ಮೂಲ: ತಮಿಳು. ತಮಿಳಿನ ಬರಹಗಾರರ ಹೆಸರು ತಿಳಿಸಿಲ್ಲ.
ಆಸ್ತಮಿಸುವ ಸೂರ್ಯನ ಕಿರಣಗಳಿಂದ ಬಿದ್ದ ಗಿಡಗಳ ನೆರಳು ಬಹಳ ಬಹಳ ಉದ್ದಕ್ಕೆ ಸಾಲಾಗಿ ಬಿದ್ದಿದ್ದವು. ಪಕ್ಷಿಗಳು ತಮ್ಮ ಗೂಡುಗಳನ್ನು ಹುಡುಕಿಕೊಂಡು ಹೊರಟಿದ್ದವು. ಚಿಕ್ಕ ಗೋಪಾಲನು ತನ್ನ ಗೆಳೆಯ ಕಸ್ತೂರಿಯ ಸಂಗಡ ಆಡಿ ಮನೆಗೆ ಧಾವಿಸಿದ್ದನು. ಬೀದಿಯನ್ನು ಸರಿಪಡಿಸಲು “ಖಡಿ” ಗಳ ರಾಸಿರಾಸಿಗಳನ್ನು ಅದರ ಎಡಬಲಕ್ಕೂ ಹಾಕಿದ್ದರು. ಅದರಲ್ಲಿಯ ಒಂದೆರಡು ಕಲ್ಲುಗಳನ್ನು ಆರಿಸಿಕೊಂಡು ಕಿಸೆಯಲ್ಲಿ ಇಟ್ಟನು, ಕಸ್ತೂರಿಯೂ ಕೆಲವು ಸಣ್ಣ ಕಲ್ಲುಗಳನ್ನು ತೆಗೆದು ಕೊಂಡನು. ಇಬ್ಬರು ಮಾತಾಡುತ್ತ ನಡೆದರು. ದಾರಿಯಲ್ಲಿ ತಾವು ಕಲಿಯುತ್ತಿದ್ದ ಪಾಠಶಾಲೆ ಹತ್ತಿತು. ಆದರ ಕಡೆಗೆ ಇಬ್ಬರ ದೃಷ್ಟಿಯೂ ಹರಿಯಿತು. ಅದರ ಕಂಪೌಂಡ ಗೋಡೆಯ ಮೇಲೆ ಏನೋ ಬರೆದದ್ದು ಕಂಡಿತು. ಆಶ್ಚರ್ಯ, ಬಹಳ ಆಶ್ಚರ್ಯ. “ಗೋಪಾಲ ಬಾ” ಎಂದು ಬರೆದಿದೆ.
ಗೋಪಾಲನಿಗೆ ಇದು ನಿಜವೋ, ಕನಸೋ ಎಂದೆನಿಸಿತು. ಕಣ್ಣುಗಳನ್ನು ಹಿಗ್ಗಿಸಿ ನೋಡಿದನು, “ಗೋಪಾಲ ಬಾ” ಎಂದಿದ್ದುದು ನಿಜ, ಇದನ್ನು ಯಾರು ಬರೆದಿರಬಹುದು. ಕಸ್ತೂರಿ ಬರೆದಿರುವನೆನ್ನ ಬೇಕೇ ಅವನು ತನ್ನ ಸಂಗಡಲೇ ಇರುವನಲ್ಲ! ಹಾಗಾದರೆ ಯಾರು ಬರೆದಿರ ಬಹುದು? ಗೋಪಾಲನು ಗೋಡೆಯ ತೀರ ಹತ್ತಿರ ಹೋಗಿ ನೋಡಿದನು. ಖಡುವಿನಿಂದ ಬರೆದಿದ್ದರು. “ಗೋಪಾಲ ಬಾ” ಇದನ್ನು ಯಾರು ಬರೆದಿರಬೇಕೆಂಬ ಯೋಚನೆಯಲ್ಲಿಯೇ ಗೋಪಾಲನು ಮನೆಗೆ ಬಂದನು. ಮನೆಯ ಮುಂದಿನ ಅಂಗಳದಲ್ಲಿ ಅವನ ಅಕ್ಕ ಕೆಲವು ತನ್ನ ಗೆಳತಿಯರೊಡನೆ ಆಡುತ್ತಿದ್ದಳು. ಅಕ್ಕನೆಡೆಗೆ ಹೋಗಿ “ಅಕ್ಕಾ ಶಾಲೆಯ ಗೋಡೆಯ ಮೇಲೆ ನನ್ನನ್ನು “ಬಾ” ಎಂದು ಬರೆದವರಾರು? “ನನಗೆ ಗೊತ್ತಿಲ್ಲ ಹೋಗು” ಎಂದು ಆಟದಲ್ಲಿ ತನ್ಮಯಳಾದ ಗೋಪಾಲನ ಅಕ್ಕನು ಅವನನ್ನು ಅತ್ತ ಸರಿಸಿದಳು. ಅಲ್ಲಿ ನೆರೆದ ಎಲ್ಲ ಹುಡುಗಿಯರನ್ನೂ ಕೇಳಿ ನೋಡಿದನು ಯಾರೂ ತನಗೆ ಗೊತ್ತಿಲ್ಲವೆಂದರು.
