ಮೂಲ: ಆರ್ ಕೆ ನಾರಾಯಣ್
ಕೃಷ್ಣ ಅವಳನ್ನು ಮೊದಲು ನೋಡಿದುದು ಬೀದಿಯ ನಲ್ಲಿಯ ಹತ್ತಿರ. ಆ ದಿನದಿಂದ ಅವನನ್ನು ಬೀದಿಯ ನಲ್ಲಿಯ ಹತ್ತಿರ ನೋಡುವುದು ಅವಳಿಗೂ ವಾಡಿಕೆಯಾಗಿಬಿಟ್ಟಿತು. ನೇರವಾದ ಪ್ರೇಮ ಸಾಧ್ಯವಿರಲಿಲ್ಲ. ಅರ್ಥಗರ್ಭಿತವಾದ ಓರೆ ನೋಟದಲ್ಲೇ ನಿಲ್ಲಬೇಕಾಯಿತು ಅವರ ಪ್ರಣಯ. ಮದುವೆಯ ಮಾತಿನಲ್ಲಿ ಹುಡುಗನ ತಂದೆಯೇ ಮೇಲೆ ಬಿದ್ದು ಹೋಗುವಂತಿಲ್ಲ. ಬೀದಿಯನಲ್ಲಿಯ ಹತ್ತಿರವೇ ಅಳಿಯ ಬಿದ್ದಿರುತ್ತಾನೆ, ಎಂದುಬೇಕಾದರೂ ಆರಿಸಿಕೊಳ್ಳಬಹುದು ಎಂದು ಹುಡುಗಿಯ ತಂದೆಗೆ ಹೇಗೆ ಗೊತ್ತಾಗಬೇಕು?
ಕಡೆಗೂ ಒಬ್ಬ ಮಧ್ಯಸ್ಥಗಾರರು ಸಿಕ್ಕಿದರು. ಆತ ಕೀಲು ತಿರುಗಿಸಿದರು. ಬರುವ ತಿಂಗಳಿಗೆ ಹುಡುಗಿಗೆ ಹದಿನಾಲ್ಕು ತುಂಬಿ ಹೋಗುವುದರಿಂದ ಅವಳ ತಂದೆಯೂ ವರಾನ್ವೇಷಣಕ್ಕೆ ತೊಡಗಲೇಬೇಕಾಗಿತ್ತು. ಕೃಷ್ಣನ ಅರ್‍ಹತೆಗಳೂ ಸಮರ್‍ಪಕವಾಗಿಯೇ ಇದ್ದುವು ; ಒಳ್ಳೆಯ ಸಂಬಂಧ, ಅನು ಕೂಲಸ್ಥರ ಮನೆಯ ಹುಡುಗ, ಬಿ.ಎ ಯಲ್ಲಿ ಓದುತ್ತಿದ್ದಾನೆ…….. ಕೃಷ್ಣನ ತಂದೆ ತಾಯಿಗಳಿಗೆ ಹುಡುಗಿಯ ಅರ್ಹತೆಗಳೂ ಒಪ್ಪಿದುವು; ಒಳ್ಳೆಯ ಸಂಬಂಧ, ಲಕ್ಷಣವಾಗಿದ್ದಾಳೆ, ಇಂಪಾಗಿ ಹಾಡುತ್ತಾಳೆ, ಲೋವರ್ ಸೆಕೆಂಡರಿವರೆಗೆ ಓದಿದ್ದಾಳೆ……..
