ಉದ್ಯೋಗಂ

ಉದ್ಯೋಗಂ

ಚಿತ್ರ: ಹನಿ ಕಾಚ್ಪಾನ್ ಆನಶಾವಿ
ಚಿತ್ರ: ಹನಿ ಕಾಚ್ಪಾನ್ ಆನಶಾವಿ

ಬಹಳಷ್ಟು ಚಿಂತನ ಮಂಥನ ನಡೆಸಿದ ನಂತರವೂ ರಾಮಲಿಂಗನ ಮನಸ್ಸು ಸಮಸ್ಥಿತಿಗೆ ಬಾರದೆ ಡೋಲಾಯಮಾನವಾಗಿದೆ. ತಾನು ಜೀವನದಲ್ಲಿ ಆಗಬೇಕೆಂದು ಅಂದುಕೊಂಡಿದ್ದೇನು? ಆಗಲು ಹೊರಟಿರುವುದೇನು! ತನ್ನ ಕ್ರಾಂತಿಕಾರಿ ವಿಚಾರಧಾರೆಗಳೆಲ್ಲಾ ಇದೀಗ ಪೊಳ್ಳು ಅನಿಸುತ್ತಿರುವುದು ಪಲಾಯನವಾದವಲ್ಲವೆ, ರಾಜಕಾರಣಿಗಳನ್ನು ಕಂಡರೆ ತನಗೆಷ್ಟು ಅಲರ್ಜಿಯೋ ದುಪ್ಪಟ್ಟು ಅಲರ್ಜಿ ಮಠಾದೀಶರ ಬಗ್ಗೆ ಇತ್ತು. ಮಠಗಳನ್ನು ಮಠಪತಿಗಳನ್ನು ಖಂಡಿಸಿ ತಾನೆಷ್ಟು ಬರೆದಿಲ್ಲ ಈ ದೇಶದಲ್ಲಿ ಜಾತಿ ಬೇಕಿರೋದು ಇಬ್ಬರಿಗೆ  ಮಾತ್ರ ಒಬ್ಬ ರಾಜಕಾರಣಿ. ಆತನಿಗೆ ಜಾತಿಯಿಂದಲೇ ಓಟು-ಸೀಟು. ಮತ್ತೊಬ್ಬ ಮಠಪತಿ. ಈತನಿಗೆ ಜಾತಿಯಿಂದಲೇ ಮಠ-ಪೀಠ. ಆದ್ದರಿಂದಲೇ ಅವರುಗಳು ಜಾತಿ ಪದ್ಧತಿಯನ್ನು ಭಾಷಣಗಳಲ್ಲಿ ಖಂಡಿಸಿದರೂ ಅಂತರಂಗದಲ್ಲಿ ಪೋಷಿಸುತ್ತಲೇ ಬಂದಿದ್ದಾರೆ. ರಾಮಮಂದಿರ ನಿರ್ಮಾಣವನ್ನೇ ದೊಡ್ಡ ಸಮಸ್ಯೆಯೆಂಬಂತೆ ಬಿಂಬಿಸುವವರೇ ದೇಶವನ್ನು ಆಳುತ್ತಿದ್ದರೂ ಅವರಿಂದ ರಾಮಮಂದಿರ ನಿರ್ಮಾಣ ಆಗಲಿಲ್ಲ. ಅದು ಆಗಿ ಬಿಟ್ಟರೆ ಮುಂದಿನ ಚುನಾವಣೆಗೆ ಅವರಾದರೂ ಏನನ್ನು ಮುಂದಿಟ್ಟುಕೊಂಡು ಓಟು ಕೇಳಲು ಜನರ ಬಳಿಗೆ ಹೋದಾರು. ರಾಮಮಂದಿರ ನಿರ್ಮಾಣದಲ್ಲೂ ಅಷ್ಟೇ. ಬ್ರಾಹ್ಮಣ ಸ್ವಾಮಿಗಳಿಗಿರುವಷ್ಟು ಗೀಳು ವೀರಶೈವ ಸ್ವಾಮಿಗಳಿಗಿಲ್ಲ! ಬಸವಣ್ಣನ ತತ್ವಗಳನ್ನು ಸಾರಲು ವಿದೇಶಗಳಿಗೆ ಟೂರ್ ಹೋಗುವ ಇವರಿಗೆ ಸ್ವದೇಶಲ್ಲಿಯೇ ಬಸವ ತತ್ವಗಳನ್ನು ಆನುಷ್ಠಾನಕ್ಕೆ ತರಲು ಆಗುತ್ತಿಲ್ಲವೆಂಬುದು ವಿಪರ್ಯಾಸ.

ಒಂದಷ್ಟು ಸಾಮೂಹಿಕ ವಿವಾಹಗಳು ಅನ್ಯಜಾತಿ ವಿವಾಹಗಳನ್ನು ಮಠಗಳಲ್ಲಿ ನಡೆಸಿದರೂ ಎಲ್ಲಾ ಜಗದ್ಗುರುಗಳು ಜಾತಿ ಗುರುಗಳಾಗಿ ಉಳಿದಿರುವುದು ಪರಿಸ್ಥಿತಿಯ ಅನಿವಾರ್ಯವೋ ಅಸಹಾಯಕತೆಯೋ ಅವರುಗಳಿಗೇ ಅರ್ಥವಾದಂತಿಲ್ಲ. ಈ ಬಗ್ಗೆ ರಾಮಲಿಂಗ ರೇಣುಕಾಳೊಡನೆ ಸಾಕಷ್ಟು ಚರ್ಚಿಸಿದ್ದಾನೆ. ಲೇವಡಿ ಮಾಡಿದ್ದಾರೆ. ಆಕೆಯೂ ವಿಚಾರವಾದಿ. ಮೇಲುವರ್ಗದ ಹುಡುಗಿಯಾದರೂ ಜಾತಿಗೆ ಮೂರು ಕಾಸಿನ ಬೆಲೆ ಕೊಡದ ದಿಟ್ಟೆ. ರಾಮಲಿಂಗನ ಲೇಖನಗಳು ಭಾಷಣಗಳೆಂದರೆ ಅವಳಿಗೆ ಪ್ರಿಯ. ಇಷ್ಟಾದರೂ ಜೀವನಕ್ಕೆ ಭದ್ರತೆ ಕಲ್ಪಿಸುವ ನೌಕರಿಯೊಂದು ಸಿಕ್ಕಿಬಿಟ್ಟಿದ್ದರೆ ಅವರೆಂದೋ ಮದುವೆಯಾಗಿ ಬಿಡುವ ಸಾಧ್ಯತೆ ಇತ್ತು. ಹಾಗೆ ನೋಡಿದರೆ ರಾಮಲಿಂಗನೇ ಒಂದಿಷ್ಟು ಪುಕ್ಕಲ. ಅವಳು ಅನೇಕ ಸಲ ಹೇಳಿದ್ದುಂಟು. ನೌಕರಿ ಅಂತ ಕಾಯುತ್ತಾ ಕುಳಿತೆವೋ ಮುದುಕರಾಗಿ ಬಿಡುತ್ತೇವೆ. ರಾಮು  ಧೈರ್ಯವಾಗಿ ಮದುವೆಯಾಗಿಬಿಡೋಣ. ಮೊದಮೊದಲು ಮನೆಯವರು ಅಪೋಸ್ ಮಾಡಿದರೂ ನಂತರ ನಮ್ಮವರು ಕೈ ಬಿಡಲಾರರು. ಆಮೇಲೆ ನೌಕರಿಯೂ ಸಿಕ್ಕೀತು ಎಂದಾಕೆ ಅವನ ಮನದಲ್ಲಿನ ಭೀತಿಯ ಬೀಜವನ್ನು ಕಿತ್ತೆಗೆಯಲು ಹೆಣಗಾಡಿದ್ದುಂಟು. ತಹಸೀದ್ದಾರ್ ತಂದೆಗೆ ತಾನೊಬ್ಬಳೇ ಮಗಳು ತನ್ನನ್ನು ದೂರ ಮಾಡಿಕೊಂಡು ಅವರಾದರೂ ಬದುಕಲಾರರೆಂಬ ಅಚಲ ವಿಶ್ವಾಸ ಅವಳದು. ರಾಮಲಿಂಗನಿಗೋ ತನ್ನ ಬಗ್ಗೆಯೇ ವಿಶ್ವಾಸವಿಲ್ಲ. ವಯಸ್ಸಿಗೆ ಬಂದ ಇಬ್ಬರು ತಂಗಿಯರು, ತಮ್ಮ ತಂದೆಯೋ ನಿವೃತ್ತ ಜವಾನ, ವಯಸ್ಸಾದ ತಾಯಿ. ಇವರೆಲ್ಲರ ಜವಾಬ್ದಾರಿ ತನ್ನ ಹೆಗಲ ಮೇಲಿದೆ ಎಂಬ ಸಂದಿಗ್ದ. ಮಗನಿಗೆ ನೌಕರಿಯೊಂದು ಸಿಕ್ಕಿಬಿಟ್ಟಿತೋ ತಮ್ಮ ಜೀವನಮಾರ್ಗ ಸುಗಮವಾಗುವುದಾಗಿ ತನ್ನನ್ನೇ ನಂಬಿದ್ದ ಹೆತ್ತವರು. ಅವರು ಹೊಟ್ಟೆ ಬಟ್ಟೆ ಕಟ್ಟಿ ಮೈಸೂರಿಗೆ ಕಳಿಸಿ ಎಂ.ಎ. ಓದಿಸಿದ್ದರೆ ಈ ರೇಣುಕೆಯಲ್ಲಿ ಪರಿಚಯವಾಗುತ್ತಿದ್ದಳು? ಏನಾದರೇನು ಲೆಕ್ಟರರ್ ಆಗಿ ಅವನು ಕಾಲೇಜಿನಲ್ಲಿ ಪಾಠ ಮಾಡುವ ದಿನಗಳು ಬರಲೇಯಿಲ್ಲ. ಈ ಐದು ವರ್ಷಗಳಲ್ಲಿ ತಪ್ಪದೇ ವಾಂಟೆಡ್ ಕಾಲಮ್ಗಳಿಗೆ ಅರ್ಜಿಗಳನ್ನು ಗುಜರಾಯಿಸುತ್ತಾ ಕಾಸು ಕಳೆದುಕೊಂಡಿದ್ದೇ ಹೆಚ್ಚು. ನೌಕರಿ ಇನ್ನು ಕನಸಿನ ಮಾತೇನೋ ಎಂಬಷ್ಟು ಅಧೀರನಾದಾಗ ರೇಣುಕೆ ನೆರವಿಗೆ ಬಂದಿದ್ದಳು. ಹೇಗೋ ಪತ್ರಿಕೆಗಳಿಗೆ ಬರಯುತ್ತೀಯಾ. ನೀನೇ ಒಂದು ಪತ್ರಿಕೆ ಮಾಡಿ ಬಿಡು ರಾಮು. ಪ್ರಗತಿಪರ ಯುವಕ-ಯುವತಿಯರು, ವಿಚಾರವಂತರು ನಿನ್ನ ಪತ್ರಿಕೆಯನ್ನು ಬಳಸಿಯಾರು ಎಂದೆಲ್ಲಾ ಹುರುಪು ತುಂಬಿದ್ದಳು. ಬ್ಯಾಂಕ್ ಲೋನ್ ಕೊಡಿಸಿದ್ದಳು.

ರಾಮಲಿಂಗನ ‘ಆಕ್ರೋಶ’ ಪತ್ರಿಕೆ ಆರಂಭವಾದದ್ದು ಹೀಗೆ, ಬೆಂಕಿಯಂತಹ ಬರಹಗಳಿಂದಲೇ ಪತ್ರಿಕೆ ಸಿಡಿಯಿತು. ಲೋಕಲ್ ರಾಜಕಾರಣಿಗಳ ಅವ್ಯವಹಾರಗಳು ಬಯಲಿಗೆ ಬಂದವು. ಲೋಕಲ್ ಮಠಾಧಿಪತಿಗಳ ಭೋಗಜೀವನ ಯಜ್ಞ ಮಾರ್ಗಗಳ ಅಜ್ಞಾನ, ವಿದ್ಯಾದಾನದಿಂದ ಹೆಸರಿನಲ್ಲಿ ಡೆಂಟಲ್ ಮೆಡಿಕಲ್ ಎಂಜನಿಯರಿಂಗ್ ಸೀಟ್ಗಳ ಮಾರಾಟ ದಂಧೆ ಧಾರಾವಾಹಿಗಳು ಬಿತ್ತರಗೊಂಡವು. ಊರಿಗೆ ಊರೇ ಪತ್ರಿಕೆಯತ್ತ ಕಣ್ಣು ಕೀಲಿಸಿತು. ದುಡ್ಡು ಕೊಟ್ಟು ಓದುವವರ ಸಂಖ್ಯೆ ಬೆಳೆಯದಿದ್ದರೂ ಪತ್ರಿಕೆ ಬಂತೆಂದರೆ ನೂರಾರು ಜೆರಾಕ್ಸ್ ಕಾಪಿಗಳು ಹಾರಾಡಲಾರಂಭಿಸಿದವು. ರಾಮಲಿಂಗ ಮನೆಮನೆಯ ಮಾತಾದ. ಆದರೇನು ದಿನವೂ ಪತ್ರಿಕೆ ಹೊರತರುವುದು ದೊಡ್ಡ ಯಾಗ ಮಾಡಿದಂತಾಗುತ್ತಿತ್ತು. ನಾಲ್ಕು ಪುಟಗಳ ಪತ್ರಿಕೆ ಈಚೆ ಬರಲು ಮುದ್ರಕರ ಎದುರು ಸದರಿ ಕ್ರಾಂತಿಕಾರಿ ಮಂಡಿಯೂರಿ ಕೂರಬೇಕಿತ್ತು. ತೆಗಳುವ ಪತ್ರಿಕೆಗೆ ಜಾಹಿರಾತೂ ಸಿಗಲಿಲ್ಲ. ಅನೇಕ ರಾಜಕಾರಣಿಗಳು ಅಬ್ಕಾರಿ ಧಣಿಗಳು ಸರ್ಕಾರಿ ಲಂಚಾಧೀಶರುಗಳು ರಾಮಲಿಂಗನ ಪತ್ರಿಕೆ ಮೇಲೆ ಕೇಸ್ ಜಡಿದು ಅವನು ಕೋರ್ಟು ಕಛೇರಿ ಅಲೆಯುವಂತೆ ಮಾಡಿದರು. ಮಠದ ಭಕ್ತರು ಪತ್ರಿಕೆಯನ್ನು ಬಹಿಷ್ಕರಿಸಿ ಮೆರವಣಿಗೆ ನಡೆಸಿದರು. ಪೋಲೀಸರ ದೌರ್ಜನ್ಯದ ಬಗ್ಗೆ ಬರೆದಾಗ  ರಾಮಲಿಂಗನ ಮೇಲೆಯೇ ದೌರ್ಜನ್ಯ ನಡೆಯಿತು. ಯಾರ ಪರವಾಗಿ ಬರೆದಿದ್ದನೋ ಆ ದಲಿತರಾರೂ ಅವನ ಪರವಾಗಿ ಧರಣಿ ಕೂರಲಿಲ್ಲ. ಯಾರನ್ನು ಹೇಸಿಗೆಯಂತೆ ಕಂಡು ಲೇವಡಿ ಮಾಡಿ ಬರೆದಿದ್ದನೋ ಅದೇ ರಾಜಕಾರಣಿಯೇ ಪೋಲಿಸ್ ಸ್ಟೇಷನ್‍ವರೆಗೂ ಬಂದು ರಾಮಲಿಂಗನನ್ನು ಏರೋಪ್ಲೇನ್ ಸೇವೆಯಿಂದ ಪಾರು ಮಾಡಿದ್ದ. ‘ನಿಮ್ಮ ತಂದೆ ಬಂದು ಕಾಲು ಹಿಡ್ಕೊಂಡ್ನಪ್ಪ. ಏನ್ ಮಾಡೋದು? ನಮ್ಮ ಜನಾಂಗ ಬೇರೆ. ನಿನಗಂತೂ ನಮ್ಮೋರು ತಮ್ಮೋರು ಅನ್ನೋರಿಲ್ಲ… ಆದ್ರೆ ನಮಗೆ ಎಲ್ಲರೂ ಬೇಕಲ್ಲಯ್ಯ. ಮೇಲಾಗಿ ನಮ್ಮ ಹುಡ್ಗ ಬಿಸಿರಕ್ತ… ಚೆಂದಾಗೇನೋ ಬರಿತೀಯಾ ಮಗಾ. ಆ ಅಭಿಮಾನದಿಂದ್ಲೂ ನಿನ್ನನ್ನ ಸೇವ್ ಮಾಡಿದೀನಿ. ಒಂದು ಮಾತು ಹೇಳ್ತೀನಿ ಕೇಳ್ ಮಗಾ.. ರಾಜ್ಯಮಟ್ಟದ ಪತ್ರಿಕೆಗಳಿಗೇ ನಾವು ಕೇರ್ ಮಾಡೊಲ್ಲ. ನಮ್ಮನ್ನು ಟೀಕೆ ಮಾಡಿ ಬರೆಯೋ ಸಂಪಾದಕರೇನು ಸಾಚಾನಾ? ದುಡ್ಡು ಮಾಡೋಕಂತ್ಲೆ ಬರೀತಾನೆ. ಎಂಜಲು ಬಿಸಾಕಿದರೆ  ಬರೆಯೋದನ್ನೇ ಮರೀತಾನೆ. ನೀನ್ ಯಾವ ಇಸಂ? ಲೋಕಲ್ನಾಗಿದ್ದುಕೊಂಡು ನಮ್ಮ ನಿಷ್ಟುರ ಕಟ್ಕೊಂಡು ಬದುಕೋಕೆ ಆಯ್ತದಾ ಮಗಾ. ಬದ್ಕೋ ದಾರಿ ನೋಡ್ಕೋ ಸಿವಾ. ಬರಹ ಕೆಂಡದಂಗಿರ್ಬಾರ್ದು… ಕೂಲಾಗಿರ್ಲಿ ಮಗಾ ಕಾಸು ಮಾಡ್ಬೋದು” ರಾಜಕಾರಣಿ ಬಿಟ್ಟಿ ಉಪದೇಶ ಮಾಡಿದ್ದ. ರಾಮಲಿಂಗನಿಗೆ ಮಾತುಗಳೇ ಮರೆತು ಹೋಗಿದ್ದವು. “ಇವರೆಲ್ಲಾ ಸೇರಿ ತನ್ನ ಪೇಪರ್ ನಿಲ್ಲಿಸಲು ಸಂಚು ಹೂಡಿದ್ದಾರೆ. ಬಟ್ ಐ ಡೋಂಟ್ ಕೇರ್ ಫಾರ್ ಎನಿ ಡರ್ಟಿ ಕಾವಿ ಅಂಡ್ ಯೂಸ್‍ಲೆಸ್ ಖಾದಿ” ಅಂತ ರೇಣುಕೆಯ ಮುಂದೆ ಕೂಗಾಡಿ ಅವಳ ಮಡಿಲಲ್ಲಿ ತಲೆಯಿಟ್ಟು ಅತ್ತುಬಿಟ್ಟಿದ್ದ.

