ದೇವರು ಪಗಡೆಯಾಡುವುದಿಲ್ಲ, ಆದರೆ ಇಸ್ಪೀಟು ಆಡುತ್ತಾನೆ?

ದೇವರು ಪಗಡೆಯಾಡುವುದಿಲ್ಲ, ಆದರೆ ಇಸ್ಪೀಟು ಆಡುತ್ತಾನೆ?

‘ದೇವರು ಪಗಡೆಯಾಡುವುದಿಲ್ಲ’ (God doesn’t play at dice) ಎನ್ನುವುದು ಐನ್‌ಸ್ಟೈನ್‌ನ ಒಂದು ಸುಪ್ರಸಿದ್ಧ ಮಾತು. ಅಲ್ಬರ್ಟ್ ಐನ್‌ಸ್ಟೈನ್ ಇಪ್ಪತ್ತನೆಯ ಶತಮಾನದ ಜಗತ್ತಿನ ಅತಿ ದೊಡ್ಡ ಭೌತಶಾಸ್ತ್ರಜ್ಞ ಹಾಗೂ ಶಾಂತಿದೂತ- ಭೌತವಿಜ್ಞಾನದಲ್ಲಿ ಅವನು ಹದಿನೇಳನೆಯ ಶತಮಾನದ ಐಸಾಕ್ ನ್ಯೂಟನನಿಗೆ ಸರಿಸಮಾನನೆಂದು ತಿಳಿಯಲಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಸಾಪೇಕ್ಷ ಸಿದ್ಧಾಂತ, ಶಕ್ತಿ ಸಿದ್ಧಾಂತ ಮುಂತಾದ ವಿಷಯಗಳ ಮೇಲೆ ಅತಿ ಮಹತ್ವದ ಪ್ರಬಂಧಗಳನ್ನು ಬರೆದು ವಿಶ್ವದಾದ್ಯಂತ ಹೆಸರು ಗಳಿಸಿದ ಈ ವಿಜ್ಞಾನಿ ಆಗಾಗ ತನ್ನ ಮಾತಿನಲ್ಲಿ ದೇವರ ಹೆಸರು ತರುತ್ತಿದ್ದುದುಂಟು; ಆದರೆ ಜನಸಾಮಾನ್ಯರು ಬಳಸುವ ಅರ್ಥದಲ್ಲಲ್ಲ. ದೈವವಿಶ್ವಾಸಿಯಲ್ಲದ ಐನ್‌ಸ್ಟೈನ್‌ಗೆ ದೇವರೆಂದರೆ ವಿಶ್ವದ ಮೂಲ ಹಾಗೂ ಏಕಮೇವ ವೈಜ್ಞಾನಿಕ ಸೂತ್ರಕ್ಕೆ ಪರ್ಯಾಯ ಪದವಾಗಿತ್ತು. ತನ್ನ ಆಯುಸ್ಸಿನ ಕೊನೆಯ ಸುಮಾರು ನಲುವತ್ತು ವರ್ಷಗಳನ್ನು ಆತ ಈ ರಹಸ್ಯವನ್ನು ಬಿಡಿಸುವ ಪ್ರಯತ್ನದಲ್ಲಿ ಕಳೆದ. ಈ ತನ್ನ ಸಂಶೋಧನಾ ವಿಷಯಕ್ಕೆ ಅವನು ‘ಸಮೀಕೃತ ಕ್ಷೇತ್ರ ಸಿದ್ಧಾಂತ’ (Unified Field Theory) ಎಂಬ ಹೆಸರು ಕೊಟ್ಟಿದ್ದ.

