ಮತ್ತೆ ಬಂದ ವಸಂತ

ಮತ್ತೆ ಬಂದ ವಸಂತ

ಚಿತ್ರ: ಆಮಿ

ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ – ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ – ಗೆಳತಿಯರಾಗಿರೋಣ’. ಅವಳ ಮಾತು ಅವನಿಗೆ ಅರ್ಥವಾಯಿತೋ, ಅಲ್ಲ ಕೇಳುವ ವ್ಯವಧಾನ ಇರಲಿಲ್ಲವೋ ಆವನಂತೂ ಆ ಬಗ್ಗೆ ಏನೂ ಅನ್ನಲಿಲ್ಲ. ಬಹುಶಃ ಅವಳ ಮಾತನ್ನು ಅವನು ಸರಿಯಾಗಿ ಕೇಳಿಸಿಕೊಳ್ಳಿಲಿಲ್ಲವೋ? ಅವಳಂತೂ ಆ ವಿಷಯವನ್ನು ಅಲ್ಲಿಗೇ ಮರೆತುಬಿಟ್ಟಿದ್ದಳು. ಆದರೆ ಒಂದು ವಾರದ ಬಳಿಕ ಸಮುದ್ರ ಕಿನಾರೆಯ ಮರಳ ರಾಶಿಯ ಮೇಲೆ ಕುಳಿತು ಸೂರ್ಯಾಸ್ತಮಾನವನ್ನು ವೀಕ್ಷಿಸುತ್ತಿದ್ದಂತೆ ಮಧು ಏನೋ ನೆನಪಿಸಿ ಕೇಳಿದ. ‘ಯಶೂ, ಅಂದು ನೀನು ಗಂಡ – ಹೆಂಡತಿಯಾಗಿರುವುದು ಬೇಡ ಅಂದಿಯಲ್ಲ ? ಏನದರ ಅರ್ಥ?’ ಯಶೋಧೆ ನಕ್ಕು ಸುಮ್ಮನಾದಳು. ಆದರೆ ಮಧು ಸುಮ್ಮನಾಗಲಿಲ್ಲ. ಪುನಃ ಅದೇ ಪ್ರಶ್ನೆ. ಮದುವೆಯಾಗಿ ಬರೇ ಹತ್ತು ದಿವಸ ಆಗಿರಲಿಲ್ಲ. ಮಧುವಿನ ನಡತೆ, ಗುಣ, ಹವ್ಯಾಸ, ಒಂದೊಂದನ್ನೆ ಯಶೋಧೆ ಅರ್ಥ ಮಾಡ ತೊಡಗಿದಳು. ತನ್ನ ಗಂಡ ತಾನು ತಿಳಿದುಕೊಂಡಷ್ಟು ಮೃದು ಸ್ವಭಾವದ ವ್ಯಕ್ತಿಯಲ್ಲವೆಂದು ಅವಳಿಗೆ ತಿಳಿಯತೊಡಗಿತು.

“ಎಂದೋ ಹೇಳಿದ ಮಾತಿನ ಅರ್ಥವನ್ನು ಇಂದು ಕೇಳುತ್ತೀರಲ್ಲಾ” ಅವಳಂದಳು. “ಏನೇ. ಆಗಲಿ. ನನಗೆ ನಿನ್ನ ಮಾತು ಆರ್ಥವಾಗಿಲ್ಲ. ಈಗ ತಿಳಿಯುವ ಅಂತ ಅನಿಸುತ್ತೆ. ಹೇಳು ನಾವು ಗೆಳೆಯ – ಗೆಳತಿಯರಾಗಿರೋಣ ಎಂಬ ಮಾತಿನ ಅರ್ಥವೇನು?” ಅವನು ಸಮುದ್ರದ ಅಲೆಯನ್ನು ದಿಟ್ಟಿಸುತ್ತಾ ಕೇಳಿದ. ಯಶೋಧೆ ಮಧುವಿನ ಮುಖ ನೋಡಿದಳು. ಅವನ ಮುಖದಲ್ಲಿ ಒಂದು ರೀತಿಯ ಗಂಭೀರತೆಯಿತ್ತು. ತಾನೀಗ ವಿವರವಾಗಿ ವಿಷಯವನ್ನು ಬಿಡಿಸಿ ಹೇಳದಿದ್ದರೆ, ಮಧು ಸುಮ್ಮನಿರುವುದಿಲ್ಲವೆಂದು ಯಶೋಧೆಗೆ ಗೊತ್ತಿತ್ತು. ಮಧುವಿನಲ್ಲಿ ಹಾಸ್ಯ ಪ್ರಜ್ಞೆಯಿಲ್ಲ. ಇನ್ನೊಬ್ಬನನ್ನು ಅರ್ಥ ಮಾಡಿಸಿಕೊಳ್ಳುವ ಗೋಜಿಗೂ ಹೋಗದ ವ್ಯಕ್ತಿ. ಸ್ವಲ್ಪಮಟ್ಟಿಗೆ ‘ಒರಟ’ ಎಂದು ಹೇಳಿದರೂ ತಪ್ಪಾಗದು.

ಅಲ್ಲದೆ ಮಿತಿಮೀರಿದ ‘ಅಹಂ’ ಹೊತ್ತು ಕೊಂಡು ಬದುಕನ್ನು ಎದುರಿಸುವವ ಎಂದು ಯಶೋಧೆಗೆ ಬರೇ ಹತ್ತು ದಿನದಲ್ಲಿ ತಿಳಿದು ಹೋಗಿತ್ತು. ನಾನಂದು ಆ ವಾಕ್ಯವನ್ನು ಹೇಳಬಾರದಿತ್ತೇನೋ ಎಂದು ಅವಳಿಗೆ ಅನಿಸತೊಡಗಿತು. ಒಬ್ಬ ವ್ಯಕ್ತಿಯನ್ನು ಸರಿಯಾಗಿ ಅರ್ಥ ಮಾಡಲು ಕಡಿಮೆ ಪಕ್ಷ ಆರು ತಿಂಗಳು ಬೇಕಂತೆ. ನಾನು ಅವಸರ ಪಟ್ಟುಕೊಂಡೆ ಎಂದು ಮನಸ್ಸಿನಲ್ಲೇ ಅಂದುಕೊಂಡಳು.

“ತಪ್ಪು ತಿಳಿದುಕೊಳ್ಳಬೇಡಿ, ನನ್ನ ವೈಯಕ್ತಿಕ ಅಭಿಪ್ರಾಯವನ್ನು ಮಾತ್ರ ನಿಮ್ಮ ಮುಂದಿಟ್ಟಿದ್ದೆ. ಗಂಡ – ಹೆಂಡತಿ ಅಂದ ಕೂಡಲೇ, ಸರ್ವ ಸಾಮಾನ್ಯವಾಗಿ ಗಂಡ ತಾನು ಹೇಳಿದಂತೆ ಎಲ್ಲಾ ನಡೆಯಬೇಕು. ತನ್ನ ತೀರ್ಮಾನವೇ ಅಂತಿಮ. ತಾನು ಏನು ಕ್ರಮ ಕೈಗೊಳ್ಳುತ್ತೇನೆಯೋ ಅದನ್ನು ಹೆಂಡತಿಯಾದವಳು ಒಪ್ಪಬೇಕು ಎಂಬ ಭಾವನೆಗಳಿರುತ್ತದೆ. ಆ ರೀತಿ ನಮ್ಮ ಜೀವನ ಹೋಗುವುದು ಬೇಡ. ನಾವು ವಿಭಿನ್ನ ಸಂಸ್ಕೃತಿಯಲ್ಲಿ ಬೆಳೆದವರು. ವಿದ್ಯಾವಂತರು. ವಿಭಿನ್ನ ಹವ್ಯಾಸ, ಗುಣ, ನಡತೆ ಹೊಂದಿರುತ್ತೇವೆ. ನಮ್ಮದು ವಿಭಿನ್ನ ರೀತಿಯ ಗುರಿಯಿರಬಹುದು. ಹೊಂದಿಕೊಂಡು ಹೋಗಲು ಸಮಯಾವಕಾಶ ಬೇಕು. ಇಲ್ಲಿ ನಾ ಮೇಲು ನೀ ಕೀಳು ಎಂಬ ಭಾವನೆ ಬರಬಾರದು. ಯಾವುದೇ ವಿಷಯವನ್ನು ಸಮಾಧಾನದಿಂದ ಚರ್ಚಿಸಿಕೊಂಡು, ತೀರ್ಮಾನಕ್ಕೆ ಬರದಿದ್ದರೆ, ತೊಂದರೆಗಳಾಗಬಹುದು. ಅದಕ್ಕಾಗಿ ಗೆಳೆಯ – ಗೆಳತಿಯ ತರಹ ಇರೋಣ ಎಂದೆ” ಯಶೋಧೆ ತನ್ನ ಮನಸ್ಸಿನಲ್ಲಿದ್ದುದನ್ನು ಸ್ವಲ್ಪಮಟ್ಟಿಗೆ ಹೊರ ಹಾಕಿದಳು. ಮಧು ಆಘಾತ ಗೊಂಡವನಂತೆ ಯಶೋಧೆಯ ಮುಖವನ್ನು ದೃಷ್ಟಿಸಿದ. ಅವನಿಗೆ ಅವಳ ಅಭಿಪ್ರಾಯ ಹಿಡಿಸಲಿಲ್ಲವೆಂದು ಅವನ ಮುಖಭಾವದಲ್ಲಿ ವ್ಯಕ್ತವಾಗುತ್ತಿತ್ತು. ಅವನ ಮುಖ ಗಂಟಿಕ್ಕಿತು.

