ಬೆಟ್ಟಿ

ಬೆಟ್ಟಿ

ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು.

“ಮದರ್ ಕರೆಯುತ್ತಿದ್ದಾರೆ…” ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ ಎದೆ ಡವಗುಟ್ಟಿತು. ಈಗ ಯಾಕೆ ಕರೆಯುತ್ತಿದ್ದಾರೆ? ಅದೂ ರಾತ್ರಿಯ ಹೊತ್ತು! ಟೆಸ್ಟು ಮೊನ್ನೆ ತಾನೆ ಮುಗಿಯಿತಲ್ಲ. ಕನ್ನಡಿಯಲ್ಲಿ ಕದ್ದು ಮುಖ ನೋಡಿ ಆನಂದಿಸಿದ್ದನ್ನು ಯಾರಾದರೂ ಹೇಳಿರಬಹುದೆ? ಅವಳ ಮಿದಳು ಕೆದರಿದ ಜೇನುಗೂಡಿನಂತಾಯಿತು. ಏನಾದರಾಗಲಿ ಎಂದು ಹೊರಟು ನಿಂತಳು. ಎಡಗೈಯಿಂದ ಹಣೆಯನ್ನು ಕವಿದಿದ್ದ ಕಂದು ಬಣ್ಣದ ಕೂದಲ ರಾಶಿಯನ್ನು ಹಿಂದಕ್ಕೆ ತಳ್ಳಿದಳು. ಸುಕ್ಕು ಸುಕ್ಕಾಗಿದ್ದ ಸ್ಕರ್ಟನ್ನು ಬೆರಳುಗಳಿಂದ ತೀಡಿ ಸರಿಪಡಿಸಿಕೊಂಡು ರೂಮಿನತ್ತ ಹೆಜ್ಜೆ ಹಾಕಿದಳು.

ಬಾಗಿಲ ಹೊರಗೆ ನಿಂತು ಮೃದುವಾಗಿ ಬೆರಳುಗಳಿಂದ ಒಮ್ಮೆ ತಟ್ಟಿದಳು. “ಯಸ್… ಒಳಗೆ ಬಾ” ಮದರ್ ಸ್ವರ, ಒಳಗೆ ಕಾಲಿಟ್ಟಾಗ ಕಂಡದ್ದು ಅವರ ಶಾಂತ ಮುಖಮುದ್ರೆ, ಎದೆ ಬಡಿತ ಹದಕ್ಕೆ ಬಂದಂತಾಯಿತು. ಏನು ಹೇಳುವರೋ ಎಂದು ಅವರತ್ತಲೇ ದೃಷ್ಟಿ ಹರಿಸಿದಳು.

“ಲಿಂಡಾ… ಈ ಮಗು ಈ ದಿನ ಕಾನ್ವೆಂಟಿಗೆ ದಾಖಲಾಗಿದೆ…” ಮದರ್ ಹೇಳಿದರು. ಆವರೆಗೆ ನೋಡದಿದ್ದ ಮಗುವಿನತ್ತ ಲಿಂಡಾ ಕಣ್ಣು ಹಾಯಿಸಿದಳು. ಗೋಡೆಗೆ ತಾಕಿದಂತೆ ಹಾಕಿದ್ದ ಉದ್ದ ಬೆಂಚಿನ ಮೇಲೆ ಐದು ವರ್ಷದ ಪುಟ್ಟ ಹುಡುಗಿಯೊಂದು ಮುದುಡಿ ಕುಳಿತಿದೆ. ಗಾಬರಿ, ಭಯ ಆತಂಕ ತುಂಬಿದ ದೊಡ್ಡ ಕಂದು ಬಣ್ಣದ ಕಣ್ಣುಗಳು. ಹಳದಿ ಬಣ್ಣದ ಮಾಸಲು ಫ್ರಾಕು, ಭುಜದ ಮೇಲೆ ಇಳಿಬಿದ್ದಿದ್ದ ರೇಶಿಮೆಯಂತಹ ಕೂದಲು, ಪುಟ್ಟ ಬಾಯಿ, ಮೂಗು, ಲಿಂಡಾ ಮೃದುವಾಗಿ ಹೆಜ್ಜೆ ಇಡುತ್ತಾ ಮಗುವಿನ ಬಳಿಗೆ ಹೋದಳು.

“ಹೆಸರೇನು ಮಗೂ?” ಅಷ್ಟೇ ಮೃದುವಾಗಿ ಕೇಳಿದಳು.

“ಬೆಟ್ಟಿ…” ನುಡಿದಾಗ ಅವಳ ಕಂದು ಬಣ್ಣದ ಕಣ್ಣುಗಳೂ ಇನ್ನಷ್ಟು ಅಗಲವಾದವು.

“ಲಿಂಡಾ ಈ ಚೀಟಿಯನ್ನು ರೂಮಿಗೆ ಹೋಗಿ ಓದಿಕೋ, ಲವೀನಾ ಸಿಸ್ಟರ್ ಬರುವವರೆಗೂ ಈ ಮಗುವಿನ ಜವಾಬ್ದಾರಿ ನಿನ್ನದು” ಎನ್ನುತ್ತ ಮದರ್ ಲಿಂಡಾಳತ್ತ ಒಂದು ಕಾಗದ ಸರಿದರು.

“ನಿನ್ನ ವಿಷಯದಲ್ಲಿ ನನಗೆ ತುಂಬಾ ಅಭಿಮಾನ, ನೀನು ಅವಳಿಗೆ ಒಳ್ಳೆಯ ಗೈಡ್ ಆಗಬಲ್ಲೆ…” ಎಂದು ಮದರ್ ಸೇರಿಸಿದಾಗ ಲಿಂಡಾಳಿಗೆ ಹೆಮ್ಮೆ ಎನಿಸಿತು.

“ಥ್ಯಾಂಕ್ಯೂ ಮದರ್” ಎಂದು ಕೃತಜ್ಞತೆ ಸಲ್ಲಿಸಿ, ಲಿಂಡಾ ಬೆಟ್ಟಿಯ ಕೈ ಹಿಡಿದು ಹೊರಕ್ಕೆ ಕರೆ ತಂದಳು.

“ಆಂಟೀ…”

“ಏನು?” ಕೇಳಿದಳು ಲಿಂಡಾ ಬೆಟ್ಟಿಯತ್ತ ತಿರುಗಿ.

“ಆಂಟೀ ಇಲ್ಲಿ ನನ್ನ ಮಮ್ಮಿ ಇದ್ದಾರಂತೆ ಹೌದೇ? ಪಕ್ಕದ ಮನೆಯ ಪೀಟರ್ ಅಂಕಲ್ ಹಾಗಂತ ಹೇಳಿ ನನ್ನ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ…”

“ನಿನ್ನ ಮಮ್ಮಿ? ಎಲ್ಲಿದ್ದಾರೆ?” ಚಕಿತಳಾಗಿ ಕೇಳಿದಳು ಲಿಂಡಾ.

“ಓ…” ನಿಮಗೆ ಗೊತ್ತಿಲ್ಲ. ಅಂಕಲ್ ಹೇಳಿದರು. ನಾಲ್ಕು ದಿನಗಳಿಂದ ಮಮ್ಮಿ ಇಲ್ಲೇ ಇದಾರಂತೆ. ನನ್ನನ್ನು ಬಿಟ್ಟು ಬಂದಿದ್ದಾರೆ ಆಂಟೀ. ಮಮ್ಮಿನ ಚೆನ್ನಾಗಿ ಹೊಡೀಬೇಕು ಊಹೂಂ ಬೇಡಾ ಮಮ್ಮಿನ ಮೊದಲು ನೋಡಬೇಕು. ನನಗೆ ಡ್ರೆಸ್ ಕೂಡಾ ಮಾಡಿಲ್ಲ ಮಮ್ಮಿ…” ತನ್ನ ಮುಗ್ಧ ಭಾಷೆಯಲ್ಲಿ ಹರಳು ಹುರಿದಂತೆ ಮಾತನಾಡುತ್ತಿದ್ದ ಬೆಟ್ಟಿಯನ್ನು ಕಂಡು ಲಿಂಡಾಳ ಎದೆಯಲ್ಲಿ ಅವ್ಯಕ್ತ ಸಂಕಟ ಉರಿ. ಮದರ್ ಕೊಟ್ಟಿದ್ದ ಮುಟ್ಟ ಕಾಗದ ಬಿಡಿಸಿದಳು.

“ತಂದೆ ಎಲ್ಲಿಗೊ ಓಡಿಹೋಗಿದ್ದಾನೆ. ತಾಯಿ ನಾಲ್ಕು ದಿನಗಳ ಹಿಂದೇ ಅದೇ ಕೊರಗಿನಲ್ಲಿ ಸತ್ತು ಹೋದಳು. ಮಗಳಿಗಾಗಿ ಹಣ ಇಟ್ಟಿದ್ದಾಳಂತೆ. ಪಕ್ಕದ ಮನೆಯಾತ ತಂದು ಇಲ್ಲಿಗೆ ಬಿಟ್ಟಿದ್ದಾರೆ. ಅವಳನ್ನು ಉತ್ತಮಳನ್ನಾಗಿ ಮಾಡುವ ಜವಾಬ್ದಾರಿ ನಮ್ಮದು. ಅವಳ ವಿದ್ಯಾಭ್ಯಾಸದ ಖರ್ಚು ಆತ ಕೊಡುತ್ತಿದ್ದಾರೆ. ಅವಳಿಗೆ ಹೊಸ ಜಾಗ, ನಿಧಾನವಾಗಿ ವಿವರಿಸು…”

ಲಿಂಡಾ ಬೆಟ್ಟಿಯತ್ತ ನೋಡಿದಳು. ಮುಗ್ಧ ಮುಖ. ಮನೆಯಲ್ಲಿ ಸಾಕಲಾರದೆ ಈ ಕಬ್ಬಿಣದ ಕೋಟೆಗೆ ಅದೇಕೆ ತಂದು ಬಿಡುತ್ತಾರೋ ಈ ಜನಗಳು! ಇಲ್ಲಿ ನೀತಿನಿಯಮಗಳ ಕಟ್ಟಿಗೆ ಗುಲಾಮರಂತೆ ನಡೆದುಕೊಳ್ಳಬೇಕು. ಇಲ್ಲಿರುವ ಬದಲು ತಾಯಿ ಮಡಿಲು ಅದೆಷ್ಟು ಆಪ್ಯಾಯಮಾನ! ನಿಡಿದಾಗಿ ಉಸಿರುಬಿಟ್ಟಳು ಲಿಂಡಾ. ತಾಯಿ ತಂದೆ ಇಲ್ಲವೆಂದು ತಾನೇ ತಾನಿಲ್ಲಿರುವುದು? ಅದರಂತೆ ಬೆಟ್ಟಿಯೂ, ಹೊಸ ಪುಟ ಪ್ರಾರಂಭ. ಇನ್ನೊಂದು ವರ್ಷದಲ್ಲಿ ತಾನು ಹೋಗುತ್ತೇನೆ. ಈ ಮಗು ಇನ್ನೂ ಎಷ್ಟು ವರ್ಷಗಳನ್ನು ತಳ್ಳಬೇಕೋ?

“ಆಂಟೀ ಮಮ್ಮಿ ಎಲ್ಲಿ?” ಬೆಟ್ಟಿ ಮತ್ತೆ ಕೇಳಿದಳು. ಅವಳ ಧ್ವನಿಯಲ್ಲಿ ಆತುರ ತುಂಬಿತ್ತು.

“ಬಾ ತೋರಿಸ್ತೀನಿ” ಲಿಂಡಾ ಅವಳ ಕೈ ಹಿಡಿದು ಒಂದು ದೊಡ್ಡ ಹಾಲಿಗೆ ಬಂದಳೂ, ಸುತ್ತಲೂ ಎತ್ತರವಾದ ಬಿಳಿ ಗೋಡೆಗಳು. ಅದರ ಮೇಲೆಲ್ಲ ಕೆತ್ತನೆ. ಗೋಡೆಯ ಮೇಲೆ ತೂಗಾಡುತ್ತಿದ್ದ ಹಲಗೆಗಳ ಮೇಲೆ ಬರಹಗಳು. ಮೂಲೆ ಮೂಲೆಗೂ ತೂಗಾಡುತ್ತಿದ್ದ ಕ್ರಾಸುಗಳು. ಮುಂದೆ ಎತ್ತರವಾದ ಸ್ಥಳದಲ್ಲಿ ಅಮೃತಶಿಲೆಯಿಂದ ಕಡೆದ ಸುಂದರ ಮೇರಿಯ ಪುತ್ಥಳಿ. ಬೆಟ್ಟಿಯನ್ನು ಅದರೆದುರು ನಿಲ್ಲಿಸಿ “ಇವರೇ ನಿನ್ನ ಮಮ್ಮಿ…” ಎಂದಳು ಲಿಂಡಾ. ಅವಳ ಗಂಟಲು ಕಟ್ಟಿ ಬಂತು. ಸುತ್ತಲೂ ಉರಿಯುತ್ತಿದ್ದ ಎತ್ತರವಾದ ಮೇಣದ ಬತ್ತಿಗಳ ಬೆಳಕಿನಲ್ಲಿ ಮೇರಿಯತ್ತ ನೋಡಿದಳು ಬೆಟ್ಟಿ, ಅವಳ ಮುಖ ಗಂಟಿಕ್ಕಿತು.

“ಇವಳು ಮೇರಿ. ಮಮ್ಮಿ ಅಲ್ಲ…” ತಕ್ಷಣ ಅವಳ ಬಾಯಿಂದ ಹೊರಬಿತ್ತು. ಮಮ್ಮಿ ಆರಾಧಿಸುತ್ತಿದ್ದ ಮೇರಿಯ ಚಿತ್ರ ಅವಳಿಗೆ ಚಿರಪರಿಚಿತ.

“ಬೆಟ್ಟಿ.. ತಾಯಿ ತಂದೆ ಇಲ್ಲದ ನಮಗೆ ಇವರೇ ತಾಯಿ ತಂದೆ ಎಲ್ಲಾ. ನಮಸ್ಕರಿಸು..” ಲಿಂಡಾ ಬೆಟ್ಟಿಯತ್ತ ನೋಡದೆ ಹೇಳಿದಳು. ಬೆಟ್ಟಿಗೆ ಪೂರ್ಣವಾಗಿ ಅರ್ಥವಾಗಲಿಲ್ಲ. ಅಂತೂ ಮಮ್ಮಿ ಇಲ್ಲಿಯೂ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಲಿಂಡಾಳ ಕೈ ಕೊಸರಿಕೊಂಡಳು.

“ಬಿಡು… ನಾನು ಮಮ್ಮಿ ಹತ್ತಿರ ಹೋಗೋಕು…” ಲಿಂಡಾಳ ಕೈ ನಿಂದ ಜಾರಿ, ಬೆಟ್ಟಿ ಬಾಗಿಲ ಕಡೆ ಓಡಿದಳು. ಗಾಬರಿಯಿಂದ ಲಿಂಡಾ ತಿರುಗಿ ನೋಡಿದಾಗ ಬಾಗಿಲ ಬಳಿ ಉದ್ದಕ್ಕೂ ಮದರ್ ನಿಂತಿದ್ದು ಕಂಡಿತು. ಓಡಿ ಬಂದ ಬೆಟ್ಟಿಯನ್ನು ಅವರು ಎರಡೂ ಕೈಗಳಿಂದ ಮೃದುವಾಗಿ ಹಿಡಿದರು. ಬೆಟ್ಟಿ ಜೋರಾಗಿ ಅಳುತ್ತಿದ್ದಳು. ಲಿಂಡಾಳ ಕಣ್ಣುಗಳಲ್ಲಿ ನೀರು ಚಿಮ್ಮಿತು. ಕಣ್ಣು ಸನ್ನೆಯಿಂದಲೇ ಅವಳಿಗೆ ಹೋಗುವಂತೆ ಸೂಚನೆ ಇತ್ತ ಮದರ್ ಅಳುತ್ತಿದ್ದ ಬೆಟ್ಟಿಯ ತಲೆಯ ಮೇಲೆ ಮೃದುವಾಗಿ ಕೈಯ್ಯಾಡಿಸತೊಡಗಿದರು.

ದಿನ ಕಳೆದಂತೆ ಬೆಟ್ಟಿಗೆ ಕಾನ್ವೆಂಟಿನ ಪರಿಚಯವಾಗತೊಡಗಿತು. ಯಾವುದೋ ಕಲ್ಪನೆಯ ಕೋಟೆಯಂತಹ ಕಟ್ಟಡ, ಕಬ್ಬಿಣದ ಗೇಟು, ವಿಶಾಲವಾದ ಆಟದ ಬಯಲು, ಎತ್ತರವಾದ ದೊಡ್ಡ ಕಾಂಪೌಂಡು, ಪಕ್ಕದಲ್ಲಿ ಚರ್ಚು, ಬೇರೆಬೇರೆ ವಯಸ್ಸಿನ, ಸಮವಸ್ತ್ರ ಧರಿಸಿದ ಹುಡುಗಿಯರು. ಊಟಕ್ಕೆ, ಆಟಕ್ಕೆ, ಪಾಠಕ್ಕೆ ಮೊದಲು ಪ್ರಾರ್ಥನೆ. ಮೇರಿಯ ಮುಂದೆ ಕುಳಿತು ರಾತ್ರಿ ಬೆನೆಡಿಕ್ಷನ್, ಆ ಮೇಲೆ ಕೊಡುವ ರುಚಿಯಿಲ್ಲದ ಪುಡ್ಡಿಂಗ್ಸ್ ಒಣಗಿದ ಬ್ರೆಡ್, ಜಾಮ್, ಆಟದ ಸಮಯದಲ್ಲೂ ‘ನನ್’ಗಳ ಕಾವಲು, ಅತ್ತಿತ್ತ ತಿರುಗುವ ಹಾಗೂ ಇಲ್ಲ. ಇಡೀ ದಿನ ಪ್ರಾರ್ಥನೆ, ಪಾಠ, ಲೆಕ್ಚರ್, ಓದು, ಪ್ರಾರ್ಥನೆ ಮನೆಯ ವಾತಾವರಣ ಇಲ್ಲವೇ ಇಲ್ಲ.

ಮೊದಮೊದಲು ಬೆಟ್ಟಿ ದಿನಾ ಕಣ್ಣೀರು ಹರಿಸುತ್ತಿದ್ದಳು. ಊಟ ತಿಂಡಿ ಮುಟ್ಟುತ್ತಿರಲಿಲ್ಲ. ರಾತ್ರಿ ಕಣ್ಣು ಮುಚ್ಚಿದಾಗ ತಾಯಿ ಸೌಮ್ಯ ಮುಖ ತೇಲಿ ಬರುತ್ತಿತ್ತು. ತಾಯಿ ತೋರುತ್ತಿದ್ದ ಅಕ್ಕರೆ, ಆಕೆಯ ಮೃದುಮಧುರ ನುಡಿಗಳು, ಆ ಮನೆ, ತಿಂಡಿ, ತಿನಿಸು, ಊಟ, ಹಾಸಿಗೆ, ಹೃದಯದ ನೋವು ಮೇರೆ ಮೀರಿದಾಗ ದಿಂಬನ್ನು ಮುಖಕ್ಕೆ ಒತ್ತಿ ಹಿಡಿದು ಬಿಕ್ಕಳಿಕೆಯನ್ನು ತಡೆಯುತ್ತಿದ್ದಳು.

ದಿನಗಳು, ತಿಂಗಳುಗಳು, ವರ್ಷಗಳು ಯಾಂತ್ರಿಕವಾಗಿ ಉರುಳುತ್ತಿದ್ದವು. ಬೆಟ್ಟಿ ಬೆಳೆದು ಸುಂದರ ಯುವತಿಯಾದಳು.

ಕಾನ್ವೆಂಟ್ ಬಿಟ್ಟು ಹೋದ ಮೇಲೆ ಅವರ ಜೀವನಕ್ಕೊಂದು ದಾರಿಯಾಗಲೆಂದು ಅವರವರ ಅಭಿರುಚಿಗೆ ತಕ್ಕಂತೆ ಹೊಲಿಗೆ, ಪೈಪಿಂಗ್, ಟೀಚಿಂಗ್ ಮುಂತಾದ ತರಬೇತಿ ನೀಡಲಾಗುತ್ತಿತ್ತು.

ಕಾನ್ವೆಂಟಿನಲ್ಲಿ ಅಲಂಕಾರ ಸಾಮಗ್ರಿಗಳನ್ನು ನಿಷೇಧಿಸಲಾಗಿತ್ತು. ಹುಡುಗರನ್ನು ಕುರಿತು ಚರ್ಚಿಸಕೂಡದು. ಆತ್ಮಕ್ಕೆ ಮೊದಲ ಪೂಜೆ, ಗುರುವೇ ತಾಯಿ, ತಂದೆ, ದೇವರು. ಮಿಕ್ಕ ಹುಡುಗಿಯರಂತೆ ಬೆಟ್ಟಿ ಕ್ರಾಸ್ ಬಳಿ ಕುಳಿತು ಪ್ರಾರ್ಥಿಸುವಂತೆ ನಟಿಸುತ್ತಿರಲಿಲ್ಲ, ರಾತ್ರಿಯಿಡೀ ಪಿಸು ಪಿಸು ಮಾತನಾಡುವ ಗೆಳತಿಯರ ನುಡಿಗಳನ್ನು ಕೇಳುತ್ತಿರಲಿಲ್ಲ. ಮದರ್‌ಗೆ ಕಣ್ಣಿಗೆ ಮಣ್ಣೆರಚುವ ಕೆಲಸದಲ್ಲಿ ತೊಡಗುತ್ತಿರಲಿಲ್ಲ. ಮೇರಿಯ ಮುಂದೆ ಮೊಣಕಾಲೂರಿ ಚಲಿಸದೆ ಕುಳಿತುಬಿಡುತ್ತಿದ್ದಳು ಬೆಟ್ಟಿ.

ದಿನಕಳೆದಂತೆ ತಾಯಿಯ ನೆನಪು, ನೋವು ಅಸ್ಪಷ್ಟವಾಗುತ್ತಾ ಬಂತು. ಈಗ ಇದೇ ಸತ್ಯ, ವಾಸ್ತವ, ಈ ಯಾಂತ್ರಿಕ ಜೀವನವೇ ಶಾಶ್ವತ. ಅತ್ತು ಅತ್ತು ಅವಳ ಹೃದಯ ಈಗ ಒಣಗಿ ಹೋಗಿತ್ತು. ನೀರಿಲ್ಲದ ಬರಡು ಭೂಮಿಯಂತೆ, ಪೀಟರ್ ಅಂಕಲ್‍ನಿಂದ ಹಣ ಮಾತ್ರ ಬರುತ್ತಿತ್ತು. ಆದರೆ ಒಂದು ದಿನವೂ ಆತ ಕಾಗದ ಬರೆಯಲಿಲ್ಲ. ನೋಡಲೂ ಬರಲಿಲ್ಲ. ದಿನಗಳು, ವರ್ಷಗಳು ಉರುಳಿದಂತೆ ಆತ ಬರುವ ಆಸೆಯೂ, ತಾನು ಇಲ್ಲಿಂದ ಹೋಗುವ ಆಸೆಯೂ ಕಮರಿಹೋಯಿತು. ಒಮ್ಮೊಮ್ಮೆ ಮದರ್ ಕರುಣೆ, ವಿಶ್ವಾಸ ಕೂಡಾ ಬೇಡವಾಗುತ್ತಿತ್ತು. ಏನೋ ಒಂಟಿತನ, ಅಸಹಾಯಕತೆ. “ಲಿಂಡಾ ಹೋದರೂ ಆ ಕೊರತೆ ತುಂಬಲು ಬೆಟ್ಟಿ ಇದ್ದಾಳೆ” ಎಂದು ಮದರ್ ಆಗಾಗ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು.

ಹದಿನಾರರ ಹರೆಯದ ಬೆಟ್ಟಿ ಕಾಲೇಜಿಗೆ ಕಾಲಿಟ್ಟಾಗ ಅಲ್ಲಿ ಅವಳಿಗೆ ಆಪ್ತಳಾದಳು ಜೆನ್ನಿಥಾಮಸ್, ಬೆಟ್ಟಗಿಂತ ಸ್ವಲ್ಪ ದೊಡ್ಡವಳು. ಬೆಟ್ಟಿಯ ಮುಗ್ಧತೆ ಕಂಡು ಅವಳಿಗೆ ಕರುಣೆ ಉಕ್ಕುತ್ತಿತ್ತು. ಮನೆಯಿಂದ ಬರುತ್ತಿದ್ದ ಜೆನ್ನಿ ಅವಳಿಗೆ ನಾನಾ ವಿಧದ ಪ್ರಣಯ ಕಥೆಗಳನ್ನು ಬಣ್ಣ ಕಟ್ಟಿ ಹೇಳುತ್ತಿದ್ದರೆ ಬೆಟ್ಟ ಕಣ್ಣು ಅರಳಿಸಿ ಕೇಳುತ್ತಿದ್ದಳು. ಅವಳು ತಂದುಕೊಡುತ್ತಿದ್ದ ಪುಸ್ತಕಗಳನ್ನು ಕದ್ದು ಓದುವಾಗ ಬೆಟ್ಟಿ ಪುಲಕಿತಳಾಗುತ್ತಿದ್ದಳು.

“ಬೆಟ್ಟಿ, ನಿನ್ನಷ್ಟು ಚೆಲುವು ನನ್ನಲ್ಲಿದ್ದಿದ್ದರೆ, ಬಿಡು, ಹೇಳಿ ಏನೂ ಪ್ರಯೋಜನವಿಲ್ಲ” ಎನ್ನುತ್ತಿದ್ದಳು ಜೆನ್ನಿ.

“ನೀನು ಎಷ್ಟು ಚೆಲುವೆ ಗೊತ್ತಾ..?” ಎಂದು ಜೆನ್ನಿ ಕೇಳಿದಾಗಲೆಲ್ಲ,

“ಊಹೂಂ” ಎನ್ನುತ್ತಿದ್ದಳು ಮುಗ್ಧಳಾಗಿ.

“ಕನ್ನಡಿಯಲ್ಲಿ ನೋಡಿಕೊಂಡಿಲ್ವಾ?”

“ಇಲ್ಲ.”

“ಛೇ, ಏನೂ ಪ್ರಯೋಜನವಿಲ್ಲ. ನಾಳೆ ನಿನಗೆ ಒಂದು ಪುಟ್ಟ ಕನ್ನಡಿ ತಂದುಕೊಡ್ತೀನಿ. ನಮ್ಮ ಮನೆಗೆ ಬಾ, ಅಲ್ಲಿ ಟೆಲಿವಿಷನ್, ಮಮ್ಮಿ ಕಸಿನ್ಸ್ ಎಲ್ಲಾ ತೋರಿಸ್ತೀನಿ” ಆಸೆಯ ದೀಪಗಳನ್ನು ಬೆಟ್ಟಿಯ ಹೃದಯದಲ್ಲಿ ಹೊತ್ತಿಸುತ್ತಿದ್ದಳು. ಸ್ನಾನಕ್ಕೆ ಹೋದಾಗ, ರಾತ್ರಿ ಮಲಗುವಾಗ ಕದ್ದು ಕನ್ನಡಿಯಲ್ಲಿ ನೋಡಿಕೊಂಡು ಆನಂದಿಸುತ್ತಿದ್ದಳು ಬೆಟ್ಟಿ, ಜೆನ್ನಿಯ ಸ್ನೇಹ ಸಹವಾಸ ಅವಳಿಗೆ ಬಾಳಿನಲ್ಲಿ ಒಂದು ಹೊಸ ಉತ್ಸಾಹ ಮೂಡಿಸಿತ್ತು.

ಒಂದು ದಿನ ಜೆನ್ನಿ ತಾನೇ ಅನುಮತಿ ಕೊಡಿಸುವುದಾಗಿ ಹೇಳಿ ಬೆಟ್ಟಿಯೊಂದಿಗೆ ಮದರ್‌ರವರನ್ನು ಕಾಣಲು ಹೋದಳು.

ಮದರ್ ನೀವು ಒಪ್ಪಿಗೆ ಕೊಟ್ಟರೆ ಒಂದು ದಿನ ಬೆಟ್ಟಿಯನ್ನು ನಮ್ಮ ಮನೆಗೆ ಡಿನ್ನರ್‌ಗೆ ಕರೆದೊಯ್ಯುತ್ತೇನೆ. ಮಮ್ಮಿ, ಡ್ಯಾಡೀ ಇಬ್ಬರೂ ಒತ್ತಾಯಿಸುತ್ತಿದ್ದಾರೆ. ತಡೆಬಡೆಯಿಲ್ಲದೆ ಹೇಳಿದಳು. ಬೆಟ್ಟಿ ಅವಳ ಧೈರ್‍ಯ ಕಂಡು ಬೆರಳು ಕಚ್ಚಿಕೊಂಡಳು. ಕಾನ್ವೆಂಟಿನಲ್ಲಿ ತನಗೂ ಮನೆಯಲ್ಲಿ ಬೆಳೆದ ಅವಳಿಗೂ ಅದೆಷ್ಟು ಅಂತರ! ಮದರ್ ಬೆಟ್ಟಿಯತ್ತ ನೋಡಿದರು. ಅವಳ ಮುಗ್ಧ ಮುಖ, ಅರಳಿದ ಕಣ್ಣುಗಳಲ್ಲಿ ಕುಣಿಯುತ್ತಿದ್ದ ಆಸೆಯನ್ನು ಕಂಡು ಮನಸ್ಸು ಕರಗಿತು. ಮಿಕ್ಕವರನ್ನು ವಿಸಿಟರ್ ಒಂದು ತಿಂಗಳಿಗೊಮ್ಮೆ ಯಾದರೂ ಕರೆದೊಯ್ಯುತ್ತಾರೆ. ಆದರೆ ಬೆಟ್ಟಿಯನ್ನು?

“ಕತ್ತಲಾಗುವುದರೊಳಗೆ ತಂದುಬಿಡು…” ಒಪ್ಪಿಗೆಯಿತ್ತರು. ಧನ್ಯವಾದಗಳನ್ನರ್ಪಿಸಿ, ಬೆಟ್ಟಿಯನ್ನು ಎಳೆದುಕೊಂಡು ಬಂದು ಕಾರಿನಲ್ಲಿ ಕೂಡಿಸಿದಳು.

ಸ್ವಲ್ಪ ಹೊತ್ತಿಗೆಲ್ಲ ಕಾರು ವೈಭವೋಪೇತವಾದ ಬಂಗಲೆಯೊಂದರ ಮುಂದೆ ಬಂದು ನಿಂತಿತು.

ಜೆನ್ನಿಯ ತಾಯಿ ತಂದೆ, ಅಣ್ಣಂದಿರು ಅವರ ಗೆಳೆಯರು, ಅವರ ನಡೆ ನುಡಿ ಎಲ್ಲವೂ ಅವಳನ್ನು ಬಹುವಾಗಿ ಆಕರ್ಷಿಸಿತು. ಮೊದಲ ಬಾರಿಗೆ ಅವಳು ಅಲ್ಲಿ ಸ್ನೇಹ ಪ್ರೀತಿಯ ಪ್ರಪಂಚವನ್ನು ಕಂಡಿದ್ದಳು. ತನಗಿರುವ ಕೊರತೆಗಳೆಲ್ಲಾ ಈಗ ಭೂತಾಕಾರವಾಗಿ ಬಂದು ಮುಂದೆ ನಿಲ್ಲುತ್ತಿದ್ದವು. ಇಷ್ಟು ದಿನಗಳು ಸ್ನೇಹ ಪ್ರೀತಿಯಿಲ್ಲದೆ ತಾನು ಬದುಕಿದಾದರೂ ಹೇಗೆ? ಜೆನ್ನಿಯ ಮನೆಯ ವಾತಾವರಣ, ಸ್ವಾತಂತ್ರ್ಯ, ಸ್ವಚ್ಛಂದ ಹೊಸ ನೀರಿನಲ್ಲಿ ಮಿಂದು ಪುಳಕಿತವಾದಂತೆ ಎಂತಹುದೋ ಸಂತೃಪ್ತಿ ನೀಡಿತ್ತು. ಕತ್ತಲಾಗುವ ಮುಂಚೆ ತಿರುಗಿ ಕಾನ್ವೆಂಟ್ ಸೇರಿದಾಗ ಮತ್ತೆ ಬಾಣಲೆಗೆ ಹಾಕಿದಂತೆ ಗಟ್ಟಿಯಾದ ಹಾಸಿಗೆಯ ಮೇಲೆ ಮಲಗಿ ದಿಂಬಿನಲ್ಲಿ ಮುಖ ಹುದುಗಿಸಿ ಕಣ್ಣೀರು ಹರಿಸಿದಳು ಬೆಟ್ಟಿ.

ಆಗಾಗ್ಗೆ ಬೆಟ್ಟಿ ಜೆನ್ನಿಯ ಮನೆಗೆ ಹೋಗಿ ಬರುವುದು ಸಾಮಾನ್ಯವಾಯಿತು. ‘ಮದರ್ ಅಂಡ್ ಬೇಬಿ’ ತಲೆ ಬರಹ ಹೊತ್ತು ದೊಡ್ಡ ಪುಸ್ತಕವೊಂದು ಅವಳ ಗಮನ ಸೆಳೆಯಿತು. ಪಟಗಳ ಮೇಲೆ ಕಣೋಡಿಸಿದಳು.

ತಾಯಿಯ ಗರ್ಭದಲ್ಲಿ ಹಂತ ಹಂತವಾಗಿ ಬೆಳೆಯುವ ಮಗುವಿನ ಚಿತ್ರಗಳು, ಲೇಖನಗಳು ಬಣ್ಣ ಬಣ್ಣದ ಮುದ್ದು ಮುದ್ದಾದ ಮಕ್ಕಳ ಭಾವಚಿತ್ರಗಳು ನೋಡುತ್ತಾ ಮೈಮರೆತಳು ಬೆಟ್ಟಿ.

“ಮಗು…. ಅದು ಹೇಗೆ ಹೊಟ್ಟೆಯೊಳಗೆ ಹೋಗುತ್ತೆ?” ಸಂದೇಹವನ್ನು ಗೆಳತಿಯ ಮುಂದಿಟ್ಟಳು ಬೆಟ್ಟಿ, ಆ ಬಗ್ಗೆ ಇಡೀ ಪುಸ್ತಕದಲ್ಲಿ ಒಂದೂ ಚಿತ್ರವನ್ನೂ ಕೊಟ್ಟಿರಲಿಲ್ಲ. ಸಮಸ್ಯೆ ತುಂಬಿದ ಬೆಟ್ಟಿಯ ಮುಖ ನೋಡಿ ನಗು ಬಂದಿತು.

“ಓಹೋ ಹೊ..” ಮೈ ಗಾಡ್!…” ಎನ್ನುತ್ತಾ ಜೋರಾಗಿ ನಗತೊಡಗಿದಳು. ಜೆನ್ನಿಯ ಅಟ್ಟಹಾಸದ ನಗು ಕೇಳಿ ಬೆಟ್ಟಿ ಪೆಚ್ಚಾದಳು.

“ಏಯ್ ಜೆನ್ನೀ…” ಅವಳನ್ನು ಹಿಡಿದು ನಿಲ್ಲಿಸಿದಳು. “ಯಾಕೆ ನಗು?”

“ಎಂಥಾ ಪ್ರಶ್ನೆಯೇ ನಿನ್ನದು?” ಜೆನ್ನಿಯ ನಗು ಇನ್ನೂ ಹತೋಟಿಗೆ ಬಂದಿರಲಿಲ್ಲ. “ಮತ್ತೆ ಅದ್ಹೇಗೆ ಸಾಧ್ಯ?” ತನಗೆ ತಾನೇ ಎಂಬಂತೆ ಕೇಳಿಕೊಂಡಳು ಬೆಟ್ಟಿ.

“ಹತ್ತಿರ ಬಾ ಹೇಳ್ತೀನಿ…” ಎಂದು ಅವಳ ಕಿವಿಯ ಬಳಿ ನಗುತ್ತಾ ಏನನ್ನೋ ಪಿಸುಗುಟ್ಟಿದಳು. ಬೆಟ್ಟಿಯ ಮುಖದಲ್ಲಿ ಅಸಹ್ಯ, ಜೊತೆಗೆ ಆಶ್ಚರ್ಯ.

“ಥೂ…” ಎಂದು ಮುಖ ಮುಚ್ಚಿಕೊಂಡಳು, ಬೆಟ್ಟಿ. ಪ್ರಾಣಿ ಶಾಸ್ತ್ರದಲ್ಲಿ ಓದಿದ್ದೂ ಅದೇ ತರಹ ಮಾನವರಲ್ಲಿಯೂ… ಹೇಸಿಗೆಯೆನಿಸಿತು ಅವಳಿಗೆ.

‘ಬೆಟ್ಟೇ ನಾಡಿದ್ದು ಮನಃ ನೀನು ಮನೆಗೆ ಬರಬೇಕು’ ಜೆನ್ನಿ ಏನನ್ನೋ ಯೋಚಿಸುತ್ತಾ ಹೇಳಿದಳು.

“ಯಾಕೆ? ಆ ದಿನ ರಜವಿಲ್ಲ…”

“ನನ್ನ ಕಸಿನ್‌ನ ಹುಟ್ಟಿದ ಹಬ್ಬ, ನೀನು ಬರಲೇಬೇಕು. ಅವನು ನಾಳೆ ಊರಿಂದ ಬರುತ್ತಾನೆ. ನಾನು ಮದರ್‌ಗೆ ಹೇಳ್ತೀನಿ.”

“ಮದರ್ ಒಪ್ಪಿದರೆ ನನ್ನದೇನಿಲ್ಲ…” ಎಂದಳು ಬೆಟ್ಟಿ. ಜೆನ್ನಿ ಅವಳನ್ನು ಕಾನ್ವೆಂಟಿಗೆ ಬಿಟ್ಟು ಬಂದಳು. ನಾಡಿದ್ದು ಜೆನ್ನಿಯ ಮನೆಯಲ್ಲಿ ವೈಭವದ ಕನಸು ಕಾಣುತ್ತಾ ಬೆಟ್ಟಿ ಬೆಚ್ಚಿಗೆ ಹೊದ್ದು ನಿದ್ದೆ ಮಾಡಿದಳು.

ಜೆನ್ನಿಯ ಕಸಿನ್ ರಿಚರ್ಡ್ ಆಗಲೆ ಬಂದಿದ್ದ. ಅವನದೇ ಹುಟ್ಟುಹಬ್ಬ. ವೈಭವದಿಂದ ಏರ್ಪಾಟುಗಳು. ಬಣ್ಣ ಬಣ್ಣದ ದೀಪಗಳಿಂದ, ಕಾಗದದ ಹೂಗಳಿಂದ ಅಲಂಕೃತವಾದ ಗೃಹ, ವಿವಿಧ ಬಣ್ಣಗಳ ಉಡುಪು ಧರಿಸಿದ ಜನರ ಪರವಾಹವೇ ಬರತೊಡಗಿತ್ತು. ಬೆಟ್ಟಿ ಅವಾಕ್ಕಾಗಿ ಎಲ್ಲ ವಿಜೃಂಭಣೆಯನ್ನೂ ನೋಡುತ್ತಿದ್ದಳು. ಯಾವುದೋ ಕಿನ್ನರ ಲೋಕಕ್ಕೆ ಬಂದಂತೆ ಅಪ್ಸರೆಯರ ಮಧ್ಯ ನಿಂತಂತೆ.

“ಏಯ್… ಬೆಟ್ಟಿ…” ಜೆನ್ನಿ ಬಂದು ಎಚ್ಚರಿಸಿದಾಗಲೇ ಬೆಟ್ಟಿಗೆ ಅರಿವು ಬಂದಿದ್ದು. ಪಕ್ಕದಲ್ಲಿ ಸೂಟ್ ಧರಿಸಿ ಎತ್ತರವಾಗಿ ನಿಂತಿದ್ದ ಯುವಕ… ಬೆಟ್ಟಿ ಗಲಿಬಿಲಿಗೊಂಡಳು.

“ಇವನು ರಿಚರ್ಡ್, ಇವಳೂ ಬೆಟ್ಟಿ, ಮೈ ಬೆಸ್ಟ್ ಫ್ರೆಂಡ್…” ಎಂದಳು ಜೆನ್ನಿ. ಬೆಟ್ಟಿಯತ್ತ ನೋಡುತ್ತಿದ್ದ ರಿಚರ್ಡ್ ಮೋಹಕವಾಗಿ ನಕ್ಕು ಕೈ ನೀಡಿದ. ಯಾಂತ್ರಿಕವಾಗಿ ಕೈ ನೀಡಿದಳು ಬೆಟ್ಟಿ, ಅವಳ ಕೈಯನ್ನು ಮೃದುವಾಗಿ ಹೂ ಹಿಡಿದಂತೆ ಹಿಡಿದು ಕುಲುಕಿದ, ಅವಶ್ಯಕತೆಗಿಂತಲೂ ಸ್ವಲ್ಪ ಹೆಚ್ಚು ಹೊತ್ತೇ ಹಿಡಿದಿದ್ದ ಕಣ್ಣುಗಳು ಬೆಟ್ಟಿಯನ್ನು ಆಪಾದ ಮಸ್ತಕ ದಿಟ್ಟಿಸಿದವು. ಜೆನ್ನಿಯ ಬಿಳಿ ಫ್ರಾಕೊಂದನ್ನು ತೊಟ್ಟು ಅಲೆ ಅಲೆಯಾದ ಬಾಬ್‌ಗೆ ಬಿಳಿ ಗುಲಾಬಿಯನ್ನು ಸಿಕ್ಕಿಸಿದಳು. ಮುಖದಲ್ಲಿ ಸಂಭ್ರಮ.

ಪುಟ್ಟ ದೇವತೆಯಂತೆ ಕಾಣುತ್ತಿದ್ದ ಬೆಟ್ಟಿಯನ್ನು ಆಸಕ್ತಿಯಿಂದ ನೋಡಿದ ರಿಚರ್ಡ್.

ಅವನ ನೇರ ನೋಟ ಹಸ್ತ ಸ್ಪರ್ಶದಿಂದ ಅವಳ ದೇಹ ನಡುಗಿತು. ದೇಹದಲ್ಲೆಲ್ಲ ರಕ್ತ ಸಂಚಾರ ವೇಗಗೊಂಡಂತೆ ಭಾಸವಾಯಿತು. ಅವಳನ್ನು ಬಿಟ್ಟು ಒಳಹೊಕ್ಕು ರಿಚರ್ಡ್ ಮತ್ತೆ ಬಂದಾಗ ಅವನ ಕೈಯಲ್ಲಿ ವಿಸ್ಕಿ ತುಂಬಿದ ಗ್ಲಾಸುಗಳಿದ್ದವು.

ರಿಚರ್ಡ್ ಬೆಟ್ಟಿಯ ಮುಂದೆ ಗ್ಲಾಸು ಹಿಡಿದ.

“ಬೇಡಾ… ಬೇಡಾ ಪ್ಲೀಸ್…” ಬೆಟ್ಟಿ ಹಿಂದೆ ಸರಿದಳು.

“ವಿಚಿತ್ರ ಹುಡುಗಿ…” ಉದ್ಗರಿಸಿದ.

“ಸ್ವಲ್ಪ ಟೇಸ್ಟ್ ಮಾಡಿ…” ಮತ್ತೆ ಒತ್ತಾಯ ಹುಚ್ಚು ಧೈರ್ಯದಿಂದ ಗಟಗಟನೆ ಗಂಟಲಿಗೆ ಸುರಿದು ಕೊಂಡಳು. ಘಾಟು ವಾಸನೆಯ ದ್ರವ ಗಂಟಲಿನೊಳಗೆ ಇಳಿಯುತ್ತಿದ್ದಂತೆಯೇ ಎದೆ ಹೊಟ್ಟೆಯೊಳಗೆ ಭಗಭಗ ಉರಿದಂತಾಯಿತು. ಜೋರಾಗಿ ಕೆಮ್ಮತೊಡಗಿದಳು. ರೆಕಾರ್ಡ್ ಸಂಗೀತ ಕುಣಿತವೆಲ್ಲಾ ಮಂಜು ಮಂಜಾಯಿತು.

“ಜೆನ್ನೀ…” ನಡಗುತ್ತಿದ್ದ ಸ್ವರದಲ್ಲಿ ಕರೆದಳು ಬೆಟ್ಟಿ, ದೂರದಿಂದ ಗಮನಿಸುತ್ತಿದ್ದ ಜೆನ್ನಿ ತಕ್ಷಣ ಧಾವಿಸಿ ಬಂದಳು. ಕುಡಿಯುತ್ತಾ ನಿಂತಿದ್ದ ರಿಚರ್ಡ್‌ನತ್ತ ತಿರುಗಿ,

“ಎಷ್ಟು ಕೊಟ್ಟೆ? ನಿನ್ನದು ಅತಿಯಾಯಿತು. ಅವಳಿಗೆ ಅವೆಲ್ಲ ಅಭ್ಯಾಸವಿಲ್ಲ…” ಗದರಿಸುತ್ತಾ ಬೆಟ್ಟಿಯ ಬಳಿ ಬಂದಳು. ಬೆಟ್ಟಿ ಕುರ್ಚಿಯೊಂದರ ಮೇಲೆ ಕುಸಿದಳು. ಜಾಸ್ತಿ ಕುಡಿದಿರದಿದ್ದರೂ ಹೆದರಿಕೆ ಅವಳಿಗೆ ಅದು ತೀರಾ ಅನ್ನಿಸಿತ್ತು.

“ಜೆನ್ನಿ ಹೆದರಿಕೆಯಾಗ್ತಿದೆ. ರಿಚರ್ಡ್ ನಂಗೆ ಪಾಯಿಸನ್ ಕೊಟ್ಟಿಲ್ಲ ತಾನೆ? ತುಂಬಾ ಉರಿ” – ಎದೆಯನ್ನು ಉಜ್ಜಿಕೊಳ್ಳುತ್ತಾ ಕೇಳಿದಳು ಬೆಟ್ಟಿ, ಮುಖ ಕೆಂಪೇರಿ ಕಣ್ಣುಗಳಲ್ಲಿ ನೀರು ತುಂಬಿತ್ತು.

“ಡೋಂಟ್ ಬಿ ಸಿಲ್ಲಿ. ಈಗ ಸ್ವಲ್ಪ ಹೊತ್ತು ಮಲಗಿಬಿಡು, ಸರಿಯಾಗುತ್ತೆ…”

“ಊಹುಂ, ಕಾನ್ವೆಂಟಿಗೆ ಹೊತ್ತಾಗುತ್ತೆ. ಮದರ್ ಬೈಯ್ತಾರೆ..” ಮುಖವನ್ನು ಹುದುಗಿಸಿಕೊಂಡೇ ಹೇಳಿದಳು ಬೆಟ್ಟಿ.

“ಈಗಿನ್ನೂ ಎರಡು ಗಂಟೆ ಬೆಳಿಗ್ಗೆ ಆರಕ್ಕೆ ನಿನ್ನನ್ನು ಕಾನ್ವೆಂಟ್ ಬಳಿ ಬಿಡುತ್ತೇನೆ. ಮದರ್‌ಗೆ ಹೇಳಿ ಬಂದಿದ್ದೇನಲ್ಲ. ಈಗ ಸ್ವಲ್ಪ ಮಲಗಿ ಬಿಡು… ಬಾ ಫ್ಲೀಸ್ ಹಠ ಮಾಡ್ಬೇಡಾ ಎಲ್ಲರೂ ನೋಡುತ್ತಿದ್ದಾರೆ.”

ಜೆನ್ನಿಯ ಆಸರೆಯಲ್ಲಿ ಮಹಡಿ ಏರಿ ರೂಮು ಸೇರಿದ ಬೆಟ್ಟಿ, ಹಾಸಿಗೆಯ ಮೇಲೆ ಮಲಗಿದಳು. ಅವಳ ಮೈಮೇಲೆ ಹೊದಿಕೆ ಹೊದಿಸಿದ ಜೆನ್ನಿ,

“ಕಣ್ಣು ಮುಚ್ಚಿ ಮಲಗು. ಏನೂ ಆಗೋಲ್ಲ. ಬರೀ ಸ್ವಲ್ಪವಷ್ಟೇ ಕೊಟ್ಟಿರುವುದು…” ಎಂದು ಹೇಳಿದಳು ಮೃದುವಾಗಿ ಸಂತೈಸುವಂತೆ.

“ಊಹುಂ ದೊಡ್ಡ ಗ್ಲಾಸಿನ ತುಂಬಾ… ಇತ್ತು…” ಬೆಟ್ಟಿ ಮುಸುಕಿನೊಳಗಿಂದಲೇ ಗೊಣಗಿದಳು. ಮತ್ತೇರಿದವಳಂತೆ ಮಲಗಿಕೊಂಡಳು.

“ಚಿಕ್ಕ ಹುಡುಗಿ ಏನೂ ಗೊತ್ತಿಲ್ಲ. ಅಷ್ಟು ಕುಡಿಸಬಾರದಿತ್ತು ಅವನು ಫೂಲ್..” ಎಂದುಕೊಳ್ಳುತ್ತಾ ಜೆನ್ನಿ ಕೆಳಗಿಳಿದು ಬಂದಳು. ಹಾಡು, ಸಂಗೀತ, ನೃತ್ಯ ಮುಂದುವರಿದಿತು. ಕುಣಿಯುತ್ತಿದ್ದ ತನ್ನ ಜೊತೆಗಾತಿಯನ್ನು ಸೇರಿಕೊಂಡಳು ಜೆನ್ನಿ.

ಕುಡಿದು ಮತ್ತನಾಗಿದ್ದ ರಿಚರ್ಡ್ ಅದು ಯಾವಾಗಲೋ ಮಹಡಿ ಏರಿ ಹೋಗಿದ್ದು ಯಾರಿಗೂ ತಿಳಿಯಲಿಲ್ಲ.

ಅತಿಥಿಗಳೆಲ್ಲಾ ನಿರ್ಗಮಿಸಿದ ಬಳಿಕ ಜೆನ್ನಿ ಬೆಟ್ಟಿಯನ್ನು ನೋಡಲು ತನ್ನ ರೂಮಿಗೆ ಬಂದಳು. ಆದರೆ ತಳ್ಳಿದಾಗ ಬಾಗಿಲು ತೆರೆದುಕೊಳ್ಳಲಿಲ್ಲ. ಒಳಗಡೆಯಿಂದ ಬೋಲ್ಟ್ ಮಾಡಿದಂತಿತ್ತು. ಬೆಟ್ಟಿಗೆ ಎಚ್ಚರವಾಗಿರಬೇಕೆಂದು ತರ್ಕಿಸಿದ ಜೆನ್ನಿ, ನಾಲ್ಕಾರು ಬಾರಿ ಜೋರಾಗಿ ಕದ ಬಡಿದಳು.

“ಬೆಟ್ಟೀ… ಬೆಟ್ಟೀ….” ದನಿ‌ಏರಿಸಿ ಕೂಗಿದಳು ಜೆನ್ನಿ. ಅವಳಿಗೂ ಆಯಾಸವಾಗಿ ನಿದ್ದೆ ಬರುತ್ತಿತ್ತು. ಉತ್ತರ ಬರಲಿಲ್ಲ. ಮತ್ತೆ ಜೋರಾಗಿ ಬಡಿದಳು. ಬೋಲ್ಟ್ ತೆಗೆದ ಶಬ್ದ. ಹಿಂದೆಯೇ ಬಾಗಿಲು ತೆಗೆದುಕೊಂಡಿತು. ತೆರೆದ ಬಾಗಿಲಿನೊಳಗೆ ಇಣುಕಿದಾಗ ಕೆಂಪು ಕಣ್ಣುಗಳ ರಿಚರ್ಡ್ ಕಾಣಿಸಿದ. ಧೃತಿಗೆಟ್ಟಂತಾಗಿ, ಜೆನ್ನಿ ಒಳಗೆ ನುಗ್ಗಿ ಮಂಚದತ್ತ ನೋಡಿದಳು. ಅರೆ ನಗ್ನಳಾಗಿ ಎಚ್ಚರವಿಲ್ಲದೆ ಬಿದ್ದಿದ್ದಾಳೆ ಬೆಟ್ಟಿ, ಅದೇ ವಿಕಸಿಸುತ್ತಿದ್ದ. ಅದೇ ವಿಕಸಿಸುತ್ತಿದ್ದ ಸುಂದರ ಹೂವನ್ನು ರಿಚರ್ಡ್ ಹೊಸಕಿ ಹಾಕಿದ್ದ.

“ಬೆಟ್ಟೀ!” ಚೀರಿದಳು ಜೆನ್ನಿ.

“ಯೂ ಬಾಸ್ಟರ್ಡ್…” ಕೈಗೆ ಸಿಕ್ಕ ಹೂವಿನ ಕುಂಡವನ್ನು ರಿಚರ್ಡ್‌ನತ್ತ ಬೀಸಿದಳು. ತಪ್ಪಿಸಿಕೊಂಡ ರಿಚರ್ಡ್ ದಢದಢನೆ ಮಹಡಿ ಇಳಿದು ಹೋದ.

“ಬೆಟ್ಟೀ… ಬೆಟ್ಟೀ…” ಜೆನ್ನಿ ಅವಳನ್ನು ಅಲುಗಿಸಿದಳು. ಬೆಟ್ಟ ಕಣ್ಣು ಬಿಡಲಿಲ್ಲ. ಗಾಬರಿಯಿಂದ ಮೂಗಿನ ಬಳಿ ಕೈ ಹಿಡಿದಳು ಬಿಸಿ ಉಸಿರು ತಾಕಿತು. ಚೇತನ ಬಂದವಳಂತೆ ಜೆನ್ನಿ, ಮತ್ತಷ್ಟು ಜೋರಾಗಿ ಅರಚಿದಳು.

“ಮಮ್ಮೀ!…”

ಅವಳ ಕೂಗಿಗೆ ಬೆಟ್ಟಿ ತಾಯಿ ತಂದೆ ಇಬ್ಬರೂ ಓಡಿ ಬಂದರು ಗಾಬರಿಯಿಂದ

“ಮಮ್ಮಿ… ಆ ಬಾಸ್ಟರ್ಡ್ ಬೆಟ್ಟೀನಾ” ಮುಂದೆ ಹೇಳಲಾರದೆ ತಾಯಿಯನ್ನಪ್ಪಿಕೊಂಡು ಜೋರಾಗಿ ಅಳತೊಡಗಿದಳು ಜೆನ್ನಿ. ವಿಷಯ ಊಹಿಸಿದ ಥಾಮಸ್ ದಂಪತಿಗಳಿಗೆ ದಿಕ್ಕೆಟ್ಟಂತಾಯಿತು. ರಿಚರ್ಡ್‌ನಿಗಾಗಿ ಸುತ್ತಲೂ ಹುಡುಕಿದರು. ಅವನಾಗಲೆ ರೂಮು ಸೇರಿ ಬಾಗಿಲು ಭದ್ರಪಡಿಸಿಕೊಂಡಿದ್ದ. ಪಶ್ಚಾತ್ತಾಪ ಭಯದಿಂದ ನಡುಗುತ್ತಿದ್ದ.

ಹೂಜಿಯಲ್ಲಿದ್ದ ನೀರನ್ನು ಚಿಮುಕಿಸಿ ಬೆಟ್ಟಿಯನ್ನು ಎಚ್ಚರಿಸುವ ಯತ್ನದಲ್ಲಿ ತೊಡಗಿದರು. ಅನಿರೀಕ್ಷಿತ ಘಟನೆಯಿಂದ ಯಾರಿಗೂ ದಿಕ್ಕು ತೋಚದಂತಾಗಿತ್ತು. ಕಾನ್ವೆಂಟಿನ ಹುಡುಗಿ, ತಮ್ಮ ಭರವಸೆಯಿಂದ ಹೊರಗೆ ಕಳುಹಿಸಿರುವಾಗ ಈಗ ಏನು ಮಾಡುವುದು? ಹೇಗೆ ವಿವರಿಸುವುದು? ಪರಿಹಾರ ಏನು? ನೀರು ಚಿಮುಕಿಸಿದ ಕೂಡಲೇ ಮೆಟ್ಟಿ ಬಿದ್ದ ಬೆಟ್ಟಿ, ನಿಧಾನವಾಗಿ ಕಣ್ಣು ತೆರೆದಳು. ಮಂಜುಮಂಜಾಗಿ ಕಾಣಿಸಿತು. ರಿಚರ್ಡ್ ಕೆಂಪು ಕಣ್ಣುಗಳು ಮೈ ಮೇಲೇರಿ ಬಂದಂತಾಗಿ ಭಯದಿಂದ ಕ್ಷೀಣವಾಗಿ ಚೀರಿ ಪುನಃ ಮೂರ್ಚಿತಳಾದಳು ಬೆಟ್ಟಿ.

“ಮಮ್ಮಿ ಪುನಃ ಎಚ್ಚರ ದಪ್ಪಿದಳು.” ಉಸಿರು ಕಟ್ಟಿದ ಸ್ವರದಲ್ಲಿ ಹೇಳಿದಳು ಜೆನ್ನಿ. ಬೆಟ್ಟಿಗೆ ಏನಾದ್ರೂ ಆದರೆ? ಮದರ್‌ಗೆ ಏನು ಉತ್ತರ ಕೊಡಬೇಕು? ಅವಳಿಗೆ ಹುಚ್ಚು ಹಿಡಿದಂತಾಯಿತು.

“ಡ್ಯಾಡೀ.. ಡಾಕ್ಟರನ್ನು ಕರೆದು ತನ್ನಿ…” ಅವಳು ಮಾತು ಮುಗಿಸುವ ಮುಂಚೆಯೇ ಥಾಮಸ್ ಧಡಧಡನೆ ಮಹಡಿ ಇಳಿದು ಕಾರಿನತ್ತ ಧಾವಿಸಿದರು.

ಎಲ್ಲವನ್ನೂ ಕೇಳುತ್ತಿದ್ದಂತೆಯೇ ಮದರ್ ಸ್ವರ ಕಟ್ಟಿ ಬಂತು. ಡಾಕ್ಟರ್ ಮಿಸೆಸ್ ಸ್ಮಿತ್ ಗಲ್ಲಕ್ಕೆ ಕೈಯೂರಿಕೊಂಡು ಆಸಕ್ತಿಯಿಂದ ಆಲಿಸುತ್ತಿದ್ದರು.

“ಅವಳು ಎಲ್ಲರಿಗಿಂತ ಭಿನ್ನ. ಅವಳು ಮುಗ್ಧ, ಆದುದರಿಂದಲೇ ಮೋಸ ಹೋಗಿದ್ದು, ನಾನು ಅವಳನ್ನು ಹೊರಗೆ ಕಳುಹಿಸಬಾರದಿತ್ತು” ಮದರ್ ಹೇಳುತ್ತಿದ್ದರು.

“ಥಾಮಸ್ ದಂಪತಿಗಳು, ಜೆನ್ನಿ ಎಲ್ಲರೂ ದಿನವೂ ಬಂದು ವಿಚಾರಿಸಿಕೊಂಡು ಹೋಗುತ್ತಾರೆ. ಅವರಿಗೆ ತುಂಬಾ ಖೇದವಾಗಿದೆ. ಅದರ ಪರಿಹಾರಕ್ಕಾಗಿ ಅವರು ಏನು ಮಾಡಲೂ ಸಿದ್ಧ. ರಿಚರ್ಡ್ ವಿವಾಹಿತ. ಗಿಡುಗನ ಕೈಯಲ್ಲಿ ಪಾರಿವಾಳ ಇಡಲು ಅವರಾರಿಗೂ ಇಷ್ಟವಿಲ್ಲ. ‘ಬೆಟ್ಟಿ ತಾಯಿಯಾಗಲಿದ್ದಾಳೆ’ ಎನ್ನುವ ಸುದ್ದಿಯಿಂದ ನನ್ನಷ್ಟೇ ಅವರಿಗೂ ದಿಗ್ಭ್ರಮೆ, ಅವರೇ ಮುಂದೆ ಬಂದಿದ್ದಾರೆ. ಬೆಟ್ಟಿಯ ಮಗು ಅವರಿಗೆ ಬೇಕಂತೆ…”

“ಉಳಿದವರಿಗೆ ವಿಷಯ ತಿಳಿಯದಂತಿರಲು ಹಿರಿಯರೊಡನೆ ಸಮಾಲೋಚಿಸಿ, ಬೆಟ್ಟಿಯನ್ನು ಗುಪ್ತವಾಗಿರಿಸಿದ್ದೇನೆ. ಶಿಶುಹತ್ಯೆ ಮಹಾಪಾಪ ಡಾಕ್ಟರ್ ಅದುಮಾತ್ರ ನನ್ನಿಂದ ಸಾಧ್ಯವಿಲ್ಲ, ಕಾನ್ವೆಂಟಿನಿಂದ ಅವಳನ್ನು ಈ ಸ್ಥಿತಿಯಲ್ಲಿ ಕಳುಹಿಸಲು ಇಷ್ಟವಿಲ್ಲ. ಅವಳಿನ್ನೂ ಮೆಜಾರಿಟಿಗೆ ಬಂದಿಲ್ಲ. ಶಾಕ್‌ನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಉಬ್ಬಿದ ಹೊಟ್ಟೆ ನೋಡಿಕೊಂಡು ಕುಳಿತಿರುತ್ತಾಳೆ ಯಾವಾಗಲೂ. ನನಗಂತೂ ಏನೂ ತೋಚದಂತಾಗಿದೆ ಡಾಕ್ಟರ್…”

ಅಸಹಾಯಕರಾಗಿ ಕೈ ಹಿಸುಕಿಕೊಳ್ಳುತ್ತಾ ಕುಳಿತಿದ್ದ ಮದರ್ ಅವರನ್ನು ಕಂಡು ಡಾಕ್ಟರ್‌ಗೆ ಕರುಣೆ ಮೂಡಿತು.

“ಹಿಂದೂ ಹೆಣ್ಣಿನ ತರಹ ಒದ್ದಾಡುತ್ತೀರಲ್ಲ ಮದರ್ ನಾರ್‍ಮಲ್ ಆಗಿ ಡೆಲಿವರಿ ಆಗಲಿ, ಬೆಟ್ಟಿಯನ್ನು ನನ್ನ ಬಳಿ ಬಿಡಿ, ನಾನು ಅವಳನ್ನು ನೋಡಿಕೊಳ್ಳುತ್ತೇನೆ. ಈ ವಯಸ್ಸಿನಲ್ಲಿ ಅವಳಿನ್ನೂ ಮುಗ್ಧಳಾಗಿರುವುದು ಒಳ್ಳೆಯ ಸಂಗತಿಯಲ್ಲ. ಎಲ್ಲಾ ತಿಳಿದಿರಬೇಕು.”

ಡಾಕ್ಟರ್?, ಮಿಸೆಸ್ ಸ್ಮಿತ್ ಹೇಳಿ ಮುಗಿಸುವ ಮುನ್ನ ಮದರ್ ನಡುವೆ ಬಾಯಿಹಾಕಿದರು.

“ಇದು ಕಾನ್ವೆಂಟಿನ ಮಾನದ ಪ್ರಶ್ನೆ ಡಾಕ್ಟರ್”

“ಓ…! ನನ್ನ ಮೇಲೆ ಭರವಸೆಯಿಡಿ. ಅವಳನ್ನು ತಂದುಬಿಡಿ. ನಿಮ್ಮ ಮೇಲಿನ ವಿಶ್ವಾಸ ಪ್ರೀತಿಗಾಗಿ ನಾನು ಇಷ್ಟು ಮಾಡಲಾರೆನೆ…? ಫ್ಲೀಸ್…”

ಸ್ಮಿತ್‌ರ ನುಡಿ ಅದೆಷ್ಟು ಭರವಸೆ ನೀಡಿತೋ, ಮದರ್ ಬೆಟ್ಟಿಯನ್ನು ಅವರ ವಶಕ್ಕೊಪ್ಪಿಸಿದರು.

ಬೆಟ್ಟಿ ಇದುವರೆಗೂ ಒಂದೂ ಮಾತನ್ನಾಡಿರಲಿಲ್ಲ. ಎಲ್ಲಾ ವಿಧದಲ್ಲಿ ಯತ್ನಿಸಿ ಸೋತಿದ್ದಳು. ಗದರಿಸಿದರೆ ಜೋರಾಗಿ ಅತ್ತುಬಿಡುತ್ತಿದ್ದಳು. ಯಾರೂ ಕಾಣದ ಜಾಗಕ್ಕೆ ಹೋಗಿ ಹೊಟ್ಟೆಯನ್ನು ಜೋರಾಗಿ ಗುದ್ದಿಕೊಳ್ಳುತ್ತಿದ್ದಳು. ಕುತ್ತಿಗೆ ಹಿಸುಕುವಂತೆ ಅವಳ ಕೈಗಳು ಮಗುವಿನ ಕುತ್ತಿಗೆಗಾಗಿ ಹೊಟ್ಟೆಯ ಮೇಲೆ ಹುಡುಕುತ್ತಿದ್ದವು. ಮದರ್ ಎಷ್ಟು ಪ್ರಯತ್ನಿಸಿದರೂ ಬೆಟ್ಟಿ ಅವರ ಕಣ್ಣುಗಳನ್ನು ಎದುರಿಸಲಿಲ್ಲ. ಮುಖ ತಗ್ಗಿಸಿ ಕಣ್ಣು ಮುಚ್ಚಿಕೊಂಡುಬಿಡುತ್ತಿದ್ದಳು. ಜೆನ್ನಿ, ಥಾಮಸ್ ಬಂದರೆ ಒಂದು ಕ್ಷಣ ಅವಳ ಕಣ್ಣುಗಳು ಚಂಚಲವಾಗುತ್ತಿದ್ದವು. ಅವರ ಬೆನ್ನ ಹಿಂದೆ ಅವಳ ಕಣ್ಣುಗಳು ಮತ್ತಾರನ್ನೋ ಅರಸುತ್ತಿದ್ದವು. ನಂತರ ಇದ್ದಕ್ಕಿದ್ದಂತೆಯೇ ಮಂಕಾಗಿಬಿಡುತ್ತಿದ್ದವು. ಬಂಡೆಯಂತೆ ಕುಳಿತುಬಿಡುತ್ತಿದ್ದಳು. ಸ್ಮಿತ್ ತಮ್ಮ ‘ಸೈಕೋ ಥೆರಪಿ’ಯನ್ನು ಪ್ರಾರಂಭಿಸಿದರು. ಅವಳ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳು ಮೂಡಲು ‘ಫಿಲಂಶೋಸ್’ ವಿವಿಧ ಪುಸ್ತಕಗಳು ಪ್ರಸಂಗಗಳನ್ನು ಹೇಳುತ್ತಿದ್ದರು. ಒಂದೊಂದು ಬಾರಿ ಆಸಕ್ತಿಯಿಂದ ಅವಳ ಕಣ್ಣುಗಳು ಅರಳಿದರೆ ಸ್ಮಿತ್ ಉತ್ಸಾಹಿತರಾಗಿ ಮುಂದುವರಿಯುತ್ತಿದ್ದರು.

“ನೀನು ಕೀಳರಿಮೆಯಿಂದ ಪಶ್ಚಾತ್ತಾಪ ಪಡಬೇಕಾಗಿಲ್ಲ. ಇದು ಎಲ್ಲರೂ ಮಾಡುವಂತಹದು. ನಿನಗೆ ತಡವಾಗಿದೆ ಅಷ್ಟೆ. ನೀನು ಹಿಂದೂ ಹುಡುಗಿಯಲ್ಲ, ಗೋಳಾಡುತ್ತಾ ಕೊರಗಲು, ಅವರಂತೆ ನಾವು ಭಾವುಕರಲ್ಲ ಕೆಲವು ವಿಷಯಗಳಲ್ಲಿ. ಡೆಲಿವರಿಯಾದ ನಂತರ ನೀನು ಸರಿಯಾಗುತ್ತೀಯ. ಹೊಂದಿಕೊಳ್ಳುತ್ತೀಯ ಇದೆಲ್ಲಾ ಜೀವನದಲ್ಲಿ ಸರ್ವೆಸಾಮಾನ್ಯ. ಅದೂ ಅಲ್ಲದೆ ರಿಚರ್ಡ್ ಮೋಸ ಮಾಡಿದ್ದಾನೆ…”

ಬೆಟ್ಟಿ ಅಲ್ಲಿಂದದ್ದು ಹೋಗಿಬಿಡುತ್ತಿದ್ದಳು. ರಿಚರ್ಡ್ ವಿಷಯ ಬಂದರೆ ಅವಳ ಮುಖದಲ್ಲಾಗುತ್ತಿದ್ದ ಬದಲಾವಣೆ, ಉದ್ವೇಗವನ್ನು ಸ್ಮಿತ್ ಸೂಕ್ಷ್ಮವಾಗಿ ತಿಳಿದುಕೊಂಡರು. ಅವಳು ಯಾವುದಕ್ಕೂ ವಿರೋಧಿಸುತ್ತಿರಲಿಲ್ಲ. ಯಾಂತ್ರಿಕವಾಗಿ ಡಾಕ್ಟರ್ ಹೇಳಿದಂತೆ ಕೇಳುತ್ತಿದ್ದಳು. ಮದರ್ ಬಂದು ಹೋದ ಕೆಲವು ಕ್ಷಣಗಳಲ್ಲಿ ಅಸ್ತವ್ಯಸ್ತವಾಗುತ್ತಿದ್ದಳು. ಮರೆಯಲ್ಲಿ ಕುಳಿತು ಅಳುತ್ತಿದ್ದಳು. ಏನನ್ನೋ ಹೇಳಲು ಅವಳ ತುಟಿಗಳು ಚಲಿಸುತ್ತಿದ್ದವು. ಆದರೆ ಸ್ವರ ಬರುತ್ತಿರಲಿಲ್ಲ. ಅವ್ಯಕ್ತ ಕೈಯೊಂದು ಗಂಟಲು ಹಿಡಿದಂತೆ ಚಡಪಡಿಸುತ್ತಿದ್ದಳು.

ಕೊನೆಗೊಮ್ಮೆ ಅವಳ ದೇಹದ ಭಾರ ಇಳಿಯಿತು. ಅವಳ ಚಡಪಡಿಕೆ, ತೊಳಲಾಟ ತಟಸ್ಥವಾಯಿತು. ಸುಕೋಮಲ ಮುದ್ದು ಹೆಣ್ಣು ಮಗುವನ್ನು ಕಂಡು ಮದರ್ ಮುಖದಲ್ಲಿ ನಾನಾ ಭಾವನೆಗಳು ಕ್ಷಣದಲ್ಲಿ ಮಿಂಚಿ ಮರೆಯಾದವು. ಬೆಣ್ಣೆಯಂತಹ ಮುಖ ಸವರಿ ಹಣೆಯ ಮೇಲೆ ಮೃದುವಾಗಿ ಮುತ್ತನ್ನಿಟ್ಟರು. ಕಾನ್ವೆಂಟಿಗೆ ಬಂದ ಬೆಟ್ಟಿ ಈಗ ಪುಟ್ಟ ಮಗುವಿನ ತಾಯಿಯಾಗಿ ಮಲಗಿದ್ದಳು. ಎರಡೂ ಒಂದೇ ಮಂಚದಲ್ಲಿ ಮಲಗಿರುವ ಮಕ್ಕಳು ಎನಿಸಿತು.

ಕೆಲವು ದಿನಗಳ ನಂತರ ಮಗುವನ್ನು ಶಾಲುವಿನಲ್ಲಿ ಸುತ್ತಿ ಹೂವಿನಷ್ಟೇ ಹಗುರವಾಗಿ ಹಿಡಿದು ಎತ್ತಿಕೊಂಡು, ಮಲಗಿದ್ದ ಬೆಟ್ಟಿಯ ಬಳಿ ಬಂದು,

“ಬೆಟ್ಟಿ…” ಎಂದು ಕರೆದರು.

ನಿಧಾನವಾಗಿ ಕಣ್ಣು ಬಿಟ್ಟು ಬೆಟ್ಟಿ ಪಕ್ಕದಲ್ಲಿ ಕೈಯಾಡಿಸಿದಳು. ಮಗುವಿರಲಿಲ್ಲ. ಧಿಗ್ಗನೆ ಎದ್ದು ಕುಳಿತಳು.

“ನನ್ನ ಬೇಬಿ, ಮೈ ಚೈಲ್ಡ್…” ಕಾತರ ಗಾಬರಿಯಿಂದ ನೋಡಿದಳು. ಮದರ್ ತಮ್ಮ ತೋಳ ತೆಕ್ಕೆಯಲ್ಲಿ ಕಣ್ಣುಮುಚ್ಚಿ ಮಲಗಿದ ಮಗುವನ್ನು ತೋರಿಸಿ.

“ಥಾಮಸ್ ದಂಪತಿಗಳು ಬಂದಿದ್ದಾರೆ. ಈ ಮಗುವನ್ನು ಕೊಡುತ್ತಿದ್ದೇನೆ… ಪಾಪದ ಫಲ ಬೇಡ ಅವರಿಗೇ ಇರಲಿ…”

ಮದರ್ ಹೇಳಿದರು.

“ಅವರಿಗೆ ಕೊಡಲು…” ಬೆಟ್ಟಿ ತೊದಲಿದಳು.

“ಹೂಂ ಆದರೆ ರಿಚರ್ಡ್ ಇಲ್ಲಿ ಇಲ್ಲ ಅದಕ್ಕೆ…” ಮದರ್ ವಾಕ್ಯವಿನ್ನೂ ಪೂರ್ತಿಯಾಗಿರಲಿಲ್ಲ. ಬೆಟ್ಟಿ ಉದ್ವೇಗದಿಂದ,

“ಮದರ್… ಈ ಮಗು ನನ್ನದು. ನಾನು ಕೊಡೋಲ್ಲ…” ಎಂದಳು ಅವಳ ಒಣಗಿ ಬಿಳಿಚಿಕೊಂಡ ತುಟಿಗಳು ಕಂಪಿಸುತ್ತಿದ್ದವು. ಮದರ್ ಗರಬಡಿದಂತವರಾದರು.

“ಈ ಮಗು ನನ್ನದು ನಾನು ನಾನಾಗಿಯೇ ಕುತೂಹಲದಿಂದ ರಿಚರ್ಡ್‌ನೊಂದಿಗೆ ಆಮೇಲೆ ಹೆದರಿಕೆಯಾಯಿತು…” ಛಟಾರನೆ ಅವರ ಕೈ ಕೆನ್ನೆಯನ್ನು ಅಪ್ಪಳಿಸಿತು. ಇಷ್ಟು ದಿವಸದ ಪಶ್ಚಾತ್ತಾಪ, ದುಃಖ ನೋವುಗಳ ಕಟ್ಟಿಯೊಡೆದು ಚಿಕ್ಕ ಮಗುವಿನಂತೆ ಅಳತೊಡಗಿದಳು ಬೆಟ್ಟಿ.

“ಮಗು ನನ್ನದು ನನ್ನ ಚೈಲ್ಡ್..” ಮಧ್ಯೆ ಮಧ್ಯೆ ಹೇಳುತ್ತಿದ್ದಳು. ಮದರ್ ಶಿಲೆಯಂತೆ ನಿಂತೇ ಇದ್ದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೋರಿ
Next post ಹೇಳಿಕೊಳ್ಳುವೆವು ಎದೆ ತಟ್ಟಿ

ಸಣ್ಣ ಕತೆ

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಆಮಿಷ

  ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…