‘ದೇವರು ಪಗಡೆಯಾಡುವುದಿಲ್ಲ’ ಎಂದರೆ ಏನರ್ಥ? ಯಾವುದೂ ಯಾದೃಚ್ಛವಾಗಿ (random) ಅರ್ಥಾತ್ ‘ಸುಕಾಸುಮ್ಮನೆ’ ನಡೆಯುವುದಿಲ್ಲ ಎಂದು ಅರ್ಥ; ಎಲ್ಲದಕ್ಕೂ ಒಂದಲ್ಲ ಒಂದು ಕಾರಣ ಇರುತ್ತದೆ. ಕಾರ್ಯದ ಕಾರಣ ಒಂದು; ಆ ಕಾರಣದ ಕಾರಣ ಇನ್ನೊಂದು: ಹೀಗೆ ಸಕಲ ವಿದ್ಯಮಾನಗಳೂ ಇಂಥ ಕಾರ್ಯ-ಕಾರಣ ಸಂಬಂಧಗಳ ಸರಮಾಲೆ. ಭೌತಶಾಸ್ತ್ರದಲ್ಲಿ ಅತ್ಯಾಧುನಿಕನಾದ ಐನ್‌ಸ್ಟೈನ್‌ ಈಯೊಂದು ವಿಷಯದಲ್ಲಿ ಸಂಪ್ರದಾಯಸ್ಥನಾಗಿದ್ದ; ಯಾಕೆಂದರೆ ಈ ಕಾರ್ಯ-ಕಾರಣ ಸಂಬಂಧವೆನ್ನುವುದು ವಿಜ್ಞಾನದ ಒಂದು ಹಳೆಯ ಹಾಗೂ ಮೂಲಭೂತ ಸಿದ್ಧಾಂತ. ವಿಜ್ಞಾನವೇ ಯಾಕೆ, ಜಗತ್ತಿನ ಹಲವು ಮತಧರ್ಮಗಳೂ ಧರ್ಮಶಾಸ್ತ್ರಗಳೂ ಕೂಡಾ ಈ ಸಂಬಂಧವನ್ನು ಪ್ರತಿಪಾದಿಸುತ್ತವೆ. ‘ಬೆಂಕಿಯಿಲ್ಲದೆ ಹೊಗೆ ಬರುವುದಿಲ್ಲ’ ಎಂಬ ಗಾದೆ ಮಾತಿನಲ್ಲಿ ಸಹಾ ಇದನ್ನು ಕಾಣುತ್ತೇವೆ. ಆದರೆ ವಿಜ್ಞಾನ ನಮ್ಮ ಸಾಧಾರಣವಾದ ವಿದ್ಯಮಾನೀಯ (phenomenal) ಜಗತ್ತಿಗೆ ತಾರ್ಕಿಕವಾದ (rational) ವಿವರಣೆಯನ್ನು ಕೊಡುತ್ತ ಹೋಗುತ್ತದೆ. ಸೂರ್ಯ ಭೂಮಿಗೆ ಸುತ್ತುಬರುವಂತೆ ತೋರುವುದು ನಮ್ಮ ವಿದ್ಯಮಾನೀಯ ಜಗತ್ತಿನ ಅನುಭವ; ಆದರೆ ಸೂರ್ಯ ಭೂಮಿಯ ಸುತ್ತ ತಿರುಗುವುದಿಲ್ಲ, ಭೂಮಿಯೇ ಸೂರ್ಯನ ಸುತ್ತ ತಿರುಗುತ್ತದೆ ಎನ್ನುವುದು ವೈಜ್ಞಾನಿಕ ವಿವರಣೆ. ಆಕಾಶದಲ್ಲಿ ಕೆಲವೊಮ್ಮೆ ಕಾಣಿಸುವ ಕಾಮನ ಬಿಲ್ಲು ಅಥವಾ ಇಂದ್ರಚಾಪ ಎಂಬ ಸುಂದರವಾದ ಏಳುಬಣ್ಣಗಳ ಡೊಂಕಿನ ರಚನೆ ಇಂದ್ರನ ಬಿಲ್ಲು ಎನ್ನುವುದು ಪೌರಾಣಿಕ ಮನಸ್ಸಿನ ಕಲ್ಪನೆ; ಆದರೆ ಅದು ನಿಜಕ್ಕೂ ನೀರಹನಿಗಳ ಮೂಲಕ ಬೆಳಕು ಹಾಯುವಾಗ ಉಂಟಾಗುವ ಪರಿಣಾಮ ಎನ್ನುವುದು ವೈಜ್ಞಾನಿಕ ವಿವರಣೆ. ಒಮ್ಮೆ ಈ ವಿವರಣೆಯನ್ನು ಅರ್ಥಮಾಡಿಕೊಂಡರೆ, ಶಾಲೆಗೆ ಹೋಗುವ ಮಕ್ಕಳು ಕೂಡಾ ಕೃತಕವಾಗಿ ಇಂಥ ಕಾಮನ ಬಿಲ್ಲುಗಳನ್ನು ಸಣ್ಣ ಮಟ್ಟದಲ್ಲಿ ತಯಾರಿಸಲು ಕಲಿತುಕೊಳ್ಳುತ್ತಾರೆ. ಆದರೆ ಈ ಬಣ್ಣಗಳೇ ಯಾಕೆ, ಅವು ಇದೇ ರೀತಿಯಲ್ಲಿ ಒಂದರ ಮೇಲೆ ಒಂದರಂತೆ ಯೋಜಿಸಲ್ಪಟ್ಟವೆ, ಯಾಕೆ ಅರ್ಧಚಂದ್ರಾಕಾರದಲ್ಲಿ ಬಾಗಿಕೊಂಡಿವೆ ಎಂಬ ಪ್ರಶ್ನೆಗಳಿಗೂ ವಿಜ್ಞಾನ ಉತ್ತರಿಸಬಲ್ಲುದು; ಆದರೆ ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ನಾವು ವೈಜ್ಞಾನಿಕ ಪರಿಭಾಷೆಯನ್ನು ಮಾತ್ರ ಕಲಿತುಕೊಳ್ಳಬೇಕಾಗುತ್ತದೆ.

