ನಾನು ಸೊಲ್ಲಾಪುರವನ್ನು ನೋಡಿದ್ದು ೧೯೯೨ ರಲ್ಲಿ, ಅಲ್ಲಿನ ನಗರಸಭೆಯ ಕಛೇರಿಯ ಕಂಡು ಬೆಚ್ಚಿ ಬಿದ್ದದ್ದು! ಅದರ ಕತೆ ತಿಳಿದುಕೊಂಡಿದ್ದು.
ಆ ನಂತರ ನಾನು ಬಸವ ಕಲ್ಯಾಣವನ್ನು ಕಂಡಿದ್ದು ೧೯೯೨ ರಲ್ಲಿ, ಅಲ್ಲಿ ಶಿವಶರಣಿ ಡಾ|| ಜಯದೇವಿ ತಾಯಿ ಲಿಗಾಡೆಯವರ ಮನೆ ಕಂಡು ಪುನೀತನಾದದ್ದು.
ಅವರ ಹಿನ್ನಲೆ ತಿಳಿದು ಪ್ರಭಾವಿತನಾಗಿದ್ದು….
ನಾನು ೧೯೯೨ ರಿಂದ ೧೯೯೫ ರವರೆಗೆ ಬಸವ ಕಲ್ಯಾಣದಲ್ಲಿದ್ದಾಗ ಅವರ ಸಾಹಿತ್ಯದ ಕೃತಿಗಳಾದ… ಬಂದೇವ ಕಲ್ಯಾಣಕ, ಬಸವ ದರ್ಶನ, ಅಣ್ಣ ಬಸವಣ್ಣ, ಶೂನ್ಯ ಸಂಪಾದನೆ, ಸಿದ್ಧವಾಣಿ, ಸಮೃದ್ಧ ಕರ್ನಾಟಕಾಂಚಿ ರೂಪರೇಷಾ, ಸಿದ್ಧರಾಮಾಂಚೀ ತ್ರಿವಿಧ… ಶ್ರೀ ಸಿದ್ಧರಾಮೇಶ್ವರ ಪುರಾಣ, ತಾರಕ ತಂಬೂರಿ, ವೀರಶೈವ ಪರಂಪರೆಯ ಸಿದ್ಧರಾಮ ಪುರಾಣ, ಸಾವಿರದ ಪದಗಳು, ಸಿದ್ಧರಾಮ, ಮಹಾಯೋಗಿನಿ, ಬಸವ ವಚನಾಮೃತ, ಸಿದ್ಧ ಲಿಂಗವಾಣಿ, ತಾಯಿ ಪದಗಳು, ಜಯಗೀತ… ಕಂಡಿದ್ದು !
ಹೀಗೆ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ, ಮರಾಠಿ, ಹಿಂದಿ ಮೂರು ಭಾಷೆಗಳಲ್ಲಿ ಖ್ಯಾತ ನಾಮರಾಗಿರುವರು.
ಡಾ|| ಜಯದೇವಿ ತಾಯಿ ಲಿಗಾಡೆಯವರು ಹುಟ್ಟಿದ್ದು ! ದಿನಾಂಕ ೨೩-೦೬-೧೯೧೨ ರಲ್ಲಿ. ಸೊಲ್ಲಾಪುರದ ಇಂದ್ರಭವನದಲ್ಲಿ, ತಂದೆ- ಚೆನ್ನಬಸಪ್ಪ ಮಡಕಿ, ತಾಯಿ ಸಂಗಮ್ಮ ಮಡಕಿ. ಸಂಗಮ್ಮ ಮಡಕಿಯವರ ಅಜ್ಜ ವಾರದ ಮಲ್ಲಪ್ಪ ಭಾರೀ ಶ್ರೀಮಂತರಲ್ಲಿ ಒಬ್ಬರು ! ಇವರ ಇಂದ್ರಭವನ ವಾಡೆ ಇಂದು ನಗರ ಸಭೆಯ ಕಛೇರಿಯಾಗಿದೆ ! ಒಮ್ಮೆ ನೋಡಿ ಸಂಭ್ರಮಿಸಿ….
ಡಾ|| ಜಯದೇವಿ ತಾಯಿ ಲಿಗಾಡೆಯವರು ಅಲ್ಲಿನ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಆರನೆಯ ತರಗತಿವರೆಗೆ ಕಲಿತರು. ತಮ್ಮ ೧೪ ನೆಯ ವಯಸ್ಸಿಗೇ ಅಲ್ಲಿ ಲಿಗಾಡೆ ಮನೆತನದ ಚೆನ್ನಮಲ್ಲಪ್ಪ ಎಂಬ ೧೬ ವರ್ಷದ ಹುಡುಗನೊಂದಿಗೆ ೧೯೨೬ ರಲ್ಲಿ ಮದುವೆಯಾದರು. ಮೂರು ಗಂಡು ಎರಡು ಹೆಣ್ಣು ಮಕ್ಕಳು ತಾಯಿಯಾದರು. ತಮ್ಮ ೩೪ ನೆಯ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ಶಿವ ಶರಣೆಯಾದಳು. ಮಹಾಶರಣೆ ಕಲಿಯುಗದ ಅಕ್ಕ ಮಹಾದೇವಿಯಾದಳು. ತನ್ನನ್ನು ತಾನು ಅರಿಯಲು ಮರೆಯಲು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡು ಉತ್ತಮ ಬೆಳೆ ತೆಗೆದಳು. ಹೆಸರು ಮಾಡಿದಳು.
ಜೀವನದ ಕೊನೆಯ ದಿನಗಳನ್ನು ಅಣ್ಣ ಬಸವಣ್ಣನವರ ಕರ್ಮ ಭೂಮಿ, ತಪೋ ಭೂಮಿ, ವೀರಭೂಮಿ ಬಸವಕಲ್ಯಾಣಕ್ಕೆ ಬಂದರು. ಅಲ್ಲಿ ಸುಖ ಶಾಂತಿ ನೆಮ್ಮದಿಯ ಬೋಧಿಸುತ್ತಾ… ೭೪ ವರ್ಷ ಬಾಳಿದರು. ದಿನಾಂಕ ೨೪-೦೭-೧೯೮೬ ರಲ್ಲಿ ಲಿಂಗೈಕ್ಯರಾದರು. ಕನ್ನಡ ಸಾಹಿತ್ಯ ಬಡವಾಯಿತು.
ಹುಟ್ಟು ಹೋರಾಟಗಾರ್ತಿ, ಅಪ್ಪಟ ಶಿವಶರಣೆ, ಕನ್ನಡ ನಾಡಿನ ವೀರ ಪುತ್ರಿ ಸಾಹಿತ್ಯ ದಿಗ್ಗಜೆಗೆ ಹಲವಾರು ಪ್ರಶಸ್ತಿ ಸನ್ಮಾನಗಳು ಲಭಿಸಿದ್ದವು…..
೧೯೫೧ ರಲ್ಲಿ – ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾಗೋಷ್ಠಿಯ ಅಧ್ಯಕ್ಷತೆ.
೧೯೬೮ ರಲ್ಲಿ- ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
೧೯೭೨ ರಲ್ಲಿ – “ಜಯದೇವಿ” ಎಂಬ ಅಭಿನಂದನಾ ಗ್ರಂಥದ ಗೌರವ.
೧೯೭೪ ರಲ್ಲಿ – ಮಂಡ್ಯದಲ್ಲಿ ಜರುಗಿದ ೪೮ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಧಾರವಾಡದ ಕ.ವಿ.ವಿದ್ಯಾಲಯದ ಗೌರವ ಡಾಕ್ಟರೇಟ್. ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಕ.ವಿ.ವಿ. ಸೆನೆಟ್ ಸದಸ್ಯತ್ವ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವ ಹುಬ್ಬಳ್ಳಿ, ತುಮಕೂರುಗಳಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಪರಿಷತ್ತಿನ ಸಮ್ಮೇಳನಗಳ ಅಧ್ಯಕ್ಷತೆ, ಉಡುಪಿಯಲ್ಲಿ ಜರುಗಿದ ವಿಶ್ವ ಹಿಂದೂ ಪರಿಷತ್ತಿನ ಮಹಾಗೋಷ್ಠಿಯ ಅಧ್ಯಕ್ಷತೆ.
-ಹೀಗೆ ನೂರಾರು ಪುರಸ್ಕಾರಗಳು ಅವರನ್ನು ಹರಸಿ ಬಂದಿವೆ. ಇಂದಿಗೂ ಇವರು ಸ್ಫೂರ್ತಿಯ ಸೆಲೆಯಾಗಿ ಸಾಹಿತ್ಯದ ಅಲೆಯಾಗಿ ನಮ್ಮ ಮಧ್ಯೆ ಜೀವಂತವಿರುವರು, ಜೀವನವೆಂದರೆ… ಇದಲ್ಲವೇ ?
*****