ಯಾರೂ ಇವನ ಪೇಪರ್ ಅನ್ನು ನಿಲ್ಲಿಸಲು ಸಂಚು ಮಾಡದಿದ್ದರೂ ಮುದ್ರಕನ ಬಾಕಿ ಬೆಳೆಯುತ್ತಾ ಹೋದಾಗ ‘ಆಕ್ರೋಶ’ ತಾನಾಗಿಯೇ ಅದೃಶ್ಯವಾಯಿತು. ಬ್ಯಾಂಕ್ ಲೋನ್ ತೀರಿಸುವ ಮೊದಲೇ ಪತ್ರಿಕೆಯೇ ನಿಂತು ಹೋದಾಗ ರಾಮಲಿಂಗ ಹತಾಶನಾಗಿದ್ದ. ಮದುವೆಗೆ ಬಂದು ನಿಂತ ತಂಗಿಯರು, ಡಿಗ್ರಿ ಮುಗಿಸಿರುವ ತಮ್ಮ, ಕೆಲಸ ಸಿಗದ ತಾನು ಮುಂದೇನು? ಬೃಹದಾಕಾರದ ಪ್ರಶ್ನೆ ವಿರಾಟ ರೂಪ ತಾಳಿ ಅವನ ತಲೆಯ ಮೇಲೆಯೇ ಕಾಲಿಟ್ಟು ತುಳಿದುಬಿಡಲು ಸಿದ್ಧವಾಗಿತ್ತು. ಇಂಥ ದಿನಗಳಲ್ಲೇ ಮಹಾಸ್ವಾಮಿಗಳ ಅನುಗ್ರಹ ಅವನ ಮೇಲಾದುದ್ದು ಹೀಗೆ.

ದಸರಾ ಉತ್ಸವ ಬಂತು. ಶ್ರೀಮಠ ವಾರಗಟ್ಟಲೆ ದಸರಾ ಉತ್ಸವ ನಡೆಸಿ ಸಾಹಿತಿ ಕಲಾವಿದರನ್ನು ಸನ್ಮಾನಿಸುವುದು ಅನಾಚಾರವಾಗಿ ನಡೆದು ಬಂದ ಪದ್ದತಿ.‘ಆಕ್ರೋಶದ’ ಮಾಜಿ ಸಂಪಾದಕ ರಾಮಲಿಂಗನಿಗೆ ಸನ್ಮಾನ ಮಾಡಲೆಂದು ಮಠವೇ ಮುಂದೆ ಬಂತು. ಅವನು ಒಪ್ಪಿಕೊಳ್ಳಲಿಲ್ಲ ಆದರೆ ರೇಣುಕೆ ಬಿಡಲಿಲ್ಲ “ಒಪ್ಪಿಕೋ ಮಾರಾಯ, ದೊಡ್ಡ ಸಮಾರಂಭ ರಾಜಕೀಯದೋರು ಮಠಾಧೀಶರ ಸಮೂಹವೇ ನೆರದಿರುತ್ತೆ. ಬಾರಿಸಲಿದು ಸರಿಯಾದ ಸಮಯ. ನಿನ್ನ ವಿಚಾರಗಳನ್ನು ಇಂತಲ್ಲಿಯೇ ಆಸ್ಫೋಟಿಸಬೇಕು ಅವರ ಎದುರಲ್ಲೇ ಅವರನ್ನು ಟೀಕಿಸಲು ಗಂಡದೆ ಬೇಕು ಕಣೋ… ಅದು ನಿನ್ಗೆ ಇದೆ ತಾನೆ?” ಕೆಣಕಿದ್ದಳು ರೇಣುಕೆ.

“ಹಾಗಲ್ಲ ರೇಣು. ಮಠಾಧಿಪತಿಗಳನ್ನು ಟೀಕಿಸುವ ನಾನು ಅವರಿಂದ ಸನ್ಮಾನ ಮಾಡಿಸಿಕೊಳ್ಳೋದು ಎಷ್ಟು ಸರಿ?” ಸಂದಿಗ್ಧವನ್ನು ತೋಡಿಕೊಂಡ ರಾಮಲಿಂಗ. “ಆವರಾಗಿ ಮಾಡುತೇವೆಂದು ಮುಂದೆ ಬಂದಿದಾರೆ ನಿನ್ನ ಬಂಡಾಯಕ್ಕೆ ಸಿಕ್ಕ ಗೌರವ ಅಂದ್ಕೋ. ಈಗಿನ ಮಹಾಸ್ವಾಮಿಗಳು ಕೊಂಚ ಎಡವಟ್ಟು. ತಾವೇ ಆಧುನಿಕ ಬಸವಣ್ಣನೆಂದು ತಿಳಿದು ಏನೇನೋ ಕಾರ್ಯಗಳನ್ನು ಮಾಡುತಿರುತ್ತಾರೆ. ಮಠಗಳನ್ನು ಟೀಕಿಸುತ್ತಾ ದೂರ ಉಳಿಯುವುದಕ್ಕಿಂತ ಅವರೊಡನೆ ಒಡನಾಟವಿಟ್ಟುಕೊಂಡೇ ನಿನ್ನ ವಿಚಾರಗಳನ್ನು ಪ್ರತಿಬಿಂಬಿಸಬೇಕು ಕಣೋ”

“ಅದರಿಂದ ನನಗೇನು ಲಾಭ ರೇಣು”

“ಸಮಾಜಕ್ಕೆ ಲಾಭವಾಗುವುದರ ಬಗ್ಗೆ ಚಿಂತಿಸು ರಾಮು. ಯಾರೇನಂದರೇನು ಸನ್ಮಾನಕ್ಕೆ ಒಪ್ಪಿಕೋ” ರೇಣುಕ ತಿಳಿಸಿ ಹೇಳಿದಳು. ಅವನೂ ಅರೆ ಮನಸ್ಸಿನಿಂದಲೇ ಒಪ್ಪಿಗೆ ಪತ್ರ ಬರೆದ.
*     *     *

