ಕೆಂಡದ ಕರುಳು ಕಪಿಲ್‍ದೇವ್

ಕೆಂಡದ ಕರುಳು ಕಪಿಲ್‍ದೇವ್

ವಿಶ್ವ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ಸ್ಥಾನವನ್ನು ಪರಿಶ್ರಮ, ಛಲ ಮತ್ತು ಕ್ರೀಡಾ ಬದ್ಧತೆಯ ಮೂಲಕ ಪಡೆದುಕೊಂಡ ಕಪಿಲ್‌ದೇವ್ ಅವರನ್ನು ಷಾರ್ಜ ಟೂರ್ನಿಗೆ ಆಯ್ಕೆ ಮಾಡಲಿಲ್ಲ. ಭುಜದ ನೋವಿಗಾಗಿ ವಿಶ್ರಾಂತಿ ಬಯಸಿದ್ದ ಕಪಿಲ್, ಮನೋಜ್ ಪ್ರಭಾಕರ್ ಅವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಸೇರಿಕೊಳ್ಳುವುದು ಅನಿವಾರ್ಯವಾದರೆ ಆಡಲು ಸಿದ್ಧವಿರುವುದಾಗಿ ಆಯ್ಕೆ ಸಮಿತಿ ಅಧ್ಯಕ್ಷ ಜಿ. ಆರ್. ವಿಶ್ವನಾಥ್ ಅವರಿಗೆ ತಿಳಿಸಿದ ನಂತರ ಸಮಿತಿಯು ಕಪಿಲ್ ಅವರಿಗೆ ‘ವಿಶ್ರಾಂತಿ’ಯನ್ನು ದಯಪಾಲಿಸುವುದರೊಂದಿಗೆ ಕಪಿಲ್ ‘ಅನಿವಾರ್ಯವಲ್ಲ’ವೆಂಬ ಮೌನ ಸೂಚನೆಯನ್ನು ಕೊಟ್ಟಿದೆ. ಕಪಿಲ್ ಹೇಳಿದ್ದು ‘ಅನಿವಾರ್ಯವಾದರೆ ಆಡುತ್ತೇನೆ’ ಎಂದು ತಾನೆ? ಹೀಗೆ ಹೇಳಿದಾಗ ಆಯ್ಕೆ ಮಾಡದಿದ್ದರೆ ‘ನೀನು ಅನಿವಾರ್ಯವಲ್ಲ’ ಎಂದೇ ತಿಳಿಸಿದಂತಾಯಿತು! ತಮ್ಮ ಕ್ರಿಕೆಟ್‌ ಜೀವನದಲ್ಲಿ ಯಾವತ್ತೂ ದೈಹಿಕ ಅನರ್ಹತೆಗೆ ವಿಶ್ರಾಂತಿ ಪಡೆಯದೆ, ಒಂದುವರೆ ದಶಕಕ್ಕೂ ಹೆಚ್ಚು ಕಾಲ ಬಾಲು ಬ್ಯಾಟ್, ಬೆವರು ಮತ್ತು ಬದುಕಿಗೆ ಅರ್ಥಪೂರ್ಣ ಸಂಬಂಧ ಸ್ಥಾಪಿಸಿದ ಕಪಿಲ್‌ದೇವ್‌ಗೆ ಸಿಕ್ಕಿದ ‘ವಿಶ್ರಾಂತಿ’ಯು ನಮ್ಮ ಕ್ರಿಕೆಟ್‌ನಲ್ಲಿ ಕ್ರೀಡಾಪಟುಗಳನ್ನಲ್ಲದೆ ವಿಶ್ರಾಂತಿಯನ್ನು ಆಯ್ಕೆ ಮಾಡುತ್ತಾರೆಂಬ ‘ಅದ್ಭುತ’ವನ್ನು ಅನಾವರಣಗೊಳಿಸಿದೆ. ಸ್ವಲ್ಪ ಸಮಯದ ನಂತರ ಕಪಿಲ್ ಪರವಾಗಿ ನಿವೃತ್ತಿಯನ್ನು ಆಯ್ಕೆಮಾಡಬಹುದು!

