ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು. ಹತ್ತಿ ಬಿಡಿಸಿ ಮನೆಯಕೋಣೆ ತುಂಬಿದೆ. ಇನ್ನೊಂದು ವಾರದಲ್ಲಿ ಬಟಾರಗಳಲ್ಲಿ ತುಳಿದು, ಚಕ್ಕುಗಳನ್ನು ಗಂಜಿಗೆ ಸಾಗಿಸಬೇಕು. ಹೊಲದಲ್ಲಿ ಜೋಳದ ರಾಶಿ, ಅಳೆಯಲು ಸಿದ್ಧವಾಗಿದೆ. ಮೇಟಿ ಮುಳುಗಿ ಹೋಗುವಂತಹ ದೊಡ್ಡ ರಾಶಿ ಏಳರಿಂದ ಎಂಟು ಖಂಡುಗ ಆಗಬಹುದೆಂದು ಎಲ್ಲರೂ ಮಾತಾಡುತ್ತಿದ್ದಾರೆ. ಖಾಲಿಚೀಲ ಅಳತಿಕೊಡ ತಂದ ರಡಿ ಮಾಡಿ ಇಟ್ಬಾರ. ಮಠದ ಬಸಲಿಂಗಯ್ಯ ತಾತಗ ರಾಶಿ ಪೂಜಾಕ್ಕ ಕರದು ಬಂದಾರ. ಒಂಬತ್ತಾಸಿಗೆ ಸುರು ಹಚ್ಚಿದರೆ ಕಣ್ಣ ಬೆಳಕಿಲೆ ಅಳತಿ ಮುಗಿಬಹುದು.

ಸಿದ್ದರಾಮಪ್ಪ ಗೌಡನ ಎಂಟು ಕೂರಿಗೆ ಎರೆ ಹೊಲ. ಮುಂಜಾನೆದ್ದು ಚಾ ಕುಡುದು ಹೊಲಕ್ಕ ಬಂದ ಗೌಡನ ಮನ ತುಂಬಿ ಹೋಗಿದೆ.ಭೂಮಿ ತಾಯಿ ಈ ವರ್ಷ ಕಣ್ಣು ತೆರದಾಳ . ರೋಹಿಣಿ ಕಾರ್ತಿ ಬಿತ್ತಿದ್ದು ಭೇಷ ಆಯಿತು.ಮುಂಕಟ್ಟು ಆಗಲಿಲ್ಲ. ರೋಹಿಣಿ ಮಳಿ ಬಂದರೆ ಓಣಿ ತುಂಬಾ ಕಾಳು ಅಂಬೋ ಮಾತನ್ನ ದೇವರು ಖರೆ ಮಾಡ್ಯಾನ.ಎಂದು ಪೂರ್ವ ಕ್ಕ ಮುಖ ಮಾಡಿ ಕೈ ಮುಗಿದು ತೂರುವಾಗಕಣದ ಸುತ್ತ ಬಿದ್ದಿದ್ದ ಕಾಳುಗಳನ್ನ ಆರಿಸಿ ಆರಿಸಿ ರಾಶಿ ಒಳಗ ಹಾಕುತ್ತಿದ್ದ.

ಊರಿನ ಮಾಲಿಗೌಡ ಈ ಸಿದ್ದರಾಮಪ್ಪ.ಇನ್ನೂರು ಎಕರೆ ಪಿತ್ರಾರ್ಜಿತ ಆಸ್ತಿ ಹದಿನಾರು ಅಂಕಣದ ದೆವ್ವನಂಥ ಮನಿ, ಗೌರಮ್ಮನಂತಹ ಹೆಂಡತಿ, ಮಗ ಸೊಸಿ ಮಗಳು ಅಳಿಯ, ಮೊಮ್ಮಕ್ಕಳು ಆಳುಕಾಳು,ತಿಜೋರಿ ಹಿಡಿಲಾರದಷ್ಟು, ಬಂಗಾರ, ಬೆಳ್ಳಿ. ಹತ್ತೆತ್ತಿನ ಒಕ್ಕಲುತನ.ಗೌಡರಗಳಿಗಿರೋ ಯಾವ ಚಟಗಳು ಇಲ್ಲದ ಸತ್ಯವಂತ,ಪ್ರಾಮಾಣಿಕ ಮನುಷ್ಯ ಸಾಲು ಹಳ್ಳಿಗಳಲ್ಲಿ ಯಾವದೇ ನ್ಯಾಯ – ಜಗಳಆಸ್ತಿ-ಪಾಸ್ತಿ,ವಗತನ, ಹೀಂಗ ಏನೇ ಇರಲಿ ಸಿದ್ದರಾಮಪ್ಪ ಬೇಕೇ ಬೇಕೆ ಬೇಕು.ಎರಡೂ ಪಾರ್ಟಿಗೆ ಅನ್ಯಾಯ ಆಗಲಾರದಂಗ ಬಗಹರಿಸುವ ನ್ಯಾಯಮೂರ್ತಿ.ಅದಜ ಅಂತೀನಿ ಸಿದ್ದರಾಮಪ್ಪ ಅಂದರ ಭಾರೀ ಮರ್ಯಾದಿ.ಅಗಸ್ಯಾಗ ಹೊಂಟಾನಂದ್ರ ಜನ ಎದ್ದು ನಿಲ್ಲಬೇಕು.

ಅವತ್ತು ಏನಾಯ್ತಂದ್ರ ಈತ ಹೊಲದಾಗ.ಆಳಗಳನ್ನು ಊಟಕ್ಕ ಕಳಿಸಿ ರಾಶಿ ನೋಡಿಕೆತ,ಕಾಳು ಆರಿಸಿಕೋತ ತಿರಿಗ್ಯಾಡಲಲಿಕ್ಕೆ ಹತ್ಯಾನ ಸಣ್ಣಳ್ಳಿ ಚನ್ನಪ್ಪ ಗೌಡ, ಮ್ಯಾಗಳ ಮನಿ ವಿರುಪಾಕ್ಷಯ್ಯ ಇಬ್ಬರೂ ಗೌಡನ್ನ ಹುಡಿಕಿಕೊಂಡು ಹೊಲಕ್ಕಬಂದಾರ.ದೂರದಿಂದ ನೋಡಿದರ ಗೌಡ ಬಗ್ಗಿ ಬಗ್ಗಿ ಏನೋ ಆರಿಸಿ ರಾಶ್ಯಾಗ ಹಾಕಲಿಕ್ಕೆ ಹತ್ಯಾನ.ಸಮೀಪ ಬಂದ್ರು ಗೌಡ ಕಾಳ ಆರಿಸಿರಾಶಾಗ ಹಾಕದ ಕಾಣಿಸ್ತ. ಅಬಬ ಇಷ್ಟು ಶ್ರೀಮಂತ,ಖಂಡುಗ ಖಂಡುಗ ರಾಶಿ ಕಾಳು ಆರಸದ ಬಿಡುವಲ್ಲ ನೋಡ ಇರುಪ ’ ಎಂದು ವಿರುಪಾಕ್ಷಿಗೆ ಅಂದ.

ವಿರುಪಾಕ್ಷಿ ‘ಏ ಸುಮ್ಮನಿರು ಚನ್ನಪ್ಪ ಗೌಡ, ಮೊದಲೇ, ದೊಡ್ಡ ಮನಿಸ್ಯಾ ಅತನ ಕಿವಿಗಿ ಬಿದ್ದರ ಚಲೋ ಅಲ್ಲ. ನಾವೇನು ನಮ್ಮ ದಗದ ಏನ ? ಅದೀಟು ಮುಗಿಸಿಗೊಂಡು ಹೋದ್ರ ಆತು.’ ಏಕೇಳಿಸಿಲ್ಲೋ ಮಾರಾಯ,ನೀ ಗಟ್ಟಿಗಿ ಮಾತಾಡಿ ಕೇಳಂಗ ಮಾಡಬ್ಯಾಡ’ ಅಂದ.ಸಮೀಪ ಬಂದರು.ರಾಶಿಗೆ,ಗೌಡಗ, ಸಣಮಾಡಿದರು.’ ‘ಏ ಬರ್ರೆಪ್ ಬಿಸಲಾಗ ಬಂದೆರೆಲ್ಲ.ಅಲ್ಲೇ ಮಂತ್ಯಾಕ ಇದ್ದು ಯಾರ್ ಕೈಲೆರ ಹೇಳಕಳಿಸಿದ್ರೆ ನಾನೇ ಬರತಿದ್ದೆ ’ ಎಂದು ಸ್ವಾಗತಿಸಿದ. ವಿರುಪಾಕ್ಷಿ ’ಏ ಅದರಾಗ ಏನೈತಿ ಗೌಡ. ಪಾಪ ಗೌಡಶಾನಿ ಅದೇ ಮಾತ ಅಂದ್ಲು.ನಾವೇ ಇಲ್ಲೇಳಂಗೆ, ನಾವೇ ಹೊಲದಾಗ ಹೋತಿವಿ ರಾಶಿ ನೋಡಿದಂಗ ಆತದ ಅಂತ ನಾವೇ ಬಂದಿವಿ’ ಅಂದ. ಗೌಡ ’ಔದಾ ಸರೆ ಕುಂತಗರ್ರಿ ಏನ್ಸುದ್ದಿ ?’ ಅಂದ ಇಬ್ಬರೂ ತಮ್ಮ ಸಮಸ್ಸ್ಯಾ ಹೇಳಿದರು ಗೌಡ ಸಾವಕಾಶ ಎಲ್ಲ ಕೇಳಿ’ಆಯಿತ ತಗಳ್ರೆಪ್ಪ ಸ್ವಾಮಾರ ಬರತೀನಿ ಬಗೆರಸಿ ಬಿಡಮ ಅಂದ.’ ಇಬ್ಬರು ಸರೆ ಗೌಡರೆ,ನಾವಿನ್ನ ಬರತೀವಿ ’ ಅಂತ ಎದ್ರು. ಆಗ ಗೌಡ ’ ಏ ಹಂಗೆಂಗ ಆಗತದ ಊರಾಕ್ ಹೋಗಮ ನಡ್ರಿ ಉಂಡು ಹೋಗಮಂತ್ರಿ’.

ಇವರು ಮೊದಲ ಒಲ್ಲೆ ಅಂದ್ರ ಆದರ ಗೌಡನ ಒತ್ತಾಯದ ಮುಂದ ಇವರ ಆಟ ನಡೀಲಿಲ್ಲ.
ಅಷ್ರಾಗ ಆಳುಗಳು ಬಂದರು. ಇವರು ಮೂರಮಂದಿ ಗೌಡನ ಮನಿಗೆ ಹೊಂಟರು.

ಗೌಡ ಮತ್ತು ಇಬ್ಬರೂ ಕಾಲು ಮಕ ತೊಳಕಂಡು ಬಂದು ಊಟಕ್ಕ ಕೂತರು.

ಮೂರು ಮಂದಿ ಮುಂದ ಅಡ್ಡಣಿಕೆ ಬಂದವು. ತಂಬಿಗಿ ಜಾಂಬು ಬಂದವು. ವಿಭೂತಿ ಕರಡಿಗೆ ಬಂತು ಮೂರೂ ಮಂದಿ ವಿಭೂತಿ ಧಾರಣೆ ಮಾಡಿ ಊಟಕ್ಕ ಕುಂತರು. ಸಿದ್ದರಾಮಪ್ಪ ಗೌಡ ಎದ್ದು ಹೋಗಿ ಸೊಸಿಗೆ ಏನ ಹೇಳಿ ಬಂದ. ಊಟಕ್ಕ ನೀಡಲಿಕ್ಕೆ ಬಂದ ಸೊಸೆ ಗೌಡನ್ನ ಗಂಗಾಳಕ್ಕ ರೊಟ್ಟಿ ನೀಡಿದಳು ಪಲ್ಲೆ ನೀಡಿದಳು. ಬಟ್ಟಲಾದಾಗ ಮೊಸರು ತಂದಿಟ್ಟಳು.ಚನ್ನಪ್ಪ, ವಿರುಪಾಕ್ಷಿ ಎಲಿಗೆ ಏನು ನೀಡವಳ್ಳು. ಪಾಪ! ಇಬ್ಬರು ಒಬ್ಬರ ಮಾರಿ ಒಬ್ಬರ ನೋಡಿಕೆಳ್ಳಕ ಹತ್ಯಾರ!

ಸೊಸಿ ಮತ್ತ ಬಂದಳು ಇಬ್ಬರ ಗಂಗಾಳದಾಗ ಒಂದೊಂದು ಹಿಡಿ ಬೆಳ್ಳಿ ರೂಪಾಯಿ ನೀಡಿ ಹೋದಳು. ಇಬ್ಬರೂ ಕಕ್ಕಾಬಿಕ್ಕಿ!! ಏನ ಮಾಡಬೇಕು ತೋಚವಲ್ದು. ಸಿದ್ದರಾಮಪ್ಪ ಗೌಡ’ ಆರಾಮ ಉಣರೆಪ್ಪ ನಾವಂದ್ರ ಜೋಳ ತಿನ್ನೋರ ಅದಕ್ಕ ಕಣದ ಸುತ್ತ ಬಿದ್ದಿದ್ದ ಕಾಳು ಆರಿಸಿ ಹಾಕತಿದ್ದೆ ಭೂಮಿತಾಯಿ ಕೊಟ್ಟ ಕಾಳಿಗೆ ಬೆಲಿ ಹ್ಯಾಂಗ್ ಕಟ್ಟೋದು. ನೀವ ನನ್ನ ಜಿಪುಣ ಅಂದ್ರಿ ಬೆಳದದ್ದ ಉಂಬ ರೈತ ನಾನು. ನೀವು ಸಾವಕಾಶ ಬೆಳ್ಳಿ ರುಪಾಯಿ ತಿನ್ನರಿ ಅವೀಸು ಆದ ಮ್ಯಾಲೆ ಸೊಸಿಗೆ ಹೇಳೀನಿ. ನಿಮಗ ನೋಟಗಳನ್ನ ತಂದ ನೀಡತಾಳ್’ ಇಬ್ಬರಿಗೆ ಬರಿ ಕೊಟ್ಟಂಗ ಆಯಿತು ನಾವಾಡಿದ ಮಾತು ಗೌಡ ಕೇಳಿಲ್ಲ ಅಂತಖುಷಿ ಅಗಿದ್ದಿವಿ. ಗೌಡ ಭಾರೀ ಹುಶಾರಿ ಕೇಳಿಸಿಗೆಂಡಾನ ಮತ್ತ ನಮಗ ಚಲೋ ಬುದ್ಧಿ ಕಲ್ಸಿದ. ಅಂತ ಸಾವರಸಿಗೆಂಡ ಎದ್ದು ಗೌಡನ ಪಾದಕ್ಕ ಅಡ್ಡ ಬಿದ್ದರು. ಅವರನ್ನ ಎಬ್ಬಿಸಿದ ಗೌಡ ‘ಛೇ ಛೇ ಎಂತ ಮನಿಶ್ಯಾರಪಾ ನೀವು ಏಳ್ರಿ ಏಟ ಸಾವಕಾರ ಆದರೇನು, ಊರು ಆಳ ರಾಜಾ ಆದರೇನು? ಎಲ್ಲಾರು ಅನ್ನ ಉಣಾಬೇಕು. ಭೂಮಿ ತಾಯಿಗೆ ಮರ್ಯಾದಿ ಕೊಡಬೇಕು’ ಅಂತ ಹೇಳಿ ಬ್ಯಾರೆ ಗಂಗಾಳ ತರಿಸಿ ಹೊಟ್ಟೆ ತುಂಬಾ ಊಟ ಮಾಡಿಸಿ ಕಳಸಿದ. ಅದೇನು ಅಂತಾರಲ್ಲ! ಎನೋ ಮಾಡಲಿಕ್ಕೆ ಹೋದರ್ ಏನೋ ಆಗತದ್ ಅನ್ನೋ ಹಂಗ ಅವರಿಬ್ಬರೂ ಜೀವನದಾಗ ಮರೀಲಾರದ ಪಾಠ ಕಲಿತರು.
*****

Latest posts by ಗೋನವಾರ ಕಿಶನ್ ರಾವ್ (see all)