ತರಂಗಾಂತರ – ೧೧

ದೀಕ್ಷಿತ ಏನೋ ಗಾಢವಾಗಿ ಬರೆಯೋದರಲ್ಲಿ ತಲ್ಲೀನನಾಗಿದ್ದಾನೆ. ಆತ ಎಂದೂ ತನ್ನ ಅಭ್ಯಾಸದಲ್ಲಿ ಇಷ್ಟು ಆಸಕ್ತಿ ತೋರಿಸಿದ್ದಿಲ್ಲ. ಎಂದರೆ ಇನ್ನೇನು ಬರೀತಿದ್ದಾನೆ? ದ್ವಿತೀಯ ಕಮ್ಯೂನಿಸ್ಟ್ ಮ್ಯಾನಿಫ಼ೆಸ್ಟೋ? ಎಲ್ಲಾ ಬಿಟ್ಟು ಇಂಥ ಬೋರ್ ನ್ ಕೈಲಿ ಸಿಗಹಾಕಿಕೊಳ್ಳಬೇಕಾಯಿತಲ್ಲ ಎಂದು ವಿನಯಚಂದ್ರ ಮರುಗಿದ. ಬದಲಿಗೆ ಸಂತೋಷ್ ಚಟರ್ಜಿಯನ್ನು ಆಶ್ರಯಿಸಿದ್ದರೆ ಬಹುಳ ಮಜಾ ಇರುತ್ತಿತ್ತು!

“ಅದೇನು ಆಗಿಂದಲೆ ಬರೀತಾ ಇದೀಯೋ?”

“ಅದೆಲ್ಲ ನಿನಗೆ ಗೊತ್ತಾಗಲ್ಲ ಕಣೋ!” ಎಂದ ದೀಕ್ಷಿತ.

“ನನಗೆ ಯಾಕೆ ಗೊತ್ತಾಗಲ್ಲ ಹೇಳು.”

“ಯಾಕೆಂದ್ರೆ, ಮೊದಲನೇದಾಗಿ ನಿನಗಿದರಲ್ಲಿ ಆಸಕ್ತಿಯಿರಲ್ಲ ; ಎರಡನೇದಾಗಿ ನೀನು ಕುಡಿದಿದ್ದೀ ಕುಡೀತಾ ಇದ್ದೀ.”

“ಅದೊಂದೂ ಅಲ್ಲ. ನೀನು ಭಾಳ ಸೀಕ್ರೆಟಿವ್ ವ್ಯಕ್ತಿ. ನನ್ನಲ್ಲಿ ಹೇಳೋಕೆ ಇಷ್ಟಪಡ್ತಾ ಇಲ್ಲ.”

“ಅದೇನಲ್ಲ. ನಮ್ಮ ಆರ್ಗನೈಸೇಶನ್ ಪ್ರತಿ ತಿಂಗಳು ಒಂದು ಪ್ರಕಟಣೆ ಹೊರಡಿಸ್ತದೆ. ಅದರ ಡ್ರಾಫ಼್ಟ್ ತಯಾರಿಸ್ತ ಇದೇನೆ. ನೋಡು, ಆ ಕಿಟಿಕೀ ಬದಿಗೆ ಹಿಂದಿನ ಕೆಲವು ಪ್ರಕಟಣೆಗಳಿವೆ. ನೀನು ಬೇಕಾದರೆ ಓದಬಹುದು. ಆದರೆ ಓದೋ ಸ್ಥಿತಿಯಲ್ಲಿ ನೀನು ಇದ್ದೀಯಾ?”

ಅಲ್ಲಯ್ಯ ದೀಕ್ಷಿತ. ಇಂಥ ಸೊಳ್ಳೆಗಳ ಮಧ್ಯೆ ಮಲಗಬೇಕಾದರೆ ಬೇರೆ ವಿಧಾನ ಯಾವುದು ಹೇಳು. ಓಡೋಮೋಸ್ ಗೆ ಕೂಡ ಅವು ಬೆದರೋಲ್ಲ.”

ವಿನಯಚಂದ್ರ ಗ್ಲಾಸಿಗೆ ಇನ್ನಷ್ಟು ವಿಸ್ಕಿ ಸುರಿದು ನೀರು ಬೆರೆಸಿದ.

“ನಾನು ಸೀಕ್ರೆಟಿವ್ ಅಂತ ಹೇಳ್ತಾ ಇದ್ದೀ. ಈಗ ನೀನು ಮಾಡ್ತಿರೋದಾದರೋ ಏನು? ಮನೆಯಿಂದ ತಪ್ಪಿಸಿಕೊಂಡು ಬಂದಿರುವಿ. ನೀನು ಮಾಡಿರುವ ಘೋರ ಪಾಪ ಏನೆಂದು ನನಗೆ ಹೇಳಿದ್ದೀಯಾ?”

“ಅಂಥದ್ದೇನೂ ನಡೆದಿಲ್ಲ. ಯಾರ ತಲೇನೂ ಒಡೆದು ಹಾಕಿಲ್ಲ. ಅಥ್ವಾ ಯಾರನ್ನೂ ಮೋಸ ಮಾಡಿಲ್ಲ. ನಿನಗೆ ಹ್ಯೂಮನ್ ರಿಲೇಶನ್ಸ್ ಅರ್ಥ ಆಗೋಲ್ಲ ದೀಕ್ಷಿತ! ಯಾಕೆಂದ್ರೆ ಹ್ಯೂಮನ್ ಫ಼ೀಲಿಂಗ್ಸೇ ನಿನಗಿಲ್ಲ. ಅದು ಯಾರೋ ಹೇಳಿದ್ದಾರಲ್ಲ- ಯೂನಿವರ್ಸಲ್ ಲವ್ ಅಂತೇನೂ ಇಲ್ಲ. ಅದೆಲ್ಲ ಬರೀ ಪೊಳ್ಳು ಮಾತು. ಸ್ವಂತ ನೇಬರನ್ನ ಪ್ರೀತಿಸಲಿಕ್ಕೆ ಸಾಧ್ಯವಿಲ್ಲದೋನು ಅಬ್ ಸ್ಟ್ರಾಕ್ಟ್ ಆಗಿ ಹ್ಯುಮಾನಿಟೀಸನ್ನ ಪ್ರೀತಿಸ್ತೇನೆ ಅನ್ನೋದು ಶುದ್ಧ ಬೊಗಳೆ. ಪ್ರೀತಿ ಅನ್ನೋದು ಮನುಷ್ಯ ಮತ್ತು ಮನುಷ್ಯನ ನಡುವೆ-ಹ್ಯೂಮನ್ ಟೂ ಹ್ಯೂಮನ್. ಅಮೂರ್ತ ಕಲ್ಪನೇನ ಪ್ರೀತಿಸೋದು ಸಾಧ್ಯವಿಲ್ಲ. ಹಾಗೆ ಅಂದುಕೊಳ್ಳೋದೊಂದು ಎಸ್ಕೇಪಿಸಮ್. ಲವ್ ದೈ ನೇಬರ್! ನಾ ಕುಡಿದು ಮಾತಾಡ್ತೇನೆಂತ ತಿಳಕ್ಕೋಬೇಡ. ನನ್ನ ಜೀವನದ ಫ಼ಿಲಾಸಫ಼ೀನ ನಿನ್ನ ಮುಂದಿಡ್ತಿದೀನಷ್ಟೆ….”

ವಿನಯಚಂದ್ರ ಈಸಿಚೇರಿನಲ್ಲಿ ಕೂತಿದ್ದ. ಈಗ ಸಿಗರೇಟನ್ನು ಬಾಯಲ್ಲಿಟ್ಟುಕೊಂಡ. ಬೆಂಕಿ ಹಚ್ಚಿ ಫೂ ಎಂದು ಹೊಗೆ ಬಿಟ್ಟ. ನಂತರ ಗ್ಲಾಸಿನಿಂದ ಒಂದು ಚೂರು ವಿಸ್ಕಿ ಕುಡಿದ. ನನ್ನ ಜೀವನದ ಫ಼ಿಲಾಸಫ಼ಿ! ಅವನಿಗೆ ಆಶ್ಚರ್ಯವೆನ್ನಿಸಿತು. ತನಗೊಂದು ಫ಼ಿಲಾಸಫ಼ಿಯಿರಬಹುದೆಂದು ಇದು ತನಕ ಅನಿಸಿರಲಿಲ್ಲ. ಈಗ ಮಾತುಗಳು ಅವ್ಯಾಹತವಾಗಿ ಬಾಯಿಯಿಂದ ಹೊರಬರುತ್ತಿವೆ! ಅಮೂರ್ತವಾಗಿ ಪ್ರೀತಿಸೋದು ಸಾಧ್ಯವಿಲ್ಲ, ಮೂರ್ತರೂಪದಲ್ಲಿ ಮಾತ್ರವೇ ಪ್ರೀತಿ ಸಾಧ್ಯ, ಮೂರ್ತಿ ಪೂಜೆ ಇಲ್ಲಿಂದಲೇ ಆರಂಭವಾಗಿರಬೇಕಲ್ಲವೆ? ಮಗು ತನ್ನ ಆಟಿಕೆ ಯನ್ನು ಪ್ರೀತಿಸುವಂತೆ ಭಕ್ತ ತನ್ನ ದೇವತಾಮೂರ್ತಿಯನ್ನ ಪ್ರೀತಿಸುತ್ತಾನೆ. ಹಾಗೆಯೇ ಪ್ರಣಯಿ ತನ್ನ ಪ್ರೇಯಸಿಯನ್ನ. ಆಕೆಗೋಸ್ಕರ ಆತ ಏನು ಮಾಡಲೂ ತಯಾರಿರುತ್ತಾನೆ. ಅವಳು ಉಟ್ಟಬಟ್ಟೆ, ತೊಟ್ಟ ಚಪ್ಪಲಿ ಕೂಡ ಅವನಿಗೆ ಪವಿತ್ರವಾಗುತ್ತದೆ. ಇದನ್ನು ವಸ್ತು ಸಂಭೋಗವೆನ್ನುವವರು ಮೂರ್ಖರು.

“ನೀವೆಲ್ಲ ಮೂ….ರ್ಖರು ಕಣೋ ಮೂ…..ರ್ಖರು…..”

“ಏ ವಿನಯ! ಏಳಯ್ಯ, ಎದ್ದು ಮಲಕ್ಕೋ. ನಂತರ ನಿನ್ನನ್ನ ಎಬ್ಬಿಸೋದೇ ಒಂದು ಕೆಲಸವಾಗಿ ಬಿಡತ್ತೆ!”

ರಾತ್ರಿ ಎಷ್ಟು ಹೊತ್ತಿಗೆ ಮಲಗಿದನೋ ವಿನಯಚಂದ್ರನಿಗೆ ಗೊತ್ತಿರಲಿಲ್ಲ. ನಸುಕಿಗೆ ದೀಕ್ಷಿತ ಎದ್ದು ಓಡಾಡುವುದು ಕಾಣಿಸಿತು. ಸ್ವಲ್ಪ ಹೊತ್ತು ಹಾಗೆಯೇ ಮಲಕ್ಕೊಂಡ. ನಿನ್ನೆಯ ಘಟನೆಗಳೆಲ್ಲ ಮನಸ್ಸಿನ ರಜತ ಪರದೆಯಲ್ಲಿ ಸುಳಿದಾಡತೊಡಗಿದುವು. ಯಾವುದಕ್ಕೂ ಯಾರನ್ನೂ ದೂರಿ ಉಪಯೋಗವಿಲ್ಲ. ಆ ಕಾರಣದಿಂದಲೆ ಬ್ಲೇಮಿಟಾನ್ ರಿಯೋ. ಆಹಾ! ಎಂಥ ಅರ್ಥಗರ್ಭಿತ ಹೆಸರು! ರಿಯೋ, ರಿಯೋ, ರಿಯೋ, ರಿಯೋ ಎಂದು ಕಿವಿಯೊಳಗೆ ಕೊರೆಯುವ ಸದ್ದು! ವಿನಯಚಂದ್ರ ಎದ್ದು ಕುಳಿತ. ದೀಕ್ಷಿತ ಅಡುಗೆ ಕೋಣೆಯಲ್ಲಿ ಪಾತ್ರೆ ತೊಳೆಯುತ್ತಿದ್ದಾನೆ! ಇನ್ನು ಮಲಗಿ ಉಪಯೋಗವಿಲ್ಲವೆಂದು ಚಾಪೆ ಮಡಚಿ ಮೂಲೆಯಲ್ಲಿರಿಸಿದ.

“ಕ್ಯಾನ್ ಐ ಹೆಲ್ಪ್ ಯೂ ದೀಕ್ಷಿತ್?”

“ನೋ ಥ್ಯಾಂಕ್ಸ್! ನಿದ್ರೆ ಚೆನ್ನಾಗಿ ಬಂತೆ?”

“ಗೊತ್ತಿಲ್ಲ ಚಾಪೆ ಮೇಲೆ ನೂರಾರು ಸೊಳ್ಳೆಗಳು ಸತ್ತು ಬಿದ್ದಿವೆ!”

“ವಿನಯ್! ನಾನು ಟೀ ಕಾಫ಼ಿ ಕುಡಿಯಲ್ಲ. ಆದರೆ ನಿನಗೆಂದೆ ಸ್ವಲ್ಪ ಟೀ ಪೌಡರ್ ತಂದಿದ್ದೀನಿ. ಅರ್ಧ ಗಂಟೆಯಲ್ಲಿ ಹಾಲು ಬರತ್ತೆ.”

“ಅರ್ಧಗಂಟೆ ಕಾಯೋ ತಾಳ್ಮೆ ಇಲ್ಲಪ್ಪ. ಬ್ಲ್ಯಾಕ್ ಟೀ ಮಾಡಿಬಿಡ್ತೇನೆ. ನಿನಗೂ ಸ್ವಲ್ಪ ಮಾಡಲೆ?”

“ಬೇಡ. ನಾನು ನೀರು ಮಾತ್ರ ಕುಡೀತೀನಿ ಬೆಳಿಗ್ಗೆ.”

“ಯಾಕೆಂದ್ರೆ ಅದು ಬವೆಲ್ಸ್ ಗೆ ಒಳ್ಳೇದು?”

“ನಿಜ ಹೇಳಿದೆ.”

“ಅಲ್ಲಯ್ಯ! ರೆವೊಲ್ಯೂಶನ್ರಿ ನೀನು, ದೇಹವನ್ನ ಇಷ್ಟೊಂದು ಸೂಕ್ಷ್ಮವಾಗಿ ಇಟ್ಕಂಡದ್ದು ನೋಡಿ ನನಗೆ ನಂಬೋಕಾಗ್ತ ಇಲ್ಲ.”

“ರೆವೊಲ್ಯೂಶನ್ರಿಯಾದ್ರೆ ದೇಹಾನ ಕೆಡಿಸಿಕೋಬೇಕು ಅಂತೇನಾದ್ರೂ ಇದ್ಯೆ? ನಿಂತಲೆಯೊಳಗೆ ಎಷ್ಟೊಂದು ತಪ್ಪು ಕಲ್ಪನೆಗಳಿವೆ ವಿನಯ್! ನಿನ್ನ ಎಜುಕೇಶನೇ ಕಂಪ್ಲೀಟಾದ ಹಾಗಿಲ್ಲ!”

“ಸದ್ಯ ನನ್ನ ತಲೆ ಹಾಗೇ ಇರ್ಲಿಬಿಡು! ಎಷ್ಟಾದ್ರೂ ಅದು ನಂದೇ ತಾನೆ!”

“ಓಕೇ ಓಕೇ! ಈಗ ಸ್ವಲ್ಪ ಅನ್ನ ಸಾರು ಮಾಡ್ತೀನಿ. ಬೆಳಿಗ್ಗೆ ಇದು ನಡೀತದೆ ತಾನೆ?”

“ಅಭ್ಯಾಸವಿಲ್ಲ… ನಾನು ಆ ಹಾಳು ಇರಾಣಿ ಹೋಟೆಲಿಗೇ ಶರಣಾಗುವವನು. ಅದೆಷ್ಟು ಗಂಟೆಗೆ ತೆರೀತದೆ ಗೊತ್ತೆ?”

“ಗೊತ್ತಿಲ್ಲ, ನಾನಿಷ್ಟು ಮುಂಜಾನೆ ಆ ಕಡೆ ಹೋಗಿಲ್ಲ” ಎಂದ ದೀಕ್ಷಿತ.

ಎಂಟು ಗಂಟೆ ಸುಮಾರಿಗೆ ಸ್ನಾನ ಮುಗಿಸಿಕೊಂಡು ಇರಾಣಿ ಹೋಟೆಲಿಗೆ ಹೊರಟಾಗ ದೀಕ್ಷಿತ ಹೇಳಿದ : ಬೇಗನೆ ಬಾ. ಬಂದ ಮೇಲೆ ನಿನಗೊಂದು ಒಳ್ಳೆ ಸುದ್ದಿ ಹೇಳೋದಿದೆ!”

“ಒಳ್ಳೆ ಸುದ್ದಿ ಯಾದರೆ ಈಗಲೇ ಯಾತಕ್ಕೆ ಹೇಳಬಾರದು?”

“ಇಲ್ಲ. ನೀ ಬಂದಮೇಲೇ ಹೇಳೋದು.”

ಈ ವ್ಯಕ್ತಿ ಹೇಳೋ ಒಳ್ಳೆ ಸುದ್ದಿಯೇನಪ್ಪಾ! ಯಾರ ದೃಷ್ಟಿಯಿಂದ ಒಳ್ಳೇ ಸುದ್ದಿ? ಭೂಮಿಯ ಉಪಖಂಡಗಳಲ್ಲಿ ಎಲ್ಲಾದರೊಂದು ಕಡೆ ಕಮ್ಯೂನಿಸ್ಟ್ ಕ್ರಾಂತಿಯಾಯಿತೋ ಹೇಗೆ? ಅಥವಾ ಇವನ ವಿರೋಧಿಗಳಲ್ಲಿ ಯಾರಾದರೂ ಕೈಲಾಸವಾಸಿಗಳಾದರೇ? ಕೈಲಾಸ ಅಂದ ತಕ್ಷಣ ತಮ್ಮ ಅಪಾರ್ಟ್ ಮೆಂಟ್ ನೆನಪಾಯಿತು. ಇಂಥ ಹೆಸರಿನ ಕಟ್ಟಡದಲ್ಲಿ ಮನೆ ತೆಗೆದುಕೊಳ್ಳುವುದನ್ನು ಅವನ ತಾಯಿ ವಿರೋಧಿಸಿದ್ದಳು. ಇದು ಅಪಶಕುನ ಎಂದು ಆಕೆ ಬಾಯಿಬಿಟ್ಟು ಹೇಳಲಿಲ್ಲ ಅಷ್ಟೆ. ಆದರೆ ತಂದೆಗೆ ಇದು ಯಾವುದರಲ್ಲೂ ನಂಬಿಕೆಯಿರಲಿಲ್ಲ. ಅಲ್ಲದೆ ಮುಂಗಡ ಹಣಾನೂ ಕೊಟ್ಟಾಗಿತ್ತು. ಒಂದು ದಿನ ಮೊದಲೇ ಕೈಲಾಸವಾಸಿಯಾಗೋದೇ ಒಳ್ಳೇದಲ್ಲವೆ ಎಂದು ವಿನಯಚಂದ್ರ ಜೋಕ್ ಮಾಡಿದ್ದ ಕೂಡ.

ಹಿಂದಿನ ದಿನದಂತೆಯೆ ಇವತ್ತು ಮುಂಜಾನೆಯೂ ಹೋಟೆಲಿನಲ್ಲಿ ಜನ ಕಿಕ್ಕಿರಿದು ತುಂಬಿತ್ತು. ಕೆಲವು ಗಿರಾಕಿಗಳೂ ನಿನ್ನೆಯವರೇ. ಮತ್ತೆ ಬ್ರೆಡ್ ಬೆಣ್ಣೆ ತಿಂದು ಚಹಾದಿಂದ ಗಂಟಲನ್ನು ತೊಳೆದುದಾಯಿತು. ಕೌಂಟರಿಗೆ ಹೋಗಿ ಫೋನ್ ಎತ್ತಿಕೊಂಡ. ಈಗ ಯಾರು ಮಾತಾಡುತ್ತಾರೆ ಎನ್ನೋದರ ಮೇಲೆ ಸಕಲವೂ ನಿಂತಿದೆ – ಅನಿಸಿತು.

ಮಾತಾಡಿದವಳು ಸುನಯನ. ಅವಳು ಫೋನ್ ಬಳಿಯೇ ಕೂತಿರುತ್ತಾಳೆಂದು ಇವನಿಗೇನು ಗೊತ್ತಿತ್ತು?

“ವಿನ್! ಓಹ್ ವಿನ್! ” ಎಂದು ಕುಣಿದಾಡಿದಳು.

“ಎಲ್ಲಿಂದ ಮಾತಾಡ್ತಿದೀರಿ? ಅದೇನೋ ಮುಂಬಯಿ ಎಂದೆಲ್ಲ ಹೇಳಿದಿರಿ ನಿನ್ನೆ!”

“ಹೌದೌದು. ಒಂದು ರೀತಿಯಲ್ಲಿ ಮುಂಬಯಿನಿಂದ್ಲೆ. ಈಗ ಅಲ್ಲಿಂದ ಅಹಮ್ಮದಾಬಾದ್ ಗೆ ಹೊರಟಿದ್ದೀನಿ!”

“ಅಹಮ್ಮದಾಬಾದ್?”

“ಒಂದು ಸ್ಟಡಿ ಟೂರ್ ನಲ್ಲಿ.”

“ಅದ್ರೆ ನಿನ್ನೆ ಹನ್ನೊಂದರ ತನಕ ಇಲ್ಲೇ ಇದ್ದಿರಿ! ನನಗೆ ಅರ್ಥವಾಗ್ತ ಇಲ್ಲ!”

“ನಿಧಾನವಾಗಿ ಅರ್ಥವಾಗುತ್ತೆ. ಇವತ್ತು ಸಂಜೆಗೆ ಏನು ಮಾಡ್ತ ಇದ್ದೀರಿ?”

“ಏನೂ ಮಾಡ್ತ ಇಲ್ಲ. ಎಲ್ಲಾದ್ರೂ ಹೋಗೋಣ್ವೆ? ನಿಮ್ಮ ಸ್ಟಡೀ ಟೂರ್ ಗೆ ತೊಂದ್ರೆ ಯಾಗಲ್ಲ ತಾನೆ?”

“ತೊಂದ್ರೆಯೇನು ಬಂತು! ಅನುಕೂಲವೇ ಆಗುತ್ತೆ. ಯಾವ ಕಡೆ ಹೋಗೋಣ?”

“ನೀವೇ ಫ಼ಿಕ್ಸ್ ಮಾಡಿ!”

“ಆರು ಗಂಟೆಗೆ ಸಿಕಂದರಾಬಾದ್ ಬಸ್ ಸ್ಟೇಷನ್ ನಲ್ಲಿ ಸಿಕ್ಕಿ. ನಂತರ ಅಲ್ಲಿಂದ ತೀರ್ಮಾನಿಸಬಹುದು.”

“ಓಕೇ, ಆರು ಗಂಟೆಗೆ ಅಲ್ಲಿರ್ತೇನೆ.”

ವಾಪಸು ರೂಮಿಗೆ ಮರಳುತ್ತ, ತಾನು ಮನೆಗೆ ಫೋನ್ ಮಾಡಲು ಮರೆತೆ ಅಂದುಕೊಂಡ. ಸಂಜೆ ಅಥವಾ ನಾಳೇ ಮಾಡಿದರಾಯಿತು. ದೀಕ್ಷಿತ ಹೇಳಲಿರುವ ಸುವಾರ್ತೆಯೇನಿರಬಹುದು ಎಂಬುದೇ ತಲೆಯನ್ನು ಕೊರೆಯ ತೊಡಗಿತು. ದೀಕ್ಷಿತ ಆತ ಬರೋದನ್ನೇ ಕಾಯುತ್ತಿರುವಂತೆ ತೋರಿತು. ಅವನ ಕೈಯಲ್ಲೊಂದು ಬ್ಯಾಗು. ಎತ್ತಲೋ ಹೊರಟುನಿಂತಿದ್ದ.

“ಒಂದು ವಾರದ ಮಟ್ಟಿಗೆ ನಾನೆಲ್ಲೋ ಹೋಗಬೇಕಾಗಿದೆ ವಿನಯ್. ಒಂದು ವರ್ಕ್ ಶಾಪ್ ನಲ್ಲಿ ಭಾಗವಹಿಸೋಕೆ. ಒಳ್ಳೆ ಸುದ್ದಿ ಅಂತ ಯಾಕೆ ಹೇಳಿದೆ ಅಂದರೆ ನೀನು ನನ್ನ ಮಂಚ, ಸೊಳ್ಳೆ ಪರದೆ ಉಪಯೋಗಿಸಬಹುದು. ನನ್ನ ಬಳಿ ಒಂದು ಕೇಲಿಕೈ ಇದೆ. ಇನ್ನೊಂದು ಇಲ್ಲಿ ಮೇಜಿನ ಮೇಲಿದು ಒಂದು ವೇಳೆ ನಾನು ವಾಪಸಾಗುವಾಗ ನೀನಿಲ್ದೆ ಇದ್ರೂ ತೊಂದರೆಯಿಲ್ಲ. ಆಮೇಲೆ ಕೀಲಿಕೈ ಇಸಕೋತೇನೆ. ಆದ್ರೆ ನೀನು ಎಷ್ಟು ದಿನ ಇರಬೇಕೋ ಅಷ್ಟೂ ದಿನ ಇರು! ” ಎಂದ ದೀಕ್ಷಿತ.

“ಆಹಾ! ನೀನು ಒಳ್ಳೇ ಸುದ್ದಿ ಅಂದುದು ಇದೇ ಏನು? ” ಒಬ್ನೆ ಮಹಾ ಬೋರಾಗುತ್ತೆ ಕಣೋ.”

“ನನ್ನ ಪುಸ್ತಕಗಳನ್ನು ಉಪಯೋಗಿಸಿಕೋ. ಮಾರ್ಕ್ಸ್, ಎಂಗೆಲ್ಸ್, ಲೆನಿನ್ ಮತ್ತು ಮಾವೋರವರ ಗ್ರಂಥಗಳಿವೆ. ಓದಿ ಬುದ್ಧಿವಂತನಾಗು!”

“ಓದ್ತೇನೆ. ಆದ್ರೂ ನೀ ಹೋಗುತ್ತಿರೋ ರೀತಿ ನೋಡಿದರೆ ನನಗೆ ಭಯವಾಗುತ್ತದೆ, ದೀಕ್ಷಿತ!”

“ಭಯವೆ? ಯಾತಕ್ಕೆ?”

“ಯಾತಕ್ಕಂದರೆ ಈ ನಿನ್ನ ವಾಮಪಕ್ಷೀಯ ಜೀವನ ಕ್ರಮ, ನಿನ್ನ ಚಿಂತನೆಗಳು, ಧೋರಣೆಗಳು, ಈಗ ನೀ ಎಲ್ಲಿಗೆ ಹೋಗುತ್ತೀ ಅಂತ ನಾನು ಕೇಳದೆ ಇದ್ದರೂ ಅದರ ರಹಸ್ಯಾತ್ಮಕತೆ, ಇದೆಲ್ಲ ಕೊನೆಗೂ ನಿನ್ನನ್ನು ಎತ್ತ ಕರೆದೊಯ್ಯುತ್ತದೆ ಅಂತ ಯೋಚಿಸ್ತ ಇದ್ದೇನೆ. ಲ್ಲ ಅಯ್ಯ, ಲೋಕದ ಪ್ರಾಬ್ಲೆಮು ಗಳನ್ನೆಲ್ಲನಾವು ಯಾತಕ್ಕೆ ಪರಿಹರಿಸಬೇಕು ಹೇಳು!”

ಅವನ ಮಾತನ್ನು ಕಿವಿಮೇಲೆ ಹಾಕಿಕೊಳ್ಳದವನಂತೆ ದೀಕ್ಷಿತ ನಗುತ್ತ ಹೇಳಿದ :

“ಒಂದು ವಿಷಯ”

“ಏನು?”

“ಆ ಬಂಗಾರು ಚೆಟ್ಟೆ ಹತ್ತಿರ ಯಾವ ಕಾರಣಕ್ಕೂ ಮಾತು ತೆಗೀಬೇಡ. ಅವನನ್ನು ಒಳಕ್ಕೆ ಬಿಡಲೂ ಬೇಡ. ಬೆರಳು ತೋರಿಸಿದರೆ ಕೈ ನುಂಗಿ ಬಿಡ್ತಾನೆ!”

ಹೀಗೆಂದು ಹೇಳಿ ಶಂಕರ ದೀಕ್ಷಿತ ಹೊರಟುಹೋದ. ವಿನಯಚಂದ್ರ ಹಿಂದಿನ ದಿನದ ನಿದ್ದೆಯನ್ನು ಮೇಕಪ್ ಮಾಡಿಕೊಳ್ಳಲು ಮಂಚದ ಮೇಲೆ ಉರುಳಿದ. ಕೂಡಲೆ ನಿದ್ರಾವಶನಾದ. ಮತ್ತೆ ಎಚ್ಚತ್ತುದು ಯಾವುದೋ ಸದ್ದುಗದ್ದಲಕ್ಕೆ-ಆಗಲೆ ಅಪರಾಹ್ನವಾಗಿತ್ತು. ಹೊರಗೆ ಬೀದಿಯಲ್ಲಿ ತಮ್ಮಟೆಯ ಬಡಿತ, ಕೂಗು, ಕೇಕೆ, ಅಳು. ಏನೆಂದು ಕಿಟಿಕಿಯಿಂದ ನೋಡಿದ. ಶವದ ಮೆರವಣಿಗೆ ಹೋಗುತ್ತಿತ್ತು. ಮುಂದೆ ಬ್ಯಾಂಡ್ ಸಂಗೀತ. ಹಾಗೂ ಹತ್ತು ಹನ್ನೆರಡು ಮಂದಿ ಜೋರಾಗಿ ಕುಣಿಯುತ್ತ ಹೋಗುತ್ತಿದ್ದರು. ಅವರು ಕಂಠಪೂರ್ತಿ ಕುಡಿದಿರಬೇಕು. ಶವದ ಹಿಂದಿನಿಂದ ಬರುತ್ತಿದ್ದವರಲ್ಲಿ ನಾಲ್ಕಾರು ಹೆಂಗಸರು ಅಳುತ್ತ ಒಂದು ಹಾಡನ್ನು ಒದರುತ್ತಿದ್ದರು. ಮೆರವಣಿಗೆ ಬಹಳ ನಿಧಾನ ಗತಿಯಲ್ಲಿ ಸಾಗುತ್ತಾ ಇತ್ತು.

ವಿನಯಚಂದ್ರ ಬಾತ್ ರೂಮಿಗೆ ಹೋಗಿ ಮುಖಕ್ಕೆ ನೀರು ಹಾಕಿಕೊಂಡು ಬಂದ. ಹೊಟ್ಟೆಹಸಿಯುತ್ತಿತ್ತು. ಅಡುಗೆ ಕೋಣೆಯಲ್ಲಿ ದೀಕ್ಷಿತ ಬೆಳಗ್ಗೆ ಮಾಡಿಟ್ಟಿದ್ದ ಅನ್ನ ಸಾರು ಉಳಿದಿತ್ತು. ಅದನ್ನ ಊಟ ಮಾಡಿ ಪಾತ್ರೆ ತೊಳೆದಿಟ್ಟು ಹೊರಬಂದ. ಒಂದು ಸಿಗರೇಟು ಹಚ್ಚಿ ಸೇದಿದ. ರೇಶ್ಮಳ ಭೇಟಿಗೆ ಇನ್ನೂ ಸಾಕಷ್ಟು ಹೊತ್ತಿದೆ- ತಕ್ಷಣವೇ ರೇಶ್ಮಾ‌ಅಲ್ಲ, ಸುನಯನ ಎನ್ನೋದು ನೆನಪಿಗೆ ಬಂತು. ರೇಶ್ಮಾ ಜಿಂದಲ್ ಗೆ ಬದಲು ಸುನಯನ ಜಿಂದಲ್ – ಜಿಂದಲ್ ಮಾತ್ರ ಒಂದೇ! ದೀಕ್ಷಿತನ ಪುಸ್ತಕ ಸಂಗ್ರಹದ ಮೇಲೆ ಯಾತಕ್ಕೆ ಕಣ್ಣೋಡಿಸಬಾರದು, ಎನಿಸಿತು. ನಾಲಕ್ಕು ವಾಲ್ಯೂಮುಗಳಲ್ಲಿದ್ದ ಮಾವೋದೆ ದುಂಗನ ಆಯ್ದ ಬರಹಗಳಲ್ಲಿ ಒಂದು ವಾಲ್ಯೂಮನ್ನು ಕೈಗೆತ್ತಿಕೊಂಡ. ಚೀನೀ ಸಮಾಜದ ವರ್ಗಭೇದಗಳು, ಹೂನಾನ್ ಪ್ರಾಂತದ ಕಾರ್ಷಿಕ ಚಳುವಳಿ, ಕೆಂಪು ದಳ, ಚಿಂಕಾಂಗ್ ಪರ್ವತ ಪ್ರದೇಶದಲ್ಲಿ ನಡೆದ ಹೋರಾಟ, ಪಾರ್ಟಿಯ ತಪ್ಪು ಕಲ್ಪನೆಗಳನ್ನು ಸರಿಪಡಿಸುವಿಕೆ, ಚೀನೀ ಕ್ರಾಂತಿ ಯುದ್ಧದ ತಾಂತ್ರಿಕ ಸಮಸ್ಯೆಗಳು, ಆರ್ಥಿಕ ಕಾರ್ಯಕ್ರಮಗಳ ಆಗತ್ಯ. ಆರ್ಥಿಕ ನೀತಿ, ಜಪಾನೀ ಸಾಮ್ರಾಜ್ಯಶಾಹಿಯನ್ನು ಎದುರಿಸುವುದು ಹೇಗೆ – ಇತ್ಯಾದಿ ಹಲವು ಹತ್ತು ವಿಷಯಗಳ ಕುರಿತು ಮಾವೋ ಮಾಡಿದ ಭಾಷಣಗಳು, ಬರೆದ ಲೇಖನಗಳು. ಒಂದು ಲೇಖನದ ಶೀರ್ಷಿಕೆ “ಕಿಡಿಯೊಂದು ಇಡೀ ಹುಲ್ಲುಗಾವಲನ್ನು ನಾಶಗೊಳಿಸಬಲ್ಲುದು.”

ಪುಸ್ತಕದ ಮೊದಲ ವಾಕ್ಯಗಳೇ ಬಹಳ ಶಕ್ತಿಯುತವಾಗಿದ್ದುವು :

“ನಮ್ಮ ವಿರೋಧಿಗಳು ಯಾರು? ಮಿತ್ರರು ಯಾರು? ಕ್ರಾಂತಿಗೆ ಈ ಪ್ರಶ್ನೆ ಬಹಳ ಮಹತ್ವಪೂರ್ಣದ್ದಾಗುತ್ತದೆ. ಚೈನಾದಲ್ಲಿ ಈ ಹಿಂದಿನ ಎಲ್ಲಾ ಕ್ರಾಂತಿಕಾರೀ ಹೋರಾಟಗಳೂ ಯಾಕೆ ವಿಫಲವಾದುವೆಂದರೆ. ಅವು ನಿಜವಾದ ವಿರೋಧಿಗಳನ್ನು ಆಕ್ರಮಿಸಲು ನಿಜವಾದ ಮಿತ್ರರ ಜತೆ ಸೇರುವಲ್ಲಿ ವಿಫಲವಾದುದೇ. ಕ್ರಾಂತಿಕಾರಿ ಪಕ್ಷವೊಂದು ಜನಸಾಮಾನ್ಯರ ಮಾರ್ಗದರ್ಶಿ ಯಾಗಿರುತ್ತದೆ, ಹಾಗೂ ಅದು ಜನರನ್ನು ಎಲ್ಲಿ ತನಕ ತಪ್ಪು ದಾರಿಗೆಳೆಯುವುದೋ ಅಲ್ಲಿ ತನಕ ಜಯಪ್ರದವಾಗೋದು ಸಾಧ್ಯವಿಲ್ಲ. ನಾವು ನಮ್ಮ ಹೋರಾಟದಲ್ಲಿ ಗೆಲ್ಲೊಂದು ಖಂಡಿತ ಸಾಧ್ಯವಾಗಬೇಕಿದ್ದರೆ, ನಿಜವಾದ ವಿರೋಧಿಗಳನ್ನು ಆಕ್ರಮಿಸಲು ನಾವು ನಿಜವಾದ ಮಿತ್ರರ ಜತೆ ಸೇರಬೇಕು. ನಿಜವಾದ ಮಿತ್ರರನ್ನು ನಿಜವಾದ ವಿರೋಧಿಗಳಿಂದ ಪ್ರತ್ಯೇಕಿಸುವುದು ಹೇಗೆ? ಆದಕ್ಕೋಸ್ಕರ ನಾವು ಚೀನಾದ ವಿವಿಧ ವರ್ಗಗಳ ಆರ್ಥಿಕ ಸ್ಥಿತಿಯನ್ನು ವಿಶ್ಲೇಷಿಸಿ ನೋಡಬೇಕು ಹಾಗೂ ಕ್ರಾಂತಿಯ ಕುರಿತಾದ ಆಯಾ ವರ್ಗಗಳ ಧೋರಣೆಗಳನ್ನು ಪರೀಕ್ಷಿಸಬೇಕು.”

ಕೋಳಿ ಸಾಕಣೆಯಿಂದ ಹಿಡಿದು ಗೆರಿಲ್ಲಾ ಯುದ್ಧದ ತನಕ ಹತ್ತು ಹಲವು ಸಂಗತಿಗಳಲ್ಲಿ ಮಾವೋನ ಆಸಕ್ತಿ. ರೈತ ಸಂಘಟನೆಗಳ ಕುರಿತಾಗಿಯೇ ಒಂದು ಇಡಿಯ ಪರಿಚ್ಛೇದ. ರೈತ ಜನರನ್ನು ಸಂಘಟಿಸುವುದು ಹೇಗೆ, ಭೂಮಾಲಿಕರ ಯಾವ ಮರ್ಮಕ್ಕೆ ಪಟ್ಟು ಹಾಕಬೇಕು, ಅವರ ಆರ್ಥಿಕ ಬಲವನ್ನು ಕುಗ್ಗಿಸುವುದು ಹೇಗೆ, ಹೆದ್ದಾರಿಗಳ್ಳರನ್ನು ಅಣಗಿಸುವುದು ಹೇಗೆ. ಸಹಕಾರಿ ಚಳುವಳಿ, ಮಾರ್ಗಗಳ ನಿರ್ಮಾಣ ಇತ್ಯಾದಿ ಇತ್ಯಾದಿ. ಯುದ್ಧ ತಂತ್ರದ ಕುರಿತಾಗಿ ಸುಮಾರು ಒಂದು ನೂರು ಪುಟಗಳ ಮಹಾ ಪ್ರಬಂಧ. ಯುದ್ಧದ ತತ್ವಗಳು ಯಾವಾಗಲೂ ವಿಕಾಸವಾದಿಯಾದುವು ಹಾಗೂ ಯುದ್ಧದ ಗುರಿ ಯುದ್ಧವನ್ನು ಕೊನೆಗಾಣಿಸುವುದೇ ಆಗಿದೆ ಎಂದು ಮಾವೋ ಬರೆದಿದ್ದ. ಹಲವಾರು ಕಡೆ ದೀಕ್ಷಿತನ ಪೆನ್ಸಿಲ್ ಗುರುತುಗಳಿದ್ದುವು. ಅಲ್ಲಲಿ ಮಾರ್ಕ್ಸ್, ಲೆನಿನ್ ಎಂದು ಮುಂತಾಗಿ ಗೀಚಿದ್ದು ಕಂಡುಬಂತು. ಓದುತ್ತ ವಿನಯಚಂದ್ರನ ಆಸಕ್ತಿ ತಾನಾಗಿಯೆ ಕುದುರತೊಡಗಿತು. ಹೊಸತೊಂದು ಲೋಕವೆ ತೆರೆದು ಕೊಂಡ ಹಾಗೆ. ತಾನೆಷ್ಟು ಅಜ್ಞಾನಿಯಿದ್ದೇನೆ ಅನಿಸಿತು. ನಿಜ, ಮಾವೋ ಬರೆದುದು ಚೀನಾ ದೇಶದ ಕುರಿತಾಗಿ – ಹಲವು ದಶಕಗಳ ಹಿಂದೆ. ಆದರೂ ತನ್ನ ಸದ್ಯದ ಸಂದರ್ಭ ಅದಕ್ಕಿಂತ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಯಾವಾಗಲಾದರೂ ಇದೆಲ್ಲವನ್ನೂ ಓದಿ ತಿಳಿಯಬೇಕು. ಬಹುಶಃ ದೀಕ್ಷಿತನ ನೆರವು ಅಗತ್ಯ.

ಸಂಜೆಯಾಗಿತ್ತು. ಎಲ್ಲಿಗೂ ಹೋಗಲು ಮನಸ್ಸಿರಲಿಲ್ಲ. ಆದರೆ ಸುನಯನ ಕಾಯ್ತಿರುತ್ತಾಳೆ ಹಾಗೂ ರಾತ್ರಿಯ ಊಟ ಆಗಬೇಕು. ತಾನೇನು ಮಾಡುತ್ತಿದ್ದೇನೆ? ಇದೆಲ್ಲ ಏನು? ಅಲೂಫ಼್ ಆಗಿದ್ದೀರಿ ಅನ್ನುತ್ತಾಳೆ ಸುನಯನ. ನಿಜ, ನಾನೀಗ ನಿಜವಾಗ್ಲೂ ಅಲೂಫ಼್? ಹೀಗಂದುಕೊಂಡೇ ಬಸ್ಸು ಹಿಡಿದು ಸಿಕಂದರಾಬಾದಿಗೆ ಹೋಗಿ ಇಳಿದ. ಲಕ್ಷಣವಾಗಿ ಡ್ರೆಸ್ ಮಾಡಿಕೊಂಡು ಅಲ್ಲಿ ಕಾಯುತ್ತಿದ್ದ ಸುನಯನಳ ಪತ್ತೆ ಹಚ್ಚುವುದು ಕಷ್ಟವಾಗಲಿಲ್ಲ. ಇಬ್ಬರು ಭಿಕ್ಷುಕ ಹುಡುಗರು ಅವಳನ್ನು ಸತಾಯಿಸುತ್ತಿದ್ದಂತೆ ಕಂಡಿತು. ಕೈಯಲ್ಲಿ ಎಂಟಾಣೆ ಇಟ್ಟ ತಕ್ಷಣ ಅವರು ಹೊರಟು ಹೋದರು.

“ಓಹ್! ವಿನ್! ನೀವು ಅರ್ಧಗಂಟೇ ಲೇಟ್ ಮಾಡಿದ್ರಿ!” ಎಂದಳು ಸುನಯನ.

“ಸಾರಿ, ಈಗೆಲ್ಲಿ ಹೋಗೋಣ?”

“ನೀವು ಹೇಳಿದಲ್ಲಿಗೆ!”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಲೆ-ಬೆಲೆ
Next post ಕವಿ ಕಲ್ಪನೆ

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…