ಎಲ್ಲಿದ್ದೆ ಇಲ್ಲೀ ತನಕ?

ಎಲ್ಲಿದ್ದೆ ಇಲ್ಲೀ ತನಕ?

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಅವಳು ಊರನ್ನು ಪ್ರವೇಶಿಸುವಾಗ ಬೇಕೆಂದೇ ತಡಮಾಡಿದ್ದಳು. ಮಬ್ಬುಗತ್ತಲಲ್ಲಿ ತನ್ನ ಗುರುತು ಯಾರಿಗೂ ತಿಳಿಯಲಾರದು. ನಾಲ್ಕು ವರ್ಷವಾಯಿತು, ಊರನ್ನು ಕಾಣದೆ. ಈಗ ಏನೇನೋ ಬದಲಾವಣೆಗಳಾಗಿವೆಯೋ? ಧುತ್ತೆಂದು ತಾನು ಪ್ರತ್ಯಕ್ಷಳಾಗಿ ಬಿಟ್ಟರೆ ಈಗಿನ ಹೊಸ ವಾತಾವರಣ  ತನ್ನನ್ನು ಹೇಗೆ ಸ್ವೀಕರಿಸ್ತುತ್ತದೆಯೋ? ಅಪರಿಚಿತರಂತೆ ಬಂದರೆ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಧ್ಯವಾಗಬಹುದು ಎಂದು ಅವಳು ಅಂದುಕೊಂಡಿದ್ದಳು.

ಈಗ ಅವಳನ್ನು ನೋಡಿದರೆ ಸಾಕ್ಷಾತ್ ಆ ಕಲಾಕಾರನೂ ಗುರುತು ಹಿಡಿಯಲಾರ. ಬಾಬ್ ಕಟ್ ಜೀನ್ಸ್ ಪ್ಯಾಂಟಿನ ಮೇಲೆ ಟೈಟ್ ಶರ್ಟ್, ಕಣ್ಣನು ಮರೆಮಾಚಿದ ಕನ್ನಡಕ! ಇಂಗ್ಲಿಷ್ ಮಿಶ್ರಿತ ಕನ್ನಡ. ಸ್ವರದ ನೆನಪು ಆತನಿಗಿದ್ದರೆ ಗುರುತು ಹಿಡಿಯಲೂಬಹದು. ಒಟ್ಟಿನಲ್ಲಿ ಅವನಿಗೊಂದು ಪ್ಲೆಸೆಂಟ್ ಸರ್ಪ್ರೈಸ್! ಅವಳು ಆ ಮನೆಯನ್ನು ಸಮೀಪಿಸ್ತುತ್ತಿದ್ದಂತೆ ಕಳೆದ ದಿನಗಳ ನೆನಪಾದವು. ಎಷ್ಟು ಬಾರಿ ಬಂದಿರಬಹದು ಈ ಮನೆಗೆ? ಈ ಮನೆಯೆಂದರೇನೇ ಅವಳಿಗೆ ಪುಳಕ.

ಆಫೀಸೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ದಲ್ಲಿ ಆತನ ಪರಿಚಯವಾಯ್ತು. ಪರಿಚಯ ಆತ್ಮೀಯತೆಗೆ ತಿರುಗಿ ಮತ್ತವನು ಎಷ್ಟು ಬಾರಿ ಸಿಕ್ಕನೋ? ಮಧ್ಯಾಹ್ನ ಕ್ಯಾಂಟಿನ್ನಿಗೆ ಬರುತ್ತಿದ್ದ. ಅವನ ಟೈಮಿಗೆ ಅಡ್ಜಸ್ಟ್ ಮಾಡಿ ಅವಳು ಹೋಗುತ್ತಿದ್ದಳು. ಅವಳು ಕತೆಗಳ ಬಗ್ಗೆ ಹೇಳುವಾಗಲೆಲ್ಲಾ ಅವನು ಭಾವಗಳ ಬಗ್ಗೆ ಮಾತಾಡುತ್ತಿದ್ದ. ಭಾವಗಳಿಗೆ ಜೀವತುಂಬುವ ಅವನನ್ನು ಅವಳು ಮನಸಾರೆ ಆರಾಧಿಸತೊಡಗಿದಳು. ಅವಳಿಗೆ ಅವನು ಸ್ವಪ್ನ ಎಂದು ಹೆಸರಿಟ್ಟಿದ್ದ.

ಅವನೊಬ್ಬ ಪೈಂಟರ್. ಬ್ಯಾನರ್ ಬರೆದೇ ಬದುಕು. ’ನನ್ನದೊಂದು ಪುಟ್ಟ ಮನೆಯಿದೆ. ನೀವು ಬಂದರೆ ಸಂತೋಷ. ಒತ್ತಾಯ ಮಾಡುವುದಿಲ್ಲ.’ ಎಂದಿದ್ದ.ಅವಳು ಅವನ ಮನೆ ನೋಡಲು ಹೋದಳು. ಎರಡು ಕೋಣೆಗಳು. ಎದುರಿನದ್ದು ಬ್ಯಾನರುಗಳಿಗೆ, ಒಳಗಿನದ್ದು ಚಿತ್ರಗಳಿಗೆ. ಹೆಣ್ಣು ಅವನ ಪ್ರಧಾನ ಅಭಿವ್ಯಕ್ತಿ. ಅವುಗಳನ್ನು ನೋಡುತ್ತಾ ಅವಳು ಮೈಮರೆತಳು. ಎಲ್ಲಾ ಚಿತ್ರಗಳು ಹೆಣ್ಣುಗಳದ್ದೇ. ಒಂದೇ ರೀತಿಯಾಗಿಲ್ಲ. ಆದರೆ ಯಾವುದೋ ಒಂದು ಕೋನದಲ್ಲಿ ತನ್ನಂತಿದೆ. ಒಂದೋ ಹುಬ್ಬು, ಇಲ್ಲವೇ ಮೂಗು ಅಥವಾ ಕಣ್ಣು! ಸೂಕ್ಷ್ಮವಾಗಿ ನೋಡಿದರೆ ಗೊತ್ತಾಗಬಹುದಷ್ಟೇ ಅಂದುಕೊಂಡಾಗ ಅವನು ಹತ್ತಿರಕ್ಕೆ ಬಂದು ’ಸ್ವಪ್ನ ಇವೆಲ್ಲವೂ ನಿನ್ನ ಪ್ರೀತಿಯ ಫಲಗಳು. ಇವುಗಳಿಗೆ ಜೀವಂತಿಕೆ ಬಂದಿದ್ದು ನಿನ್ನಿಂದಾಗಿ. ಅನಾಥನಾದ ನನ್ನ ಬಾಳಲ್ಲಿ ಕನಸೇ ಇಲ್ಲವೇನೋ ಎಂದುಕೊಂಡಿದ್ದೆ. ಬಾಳು ಬರಡಾಗಿ ಹೋಯಿತೆಂದು ಕೊಳ್ಳುವಾಗ ಎಲ್ಲಿದ್ದಿಯೋ ನೀನು ಪ್ರತ್ಯಕ್ಷಳಾದೆ. ಸಾಯುತ್ತಿರುವ ನನ್ನ ದೇಹದ ಕಣಕಣದಲ್ಲಿ ಹೊಸ ಜೀವ ತುಂಬಿದ್ದೀಯಾ”ಎಂದಾಗ ಅವಳು ಪೂರ್ತಿ ಮೈಮರೆತಿದ್ದಳು.

ಹೀಗೆ ಸ್ವಪ್ನಳ ಸ್ಫೂರ್ತಿಯಿಂದ ಆತ ಚಿತ್ರಗಳನ್ನು ಬರೆಯುತ್ತಾ ಹೋದ. ಎತ್ತರೆತ್ತರಕ್ಕೆ ಏರಿದ. ಅದಕ್ಕೆ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯೂ ಸಿಕ್ಕಿತು. ’ಎಷ್ಟು ಬೆಳೆದು ಬಿಟ್ಟೆ ನೀನು? ನಾನು ಏನೂ ಆಗಲಿಲ್ಲ. ” ಎಂದವಳು ಒಂದು ಬಾರಿ ಹೇಳಿದ್ದಳು. ’ಸ್ವಪ್ನ ನೀನು ಅಲ್ಲದಿದ್ರೆ ನಾನು ಇವನ್ನೆಲ್ಲಾ ಬಿಡಿಸುತ್ತಿದ್ದೆನಾ? ಒಂದಲ್ಲ ಒಂದು ದಿನ ಲೋಕಕ್ಕೆ ಸಾರಿ ಹೇಳುತ್ತೇನೆ, ಈ ಚಿತ್ರಗಳಿಗೆ ಸ್ವಪ್ನಳೇ ಸ್ಫೂರ್ತಿಯೆಂದು. ಆ ದಿನ ಸದ್ಯದಲ್ಲೇ ಬರಲಿದೆ. ನೀನು ನನ್ನ ರಾಣಿ, ಸ್ವರ್ವಸ್ವ. ’ ಎಂದು ಅವಳನ್ನು ಬಾಚಿ ತಬ್ಬಿಕೊಂಡಿದ್ದ.

ಹೊಸ ವರ್ಷದ ಮೊದಲ ದಿನದಂದು ಅವಳು ಅವನನ್ನು ವಿವಾಹವಾಗುವವನಿದ್ದ. ಸರಳವಾದ ಆಮಂತ್ರಣ ಪತ್ರಿಕೆಯನ್ನು ಕೆಲವೇ ಮಂದಿಗೆ ಕಳುಹಿಸಿಕೊಟ್ಟಿದ್ದ. ನಾಲ್ಕು ದಿನಕ್ಕೆ ಮೊದಲು ಅವಳು ಅವನನ್ನು ಭೇಟಿಯಾದಾಗ ಅವನೆಂದ. “ಇನ್ನು ನಾಲ್ಕೇದಿನ ಮತ್ತೆ ನನ್ನ ಕಲಾಸ್ಫೂರ್ತಿ ಯಾರೆಂದು ಲೋಕಕ್ಕೆ ಹೇಳಲು ನನಗೆ ಸಾಧ್ಯವಾಗುತ್ತದೆ. ಇಂದು ಕಡಲ ತಡಿಗೆ ಹೋಗುವ ಆಸೆಯಾಗಿದೆ. ಭೂರ್ಗರೆವ ಅಲೆಯ ಹಿನ್ನೆಲೆಯಲ್ಲಿ ನಿನ್ನನ್ನು ನಿಲ್ಲಿಸಿ ಚಿತ್ರಬರೆಯಬೇಕು. ಅದಕ್ಕೆ ನೀನು ಕವನ ರಚಿಸಬೇಕು. ಅದನ್ನು ಮದುವೆಯಂದು ರಾಗ ಸಂಯೋಜನೆ ಮಾಡಿ ಹಾಡಿಸಬೇಕು. ಏನಂತೀಯಾ?”

ಅವಳಿಗೆ ಇಲ್ಲವೆನ್ನಲಾಗಲಿಲ್ಲ, ಕಡಲ ಬದಿಯ ಹೋಟೆಲೋಂದರಲ್ಲಿ ರೂಮೂ ಸಿಕ್ಕಿತು. ಕಿಟಿಕಿ ಯಿಂದ ಕಡಲನ್ನು ನೋಡುವುದೇ ಒಂದು ಮೋಜು. ಅಂದು ಅವಳನ್ನು ಅದೆಷ್ಟು ಬಾರಿ ಅಪ್ಪಿ ಮುದ್ದಾಡಿದ್ದಾನೆಂದಿಲ್ಲ. ಅವನ ಅಪ್ಪುಗೆ ಯಿಂದ ಬಿಡಿಸಿಕೊಳ್ಳಲು ಅವಳಿಗೂ ಇಷ್ಟವಿರಲಿಲ್ಲ. ’ಈ ಪ್ರೀತಿ ಕಡಲಿನ ಹಾಗೆ. ಯಾವಾಗ ಉಬ್ಬರ ಯಾವಾಗ ಇಳಿತ ಒಂದೂ ಗೊತ್ತಾಗುವುದಿಲ್ಲ. ಇಳಿತವಾದಾಗ ಮಾತು ಕಳಕೊಂಡು ಹಾಳು ಯೋಚನೆಗಳು. ನಿನಗೆ ನನ್ನ ಮೇಲೆ ಪ್ರೀತಿ ಇಲ್ಲವೇನೋ. ನೀನು ನನ್ನ ಕೈ ತಪ್ಪಿ ಹೋಗುತ್ತೀಯೇನೋ ಎಂಬ ಭಾವಗಳು. ಈ ದಿನ ಇಡೀ ವಿಶ್ವದಲ್ಲಿ ನಾವಿಬ್ಬರೇ ’ ಎಂದು ಅವಳನ್ನು ಗಾಢವಾಗಿ ಅಪ್ಪಿದ. ಅವಳು ಕರಗಿ ಹೋದಳು. ಎಷ್ಟೋ ಹೊತ್ತಿನ ಬಳಿಕ ಎದ್ದು ನೋಡಿದರೆ ಹೊರಗೆ ಕಡಲು ಭೋರ್ಗರೆಯುತ್ತದೆ. ಅವಳು ಚೆನ್ನಾಗಿ ಡ್ರೆಸ್ ಮಾಡಿಕೊಂಡಳು. ಅವನು ತನ್ನ ಕಲಾಸಾಮಾಗ್ರಿ ಬ್ಯಾಗ್ ನೊಂದಿಗೆ ರೂಮಿಗೆ ಲಾಕು ಮಾಡಿ ಅವಳೊಡನೆ ಹೊರಬಂದ.

ಬೀಚಲ್ಲಿ ಜನಸಾಗರವಿತ್ತು. ಅವನಿಗೊಂದು ಪ್ರಶಾಂತ ಸ್ಥಳ ಬೇಕಿತ್ತು. ಅವಳನ್ನು ರೂಪದರ್ಶಿಯಾಗಿ ಕಡಲಿಗೆ ಹಿಮ್ಮುಖವಾಗಿ ನಿಲ್ಲಿಸಿ ಅವನು ಅದ್ಭುತ ಚಿತ್ರ ಬಿಡಿಸಬೇಕಿತ್ತು. ಅವನ ಮುಖದಲ್ಲಿ ಬ್ರಹ್ಮಾಂಡ ಆನಂದವಿತ್ತು. “ಸ್ವಪ್ನ ನೀನಿಂದು ನೀಡಿದ ಸ್ಫೂರ್ತಿ ಎಂದೂ ಮರೆಯಲಾಗದ್ದು. ನನ್ನ ದೇಹದ ಕಣಕಣವೂ ಉಲ್ಲಸಿತವಾಗಿದೆ. ನಾನಿಂದು ಮೊನಾಲಿಸಾಳನ್ನು ನಿವಾಳಿಸಿ ಎಸೆಯುವಂತ ಚಿತ್ರವನ್ನು ಬಿಡಿಸುತ್ತೇನೆ.”….

