ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ ಪ್ರತೀಕಗಳೇ ಎಂದು ಬೇರೆ ಹೇಳಬೇಕಾಗಿಲ್ಲ. ಹಳ್ಳಿ ಹಳ್ಳಿಗಳಲ್ಲಿ ದಂತ ಕಥೆಗಳಂತೂ ಹಿಂದಿನ ಜನರ ತ್ಯಾಗ, ಶೌರ್ಯ ಗಳನ್ನು ಇಂದಿಗೂ ಹೊಗಳುತ್ತಿವೆ. ಇಂತಹ ಒಂದು ದಂತ ಕಥೆಯನ್ನು ನಾನು ಇಲ್ಲಿ ಸಂಗ್ರಹಿಸಲು ಸಾಹಸ ಮಾಡಿದ್ದೇನೆ.
* * * *

ನನ್ನ ತಾಯಿಯ ತವರೂರು ಕೊರ್ಲಹಳ್ಳಿ. ಅಲ್ಲಿ ನಮಗೊಂದು ಹೊಲ ಇದೆ. ನಾನು ಸಣ್ಣವನಿರುವಾಗಿನಿಂದ ಆ ಚಿಕ್ಕ ಹಳ್ಳಿಗೆ ವರುಷಕ್ಕೊಮ್ಮೆ ಹೋಗುತ್ತಲಿದ್ದೇನೆ. ತುಂಗಾತೀರದಲ್ಲಿ ನೆಲಸಿರುವ ಆ ಹಳ್ಳಿ ನನ್ನ ಮನಸ್ಸಿನ ಮೇಲೆ ಒಂದು ಬಗೆಯ ಆಕರ್ಷಣವನ್ನು ಮೊದಲಿನಿಂದಲೂ ಬೀರಿರುತ್ತದೆ. ಹಳ್ಳಿ ಸಣ್ಣದು. ಮುನ್ನೂರು ನಾನೂರು ಜನರು ಈಗ ಅಲ್ಲಿ ವಾಸಿಸುತ್ತಿರಬಹುದು. ಹೊಳೆಯ ಪಕ್ಕದಲ್ಲಿ ಒಂದು ಎತ್ತರವಾದ ದಿನ್ನಿ ಇದೆ. ಅಲ್ಲಿ ಹಾಳುಬಿದ್ದ ಕೋಟೆಯೊಂದು ಹಿಂದಿನ ಇತಿಹಾಸ ಸಾರುತ್ತಿದೆ. ಕೋಟೆಯ ಮಧ್ಯದಲ್ಲಿ ಈಗ ಪುರಾತನ ದೇವಾಲಯಗಳು ಮಾತ್ರ ಇವೆ. ಇನ್ನುಳಿದ ಮನೆಗಳನ್ನು ನಾವು ಈಗ ಅಲ್ಲಿ ಕಾಣುವಂತಿಲ್ಲ. ಹಾಳೂರ ಮಧ್ಯದಲ್ಲಿ ಹನುಮನ ಗುಡಿಯೊಂದು. ಅದರ ಹತ್ತಿರವೇ ನಿಂತುಕೊಂಡ ಅಶ್ವತ್ಥ ವೃಕ್ಷ ಪ್ರದೇಶಕ್ಕೆ ಮತ್ತಷ್ಟು ಕಳೆ ತಂದುಕೊಟ್ಟಿದೆ; ಒಬ್ಬರೇ ಅಲೆದಾಡುತ್ತ ಅಲ್ಲಿ ಹೋಗಿ ಕುಳಿತುಕೊಳ್ಳಬೇಕು. ಹಿಂದಿನ ದಿನಗಳಲ್ಲಿ ಬಾಳಿಹೋದ ಆ ಜನಾಂಗದ ಬಗ್ಗೆ ಮನಸ್ಸು ಅನೇಕ ವಿಚಾರಗಳನ್ನು ಊಹಿಸುತ್ತದೆ. ತುಸು ಮುಂದಕ್ಕೆ ಬಂದು ನದಿಯ ಘಟ್ಟವನ್ನು ಸೇರಿ, ಅಲ್ಲಿ ತುಂಗಾಪಾನ ಮಾಡಿ ಕುಳಿತುಕೊಂಡಾಗ ಆಗುವ ಆನಂದ-ಏನು ಕೊಟ್ಟರೂ ಬಾರದು. ತುಂಗೆ ಪಶ್ಚಿಮದಿಂದ ಪೂರ್ವಕ್ಕೆ ಧಾವಿಸುತ್ತಾಳೆ, ತಿಳಿಯಾದ ನೀರು; ಆಕಾಶಕ್ಕೆ ದೂರದಲ್ಲಿ ಹೊಂದಿಕೊಂಡು ನಿಂತುಕೊಂಡ ಪಶ್ಚಿಮದ ದಿನ್ನೆಗಳು, ನದಿಯ ದಡದಲ್ಲಿ ಕಾಣುವ ಮಾವಿನ ತೋಪು -ಕವಿಹೃದಯಕ್ಕೆ ಕೈವಲ್ಯವನ್ನೇ ತಂದೊಡ್ಡುವವು.