ಗೋಪಾಲನು ಬೇಜಾರುಪಟ್ಟು ಕೊಂಡನು, ಅಷ್ಟೇ ಉತ್ಸುಕನಾದನು. ತನ್ನನ್ನು ಇಷ್ಟು ವಿಶ್ವಾಸದಿಂದ “ಬಾ” ಎಂದು ಕರೆದವರು ಯಾರು? ಮತ್ತು ಎಲ್ಲಿಗೆ ಬರಲು ಕರೆದಿರುವರು. ಎದುರು ಮನೆಯ ಸುಂದರ ಬರೆದಿರಬಹುದೇ? ಕೇಳಬೇಕೆಂದರೆ ಸುಂದರು ತನ್ನ ತಂದೆಯ ಜೊತೆಗೆ ಊರಿಗೆ ಹೊರಟು ಹೋದನು! ಗೋಪಾಲನ ಮನದಲ್ಲಿ ಮತ್ಯಾರ ಹೆಸರೂ ಮೂಡದಾಯಿತು. ಕಡೆಗೆ ನಿರ್ಣಯಿಸಿದನು. ಕಸ್ತೂರಿಯೇ ಬರೆದಿರಬೇಕೆಂದು ಓಡುತ್ತ ಕಸ್ತೂರಿಯ ಮನೆಗೆ ಹೋಗಿ ಕೇಳಿದನು. “ನಾನು ಬರೆಯಲಿಲ್ಲವಪ್ಪಾ” ಎ೦ದನು ಕಸ್ತೂರಿ ಗೋಪಾಲನು ಹತಾಶನಾಗಿ ಮನೆಗೆ ಬಂದನು. ಬರುವಾಗ ಅಕಸ್ಮಿಕವಾಗಿ ಶಾಲೆಯ ಗೋಡೆಯ ಕಡೆಗೆ ನೋಡಿದನು. ಅಕ್ಷರಗಳು ಕಂಡವು, “ಗೋಪಾಲ ಬಾ”
ಎದುರಿಗೆ ರಸ್ತೆಯ ಪಕ್ಕದಲ್ಲಿರುವ ಅರಳಿ ಗಿಡದ ಬುಡದಲ್ಲಿ ಕೆಲ ಹೊತ್ತು ನಿಂತು ಅದನ್ನು ಈಕ್ಷಿಸಿದನು, ಯೋಚಿಸಿದನು. ಬಗೆಹರಿಯಲಿಲ್ಲ. ಮನೆಗೆ ಬಂದುಬಿಟ್ಟನು.
ಅಮ್ಮನು ಅಡಿಗೆಯ ಮನೆಯಲ್ಲಿ ರಾತ್ರಿ ಅಡಿಗೆಯ ವ್ಯವಸ್ಥೆಯಲ್ಲಿದ್ದಳು. ಗೋಪಾಲನು ಅಮ್ಮನ ಹತ್ತಿರ ಹೋಗಿ “ಅಮಾ ನನ್ನನ್ನು ಯಾವ ಹುಡುನಾದರು ಕೇಳಿಕೊಂಡು ಬಂದಿದ್ದನೇನಮ್ಮಾ?” ಎಂದನು. “ಇಲ್ಲವಲ್ಲ” ಎಂದಳು ಅವನ ತಾಯಿ. ಏಳು ವರುಷದ ಗೋಪಾಲನು ತನ್ನ ತಾಯಿಗೆ ಶಾಲೆಯ ಕಂಪೌಂಡ ಗೋಡೆಯ ಮೇಲೆ ತನ್ನನ್ನು “ಬಾ” ಎಂದು ಕರೆದು ಬರೆದಿರುವದನ್ನು ಹೇಳಿದನು.
“ಒಂದು ವೇಳೆ ಎದುರಿನ ಮನೆ ಸು೦ದರು ಬರೆದಿರಬಹುದು,” ಎಂದಳು ತಾಯಿ. “ಇಲ್ಲ ಅಮ್ಮಾ, ಅವನು ಬೆಳಿಗ್ಗೆ ತನ್ನ ತಂದೆಯ ಜೊತೆಯಲ್ಲಿ ಊರಿಗೆ ಹೋದನು.
“ಬೆಳಿಗ್ಗೆ ಊರಿಗೆ ಹೋಗುವ ಮೊದಲು ಬರೆದಿರಬಹುದು”
“ಇಲ್ಲ ಅಮ್ಮಾ, ಬೆಳಿಗ್ಗೆ ನಾನು ಆ ಕಡೆ ಹೋದಾಗ ಆ ಅಕ್ಷರಗಳಿರಲಿಲ್ಲ”
“ಇರಲಿ ಬಿಡು ಮಗು. ಇದಾವ ದೊಡ್ಡ ವಿಷಯ, ಊಟ ಮಾಡಿ ಮಲಗು, ನಾಳೆ ತಾನೇ ತಿಳಿಯುವದು” ಎಂದಳು.
ತಾಯಿಯ ಈ ಮಾತಿಗೆ ಗೋಪಾಲನು ತೃಪ್ತನಾಗಲಿಲ್ಲ. ತಂದೆಯ ಕಡೆಗೆ ತೆರಳಿದನು, ತಂದೆ ಇನ್ನೂ ಬಂದಿರಲಿಲ್ಲ. ಅಡಿಗೆಯ ಮನೆಗೆ ಹೋಗಿ ಊಟಕ್ಕೆ ಕುಳಿತನು. ತಾಯಿ ಬಡಿಸತೊಡಗಿದಳು.
“ಅಮ್ಮಾ ದೇವರಿಗೆ ಬರೆಯಲು ಗೊತ್ತೇ?”
“ಗೊತ್ತು, ಆದರೆ ಅವನು ನಮ್ಮಂತೆ ಬರೆಯುವದಿಲ್ಲ.”
“ಮತ್ಹೇಹೆ ಬರೆಯುವನು?”
“ಅವನು ಯಾರಿಗೂ ಕಾಣಿಸದಂತೆ ಎಲ್ಲ ಹಣೆಯ ಬರೆಯುವನು”
“ಯಾತರಿಂದ ಬರೆಯುವನು? ಖಡುವನ್ನು ಉಪಯೋಗಿಸುವದಿಲ್ಲವೇ?”
ಈ ಪ್ರಶ್ನೆಗೆ ತಾಯಿಯ ಉತ್ತರ ಕೊಡಲು ಶಕ್ತಳಾಗಲಿಲ್ಲ.
“ಅದೆಲ್ಲ ಈಗ ಹೇಳಿದರೆ ಗೊತ್ತಾಗಲಾರದು, ದೊಡ್ಡವನಾದ ಮೇಲೆ ತಾನೇ ತಿಳಿಯುವದು. ಬೇಗ ಊಟ ಮಾಡಿ ಮಲಗು” ಎಂದಳು.
ತಂದೆಯು ಮನೆಗೆ ಬಂದನು, ಏಕೊ ಅವನು ಗಂಭೀರವಾಗಿ ಕಂಡದ್ದರಿಂದ ಗೋಪಾಲನು ಅವನ ಗೊಡವೆಗೆ ಹೋಗಲಿಲ್ಲ. ಊಟ ಮುಗಿಸಿ ಮಲಗಿದನು. ಎಷ್ಟು ಹೊತ್ತಾದರೂ ನಿದ್ದೆಯೇ ಬರಲಿಲ್ಲ. ಕಣ್ಣು ತೆರೆದುಕೊಂಡೇ ಮಲಗಿದ್ದನು. “ಗೋಪಾಲ ಬಾ” ಎಂದು ಯಾರು ಬರೆದಿರಬಹುದು ಎಂಬ ಯೋಚನೆಯಲ್ಲಿಯೇ ಅತ್ತಿತ್ತ ಉರುಳಾಡುತ್ತಿದ್ದನು.
ಚಂದ್ರನ ಬೆಳಕು ಕಿಡಿಕಿಯಿಂದ ಮೆಲ್ಲನೆ ಒಳಗೆ ಬಂದಿತು. ನಿಧಾನವಾಗಿ ನೆಲದ ಮೇಲಿಂದ ಹರಿದು ಗೋಡೆಯನ್ನೇರಿತು. ಗೋಪಾಲನು ಮಂಚವನ್ನು ಇಳಿದು ಕಿಡಿಕೆಯ ಹತ್ತಿರ ಹೋಗಿ ಬಗ್ಗಿ ನೋಡಿದನು. ಆಕಾಶದಲ್ಲಿಯ ಪೂರ್ಣ ಚಂದ್ರಮನು ಶೀತಲ ಛಾಯೆಯನ್ನು ಬೀರುತ್ತಿದ್ದಾನೆ. ಎಲ್ಲೆಲ್ಲಿಯೂ ನಿಶ್ಯಬ್ದ. ಮರಗಳು, ಪಕ್ಷಿಗಳು, ಎಲ್ಲವೂ ನಿದ್ರೆ ಮಾಡುತ್ತಿದ್ದವು,
ಗೋಪಾಲನು ಮೆಲ್ಲಗೆ ತುದಿಗಾಲಿನಿಂದ ಬೆಕ್ಕಿನಂತೆ ತೆರಬಾಗಿಲಿನವರೆಗೆ ಹೋದನು. ಅದನ್ನು ಎಷ್ಟು ಮೆತ್ತಗೆ ತೆರೆದು ಹೊರಗೆ ನುಸುಳಿದನೋ ಅಷ್ಟೇ ಮತ್ತಗೆ ಬಾಗಿಲನ್ನು ಇಕ್ಕಿಕೊಂಡನು. ನೇರವಾಗಿ ಶಾಲೆಯ ಕಡೆಗೆ ನಡೆದನು, ಭರದಿಂದ ಸಾಗಿ ಶಾಲೆಯ ಕಂಪೌಂಡ ಗೋಡೆಯ ಹತ್ತಿರಕ್ಕೆ ಬಂದನು.
ಬೆಳ್ಳಗೆ, ಬೆಳದಿಂಗಳಿಗಿಂತಲೂ ಬೆಳ್ಳಗೆ ಇರುವ ಖಡುವಿನಿಂದ ಬರೆದ ಅಕ್ಷರಗಳನ್ನು ಗೋಪಾಲನಿಗೆ ಸ್ಪಷ್ಟವಾಗಿ ಕಂಡವು. ಗೋಡೆಯು ಮಾತಾಡುವಂತೆ ಅವನಿಗೆ ಭಾಸವಾಯಿತು.
“ಗೋಪಾಲ ಬಾ”
ಗೋಪಾಲನ ಕಣ್ಣುಗಳಲ್ಲಿ ಮುತ್ತಿನಂತಹ ಎರಡು ಕಣ್ಣೀರಿನ ಹನಿಗಳು ಕಾಣಿಸಿಕೊಂಡು ಉರುಳಿ ಬಿದ್ದವು. ಪುನಃ ಒಂದು ಸಲ ಅದನ್ನು ಓದಿ ಕಸ್ತೂರಿಯ ಮನೆಗೆ ನಡೆದನು.
ಗೋಪಾಲನ ಮನೆಯಂತೆ ಕಸ್ತೂರಿಯ ಮನೆಯ ನಿದ್ರಾದೇವಿಯ ಒಡಲಲ್ಲಿ ಮುಳಿಗಿದ್ದಿತು. ಕಿಡಿಕಿಯಿಂದ ಕಸ್ತೂರಿ ಮಲಗಿರುವ ಕೋಣೆಯಲ್ಲಿ ಇಣಿಕಿ ನೋಡಿದನು. ಕಸ್ತೂರಿಯು ನಿದ್ರಿಸುತ್ತಿದ್ದನು.
ಕಸ್ತೂರಿಯನ್ನು ಗಟ್ಟಿಯಾಗಿ ಕೂಗಿ ಎಬ್ಬಿಸಿ ಈ ಮನೋಹರವಾದ ಬೆಳದಿಂಗಳಲ್ಲಿ ಅವನ ಕೂಡ ಆಟವಾಡಬೇಕೆ೦ದೆನಿಸಿತು ಗೋಪಾಲನಿಗೆ. ಆದರೆ ಏಕೋ ಧೈರ್ಯವಾಗಲೊಲ್ಲದು. ತಿರುಗಿ ಹಾಗೆಯೇ ಶಾಲೆಗೆ ಬಂದು ಸೇರಿದನು. ಏನು ಆಡಬೇಕೆಂಬುದು ತೋಚದೇ ಶಾಲೆಯ ಎದುರಿಗಿರುವ ತಾವರೆಯ ಕೊಳಕ್ಕೆ ಹೋಗಿ ತಮಾಷೆ ಮಾಡತೊಡಗಿದನು. ನಿರ್ಮಲವಾದ ನೀರಿನಲ್ಲಿ ಚಂದ್ರಮನ ಬಿಂಬವು ಗೋಪಾಲನ ಹೃದಯಕ್ಕೆ ಬಹಳ ಉತ್ಸಾಹವನ್ನು ತಂದಿತು: ತಾವರೆಯ ಬಳ್ಳಿಯು ಅನೇಕ ಮೊಗ್ಗೆಗಳನ್ನು ಬಿಟ್ಟಿದ್ದಿತು. ಆ ಬಳ್ಳಿಯ ಎಲೆಯ ಮೇಲೊಂದು ಕಪ್ಪೆಯು ಕುಳುತಿತ್ತು. ಕಪ್ಪೆಗೆ ಈ ಬೆಳದಿಂಗಳ ಶೋಭೆಯನ್ನು ಭೋಗಿಸಲು ಗೊತ್ತು! ಆಗಾಗ ಕರ್ಕಶ ಧ್ವನಿ ಮಾಡಿ ಶಾಂತತೆ ಭಂಗಪಡಿಸುತಿತ್ತು. ಒಮ್ಮೆ ಕಪ್ಪೆಯು “ಕರ್” ಎಂದಿತು. ಗೋಪಾಲನಿಗೆ ಅಸಹ್ಯವೆನಿಸಿತು, ಜೇಬಿನಲ್ಲಿಯ ಒಂದು ಕಲ್ಲನ್ನು ತೆಗೆದು ಅದರ ಕಡೆಗೆ ಬೀಸಿದನು. ಕಲ್ಲು ಮುಳುಗಿತು. ಕಪ್ಪೆಯು ಜಿಗಿದು ನೀರಿನಲ್ಲಿ ಹಾರಿತು, ಕೆಲ ಹೊತ್ತು ಅಲ್ಲಿಯೇ ಅಲೆದಾಡಿ ಗೋಪಾಲನು ಪುನಃ ಅರಳೀಮರದ ಬುಡಕ್ಕೆ ಬಂದು ಶಾಲೆಯ ಗೋಡೆಯ ಮೇಲೆ ನೋಡಿದನು.
“ಗೋಪಾಲ ಬಾ”
ಗೋಪಾಲನಿಗೆ ಈಗ ಹೇಗೆ ಹೇಗೋ ಅನಿಸಿತು. ಈ ನಿಶ್ಯಬ್ದವಾದ ನಡುರಾತ್ರಿಯಲ್ಲಿ “ಗೋಪಾಲ ಬಾ” ಎಂದು ತನ್ನನ್ನು ಕರೆಯುವಂತೆ ಭಾಸವಾಯಿತು. ಮತ್ತೊಂದು ಕಡೆಗೆ ನೋಡಿದನು. ಅಲ್ಲಿ ಮುನಸಿಪಾಲಿಟಿಯ ಸಾರ್ವಜನಿಕ ನಳದ ಕಟ್ಟೆಯಿದ್ದಿತು. ನಳದ ಬೂಚು ತುಸು ಸರಿದಿದ್ದರಿಂದ ನೀರು ತಟತಟನೇ ಬೀಳತೊಡಗಿತ್ತು. ಗೋಪಾಲನಿಗೆ ಒಮ್ಮೆಲೇ ನೆನಪಾಯಿತು. ಹಾಲಿನಾಕೆಯು ಇಲ್ಲಿಯೇ ಈ ನಳದಿಂದಲೇ ಹಾಲಿಗೆ ನೀರು ಬೆರಸಿ ತನ್ನ ಮನೆಗೆ ತರುವಳೆಂದು ಅಮ್ಮನು ಗೋಪಾಲನಿಗೆ ಹೇಳಿದ್ದಳು. ಈಗ ಬೆಳಗಾಗುವ ಹೊತ್ತಾಯಿತು, ಹಾಲಿನಾಕೆಯು ಬರುವಳು, ತಾನು ಇಲ್ಲಿ ಇದ್ದದ್ದು ಅವಳು ನೋಡಿ ಅಮ್ಮನಿಗೆ ಹೇಳುವಳು ಅಮ್ಮನು…… ಆದ್ದರಿಂದ ತಾನು ಈಗಲೇ ಮನೆಗೆ ಹೋಗಿ ಬಿಡಬೇಕೆಂದು ಗೋಪಾಲನು ನಿರ್ಧರಿಸಿದನು.
ಅಷ್ಟರಲ್ಲಿ ಹಿಂದಿನಿಂದ ಯಾರೋ “ಗೋಪಾಲಾ … ” ಎಂದಂತಾಯಿತು. ಗೋಪಾಲನು ಗಾಬರಿಯಾಗಿ ಹಿಂದೆ ತಿರುಗಿ ನೋಡಿದನು. ಆಶ್ಚರ್ಯ! ಅರಳಿಗಿಡದ ಬುಡದಲ್ಲಿ ಒಬ್ಬ ದೊಡ್ಡ ಅಜಾನುಬಾಹು ಮನುಷ್ಯ. ಟೊಂಕದವರೆಗೆ ಇಳಿಬಿದ್ದ ಬಿಳಿ ಗಡ್ಡ ಮೀಸೆಗಳುಳ್ಳವನು ನಿಂತಿದ್ದಾನೆ. ಗೋಪಾಲನು ಬಹಳ ಅಂಜಿದನು. ನಡುಗುತ್ತಲೇ ಅವನೆಡೆಗೆ ಬಂದು “ನೀನು ಯಾರು” ಎಂದನು.
“ನಾನು ಗಡ್ಡದ ಬಾವಾ” ನಿನ್ನನ್ನು ಹಿಡಿದುಕೊಂಡು ಹೋಗಲು ಬಂದಿದ್ದೇನೆ. ನಿನ್ನನ್ನು ಈ ರೀತಿ ಈ ಸರರಾತ್ರಿಯಲ್ಲಿ ಇಲ್ಲಿಗೆ ಬರುವಂತೆ ಮಾಡಲು ನಾನೇ ನಿನ್ನ ಶಾಲೆಯ ಕಂಪೌಂಡ ಗೋಡೆಯ ಮೇಲೆ `ಗೋಪಾಲ ಬಾ’ ಎಂದು ಬರೆದಿದ್ದೇನೆ” ಎಂದನು.
ಪಾಪ! ಚಿಕ್ಕ ಗೋಪಾಲನಿಗೆ ಎಲ್ಲವೂ ಅರ್ಥವಾಗಿ ಬಿಟ್ಟಿತು. ಚಿಕ್ಕ ಚಿಕ್ಕ ಬಾಲಕರನ್ನು ಹಿಡಿದುಕೊ೦ಡು ಕರೆದೊಯ್ಯಲು ಗಡ್ಡದ ಬಾವಾ ಬರುವನೆಂಬ ಬಗ್ಗೆ ಅಮ್ಮನು ಹೇಳಿದ ಕತೆಗಳೆಲ್ಲವೂ ನೆನಪಾದವು. ಹಾಗಾದರೆ, ಅಮ್ಮನು ಹೇಳಿದ್ದು ನಿಜವೆಂದುಕೊಂಡನು.
ತನ್ನ ಹಿಂದೆ ಬರಲು ಗಡ್ಡದ ಬಾವಾ ಸಂಜ್ಞೆ ಮಾಡಿದನು. ಗೋಪಾಲನಿಗೆ ಅಳುವು ಬಂದುಬಿಟ್ಟಿತು. ಅಳಬೇಕೆಂದರೆ ಏಕೋ ಬಾಯಿಯೇ ಬಾರದು. ಹೇಳಿದಂತೆ ನಡೆಯದಿದ್ದರೆ “ಬಾವಾ” ನುಂಗಿ ಬಿಟ್ಟಾನ್ನು. ಗೋಪಾಲನು ಬಾವಾನ ಹಿಂದೆಯೇ ನಡೆದನು. ಬಹುದೂರ ಉಗಿ ಬಂಡೆಯ ಕೂಗುವ ಧ್ವನಿ ಕೇಳಿಸಿತು. “ಬಾವಾ” ಗೋಪಾಲನನ್ನು ನಿಲ್ದಾಣಕ್ಕೆ ಕರೆದೊಯ್ದನು. ನಿಲ್ದಾಣದಲ್ಲಿ ಗದ್ದಲ ಬಹಳ, ಗಾಡಿ ಬಂದಿತು. ಆ ಮೇಲೇನು ಗದ್ದಲದ ಅಬ್ಬರವನ್ನು ಕೇಳುವದು? ಜನ ಸಾಗರವು ಗಾಡಿಯೊಳಗೆ ನುಗ್ಗುತ್ತಿದೆ, ಗಾಡಿಯಿಂದ ಹೊರಬೀಳುತ್ತಿದೆ. “ಗಡ್ಡದಬಾವಾ” ಗೋಪಾಲನ ಕೈ ಹಿಡಿದೆಳೆದು ಗಾಡಿಯಲ್ಲಿ ಒಗೆದು ತಾನೂ ಜಿಗಿದು ಕುಳಿತುಕೊಂಡನು. ಅದೇ ಡಬ್ಬಿಯಿಂದ ಕಳಗೆ ಇಳಿಯುತ್ತಿರುವ ಗೋಪಾಲನ ಭಾವನು ಇದನ್ನು ಆಕಸ್ಮಾತ್ತಾಗಿ ನೋಡಿ ಆಶ್ಚರ್ಯದಿಂದ ಕೇಳಿದನು. “ಗೋಪಾಲಾ ನೀನೆಲ್ಲಿ ಹೊರಟೆ?” ಗೋಪಾಲನು ಮಾತಾಡುವಂತಿರಲಿಲ್ಲ. ಬಾವಾನನ್ನು ಕಣ್ಸನ್ನೆಯಿಂದ ತೋರಿಸಿದನು.
ಗೋಪಾಲನ ಭಾವನಿಗೆ ಕೂಡಲೇ ಅರ್ಥವಾಗಿ ಬಿಟ್ಟಿತು. ಮಕ್ಕಳ ಕಳ್ಳನಾದ ಗಡ್ಡದಬಾವಾ ತಮ್ಮ ಗೋಪಾಲನನ್ನು ಹಿಡಿದುಕೊಂಡು ಹೊರಟಿದ್ದಾನೆಂದು, ಕೂಡಲೇ ಭಾವನವರು ಕೂಗಿಕೊಂಡರು. “ಮಕ್ಕಳ ಕಳ್ಳನಿವ, ಹಿಡಿಯಿರಿ ಹೊಡೆಯಿರಿ” ಎಂದು ಗಡ್ಡದಬಾವಾ ತಪ್ಪಿಸಿಕೊಂಡು ಓಡಿಹೋಗಲು ಬಹಳ ಪ್ರಯತ್ನಿಸಿದನು. ಆದರೆ ನಿಲ್ದಾಣದ ಜನಜಂಗುಳಿಯಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವೇ! ಎಲ್ಲರೂ ಬಾವಾನನ್ನು ಹಿಡಿದರು. ಅವನ ಬೆನ್ನ ಮೇಲೆ ಪೆಟ್ಟುಗಳನ್ನು ಹಾಕಹತ್ತಿದರು. ಆದರೆ ಆ ಪೆಟ್ಟುಗಳೆಲ್ಲವೂ ತನ್ನ ಬೆನ್ನ ಮೇಲೆ ಬಿದ್ದಂತೆ ಗೋಪಾಲನಿಗೆ ಅನಿಸಹತ್ತಿತು, ಅವನ ಬೆನ್ನು ನೋಯತೊಡಗಿತು.
ಅಮ್ಮನು ಕೂಗಿದಳು, “ಮಗೂ ಗೋಪಾಲಾ! ಏಳಪ್ಪಾ ಇಂದು ದೀಪಾವಳೀ. ಎರೆದುಕೊಳ್ಳಬೇಕು” ಎಂದು ಬೆನ್ನು ತಟ್ಟಿ ತಟ್ಟಿ ಅವನನ್ನು ಎಬ್ಬಿಸಿದಳು. ಗೋಪಾಲನು ನಿದ್ರೆ ತಿಳಿದು ಎದ್ದನು. ತನ್ನ ತಾಯಿಯು ಬೆನ್ನು ತಟ್ಟುತ್ತಿದ್ದಾಳೆ, ಕಣ್ಣು ಉಜ್ಜಿಕೊಂಡನು. ಸುತ್ತಲೂ ನೋಡಿದನು. ಇದು ಕನಸು. ನಿಜವಲ್ಲ. ಎಂದು ತಿಳಿದು ನಗುತ್ತ ಎದ್ದನು;
ಹೊರಗೆ ಭಾವನವರು ಗಾಡಿಯಿಂದ ದೀಪಾವಳಿ ಹಬ್ಬಕ್ಕೆಂದು ಬಂದವರು: ಟಾಂಗಾ ಇಳಿದರು, ಗೋಪಾಲನಿಗಾಗಿ ಅನೇಕ ವಿಧವಿಧದ ಪಟಾಕಿಗಳನ್ನು ತಂದಿದ್ದರು. ಅವನ್ನೆಲ್ಲವನ್ನೂ ಹಾರಿಸುವದರಲ್ಲಿ ಇಡೀ ದಿನವನ್ನೇ ಕಳೆದನು.
ಸಂಜೆಯಲ್ಲಿ ಅಕ್ಕ ಭಾವಂದಿರಕೂಡ ಗೋಪಾಲನು ಹೊರಗೆ ಅಲೆದಾಡಲು ಪೇಟೆಗೆ ಹೋದನು. ಅಲ್ಲಿ ಅವನ ಗೆಳೆಯ ಚಂದು (ಚಂದ್ರ ಸೇಖರ) ನ ಭೆಟ್ಟಿ ಆಯಿತು. “ನಿನ್ನೆ ಎಲ್ಲಿ ಹೋಗಿದ್ದೆಯೋ ಗೋಪಾಲಾ ಮನೆ ಬಿಟ್ಟು” ಚಂದು ಕೂಗಿದನು. ನಾನು ನಿನ್ನ ಮನೆಗೆ ಬಂದಿದ್ದೆನು. ನಿನ್ನನ್ನು ಕಾಣಲಿಲ್ಲ, “ನನ್ನ ಮನೆಗೆ ಬಾ” ಎಂದು ಸೂಚಿಸುವಂತೆ “ಗೋಪಾಲ ಬಾ” ಎಂದು ಶಾಲೆಯ ಕಂಪೌಂಡ ಗೋಡೆಯ ಮೇಲೆ ಬರೆದಿಟ್ಟಿದ್ದೆನು, ನೀನು ಓದಲಿಲ್ಲವೆಂಬಂತೆ ತೋರುವದು” ಎಂದನು.
*****



















