ಕಣ್ಣೆದುರೇ ಕಣ್ ಮರೆಯಾಗುತಿದೆ
ಮಾತು ಕಲಿಸಿದ ಕನ್ನಡವು
ನಿಂತ ನೆಲವು ಪರದೇಶಿಯಾಗುತಿದೆ
ಜನ್ಮ ಕೊಟ್ಟು ಕರ್ನಾಟಕವು || ಪಲ್ಲವಿ ||
ಇಲ್ಲಿ ಹುಟ್ಟಿ ನದಿಯಾಗಿ ಹರಿದ ನಮ್ಮ
ಕಾವೇರಮ್ಮ ಮುನಿದಿಹಳು
ಕನ್ನಡಿಗರ ಅಭಿಮಾನ ಶೂನ್ಯಕೆ
ಅನ್ಯರ ಮನೆಯನು ಸೇರಿಹಳು
ಕನ್ನಡತಿಯ ಬೆಳಗಾವಿ ಭುಜವನು
ಮರಾಠಿಯರು ಹಿಡಿದೆಳೆದಿಹರು
ಆಗುತಲಿಹ ಅಪಮಾನವ ಸಹಿಸುತ
ತಾಯಿ ಬಿಡುತಿಹಳು ಬಿಸಿಯುಸಿರು
ನಾಡ ಮಾತೆಯ ತುಂಬು ಹೃದಯಕೆ
ರೋಗ ರುಜಿನಗಳು ಮುತ್ತಿಹವು
ಅದನು ಕೀಳುವ ಹುನ್ನಾರದಲಿ
ಕತ್ತರಿ ಕೈಗಳು ಕಾದಿಹವು
ಕಂಡೂ ಕಾಣದೆ ಕುರುಡಾಗಿಹೆವು
ಇದ್ದೂ ಇಲ್ಲದ ನಾವುಗಳು
ಹೀಗೆಯೇ ಇದ್ದರೆ ನಾಳೆಯ ದಿನವೇ
ಸ್ವದೇಶಿಗಳೆ ಪರದೇಶಿಗಳು
*****