ಅದ್ದೂರಿ ಸಮಾರಂಭದಲ್ಲಿ ಮಹಾಸ್ವಾಮಿಗಳು ಅವನನ್ನು ಭರ್ಜರಿಯಾಗಿಯೇ ಸನ್ಮಾನಿಸಿದರು. ಅವನ ಕ್ರಾಂತಿಕಾರಿ ಮನೋಭಾವ ಅಗ್ದಿ ಇಷ್ಟವಾಗುತ್ತೆ ಅಂದರು. ರಾಮಲಿಂಗಂದು ಬರಹ ಅಲ್ಲ ಬಿಡ್ರಿ, ಬೆಂಕಿ ಅಂದು ಮುಸಿ ಮುಸಿ ನಕ್ಕರು. ಈ ಹುಡ್ಗ ನಮ್ಮ ಮ್ಯಾಗೂ ಟೀಕೆ ಮಾಡಿ ಬರ್ದೇತೆ… ಬೈದವರೆನ್ನ ಬಂದುಗಳಯ್ಯ ಅಂದೋರು ನಾವು. ಬರಿಬೇಕ್ರಿ ಹಂಗೇ ಬರಿಬೇಕು. ನಮ್ಮ ಸುತ್ತಾ ಮುತ್ತಾ ಇರೋರೆಲ್ಲಾ ಬರೀ ಹೌದಪ್ಪಗಳ್ರಿ. ನಮ್ಮ ಮಿಷ್ಟೇಕ್ನ ತೋರ್ಸೋ ಇಂತಹ ಅಲ್ಲಪ್ಪಗಳೂ ನಮ್ಗೆ ಬೇಕ್ರಿ.  ಅಂತೆಲ್ಲ ಕೊಂಡಾಡಿದರು. ಸನ್ಮಾನಕ್ಕೆ ಉತ್ತರ ಕೊಟ್ಟ ರಾಮಲಿಂಗನದು ಬೆಂಕಿಯುಗುಳುವ ಭಾಷಣ. ಸೂಜಿ ಬಿದ್ದರೂ ಕೇಳುವಷ್ಟು ನಿಶ್ಶಬ್ದ. ರಾಜಕಾರಣಿಗಳನ್ನು ಮಠಪತಿಗಳನ್ನು ತನ್ನ ನಾಲಿಗೆಯಿಂದ ಇರಿದು ಇರಿದು ಕೊಚ್ಚಿ ಹಾಕಿದ. ಇದ್ದಕ್ಕಿದ್ದಂತೆ ಸ್ವಾಮಿಗಳ ಭಕ್ತ ವೃಂದ ಗದ್ದಲವೆಬ್ಬಿಸಿತು.

ಕೆಲವರು ‘ಸಾಕು ನಿಲ್ಸಲೇ, ಧಡಿಯ’ ಎಂದು ಆಬ್ಬರಿಸುತ್ತಾ ವೇದಿಕೆಗೆ ನುಗ್ಗಿದರು. ಮಹಾಸ್ವಾಮಿಗಳೇ ಮುಂದೆ ಬಂದು ಭಕ್ತಾದಿಗಳನ್ನು ತಡೆದು ವೇದಿಕೆಯಿಂದ ಕೆಳಗಿಳಿಸಿದರು. ಪೂರಾ ಮಾತನಾಡಲು ರಾಮಲಿಂಗನಿಗೆ ಅನುವು ಮಾಡಿಕೊಟ್ಟರು. ಅವನು ಭಾಷಣ ಮುಗಿಸಿ ಉಗಿ ಹಾಯುತ್ತಾ ಕೂತಾಗ ಮುಸಿ ಮುಸಿ ನಗುತ್ತಾ ಅವನ ಹಸ್ತವನ್ನು ತಮ್ಮ ಹಸ್ತದಿಂದ ಅಮುಕಿ ಭರವಸೆಯ ನೋಟ ಬೀರಿದರು. ರಾಮಲಿಂಗನಿಗೀಗ ಪರಮಾಶ್ಚರ್ಯ. ಮೈ ಬಗ್ಗಿಸಿ ದುಡಿಯದೇ ಮೂರು ಕಾಸನ್ನು ಸಂಪಾದಿಸದೇ ಕೂತು ತಿನ್ನುವ ಸ್ವಾಮಿಗಳು ಪರಾವಲಂಬಿಗಳೆಂದಿದ್ದ. ಹಸಿವು ಏನೆಂದೇ ತಿಳಿಯದ ಇವರೆಲ್ಲಾ ಏನು ಕ್ರಾಂತಿ ಮಾಡುತ್ತಾರೆಂದು ಬರೆದಿದ್ದ. ಸುಖದ ಸುಪ್ಪತ್ತಿಗೆಯಲ್ಲಿ ತಿಂದುಂಡು ಕಂಟೆಸ್ಸಾ ಕಾರಲ್ಲಿ ಮೆರೆವ ಇವರೆಲ್ಲಾ ಬಡವರ ಬಂದುಗಳಾಗಲು ಸಾಧ್ಯವೇ ಅಂತ ಅಣಕವಾಡಿದ್ದ. ಹೆಣ್ಣಿನ ಸುಖ ಒಂದನ್ನು ಬಿಟ್ಟು ಎಲ್ಲಾ ಸುಖಲೋಲಪತೆಯಲ್ಲಿ ಮೆರವ ಇವರೆಂತಹ ಸರ್ವಸಂಘ ಪರಿತ್ಯಾಗಿಗಳೆಂದು ಪ್ರಶ್ನಿಸಿದ್ದ. ಆದರೇನು ಮಹಾಸ್ವಾಮಿಗಳು ಅವನ ಮೇಲೆ ಎಳ್ಳಷ್ಟೂ ಕೋಪಗೊಂಡಿರಲಿಲ್ಲ! ಭಕ್ತರ ಒದೆಗಳಿಂದ ಬೇರೆ ಪಾರು ಮಾಡಿದ್ದರು. ಕೋಪವನ್ನು ಗೆದ್ದ ತಪಸ್ವಿಗಳಲ್ಲವೆ ಎಂದು ಮೊದಲ ಬಾರಿಗೆ ಕೂತಲ್ಲೇ ಮೆದುವಾದ ರಾಮಲಿಂಗ.

ಮಹಾಸ್ವಾಮಿಗಳು ಆಶೀರ್ವಚನ ನೀಡುವಾಗ ರಾಮಲಿಂಗನ ವಿಚಾರಗಳ ಬಗ್ಗೆ ಚಿಂತಾಕ್ರಾಂತರಾದರು. ಇಂಥ ಹೈಕಳಿಂದ ಮಾತ್ರವೇ ದೇಶದಾಗೆ ಸಮಾಜದಾಗೆ ಶ್ಯಾನೆ  ಚೇಂಜ್ ತರ್ಲಿಕ್ಕೆ ಸಾಧ್ಯನ್ರಪ್ಪಾ.. ರಾಮಲಿಂಗ ಬಡಾ ಜಂಟ್ಲಮೆನ್ ಹುಡ್ಗ ಅದಾನೆ. ಈ ಹುಡ್ಗ ಮಠಕ್ಕೆ ಬಂದು ನಮನ್ನು ಕಾಣ್ಲಿ ಎಂದು ಮುಂತಾಗಿ ಬಹಿರಂಗವಾಗಿ ಆಹ್ವಾನ ನೀಡಿದರು. ರೇಣುಕೆಗೆ ಖುಷಿಯೋ ಖುಷಿ. ರಾಮಲಿಂಗನ ಮನೆಯವರ ಎದೆಯಲ್ಲಿ ಢವ ಢವ. ‘ಒಳ್ಳೆ ಮಾತ್ನಾಗೆ ಮಠಕ್ಕೆ ಕರೆಸಿ ತಲೆಗಿಲೆ ಒಡೆದರೋ ರಾಮಣ್ಣ..  ದೊಡ್ಡೋರ ಸವಾಸ ಕಷ್ಟ’ ಅವನ ತಂದೆ ಅವಲತ್ತುಕೊಂಡಿದ್ದ. ಆದರೆ ರೇಣಕೆಯದು ತದ್ವಿರುದ್ಧ ಆಲೋಚನೆ. ‘ಹೋಗಿ ಬಾರೋ. ಅವರಾಗಿ ಕರೆದಾಗ ಅಂಜಬೇಕೇಕೆ?’ ಅಂದಿದ್ದಳು. ‘ಹಾಗಲ್ಲ ರೇಣು. ವಿರೋಧಿಸುವ ವಿಷಯಗಳೊಂದಿಗೆ ರಾಜಿ ಮಾಡಿಕೊಳ್ಳುವುದು ಸೋಲಲ್ಲವೆ?’ ಇವನ ಹೋಯ್ದಾಟ ‘ರಾಜಿ ಮಾಡಿಕೊಳ್ತಾ ಇರೋದು ನೀನಲ್ಲ.. ಅವರು ಕಣೋ’ ಅವಳು ತನ್ನ ಪಟ್ಟು ಬಿಡಲಿಲ್ಲ. ಆದರೂ ರಾಮಲಿಂಗ ಮಠದತ್ತ ಸುಳಿಯಲಿಲ್ಲ. ಒಂದು ದಿನ ಮಠದಿಂದಲೇ ಆಮಂತ್ರಣ ಬಂತು. ಆಗ ರೇಣುವೂ ಅವನ ಮನೆಯಲ್ಲಿ ಇದ್ದಳು. ಅವಳ ಒತ್ತಾಯಕ್ಕೆ ಹೊರಟ ರಾಮಲಿಂಗ.
*     *      *

ಮಠದಲ್ಲಿ ಒಳ್ಳೆಯ ಸ್ವಾಗತವೇ ದೊರೆಯಿತು. ಸ್ವಾಮಿಗಳು ತಮ್ಮ ಅಂತರಂಗದ ಕೋಣೆಗೇ ಬರಮಾಡಿಕೊಂಡರು. ರಾಮಲಿಂಗನೋ ಪ್ರಶ್ನೆಗಳಿಂದಲೇ ತನ್ನ ಮಾತುಗಳನ್ನಾರಂಬಿಸಿದ್ದ.

“ಭ್ರಷ್ಟ ರಾಜಕಾರಣಿಗಳನ್ನು ಮಠದಲ್ಲೇಕೆ ಬಿಟ್ಕೋತೀರಿ ಸ್ವಾಮೀಜಿ?”

“ದುಷ್ಟ ಭ್ರಷ್ಟರೂ ಅಂತ ಆ ಬಡ್ಡೇತ್ತೋವ ದೂರ ಇಟ್ಟರೆ ಸಜ್ಜನರಾಗೋಕಿಲ್ಲ ತಮಾ. ಅದ್ಕೆಯಾ ಹತ್ತಿರ ಕರೆದು ಕುಂಡ್ರಿಸ್ಕ್ಯಂಡು ತಿಳಿ ಹೇಳ್ಬೇಕು ಕಣಪ್ಪಾ. ಮಠಕ್ಕೆ ಬರಬ್ಯಾಡ್ರಿ ಅಂಬೋಕೆ ಮಠ ಏನ್ ನಮ್ಮಪ್ಪನ ಸೊತ್ತೆ… ಭಕ್ತರ್ದಪ್ಪಾ” – ಸ್ವಾಮಿಗಳ ಸಿದ್ಧ ಉತ್ತರ.

“ಅವರಿಂದ ನಿಮಗೆ ಲಾಭವಿದೆ.  ಸ್ಕೂಲು ಕಾಲೇಜುಗಳಿಗೆ ಗ್ರಾಂಟ್ಸ್ ಸಿಗುತ್ತೆ ನಿವೇಶನ ಸಿಗುತ್ತೆ ನೀವಾದರೂ ಹೆಂಗೆ ಬರಬೇಡಿ ಅಂತೀರಾ?” ನಕ್ಕ ರಾಮಲಿಂಗ.

“ಸತ್ಯವಾದ ಮಾತಾಡಿದ್ಯಪ್ಪಾ ತಮಾ, ಅದರಿಂದ ಹೈಕಳಿಗೆ ವಿದ್ಯಾದಾನ ಮಾಡಿದ ಪುಣ್ಯ ನಮದಾಗಕಿಲ್ವೇನೋ ಯಪಾ, ಅವರೇನು ಜುಜುಬಿಗಳಾ? ಜನಪ್ರತಿನಿಧಿಗಳು. ಅವರನ್ನ ದೂರ ಇಡೋದ್ಕಿಂತ ಅವರಿಂದಲೇ ಜನೋಪಯೋಗಿ ಕೆಲಸ ಮಾಡಿಸ್ಕ್ಯಬೇಕ್ ಕಣೋ ಹುಡ್ಗಾ”

“ಅದೆಲ್ಲಾ ಸರಿ ಬುದ್ಧಿ. ಜಾತಿಗೊಬ್ಬ ಸ್ವಾಮಿಯನ್ನು ಮಾಡೋದರಿಂದ ಜಾತಿ ಹೋಗತ್ತಾ? ಜಾತಿ ಪ್ರಭಾವ ಹೆಚ್ಚಾಗೋದಿಲ್ವೆ?”

“ಹುಡ್ಗುಮುಂಡೇದು ನೀನು. ನಿನಗಿದೆಲ್ಲಾ ಅರ್ಥ ಆಗಾಕಿಲ್ಲ ತಮಾ. ದೊಡ್ಡ ದೊಡ್ಡ ಜಾತಿಗಳೋರು ಮಠ ಕಟ್ಕೊಂಡೇ ಗಂಟು ಮಾಡಿದ್ದು. ನಮ್ಮ ಆಶೀರ್ವಾದ ಇಲ್ದಲೆ ಅದ್ಯಾವ ರಾಜಕಾರಣಿ ಈ ಜಿಲ್ಲೆನಾಗೆ ಮಂತ್ರಿ ಆಗ್ಯಾನೇಳು?”

“ಇದರಿಂದ ಲಾಭವಾಗೋದು ರಾಜಕಾರಣಿಗಲ್ವೆ?” ಸಿಡುಕಿದ ರಾಮಲಿಂಗ.

“ನಿಮ್ಮ ಜಾತಿಯೋನೂ ಒಬ್ಬ ಉದ್ಧಾರವಾಗ್ಲಿ ಬುಡಯ್ಯ. ಈವತ್ತು ರಾಜಕೀಯದಾಗೆ ಮುಂದೆ ಬಾರದ ಜನಾಂಗದ್ದು ನಾಯಿಪಾಡಾಗೋಗೈತಪಾ ತಮಾ. ನಿಮಗೇನು ಬುದ್ಧಿ ಇಲ್ವೆ? ದೇಸಂಬೋ ದೇಸಾ ಆಳೋ ಯೋಗ್ಯತಾ ಇಲ್ಲೇನ್ ತಮಾ.. ಒಂದು ಬುದ್ಧಿ ಮಾತು ಹೇಳ್ತೀನಿ ಕೇಳು. ಗುರು ಇಲ್ಲದ ಗುರಿ ಇಲ್ಲಯ್ಯ… ಕಾರಣ ಪ್ರತಿಯೊಂದು ಜಾತಿಗೂ  ರಾಜಕೀಯವಾಗಿ ಮುಂದೆ ಬರ್ಲಿಕ್ಕೆ ಗುರುಗಳ ಅನುಗ್ರಹ ಬೇಕಪಾ ಹುಡ್ಗಾ. ಇದರಾಗೆ ನಮ್ಮ ಸ್ವಾರ್ಥಾರ ಏನೈತೆ ಹೇಳು?”

“ಆದರೆ ನಮ್ಮ ಜನಾಂಗದಲ್ಲಿ ಸ್ವಾಮಿಗಳಾಗುವಂತಹ ಪ್ರಜ್ಞಾವಂತರು ಎಲ್ಲಿ ಇದಾರೆ ಹೇಳಿ ಸ್ವಾಮೀಜಿ” ಲೊಚಗುಟ್ಟಿದ ರಾಮಲಿಂಗ.

“ದುಖ್ಯಾ-ಅಂಗೈನಾಗೆ ಬೆಣ್ಣೆ ಮಡಿಕೊಂಡು ತುಪ್ಪಕ್ಕೆ ಅಲೆದ್ರಂತೆ… ನಿನ್ನಂತ ಪ್ರತಿಭಾವಂತರು ಪ್ರಾಮಾಣಿಕರು ಮುಂದೆ ಬರಬೇಕ್ ಕಣೋ ಅಯ್ಯಾ ನಮ್ಮ ಜನ ಜನಾಂಗದ ಸುಖಕ್ಕಾಗಿ ಸ್ವಂತ ಜೀವನವನ್ನು ಸುಖವನ್ನು ತ್ಯಾಗ ಮಾಡೋನೇ ಯೋಗಿ ಕಣಪಾ” ಬಲೆ ಬೀಸಿದರು ಸ್ವಾಮೀಜಿ.

“ಅಂದ್ರೆ!… ನಿಮ್ಮ ಮಾತಿನ ಅಂತರ್ಯ?” ಬೆಚ್ಚಿ ಬಿದ್ದ ರಾಮಲಿಂಗ.

“ಖುಲ್ಲಂ ಖುಲ್ಲಾ ಮಾತಾಡೋರು ನಾವು. ನೀನು ಒಂದಪ ‘ಹೂಂ’ ಅನ್ನಲೇ ಸಾಕು… ನಿಮ್ಮ ಜನಾಂಗದ ಮುಖಂಡರನ್ನು ಒಪ್ಪಿಸೋ ಭಾರ ನಮಗಿರ್ಲಿ”

“ಏನಂದ್ರಿ? ನಾನು… ಸ್ವಾಮಿಯಾಗೋದೆ?” ಅಸಹ್ಯಪಟ್ಟ.

