ಮೈಯೆ ಇಲ್ಲ, ಬರೀ ತಲೆ,
ನೆತ್ತಿಗೆ ಜುಂಗಿನ ಬಿಗೀ ಬಲೆ.
ನಾ ಯಾರೆಂದು ಹೇಳುವಿಯಾ,
ಸೋತರೆ ಕಾಲಿಗೆ ಬೀಳುವಿಯಾ?

ಮುಂಜಿ ಗಿಂಜಿ ಆಗಿಲ್ಲ
ಜನಿವಾರಾನೇ ಹಾಕಿಲ್ಲ
ಆದ್ರೂ ತಲೇಲಿ ಪಿಳ್ ಜುಟ್ಟು
ಹೇಳ್ ನೋಡೋಣ ನನ್ನ ಗುಟ್ಟು?

ದೇವರಿಗೋ ನಾ ಬಲು ಇಷ್ಟ
ನನಗೋ ಅವನಿಂದಲೆ ಕಷ್ಟ
ಅವನ್ಹೆಸರಲ್ಲಿ ತಲೆ ಒಡೆದು
ತಿಂತಾರೆ ನನ್ನೆದೆ ತುರಿದು?

ನನ್ನನ್ ಹೊಡೆಯೋ ಹಾಗಿಲ್ಲ
ಹೊಡೆದೋರ್‍ ಕೈಯೇ ನೋಯುತ್ತೆ,
ನಾನು ಜೊತೇಲಿ ಸೇರ್‍ಕೊಂಡ್ರೆ
ತಿಂಡಿ ಬಲು ರುಚಿ ಆಗುತ್ತೆ.

ನಾ ಯಾರೆಂದು ಹೇಳವಿಯಾ
ಒಗಟಿಗೆ ಉತ್ತರ ನೀಡುವಿಯಾ
ಇಲ್ಲವೆ ಸೋಲನ್ನೊಪ್ಪುವಿಯಾ,
ತೆಪ್ಪನೆ ಕಾಲಿಗೆ ಬೀಳುವಿಯಾ?
*****