ಕವಿತೆ ಮತ್ತು ಪ್ರಜಾಸತ್ತೆ

ಕವಿತೆ ಮತ್ತು ಪ್ರಜಾಸತ್ತೆ

ಇಪತ್ತನೇ ಶತಮಾನದ ಅಮೇರಿಕನ್ ಕವಿತೆಗಳ ಕುರಿತು (American Poetry of the Twentieth Century ಬರೆದ ಪುಸ್ತಕವೊಂದರಲ್ಲಿ ರಿಚರ್‍ಡ್ ಗ್ರೇ (Richard Gray) ಆರಂಭದಲ್ಲೇ ಅಮೇರಿಕನ್ ಪಜಾಸತ್ತೆಗೂ ಕವಿತೆಗೂ ಇರುವ ಸಂಬಂಧದ ಬಗ್ಗೆ ಪ್ರಸ್ತಾಪಿಸುತ್ತ ಫ್ರೆಂಚ್ ಲೇಖಕ ಟೋಕ್ವೀಯ್ ಬಹಳ ಹಿಂದೆಯೇ ಹೇಳಿದ ಕೆಲವು ಮಾತುಗಳನ್ನು ಉಲ್ಲೇಖಿಸುತ್ತಾನೆ. ಇದು ಅಮೇರಿಕನ್ ಚರಿತ್ರೆ ಹಾಗೂ ಅಲ್ಲಿನ ಕವಿತೆಗಳನ್ನು ಸ್ವಲ್ಪಮಟ್ಟಿಗಾದರೂ ಗೊತ್ತಿರುವವರಿಗೆ ಅಚ್ಚರಿಯ ವಿಷಯವಲ್ಲ.

ಪ್ರಜಾಸತ್ತೆಗೂ ಕವಿತೆಗೂ ಏನು ಸಂಬಂಧ? ಬಹುಶಃ ಈ ಪ್ರಶ್ನೆಯನ್ನು ಮೊತ್ತಮೊದಲು ಕೇಳಿದವನೂ ಮತ್ತು ಉತ್ತರಿಸಲು ಯತ್ನಿಸಿದವನೂ ಟೋಕ್ವೀಯ್. ಹತ್ತೊಂಬತ್ತನೆಯ ಶತಮಾನದ ಶ್ರೇಷ್ಠ ಫ್ರೆಂಚ್ ಚರಿತ್ರಕಾರನೂ ರಾಜಕೀಯ ತತ್ವಜ್ಞಾನಿಯೂ ಆದ ಅಲೆಕ್ಸಿಸ್ ದ ಟೋಕ್ವೀಯ್ (Alexis de Tocqueville) ಅಮೇರಿಕನ್ ಪ್ರಜಾಸತ್ತೆಯ ಕುರಿತು ಒಂದು ಪುಸ್ತಕವನ್ನೇ ಬರದಿದ್ದಾನೆ. ಫ್ರಾನ್ಸ್ ಆಗತಾನೇ ಪ್ರಜಾಸತ್ತೆಗೆ ಬಂದಿದ್ದರೂ ಟೋಕ್ವೀಯ್ಗೆ ಅದಿನ್ನೂ ಸಾಕಷ್ಟು ಸಮರ್ಪಕವಾದ ಪಜಾಸತ್ತ ವ್ಯವಸ್ಥೆಯೆಂದು ಅನಿಸಿರಲಿಲ್ಲ. ಅವನ ಮಟ್ಟಿಗೆ ಅಮೇರಿಕದ ಪಜಾಸತ್ತೆಯೇ ಹೆಚ್ಚು ಸಮರ್ಪಕವಾಗಿಯೂ ಅನುಕರಣೀಯವಾಗಿಯೂ ಕಾಣಿಸುತ್ತಿತ್ತು. ಇದನ್ನು ಅಧ್ಯಯನ ಮಾಡುವುದಕ್ಕೆಂದೇ ಟೋಕ್ವೀಯ್ ಅಮೇರಿಕಕ್ಕೂ ತೆರಳಿ ಅಲ್ಲಿ ಸ್ವಲ್ಪ ಕಾಲ ಇದ್ದು ಸುತ್ತಾಡಿ ಫ್ರಾನ್ಸಿಗೆ ಮರಳಿದ. ಸಾಕಷ್ಟು ಅಧ್ಯಯನಾನಂತರ ಆತ ೧೮೩೫ ಮತ್ತು ೧೮೪೦ರಲ್ಲಿ “ಅಮೇರಿಕದಲ್ಲಿ ಪ್ರಜಾಸತ್ತೆ” ಎಂಬ ಪುಸ್ತಕವೊಂದನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದ. ಮೂಲ ಫ್ರೆಂಚಿನಲ್ಲಿರುವ ಈ ಕೃತಿ Democracy in America ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷಿಗೂ ನಂತರ ಯುರೋಪಿನ ಇತರ ಭಾಷೆಗಳಿಗೂ ಅನುವಾದಗೊಂಡು ಈಗ ಉದ್ಗ್ರಂಥಗಳ ಸಾಲಿನಲ್ಲಿ ನಿಂತಿದೆ. ಈ ಪುಸ್ತಕದ ಎರಡನೆಯ ಸಂಪುಟದಲ್ಲಿ ಟೋಕ್ವೀಯ್ ಕವಿತೆಯ ಬಗ್ಗೆ ಒಂದು ಅಧ್ಯಾಯವನ್ನೇ ಮೀಸಲಿರಿಸಿದ್ದಾನೆ ಎನ್ನುವುದು ತುಸು ಆಶ್ಚರ್ಯದ ವಿಷಯವೇ; ಹಾಗೂ ಪಜಾಸತ್ತೆ ಮತ್ತು ಕವಿತೆಗಳ ಸಂಬಂಧದ ಕುರಿತಾದ ಅವನ ವಿಚಾರಗಳೂ ಸ್ವಲ್ಪ ರೋಚಕ ಎನಿಸಬಹುದು. ಆದರೂ ಅವನ್ನು ಅಲ್ಲಗಳೆಯುವಂತೆಯೂ ಇಲ್ಲ. ಆದ್ದರಿಂದಲೇ ಗ್ರೇ ಅವನ್ನು ಅಮೇರಿಕನ್ ಕವಿತೆಯ ಹಿನ್ನೆಲೆಯನ್ನು ಚಿತ್ರಿಸುವಲ್ಲಿ ಆರಂಭದಲ್ಲೇ ಬಳಸಿಕೊಳ್ಳುತ್ತಾನೆ.

ಟೋಕ್ವೀಯ್‌ಯ ಅಭಿಪ್ರಾಯಗಳನ್ನು ನಿರೂಪಿಸಿ ಹೇಳುವುದಾದರೆ: ಪ್ರಜಾಸತ್ತೆ ಮನುಷ್ಯರಿಗೆ ಸಂಪೂರ್ಣ ಸ್ವಾತಂತ್ರ್ಯ ಒದಗಿಸುತ್ತದೆ. ಇದರ ಒಂದು ಪರಿಣಾಮವೆಂದರೆ ಗತದ ತಿರಸ್ಕಾರ. ಹಿಂದಿನ ಕಟ್ಟುಪಾಡುಗಳಿಗೆ ತಮ್ಮನ್ನು ಕಟ್ಟಿಹಾಕಿಕೊಂಡು ಮುಂದುವರಿಯುವುದು ಸಾಧ್ಯವಿಲ್ಲವಾದ್ದರಿಂದ ಜನರು ಅಂಥ ಬಂಧನಗಳಿಂದ ಮುಕ್ತಿ ಪಡೆಯುತ್ತಾರೆ. ಆದ್ದರಿಂದ ಅವರು ಹಿಂದೆ ನೋಡುವುದಕ್ಕಿಂತ ಮುಂದೆ ನೋಡುವುದೇ ಜಾಸ್ತಿ ಹಿಂದೆ ನೋಡುವುದಿದ್ದರೆ ಅದನ್ನು ತಿರಸ್ಕರಿಸುವುದಕ್ಕಲ್ಲದೆ ಸ್ವೀಕರಿಸುವುದಕ್ಕಲ್ಲ. ಮನುಷ್ಯರ ಮುಂದೆ ತೆರೆದಿರುವ ಸಾಧ್ಯತೆಗಳು ಅಪಾರವಾದ್ದರಿಂದ ಅವರು ಈ ಇನ್ನೂ ಹೊಸದಾಗಿರುವ ಕ್ಷಿತಿಜವನ್ನು ಅನ್ವೇಷಿಸಲು ಬಯಸುತ್ತಾರೆ, ಹಾಗೂ ಆ ಕಾರಣಕ್ಕೆ ಹೆಚ್ಚೆಚ್ಚು ಪಯೋಗಶೀಲರಾಗುತ್ತಾರೆ. ಅಮೇರಿಕದಲ್ಲಿ ಆರಂಭದಲ್ಲೇ ಪಜಾಸತ್ತೆ ಕಾಲಿಟ್ಟ ಕಾರಣ ಇಲ್ಲಿನ ಕವಿತೆಗಳು ಆರಂಭದಲ್ಲೇ ಈ ದಿಕ್ಕಿನಲ್ಲಿ ಸಾಗಿದುವು.