“ಪೂರ್ವಾಗ್ರಹ ಬಿಡಲೇಯಪ್ಪಾ ಸ್ವಾಮಿಗಳು ಅಂದ್ರೇನು ದರೋಡೆಕೋರರು ಅಂತ ತಿಳ್ಕಂಡಿಯೇನು. ಅಲ್ಲಯ್ಯಾ, ನಮ್ಗೇನು ಹೆಂಡ್ರೆ ಮಕ್ಳೆ? ಸಂಸಾರವೇ? ನಾವಾರ ಹಣ ಮಾಡೋದು ಮಠಕ್ಕಲ್ವೆ. ಆ ಹಣ ಜನಾಂಗಕ್ಕೆ ಅಲ್ವೇನಯ್ಯಾ ಉಪಯೋಗಕ್ಕೆ ಬರೋದು? ನಮಗಾರ ಯಾತರ ಸುಖ ಐತಿಲ್ಲಿ? ನಮ್ಮನ್ನಾರ ಪ್ರಾಮಾಣಿಕವಾಗಿ ನಮ್ಮಮಂದಿ ಪ್ರೀತಿಸ್ತಾರಂತ ತಿಳ್ಕಂಡಿಯೇನು- ಎಲ್ಲಾ ನಾಟ್ಕ.. ಸೇವೆ ಮಾಡೋ ನೆಪದಾಗೆ ಎಲ್ಲರೂ ನಮ್ಮನ್ನ ಶೇವ್ ಮಾಡೋರೇಯಾ…”

“ನಿಮ್ಮನ್ನ ಕೆಟ್ಟದ್ದಕ್ಕೆ ಬಳಸಿಕೊಳ್ಳೋರು ಮಠಾನೆ ನುಂಗಿ ನೀರು ಕುಡಿಯೋ ಹೆಗ್ಗಣಗಳು ನಿಮ್ಮ ಮಠದಲ್ಲೇ ಇರೋದು ನಿಮ್ಮ ದಿವ್ಯದೃಷ್ಠಿಗೆ ಬಿದ್ದಿಲ್ಲೇನು?”

“ಏನ್ ಮಾಡಾಕ್ ಹಾಕತಿ ನಾವಾರ ಯಾರ್ನಾರ ನಂಬ್ಲೇಬೇಕಲ್ಲಪಾ ಅವರೆಲ್ಲಾ ಸಂಸಾರಿಗಳು ಆಶಾ ಒಸಿ ಜಾಸ್ತೀನೇ ಇರ್ತೈತೆ. ಜೇನು ಕಿತ್ತೋನ್ನ ಕೈ ನೆಕ್ಕ ಬ್ಯಾಡ್ವೋ ಅಂದ್ರೆ ಬಿಡ್ತಾನೇನು? ನಮೂನೆ ಇರೋದು ಅಡ್ಜಸ್ಟ್‌ಮೆಂಟಯ್ಯ. ಅಡ್ಜಸ್ಟ್‌ ಆಗಲಿಲ್ಲಾ ನಮ್ಮ ಮ್ಯಾಗೆ ರಾಜಕೀಯ ಶುರು ಹಚ್ಕಂತಾವೆ ನಮ್ದು ಮುಳ್ಳಿನ ಹಾಸಿಗೆ ಮೇಲಿನ ಸರ್ಕಸಪ್ಪಾ ತಮಾ ಸರ್ಕಸ್ಸು” ನಿಡುಸುಯ್ದರು ಪ್ರಣವ ಸ್ವರೂಪಿ.

“ಇಷ್ಟು ಹೇಳೋ ತಾವು ನನ್ನನ್ನು ಯಾಕ್ರಿ ಸ್ವಾಮಿ ಆಗಂತಿರಾ?” ರಾಂಗ್ ಆದ.

“ನೀ ಚಲೋ ಮನುಷ್ಯಾ ಅದಿ. ಯಾವನೋ ತಲೆ ಮಾಸ್ದೋನ್ನ ಕುಂಡ್ರಿಸೋದು ಬೇಷ್ ಅಲ್ಲೇನು?”

“ಯಾವ ವ್ಯವಸ್ಥೆ ವಿರುದ್ಧ ಹೋರಾಟ ಮಾಡ್ತದೀನೋ ನಾನೇ ಅವರ ಅಡಿಯಾಳಾಗೋದೆ ಸ್ಥಾಮಿಗಳೆ?”

“ದಡ್ಡಾ. ಅದೇ ವ್ಯವಸ್ಥೆನಾ ನಿನ್ನ ಮಾಡಿಕೊಳೋದೆ ಶಾಣ್ಯತನ..  ವ್ಯವಸ್ಥೆ ವಿರುದ್ಧ ಹೋರಾಡಿ ಏನ್ ಕಡ್ದು ಕಟ್ಟೆ ಹಾಕ್ದೆಪಾ? ಒಂದು ಪೇಪರ್ ಮಾಡ್ದಿ ಅದಾರಾ ಉಳ್ಕಂತೇನು? ತಂಗೀರಿಗೆ ಲಗ್ನ ಇಲ್ಲ ನಿನ್ಗು ನಿನ್ನ ತಮ್ಮಂಗೂ ಒಂದು ನೌಕರಿಯಿಲ್ಲ ಸಿಗೊ ಖಾತರಿಯಿಲ್ಲ ವಯಸ್ಸಿರೊವರ್ಗೂ ಕ್ರಾಂತಿ ಅಂತ ಹಾರಾಡ್ತಿ ಆಟೆಯಾ. ವಯಸ್ಸಾದ ಮೇಲೆ ಕಾವು ಇಳಿತೇತಿ. ಯಾರ್ದಾರ ದಲ್ಲಾಳಿ ಅಂಗಡಿಯಾಗೆ ಲೆಕ್ಕ ಬರೆಯೋಕೆ ಸೇರ್ಕೋತಿಯಾ… ಇದೇ ಕಣಪ್ಪಾ ಜೀವನ… ನಿನ್ನಂತ ತಲೆವಾನರು ನಾವು ಹೇಳ್ದಂಗೆ ಕೇಳ್ಬೇಕು. ಸ್ವಾಮಿಗಳಾಗೋದು ಅಂದ್ರೆ ಹುಡುಗಾಟಂತ ಮಾಡಿಯೇನು? ಯಾವುದೋ ಜನ್ಮದ ಭಾಗ್ಯ ಕಣೋ ಹುಚ್ಚಪ್ಪಾ.. ಯೋಚ್ನೆ ಮಾಡು”

“ಎಲ್ಲಾ ಜಾತಿಯಲ್ಲಿ ಒಬ್ಬರನ್ನ ಸ್ವಾಮಿ ಮಾಡಿ ಎಲ್ಲಾ ಜನಾಂಗವನ್ನ ನಿಮ್ಮ ಹಿಡಿತದಲ್ಲಿ ಇಟ್ಕೋಬೇಕಂತ….” ಕೆಣಕಿದ ರಾಮಲಿಂಗ.

“ಬಿಡ್ತು ಆನ್ನು ನಿಮ್ಮ ಜಾತಿ ಜನ ನಿಮ್ಮ ಹಿಡಿತಾಗಿರ್ಲಿ ನೀವು ನಮ್ಮಂಗೆಲ್ಲಾ ಮುಂದೆ ಬರ್ಲಿ ಅಂಬೋ ವಿಶಾಲ ಭಾವ್ನೆ ತಮಾ. ಇದರಾಗೆ ನಮ್ಮ ಸೆಲ್ಪಿಸ್‍ನೆಸ್ ಎಂತದೂ ಇಲ್ಲಪಾ” ಸ್ವಾಮಿಗಳು ಹೇಳಬೇಕೆಂದುಕೊಂಡಿದ್ದನ್ನೆಲ್ಲಾ ನಿಧಾನವಾಗಿ ಅವನ ತಲೆಗೆ ತುಂಬಿದರು. ಅವನ ತಲೆ ಧಿಮಿಗುಟ್ಟುತ್ತಿತ್ತು. ಯೋಚಿಸುತ್ತಲೇ ಎದ್ದು ಬಂದ.
*     *     *

ಒಂದೆರಡು ದಿನ ಯೋಚಿಸುತ್ತಲೇ ಕಳೆದ. ರೇಣುಕೆ ಬಂದಳು. ಅವಳ ಬಳಿ ಅಳಲನ್ನು  ವ್ಯಕ್ತಪಡಿಸಿದ. ನಕ್ಕು ಬಿಟ್ಟಳು. ರಾಮಲಿಂಗ ನಗಲಿಲ್ಲ.

“ನಾನು ಸ್ವಾಮಿಗಳು ಹೇಳಿದ್ದನ್ನ ಸೀರಿಯಸ್ ಆಗಿ ಯೋಚಿಸ್ತಿದೀನಿ” ಅಂದ. “ನಮ್ಮ ಪ್ರೇಮದ ಗತಿ?” ಕಂಗಾಲಾದಳು.

