ಚಿತ್ರ: ಪ್ರಮಿತ್ ಮರಾಠ

ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ ಹತ್ತಿರದ ಸಣ್ಣ ಮೈದಾನದ ಕಲ್ಲು ಬೆಂಚಿನ ಮೇಲೆ ಅವನು ಯಾವಾಗಲೂ ಸಂಜೆ ಹೊತ್ತು ಕುಳಿತಿರುತ್ತಾನೆ. ಬೆಂಚಿನ ಮೇಲೆ ತನ್ನ ಕಾಲುಗಳನ್ನು ಅರ್ಧ ಮಡಚಿ, ಹಣೆಯನ್ನು ಮೊಣಕಾಲಿನ ಸಂಧಿಗೆ ತಾಗಿಸಿ ಕುಳಿತನೆಂದರೆ, ಅವನು ಸ್ವಲ್ಪವೂ ಅಲುಗಾಡುತ್ತಿರಲಿಲ್ಲ. ದೂರದಲ್ಲಿ ಬರುವವರಿಗೆ ಏನೋ ಒಂದು ಕಪ್ಪು ಡ್ರಮ್ಮನ್ನು ಕಲ್ಲಿನ ಮೇಲೆ ಬೋರಲು ಹಾಕಿದಂತೆ ಕಾಣುತಿತ್ತು. ಯಾವಾಗ ಆ ಸ್ಥಳವನ್ನು ಖಾಲಿ ಮಾಡುತ್ತಾನೆ ಎಂದು ಯಾರಿಗೂ ತಿಳಿಯದು. ಯಾಕೆಂದರೆ ಸಮಾರು ಮಧ್ಯರಾತ್ರಿಯ ವರೆಗೆ ವಾಹನ ಸಂಚಾರ ಜನಸಂಚಾರ ನಿಲುಗಡೆಯಾಗುವವರೆಗೂ ಅವನು ಕುಳಿತಿರುತ್ತಿದ್ದ. ಮಳೆಯಾಗಲೀ ಚಳಿಯಾಗಲೀ ಅವನಿಗೆ ತಾಗುತ್ತಿರಲಿಲ್ಲ. ಒಂದು ಹಳೆಯ ಪ್ಯಾಂಟು ಶರ್ಟು ಮಾತ್ರ ಅವನ ಆಸ್ತಿಯಾಗಿದ್ದು ಬರಿಗಾಲಿನಲ್ಲಿಯೇ ಇರುತ್ತಿದ್ದ. ಎಷ್ಟೋ ತಿಂಗಳುಗಳಿಂದ ಕ್ಷೌರ ಮಾಡದ ತಲೆಕೂದಲ ರಾಶಿ, ಕ್ಷೌರ ಕಾಣದ ಮುಖ, ಗುಳಿಬಿದ್ದ ಕಣ್ಣುಗಳು, ಬದುಕಿನ ಕೊನೆಯ ಕ್ಷಣದ ಛಾಯೆ ಅವನ ಮುಖದಲ್ಲಿ ಕಾಣುತಿತ್ತು. ಪೊದೆ ಪೊದೆಯಾದ ಗಡ್ಡದ ರಾಶಿ, ದಪ್ಪ ಬಿಳಿ ಮೀಸೆ, ನಿಸ್ತೇಜಗೊಂಡ ಕಣ್ಣುಗಳು, ಕಪ್ಪು ಮೈ ಬಣ್ಣ ಎಲ್ಲವೂ ಒಂದು ರೀತಿಯ ಭಯವನ್ನು ಹುಟ್ಟಿಸುತ್ತಿತ್ತು. ಸಣ್ಣ ಮಕ್ಕಳು ಆ ಕಲ್ಲು ಬೆಂಚು ಬಂದ ಕೂಡಲೇ ತಲೆ ಮೇಲೆತ್ತದೆ, ಹೆದರಿಕೊಂಡು ಬೇಗ ಬೇಗ ನಡೆದುಕೊಂಡು ಹೋಗಿ ನಂತರ ತಿರುಗಿ ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರು.

ಮುದುಕ ಬಂದು ಕೂತ ಸ್ವಲ್ಪ ಸಮಯದ ನಂತರ ತಳ್ಳುಗಾಡಿಯವನ ಗಾಡಿ ಅಲ್ಲಿ ಬರುತ್ತಿತ್ತು. ಶಾಲಾ ಮಕ್ಕಳು ಬರುವ ಹೊತ್ತಿಗೆ ಅವನು ತನ್ನ ಪಾತ್ರೆ ಪಗಡಿಗಳನ್ನು ಸರಿಯಾಗಿ ಜೋಡಿಸಿ ಇಡುತ್ತಿದ್ದ. ನಂತರ ಕೆಲವೇ ಕ್ಷಣಗಳಲ್ಲಿ ಅವನು ಮೆಣಸಿನ ಬೋಂಡ, ನೀರುಳ್ಳಿ ಬಜೆ ತಯಾರಿಯಲ್ಲಿ ತೊಡಗುತ್ತಿದ್ದ ಅವನ ಬಾಣಲೆಯಿಂದ ಹೊರಡುವ ಪರಿಮಳ, ದಾರಿಯಲ್ಲಿ ನಡೆಯುವ ಶಾಲಾ ಮಕ್ಕಳ ಸಣ್ಣ ಎಲ್. ಕೆ. ಜಿ., ಯು. ಕೆ. ಜಿ. ಮಕ್ಕಳ ತಾಯಂದಿರ ಮನೆಕೆಲಸ ಮಾಡುವ ಹೆಂಗಸರ ಮತ್ತು ದಾರಿಹೋಕರ ಮೂಗಿಗೆ ಬಡಿಯಿತೆಂದರೆ ಸಮಯ ೫ ಗಂಟೆ ಅಯಿತೆಂದೇ ಅರ್ಥ. ಗಾಡಿಯ ಸುತ್ತಲೂ ಹೆಂಗಸರು, ಮುದುಕರು, ಮಕ್ಕಳು ಮುಗಿಬೀಳುತ್ತಿದ್ದರು. ಕೆಲವರು ಬೋಂಡ ಖರೀದಿಸಿ, ಅದೇ ಮುದುಕನ ಕಲ್ಲು ಬೆಂಚಿನ ಇನ್ನೊಂದು ತುದಿಯಲ್ಲಿ ಕುಳಿತು ತಿಂದು ಹೋಗುತ್ತಿದ್ದರು. ಅವರಿಗೆ ತನ್ನ ಸಮೀಪವಿರುವ ಮುದುಕನ ಬಗ್ಗೆ ಅಲೋಚನೆಯೇ ಇಲ್ಲ. ಮುದುಕನೂ ಅಷ್ಟೆ ಏನೇ ಆಗಲಿ, ಅವನು ತಲೆ ಎತ್ತದೆ ಲೋಕದ ಪರಿವೇ ಇಲ್ಲದ ಹಾಗೆಯೇ ಕುಳಿತಿರುತ್ತಿದ್ದ. ಗಾಡಿಯವನು ಸುಮಾರು ಹತ್ತು ಹತ್ತುವರೆ ಗಂಟೆಗೆ ತನ್ನ ಅಂಗಡಿ ಮುಗಿಸುತ್ತಿದ್ದ. ಮುಕ್ತಾಯ ಹಂತದಲ್ಲಿ ಪಾತ್ರೆಗಳನ್ನು ಜೋಡಿಸಿ ಇಡುವ ಸಮಯಕ್ಕೆ ಆ ಕಲ್ಲು ಬೆಂಚಿನ ಮುದುಕ ಎದ್ದು ತನ್ನ ಜೇಬಿಗೆ ಕೈ ಹಾಕಿ ಒಂದಿಷ್ಟು ಚಿಲ್ಲರೆ ಹಣ ತೆಗೆದುಕೊಂಡು ಗಾಡಿಯವನಿಗೆ ಕೊಡುತ್ತಿದ್ದ. ಅವನು ಉಳಿದ ಬೋಂಡ, ಬಜೆಗಳನ್ನು ಕಾಗದಲ್ಲಿ ಕಟ್ಟಿ ಕೊಡುತ್ತಿದ್ದ. ಮಾತಿಲ್ಲದ ವ್ಯವಹಾರ. ಗಾಡಿಯವನು ಎಷ್ಟೋ ಸಾರಿ ಮುದುಕನನ್ನು ಮಾತಾಡಿಸಲು ಪ್ರಯತ್ನಿಸಿ ಸೋತಿದ್ದ. ಅವನು ತಿನ್ನುವುದನ್ನು ನೋಡುತ್ತಲೇ ಗಾಡಿಯವನು ತನ್ನ ಗಾಡಿಯನ್ನು ತಳ್ಳಿಕೊಂಡು ಮನೆಗೆ ಹೋಗುತ್ತಿದ್ದ. ಮತ್ತೆ ರಸ್ತೆಯಲ್ಲಿ ಉಳಿಯುವುದು ಮುದುಕ ಮಾತ್ರ. ತಪ್ಪಿದರೆ ಅಲ್ಲಲ್ಲಿ ತಿರುಗುವ ಬೀದಿ ಬಿಕಾರಿಗಳು.

‘ಹಂಚಿ ತಿಂದರೆ ರುಚಿ ಜಾಸ್ತಿ ಇರುತ್ತದೆ’.

‘….’

‘ನಿನ್ನನ್ನೇ ಕೇಳುತ್ತಿರುವುದು. ಹಂಚಿ ತಿಂದರೆ ರುಚಿ ಜಾಸ್ತಿ ಇರುತ್ತದೆ’.

ಮುದುಕ ಮೊದಲ ಬಾರಿ ತಲೆ ಎತ್ತಿ ನೋಡಿದ. ಆ ಕಲ್ಲು ಬೆಂಚಿನ ಇನ್ನೊಂದು ತುದಿಯಲ್ಲಿ ಎಷ್ಟೋ ಜನರು ಕುಳಿತು ವಿಶ್ರಾಂತಿ ತೆಗೆದುಕೊಂಡು ಹೋಗುತ್ತಿದ್ದರು. ಮುದುಕರು, ಮುದುಕಿಯರು, ಶಾಲಾ ಬಾಲಕರು, ಪೋಲಿಗಳು, ಪ್ರೇಮಿಗಳು, ವಿರಹಿಗಳು. ಅವರ್ಯಾರೂ ಅವನನ್ನು ವಿಚಾರಿಸಿದ್ದಿಲ್ಲ, ಅವನನ್ನು ಮಾತಾಡಿಸಿಲ್ಲ. ಒಮ್ಮೊಮ್ಮೆ ಬೀದಿ ನಾಯಿಗಳೂ ಕೂಡ ಕುಳಿತಿರುತ್ತಿದ್ದುವು. ಮುದುಕನ ಮುಖದಲ್ಲಿ ಕೋಪ ಎದ್ದು ಕಾಣುತ್ತಿತ್ತು.

‘ನೀನು ಯಾರು?’ ಮುದುಕ ತಿನ್ನುತ್ತಲೇ ಕೇಳಿದ.

‘ದೇವರು’

‘ಥೂ….. ತೊಲಗಾಚೆ. ನಿನ್ನಂಥಹ ಅವಿವೇಕಿಯೊಂದಿಗೆ ನಾನು ಮಾತಾಡಲು ಬಯಸುವುದಿಲ್ಲ. ನಿನ್ನ ಮುಖ ತೋರಿಸಬೇಡ. ಅನಿಷ್ಟ ನೀನು’.

‘ಯಾಕೆ…..?’

‘ನೀನು ಇರುತ್ತಿದ್ದರೆ ನಾನು ಈ ಸ್ಥಿತಿಗೆ ಬರುತ್ತಿರಲಿಲ್ಲ. ನೀನು ಸರ್ವಾಂರ್ತಯಾಮಿ ಎಂದು ಹೊಗಳಿಸಿಕೊಳ್ಳುತ್ತಿದ್ದೆ. ನಿನ್ನ ಆಜ್ಞೆ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡದು. ಹೀಗಿರುವಾಗ ನೀನು ನನಗೇಕೆ ನ್ಯಾಯ ಒದಗಿಸಿಲ್ಲ’.

‘ಪ್ರತಿಯೊಂದು ಅವನವನ ಕರ್ಮ ಫಲದಂತೆ ನಡೆಯುತ್ತದೆ. ನಿನ್ನ ಹಣೆಯಲ್ಲಿ ಹೀಗೆ ಆಗಬೇಕೆಂದು ಬರೆದಿದೆಯಾದರೆ, ಅದು ಹಾಗೆಯೇ ಆಗಬೇಕು. ಅದನ್ನು ಯಾರಿಂದಲೂ ಸರಿಪಡಿಸಲಾಗುವುದಿಲ್ಲ’.

‘ಇಂತಹ ಡಯಲಾಗ್‌ಗಳನ್ನು ಹೊಡೆದು ಹೊಡೆದು ಜನರನ್ನು ಮೂಡರನ್ನಾಗಿ ಮಾಡಿದ್ದಿ. ನಾನು ಆ ರೀತಿ ಮೂಢ ಆಗಲು ಇಪ್ಟಪಡುವುದಿಲ್ಲ. ಇಲ್ಲಿ ನಿಲ್ಲಬೇಡ ನೀನು ಹೋಗು. ನಿನಗೆ ಅನುಕೂಲವಾಗುವವರನ್ನು ಹುಡುಕಿಕೊಂಡು ಹೋಗು’.

ಅನತಿ ದೂರದಲ್ಲಿ ಕೆಲವು ಬೀದಿ ನಾಯಿಗಳು ಮುನ್ಸಿಪಾಲಿಟಿ ಕಸದ ತೊಟ್ಟಿಯ ಬಳಿ ಮೂಳೆಗಾಗಿ ಕಚ್ಚಾಡುತ್ತಿದ್ದವು. ಮುದುಕ ಅವುಗಳತ್ತ ಕೈ ತೋರಿಸಿ ಹೇಳಿದ.

‘ನೋಡಲ್ಲಿ, ನೀನು ಜನರನ್ನು ಆ ರೀತಿ ಬದುಕುವಂತೆ ಮಾಡಿದೆ. ತಮ್ಮ ತಮ್ಮೊಳಗೆ ಕಚ್ಚಾಟ, ಹೊಡೆದಾಟ, ಕೊಲೆ, ಬಾಂಬು, ಮಿಸಾಯಿಲ್ ಎಲ್ಲಿದೆ ಶಾಂತಿ ನೆಮ್ಮದಿ? ನೀನು ಸೃಷ್ಟಿಕರ್ತ. ನೀನು ಜನರನ್ನು ಸೃಷ್ಟಿಸುವಾಗಲೇ ಯಾಕೆ ಎಲ್ಲವನ್ನು ಸರಿ ಮಾಡಿ ಕಳುಹಿಸಲಿಲ್ಲ? ನಿನಗದು ಸಾಧ್ಯವಿರಲಿಲ್ಲವೇ? ಯಾವ ಜಾತಿಯೂ ಇಲ್ಲ. ಎಲ್ಲರೂ ಶಾಂತಿ ನೆಮ್ಮದಿಯಿಂದಿರಬೇಕು ಎಂದು ಒಂದು ಆಜ್ಞೆ ಹೊರಡಿಸುತ್ತಿದ್ದರೆ ಈ ಜಗತ್ತು ಹೀಗೆ ಆಗುತಿತ್ತೇ?’ ಮುದುಕನ ಸ್ವರ ಏರುತಿತ್ತು.

‘ಸೃಷ್ಟಿ ನನ್ನದು. ಒಳ್ಳೆಯ ಜೀವನದಲ್ಲಿ ಸಾಗುವುದು ಬಿಡುವುದು ಮನುಷ್ಯನ ವಿವೇಚನೆಗೆ ಬಿಟ್ಟಿದ್ದು’. ದೇವರು ಉತ್ತರಿಸಿದ.

‘ಮತ್ತೆ ನಿನ್ನ ಅವಶ್ಯಕತೆ ಏನು?’

ದೇವರು ಮಾತಾಡಲಿಲ್ಲ. ಮುದುಕ ಆವೇಶದಿಂದ ಕಣ್ಣು ಮುಚ್ಚಿದ. ಅವನು ತನ್ನ ಕೈಯಲ್ಲಿದ್ದ ಬೋಂಡದ ಪೊಟ್ಟಣವನ್ನು ನೆಲಕ್ಕೆ ಬಿಸಾಡಿದ. ಅವನ ಕೈಗಳು ನಡುಗುತ್ತಿದ್ದವು. ಕಣ್ಣುಗಳಲ್ಲಿ ನೀರು ತುಂಬಿತು. ಮುಖದಲ್ಲಿ ಕ್ರೋಧ ಉಕ್ಕುತಿತ್ತು. ಕೆಲಹೊತ್ತು ಮೌನ. ಇನ್ನೆರಡು ಬೀದಿ ನಾಯಿಗಳು ಪಕ್ಕದ ಓಣಿಯಿಂದ ಓಡಿ ಬಂದು ಕಚ್ಚಾಟಕ್ಕೆ ಸೇರಿಕೊಂಡವು. ಅವುಗಳ ಕೂಗು ಗಲಾಟೆ ಜಾಸ್ತಿಯಾಗತೊಡಗಿತು. ಮುದುಕ ತಲೆ ಕಳಗೆ ಹಾಕಿಕೊಂಡು ಆಲೋಚಿಸತೊಡಗಿದ.

‘ನೀನು ಏನು ಆಲೋಚಿಸುತ್ತಿರುವೆ ಮುದುಕ?’

‘ನಿನ್ನ ಬಗ್ಗೆ. ನೀನಿಲ್ಲದೆ ಈ ಜಗತ್ತು ಎಷ್ಟು ಸುಂದರವಾಗಿರಬಹುದು ಎಂದು ಆಲೋಚಿಸುತ್ತಿದ್ದೇನೆ. ಆಗ ಯಾವುದೇ ಜಾತಿಗಳಿಲ್ಲ. ಧರ್ಮಗಳಿಲ್ಲ, ಗುಡಿಗೋಪುರ, ಚರ್ಚು, ಮಸೀದಿಗಳಿಲ್ಲ. ಧಾರ್ಮಿಕ ಭಾಷಣ, ಮೆರವಣಿಗೆಗಳಿಲ್ಲ. ಹೊಡೆದಾಟಗಳಿಲ್ಲ. ಕೊಲೆಗಳಿಲ್ಲ, ಚೂರಿ, ಮಚ್ಚು, ಕೈಬಾಂಬು, ಮಾನವ ಬಾಂಬುಗಳಿಲ್ಲ. ಜಾತಿ ಪದ್ದತಿಯ ಮದುವೆಗಳಿಲ್ಲ. ಜಾತಿ ಪದ್ದತಿಯ ಶಾಲಾ ಕಾಲೇಜುಗಳಲ್ಲಿ. ಆಹಾ…..! ಜಗತ್ತು ಎಷ್ಟೊಂದು ಸುಂದರವಾಗಿರುತ್ತಿತ್ತು. ಎಲ್ಲರೂ ಅನ್ಯೋನ್ಯವಾಗಿ ಬಾಳುತ್ತಿದ್ದರು. ನೆಮ್ಮದಿ ಶಾಂತಿ ಇರುತಿತ್ತು. ನಿನ್ನ ಒಂದು ಇರುವಿಕೆ ಇಷ್ಟೆಲ್ಲಾ ಅನಾಹುತಕ್ಕೆ ಕಾರಣ. ನನಗೇನಾದರೂ ವಿಶೇಷ ಶಕ್ತಿ ಇರುತ್ತಿದ್ದರೆ ನಿನ್ನನ್ನು ಸುಟ್ಟು ಬೂದಿ ಮಾಡುತ್ತಿದ್ದೆ’.

ದೇವರು ಮುದುಕನ ದೃಷ್ಟಿಯನ್ನು ಎದುರಿಸಲಾರದೆ ಮೈದಾನದ ಇನ್ನೊಂದು ಮೂಲೆ ನೋಡಿದ. ಮಧ್ಯರಾತ್ರಿಯ ಸಮಯ. ಚಿಗುರು ಮೀಸಯ ಪೋರನೊಬ್ಬ ಯಾವುದೋ ವೇಶ್ಯೆಯೊಂದಿಗೆ ವ್ಯಾಪಾರ ಕುದುರಿಸುತ್ತಿದ್ದ. ದೇವರ ಮುಖ ಕಳೆಗುಂದಿತು. ಅವನು ದಿಗಂತ ದೃಷ್ಟಿಸಿದ. ತುಂಬಿದ ಮಿನುಗುವ ನಕ್ಷತ್ರಗಳ ಮಧ್ಯೆ ಪೂರ್ಣಚಂದ್ರ ನಗಾಡುತ್ತಿದ್ದ. ಅವನು ಪುನಃ ಮುದುಕನ ಹತ್ತಿರ ದೃಷ್ಟಿಸಿದ.

‘ಮುದುಕ, ನೀನು ಎಂದಾದರೂ ಪ್ರೀತಿಸಿದ್ದಿಯಾ?’

‘ನೀನು ವಿಷಯವನ್ನು ತಿರುಚುತ್ತಿರುವೆ’.

‘ಇಲ್ಲ. ನಾನು ನಿಜವಾಗಿಯೂ ಕೇಳುತ್ತಿದ್ದೇನೆ. ಹೇಳು ಎಂದಾದರೂ ಪ್ರೀತಿಸಿದ್ದೀಯಾ?’ ‘ಹೌದು. ನಾನು ಪ್ರೀತಿಸಿದ್ದೇನೆ. ನನ್ನ ತಾಯಿ, ತಂದೆ, ಅಜ್ಜ, ಅಜ್ಜಿ, ತಮ್ಮ, ತಂಗಿ ಈ ಭೂಮಿ, ನೆಲ, ಜಲ, ಆಕಾಶ, ಕಾಡು, ಬೆಟ್ಟ….’

‘ಇನ್ನು…..?’

‘ಇನ್ನು ಯಾರಿಲ್ಲ’

‘ನೀನು ಸುಳ್ಳು ಹೇಳುತ್ತಿಯಾ. ಹೇಳು ಇನ್ನು ಯಾರನ್ನು ಪ್ರೀತಿಸುತ್ತಿದ್ದೀ’

ಮುದುಕ ಅಳತೊಡಗಿದ. ಅವನ ಆವೇಶ ಕಡಿಮೆಯಾಯಿತು.

‘ಹೌದು ನಾನು ಅವಳನ್ನು ಪ್ರೀತಿಸುತ್ತಿದ್ದೆ’.

‘ಯಾರವಳು?’

ಅಳು ಒಂದು ನಿಯಂತ್ರಣಕ್ಕೆ ಬಂದ ಮೇಲೆ ಮುದುಕ ಹೇಳತೊಡಗಿದ.

‘ಸುಮಾರು ೬೦ ವರ್ಷದ ಹಿಂದಿನ ಕಥೆ. ನಾನಾಗ ಪೋಲೀಸ್ ಕಾನ್‌ಸ್ಟೇಬಲ್ ಆಗಿದ್ದೆ. ನನಗೆ ೨೭-೨೮ ವರ್ಷ ಪ್ರಾಯವಿರಬೇಕು. ಕಟ್ಟುಮಸ್ತಾದ ಮ್ಮೆಕಟ್ಟಿತ್ತು. ನನ್ನ ಮೈ ಬಣ್ಣ ಪೂರ್ಣ ಕಪ್ಪು ಆದರೂ ನಾನು ದೃಢಕಾಯನಾಗಿದ್ದೆ. ಇಲ್ಲದಿದ್ದರೆ ಪೋಲೀಸ್ ಇಲಾಖೆಗೆ ಆಯ್ಕೆಯಾಗುತ್ತಿರಲಿಲ್ಲ. ಆದರೆ ನಾನು ಸ್ಫುರದ್ರೂಪಿಯಾಗಿರಲಿಲ್ಲ. ನನ್ನ ಮೇಲಾಧಿಕಾರಿಗಳಿಗೆ ನನ್ನ ಮೇಲೆ ಪ್ರೀತಿ ಅಭಿಮಾನ ವಿಶ್ವಾಸ ಜಾಸ್ತಿ ಇತ್ತು. ಯಾವುದೇ ಕಷ್ಟದ ಕೆಲಸ ಸಮಸ್ಯೆ ಇದ್ದರೂ ನನ್ನನ್ನು ಕಳುಹಿಸುತ್ತಿದ್ದರು. ಯಾಕೆಂದರೆ ನಾನು ಸಂಬಳವಲ್ಲದೆ ಬೇರೆ ಯಾವುದೇ ಪಾಪದ ಹಣವನ್ನು ಮುಟ್ಟುತ್ತಿರಲಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ’.

‘ಒಳ್ಳೆಯದು. ನಿನ್ನಂತವರು ಇರುವುದರಿಂದಲೇ ಈ ಭೂಮಿಯಲ್ಲಿ ಮಳೆ ಬೆಳೆ ಚೆನ್ನಾಗಿ ಆಗುತ್ತಿದೆ ನೋಡು’.

‘ನಿನ್ನ ಬೂಟಾಟಿಕೆಯ ಮಾತು ಬೇಡ. ನೀನು ಯಾವ ರಾಜಕಾರಣಿಗಳಿಗಿಂತಲೂ ಕಡಿಮೆ ಇಲ್ಲ. ಇಂತಹ ಮಾತುಗಳು ನನ್ನನ್ನು ರೇಗಿಸುತ್ತವೆಯೇ ಹೊರತು ನಿನ್ನ ಬೇಳೆ ಬೇಯಲು ಅವಕಾಶವಾಗುವುದಿಲ್ಲ. ಅದಿರಲಿ ಇಲ್ಲಿ ಕೇಳು, ನನ್ನ ರೂಮಿಗೂ ಪೋಲೀಸ್ ಸ್ಟೇಶನ್ಗೂ ಸುಮಾರು ಅರ್ಧ ಕಿ. ಮೀ. ದೂರ ಇದೆ. ರಸ್ತೆಯ ಇಕ್ಕೆಲಗಳಲ್ಲೂ ಸಿರಿವಂತರ ವಸತಿ ಗೃಹಗಳು. ನನ್ನಲ್ಲಿ ಸೈಕಲ್ ಇದ್ದರೂ ನಾನು ರಜೆಯ ಸಮಯ ಮಾತ್ರ ಉಪಯೋಗಿಸುತ್ತಿದ್ದೆ. ಯಾಕಂದರೆ ಆ ದಾರಿಯಲ್ಲಿ ನಡೆದುಕೊಂಡು ಹೋಗುವುದೆಂದರೆ ಒಂಥರಾ ಖುಷಿ. ರಸ್ತೆಯ ಎರಡೂ ಬದಿಯ ಮನೆಗಳನ್ನು ನೋಡುವುದೇ ಒಂದು ಸಂತೋಷ. ಅಂತಹ ಲಕ್ಷುರಿ ಎರಡೆರಡು ಅಂತಸ್ತಿನ ಮನೆಗಳು. ವಿಶಾಲವಾದ ಬಣ್ಣ ಬಳಿದ ಕಲ್ಲಿನ ಕಂಪೌಂಡುಗಳು. ಹೂದೋಟ. ನೆಲಕ್ಕೆ ಹಾಕಿದ ಬೆಲೆಬಾಳುವ ಹಾಲುಗಲ್ಲುಗಳು. ವರ್ಷಕ್ಕೊಮ್ಮೆ ಬಣ್ಣ ಕಾಣುವ ಮನೆಯ ಗೋಡೆಗಳು. ಅವುಗಳಲ್ಲಿ ಆ ಹುಡುಗಿಯ ಮನೆಯೂ ಒಂದು’.

‘ಯಾವ ಹುಡುಗಿ…’

‘ಅದು ನನಗೂ ಗೊತ್ತಿಲ್ಲ. ಅವಳ ಹೆಸರು, ಕುಲಗೋತ್ರ ಒಂದು ಗೊತ್ತಿಲ್ಲ. ಆದರೂ ನಾನವಳನ್ನು ತುಂಬಾ ಮೆಚ್ಚಿದ್ದೆ. ಅವಳು ನಿರಾಡಂಭರ ಸುಂದರಿ. ಆ ದೊಡ್ಡ ಮನೆಯ ಖಾಯಂ ಕೆಲಸದ ಹುಡುಗಿ ಅವಳು. ಅವಳ ಮುಗ್ಧ ಮುಖ, ಸೌಮ್ಯತೆ ನನ್ನನ್ನು ಆಕರ್ಷಿಸುತ್ತಿತ್ತು. ನಾನು ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಅವಳು ಮನೆಯ ಹೊರಗೆ ಕಂಪೌಂಡ್‌ನಲ್ಲಿ ನಿಂತು ಗುಡಿಸುತ್ತಿದ್ದಳು. ಸಂಜೆ ಹೊತ್ತು ಹೂದೋಟಕ್ಕೆ ನೀರು ಹಾಕುತ್ತಿದ್ದಳು. ಅವಳು ಒಂದು ದಿವಸ ಕಾಣದಿದ್ದರೂ ನಾನು ಚಿಂತಿತನಾಗುತ್ತಿದ್ದೆ. ಮನಸ್ಸು ಅಸ್ತವ್ಯಸ್ತವಾಗುತ್ತಿತ್ತು’.

ಮುದುಕ ಮಾತು ನಿಲ್ಲಿಸಿ, ಒಮ್ಮೆ ಕೆಮ್ಮಿದ. ಅವನು ಕಥೆ ಹೇಳುವ ಉಲ್ಲಾಸದಲ್ಲಿದ್ದ.

‘ಮುಂದೆ?’

‘ಕೆಲವು ತಿಂಗಳು ಉರುಳಿದವು. ಒಮ್ಮೊಮ್ಮೆ ನಮ್ಮಿಬ್ಬರ ಕಣ್ಣುಗಳು ಮಿಲನವಾಗುತ್ತಿದ್ದವು. ಆದರೆ ಯಾವುದೇ ಮಾತಾಡಲು ನನಗೆ ಅವಕಾಶ ಇರಲಿಲ್ಲ. ಹಾಗೂ ಧೈರ್ಯವೂ ಇರಲಿಲ್ಲ. ಇಂದಿನ ಕಾಲದಂತಲ್ಲ ಆ ಕಾಲ. ಆಗ ಮಾನ ಮರ್ಯಾದೆಗೆ ತುಂಬಾ ಬೆಲೆಯಿತ್ತು. ರಜಾದಿನಗಳಲ್ಲಿ ಅವಳು ಸಂತೆಯಲ್ಲಿ ಕಾಣಸಿಗುತ್ತಿದ್ದಳು. ಒಬ್ಬರನ್ನೊಬ್ಬರು ನೋಡುತ್ತಿದ್ದೆವು. ನಾನು ಸಣ್ಣನಗುವನ್ನು ತೇಲಿಸಿ ಬಿಡುತ್ತಿದ್ದೆ. ಆದರೆ ಅವಳಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿರಲಿಲ್ಲ’.

ಮುದುಕ ಸ್ವಲ್ಪ ಹೊತ್ತು ಮೌನವಾದ.

‘ಅವಳು ನಿನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ನಿನಗೆ ತಿಳಿಯಿತೇ?’ ದೇವರು ಕೇಳಿದ.

‘ಇಲ್ಲ. ಇದಕ್ಕಾಗಿ ತುಂಬಾ ಪ್ರಯತ್ನ ಮಾಡಿದ. ಯಾವುದೂ ಫಲ ನೀಡಲಿಲ್ಲ. ಕೊನೆಗೊಂದು ದಿನ ಡ್ಯೂಟಿಯ ಡ್ರಸ್‌ನಲ್ಲಿಯೇ ಆ ಬಂಗ್ಲೆಯ ಗೇಟು ತೆಗೆದು ಒಳಗೆ ಹೋದೆ. ಆ ಹುಡುಗಿ ಗಿಡಗಳಿಗೆ ಪೈಪಿನಿಂದ ನೀರು ಚಿಮ್ಮಿಸುತ್ತಿದ್ದಳು. ಒಮ್ಮೆ ಅಧೀರಳಾದ ಅವಳು. ನನ್ನನ್ನು ‘ಏನು’ ಎಂಬಂತೆ ಪ್ರಶ್ನಾರ್ಥಕವಾಗಿ ನೋಡತೊಡಗಿದಳು. ಮನೆಯಲ್ಲಿ ಗಂಡಸರಿಲ್ಲವೇ ಎಂದು ವಿಚಾರಿಸಿದೆ. ಅವಳು ಪೈಪನ್ನು ಅಲ್ಲಿಯೇ ಕೆಳಗೆ ಹಾಕಿ ಮನೆಯೊಳಗೆ ಓಡಿದಳು. ಟ್ಯಾಪಿನ ನೀರನ್ನು ನಾನೇ ಬಂದ್ ಮಾಡಬೇಕಾಯಿತು. ಸ್ವಲ್ಪ ಹೊತ್ತಿನಲ್ಲಿ ಒಂದು ದಢೂತಿ ಹೆಂಗಸು ಪ್ರತ್ಯಕ್ಷಳಾದಳು. ಅವಳ ಹಿಂದೆ ಆ ಹುಡುಗಿ. ನಾನಂದೆ “ನೋಡಮ್ಮಾ. ನನಗೆ ಇಲ್ಲಿ ರಾತ್ರಿ ಪಾಳೆಯದ ಕೆಲಸ ಹಾಕಿದ್ದಾರೆ. ಈ ಏರಿಯಾದಲ್ಲಿ ಕಳ್ಳತನ ಜಾಸ್ತಿಯಾಗುತ್ತಿದೆ ಎಂದು ತಿಳಿದು ಬಂದಿದೆ. ನೀವು ರಾತ್ರಿ ಮಲಗುವ ಮೊದಲು ಮನೆಯ ಹಿಂದಿನ ಹಾಗೂ ಮುಂದಿನ ಬಾಗಿಲನ್ನು ಭದ್ರ ಪಡಿಸಬೇಕು. ಅದೇ ರೀತಿ ಗೇಟಿಗೂ ಬೀಗ ಹಾಕಿದರೆ ಒಳ್ಳೆಯದು. ಏನಾದರೂ ಸಮಸ್ಯೆ ಇದ್ದರೆ ನಮಗೆ ಕರೆ ಮಾಡಿ’ ಎಂದು ಹೇಳಿ ಸ್ಟೇಷನ್ನ ಫೋನ್ ನಂಬ್ರ ಕೊಟ್ಟೆ. ಆ ಸಮಯದಲ್ಲಿ ಆ ಹುಡುಗಿಯ ಮುಖವನ್ನೊಮ್ಮೆ ಕದ್ದು ನೋಡಿ ನಗಾಡಿದೆ. ಆದರೆ ಅವಳು ಸ್ಪಂದಿಸದೆ ಮುಖ ತಿರುಗಿಸಿದಳು.

‘ನಿನಗೆ ಬೇಸರವಾಯಿತೆಂದು ಕಾಣುತ್ತದೆ?’ ದೇವರು ವಿಚಾರಿಸಿದ.

‘ಹೌದು. ನನಗೆ ತುಂಬಾ ದುಃಖವಾಯಿತು ಸೀದಾ ರೂಮಿಗೆ ಬಂದವನೆ ಕನ್ನಡಿಯಲ್ಲೊಮ್ಮೆ ನನ್ನ ಮುಖ ನೋಡಿದೆ. ನಾನು ಅವಳಿಗೆ ತಕ್ಕ ಜೋಡಿಯಲ್ಲವೆಂದು ನನಗೆ ಮನವರಿಕೆಯಾಯಿತು. ಆದರೆ ಆ ಹುಡುಗಿಯನ್ನು ಮರೆಯಲು ನನ್ನಿಂದಾಗಲಿಲ್ಲ. ಕನಸಿನಲ್ಲೂ, ಮನಸ್ಸಿನಲ್ಲೂ ಅವಳೇ ತುಂಬಿ ಹೋದಳು. ಕೂತರೂ ನಿಂತರೂ ಅವಳದೇ ಚಿಂತೆ. ಕೆಲಸದ ನಿಯತ್ತು ಕಡಿಮೆಯಾಗತೊಡಗಿತು’.

ಮುದುಕ ಒಂದು ಕ್ಷಣ ನಿಲ್ಲಿಸಿದ.

‘ಬಹುಶಃ ನಿನ್ನದು ಏಕಮುಖ ಪ್ರೀತಿ ಎಂದು ಕಾಣುತ್ತದೆ. ನೀನು ಹೀಗೆ ಕೊರಗುವುದಕ್ಕಿಂತ ಅವಳನ್ನು ನೇರವಾಗಿ ವಿಚಾರಿಸಬಹುದಿತ್ತಲ್ಲ’. ದೇವರು ಪ್ರಶ್ನಿಸಿದ.

‘ನೀನು ಹೇಳುವುದು ಸರಿ, ಆದರೆ ಆ ಕಾಲದಲ್ಲಿ ಜನರು ಅಷ್ಟು, ಮುಂದೆ ಹೋಗುವುದಿಲ್ಲ. ನಾನು ತುಂಬಾ ಆಲೋಚಿಸಿ ಒಂದು ಪ್ರೇಮಪತ್ರ ಬರೆದು ಜೇಬಿನ ಕಿಸೆಯಲ್ಲಿಟ್ಟುಕೊಂಡೆ. ಅವಕಾಶಕ್ಕಾಗಿ ಕಾಯುತ್ತಿದ್ದೆ. ಒಂದು ದಿನ ಸಂತೆಯಲ್ಲಿ ಅವಳು ತರಕಾರಿ ತುಂಬಿದ ಚೀಲ ಮರೆತು ಮುಂದೆ ಹೋದಾಗ ನಾನು ಅವಳ ಚೀಲದಲ್ಲಿ ನನ್ನ ಪ್ರಣಯ ಪತ್ರವನ್ನಿಟ್ಟು ಕೈ ಚೀಲವನ್ನು ಅವಳಿಗೆ ತಲುಪಿಸಿದೆ. ಅವಳಿಂದ ಯಾವುದೇ ಉಪಕಾರ ಸ್ಮರಣೆಯ ಮಾತು ಬರಲಿಲ್ಲ. ನಾನು ಬಹಳ ದುಃಖಿಯಾದೆ. ಭಯದಿಂದ ಅವಳ ಮನೆಯ ದಾರಿಯನ್ನು ತ್ಯಜಿಸಿದೆ’.

ಮತ್ತೆ ಮೌನ. ದೇವರು ಹಾಡತೊಡಗಿದ.

‘ಪ್ಯಾರ್ ಕಿಯಾ ತೋ ಡರ್‌ನಾ ಕ್ಯಾ…..’

‘ಬಾಯಿ ಮುಚ್ಚು. ಇನ್ನೊಬ್ಬರ ಮನೆಗೆ ಬೆಂಕಿ ಬಿದ್ದರೆ ಬೀಡಿ ಹಚ್ಬಿಕೊಳ್ಳುವವ ನೀನು. ನಿನ್ನ ಸಹವಾಸವೇ ಬೇಡ’.

ಮುದುಕ ಕೋಪದಿಂದ ಕುದಿಯತೊಡಗಿದ ಮತ್ತು ಹೋಗಲು ಎದ್ದು ನಿಂತ.

‘ಕ್ಷಮಿಸು ತಪ್ಪಾಯಿತು’ ದೇವರು ಕ್ಷಮೆ ಕೇಳಿದ.

‘ನೀನು ಲೋಕಕ್ಕೆ ಕ್ಷಮೆ ನೀಡುವವನು. ನೀನು ನನ್ನ ಕ್ಷಮೆ ಕೇಳುವ ಅಗತ್ಯವಿಲ್ಲ’ ಮುದುಕ ಹೇಳಿದ.

‘ಹಾಗಾದರೆ ನಿನ್ನ ಕಥೆ ಮುಂದುವರಿಸು’.

ಮುದುಕ ಒಮ್ಮೆ ದೇವರ ಮುಖ ನೋಡಿದ. ಅವನ ಮುಖದಲ್ಲಿ ಕಥೆಯ ಮುಂದಿನ ಭಾಗ ಕೇಳುವ ಆತುರವಿತ್ತು.

‘ವಾರಗಳು ಕಳೆದವು. ನಾನು ಅವಳನ್ನು ಸಂತೆಯಲ್ಲಿ ಹುಡುಕತೊಡಗಿದೆ. ಅವಳ ಮನೆಯ ಮುಂದಿನ ದಾರಿಯಲ್ಲಿ ಹೋಗಲು ಹೆದರಿಕೆಯಾಗುತ್ತಿತ್ತು. ಒಂದು ದಿನ ಸಂತೆಯಲ್ಲಿ ಅವಳು ಎಂದಿನಂತೆ ತರಕಾರಿ ಹೆಕ್ಕುತ್ತಿದ್ದಳು. ನಾನು ಅವಳ ಹತ್ತಿರ ನಿಂತೆ. ಅವಳ ಮುಂದೆಲೆಯ ಗುಂಗುರು ಕೂದಲು ತಂಗಾಳಿಗೆ ಹಣೆಯ ಮೇಲೆ ಓಡಾಡುತ್ತಿದ್ದವು ಬಹಳ ಸುಂದರವಾಗಿ ಕಂಡಳು. ಬಗ್ಗಿ ತರಕಾರಿ ಹೆಕ್ಕುತ್ತಿದ್ದ ಅವಳು ನೇರವಾದಾಗ ನನ್ನ ಬಲಗೈಯಲ್ಲಿದ್ದ ಲಾಠಿ ಅವಳ ಸೊಂಟಕ್ಕೆ ತಾಗಿತು. ಒಮ್ಮೆ ಗಾಬರಿಯಾದರೂ ಅವಳು ಅದನ್ನು ಮುಖದಲ್ಲಿ ತೋರಿಸಲಿಲ್ಲ. ನಕ್ಕಳು. ಹೌದು! ಅದು ಅವಳ ಮೊದಲ ನಗು ಹಾಗೂ ನನ್ನ ಕೊನೆಯ ನಗು’.

‘ಅದು ಹೇಗೆ?’ ದೇವರಿಗೆ ಆಶ್ಚರ್ಯವಾಯಿತು.

‘ಹೌದು. ಅವಳಂದಳು. ನಾನು ಈಗಾಗಲೇ ಒಬ್ಬನನ್ನು ಪ್ರೀತಿಸಿದ್ದೇನೆ ಮತ್ತು ನಾವು ಶೀಘ್ರವೇ ಮದುವೆಯಾಗಲಿದ್ದೇವೆ.’

‘ನಾನು ಅಲ್ಲಿಂದ ಜಾಗ ಖಾಲಿ ಮಾಡಿದೆ. ನನ್ನ ಹೃದಯ ಅಲ್ಲೋಲ ಕಲ್ಲೋಲವಾಯಿತು. ಎಲ್ಲವನ್ನೂ ಕಳಕೊಂಡ ನೋವು. ತಂದೆ ತಾಯಿ ಎಲ್ಲರೂ ಇದ್ದು ಇಲ್ಲದಂತಹ ಒಂದು ಅವ್ಯಕ್ತ ನೋವು. ಆ ನೋವು ಇಂದಿಗೂ ಮಾಸಿಲ್ಲ’ ಮುದುಕ ಒಂದು ದೊಡ್ಡ ನಿಟ್ಟುಸಿರುಬಿಟ್ಟ.

ಇದು ಮಾಮೂಲು ಕಥೆ. ಇದರಲ್ಲಿ ವಿಶೇಷವೇನೂ ಇಲ್ಲ. ಹಿಂದಿನ ಕಾಲದಲ್ಲಿ ೧೫% ಇಂತಹ ಪ್ರಕರಣಗಳು ನಡೆಯುತ್ತಿದ್ದರೆ, ಈಗ ೯೯% ನಡೆಯುತ್ತಿದೆ. ನಾನಿನ್ನು ಬರುತ್ತೇನೆ….. ದೇವರು ಎದ್ದು ನಿಂತ.

‘ಕುಳಿತುಕೋ ಕಥೆ ಮುಗಿದಿಲ್ಲ. ಕಥೆ ಇನ್ನು ಶುರು’ ಮುದುಕ ಸ್ವಲ್ಪ ಗಡುಸಾಗಿ ಹೇಳಿದ ಮತ್ತು ಮಾತು ಮುಂದುವರಿಸಿದ.

‘ಆ ಹುಡುಗಿ ಕೆಲಸ ಮಾಡುವ ಮನೆ, ಅದು ಮನೆಯಲ್ಲ. ಅದು ಅರಮನೆ. ಕೋಟಿ ರೂಪಾಯಿ ಖರ್ಚಾಗಿದೆಯಂತೆ. ಅಂತಹ ಮನೆಯಲ್ಲಿ ವಾಸಿಸುವವರು ಹೇಗಿರಬೇಡ. ಆದರೆ ಆ ಮನೆಯಲ್ಲಿ ಒಂದು ದಢೂತಿ ಹೆಂಗಸು ಮಾತ್ರ ಹೆಚ್ಚು ಕಾಣಸಿಗುತ್ತಿದ್ದಳು. ಮತ್ತೆ ಯಾವಾಗಲಾದರೊಮ್ಮೆ ವಿದೇಶಿ ಕಾರುಗಳು ಬಂದು ಹೋಗುತ್ತಿದ್ದವು. ಅಲ್ಲಿ ಏನು ನಡೆಯುತ್ತದೆ ಏನು ವ್ಯಾಪಾರ, ವೃವಹಾರ ಎಂದು ಯಾರಿಗೂ ತಿಳಿಯದು. ಅವರೂ ನನ್ನ ಹುಡುಗಿಯ ಪ್ರಿಯಕರ ಆಗಾಗ್ಗೆ ಅಲ್ಲಿಗೆ ಬಂದು ಹೋಗುವುದನ್ನು ನಾನು ಗಮನಿಸುತ್ತಿದ್ದೆ. ಇದು ನನ್ನ ಮನಸ್ಸನ್ನು ಇರಿಸುಮುರಿಸು ಗೊಳಿಸುತ್ತಿತ್ತು’.

ಮುದುಕ ಸ್ವಲ್ಪ ಹೊತ್ತು ಮೌನಿಯಾದ.

‘ಆದರೆ ನಿನ್ನ ಮಟ್ಟಿಗೆ ಆ ಹುಡುಗಿದ್ದು ಮುಗಿದ ಅಧ್ಯಾಯ ತಾನೇ’? ದೇವರು ನಗುತ್ತಾ ಕೇಳಿದ.

‘ನಿನಗೆ ಮುಗಿದ ಅಧ್ಯಾಯವಾಗಿರಬಹುದು. ಆದರೆ ನನಗೆ ಮಾತ್ರ ಅವಳನ್ನು ನನ್ನ ಹೃದಯದಿಂದ ಕಿತ್ತೆಸೆಯಲು ಸಾಧ್ಯವಾಗಿಲ್ಲ. ಕೆಲವು ತಿಂಗಳುಗಳು ಕಳೆದುವು. ಒಂದು ದಿನ ನಡಯಬಾರದ ಒಂದು ಘಟನೆ ಆ ಮನೆಯಲ್ಲಿ ನಡೆಯಿತು’ ಮುದುಕ ಒಂದು ದೀರ್ಘ ನಿಟ್ಟಿಸಿರುಬಿಟ್ಟ.

‘ಅಂದರೆ? ಏನಾಯಿತು’? ದೇವರಿಗೆ ಕೇಳುವ ತವಕ.

‘ಆ ದಢೂತಿ ಹೆಂಗಸಿನ ಲಕ್ಷ ಲಕ್ಷ ಬೆಲೆಬಾಳುವ ವಜ್ರದ ನೆಕ್ಲೆಸ್ ಕಳವಾಯಿತು. ಅದೂ ಲಾಖರ್‌ನ ಬೀಗ ಹೊಡೆದು. ಹಗಲು ಹೊತ್ತಿನಲ್ಲಿಯೇ ಈ ಪ್ರಕರಣ ನಡೆದದ್ದು. ದಢೂತಿ ಹೆಂಗಸನ್ನು ಬಿಟ್ಟರೆ ಅ ಮನೆಯಲ್ಲಿ ಹಗಲಿನಲ್ಲಿರುವುದು ಆ ಕೆಲಸದ ಹುಡುಗಿಯೇ. ಆದುದರಿಂದ ಆ ದಢೂತಿ ಹೆಂಗಸು, ಆ ಹುಡುಗಿಯ ಮೇಲೆ ಲಿಖಿತ ದೂರನ್ನು ನನ್ನ ಪೋಲೀಸ್ ಠಾಣೆಗೆ ನೀಡಿದಳು’.

ಬೀದಿ ನಾಯಿಗಳ ಗಲಾಟೆ ಜಾಸ್ತಿಯಾಯಿತು. ಅವುಗಳ ಗಲಾಟೆ ತಣ್ಣಗಾಗುವರೆಗೆ ಮುದುಕ ತಡೆದ. ಚಳಿಗಾಳಿ ಬೀಸತೊಡಗಿತು. ಮುದುಕ ಸ್ವಲ್ಪ ಕಂಪಿಸತೊಡಗಿದ.

‘ಇನ್ನಿಪೆಕ್ಟರ್‌ಗೆ ಆ ಕೆಲಸದ ಹುಡುಗಿ ವಜ್ರದ ನೆಕ್ಲೇಸ್ ಕದ್ದದ್ದರಲ್ಲಿ ಅನುಮಾನ ಉಳಿಯಲೇ ಇಲ್ಲ. ಆದರೆ ನೆನಗೇನೋ ಆ ಹುಡುಗಿಯ ಮೇಲೆ ವಿಶ್ವಾಸವಿತ್ತು. ಒಂದು ದಿನ ನನ್ನ ಕರೆದು ಆ ಕೆಲಸದ ಹುಡುಗಿಯನ್ನು ಸ್ಪೇಶನ್‌ಗೆ ಕರೆತರಲು ಇನ್ಸ್‌ಪೆಕ್ಟರ್ ನನಗೆ ಆದೇಶಿಸಿದರು. ನನಗೆ ಸಂದಿಗ್ಧ ಪರಿಸ್ಥಿತಿ. ಒಂದು ಕಡೆ ಕರ್ತವ್ಯ. ಇನ್ನೊಂದು ಕಡೆ ಅನುಕಂಪ. ಮತ್ತೊಂದು ಕಡೆ ಮೇಲಾಧಿಕಾರಿಗಳು ನನ್ನ ಮೇಲೆ ಇಟ್ಟ ವಿಶ್ವಾಸ. ಈ ಎಲ್ಲಾ ಭಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾನು ಆ ಮನೆಯ ಬಾಗಿಲು ತಟ್ಟಿದೆ.

ದಢೂತಿ ಹೆಂಗಸು ಬಾಗಿಲು ತೆರೆದಳು. ನನ್ನನ್ನು ಕುಳಿತುಕೊಳ್ಳಲು ಹೇಳುವ ಸೌಜನ್ಯವನ್ನು ಅವಳು ತೋರಲಿಲ್ಲ. ಬಹುಶಃ ಹಣದ ಮದ ಅವಳಲ್ಲಿರುವ ಸುಗುಣವನ್ನು ಮರೆ ಮಾಡಿತ್ತು. ನಾನು ಅತ್ತಿತ್ತ ಕಣ್ಣಾಡಿಸಿದೆ. ಆ ಹಾಲ್‌ನ ಮೂಲೆಯಲ್ಲಿ ತಲೆ ಕೆಳಗೆ ಹಾಕಿಕೊಂಡು ಆ ಹುಡುಗಿ ಕುಳಿತಿದ್ದಳು. ಅವಳು ಅತ್ತೂ ಅತ್ತೂ ಸುಸ್ತಾದಂತೆ ಮತ್ತು ತುಂಬಾ ದಿಗಿಲಾದಂತೆ ತೋರಿದಳು ನಾನು ಆ ದಢೂತಿ ಹೆಂಗಸಿನ ಅನುಮತಿ ಪಡೆದು ಆ ಹುಡುಗಿಯನ್ನು ಕರಕೊಂಡು ಸ್ಟೇಶನಿಗೆ ಹೊರಟೆ. ಸುಮಾರು ೨ ಫರ್ಲಾಂಗು ದಾಟಿರಬಹುದು. ನಮ್ಮೊಳಗೆ ಯಾವುದೇ ಮಾತಿರಲಿಲ್ಲ. ಕೊನೆಗೆ ನಾನೇ ಮೌನ ಮುರಿದೆ.

‘ನಿಜ ಹೇಳು, ನೀನು ವಜ್ರದ ನೆಕ್ಲೇಸ್ ಕದ್ದಿದ್ದೀಯಾ? ಹೌದಾದರೆ ಅದನ್ನು ಹಿಂತಿರುಗಿಸು. ನಿನಗೇನೂ ಶಿಕ್ಷೆಯಾಗದು. ನಾನಿದ್ದೇನೆ’. ಅವಳು ನನ್ನ ಮುಖ ನೋಡಿದಳು ಮತ್ತು ಕ್ಷೀಣ ಸ್ವರದಲ್ಲಿ ಹೇಳಿದಳು.

‘ನಾನು ಸತ್ಮವನ್ನು ಹೇಳುತ್ತಿದ್ದೇನೆ. ನಾನು ರಾಮುವಿಗೆ ಕೊಟ್ಟ ಸಲಿಗೆ ಜಾಸ್ತಿಯಾಯಿತು. ಅವನು ಯಜಮಾನಿತಿ ಮನೆಯಲ್ಲಿ ಇಲ್ಲದಾಗ ಬಂದು ಹೋಗುತ್ತಿದ್ದ. ಒಂದು ದಿನ ನನ್ನ ಎದುರೇ ನನ್ನ ಹೆದರಿಸಿ, ನನಗೆ ಚೂರಿ ತೋರಿಸಿ ಆ ಲಾಕರ್ ಹೊಡೆದು ನೆಕ್ಲೇಸ್ ಅಪಹರಿಸಿ ಕಾಣೆಯಾದ’. ಅವಳು ಅಳತೊಡಗಿದಳು ಕಣ್ಣೀರು ಅವಳ ಹಾಲುಗೆನ್ನಯ ಮೇಲೆ ಹರಿಯುವುದನ್ನು ನನಗೆ ನೋಡಲಾಗಲಿಲ್ಲ ನಾನು ಹೇಳಿದೆ.

‘ನೋಡು, ಆ ದಢೂತಿ ಹೆಂಗಸು ಕೋಟ್ಯಾಧಿಪತಿ. ಅವಳು ನಿನ್ನನ್ನೇ ಅಪರಾಧಿ ಮಾಡಿದ್ದಾಳೆ. ಮೇಲಾಗಿ ಅವಳಿಗೆ ರಾಜಕಾರಿಣಿಗಳ ಪ್ರಬಲ ಕೈಯಿದ. ಈ ಕೇಸು ಬೇಗ ಮುಕ್ತಾಯವಾಯಿತೋ ಅಷ್ಟೂ ಇನ್ಸ್‌ಪೆಕ್ಟರ್‌ಗೆ ಒಳ್ಳೆಯದಾಗುತ್ತದೆ. ಇಲ್ಲದಿದ್ದರೆ, ಅವರಿಗೆ ತಕ್ಷಣ ವರ್ಗವಾಗಬಹುದು. ಇದನ್ನು ತಪ್ಪಿಸಲು ಅವರು ಪ್ರಥಮ ಮಾಹಿತಿ ವರದಿಯಲ್ಲಿ ನಿನ್ನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ನಿನ್ನ ಯಾವ ಸತ್ಯವೂ ಇಲ್ಲಿ ಬೆಳಕಿಗೆ ಬಾರದು. ನೀನು ಸ್ಟೇಶನ್‌ಗೆ ಹೋದರೆ ನಿನಗೆ ಬಿಡುಗಡೆ ಅಸಾಧ್ಯ. ಕಡಿಮೆ ಪಕ್ಷ ೨ ರಾತ್ರಿಯನ್ನಾದರೂ ಅಲ್ಲಿ ಕಳೆಯಬೇಕಾಗುತ್ತದೆ. ಆದರೆ…. ಆದರೆ ಅಲ್ಲಿ ನೀನು ಕನ್ಯೆಯಾಗಿ ಉಳಿಯುವ ಭರವಸೆಯನ್ನು ನಾನು ನೀಡಲಾರೆ’.

ನಾನು ಗದ್ಗದಿತನಾದೆ. ಎಷ್ಟೇ ತಡೆದರೂ ನನ್ನ ಕಣ್ಣಿಂದ ಎರಡು ಹನಿ ಕಣ್ಣೀರು ಜಾರಿಬಿತ್ತು. ಅವಳು ಒಮ್ಮೆ ಅಧೀರಳಾದಳು. ಪೋಲೀಸ್‌ನವನ ಕಣ್ಣಲ್ಲಿ ನೀರು! ತನ್ನ ಭವಿಷ್ಯ ಮುಗಿಯಿತು ಎಂದು ಅವಳಿಗೆ ಗೊತ್ತಾಯಿತು. ಅವಳು ಆಳತೊಡಗಿದಳು ಅವಳ ಅಳು ನನ್ನನ್ನು ಮತ್ತೂ ಅಧೀರನನ್ನಾಗಿ ಮಾಡಿತು. ಅವಳು ಪರಕೀಯಳಾಗಿ ನನಗೆ ಕಾಣಲಿಲ್ಲ. ನನ್ನ ಆತ್ಮೀಯ, ನನ್ನದೇ ಒಂದು ಜೀವ ಅಳುತ್ತಿರುವಂತೆ ಕಂಡಿತು. ನಾನೊಂದು ತೀರ್ಮಾನಕ್ಕೆ ಬಂದೆ.

ಏನು ತೀರ್ಮಾನ? ದೇವರು ಕೂಡಾ ಒಮ್ಮೆ ತಬ್ಬಿಬ್ಬಾದ. ಮುದುಕ ಮಾತು ಮುಂದುವರಿಸಿದ. ಅವನ ಮಾತಿನಲ್ಲಿ ಈಗ ಅಳುಕಿರಲಿಲ್ಲ. ಸ್ವರ ಎತ್ತರಿಸಿ ಅವನು ಹೇಳಿದ. ‘ನೋಡು’ ಎಂದ. ಅವಳು ನಡೆಯುವುದನ್ನು ನಿಲ್ಲಿಸಿ, ನನ್ನ ಮುಖ ನೋಡಿದಳು. ನಾನೂ ನಿಂತೆ.

‘ರಾಮು ಇನ್ನು ತಿರುಗಿ ಬರಲಾರ. ಅವನು ನಿನಗೆ ಕೈಕೊಟ್ಟದ್ದು ಸತ್ಯ ವಿಷಯವಾಗಿದೆ. ಈಗ ನಿನಗೆ ಬಚವಾಗಲು ಎರಡು ದಾರಿಯಿದೆ. ಒಂದೋ ನೀನು ತಪ್ಪು ಒಪ್ಪಿ, ಜೈಲು ಶಿಕ್ಷೆ ಅನುಭವಿಸುವುದು. ಅದೂ ಕಳ್ಳಿ ಎಂಬ ಹಣೆಪಟ್ಟಿಯೊಂದಿಗೆ. ಕಡಿಮೆ ಪಕ್ಷ ೫ ವರ್ಷವಾದರೂ ಶಿಕ್ಷೆ‌ಯಾಗಬಹುದು. ಇಲ್ಲ ಅದಕ್ಕಿಂತ ಜಾಸ್ತಿಯೂ ಆಗಬಹುದು. ಇನ್ನೊಂದು ದಾರಿ ಎಂದರೆ ನೀನು ಈ ಕ್ಷಣ, ಈ ಸ್ಥಳದಿಂದ ಓಡಿಹೋಗುವುದು. ಈ ಎರಡರಲ್ಲಿ ಒಂದನ್ನು ಆರಿಸಿಕೋ’ ಮುದುಕ ಮೌನಿಯಾದ.

ದೇವರು ಮುದುಕನ ಭುಜದ ಮೇಲೆ ಕೈಯಿಟ್ಟನು. ಮಧ್ಯರಾತ್ರಿ ಕಳೆದು ಬೆಳಗ್ಗಿನ ಜಾವ ಓಡಿ ಬರುತ್ತಿತ್ತು. ಮುದುಕ ಸಂಪೂರ್ಣ ತಣ್ಣಗಾಗಿದ್ದ. ಚಳಿ ಅವನ ಮೈಯನ್ನು ಸಂಪೂರ್ಣ ಆವರಿಸಿತು. ‘ದಯವಿಟ್ಟು ಮುಂದೇನಾಯಿತು ಹೇಳು’ ದೇವರು ಅಂಗಲಾಚಿದ.

‘ನೀನು ಅಂಗಲಾಚುವ ಅಗತ್ಯವಿಲ್ಲ. ಎಲ್ಲರೂ ನಿನ್ನನ್ನೇ ಅಂಗಲಾಚುವಾಗ ನೀನು ನನ್ನನ್ನು ಅಂಗಲಾಚುವುದು ತೀರಾ ಅಸಹ್ಯವಾಗಿ ಕಾಣುತ್ತದೆ. ಕಥೆ ಮುಂದುವರಿಸುತ್ತೇನೆ ಕೇಳು’ ಮುದುಕ ಮಾತು ಮುಂದುವರಿಸಿದ.

‘ಆ ಹುಡುಗಿ ಬಹಳ ಸಂತೋಷದಿಂದ ೨ನೇ ದಾರಿಯನ್ನು ಆಯ್ಕೆ ಮಾಡಿದಳು. ನಾನು ನನ್ನ ಗುಪ್ತ ವಿಳಾಸವನ್ನು ಅವಳಿಗೆ ನೀಡುತ್ತಾ ಹೇಳಿದೆ. ಅವಶ್ಯಕತೆ ಬಂದರೆ ನನ್ನನ್ನು ಭೇಟಿಯಾಗು ಎಂದು. ಆದರೆ ಈ ಪ್ರಕರಣ ನಡೆದು ಇಂದಿಗೆ ೬೦ ವರ್ಷ ದಾಟಿದವು. ಅವಳು ಎಲ್ಲಿದ್ದಾಳೋ ಏನಾದಳೋ ನನಗೆ ಗೊತ್ತಿಲ್ಲ. ಆದರೆ ಅವಳು ಕೊನೆಯ ಪಕ್ಷ ನನ್ನನ್ನು ಭೇಟಿಯಾಗುವ ಪ್ರಯತ್ನವನ್ನೂ ಮಾಡಲಿಲ್ಲ. ಹೋಗಲಿ ಒಂದು ಪತ್ರವನ್ನೂ ಬರೆಯಲಿಲ್ಲ. ಕೃತಘ್ನಳು. ಆದರೆ ಅವಳು ನನ್ನ ಹೃದಯದಲ್ಲಿ ನನ್ನ ಮನದನ್ನೆಯಾಗಿ ಇನ್ನೂ ನೆಲೆಸಿದ್ದಾಳೆ. ಅವಳ ಮೇಲಿರುವ ನನ್ನ ಪ್ರೀತಿ ಎಂದಿಗೂ ಬತ್ತದು. ಬತ್ತಲಾರದು ಅವಳ ನೆನಪು ಹಸಿರಾಗಿದೆ. ಅವಳು ಖಂಡಿತಾ ಬರುತ್ತಾಳೆ. ಬಂದು ನನ್ನನ್ನು ಮದುವೆಯಾಗುತ್ತಾಳೆ. ಅದಕ್ಕಾಗಿ ನಾನು ಅವಳಿಗೆ ಕೊಟ್ಟ ಈ ವಿಳಾಸದ ಜಾಗದಲ್ಲಿ ಕಾಯುತ್ತಿದ್ದೇನೆ. ಅವಳು ಬರುತ್ತಾಳೆ, ಖಂಡಿತಾ ಬರುತ್ತಾಳೆ’. ಮುದುಕ ದೇವರ ಬೆನ್ನಿಗೆ ಮುಖವಿಟ್ಟು ಅಳತೊಡಗಿದ.

ದೇವರಿಗೆ ಕಸಿವಿಸಿಯಾಯಿತು. ತನ್ನ ಹೆಗಲ ಮೇಲಿಟ್ಟ ಮುದುಕನ ತಲೆಯನ್ನು ಎತ್ತಿ ದೇವರು ಹೇಳಿದ.

‘ಅವಳಂತೂ ಬರಲೇ ಇಲ್ಲ. ಸರಿ, ನೀನು ಸ್ಟೇಶನ್‌ನಲ್ಲಿ ಏನು ಉತ್ತರಿಸಿದೆ’

ಮುದುಕ ಹೇಳಿದ ‘ಎಲ್ಲಾ ತಿಳಿದ ನಿನಗೆ ಇಷ್ಟು ಆರ್ಥವಾಗುವುದಿಲ್ಲವಾ? ಅಪರಾಧಿ ತಪ್ಪಿಸಿಕೊಂಡರೆ ಏನಾಗುತ್ತದ? ಅದೇ ನನಗೆ ಆಯಿತು. ನನ್ನನ್ನು ಅಮಾನತಿನಲ್ಲಿಟ್ಟರು. ಕೆಲವು ವರ್ಷ ಸಂಬಳವಿಲ್ಲದೆ, ಅವಮಾನದಿಂದ ಅಲೆಯತೊಡಗಿದೆ. ಅಪರಾಧಿ ಸಿಗದೆ ನನ್ನನ್ನು ಮರು ನೇಮಕ ಮಾಡಲಿಲ್ಲ. ಕೊನೆಗೆ ಕಚೇರಿಗೆ ಅಲೆದೂ ಅಲೆದೂ ಸಾಕಾಯಿತು. ನಂತರ ಸ್ವೇಶನ್‌ಗೆ ಅಲೆಯುವುದನ್ನು ಮರೆತುಬಿಟ್ಟೆ. ನಂತರ ಪೂರ್ಣ ಪ್ರಮಾಣದಲ್ಲಿ ಕೆಲಸ ಕಳಕೊಂಡೆ. ನನಗೆ ಯಾರ ಸಹಾಯವೂ ದೊರಕಲಿಲ್ಲ. ಕೆಲಸ ಕಳಕೊಂಡ ಬೇಜಾರು ನನ್ನನ್ನು ಕಾಡಲಿಲ್ಲ. ನನ್ನ ಹೃದಯದ ರಾಣಿಗೆ ಸಹಾಯ ಮಾಡಿದ ಹೆಮ್ಮೆ ನನಗಿದೆ. ಅವಳು ಎಲ್ಲೇ ಇರಲಿ. ಸುಖವಾಗಿರಲಿ’ ಮುದುಕ ಮತ್ತೆ ಅಳತೊಡಗಿದ.

ದೇವರಿಗೆ ಕಸಿವಿಸಿಯಾಯಿತು ಎದುರು ನಿಂತ.

‘ನಾನಿನ್ನು ಬರುತ್ತೇನೆ?’ ದೇವರಂದ.

ಮುದುಕ ಅಳುತ್ತಾ ಕೈಜೋಡಿಸಿ ದೇವರಲ್ಲಿ ಬೇಡಿಕೊಂಡ.

‘ದೇವಾ, ನಿನಗೆ ಅಸಾಧ್ಯವಾದುದು ಯಾವುದೂ ಇಲ್ಲ. ನನಗೊಂದು ಉಪಕಾರ ಮಾಡುವೆಯಾ?’

‘ಏನದು?’

‘ನಾನು ಸಾಯುವ ಮುಂಚೆ ಒಮ್ಮೆ ನನ್ನ ಹುಡುಗಿಯನ್ನು ಭೇಟಿ ಮಾಡಿಸು. ನೀನು ಸರ್ವಶಕ್ತ. ನಿನಗೆ ಆಗದು ಅಂತ ಏನಿದೆ ಈ ಜಗತ್ತಿನಲ್ಲಿ? ಪ್ಲೀಸ್….. ಕೈ ಬಿಡಬೇಡ ….’

ದೇವರು ನಕ್ಕ.

‘ಮುದುಕಾ. ಇದೆಲ್ಲಾ ಸಾಧ್ಯವಿಲ್ಲ. ನಾನು ಮೊದಲೆ ಹೇಳಿದ್ದೇನೆ ನಿನಗೆ. ನಿನ್ನ ಹಣೆಯಲ್ಲಿ ಏನು ಬರೆದಿದೆಯೋ ಅದೇ ರೀತಿ ಆಗಬೇಕು. ನಿನಗೆ ನಿನ್ನ ಹಣೆಯಲ್ಲಿ ಅವಳ ಭೇಟಿ ಸಾಧ್ಯವಿಲ್ಲವೆಂದು ಬರೆದಿದೆಯಾದರೆ, ಅದು ಹಾಗೆಯೇ ಆಗುತ್ತದೆ’.

ಮುದುಕನಿಗೆ ಕೋಪ ಬಂತು. ಕಲ್ಲು ಬೆಂಚಿನಿಂದ ನೆಲಕ್ಕೆ ಜಿಗಿದು ಮುದುಕ ಕಲ್ಲೊಂದನ್ನು ಎತ್ತಿ ದೇವರತ್ತ ಬಲವಾಗಿ ಬಿಸಾಡಿದ. ಅದು ದೂರದಲ್ಲಿ ಜಗಳವಾಡುತ್ತಿದ್ದ ಬೀದಿ ನಾಯಿಗೆ ಬಡಿದು ಅದು ‘ಕುಂಯ್ಯೋ’ ಎಂದು ಕೂಗಿ ಓಡತೊಡಗಿತು.
*****

Latest posts by ಅಬ್ದುಲ್ ಹಮೀದ್ ಪಕ್ಕಲಡ್ಕ (see all)