ಅಮೇರಿಕದಲ್ಲಿ ಯುರೋಪಿನ ಇತರೆಡೆ ಕಾಣಿಸುವಂಥ ಮಹಾಕಾವ್ಯಗಳು ಬರಲಿಲ್ಲ. ಯಾಕೆಂದರೆ ಅರಸೊತ್ತಿಗೆಯಲ್ಲಿ ಅಥವಾ ಶ್ರೀಸತ್ತೆ (aristocracy) ಯಲ್ಲಿ ಕಾಣಿಸುವ ವ್ಯವಸ್ಥೆಗಳು ಮಾತ್ರವೇ ಇಂಥ ಮಹಾಕಾವ್ಯಗಳನ್ನು ಪ್ರಚೋದಿಸಬಲ್ಲವು: ಅಂಥ ವ್ಯವಸ್ಥೆಗಳಲ್ಲಿ ವೀರರಿರುತ್ತಾರೆ, ನಾಯಕರಿರುತ್ತಾರೆ, ಯುದ್ಧಗಳಿರುತ್ತವೆ, ಸಂಘರ್ಷಗಳಿರುತ್ತವೆ, ಮತ್ತು ಯಕ್ಷ ಕಿನ್ನರ ಮುಂತಾದ ಅತಿಮಾನವ ಶಕ್ತಿಗಳಲ್ಲಿ ಜನರಿಗೆ ನಂಬಿಕೆಯಿರುತ್ತದೆ, ಪುರಾಣಗಳು, ಐತಿಹ್ಯಗಳು ಇನ್ನೂ ಜೀವಂತವಾಗಿರುತ್ತವೆ. ದೇವರು ಮತ್ತು ಮನುಷ್ಯರ ನಡುವೆ ಇಂಥ ಮಧ್ಯಪ್ರಪಂಚವೊಂದು ಇರುವುದರಿಂದ ಇವು ಮಹಾಕಾವ್ಯಕ್ಕೆ ವಸ್ತುಗಳನ್ನು ಒದಗಿಸುತ್ತವೆ. ಪ್ರಜಾಸತ್ತೆಯಲ್ಲಿ ಇಂಥ ಮಧ್ಯಪ್ರಪಂಚವಿಲ್ಲ. ಮನುಷ್ಯರು ನೇರವಾಗಿ ದೇವರ ಜತೆ ಸಂಬಂಧ ಹೊಂದುವ ವ್ಯವಸ್ಥೆ ಇದು. ಶ್ರೀಸತ್ತೆ ಹೊರಟುಹೋದ ಮೇಲೆ ಮಹಾಕಾವ್ಯಕ್ಕೆ ಅಗತ್ಯವಾದ ವೀರತನವೇ ಮುಂತಾದ ವಸ್ತುಗಳೂ ಕವಿತೆಗೆ ದಕ್ಕದಾಗುತ್ತವೆ. ಆದ್ದರಿಂದ ಪ್ರಜಾಸತ್ತೆಯಲ್ಲಿ ಮಹಾಕಾವ್ಯ ಹುಟ್ಟುವುದು ಸಾಧ್ಯವಿಲ್ಲದ ಮಾತು. ಪ್ರಜಾಸತ್ತೆಯಲ್ಲಿ ಮನುಷ್ಯರು ಕಾಲ್ಪನಿಕ ಲೋಕದಲ್ಲಿ ವಿಹರಿಸುವುದಕ್ಕೆ ಸ್ವತಂತ್ರರಿದ್ದರೂ, ಅನುಮಾನ ಪ್ರವೃತ್ತಿ ಅವರನ್ನು ನೆಲಕ್ಕೆ ವಾಪಸು ತಂದು ವಾಸ್ತವದ ಹಾಗೂ ದೃಗ್ಗೋಚರವಾದ ಜಗತ್ತಿನಲ್ಲಿ ಹಿಡಿದಿಡುತ್ತದೆ. ಶ್ರೀಸತ್ತೆ ಮನಸ್ಸನ್ನು ಗತ ಕಾಲದ ಗಾಢಾವಲೋಕನದತ್ತ ಒಯ್ದು ಅಲ್ಲಿ ತಳವೂರುವಂತೆ ಮಾಡಿದರೆ, ಇದಕ್ಕೆ ವಿರುದ್ಧವಾಗಿ ಪ್ರಜಾಸತ್ತೆ ಹಳತೇನಿದೆಯೋ ಅದರ ಬಗ್ಗೆ ನಿರುತ್ಸಾಹ ಹುಟ್ಟುವಂತೆ ಮಾಡುತ್ತದೆ. ಎಂದರೆ ಪಜಾಸತ್ತೆಯಲ್ಲಿ ಮನುಷ್ಯರ ಕಲ್ಪನಾಶಕ್ತಿ ಸೊರಗುತ್ತದೆ ಎಂದು ಅರ್ಥವೇ? ಅಂಥ ಅಭಿಪ್ರಾಯವನ್ನು ಟೋಕ್ವೀಯ್ ಅಲ್ಲಗಳೆಯುತ್ತಾನೆ. ಕಲ್ಪನಾಶಕ್ತಿ ಬೇರೊಂದು ದಿಕ್ಕಿನಲ್ಲಿ ಹರಿಯುತ್ತದೆ ಎನ್ನುತ್ತಾನೆ ಆತ. “ಕಲ್ಪನಾಶಕ್ತಿ ಇಲ್ಲದಾಗುವುದಿಲ್ಲ, ಆದರೆ ಅದರ ಮುಖ್ಯ ಕಾರ್ಯ ಯಾವುದು ಉಪಯುಕ್ತವೋ ಅದನ್ನು ಆವಿಷ್ಕರಿಸುವುದು ಮತ್ತು ವಾಸ್ತವತೆಯನ್ನು ಪ್ರತಿನಿಧೀಕರಿಸುವುದು ಆಗುತ್ತದೆ.”

ಟೋಕ್ವೀಯ್ ಶ್ರೀಸತ್ತೆ ಮತ್ತು ಪ್ರಜಾಸತ್ತೆಯ ಇನ್ನೂ ಒಂದು ಮುಖ್ಯ ವ್ಯತ್ಯಾಸದ ಬಗ್ಗೆ ಹೇಳುತ್ತಾನೆ: ಶ್ರೀಸತ್ತೆ ಮನುಷ್ಯರು ಮತ್ತು ದೇವರ ಮಧ್ಯೆ ಇತರ ಪದರಗಳನ್ನು ತರುವುದರಿಂದ ಮನಮುಷ್ಯರು ಪರಸ್ಪರ ಹೆಚ್ಚು ಸಂಬಂಧ ಪಡೆದಿರುತ್ತಾರೆ; ಪಜಾಸತ್ತೆಯ ಸರ್ವಸಮಾನತೆಯಲ್ಲಿ ಪ್ರತಿಯೊಬ್ಬನೂ ಬೇರೆ ಬೇರೆಯಾಗಿರುತ್ತಾನೆ. ಶ್ರೀಸತ್ತೆಯಲ್ಲಿ ಸಮೂಹದ ಕಲ್ಪನೆ ಮುಖ್ಯವಾದರೆ, ಪ್ರಜಾಸತ್ತೆಯಲ್ಲಿ ಮನುಷ್ಯನ ವ್ಯಕ್ತಿಸ್ವಾತಂತ್ರ್ಯ ಮುಖ್ಯವಾಗುತ್ತದೆ. ಪರಿಣಾಮವಾಗಿ, ಪ್ರಜಾಸತ್ತೆಯ ಕವಿತೆಯ ವಸ್ತು ಮನುಷ್ಯನೇ ಹೊರತು ಇನ್ನೇನೂ ಆಗಿರುವುದಿಲ್ಲ.

ಇಷ್ಟೇ ನೋಡಿದರೆ, ಟೋಕ್ವೀಯ್ ಹಿಂದಣ ರೀತಿಯ ಕವಿತೆಗಳು ಆಧುನಿಕ ಪಜಾಸತ್ತೆಯಲ್ಲಿ ಸಾಧ್ಯವಿಲ್ಲದ್ದಕ್ಕೆ ಮರುಗುತ್ತಿದ್ದಾನೋ ಎನಿಸಬಹುದು. ಆದರೆ ಪಜಾಸತ್ತೆಯ ಕಟ್ಟಾ ಅಭಿಮಾನಿಯಾದ ಟೋಕ್ವೀಯ್ ಹೇಳುವುದೇ ಬೇರೆ: ‘ಏಕಕಾಲಕ್ಕೆ ಕರುಣೆಯನ್ನೂ, ಆದರವನ್ನೂ, ಭೀತಿಯನ್ನೂ, ಜಿಗುಪ್ಸೆಯನ್ನೂ ಮೂಡಿಸಬಲ್ಲಂಥ, ಅಮೂರ್ತತೆಯಲ್ಲಿ, ಅನಂತ ಶ್ರೇಷ್ಠತೆಯಲ್ಲಿ ಮತ್ತು ಕಿರಿತನದಲ್ಲಿ, ಗಾಢವಾದ ಮಬ್ಬಿನಲ್ಲಿ ಮತ್ತು ಬೆರಗುಗೊಳಿಸುವ ಪ್ರಕಾಶದಲ್ಲಿ ಹೆಣೆದಿರುವ ಅದ್ಭುತ ವಸ್ತುವೊಂದನ್ನು ಕಾಣುವುದಕ್ಕೆ ನಾನೇನೂ ನೆಲ ಮತ್ತು ಆಕಾಶಗಳನ್ನು ಸುತ್ತಬೇಕಾಗಿಲ್ಲ. ನಾನು ನನ್ನನ್ನೇ ನೋಡಿಕೊಂಡರೆ ಸಾಕು. ಮನುಷ್ಯ ಶೂನ್ಯದಿಂದ ಹುಟ್ಟುತ್ತಾನೆ, ಕಾಲವನ್ನು ದಾಟುತ್ತಾನೆ, ಹಾಗೂ ದೇವರ ಎದೆಯಲ್ಲಿ ಎಂದೆಂದಿಗೂ ಮಾಯವಾಗುತ್ತಾನೆ; ಅವನು ಗೋಚರಿಸುವುದು ಕ್ಷಣ ಕಾಲ ಮಾತ್ರ. ಎರಡೂ ಪ್ರಪಾತಗಳ ಅಂಚಿನ ಮಧ್ಯೆ ಅಲೆದಾಡುತ್ತ, ಹಾಗೂ ಅಲ್ಲಿ ಆತ ಕಾಣಿಸದಾಗುತ್ತಾನೆ.’ ಸಂಪೂರ್ಣವಾದ ಆತ್ಮಜ್ಞಾನವಾಗಲಿ ಸಂಪೂರ್ಣ ಅಜ್ಞಾನವಾಗಲಿ ಕವಿತೆಯನ್ನು ಸೃಜಿಸಲಾರದು ಎನ್ನುತ್ತಾನೆ ಟೋಕ್ವೀಯ್. “ಆದರೆ ತನ್ನ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವಷ್ಟು ಮನುಷ್ಯನಿಗೆ ಸ್ವಜ್ಞಾನ ದತ್ತವಾಗಿದೆ, ಉಳಿದಂತೆ ಎಲ್ಲವೂ ಅಂಧಕಾರಮಯ; ಆತ ಅದರಲ್ಲಿ ಎಂದಿಗೂ ಪರದಾಡುತ್ತ ಇರುತ್ತಾನೆ, ಎಂದಿಗೂ ನಿಷ್ಫಲವಾಗಿ, ತನ್ನ ಅಸ್ತಿತ್ವದ ಕುರಿತಾದ ಇನ್ನಷ್ಟು ಸಂಪೂರ್ಣವಾದ ಕಲ್ಪನೆಯೊಂದರ ಮೇಲೆ ಕೈಯಿರಿಸುವುದಕ್ಕೇ’. ಟೋಕ್ವೀಯ್ ಪ್ರಕಾರ ಮನುಷ್ಯನ ಈ ಅಪೂರ್ಣ ಸ್ಥಿತಿಯೇ ಕವಿತೆಗೆ ತಕ್ಕುದಾದ್ದು. ಪರಜಾಸತ್ತೆ ಕವಿತೆಯ ವಸ್ತುಗಳನ್ನು ನಾಶಗೊಳಿಸುವುದಿಲ್ಲ: ಅವುಗಳ ಅಪರಿಮಿತತ್ವವನ್ನು ಕುಗ್ಗಿಸಿದರೂ, ವಾಪ್ತಿಯನ್ನು ಜಾಸ್ತಿಮಾಡುತ್ತದೆ. ಎಂದರೆ ಮನುಷ್ಯ ಆತ್ಮಯೋಲುಪನಾಗುತ್ತಾನೆ ಎಂದು ಅರ್ಥವಲ್ಲ; ವ್ಯಕ್ತಿ ತನ್ನೊಳಗೆಯೇ ಸಮಷ್ಟಿಯನ್ನು ಕಂಡುಕೊಳ್ಳುತ್ತಾನೆ.

ರಿಚರ್ಡ್ ಗ್ರೇ ತನ್ನ ಪುಸ್ತಕದಲ್ಲಿ ಟೋಕ್ವೀಯ ಈ ಮಾತುಗಳನ್ನು ಸಮರ್ಥನೀಯವಾಗಿ ಉಲ್ಲೇಖಿಸುತ್ತ, ಪಜಾಸತ್ತೆಯ ಕವಿಯೆಂದೇ ಹೆಸರಾಗಿರುವ ವಾಲ್ಟ್ ವ್ಹಿಟ್‌ಮನ್‌ನ ಉದಾಹರಣೆಯನ್ನು ನೀಡುತ್ತಾನೆ. ಹತ್ತೊಂಬತ್ತನೆಯ ಶತಮಾನಕ್ಕೆ ಸೇರಿದ ವ್ಹಿಟ್‌ಮನ್ ಅಮೇರಿಕನ್ ಕವಿತೆಯ ಪಿತನೆಂದೇ ಲೆಕ್ಕ. ಕವಿತೆಯ ಮೂಲಕ ಇಡೀ ಅಮೇರಿಕವನ್ನೂ, ಅಮೇರಿಕದ ಮೂಲಕ ಕವಿತೆಯನ್ನೂ ಕಂಡುಕೊಂಡವನು ಈತ. ನಾನು ನೋಡಿದ್ದೆಲ್ಲ ನಾನೇ ಎಂದು ಸಾರಿದವನು-ನಾನು ನೋಡಿದ್ದೆಲ್ಲ ನನ್ನದೇ ಎಂದು ಅರಸೊತ್ತಿಗೆ ಆಡುವ ಮಾತಿನ ಅಣಕ ಇದು. ವ್ಹಿಟ್‌ಮನ್ ಪ್ರಾಸ ಛಂದಸ್ಸುಗಳನ್ನು ತೊರೆದ; ಕವಿತೆಗೆ ತನ್ನನ್ನೇ ವಸ್ತುವಾಗಿ ಮಾಡಿಕೊಂಡ. ಆದರೂ ಅವನ ಕವಿತೆಗಳ ವೈಶಾಲ್ಯ ಯಾವುದೇ ಮಹಾಕಾವ್ಯಕ್ಕಿಂತ ಕಡಿಮೆಯಲ್ಲ. ಮುಂದಿನ ಅಮೇರಿಕನ್ ಕವಿಗಳೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ವ್ಹಿಟ್‌ಮನ್ನ ಪ್ರಭಾವಕ್ಕೆ ಗುರಿಯಾದವರೇ. ಒಮ್ಮೆ ಜನಸತ್ತೆ ಬಂದ ಮೇಲೆ ಕವಿತೆ ಮೊದಲಿನಂತಾಗುವುದು ಸಾಧ್ಯವೇ ಇಲ್ಲ ಎನ್ನುವುದನ್ನು ಅಮೇರಿಕನ್ ಇತಿಹಾಸ ತೋರಿಸಿಕೊಡುತ್ತದೆ.

ಅಮೇರಿಕದ ಸ್ವಾತಂತ್ರ್ಯ ಸಂಗ್ರಾಮ ೧೭೭೫-೮೨ರ ಮಧ್ಯೆ ನಡೆಯಿತು. ೧೭೮೯ರ ಕ್ರಾಂತಿಯ ನಂತರ ಫ್ರಾನ್ಸಿನಲ್ಲಿ ಸಾಂಪ್ರದಾಯಿಕ ಅರಸೊತ್ತಿಗೆ ಮುರಿದುಬಿದ್ದು, ೧೭೯೨ರ ಅಂತ್ಯಕ್ಕೆ ಫಾನ್ಸ್ ಗಣರಾಜ್ಯವಾಗಿ ಮಾರ್ಪಟ್ಟತು. (ಮುಂದಿನ ಜನವರಿಯಲ್ಲಿ ಹದಿನಾರನೆಯ ಲೂಯಿಯ ವಧೆಯೂ ಆಯಿತು.) ಪ್ರಜಾಪ್ರಭುತ್ವದ ತವರೆನಿಸಿದ್ದ ಬ್ರಿಟನ್ ಕೂಡಾ ಎರಡು ಮಹಾಯುದ್ಧಗಳ ನಡುವೆ ನಿಜವಾದ ಜನಸತ್ತೆಯತ್ತ ಹೆಜ್ಜೆ ಹಾಕಿತು. ಜಗದಗಲ ವಸಾಹತುಶಾಹಿ ಪ್ರಭುತ್ವಗಳು ಒಂದೊಂದಾಗಿ ಕೊನೆಗೊಂಡು ರಾಷ್ಟ್ರಗಳು ಸ್ವತಂತ್ರವಾಗತೊಡಗಿದುವು ಹಾಗೂ ಎಲ್ಲ ಕಡೆಯೂ ಪ್ರಜಾಪ್ರಭುತ್ವವೇ ರಾಜಕೀಯದ ಆದರ್ಶವಾಯಿತು. ಭಾರತವೂ ಇದಕ್ಕೆ ಹೊರತಲ್ಲವೆಂದು ಬೇರೆ ಹೇಳಬೇಕಾಗಿಲ್ಲ. ಈ ಹಿನ್ನೆಲೆಯಿಂದ ನೋಡುವುದಾದರೆ, ಆಧುನಿಕ ಕವಿತೆ ಕೇವಲ ಇಂಗ್ಲಿಷ್ ಪ್ರಭಾವದಿಂದ ಹುಟ್ಟಿತು ಎನ್ನುವುದು ಸಮರ್ಪಕವಾಗುವುದಿಲ್ಲ. ಅದೇ ರೀತಿ, ಆಧುನಿಕ ಕವಿತೆಗೆ ಕೇವಲ ಪಜಾಸತ್ತೆಯೊಂದೇ ಕಾರಣವೆನ್ನುವಂತಿಲ್ಲ. ವೈಜ್ಞಾನಿಕ, ತಾಂತ್ರಿಕ, ಔದ್ಯಮಿಕ, ವೈಚಾರಿಕ ಕ್ರಾಂತಿಗಳು ಸಹಾ ಬಹುಶಃ ಅಷ್ಟೇ ಮುಖ್ಯವಾಗುತ್ತವೆ. ಆದರೂ ಪಜಾಸತ್ತೆ ಮತ್ತು ಕವಿತೆಯ ಸಂಬಂಧವಾಗಿ ಟೋಕ್ವೀಯ್ ಬರೆದ ಮಾತುಗಳು ನಮ್ಮ ಕಾವ್ಯವಿಮರ್ಶೆಯಲ್ಲಿ ಉಪಯೋಗವಾಗದಿರುವುದು ನಷ್ಟವೇ ಸರಿ.

ಕನ್ನಡ ಕಾವ್ಯವನ್ನೇ ಗಮನಿಸಿದರೆ, ಸ್ವಾತಂತ್ರಾನಂತರ ಹುಟ್ಟಿದ ಕಾವ್ಯಪ್ರಯೋಗಗಳು ಸೂಚಿಸುವುದು ವಸ್ತು ಮತ್ತು ರಚನೆಯಲ್ಲಿ ಜನಸತ್ತೆ ಕವಿತೆಗೆ ಒದಗಿಸಿದ ಸ್ವಾತಂತ್ರ್ಯದ ಸಾಧ್ಯತೆಗಳನ್ನೇ. ಅಮೇರಿಕನ್ ಕವಿತೆಗೆ ಛಂದಸ್ಸು ಒಂದು ಹಳೆಯ ನಿರ್ಬಂಧವಾಗಿ ಕಾಣಿಸಿದ ಹಾಗೆಯೇ ಕನ್ನಡದ ಕವಿತೆಗೂ ಕಾಣಿಸಿತು; ಮಾತ್ರವಲ್ಲ, ಟೋಕ್ವೀಯ್ ಸೂಚಿಸುವಂತೆ ಛಂದಸ್ಸು ಹಳೆಯ ಪ್ರಭುತ್ವದ ಸಂಕೇತದಂತೆಯೂ ತೋರಿತು. ಆದ್ದರಿಂದ ಅದನ್ನು ತೊರೆಯುವುದು ಅಗತ್ಯವೆನಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಆದರೂ ಟೋಕ್ವೀಯ್ ಕವಿತೆ ಮತ್ತು ಪ್ರಜಾಸತ್ತೆಯ ಸಂಬಂಧದ ಕುರಿತು ಮಾತಾಡಿದಾಗ ಅವನ ಮನಸ್ಸಿನಲ್ಲಿದ್ದುದು ವಾಸ್ತವ ಪ್ರಜಾಸತ್ತೆಗಿಂತ ಅದರ ಆದರ್ಶವೆಂದು ನಾವು ತಿಳಿಯಬೇಕಾಗುತ್ತದೆ. ಯಾಕೆಂದರೆ ವಾಸ್ತವದಲ್ಲಿ ಎಲ್ಲೂ ಪರಜಾಸತ್ತೆ ಪರಿಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿದೆಯೆಂದು ಹೇಳಲಾಗುವುದಿಲ್ಲ. ಸ್ವತಃ ಟೋಕ್ವೀಯ್ ತಾನೇ ಪ್ರಜಾಸತ್ತೆಯಲ್ಲಿ ತಲೆದೋರುವ ‘ಬಹುಮತೀಯ ದಬ್ಗಾಳಿಕೆ’ಯ ಕುರಿತು ತನ್ನ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾನೆ. ಸಂಪೂರ್ಣ ಸಮಾನತೆ, ವರ್ಗ ಮತ್ತು ವರ್ಣಭೇದ ನಿರ್ಮೂಲನ ಮುಂತಾದ ಆದರ್ಶಗಳು ಎಂದಾದರೂ ಸಾಧ್ಯವಾಗುತ್ತವೋ ತಿಳಿಯದು. ಬಹುಶಃ ಟೋಕ್ವೀಯ್ ಹೇಳುವ ಮನುಷ್ಯನ ಅಪೂರ್ಣತೆಯಂತೆಯೇ ಸಾಮಾಜಿಕ ಅಪೂರ್ಣತೆಯೂ ಇರಬಹುದೇ ಎಂದು ದಿಗಿಲಾಗುತ್ತದೆ.

ಮನುಷ್ಯ ಎಂದಾದರೂ ತನ್ನ ಗತವನ್ನು ಸಂಪೂರ್ಣವಾಗಿ ಕೈಬಿಡುವುದೂ ಬಹುಶಃ ಸಾಧ್ಯವಿಲ್ಲದ ಮಾತು. ಬಂದ ದಾರಿಯ ಕಡೆಗೆ ಹಿಂದಿರುಗಿ ನೋಡದವರು ಯಾರಾದರೂ ಇದ್ದಾರೆಯೇ? ಕವಿತೆಗಂತೂ ಭೂತ, ವರ್ತಮಾನ ಮತ್ತು ಭವಿಷ್ಯಗಳ ಸಂವಾದ (ಡಯಲೆಕ್ಟಿಕ್ಸ್) ತೀರಾ ಅಗತ್ಯ ಕೂಡಾ. ಅಮೇರಿಕದ ಕವಿ ಎಜ್ರಾ ಪೌಂಡ್ ಛಂದಸ್ಸನ್ನು ಕೈಬಿಟ್ಟರೂ ಕವಿತೆಯಲ್ಲಿ ಸಂಗೀತದ ಮಾರ್ದವ ಬೇಕೆಂದು ಪ್ರತಿಪಾದಿಸಿದ. ಹೊಸದಾಗಿಸುವುದಕ್ಕಾದರೂ ಆತ ಹಿಂದಿರುಗಿ ನೋಡಿದ. ಎಲಿಯಟ್ ಕೂಡಾ ಮುಕ್ತಛಂದಸ್ಸೆಂದರೆ ಸ್ವಚ್ಛಂದವಲ್ಲ ಎಂದ; ಹಾಗಾದರೆ ಮತ್ತೇನೆಂದು ಅವನು ಹೇಳದೆ. ಇದ್ದರೂ, ಒಂದು ಬಗೆಯ ಮಾತಿನ ಲಯವನ್ನು ಅವನು ಬಯಸುತ್ತಿದ್ದನೆನ್ನುವುದು ಅವನ ಕವಿತೆಗಳಲ್ಲಿ ಸ್ಪಷ್ಟವಾಗುತ್ತದೆ. ಅಮೇರಿಕದ ಇನ್ನೊಬ್ಬ ಪ್ರಸಿದ್ಧ ಕವಿ ರಾಬರ್ಟ್ ಫ್ರಾಸ್ಟ್ ಛಂದಸ್ಸಿಲ್ಲದೆ ಬರೆಯುವುದೆಂದರೆ ನೆಟ್ ಇಲ್ಲದೆ ಟೆನ್ನಿಸ್ ಆಡುವಂತೆ ಎಂದ. ರಾಬರ್ಟ್ ಲವೆಲ್‌ನಂಥವರು ಸುನೀತಗಳನ್ನು ಮತ್ತೆ ಬಳಕೆಗೆ ತಂದದ್ದೂ ಇದೆ. ಕನ್ನಡದಲ್ಲೂ ಇಂಥ ಒಳಪ್ರವಾಹಗಳನ್ನು ನಾವು ಧಾರಾಳವಾಗಿ ಕಾಣಬಹುದು. ಇದು ಮನುಷ್ಯನ ಅಗತ್ಯವೇ ಅಥವಾ ಕವಿತೆಯ ಅಗತ್ಯವೇ ಎಂದು ಕೆಲವೊಮ್ಮೆ ಅಚ್ಚರಿಯಾಗುತ್ತದೆ; ಇವುಗಳ ವ್ಯತ್ಯಾಸವೇನೆಂದು ತಿಳಿಯದೆ ಬೆರಗಾಗುತ್ತೇವೆ. ಟೋಕ್ವೀಯ್ ಕಲ್ಪಿಸುವ ಪರಿಪೂರ್ಣ ಪ್ರಜಾಸತ್ತೆಯಲ್ಲಿ ಕೂಡಾ ಕವಿತೆಯ ಕಲ್ಪನೆ ಮಾಯವಾಗದೆ ಇರಬೇಕಾದರೆ, ಅದು ವಿಸ್ಮೃತಿಗೆ ಒಳಗಾಗಬಾರದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೧
Next post ಏಣಿ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…