ಬೇಸಿಗೆಯ ಒಂದಿರುಳು
ತಡೆಯಲಾರದೆ ಸೆಖೆ,
ಬಿಸಿಲು ಮೆಚ್ಚೆಯ ಮೇಲೆ
ಮೈಯೊಡ್ಡಿ ತಂಗಾಳಿಗೆ
ಮಲಗಿದ್ದಾಗ ಅಂಗಾತ –
ಮೇಲೆ ನೀಲಾಕಾಶ
ಶಾಂತ ಸಾಗರ ಸದೃಶ.
ನೀಲಿ ವೆಲ್ವೆಟ್ ಬಟ್ಟೆ
ಮೇಲೆ ಹರಡಿದ ಚಮಕಿ,
ಅಸಂಖ್ಯ ಆಕಾಶ ಕಾಯಗಳ,
ಕ್ಷೀರ ಪಥ, ನಕ್ಷತ್ರ ಪುಂಜಗಳ,
ಸೌರವ್ಯೂಹಗಳ ಮಧ್ಯದಲ್ಲೊಂದು
ನಮ್ಮ ಭೂಮಿಯಂಥದೇ ಗ್ರಹ!
ಅಲ್ಲೂ ನಮ್ಮಂತಹ ಮನುಜರು
ಸುರ ಸುಂದರರು, ತೇಜಃಪುಂಜರು.
ರೆಕ್ಕೆ ಇಲ್ಲದ ಚೆಲುವೆ
ರಂಭೆಯಂತಹ ದೇವತೆ
ಜ್ಯೋತಿ ವರ್ಷಗಳ ದೂರದಿಂದ
ಕರೆಯುತಿಹಳೆನ್ನ ಪ್ರೇಮದಿಂದ!
ಏಳಲಾರೆನು ನಾ ಹೆಳವ
ತೀರಿಸಲಾರದೆ ಋಣವ
ಬಿಡಿಸಲಾರದೆ ಬಂಧನವ
ಮಹಡಿಯ ನೆಲ ಕಚ್ಚಿರುವೆ
ನಾ ಬರಲಾರೆ ಚೆಲುವೆ
ನೀನಿರುವಲ್ಲಿಗೆ.
ನಾ ಇರುವೆ ಇಲ್ಲೇ
ನೀನಿರು ಅಲ್ಲೇ
ನನ್ನ ನೋವ ಕೇಳು
ಇಳಿಸು ಹೆಗಲ ಭಾರವ
ತಣಿಸು ತೀರದ ದಾಹವ
ನನ್ನ ನಿನ್ನ ಗುಪ್ತ ಸ್ನೇಹಭಾವ
ಹೀಗೆಯೇ ಇರಲಿ ಚಿರಂತನ.
*****
೨೧-೧೨-೧೯೯೩