ಹೀಗೆ ವಿಶ್ವದ ಎಲ್ಲಾ ವಿದ್ಯಮಾನಗಳೂ ವೈಜ್ಞಾನಿಕ ಸೂತ್ರಗಳಿಗೆ ಬದ್ಧವಾಗಿರುತ್ತ, ಈ ಸೂತ್ರಗಳನ್ನೆಲ್ಲ ಒಂದಾಗಿ ನಿಯಂತ್ರಿಸುವ ಸಮೀಕೃತ ಸೂತ್ರವೊಂದು ಇರಬೇಕಲ್ಲವೇ, ಇದ್ದರೆ ಅದು ಯಾವುದು ಎನ್ನುವುದೇ ಐನ್‍ಸ್ಟೈನ್ನ ಪ್ರಶ್ನೆ. ಜನಸಾಮಾನ್ಯರ ಪರಿಭಾಷೆಯಲ್ಲಿ ಇದು ದೇವರು; ಆದರೆ ವೈಜ್ಞಾನಿಕವಾಗಿ ಒಂದು ಮೂಲ ಸೂತ್ರ. ವಯಲಿನ್ ನುಡಿಸುವ ಹವ್ಯಾಸವಿದ್ದ ಐನ್‍ಸ್ಟೈನ್‌ಗೆ ಇದೊಂದು ಸಂಗೀತಮೇಳದಂತೆ ಕೂಡಾ; ಎಂದರೆ ವಿಶ್ವಸಾಂಗತ್ಯ. ಏನಿದರ ರೂಪ? ಹೇಗಿದರ ರಚನೆ? ವಿಶ್ವದ ಕುರಿತಾದ ಈ ರೂಪಕ ಕೂಡಾ ಹೊಸದಲ್ಲ ಎನ್ನುವುದನ್ನು ಗಮನಿಸಬೇಕು. ‘ಗೋಲ ಸಂಗೀತ’ ಅಥವಾ Music of the spheres ಎನ್ನುವುದೊಂದು ಮಧ್ಯ ಯುಗದ ಕಲ್ಪನೆ; ಶೇಕ್ಸ್‌ಪಿಯರನ ಸಾಹಿತ್ಯದಲ್ಲಿ ಇದರ ಪ್ರಸ್ತಾಪ ಆಗಾಗ ಬರುತ್ತದೆ. ಆದರೆ ಐನ್‍ಸ್ಟೈನ್‍ಗೆ ಇದೊಂದು ವೈಜ್ಞಾನಿಕ ಸತ್ಯದ ರೂಪಕ; ಅಭಿಜಾತ ನಿಶ್ಚಿತವಾದದ (classical determinism) ನವ ನಿರ್ವಚನೆ. ನ್ಯೂಟನ್ ಮತ್ತು ಐನ್‌ಸ್ಟೈನ್‌ ಇಬ್ಬರೂ ತಮ್ಮ ಜೀವಿತ ಕಾಲದ ಸಂಶೋಧನೆಗಳನ್ನು ಎಳೆ ವಯಸ್ಸಿನಲ್ಲೇ ಮಾಡಿದವರು. ನ್ಯೂಟನ್ ಸರಕಾರಿ ಟಂಕಸಾಲೆಯ ಅಧಿಕಾರಿಯಾಗಿ ನೇಮಿತನಾದ ನಂತರ ಭೌತವಿಜ್ಞಾನವನ್ನು ಬಿಟ್ಟುಬಿಟ್ಟ ಬದಲಿಗೆ ಬೈಬಲ್ನ ಪಠ್ಯಶುದ್ಧಿಗೆ ಸಂಬಂಧಿಸಿದ ಅಧ್ಯಯನದಲ್ಲಿ ನಿರತನಾದ. ಐನ್‍ಸ್ಟೈನ್ ಮಾತ್ರ ತನ್ನ ಮಹತ್ವಾಕಾಂಕ್ಷೆಯ ಸಮೀಕೃತ ಕ್ಷೇತ್ರ ಸಿದ್ಧಾಂತದ ಸಂಶೋಧನೆಯನ್ನು ಕೈಬಿಡಲಿಲ್ಲ. ಆದರೂ ಈ ಮೂಲಕ ಅವನು ಹೊಸದೊಂದು ಅವಧೂತತ್ವದ (mysticism) ಕಡೆಗೆ ತಿರುಗಿದ ಎನ್ನಬಹುದೇ? ಅವನ ಸಹೋದ್ಯೋಗಿಗಳೂ ಸಹಾನುಭೂತರೂ ಅಗಿದ್ದ ಬೋರ್‍ಹ್, ಹೈಸೆನ್ಬರ್‍ಗ್, ಶ್ರೋಡಿಂಗರ್ ಮೊದಲಾದವರು ಬೇರೆ ದಾರಿಯಲ್ಲಿ ಸಾಗಿದ್ದರು; ಹಾಗೂ ಅವರಲ್ಲಿ ಹಲವರ ದೃಷ್ಟಿಯಲ್ಲಿ ಐನ್‍ಸ್ಟೈನ್‍ನ ಅಮೂಲ್ಯ ವೇಳೆ ಮತ್ತು ಅವಕಾಶಗಳು ಒಂದು ಮರೀಚಿಕೆಯ ಬೆನ್ನುಹತ್ತುವುದರಲ್ಲಿ ಪೋಲಾದುವು.

ಪಗಡೆಯೆಂದರೆ ಆರು ಮೈಗಳುಳ್ಳ ಘನಾಕೃತಿಯ ಒಂದು ದಾಳ. ಇದರ ಒಂದು ಮೈಮೇಲೆ ಒಂದು, ಇನ್ನೊಂದರ ಮೇಲೆ ಎರಡು ಮುಂತಾಗಿ ಆರರತನಕ ಚುಕ್ಕೆಗಳಿಂದ ಗುರುತು ಮಾಡಿರುತ್ತದೆ. ಈ ದಾಳವನ್ನು ಅಂಗೈಯಲ್ಲಿ ಹಿಡಿದು ಆಡಿಸಿ ಕೆಳಕ್ಕೆ ಚೆಲ್ಲಿದಾಗ ಎಷ್ಟು ಚುಕ್ಕೆಗಳು ಮೇಲ್ಮೈಯಲ್ಲಿ ಕಾಣಿಸುತ್ತವೋ ಅಷ್ಟು ಕಳಗಳ ತನಕ ಆಟಗಾರ ತನ್ನ ಕಾಯಿಗಳನ್ನು ದಾಟಿಸಬಹುದು. ನಂತರ ದಾಳ ಇಳಿಸುವ ಸರದಿ ಇನ್ನೊಬ್ಬ ಆಟಗಾರನದು. ಆರು ಚುಕ್ಕಿಗಳು ಬಿದ್ದರೆ ಒಂದು ಕೈ ಮುಫತ್ತಾಗಿ ಸಿಕ್ಕಿ, ಅದೇ ಆಟಗಾರ ಇನ್ನೂಮ್ಮೆ ದಾಳ ಇಳಿಸಬಹುದು. ಬೇರೆ ಬೇರೆ ತರಹಗಳಿರುವ ಈ ಆಟ ಬಹಳ ಪುರಾತನದ ಜೂಜು. ದುರ್ಯೋಧನ ಮತ್ತು ಯುಧಿಷ್ಠಿರರು ಆಡಿದ್ದು ಬಹುಶಃ ಇದೇ ಆಟವನ್ನು. ಆದರೆ ದುರ್ಯೋಧನನ ಪರವಾಗಿ ಆಡುತ್ತಿದ್ದ ಶಕುನಿ ಮೋಸದಿಂದ ದಾಳ ಇಳಿಸಿ ತನಗೆ ಬೇಕಾದ ಅಂಕಗಳನ್ನು ಪಡೆಯುತ್ತಿದ್ದ. ಯುಧಿಷ್ಠಿರ ಉತ್ತಮ ಆಟಗಾರನಾಗಿದ್ದರೂ, ಅಮಾಯಕನೂ ಅಗಿದ್ದುದರಿಂದ ಶಕುನಿ ಅವನನ್ನು ಪದೇ ಪದೇ ಸೋಲಿಸುವುದು ಸಾಧ್ಯವಾಯಿತು. ದೇವರು ಒಂದು ವೇಳೆ ಪಗಡೆಯಾಡಿದರೆ ಶಕುನಿಯಂತೆ ಮೋಸ ಮಾಡುವವನಲ್ಲ; ಆತ ಯುಧಿಷ್ಟಿರನಂತೆ ನೇರವಾಗಿ ಆಡುವವನು. ನೇರವಾಗಿ ಆಡುವುದೆಂದರೆ ಪಗಡೆ ಬೀಳುವುದನ್ನು ಕೇವಲ ಸಂಯೋಗಕ್ಕೆ (chance) ಬಿಟ್ಟುಕೊಡುವುದು. ಆದರೆ ಐನ್‌ಸ್ಟೈನ್‌ ಪ್ರಕಾರ ದೇವರು ಪಗಡೆಯಾಡುವವನಲ್ಲ. ಎಂದರೆ ದೇವರು ಸೃಷ್ಟಿಸಿದ ಈ ಲೋಕ ಸಂಯೋಗವನ್ನು ಅವಲಂಬಿಸಿದ್ದಲ್ಲ; ಕಾರ್ಯ-ಕಾರಣಗಳ ಸಹಯೋಗವನ್ನು ಅವಲಂಬಿಸಿದ್ದು. ಆದ ಕಾರಣ ಈ ಕಾರ್ಯ-ಕಾರಣಗಳ ಮೂಲಸೂತ್ರವನ್ನು ತಿಳಿದರೆ ಸೃಷ್ಟಿಯ ರಹಸ್ಯವನ್ನು ತಿಳಿದಂತೆಯೇ. ಇದು ಐನ್‌ಸ್ಟೈನ್‌ನ ಧೋರಣೆ.

ಆದರೆ ಅವನ ಸಮಕಾಲೀನರಲ್ಲಿ ಹಲವರು ಹಾಗೂ ನಂತರ ಬಂದ ವಿದ್ವಾಂಸರ ವಿಚಾರಧಾರೆ ಬೇರೆಯೇ ಅಗಿತ್ತು. ಅವರ ಪ್ರಕಾರ ಜಗತ್ತಿನ ವಿದ್ಯಮಾನಗಳಲ್ಲಿ ಹಲವು ಕೇವಲ ಗಣನ ವಿಜ್ಞಾನದ (Statistics) ತತ್ವಕ್ಕೆ ಸಂಬಂಧಿಸಿದುವು. ಗಣನ ವಿಜ್ಞನವೆಂದರೆ ಒಂದು ತರದ ಅನುಮಾನ ವಿಜ್ಞಾನ; ಅದು ಕೆಲವೊಂದು ಒಲವುಗಳ (tendencies) ಕುರಿತಾಗಿ” ಹೇಳುತ್ತದೆ ಹೊರತು ನಿಶ್ಚಿತತೆಯ (determinism) ಬಗ್ಗೆ ಅಲ್ಲ. ನಾವೊಂದು ನಾಣ್ಯವನ್ನು ಮೇಲಕ್ಕೆ ಹಾರಿಸಿದರೆ, ಅದು ಕೆಳಗೆ ಬಿದ್ದಾಗ ಮೇಲ್ಮುಖ ಚಿತ್ರವಾಗಿರುತ್ತದೋ ಅಂಕೆಯಾಗಿರುತ್ತದೋ ಹೇಳುವುದಕ್ಕೆ ಆಗುವುದಿಲ್ಲ; ಆದರೆ ಉಳಿದೆಲ್ಲವೂ ಸರಿಯಾಗಿದ್ದು, ಒಂದು ನೂರು ಬಾರಿ ಹೀಗೆ ಹಾರಿಸಿದಾಗ ಸರಿಸುಮಾರು ಐವತ್ತು ಬಾರಿ ಚಿತ್ರವೂ, ಐವತ್ತು ಬಾರಿ ಅಂಕೆಯೂ ಮೇಲ್ಮುಖವಾಗಿ ಬೀಳಬಹುದು ಎನ್ನಬಹುದು, ಆದರೆ ನಿಖರವಾಗಿ ಅಲ್ಲ. ಗಣನ ವಿಜ್ಞಾನದಲ್ಲಿ ಸರಿಸುಮಾರು, ಪ್ರಾಯಶಃ, ಹೆಚ್ಚಾಗಿ ಮುಂತಾದ ಅನುಮಾನ ಪದಗಳು ಉಪಯೋಗವಾಗುತ್ತವೆ. ಖಂಡಿತವಾದ ಇವೆಲ್ಲದಕ್ಕೆ ವಿರುದ್ಧ. ಅದರಲ್ಲಿ ಅನುಮಾನಕ್ಕೆ ಆಸ್ಪದವಿಲ್ಲ.

ಈ ಗಣನ ವಿಜ್ಞಾನಕ್ಕೆ ಪಗಡೆಯಾಟ ಒಂದು ಮಾದರಿ ಉದಾಹರಣೆ ಎನ್ನುವುದು ಗಮನಾರ್ಹ. ಯಾಕೆಂದರೆ ಪಗಡೆಯಾಟದಲ್ಲಿ ಸಂಯೋಗ ಅಥವಾ ‘ಚಾನ್ಸ್’ನ ಪಾತ್ರ ಮುಖ್ಯವಾದ್ದರಿಂದ ಅದು ಅನುಮಾನಗಳ ಮೇಲೆ ನಿಂತಿರುತ್ತದೆ. ಆದ್ದರಿಂದ ಇಂದಿನ ಚಿಂತನೆ, ಐನ್‍ಸ್ಟೈನಿಗೆ ವಿರುದ್ಧವಾಗಿ, ದೇವರು ಪಗಡೆಯಾಡುತ್ತಾನೆ ಎನ್ನಬಹುದು. ಇಡೀ ಜಗತ್ತು ಭಗವಂತನ ಲೀಲೆ ಎಂಬ ಭಾರತೀಯ ತತ್ವಜ್ಞಾನಕ್ಕೆ ಇದೇನೂ ಹೊಸ ವಿಚಾರವಾಗಿರಲಾರದು! ಐನ್‍ಸ್ಟೈನ್ ಮತ್ತು ಈಚಿನ ವಿಜ್ಞಾನಿಗಳ ನಡುವಣ ಇನ್ನೊಂದು ಭಿನ್ನತೆ ಆತ್ಮನಿಷ್ಠತೆಗೆ ಸಂಬಂಧಿಸಿದುದು. ಇಲ್ಲಿಯೂ ಐನ್‍ಸ್ಟೈನಿನದು ಅಭಿಜಾತ ಮಾರ್ಗ: ಎಂದರೆ, ವಿಜ್ಞಾನ ಸಂಪೂರ್ಣವಾಗಿ ವಸ್ತುನಿಷ್ಠವಾಗಿರಬೇಕು ಎನ್ನುವುದು ಆತನ ನಿಲುವು. ಮಾತ್ರವಲ್ಲ, ಮನುಷ್ಯನು ತನ್ನತನವನ್ನು ಕಳೆದುಕೊಂಡಾಗಲೇ ಜಗತ್ತನ್ನು ಅರಿಯುವುದು ಎನ್ನುತ್ತಾನೆ ಆತ. ಆತ್ಮನಿಷ್ಟತೆಯನ್ನು ಕಳೆದುಕೊಳ್ಳುವುದು ಮನುಷ್ಯನಿಗೆ ಸಾಧ್ಯವೇ ಇಲ್ಲ ಎನ್ನುವುದು ಇತರರ ಮತ. ಸಾರ್ವಕಾಲಿಕವೂ ಏಕೈಕವೂ ಆದ ಸತ್ಯವನ್ನು ಅಂಥವರು ಅಲ್ಲಗಳೆಯುತ್ತಾರೆ, ಹಾಗೂ ತನ್ಮೂಲಕ ಐನ್‌ಸ್ಟೈನ್‌ನ ಸಾಪೇಕ್ಷವಾದವನ್ನು ಅವನಿಗೇ ಮರಳಿಸುತ್ತಾರೆ!