ಹಿಂದಕ್ಕೆ “ಡಣಕ್ಕ ಮುದ್ದ” ನೆಂಬ ಮಹಾಪುರುಷನು ತುಂಗೆಗೆ ಅಣೆಕಟ್ಟು ಕಟ್ಟಲು ಅಲ್ಲಿ ಸಾಹಸ ಮಾಡಿದ್ದಾನೆ. ಆದರೆ ಅದು ಫಲಿಸಿಲ್ಲ. ಆ ಪ್ರದೇಶದಲ್ಲಿ ಬಂಡೆಗಲ್ಲುಗಳನ್ನು ಭೇದಿಸಿ ತುಂಗೆ ಅಬ್ಬರಿಸುತ್ತಾಳೆ. ಅದಕ್ಕೆ ಹಳ್ಳಿಗರು “ದಿಡಗು” ಎಂದು ಕರೆಯುತ್ತಾರೆ. ಮೊದಲುಗಟ್ಟಿ ಎಂದು ಹೆಸರು ಇನ್ನೊಂದು ದಡದಲ್ಲಿರುವ ಹಳ್ಳಿಗೆ ಆಗ ಬಂದಿದೆ. ಅಲ್ಲಿ ಹನುಮನ ಗುಡಿಯು ಪ್ರಸಿದ್ದವಿದೆ. ಇಂಥ ರಮ್ಯ ಪ್ರದೇಶದಲ್ಲಿ ಊರು ಕಟ್ಟಿಕೊಂಡ ಆ ಹಿಂದಿನ ಜನರ ರಸಿಕತೆ ಕೊಂಡಾಡುವಂತಹದು.

ಆ ಕೋಟೆಯ ಗೋಡೆಯ ಒಂದು ಪಕ್ಕವನ್ನು ತುಂಗೆಯು ಹೊಂದಿ ಕೊಂಡು ಹರಿಯುತ್ತಾಳೆ. ಕೋಟೆಯ ಗೋಡೆಯ ಮೇಲೆ ನಿಂತು ನೋಡಿದರೆ ಬಹುದೂರದ ವರೆಗೆ ರಮ್ಯವಾದ ದೃಶ್ಯವನ್ನು ಕಾಣಬಹುದು. ಮಳೆಗಾಲದಲ್ಲಿ ಪ್ರವಾಹವು ಹೆಚ್ಚಾಗಿ ಆ ಕೋಟೆಯನ್ನು ಸುತ್ತು ಹಾಕುತ್ತದೆ. ಕೋಟೆಯ ಗೋಡೆಗಳು ಈಗ ಭದ್ರವಾದವುಗಳಿಲ್ಲ. ಆದರೆ ಹಿಂದೆ ಜನರು ಅವುಗಳನ್ನು ಭದ್ರವಾಗಿರಿಸಿಕೊಂಡು ನದಿಯು ಸುತ್ತುಗಟ್ಟಿದರೂ ಅಲ್ಲಿಯೇ ವಾಸಿಸುತ್ತಿದ್ದರು. ಪ್ರತಿವರುಷವು ಈ ಪ್ರಸಂಗವು ಬರುವದೇನೂ ತಪ್ಪಿದ್ದಲ್ಲ. ಹಿಂದಕ್ಕೆ ಒಂದು ಇಂಥ ಪ್ರಸಂಗವು ಬಂದಿತು. ಮಳೆಯು ಆ ವರುಷ ಬಹಳ ಬಿದ್ದು, ಮೇರೆದಪ್ಪಿ ನದಿಯ ನೀರು ಬಂದು ಕೋಟೆಯ ನಾಲ್ಕು ದಿಕ್ಕುಗಳನ್ನ ಸುತ್ತಿತು. ಹಾಗೂ ಕೋಟೆಯ ಹೆಬ್ಬಾಗಿಲಿನಿಂದ ಗ್ರಾಮಪ್ರವೇಶ ಮಾಡಿತ್ತು.

ಹೊಳೆ ಊರು ಹೊಕ್ಕ ಮೇಲೆ ಕೇಳಬೇಕೆ? ಜನರು ಭೀತರಾದರು. ಭೋರೆಂದು ಗರ್ಜಿಸುವ ನದಿಯು ತಮ್ಮನ್ನು ನುಂಗಲು ಹವ್ಯಾಸ ಪಡುತ್ತಿದೆ ಎಂದು ಜನರೆಲ್ಲ ನಂಬಿದರು. ಜನರೆಲ್ಲ ಹೌಹಾರಿ ತಮ್ಮ ಮಕ್ಕಳು ಮರಿಗಳ ಗತಿಯೇನೆಂದು ಕಣ್ಣೀರಿಡುತ್ತ ಬೀದಿಗಳಲ್ಲಿ ಅಲೆದಾಡಹತ್ತಿದರು. ಆಕಾಶದಲ್ಲಿ ಕಾರ್ಮೋಡಗಳ ತಾಕಲಾಟ- ಸಿಡಿಲು ಗುಡುಲಿನ ಗರ್ಜನೆಯಂತೂ ಅವ್ಯಾಹತವಾಗಿ ಸಾಗಿಯೇ ಇತ್ತು. ಸಾಧ್ಯವಾದಷ್ಟು ಜನರು ಹರಗೋಲಿನಿಂದ ಪಾರಾಗಲು ಯತ್ನಿಸಿದರು. ಆದರೆ ವೇಳೆಗಳೆದಂತೆ ನೀರು ಇನ್ನೂ ಹೆಚ್ಚಾಯಿತು. ಕೋಟೆಯ ಗೋಡೆಯ ಮೇಲೆ ನಿಂತು ಊರ ಪಂಚರು ದಿಕ್ಕು ಗಾಣದೆ ನೋಡುತ್ತಿದ್ದಾರೆ. ಒಬ್ಬರ ಮೊರೆಯ ಮೇಲೂ ತುಸು ಕಳೆಯಿಲ್ಲ! ಜಲಪ್ರಳಯವು ನಿಶ್ಚಯವೆಂದು ಅರಿತು ಹಿರಿಪಂಚ, ರಾಮಣ್ಣ ‘ಇದು ಹುಚ್ಚು ಹೊಳೆಯಪ್ಪ, ಮೊದಲಗಟ್ಟೆಯ ಹನುಮನ ಪಾದವನ್ನು ನೀರು ಮುಟ್ಟಿದೆ. ನಮಗೆ ಹನುಮನೇ ಗತಿ’ ಎಂದು ನಿಟ್ಟಿಸುರು ಬಿಟ್ಟು, ಮೊದಲ ಗಟ್ಟಿಯ ಕಡೆಗೆ ಮೋರೆಮಾಡಿ ಕೈಜೋಡಿಸಿದ! ಕ್ಷಣಕಾಲ ಇನ್ನುಳಿದ ಜನ ಸುಮ್ಮನೆ ನಿಂತುಕೊಂಡಿತು ಅಲ್ಲಿಯೇ ಜನಸಂದಣಿಯಲ್ಲಿ ನಿಂತುಕೊಂಡ ಮುಪ್ಪಿನ ಮುದಕಿ ಮುಂದೆ ಬಂದು “ಎಪ್ಪಾ ಗಂಗೀ ಅಳಸಬೇಕರಿ ಅಂದರೆ ಗಂಗಮ್ಮ ಹಿಂದ ಸರಿತಾಳ” ಎಂದಳು. ಒಮ್ಮೆಲೆ ಹಿರಿ ಪಂಚ ರಾಮಣ್ಣನ ಮುಖದ ಮೇಲೆ ಮಿಂಚು ಮೂಡಿತು. ಅವನು ಕೋಟೆಯ ಗೋಡೆಯನ್ನಿಳಿದು, ಊರ ಚಾವಡಿಗೆ ಬಂದು ತನ್ನ ಇನ್ನುಳಿದ ಪಂಚಗಿಗೆ ಹೇಳಿದ “ಗಂಗೆ ಅಳೆಯುವ ಗರತಿ ಯಾರಪ್ಪಾ ಸಿದ್ದಪ್ಪ?” ಎಂದು ಪಂಚ ಸಿದ್ದಪ್ಪನನ್ನು ಕೇಳಿದ, ಸಿದ್ದಪ್ಪ ಬಹು ವಿನೋದಿ “ಊರ ತುಂಬ ಗರತೇರಿದ್ದಾರೆ ಆದರ ಜೀವ ಕೊಡೋದಕ್ಕ ಯಾರ ಮುಂದ ಬರತಾರ?” ಎಂದು ಅಂಥ ಗಂಭೀರ ವಾತಾವರಣವನ್ನೂ ಕೂಡ ಸಡಿಲಿಸಿದ!

ಕಾಯಾ ವಾಚಾ ಮನಸಾ ಶುದ್ದಿ ಬೇಕೆಂದು ಹಿರಿಯರು ಹೇಳುತ್ತಾರೆ. ಹದಿಬದಿಯ ಧರ್ಮವಾದರೂ ಇದನ್ನು ಬಿಟ್ಟಿಲ್ಲ. ತ್ರಿಕರ್ಣ ಪೂರ್ವಕವಾಗಿ ಶುದ್ದಳೆಂದು ವಿಶ್ವಾಸವಿದ್ದ ಗರತಿ ಗಂಗೆ ಅಳಿಯಬೇಕು! ಎಂಥ ಪ್ರಸಂಗ ವಿದು! ಊರ ಹೆಂಗಳೆಯರ ಪರೀಕ್ಷೆಯ ಕಾಲ. ಜನರೆಲ್ಲ ಗುಂಪು ಗುಂಪಾಗಿ ಚಾವಡಿಯ ಮುಂದೆ ನೆರೆದರು. ಮಾತಿಗೆ ಮಾತು ಪ್ರಾರಂಭವಾಗಿ ಕೊನೆಯ ನಿರ್ಧಾರ ಊರಲ್ಲಿ ಡಂಗುರ ಸಾರುವದೆಂದು ನಿಶ್ಚಯವಾಯಿತು. ಊರ ಹೊಲೆಯ ಡಂಗುರ ಸಾರುತ್ತ ಹೊರಟ. ಓಣಿಯ ಮಧ್ಯ ನಿಂತು “ಗರತಿ ಗಂಗಮ್ಮ ಬನ್ನಿ, ಗಂಗೆ ಅಳೆಯುವದಕ್ಕೆ” ಎಂದು ಕೂಗುವ ! ಮನೆಯೊಳಗಿನಿಂದ ಹೆಂಗಳೆಯರು ಮುಖಕೂಡ ಹೊರಗೆ ಹಾಕಲಿಲ್ಲ. ಬೀದಿ ಬೀದಿಗಳಲ್ಲಿ ನಡೆದು-ಚಾವಡಿಯ ಮುಂದೆ ಬಂದು ನಿಂತುಕೊಂಡು ಊರಾಗ ಒಬ್ಬ ಗರತಿ ಹೊರಡಲಿಲ್ಲ. ಎಪ್ಪ ಏನಿದು ದೈವ?” ಎಂದು ನಿಟ್ಟಿಸುರು ಬಿಟ್ಟು ಡಂಗುರದವ ನಿಂತುಕೊಂಡ. ಪಂಚ ರಾಮಣ್ಣನ ಮೋರೆ ತೀರ ಕೆಟ್ಟಿತು ಊರು ಮುಳಗುವದೇ ನಿಶ್ಚಯವೆಂದು ತಿಳಿದು, ಒಂದು ನಿಟ್ಟಿಸುರು ಬಿಟ್ಟ. ಅಷ್ಟರಲ್ಲಿಯೇ ಸಿದ್ದಪ್ಪ ತುಸು ಮುಂದೆ ಬಂದು “ಏ ಹೊಲ್ಯಾ ನಿಮ್ಮ ಕೇರ್‍ಯಾಗ ಡಂಗುರ ಹೊಡದೇನು?” ಎಂದ.

“ಇಲ್ಲ ದ್ಯಾವರು. ನಮ್ಮ ಕೇರಾಗ ಏನ ಹೊರಡತಾರಿ ಗರತ್ಯಾರು? ತುಂಬಿದ ಊರಾಗ ಒಬ್ಬ ಗರತಿ ಬಂದು ಗಂಗೀ ಅಳೀತೀನಿ ಅನಲಿಲ್ಲ.” “ಛೀ ನಿನ ಮಂಜಾಳ ಹೋಗಾ, ಹೋಗು ಹೋಲಗೇರಿಗೆ, ಅಲ್ಲೂ ಸಾರು ಡಂಗುರ.” ಎಂದು ಸಿದ್ದಪ್ಪ ಅನ್ನುವಷ್ಟರಲ್ಲಿಯೇ ಡಂಗುರದ ದ್ಯಾಮ ಓಡುತ್ತ ಹೊಲಗೇರಿಯ ಕಡೆಗೆ ಹೊರಟ.

ಡಂಗುರದ ದ್ಯಾಮ ಓಡುತ್ತ ಓಡುತ್ತ ಕೇರಿಗೆ ಹೋಗಿ ಕೇರಿಯ ದ್ಯಾಮವ್ವನ ಗುಡಿಯ ಮುಂದೆ ನಿಂತು “ದ್ಯಾಮವ್ವನ ಸಾಕ್ಷಿಯಾಗಿ ಡಂಗುರ ಹೊಡೆತೀನಿ ನಮ್ಮ ಕೇರಿಯಾಗಿನ ಗರತೇರು ಬಂದು ಗಂಗಿ ಅಳಿರೆವೊ” ಎಂದು ಕೂಗಿ ಡಂಗುರದ ತಮ್ಮಟೆ ಬಾರಿಸಿ ನಿಂತು ಕೊಂಡ. ಐದು ನಿಮಿಷಗಳಾಗಿರಬಹುದು ಅವನ ನಿಂತುಕೊಂಡ ಸ್ಥಳದ ಹತ್ತಿರವೇ ಇದ್ದ ಗುಡಿಸಲೊಂದರೊಳಗಿಂದ ಒಬ್ಬ ಹೆಣ್ಣು ಮಗಳು ಹೊರಗೆ ಬಂದಳು. ಏನು ಆಕಾರ ! ಹರಿದ ಅರಿವೆ ಮೈಮೇಲೆ ! ಕೂದಲು ಹರಡಿವೆ-ಆದರೆ ಮೂಗಿನಲ್ಲಿಯ ಮೂಗುತಿ ಧೈರ್ಯದಿಂದ ಸಾರುತ್ತಿದೆ ಇವಳು ಗರತಿ ಎಂದು ! ಗಂಗವ್ವ ಮುಂದಕ್ಕೆ ಬಂದು-

“ಏನು ದ್ಯಾಮಪ್ಪಾ- ಗರತೇರು ಯಾಕೆ ಬೇಕು?” ಎಂದು ತನ್ನ ಬಡಕಲಾದ ಕೂಸನ್ನು ಎತ್ತಿಕೊಳ್ಳುತ್ತ ಮಾತನಾಡಿದಳು.
“ಎವ್ವ ಗಂಗವ್ವ, ಏನು ಹೇಳೋದು-ಊರ ಮುಳಗತೈತಿ! ನೀರ ಏರಾಕ ಹತೈತಿ ಕಾಣವಲ್ಲತ?”

“ಏನರಽ ಹೇಳೋದೈತಿ ಹೇಳೆರ ಹೇಳಲಾ ?”

“ಗರತಿ ಬಂದು ಗಂಗಿ ಅಳಿಬೇಕು, ಅಂದರ ನೀರ ಹಿಮ್ಮೆಟ್ಟತೈತಿ ಮಾರಾಯಿತಿ!”
“ಮಡಿವಂತರು ಊರಾಗ ಇರೋಮುಂದ ನಮ್ಮ ಕೇರ್‍ಯಾಗ ಯಾಕ ಬಂದೆಪಾ!”
ಊರೆಲ್ಲ ಮುಗಿಸಿದೆ. ಯಾರೂ ಬರಲಿಲ್ಲ ಅಂತ ಇಲ್ಲಿಗೆ ನನ್ನ ಕಳುಹಿದರು ಪಂಚಸಿದ್ದಪ್ಪನವರು.”

“ಎಣ್ಣಾ, ಹಾಂಗಾರ ನಾ ಅಳಿತೇನಿ ಗಂಗೀ ಅಂತ ಹೇಳಪಾ-ಯತ್ತಾಗಾದರು ಊರರ ಉಳಿಲಿ!”

“ಯವ್ವಽ ನೋಡಿ ಹೇಳು. ಅದು ಸಣ್ಣ ಹ್ವಾರೆವಲ್ಲ! ಎಂಥೆಂಥವರೋ ಹಿಂದ ಸರದಾರು”

“ಇರಲಿ ಬಿಡ್ಽ ಎಣ್ಣ! ನೀ ಹೇಳ ಸಿದ್ದಪ್ಪನವರಿಗೆ- ಹೊಲ್ಯಾರ ಗಂಗಿ “ಗಂಗೀ”-ಅಳಿತೇನಿ ಅಂದಳು ಅಂತ. ಗಡ ಹೋಗು ನಿಂದರ ಬ್ಯಾಡ” ಎಂದು ಅನ್ನುತ್ತ ತನ್ನ ಗುಡಿಸಲು ಹೊಕ್ಕಳು.

ದ್ಯಾಮ ಓಡುತ್ತ ಓಡುತ್ತ ಬಂದು ಸಿದ್ದಪ್ಪನ ಮುಂದ ನಿಂತು ಮುಜರೀ ಹೊಡೆದು “ಎಪ್ಪಾ ಕೆಲಸ ಆತು! ನಮ್ಮ ಕೇರಿ ಮಾನಾ ಉಳಸಿದ್ಲು ಗಂಗವ್ವ !”

“ಏನೋ ಯಾರು ಅಳಿತೇನಿ ಅಂದರು ಗಂಗೀನ?” ಎಂದು ಪಂಚ ರಾಮಣ್ಣ ಎದ್ದು ನಿಂತು ಕೇಳಿದ.

“ಹೊಲಗೇರಿ ಒಳಗ ಗಂಗವ್ವ ಅದಾಳಲ್ಲರಿ, ನಮ್ಮ ಕರಿಯಾನ ಹೆಂಡತಿ ಆಕಿ…. ಅಳಿತೇನಿ ಗಂಗೀನ ಅಂತ ಹೇಳಾಳು.”

ದ್ಯಾಮನ ಮಾತು ಕೇಳಿ ರಾಮಣ್ಣನಿಗೆ ಬಹಳ ಆಶ್ಚರ್ಯವಾಯಿತು. ಊರಮಾನ ಯಾರಾದರೂ ಉಳಿಸಿದರಲ್ಲ ಎಂಬ ಸಮಾಧಾನ ಮುಖದ ಮೇಲೆ ಮೂಡಿತು! ಸಿದ್ದಪ್ಪನ ಕಡೆಗೆ ಮೋರೆ ತಿರುವಿ ರಾಮಣ್ಣ ನುಡಿದ. “ಸಿದ್ದಪ್ಪ ಮುಂದೇನು ಮಾಡುವದು?” “ಅದರಾಗ ಏನೈತಿ ನಾಳೆ ಮುಂಜಾನೆ ಗಂಗಿ ಅಳಸೋದು. ಆದರ ಕರಿಯಾನ ಕರಿಸಿ ಕೇಳಬೇಕು”! ಎಂದ ಸಿದ್ದಪ್ಪ. ಈ ಸುದ್ದಿ ಊರೆಲ್ಲ ಹಬ್ಬಿತು. ಊರ ಹೆಂಗಳೆಯರು ತಮ್ಮ ತಮ್ಮೊಳಗೆ ಗುಜುಗುಜು ಮಾತನಾಡಹತ್ತಿದರು. ತುಂಗಮ್ಮ ಏನ ಮಾಡತಾಳೊ ಯಾರಿಗೆ ಗೊತ್ತು ? ಏನು ಆ ಹೊಲ್ಯಾರ ಗಂಗೀನ ಒಳಗ ಎಳಕೊತಾಳೋ?” ಎಂದು, ಜನರು ಗಂಗಿ ಅಳಿಯುವ ಕೆಲಸ ಬಹಳ ಕಠಿಣವಾದದ್ದೆಂದು ನುಡಿಯ ತೊಡಗಿದರು. ನೆರೆದ ಹೆಣ್ಣುಗಳೆಲ್ಲ ಒಂದೊಂದು ಮಾತನಾಡಿದವು. ಓರ್ವಳು “ಗಂಗೀ ಅಳಿಯೋದು ಬಹಳ ಕಠಿಣ, ತುಸು ಏನಾದರೂ ಹೆಚ್ಚು ಕಡಿಮೆಯಾದರ-ಹೊಳಿ ಅಳಿಯುವವಳನ್ನು ಒಳಗೆ ಎಳಕೋತದ-ಜೀವ ಕೊಡೊ ಪ್ರಸಂಗ” ಎಂದು ನುಡಿದು, ಹಿಂದೆ ಆಗಿಹೋದ ಅಂಥ ಒಂದು ಭೀಕರ ಪ್ರಸಂಗವನ್ನು ವರ್ಣಿಸಿದಳು.

ಅಂದಿನ ರಾತ್ರಿ ಹೇಗೋ ಸರಿಯುತ್ತಲಿತ್ತು. ಊರ ಪಂಚರು ಮಾತ್ರ ಗಂಗೆ ಅಳೆಯುವ ವ್ಯವಸ್ಥೆ ಮಾಡುತ್ತಲಿದ್ದರು. ಗಂಗೆ ಅಳೆಯುವದಕ್ಕೆ ಹೊಸ ಮರಗಳು ಬೇಕು ಅಳೆಯುವವಳಿಗೆ ಉಡಿ ತುಂಬಿಸಬೇಕು. ಹೊಸ ಸೀರೆ ಮೊದಲಾದವುಗಳನ್ನು ಕೊಡಬೇಕು. ಊರತುಂಬ ಅವಳ ಮೆರವಣಿಗೆಯಾಗಿ ಅವಳು ಹೊಳೆಯದಡಕ್ಕೆ ಬಂದು ಗಂಗೆ ಅಳೆಯಬೇಕು. ಇದು ನಿಯಮ. ರಾಮಣ್ಣ ಎಲ್ಲ ಸಿದ್ಧತೆ ಮಾಡಿ ಚಾವಡಿಯ ಕಂಬಕ್ಕೆ ಆತು ಕುಳಿತುಕೊಂಡ. ಅವನ ಮುಖದಲ್ಲಿ ಇನ್ನೂ ಒಂದು ಸಂಶಯ ಕಾಣಿಸಿಕೊಳ್ಳುತ್ತಿತ್ತು. ಹೊಲೆಯರ ಗಂಗವ್ವನ ಗಂಡ ಹಾಗೂ ಮಕ್ಕಳು ಇದಕ್ಕೆ ಒಪ್ಪಿ ಅವಳನ್ನು ಈ ಕೆಲಸಕ್ಕೆ ಬಿಡಬಹುದೆ? ಎಂದು.

ಬೆಳಗು ಮೂಡಿದೆ ! ಜನ ಕಿಕ್ಕಿರಿದು ಚಾವಡಿಯ ಮುಂದೆ ನೆರೆದಿದ್ದಾರೆ. ಅನೇಕ ವಾದ್ಯಗಳು ಮೊಳಗುತ್ತಿದ್ದವು. ಕೆಲವರ ಹೃದಯಕ್ಕೆ ಸಾವಿನ ಸುದ್ದಿ ಮುಟ್ಟಿದಂತೆ ಭಾಸವಾಗುತ್ತಿದೆ. ಎಲ್ಲರೂ ಭೀತರಾಗಿದ್ದಾರೆ ! ಗರತಿ ಗಂಗಮ್ಮ ತನ್ನ ಮುರುಕು ಗುಡಿಸಲಿನಿಂದ ಹೊರಹೊರಟಳು. ದೊಡ್ಡ ಕುಂಕುಮ ಹಣೆಯಲ್ಲಿ ಹೊಳೆಯುತ್ತಿದೆ. ಹೊಸ ಸೀರೆ ಉಟ್ಟು ಚಾವಡಿಯ ಕಡೆಗೆ ನಡೆದಳು. ಜನ ಅವಳನ್ನು ಹಿಂಬಾಲಿಸಿತು ! ಅವಳ ಗಂಡ ಕರಿಯ ತನ್ನ ತೋಳಮೇಲೆ ಚಿಕ್ಕ ಮಗುವನ್ನು ಎತ್ತಿಕೊಂಡಿದ್ದಾನೆ. ಇನ್ನೊಂದು ಐದಾರು ವರುಷದ ಮಗು ಅಳುತ್ತ ಅವನ ಹಿಂದೆ ಬರುತ್ತಿದೆ. ಎಂಥ ಹೃದಯ ವಿದಾರಕ ದೃಶ್ಯ! ಕರಿಯನ ಮುಖದ ಮೇಲೆ ಅಳುವು ಹಣಕಿ ಹಾಕುತ್ತಲಿದೆ. ಆದರೆ ಅವನು ಹಾಗೆ ಮಾಡಲಾರ. ಬಹುಜನರಿಗೆ ಸುಖವಾಗುವ ಕಾರ್ಯ ತನ್ನ ಕೈಹಿಡಿದವಳು ಮಾಡುತ್ತಿರುವಾಗ-ತಾನೇಕೆ ಅವಳನ್ನು ತಡೆಯಬೇಕು? ಚಾವಡಿಯ ಮುಂದೆ ನಿಂತು ಗಂಗಮ್ಮ ಊರ ಗೌಡರಿಗೆ-ಪಂಚರಿಗೆ ನಮಸ್ಕಾರ ಮಾಡಿದಳು! ರಾಮಣ್ಣ ತುಸು ಮುಂದೆ ಬಂದು ಕರಿಯನನ್ನು ಕೇಳಿದ. “ಕರಿಯಾ ನಿನ್ನ ಮನಸ್ಸಿನ ವಿರುದ್ಧ ನಾವಿಲ್ಲ! ನಿಜ ಹೇಳು, ನಿನ್ನ ಹೆಂಡತಿ ಗಂಗಿ ಅಳಿಯೋದಕ್ಕೆ ಸಮ್ಮತಿ ಕೊಡುವಿಯಾ?”

ಆದಕ್ಕೆ ಕರಿಯಾ “ದ್ಯಾವ್ರು ಆಕಿ ಸಾಯೋದಿಲ್ಲ. ನಾ ಕರೇ ಹೇಳ ತೀನಿ-ನೀರು ಹಿಂದ ಸರಿತೈತಿ” ಎಂದ.

“ಒಂದು ಪಕ್ಷಕ್ಕೆ ಅವಳನ್ನು ಹೊಳೆ ಎಳೆದುಕೊಂಡರೆ?”

“ಎಪ್ಪಾ, ದ್ಯಾವ್ರ ಹಾಗ ಮಾಡ್ಯಾನ? ನನ್ನ ಗಂಗಿ ಗರತಿ ಅದಾಳು” ಎಂದು ನುಡಿದು ಮದಲಗಟ್ಟೆಯ ಕಡೆಗೆ ನಮಸ್ಕಾರ ಮಾಡಿದ!

ವಾದ್ಯಗಳ ಮೇಳದೊಂದಿಗೆ ಗಂಗಮ್ಮ ತಲೆಯ ಮೇಲೆ ತುಂಬಿದ ಬಿಂದಿಗೆ ಹೊತ್ತು ಹೊರಟಳು. ಜನವೂ ಹೊರಟಿತು. ನದಿಯ ದಡಕ್ಕೆ ಬಂದು ಎಲ್ಲರೂ ನೆಟ್ಟ ನೋಟದಿಂದ ಅವಳ ಕಡೆಗೇ ನೋಡುತ್ತಲಿದ್ದರು. ನೀರು ಬಹಳ ಏರಿದೆ ಗಂಗಮ್ಮ ಧೈರ್ಯವಾಗಿ ಹೊಳೆಗೆ ಪೂಜೆಮಾಡಿ ಕೈ ಜೋಡಿಸಿ “ತುಂಗಮ್ಮ-ನಾ ಗರತಿ ಕರೆ ಆದರ ನನ್ನ ಮಾನಾ ಉಳಿಸಿ ಹಿಂದ ಸರಿ ತಾಯಿ”- ಎಂದು ಮರ ತೆಗೆದುಕೊಂಡು ನದಿಯಲ್ಲಿ ನೀರು ಉಗ್ಗಿದಳು. ಏನು ಆಶ್ಚರ್ಯ! ನೀರು ಕೂಡಲೆ ಬಂದು ಪಾವಟಿಗೆ ಹಿಂದೆ ಸರಿಯಿತು! ಮತ್ತೆ ಮತ್ತೆ ಗಂಗಮ್ಮ ಮರ ತುಂಬಿ ಮೂರು ಸಲ ನೀರು ತುಂಬಿ ಉಗ್ಗಿದಳು. ಹೊಳೆಯು ಓಮ್ಮೆಲೆ ಇಳಿದುಹೋಯಿತು! ಜನರೆಲ್ಲ ಚಪ್ಪಾಳೆ ತಟ್ಟಿ ಗಂಗಮ್ಮನನ್ನು ಬಹುವಾಗಿ ಕೊಂಡಾಡುತ್ತಿರುವಾಗ, ಗಂಗಮ್ಮ ಯಾರಿಗೂ ಅರಿಯದಂತೆ ತನ್ನ ಗುಡಿಸಲು ಸೇರಿದ್ದಳು!
* * * *

ಈಗಲೂ ನದಿಯ ದಡದಲ್ಲಿ ಗಂಗಮ್ಮನಿಗಾಗಿ ಅಂದು ಊರ ಜನ ಮೆಚ್ಚಿ ಕೊಟ್ಟ ಹೊಲವಿದೆ! ಆ ಹೊಲದ ಮಧ್ಯದಲ್ಲಿ ಒಂದು ಭವ್ಯವಾದ ಆಲದ ಮರವಿದೆ. ಗಿಡದಡಿಯಲ್ಲಿಯೇ ಗಂಗಮ್ಮನ ನೆನಪಿಗಾಗಿ ಒಂದು ಕಲ್ಲನ್ನಿಟ್ಟಿದ್ದಾರೆ. ಹುಣ್ಣಿಮೆ ಆಮಾವಾಶ್ಯಗಳಲ್ಲಿ ಗಂಗಮ್ಮನಿಗೆ ಪೂಜೆ ಸಲ್ಲುತ್ತಿದೆ. ತ್ಯಾಗಿಗಳು ಸತ್ತರೆಂಬ ಮಾತು ಸುಳ್ಳು ಮಾಡಲು ಗಂಗಮ್ಮ ಆ ಊರ ಜನರ ಹೃದಯದಲ್ಲಿ ಇಂದಿಗೂ ವಾಸವಾಗಿದ್ದಾಳೆ!
*****

Latest posts by ವಾಡಪ್ಪಿ ಬಿ ಆರ್‍ (see all)