ಕವನ ಬರೆಯಲು ಬಹುಕಾಲ ಕುಳಿತೆ,
ಮೂಡು ಬರಲಿಲ್ಲ ಕೈ ಮುಂದೆ ಸಾಗಲಿಲ್ಲ.
ದಿನಗಳು, ವಾರಗಳು, ತಿಂಗಳುಗಳು
ಕಳೆದರೂ ಕಾವ್ಯ ಸೃಷ್ಟಿಯಾಗಲಿಲ್ಲ.
ಕಾವ್ಯ ಕನ್ನಿಕೆಯ ಒಲಿಸಿಕೊಳ್ಳಲು
ಕವಿತಾ ಸುಧಾರಸವ ಉಣ ಬಡಿಸಲು
ಕಾದಿರುವೆ ನಾನು, ಸಂಸ್ಕೃತಿಯ ಪರಿಚಾರಕ!
ಹಸಿದಿರುವ. – ಓದುಗ, ಕಲೆಯ ಆರಾಧಕ.
ಏಕೆ ಮುನಿದಿರುವೆ ತಾಯೇ ಇಳಿದು ಬಾ,
ಬಿಳಿಯ ಕಾಗದ ಕಟ್ಟು, ಕರಿಯ ಶಾಯಿ,
ನುರಿತ ಲೇಖನಿ ಕಾದಿದೆ, ನೋಡು ಬಾ ತಾಯಿ.
ವೃತ್ತಪತ್ರಿಕೆಯಲ್ಲಿ ಬಂತು – ಜಾಹೀರಾತು
“ಕಾವ್ಯ ರಚನಾ ಸ್ಪರ್ಧೆ”ಯ ಬಹುಮಾನ ಕುರಿತು!
ವಿದ್ಯುತ್ ಹರಿಯಿತು, ಯಂತ್ರ ವೇಗದಿ ಚಲಿಸಿತು
ಮೂಡು ಮೂಡಿತು, ಮೂಡಿಗೆ ಕೊಡು ಬೆಳೆಯಿತು
ಅದುಮಿಟ್ಟ ಭಾವನೆ ಬುಗ್ಗೆಯಾಗಿ ಉಕ್ಕಿತು,
ಕಾವ್ಯಧಾರೆ ಭೋರ್ಗರೆದು ಹರಿಯಿತು
ಗರಿ ಕೆದರಿತು ಮನ – ನವಿಲಾಗಿ ಕುಣಿಯಿತು
ಶರವೇಗದಲ್ಲಿ ಆಯಿತು ಕಾವ್ಯ ಸೃಷ್ಟಿ!
ಬಂದ ಬಹುಮಾನ, ತಂದ ಸನ್ಮಾನ ಸುರಿಸಿತು ಪುಷ್ಪವೃಷ್ಟಿ.
*****
೨೧-೧೨-೧೯೯೩