ಇದರ ಅರ್ಥ ಐನ್‍ಸ್ಟೈನ್ನ ಭೌತವಿಜ್ಞಾನ ನಿರುಪಯೋಗವೆಂದಲ್ಲ; ನ್ಯೂಟನ್ನ ಭೌತವಿಜ್ಜಾನ ಹೇಗೆ ಇಂದಿಗೂ ಪ್ರಸ್ತುತವೋ ಅದೇ ರೀತಿ ಐನ್‌ಸ್ಟೈನ್‌ನ ಭೌತವಿಜ್ಞಾನವೂ ಪ್ರಸ್ತುತವೇ. ಜಗತ್ತಿನ ವಿದ್ಯಮಾನಗಳ ಹಿಂದೆ ಇರುವ ಸೂತ್ರಬದ್ಧತೆಯನ್ನೂ ಅಲ್ಲಗಳೆಯಲಾಗುವುದಿಲ್ಲ; ಆದರೆ ಈ ಎಲ್ಲ ಸೂತ್ರಗಳನ್ನೂ ವಿವರಿಸುವ ಒಂದು ಮಹಾಸೂತ್ರವಿದೆ ಎನ್ನುವುದು ಮಾತ್ರ ಸಂಶಯಾಸ್ಪದವಾಗುತ್ತದೆ. ಡಾರ್ವಿನ್ ತನ್ನ ವಿಕಾಸ ಸಿದ್ಧಾಂತದಲ್ಲಿ ಸಂಯೋಗ ಮತ್ತು ಸೂತ್ರಬದ್ಧತೆ ಎರಡಕ್ಕೂ ಸ್ಥಾನ ಕಲ್ಪಿಸಿದ್ದನ್ನು ಇಲ್ಲಿ ನೆನೆಯಬಹುದು. ಯದೃಚ್ಛ ಬದಲಾವಣೆ (random mutation) ಸಂಯೋಗವಾದರೆ, ಬಲವಿದ್ದವನು ಬದುಕುತ್ತಾನೆ (survival of the fittest) ಎನ್ನುವುದು ಸೂತ್ರಬದ್ಧತೆ (survival of the fittest ಎಂಬ ನುಡಿಗಟ್ಟು ಡಾರ್ವಿನ್ ಸ್ವತಃ ಬಳಸಿದ್ದು ಅಲ್ಲದೇ ಇದ್ದರೂ).

ಇದೇ ರೀತಿ ಭೌತ ಜಗತ್ತಿನಲ್ಲೂ ಸಂಯೋಗ ಮತ್ತು ಸೂತ್ರಬದ್ಧತೆ ಎರಡೂ ಕಾರ್ಯ ನಿರ್ವಹಿಸುವುದು ಸಾಧ್ಯವಿಲ್ಲವೇ ಎಂದು ಕೇಳಬಹುದು. ಇದು ಇಸ್ಪೀಟು ಆಟದ ಹಾಗೆ. ಎಲೆಗಳನ್ನು ಹಂಚುವಾಗ ಯಾವ ಎಲೆಗಳು ಯಾರ ಕೈಗೆ ಹೋಗುತ್ತವೆ ಎಂದು ಹೇಳುವಂತಿಲ್ಲ. ಅದೇ ರೀತಿ ಯಾರು ಯಾವಾಗ ಯಾವ ಎಲೆ ಇಳಿಸುತ್ತಾರೆ ಎನ್ನುವುದೂ ಕಷ್ಟವೇ. ಆದರೆ ಅಷ್ಟಕ್ಕೆ ಆಟಕ್ಕೆ ಸೂತ್ರವಿಲ್ಲ ಎಂದು ಹೇಳಲಾರೆವು.