‌ಹೀಗೆಂದ ಕೂಡಲೆ ಕಪಿಲ್ ಅವರನ್ನು ಸದಾ ಆಯ್ಕೆ ಮಾಡುತ್ತಿರ ಬೇಕೆಂದೇನು ಅಲ್ಲ, ನಾನು ಆಡಲು ಅಶಕ್ತನಾದಾಗ ಒಂದು ಕ್ಷಣವೂ ಇರುವುದಿಲ್ಲವೆಂಬ ಮಾತನ್ನು ಸ್ವತಃ ಕಪಿಲ್ ಹೇಳಿರುವಾಗ ದೇಶಕ್ಕೆ ಗೌರವ ತಂದ, ಎದೆಯಾಳದಲ್ಲಿ ಕ್ರಿಕೆಟ್ಟಿನ ಕೆಂಡದ ಚೆಂಡನ್ನಿಟ್ಟುಕೊಂಡು ಬೆಳೆದ ಸಾಧಕನ ಬಗ್ಗೆ ಹೆಚ್ಚು ಸೌಜನ್ಯದಿಂದ ವರ್ತಿಸುವ ಅಗತ್ಯವಿತ್ತು. ಇಷ್ಟಕ್ಕೂ ಕಪಿಲ್‌ಗೆ ರಿಯಾಯಿತಿ ಕೊಟ್ಟು ಆಯ್ಕೆ ಮಾಡುವ ಅಗತ್ಯವೂ ಇರಲಿಲ್ಲ. ಮೊದಲಿನ ಮೊನಚಿಲ್ಲದಿರುವುದು ಸಹಜವೆಂದು ಒಪ್ಪಿಕೊಳ್ಳುವುದಾದರೆ, ನ್ಯೂಜಿಲೆಂಡ್ ಪ್ರವಾಸದಲ್ಲಿ ಕಪಿಲ್ ಕೆಟ್ಟದಾಗಿ ಆಡಿಲ್ಲವೆಂಬುದು ಮನವರಿಕೆಯಾಗುತ್ತದೆ. ಹಿಂದೆಯೂ ಕೆಲವು ಸಾರಿ ಕಪಿಲ್ ಅವರು ರನ್ ಮತ್ತು ವಿಕೆಟ್‌ಗಳ ಬರದಲ್ಲಿ ಕಂಗಾಲಾಗಿದ್ದರು. ಆದರೆ ಮತ್ತೆ ಬೂದಿಯಿಂದೆದ್ದು ಬರುವ ಫೀನಿಕ್ಸ್ ನಂತೆ ಮಿಂಚಿದರು. ಇತ್ತೀಚಿನ ಉದಾಹರಣೆಯೆಂದರೆ – ಹೀರೊಕಪ್‌ನ ಫೈನಲ್ ಪಂದ್ಯದಲ್ಲಿ ಕಪಿಲ್ ಬೌಲಿಂಗ್‌ನ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಜಯಸಿಂಹ ಮತ್ತು ವೆಂಗ್‌ಸರ್ಕಾರ್ ಅವರು ಕಪಿಲ್ ಅವರನ್ನು ಗೆಲುವಿನ ಕೇಂದ್ರ ವ್ಯಕ್ತಿಯನ್ನಾಗಿ ವಿಶ್ಲೇಷಣೆ ಮಾಡಿದ್ದಲ್ಲದೆ; ‘ಪಂದ್ಯ ಪುರುಷೋತ್ತಮ ಪ್ರಶಸ್ತಿ’ ಅವರಿಗೆ ಬರಬೇಕೆಂದು ಅಭಿಪ್ರಾಯಪಟ್ಟರು. ಕಪಿಲ್‌ಗಿಂತ ಹೆಚ್ಚು ವಿಕೆಟ್ ಪಡೆದ ಅನಿಲ್ ಕುಂಬ್ಳೆ ಅವರಿಗೆ ಈ ಪ್ರಶಸ್ತಿ ಸಂದರೂ ಕಪಿಲ್ ಇನ್ನೂ ಶಕ್ತಿಶಾಲಿ, ಛಲಗಾರ, ಎಂಬುದನ್ನು ಸಾಬೀತು ಮಾಡಿದ್ದಾರೆ. ತಮ್ಮ ಕ್ರಿಕೆಟ್ ಬದುಕಿನ ಏರಿಳಿತಗಳಲ್ಲಿ ನೋವು – ನಲಿವುಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತಾ ಬಂದ ಸಾಧಕನೊಬ್ಬನನ್ನು ಅಸೌಜನ್ಯದಿಂದ ನಡೆಸಿಕೊಂಡು ಅವಮಾನಿಸುವುದು, ಆತ್ಮವಿಶ್ವಾಸವನ್ನು ಕೆಣಕುವುದು, ಕೆಳದರ್ಜೆಯ ಚಪಲವೆಂದೇ ಹೇಳಬೇಕು. ಇಂಥ ಚಪಲಚೆನ್ನಿಗರಾಯ ನಂತೆ ಮಾತನಾಡುವ ರಾಜಾಸಿಂಗ್ ದುಂಗಾರ್‌ಪುರ್ ‘ಕಪಿಲ್ ದಾಖಲೆಯನ್ನೇ ಸ್ಥಾಪಿಸಿಲ್ಲ’ವೆಂದು ಸಾರಿದ್ದು ಕೇವಲ ಅಸಹನೆ ಅಸೂಯೆಗಳ ವರ್ತನೆಯಾಗಿದೆ. ಹಿಂದೊಮ್ಮೆ ಕ್ರಿಕೆಟ್ ನಾಯಕರಾಗಿದ್ದ ನಾರೀ ಕಂಟ್ರಾಕ್ಟರ್ ಅವರು ಯುವಕರಿಗೆ ಅವಕಾಶ ಕೊಡುವ ದೃಷ್ಟಿಯಿಂದ ಕಪಿಲ್ ನಿವೃತ್ತರಾಗಬೇಕೆಂದು ಅಪ್ಪಣೆ ಕೊಡಿಸಿದ್ದು ಅಷ್ಟೆ ಅಸಂಗತವಾದುದು. ಯುವ ಪ್ರತಿಭೆಗಳಿಗೆ ಅವಕಾಶ ವಿರಬೇಕೆಂಬ ಬಗ್ಗೆ ಎರಡನೇ ಮಾತಿಲ್ಲ. ಆದರೆ ಅದಕ್ಕಾಗಿ ಕಪಿಲ್ ತಲೆಯನ್ನು ಉರುಳಿಸುವ ತರ್ಕ ಅಸಂಬದ್ಧವಾದದು. ಯಾವುದೇ ಆಟಗಾರ ಅರ್ಹತೆಯಿರುವವರೆಗೂ ಆಡುವ ಹಕ್ಕನ್ನು ಪಡೆದಿರುತ್ತಾನೆಂಬುದೇ ಮುಖ್ಯವಾಗಬೇಕು. ‘ಕಪಿಲ್ ಇರಬೇಕು’ ಎಂದು ಮೊದಲು ಹೇಳುತ್ತಿದ್ದ ಅಜರ್ ಆನಂತರ ‘ಗವಾಸ್ಕರ್ ಗೌರವಯುತವಾಗಿ ನಿವೃತ್ತರಾದರು’ ಎಂದು ಪರೋಕ್ಷ ಸೂಚನೆ ಕೊಟ್ಟಿದ್ದು ಆಟಗಾರನೊಬ್ಬನ ಹಕ್ಕನ್ನು ಕಿತ್ತುಕೊಳ್ಳುವ ಕೆಟ್ಟ ಅಭಿರುಚಿಯ ಹುನ್ನಾರವಾಗಿದೆ.

