“ನಿನಗೆ ಒಳ್ಳೆಯದಿರಲಿ; ಇಂದಾದೆ ಸಕುಟುಂಬ.
ಮರೆಯದಿರು ಗೆಳೆಯರನು” ಎಂದಿತಾ ಪರಿವಾರ
“ಆ ಮನೆಗೆ ಕರೆಸುತ ನಮ್ಮನೆಲ್ಲ ವಾರಂವಾರ
ನೆರಸಿ ಮಾಡಿಸಬೇಕು ಸವಿಮಾವಿನುಕಡಂಬ,
ಚಕ್ಕುಲಿ ಜಿಲೇಬಿಯನು ನೆಲ್ಲಿಕಾಯಿಗುಳಂಬ-
ವನು ಬಡಿಸಬೇಕಂದು. ಹೆಚ್ಚು ತುಪ್ಪೂಕಾರ –
ವನು ಕೊಡದಿರವಲಿಯನು. ಅಲ್ಲವದು ಆಚಾರ
ನೋಡು ಹೀಗಿರಬೇಕು ಹೊಸ ಬಾಳಿನಾರಂಭ!”

ನಸುನಕ್ಕು ಹಸೆಯ ಮೇಲ್ ಕುಳಿತ ಮದುಮಗನೆಂದ :
“ಆಹ! ಒಳ್ಳೆ ವಿಚಾರ ! ಲಗ್ನವಾಗಿಹ ನೀವು
ಎಷ್ಟು ಜನರನ್ನು ಕರೆಸಿ ಸರಸಗೋಷ್ಟಿಯಲಿಹಿರಿ?
ಮದುವೆಯಾಗಲು ಒಂದು ಹೊಟ್ಟೆ ಎರಡಾಗುವದು,
ಎಣಿಸದಷ್ಟಾಗುವವು. ಹಸಿವ ಹಿಂಗಿಸಲೆಂದು,
ಸವಿಯುಣಿಸನುಣಲು ಹಾಕಿದ ಹೊಂಚೊ ಈ ಲಹರಿ?”
*****