“ಇಲ್ಲ ನಾನು ನಿನ್ನ ಅಭಿಪ್ರಾಯವನ್ನು ಒಪ್ಪುವುದಿಲ್ಲ. ಗಂಡನಾದವನು ವೈಯಕ್ತಿಕವಾಗಿ ಏನು ತೀರ್ಮಾನವನ್ನು ಕೈಗೊಳ್ಳುತ್ತಾನೋ ಅದೆಲ್ಲಾ ಹೆಂಡತಿ ಮಕ್ಕಳ ಒಳ್ಳೇದಕ್ಕೆ ತಾನೇ. ಆದುದರಿಂದ ಗಂಡನ ತೀರ್ಮಾನಕ್ಕೆ ಹೆಂಡತಿ ಒಪ್ಬಬೇಕಾದುದು ಸಹಜ. ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದದ್ದು ಹೀಗೆಯೇ. ಇದನ್ನೇ ಬಲವಾಗಿ ನಂಬಿಕೊಂಡವನು ನಾನು ಮತ್ತು ಇದನ್ನೇ ಇಷ್ಟಪಡುತ್ತೇನೆ”. ಅವನ ಮಾತಿನಲ್ಲಿ ದೃಢ ನಿಲುವಿತ್ತು. ಮಧುವಿನ ಮಾತಿಗೆ ಸರಿಯಾದ ಪ್ರತ್ಯುತ್ತರ ನೀಡಬೇಕೆಂದು ಯಶೋಧಳಿಗೆ ಅನಿಸಿದರೂ, ಪರಿಸ್ಥಿತಿ ಹದಗೆಡಬಹುದೆಂದು ನೆನೆದು ಮೌನವಾದಳು.

ದಿನಗಳು ಉರುಳುತಿದ್ದುವು. ಊರಲ್ಲಿ ತಂದೆ – ತಾಯಿ, ಅಣ್ಣ ತಂಗಿಯರೊಂದಿಗೆ ಬೆಳೆದ ಯಶೋಧಳಿಗೆ ಬೆಂಗಳೂರು ಜೀವನ ಬೇಗ ನೀರಸವಾಗತೊಡಗಿತು. ಮೇಲಾಗಿ ಅವಳಿಗೆ ಒಂಟಿತನ ಕಾಡುತಿತ್ತು. ಮಧು ಬೆಂಗಳೂರಿನಲ್ಲಿ ದೊಡ್ಡ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದುದರಿಂದ ಹಣಕ್ಕೇನೂ ತೊಂದರೆಯಿರಲಿಲ್ಲ. ಮದುವೆಗೆ ಮೊದಲೇ ಸ್ವಂತ ಪ್ಲಾಟ್ – ಕಾರು ಹೊಂದಿದ್ದನು. ಅವನ ತಂದೆ – ತಾಯಿ ಕೂಡಾ ಊರಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ಅವರ ಪಾಡಿಗೆ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ಮನೆಯ ಜವಾಬ್ದಾರಿ ಹೊರುವ ಅವಶ್ಯಕತೆ ಅವನಿಗೆ ಬಂದಿರಲಿಲ್ಲವಾದುದರಿಂದ, ಸ್ವಲ್ಪ ವಿಲಾಸಿ ಜೀವನದಲ್ಲಿ ಬೆಳೆದಿದ್ದನು. ಸಿರಿತನದಲ್ಲಿ ಬೆಳೆದ ಅವನಿಗೆ ಸುಲಭವಾಗಿ ನೌಕರಿಯೂ ದೊರೆತಿರುವುದರಿಂದ, ಅವನು ಕೆಲಮಟ್ಟದಲ್ಲಿ ಯಾವುದನ್ನೂ ಆಲೋಚಿಸುತ್ತಿರಲಿಲ್ಲ. ತನ್ನ ಅಂತಸ್ತಿನ ಕೆಳಗೆ ಯಾವುದೂ ಅವನ ಕಣ್ಣಿಗೆ ಕಾಣುತ್ತಿರಲಿಲ್ಲ.

ಯಶೋಧೆ ಕೂಡಾ ಮಧ್ಯಮ ವರ್ಗದಲ್ಲಿ ಬೆಳೆದಿದ್ದರೂ, ತಂದೆ – ತಾಯಿಯ ಸೂಕ್ತ ಮಾರ್ಗದರ್ಶನದಲ್ಲಿ, ಎಲ್ಲಾ ಮಾನವೀಯ ಗುಣವನ್ನು ಒಳ್ಳೆಯ ಸಂಸ್ಕೃತಿಯನ್ನು ಮ್ಮೆಗೂಡಿಸಿಕೊಂಡಿದ್ದಳು. ಎಲ್ಲಾ ಹೆಣ್ಮಕ್ಕಳಂತೆ ಯಶೋಧೆ ಕೂಡಾ, ಸುಂದರ ಕನಸುಗಳ ಸರಮಾಲೆಯನ್ನು ತೊಟ್ಟುಕೊಂಡು ಬೆಂಗಳೂರಿಗೆ ಬಂದಿದ್ದಳು. ಆದರೆ ಕೆಲವೇ ವಾರಗಳಲ್ಲಿ ಅವಳಿಗೆ ಜೀವನ ಇಷ್ಟೇನಾ? ಎಂಬ ಭಾವನೆ ಬರತೊಡಗಿತು. ಇದಕ್ಕೆ ಪರೋಕ್ಷವಾಗಿ ಮಧು ಕಾರಣನಾಗಿದ್ದನು. ಮಧುವಿನಲ್ಲಿ ಯಾವುದೆ ಕೆಟ್ಟ ಗುಣಗಳಿಲ್ಲವಾದರೂ ಅವನ “ಆಹಂ” ಮತ್ತು “ಅಹಂಕಾರ” ಅವಳಿಗೆ ಹಿಡಿಸುತ್ತಿರಲಿಲ್ಲ. ಮಧು ಸ್ಪುರದ್ರೂಪಿ. ಅವನಿಗೆ ತಾನು ಅತೀ ಬುದ್ಧಿವಂತ ಎಂಬ ಅಹಂಕಾರ ಇತ್ತು. ತಾನು ಹೇಳಿದ್ದು, ಮಾಡಿದ್ದು ಅಂತಿಮ ಎಂಬ ನಿರ್ಧಾರದ ಮನಸ್ಸು ಅವನದು. ಅವನ ಮಾತು ಒರಟು, ಕೊಂಕಿನಿಂದ ಕೂಡಿದ್ದು ಕೆಲವೊಮ್ಮೆ ಮನಸ್ಸಿಗೆ ಘಾಸಿಯಾಗುತ್ತಿತ್ತು. ವಿಷಯ ಏನೇ ಇರಲಿ, ಅದನ್ನು ಇನ್ನೊಬ್ಬರಿಗೆ ಚುಚ್ಚಿ ಹೇಳಿ ಸಂತೋಷ ಪಡುತ್ತಿದ್ದನು. ಇನ್ನೊಬ್ಬರ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ. ಇದು ನುಂಗಲಾರದ ತುತ್ತಾಗಿ ಯಶೋಧಳಿಗೆ ಪರಿಣಮಿಸಿತು.