ಅವನು ಚಿತ್ರ ಬಿಡಿಸುತ್ತಾ  ಹೋದಂತೆ ಕಡಲು ಒಮ್ಮೆಲೇ ರೌದ್ರತಾರ ತಾಳಿತು. ದೊಡ್ಡ ಅಲೆಗಳು ಭೂಮಿಯ ಒಳಗೆ ನುಗ್ಗತೊಡಗಿದವು. ಬೀಚಿ ನಿಂದ ಭಯಾನಕ ಚೀತ್ಕಾರಗಳು. ಏನಾಗುತ್ತಿದೆಯೆಂಬರಿವಾಗುವ ಮೊದಲೇ ತೆಂಗಿನ ಮರಕ್ಕಿಂತಲೂ ಎತ್ತರದ ಕಡಲೊಂದು ಅವಳನ್ನು ಸೆಳೆದುಕೊಂಡಿತು. ಅವಳಿಗೆ ಎಚ್ಚರವಾದದ್ದು ಮೂರು ದಿನಗಳ ಬಳಿಕ.

ಅವಳ ಸುತ್ತ ಕಳವಳ ತುಂಬಿದ ವೃದ್ಧೆಯರು ಸೇರಿದ್ದರು. ಅವರೆಲ್ಲರ ಮುಖದಲ್ಲಿ ಕರುಣೆ ತುಂಬಿಕೊಂಡಿತ್ತು. ವೃದ್ಧಾಶ್ರಮದ ಮುಖ್ಯಸ್ಥೆ ನಡೆದುದೆಲ್ಲವನ್ನು ವಿವರಿಸುತ್ತಾ,”ನೀನು ಮರುದಿನ ಬೆಳಗ್ಗೆ ಆಶ್ರಮದ ಹೊರಗೆ ಬಿದ್ದಿದ್ದೆ. ನಿನ್ನ ಮನೆಯ ವಿಳಾಸ ಹೇಳಿದರೆ ತಲುಪಿಸಿಬಿಡುತ್ತೇನೆ.”ಎಂದರು.

ಅವಳು ಎಷ್ಟು ಯತ್ನಿಸಿದರೂ ನೆನಪಾಗಲಿಲ್ಲ. ಅವಳು ಬಿಕ್ಕಿದಳು. “ನನಗೊಂದೂ ನೆನಪಾಗುತ್ತಿಲ್ಲ ಅಮ್ಮ. ನಾನೇನು ಮಾಡಬೇಕೆಂದೇ ತೋಚುತ್ತಿಲ್ಲ.” “ಹೆದರಬೇಡ. ನಿನಗೆ ಶಾಕ್ ನಿಂದ ಹಾಗಾಗಿರಬೇಕು. ಇಲ್ಲಿಗೆ ವಾರಕ್ಕೊಮ್ಮೆ ಮನಃಶಾಸ್ತ್ರಜ್ಞರು ಒಬ್ಬರು ಬರುತ್ತಾರೆ. ನಾಲ್ಕೈದು ಕೌನ್ಸೆಲಿಂಗ್ ನಲ್ಲಿ ನೀನು ಸರಿಹೋಗಬಹುದು. ಸದ್ಯಕ್ಕೆ ಆಫೀಸು ಕೆಲಸ ಮಾಡಿಕೊಂಡಿರು. ನಿನಗೆ ’ಸುನಾಮಿ’ ಎಂದು ಹೆಸರಿಸಿದ್ದೇನೆ. ಅದಲ್ಲದಿರುತ್ತಿದ್ದರೆ ನೀನು ನಮಗೆ ಸಿಗುತ್ತಿರಲಿಲ್ಲವಲ್ಲಾ?”

ಆ ಕೆಲಸವನ್ನು ಅವಳು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಳು. ವಾರಕ್ಕೊಮ್ಮೆ ಬರುತ್ತಿದ್ದ ಮನಶಾಸ್ತ್ರಜ್ಞ ಕೆದಕಿ ಕೆದಕಿ ಪ್ರಶ್ನಿಸಿ ಕಳೆದು ಹೋಗಿದ್ದ ಅವಳು ಸ್ಮರಣಶಕ್ತಿ ಯನ್ನು ಮರಳಿಸಲು ಯತ್ನಿಸುತ್ತಿದ್ದ. ಯಾವ್ಯಾವುದೋ ಪುಸ್ತಕಗಳನ್ನು ತಂದು ಓದಲು ಕೊಡುತ್ತಿದ್ದ. ಏನಾದರೂ ಅವಳಿಗೆ ಹಳೆಯದ್ದು ನೆನಪಾಗಲೇ  ಇಲ್ಲ. ನಾಲ್ಕು ವರ್ಷಗಳು ಹಾಗೆ ಕಳೆದವು.

ಒಂದು ದಿನ ಆಶ್ರಮದ ವೃದ್ಧೆ ಯೊಬ್ಬರು ದೊಡ್ಡದೊಂದು ಪುಸ್ತಕ ತಿರುವಿ ಹಾಕುತ್ತಿದ್ದರು. ಅವಳು ವೃದ್ಧೆಯ ಬಳಿಗೆ ಬಂದು ’ಅದು ಯಾವ ಪುಸ್ತಕ ಅಮ್ಮ’ ಎಂದು ಕೇಳಿದಳು. ವೃದ್ಧೆ ’ನೀನೇ ನೋಡು’ ಎಂದು ಪುಸ್ತಕವನ್ನು ಅವಳ ಕೈಗಿತ್ತಳು. ಅದೊಂದು ಚಿತ್ರ ಪುಸ್ತಕ. ವಿಶ್ವದ ಶ್ರೇಷ್ಠ ಚಿತ್ರಗಳನ್ನು ವಿವರ ಸಹಿತ ನೀಡುವ ಪುಸ್ತಕ. ಮುಖಪುಟದಲ್ಲಿ ಲಿಯೋನಾರ್ಡೋ-ಡ-ವಿನ್ಸಿಯ ಮೊನಾಲಿಸಾ! ಆ ಹೆಸರನ್ನು ನಾಲ್ಕೈದು ಬಾರಿ ಉಚ್ಚರಿಸಿದಳು. “ಮೊನಾಲಿಸಾಳನ್ನು ನಿವಾಳಿಸಿ ಎಸೆಯುವಂತಹ ಚಿತ್ರ ಬಿಡಿಸುತ್ತೇನೆ.” ಆ ಮಾತು ಕಿವಿಯಲ್ಲಿ ಮತ್ತೆ ಮತ್ತೆ ಅನುರುಣಿಸಿತು. ಅವಳಿಗೆ ನಿಧಾನವಾಗಿ ಎಲ್ಲವೂ ನೆನಪಾಗತೊಡಗಿದವು. ಪುಸ್ತಕ ಹಿಡಿದುಕೊಂಡೇ ಮುಖ್ಯಸ್ಥೆಯ ಬಳಿಗೆ ಓಡಿದಳು. ತಾನು ಯಾರು, ಎಲ್ಲಿಯವಳು, ಎಂಬ ವಿವರ ಒಪ್ಪಿಸಿದಳು. ಆ ಕ್ಷಣವೇ ತಾನಲ್ಲಿಗೆ ಹೋಗಬೇಕು. ನಾಲ್ಕು ವರ್ಷಗಳಿಂದ ಸ್ಫೊರ್ತಿ ಯಿಲ್ಲದೆ ಅವನೇನಾದನೋ ಎನ್ನುವುದನ್ನು ಕಂಡು ಹಿಡಿಯಬೇಕು ಎಂದು ಹೇಳಿದಳು.

ಮುಖ್ಯಸ್ಥೆ ಗಂಭೀರಳಾದಳು. ” ನೀನು ಹಾಗೆ ಧುತ್ತೆಂದು ಅವನೆದುರು ನಿಲ್ಲುವುದು ಸರಿಯಲ್ಲ. ನಿನ್ನ ಗುರುತು ಫಕ್ಕನೆ ಸಿಗದಂತೆ ಬದಲಾವಣೆ ಮಾಡಿಕೋ. ಹೋಗಿ ಪರಿಸ್ಥಿತಿ ಅರ್ಥಮಾಡಿಕೋ. ಅವನು ನಿನ್ನನ್ನು ಸ್ವೀಕರಿಸಿದರೆ ನನಗೊಂದು ಮಾತು ತಿಳಿಸು. ಸಮಸ್ಯೆ ಯಾದರೆ ಇಲ್ಲಿಗೆ ಬಂದುಬಿಡು. ನಿನ್ನನ್ನು ನನ್ನ ಮಗಳೆಂದೇ ಭಾವಿಸಿದ್ದೇನೆ.” ಎಂದು ಅಪ್ಪಿಕೊಂಡರು.

ಹಾಗೆ ಅವಳು ಅತ್ಯಾಧುನಿಕ ಡ್ರೆಸ್ ಮಾಡಿಕೊಂಡು ಬಂದಿದ್ದಳು. ಮನೆಯನ್ನು ಕಂಡಾಗ ಸುಂದರ ನೆನಪುಗಳು ಮತ್ತೆ ಮತ್ತೆ ಮುತ್ತಿಕೊಂಡವು. ತಾನು ಅವನ ಚಿತ್ರಗಳಿಗೆ ಸ್ಫೂರ್ತಿಯಾದದ್ದು, ಅವನು ತನ್ನನ್ನು ಸ್ವಪ್ನ ಎಂದು ಕರೆಯುತ್ತಿದ್ದದ್ದು!

ಅವಳು ಢವಢವಿಸುವ ಎದೆಯಿಂದ ಬಾಗಿಲು ಬಡಿದಳು. ಒಳಗಿನಿಂದ ’ಯಾರೂ’ ಎಂಬ ಹೆಣ್ಣು ಧ್ವನಿ ಕೇಳಿಸಿತು. ಕಿಟಿಕಿ ಯಿಂದ ನೋಡಿ ಒಳಗೆ ಬರಮಾಡಿಕೊಂಡಳು. ’ಯಾರು ನೀವು’ ಎಂದು ಆ ಹೆಣ್ಣು ಕೇಳಿತು. “ವೃದ್ಧಾಶ್ರಮದಿಂದ ಬಂದಿದ್ದೇನೆ. ಕಲಾವಿದರೆಲ್ಲಿ? ಅವರನ್ನು ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಲೆಂದು ಬಂದೆ.”

“ಓ ಅವ್ರು ಇಲ್ವಲ್ಲಾ, ಎಷ್ಟು ಹೊತ್ತಿಗೆ ಬರುತ್ತಾರೋ ನನಗೂ ಗೊತ್ತಿಲ್ಲ.” ಸ್ವಪ್ನಳಿಗೆ ಒಂದು ಕ್ಷಣ ಬೇಸರವಾದರೂ ತೋರ್ಪಡಿಸಿಕೊಳ್ಳದೆ ಎಲ್ಲವನ್ನೂ ತಿಳ್ಕೊಳ್ಳುವ ತವಕದಿಂದ ಮತ್ತೆ ವಿವರಿಸಿದಳು. “ನಮ್ಮ ಸಂಘದಲ್ಲಿ ವರ್ಷಂಪ್ರತಿ ನಡೆಯುವ ವರ್ಧಂತೋತ್ಸವಕ್ಕೆ ಮುಖ್ಯ ಅತಿಥಿ ಯನ್ನಾಗಿ ಅವರನ್ನು ಆಹ್ವಾನಿಸಲೆಂದು ಬಂದೆ. ಅವರಷ್ಟು ಚೆನ್ನಾಗಿ ಚಿತ್ರ ಬಿಡಿಸುವವರನ್ನು ಸದ್ಯ ನಾನೆಲ್ಲೂ ಕಂಡಿಲ್ಲ. ಅದು ಹೇಗೆ ಬಿಡಿಸುತ್ತಾರೋ?”

ಆ ಹೆಣ್ಣಿನ ಮುಖದಲ್ಲಿ ಚಿಂತೆ ಕಾಣಿಸಿತು. ಭಾವುಕಳಾಗಿ ಒಂದೊಂದಾಗಿ ಹೇಳ ತೊಡಗಿದಳು. ’ಅವತ್ತು ಸುನಾಮಿ ಹೊಡೆಯಿತಲ್ಲಾ? ಅಂದು ಇವರು ಕಡಲು ನೋಡಲು ಹೋಗಿದ್ದರು. ನಾನು ಗಂಡಮಕ್ಕಳೊಡನೆ ಬಂದಿದ್ದೆ. ಕಡಲು ಹಾಗೆ ಮುನಿದು ನನ್ನ ಬದುಕನ್ನು ಬಲಿತೆಗೆದುಕೊಳ್ಳುತ್ತದೆಂದು ಯಾರಿಗೆ ಗೊತ್ತಿತ್ತು? ಕಳಕೊಂಡೆ ಎಲ್ಲರನ್ನೂ ಎಲ್ಲವನ್ನೂ, ಎಲ್ಲರೂ ಹಾಗೆ ಕಳಕೊಂಡವರಿಗಾಗಿ ಗೋಳಾಡುವವರೇ, ಯಾರು ಯಾರನ್ನು ಸಮಾಧಾನಿಸಲಾಗುತ್ತಿದೆ? ನಾನು ದಿಕ್ಕೆಟ್ಟು ನಡೆಯತೊಡಗಿದೆ. ಬಂಡೆಯಮೇಲೆ ಕುಳಿತು ನಿಟ್ಟುಸಿರುಬಿಡುತ್ತಿದ್ದೆ ವ್ಯಕ್ತಿ ಯೊಬ್ಬನನ್ನು ಕಂಡೆ. ಅವನು ವಿಚಿತ್ರವಾಗಿ ವರ್ತಿಸುತ್ತಿದ್ದವನು ಇದ್ದಕ್ಕಿದ್ದ ಹಾಗೆ ಎದ್ದು ಕಡಲತ್ತ ಓಡಿದ. ಅವನು ಧುಮುಕುತ್ತಾನೆ ಎನ್ನುವುದು ಖಚಿತವಾದಾಗ ನಾನು ’ಅಯ್ಯೋ ಸಾಯುತ್ತಿದ್ದಾನೆ. ಹೆಲ್ಪ್ ಹೆಲ್ಪ್’ ಎಂದು ಬೊಬ್ಬಿಟ್ಟೆ.ಅಲ್ಲಿ ಜನ ಇದ್ದರಲ್ಲಾ? ಆ ನೋವಲ್ಲೂ ಅವನನ್ನು ಹಿಡಕೊಂಡು ನನ್ನ ಬಳಿಗೆ ಕರಕೊಂಡು ಬಂದರು. ಅವನಿಗೆ ನಾಲ್ಕು ಥಳಿಸಿ ’ನಾವು ನಮ್ಮ ಸಂಸಾರ ಕಳೆಕೊಂಡವು. ನೀನು ಮುತ್ತಿನಂಥಾ ಹೆಂಡತಿ ಯಿದ್ದೂ ಸಾಯಲಿಕ್ಕೆ ಹೊರಟಿದ್ದೀಯಾ ಹುಚ್ಚ? ಮರ್ಯಾದೆ ಯಿಂದ ಇವಳೊಡನೆ ಬದುಕು.” ಎಂದರು. ಅಲ್ಲೇ ಇದ್ದ ಪೋಲೀಸು ಇನ್ಸ್ಪೆಕ್ಟರ್ ಗದ್ದಲ ನೋಡಿ ಬಂದವರು ಇವರ ವಿಳಾಸ, ನನ್ನ ಹೆಸರು ಕೇಳಿದರು. ’ಬದುಕುಳಿದ ಜೋಡಿ” ಎಂಬ ಅಂಕಣದಲ್ಲಿ ನಮ್ಮಿಬ್ಬರ ಹೆಸರು ಪ್ರಕಟವಾಯಿತು. ಪೋಲೀಸ್ ಜೀಪಲ್ಲೇ ಇಲ್ಲಿವರೆಗೆ ತಂದುಬಿಟ್ಟರು. ನಾವೀಗ ಲೋಕದ ಕಣ್ಣಿಗೆ ಗಂಡ ಹೆಂಡತಿ.’

“ಹಾಗಾದರೆ ಕಲಾವಿದರು ನಿಮ್ಮೊಡನೆ ದಾಂಪತ್ಯ ಜೀವನ ಮಾಡುತ್ತಿಲ್ಲವೇ?”

ಆ ಹೆಣ್ಣು ನಿಡುಸುಯ್ದಳು.”ಇಲ್ಲ. ಇವರನ್ನು ಗಂಡ ಎಂದು ಸ್ವೀಕರಿಸಲು ಇನ್ನೂ ನನ್ನಿಂದಾಗಲಿಲ್ಲ. ಅವರಿಗೂ ಅಷ್ಟೇ, ಅವರ ಬಾಳಲ್ಲಿ ಕಲಾಸ್ಫೂರ್ತಿಯಾಗಿದ್ದು ಮರೆಯಾಗಿ ಹೋದ ಸ್ವಪ್ನಳನ್ನು ಮರೆಯಾಗುತ್ತಿಲ್ಲವಂತೆ.” ಇದನ್ನು ಕೇಳಿದ ಸ್ವಪ್ನಳಿಗೆ ಮನದೊಳು ಅದೇನೋ ಪುಳಕ. ಆದರೂ ತೋರ್ಪಡಿಸದೆ.

“ಮತ್ತೆ ಅವರೇನು ಮಾಡುತ್ತಾರೆ ಈಗ?”

“ಚಿತ್ರ ಬರೆಯುವುದನ್ನು ನಿಲ್ಲಿಸಿದ್ದಾರೆ. ಅವರ ಅದ್ಭುತ ಪ್ರತಿಭೆಯನ್ನು ನೋಡಿ ’ಮೊದಲಿನಂತೆ ಚಿತ್ರ ಬರೆಯಬಾರದಾ’ಎಂದು ಅಂಗಲಾಚಿದರೆ ’ನಾನೇನು ಯಂತ್ರವಾ?’ ಎಂದು ಕೇಳುತ್ತಾರೆ. ಸ್ಫೂರ್ತಿ ಸಿಗದೆ ನಾನು ಬರೆಯಲಾರೆ ಅನ್ನುತ್ತಾರೆ?’

“ಹಾಗಾದರೆ ಬದುಕುವುದು?”

“ನನ್ನ ಗಂಡನ ಹೆಸರಿನಲ್ಲಿದ್ದ ಭೂಮಿಯನ್ನು ಮಾರಿ ಸಿಕ್ಕಿದ್ದನ್ನು ಬ್ಯಾಂಕಿನಲ್ಲಿ ಹಾಕಿಟ್ಟಿದ್ದೇನೆ. ಬಡ್ಡಿ ಯಿಂದ ಜೀವನ. ಕೆಲವೊಮ್ಮೆ ಅವರಿಗೂ ಹಣ ಬರುತ್ತೆ. ಅವರು ಮತ್ತೆ ಚಿತ್ರ ಬರೆಯಲು ಆರಂಭಿಸಬೇಕು, ಹಣಕ್ಕಲ್ಲ. ಅವರ ಕಲಾಶಕ್ತಿ ಅಗಾಧವಾದುದು. ಅದಲ್ಲದೆ ನನಗೂ ಅಷ್ಟೇ ನನ್ನವರೊಂತ ಯಾರೂ ಇಲ್ಲ. ಅವರನ್ನೇ ನಂಬಿದ್ದೇನೆ. ಆದರೆ ಅವರು ಮೊದಲಿನಂತೆ ಯಾವಾಗ ಆಗುತ್ತಾರೋ ಗೊತ್ತಿಲ್ಲ. ನೀವು ಸಮಾರಂಭಕ್ಕೆ ಕರೆಯಲು ಬಂದಿದ್ದೀರಿ. ಕಲೆ ಅವರ ಉಸಿರಾಗಿತ್ತು. ಅದನ್ನೇ ನಿಲ್ಲಿಸಿದವರು ಇನ್ನು ಕಾರ್ಯಕ್ರಮಕ್ಕೆ ಬರುತ್ತಾರಾ?”

“ಸಾರಿ, ನನಗಿದೆಲ್ಲ ಗೊತ್ತಿರಲಿಲ್ಲ, ಕೆದಕಿ ನೋವು ಕೊಟ್ಟೆ” ಎಂದು ಬೇಸರ ವ್ಯಕ್ತಪಡಿಸಿದಳು.

“ಇಲ್ಲಪ್ಪಾ ನಿಮ್ಮನ್ನು ನೋಡಿದಾಗ ಯಾಕೋ ಎಲ್ಲವನ್ನು ಹೇಳಬೇಕೆನಿಸಿತು. ಈಗ ನನ್ನ ಮನಸ್ಸು ಹಗುರವಾಯಿತು.” ಎಂದು ಆಕೆ ನೆಮ್ಮದಿ ಯಿಂದ ನುಡಿದಳು.

ಸ್ವಪ್ನ ಏನೋ ನಿರ್ಧರಿಸಿದವಳಂತೆ ಅಲ್ಲಿಂದ ಎದ್ದು ಆ ಹೆಣ್ಣಿನ ಬಳಿ ಬಂದು ಕೈಹಿಡಿದು ” ನೀವು ಹೇಳುವುದು ಸರಿ. ಇನ್ನು ಕಲಾವಿದರ ಬಾಳನ್ನು ನೀವೇ ಸರಿಪಡಿಸಬೇಕು. ನಿಮ್ಮ ಹೆಸರನ್ನು ಸ್ವಪ್ನ ಎಂದು ಬದಲಾಯಿಸಿಕೊಳ್ಳಿ. ಅಕ್ಕಪಕ್ಕದವರು ನಿಮ್ಮನು ಸ್ವಪ್ನ ಎಂದು ಕರೆಯುವಂತಾಗಬೇಕು. ಕಲಾವಿದರು ಕಡಲಲ್ಲಿ ಕಳಕೊಂಡ ಸ್ವಪ್ನವನ್ನು ನಿಮ್ಮಲ್ಲಿ ಹುಡುಕುವಂತಾಗಲಿ. ನೀವೂ ಅಷ್ಟೇ. ಹಳೆಯದೆಲ್ಲವನ್ನೂ ಮರೆತು ನೇರವಾಗಿ ಅವರಿಗೆ ಹೇಳಿಬಿಡಿ. ’ಹಳೆ ಸ್ವಪ್ನಳ ಗುಂಗಿನಲ್ಲಿ ನಾಶವಾದ ಕಲಾಶಕ್ತಿ ಯನ್ನು ಹೊಸ ಸ್ವಪ್ನಳಿಂದ ಪಡಕೊಳ್ಳಿ ಎಂದು.’ ಅವರು ನಿಧಾನವಾಗಿ ಯಾದರೂ ಅರ್ಥಮಾಡಿಕೊಂಡಾರು.”

ಆ ಹೆಣ್ಣಿನ ಮುಖದಲ್ಲಿ ಅದೇನೋ ಹೊಸ ಮಿಂಚು ಕಾಣಿಸಿಕೊಂಡಿತು. ಸ್ವಪ್ನಳನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಒಂದು ಕ್ಷಣ ನಿಟ್ಟುಸಿರುಬಿಟ್ಟು ಸ್ವಪ್ನ ಅವಳಿಂದ ಬಿಡಿಸಿಕೊಂಡು, ’ಅವರ ಕೋಣೆಯನ್ನೊಮ್ಮೆ ನೋಡಬಹುದೇ?’ ಎಂದು ಕೋಣೆಯತ್ತ ಹೆಜ್ಜೆ ಹಾಕಿದಳು. ಮತ್ತೆ ಮತ್ತೆ ನೋಡಿ ಇಂಚು ಇಂಚಾಗಿ ತನ್ನಲ್ಲಿ ತುಂಬಿಕೊಂಡಳು. ಕಣ್ಗಳು ತುಂಬಿ ಬರುತ್ತಿರುವ ಅನುಭವವಾಗಿ ನಿಧಾನವಾಗಿ ಹೊರಬಂದಳು.

ಕತ್ತಲಲ್ಲಿ ನಡೆದುಹೋದಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೈಯೇ ಇಲ್ಲ ಬರೀ ತಲೆ
Next post ಏನುಂಟು ಮಾರಾಯ್ರೆ

ಸಣ್ಣ ಕತೆ

 • ಇರುವುದೆಲ್ಲವ ಬಿಟ್ಟು

  ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

 • ಆಮಿಷ

  ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys