ಸಂಗಪ್ಪ ಇಷ್ಟೆಲ್ಲ ಮಾಡ್ತಿರುವಾಗ ನಿಮ್ಮ ರಾಜೇಂದ್ರನ ಬಳಗ ಎಲ್ಲಿ ಹೋಯ್ತು ಲೇಖಕರೆ ಅಂತ ನೀವು ಪ್ರಶ್ನೆ ಹಾಕಬಹುದು; ಜೊತೆಗೆ ಅವರಿಗೆ ನಿಮ್ಮ ಈ ಬರವಣಿಗೇಲಿ ಸಂಗಪ್ಪನಷ್ಟೂ ಅವಕಾಶ ಇಲ್ಲ ಅಂತಲೂ ನೀವು ಕೇಳಬಹುದು. ನಿಮ್ಮ ಎರಡು ಪ್ರಶ್ನೆಗಳೂ ಪ್ರಾಮಾಣಿಕವಾದವುಗಳೇ. ಆದರೆ ಅವಕ್ಕೆ ಅಷ್ಟೇ ಪ್ರಾಮಾಣಿಕ ಉತ್ತರಾನೂ ಇದೆ ಎಂದರೆ ಬಲೆ ಘಾಟಿ ಅಂತೀರೇನೊ. ನಾನೇನು ಜಟ್ಟಿ ಬಿದ್ದಿದ್ದೂ ಒಂದು ಪಟೇ ಅನ್ನೊ ಗಾದೆ ಥರಾ ಉತ್ತರ ಕೊಡೊಲ್ಲ, ಅದು ನನ್ನ ಜಾಯಮಾನವೂ ಅಲ್ಲ, ಬೇಕಾದ್ರೆ ಈಗ ಓದಿ ನನ್ನ ಉತ್ತರಾನ.
ರಾಜೇಂದ್ರನ ಬಳಗ ಎಲ್ಲೂ ಹೋಗಿಲ್ಲ; ಊರಲ್ಲಿ ಇದೆ. ಒಂದು ವಿಷಯ ಚನ್ನಾಗಿ ಯೋಚ್ನೆ ಮಾಡಿ, ನಮ್ಮ ಹಳ್ಳಿಗಳ ಸ್ವರೂಪ ಎಂಥದು ಅಂತ ಥಿಂಕಿಸಿ – ಅರ್ಥಾತ್ ಚಿಂತಿಸಿ. ಸಂಗಪ್ಪನಂಥವರ ದರಬಾರು ಇಷ್ಟು ನಡೀತಿರುವಾಗ ಅಜ್ಞಾನದ ಅಸಮಾನತೆಯ ಹಳ್ಳಿಯೊಂದರಲ್ಲಿ ಪ್ರಜ್ಞಾವಂತರು ಎಷ್ಟು ಪ್ರಮಾಣದಲ್ಲಿ ಪ್ರತಿಭಟನೆ ತೋರಿಸಬಹುದೊ ಅಷ್ಟು ತೋರಿದಾರೆ ಅವರು. ಜೊತೆಗೆ ಅವರು ಸಮಾಜದ ಬದಲಾವಣೆಗೆ ಬದ್ಧ ಬುದ್ಧಿಯವರಾದರೂ, ಅದಕ್ಕಾಗಿಯೇ ಸಿದ್ಧವಾದ ನಾಡಿನ ಯವುದೇ ತಂಡದ ಕಾರ್ಯಾಚರಣೆಯ ಭಾಗವಾಗಿ ಊರಿಗೆ ಬಂದವರಲ್ಲ; ತಾವು ಬದುಕ್ತಾ ಇರೊ ಪರಿಸರದಲ್ಲಿ ತಮಗೆ ಸಾಧ್ಯವಾದಷ್ಟು ಪ್ರತಿಕ್ರಿಯೆ ತೋರುಸ್ತಾ ಇದ್ರು. ಇನ್ನು ಎರಡನೆ ಪ್ರಶ್ನೆ: ಅವರಿಗೆ ಹೆಚ್ಚು ಅವಕಾಶ ಇಲ್ಲ ಅನ್ನೋದು ನಿಜ. ಅದನ್ನು ಒಪ್ಪಿಕೊಳ್ಳೋಕೆ ನನಗೆ ಯಾವ ಸಂಕೋಚಾನೂ ಇಲ್ಲ. ಯಾಕಪ್ಪ ಇಲ್ಲಿ ಅವಕಾಶ ಇಲ್ಲ ಅಂದ್ರೆ ಹಿಂದೊಮ್ಮೆ ಹೇಳಿರೋ ಹಾಗೆ ಈ ಬರವಣಿಗೆಯ ಸ್ವರೂಪದಲ್ಲಿ ಅದಕ್ಕೆ ಉತ್ತರ ಇದೆ. ಇದು ಮುಖ್ಯವಾಗಿ ಸಂಗಪ್ಪನನ್ನು – ಅಂದರೆ ಎಲ್ಲಾ ಕಡೆ ಇರೋ ಸಂಗಪ್ಪಂದಿರನ್ನು – ಬಯಲು ಮಾಡೊ ಬರಹ. ಆದ್ದರಿಂದ ಅವನನ್ನೇ ಹೆಚ್ಚು ಬಯಲಿಗೆ ಬಿಡಲಾಗಿದೆ. ಅಗತ್ಯವಿದ್ದಷ್ಟು ರಾಜೇಂದ್ರ ಮತ್ತು ಬಳಗಕ್ಕೆ ಅವಕಾಶ. ಇಷ್ಟಕ್ಕೂ – ಅವರದು ಚಿಗುರ್ತಾ ಇರೋ ವಿರೋಧ ತಾನೆ ?
ಹೀಗೆಂದಾಕ್ಷಣ ಅವರು ತೆಪ್ಪಗೆ ಇದ್ದಾರೆ. ಎಲ್ಲೋ ಒಂದೆರಡು ಸಾಲಿನಲ್ಲಿ ಬಂದು ಬಂದ ದಾರಿಗೆ ಸುಂಕವಿಲ್ದಂತೆ ಹೋಗ್ತಾರೆ ಅಂತೇನು ಅಲ್ಲ. ಈ ಸಾರಿ ಅವರಿಗೂ ಸಾಕಾಗಿತ್ತು; ಸೀದಾ ಸಂಗಪ್ಪನ ಮನೆ ಹತ್ರಾನೆ ಬಂದು; ಚೆನ್ನಾಗಿ ದಬಾಯಿಸಿದರು:
“ನೀವು ಏನೇನು ಮಾಡ್ತೀರಿ ಅನ್ನೋದನ್ನ ಪ್ರಿಂಟು ಹೊಡೆಸಿ ಹಂಚ್‌ತೇವೆ, ಈ ಊರಲ್ಲಿ ಜನಕ್ಕೆ ನಮ್ಮ ಮಾತು ಅರ್ಥವಾಗ್ದೇ ಇರಬಹುದು. ಅರ್ಥವಾದ್ರೂ ಅಸಹಾಯಕರು ಅವರು. ನೀವೀಗ ರಾಜ್ಯಮಟ್ಟದ ಪ್ರಸಿದ್ಧಿ ಪಡೆದಿರೋರು ತಾನೆ? ನಿಮ್ಮ ಭೂಸುಧಾರಣೆ, ಭೂದಾನ, ದೇವಸ್ಥಾನ – ಎಲ್ಲಾ ಪ್ರಚಾರ ಮಾಡ್ತೇವೆ”
-ಸ್ನೇಹಿತರ ಪರವಾಗಿ ರಾಜೇಂದ್ರ ಹೇಳಿದ ಈ ಮಾತುಗಳನ್ನೆಲ್ಲ ಕೇಳಿದ ಸಂಗಪ್ಪ “ನಿಮಗೇನು ಕಾಫಿ ಕುಡೀತಿರೋ, ಟೀನೋ?” ಎಂದ ಏನೂ ಆಗದವನಂತೆ.
“ನಿಮ್ಮ ಕಾಫಿ, ಟೀಗೆ ಅಂತ ಬಂದಿಲ್ಲ ನಾವು” ಎಂದ ರಾಜೇಂದ್ರ.
“ಅದು ಗೊತ್ತಪ್ಪ ನಂಗೂ, ಆದರೂ ಮನೆಗೆ ಬಂದವರಿಗೆ ಗೌರವ ಕೊಡೋದು ನಮ್ಮ ಸಂಸ್ಕೃತಿ.”
“ಅದಿರ್ಲಿ ಇನ್ನು ಮೇಲೆ ಈ ನಾಟಕ ಬಿಡಿ, ಸ್ವಲ್ಪ ಪ್ರಾಮಾಣಿಕವಾಗಿ ಇರಿ” – ಸೋಮು ಆಗ್ರಹಪಡಿಸಿದ.
“ನಿನ್ನ ಪಾಪ್ಲಿಮೆಂಟರಿ ಪದಕೋಶಕ್ಕೆ ಇಲ್ಲಿ ಕೆಲ್ಸ ಇಲ್ಲ ಕಣೋ, ಏನಿದ್ರು ಗದೆ ತಗೊಂಡ ರುಚಿ ತೋರುಸ್ಬೇಕು. ನಾಲಗೆ ಸ್ವಲ್ಪ ಉದ್ದ ಆಗ್ಬೇಕು” – ಎಂದ ಭೀಮು.
ಸಂಗಪ್ಪ ಹಸನ್ಮುಖಿಯಾಗೇ ಇದ್ದ; “ಯುವಕರು, ಬಿಸಿರಕ್ತ, ಮಾತಾಡ್ತೀರಿ; ಮಾತಾಡಿ ನೀವು ಮಾತಾಡ್ದೆ ಇದ್ರೆ ನಾನ್ ಹೀಗೆಲ್ಲ ಮಾತಾಡೋಕಾಗ್ತೈತ?” ಎಂದ ಅತ್ಯಂತ ಸಂಯಮದಿಂದ. ಅಷ್ಟೇ ಅಲ್ಲ “ಯಾರಾದ್ರೂ ಕೆಲ್ಸ ಗಿಲ್ಸ ಬೇಕಾದ್ರೆ ಕೇಳಿ, ಕೊಡುಸ್ತೀನಿ. ಈಗೇನೊ ನನ್ನ ಮಾತು ನಡುತ್ತೆ. ಈಗ್ಲೇ ನಾಲ್ಕ್ ಜನಕ್ಕೆ ಉಪಕಾರ ಮಾಡ್ಬೇಕು.”
ಇಲ್ಲಿ ನಿಂತು ಪ್ರಯೋಜನವಿಲ್ಲವೆಂದು ಗೊತ್ತಾಯ್ತು; ಹೊರಟರು. ಆದರೆ ಕಾಫಿ ಕುಡಿಯೋವರೆಗೂ ಬಿಡಲಿಲ್ಲ ಸಂಗಪ್ಪ.
* * *
ಸಂಗಪ್ಪ ಯೋಚನೆ ಮಾಡಿದ; ಅದೇನೊ ಸಾಹಿತಿಗಳು, ಬುದ್ಧಿಜೀವಿಗಳು ಅಂತ ಹೇಳಿದ್ರಲ್ಲ; ಅವರನ್ನೂ ಪರಿಚಯ ಮಾಡ್ಕೊಳ್ಳಬೇಕು ಅನ್ನಿಸಿತು. ಒಂದು ದಿನ ರಾಜೇಂದ್ರನಿಗೆ ಹೇಳಿ ಕಳಿಸಿದ.
“ನೋಡು ರಾಜೇಂದ್ರ, ನಮ್ಮೂರಲ್ಲಿ ಕನ್ನಡ ರಾಜ್ಯೋತ್ಸವ ಮಾಡ್ಬೇಕು. ಬಂತಲ್ಲ
ನವಂಬರ್ ತಿಂಗಳು.”
“ನಿಮ್ಗೇನ್ಬಂತು?” – ರಾಜೇಂದ್ರ ಪ್ರಶ್ನಿಸಿದ.
“ಯಾಕೆ ?”
“ಎಲ್ಲಾ ಬಿಟ್ಟು ಕನ್ನಡದ ಕಡೆ ಗಮನ ಹರ್ಸಿದ್ರಲ್ಲ?”
“ಜನಕ್ಕೆ ಏನು ಬೇಕೊ ಅದರ ಕಡೆ ನಮ್ಮ ಗಮನ ಹರೀಬೇಕಪ್ಪ”
“ಅಂತೂ ಕನ್ನಡಕ್ಕೂ ಗ್ರಹಚಾರ ಕಾದಿದೆ ಅನ್ನಿ.”
“ಅದ್ಯಾಕಂಗಂಬ್ತೀಯ? ಕನ್ನಡ ಅಂದ್ರೆ ಏನಂದ್ಕಂಡೆ, ಎಲ್ರೂ Learn ಮಾಡ್ಬೇಕು. ಅದ್ರ Meaning ತಿಳ್ಕೋಬೇಕು.”
“ಅದ್ಸರಿ ಈಗ ನನ್ನ ಯಾಕೆ ಕರೆಸಿದ್ರಿ?” – ರಾಜೇಂದ್ರ ಸಹನೆ ಮೀರಿ ಕೇಳಿದ.
“ಇನ್ನೇನೂ ಇಲ್ಲ, ಈ ಸಾರಿ ಕನ್ನಡ ರಾಜ್ಯೋತ್ಸವ ಮಾಡ್ವಾಗ ನೀವೇನೂ ತಕರಾರು ಮಾಡ್ಬಾರ್ದು. ಅಂದ್ರೆ ಇಷ್ಟು ದಿನ ಜನಕ್ಕೆ ಏನೇನೊ ಹೇಳ್ತಿದ್ರಿ, ಇದು ಕನ್ನಡ ಮಾತೆ ಕೆಲ್ಸ; ಹಂಗೆಲ್ಲ ಮಾಡ್ಬಾರ್ದು. ಆಮ್ಯಾಲೆ ಯಾರಾದ್ರೂ ಸಾಹಿತಿ ಕರುಸ್ಬೇಕು. ಇದಕ್ಕೆ ನೀನೇ ಸಹಾಯ ಮಾಡ್ಬೇಕು.” – ವಿಷಯ ತಿಳಿಸಿದ ಸಂಗಪ್ಪ.
“ನೀವೇನಾರ ಮಾಡ್ಕೊಳ್ಳಿ, ನಾವೇನು ಅಡ್ಡ ಬರೋಲ್ಲ. ನಾವೂ ರಾಜ್ಯೋತ್ಸವದಲ್ಲಿ ಭಾಗವಹಿಸ್ತೇವೆ. ಆದ್ರೆ ಸಾಹಿತಿ ಗೀಹಿತಿ ನೀವೇ ಒಪ್ಪಿಸ್ಕೊಂಡು ಬನ್ನಿ.”
ಸಂಗಪ್ಪ ರಾಜಧಾನಿಗೆ ಬಂದೇ ಬಿಟ್ಟ ಸಾಹಿತಿಗಳ ಭೇಟಿಗೆ. ಪರಿಚಯದವರೊಬ್ಬರನ್ನು ವಿಚಾರಿಸಿದ; “ಯಾರಾದ್ರೂ ಸಾಹಿತಿ ಬೇಕಲ್ಲ? ಎಷ್ಟಾನ ಖರ್ಚಾಗ್ಲಿ?”
“ಯಾಕೆ ಕೊಂಡ್ಕಂಬ್ತೀರ?”
“ಎಲ್ಲಾ ಬಿಟ್ಟು ಕತೆ ಗಿತೆ ಬರ್ಯೋರ್ನ ಕೊಂಡ್ಕೊಳ್ಳೋದುಂಟ? ಬರೀ ದಂಡ; ಅಷ್ಟೆ. ಕನ್ನಡ ರಾಜ್ಯೋತ್ಸವಕ್ಕೆ ಕರ್ಕಂಡ್ ಹೋಗ್ಬೇಕು.”
“ಎಂಥ ಸಾಹಿತಿಗಳು ಬೇಕು ನಿಮಗೆ? ಹಾಲಿ ಈಗ ಚಲಾವಣೇಲಿರೋ ಬೇಕೊ, ಹಳಬರು ಬೇಕೊ
?”
“ಹಾಲಿ ಚಲಾವಣೇಲೂ ಇರ್ಬೇಕು. ಪ್ರಸಿದ್ಧರೂ ಆಗಿರ್ಬೇಕು.”
“ಹಂಗಾದ್ರೆ ಇವತ್ತು ಚಲಾವಣೇಲಿರೋರು, ಸುದ್ದೀಲಿರೋರು ಆಂದ್ರೆ ಬಂಡಾಯ ಸಾಹಿತಿಗಳು, ಅವರ ಹತ್ರಾನೆ ಬನ್ನಿ ಹೋಗೋಣ.”
ಕರೆದೊಯ್ದರು; ಒಬ್ಬ ಬಂಡಾಯ ಸಾಹಿತಿಯ ಪರಿಚಯ ಮಾಡಿಕೊಟ್ಟರು. ಇದೇನು ಇವಯ್ಯ ಹರೇದ ಹುಡುಗನ ಹತ್ತರ ಕರ್ಕೊಂಡು ಬಂದ ಅಂಡ್ಕೊಂಡ ಸಂಗಪ್ಪ. ‘ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು’ ಅನ್ನೋ ಮಾತು ನೆನಪಿಗೆ ಬಂದು ಸುಮ್ಮನಾದ.
“ನೀವೇನೊ ಸಂಗಪ್ಪ ಅಂದ್ರೆ ?” – ‘ಬಂಸಾ’ ಅಂದರೆ – ಬಂಡಾಯ ಸಾಹಿತಿ – ಕೇಳಿದ.
“ಹೌದು ಸಾಯ್ತಿಗಳೆ, ಅದೆಂಗ್ ಗೊತ್ತಾಯ್ತು ನಿಮಗೆ?”
“ಆದೇ ಪೇಪರಲ್ಲಿ ಓದಿದ್ದೀವಲ್ಲ.”
“ಹೌದೌದು ಅವನೇ ನಾನು” – ಕಣ್ಣರಳಿಸಿ ಹೇಳಿದ ಸಂಗಪ್ಪ.
“ಹೌದು ಚೆನ್ನಾಗಿ ಗೊತ್ತಿದೆ ನನಗೆ. ನಿಮ್ಮನ್ನೇ ನಾಯಕನನ್ನು ಮಾಡ್ಕೊಂಡು ಒಂದು ಕಾದಂಬರಿ ಬರೀಬೇಕು ಅಂತಿದ್ದೀನಿ.” – ‘ಬಂಸಾ’ ಪ್ರಕಟಿಸಿದ.
“ಹೌದಾ ಸ್ವಾಮಿ? ಎಂಥ ಪುಣ್ಯದ ಕೆಲಸ! ಅದೇನೊ ಕಾದಂಬರಿ ಅಂದ್ರೆ ಎಷ್ಟು ಪುಟ ಇರುತ್ತೆ ಸಾಯ್ತಿಗಳೆ” – ಬಾಯಲ್ಲಿ ಜೊಲ್ಲು ಸುರಿಸುತ್ತ ಕೇಳಿದ ಸಂಗಪ್ಪ.
“ಬರೀತಾ ಗೊತ್ತಾಗುತ್ತೆ, ಎಷ್ಟಾದ್ರೂ ಆಗಬಹುದು.”
“ಹಂಗಾರೆ ಒಸಿ ಜಾಸ್ತಿನೆ ಬರೀರಿ. ಎಷ್ಟಾನ ಆಗ್ಲಿ ಬರೀರಿ. ಎಷ್ಟು ದುಡ್ಡು ಅದುಕ್ಕೆ?”
ಬಂಡಾಯ ಸಾಹಿತಿ ದುರುಗುಟ್ಟಿ ನೋಡಿದ; “ಏನ್ ಹೇಳ್ತಾ ಇರೋದು ನೀವು?” – ಒಂದು ಪ್ರಶ್ನೆ ಎಸೆದ.
“ಅದೇ ನೀವು ಬರ್ಯೋದು…”
“ಹೌದು ಬರೀತೀನಿ; ನಿಮ್ಮ ಪುಣ್ಯದ ಕೆಲ್ಸಾನೆಲ್ಲ ಬಯಲು ಮಾಡ್ತೀನಿ.” ಗಂಭೀರವಾಗಿ ಗಡುಸಾಗಿ ಹೇಳಿದ ‘ಬಂಸಾ’
“ಅಷ್ಟು ಮಾಡಿ ನಿಮ್ಮ ಪುಣ್ಯಕ್ಕೆ ಎಷ್ಟು ಖರ್ಚಾದ್ರೂ ಪರವಾಗಿಲ್ಲ. ನಾನ್ ಕೊಡ್ತೀನಿ.”
ಬಂಡಾಯ ಸಾಹಿತಿ ಸಿಡಿದ; “ಎದ್ದೇಳ್ರಿ ಮೇಲೆ” ನಿಟ್ಟುಬಿದ್ದ ಸಂಗಪ್ಪನನ್ನು ನೋಡಿ ಮುಂದುವರಿಸಿದ: “ನೀವೇನು ಅಂತ ನಂಗೊತ್ತು. ನಿಮ್ಮ ಪುಣ್ಯದ ಕೆಲಸ ಯಾವ್ಯಾವು ಅಂತಲೂ ಗೊತ್ತು. ಎಲ್ಲಾ ಮುಖವಾಡ ಹಾಕ್ಕೊಂಡು ಜನವಿರೋಧಿ ಕೆಲ್ಸ ಮಾಡ್ತಿದ್ದೀರಿ; ಶೋಷಕರು ನೀವು, ಶೋಷಣೆ ಮಾಡೋರು; ನಿಮ್ಮ ಅನ್ಯಾಯಾನೆಲ್ಲ ಬಯಲಿಗೆಳೀತೀನಿ.”
ಸಂಗಪ್ಪ ದಿಗ್ಭ್ರಾಂತನಾದ; ಹೀಗೆ ಬಿಟ್ಟರೆ ಕೆಲಸ ಕೆಡುತ್ತೆ ಅಂತ ತಿಳಿದು “ನೋಡಿ ಸ್ವಾಮಿ, ನಾನ್ ಮಾತಿಗೆ ತಪ್ಪೋನಲ್ಲ, ನೀವಿಷ್ಟು ಅಂದ್ಮೇಲೂ ನಾನ್ ಮೊದಲಿನ ಮಾತೇ ಹೇಳ್ತೀನಿ; ಎಷ್ಟು ಬೇಕಾದ್ರೂ ಕೊಡ್ತೀನಿ ನಿಮಿಗೆ ಆ ಮಾತು ಉಳಿಸ್ಕಂತೀನಿ. ಕಾದಂಬರಿ ಮಾತ್ರ ಬರೀ ಬ್ಯಾಡ್ರಿ ನನ್‌ಮ್ಯಾಲೆ’ ಎಂದು ಅಂಗಲಾಚತೊಡಗಿದ.
‘ಬಂಸಾ’ಗೆ ಬೇಜಾರಾಯಿತು. “ನೋಡ್ರಿ ನೀವು ಸುಮ್ನೆ ಹೋಗಿ, ನನ್ನ ತಲೆ ತಿನ್ಬೇಡಿ. ಈ ಮಾತೆಲ್ಲ ಇಲ್ಲಿ ಆಡಿ ಬಾಯಿ ನೋಯಿಸ್ಕೋಬೇಡಿ. ಹೋಗ್ತಿರೊ ನಾನೇ ಎದ್ದು ಬಾಗಿಲಿಗೆ ಬೀಗ ಜಡಕೊಂಡು ಹೋಗಲೊ?” – ಸಿಟ್ಟಿನಿಂದ ಎಚ್ಚರಿಕೆ ಕೊಟ್ಟ.
ಮೊದಲೇ ಬಂಡಾಯ ಸಾಹಿತಿ, ಬೀಗ ಹಾಕಿದ್ರೂ ಹಾಕಿದ್ನೆ; ಆಮ್ಯಾಲೆ ಒಳಗೇ ಸಾಯ್ಬೇಕಾದೀತು ಅಂತ ಸಾವ್ಕಾರ್ ಸಂಗಪ್ಪ ಸದ್ದಿಲ್ಲದೆ ಹೊರಟ.
ಹೊರ ಬಂದವನೇ ಪರಿಚಯಸ್ಥನ ಮೇಲೆ ತಿರುಗಿ ಬಿದ್ದ; “ಎಂಥವ್ನತ್ರ ಕರ್ಕಂಡ್ ಬಂದೆಯಪ್ಪ. ಅವ್ನಿಗೆ ಸ್ವಲ್ಪನಾದ್ರೂ ಸಂಸ್ಕೃತಿ ಇಲ್ಲ. ನನ್ನಂಥೋನ್ನ ಹೆಂಗ್ ಮಾತಾಡುಸ್ಬೇಕು ಅಂತ ಗೊತ್ತಿಲ್ಲ. ಸಾಯ್ತಿನಂತೆ ಸಾಯ್ತಿ, ಬಡ್ಕೊಂಡ್ರು ತಲೇಗೆ. ಅವ್ನು ನಮಗೆ ಹೇಳದೆ ಹೊರ್ಗಡೆ ಬಂದು ಬೀಗ ಹಾಕಿದ್ದರೆ ಏನಯ್ಯ ಗತಿ? ಇಂಥೋರ ತಂಟೆ ಬ್ಯಾಡಪ್ಪ. ಯಾರಾದ್ರು ಹಳೇಕಾಲದ ವಿಚಾರ್ದೋರ್ನ ತೋರ್ಸು ನಿನ್ನ ಧರ್ಮ” ಎಂದ.
ಈ ಸಾರಿ, ಆತ, ಬಹಳ ಯೋಚನೆ ಮಾಡಿ ಸಾಹಿತಿ ಸುಂದರಯ್ಯನವರ ಹತ್ತಿರ ಕರೆದುಕೊಂಡು ಹೋದ; ಮನೆಯ ಹೊರಗೆ “ಸಾಹಿತಿ ಸುಂದರಯ್ಯ, ಎಂ. ಎ., ಖ್ಯಾತ ವಿದ್ವಾಂಸರು, ಕವಿಗಳು, ಪ್ರಕಾಂಡ ಪಂಡಿತರು” ಎಂಬ – ಫಲಕ ರಾರಾಜಿಸುತ್ತಿತ್ತು. ಒಳಗೆ ಹೋಗಿ ತನ್ನ ಪರಿಚಯ ಹೇಳಕೊಂಡ ಕೂಡಲೆ “ನೀವೇನೊ ಸಂಗಪ್ಪ ಅಂದ್ರೆ?” ಅಂತ ಅವರೂ ಕೇಳಿದರು. ತಕ್ಷಣ ಬಂಡಾಯ ಸಾಹಿತಿಯ ಪ್ರಶ್ನೆ ನೆನಪಿಗೆ ಬಂತು. ಬಂಡಾಯ ಸಾಹಿತಿ ಮೊದಲು ಕೇಳಿದ್ದು ಹೀಗೇನೆ. ಆದ್ದರಿಂದ ಏನು ಹೇಳೋಣ ಅಂದುಕೊಳ್ಳುವಾಗಲೇ “ನಿಮ್ಮ ವಿಷಯ ನನಗೆ ಚೆನ್ನಾಗಿ ಗೊತ್ತಿದೆ. ನಿಮ್ಮನ್ನೇ ಗಮನದಲ್ಲಿಟ್ಟುಕೊಂಡು ನಾನೊಂದು ಕಾವ್ಯ ಬರೀಬೇಕು ಅಂತಿದ್ದೇನೆ” ಎಂದುಬಿಡೋದೆ?
ಸಂಗಪ್ಪನಿಗೆ ‘ಬಂಸಾ’ ಭೇಟಿಯ ಚಿತ್ರ ಕಣ್ಣು ಮುಂದೆ ಬಂತು. ಕಾದಂಬರೀನೆ ಹಂಗಿರಬೇಕಾದ್ರೆ ಕಾವ್ಯ ಇನ್ನೆಂಗಿರುತ್ತೆ ಅಂತ ಅತ್ಯಂತ ಗಾಬರಿಯಿಂದ ಕೈಮುಗಿದು ಕೇಳಿಕೊಂಡ: “ದಯವಿಟ್ಟು ಹಾಗೆ ಮಾಡ್ಬೇಡಿ ಸ್ವಾಮಿ, ನಿಮಗೆ ಎಷ್ಟು ಬೇಕಾದ್ರೂ ಹಣ ಕೊಡ್ತೀನಿ. ನನ್ಮೇಲೆ ಮಾತ್ರ ಬರೀಬ್ಯಾಡಿ, ಊರಿಗೆ ಹೋದ್ರೆ ಅಲ್ಲೊಬ್ಬ ಐದಾನೆ; ಅವ್ನೂ ಬರೀತೀನಿ ಅಂತಾನೆ. ಇಲ್ಲಿಗೆ ಬಂದ್ರೆ ಅವನ್ಯಾರೊ ಒಬ್ಬ ಕಾದಂಬರಿ ಬರೀತೀನಿ ಅಂದ, ಈಗ ನೀವು ಬ್ಯಾರೆ ಹಂಗಂತಿದ್ದೀರಿ. ನಿಮ್ಮ ಧರ್ಮ ಬರೀಬ್ಯಾಡ್ರಿ”
ಸುಂದರಯ್ಯನವರಿಗೆ ಆಶ್ಚರ್ಯವೋ ಆಶ್ಚರ್ಯ! “ಅಲ್ಲ ಸಂಗಪ್ಪನೋರೆ, ನೀವು ಮಾಡಿರೊ ಪುಣ್ಯದ ಕೆಲ್ಸ ಎಲ್ಲ ನನಗೆ ಗೊತ್ತಿದೆ. ಪೇಪರ್ನಲ್ಲಿ ಓದಿದ್ದೀನಿ. ಒಂದ್ಸಾರಿ ನಿಮ್ಮನ್ನ ಭೇಟಿ ಮಾಡ್ಬೇಕು ಅಂತಿದ್ದೆ. ನೀವ್ಯಾಕೆ ಬರೀಬೇಡಿ ಅಂತ ಕೇಳ್ತಿರೊ ಗೊತ್ತಾಗ್ತಿಲ್ಲ. ಇದು ನಿಮ್ಮ ದೊಡ್ಡತನ ತೋರ್ಸುತ್ತೆ. ಅದೆಷ್ಟು ಜನಕ್ಕೆ ಸಹಾಯ ಮಾಡಿದ್ದೀರಿ ಏನ್ಕತೆ! ಗಾಂಧೀಜಿಗೆ ಒಂದು ಗುಡೀನೆ ಕಟ್ಟಿದ್ದೀರಿ. ಚಿಕ್ಕ ಊರಲ್ಲಿ ಹರಿಜನರಿಗೆ ಅಷ್ಟು ಪ್ರಾಶಸ್ತ್ಯ ಕೊಡೊ ಧೈರ್ಯ ತೋರ್ಸಿದಿರಿ…”
ಸಂಗಪ್ಪನಿಗೆ ಈಗ ಸ್ವಲ್ಪ ಧೈರ್ಯ ಬರೋಕೆ ಪ್ರಾರಂಭವಾಯ್ತು. ಸುಂದರಯ್ಯ ಮುಂದುವರಿಸಿದರು: “ಇಷ್ಟೆಲ್ಲ ಮಾಡಿದ್ರೂ ಹೆಸರಿಗೆ ಆಸೆ ಪಡ್ತಿಲ್ಲ. ಎಲ್ಲರೂ ‘ದುಡ್ಡು ಕೊಡ್ತೀನಿ, ನನ್ನ ಮೇಲೆ ಪುಸ್ತಕ ಬರೀರಿ’ ಅಂತ ಅಂಗಲಾಚ್ತಾರೆ. ನೀವು ಇದಕ್ಕೆ ತದ್ವಿರುದ್ಧ; ದುಡ್ಡು ಕೊಡ್ತೀನಿ, ಪುಸ್ತಕ ಬರೀಬೇಡಿ ಅಂತಿದ್ದೀರಿ. ಇಂಥ ಜನ ಲಕ್ಷಕ್ಕೊಬ್ರೂ ಸಿಕ್ಕೊಲ್ಲ. ನಿಜಕ್ಕೂ ನಿಮ್ಮ ದರ್ಶನದಿಂದ ನಾನು ಸಂತೋಷಿತನಾದೆ; ನನ್ನ ಕಣ್ಣಲ್ಲಿ ಆನಂದಭಾಷ್ಪ ಸುರೀತಿದೆ. ನಿಮಗೆ ಕಾಣುತ್ತೋ ಇಲ್ಲವೊ ಗೊತ್ತಿಲ್ಲ; ಯಾಕೇಂದ್ರೆ ನನಗೆ ಕನ್ನಡಿ ಇದೆ ನೋಡಿ.”
ಸಂಗಪ್ಪನಿಗೆ ಈಗ ಖಾತರಿಯಾಯ್ತು. ಇವರು ತನ್ನ ಬಗ್ಗೆ ಮೆಚ್ಚುಗೆ, ಗೌರವ ಇರೋರು ಅನ್ನೋದು ಗ್ಯಾರಂಟಿಯಾಯ್ತು. ಆದರೆ ನಿರಾಶೆಯೂ ಆಯಿತು. ಪುಸ್ತಕ ಬರೆಯೋದೆ ಬೇಡ ಅಂತ ಒತ್ತಾಯ ಮಾಡಿದೆನಲ್ಲ; ಏನ್ ಮಾಡೋದು? ಕಡೆಗೆ ಹೇಳಿದ:
“ನಾನು ಯಾವ ಫಲಾಪೇಕ್ಷೆಯೂ ಇಲ್ಲದೆ ಕೆಲಸ ಮಾಡಿದ್ದೇನೆ. ಪ್ರಚಾರ ಬೇಕಿರಲಿಲ್ಲ; ಅದಾಗಿ ಸಿಕ್ತು. ಈಗ ಪುಸ್ತಕ ಬ್ಯಾರೆ ಯಾಕೆ ಅಂತ. ಏನೊ ನಿಮ್ಮಂಥ ದೊಡ್ಡ ಸಾಹಿತಿಗಳು ಬರೀತೀನಿ ಅಂದಾಗ ಬ್ಯಾಡ ಅನ್ನೋಕೆ ಬಾಯಿಲ್ಲ. ಆದ್ರೂ ಹಂಗಂದೆ. ನೀವು ಬರ್ದೇ ಬರೀತೀನಿ ಅಂದ್ರೆ ಬ್ಯಾಡ ಅಂದು ಮತ್ತೊಂದು ಸಾರಿ ನಿಮ್ಮ ಮರ್ಯಾದೆ ಕಳೆಯೋಲ್ಲ; ಯಾಕೇಂದ್ರೆ ನನಗೆ ನಿಮ್ಮಂಥ ಕವಿಗಳ ಮರ್ಯಾದೆ ಮುಖ್ಯ. ಬರೆದರೆ ಒಂದಂತೂ ನನ್ನ ಒತ್ತಾಯಕ್ಕೆ ಒಪ್ಪಬೇಕು ನೀವು. ಅದಕ್ಕೆ ಒಂದು ಪೈಸೇನೂ ಬೇರೇರು ಖರ್ಚು ಮಾಡಬಾರದು. ಎಲ್ಲಾ ನಂದೇ. ಅಷ್ಟಾದ್ರೂ ನಿಮ್ಮ ಸೇವೆ ಮಾಡೊ ಅವ್ಕಾಶ ಕೊಡಿ.”
“ಆಗಲಿ ಸಂಗಪ್ಪನೋರೆ. ನಿಮ್ಮ ಮೇಲೆ ‘ಸಂಗೇಶ ಚರಿತೆ’ ಅಂತ ಕಾವ್ಯ ಬರೆದೇಬಿಡ್ತೀನಿ-” ಎಂದು ಹೇಳಿ “ಇರಿ ನನ್ನ ಪುಸ್ತಕಗಳನ್ನು ತೋರಿಸ್ತೀನಿ” ಎಂದು ಎದ್ದು ಒಳಹೋದರು.
ಸಂಗಪ್ಪನ ಸಂತೋಷಕ್ಕೆ ಪಾರವೇ ಇಲ್ಲ. ‘ಆ ಶಾನುಭೋಗ ಪದ್ಯ ಬರೀತೀನಿ ಅಂದೋನು ಬರೀಲೆ ಇಲ್ಲ. ಈಗ ಹೆಂಗಾಯ್ತು. ಅದ್ಕೇ ಎಲ್ಲಾ ಕಾಲ ಕೂಡಿ ಬರ್ಬೇಕು. ಅವ್ನೊಬ್ಬ ಬಂಡಾಯ ಸಾಹಿತಿನಂತೆ. ಅವ್ನಿಗೆ ಬಾಯೇ ಸರಿಯಿಲ್ಲ’ ಎಂದು ಒಳಗೇ ಬಯ್ಕೊಳ್ತಿರುವಾಗ ತಮ್ಮ ಪುಸ್ತಕಗಳ ಕಂತೆ ಸಮೇತ ಸುಂದರಯ್ಯ ಬಂದರು. ಅವುಗಳಲ್ಲಿ ಹತ್ತು ಪುಟದಿಂದ ಐವತ್ತು, ನೂರು, ಇನ್ನೂರು – ಹೀಗೆ ರಖಂದಾರಿ ಪುಟದ ಪುಸ್ತಕಗಳಿದ್ದವು. ಪುಸ್ತಕಗಳನ್ನು ತೋರಿಸುತ್ತ ಹೇಳಿದರು:
“ನೋಡಿ, ನಾನು ಕಾಲೇಜ್ ಓದ್ತಾ ಇದ್ದಾಗ್ನಿಂದ ಸಾಹಿತ್ಯ ಬರೀತಾ ಇದ್ದೀನಿ. ಇದು ನಾನು ಬಿ.ಎ. ಓದ್ತಾ ಇದ್ದಾಗ ಬರೆದ ಸೆಮಿನಾರ್ ಪ್ರಬಂಧ. ಪ್ರಿಂಟು ಮಾಡ್ಸಿದ್ದು, ಹತ್ತು ಪುಟ ಇದೆ. ಇನ್ನೊಂದು ಎಂ. ಎ. ಸೆಮಿನಾರು, ಫಸ್ಟ್ ಇಯರು, ಹದಿನೈದು ಪುಟ, ಸೆಕೆಂಡ್ ಇಯರ್‌ದು, ಇಪ್ಪತ್ತು ಪುಟ. ಮೇಷ್ಟ್ರರಾದ್ಮಲೆ ಐವತ್ತು ಪುಟದ ಪುಸ್ತಕ, ಸರ್ವೀಸಾಗ್ತ ಆಗ್ತಾ ಹೋದಂಗೆ ಪುಟಾನೂ ಜಾಸ್ತಿ ಮಾಡ್ದೆ, ಹತ್ತರತ್ತರ ಐವತ್ತು ಬರ್ದಿದ್ದೀನಿ. ಏನ್ಬಂತು ಹೇಳಿ, ಒಂದು ಸಾರೀನಾದ್ರೂ ಸನ್ಮಾನ ಮಾಡ್ಲಿಲ್ಲ ಯಾರೂನು. ನಾನು ನನಗೆ ಸನ್ಮಾನ ಆಗ್ಬೇಕು ಅಂತ ಆಸೆ ಪಡ್ತಿಲ್ಲ. ಹೀಗೆ ಸನ್ಮಾನ ಮಾಡಿದ್ರೆ ಸಾಹಿತ್ಯಕ್ಕೆ ಸನ್ಮಾನ ಆದಂತೆ; ಕನ್ನಡ ಭಾಷೆಗೆ ಸನ್ಮಾನ ಆದಂತೆ…”
ಸಂಗಪ್ಪ ಸಮಯ ಪ್ರಜ್ಞೆ ಕಳಕೊಳ್ಳಲಿಲ್ಲ, ತಕ್ಷಣ ಘೋಷಿಸಿದ: “ಆ ಕೆಲಸ ನಾನ್ ಮಾಡ್ತೀನಿ ಬಿಡಿ. ಕನ್ನಡ ರಾಜ್ಯೋತ್ಸವಕ್ಕೆ ಕರ್ಯೋಣ ಅಂತ ನಾವು ಬಂದದ್ದು. ಅವತ್ತೇ ನಿಮ್ಮನ್ನು ಸನ್ಮಾನಿಸ್ತೇವೆ.”
“ಬೇಡ ಬಿಡಿ, ಯಾಕ್ ನಿಮಗೆ ತೊಂದರೆ ಅದೂ ಕನ್ನಡ ರಾಜ್ಯೋತ್ಸವ, ಸನ್ಮಾನ ಎರಡೂ ಮಾಡೋಕೆ ಎಷ್ಟು ತೊಂದ್ರೆ ಆಗುತ್ತೆ ನಿಮಗೆ! ಎರಡು ಕೆಲ್ಸಾನು ಒಂದೇ ಸಾರಿ ಮಾಡೋದು ಅಂದ್ರೆ ಸುಮ್ನೆ ಆಯ್ತ? ಅದಕ್ಕೆ ಬೇಡ ಬಿಡಿ, ನಿಮಗೆ ತೊಂದರೆ ಕೊಡೋಕೆ ಇಷ್ಟವಿಲ್ಲ ನನಗೆ.”
ಹೋಗ್ಲಿ, ಈಗ ರಾಜ್ಯೋತ್ಸವಕ್ಕೆ ನಮ್ಮೂರಿಗೆ ಬನ್ನಿ. ಆಮೇಲೆ ಒಂದಿನ ಸನ್ಮಾನ ಬೇರೆ ಮಾಡ್ತೀನಿ.”
“ಅದೂ ನಿಮಗೆ ಸುಮ್ನೆ ತೊಂದರೆ.”
“ಎಂಥದೂ ಇಲ್ಲ ನಿಮ್ಮಂಥೋರಿಗೆ ಮಾಡ್ದೆ ಯಾರಿಗೆ ಮಾಡ್ಬೇಕು ಸನ್ಮಾನ?”
ಸುಂದರಯ್ಯನವರು ತಮ್ಮ ಬೆರಳಲ್ಲಿರುವ ಉಂಗುರವನ್ನೇ ದೃಷ್ಟಿಸಿದರು. ಒಂದೆರಡು ನಿಮಿಷ ಕಣ್ಣು ಮುಚ್ಚಿ ಕೂತರು. ಸಂಗಪ್ಪನಿಗೆ ಏನೂ ಅರ್ಥವಾಗದೆ ಸುಮ್ಮನೆ ನೋಡ್ತಿದ್ದ. ಕಣ್ಣು ತೆಗೆದ ಸುಂದರಯ್ಯ ಬೆರಳಲ್ಲಿದ್ದ ಉಂಗುರ ತೋರಿಸಿ “ಇದು ಯಾರ್ ಕೊಟ್ಟಿದ್ದು ಗೊತ್ತ?” ಎಂದರು.
“ಹಿಂಗೇ ಯಾರೋ ನಿಮ್ಮನ್ನು ಮೆಚ್ಚಕೊಂಡೋರು ಕೊಟ್ಟಿರ್ಬೇಕೇನೊ”
“ನಮ್ಮ ಬಾಬಾ ಕೊಟ್ಟಿದ್ದು. ನಮ್ಮ ಬಾಯಿ ಬಾಬಾ”
“ಬಾಯಿ ಬಾಬ?”
“ಹೌದು; ನಿಮಗೆ ಗೊತ್ತೇ ಇರ್ಬೇಕಲ್ಲ? ಅವರು ಬಾಯಿಂದ್ಲೇ ಏನೇನೊ ವಸ್ತು ತೆಗೀತಾರೆ ಅವರು ದಯಪಾಲಿಸಿದ್ದು ಇದು. ನನಗೆ ಒಂದು ಆಸೆ ಇದೆ ಸಾವ್ಕಾರ್ರೆ; `ನಿನ್ನ ಸನ್ಮಾನ ಎಲ್ಲಿ ಆದ್ರೂ ನಾನಲ್ಲಿ ಆಶೀರ್ವದಿಸ್ತೀನಿ’ ಅಂತ ಬಾಯಿ ಬಾಬ ಅವರು ಹೇಳಿದ್ದರು. ಅದಕ್ಕೆ ಧಕ್ಕೆಯಾಗಬಾರದು ಅಂತ ಆಸೆ.”
“ಛೆ! ಛೆ! ನಾನು ಎಲ್ಲಾ ಅರ್ಥ ಮಾಡ್ಕಂತೀನಿ. ಅವರ ಎದ್ರು ನಿಮ್ಗೆ ಸನ್ಮಾನ ಮಾಡ್ತೀನಿ; ಸರಿ ತಾನೆ? ನನ್ನ ಪುಸ್ತಕಕ್ಕೆ ಅಡ್ವಾನ್ಸ್ ಅಂತ ಒಂದು ಸಾವಿರ ರೂಪಾಯಿ ಊರಿಗೆ ಬಂದಾಗ ಕೊಡ್ತೀನಿ ಸರಿ ತಾನೆ?”
“ಅದೂ ಸರಿ; ಇದೂ ಸರಿ.”
* * *
ಕನ್ನಡ ರಾಜ್ಯೋತ್ಸವದ ದಿನ ಈ ಸಾಹಿತಿಯ ಪರಿಚಯ ಮಾಡ್ಕೊಡೋಕೆ ರಾಜೇಂದ್ರ ಒಪ್ಪಲಿಲ್ಲ. ಸಂಗಪ್ಪ ಒತ್ತಾಯಿಸಲೂ ಇಲ್ಲ. ತಾನೇ ಮಾಡ್ಬೇಕು ಅನ್ನೋ ಆಸೆ ಬೇರೆ ಇತ್ತು. ಪರಿಚಯ ಮಾಡಿದ ಆಮೇಲೆ ಸುಂದರಯ್ಯನವರು ಕನ್ನಡದ ವಿಷಯ ಶುರುಮಾಡಿ ಸಂಗಪ್ಪನ ವಿಷಯಕ್ಕೆ ಬಂದು ಅಲ್ಲೇ ನಿಂತರು. ಅವರು ಕುಂತಾಗ್ಲೆ ಅದೂ ಮುಗಿದಿದ್ದು.
ಕಡೇಲಿ ಮತ್ತೆ ಸಂಗಪ್ಪ ಅಧ್ಯಕ್ಷ ಭಾಷಣಕ್ಕೆ ನಿಂತ: “ನೋಡಿ, ಕನ್ನಡಿಗರು ಬಹಳ ಹಿಂದಿನಿಂದ ಇದಾರೆ. ಬಹಳ ಪ್ರಾಚೀನರು ನಾವು. ಯಾಕೆ ಗೊತ್ತ? ನಾವು ಆಂಜನೇಯನ ನಾಡಿನವರು. ಮನುಷ್ಯನ ಮೂಲ ಮಂಗ ಅಂದ್ಮೇಲೆ ನಾವೇ ಪ್ರಪಂಚಕ್ಕೆಲ್ಲ ಪ್ರಾಚೀನರು. ನಮ್ಮ ಕನ್ನಡ ಮೊದ್ಲು ಕೋತಿಗಳ ಭಾಷೆ ಆಗಿತ್ತು ಅಂತ ಇದ್ರಿಂದ ಗೊತ್ತಾಗುತ್ತೆ. ಕನ್ನಡಿಗರು ಮನುಷ್ಯರಾದ್ಮೇಲೆ ಕನ್ನಡ, ಕೋತಿಯಿಂದ ಮನುಷ್ಯರ ಭಾಷೆ ಆಯ್ತು. ಕನ್ನಡಕ್ಕೆ ಎಲ್ಲಾ ಕಡೆ ಸರ್ಯಾದ ಸ್ಥಾನ ಕೊಡ್ಬೇಕು. ಕನ್ನಡ ಕವಿಗಳಿಗೆ ಗೌರವ ಕೊಡ್ಬೇಕು. ಅವ್ರಂಥೋರ ಭಾಷಣ ನಮ್ಮಂಥೋರ ಭಾಷಣ ಕೇಳ್ಬೇಕು. ನಮ್ಮಲ್ಲೇನಾಗಿದ್ಯಪ್ಪ ಅಂದ್ರೆ ಕನ್ನಡದ ಮೇಲೆ ಭಾಷಣ, ಮಾಡ್ತೀನಿ ಅಂದ್ರೆ ಕೇಳೋರೆ ದಿಕ್ಕಿಲ್ಲ; ನಿದ್ದೆ ಹೊಡೀತಾರೆ. ನಾಟ್ಕ ಗೀಟ್ಕ ಅಂದ್ರೆ ಕಣ್ ತೆರೀತಾರೆ. ಇದು ಕನ್ನಡ ಮಾತೆಗೆ, ಕನ್ನಡ ಕವಿಗಳಿಗೆ ಬಗೆಯುವ ದ್ರೋಹ; ಇಂಥ ಒಂದು ಸ್ಥಿತಿ ಸರಿಯಲ್ಲ. ನಾವು ನಿದ್ದೆಯಿಂದ ಏಳಬೇಕಾಗೈತೆ; ಕನ್ನಡಕ್ಕೆ ದುಡೀಬೇಕಾಗೈತೆ. ಮಡೀ ಬೇಕಾಗೈತೆ. ನಮ್ಮ ಸಾಹಿತಿಗಳು ನಿದ್ದೇಲಿರೋ ಕನ್ನಡಿಗರನ್ನು ಎಚ್ಚರಿಸ್ಬೇಕು, ಏಳಿ ಮೇಲೇಳಿ ಅಂತ ಕಾವ್ಯ ಬರೀಬೇಕು. ನಿದ್ದೆಯಲ್ಲಿದ್ದವರನ್ನು ಗುದ್ದಿ ಏಳಿಸುವಂತೆ ಕನ್ನಡ ಮಾತು ಬಳಸಬೇಕು…”
ಸಂಗಪ್ಪ ಭಾಷಣ ಮುಂದುವರಿಸ್ತಾ ಇದ್ದಾಗ ಏನೋ ಶಬ್ದ ಕೇಳಿಸಿ ಕ್ಷಣ ಹೊತ್ತು ನಿಲ್ಲಿಸಿದ; ಮುಂದೆ ನೋಡಿದ, ಆಮೇಲೆ, ಹತ್ತಿರದಲ್ಲೇ ಶಬ್ದ ಬರ್ತಿದೆ ಅನ್ನಿಸಿ ಪಕ್ಕದಲ್ಲಿ ನೋಡಿದ:
ಸಾಹಿತಿ ಸುಂದರಯ್ಯನವರು ಗೊರಕೆ ಹೊಡೆಯುತ್ತಿದ್ದರು!
*****
ಮುಂದುವರೆಯುವುದು


