ಎಂದಿನಂತೆ ಕಚೇರಿಗೆ ಹೊರಟು ನಿಂತ ಮಧುವನ್ನು ಬಹಳ ನಾಜೂಕಿನಿಂದ ಯಶೋಧ ಕೇಳಿದಳು. “ನೋಡಿ, ನೀವು ಕಚೇರಿಗೆ ಹೋದ ಮೇಲೆ ಸಮಯ ಕಳೆಯುವುದು ತುಂಬಾ ಕಷ್ಟವಾಗುತ್ತಿದೆ. ಪಕ್ಕದಲ್ಲಿ ಎಲ್ಲಾದರೂ ಲೈಬ್ರೆರಿಯಿದ್ದರೆ ಹೋಗಿ ಬರುತ್ತೇನೆ. ಅಥವಾ ಮಹಿಳಾ ಸಂಘ ಸಂಸ್ಥೆಗಳು ಯಾವುದಾದರೂ ಇದ್ದರೆ ಸದಸ್ಯತ್ವ ಪಡೆದುಕೊಂಡರೆ ಕೆಲವರ ಪರಿಚಯವಾಗುತ್ತದೆ. ಅಗ ಸಮಯ ಕಳೆದದ್ದು ತಿಳಿಯುವುದಿಲ್ಲ ಏನಂತೀರಿ?” ಕಾಲಿಗೆ ಶೂ ಸಿಕ್ಕಿಸುತ್ತಾ ಮಧು ಹೇಳಿದ. “ನೋಡು, ನಿನಗೆ ಲೈಬ್ರೆರಿಗೆ ಹೋಗುವ ಅವಶ್ಶಕತೆ ಏಕೆ? ಮನೆಯಲ್ಲಿ ಇಂಟರ್ನೆಟ್ ಇದೆ. ಜಗತ್ತಿನ ಎಲ್ಲಾ ಆಗು – ಹೋಗುಗಳನ್ನು ನೋಡಬಹುದು. ಎಲ್ಲಾ ತರಹದ ವಿಷಯಗಳನ್ನು ತಿಳಿದುಕೊಳ್ಳಬಹುದು. ನಿನ್ನ ಉದಾಸೀನತೆಯನ್ನು ಬಿಟ್ಟು ಅದರತ್ತ ಸ್ವಲ್ಪ ಗಮನ ಹರಿಸು. ಮಹಿಳಾ ಸಂಘ ಸಂಸ್ಥೆಗಳು ನನಗೆ ಇಷ್ಟವಿಲ್ಲ. ಅದರ ಸದಸ್ಯತ್ವ ಪಡೆದರೆ ಸಮಾಜ ಸೇವೆಗೆ ಇಳಿಯಬೇಕಾಗುತ್ತದೆ. ಮತ್ತೆ ಅವರ ಮನೆ – ಮನೆಗೆ ನೀನು ಹೋಗುವುದು, ನಿನ್ನ ಮನೆಗೆ ಅವರೆಲ್ಲಾ ಬರುವುದು ಎಲ್ಲಾ ಶುರುವಾಗುತ್ತದೆ. ಸುಮ್ಮನೆ ತೊಂದರೆ – ತಾಪತ್ರಯಗಳನ್ನು ಮೈ ಮೇಲೆ ಯಾಕೆ ಎಳೆದುಕೊಳ್ಳಬೇಕು?” ಯಶೋಧೆಯ ಉತ್ತರವನ್ನೂ ಕಾಯದೆ ಮಧು ಹೊರಟು ಹೋದ. ಯಶೋಧೆಗೆ ಮೇಲ್ನೋಟ್ಟಕ್ಕೆ ಮಧುವಿನ ಮಾತು ಸರಿಕಂಡರೂ ಮನಸ್ಸು ಚಡಪಡಿಸುತ್ತಿತ್ತು. ತನಗೆ ಮನೆಯ ಹೊರಗೆ ಒಬ್ಬಂಟಿಗಳಾಗಿ ಹೋಗುವ ಸ್ವಾತಂತ್ರ್ಯವೇ ಇಲ್ಲವೇ? ತಾನು ಯಾರೊಡನೆಯು ಸೇರಬಾರದೇ? ಸಮಾಜದ ಸಂಪರ್ಕವೇ ಇಲ್ಲದ, ತಾನು ತನ್ನದು ಎಂದು ಎಷ್ಟು ದಿನ ಇರಬಹುದು? ಮದುವೆಯಾಗುವ ವರೆಗೂ ಅವಳು ಕಳೆದ ಜೀವನವನ್ನು ಒಮ್ಮೆ ನೆನಪಿಸಿಕೊಂಡಳು. ಶಾಲಾ ಕಾಲೇಜು, ಗೆಳತಿಯರು, ಶಾಲಾ ಕಾಲೇಜಿನ ಕಾರ್ಯಕ್ರಮಗಳು, ರಜೆಯಲ್ಲಿ ತಂದೆ, ತಾಯಿ, ತಮ್ಮ ತಂಗಿಯರೊಂದಿಗೆ ನೆಂಟರು, ಗೆಳತಿಯರ ಮನೆಗೆ ಭೇಟಿ ನೀಡುವುದು, ಪ್ರೇಕ್ಷಣೀಯ ಸ್ಠಳಗಳಿಗೆ ವಿಹಾರ ಹೋಗುವುದು ಎಲ್ಲಾ ಅಚ್ಚುಕಟ್ಟಾಗಿ, ಒಂದು ಇತಿ – ಮಿತಿಯೊಳಗೆ ನಡೆಯುತ್ತಿತ್ತು. ಆದರೆ ಈಗ “ಯಾವುದನ್ನೂ ಬೇಡುವ ಹಾಗಿಲ್ಲ. ಬೇಡಿದರೆ ಅದಕ್ಕೆ ಸರಿಯಾದ ಸ್ಪಂದನೆಯಿಲ್ಲ. ಹೋಗಲಿ, ನನ್ನ ಮನಸ್ಸನ್ನಾದರೂ ಅರ್ಥ ಮಾಡುವ ಒಂದು ಮಾನವೀಯ ಗುಣವಾದರೂ ಬೇಡವೇ? ಎಲ್ಲಿಯಾದರೂ ಹೊರಗೆ ತಿರುಗಾಟಕ್ಕೆ ಮನಸ್ಸಾದರೆ ಅವರಿಗೆ ಇಪ್ಟವಾಗುವವರೆಗೆ ನನ್ನ ಭಾವನೆಗಳನ್ನು ಅದುಮಿಟ್ಟುಕೊಳ್ಳಬೇಕು. ಮನಬಿಚ್ಚಿ ಹೇಳುವ ಹಾಗಿಲ್ಲ. ಹೇಳಿದರೂ ಅದಕ್ಕೆ ಸಕಾರಾತ್ಮಕ ಸ್ಪಂದನೆಯಿಲ್ಲ. ಎಲ್ಲವೂ ಅವರ ವೈಯಕ್ತಿಕ ನಿಲುವಿಗೆ ಬಿಟ್ಟದ್ದು. ಅವರಿಗೆ ಮನಸ್ಸಾದಾಗ ಹೊರಟು ನಿಲ್ಲಬೇಕು. ಎಲ್ಲಿಗೆ, ಏಕೆ ಎಂದು ಕೇಳುವ ಹಾಗಿಲ್ಲ. ಅವರಿಗೆ ಬೇಡವಾದಾಗ ಸುಮ್ಮನೆ ಬಿದ್ದುಕೊಂಡಿರಬೇಕು. ಶಯನಾಗೃಹದಲ್ಲಿ ಇದೇ ರೀತಿಯ ವರ್ತನೆ. ನನಗೂ ಒಂದು ಮನಸ್ಸಿದೆ ಎಂದು ವಿದ್ಯಾವಂತರಾದ ಅವರು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲ. ಈ ಮನೆಯಲ್ಲಿ ಯಾವುದಕ್ಕೂ ಕಮ್ಮಿಯಿಲ್ಲ. ಅಧುನಿಕ ಜೀವನ ಶೈಲಿಯಲ್ಲಿ ಬದುಕಲು ಬೇಕಾಗುವ ಎಲ್ಲಾ ವಸ್ತುಗಳು, ಸೊತ್ತುಗಳು, ಕೈ ಕಾಲು ಮುರಿದುಕೊಂಡು ಮನೆಯಲ್ಲಿ ಬಿದ್ದುಕೊಂಡಿವೆ. ಯಾವುದಕ್ಕೂ ಕೊರತೆಯಿಲ್ಲ. ಆದರೆ ಇರಬೇಕಾದುದೇ ಇಲ್ಲ. ಅದೇ ಪ್ರೀತಿ. ಅವರಲ್ಲಿ ಕರುಣೆ ಇದೆ, ಪ್ರೀತಿಯಿಲ್ಲ. ಇಷ್ಟನ್ನು ಅರ್ಥ ಮಾಡಿಕೂಳ್ಳುವಾಗ ಯಶೋಧಳಿಗೆ ವರ್ಷ ಸಂದದ್ದು ತಿಳಿಯಲೇ ಇಲ್ಲ.

ಯಶೋಧೆ ತಾನು ಗರ್ಭವತಿ ಎಂದು ಗಂಡನೊಂದಿಗೆ ಅಂದಾಗ ಅವನ ಮುಖದಲ್ಲಿ ತಂದೆಯಾಗುವ ಸಂತೋಷ ಕಂಡು ಬರಲಿಲ್ಲ. ಡಾಕ್ಟರರ ತಪಾಸಣೆಯಾಯಿತು. ಮಧು ಎಲ್ಲಾ ಸಹಾಯವನ್ನು ಯಶೋಧೆಗೆ ಮಾಡುತ್ತಿದ್ದ. ಕಚೇರಿಯಿಂದ ಆಗಾಗ್ಗೆ ಮೊಬೈಲ್‌ನಲ್ಲಿ ಯೋಗಕ್ಷೇಮ ವಿಚಾರಿಸುತ್ತಿದ್ದ. ಸಂದರ್ಭ ಬಂದಾಗ ಮನೆ ಕೆಲಸವನ್ನೂ ಕೆಲವೊಮ್ಮೆ ಮಾಡುತ್ತಿದ್ದ. ಅದರೆ ಅವನಿಗೆ ಆ ಸಂತೋಷವನ್ನು ಅಭಿವ್ಯಕ್ತ ಪಡಿಸುವ ಕ್ರಮ ಗೊತ್ತಿಲ್ಲ. ಹೆಂಡತಿಯನ್ನು ಛೇಡಿಸುವುದು, ಲಲ್ಲೆ ಮಾಡುವುದು, ಹಾಸ್ಯ ಚಟಾಕಿ ಹಾರಿಸುವುದು ಯಾವುದೂ ಇರಲಿಲ್ಲ. ಇದು ಅವನ ಹುಟ್ಟು ಗುಣವಾಗಿದ್ದು, ಯಶೋಧೆ ಯಾವುದನ್ನು ಬಯಸುತ್ತಿದ್ದಳೋ ಆ ಗುಣ ಮಧುವಿನಲ್ಲಿ ಇಲ್ಲ. ಆರು ತಿಂಗಳ ಗರ್ಭಿಣಿಯಾದ ಮೇಲೆ, ಯಶೋಧೆ ತಂದೆ – ತಾಯಿಯ ಮನೆಗೆ ಬಂದಳು. ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಬಂದ ಕ್ಷಣವೇ ಮನೆಯ ತೋಟಕ್ಕೆ ಜಿಗಿದಳು. ಬಾಳೆ ಗಿಡ, ತೆಂಗಿನ ತೋಟ, ಕಂಗಿನ ತೋಟಗಳ ಸುತ್ತ ತಿರುಗಾಡಿದಳು. ಬೋರ್‌ವೆಲ್ ನೀರು ತೋಟಕ್ಕೆ ಹಾಯಿಸುವುದನ್ನು ನೋಡಿದಳು. ಆ ನೀರಿನೊಂದಿಗೆ ಆಟವಾಡಿದಳು. ತೋಟದ ಕೆಲಸದಾಳು ಕೊಟ್ಟ ಎಳೆನೀರನ್ನು ಕುಡಿದಳು ಉದ್ಯಾನನಗರಿ ಬೆಂಗಳೂರಿಗೂ ತನ್ನ ಕರಾವಳಿ ಪ್ರದೇಶದ ಹಳ್ಳಿ ಮನೆಗೂ ಇರುವ ವ್ಯತ್ಯಾಸವನ್ನು ಅಳೆದಳು. ಮಾವಿನ ಮರ, ಹಲಸಿನ ಮರ, ತೇಗಿನ ಮರಗಳ ಮೇಲೆಕುಳಿತ ಹಕ್ಕಿಗಳೊಂದಿಗೆ ಸಂಭಾಷಿಸಿದಳು. ಮನೆಯ ದಂಡೆಯಲ್ಲಿ ಕುಳಿತ ಅವಳ ಪ್ರೀತಿಯ ಬೆಕ್ಕು “ಮಿಯಾಂ” ಅಂದಾಗ ಅದನ್ನು ಎತ್ತಿ ಕೊಂಡು ಮುದ್ದಿಸಿದಳು ಮನೆಯ ಕಾವಲು ನಾಯಿ ಹತ್ತಿರ ಬಂದು ಬಾಲ ಆಡಿಸಿದಾಗ, ಅದರ ತಲೆ ನೇವರಿಸಿದಳು. ಅವಳಿಗೆ ತನ್ನ ಬಾಲ್ಯ – ಯೌವನದ ನೆನಪಾಗಿ ಕಣ್ಣು ಮಂಜಾಯಿತು. ಅವಳಿಗೆ ತಂದೆ ಒಮ್ಮೆ ಕೇಳಿದ ಪ್ರಶ್ನೆಯ ನೆನಪಾಯಿತು. ‘ಯಶೂ, ಪ್ರೀತಿ – ಕರುಣೆ ಇದರ ವ್ಯತ್ಯಾಸ ಗೊತ್ತಿದೆಯಾ?’ ನಾನು ಇಲ್ಲವೆಂದು ತಲೆಯಾಡಿಸಿದರು. ಆಗ ತಂದೆ ಅಂದಿದ್ದರು. “ನಿನಗೊಂದು ಸಣ್ಣ ಉದಾಹರಣೆ ಕೊಡುತ್ತೇನೆ. ನೀನು ದಾರಿಯಲ್ಲಿ ನಡೆದುಕೊಂಡು ಹೋಗುತ್ತೀಯಾ. ಎದುರಿಗೆ ಒಂದು ನಾಯಿ ಸಿಗುತ್ತದೆ. ಅದರ ಕಾಲಿಗೆ ಪೆಟ್ಟಾಗಿ ನೆತ್ತರು ಸೋರುತ್ತಾ ಇದೆ. ಅದು ನಡೆಯಲಿಕ್ಕಾಗದೆ ಕುಂಟುತ್ತಾ, ನಿಲ್ಲುತ್ತಾ ನಿಧಾನ ಹೋಗುತ್ತಿದೆ. ನೀನು ಅದನ್ನು ನೋಡಿ ಮರುಕ ಗೊಂಡು “ಅಯ್ಯೋ ಪಾಪ” ಎಂದುಕೊಂಡು ಮುಂದೆ ಸಾಗುತ್ತೀಯಾ. ಇದು ಕರುಣೆ. ನಿನ್ನ ನಂತರ ಒಬ್ಬ ವ್ಯಕ್ತಿ ನಡೆದುಕೊಂಡು ಬರುವಾಗ ಅದೇ ನಾಯಿಯನ್ನು ನೋಡುತ್ತಾನೆ. ಕೂಡಲೇ ಅದರ ಹತ್ತಿರ ಹೋಗಿ, ಆದನ್ನು ಎತ್ತಿ ಕೊಂಡು, ರಿಕ್ಷಾದಲ್ಲಿ ಕೂತು ಡಾಕ್ಟರಲ್ಲಿಗೆ ಹೋಗಿ ಅದಕ್ಕೆ ಬ್ಯಾಂಡೇಜ್ ಮಾಡಿಸಿ, ಮನೆಗೆ ತಂದು ಒಂದೆರಡು ದಿನ ಅರೈಕೆ ಮಾಡಿ, ನಾಯಿ ಗುಣ ಹೊಂದಿದ ಮೇಲೆ ಅದನ್ನು ಬಿಟ್ಟು ಬಿಡುತ್ತಾನೆ. ಇದು ಪ್ರೀತಿ” ನಾನು ನಕ್ಕು ಸುಮ್ಮನಾಗಿದ್ದೆ. ಈಗ ನನ್ನ ಜೀವನದಲ್ಲಿ ಪ್ರೀತಿ – ಕರುಣೆಯ ವ್ಯತ್ಯಾಸ ಸ್ಟಷ್ಟವಾಗಿ ಕಂಡು ಬರುತ್ತದೆ. ಮಧುವಿಗೆ ನನ್ನಲ್ಲಿ ಕರುಣೆ ಇದೆ. ಪ್ರೀತಿಯಿಲ್ಲ. ಅಥವಾ ಪ್ರೀತಿಯನ್ನು ವ್ಯಕ್ತ ಪಡಿಸುವ ಕ್ರಮ ಗೊತ್ತಿಲ್ಲವೇ? ಗೊತ್ತಿಲ್ಲದಿರಬಹುದೆಂದು ನಾನು ಎಷ್ಟೋ ಸಾರಿ ಪ್ರೀತಿಯನ್ನು ಅವನಿಗೆ ಕಣ್ಣಿಗೆ ಕಾಣುವಂತೆ ವ್ಯಕ್ತಪಡಿಸಿದ್ದೇನೆ. ಎಷ್ಟೋ ಸಂದರ್ಭಗಳಲ್ಲಿ ತೋರಿಸಿಕೊಟ್ವಿದ್ದೇನೆ. ನನ್ನ ಪ್ರೀತಿಯನ್ನು ಧಾರೆಯೆರೆದಿದ್ದೇನೆ. ಅದರೆ ಅದರಿಂದ ಅವನು ಏನೂ ಕಲಿತಂತೆ ಕಾಣುದಿಲ್ಲ. ಅಲ್ಲದೆ ಆ ರೀತಿ ವರ್ತಿಸುವುದು ಅವನಿಗೆ ಇಷ್ಟವೂ ಆಗುತ್ತಿರಲಿಲ್ಲ. ಆಲೋಚನೆಯಿಂದ ಹೊರ ಬಂದಾಗ ಯಶೋಧೆ ತೋಟದಿಂದ ಸಾಗಿ, ಮನೆಯ ಅಂಗಳಕ್ಕೆ ಕಾಲಿಟ್ಟಿದ್ದಳು.

ಮಧು ಆಗಾಗ್ಗೆ ಮೊಬೈಲ್ ಮಾಡಿ ಯಶೋಧೆಯೊಡನೆ ಯೋಗಕ್ಷೇಮ ವಿಚಾರಿಸುತ್ತಿದ್ದ. ಆರೋಗ್ಯದ ಬಗ್ಗೆ ಜಾಗೃತೆ ವಹಿಸಲು ತಿಳಿಸುತ್ತಿದ್ದ. ಆದರೆ ಮಾತಾಡುವಾಗ ಏನಾದರೂ ಹೆಚ್ಚು – ಕಡಿಮೆಯಾದರೆ, ಕಿರಿ – ಕಿರಿ ಮಾಡುತ್ತಿದ್ದ. ಯಶೋಧೆ ತಪ್ಪು ಕೇಳುವವರಗೂ ಬಿಡುತ್ತಿರಲಿಲ್ಲ. ಅವಳದಲ್ಲದ ತಪ್ಪುಗಳಿಗೂ ಅವಳನ್ನೇ ಹೊಣೆಗಾರಿಕೆ ಮಾಡಿ, ಬೈಯುತ್ತಿದ್ದ. ಯಶೋಧೆಗೆ ಯಾವ ರೀತಿ ತಾನು ಗಂಡನೊಡನೆ ವರ್ತಿಸಬೇಕೆಂದು ತಿಳಿಯದೆ ಒದ್ದಾಡುತ್ತಿದ್ದಳು. ಕೆಲವೊಮ್ಮೆ ತಾನು ಎದುರುತ್ತರ ಕೊಡಲೇ ಎಂದೆಣಿಸಿದರೂ, ಮುಂದೆ ಆಗುವ ತೊಂದರೆಗಳನ್ನು ಎಣಿಸಿ ತಾಳ್ಮೆ ವಹಿಸುತ್ತಿದ್ದಳು. ಅದರೂ ಅವಳ ಮನದ ಬೇಗುದಿ ನಿಲ್ಲಲಿಲ್ಲ. ಅದನ್ನು ಹೊರಗೆ ಹಾಕಲೇಬೇಕು. ಒಂದು ದಿನ ತಾಯಿಯೊಡನೆ ಎಲ್ಲಾ ವಿಷಯವನ್ನು ಅರುಹಿ ಅತ್ತಳು. ಮಗಳಿಗೆ ಮಾನಸಿಕ ಹಿಂಸೆಯಾಗುತ್ತಿದೆ ಎಂದು ತಿಳಿಯಲು ಹೆತ್ತವರಿಗೆ ತುಂಬಾ ಸಮಯ ಹಿಡಿಯಲಿಲ್ಲ. ಪ್ರತಿರೋಧ ಮಾಡದಿದ್ದರೆ ಉಳಿಗಾಲವಿಲ್ಲವೆಂಬಲ್ಲಿಗೆ ಪರಿಸ್ಥಿತಿ ವಿಕೋಪಕ್ಕೆ ಏರಿತು.

ಯಶೋಧೆಗೆ ಉಂಟಾದ ಮಾನಸಿಕ ಪರಿಣಾಮದಿಂದಲೋ ಏನೋ ಯಶೋಧೆಗೆ ಗರ್ಭಪಾತವಾಯಿತು. ಇದೇ ನೆಪವನ್ನು ಮುಂದಿಟ್ಟುಕೊಂಡು ಊರಿಗೆ ಬಂದ ಮಧು ಯಶೋಧೆಯನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡ. ನೀನು ಬೇಕೆಂತಲೇ ಗರ್ಭಪಾತ ಮಾಡಿಸಿಕೊಂಡಿದ್ದೀ. ನಿನಗೆ ಮಗು ಇಷ್ಟವಿಲ್ಲವೆಂದು ಕಾಣುತ್ತದೆ. ನೀನು ನನ್ನೊಡನೆ ಸಂಸಾರ ಮಾಡಲು ಅನರ್ಹ ಎಂದು ರೇಗಾಡಿದ. ಯಶೋಧೆ ಎಲ್ಲಾ ರೀತಿಯಲ್ಲಿ ಅವನನ್ನು ಸಮಾಧಾನಿಸಲು ಪ್ರಯತ್ನಿಸಿದಳು. ತನ್ನ ತಾಳ್ಮೆಯನ್ನು ಸಂಪೂರ್ಣ ಬಳಸಿದಳು. ಅನಗತ್ಯವಾಗಿ ಕ್ಷಮೆ ಕೇಳಿದಳು. ಮಧು ಕರಗಲಿಲ್ಲ.

“ನೀನು ತಪ್ಪು ಮಾಡುತ್ತೀಯಾ ಕ್ಷಮೆ ಕೇಳುತ್ತೀಯಾ, ಅಳುತ್ತೀಯಾ ಎಲ್ಲಾ ಮಾಡುತ್ತೀ. ನಾನಿದನ್ನು ಇಪ್ಟಪಡುದಿಲ್ಲ. ನಾನು ಬೈದರೆ ನೀನು ಅಳಬಾರದು. ಕಣ್ಣೀರು ಹಾಕಬಾರದು” ಮಧುವಿನ ಮಾತುಗಳು ಯಶೋಧೆಗೆ ಬಾಣದಂತೆ ಚುಚ್ಚತೊಡಗಿತು. ಅವಳ ಸಹನೆಯಕಟ್ಟೆ ಒಡೆಯಿತು. ಅವಳು ಕಾಳಿಯಾದಳು. “ಇಲ್ಲಿಯವರೆಗೆ ನಾನು ನೀವು ಹೇಳಿದನ್ನೆಲ್ಲಾ ಕೇಳಿ ಸುಮ್ಮನಾದೆ. ನನ್ನದಲ್ಲದ ತಪ್ಪನ್ನೂ ಒಪ್ಪಿಕೆಂಡೆ. ಇನ್ನು ನನ್ನಿಂದ ತಡೆದುಕೊಳ್ಳಲು ಸಾಧ್ಯವಿಲ್ಲ. ಅಳಬಾರದು, ಕಣ್ಣೀರು ಹಾಕಬಾರದು ಎಂದರೆ ನಾನೇನು ಬೊಂಬೆಯಲ್ಲ. ನನಗೂ ಮನಸ್ಸಿದೆ. ಹೃದಯವಿದೆ. ನಿಮಗೆ ಹೇಗೆ ಸಿಟ್ಟು ಬರುತ್ತಿದೆಯೋ ನನಗೂ ಬರುತ್ತೆದೆ. ನಿಮಗೆ ನನ್ನ ಮಾತುಗಳು ನಿಮ್ಮ ಮನಸ್ಸಿನ ಮೇಲೆ ಹೇಗೆ ಘಾಸಿಯಾಗುತ್ತದೆಯೋ ಅದೇ ರೀತಿ ನನಗೂ ಆಗುತ್ತದೆ. ಇದನ್ನು ನೀವು ತಿಳಿದುಕೊಳ್ಳಬೇಕು. ಈ ಭಾವನೆ ನಿಮ್ಮಲ್ಲಿಲ್ಲ. ನಿಮ್ಮದು ಏಕ ಮುಖ ನ್ಯಾಯ. ನೀವು ತಿನ್ನಲು – ಉಣ್ಣಲು ನನಗೇನೂ ಕಡಿಮೆ ಮಾಡಿಲ್ಲ ನಿಜ. ಆದರೆ ನೀವು ಕೊಡಬೇಕಾದ ಪ್ರೀತಿಯನ್ನು ಕೊಟ್ಟಿಲ್ಲ. ನನ್ನ ಹೃದಯವನ್ನು ಅರ್ಥಮಾಡಿಕೊಳ್ಳಲು ನಿಮ್ಮಿಂದ ಸಾಧ್ಯವೂ ಇಲ್ಲ. ಯಾಕೆಂದರೆ ನಿಮ್ಮ “ಅಹಂ” ನಿಮ್ಮನ್ನು ಬಿಡುವುದಿಲ್ಲ. ನಾನು ಬಂಗಾರದ ಪಂಜರದ ಗಿಳಿಯಾಗಿ ಇರಲು ಇಷ್ಪಪಡುದಿಲ್ಲ. ಎಲ್ಲಿಯವರೆಗೆ ನಿಮ್ಮ ಪ್ರೀತಿ – ಪ್ರೇಮವನ್ನು ನನಗೆ ಧಾರೆಯೆರೆಯಲು ನಿಮ್ಮಿಂದ ಸಾಧ್ಯವಿಲ್ಲವೋ ಅಲ್ಲಿಯವರೆಗೆ ನಮ್ಮ ಬದುಕು ಒಂದಾಗಿ ಸಾಗದು” ಯಶೋಧೆಯ ಮಾತುಗಳನ್ನು ಕೇಳಿ ಕೊಂಡ ಮಧು ಮತ್ತೂಷ್ಟೂ ವ್ಯಗ್ರನಾದ. ಒಂದು ಹೆಣ್ಣು ಗಂಡನಿಗೆ ಎದುರುತ್ತರ ನೀಡುವುದೇ? ಅವನ ಗಂಡಸ್ತನಕ್ಕೆ ಯಶೋಧೆ ಸವಾಲು ಹಾಕಿದ್ದಳು. ಅದೂ ಪ್ರಥಮ ಬಾರಿಗೆ. ಮಧು ಎದ್ದುನಿಂತ. ಅವನ ಮುಖ ಬೆಂಕಿಯಂತೆ ಕೆಂಡವಾಗಿತ್ತು.

“ಇನ್ನು ನಿನ್ನೊಂದಿಗೆ ಸಂಸಾರ ಸಾಧ್ಯವಿಲ್ಲ. ನಿನ್ನನ್ನು ಪತ್ನಿಯಾಗಿ ಸ್ವೀಕರಿಸಲು ನನ್ನ ಮನಸ್ಸು ಕೇಳುತ್ತಿಲ್ಲ. ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ” ಮಧು ಬೆಂಗಳೂರಿಗೆ ತಿರುಗಿ ಹೋದವನು ಮತ್ತೆ ಊರ ಕಡೆಗೆ ಬರಲಿಲ್ಲ. ಮೊಬೈಲ್ ಇಲ್ಲ. ಯಾವುದೇ ಸಂಪರ್ಕವಿಲ್ಲ. ಯಶೋಧೆಯೂ ಅವನನ್ನು ಸಂಪರ್ಕಿಸಲು ಪ್ರಯತ್ನಿಸಲಿಲ್ಲ. ತಂದೆ ತಾಯಿ ಹತಾಶರಾದರು. ಏನೇ ಆಗಲಿ ಒಂದು ರಾಜಿ ಪಂಚಾಯತಿ ಮಾಡಿ ಇದನ್ನು ಸರಿಪಡಿಸುವ ಎಂಬ ತೀರ್ಮಾಕ್ಕೆ ಬಂದರೂ ಯಶೋಧೆ ಒಪ್ಪಲಿಲ್ಲ. ಮಾಡದ ತಪ್ಪಿಗೆ ತಂದೆ – ತಾಯಂದಿರು ಕ್ಷಮೆ ಕೇಳಿಕೊಂಡು ಎಲ್ಲರೆದುರು ಸಣ್ಣದಾಗುವುದು ಅವಳಿಗೆ ಇಷ್ಪವಾಗಲಿಲ್ಲ.

“ಯಾವುದಕ್ಕೂ ಒಂದು ಮಿತಿಯಿದೆಯಪ್ಪ. ಒಂದು ಹೆಂಡತಿಯನ್ನು ಗಂಡನಾದವನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುದಿಲ್ಲವೋ ಅಲ್ಲಿಯವರೆಗೆ ನೀವು ಮಾಡಿಸುವ ಹೊಂದಾಣಿಕೆ ಶಾಶ್ವತವಾಗಿ ನಿಲ್ಲುವುದಿಲ್ಲ. ಈ ಹೊಂದಾಣಿಕೆ ಹೃದಯದಿಂದ ಆಗಬೇಕಾದದ್ದು . ಬಲತ್ಕಾರದಿಂದ ಅಥವಾ ತಗ್ಗಿ – ಬಗ್ಗಿ ನಡೆಯುವುದರಿಂದ ಆಗುವುದಿಲ್ಲ. ನನ್ನ ಯೋಚನೆ ಬಿಟ್ಟು ಬಿಡು. ಜಗತ್ತು ವಿಶಾಲವಾಗಿದೆ. ನಾನೇನು ಅತ್ಮಹತ್ಯ ಮಾಡಿಕೊಳ್ಳುದಿಲ್ಲ. ಈ ಭರವಸೆ ನಿಮಗೆ ನೀಡುತ್ತೇನೆ. ಜೀವನದ ಆಟದಲ್ಲಿ ಸದ್ಯಕ್ಕೆ ಸೋತಿದ್ದೇನೆ. ಮುಂದೊಮ್ಮೆ ಸೋಲನ್ನು ಮೆಟ್ಟಿ ನಿಲ್ಲಬಲ್ಲೆ” ಯಶೋಧೆಯ ಖಂಡತುಂಡ ಮಾತು ಹೆತ್ತವರ ಬಾಯಿ ಮುಚ್ಚಿಸಿತ್ತು.

ಮಧು ಇನ್ನು ತನ್ನ ಬಾಳಲ್ಲಿ ಬರಲಾರ ಎಂದು ಯಶೋಧಳಿಗೆ ಯಾವಾಗಲೊ ನಿರ್ಧಾರವಾಗಿ ಬಿಟ್ಟಿತ್ತು. ಅವಳು ಕೂಡಾ ಅವನನ್ನು ನಿಧಾನವಾಗಿ ತನ್ನ ನೆನಪಿನಿಂದ ದೂರ ಮಾಡತೊಡಗಿದಳು ತಾನು ತಂದೆ – ತಾಯಿಯ ಮನೆಯಲ್ಲಿ ಹೀಗೆಯೇ ಬಿದ್ದುಕೊಂಡರೆ ಯಾರಿಗೂ ಬೇಡವಾದ ಒಂದು ವಸ್ತುವಾಗಿ ಬಿಡುತ್ತೇನೆಯೇ ಎಂದು ಭಯಪಟ್ಟಳು. ಬೆಂಗಳೂರಿನಲ್ಲಿ ಅವಳಿಗೆ ಗೆಳತಿಯರಿಗೇನೂ ಕಡಿಮೆಯಿಲ್ಲ. ಯಾಕೆಂದರೆ ಕಾಲೇಜಿನ ಅವಳ ಹೆಚ್ಚಿನ ಗೆಳತಿಯರು ಕೆಲಸ ಅರಸಿಕೊಂಡು ಬೆಂಗಳೂರಿನಲ್ಲಿಯೇ ವಾಸಿಸುತ್ತಿದ್ದರು. ಕೆಲವರು ಈಗಾಗಲೇ ಕೆಲಸ ಗಳಿಸಿ ತಮ್ಮ ಕಾಲಿನಲ್ಲಿ ನೆಲೆಯೂರಿದ್ದರು. ಮದುವೆಯ ನಂತರ ಅವರನ್ನು ಭೇಟಿಯಾಗಲು ಅಸಾಧ್ಯವಾಗಿದ್ದರೂ, ಇಂಟರ್‌ನೆಟ್‌ನಲ್ಲಿ ಸದಾ ಅವರ ಸಂಪರ್ಕದಲ್ಲಿರುತ್ತಿದ್ದಳು. ಈ ಸಂಪರ್ಕ ಅವಳಿಗೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉಪಕಾರಕ್ಕೆ ಬಿತ್ತು. ಒಂದು ಸುಂದರ ಬೆಳಿಗ್ಗೆ ಅವಳು ತನ್ನ ತಂದೆ – ತಾಯಿಯ ಅನುಮತಿ ಪಡೆದು ಬೆಂಗಳೂರಿಗೆ ಹೊರಟು ನಿಂತಳು. ಗೆಳತಿಯರೆ ಪೇಯಿಂಗ್ ಗೆಸ್ಟ್‌ನಲ್ಲಿ ಉಳಕೊಂಡು ಉದ್ಯೋಗವನ್ನು ಅರಸತೊಡಗಿದಳು. ಬಹಳ ಪ್ರಯತ್ನದ ನಂತರ ಅವಳಿಗೆ ಯಂಎನ್‌ಸಿ ಕಂಪನಿಯೊಂದರಲ್ಲಿ ಉದ್ಯೋಗ ದೊರಕಿತು.

ಕಾಲ ನಿಲ್ಲುದಿಲ್ಲ. ಮರೆವು ಎಲ್ಲಾ ನೋವುಗಳಿಗೆ ರಾಮಬಾಣ. ಯಶೋಧೆಯ ಬಾಳಲ್ಲೂ ಇದೇ ನಡೆಯಿತು. ಉದ್ಯೋಗದಲ್ಲಿ ನಿಯತ್ತು, ಪಡೆಯುವ ಸಂಬಳಕ್ಕೆ ಪ್ರತಿಫಲ ನೀಡಬೇಕೆಂಬ ಗುರಿ, ಹಿರಿಯ ಅಧಿಕಾರಗಳಿಗೆ ತೋರುವ ಗೌರವ, ಸಹ ಉದ್ಯೋಗಿಗಳೊಂದಿಗೆ ಬೆರೆತುಕೊಳ್ಳುವ ಸ್ನೇಹಶೀಲತೆ, ಕಂಪೆನಿಯಲ್ಲಿ ಯಶೋಧೆಗೆ ಒಂದು ಉತ್ತಮ ಸ್ಥಾನಮಾನ ದೊರೆಯಿತು. ವರ್ಷಗಳು ಉರುಳಿದಂತೆ ಅವಳು ಕಂಪೆನಿಯ ಆಸ್ತಿಯಾದಳು. ಸಹಜವಾಗಿಯೇ ಭಡ್ತಿಗಳು ವೇಗವಾಗಿ ಬರತೊಡಗಿತು. ವೇತನವೂ ಅವಳ ಎಣಿಕೆ ಮೀರಿ ಏರತೊಡಗಿತು. ಈಗ ಯಶೋಧೆಗೆ ಯಾವುದೂ ಕಮ್ಮಿಯಿರಲಿಲ್ಲ. ಸುಮಾರು ನಾಲ್ಕು ವರ್ಷಗಳು ಸಂದುವು. ಯಶೋಧೆ ಬೆಂಗಳೂರಿನಲ್ಲಿ ತನ್ನ ಕನಸಿನ ಫ್ಲಾಟು ಖರೀದಿಸಿದಳು ಓಡಾಡಲು ಕಾರು ಖರೀದಿಸಿದಳು ತಿಂಗಳಿಗೊಮ್ಮೆ ಊರಿಗೆ ವಿಮಾನ ಮುಖಾಂತರವೇ ಹೋಗಿ ಬರುತ್ತಿದ್ದಳು. ಸ್ನೇಹಿತೆಯರ ದಂಡೇ ಅವಳಿಗೆ ಬೆಂಗಾವಲಾಗಿ ನಿಂತಿತ್ತು. ಕಚೇರಿಯ ರಜಾ ಅವಧಿಯಲ್ಲಿ ಸ್ನೇಹಿತೆಯರೊಂದಿಗೆ ಮಾಲ್, ಪಾರ್ಕ್‌, ಸಿನಿಮಾ ಅಂತ ಸಮಯ ದೂಡುತ್ತಿದ್ದಳು. ಆದರೂ ಅವಳಲ್ಲಿ ಯಾವುದೋ ಒಂದು ಒಂಟಿತನ ಕಾಡುತಿತ್ತು. ಕಚೇರಿ ಸಮಯದಲ್ಲಿ ಕೆಲಸದ ಒತ್ತಡದಲ್ಲಿ ಸಮಯ ಕಳೆದುದೇ ಗೊತ್ತಾಗುತ್ತಿರಲಿಲ್ಲ. ಕಚೇರಿ ಅವಧಿ ಮುಗಿದು, ಮನೆಗೆ ಬಂದ ಮೇಲೆ ಸ್ನೇಹಿತೆಯರ ಜೊತೆಯಲ್ಲಿ ಊಟ ತಿರುಗಾಟದಲ್ಲಿ ಹೊತ್ತು ಹೋಗುತ್ತಿದ್ದರೂ ಯಾವುದೋ ಒಂದು ಅವ್ಯಕ್ತ ನೋವು ಅವಳನ್ನು ಕಾಡುತಿತ್ತು. ರಾತ್ರಿ ಮಲಗಿದ ಮೇಲೆ ನೂರಾರು ಯೋಚನೆಗಳು ಮುತ್ತಿಕೊಂಡು ಅವಳ ನಿದ್ರೆ ಕೆಡಿಸುತ್ತಿದ್ದುವು. ಮಧುವನ್ನು ತನ್ನ ಮನಸ್ಸಿನಿಂದ, ಹೃದಯದಿಂದ ಕಿತ್ತೊಗೆದು ಇಂದಿಗೆ ಸುಮಾರು ನಾಲ್ಕು ವರ್ಷ ಸಂದುವು. ಮತ್ತೆ ಅವನ ನೆನಪು ಅವಳಿಗೆ ಕಾಡಲೇ ಇಲ್ಲ. ಆದರೆ ಮಾಲ್‌ನಲ್ಲಿ, ಪಾರ್ಕ್‌ನಲ್ಲಿ, ಗಂಡ, ಹೆಂಡತಿ ಮಕ್ಕಳು ಜೊತೆ – ಜೊತೆಯಾಗಿ ತಿರುಗುವಾಗ ಅವಳಿಗೆ ತನಗೂ ಒಂದು ಕೊರತೆಯಿದೆ ಎಂದು ಅನಿಸುತ್ತಿತ್ತು. ಹೆತ್ತವರೂ ಎಷ್ಬೋ ಸಾರಿ ತನ್ನ ಮರು – ಮದುವೆಯ ಬಗ್ಗೆ ಪ್ರಸ್ತಾಪವೆತ್ತಿದ್ದರೂ, ತಾನೊಂದು ಹಂತಕ್ಕೆ ಬಾರದೆ ಯಾವುದೂ ಸಾಧ್ಯವಿಲ್ಲವೆಂದು ಸಾರಾಸಗಟವಾಗಿ ನಿರಾಕರಿಸಿದಳು. ಈಗ ಹೃದಯದಲ್ಲಿ ಏನೋ ತಳಮಳ. ತನಗೂ ಸಂಗಾತಿ ಬೇಕು ಎಂಬ ಭಾವನೆ ಅವಳ ಮನದಲ್ಲಿ ಉಕ್ಕಿ ಹರಿಯತೊಡಗಿತು. ಮತ್ತೊಂದು ರೀತಿಯಲ್ಲಿ ಚಿಂತಿಸುವಾಗ ಅವಳಿಗೆ ಏನೋ ಭಯ! ತನ್ನ ಈಗಿನ ಸ್ವಾತಂತ್ರ್ಯಕ್ಕೆ ಮತ್ತೆ ಸಂಚಕಾರ ಬರಬಹುದೇ? ಪುನಃ ಬಂಗಾರದ ಪಂಜರದ ಗಿಣಿಯಾಗಿ ಬಂಧಿ ಯಾಗುತ್ತೇನೆಯೇ ಎಂಬ ಸಂಶಯ. ಈ ಎಲ್ಲಾ ತಳಮಳ, ಮಾನಸಿಕ ಉದ್ವೇಗದಿಂದ ಅವಳು ದಿನೇ ದಿನೇ ಸೊರಗ ತೊಡಗಿದಳು. ಗೆಳತಿಯರಿಂದ ಸ್ವಲ್ಪ ಮಟ್ಚಿಗೆ ದೂರವಾಗಿ ಏಕಾಂತ ಬಯಸತೊಡಗಿದಳು. ರಜಾ ಅವಧಿಯಲ್ಲಿ ಒಂಟಿಯಾಗಿ ನಂದಿಬೆಟ್ಟ ಯಾ ಪಾರ್ಕ್‌ಗಳಲ್ಲಿ ಸುತ್ತಾಡಿ ಬರುತ್ತಿದ್ದಳು. ಆದರೂ ಅವಳಿಗೆ ನೆಮ್ಮದಿ ದೊರಕಲಿಲ್ಲ. ಅವಳ ಹೃದಯ ಜೊತೆಗಾರನನ್ನು ಬಯಸುತ್ತಿತ್ತು.

ಸಂಜೆಯ ಸಮಯ. ಹಿತವಾದ ತಂಗಾಳಿ ಬೀಸಿ ಮೈ – ಮನಕ್ಕೆ ಪುಳಕ ನೀಡುತಿತ್ತು. ಯಶೋಧೆ ನಂದಿಬೆಟ್ಟದ ಬಂಡೆಯ ಮೇಲೆ ಕುಳಿತುಕೊಂಡು ಪ್ರಕೃತಿಯನ್ನು ವೀಕ್ಷಿಸುತ್ತಿದ್ದಳು. ಅವಳು ನಂದಿಬೆಟ್ಟದ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವುದು ಇದೇನು ಮೊದಲ ಸಾರಿಯಲ್ಲ. ಪ್ರತೀ ಸಾರಿ ಬಂದಾಗಲೂ ಅವಳಿಗೆ ಪ್ರಕೃತಿ ವಿಶೇಷವಾಗಿಯೇ ಕಾಣುತಿತ್ತು. ಬಂಡೆಯ ಮೇಲೆ ಕುಳಿತು ಕೆಳಗೆ ನೋಡಿದಾಗ ಎದೆ ಜುಮ್ಮೆನ್ನುವ ಆಳವಾದ ಕಂದಕ, ಝರಿ! ದಟ್ಟವಾದ ಅರಣ್ಯಗಳು. ಬರೇ ಒಂದು ಗೆರೆಯಂತೆ ಕಾಣುವ ಹಲವು ರಸ್ತೆಗಳು! ಅಲ್ಲಲ್ಲಿ ಕಂಡು ಬರುವ ಮನೆ ಇನ್ನಿತರ ಕಟ್ಟಡಗಳು. ಆಕಾಶವನ್ನು ದಿಟ್ಟಿಸಿದಾಗ ಕೆಲವು ಕಡೆ ಕರಿಮೋಡಗಳು ಮತ್ತೊಂದು ಕಡೆ ಅತಿಯಾದ ಸೂರ್ಯನ ಬೆಳಕು. ಕೆಲವು ಭಾಗಗಳಿಗೆ ಮಾತ್ರ ಸುರಿಯುವ ತುಂತುರು ಮಳೆ. ಗಾಳಿಯ ರಭಸಕ್ಕೆ ತೂಗಾಡುವ ಮರ – ಗಿಡಗಳು! ಯಶೋಧೆ ಒಮ್ಮೆ ಪ್ರಕೃತಿಯನ್ನು ಮತ್ತೊಮ್ಮೆ ತನ್ನ ಸುತ್ತ ಮುತ್ತಲೂ ತಿರುಗಾಡುವ ಹಾಗೂ ಕುಳಿತುಕೊಂಡಿರುವ ಜನರನ್ನು ನೋಡುತ್ತಿದ್ದಳು. ಕೆಲವು ಪಡ್ಡೆ ಹುಡುಗರು ಗುಂಪು ಗುಂಪಾಗಿ, ಕಿವಿಗೆ ಗಾಳಿ ಹೊಕ್ಕಿದ ಕರುವಿನಂತೆ ಏನೇನೊ ಹಾಸ್ಯ ಚಟಾಕಿ ಹಾರಿಸಿಕೊಂಡು ನಗಾಡುತ್ತಾ ಅಡಾಡಿದಿಡ್ಡಿ ಓಡಾಡುತಿದ್ದರೆ ಮತ್ತೆ ಕೆಲವರು ತಮ್ಮ ಹೆಂಡತಿ ಮಕ್ಕಳೊಂದಿಗೆ ನಿಧಾನವಾಗಿ ನಡೆದು ಹೋಗುತ್ತಿದ್ದರು. ಕೆಲವು ವಯಸ್ಸಾದ ಜನರು ಮಾತ್ರ ಬಂಡೆಯ ಮೇಲೆ ಅಲ್ಲಲ್ಲಿ ಕುಳಿತುಕೊಂಡು, ನಿರ್ಲಿಪ್ತರಂತೆ ಆಲೋಚಿಸುತ್ತಿದ್ದರು. ಬಹುಶಃ ಅವರು ತಮ್ಮ ಗತಕಾಲದ ಜೀವನವನ್ನು ಮೆಲುಕಾಡುತ್ತಿರಬಹುದು. ಯಶೋಧೆ ಹೀಗೆಯೇ ಸುತ್ತಲೂ ನೋಡುತ್ತಿರುವಾಗ ಅನತಿ ದೂರದಲ್ಲಿ ತರುಣನೊಬ್ಬ ತನ್ನನ್ನೇ ಎವೆಯಿಕ್ಕದೆ ನೋಡುತ್ತಿರುವುದು ಕಂಡು ಬಂತು. ಯಶೋಧೆ ಅವನನ್ನೊಮ್ಮೆ ತದೇಕಚಿತ್ತದಿಂದ ನೋಡಿದಳು ಈ ರೀತಿ ನೋಡುವುದು ಸೌಜನ್ಯತೆಯ ಲಕ್ಷಣವಲ್ಲವಾದರೂ ಅದೇಕೋ ಅವಳಿಗೆ ಅವನನ್ನು ಮತ್ತೆ ಮತ್ತೆ ನೋಡಬೇಕನಿಸಿತು. ಬಲವಂತವಾಗಿ ಅವನಿಂದ ತನ್ನ ಕಣ್ಣನ್ನು ಬೇರೆ ಕಡೆ ತಿರುಗಿಸಿದಳು. ಮತ್ತೆ ತನ್ನ ಬ್ಯಾಗಿನಿಂದ ಚಾಕಲೇಟು ತೆಗೆದುಕೊಂಡು ತಿನ್ನತೊಡಗಿದಳು. ಅವಳು ಮತ್ತೊಮ್ಮೆ ಕದ್ದು ಆ ತರುಣನನ್ನು ನೋಡಿದಾಗ ಅವನು ಇನ್ನೂ ತನ್ನನ್ನೇ ನೋಡುತ್ತಿರುವುದನ್ನು ನೋಡಿ ಮುಖವನ್ನು ಬಲವಂತವಾಗಿ ಬೇರೆ ಕಡೆ ತಿರುಗಿಸಿದಳು. ಅದರೂ ಅವಳ ಮನಸ್ಸು ಅವನನ್ನು ಮತ್ತೆ ಮತ್ತೆ ನೋಡಬೇಕನಿಸಿತು. ಈ ಒಂದು ವಿಲಕ್ಷಣ ಮನಸ್ಥಿತಿಯನ್ನು ತಪ್ಪಿಸಲೋಗ ಅವಳು ಹೊರಟು ನಿಂತಳು. ಅವಳು ಬೆಟ್ಟದಿಂದ ಇಳಿದು, ತನ್ನ ಕಾರಿನಲ್ಲಿ ಕುಳಿತು, ರಸ್ತೆಯಲ್ಲಿ ಡ್ರೈವ್ ಮಾಡಿ ಹೋಗುವಾಗಲೂ ಅವಳ ಮನ ತುಂಬಾ ಆ ತರಣನೇ ತುಂಬಿಕೊಂಡಿದ್ದ. ಮುಂದಿನ ವಾರದ ಕೊನೆ ದಿನಕ್ಕೆ ಅವಳು ಕಾತರದಿಂದ ಕಾಯುತ್ತಿದ್ದಳು. ಈ ವಾರದ ರಜೆಯಲ್ಲೂ ಅವಳು ನಂದಿಬೆಟ್ಟಕ್ಮೆ ಹೋದಳು. ಕಳೆದ ವಾರ ತಾನು ಕುಳಿತುಕೊಂಡ ಸ್ಥಳದಲ್ಲಿಯೇ ಕುಳಿತು ಸುತ್ತಲೂ ವೀಕ್ಷಿಸಿದಳು ಹೌದು ಅದೇ ಸ್ಥಳದಲ್ಲಿ ಆ ತರುಣ ಕುಳಿತುಕೊಂಡಿದ್ದು ಕಂಡು ಬಂತು. ಯಶೋಧೆಗೆ ಯಾಕೋ ಒಂಥರಾ ಮುಜುಗರವಾಗ ತೊಡಗಿತು. ಕದ್ದು ಕದ್ದು ಅವನನ್ನು ನೋಡ ತೊಡಗಿದಳು. ಅವನು ಕೂಡಾ ತನ್ನನ್ನೇ ಎವೆಯಿಕ್ಕದೆ ನೋಡುತ್ತಿದ್ದ. ಇದು ಸರಿಯಲ್ಲವೆಂದು ಅವಳ ಮನಸ್ಸು ಹೇಳುತ್ತಿದ್ದರೂ, ಭಾವನೆಗಳನ್ನು ಅದುಮಿಡಲು ಅವಳು ಒದ್ದಾಡುತ್ತಿದ್ದಳು ಕೊನೆಗೆ ಅಲ್ಲಿಯೇ ಹತ್ತಿರದಲ್ಲಿ ಒಬ್ಬ ಎಳೆನೀರು ಮಾರುತ್ತಿದ್ದು ಅವನ ಕಡೆಗೆ ನಡೆದಳು. ಎಳೆನೀರನ್ನು ಆರಿಸುವ ನೆಪದಲ್ಲಿ ಅವಳು ಆ ಯುವಕನತ್ತ ದೃಷ್ಟಿ ಬೀರಿದಳು ಅವನು ತನ್ನ ಕಡೆಗೇ ನಿಧಾನವಾಗಿ ನಡೆದು ಬರುತ್ತಿದ್ದನು. ಅವಳು ಎಳನೀರು ಎತ್ತಿಕೊಟ್ಟು ಕೆತ್ತಿಸಿಕೊಂಡು ಕುಡಿಯಲು ಅಣಿಯಾದಂತೆ ಆ ತರುಣ ಹತ್ತಿರ ಬಂದವನೇ ಒಂದು ಹೂ ನಗು ಬೀರಿದ. ಯಶೋಧೆ ಯಾಂತ್ರಿಕವಾಗಿ ನಕ್ಕಳು.

ಮುಂದೆ ಪ್ರತೀ ವಾರವೂ ಅವರು ಒಬ್ಬರನ್ನೊಬ್ಬರು ಸಂಧಿಸುತ್ತಿದ್ದರು. ನಂದಿಬೆಟ್ಟದ ಮೇಲೇರಿ ಬಂಡೆಯ ಮೇಲೆ ಒಂದಾಗಿ ಕುಳುತುಕೊಂಡು, ಹರಟೆ ಹೊಡೆಯುತ್ತಿದ್ದರು. ಎಲ್ಲಾ ವಿಷಯದ ಕುರಿತು ತರ್ಕ ಮಾಡುತ್ತಿದ್ದರು. ಒಬ್ಬರು ಇನ್ನೊಬ್ಬರ ಅನಿಸಿಕೆ, ಅಹವಾಲುಗಳನ್ನು ಹಂಚಿಕೊಳ್ಳುತ್ತಿದ್ದರು ಅಬಿಪ್ರಾಯ ಭೇದ ಬಂದಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಹೂಂದಿಕೊಂಡು, ಹೋಗಲು ಯತ್ನಿಸುತ್ತಿದ್ದರು. ಸ್ನೇಹ ಪ್ರೇಮಕ್ಕೆ ತಿರುಗಿತು. ಕ್ರಮೇಣ ನಂದಿಬೆಟ್ಟಕ್ಕೆ ಸೀಮಿತವಾಗಿದ್ದ ಅವರ ಸ್ನೇಹ ನಗರಕ್ಕೆ ಬಂತು. ಒಟ್ಟಾಗಿ ಮಾಲ್, ಥಿಯೇಟರಿಗೆ ಹೋಗ ತೊಡಗಿದರು. ಯಶೋಧೆಯ ಜೀವನದಲ್ಲಿ ನವೋಲ್ಲಾಸ ತುಂಬ ತೊಡಗಿತು.

ನಾಳೆ ಯುಗಾದಿ. ರಜೆ ಬೇರೆ. ಯುಗಾದಿ ಹಬ್ಬವನ್ನು ಒಂಟಿಯಾಗಿ ಆಚರಿಸಲು ಯಶೋಧೆ ಇಷ್ಟ ಪಡಲಿಲ್ಲ. ಅದಕ್ಕಾಗಿಯೇ ಅವಳು ಅವನಿಗೆ ಮನೆಗೆ ಬರಲು ಆಮಂತ್ರಣ ನೀಡಿದ್ದಳು. ಬೆಳಿಗ್ಗೆಯೇ ಮನೆಯನ್ನು ಶೃಂಗಾರ ಮಾಡಿದಳು. ಮನೆಯ ಮೂಲೆ, ಮೂಲೆಯನ್ನು ಶೃಂಗರಿಸಿದಳು ಅವಳ ಮನೆಗೆ ಅವನ ಮೊದಲ ಆಗಮನ. ಅವಳು ಸಂತೋಷದಲ್ಲಿ ಮಿಂದು ಹೋದಳು. ಮನೆಯಲ್ಲಿ ಮಧ್ಯಾಹ್ನದ ಹಬ್ಬದ ಊಟ ಒಟ್ಟೊಟ್ಟಿಗೆ ಮಾಡಿಕೊಂಡರು. ಸಂಜೆ ತಿರುಗಾಟ. ರಾತ್ರಿ ಊಟವನ್ನು ಹೊರಗಡೆ ಮುಗಿಸಿ, ಮನೆಗೆ ಹಿಂತಿರುಗಿದರು. ಯಶೋಧೆಗೆ ಅವನನ್ನು ಬೀಳ್ಕೊಡಲು ಮನಸ್ಸಿರಲಿಲ್ಲ. ಅವನಿಗೆ ಅವಳ ಮನೆ ಬಿಟ್ಟು ಹೋಗಲು ಇಚ್ಛೆಯಿರಲಿಲ್ಲ. ಮೈ ಮನ ಬೆರೆಯಿತು.

ಮಧ್ಯರಾತ್ರಿ ತನ್ನ ತೋಳ ತೆಕ್ಕೆಯಲ್ಲಿದ್ದ ಯಶೋಧೆಯ ತಲೆ ನೇವರಿಸುತ್ತಾ ಆವನಂದ “ಯಶೂ, ಇಂತಹ ಒಂದು ಹೊಂದಾಣಿಕೆಯನ್ನು ಮದುವೆಯಾದ ಸಮಯದಲ್ಲಿ ಮಾಡಿಕೊಳ್ಳುತಿದ್ದರೆ, ಈ ನಾಲ್ಕು ವರ್ಷ ನಾವು ಅಜ್ಞಾತವಾಗಿರುವುದು ತಪ್ಪುತಿತ್ತು” ಅವಳ ತೋಳ ತೆಕ್ಕೆಯಿಂದ ಬಿಡಿಸಿಕೊಂಡ ಯಶೋಧೆ ಅವನ ಬಾಯಿಗೆ ತನ್ನ ಕೈಯನ್ನು ಅಡ್ಡವಾಗಿಟ್ಟು ಅವನ ಮುಖದ ಸುತ್ತಲು ಮುತ್ತಿನ ಮಳೆಗರೆದಳು.


Previous post ಚಿತ್ತಾರ
Next post ಕನಸು ನನಸುಗಳೆಲ್ಲ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…