದಿ ನಿಮಗೆ ನೆಮ್ಮದಿ ಸಿಗುತ್ತದೆ”. ಪೇಪರಿನವನು ಆ ಪರಕೀಯನನ್ನು ಕಣ್ಣೆತ್ತಿಯೂ ನೋಡದೆ ತನ್ನ ಕೆಲಸದಲ್ಲಿ ಮಗ್ನನಾದ. ಆ ಪರಕೀಯ ತನ್ನ ಹತ್ತಿರ ಬಿದ್ದ ದಿನಪತ್ರಿಕೆಯನ್ನು ಮನಸ್ಸಿಲ್ಲದ ಮನಸ್ಸಿನಿಂದ ಬಾಗಿ ಎತ್ತಿಕೊಂಡು ಪುಟ ತಿರುವಿದ.

“ಗಡಿಯಲ್ಲಿ ಘರ್‍ಷಣೆ ಐದು ಯೋಧರ ಬರ್‍ಭರ ಹತ್ಯೆ”

“ಪ್ರ್‍ಆರ್ಥನಾನಿರತ ಭಕ್ತಾಧಿಗಳ ಮೇಲೆ ಬಾಂಬು ದಾಳಿ ಇಪ್ಪತ್ತು ಮಂದಿಯ ದುರ್‍ಮರಣ”

“ನಾಗರೀಕರ ಮೇಲೆ ವಿಷಾನಿಲ ಪ್ರಯೋಗ, ಸಾವಿರಾರು ನಾಗರೀಕರ ಸಾವು”

“ವ್ಯಾಪಕ ಕೋಮು ಗಲಭೆ, ಸಾವು-ನೋವು-ಕರ್‍ಫ್ಯೂ ಜಾರಿ”

“ರಾಜಧಾನಿಯಲ್ಲಿ ತರುಣಿಯ ಮೇಲೆ ಗ್ಯಾಂಗ್ ರೇಪ್, ಬರ್‍ಭರ ಹತ್ಯೆ”

“ಏಳು ವರ್‍ಷದ ಬಾಲೆಯ ಮೇಲೆ ಅತ್ಯಾಚಾರ, ಕೊಲೆಗೈದು ಪರಾರಿ.”

ಅವನು ದಿನಪತ್ರಿಕೆಯನ್ನು ಮುಚ್ಚಿದ. ಎಲ್ಲಿ ಬಿದ್ದಿತೋ ಅಲ್ಲಿಯ ಪತ್ರಿಕೆಯನ್ನು ಬಿಸಾಡಿ ಎದ್ದು ನಡೆಯ ತೊಡಗಿದ. ಅವನು ಹೋದ ದಾರಿಯನ್ನೇ ದಿಟ್ಟಿಸುತ್ತಾ ಪತ್ರಿಕೆಯವ ವ್ಯಂಗ್ಯವಾಗಿ ನಕ್ಕು ಅಂದ. “ಬಹುಶ ಅವನಿಗೆ ನೆಮ್ಮದಿ ಸಿಕ್ಕಿರಬಹುದು.”

ಸೂರ್‍ಯ ನಿಧಾನವಾಗಿ ಮೇಲೇರುತ್ತಿದ್ದಂತೆ ಅದರ ಇರುವು ನಿಧಾನವಾಗಿ ಜನರ ಮೇಲೆ ಪರಿಣಾಮ ಬೀಳುತ್ತಿತ್ತು. ಆ ಜನದಟ್ಟಣಿಯ ರಸ್ತೆಯಲ್ಲಿ ಅವನು ವೇಗವಾಗಿ ನಡೆಯುತ್ತಿದ್ದ. ಬಿಸಿಲು ಅವನ ನೆತ್ತಿಯನ್ನು ಚುಚ್ಚುತ್ತಿತ್ತು. ಪತ್ರಿಕೆಯ ಸುದ್ದಿಗಳು ಅವನ ಅಲ್ಪಸ್ವಲ್ಪ ನೆಮ್ಮದಿಯನ್ನು ಕೆಡಿಸಿದ್ದುವು. ತಲೆಕೆಟ್ಟವನಂತೆ ಅವನು ಜನರ ಮಧ್ಯೆ ದಾರಿ ಮಾಡಿಕೊಂಡು ನಡೆಯುತ್ತಿದ್ದ. ಅವನಿಗೆ ನೆಮ್ಮದಿ ಬೇಕಿತ್ತು. ಹಲವಾರು ಕಿಲೋಮೀಟರ್ ದೂರ ನಡೆದರೂ ಅವನಿಗೆ ನೆಮ್ಮದಿಯ ತಾಣ ಸಿಗಲಿಲ್ಲ. ಎಲ್ಲಿ ನೋಡಿದರೂ ಗಗನ ಚುಂಬಿತ ಕಟ್ಟಡಗಳು, ರಸ್ತೆಯಲ್ಲಿ ಒಂದೇ ಸಮನೆ ಕಪ್ಪು ಹೊಗೆ ಕಾರುತ್ತಾ ನಿರಂತರ ಓಡಾಡುವ ವಾಹನಗಳು, ರಸ್ತೆಯ ಇಕ್ಕೆಲಗಳಲ್ಲಿ ಏನೋ ಕಳಕೊಂಡವರಂತೆ ಪೂರ್ವದಿಂದ ಪಶ್ಚಿಮಕ್ಕೆ, ಪಶ್ಚಿಮದಿಂದ ಪೂರ್‍ವಕ್ಕೆ ಓಡಾಡುವ ಮನುಷ್ಯರು, ಮುಖದಲ್ಲಿ ನಗುವಿಲ್ಲ. ಚಿಂತನೆಯ ಗೆರೆಗಳು, ನಿಂತು ಮಾತಾಡುವವರಿಲ್ಲ. ಪರಿಚಯ ಮಾಡಿಸಿಕೊಳ್ಳಲು ಪುರುಸೊತ್ತಿಲ್ಲ. ಯಾಂತ್ರಿಕ ಬದುಕು, ಸ್ನೇಹ, ಪರಿಚಯ, ಒಂದಿಷ್ಟು ನಗುಮುಖ, ಯಾವುದೂ ಅಗತ್ಯವಿಲ್ಲದೆ ಮುಖ ಗಂಟಿಕ್ಕಿಕೊಂಡು ಓಡಾಡುವ ಯಾಂತ್ರಿಕ ಮನುಷ್ಯರು. ಅವನಿಗೆ ತಾಳ್ಮೆ ತಪ್ಪಿತು. ಇನ್ನೆಷ್ಟು ದೂರ ನಡೆಯಲಿ? ಈ ಜನಜಂಗುಳಿಯ ಮಧ್ಯೆ ನೆಮ್ಮದಿಯಿದ್ದ ತಾಣವನ್ನು ಎಲ್ಲಿ ಹುಡುಕುವುದು? ಅವನು ಸುಸ್ತಾಗಿ ಪುಟ್‌ಪಾತಿನ ಮಧ್ಯೆ ದೃಢವಾಗಿ ನಿಂತು ಬಿಟ್ಟ.

ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಓಡಾಡುವ ವಾಹನಗಳು ನಿಂತು ಕೊಂಡವು. ದೂರದಿಂದ ವಾಹನಗಳ ಕರ್‍ಕಶ ಹಾರ್‍ನು ಕಿವಿಯ ತಮ್ಮಟೆಯನ್ನು ಭೇದಿಸುತ್ತಿತ್ತು. ಜನರು ತಂಡೋಪ ತಂಡವಾಗಿ ರಸ್ತೆಯಲ್ಲಿ, ಪುಟ್‌ಪಾತಿನಲ್ಲಿ ಅವನಿಗೆ ಎದುರಾಗಿ ಓಡಿ ಬರುತ್ತಿದ್ದರು. ಎಲ್ಲರೂ ದಿಗಿಲುಗೊಂಡು ಕಂಡ ಕಂಡ ದಾರಿಯಲ್ಲಿ ಓಡುತ್ತಿದ್ದರು. ದೂರದಲ್ಲಿ ದಟ್ಟಣಿಯ ಹೊಗೆ ಕಾಣುತ್ತಿತ್ತು. ಬೆಂಕಿಯ ಕೆನ್ನಾಲಗೆ ಮೇಲೇರುತ್ತಿತ್ತು. ರೊಚ್ಚಿಗೆದ್ದ ಜನರ ಗುಂಪೊಂದು ಲಾಂಗು, ಮಚ್ಚು ಬೀಸುತ್ತಾ ಮುನ್ನುಗ್ಗುತ್ತಿತ್ತು. ಅಂಗಡಿ ಬಾಗಿಲುಗಳು ಪಠ ಪಠನೆ ಮುಚ್ಚಿಕೊಂಡವು. ಯಾರೋ ಧಡಿಯ ಓಡುವ ರಭಸಕ್ಕೆ ಪುಟ್‌ಪಾತಿನ ಮಧ್ಯೆ ನಿಂತಿದ್ದ ಅವನಿಗೆ ಡಿಕ್ಕಿ ಹೊಡೆದ. ದಡಿಯನ ಹೊಡೆತಕ್ಕೆ ಸಾವರಿಸಿಕೊಂಡು ಅವನು ಬದಿಗೆ ಸರಿದ.

“ಏ ಪುಣ್ಯಾತ್ಮ ನಡುದಾರಿಯಲ್ಲಿ ಯಾಕೆ ಸಾಯಲು ನಿಂತಿದ್ದೀ, ನಿನಗೆ ಜೀವ ಭಯವಿಲ್ಲವೇ?” ಧಡಿಯ ಒಂದು ಕ್ಷಣ ನಿಂತು ಗದರಿಸಿದ. ಧಡಿಯನ ಗದರಿಕೆ ಅವನ ಮೇಲೆ ಯಾವುದೇ ಪರಿಣಾಮ ಬೀಳಲಿಲ್ಲ. “ನನಗೆ ಜೀವ ಭಯ ಇಲ್ಲ. ಆದರೆ ನೆಮ್ಮದಿ ಕಳಕೊಂಡ ಭಯವಿದೆ” ಅವನು ಉತ್ತರಿಸಿದ.

“ಏನು? ನಿನಗೆ ನೆಮ್ಮದಿ ಇಲ್ಲ ಅಲ್ಲವೇ? ನಿನಗೆ ನೆಮ್ಮದಿ ಬೇಕಾದರೆ ಬಾ ನನ್ನೊಂದಿಗೆ ಓಡು.” ದಢಿಯ ಅವನ ಕೈ ಹಿಡಿದು ಎಳೆದುಕೊಂಡು ಓಡ ತೊಡಗಿದ. ಬಹಳ ದೂರ ಇಬ್ಬರೂ ಓಡಿದರು. ತೀರಾ ಸುಸ್ತಾಗಿ ಇಬ್ಬರೂ ರಸ್ತೆ ಅಂಚಿನಲ್ಲಿ ನಿಂತರು. ಗಲಭೆ ಸ್ಥಳದಿಂದ ದೂರವಾದರೂ ಅವರು ಇನ್ನೊಂದು ಜನದಟ್ಟಣೆಯ ಪ್ರದೇಶಕ್ಕೆ ಬಂದಿದ್ದರು. ಇದು ಇನ್ನೂ ದೊಡ್ಡ ವ್ಯವಹಾರಿಕ ತಾಣವಾಗಿದ್ದು ರಸ್ತೆಯಲ್ಲಿ ಮಿಸುಕಾಡಲೂ ಸಾಧ್ಯವಿಲ್ಲದಷ್ಟು ಜನರು ಓಡಾಡುತ್ತಿದ್ದರು. ದಢಿಯ ಆಗಂತುಕನ ಕೈ ಬಿಡಿಸಿ ಅವನ ಭುಜತಟ್ಟಿ ಹೇಳಿದ.

“ಗೆಳೆಯಾ, ಈ ದೇಶದಲ್ಲಿ ನೆಮ್ಮದಿಯನ್ನು ಹುಡುಕದ ಸಾಹಸ ಮಾಡಬೇಡ. ಅದು ಮರೀಚಿಕೆ. ನಮ್ಮನ್ನು ನಂಬಿಕೊಂಡ ನಮ್ಮ ಸಂಸಾರವನ್ನು ಉಳಿಸುವ, ಪೋಷಿಸುವ ಹಾಗೂ ಅದರೊಂದಿಗೆ ನಮ್ಮ ಜೀವವನ್ನು ಕೂಡಾ ರಕ್ಷಿಸುವುದರಲ್ಲಿಯೇ ನಮ್ಮ ಆಯುಷ್ಯ ಮುಗಿಯುತ್ತದೆ. ಇನ್ನು ನೆಮ್ಮದಿಯ ಮಾತೆಲ್ಲಿಂದ ಬಂತು? ನಿನಗೆ ಒಳ್ಳೆಯದಾಗಲಿ.” ಧಡಿಯ ಜನ ದಟ್ಟಣೆಯ ಮಧ್ಯೆ ಮರೆಯಾದ.

ಅವನ ನೆಮ್ಮದಿ ಸಂಪೂರ್‍ಣ ಕೆಟ್ಟಿತು. ಮನಸ್ಸು ಅಲ್ಲೋಲ ಕಲ್ಲೋಲವಾಯಿತು. ಯಾತಕ್ಕಾಗಿ ನೆಮ್ಮದಿಯಿಲ್ಲದ ಈ ಬದುಕು? ಅವನು ಭಾರವಾದ ಹೆಜ್ಜೆಯಿಂದ ಮುಂದೆ ನಡೆಯ ತೊಡಗಿದ. ಎಷ್ಟು ನಡೆದರೂ, ಎಲ್ಲಿ ತಿರುಗಿದರೂ ದಟ್ಟಣೆಯ ಜನಸಂಖ್ಯೆ, ಅಂಗಡಿಗಳು ಹಾಗೂ ಗಗನ ಚುಂಬಿತ ಕಟ್ಟಡಗಳು ಮಾತ್ರ ಕಾಣುತ್ತಿದ್ದುವು. ಅವನ ಕಣ್ಣಿಗೆ ಗುಡ್ಡ, ಬೆಟ್ಟ, ಬಯಲು, ಹರಿಯುವ ನದಿ, ಕಾಲುವೆ, ತೊರೆ, ಹಸಿರು ಮರಗಿಡಗಳು, ಪಶು-ಪಕ್ಷಿಗಳು, ಪ್ರಾಣಿಗಳು ಕಾಣಲೇ ಇಲ್ಲ. ಕಾಣಲು ಸಾಧ್ಯವೂ ಇಲ್ಲ. ಅವನಿಗೆ ಅಂತಹ ಸುಂದರ ಪ್ರಕೃತಿ ಬೇಕಿತ್ತು. ಅಂತಹ ಸುಂದರ ತಾಣವನ್ನು ಅವನು ಅರಸುತ್ತಿದ್ದ. ಅವನು ದೇಹದ ಸಮತೋಲನ ಕಳೆದುಕೊಳ್ಳುವ ಸ್ಥಿತಿಗೆ ಬಂದ. ಅವನ ದೇಹ ಸ್ವಲ್ಪ ಮಾಲುತ್ತಿತ್ತು. ಅನತಿ ದೂರದಲ್ಲಿ ಜನದಟ್ಟಣೆಯ ಮಧ್ಯೆ ಕದ್ದು ಕದ್ದು ತರುಣನೊಬ್ಬ ಕೆಲವರಿಗೆ ಕರಪತ್ರ ಹಂಚುತ್ತಿದ್ದ. ಅವನು ಆ ತರುಣನನ್ನು ಸಮೀಪಿಸಿ ಕರಪತ್ರ ಬೇಡಿ ಪಡಕೊಂಡ. ಅವನ ಆಸಕ್ತಿ ನೋಡಿ ಆ ತರುಣ ಅವನನ್ನು ರಸ್ತೆಯ ಬದಿಯ ಬೃಹದಾಕಾರದ ಕಟ್ಟಡದ ಮೂಲಗೆ ಕರಕೊಂಡು ಹೋದ.

“ನೀವೂ ನೆಮ್ಮದಿಯನ್ನು ಅರಸುತ್ತಿರುವಿರಲ್ಲವೇ?” ತರುಣನ ನೇರ ಪ್ರಶ್ನೆಗೆ ಅವನ ಮುಖ ಅರಳಿತು.

“ಹೌದು ನನಗೆ ನೆಮ್ಮದಿ ಬೇಕಾಗಿದೆ”

“ಈ ದೇಶದಲ್ಲಿ ನೆಮ್ಮದಿ ಸುಲಭದಲ್ಲಿ ಸಿಗದು. ಅದು ಮರೀಚಿಕೆ. ಅದಕ್ಕಾಗಿ ಕ್ರಾಂತಿಯಾಗಬೇಕು. ಕ್ರಾಂತಿ, ರಕ್ತ ಕ್ರಾಂತಿ, ದೇಶವನ್ನು ಬಂದೂಕಿನ ತುದಿಯಿಂದ ಆಳಿದರೇನೇ ನಿಮಗೆ ನೆಮ್ಮದಿ, ಶಾಂತಿ ದೊರೆಯುತ್ತದೆ. ಆ ತರುಣ ತನ್ನ ಕೈ ಚೀಲದಿಂದ ಕೆಲವೊಂದು ಕೆಂಪು ಕರಪತ್ರ, ಪುಸ್ತಕ ನೀಡಿದ. ಆಗುಂತಕನಿಗೆ ಒಮ್ಮೆಲೆ ದಿಗಿಲಾಯಿತು.

“ಇಲ್ಲ….ಇಲ್ಲ, ಇಂತಹ ನೆಮ್ಮದಿ ನನಗೆ ಬೇಡ. ಈ ನೆಮ್ಮದಿಯನ್ನು ನಾನು ಅರಸುತ್ತಿಲ್ಲ ಕ್ಷಮಿಸಿ.” ಅವನು ಆ ತರುಣ ಕೊಟ್ಟ ಕರಪತ್ರ, ಪುಸ್ತಕಗಳನ್ನು ಅವನಿಗೆ ಹಿಂತಿರುಗಿಸಿ, ಬರ ಬರನೆ ನಡೆದ. ಮತ್ತೆ ಜನಸಂದಣಿಯಲ್ಲಿ ಸೇರಿ ಹೋದ.

ಅವನು ಬಹಳ ದೂರ ನಡೆಯುತ್ತಲೇ ಇದ್ದ. ದಣಿವು, ನಿರಾಶೆ, ಹತಾಶೆ ಅವನನ್ನು ಕಾಡುತ್ತಿತ್ತು. ಅನತಿ ದೂರದಲ್ಲಿ ಒಂದು ಗಗನ ಚುಂಬಿತ ಕಟ್ಟಡಗಳ ಕೆಳ ಭಾಗದಲ್ಲಿ ಕೆಲವು ಐಷಾರಾಮಿ ಕಾರುಗಳು ನಿಂತಿದ್ದವು. ಅದರ ಪಕ್ಕದ ದ್ವಾರದ ಬಳಿ ಕೆಲವು ಜನರು ಒಂದೇ ಬಗೆಯ ದಿರಿಸುಗಳನ್ನು ಉಟ್ಟುಕೊಂಡಿದ್ದು ಜನರನ್ನು ನಗುಮುಖದಿಂದ ಸ್ವಾಗತಿಸುತ್ತಿದ್ದರು. ದ್ವಾರದ ಮೇಲೆ ಒಂದು ಫಲಕ, “ಬೆಳಕಿನೆಡೆಗೆ” ಅವನಿಗೆ ಸಂತೋಷವಾಯಿತು. ಅವನು ವೇಗವಾಗಿ ಆ ಕಡೆಗೆ ನಡೆದು ಹೋದ. ನಗುಮುಖದಿಂದ ಸ್ವಾಗತಕಾರರು ಅವನನ್ನು ಸ್ವಾಗತಿಸಿ ಒಳಗೆ ಕಳುಹಿಸಿದರು. ಅದೊಂದು ದೊಡ್ಡ ಸಭಾಂಗಣ, ಸಭಾಂಗಣ ಜನರಿಂದ ಭರ್‍ತಿಯಾಗಿತ್ತು. ವೇದಿಕೆಯ ಮೇಲೆ ನಾಲ್ಕಾರು ಜನ ಆಸೀನರಾಗಿದ್ದರು. ಒಬ್ಬರು ನಿರರ್‍ಗಳವಾಗಿ ಭಾಷಣ ಮಾಡುತ್ತಿದ್ದರು. ಅವನು ಸಭಿಕರಲ್ಲಿ ಒಬ್ಬನಾಗಿ ಕುಳಿತುಕೊಂಡ.

“ಸ್ವಾತಂತ್ರ್ಯ ಪೂರ್‍ವದಿಂದಲೂ ನಮ್ಮ ಸಂಸ್ಕೃತಿಯ ಮೇಲೆ ದಬ್ಬಾಳಿಕೆ ನಡೆದಿದೆ. ಇದಕ್ಕೊಂದು ಪರಿಹಾರ ಆಗಲೇಬೇಕು. ಅದಕ್ಕಾಗಿ ನಾವೆಲ್ಲಾ ಒಂದಾಗಬೇಕು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು” ಭಾಷಣ ಮುಂದುವರಿಯುತ್ತಲೇ ಇತ್ತು. ಜನರಲ್ಲಿ ಆವೇಶ ಉಕ್ಕಿ ಹರಿಯುತ್ತಿತ್ತು. ಅವನು ಎದ್ದು ನಿಂತ. ಹೊರಡಲು ಅಣಿಯಾದ. ಕಾರ್ಯಕರ್‍ತನೊಬ್ಬ ಓಡಿ ಬಂದ.

“ಕುಳಿತುಕೊಳ್ಳಿ. ಮುಖ್ಯ ಭಾಷಣ ಇನ್ನು ಆಗಲಿಕ್ಕಿದೆ. ನಿಮಗೆ ಏನು ಬೇಕಾಗಿದೆ ಹೇಳಿ?” ಅವನು ವಿನಂತಿಸಿದ.

“ಇಲ್ಲ ನನಗೆ ಭಾಷಣದ ಅಗತ್ಯವಿಲ್ಲ. ನನಗೆ ನೆಮ್ಮದಿ ಬೇಕು. ಆದರೆ ಅದಿಲ್ಲಿ ಸಿಗಲಾರದು.” ಅವನು ಕಾರ್‍ಯಕರ್‍ತನನ್ನು ಬದಿಗೆ ಸರಿಸಿ, ಸರಸರನೆ ಮೆಟ್ಟಲಿಳಿದು ಜನಸಂದಣಿಯಲ್ಲಿ ಸೇರಿ ಹೋದ.

ಸೂರ್ಯ ಅಸ್ತಮಿಸುವ ಹೊತ್ತು ಸಮೀಪಿಸಿತು. ಅವನ ಪ್ರಯಾಣ ನಿಂತಿರಲಿಲ್ಲ. ಅವನು ಆ ಜನ ಸಂದಣಿಯಿಂದ ದೂರ ಹೋಗಲು ಪ್ರಯತ್ನಿಸಿದಷ್ಟೂ ಜನಸಂದಣಿ ಜಾಸ್ತಿಯಾಗುತ್ತಿತ್ತು. ಗಗನ ಚುಂಬಿತ ಕಟ್ಟಡಗಳ ಸಂಖ್ಯೆ ಏರ ತೊಡಗಿತು. ವಾಹನಗಳು, ಜನರ ಓಡಾಟ ಜಾಸ್ತಿಯಾಗ ತೊಡಗಿತು. ಅವನು ಪಾದಾಚಾರಿಗಳ ಮುಖಗಳನ್ನು ನೋಡುತ್ತಿದ್ದ. ಅವರ ಮುಖದಲ್ಲಿ ಉದ್ವಿಗ್ನತೆ, ಗಡಿಬಿಡಿ, ಭಯ, ಅವಸರ, ಚಿಂತೆ ಕಂಡು ಬರುತ್ತಿತ್ತು. ನೆಮ್ಮದಿ ಮಾತ್ರ ಯಾರ ಮುಖದಲ್ಲೂ ಕಂಡು ಬರಲಿಲ್ಲ. ಅವನು ಹತಾಶನಾದ ಹೊಟ್ಟೆ ಚುರುಗುಟ್ಟುತ್ತಿತ್ತು. ಅವನಿಗೆ ವಿಶ್ರಾಂತಿಯ ಅವಶ್ಯಕತೆ ಇತ್ತು. ಹಸಿವು ಒಂದಿಲ್ಲದಿರುತಿದ್ದರೆ ಮನುಷ್ಯ ಇನ್ನೂ ಮೃಗೀಯನಾಗುತ್ತಿದ್ದನೋ ಏನೋ. ಅವನು ತನ್ನಷ್ಟಕ್ಕೇ ಅಂದುಕೊಂಡ.

“ಸರ್….ಸರ್…..”

ಯಾರೋ ಕರೆದಂತಾಗಿ ಅವನು ತಿರುಗಿ ನೋಡಿದ. ಚಿಗುರು ಮೀಸೆಯ ಹುಡುಗನೊಬ್ಬ ವೇಗವಾಗಿ ಅವನ ಹಿಂದೆಯೇ ಬರುತ್ತಿದ್ದ. ಹತ್ತಿರವಾಗುತ್ತಿದ್ದಂತೆ ಆ ಹುಡುಗ ಮೆಲ್ಲನೆ ಹೇಳಿದ.

“ಸರ್… ಒಳ್ಳೆಯ ಹೋಟೇಲಿದೆ. ರೂಮೂ ಇದೆ. ಬನ್ನಿ ಸಾರ್, ನಾನು ಮಾಡಿಸಿ ಕೊಡುತ್ತೇನೆ. ಇಲ್ಲೇ ಪಕ್ಕದಲ್ಲೇ ನನಗೇನೂ ನೀವು ಕೊಡುವುದು ಬೇಡ. ಆಗುಂತಕ ನಿಂತುಕೊಂಡ. ಆ ಹುಡುಗನನ್ನು ಒಮ್ಮೆ ಮೇಲೆ ಕೆಳಗೆ ನೋಡಿದ.

“ಬೇಡ… ಬೇಡ… ನನಗೆ ಅದರ ಅಗತ್ಯವಿಲ್ಲ. ನನಗೆ ನೆಮ್ಮದಿ ಬೇಕು. ಅದೆಲ್ಲಿ ಸಿಗುತ್ತದೆ ಹೇಳು?

“ಅದನ್ನೇ ಸಾರ್ ನಾನು ಹೇಳುತ್ತಿರುವುದು, ಒಳ್ಳೆಯ ನೇಪಾಳಿ ಹುಡುಗಿಯರಿದ್ದಾರೆ ಸಾರ್, ನೀವು ಹೂ.. ಅನ್ನಿ ಸಾರ್, ನಿಮ್ಮನ್ನು ಹೋಟೇಲಿನಲ್ಲಿ ಬಿಟ್ಟು ಬರುತ್ತೇನೆ. ನನಗೇನೂ ಕಮೀಷನ್ ಕೊಡಬೇಡಿ. ಬನ್ನಿ ಸಾರ್….”

ಆ ಹುಡುಗ ಉತ್ಸಾಹದಿಂದ ಹೇಳುತ್ತಿದ್ದ. ಕೇಳುತ್ತಿದ್ದಂತೆ ಆಗುಂತಕನ ಕೋಪ ನೆತ್ತಿಗೇರಿತು. ಅವನು ತಾಳ್ಮೆ ಕಳಕೊಂಡ.

“ಥೂ…! ಹಲ್ಕಾ…! ನಾನು ಅಂತವನಲ್ಲ. ಅಂತಹ ನೆಮ್ಮದಿ ನನಗೆ ಬೇಡ. ಈ ಜಂಜಾಟ, ಉದ್ವಿಗ್ನತೆ, ಭಯ, ಬೇಸರದಿಂದ ದೂರವಾದ ನೆಮ್ಮದಿಬೇಕು. ಸುಂದರ ಪ್ರಕೃತಿಯನ್ನು ಕಾಣಬೇಕು. ಬೆಟ್ಟ, ಗುಡ್ಡ, ತೊರೆ, ಹರಿಯುವ ನದಿ, ಪ್ರಾಣಿಪಕ್ಷಿಗಳು… ಕಣ್ಮರೆಯಾಗುತ್ತಿರುವ ಪ್ರಕೃತಿಯನ್ನು ನಾನು ನೋಡಿ ನೆಮ್ಮದಿ ಪಡಬೇಕು. ಆ ನೆಮ್ಮದಿ ಬೇಕು ನೀನು ಕೊಡಬಲ್ಲೆಯಾ?” ಹುಡುಗ ಒಮ್ಮೆ ಅಧೀರನಾದ. ಇವನು ಯಾವ ತರಹದ ವ್ಯಕ್ತಿ ಎಂದು ಅರ್‍ಥಮಾಡಲಾಗದೆ ಕೊಸರಿದ. ಸ್ವಲ್ಪ ಕ್ಷಣ ಸಾವರಿಸಿಕೊಂಡು ಅವನು ನಗುತ್ತಲೇ ಉತ್ತರಿಸಿದ.

“ಸಾರ್… ಆ ಕಟ್ಟಡ ನೋಡಿ ಸಾರ್. ಏಳು ಮಳಿಗೆಯ ಕಟ್ಟಡ, ನೀವು ಅಲ್ಲಿಗೆ ಹೋಗಿ ಸಾರ್, ಏಳನೇ ಮಳಿಗೆಯಲ್ಲಿ ಒಂದು ಕಚೇರಿ ಇದೆ. ಅಲ್ಲಿ ನೀವು ಇಷ್ಟಪಡುವ ನೆಮ್ಮದಿಗೆ ಅವಕಾಶ ಇದೆ. ಅಲ್ಲಿ ವಿಚಾರಿಸಿ ಸಾರ್…” ಆ ಹುಡುಗ ಹೇಳುತ್ತಲೇ ತನ್ನ ವ್ಯಾಪಾರಕ್ಕಾಗಿ ಜನರ ಮಧ್ಯೆ ಸೇರಿ ಹೋದ.

ಅವನು ನಿಧಾನವಾಗಿ ಆ ಕಟ್ಟಡದತ್ತ ತೆರಳಿದ. ಕತ್ತಲು ಆವರಿಸುತ್ತಿದ್ದಂತೆ ಪಟ್ಟಣ ತೆರೆಯ ತೊಡಗಿತು. ರಸ್ತೆಯ ಲೈಟುಗಳು ಉರಿಯ ತೊಡಗಿದವು. ಅಂಗಡಿ, ಹೋಟೆಲುಗಳು, ಲೈಟುಗಳಿಂದ ಮಿನುಗ ತೊಡಗಿದುವು. ಅಲ್ಲಲ್ಲಿ ಸುಗಂಧದ ಪರಿಮಳ ಹೊರಸೂಸುತ್ತಿತ್ತು. ಇಡೀ ಪಟ್ಟಣವೇ ಜೀವ ಕಳೆ ಬಂದಂತೆ ವಿಜೃಂಭಿಸ ತೊಡಗಿತು. ಇದಾವುದರ ಪರಿವೆಯಿಲ್ಲದೆ ಅವನು ಆ ಕಟ್ಟಡದ ಲಿಫ್ಟನ್ನು ಏರಿ ಏಳನೇ ಮಳಿಗೆಗೆ ಬಂದ. ಅಲ್ಲಿ ನಿಂತು ಅವನು ಎದುರಿಗೆ ದೃಷ್ಟಿ ಹಾಯಿಸಿದ. ಅಲ್ಲೊಂದು ವಿಶಾಲವಾದ ನಾಮಫಲಕ ಇತ್ತು. “ನೆಮ್ಮದಿ”. ಅವನು ಆ ನೆಮ್ಮದಿ ನಾಮಫಲಕದ ಕೆಳಗಿರುವ ಕರೆಗಂಟೆಯನ್ನು ಒತ್ತಿದ. ಬಾಗಿಲು ತೆರೆದುಕೊಂಡಿತು. ಸುಮಾರು ನಲ್ವತ್ತು-ನಲ್ವತೈದು ವರ್‍ಷದ ಮಹಿಳೆಯೊಬ್ಬಳು ನಗುಮುಖದಿಂದ ಅವನನ್ನು ಸ್ವಾಗತಿಸಿದಳು.

“ಬನ್ನಿ… ಬನ್ನಿ… ಒಳಗೆ ಬನ್ನಿ… ಕುಳಿತುಕೊಳ್ಳಿ…”

ಅವನು ಒಳ ಹೊಕ್ಕು ಹತ್ತಿರದಲ್ಲಿದ್ದ ಸೋಫಾದ ಮೇಲೆ ಕುಳಿತುಕೊಂಡ. ಅವನ ಸಮೀಪದಲ್ಲೇ ಅವಳು ನಯವಾಗಿ ಕುಳಿತಳು. ಅವಳು ಮೈಗೆ ಹಾಗೂ ಬಟ್ಟೆಗಳಿಗೆ ಸಿಂಪಡಿಸಿದ ಸುಗಂಧ ದ್ರವ್ಯದ ಪರಿಮಳ ಇಡೀ ಕೋಣೆಯನ್ನು ಆವರಿಸಿತ್ತು. ಪಾಶ್ಚಾತ್ಯ ಸಂಗೀತ ಮೆಲ್ಲನೆ ರೂಮಿನ ಮೂಲೆಯಿಂದ ತೇಲಿ ಬರುತ್ತಿತ್ತು. ಅವನಿಗೆ ಕಸಿವಿಸಿಯಾಯಿತು. ಅವನ ಮೌನವನ್ನು ಅವಳೇ ಮುರಿದಳು.

“ನೀವು ತುಂಬಾ ದಣಿದಿದ್ದೀರಿ, ಕುಡಿಯಲು ಏನಾದರೂ….”

ಅವನು ಉತ್ತರಿಸುವ ಮೊದಲೇ ತಂಪು ಪಾನೀಯ ಹಿಡಿದುಕೊಂಡು ತನ್ನ ಅರೆ ಬತ್ತಲೆ ದೇಹವನ್ನು ಪ್ರದರ್‍ಶಿಸುತ್ತಾ ತರುಣಿಯೊಬ್ಬಳು ಪ್ರತ್ಯಕ್ಷಳಾದಳು. ಅವನಿಗೆ ಗಾಬರಿಯಾಯಿತು. ಹುಡುಗನ ಕುಚೋದ್ಯದ ಕೃತ್ಯ ಅವನಿಗೆ ಈಗ ಅರ್‍ಥವಾಯಿತು. ಅವನು ಎದ್ದು ನಿಂತ.

“ಕ್ಷಮಿಸಿ, ನಾನು ನೆಮ್ಮದಿ ಹುಡುಕುತ್ತಾ ಇಲ್ಲಿಗೆ ಬಂದೆ. ಆದರೆ ನನ್ನ ನೆಮ್ಮದಿ ಇದಲ್ಲ. ಅದನ್ನು ನೀವು ಅರ್‍ಥ ಮಾಡಿಕೊಳ್ಳಲಾರಿರಿ. ನನಗೆ ನನ್ನದೇ ರೀತಿಯ ನೆಮ್ಮದಿ ಬೇಕು…” ಅವನಂದ.

ಅವನ ಸಂಕಟ ನೋಡಿ ಆ ಮಧ್ಯ ವಯಸ್ಸಿನ ಹೆಂಗಸು ನಕ್ಕಳು.

“ಅರ್‍ಥವಾಯಿತು ಬಿಡಿ. ನಿಮಗೆ ಮಸಾಜಿನ ಅವಶ್ಯಕತೆ ಇಲ್ಲದಿದ್ದರೆ ಬಿಟ್ಟು ಬಿಡಿ. ಬೇರೆ ವ್ಯವಸ್ಥೆಯೂ ನಮ್ಮಲ್ಲಿದೆ.” ಅವಳು ಕಣ್ಣು ಸನ್ನೆ ಮಾಡಿದಳು. ಒಂದೆರಡು ಕ್ಷಣದಲ್ಲಿ ಆರೇಳು ಹುಡುಗಿಯರು ಅವನನ್ನು ಸುತ್ತುವರಿದರು. ಎಲ್ಲರಲ್ಲೂ ಉಡುಗೆತೊಡುಗೆಯ ಬರಗಾಲವಿತ್ತು. ಅವನು ಅವರೆಲ್ಲರನ್ನೂ ದೂಡಿಕೊಂಡು ಹೊರ ನಡೆದ. ವೇಗವಾಗಿ ನಡೆದುಕೊಂಡು ಲಿಪ್ಟಿನ ಹೊಳ ಹೊಕ್ಕು ಕಟ್ಟಡದ ತಳಭಾಗಕ್ಕೆ ಬಂದ.

ಪುಟ್‌ಪಾತ್‌ನಲ್ಲಿ ಜನ ಪೂರ್ವದಿಂದ ಪಶ್ಚಿಮಕ್ಕೆ, ಪಶ್ಚಿಮದಿಂದ ಪೂರ್ವಕ್ಕೆ ನಡೆದಾಡುತ್ತಿದ್ದರು. ಓಡಿಯಾಡುತ್ತಿದ್ದರು. ಅದೇ ಜನ ದಟ್ಟಣಿ, ಅದೇ ವಾಹನಗಳು, ಅದೇ ರಸ್ತೆ ಬದಿ ವ್ಯಾಪಾರಿಗಳು, ಅದೇ ಅಂಗಡಿಗಳು, ಅದೇ ಯಾಂತ್ರಿಕ ಮನುಷ್ಯರು, ಅದೇ ಕರ್‍ಕಶ ಹಾರ್ನ್‌ಗಳು, ಹೊಗೆಗಳು, ಎಲ್ಲರ ಮುಖದಲ್ಲೂ ಉದ್ವಿಗ್ನತೆ, ಬೇಸರ, ಚಿಂತೆ, ಓಡಾಟ, ಅತೃಪ್ತಿ, ಭಯ, ಅವಸರ, ಗಡಿಬಿಡಿ….

ಅವನೊಂದು ನಗು ನಕ್ಕ. ಅದು ಹುಚ್ಚು ನಗೆಯೋ, ಸಹಜ ನಗುವೋ ಎಂದು ಯಾರಿಗೂ ಗೊತ್ತಾಗಲಿಲ್ಲ. ಯಾಕೆಂದರೆ ಅವನು ಅದಾಗಲೇ ಆ ಜನದಟ್ಟಣಿಯಲ್ಲಿ ಲೀನನಾದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿಯ ಸೆಲೆ
Next post ಎಲ್ಲೆಲ್ಲೂ ಕನ್ನಡ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…