ಚಿತ್ರ: ಕಾಯ್ ಕಲ್ಹ

ಮತ್ತೊಮ್ಮೆ ಹುಟ್ಟಿ ಬರಲೆ?
ಮತ್ತೊಮ್ಮೆ ಹುಟ್ಟಿ ಬರಲೆ?
– ಎಂದು ಕತ್ತಲಿನಿಂದ
ಕೇಳಿ ಬರುತಿದೆ ನಿನ್ನ ಧ್ವನಿ.

ಮತ್ತೊಮ್ಮೆ ನೀ ಬಂದರೆ
ಥರ್ಮೋಮೀಟರು ಇಟ್ಟು ನಿನ್ನ ಉಷ್ಣ ಅಳೆದೇವು
ರಾಜಕೀಯ ಖೈದಿಯೆಂದು ನಿನ್ನ ಮಿದುಳು ತೊಳೆದೇವು
ಹುಚ್ಚನೆಂದು ಆಸ್ಪತ್ರೆಯಲಿ ಹಾಕಿ ಕೊಂದೇವು

ನಾವು ಕಟ್ಟಿದ ಗುಡಿಗೋಪುರ ಸಂಸ್ಥೆಗಳ
ಅಡಿಗಲ್ಲು ಅಲುಗಿಸಬೇಡ
ಅಲ್ಲಿ ಕಳೆಹುಲ್ಲು ಬೆಳೆದರೂ
ಹಾವಸೆಯೆ ಹತ್ತಿದರೂ
ಹಾದರವೆ ನಡೆದರೂ
ಅದು ಪವಿತ್ರ ಸ್ಮಾರಕ
ಅಲುಗಿಸಬೇಡ
ಕುರುಡು ಸಾಮ್ಸನನ ಹಾಗೆ
ನಿನ್ನೊಡನೆ ನಮ್ಮ ಕೊಲಬೇಡ
ಓ ಕ್ರೈಸ್ತ,
ಮಾಡು ಅಷ್ಟೊಂದು ಉಪಕಾರ
ಕತ್ತಲೆಯಲೇ ನೀ ಕರಗಿ ಹೋಗು
ಹೋಗು.
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)