ರಣ ಬಿಸಿಲು ಕೊಡೆ ಹಿಡಿದಿದೆ
ನೆಲದ ಒಡಲಿಗೆ ಸಣ್ಣಗೆ ಬಿರುಕು
ಕದಲದ ಭಂಗಿ, ನೆಟ್ಟ ನೋಟ
ಏಕಸ್ಥ ಧ್ಯಾನ
ಕಲ್ಲಾಗಿ ಕೂತು ಕಾಲವಾಗುವ ಬಯಕೆ
ಕಾಯುವಿಕೆ ಎಂದರೆ ಇದೇ ಇರಬೇಕು.
ಒಡಲು ಬಯಸಿದ ಹಸಿವು
ಕಾಲಬುಡದಲಿ ಸಿಗುವುದೆಂದು
ಮೇಯುವುದು ಮರೆತು ಹೋದರೆ
ಬಂಜರಾದರೆ ಭೂಮಿ
ಅನಾಹತದ ತಹತಹಕೆ
ಅದುಮಿಕೊಳ್ಳುವುದು ಅದು ಹೇಗೆ?
ನೋಯುವುದೆಂದರೆ ಇದೇ ಇರಬೇಕು.
ತಳದ ಜಲ ಇಂಗುವವರೆಗೂ
ಚೈತ್ರದ ಹಾಸಿಗೆಗೆ ಚಿಗುರು ಮೂಡಿಸಿ
ಸಾಕ್ಷಾತ್ಕಾರದ ಸಂಗವೆಂದು
ಭಾವಪರದೆಗೆ ನಿರ್‍ಭಾವುಕತೆಯ ಬಣ್ಣ
ಬಳಿದು, ಜಗದ ಮೋಹ ಮೀರಿದೆನೆಂಬ
ಅಲೌಕಿಕದ ಭ್ರಮೆ ಹೊತ್ತ ನಿಲುವು
ಕೊರಗುವುದೆಂದರೆ ಇದೇ ಇರಬೇಕು
ಮಿತಿಗೊಪ್ಪದ ಮನವನ್ನು
ಸಂಸ್ಕಾರವೆಂಬ ಅತಿರೇಕದ ಆಯುಧ
ಕ್ಷಣಕ್ಷಣವೂ ಬಿಡದೆ
ಅಕ್ಕಿಯಾಗಿಸಲು ಕುದಿಸುವ ಭತ್ತ
ತಿಕ್ಕಿ ತೀಡಿ ಮನದ ಕುಲುಮೆಯಲಿ
ಕಾಯಲಿಟ್ಟ ಕಾಕಂಬಿಯ ರಸ
ಬೇಯುವುದೆಂದರೆ ಇದೇ ಇರಬೇಕು
ಬೆಂಕಿಯನ್ನು ಅಂಗೈಯಲ್ಲಿಟ್ಟುಕೊಂಡೆ
ಕಡಲ ಭೊರ್‍ಗರೆತಕ್ಕೆ ಕಿವುಡಾಗುತ್ತಲೇ
ನಮೆದು ಸಣ್ಣದಾಗುತ್ತಲೇ
ಮತ್ತೆ ಹೊಳಪಿನ ಚುಕ್ಕಿಯನ್ನು
ಹಣೆಯಲ್ಲಿ ಧರಿಸಿ ಸ್ಪಷ್ಟವಾಗುವುದು
ಮಾಗುವುದೆಂದರೆ ಇದೇ ಇರಬೇಕು
*****