ಐನ್‍ಸ್ಟೈನ್ ನಾಲ್ಕು ದಶಕಗಳ ಕಾಲ ಯತ್ನಿಸಿದರೂ ಸಮೀಕೃತ ಕ್ಷೇತ್ರ ಸಿದ್ಧಾಂತ ಒಂದು ಹಗಲುಗನಸಾಗಿಯೇ ಉಳಿಯಿತು. ಮನುಷ್ಯರಿಂದ ತಿಳಿಯಲಾರದ ಸತ್ಯವಾಗಲಿ ಮೂಲಸೂತ್ರವಾಗಲಿ ಇದೆಯೆಂದಾದರೆ, ಅದು ಇದೆಯೆಂದು ಸಾಧಿಸುವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇಲ್ಲವೆಂದು ಸಾಧಿಸುವುದು ಕೂಡಾ ಅಸಾಧ್ಯ. ಆದ್ದರಿಂದ ಆ ಕುರಿತಾದ ಚರ್ಚೆಯೇ ಅರ್ಥಹೀನವಾಗುತ್ತದೆ. ಆದರೆ ಆ ಕುರಿತಾದ ಸಂಶೋಧನೆ ಅರ್ಥಹೀನವಾಗುವುದಿಲ್ಲ. ಯಾಕೆಂದರೆ ಇಂದು ವಾಸ್ತವವಾದ್ದು ಹಿಂದಿನ ಹಗಲುಗನಸುಗಳೇ. ಆದ್ದರಿಂದ ಗುರಿ ಏನೇ ಆದರೂ ಸಂಶೋಧನೆ ಸ್ವಾಗತಾರ್ಹವೇ. ಆದರೆ ಭೌತ ಜಗತ್ತಿನ ಹಿಂದೆ ಸಮೀಕೃತ ಸೂತ್ರವಿದೆಯೆಂಬ ನಂಬಿಕೆಯಾದರೂ ಯಾಕೆ ಎಂಬ ಪ್ರಶ್ನೆಯನ್ನು ನಾವಿಂದು ಕೇಳಬಹುದು. ಕೆಲವು ವರ್ಷಗಳ ಹಿಂದೆ ಇದು ಕೇಳಬಾರದ ಪ್ರಶ್ನೆಯಾಗಿತ್ತು. ಆದರೆ ಈಗ ಹಾಗಲ್ಲ. ವೈರುಧ್ಯಗಳನ್ನು, ಅನುಮಾನಗಳನ್ನು, ಬಹುಳತ್ವವನ್ನು ಒಪ್ಪಿಕೊಳ್ಳುವುದು ಇಂದು ಸಾಧ್ಯ. ಆದ್ದರಿಂದ ಅನೇಕ ಸೂತ್ರಗಳು, ಕೆಲವೊಂದು ಪರಸ್ಪರ ವಿರುದ್ಧವಾದುವು ಕೂಡಾ, ಲೋಕದಲ್ಲಿ ಒಟ್ಟೊಟ್ಟಿಗೆ ಇರಬಾರದೇಕೆ ಎಂದು ನಾವು ಕೇಳಬಹುದು. ಜಗತ್ತಿನ ಶಕ್ತಿಗಳೆಲ್ಲ ಸಾಂಗತ್ಯದಲ್ಲಿವೆ ಎಂಬ ನಂಬಿಕೆಯ ಹಿಂದೆ ಅವು ಹಾಗೆ ಇರಬೇಕು ಎಂಬ ಅಭಿಲಾಷೆಯೆ ಹೆಚ್ಚು ಕೆಲಸಮಾಡುವ ಹಾಗೆ ಕಾಣುತ್ತದೆ. ದೇವರನ್ನು ಕಳಕೊಂಡ ಮನುಷ್ಯ ಈ ಶೂನ್ಯವನ್ನು ತುಂಬುವುದಕ್ಕೆ ಅದಕ್ಕೆ ಸರಿಸಮನಾದ ಇನ್ನೊಂದು ಉಪಸ್ಥಿತಿಯನ್ನು ಬಯಸುತ್ತಿರಬಹುದೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೭
Next post ಚಿರಂತನ

ಸಣ್ಣ ಕತೆ

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys