ಸಿ.ಕೆ. ಮಹೇಶ್ -‘ಧರ್ಮಾಂತರ’ದೊಂದಿಗೆ

ಸಿ.ಕೆ. ಮಹೇಶ್ -‘ಧರ್ಮಾಂತರ’ದೊಂದಿಗೆ

ಕೆಲವು ವರ್ಷಗಳ ಹಿಂದಿನ ಮಾತು. ನಾನು ಚಿತ್ರದುರ್ಗ ಜಿಲ್ಲೆಯ ಮರಿಕುಂಟೆ ಎಂಬ ಹಳ್ಳಿಗೆ ಬಸ್ಸಿನಲ್ಲಿ ಹೊರಟಿದ್ದೆ. ಲೇಖಕ ತಿಪ್ಪಣ್ಣ ಮರಿಕುಂಟೆ ಅವರು ತಮ್ಮ ಹಳ್ಳಿಯ ಜನರನ್ನುದ್ದೇಶಿಸಿ ಭಾಷಣ ಮತ್ತು ಸಂವಾದಕ್ಕೆ ಕರೆದಿದ್ದರು. ಅದು ರಾತ್ರಿ ಭಾಷಣ. ಹಳ್ಳಿಗರು ಊಟ ಮಾಡಿ ನಂತರ ಸೇರಬೇಕು. ನಾವು ಮಾತಾಡಬೇಕು, ಸಂವಾದಿಸಬೇಕು, ಪುರಾಣಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂಬ ಬಗ್ಗೆ ನಾನು ಮಾತಾಡಲು ಹೊರಟಿದ್ದೆ. ಹಿರಿಯರಾದ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳು ಅಂದಿನ ಸಮಾರಂಭಕ್ಕೆ ಬರಲಿದ್ದರು. ಬಸ್ಸಲ್ಲಿ ಜಾಗವಿಲ್ಲ. ನಿಂತೇ ಇದ್ದೆ. ಹಿರಿಯೂರು ದಾಟಿದಾಗ ‘ನಮಸ್ಕಾರ ಸಾರ್’ ಎಂಬ ಪರಿಚಿತ ದನಿ ಕೇಳಿ ತಿರುಗಿ ನೋಡಿದಾಗ, ಅಲ್ಲಿ ನಿಂತಿದ್ದವರು ಸಿ.ಕೆ. ಮಹೇಶ್. ಆಗ ದಲಿತ ಚಳವಳಿ ಮತ್ತು ಬಂಡಾಯ ಸಾಹಿತ್ಯ ಚಳವಳಿಗಳು ತೀವ್ರವಾಗಿದ್ದು ಎರಡೂ ಕಡೆ ತೊಡಗಿಸಿಕೊಂಡಿದ್ದ ಮಹೇಶ್ ಅವರನ್ನು ಕಂಡು ಸಂತೋಷವಾಯ್ತು. ಮಹೇಶ್ ಮಾತು ಆರಂಭವಾಯ್ತು. ಅದು ಉಭಯ ಕುಶಲೋಪರಿಯ ಔಪಚಾರಿಕ ಮಾತಲ್ಲ. ದೇಶದ ಸಾಮಾಜಿಕ ಸನ್ನಿವೇಶವನ್ನು ತಮ್ಮದೇ ನೋಟದ ಚಾರಿತ್ರಿಕ ಹಿನ್ನೆಲೆಯಿಂದ ವಿಶ್ಲೇಷಿಸುವ ಮಾತು. ಆಗ ತಾನೇ ದೊಡ್ಡದಾಗಿ ಕೇಳಿಬರುತ್ತಿದ್ದ ಹೆಸರು- ಕಾನ್ಸಿರಾಮ್ ಅವರ ವಿಚಾರಗಳ ಬಗ್ಗೆ ಅತ್ಯುತ್ಸಾಹದ ನಿರೂಪಣೆಯಲ್ಲಿ ತೊಡಗಿದ ಮಹೇಶ್ ಜೊತೆ ಚಳ್ಳಕೆರೆಯವರೆಗೆ ಮಾತಾಡುತ್ತಲೇ ಇದ್ದೆ. ಅಂದು ನನಗಿಂತ ಅವರೇ ಹೆಚ್ಚು ಮಾತಾಡಿದ್ದರು. ತಮ್ಮ ತಿಳುವಳಿಕೆಯನ್ನು ತೀವ್ರ ಭಾವದಿಂದ ಬಿಂಬಿಸಿದ್ದರು. ಅವರ ವಿಶ್ಲೇಷಣೆಯಲ್ಲಿ ಒಮ್ಮೊಮ್ಮೆ ಏಕಮುಖತೆ ಹೆಚ್ಚಾಯಿತೇನೋ ಎಂದು ಅನ್ನಿಸಿದರೂ ಅದೇನು ಅಪರಾಧವಲ್ಲವೆಂದು ಆತ್ಮೀಯವಾಗಿಯೇ ನಾನು ಸಂವಾದಿಸಿದ್ದೆ. ಅವರೂ ಅಷ್ಟೆ. ನನ್ನ ಬಗ್ಗೆ ಪ್ರೀತಿ ಮತ್ತು ಗೌರವದ ನೆಲೆಯಲ್ಲಿಯೇ ತಮ್ಮ ನಿಖರ ನುಡಿಗಳನ್ನು ಮಂಡಿಸಿದ್ದರು. ಬಸ್ಸಿನೊಳಗಿನ ಗದ್ದಲದಲ್ಲಿ ನಮ್ಮ ನಡುವಿನ ಮಾತುಕತೆ ನಮ್ಮಿಬ್ಬರಿಗೆ ಮಾತ್ರವೇ ಕೇಳಿಸಿರಬೇಕು. ಹೀಗಾಗಿ ಅದೊಂದು ಆಪ್ತ ಸಂವಾದವಾಗಿತ್ತು. ಈ ಸಂವಾದ ನನ್ನಲ್ಲಿ ಕೆಲವು ಪ್ರಶ್ನೆಗಳನ್ನೂ ಹುಟ್ಟು ಹಾಕಿತ್ತು. ಆದರೆ ಮಹೇಶ್ ಅವರಲ್ಲಿ ಪ್ರಶ್ನೆಗಳಿದ್ದಂತೆ ಕಾಣಲಿಲ್ಲ. ಉತ್ತರ ರೂಪವೇ ಪ್ರಧಾನವಾಗಿತ್ತು. ಅವರು ಪ್ರಶ್ನೆಗಳನ್ನಾಗಲೇ ಕೇಳಿಕೊಂಡು, ತಮ್ಮಾರಕ್ಕೆ ತಾವು ಕಂಡುಕೊಂಡ ಉತ್ತರಗಳನ್ನು ಬಿತ್ತರಿಸುತ್ತಿದ್ದರು. ಈ ಮೂಲಕ ಪ್ರಶ್ನೆಯಾದರು.

ಬಸ್ ಪ್ರಯಾಣದ ನೆನಪನ್ನು ತೆರೆದಿಡಲು ಕಾರಣವಿದೆ. ಗೆಳೆಯ ಸಿ.ಕೆ. ಮಹೇಶ್ ಅವರು ಬರೆದಿರುವ ‘ಧರ್ಮಾಂತರ’ ಕೃತಿಯು ಪ್ರಶ್ನೆ ಮತ್ತು ಉತ್ತರಗಳೆರಡಕ್ಕೂ ಮುಖಾಮುಖಿಯಾಗುತ್ತ ಮೂಡಿ ಬಂದಿದೆ. ಅಂದು ಬಸ್ಸಿನಲ್ಲಿ ಮಾತಾಡಿದ ಮಹೇಶ್, ಅದೇ ವಿಚಾರಗಳನ್ನು ಅದೆಷ್ಟು ಅಧ್ಯಯನಾತ್ಮಕವಾಗಿ ಈ ಕೃತಿಯಲ್ಲಿ ತಂದಿದ್ದಾರೆಂಬುದನ್ನು ನೋಡಿದಾಗ ಮೆಚ್ಚುಗೆಯೇ ಮಾತಾಗುತ್ತದೆ. ಅಂದು ಮೊಗ್ಗಿನೊಳಗೇ ಹಿಗ್ಗುತ್ತಿದ್ದ ಚಿಂತನೆಯು ಸಾಮಾಜಿಕ ಸಂವೇದನೆಯಾಗಿ ಸ್ಥಿತ್ಯಂತರಗೊಂಡು ಅರಳಿದ ಅರಿವಾಗಿ ಅಭಿವ್ಯಕ್ತಗೊಂಡಿದೆ. ಈ ಕಾರಣದಿಂದ ನನ್ನ ಮತ್ತು ಅವರ ಬಸ್ ಪ್ರಯಾಣದ ನೆನಪು ಸಂಗತವೆಂದು ಭಾವಿಸಿದ್ದೇನೆ. ಜೊತೆಗೆ, ಇನ್ನೂ ಪ್ರಯಾಣಿಸುತ್ತಲೇ ಇದ್ದೀವಲ್ಲ! ಅವರ ಅರಿವಿನ ಪಯಣದ ಅಂಗವಾಗಿಯೇ ಈ ಕೃತಿ ಕಟ್ಟಿಕೊಂಡಿದೆಯಲ್ಲ!

ಸಿ.ಕೆ. ಮಹೇಶ್ ಅವರು ಕೃತಿಯುದ್ದಕ್ಕೂ ವೈದಿಕ (ಹಿಂದೂ) ಧರ್ಮದ ಒಡಲಲ್ಲಿರುವ ಅಸಮಾನತೆಯನ್ನು ಎದುರಿಗಿಟ್ಟುಕೊಂಡೇ ವಿಶ್ಲೇಷಣೆಗೆ ತೊಡಗಿದ್ದಾರೆ. ಹಿಂದೂ ಧರ್ಮವನ್ನು ಅವರು ‘ವೈದಿಕ ಧರ್ಮ’ವೆಂದೇ ಗ್ರಹಿಸಿದ್ದಾರೆ ಮತ್ತು ಅದನ್ನು ಖಚಿತ ಪಡಿಸಲು ಆವರಣ ಚಿಹ್ನೆಯೊಳಗೆ ‘ಹಿಂದೂ’ ಎಂದು ಉದ್ದಕ್ಕೂ ನಮೂದಿಸಿದ್ದಾರೆ. ಸಂತಪರಂಪರೆಯು ವೈಚಾರಿಕ ಪರಂಪರೆಯದು; ಅವೈದಿಕ ಮೂಲದ್ದು. ಋಷಿಗಳ ಪರಂಪರೆಯು ವೈದಿಕತೆಯದು; ನಿಸರ್ಗ ವಿರೋಧಿಯದು’ ಎಂಬ ಮೂಲ ಗ್ರಹಿಕೆಯಿಂದ ಧರ್ಮ ಮತ್ತು ಧಾರ್ಮಿಕತೆಗಳನ್ನು ಅರ್ಥಮಾಡಿಕೊಂಡಿದ್ದಾರೆ. ಅದೇ ಗ್ರಹಿಕಾ ಮೂಲದಿಂದ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ. ‘ದಲಿತರ ಮೇಲಿನ ಧಾರ್ಮಿಕ ಸನ್ನಿಧಿಯ ಹಿಂಸೆಗಳನ್ನು, ಕೌರ್ಯಗಳನ್ನು ಅರಿಯಲು ವಿಪುಲ ಬಾಹುಳ್ಯದ ವಾಙ್ಮಯದ ಅಧ್ಯಯನದ ಅಗತ್ಯವಿಲ್ಲ. ೩೨ ಸ್ಮೃತಿಗಳ ಓದೂ ಬೇಕಿಲ್ಲ. ಮನು ಸ್ಮೃತಿಯ ಅರಿವು ಒಂದೇ ಸಾಕು’ ಎಂದು ಸಾರುವ ಮಹೇಶ್ ಸರಿಯಾಗಿಯೇ ಯೋಚಿಸಿದ್ದಾರೆ. ಈ ಯೋಚನೆಯ ಹಿಂದೆ ಕೆಲಸ ಮಾಡಿರುವ ಯಾತನೆಯನ್ನು ಅರ್ಥಮಾಡಿಕೊಂಡರೆ ಮಹೇಶ್ ಮಾತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಹುಟ್ಟಿನಿಂದ ಯಾರೂ ಕೀಳಲ್ಲ, ಯಾರೂ ಮೇಲಲ್ಲ, ವ್ಯಕ್ತಿಗತ ಬದುಕು ಚಲನೆಯದು. ಹಾಗೆಯೇ ಸಾಮಾಜಿಕ ಬದುಕೂ ಕೂಡ’ ಎಂಬ ತಾತ್ವಿಕ ತಿಳುವಳಿಕೆಯಿಂದ ಮಹೇಶ್ ಅವರ ಟೀಕೆ-ಟಿಪ್ಪಣಿಗಳು ಸಾಗುತ್ತವೆ. ಹೀಗಾಗಿ ಟೀಕೆಗಳು ಪೂರ್ವಾಗ್ರಹವೆನ್ನಿಸುವುದಿಲ್ಲ, ಟಿಪ್ಪಣಿಗಳು ವಕೀಲನವಾದವೆನ್ನಿಸುವುದಿಲ್ಲ.

‘ವೈದಿಕ (ಹಿಂದೂ) ಧರ್ಮದ ವಿಶೇಷ ಲಕ್ಷಣವೆಂದರೆ -ಅದು ದ್ವಾರ ಮತ್ತು ಗವಾಕ್ಷಿಯದು. ಇದಕ್ಕಿರುವುದು ಏಕದ್ವಾರ – ಏಕಗವಾಕ್ಷಿ. ಇಲ್ಲಿಂದ ಹೊರಗೆ ಹೋಗಲು ಮಾತ್ರ ಸಾಧ್ಯ. ಹೊರಗಿನಿಂದ ಒಳಗೆ ಬರಲು ಸಾಧ್ಯವಿಲ್ಲ. ಒಳದ್ವಾರ – ಒಳಗವಾಕ್ಷಿಯಿಂದ ಹೊರದ್ವಾರ ಹೊರ ಗವಾಕ್ಷಿಯ ಧರ್ಮವಿದು’ – ಇದು ವೈದಿಕ (ಹಿಂದೂ) ಧರ್ಮವನ್ನು ಕುರಿತಂತೆ ಮಹೇಶ್ ಅವರ ತಾತ್ವಿಕ ಗ್ರಹಿಕೆ. ಈ ತಾತ್ವಿಕ ಗ್ರಹಿಕೆಯ ಕೃತಿಯುದ್ದಕ್ಕೂ ಧರ್ಮಾಂತರದ ವಿಶ್ಲೇಷಣೆಯಲ್ಲಿ ಅಂತರ್ ವಾಹಿನಿಯಾಗಿ ಕೆಲಸ ಮಾಡಿದೆ.

ಮಹೇಶ್ ಅವರು ತೆಗೆದುಕೊಳ್ಳುವ ತಾತ್ವಿಕ ತೀರ್ಮಾನಗಳು ಚಾರಿತ್ರಿಕ ತಿಳುವಳಿಕೆಯ ಭಾಗವಾಗಿ ಬರುತ್ತವೆ. ಕೃತಿಯ ಕೇಂದ್ರ ಧರ್ಮಾಂತರ (ಮತಾಂತರ)ವಾಗಿದ್ದರೂ ಅದನ್ನು ಆವೇಶಭರಿತವಾಗಿ ನೋಡದೆ ಆಧುನಿಕ ಪೂರ್ವ ಚರಿತ್ರೆಯನ್ನು ಕಟ್ಟಿಕೊಳ್ಳುತ್ತ ಸಮಕಾಲೀನ ಸಂದರ್ಭಕ್ಕೆ ಬರುವ ವಿವೇಚನಾ ವಿಧಾನವನ್ನು ಮಹೇಶ್ ಅವರು ಅನುಸರಿಸಿದ್ದಾರೆ. ಇಸ್ಲಾಂ ಧರ್ಮ, ವೀರಶೈವ ಧರ್ಮ ಮತ್ತು ಮತಾಂತರದ ಸಂಬಂಧಗಳನ್ನು ಸಂಯಮದಿಂದ ವಿಶ್ಲೇಷಿಸುತ್ತಾರೆ. ಇಸ್ಲಾಂ ಧರ್ಮದೆಡೆಗೆ ಹಿಂದೂ ಧರ್ಮಿಯರು ಯಾಕೆ ಆಕರ್ಷಿತರಾದರೆಂಬುದನ್ನು ತಿಳಿಸುತ್ತಲೇ ಧರ್ಮ ಮತ್ತು ಇಸ್ಲಾಂಧರ್ಮಿಯ ಒಳಿತುಗಳನ್ನು ಗುರುತಿಸುವ ಮಹೇಶ್ ಇಂದು ಅದು ಧರ್ಮವಾಗದೆ ಜಾತಿ ಮಾತ್ರವಾಗಿರುವ ಸಂಕುಚಿತ ಸ್ಥಿತಿಯನ್ನು ಸರಿಯಾಗಿಯೇ ಗುರುತಿಸುತ್ತಾರೆ. ಅನುಚಿತ ವೈಭವೀಕರಣವನ್ನು ಕಟುವಾಗಿ ನಿರಾಕರಿಸುತ್ತಾರೆ. ‘ಭೂ ಮಾಲೀಕತ್ವ, ಉದ್ದಿಮೆಗಳ ಮಾಲಿಕತ್ವ ಮತ್ತು ವಾಣಿಜ್ಯೀಕರಿಸಿದ ಶಿಕ್ಷಣದ ಮಾಲೀಕತ್ವದ ಜಾತಿಯಾಗಿ ರೂಪಾಂತರಗೊಂಡಿರುವ ಶರಣ (ಲಿಂಗಾಯಿತ) ಧರ್ಮ’ ಎಂದು ಇಂದಿನ ವಾಸ್ತವವನ್ನು ವಿವರಿಸುತ್ತಾರೆ. ಹೀಗಾಗಿ ಮಹೇಶ್ ಅವರು ಕೇವಲ ಸಾಂಪ್ರದಾಯಿಕ ವೈದಿಕ ವಿರೋಧದಲ್ಲಿ ಜಡವಾಗುವುದಿಲ್ಲ. ಆನಂತರದ ಸಾಮಾಜಿಕ-ಆರ್ಥಿಕ ಬೆಳವಣಿಗೆಗಳ ವಸ್ತುನಿಷ್ಠ ಗ್ರಹಿಕೆಯಿಂದ ವೈದಿಕ ಮತ್ತು ಅವೈದಿಕ ಧರ್ಮಗಳನ್ನು ವಿಶ್ಲೇಷಿಸುತ್ತಾರೆ. ಧರ್ಮ-ಧರ್ಮಗಳ ನಡುವಿನ ‘ಘರ್ಷಣೆ’ಗಳನ್ನು ವಿವರಿಸುವಾಗ ಉದ್ವೇಗ ರಹಿತ ನಿಜಸ್ಥಿತಿಯನ್ನು ನಿರೂಪಿಸುತ್ತಾರೆ. ಸಮಚಿತ್ತದ ಮೂಲಕ ಏಕಪಕ್ಷೀಯವಾಗಬಹುದಾಗಿದ್ದ ವಕೀಲ ವೈಖರಿಯಿಂದ ಹೊರಬಂದ ವೈಚಾರಿಕರಾಗಿ ಮುಖ್ಯವಾಗುತ್ತಾರೆ.

ಜಾತಿಗೊಂದು ಮಠ ಮತ್ತು ಮತಾಂತರದ ಪ್ರಶ್ನೆಯನ್ನು ವಿಶ್ಲೇಷಿಸುವಾಗ ಚಿತ್ರದುರ್ಗದ ಮುರುಘಶ್ರೀಮಠದ ಶರಣರು (ಸ್ವಾಮಿಗಳು) ಹಿಂದುಳಿದ – ದಲಿತ ಮಠಾಧಿಪತಿಗಳನ್ನು ನಿಯೋಜಿಸಿ ಸ್ಥಾನ ಕಲ್ಪಿಸಿದ ಕ್ರಮವನ್ನು ಮಹೇಶ್ ಬೇರೊಂದು ದೃಷ್ಟಿಯಿಂದ ವಿಮರ್ಶಿಸುತ್ತಾರೆ. ‘ಮುರುಘಶ್ರೀ ಮಠದ ಕ್ರಿಯೆಗಳು, ವಿಚಾರಗಳು ವೈದಿಕ (ಹಿಂದೂ) ಧರ್ಮವನ್ನು ಆಳವಾಗಿ ಮತ್ತಷ್ಟು ಗಟ್ಟಿಗೊಳಿಸುವಂತಹವು’ ಎಂದು ತೀರ್ಮಾನಿಸುತ್ತಾರೆ. ತಮ್ಮ ತೀರ್ಮಾನಕ್ಕೆ ಸಮರ್ಥನೆ ಯಾಗಿ ‘ಜಾತಿಗೊಂದು ಮಠ’ದ ಪರಿಕಲ್ಪನೆಯನ್ನು ಪುರಾವೆಯಾಗಿ ಕೊಡುತ್ತಾರೆ. ಆನಂತರ ಇದರ ಪರಿಣಾಮದಿಂದ ಜಾತಿ ವ್ಯವಸ್ಥೆಯ ವಿರುದ್ದ ಕಾರುತ್ತಿದ್ದ ಕಿಡಿಗಳು ಆರುತ್ತಲಿವೆ. ಕೆರಳುತ್ತಿದ್ದ ಸಾತ್ವಿಕ – ತಾತ್ವಿಕ ಸಿಟ್ಟು ಸೆಡವುಗಳೂ ತಣ್ಣಗಾಗುತ್ತಲಿವೆ. ತಮ್ಮ ಜಾತಿಗಳ ಮಠಾಧಿಪತಿಗಳ ಮೂಲಕ ಕೆಳಜಾತಿಗಳು ‘ಸಮಾಧಾನ’ದ ಮತ್ತು ‘ಸಂಧಾನ’ದ ವ್ಯವಸ್ಥೆಗೆ ತಿರುಗುತ್ತಿವೆ’ – ಎಂದು ‘ಜಾತಿಗೊಂದು ಮಠ’ದ ಪರಿಣಾಮವನ್ನು ವಿಶ್ಲೇಷಿಸುತ್ತ, ಇದು ‘ಪ್ರತಿಭಟನಾರಹಿತದ ಮೌನದ ಸಮ್ಮತಿಯಾಗಿ ಪರಿವರ್ತಿತವಾದರೂ ವಿಸ್ಮಯಕರವಲ್ಲ’ ಎಂದು ಆತಂಕಿಸುತ್ತಾರೆ.

ಹೀಗೆ ಮಹೇಶ್ ಅವರು ಒಂದು ವಿಷಯವನ್ನು ತಮ್ಮದೇ ವಿಶಿಷ್ಟ ನೋಟದಿಂದ ವಿಮರ್ಶಿಸಿ ವೈಚಾರಿಕ ಪ್ರಖರತೆಯನ್ನು ಪಡೆದಿರುವುದು ಈ ಕೃತಿಯಲ್ಲಿ ಸ್ಪಷ್ಟವಾಗಿದೆ. ಅವರ ತೀರ್ಮಾನಗಳ ಸರಿ – ತಪ್ಪುಗಳನ್ನು ಕುರಿತು ಭಿನ್ನ ನೆಲೆಯಿಂದ ಚರ್ಚಿಸಲು ಸಾಧ್ಯ. ಆದರೆ ಅವರು ಅಪ್ರಾಮಾಣಿಕರಾಗಿಲ್ಲ ಎಂಬುದು ನನಗೆ ಮುಖ್ಯ. ಅವರ ಇಡೀ ಚರ್ಚೆಯು ಜಾತಿವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕ್ರಮಗಳ ವಿರುದ್ಧ ತಿರುಗುತ್ತದೆ. ಮೇಲ್ಪದರದಲ್ಲಿ ಪ್ರಗತಿಪರವಾಗಿ ಕಂಡರೂ ಅಂತಿಮವಾಗಿ ಪ್ರತಿಗಾಮಿಯಾಗುವ ನೆಲೆಗಳತ್ತ ಗಮನ ಸೆಳೆಯುತ್ತದೆ. ಧರ್ಮದೊಳಗಿನ ಚಲನಶೀಲತೆಗೂ ಧರ್ಮದಾಚೆಗಿನ ಚಲನಶೀಲತೆಗೂ ಇರುವ ಅಂತರದ ಅರಿವು ಮಹೇಶ್ ಅವರಲ್ಲಿದೆ. ಹೀಗಾಗಿ ದೇವರಿಂದ ದೂರವಿದ್ದ ಬೌದ್ಧಧರ್ಮದ ಹೊರತಾಗಿ ಉಳಿದೆಲ್ಲ ಧರ್ಮಗಳೂ ಇಲ್ಲಿ ವಿಮರ್ಶೆಗೊಳಪಡುತ್ತವೆ. ಬೌದ್ಧ ಧರ್ಮದ ವಿಷಯಗಳು ವಿಶ್ಲೇಷಣೆಯ ಹಂತದಲ್ಲಿ ನಿಲ್ಲುತ್ತವೆ. ಮಹೇಶ್ ಅವರ ವೈಚಾರಿಕ ನಿಲುವುಗಳಿಗೆ ಇದು ಸಹಜವಾದದ್ದು. ಕೆಲವು ದೇವಾಲಯಗಳು ಹಿಂದೆ ಬೌದ್ಧ ವಿಹಾರಗಳಾಗಿದ್ದವೆಂಬ ಅಂಶವನ್ನು ಇವರು ಪ್ರಸ್ತಾಪಿಸಿದ್ದಾರೆ. ಆದರೆ ಅದಕ್ಕೆ ಪೂರಕ ಸಮರ್ಥನೆ ಸಾಕಾಗುವುದಿಲ್ಲ. ಹಾಗೆ ನೋಡಿದರೆ ಇಂತಹ ಅಂಶಗಳ ಪ್ರಸ್ತಾಪ ಮತ್ತು ಚರ್ಚೆಗಳು ಅಪ್ರಸ್ತುತವಾಗಬೇಕಾದ ಹಂತಕ್ಕೆ ಕೋಮುವಾದವನ್ನು ಬೆಳೆಸಲಾಗಿದೆ. ಒಂದು ವೇಳೆ ಬೌದ್ಧವಿಹಾರ, ಮಸೀದಿ, ದೇವಾಲಯ, ಜಿನಾಲಯ ಮುಂತಾದವುಗಳ ಧ್ವಂಸ ಮತ್ತು ಪುನರ್ನಿರ್‍ಮಾಣದ ಚರ್ಚೆ ಅನಿವಾರ್ಯವಾದಾಗಲೂ ಪರ ವಿರೋಧವನ್ನು ಮೀರಿದ ಮನಸ್ಥಿತಿ ಮುಖ್ಯವಾಗಬೇಕಾಗಿದೆ. ಅದೇನೇ ಇರಲಿ, ಮಹೇಶ್ ಎಲ್ಲೂ ಉದ್ವೇಗಕ್ಕೆ ಒಳಗಾಗಿ ವಿಚಾರಕ್ಕೆ ಅಪಚಾರ ಮಾಡುವುದಿಲ್ಲ.

ಮುಂದೆ, ಡಾ. ಎಸ್.ಎಲ್. ಭೈರಪ್ಪ ಮತ್ತು ಪೇಜಾವರ ಶ್ರೀಗಳ ವಿಚಾರ ಮತ್ತು ಕ್ರಿಯೆಗಳಿಗೆ ತಮ್ಮ ಪ್ರಖರ- ಪ್ರಾಮಾಣಿಕ ವಿಚಾರಗಳಿಂದ ಎದುರಾಗುತ್ತಾರೆ. ಸುಖ ಭೋಗಗಳಿಗಾಗಿ ಮತಾಂತರವಾಗುತ್ತಾರೆಂಬ ವಾದಕ್ಕೆ ಮಹೇಶ್ ಉತ್ತರಿಸುವ ರೀತಿಯಲ್ಲೇ ಅವರ ಪ್ರಖರ ವಿಚಾರವಿದೆ. ಅವರು ಹೇಳುತ್ತಾರೆ : ‘ಒಂದು ಮತ ಬಿಟ್ಟು ಮತ್ತೊಂದು ಮತ ಸೇರುವುದು ಸಾಮಾನ್ಯದ ವಿಷಯವಲ್ಲ, ಸರಳವಾದ ಕಾರ್ಯವಲ್ಲ, ಮೋಜಿನ ಆಟವಲ್ಲ, ಹುಡುಗಾಟಿಕೆಯು ಮೊದಲೇ ಅಲ್ಲ, ತೊಟ್ಟ ಅಂಗಿಯ ಕಳಚಿ ತಗಲಾಕಿದ ಅಂಗಿಯ ತೊಡುವಷ್ಟು ಸುಲಭವಲ್ಲ. ಹೀಗಿರುವಾಗ, ದುಡ್ಡಿಗೆ, ಸುಖಕ್ಕೆ, ಭೋಗಕ್ಕೆ, ಅಧಿಕಾರಕ್ಕೆ ಸಾಮಾನ್ಯರು ಮತಾಂತರ ಆಗುತ್ತಾರೆಂಬುದು ಮರುಳುತನದ ಬೋಳೆಯ ಹೇಳಿಕೆಯಷ್ಟೇ. ಬಾಯಿ ಚಪಲತೆಯ ಆರೋಪ. ಅಸ್ಥಿಮಿತ ಮನಸ್ಥಿತಿಯ ಗೊಣಗು. ಏನೋ ಕಳೆದುಹೋಗುತ್ತಿದೆ ಎಂಬ ಅವ್ಯಕ್ತ ದಿಗಿಲಿನ ಆಲಾಪ’ – ಮಹೇಶ್ ಅವರ ಅಂತರಾಳದ ಮಾತುಗಳಿವು. ಜಾತಿ ವ್ಯವಸ್ಥೆಯಲ್ಲಿ ಒಣಗಿಹೋದ ನೆಲದ ನೇರನುಡಿಗಳು.

ಮಹೇಶ್ ಅವರ ಪ್ರಾಮಾಣಿಕ ನೋಟ, ಪ್ರಖರ ನುಡಿ, ವೈಚಾರಿಕ ವಿಶ್ಲೇಷಣೆಯ ನೆಲೆಗಳನ್ನು ಮೆಚ್ಚುವ ನಾನು, ಚಾರಿತ್ರಿಕ ಸಂದರ್ಭದ ಅನಿವಾರ್ಯತೆಗಳನ್ನು ಇನ್ನಷ್ಟು ಆಳಕ್ಕಿಳಿದು ಅರಿಯಬಹುದಿತ್ತು ಎಂದು ಭಾವಿಸಿದ್ದುಂಟು. ಈ ಕೃತಿಯ ಮಟ್ಟಿಗೆ ಅದು ಅನಿವಾರ್ಯವಲ್ಲವೆಂದು ಮಹೇಶ್ ಅವರಿಗೆ ಅನ್ನಿಸಿರಬಹುದು. ಆದರೆ ಗಾಂಧೀಜಿ ‘ಭ್ರಮೆ’ಯನ್ನು ಪ್ರಸ್ತಾಪಿಸುವಾಗ, ಜನಿವಾರ-ಶಿವದಾರದ ಪ್ರಸ್ತಾಪ ಬಂದಾಗ ಚಾರಿತ್ರಿಕ ಅನಿವಾರ್ಯತೆಗಳ ಅರಿವು ಅಗತ್ಯವಿತ್ತು. ನಾನು ವಚನ ಚಳವಳಿಯ ಇತಿಮಿತಿಗಳನ್ನು ಸಾಕಷ್ಟು ಸಲ ಹೇಳುತ್ತ ಬಂದಿದ್ದೇನೆ. ಎಲ್ಲವೂ ವಚನ ಚಳವಳಿಯಲ್ಲೇ ಇತ್ತೆಂದು, ಮಾರ್ಕ್ಸ್, ಲೋಹಿಯಾ, ಗಾಂಧಿ, ಅಂಬೇಡ್ಕರ್ ಎಲ್ಲರ ವಿಚಾರಗಳು ಅಲ್ಲೇ ಇದ್ದವೆಂದು ವೈಭವೀಕರಿಸುವುದು ಸರಿಯಲ್ಲವೆಂದು ಪ್ರತಿಪಾದಿಸಿದ್ದೇನೆ. ಏಕದೇವೋಪಾಸನೆಯ ಸಮಕಾಲೀನ ಅಪ್ರಸ್ತುತತೆಯನ್ನು ಮನಗಂಡಿದ್ದೇನೆ. ಆದರೆ ಜನಿವಾರದ ಬದಲು ಶಿವದಾರ ಬಂದದ್ದನ್ನು ಸರಳೀಕರಿಸಲಾಗದು. ದೇವಾಲಯ ಪ್ರವೇಶವನ್ನು ನಿರಾಕರಿಸುತ್ತಿದ್ದ ಅಮಾನವೀಯ (ಆ) ಧಾರ್ಮಿಕ ನಿಲುವಿಗೆ ಉತ್ತರವಾಗಿ ದೇಹಕ್ಕೆ ದೇವಾಲಯವನ್ನು ಸ್ಥಳಾಂತರಿಸಿದ ಸಿದ್ದಾಂತದ ಕ್ರಿಯಾತ್ಮಕ ಫಲವೇ ಶಿವದಾರ. ತನ್ನ ದೇಹದಲ್ಲೇ ದೇವಾಲಯವನ್ನೂ ಶಿವದಾರದಲ್ಲೇ ದೇವರನ್ನು ಕಾಣುವ ಮೂಲಕ ದೇವಾಲಯ ಸಂಸ್ಕೃತಿಗೆ ವಿರುದ್ಧವಾಗಿ ಶಿವಸಂಸ್ಕೃತಿಯನ್ನು ಸ್ಥಾಪಿಸಲಾಯಿತು. ಇದು ಅಂದಿನ ಬಹುದೊಡ್ಡ ಬದಲಾವಣೆ. ಆದರೆ ಈ ‘ಶಿವ ಸಂಸ್ಕೃತಿ’ಯು ಸಂಕುಚಿತವಾದದ್ದು ಈಗ ಇತಿಹಾಸ. ಈ ಸಂಕುಚಿತತೆ ಕುರಿತು ಮಹೇಶ್ ಮಾಡುವ ವಿಶ್ಲೇಷಣೆ ಸರಿಯಾಗಿಯೇ ಇದೆ. ಆದರೆ ದೇಹಕ್ಕೆ ದೇವಾಲಯವನ್ನು ಸ್ಥಳಾಂತರಿಸಿದ ಸೈದ್ಧಾಂತಿಕ ಪಲ್ಲಟ ಚಾರಿತ್ರಿಕ ಮಹತ್ವದ ವಿಷಯವೆಂಬುದನ್ನು ಮರೆಯಬಾರದು. ಗಾಂಧೀಜಿಯವರ ವಿಷಯವೂ ಅಷ್ಟೆ. ಗಾಂಧೀಜಿಯವರ ಸಾಮಾಜಿಕ ಚಿಂತನೆಗಳ ಇತಿಮಿತಿಗಳೇನೇ ಇರಲಿ, ಅವರು ಭ್ರಮೆಗಳಲ್ಲಿ ಬದುಕಿದವರಲ್ಲ. ಗಾಂಧೀಜಿಯವರು ಹಿಂದೂ ಧರ್ಮದ ಒಳಗಿನಿಂದ ತಮ್ಮ ಸಾಮಾಜಿಕ ಚಿಂತನೆ ನಡೆಸಿದರೆ, ಅಂಬೇಡ್ಕರ್‌ ಅವರು ಹಿಂದೂ ಧರ್ಮದ ಹೊರಗಿನಿಂದ ಚಿಂತನೆ ನಡೆಸಿದರು. ಸಮಾಜ ಬದಲಾವಣೆಯ ದೃಷ್ಟಿಯಿಂದ ಡಾ. ಅಂಬೇಡ್ಕರ್ ಚಿಂತನೆಗಳೇ ಚಲನಶೀಲವೆನ್ನುವುದು ನಿಜವಾದರೂ ಹಿಂದೂ ಮೂಲಭೂತವಾದಿಗಳ ಕುರುಡು ಕ್ರಿಯೆಗಳ ನಡುವೆ ಗಾಂಧೀಜಿಯ ಹಿಂದೂ ಧಾರ್ಮಿಕ ಚಿಂತನೆಗೆ ವಿಶೇಷ ಸ್ಥಾನವಿದೆಯೆಂಬುದನ್ನು ಮರೆಯಲಾಗದು. ಈ ಎಲ್ಲ ವಿಚಾರಗಳನ್ನು ಕುರಿತು ವಿಸ್ತೃತ ಚರ್ಚೆಗಳನ್ನು ನಡೆಸಬಹುದು. ಅದೇನೇ ಇರಲಿ, ಅಪರೂಪಕ್ಕೊಮ್ಮೆ ನುಸುಳಿರುವ, ಮತ್ತಷ್ಟು ಚರ್ಚೆಯನ್ನು ಬಯಸುವ, ಮಹೇಶ್ ಅವರ ಕೆಲವು ನಿರ್ಣಯಾತ್ಮಕ ನುಡಿಗಳು ಈ ಕೃತಿಯ ಮಹತ್ವವನ್ನು ಗೌಣವಾಗಿಸುವುದಿಲ್ಲ.

ಮಹೇಶ್ ಅವರು ಕಡೆಗೆ ತಲುಪುವ ನಿಲುವು ತುಂಬಾ ಮುಖ್ಯವಾದದ್ದು. ಅವರು ಪುಸ್ತಕದ ಕೊನೆಯ ಭಾಗದಲ್ಲಿ ಹೀಗೆ ಹೇಳುತ್ತಾರೆ. ಯಾವುದೇ ಧರ್ಮವು ನೆಲೆಯಾಗುವುದು ಮನುಷ್ಯತ್ವದ ಮೇಲೆಯೇ. ಅದೇ ಬರಿದಾದರೆ ಆ ಧರ್ಮಕ್ಕೆ ಉಳಿಗಾಲವಿಲ್ಲ. ಮೃಗೀಯ ಮನಸ್ಥಿತಿಯು ಎಷ್ಟು ಬೇಗ ಕರಗುವುದೋ ಅಷ್ಟು ಬೇಗ ವ್ಯಕ್ತಿಗೆ, ಧರ್ಮಕ್ಕೆ ಒಳ್ಳೆಯದು. ಕನಿಷ್ಠ ತನ್ನ ಧರ್ಮಿಯರನ್ನಾದರೂ ಪ್ರೀತಿಸುವ, ಗೌರವಿಸುವ, ಆದರಿಸುವ, ಮೌಲ್ಯಗಳಿಂದ ತುಂಬಿದ ಮನುಷ್ಯರಿಂದ ರೂಪಿತವಾದರೆ ಒಂದು ಧರ್ಮ ಬದುಕಿರಬಹುದು. ಇಲ್ಲದಿದ್ದರೆ ಅದರ ಅಸ್ತಂಗತವು ಆಂತರ್ಯದ ಭಾಗವಾಗಿರುತ್ತದೆ. ಈ ನೈಸರ್ಗಿಕ ಕ್ರಿಯೆಗೆ ಯಾವ ಶಕ್ತಿಯೂ ಎದುರು ನಿಲ್ಲುವುದಿಲ್ಲ.’

ಮಹೇಶ್ ಅವರ ಈ ಮಾತುಗಳು ಎಲ್ಲ ಮಠಾಧೀಶರಿಗೂ ಮನವರಿಕೆಯಾಗಬೇಕು; ಧರ್ಮದ ಹೆಸರಿನಲ್ಲಿ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತ ಮತಾಂತರವನ್ನು ಮಾತ್ರ ವಿರೋಧಿಸುವ ಹುಸಿ ಸಂಸ್ಕೃತಿ ವಕ್ತಾರರಿಗೆ ಅರ್ಥವಾಗಬೇಕು.

ಒಟ್ಟಿನಲ್ಲಿ, ಮಹೇಶ್ ಅವರು ಅಧ್ಯಯನ ಶೀಲವಾದ ಕೃತಿ ಕೊಟ್ಟಿದ್ದಾರೆ. ಚಾರಿತ್ರಿಕ ವಿಶ್ಲೇಷಣೆಯ ಹಿನ್ನೆಲೆಯನ್ನು ಒದಗಿಸುತ್ತ ಸಮಕಾಲೀನ ಚಿಂತನೆಯನ್ನು ನಿಷ್ಠೆಯಿಂದ ನಡೆಸಿದ್ದಾರೆ. ಮೊದಲೇ ಹೇಳಿದಂತೆ ಪ್ರಶ್ನೆ ಮತ್ತು ಉತ್ತರವನ್ನು ಒಟ್ಟಿಗೆ ಎದುರಿಸಿದ್ದಾರೆ; ಒಳಗೊಂಡಿದ್ದಾರೆ; ಒಂದು ಒಳ್ಳೆಯ ಕೃತಿಯನ್ನು ಕೊಟ್ಟಿದ್ದಾರೆ. ಓದೋಣ; ಒಳಗೆ ಚರ್ಚಿಸಿಕೊಳ್ಳೋಣ; ವಿಚಾರವನ್ನು ಬೆಳೆಸೋಣ.
*****
(ಏಪ್ರಿಲ್ ೨೦೦೯)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೮
Next post ಪುಷ್ಪ ವೃಷ್ಟಿ

ಸಣ್ಣ ಕತೆ

 • ರಾಧೆಯ ಸ್ವಗತ

  ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…