ಮಾತುಕತೆಗಳು ಈ ಘಟ್ಟಕ್ಕೆ ಬಂದಿದ್ದಾಗ, ಕೃಷ್ಣ ಹುಡುಗಿಯನ್ನು ಮೊದಲಿಗಿಂತ ಹೆಚ್ಚು ವಿಮರ್‍ಶಾತ್ಮಕ ದೃಷ್ಟಿಯಲ್ಲಿ ನೋಡತೊಡಗಿದ. ಆದರೆ, ಅವರ ದೃಷ್ಟಿ ಮಿಲನ ಕೇವಲ ಕ್ಷಣಮಾತ್ರದ ಸಂಗತಿಯಾಗಿತ್ತು. ಇಷ್ಟು ದಿವಸವಾದರೂ ಅವಳ ಬಣ್ಣವೇನು, (ಎಣ್ಣೆಗೆಂಪೋ, ಎಳೆಗುಲಾಬಿಯೋ), ಅವಳ ಮೂಗಿನ ಆಕಾರವೇನು-ಎಂಬ ಎರಡು ಮುಖ್ಯ ವಿಷಯಗಳ ಬಗ್ಗೆ ಅವನಿಗೆ ಯಾವುದೂ ಖಚಿತವಾಗಿ ತಿಳಿದೇ ಇರಲಿಲ್ಲ. ಕನ್ಯಾ ಪರೀಕ್ಷೆಯಲ್ಲಿ ಇವುಗಳು ಮುಖ್ಯವಾದ ಅಂಶಗಳು. ಇವೆರಡನ್ನೂ ಕಂಡುಕೊಳ್ಳಬೇಕೆಂದು ಅವನು ಎಷ್ಟೋ ಪ್ರಯತ್ನ ಮಾಡಿದ್ದ, ಹೇಗಿದ್ದರೇ ನಂತೆ? ಅದರಿಂದ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ…. ಅವಳ ನೆನಪು ಸುಮಧುರ ಪರಿಮಳದಂತೆ ಅವನ ಸುತ್ತಲೂ ಪಸರಿಸಿತ್ತು. ಒಟ್ಟಿನ ಮೇಲೆ ಕೃಷ್ಣನಿಗೆ ಜೀವನ ಸುಖಮಯವಾಗಿ ಕಂಡಿತು.
ಒಂದು ದಿನ ಶುಭಲಗ್ನದಲ್ಲಿ ಹುಡುಗಿಯ ತಂದೆ ಕೃಷ್ಣನ ಮನೆಗೆ ಬಂದರು. ಕೃಷ್ಣ ಅವರನ್ನು ಎದುರುಗೊಂಡು, ಕುರ್‍ಚಿ ಕೊಟ್ಟ. ಕ್ಷೇಮ ಸಮಾಚಾರ ವಿಚಾರಿಸಿದ. ಅವನ ಕಾಥರವೇ ಕಾಥರ! ಮುಖವೆಲ್ಲ ಕೆಂಪೇರಿತ್ತು. ಎದೆ ಡವಡವಗುಟ್ಟುತ್ತಿತ್ತು. ಹೇಗೆ ನಡೆದುಕೊಳ್ಳಬೇಕೋ ತೋರದೆ ಹೋಯಿತು. ಯಾರ ಕೈ ಹಿಡಿಯಲು ಪ್ರಾಣವನ್ನೇ ಒಪ್ಪಿಸಲು ಸಿದ್ದವಾಗಿದ್ದನೋ ಅವಳ ತಂದೆಗೆ ಅಷ್ಟೊಂದು ಸಮಾಜದಲ್ಲಿ ನಿಂತುಕೊಳ್ಳುವುದು ಹೇಗೆ? ಕೃಷ್ಣನ ತಂದೆ ಆಗಂತುಕರನ್ನು ಆದರದಿಂದ ಮಾತಾಡಿಸಿದರು. ಇದನ್ನು ಕಂಡು ಕೃಷ್ಣನಿಗೆ ಅಪಾರವಾದ ಸಂತೋಷವಾಯಿತು. ಇನ್ನು ನಿಲ್ಲಬೇಕಾದುದಿವೆಲ್ಲಂದು ಮೆಲ್ಲನೆ ಮನೆಯೊಳಕ್ಕೆ ನುಸುಳಿಕೊಂಡ. ಹುಡುಗಿಯ ತಂದೆ ಸ್ವಲ್ಪ ಕಾಲ ಬತ್ತದ ಧಾರಣೆ, ಭರಣಿಮಳೆ, ಮುನಿಸಿಪಲ್ ಚುನಾವಣೆ, ವಾರ್‍ಧಾ ಯೋಜನೆ ಇವುಗಳ ವಿಷಯವೆಲ್ಲ ಮಾತನಾಡಿ ಅನಂತರ ಒಂದು ಕಾಗದದ ಹಾಳೆಯನ್ನು ಜೇಬಿನಿಂದ ತೆಗೆದರು. ಕಾಗದದ ನಾಲ್ಕು ಮೂಲೆಗಳಿಗೂ ಕುಂಕುಮ ಸವರಿತ್ತು “ಇದು ನನ್ನ ಮಗಳ ಜಾತಕ. ನಮ್ಮಿಬ್ಬರ ಮನೆತನಗಳಿಗೂ ಸಂಬಂಧ ಬೆಳೆದುಬಂದರೆ ನಾನು ಪಾವನನಾದಂತೆಯೇ ಸರಿ.” ಎಂದನು. “ನಾನೂ ಅಷ್ಟೆ” ಎಂದು ಕೃಷ್ಣನ ತಂದೆ ಹೇಳಿ, ಜಾತಕವನ್ನು ತೆಗೆದುಕೊಂಡರು.
“ತಮ್ಮ ಪುತ್ರನ ಜಾತಕ ಕೊಡೋಣವಾಗುತ್ತದೆಯೇ?”
“ಹ್ಹು, ನೋಡಿ-ಅದರಗೊಡವೆ ಬಿಟ್ಟರಾಗುವುದಿಲ್ಲವೆ? ನನಗಂತೂ ಜಾತಕದಲ್ಲಿ ಸುತರಾಂ ನಂಬಿಕೆಯಿಲ್ಲ.” ಎಂದರು ಕೃಷ್ಣನ ತಂದೆ. ಆದರೆ ಹುಡುಗಿಯ ತಂದೆ ಹಿಂದಿನ ಪದ್ದತಿಯವರು. ಹುಡುಗನ ಜಾತಕ ಹುಡುಗಿಯ ಜಾತಕ ಕೂಡಿಬರುತ್ತದೆಯೇ ಎಂಬುದನ್ನು ಕಂಡುಕೊಳ್ಳದೆ ಹೆಜ್ಜೆಯನ್ನು ಮುಂದಿಡಲು ಸಿದ್ಧವಾಗಿರಲಿಲ್ಲ. ಮದುವೆಯೆಂಬುದು ಕಣ್ಣು ಕಟ್ಟಿಕೊಂಡು ಕತ್ತಲಲ್ಲಿ ಧುಮುಕಿದಂತೆ. ದಂಪತಿಗಳ ಆಯುಸ್ಸು, ಆರೋಗ್ಯ, ಸುಖಸಂತೋಷ ಇವೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳದೆ ಹೋಗುವುದು ಸಾಧ್ಯವೇ? ಎರಡು ಜಾತಕ ಬೆರೆಸುವುದು, ಎರಡು ಗ್ರಹಗಳನ್ನು ಬೆರೆಸಿದಂತೆ; ಹೀಗಾದರೂ ಆಗಬಹುದು, ಹಾಗಾದರೂ ಆಗಬಹುದು.
ಕೆಲವು ದಿನ ಕಳೆದ ತರುವಾಯ, ಹುಡುಗಿಯ ತಂದೆ ಬಂದು ಕೃಷ್ಣನ ಜಾತಕದಲ್ಲಿ ಪ್ರಬಲವಾದ ದೋಷವಿದೆಯೆಂದು ತಿಳಿಸಿದರು. “ಅಂಗಾರಕನು ಏಳನೆಯ ಮನೆಯಲ್ಲಿದ್ದಾನೆ. ಆದುದರಿಂದ ಪತ್ನಿಗೆ ಅಲ್ಪಾಯುಸ್ಸು ಎಂದರ್ಥ.” ಈ ಬಗೆಯ ದೋಷವನ್ನು ನಿರ್‍ಲಕ್ಷಿಸಿ ನಡೆಸಿದ ಮದುವೆಗಳಲ್ಲಿ, ವಿವಾಹ ಮುಗಿದ ಮಾರನೆಯ ದಿನವೇ ಹೆಣ್ಣು ತೀರಿಹೋದ ಕತೆಗಳೆಷ್ಟನ್ನೂ ಆತ ಉದಹರಿಸಿದರು. ತನ್ನ ಮಗಳ ಪ್ರಾಣವನ್ನು ಪರೀಕ್ಷೆಗೊಡುವುದಕ್ಕೆ ಆತ ಸಮ್ಮತಿಸಲಿಲ್ಲ. ನಕ್ಷತ್ರಗಳೂ ಕಂದಾಚಾರವೂ ಸೇರಿ ತನ್ನ ಗತಿ ಪೂರೈಸಿದುವೆಂದು ಕೃಷ್ಣ ಕಂಬನಿಗರೆದ.
ಕೃಷ್ಣನ ತಂದೆ ಭಾರಿಯ ಜ್ಯೋತಿಷ್ಯರೊಬ್ಬರನ್ನು ವಿಚಾರಿಸಿ ಪ್ರತ್ಯುತ್ತರವನ್ನು ಸಜ್ಜುಗೊಳಿಸಿಕೊಂಡರು: ಭಾರ್‍ಯಾ ವಿನಾಶಕ ಗ್ರಹದ ಪ್ರಭಾವವೆಲ್ಲ ಕಳೆದುಹೋಗಿ ಈಗದು ನಿರ್‍ಬಲವಾಗಿಬಿಟ್ಟಿದೆ ; ಒಂದು ವೇಳೆ ಹುಡುಗನೇನಾದರೂ ಐದು ವರ್ಷಗಳ ಹಿಂದೆ ಮದುವೆ ಮಾಡಿ ಕೊಂಡಿದ್ದಿದ್ದರೆ, ಮತ್ತೆ ಈಗ ಮದುವೆ ಮಾಡಿಕೊಳ್ಳಬೇಕಾಗುತ್ತಿತ್ತು, ಇತ್ಯಾದಿ. ಆಲೋಚಿಸಿ ನೋಡುತ್ತೇನೆಂದು ಭರವಸೆಯಿತ್ತು ಕನ್ಯೆಯ ತಂದೆ ಭರವಸೆಯಿತ್ತರು. ಮತ್ತೆ ತಮ್ಮ ಜೋಯಿಸರನ್ನು ವಿಚಾರಿಸಿ, “ಇಲ್ಲವಂತೆ, ಈ ಎರಡು ಜಾತಕಗಳನ್ನೂ ಒಟ್ಟಿಗೆ ಒಂದು ಲಕ್ಕೋಟಿ ಯಲ್ಲಿಡುವುದು ಕೂಡ ಕ್ಷೇಮವಲ್ಲವೆಂದು ಹೇಳಿದರು” ಎಂದು ವರದಿ ಒಪ್ಪಿಸಿದರು. ಹೆಂಡತಿ-ಕೊಲೆಗಾರನು ಕೇವಲ ನಿಶ್ಯಕ್ತನಾಗಿಬಿಟ್ಟಿದಾನೆ, ನಿಶ್ಯಕ್ತನಾದ ಅಂಗಾರಕನಿಗೆ ಹೆದರಿಕೊಳ್ಳುವುದು ಶುದ್ದ ಹೇಡಿತನ, ಅಂಥ ಹೇಡಿತನವನ್ನು ಯಾರೂ ಕೇಳಿದ್ದಿಲ್ಲ ಎಂದು ಕೃಷ್ಣನ ತಂದೆ ಹಟಹಿಡಿದರು. ಹುಡುಗಿಯ ತಂದೆಯ ಮನಸ್ಸಿನಲ್ಲು ಇದೇ ಭಾವನೆಯಿತ್ತು. ಒಂದುಕಡೆ ಈ ಸಂಬಂಧ ಬೆಳೆಸಬೇಕೆಂಬಾಸೆ, ಮತ್ತೊಂದುಕಡೆ ಅಂಗಾರಕನ ಭಯ, ಎರಡರ ತುಯ್ದಾಟದಲ್ಲಿ ಯಾವುದನ್ನೂ ತೀರ್‍ಮಾನಿಸುವುದಕ್ಕಾಗಲಿಲ್ಲ ಆತನಿಗೆ. ಏನು ಮಾಡಬೇಕೋ ತೋರಲಿಲ್ಲ. “ಈ ಬಗೆಯ ಸಮಸ್ಯೆಗಳನ್ನೆಲ್ಲ ಪೂರ್‍ವಿಕರು ದೈವೇಚ್ಛೆಗೆ ಬಿಟ್ಟು ಬಿಡುತ್ತಿದ್ದರು, ನಾವೂ ಹಾಗೆಯೇ ಮಾಡಬಹುದಲ್ಲವೆ?” ಎಂದು ಕೃಷ್ಣನ ತಂದೆ ಸೂಚಿಸಿದರು. ಕನ್ಯಾ ಪಿತೃ ಬಹಳ ಆತುರದಿಂದ ಈ ಸಲಹೆಯನ್ನು ಅಪ್ಪಿಕೊಂಡರು.
ವಾರದಲ್ಲೆಲ್ಲ ಶುಭದಿನವಾದ ಶುಕ್ರವಾರದ ಪ್ರಾತಃಕಾಲ ಅದೇವೇಳೆಗೆ ಊರಗುಡಿಯಲ್ಲಿ ಕೃಷ್ಣ, ಕೃಷ್ಣನ ತಂದೆ, ಹುಡುಗಿಯ ತಂದೆ ಮಧ್ಯಸ್ಥಗಾರರು ಇಷ್ಟು ಜನವೂ ಸೇರಿದ್ದರು. ಅರ್‍ಚಕ ಬಂದು ಶಕ್ತಿಗೆ ಒಡೆಯನಾದ ಆಂಜನೇಯ ದೇವರ ಮುಂದೆ ಎತ್ತರವಾದ ದೀಪಸ್ತಂಭವನ್ನು ಹೊತ್ತಿಸಿಟ್ಟು, “ಯಾರಾದರೂ ಪಕ್ಕದ ಮನೆಗೆ ಹೋಗಿ ಅವರ ಮಗುವನ್ನು ಒಂದು ನಿಮಿಷ ಕಳುಹಿಸಬೇಕಂತೆ ಎಂದು ಹೇಳಿ ಬರುತ್ತೀರಾ?” ಮರುಗಳಿಗೆಯಲ್ಲೇ ಮುಖವೆಲ್ಲ ನಗುವಿನಿಂದ ತುಂಬಿದ ಐದು ವರ್ಷದ ವಸ್ತುವೊಂದು ಕುಪ್ಪಳಿಸಿಕೊಂಡು ಬಂತು. ಅವಳ ಕಪ್ಪು ಕಣ್ಣುಗಳು ಕುತೂಹಲದಿಂದ ದುಂಡಗಾಗಿದ್ದುವು.
ಕತ್ತಲು ಮುಸುಕಿದ್ದ ಗರ್‍ಭಗುಡಿಯಲ್ಲಿ ಎಲ್ಲರೂ ನಿಂತರು. ತೆಂಗಿನ ಕಾಯಿ ಒಡೆದು ನೈವೇದ್ಯ ಮಾಡಿಯಾಯಿತು. ಬಾಳೆಹಣ್ಣು ಒಪ್ಪಿಸಿದ್ದಾಯಿತು. ಗಂಟೆ ಬಾರಿಸಿಕೊಂಡು ದೇವರ ಸುತ್ತ ಕರ್‍ಪೂರದ ಆರತಿ ಸುತ್ತಿಯಾಯಿತು. ಮಂಗಳಾರತಿಯ ಬೆಳಕಿನಲ್ಲಿ ಹೊಳೆಯುತ್ತಿದ್ದ ಪುಷ್ಪಾಲಂಕೃತ ಪ್ರತಿಮೆಗೆ ಕೈಮುಗಿದು ಕೃಷ್ಣನು “ದೇವರೇ, ನನ್ನ ಕಡೆಗೇ ತೀರ್‍ಪು ಕೊಡಪ್ಪಾ, ಅಂಗಾರಕನನ್ನು ಹುಲ್ಲುಕಡ್ಡಿಗಿಂತ ನಿಕೃಷ್ಟವಾಗಿ ಮಾಡಪ್ಪ, ಅದು ನಿರ್‍ಬಲವೆಂದು ಅರಿತುಕೊಳ್ಳುವಷ್ಟು ಬುದ್ಧಿಯನ್ನು ನಮ್ಮ ಮಾವನವರ ಮಿದುಳಿಗೆ ತುಂಬಪ್ಪಾ” ಎಂದು ಪ್ರಾರ್‍ಥಿಸಿಕೊಂಡ.
ಬತಿಯ ಕುಡಿಯಿಂದ ಐದಾರು ಕಿಡಿಗಳು ಹಾರಿದುವು. ಹಿರಿಯರು ಒಬ್ಬರಕಡೆ ಇನ್ನೊಬ್ಬರು ನೋಡಿ “ಆ! ಎಂಥ ಒಳ್ಳೆಯ ಶಕುನ!” ಎಂದು ಪಿಸುಗುಟ್ಟಿಕೊಂಡರು.
ದೇವರು ತನ್ನ ತೀರ್‍ಪನ್ನು ಕೊಡುವಸಮಯ ಬಂತು, ದೇವರಿಗೆ ತೊಡಿಸಿದ್ದ ಹಾರದಿಂದ ಬಿಳಿಯದೊಂದು ಕೆಂಪುದೊಂದು ಹೂವನ್ನು ಆರಿಸಿ ಗರ್ಭಗುಡಿಯು ಹೊಸಿಲಮೇಲಿಟ್ಟು, ಪೂಜಾರಿಯು ಮಗುವನ್ನು ಕರೆದು, – “ನಿನಗೊಂದು ಬಾಳೆಹಣ್ಣು ಬೇಕೇನಮ್ಮಾ?” ಎಂದು ಕೇಳಿದರು,
ಅದರಲ್ಲೇನು ಸಂದೇಹ?
“ಸರಿ ಹಾಗಾದರೆ, ಇಲ್ಲಿ ಹೊಸಲಿನ ಮೇಲೆ ಎರಡು ಹೂವಿದೆಯಲ್ಲ, ಆದರಿಂದ ನನ್ನ ಕೈಗೆ ಕೊಡಮ್ಮ” ಎಂದ ಪೂಜಾರಿ.
“ಇನ್ನೊಂದು?” ಎಂದಳು ಹುಡುಗಿ.
“ಒಂದೇ ಒಂದು ಎತ್ತಿಕೊಳ್ಳಬೇಕು.”
“ಅದೇಕೆ?”
“ದೇವರಿಗೆ ಒಂದೇಹೂವು ಸಾಕಂತೆ. ನೀನು ಎತ್ತಿ ಕೊಡು ನಿನಗೆ ಬಾಳೆಹಣ್ಣು ಕೊಡುತ್ತೇನೆ.”
ಮಗು ಒಂದು ಗಳಿಗೆ ಹೂವುಗಳ ಕಡೆಯೇ ನೋಡುತ್ತ ನಿಂತಿದ್ದಳು. ತಾನು ನಿರ್‍ವಹಿಸಬೇಕಾಗಿದ್ದ ಪಾತ್ರದ ಮಹತ್ವ ಅವಳಿಗೇನುಗೊತ್ತು? ಅವಳೀಗ ದೇವರಿಗೂ ಮನುಷ್ಯರಿಗೂ ನಡುವಣ ರಾಯಭಾರಿ, ತಾನೊಪ್ಪಿದ ಹೆಣ್ಣನ್ನು ಕೃಷ್ಣನು ವರಿಸಬಹುದೋ ಕೂಡದೋ ಎಂಬ ವಿಷಯದಲ್ಲಿ ದೇವರ ತೀರ್ಮಾನವನ್ನು ಮನುಷ್ಯ ಸಾಮಾನ್ಯನಿಗೆ ತಿಳಿಸುವ ದೇವಪ್ರತಿನಿಧಿ. ಆದರೆ ಅವಳಿಗೆ ಇದೇನು ಗೊತ್ತು? ಬಿಳಿಯ ಹೂವಾದರೆ ಹೌದು, ಕೆಂಪು ಹೂವಾದರೆ ಅಲ್ಲ.
ಎಲ್ಲರೂ ಉಸಿರನ್ನು ಬಿಗಿಹಿಡಿದುಕೊಂಡು ಕಾದಿದ್ದರು, ಹೂವನ್ನು ಎತ್ತಿಕೊಳ್ಳಲು ಮಗು ಬಾಗಿದಳು. ಶ್ರಮವನ್ನು ಭರಿಸಲಾರದೆ ಕೃಷ್ಣ ಬಲವಾಗಿ ಕಣ್ಣು ಮುಚ್ಚಿಕೊಂಡುಬಿಟ್ಟ. ತೆರೆದು ನೋಡಿದಾಗ ಗರ್ಭ ಗುಡಿಯ ಹೊಳೆಹೊಳೆದ ಹಿತ್ತಾಳೆಯ ಹೊಸಲಿನ ಮೇಲೆ ಬಿಳಿಯ ಹೂವು ಒಂಟಿಯಾಗಿ ಕುಳಿತಿತ್ತು. ಹಿರಿಯರು ವಿಗ್ರಹದ ಕಡೆ ನೋಡುತ್ತ “ಯಾವುದು ಒಳ್ಳೆಯದೆಂದು ಅವನಿಗೇ ಗೊತ್ತು” ಎಂದರು. ಬಹುಕಾಲ ಕೃಷ್ಣನ ಬುದ್ಧಿಗೆ ಮಂಕು ಹಿಡಿದುಬಿಟ್ಟಿತು. ಚೇತರಿಸಿಕೊಂಡೊಡನೆ, ಜಗತ್ತಿನಲ್ಲಿರುವ ಎಲ್ಲ ಹೂಗಳನ್ನೂ ಬಿಳಿಯ ಬಣ್ಣಕ್ಕೆ ತಿರುಗುವ ಶಕ್ತಿ ತನಗಿದ್ದಿದ್ದರೆ! ಎಂಬುದಾಗಿ ಹಂಬಲಿಸಿದ.
*****