ಹಾಗೆ ನೋಡಿದರೆ ಕಪಿಲ್‌ದೇವ್ ಕ್ರಿಕೆಟ್ ಆಟಗಾರರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಬಂಡಾಯಗಾರ. ರಿಲಿಯನ್ಸ್ ವಿಶ್ವ ಕಪ್ ಪಂದ್ಯಾವಳಿಗಳು ನಡೆಯುವುದಕ್ಕೆ ಮುಂಚೆ ಆಟಗಾರರ ಆರ್ಥಿಕ ಹಕ್ಕುಗಳ ಪರವಾಗಿ ಕ್ರಿಕೆಟ್ ಮಂಡಳಿ ಜೊತೆ ಜಗಳ ಕಾದು ಅವಕೃಪೆಗೆ ಈಡಾಗಿದ್ದ ಕಪಿಲ್, ಮುಂದೊಂದು ದಿನ ಇದೇ ಮಂಡಳಿ ವಿರುದ್ಧ ಇತರೆ ಮೂರಾಲ್ಕು ಜನ ಆಟಗಾರರೊಂದಿಗೆ ಕೋರ್ಟ್ ಕಟ್ಟೆಯನ್ನು ಹತ್ತಿದ್ದುಂಟು. ಜೊತೆಗೆ ತನ್ನ ಸಹ ಆಟಗಾರರಿಗೆ ಆದಾಯ ತರುವ ಜಾಹೀರಾತು ಒಪ್ಪಂದಗಳನ್ನು ಮಾಡಿಸಿ ಕೊಟ್ಟ ಸ್ನೇಹಜೀವಿಯೂ ಹೌದು. ಕ್ರಿಕೆಟ್ ಬದುಕು ಬೇಗ ಮುಗಿಯುವುದರಿಂದ ಆಟದ ಉತ್ತುಂಗದಲ್ಲಿರುವ, ಅವಕಾಶವಿದ್ದಾಗ, ಜೀವನ ಭದ್ರತೆಗಾಗಿ ಹೆಚ್ಚು ಹಣ ಕೇಳುವುದು, ಜಾಹೀರಾತುಗಳಿಗಾಗಿ ತವಕಿಸುವುದು ತಪ್ಪಿಲ್ಲವೆಂದು ನೇರವಾಗಿ ಕ್ರಿಕೆಟ್ ಮಂಡಳಿಗೆ ಹೇಳಿದ, ತಂಡದ ನಾಯಕ ಕಪಿಲ್ ದೇವ್, ಮುಂದೆ ನಾಯಕತ್ವ ಕಳೆದುಕೊಂಡರು. ನಾನು ಇನ್ನೂ ಹದಗೊಳ್ಳದೆ ಇದ್ದಾಗ ನಾಯಕತ್ವ ಕೊಟ್ಟಿದ್ದು ಮತ್ತು ಹದಗೊಂಡು ನಾಯಕತ್ವ ಕಿತ್ತು ಕೊಂಡದ್ದು – ಎರಡೂ ತಪ್ಪೆಂದು ಅಭಿಪ್ರಾಯ ಪಡುವ ಕಪಿಲ್ ಮುಚ್ಚು ಮರೆಯ ಮನುಷ್ಯನಲ್ಲ: ನರಿ ಬುದ್ಧಿಯಲ್ಲಿ ಬಾಳಿನ ಬೇಳೆ ಬೇಯಿಸುವ ಕಪಟಿಯಲ್ಲ. ಈ ಕಾರಣದಿಂದಲೇ ಸುದ್ದಿ ಮಾಧ್ಯಮದವರ ಮುದ್ದಿನ ಮನುಷ್ಯನಾಗಿರಲಿಲ್ಲ. ವಿಶ್ವಕಪ್ ಗೆದ್ದ ಏಕೈಕ ಭಾರತೀಯ ಕ್ರಿಕೆಟ್ ನಾಯಕನಾಗಿದ್ದರೂ ನಾಯಕತ್ವದ ಬುದ್ಧಿಯಿಲ್ಲವೆಂದು ಬರೆಯುತ್ತ ಬಂದವರ ಮುಸುಕಿನ ಗುದ್ದುಗಳನ್ನು ಮುಗುಳ್ನಗೆಯಲ್ಲೇ ಮೆತ್ತಗೆ ಮಾಡುತ್ತ ಮೈದಾನೇತರ ಮಸಲತ್ತುಗಳನ್ನು ಕ್ರಿಯಾಶಕ್ತಿಯಿಂದಲೇ ಮಣ್ಣು ಮುಕ್ಕಿಸುತ್ತ ಪಕ್ಕಾ ಮಣ್ಣಿನ ಮನುಷ್ಯನಾಗಿ ಬೆಳೆದ ಕಪಿಲ್‌ದೇವ್, ಕ್ರಿಕೆಟ್ ಕಣ್ಣಾಗಿ ರೂಪು ಗೊಂಡಿದ್ದಾರೆ. ನಮ್ಮ ಅಂಗಾಂಗಗಳೆಲ್ಲ ಸಮಾನವೇ ಆಗಿದ್ದರೆ ಕಣ್ಣಿಗೆ ಮಾತ್ರ ಇರುವ ಸ್ಥಿತಿಯನ್ನು ದಾಟಿದ ದೂರವನ್ನು ಕಾಣಲು ಸಾಧ್ಯ. ಅಂತ ಆಗಾಧ ದೂರಗಳನ್ನು ಕಾಣುತ್ತ, ದಾಟುವ ಧೀಮಂತ ಕನಸನ್ನು ಕಣ್ಣಲ್ಲಿ ತುಂಬಿಸಿಕೊಳ್ಳಲು ಸಾಧ್ಯವಾದದ್ದು, ಸಾಧಿಸಿದ್ದು, ಸತ್ಯ ಸಂಗತಿಯಾಗಿ ಎದುರಿಗೇ ಇರುವುದರಿಂದ ಕಪಿಲ್‌ದೇವ್ ಕ್ರಿಕೆಟ್‌ನ ಕಣ್ಣಾಗಿದ್ದಾರೆ; ಅಷ್ಟೇ ಅಲ್ಲ ಕ್ರಿಕೆಟ್‌ನ ಕರುಳೂ ಆಗಿದ್ದಾರೆ. ಕಣ್ಣಾಗಿರುವುದು ಎಷ್ಟು ಮುಖ್ಯವೋ ಕರುಳಾಗಿರುವುದು ಅದಕ್ಕಿಂತ ಮುಖ್ಯ ಎಂದು ನಾನು ಭಾವಿಸಿದ್ದೇನೆ. ಈ ಮಾತನ್ನು ಕೆಳಕಂಡಂತೆ ವಿವರಿಸುತ್ತೇನೆ.

ಕಟ್ಟಿಗೆ ವ್ಯಾಪಾರಿಯೊಬ್ಬನ ಮಗನಾಗಿ ಹುಟ್ಟಿದ ಕಪಿಲ್‌ದೇವ್ ಕಡುಬಡವರಾಗಿ ಬೆಳೆಯದಿದ್ದರೂ ಸಾಮಾಜಿಕವಾಗಿ – ಆರ್ಥಿಕವಾಗಿ ಉತ್ತಮವಲ್ಲದ ವಲಯಕ್ಕೆ ಸೇರಿದವರು. ಬಾಲ್ಯದಲ್ಲಿ ಕ್ರಿಕೆಟ್ ಕ್ಯಾಂಪಿಗೆ ಸೇರಲು ಅಪ್ಪ ಹಣ ಕೊಡದಿದ್ದಾಗ ನಮ್ಮ ಎಲ್ಲ ಹಳ್ಳಿ ಹುಡುಗರಂತೆ ಆತಂಕಿಸಿ, ಅತ್ತು ಕರೆದು, ಅಮ್ಮನ ಮೂಲಕ ರಾಯಭಾರ ಮಾಡಿಸಿದವರು. ಮನುಷ್ಯ ಸಂಬಂಧಗಳನ್ನು ಸದಾ ಕಾಪಾಡಿಕೊಳ್ಳ ಬಯಸುವ ಇವರು ಇತ್ತೀಚೆಗೆ ಚಂಡಿಗಢದಲ್ಲಿ ಕ್ರಿಕೆಟ್ ಪಂದ್ಯ ನಡೆದಾಗ ತಮ್ಮ ಬಾಲ್ಯ ಸ್ನೇಹಿತರಿಗಾಗಿ ೨೦೦ ಟಿಕೆಟ್‌ಗಳನ್ನು ತಾವೇ ಖರೀದಿಸಿಕೊಟ್ಟವರು. ತಮಗೆ ಸಹಾಯ ಮಾಡಿದವರನ್ನು ಮರೆಯದೆ ಸ್ಮರಿಸುವ ಕಪಿಲ್ ಇವತ್ತು ಕೋಟಿ ರೂಪಾಯಿಗಳ ಕಾರಾಗೃಹ ಸೇರಿದ್ದರೂ, ಅಲ್ಲಿಂದ ಬಿಡುಗಡೆಗೊಳ್ಳುವ ಒಳಹೋರಾಟದಲ್ಲಿ ಸರಳತೆ, ಸಜ್ಜನಿಕೆಗಳನ್ನು ಸಹಜಗುಣವಾಗಿಸಿಕೊಂಡ ವ್ಯಕ್ತಿತ್ವವನ್ನು ಪಡೆದಿದ್ದಾರೆ. ಅಂತರಂಗದೊಳಗೆ ಬೈಯುವ ವ್ಯಕ್ತಿ ಮಾತ್ರ ಆಳಬಲ್ಲ, ಆನಂದಪಡಬಲ್ಲ, ಅನ್ಯರಿಗಾಗಿ ಹಾರೈಸಬಲ್ಲ. ಕಪಿಲ್ ತನ್ನ ಬದುಕಿನಲ್ಲಿ ಇಂಥ ಗುಣಗಳನ್ನು ಅಳವಡಿಸಿಕೊಂಡಿದ್ದರಿಂದಲೇ ಅಂತರಂಗದಲ್ಲಿ ಆದ್ರತೆಯನ್ನು ಕಾಪಾಡಿಕೊಂಡಿದ್ದಾರೆ. ರಾಜಾಸಿಂಗ್ ದುಂಗಾರ್‌ಪುರ್ ಮತ್ತು ಕಪಿಲ್ ನಾಯಕರಾದ ಮೇಲೆ ತಮಗೆ ಅನ್ಯಾಯ ಮಾಡಿದರೆಂದು ಹೇಳಿಕೊಳ್ಳುವ ಹಿಂದಿನ ಕ್ರಿಕೆಟ್‌ಪಟು, ಈಗಿನ ಪಂಜಾಬಿ ಚಿತ್ರನಟ ಯೋಗ್ ರಾಜ್‌ಸಿಂಗ್‌ರಂಥವರು ಯಾವಾಗಲೂ ಇರುತ್ತಾರೆ. ಕಪಿಲ್‌ದೇವ್ ಸಹ ಒಬ್ಬ ಮನುಷ್ಯನೇ ಆಗಿರುವುದರಿಂದ ತಪ್ಪುಗಳನ್ನು ಮಾಡಿರಬಹುದು. ಆದರೆ ಅವರು ಅಸೂಯೆಯಿಂದ ವರ್ತಿಸಿದ ಉದಾಹರಣೆಗಳು ಕಾಣಿಸುವುದಿಲ್ಲ. ಇದಕ್ಕೆ ಬದಲಾಗಿ ಅನ್ಯರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲೆ. ದಕ್ಷಿಣ ಆಫ್ರಿಕಾದಿಂದ ಸೋತು ಬಂದಾಗ ಅಜರ್ ಅವರನ್ನು ನಾಯಕತ್ವದಿಂದ ವಜಾ ಮಾಡಿ ತನಗೆ ಜವಾಬ್ದಾರಿ ವಹಿಸಿದರೆ ತಾನು ಒಪ್ಪಿಕೊಳ್ಳುವುದಿಲ್ಲವೆಂದು ಅಜರ್‌ಗೇ ಹೇಳಿದ ದೊಡ್ಡ ಮನುಸ್ಸುಳ್ಳ ವ್ಯಕ್ತಿ ಕಪಿಲ್‌ದೇವ್. ಹೀಗೆ, ಮಿಡಿಯುವ ಮನಸ್ಥಿತಿಯ ಕಪಿಲ್ ಕರುಳಿನ ಸಂವೇದನೆಯಿರುವುದು ಒಟ್ಟು ವ್ಯಕ್ತಿತ್ವದಲ್ಲಿ ವ್ಯಕ್ತವಾಗುತ್ತದೆ. ಅಷ್ಟೇ ಅಲ್ಲ, ಕ್ರಿಕೆಟ್ ಎನ್ನುವುದು ಕಪಿಲ್ಗೆ ಕರುಳು ಹೌದು; ಕೆಂಡವು ಹೌದು. ಕ್ರಿಕೆಟನ್ನು ಒಬ್ಬ ಕರುಳಿಗನಾಗಿ ಪ್ರೀತಿಸುತ್ತ ಬಂದದ್ದರಿಂದಲೇ ಕಪಿಲ್‌ಗೆ ವಿಶ್ವದಾಖಲೆಯ ಸಾಧನೆ ಸಾಧ್ಯವಾಗಿದೆ. ಆದರೆ ನಾನು ಕರುಳ ಪ್ರೀತಿಯಲ್ಲಿ ಕೈಹಿಡಿದ ಕ್ರಿಕೆಟ್ ಕೆಂಡವಾಗಿಯೂ ಕಪಿಲ್‌ರನ್ನು ಕಾಡಿಸಿದೆ. ಸ್ವತಃ ಕಪಿಲ್‌ರಲ್ಲೇ ಕೆಂಡ ಮತ್ತು ಕರುಳು ಎರಡೂ ಮೇಳೈಸಿ ಮನಸ್ಸನ್ನು ರೂಪಿಸಿವೆ. ಕಪಿಲ್ ಕೆಂಡವಾಗಿರ ಬಲ್ಲರು; ಕರುಳಾಗಿರಬಲ್ಲರು. ಸದಾ ತನ್ನ ತಾಯಿಯನ್ನು ಜ್ಞಾಪಿಸಿಕೊಳ್ಳುವ, ದಾಖಲೆ ಸರಿಗಟ್ಟಿದ ಸಮಯದ ಕಳವಳಗಳಿಂದ ಹೊರಬರುವ ಹೋರಾಟದಲ್ಲಿ ಆಟದ ಸ್ಥಳಕ್ಕೆ (ಬೆಂಗಳೂರಿಗೆ) ಹೆಂಡತಿಯನ್ನು ಕರೆಸಿಕೊಳ್ಳುವ, ಹುಟ್ಟಿಲ್ಲದ ಮಗುವಿಗಾಗಿ ಕನವರಿಸುವ, ಈ ಕರುಳಿಗ ಕಪಿಲ್‌ದೇವ್ ಕೆಂಡದ ಅನುಭವಗಳಿಂದಲೇ ಕರುಳನ್ನು ಪಡೆದಿದ್ದಾರೆ. ಹಕ್ಕಿನ ವಿಷಯ ಬಂದಾಗ ಕೆಂಡವಾಗುವ ಈ ವ್ಯಕ್ತಿ ಕೆಂಡದಲ್ಲಿ ಕರುಳನ್ನು ಕರುಳಲ್ಲಿ ಕೆಂಡವನ್ನು ಒಟ್ಟಿಗೆ ಇಟ್ಟುಕೊಂಡ ಕಟ್ಟಾ ಆಶಾವಾದಿ. ಈ ಕೆಂಡದ ಕರುಳಿನ ವ್ಯಕ್ತಿತ್ವಕ್ಕೆ ಕ್ರಿಕೆಟ್ ಸಹ ಕೆಂಡದ ಕರುಳೇ ಆದದ್ದು ಎಂಥ ವಿಚಿತ್ರ!

ಇಂಡಿಯಾದಂಥ ಶ್ರೇಣೀಕೃತ ಸಮಾಜದಲ್ಲಿ ಸಾಮಾಜಿಕವಾಗಿ ಸಾಮಾನ್ಯವಾದ ನೆಲೆಯಿಂದ, ಆರ್ಥಿಕವಾಗಿ ಅಷ್ಟೇನೂ ಉತ್ತಮವಲ್ಲದ ವಲಯದಿಂದ, ಬಂದ ಕಪಿಲ್‌ದೇವ್‌, ಜಾತಿ ಮತ್ತು ವರ್ಗಗಳ ಕಟ್ಟುಕಟ್ಟಳೆಗಳನ್ನು ಮೀರಿ ಕ್ರೀಡಾ ಬದ್ಧತೆಯಿಂದ ಬೆಳೆದ ಅಪರೂಪದ ಸಾಧಕ. ಚೆನ್ನಾಗಿ ಇಂಗ್ಲಿಷ್ ಬಾರದಿರುವ ಕಾರಣಕ್ಕೆ ಎಲೈಟ್ ಸಂಸ್ಕೃತಿಯ ಹುಸಿ ಬುದ್ಧಿವಂತರಿಂದ ಅಪಹಾಸ್ಯಕ್ಕೊಳಗಾದರೂ ಕೀಳರಿಮೆ ಕಟ್ಟುಗಳನ್ನು ಕಿತ್ತೆಸೆದು, ಸಂಕಲ್ಪ ಶಕ್ತಿಯ ಸಂಕೇತವಾಗಿ, ಆತ್ಮ ವಿಶ್ವಾಸದ ಪ್ರತೀಕವಾಗಿ ರೂಪುಗೊಂಡದ್ದು ಶ್ರೇಣೀಕೃತ ಸಮಾಜದ ಸಂದರ್ಭದಲ್ಲಂತೂ ಅತ್ಯಂತ ಮಹತ್ವದ ಸಂಗತಿ. ಈ ದೃಷ್ಟಿಯಿಂದ, ಕಪಿಲ್‌ದೇವ್ ಒಂದು ಸಾಮಾಜಿಕ ಶಕ್ತಿಯಾಗಿದ್ದಾರೆ. ಹುಸಿ ಸಂಸ್ಕೃತಿಗೆ ವಿರುದ್ಧವಾದ ಜನ ಸಂಸ್ಕೃತಿಯ ಕೆಲವು ಕ್ಷಣಗಳನ್ನು ಪ್ರಜ್ಞಾ ಪೂರ್ವಕವಾಗಿಯೇ ಅಪ್ರಜ್ಞಾಪೂರ್ವಕವಾಗಿ ಪ್ರತಿನಿಧಿಸಿದ್ದಾರೆ. ಇದರಿಂದ ಕಪಿಲ್‌ದೇವ್ ಅವರನ್ನು ಆಯ್ಕೆ ಸಮಿತಿ ಮರೆತರೂ ನಿಜವಾದ ಜನ ಮರೆಯುವುದಿಲ್ಲ.
*****
೨೪-೦೪-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಟೆ
Next post ಒಂದೊಂದು ಹೂವಿನ ದಳ

ಸಣ್ಣ ಕತೆ

 • ಬಿರುಕು

  ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

 • ಆಪ್ತಮಿತ್ರ

  ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ರಾಧೆಯ ಸ್ವಗತ

  ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys