ಕೊಡಗಿನ ಹಳೆಯ ತಲೆಗಳು ಉಪಕಾರ ಸ್ಮರಣೆ ಇಲ್ಲದವರನ್ನು ನಮಕು ಹರಾಮು ನಾಗಪ್ಪಯ್ಯನೆಂದು ಈಗಲೂ ಬಯ್ಯುವುದುಂಟು. ಅವನು ಟಿಪ್ಪುವಿನಿಂದ ಕೊಡಗಿನ ಅಮಲ್ದಾರನಾಗಿ ನೇಮಕನಾದವನು. ಕೊಡಗಿನ ರಾಜ ಲಿಂಗರಾಜೇಂದ್ರನು ತನ್ನ ದಾಯಾದಿ ದೇವಪ್ಪರಾಜನನ್ನು ಮೈಸೂರಿನ ನವಾಬ ಹೈದರಾಲಿಯ ಸಹಾಯದಿಂದ ಸಂಹರಿಸಿ ಪಟ್ಟವೇರಿದ. ಲಿಂಗರಾಜೇಂದ್ರ ಮಡಿದಾಗ ಲಿಂಗರಾಜೇಂದ್ರನ ಮಡದಿ ಮಕ್ಕಳನ್ನು ಕಾರಾಗೃಹಕ್ಕೆ ತಳ್ಳಿ ಹೈದರಾಲಿ ತಾನೇ ಕೊಡಗಿನ ದೊರೆಯೆಂದು ಘೋಷಿಸಿ, ಸುಬ್ಬಪ್ಪಯ್ಯನೆಂಬ ಬ್ರಾಹ್ಮಣನನ್ನು ತನ್ನ ಪ್ರತಿನಿಧಿಯೆಂದು ಕೊಡಗಿನ ಅಮಲ್ದಾರನಾರನನ್ನಾಗಿ ಮಾಡಿದ. ಸುಬ್ಬಪ್ಪಯ್ಯ ಪರಮ ಭ್ರಷ್ಟನಾಗಿದ್ದು ಜನರನ್ನು ಸುಲಿಗೆ ಮಾಡಿ ಕೊಡಗರ ಆಕ್ರೋಶಕ್ಕೆ ಕಾರಣನಾಗಿದ್ದ. ಹೈದರಾಲಿಯ ಮರಣದ ನಂತರ ಟಿಪ್ಪು ಮೈಸೂರಿನ ನವಾಬನಾದ. ಅವನಿಗೆ ಸುಬ್ಬಪ್ಪಯ್ಯನ ಅತಿರೇಕಗಳು ವರದಿಯಾಗಿ ಅವನು ಸುಬ್ಬಪ್ಪಯ್ಯನನ್ನು ಅಮಲ್ದಾರಿಕೆಯಿಂದ ಕೆಳಗಿಳಿಸಿ, ಅವನ ತಮ್ಮ ನಾಗಪ್ಪಯ್ಯನನ್ನು ಅಮಲ್ದಾರನನ್ನಾಗಿ ಮಾಡಿದ.

ತಮ್ಮ ನಾಗಪ್ಪಯ್ಯ, ಅಣ್ಣ ಸುಬ್ಬಪ್ಪಯ್ಯನಿಗಿಂತಲೂ ನೀಚನಾಗಿದ್ದ. ಅವನು ಜನರನ್ನು ಇನ್ನಿಲ್ಲದಂತೆ ಸುಲಿಯತೊಡಗಿದ. ಹಣ, ಹೆಣ್ಣು, ಹೆಂಡಗಳ ದಾಸಾನುದಾಸನಾಗಿ ಕೊಡಗಿನ ಆಡಳಿತವನ್ನು ಕಡೆಗಣಿಸಿಬಿಟ್ಟ. ಅವನ ಅತಿರೇಕಗಳು ಟಿಪ್ಪುವಿಗೆ ವರದಿಯಾಗಿ ಅವನು ನಾಗಪ್ಪಯ್ಯನನ್ನು ಶಿಕ್ಷಿಸಲೆಂದು ದಂಡೊಂದನ್ನು ಕಳುಹಿಸಿಕೊಟ್ಟ ಸುದ್ದಿ ಕೇಳಿ ಹೆದರಿದ ನಾಗಪ್ಪಯ್ಯ ರಾತ್ರೋರಾತ್ರಿ ಪಲಾಯನ ಮಾಡಿ ಮಲಬಾರನ್ನು ಸೇರಿಕೊಂಡು ಕೋಟೆ ರಾಜನ ಆಶ್ರಯ ಬೇಡಿದ. ಕೋಟೆ ರಾಜ ಇಲ್ಲವೆನ್ನಲಿಲ್ಲ. ನಾಗಪ್ಪಯ್ಯ ಅಲ್ಲಿ ಪುಂಡು ಪೋಕರಿಗಳ ದಂಡೊಂದನ್ನು ಕಟ್ಟಿ ಕೊಡಗಿಗೆ ನುಗ್ಗಿ ಸುಲಿಗೆ ಮಾಡತೊಡಗಿದ. ಅದರಲ್ಲಿ ಒಂದು ಪಾಲು ತನಗೂ ಸಿಗುತ್ತಿದ್ದುದರಿಂದ ಕೋಟೆ ರಾಜ ನಾಗಪ್ಪಯ್ಯನ ಅಕೃತ್ಯವನ್ನು ಆಕ್ಷೇಪಿಸುತ್ತಿರಲಿಲ್ಲ.

ಕೊಡಗಿನಲ್ಲಿ ಅರಾಜಕತೆ ತಾಂಡವವಾಡುತ್ತಿರುವಾಗ ದಕ್ಷಿಣ ಕೊಡಗಿನ ಧೀರರು ಪೆರಿಯಾಪಟ್ಟಣದ ಕಾರಾಗೃಹದಿಂದ ಲಿಂಗರಾಜೇಂದ್ರನ ಮಕ್ಕಳನ್ನು ಬಿಡಿಸಿ ದಕ್ಷಿಣ ಕೊಡಗಿಗೆ ಕರೆತಂದರು. ಬ್ರಹ್ಮಗಿರಿಯ ತಪ್ಪಲಲ್ಲಿ ಅವರಿಗಾಗಿ ಕುರುಚ್ಚಿ ಅರಮನೆ ನಿರ್ಮಿಸಿದರು. ಲಿಂಗರಾಜೇಂದ್ರ ದೊರೆಗಳ ಹಿರಿಯ ಮಗ ದೊಡ್ಡ ವೀರರಾಜ ದಕ್ಷಿಣ ಕೊಡಗಿಗೆ ಬಂದಿದ್ದಾನೆ. ಟಿಪ್ಪುವಿನಿಂದ ಕೊಡಗನ್ನು ವಿಮುಕ್ತಗೊಳಿಸಲು ದಂಡು ಕಟ್ಟುತ್ತಿದ್ದಾನೆ. ಕೊಡಗರ ನೆರವು ಯಾಚಿಸುತ್ತಿದ್ದಾನೆ ಎಂದು ಸುದ್ದಿ ಹಬ್ಬಿಸಿದರು.

ಕೊಡಗು ರೋಮಾಂಚನಗೊಂಡಿತು.

ಸುದ್ದಿ ಕೇಳಿ ಕೋಟೆ ಅರಸನ ಆಶ್ರಯದಲ್ಲಿದ್ದ ನಾಗಪ್ಪಯ್ಯನ ಕಿವಿ ನೆಟ್ಟಗಾಯಿತು. ಈಗ ದೊಡ್ಡ ವೀರರಾಜನೊಡನೆ ಸೇರಿಕೊಂಡರೆ ಕೊಡಗಿನ ದಿವಾನನಾಗುವ ಅವಕಾಶಗಳಿವೆ. ತಾನೊಬ್ಬನೇ ಹೋದರೆ ದೊಡ್ಡವೀರರಾಜ ತನ್ನನ್ನು ಗಣನೆಗೆ ತೆಗೆದುಕೊಳ್ಳದಿದ್ದರೇನು ಮಾಡುವುದು ಎಂಬ ಸಂಶಯ ಅವನಲ್ಲಿ ಮೂಡಿತು. ಕೋಟೆ
ರಾಜನ ಸಲಹೆ ಕೇಳುವುದು ಸೂಕ್ತ ಎಂದು ಅವನಿಗನ್ನಿಸಿತು.

ಪ್ರಭುಗಳಿಗೂ ಸುದ್ದಿ ತಿಳಿದಿರಬಹುದು. ಕೊಡಗಿನ ಸ್ವರ್ಗಸ್ಥ ದೊರೆ ಲಿಂಗ ರಾಜೇಂದ್ರನ ಮಕ್ಕಳು ಸೆರೆಯಿಂದ ತಪ್ಪಿಸಿಕೊಂಡಿದ್ದಾರಂತೆ. ಅವರಲ್ಲಿ ಹಿರಿಯನಾದ ದೊಡ್ಡವೀರನನ್ನು ಕೊಡಗಿನ ರಾಜನನ್ನಾಗಿ ಮಾಡಲು ಕೊಡಗರು ನಿಶ್ಚಯಿಸಿದ್ದಾರಂತೆ ಅವನಿಗಾಗಿ ಕುರುಚ್ಚಿಯಲ್ಲಿ ಒಂದು ಅರಮನೆಯನ್ನು ಕಟ್ಟಿಕೊಟ್ಟಿದ್ದಾರಂತೆ.

ಸುದ್ದಿಯನ್ನು ಕೇಳಿದ್ದೇನೆ. ನನ್ನಲ್ಲಿ ಕೆಲವು ಸಂಶಯಗಳು ಮೂಡಿವೆ. ಕೊಡಗರು ನಾಟಕ ಮಾಡುತ್ತಿದ್ದಾರೆಂದು ಅನಿಸುತ್ತದೆ. ಕುರುಚ್ಚಿಯಲ್ಲಿರುವವನು ಲಿಂಗರಾಜೇಂದ್ರ ಮಗನೇ ಎಂಬುದನ್ನು ಖಚಿತಪಡಿಸಿಕೊಂಡಿದ್ದೀಯಾ?

ಹೌದು ಪ್ರಭೂ. ನನ್ನ ಕಡೆಯವರು ಅದನ್ನು ಖಚಿತ ಪಡಿಸಿಕೊಂಡ ಮೇಲೆಯೇ ನಾನು ನಿಮ್ಮನ್ನು ಕಾಣಬಂದಿರುವುದು. ಈಗ ನಾವೇನು ಮಾಡೋಣ ಪ್ರಭೂ?

ಏನು ಮಾಡಬೇಕೆಂದು ನಿನ್ನ ಅಭಿಪ್ರಾಯ?

ಕೊಡಗರು ದೊಡ್ಡವೀರರಾಜ ಮತ್ತು ಇಂಗ್ಲೀಷರ ನಡುವೆ ಮೈತ್ರಿ ಏರ್ಪಡಿಸುವುದರಲ್ಲಿದ್ದಾರಂತೆ. ಟಿಪ್ಪುವನ್ನು ನೇರವಾಗಿ ಎದುರಿಸಲು ಸಾಧ್ಯವಿಲ್ಲವೆಂಬುದು ದೊಡ್ಡ ವೀರರಾಜನಿಗೆ ಅರ್ಥವಾಗಿ ಅವನು ಈ ಮೈತ್ರಿಗೆ ಒಪ್ಪಿಕೊಂಡಿದ್ದಾನಂತೆ. ಈಗ ನಾವು ಚಾಣಾಕ್ಷ ರಾಜಕೀಯ ನಡಿಗೆ ಮಾಡಬೇಕು ಪ್ರಭೂ.

ಏನು ಮಾಡಬೇಕೆಂದು ಹೇಳುತ್ತಿದ್ದಿ ನಾಗಪ್ಪಯ್ಯ?

ನಾವೀಗ ದೊಡ್ಡವೀರರಾಜನ ಕಡೆ ಸೇರಿಕೊಂಡರೆ ಇಂಗ್ಲೀಷರ ಸ್ನೇಹ ಅನಾಯಾಸವಾಗಿ ದೊರೆಯುತ್ತದೆ. ಟಿಪ್ಪುವನ್ನು ಸುಲಭವಾಗಿ ಸೋಲಿಸಬಹುದು. ಆಮೇಲೆ ಯಾವುದೋ ತಗಾದೆ ತೆಗೆದು ದೊಡ್ಡವೀರ ಮತ್ತು‌ಇಂಗ್ಲೀಷರ ನಡುವೆ ಭಿನ್ನಾಭಿಪ್ರಾಯ ಮೂಡುವಂತೆ ಮಾಡಿ, ದೊಡ್ಡವೀರನ ಮೇಲೆ ದಂಡೆತ್ತಿ ಹೋಗಿ ಇಡೀ ಕೊಡಗನ್ನು ನಮ್ಮದನ್ನಾಗಿ ಮಾಡಿಕೊಳ್ಳಬಹುದಲ್ಲಾ?

ಕೋಟೆ ರಾಜನ ಹುಬ್ಬುಗಳು ಮೇಲೇರಿದವು. ಕ್ಷಣಕಾಲ ಅವನು ಯೋಚನೆಗೊಳಗಾದ. ಕೊಡಗಿನ ರಾಜರುಗಳೊಂದಿಗೆ ಕೋಟೆ ರಾಜರುಗಳಿಗೆ ಲಾಗಾಯ್ತಿನಿಂದ ಶತೃತ್ವವಿತ್ತು. ತನ್ನ ಬ್ರಾಹ್ಮಣಿಕೆಯ ಅಹಂ ಬಿಟ್ಟು ನಾಗಪ್ಪಯ್ಯ ಬಂದು ಕಾಲಿಗೆ ಬಿದ್ದು ಪ್ರಾಣಭಿಕ್ಷ ಬೇಡಿದ್ದಕ್ಕೆ ಕೋಟೆರಾಜ ಅವನಿಗೆ ರಕ್ಷಣೆ ನೀಡಿದ್ದ. ಅವನಿಗೆ ನಾಗಪ್ಪಯ್ಯನ ಸಕಲ ಕಲ್ಯಾಣ ಗುಣಗಳ ಪರಿಚಯವಿದ್ದುದರಿಂದ ಕೋಟೆರಾಜ ಈ ಹಾರುವನನ್ನು ನಂಬಿರಲಿಲ್ಲ. ಇವನ ತಲೆಯಲ್ಲಿ ಪ್ರಚಂಡ ರಾಜಕಾರಣಿಯ ಆಲೋಚನೆಗಳು ಮೂಡುತ್ತಿವೆ. ಇವನಂದಂತೆ ಮಾಡಿದರೆ ಏನಾಗುತ್ತದೆ? ಈಗ ದೊಡ್ಡವೀರರಾಜನಿಗೆ ಸಹಾಯ ಮಾಡಿದರೆ ಅವನು ಬಲಾಢ್ಯನಾಗಿ ಬೆಳೆದು ಬಿಡುತ್ತಾನೆ. ಕೊಡಗು ಬಲಿಷ್ಠವಾದರೆ ಮೊದಲ ಅಪಾಯ ಬರುವುದು ಕೋಟೆ ರಾಜ್ಯಕ್ಕೇ. ದೂರದ ಮೈಸೂರು ಸಂಸ್ಥಾನದಿಂದ ಕೋಟೆ ರಾಜ್ಯಕ್ಕೆ ಅಪಾಯವಿಲ್ಲ. ಕೋಟೆ ರಾಜ್ಯಕ್ಕೆ ಶತ್ರು ಎಂದಿದ್ದರೆ ಅದು ಕೊಡಗು. ಈಗ ಯೋಚಿಸಿ ದೂರದೃಷ್ಟಿಯಿಂದ ಹೆಜ್ಜೆ ಇಡಬೇಕಾಗಿದೆ.

ನಾಗಪ್ಪಯ್ಯ ನಿನ್ನಂತಹ ನಮಕು ಹರಾಮನ್ನು ನಾನು ಇದುವರೆಗೆ ಕಂಡವನಲ್ಲ. ಟಿಪ್ಪು ನಿನ್ನನ್ನು ನಂಬಿ ಕೊಡಗಿನ ಅಧಿಕಾರವನ್ನು ಪೂರ್ತಿಯಾಗಿ ನಿನ್ನ ಕೈಗಿತ್ತ. ನೀನು ರೈತರನ್ನು, ಬಡಪಾಯಿ ಹೆಣ್ಣುಗಳನ್ನು ಸುಲಿದು ತಿಂದೆ. ಆಮೇಲೆ ಟಿಪ್ಪು ಶಿಕ್ಷಿಸಿಯಾನೆಂದು ಹೆದರಿ ಇಲ್ಲಿಗೆ ಓಡಿ ಬಂದವನು ಮತ್ತೆ ಮಾಡಿದ್ದೇನು? ಕೊಡಗಿನ ಅನ್ನ ತಿಂದು, ಕಾವೇರಿ ಅಮ್ಮೆಯ ನೀರು ಕುಡಿದು ನಿನ್ನದೇ ನಾಡನ್ನು ದರೋಡೆ ಮಾಡುತ್ತಿದ್ದಿ. ಸ್ವಲ್ಪ ಯೋಚಿಸಿ ನೋಡು. ಅಂದು ನಿಮ್ಮ ಲಿಂಗರಾಜೇಂದ್ರ ಪ್ರಭು ಶ್ರೀರಂಗಪಟ್ಟಣಕ್ಕೆ ಹೋಗಿ ಕಾಲಿಗೆ ಬೀಳದಿರುತ್ತಿದ್ದರೆ ಹೈದರಾಲಿ ಕೊಡಗಿಗೆ ಕಾಲೂರಲು ಸಾಧ್ಯವಿರುತ್ತಿತ್ತೆ? ಲಿಂಗರಾಜೇಂದ್ರನ ಮಕ್ಕಳು ಎಳೆಯವರು ಎಂದಲ್ಲವೇ ಟಿಪ್ಪು ಕೊಡಗನ್ನು ತನ್ನ ವಶದಲ್ಲಿ ಇಟ್ಟುಕೊಂಡದ್ದು? ಅಪ್ಪನ ಕಾಲದಲ್ಲೇ ಕೊಡಗು ಮೈಸೂರಿಗೆ ಸೇರಿಹೋಯಿತೆಂದು ಟಿಪ್ಪು ಭಾವಿಸಿದ್ದರೆ ರಾಜಕೀಯವಾಗಿ ಅದು ತಪ್ಪಲ್ಲ. ನಿನ್ನ ಅಣ್ಣ ಸುಬ್ಬಪ್ಪಯ್ಯನನ್ನು ಅಮಲ್ದಾರನನ್ನಾಗಿ ಮಾಡಿ ಹೈದರಾಲಿಗೆ ಕೆಟ್ಟ ಹೆಸರು ಬಂತು. ನಿನ್ನ ಮೇಲೆ ನಂಬಿಕೆಯಿಟ್ಟು ನಿನ್ನನ್ನು ಅಮಲ್ದಾರನನ್ನಾಗಿ ಮಾಡಿದವನು ಟಿಪ್ಪು. ನೀನು ಸರಿಯಾದ ಆಡಳಿತ ಕೊಡುತ್ತಿದ್ದರೆ ಕೊಡಗರು ಟಿಪ್ಪುವಿಗೆ ಎದುರಾಗಿ ದಂಗೆ ಏಳುತ್ತಿರಲಿಲ್ಲ. ಟಿಪ್ಪುವಿನ ಸೇನೆ ಬಂತೆಂದು ಹೆದರಿ ಕಾಡು ಸೇರುತ್ತಿರಲಿಲ್ಲ. ಟಿಪ್ಪು ಅವರಲ್ಲಿ ಕೆಲವರನ್ನು ಸೆರೆ ಹಿಡಿದು ಶ್ರೀರಂಗಪಟ್ಟಣಕ್ಕೆ ಒಯ್ದು ಇಸ್ಲಾಮಿಗೆ ಸೇರಿಸುತ್ತಿರಲಿಲ್ಲ. ನಿನ್ನಿಂದಾಗಿ ಟಿಪ್ಪುವಿಗೆ ಕೆಟ್ಟ ಹೆಸರು ಬಂತು. ಕೊಡಗಿಗೆ ಗಂಡಾಂತರ ಬಂತು. ಕೊಡಗನ್ನು ಹಾಳು ಮಾಡಿದವನು ನೀನು.

ಇಂತಹ ನಿಷ್ಠುರದ ಮಾತುಗಳನ್ನು ನಾಗಪ್ಪಯ್ಯ ಯಾರಿಂದಲೂ ಕೇಳಿದವನಲ್ಲ. ಅವನ ಹಣೆಯಲ್ಲಿ ಬೆವರು ಕಾಣಿಸಿಕೊಂಡಿತು. ನಿಂತ ನೆಲ ಅದುರಿದಂತಾಯಿತು. ಈ ಕೋಟೆ ರಾಜನಿಗೆ ಯಾವತ್ತಾದರೂ ಬುದ್ಧಿ ಕಲಿಸದೆ ಇರಲಾರೆ ಎಂದು ಮನದಲ್ಲೇ ಅಂದುಕೊಂಡ. ಆದರೂ ದೈನ್ಯ ತುಂಬಿದ ಸ್ವರದಲ್ಲಿ ಕೇಳಿದ.

ಕಳೆದು ಹೋದದ್ದನ್ನು ನೆನಪಿಸಿ ಏನು ಸುಖವಿದೆ ಪ್ರಭೂ? ಮುಂದೇನು ಮಾಡ ಬೇಕೆಂದು ಯೋಚಿಸಬೇಕಲ್ಲವೆ?

ಇತಿಹಾಸ ಗೊತ್ತಿಲ್ಲದೆ ಭವಿಷ್ಯವನ್ನು ನಿರ್ಮಾಣ ಮಾಡಲು ಆಗುವುದಿಲ್ಲ. ಈಗ ನೋಡು ಕೊಡಗರು ಯಾರೋ ಒಬ್ಬನನ್ನು ಎಲ್ಲಿಂದಲೋ ಕರೆತಂದು ಟಿಪ್ಪುವಿಗೆ ಎದುರಾಗಿ ನಿಲ್ಲಿಸಿದರೆ ನಾವು ಹಿಂದು ಮುಂದು ನೋಡದೆ ಅವನೊಡನೆ ಕೈ ಜೋಡಿಸುವುದು ಬುದ್ಧಿವಂತಿಕೆಯಾಗುವುದಿಲ್ಲ?

ಪ್ರಭುಗಳು ದೊಡ್ಡವೀರರಾಜನ ಪಿತೃತ್ವದ ಬಗ್ಗೆ ಸಂದೇಹ ಪಡುವುದೆ?

ಯಾಕೆ ಪಡಬಾರದು? ರಾಜನಾದವ ಒಂದು ವಿಷಯವನ್ನು ಅನೇಕ ಆಯಾಮಗಳಿಂದ ನೋಡಬೇಕಾಗುತ್ತದೆ. ಕೊಡಗರು ಟಿಪ್ಪುವನ್ನು ತಮ್ಮ ನಾಡಿನಿಂದ ಓಡಿಸಲು ಹೀಗೆ ಒಬ್ಬ ರಾಜನನ್ನು ಸೃಷ್ಟಿ ಮಾಡಿರಬಾರದೇಕೆ? ಇದಕ್ಕೆ ಇಂಗ್ಲೀಷರದೂ ಕುಮ್ಮಕ್ಕು ಇರಬಹುದು. ಈ ಜಗತ್ತಿನಲ್ಲಿ ಯಾರೂ ಕಿಂಚಿತ್ತಾದರೂ ಸ್ವಾರ್ಥ ಇಲ್ಲದೆ ಕೆಲಸ ಮಾಡುವುದಿಲ್ಲ. ರಾಜಕಾರಣ ನಿಂತಿರುವುದೇ ಸ್ವಾರ್ಥದ ಮೇಲೆ. ಈ ದೊಡ್ಡವೀರ ಕೊಡಗಿನಿಂದ ಟಿಪ್ಪುವಿನ ಸೇನೆಯನ್ನು ಓಡಿಸಿದ ಮೇಲೆ ಕೋಟೆಗೆ ನುಗ್ಗಿ ನಮ್ಮನ್ನು ಸದೆ ಬಡಿದು ಸಾಮ್ರಾಜ್ಯ ವಿಸ್ತರಿಸುತ್ತಾನೆ. ಹಿಂದೆ ಲಿಂಗರಾಜೇಂದ್ರ ಮಲೆಯಾಳ ದೇಶಕ್ಕೆ ನುಗ್ಗಿದ್ದನ್ನು ನೀನು ಕೇಳಿ ತಿಳಿಕೊಂಡಿರಬೇಕು. ಟಿಪ್ಪುವೇ ಕೊಡಗನ್ನು ಆಳಿದರೆ ನಮಗೆ ಕ್ಷೇಮ. ಅವನು ಮಲೆಯಾಳದೊಂದಿಗೆ ಮೈತ್ರಿಯಿಂದಿರುವವನು. ಅವನಿಗೆ ನಿಷ್ಠನಾಗಿ ನೀನು ಕೊಡಗಿನಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದರೆ ಈಗಿನ ಪರಿಸ್ಥತಿ ಉದ್ಭವಿಸುತ್ತಿರಲಿಲ್ಲ. ನೀನು ಕೈ, ಬಾಯಿ, ಕಚ್ಚೆಮೂರೂ ಭದ್ರವಿಲ್ಲದವನು ಎಲ್ಲವನ್ನೂ ಹಾಳು ಮಾಡಿಬಿಟ್ಟೆ. ಈಗ ನಾವು ದೊಡ್ಡವೀರನ ಜತೆ ಸೇರಿದರೆ ಇನ್ನೊಂದು ಅನಾಹುತವಾಗಿ ಬಿಡುತ್ತದೆ.

ಅದೇನು ಪ್ರಭೂ?

ದೊಡ್ಡ ವೀರರಾಜ ಇಂಗ್ಲೀಷರ ಜತೆ ಸೇರಿಕೊಂಡರೆ ನಾವೂ ಅವನ ಮಿತ್ರರಾಗಿ ಬಿಡುತ್ತೇವೆ.

ಅದರಿಂದ ಒಳ್ಳೆಯದೇ ಆಗುತ್ತದಲ್ಲಾ ಪ್ರಭೂ. ಇಂದಲ್ಲ ನಾಳೆ ಅವರು ಟಿಪ್ಪುವಿಗಿಂತ ಪ್ರಬಲರಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆ ಟಿಪ್ಪುವಿಗಿಂತ ಅವರೇ ಉತ್ತಮರು.
ನಾಗಪ್ಪಯ್ಯ ನಿನ್ನ ತಲೆಯಲ್ಲಿರೋದು ಬರೀ ಸೆಗಣಿ. ಟಿಪ್ಪು ನಿನಗೆ ಮಾಡಿರುವ ಅನ್ಯಾಯವೇನು?
ಅವನು ಹಾಲೇರಿಯವರಿಗೆ ಸೇರಬೇಕಾದ ಕೊಡಗನ್ನು ತಾನು ಆಳುತ್ತಿದ್ದಾನೆ. ಕೆಲವು ಕೊಡಗರನ್ನು ಬಲಾತ್ಕಾರದಿಂದ ಇಸ್ಲಾಮಿಗೆ ಸೇರಿಸಿದವನು ನಾಳೇ ಎಲ್ಲಾ ಕೊಡಗರನ್ನು ಸೇರಿಸುವ ಆತಂಕ ಇದ್ದೇ ಇದೆಯಲ್ಲಾ ಪ್ರಭೂ?

ಕೊಡಗಿಗೆ ಒಬ್ಬ ಉತ್ತರಾಧಿಕಾರಿ ಇರುವುದೇ ಟಿಪ್ಪುವಿನ ಗಮನಕ್ಕೆ ಬಂದಿಲ್ಲ. ಗೊತ್ತಿರುತ್ತಿದ್ದರೆ ನಿನ್ನಂಥವನ ಕೈಗೆ ರಾಜ್ಯವನ್ನು ಕೊಡುತ್ತಿದ್ದನಾ? ಟಿಪ್ಪುವಿನ ಸೇನೆ ಇಂಗ್ಲೀಷರನ್ನು ಎದುರಿಸಲು ಕೊಡಗಿನ ಮೂಲಕ ಹಾದು ಹೋಗುವಾಗ ಮರೆಮೋಸದಿಂದ ಉಪಟಳ ಕೊಟ್ಟು ಒಂದಷ್ಟು ಮಂದಿಯನ್ನು ಹಿಡಕೊಂಡು ಹೋಗಿ ಇಸ್ಲಾಮಿಗೆ ಸೇರಿಸಿದ್ದರೆ ರಾಜಕೀಯವಾಗಿ ಅದನ್ನು ತಪ್ಪೆನ್ನುವಂತಿಲ್ಲ. ಹಾಲೇರಿ ಅರಸರು ಎಷ್ಟು ಮಂದಿಗೆ ಲಿಂಗಕಟ್ಟಿ ಶಿವಚಾರಿಗಳನ್ನಾಗಿ ಮಾಡಿಲ್ಲ? ಆಡಳಿತದ ಸುಭದ್ರತೆಗಾಗಿ ಇವನ್ನೆಲ್ಲಾ ಮಾಡಬೇಕಾಗುತ್ತದೆ.

ಆದರೆ ಇಂಗ್ಲೀಷರು ಹಾಗೆ ಮಾಡುತ್ತಿಲ್ಲ ಪ್ರಭೂ.

ನಿನಗೆ ಹೇಗೆ ಗೊತ್ತು? ದೊಡ್ಡವೀರ ಇಂಗ್ಲೀಷರೊಡನೆ ಸೇರುವುದೆಂದರೆ, ಕಾಲ ಕ್ರಮೇಣ ಕೊಡಗನ್ನು ಅವರಿಗೆ ಬಿಟ್ಟುಕೊಡುವುದು ಎಂದೇ ಅರ್ಥ. ಇಂಗ್ಲೀಷರ ನಿಜಬಣ್ಣ ಬಯಲಾಗುವುದೇ ಆಗ. ಟಿಪ್ಪು ವಸೂಲಿ ಮಾಡುವ ಕಂದಾಯ ಅವನ ರಾಜ್ಯದ ಪ್ರಜೆಗಳಿಗಾಗಿ ಬಳಕೆಯಾಗುತ್ತದೆ. ಇಂಗ್ಲೀಷರು ವಸೂಲು ಮಾಡುವ ಕಂದಾಯ ಬ್ರಿಟನ್ನಿಗೆ ಹೋಗುತ್ತದೆ. ಇಸ್ಲಾಮು ಟಿಪ್ಪು ತನ್ನ ರಾಜ್ಯದ ಎಲ್ಲಾ ದೇವಾಲಯಗಳಿಗೆ ಉಂಬಳಿ ನೀಡುತ್ತಾನೆ. ಹಿಂದೂ ಮರಾಠರು ಲೂಟಿ ಮಾಡಿದ ಶೃಂಗೇರಿಯನ್ನು ಊರ್ಜಿತಗೊಳಿಸಿದ್ದು ಇದೇ ಇಸ್ಲಾಮು ಟಿಪ್ಪು. ಅವನ ಅರಮನೆಯಲ್ಲಿ ದಿನಾ ವೈದಿಕರಿಂದ ಪೂಜೆಹವನ ನಡೆಯುತ್ತದೆಂದು ಕೇಳಿದ್ದೇನೆ. ಇಂಗ್ಲೀಷರು ನಮ್ಮನ್ನು ಆಳತೊಡಗಿದರೆ ಅವರ ಇಸಾಯಿ ಮತವನ್ನು ನಮ್ಮ ಮೇಲೆ ಖಂಡಿತಾ ಹೇರುತ್ತಾರೆ. ಅದಕ್ಕೆಂದೇ ಇಸಾಯಿ ಪುರೋಹಿತರುಗಳ ಪಡೆಯೇ ಸಿದ್ಧವಾಗುತ್ತಿದೆಯಂತೆ. ಒಂದು ಮಾತನ್ನು ಎಂದಿಗೂ ಮರೆಯಬೇಡ. ದೇಶೀಯನಾದ ಟಿಪ್ಪುವಿಗಿಂತ ವಿದೇಶೀಯರಾದ ಇಂಗ್ಲೀಷರೇ ನಮಗೆ ಅಪಾಯಕಾರಿಗಳು.

ನಾಗಪ್ಪಯ್ಯ ಕೋಟೆರಾಜನ ಮಾತಿಗೆ ತಲೆದೂಗಿದ.

ಹಾಗಾದರೆ ನಿಮ್ಮ ತೀರ್ಮಾನವೇನು ಪ್ರಭೂ?

ಟಿಪ್ಪುವಿನೊಡನೆ ಕೈಜೋಡಿಸಿ ಇಂಗ್ಲೀಷರನ್ನು ನಮ್ಮ ನೆಲದಿಂದ ಓಡಿಸಬೇಕೆಂದು ತೀರ್ಮಾನಿಸಿದ್ದೇನೆ. ನಾಗಪ್ಪಯ್ಯನ ಮುಖ ಕಪ್ಪಿಟ್ಟಿತು.
ನನ್ನ ಮೇಲೆ ಟಿಪ್ಪುವಿಗೆ ಹಗೆಯಿದೆ. ನೀವಿಬ್ಬರು ಒಂದಾದರೆ ನನ್ನ ಗತಿಯೇನು ಪ್ರಭೂ?

ಕಚ್ಚೆ ಭದ್ರವಿಲ್ಲದ ನಿನಗೆ ಸ್ವಲ್ಪ ಉದ್ದಕ್ಕೆ ಸುನ್ನತಿ ಮಾಡಿಸಲು ಟಿಪ್ಪುವಿನಲ್ಲಿ ಹೇಳುತ್ತೇನೆ. ಆಮೇಲೆ ಅವರ ಗ್ರಂಥ ಓದು. ಉದ್ದಕ್ಕೆ ಗಡ್ಡ ಬಿಟ್ಟು ಧರ್ಮೋಪದೇಶಕನಾಗು. ಕೊಡಗನ್ನು ಸುಲಿದ, ಹೆಂಗಳೆಯರ ಮಾನವನ್ನು ಕಳೆದ ಪಾಪ ಹಾಗಾದರೂ ಪರಿಹಾರವಾಗಲಿ.
ನಾಗಪ್ಪಯ್ಯ ತಬ್ಬಿಬ್ಬಾದ.
ಪ್ರಭುಗಳು ಪರಿಹಾಸ್ಯ ಮಾಡಬಾರದು. ಇದು ನನ್ನ ಪ್ರಾಣದ ಪ್ರಶ್ನೆ.
ನಾಡಿನ ಭವಿಷ್ಯಕ್ಕಾಗಿ ಒಬ್ಬನ ಪ್ರಾಣಹೋದರೆ ದೊಡ್ಡದಲ್ಲ.
ನಾಗಪ್ಪಯ್ಯ ಗಡಗಡಗಡ ನಡುಗತೊಡಗಿದ.

ಛೇ! ನಾನಿಲ್ಲವೇ ನಾಗಪ್ಪಯ್ಯ? ನಿನ್ನನ್ನು ಟಿಪ್ಪುವಿಗೆ ಬಲಿಕೊಟ್ಟು ಬಿಡುತ್ತೇನೆಂದು ಕೊಂಡಿಯಾ? ಸಂದರ್ಭ ನೋಡಿ ನೀನು ಟಿಪ್ಪುವಿನಲ್ಲಿ ಕ್ಷಮೆ ಯಾಚಿಸಿಬಿಡು. ನಿನ್ನದೇ ನಾಡನ್ನು ಸುಲಿದವ ನೀನು. ಅಸಹಾಯಕ ಹೆಣ್ಣುಗಳನ್ನು ಹೊತ್ತು ತಂದು ಹಾಳು ಮಾಡಿದವನು. ನಿನ್ನಲ್ಲೊಂದು ನೈತಿಕ ನಿಯತ್ತು ಇರುತ್ತಿದ್ದರೆ ಈಗ ಹೀಗೆ ನೀನು ನಡುಗಬೇಕಾಗಿರಲಿಲ್ಲ.

ನಾಗಪ್ಪಯ್ಯ ಕುಸಿದು ಕುಳಿತ.
ಈಗ ನಾನು ಏನು ಮಾಡಬೇಕೆನ್ನುತ್ತೀರಿ?
ನೀನು ಕುರುಚ್ಚಿಗೆ ಹೋಗಿ ದೊಡ್ಡ ವೀರನನ್ನು ಕಾಣಬೇಕು. ಕೋಟೆ ಅರಸರು ಮಾತುಕತೆಗೆ ಆಹ್ವಾನಿಸಿದ್ದಾರೆ ಎಂದು ಹೇಳಬೇಕು. ಟಿಪ್ಪು ಸುಲ್ತಾನನಿಗೂ ನಿನಗೂ ವೈರ ಇರುವುದರಿಂದ ನಿನ್ನ ಮಾತನ್ನು ಅವನು ನಂಬುತ್ತಾನೆ.
ನಿಜ ಪ್ರಭೂ. ನಾನು ಹೇಳಿದರೆ ಅವನು ನಿಮ್ಮ ಭೇಟಿಗೆ ಬಂದೇ ಬರುತ್ತಾನೆ. ನಿಮ್ಮ ಉದ್ದೇಶವೇನು ಪ್ರಭೂ! ದೊಡ್ಡ ವೀರರಾಜನನ್ನು ಮುಗಿಸುವುದೆ?
ಆ ಪಾಪವನ್ನು ನನ್ನ ತಲೆಗೆ ಯಾಕೆ ಕಟ್ಟಿಕೊಳ್ಳಲಿ. ಅವನನ್ನು ಹಿಡಿದು ಟಿಪ್ಪುವಿಗೆ ಕೊಟ್ಟು ಬಿಡುತ್ತೇನೆ. ಏನು ಬೇಕಾದರೂ ಮಾಡಿಕೊಳ್ಳಲಿ.
ಅದರಿಂದ ನಿಮಗಾಗುವ ಲಾಭವೇನು?
ಅವನ ಬಂಧನವಾದರೆ ಕೊಡಗಿಗೆ ಮತ್ತು ಕೋಟೆಗೆ ಇಂಗ್ಲೀಷರು ಕಾಲಿಡಲು ಸಾಧ್ಯವಾಗುವುದಿಲ್ಲ. ಟಿಪ್ಪುವಿನಂತಹ ಬಲಾಢ್ಯನ ಸ್ನೇಹ ದೊರೆತರೆ ನಮ್ಮ ರಾಜ್ಯದ ಮೇಲೆ ಬೇರೆ ಯಾರೂ ಕಣ್ಣು ಹಾಕುವುದಿಲ್ಲ.
ನಾಗಪ್ಪಯ್ಯ ಕೋಟೆ ರಾಜನ ತರ್ಕಕ್ಕೆ ತಲೆದೂಗಿದ.
ನಿನ್ನಿಂದ ಇನ್ನೂ ಒಂದು ಕೆಲಸವಾಗಬೇಕಿದೆ. ದೊಡ್ಡ ವೀರರಾಜ ಕೋಟೆಗೆ ಬರುವಾಗ ನೀನು ಕುರುಚ್ಚಿ ಅರಮನೆಯನ್ನು ದೋಚಿ ಬೆಂಕಿಕೊಟ್ಟು ಬಿಡಬೇಕು. ಅಲ್ಲಿಗೆ ಎಲ್ಲವೂ ಮುಗಿದು ಹೋಗುತ್ತದೆ.
ಒಪ್ಪಿಕೊಳ್ಳದೆ ನಾಗಪ್ಪಯ್ಯನಿಗೆ ನಿರ್ವಾಹವಿರಲಿಲ್ಲ.

* * *

ತಮ್ಮಂದಿರನ್ನು ಕೂಡಿಕೊಂಡು ದಂಡಿನೊಡನೆ ಕೋಟೆ ಅರಸನ ಭೇಟಿಗೆ ಹೋದ ದೊಡ್ಡವೀರರಾಜ ಅಲ್ಲಿ ಏದುರಿಸಬೇಕಾಗಿ ಬಂದದ್ದು ಯುದ್ಧವನ್ನು. ಪೂರ್ವಸಿದ್ಧತೆಗಳಿಲ್ಲದ ಪುಟ್ಟ ದಂಡು ಕೋಟೆಯ ದೊಡ್ಡ ದಂಡಿನೆದುರು ಸೋತು ಹೋಯಿತು. ದೊಡ್ಡ ವೀರರಾಜ ತನ್ನ ವಶದಲ್ಲಿದ್ದ ಕೆಲವು ಊರುಗಳನ್ನು ಕೋಟೆ ರಾಜನಿಗೆ ಬಿಟ್ಟುಕೊಟ್ಟು ಶಾಂತಿ ಒಪ್ಪಂದ ಮಾಡಿಕೊಳ್ಳಬೇಕಾಯಿತು.

ಸೋತು ಹಿಂದಿರುಗುತ್ತಿದ್ದ ದೊಡ್ಡವೀರರಾಜನ ಪಡೆಗೆ ನಾಗಪ್ಪಯ್ಯ ಮತ್ತು ಅವನ ಸುಲಿಗೆ ಪಡೆ ಎದುರಾಯಿತು. ಹೆದರಿ ನಾಗಪ್ಪಯ್ಯ ತಪ್ಪಿಸಿಕೊಂಡು ಓಡಲು ಯತ್ನಿಸಿದ. ದೊಡ್ಡವೀರರಾಜನ ಕಾರ್ಯಕಾರರಾದ ಕುಲ್ಲೇಟಿ ಪೊನ್ನಂಣ್ಣ ಮತ್ತು ಕುಲ್ಲೇಟಿ ಮಾಚಣ್ಣ ಅವನನ್ನು ಹಿಡಿದು ನಿಲ್ಲಿಸಿದರು. ಅವನ ಸುಲಿಗೆ ಪಡೆ ದಿಕ್ಕಾಪಾಲಾಗಿ ಓಡಿಹೋಯಿತು.

ದೊಡ್ಡ ವೀರರಾಜ ಶಾಂತ ಸ್ವರದಲ್ಲಿ ಪ್ರಶ್ನಿಸಿದ.

ನಮ್ಮನ್ನು ಕೋಟೆ ರಾಜನಿಂದ ಕೊಲ್ಲಿಸಲಿಕ್ಕೆ ಯತ್ನಿಸಿದೆಯಾ ನಾಗಪ್ಪಯ್ಯ?
ಇಲ್ಲ ಪ್ರಭೂ. ನನ್ನಲ್ಲಿ ಹೇಳಿ ಕಳಿಸಿದ್ದಷ್ಟನ್ನೇ ನಾನು ಮಾಡಿದ್ದು.
ಹಾಗಾದರೆ ನೀನು ನಮ್ಮನ್ನು ಕಂಡಾಗ ಓಡಿ ಹೋಗಲು ಯತ್ನಿಸಿದ್ದು ಯಾಕೆ?
ಕೋಟೆ ಮಹಾರಾಜ ಏನು ಮಾಡಿದ್ದಾನೆಂಬುದು ನನಗೆ ಗುಪ್ತಚರರಿಂದ ತಿಳಿಯಿತು ಪ್ರಭೂ. ನನ್ನಿಂದಾಗಿ ಪ್ರಭುಗಳಿಗೆ ಹೀಗಾಯಿತಲ್ಲಾ ಎಂದು ವ್ಯಥೆಯಾಯಿತು. ಎಲ್ಲಿ ನನ್ನನ್ನು ಅಪಾರ್ಥ ಮಾಡಿಕೊಳ್ಳುತ್ತೀರೋ ಎಂಬ ಭೀತಿಯೂ ಅದರೊಡನೆ ಸೇರಿಕೊಂಡಿತು.
ಸರಿ ನಾಗಪ್ಪಯ್ಯ. ನೀನು ಕೊಡಗಿನವನು. ಆ ಕೋಟೆ ಅರಸ ನಮ್ಮನ್ನು ಮೋಸ ಗೊಳಿಸಿದವನು ನಿನ್ನನ್ನು ಪ್ರಾಣಸಹಿತ ಬಿಡಲಾರ. ನೀನು ಅಲ್ಲಿಗೆ ಹೋಗಬೇಡ. ನಮ್ಮನ್ನು ಸೇರಿಕೊಂಡು ಬಲವಾದ ಒಂದು ನಾಡನ್ನು ಕಟ್ಟಲು ಶ್ರಮಿಸು.
ನಾಗಪ್ಪಯ್ಯನ ತೊಡೆಗಳು ನಡುಗತೊಡಗಿದವು.
ಬೇಡಿ ಪ್ರಭೂ. ಟಿಪ್ಪುವಿಗೆ ನನ್ನ ಮೇಲೆ ದ್ವೇಷವಿದೆ. ಅವನು ನನ್ನನ್ನು ಕೊಲ್ಲಿಸದೆ ಬಿಡಲಾರ.
ಟಿಪ್ಪುವಿನ ಕಪಿಮುಷ್ಟಿಯಿಂದ ಕೊಡಗನ್ನು ಬಿಡಿಸುವುದೇ ನಮ್ಮೆಲ್ಲರ ಗುರಿ. ಹೆದರಬೇಡ. ನಾವಿರುವವರೆಗೆ ನಿನ್ನ ಕೂದಲೂ ಕೊಂಕದಂತೆ ನೋಡಿಕೊಳ್ಳುತ್ತೇವೆ.
ನಾಗಪ್ಪಯ್ಯ ಓಡಲು ನೋಡಿದ. ತಕ್ಷಣ ಕೆಟುವಳಿ ಮಾಚಣ್ಣ ಅವನನ್ನು ಬಲವಾಗಿ ಹಿಡಿದುಕೊಂಡ.
ಅವನ ಕೈಗಳನ್ನು ಕಟ್ಟಿ ಎಳಕೊಂಡು ಬನ್ನಿ. ಅರಮನೆಯಲ್ಲಿ ಅವನನ್ನು ವಿಚಾರಿಸುತ್ತೇವೆ.
ಕುರುಚ್ಚಿಗೆ ಬಂದು ನೋಡಿದರೆ ಅರಮನೆ ಸಂಪೂರ್ಣವಾಗಿ ಸುಟ್ಟು ಭಸ್ಮೀಭೂತವಾಗಿತ್ತು. ಅರಮನೆಯೊಳಗಿದ್ದವರು ಜೀವಂತ ದಹಿಸಿ ಹೋಗಿದ್ದರು. ತನ್ನ ತಾಯಿ ಮಲ ತಾಯಂದಿರು, ಅವರ ಸೇವಕಿಯರು, ಅರಮನೆಯ ಆಳುಕಾಳುಗಳು ಯಾರೂ ಉಳಿದಿರಲಿಲ್ಲ. ದೊಡ್ಡವೀರರಾಜ ಕುಸಿದು ಬಿಕ್ಕತೊಡಗಿದ. ಕಾರ್ಯಕಾರ ಕುಲ್ಲೇಟಿ ಪೊನ್ನಣ್ಣ ದೊಡ್ಡವೀರನ ಎದುರು ಮಂಡಿಯೂರಿ ಕೂತ.

ಮಹಾರಾಜರು ಸಮಾಧಾನ ಮಾಡಿಕೊಳ್ಳಬೇಕು. ಆಗಿಹೋದದ್ದಕ್ಕೆ ಚಿಂತಿಸದೆ ಹೀಗಾಗಲು ಕಾರಣವೇನೆಂದು ಯೋಚಿಸಬೇಕು. ಒಂದು ನಾಡನ್ನು ಕಟ್ಟಲು ಹೊರಟಾಗ ಹೀಗಾಗುವುದು ಸಹಜವೆಂದುಕೊಳ್ಳಬೇಕು.

ದೊಡ್ಡವೀರರಾಜ ಎದ್ದು ನಿಂತ.
ನಾಗಪ್ಪಯ್ಯನನ್ನು ಬಳಿಗೆ ಕರಕೊಂಡು ಬರಲು ಆಜ್ಞಾಪಿಸಿದ.
ನಖಶಿಖಾಂತ ಬೆವತಿದ್ದ ನಾಗಪ್ಪಯ್ಯನನ್ನು ಕಾರ್ಯಕಾರ ಕುಲ್ಲೇಟಿ ಮಾಚಣ್ಣ ಎಳಕೊಂಡು ಬಂದು ರಾಜನೆದುರು ನಿಲ್ಲಿಸಿದ.
ಹೀಗೇಕೆ ಮಾಡಿದೆ ನಾಗಪ್ಪಯ್ಯ, ಬೊಗಳು.
ದೊಡ್ಡವೀರರಾಜನ ಸಿಡಿಲಬ್ಬರದ ದನಿಗೆ ನಡುಗಿ ಹೋಗಿ ಉಟ್ಟಬಟ್ಟೆಯನ್ನು ಒದ್ದೆ ಮಾಡಿಕೊಂಡ ನಾಗಪ್ಪಯ್ಯ ರಾಜನ ಕಾಲಿಗೆ ದೊಪ್ಪನೆ ಬಿದ್ದ.
ನನ್ನನ್ನು ಕೊಲ್ಲಬೇಡಿ ಪ್ರಭೂ. ಕೋಟೆ ರಾಜ ನನಗೆ ಪ್ರಾಣಭೀತಿಯೊಡ್ಡಿ ಹೀಗೆ ಮಾಡಿಸಿದ. ಇದರಲ್ಲಿ ನನ್ನ ತಪ್ಪಿಲ್ಲ ಪ್ರಭೂ.
ಮುಚ್ಚು ಬಾಯಿ ಪಾಪಿ. ಅಮಲ್ದಾರನಾಗಿ ಕೊಡಗನ್ನು ಸುಲಿದೆ. ದರೋಡೆಕೋರನಾಗಿ ಕೊಡಗಿನ ಹೆಣ್ಣುಗಳ ಮಾನಭಂಗ ಮಾಡಿದೆ. ಈಗ ವಿನಾ ಕಾರಣ ನನ್ನ ಬಂಧು ಬಾಂಧವರನ್ನು ಸಜೀವ ದಹಿಸಿದೆ. ಹೇಳು, ನಾನು ನಿನಗೆ ಏನು ಅನ್ಯಾಯ ಮಾಡಿದ್ದೇನೆ.
ನಾಗಪ್ಪಯ್ಯ ತನ್ನ ಕಣ್ಣೀರಿನಿಂದ ದೊಡ್ಡವೀರರಾಜನ ಪಾದಗಳನ್ನು ತೊಳೆದು ಗೋಳಿಟ್ಟ.
ಇನ್ನೆಂದೂ ಕೊಡಗಿಗೆ ಕಾಲಿಡುವುದಿಲ್ಲ ಪ್ರಭೂ. ನನ್ನನ್ನು ಕೊಂದು ಬ್ರಹ್ಮಹತ್ಯಾ ದೋಷ ಕಟ್ಟಿಕೊಳ್ಳಬೇಡಿ.
ಅನ್ನಕೊಟ್ಟ ನಾಡಿಗೆ ಕೊಳ್ಳಿ ಇಟ್ಟ ನೀನು ಬ್ರಾಹ್ಮಣನಾ? ನಿನ್ನನ್ನು ಕೊಂದರೇನೇ ಸಜೀವ ದಹಿಸಿಹೋದ ನನ್ನ ಬಾಂಧವರ ಆತ್ಮಗಳಿಗೆ ಶಾಂತಿ ಸಿಗುವುದು.
ನಾಗಪ್ಪಯ್ಯ ರಾಜನ ಕಾಲುಗಳನ್ನು ಹಿಡಿದುಕೊಂಡು, ಬೇಡಿ ಪ್ರಭೂ. ದೇವರಾಣೆ ಇನ್ನು ಮುಂದೆ ತಿನ್ನುವ ಅನ್ನಕ್ಕೆ ಕಲ್ಲು ಹಾಕುವ ನಮಕು ಹರಾಮು ಕೆಲಸ ಮಾಡುವುದಿಲ್ಲ. ದಮ್ಮಯ್ಯ, ಇದೊಂದು ಬಾರಿ ಪ್ರಾಣದಾನ ಮಾಡಿ.
ರಾಜ ಅವನನ್ನು ಜಾಡಿಸಿ ಒದ್ದ.
ಅವನನ್ನು ಏನೂ ಮಾಡಬೇಡಿ. ಅವನ ಪಾಪದ ಕೊಡ ತಾನಾಗಿಯೇ ತುಂಬಲಿ. ಬಿಟ್ಟುಬಿಡಿ. ಎಲ್ಲಾದರೂ ಭಿಕ್ಷ ಎತ್ತಿ ಬದುಕಿಕೊಳ್ಳಲಿ.
ಪೊನ್ನಣ್ಣ ಮತ್ತು ಮಾಚಣ್ಣರಿಗೆ ಅವನನ್ನು ಅಷ್ಟು ಸುಲಭವಾಗಿ ಬಿಟ್ಟು ಬಿಡಲು ಮನಸ್ಸಾಗಲಿಲ್ಲ. ಅವನ ತಲೆಯನ್ನು ನುಣ್ಣಗೆ ಬೋಳಿಸಿ, ಮಧ್ಯದಲ್ಲೊಂದು ಜುಟ್ಟು ಬಿಟ್ಟು. ಸುತ್ತಲೂ ಅಲ್ಲಲ್ಲಿ ಸುಣ್ಣದ ಬೊಟ್ಟುಗಳನ್ನಿಟ್ಟು, ಅರ್ಧ ಮೀಸೆ ಕಿತ್ತು ತೆಗೆದು ಐವತ್ತು ಛಡಿ ಏಟು ನೀಡಿ ಇನ್ನು ಕೊಡಗಿನಲ್ಲಿ ನಿನ್ನ ಅನಿಷ್ಟ ಮುಖ ಕಂಡರೆ ಕತ್ತರಿಸಿ ನರಿ ನಾಯಿಗಳಿಗೆ ಹಾಕುತ್ತೇವೆ ಎಂದು ಮುಖಕ್ಕೆ ಕ್ಯಾಕರಿಸಿ ಉಗುಳಿ, ಪೃಷ್ಠಕ್ಕೆ ಸಾಕಷ್ಟು ಒದ್ದು ಕಳುಹಿಸಿದರು.
ನಾಗಪ್ಪಯ್ಯ ಹೇಗೋ ಕಾಲೆಳೆದುಕೊಂಡು ಹೋಗಿ ಕೋಟೆ ರಾಜನೆದುರು ನಿಂತ.
ನಿಮ್ಮ ಮಾತನ್ನು ಕೇಳಿದ್ದಕ್ಕೆ ನನಗೆ ಸಿಕ್ಕಿದ ಪ್ರತಿಫಲ ಇದು ಪ್ರಭೂ ಎಂದು ಗೋಳಾಡಿದ.
ಕೋಟೆ ರಾಜನಿಗೆ ಇನ್ನು ಅವನ ಅಗತ್ಯವಿರಲಿಲ್ಲ.
ಅಲ್ಲ ನಾಗಪ್ಪಯ್ಯ, ಅದು ನೀನು ಉಪ್ಪುಂಡು ಬೆಳೆದ ನೆಲಕ್ಕೆ ಬಗೆದ ದ್ರೋಹದ ಪ್ರತಿಫಲ.
ಕೋಟೆ ರಾಜ ನಾಗಪ್ಪಯ್ಯನನ್ನು ಸೆರೆಮನೆಗೆ ತಳ್ಳಿದ. ಅವನು ಅಲ್ಲಿ ವೃಣ ಬಾಧೆ ಯಿಂದ ದೇಹವಿಡೀ ಕೊಳೆತು ನರಳಿ ನರಳಿ ತನ್ನ ಅಪಾರ ಪಾಪ ಕೃತ್ಯಗಳನ್ನು ನೆನೆಯುತ್ತಾ ಕೊನೆಗೊಂದು ದಿನ ನರಕದ ಹಾದಿ ಹಿಡಿದ.
ಕೊಡಗಿನ ಜನ ಅವನನ್ನು ಚೆನ್ನಾಗಿ ನೆನಪಿಟ್ಟುಕೊಂಡಿದ್ದಾರೆ. ನಮುಕು ಹರಾಮು ನಾಗಪ್ಪಯ್ಯನೆಂದು.
*****