ಬೋಳತಲೆ ಚಾಮರಾಜ ಒಡೆಯರ ಕಾಲದಲ್ಲಿ ಒಡೆಯರ ವಂಶಕ್ಕೆ ಅಧಿಕಾರವು ಹೆಚ್ಚಾಗಿರಲಿಲ್ಲ. ಇವರೂ ನೆರೆಹೊರೆಯಲ್ಲಿದ್ದ ಒಡೆಯರೂ ಪಾಳಯಗಾರರೊಂದಿಗೆ ಸೇರಿಕೊಂಡು ಶ್ರೀರಂಗ ಪಟ್ಟಣ ಅಧಿಕಾರಿಗೆ ಪೊಗದಿ ಕೊಡಬೇಕಾಗಿತ್ತು.

ಶ್ರೀರಂಗಪಟ್ಟಣದಲ್ಲಿ ವಿಜಯನಗರದ ಅಧಿಕಾರಿಯಾಗಿ ರಾಮರಾಯನೆಂಬಾತನಿದ್ದನು. ಸುತ್ತಮುತ್ತಣ ಪಾಳಯಗಾರರನ್ನು ಆಳುತ್ತಿದ್ದ ಆತನು ತೊರೆಮಾವಿನಹಳ್ಳಿಯ ರೇಮಟಿ ವೆಂಕಟಾದ್ರಿ ನಾಯಕನನ್ನು ಮೆಚ್ಚಿ ಆತನಿಗೆ ಹೆಚ್ಚು ಅಧಿಕಾರವನ್ನು ಕೊಟ್ಟನು. ಚಾಮರಾಜ ಒಡೆಯರಿಗೆ ಇದು ಸಹಿಸಲಿಲ್ಲ. ಆದರೆ ರಾಮರಾಯನ ಬೆಂಬಲವನ್ನು ಪಡೆದ ವೆಂಕಟಾದ್ರಿ ನಾಯಕನನ್ನು ಇದಿರಿಸುವುದು ಸುಲಭವಾಗಿರಲ್ಲ. ಬಂದ ಆದಾಯದಲ್ಲಿ ಸಾಕಾದಷ್ಟು ಸೈನ್ಯವನ್ನು ಕೂಡಿಸುವುದಕ್ಕೆ ಆಗಲಿಲ್ಲ; ಮತ್ತು ಮೈಸೂರಿಗೆ ಕೋಟೆ ಕಟ್ಟುವುದಕ್ಕೂ ಅವಕಾಶವಿರಲಿಲ್ಲ. ಏಕೆಂದರೆ ಶ್ರೀರಂಗಪಟ್ಟಣದ ಪ್ರತಿನಿಧಿಯು ಹಾಗೆ ಮಾಡಿದಲ್ಲಿ ಕೋಪಗೊಳ್ಳುತ್ತಿದ್ದನು.

ಆಗ ಚಾಮರಾಜ ಒಡೆಯರು ಉಪಾಯವನ್ನು ಯೋಚಿಸಿದರು. ಹಣವನ್ನುಳಿಸಿ ಕೊಳ್ಳುವುದಕ್ಕೂ ಮೈಸೂರಿಗೆ ಕೋಟೆ ಕಟ್ಟುವುದಕ್ಕೂ ಅನುಕೂಲವಾಗುವ ಹಾಗೆ ರಾಮರಾಯನ ಬಳಿಗೆ “ನಮ್ಮ ಹೊಲಗಳಲ್ಲಿ ಮಗಳ ಅಂಗಳದಲ್ಲಿಯೂ ಕಾಡುಹಂದಿಗಳ ಕಾಟ ಹೆಚ್ಚಾಗಿದೆ. ಕಾಡುಹಂದಿಗಳನ್ನು ತಡೆಯಲು ಊರನ್ನು ಕೋಟೆಯಿಂದ ಭದ್ರಪಡಿಸಬೇಕು; ಅದಕ್ಕೆ ಹಣವೂ ಬೇಕು. ಆದ್ದರಿಂದ ತಾವೂ ನಮ್ಮ ಪೊಗದಿಯ ಹಣವನ್ನು ಮನ್ನಿಸಿ ಕೋಟೆ ಕಟ್ಟಲು ಅನುಮತಿ ಕೊಡಬೇಕು” ಎಂದು ಹೇಳಿ ಕಳುಹಿಸಿದರು. ಆತನು ಒಪ್ಪಲು ಪೊಗದಿಯ ಹಣದಿಂದ ಕೋಟೆಯನ್ನು ಕಟ್ಟಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

ಬಳಿಕ ಒಂದಾನೊಂದುಸಲ ವೆಂಕಟಪ್ಪ ನಾಯಕನು ದಾಳ, ದಮಾಣ, ಅಂದಳ ಮುಂತಾದವುಗಳಿಂದೊಡಗೂಡಿ ಶ್ರೀರಂಗಪಟ್ಟಣಕ್ಕೆ ಹೋಗುತ್ತಿದ್ದಾಗ ಚಾಮರಾಜ ಒಡೆಯರು ಆತನನ್ನು ಕಾಳಗಕ್ಕೆ ಕರೆದರು. ಮೈಸೂರಿನ ಭಟರು ಚನ್ನಾಗಿ ಕಾದಿ ದಾಳದಮಾಣ ಮುಂತಾದುವನ್ನು ಕಿತ್ತುಕೊಂಡರು. ಅಂದಿನಿಂದ ಚಾಮರಾಜ ಒಡೆಯರು ವೆಂಕಟಾದ್ರಿನಾಯಕನು ಒಪ್ಪಿಸಿ ಕೊಂಡಿದ್ದ “ಸುಗುಣ ಗಂಭೀರ” ನೆಂಬ ಬಿರುದನ್ನು ತಾವೇ ವಹಿಸಿದರು.
*****
[ವಂಶರತ್ನಾಕರ, ಪುಟ ೨೦ ; ವಂಶಾವಳಿ, ಪುಟ ೧೭]