“ಪ್ರೇಮವನ್ನು ಗೆಲ್ಲೋದೆ ತ್ಯಾಗ… ಮಹಾತ್ಯಾಗ”

“ಇದು ತ್ಯಾಗವಲ್ಲ ಕಣೋ.. ಸ್ವಾರ್ಥ”

“ಸನ್ಯಾಸಿಯಾಗೋದರಲ್ಲಿ ಸ್ವಾರ್ಥವೆಲ್ಲಿದೆ ರೇಣು?”

“ನನ್ನ ಬಗ್ಗೆ ಯೋಚಿಸಬೇಕಲ್ವೆ ನೀನು?”

“ನಿನಗಾಗಿ ಯೋಚಿಸೋಕೆ ನಿಮ್ಮ ಮನೆಯೋರು ಉಂಟಲ್ಲ ರೇಣು. ಆದರೆ ನನ್ನ ಮಾತು ನನ್ನ ಮನೆಯ ಪರಿಸ್ಥಿತಿಯೇ ಬೇರೆ. ಏಜ್‌ಬಾರ್ ಆಗ್ತಾ ಇದೆ”

“ಸೋ, ಮನೆಯ ತಾಪತ್ರಯಗಳಿಗಂಜಿ ಸನ್ಯಾಸಿಯಾಗ್ತಿದಿಯೇನು?” ಚೇಡಿಸಿದಳು.

“ಇಲ್ಲ…”

“ಹಾಗಾದ್ರೆ ಕಾವಿ ತೊಡುವ ಹುಚ್ಚೇಕೆ?”

“ಇದುವರೆಗಿನದ್ದು ಹುಚ್ಚು… ಈಗಿನದು ವಾಸ್ತವ”

“ನೋ… ಐ ಕಾಂಟ್ ಲೀವ್ ವಿಥ್ ಔಟ್ ಯೂ… ಯುನೊ” ಬೇಡಿದಳು. ರಾಮಲಿಂಗನ ಮನೆಯವರೂ ಅವನು ಸನ್ಯಾಸಿಯಾಗುವುದನ್ನು ಒಪ್ಪಲಿಲ್ಲ.  ಉಪವಾಸವಿದ್ದರೂ ಆ ಉಪದ್ರವ ಬೇಡವೆಂತ ಮೂಗು ಮುರಿದರು. ರಾಮಲಿಂಗ ಮೌನಿಯಾಗಿಬಿಟ್ಟ. ರೇಣುಕಳೀಗ ಮನೆಗೆ ಬಂದರೂ ಮೊದಲಿನಂತೆ ಮಾತಿಲ್ಲ ಕಥೆಯಿಲ್ಲ. ವಚನ ದೀಪ್ತಿಗಳ ಸಂಪುಟದಲ್ಲಿ ಹೂತು ಹೋದ. ರೇಣು ಕಂಗೆಟ್ಟಳು. ಅವನು ರೇಣುಕೆಯನ್ನು ದೂರ ಇಟ್ಟಿದ್ದರಿಂದ ಮನೆಯವರಿಗೆ ಅರ್ಧ ತಲೆ ನೋವು ಬಗೆಹರಿದಂತಾಗಿತ್ತು. ಅವನು ಅನ್ಯ ಜಾತಿಯಲ್ಲಿ ಮದುವೆಯಾಗೋದು ಮನೆಯಲ್ಲಿನ ಯಾರಿಗೂ ಸುತ್ರಾಂ ಇಷ್ಟವಿರಲಿಲ್ಲ. ನಮ್ಮ ಜಾತಿ ನಮಗೇ ದೊಡ್ಡದು ಎಂಬ ಅಹಂ ಬೇರೆ. ಆದರೆ ಜಿದ್ದಿನ ಹುಡುಗನನ್ನು ಎದುರು ಹಾಕಿಕೂಳ್ಳುವ ಸ್ಥಿತಿಯಲ್ಲೂ ಅವರಿರಲಿಲ್ಲ. ದುಡಿಯಲು ಬಂದ ಮಗನೆಲ್ಲಿ ಕೈ ತಪ್ಪಿ ಹೋದಾನೋ ಎಂಬ ಭಯ ಅವರನ್ನು ಮೂಕರನ್ನಾಗಿಸಿಬಿಟ್ಟಿತಷ್ಟೇ. ರೇಣುಕೆ ದೂರವಾದದ್ದೂ ಸಂತೋಷವೆನಿಸಿದರೂ ಮಗ ಕಾವಿ ತೊಡುವ ಒಲವು ತೋರಿದ್ದು ಹಿಂಸೆಗೀಡು ಮಾಡಿತ್ತು. ಬಾಣಲಿಯಿಂದ ಬೆಂಕಿಗೆ ಬಿದ್ದ ಆನುಭವ.

ಅದರೆ ರಾಮಲಿಂಗ ದಿನಗಳೆದಂತೆ ಗಟ್ಟಿಯಾಗುತ್ತಾ ಹೋದ. ಮಠದಲ್ಲಿಯೇ ಉಳಿದ. ಅಲ್ಲಿ ಆವನಂತಹ ಯುವಕರ ದಂಡೇ ಇರುವುದನ್ನು ಕಂಡು ಆವಕ್ಕಾದ. ಸ್ವಾಮಿಗಳ ಪೋಸ್ಟಿಗೆಂದೇ ದಂಡಪಿಂಡಗಳ ತರಬೇತಿ ನಡೆಯುತ್ತಿದೆ! ಸ್ವಾಮಿಗಳ ಪೋಸ್ಟಿಗೆ ಎಂತಹ ಡಿಮ್ಯಾಂಡಪ್ಪಾ ಎಂದು ಒಳಗೇ ಕುಬ್ಜನಾದ. ರಾಮಲಿಂಗನ ತಮ್ಮನಿಗೆ ಮಠದ ಕಾಲೇಜಿನಲ್ಲೇ ಮಹಾಸ್ವಾಮಿಗಳು ನೌಕರಿಯೊಂದನ್ನು ಅನುಗ್ರಹಿಸಿದಾಗ ರಾಮಲಿಂಗನ ಮನ ಇಳಿಜಾರಿನಲ್ಲಿ ಜೋಲಿ ಹೊಡೆಯಿತು. ಮುಸಿ ಮುಸಿ ನಕ್ಕಿತು. ಇದೀಗ ಅವನ ನಿರ್ಧಾರ ಪ್ರಕರತೆ ಹೆಚ್ಚುತ್ತಾ ಹೋಯಿತು. ಶಿವಯೋಗ ಶಿಖರಗಳು ವಚನ ಕಮ್ಮಟ ಶರಣರೊಡನೆ ಚರ್ಚೆ ಹರಗುರು ಚರಮೂರ್ತಿಗಳೊಂದಿಗೆ ಕಾಲಕ್ಷೇಪ, ವಿಚಾರಗೋಷ್ಠಿ ಪುಣ್ಯಕ್ಷೇತ್ರಗಳ ದರ್ಶನ ಸ್ವಾಮಿಯಾಗಲು ಪೂರ್ಣ ತಯಾರಿ ತರಬೇತಿಗಳಲ್ಲಿ ತನ್ನನ್ನು ತಾನು  ತೊಡಗಿಸಿಕೊಂಡ.

ಮಠದ ಕೆಲವು ಭಕ್ತರು, ರಾಮಲಿಂಗನ ಜಾತಿಯಲ್ಲಿನ ಮುಖಂಡರೆಲ್ಲಾ ಒಟ್ಟಿಗೆ ಮಹಾಸ್ವಾಮಿಗಳ ಸುತ್ತ ನೆರೆದು ಅಪಸ್ವರ ಎತ್ತಿದರು. ರಾಮಲಿಂಗನ ಹಿಂದಿನ ನಡುವಳಿಕೆ, ಯಾರಿಗೂ ತಲೆ ಬಾಗದ ಒರಟುತನದ ಬಗ್ಗೆ ಕೊಂಕು ತೆಗೆದರು. ಅವನಿಗೆ ಕುಡಿತ ಸಿಗರೇಟು ಮಾಂಸಹಾರದ ಚಟಗಳಿದ್ದವು ಬುದ್ಧಿ ಅಂದರು. ಹುಡುಗಿಯೊಬ್ಬಳೊಡನೆ ಓಡಾಡುತ್ತಿದ್ದನೆಂದು ದೂರಿದರು. ನಕ್ಕುಬಿಟ್ಟರು ಲೀಲಾಮಯಿಗಳು.

“ಪೂರ್ವಾಶ್ರಮದ ಮಾತು ಬಿಡ್ರಯ್ಯ…  ಆದ್ಕೆಯಾ ಗ್ಯಾನಿಗಳು ಏನಂದವರೆ ಗೊತ್ತೇನ್ರಲೆ? ನದಿ ಮೂಲ ಋಷಿ ಮೂಲ ಹುಡುಕಬ್ಯಾಡ್ರಿ ಅಂದವರೆ. ಈಗ ಹುಡುಗನ್ನ ಅಪ್ಪಟ ಅಪರಂಜಿ ಮಾಡೀವಿ ಆ ಮಾತು ಬಿಡು” ಮಹಾಸ್ವಾಮಿಗಳ ಅಖೈರು ತೀರ್ಪು ಹೊರಬಿತ್ತು.

ರಾಮಲಿಂಗ ಬಸವರಾಮತಾರಕ ಎಂಬ ಹೆಸರಲ್ಲಿ ತನ್ನ ಜನಾಂಗದ ಸ್ವಾಮಿಯಾಗುತ್ತಿದ್ದಾನೆಂಬ ಪ್ರಚಾರ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಯಿತು. ಟೀಕೆಗಳೂ ಆದವು. ಮರುದಿನವೇ ಸ್ವಾಮಿಯ ಪಟ್ಟ ಅಂದು ರೇಣುಕೆ ಮಠಕ್ಕೆ ನುಗ್ಗಿ ಬಂದಳು. ಅವನ ಬ್ರೈನ್‍ವಾಶ್ ಮಾಡಲು ಹರಸಾಹಸ ಮಾಡಿದಳು. ‘ನಾಳೇ ಬೆಳಗಿನ ಜಾವವೇ ಕಾರು ತರುತ್ತೇನೆ ಎಲ್ಲಿಯಾದರೂ ಓಡಿ ಹೋಗಿ ಬದುಕೋಣ ರಾಮು.  ಈ ಜನರ ಸಹವಾಸನೇ ಬೇಡ’ ಅಂದಳು. ‘ನೀನ್ ಕೈ ಬಿಟ್ಟಿರೆ ವಿಷ ಕುಡಿತೀನಿ’ ಅಂತ ಅತ್ತಳು. ಅವನದ್ದು ಮೌನ ಮಿತ್ರಿತ ತಿಳಿನಗೆ ಜ್ಞಾನಿ ಪೋಜು.

ಅವಳು ಹೋದ ನಂತರ ಆಲೋಚನೆಯ ಸುಳಿಗೆ ಬಿದ್ದ. ಅವಳ ರೂಪು ಯೌವನ ಜೊತೆಗೆ ಒಳ್ಳೆತನ. ಅದರೊಂದಿಗೆ ಹರಿಸಿದ ಕಣ್ಣೀರು ಅವನನ್ನು ಕಂಗೆಡಿಸಿದವು. ಹಿಂದೆಯೇ ಮಹಾಸ್ವಾಮಿಗಳ ವೈಭವಪೂರ್ಣ ಜೀವನವೂ ಕಣ್ಣಿದುರು ಸಿನಿಮಾ ರೀಲಿನಂತೆ ಹರಿಯಿತು. ಬಿಟ್ಟಿ ಕೂಳು, ವಾಸಕ್ಕೊಂದು ಮಠ, ಕೈ ತುಂಬಾ ಕಾಣಿಕೆ ಮೈ ಮೇಲೆ ಮಣಗಟ್ಟಲೆ ಬಂಗಾರ ಅಡ್ಡಪಲ್ಲಕ್ಕಿ ಉತ್ಸವ ಓಡಾಡಲು ಕಾಂಟಸ್ಸಾ ಬೇಕೆನಿಸಿದಾಗ ಯಾರದೋ ಡಾಲರ್ನಲ್ಲಿ ಫಾರಿನ್ ಟೂರು. ಅದೃಷ್ಟ ಖುಲಾಯಿಸಿತೋ ಹೆಲಿಕ್ಕಾಪ್ಪರ್ ಸಹ ಗಿಟ್ಟತು. ಎಂತಹ ಅದೃಷ್ಟ!  ಕವಡೆ ಕಿಮ್ಮತ್ತಿಲ್ಲದ ತಾನು ಕಾಸೂ ದುಡಿಯದೆ ಕಾವಿ ತೊಟ್ಟ ಮಾತ್ರಕ್ಕೆ ಸಕಲ ಸಂಪತ್ತುಗಳ ಒಡೆಯನಾಗಬಲ್ಲೆನಾದರೆ ಇಂತಹ ಉದ್ಯೋಗವನ್ನು ತ್ಯಜಿಸುವುದಾದರೂ ಎಂತ ಜಾಣತನ? ನನ್ನಂತಹ ನಿರುದ್ಯೋಗಿಗಳು ಹಾಗೆ ಉಳಿದು ಮುಪ್ಪಾಗಿ ಸಮಾಜದ ಕಾಲಕಸವಾಗಿ ಕ್ಷಯಿಸುವುದಕ್ಕಿಂತ ಸ್ವಾಮಿಯಾಗುವ ದಂಧೆ ಉಪೇಕ್ಷೆ ಮಾಡುವಂತದ್ದಲ್ಲವೆನ್ನಿಸಿತು. ಅದಾಗಲೇ ಜಾತಿಯ ಮುಖಂಡರು ಖಾದಿಗಳು ಬಂದು ಕಾಣಿಕೆ ಸಲ್ಲಿಸಿ ತನ್ನ ಪಾದ ಪದ್ಮಗಳಿಗೆ ಎರಗುವಾಗ ಅವನಿಗೆ ಒಳಗೇ ನಗು. ಅಭಯಹಸ್ತ ತೋರಿ ಮಂತ್ರಾಕ್ಷತೆ ಅವರ ತಲೆಯ ಮೇಲೆ ಹಾಕಿ ತನ್ನ ಬೋಳು ತಲೆ ನೀವರಿಸಿಕೊಂಡ. “ಪ್ರಸಾದ ಮಾಡ್ಕೊಂಡು ಹೋಗ್ರಪಾ” ಎಂದಾದೇಶಿಸಿದ. ನಿನ್ನೆಯವರೆಗೆ ಪ್ರಸಾದಕ್ಕೆ ಗತಿಯಿಲ್ಲದ ತನಗೆಂತಹ ಪದವಿ ಅನ್ನಿಸಿ ಒಳಗೇ ಲಜ್ಜಿತನಾದ. ಬೆಳಗಿನ ಜಾವವೇ ಸ್ನಾನಾದಿಗಳನ್ನು ಮುಗಿಸಿಕೊಂಡು ಮಹಾಸ್ವಾಮಿಗಳೊಡನೆ ಶ್ರೀಮಠದಿಂದ ಈಚೆಗೆ ಬಂದ. ಹೊರಗಡೆ ಭಜಾ ಭಜಂತ್ರಿಗಳು ಮೊಳಗಿವೆ. ಭಕ್ತರ ಸಮೂಹವೇ ನೆರದಿದೆ. ರಾಜಕಾರಣಿಗಳು ಮಠದಯ್ಯಗಳು ಸಾಲುಗಟ್ಟಿ ನಿಂತಿದ್ದಾರೆ. ದೂರದಲ್ಲಿ ಅಂಬಾಸಿಡರ್ ಕಾರಿಗೆ ಒರಗಿ ನಿಂತಿರುವ ರೇಣುಕೆ ಬೆಳಗಿನ ಜಾವದ ಮಂಜಿನಲ್ಲಿ ಮಂಜು ಮಂಜಾಗಿ ಕಂಡಳು. ಯಾರೋ ಕಾಂಟೆಸ್ಸಾ ಕಾರಿನ ಬಾಗಿಲು ತೆರೆದ ಶಬ್ಬವಾಯಿತು. ಬೆಚ್ಚಿಬಿದ್ದ.

“ಜಗದ್ಗುರು ಬಸವರಾಮತಾರಕ ಮಹಾಸ್ಥಾಮಿಗಳಿಗೆ” ಅನ್ನುತ್ತಲೇ ಜಯಕಾರ ಮುಗಿಲು ಮುಟ್ಟಿತು. ‘ಕೂತ್ಕೊಳ್ಳಿ ಬುದ್ದಿ’ ಅಂದರು. ರಾಮಲಿಂಗ ಪುಸಕ್ಕನೆ ಕಂಟೆಸ್ಸಾದಲ್ಲಿ ತೂರಿಕೊಂಡ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಲಸ ಹುಡುಕುವುದರಲ್ಲಿ
Next post ಮಿಂಚುಳ್ಳಿ ಬೆಳಕಿಂಡಿ – ೩೩

ಸಣ್ಣ ಕತೆ

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys