ವಾಗ್ದೇವಿ – ೩೫

ವಾಗ್ದೇವಿ – ೩೫

ಸೂರ್ಯನಾರಾಯಣನು ದಿನಾಗಲೂ ವಿದ್ಯಾಭ್ಯಾಸದಲ್ಲಿ ಪೂರ್ಣ ಮನಸ್ಸಿಟ್ಟು ಸುಜ್ವನೆನಿಸಿಕೊಳ್ಳುವವನಾದನು. ಅನನ ಮುಖದ ವರ್ಚಸ್ಸು ಬಾಲಾರ್ಕನಂತೆ ಶೋಭಿಸುವದಾಯಿತು. ದ್ವಾದಶ ವರ್ಷಗಳು ಮಾತ್ರ ತುಂಬಿರುವುದಾದರೂ ನೋಡುವಿಕೆಗೆ ಹದಿನಾರು ವರ್ಷ ಪ್ರಾಯವಂತನಂತೆ ಕಾಣುವನು. ಯತಿಯು ಕೊಟ್ಟ ಭಾಷೆಯ ನೆನಪು ಹುಟ್ಟಿಸಿ ಅವನಿಂದ ಅದನ್ನು ಶೀಘ್ರ ನೆರವೇರಿಸಿಕೊಳ್ಳುವದಕ್ಕೆ ಪ್ರಶಸ್ತವಾದ ಸಮಯವು ಬಂದಿ ರುವುದೆಂದು ವಾಗ್ದೇವಿಗೆ ತೋರಿತು. ತನ್ನ ಮಗನಿಗೆ ಆಶ್ರಮವಾಗುತ್ತಲೇ ಶತ್ರುಗಳು ಎಡೆಬಿಡದೆ ನಾನಾ ಉಪದ್ರ ಕೊಡದಿರಲಾರರೆಂದು ವಾಗ್ದೇವಿಗೆ ಚನ್ನಾಗಿ ಗೊತ್ತಿತ್ತು. ಆದರೆ ಅದು ತನ್ನ ಕೋರಿಕೆಯು ಈಡೇರುವದಕ್ಕೆ ಒಂದು ಅಭ್ಯಂತರವಾಗಿರಕೂಡದೆಂದು ಅವಳು ನಿರ್ಧಾರಮಾಡಿರುತ್ತಿದ್ದಳು. ಮುಖ್ಯದೈವತವಾದ ಹರಿಯಾಗಲೀ ಹರನಾಗಲೀ ಒಲಿದರೆ ಕ್ಷುದ್ರ ದೇವತೆ ಗಳನ್ನು ಗಣ್ಯ ಮಾಡುವ ಅಗತ್ಯವದೆಯೇ. ಪುರದಲ್ಲಿ ಅತ್ಯಧಿಕ ಅಧಿಕಾರ ವುಳ್ಳ ಕೊತ್ವಾಲನೂ ಪೌಜದಾರಿ ಕಾರಭಾರಿಯೂ ವಾಗ್ದೇವಿಯ ಮೇಲೆ ಸಂಪೂರ್ಣ ಮಮತೆಯಿಂದ ಅವಳ ನಿರಂತರ ಶುಭಚಿಂತಕರಾಗಿ ವಜ್ರಾವರ ಣದಂತೆ ಸಹಾಯಕರಾಗಿರುವ ಸುಸಮಯದಲ್ಲಿ ವೇದವ್ಯಾಸ ಉಪಾಧ್ಯ ನಂತಿರ್ಪ ಬಣಗು ಪ್ರಾಣಿಗಳಿಗೆ ಅವಳು ಹೆದರುವದುಂಟೇ? ಯತಿಯ ಮನಸ್ಸುಹ್ಯಾಗದೆಂಬದೊಂದೇ ಯೋಚನೆಯು ಅವಳಿಗೆ ಕಾಡುತ್ತಿತ್ತು.

ಪಟ್ಟದ ದೇವರ ಮುಂದೆ ಪ್ರಮಾಣ ಮಾಡಿಕೊಟ್ಟ ಭಾಷೆಯು ನೆರವೇರುವ ಮೊದಲೇ ಯತಿಯು ಗತನಾದರೆ ನೀರಿನಲ್ಲಿ ಹೋಮ ಇಟ್ಟ ಹಾಗೆ ಆಗುವದೇ ಸರಿ. ಈಗಲೇ ಆ ಪ್ರಸ್ತಾಪವನ್ನು ಯತಿಯ ಕೂಡೆ ನಡೆಸಿ ವಾಂಛಿತವನ್ನು ಪಡೆಯದಿದ್ದರೆ ಮುಂದಿನ ಆಶೆಯು ನಿರರ್ಥಕವಾಗುವ ದೆಂಬ ಅನುಮಾನವು ಅವಳ ಮನಸ್ಸಿನಲ್ಲಿ ಗಲಿಬಿಲಿ ಮಾಡತೊಡಗಿತು. ಯತಿಯ ಪ್ರಾಣೋತ್ಠ್ರಮಣ ಕಾಲದ ವರೇಗೆ ತಾಳ್ಮೆಯಿಂದಿರುವದು ಲೇಸಲ್ಲ. ಒಂದು ವೇಳೆ ಅಂಥಾ ಸಂದುಕಟ್ಟಿನಲ್ಲಿ ತನ್ನ ಮಗನಿಗೆ ಆಶ್ರಮಕೊಟ್ಟರೂ ವೈರಿಗಳು ಆ ಮಾತೇ ಸುಳ್ಳೆಂದು ವಾದಿಸಿ ತನ್ನನ್ನೂ ಮಗನನ್ನೂ ಮೂಲೆಗೆ ಸೇರಿಸಿ ಬಿಟ್ಟರೆ ಜನ್ಮವೇ ವ್ಯರ್ಧವಾಗುವದು. ಶೀಘ್ರ ಆಶ್ರಮಕೊಡಿಸಿಯೇ ಸಿದ್ಧವೆಂದು ವಾಗ್ದೇವಿಯು ದೃಢಮನಸ್ಸಿನಿಂದ ಸುಲಭವಾದ ಉಪಾಯ ನಡೆಯಲಿಕ್ಕೆ ಅನುಕೊಲ ನೀರಿಕ್ಷಣೆಯಲ್ಲಿರುತಿದ್ದಳು. ಒಂದು ದಿನ ಭಿಕ್ಸೆಯಾದ ಕೊಂಚ ಹೊತ್ತಿನಲ್ಲಿ ಚಂಚಲನೇತ್ರರು ಫಕ್ಕನೆ ಮೂರ್ಛೆಹೊಂದಿದರು. ವಿಳಂಬ ಮಾಡದೆ ವಾಗ್ದೇವಿಯು ಘನವೈದ್ಯರನ್ನು ಕರತರಿಸಿ ಬೇಕಾದ ಚಿಕಿತ್ಸೆಯನ್ನು ಮಾಡಿದುದರಿಂದ ಯತಿಯ ಜೀವವು ಉಳಿಯಿತು. ವೈದ್ಯರ ಅನುಜ್ಞೆಗಳಂತೆಯೇ ವಾಗ್ದೇವಿಯು ಚಂಚಲನೇತ್ರರನ್ನು ಒಂದೆರಡು ವಾರ ಗಳ ಪರಿಯಂತರ ಪಧ್ಯದಲ್ಲಿಟ್ಟು ಬಹು ಜಾಗ್ರತೆ ತಕ್ಕೊಂಡಳು.

ಗಂಡಾಂತರದ ಅವಧಿಯು ದಾಟಿತೆಂದು ವೈದ್ಯರು ಖಚಿತಪಟ್ಟ ತರು ವಾಯ ಯತಿಯು ನಿತ್ಯಕರ್ಮಗಳನ್ನಾಗಲೀ ಬೇರೆ ಯಾವ ಕಾರ್ಯಗಳನ್ನೂ ಗಲೀ ಮುಂಚಿನಂತೆ ನಡಿಸಿಲಿಕ್ಕೆ ಯಾರೊಬ್ಬರೂ ತಡೆಯಲಿಲ್ಲ. ಪ್ರಾಯಶಃ ಚಂಚಲನೇತ್ರರ ಆರೋಗ್ಯಸ್ಥಿತಿಯು ಭಯರಹಿತವೆಂದು. ತೋರಿದರೂ ಪ್ರಾಯಸಲುವ ದೆಸೆಯಿಂದ ಮೃತ್ಯು ಹೆಡತಲೆಯಲ್ಲಿರುವದಾಗಿ ಭಾವಿಸ ಬೇಕಾಯಿತು. ಅನ್ಯರ ಪರಿಮುಖ ಈ ಪ್ರಸ್ತಾಸ ಯತಿಯ ಕೂಡೆ ಮಾಡು ವದು ಪರಿಷ್ಕಾರವಲ್ಲ. ಬಹುಶಃ ವೆಂಕಟಪತಿ ಆಚಾರ್ಯನಿಂದ ಮಾತಾಡಿಸಿ ನೋಡಬಹುದೆಂದರೆ ಅವನು ಅನಾರೋಗ್ಯಸ್ಥಿತಿಯಲ್ಲಿರುವ ನೆವದಿಂದ ಮಠಕ್ಕೆ ಬರುವದೇ ಹೆಚ್ಚು ಅಪರೂಪವಾಗಿಯದೆ. ತಾನೇ ಮಾತಾಡಿನೋಡುವದೇ ಅತಿ ಉತ್ತಮವೆಂದು ವಾಗ್ದೇವಿಯು ನಿಶ್ಚಯ ಮಾಡಿ ಯಥೋಚಿತ ಸಮಯ ವನ್ನು ಹಾರಯಿಸಿ “ಪರಾಕೆ, ನನ್ನದೊಂದು ಅರಿಕೆ ಅದೆ. ನಡಿಸುವದಾದರೆ ಹೇಳುತಿದ್ದೆ” ಎಂದು ವಾಗ್ದೇವಿಯು ವಿನಯಪೂರ್ವಕವಾಗಿ ಬಿನ್ನವಿಸಿದಳು. “ಏನು? ಹೇಳು? ಎಂದು ಚಂಚಲನೇತ್ರರ ಅಪ್ಪಣೆಯಾಯಿತು.

ವಾಗ್ದೇವಿ–“ಸೂರ್ಯನಾರಾಯಣನು ವಿದ್ಯೆಯಲ್ಲಿಯೂ ಬುದ್ಧಿಯಲ್ಲಿ ಯೂ ನಿರಾಕ್ಷೇಪಕರ ಹುಡುಗನೆಂದು ಕಾಣುತ್ತದೆ. ಶ್ರೀಪಾದಂಗಳ ಅಭಿ ಪ್ರಾಯ ಹ್ಯಾಗದೊ ತಿಳಿಯದು.

ಚಂಚಲ—“ನಮ್ಮಿಬ್ಬರ ಅಭಿಪ್ರಾಯವು ಒಂದೇ! ನಾವು ವಿಮತ ವಾಗುವದು ಹ್ಯಾಗೆ?”

ವಾಗ್ದೇವಿ–“ಹಾಗಾದರೆ ಶ್ರೀಪಾದಂಗಳವರು ನನ್ನ ಮೇಲೆ ಕೃಪೆ ಇಟ್ಟು ಮಠಕ್ಕೆ ಕರಸಿಕೊಂಡ ದಿನ ಕೊಟ್ಟ ಭಾಷೆಯನ್ನು ನೆನಸಿಗೆ ತರಲೇ?”

ಚಂಚಲ–“ ಆ ಭಾಷೆ ಯಾವುದು?

ವಾಗ್ದೇವಿ–“ಅಷ್ಟು ಬೇಗ ಅದು ಮರವೆಗೆ ಬಂದದ್ದು ಬಹು ಚೋದ್ಯವೇ. ಅಗಲಿ, ಹೇಳಿ ಬಿಡುತ್ತೇನೆ. ನನ್ನಲ್ಲಿ ಹುಟ್ಟಿದ ಮಗನಿಗೆ ಆಶ್ರಮ ಕೊಡುವದಾಗಿ ಫಟ್ಟದ ದೇವರ ಮುಂದೆ ಪ್ರಮಾಣ ಮಾಡಿಕೊಟ್ಟ ಭಾಷೆ. ಈಗಲಾದರೂ ನೆನಫಿಗೆ ಬಂತೇ?

ಚಂಚಲ–“ಹೌದು. ಆ ಭಾಷೆ ಸಲಿಸುವ ಸಂದರ್ಭ ಈಗ ಒದಗಿ ರುವದಧೇನು?”

ವಾಗ್ದೇವಿ — “ಒದಗಿಲ್ಲವಾದರೆ ಒದಗುವ ಕಾಲವು ಯಾವದೆಂದು ಅಪ್ಪಣೆಯಾದರೆ ನಿಶ್ಚಿಂತಳಾಗಿರಬಹುದು.?

ಚಂಚಲ–“ನಮ್ಮ ದೇಹ ಪ್ರಕೃತಿಯು ಬಲಹೀನವಾದ್ದಲ್ಲಾ. ಈಗ ನಮ್ಮ ದೇಹದಲ್ಲಿ ಏನೂ ಆಯಾಸವಿಲ್ಲ. ಅಷ್ಟು ಬೇಗ ಶಿಷ್ಯನನ್ನು ಮಾಡಿ ಕೊಳ್ಳುವದ್ಯಾಕೆ? ಪ್ರಾಣಸಂದೇಹದ ಚಿನ್ಹೆ ತೋರಿದಾಗ ಅನ್ಯನೊಬ್ಬಗೆ ಆಶ್ರಮ ನಾವು ಕೊಡುವ ಹಾಗುಂಟೇನು? ನೀನು ಇಷ್ಟು ಅವಸರ ಮಾಡು ವುದು ನಮಗೆ ಸರಿ ತೋರುವದಿಲ್ಲ”

ವಾಗ್ದೇವಿ – “ಕ್ಷಣಭಂಗುರವಾದ ನರದೇಹಸ್ಥಿತಿಯನ್ನು ನೆಚ್ಚ ಬಹುದೇ? ತಮಗೆ ದೇವರು ದೀರ್ಫಾಯುಷ್ಯಕೊಡಲೆಂದು ನನ್ನ ಪ್ರಾರ್ಥನೆ. ಆದರೆ ‘ಶುಭಸ್ಯಶೀಘ್ರಂ, ಅಶುಭಸ್ಯ ಕಾಲಹರಣಂ’ ಎಂಬ ವಚನವಿದೆ. ಹೆಚ್ಚಿಗೆ ಅರಿಕೆಮಾಡಲಿಕ್ಕೆ ಶಕ್ತಳಲ್ಲ. ಸರ್ವಜ್ಞಗಾದ ತಮಗೆ ಅನ್ಯರು ಆಲೋಚನೆ ಹೇಳಬೇಕೆ? ನಾನನಕಾ ಒಬ್ಬಳು ಹೆಣ್ಣು ಹೆಂಗಸು.?

ಚಂಚಲ — “ಕ್ರಮೇಣ ನೋಡೋಣ. ಹುಡುಗನಿಗೂ ಕೊಂಚ ಪ್ರಾಯ ತುಂಬಲಿ. ಈಗ ಅನಪತ್ಯವೇನು?”

ವಾಗ್ದೇವಿ–“ಕೆಟ್ಟದೆಣಿಸಿದ ಮೇಲೆ ಒಳ್ಳೇ ದೆಣಿಸಬೇಕೆಂಬದೊಂದು ಮಾತು ರೂಢಿಯಲ್ಲಿದೆ ಪರಾಕೆ! ಒಬ್ಬ ಸನ್ಯಾಸಿಯು ಫಕ್ಕನೆ ಗತನಾದರೆ ಅವನಿಗೋಸ್ಕರ ದ್ವಂದ್ವಮಠದಧಿಪತಿಗಳು ಆಶ್ರಮವನ್ನು ಕೊಡಬೇಕಷ್ಟೇ! ಗತವಾದ ಸನ್ಯಾಸಿಯು ಆರಿಸಿಟ್ಟವನಿಗೇನೇ ಅಂಥಾ ಸಂಧಿಯಲ್ಲಿ ಆಶ್ರಮ ವಾದೀತೆಂದು ನಿರೀಕ್ಷಿಸಬಹುದೇ? ಯಾರೊಬ್ಬರ ಕೇಡುಬಯಸದೆ ನಾನು ಹೇಳುವ ಈ ಮಾತು ಶ್ರೀಪಾದಂಗಳ ಮನಸ್ಸಿಗೆ ಅಯುಕ್ತವೆಂತ ತೋಚ ದೆಂದು ನನ್ನ ಅಭಿಪ್ರಾಯ.”

ಚಂಚಲ– “ಹಾಗಾದರೆ ನೀನು ಕೇವಲ ಹಿತಚಿಂತಕಳೇ ಸರಿ. ಏನೋ ಸ್ವಲ್ಪ ಅನಾರೋಗ್ಯಸ್ಟಿತಿ ಒಂದು ದಿನ ಕಂಡುಬಿಟ್ಟು ನೀನು ವಿಳಂಬವಿಲ್ಲದೆ ನಿನ್ನ ಮಗನಿಗೆ ಆಶ್ರಮಕೊಡಬೇಕೆಂದು ಹಟಹಿಡಿಯುವದು ನೋಡು ವಾಗ ನಮ್ಮ ಪ್ರಾಣ ಎಂದು ಹೋದೀತೆಂಬ ನಿರೀಕ್ಷೆಯು ನಿನ್ನಲ್ಲಿ ಕುಣಿ ದಾಡುತ್ತದೆಂದು ನಾವು ಭಾವಿಸಬೇಕಾಗುತ್ತದೆ. ಅವರವರ ಪ್ರಯೋಜನ ಅವರವರು ನೋಡುವದು ಸೋಜಿಗವಲ್ಲ.”

ವಾಗ್ದೇವಿ–“ಸ್ವಾಮೀ! ಇಂಧಾ ನಂಜಿನ ಮತ್ತು ರಾಗಛಾಯದ ಮಾತುಗಳ್ಯಾಕೆ? ಕೊಟ್ಟಮಾತು ನಡಿಸಲಿಕ್ಕೆ ಆಗುವದಿಲ್ಲವೆಂದು ಖಂಡ ತುಂಡವಾಗಿ ಆಡಿಬಿಟ್ಟರೆ ನಾನೇನು ಮಾಡುವ ಹಾಗುಂಟು.”

ಚಂಚಲ–“ನೀನು ನಮ್ಮ ಮಠಕ್ಕೆ ಬಂದಂದಿನಿಂದ ಇದುವರೆಗೂ ಏನೊಂದು ಕಲಹಮಾಡದೆ ಈ ದಿನವೇ ಸಣ್ಣದೊಂದು ಜಗಳದ ಬೀಜವನ್ನು ಬಿತ್ತಲಿಕ್ಕೆ ನೋಡುವದಾಗಿ ನಮ್ಮ ಮನಸ್ಸಿಗೆ ಕಾಣುತ್ತೆ. ಹೀಗೆ ಮಾಡಲಿಕ್ಕೆ ನೀನು ಆಸೆಪಡುವದು ನಿನ್ನ ಸ್ವಬುದ್ಧಿಯಿಂದಲೋ ಬೇರೆಯವರ ದುರಾ ಲೋಚನೆಯಿಂದಲೋ ಎಂಬುದು ತಿಳಿಯದೆ ನಾವು ಮನಸ್ಸಿನಲ್ಲಿ ಕೊಂಚ ಸಂದೇಹಪಡಬೇಕಾಗುತ್ತದೆ. ಅದಂತಿರಲಿ. ಕೃತಾಕೃತ ಪಾಪಗಳಿಗೆ ಅವರ ವರೇ ಹೊಣೆಯಾಗುವದು ಸಹಜ. ನಾನೀಗ ಈ ಪ್ರಸಂಗದಲ್ಲಿ ಬೇರೇನೂ ಹೇಳತಕ್ಕದ್ದಿಲ್ಲ.”

ವಾಗ್ದೇವಿ–“ಪರಾಕೆ! ಈಗ ತಾವು ಹೇಳತಕ್ಕದ್ದೇನಿಲ್ಲವೆಂಬ ಅನು ಮಾನ ಚಂದಾಗಿ ಇದ್ದಕಾರಣದಿಂದಲೇ ಈ ಪ್ರಸ್ತಾಸ ನಾನೆತ್ತಿದೆ! ನನ್ನ ನವ ಯೌವನವನ್ನು ತಮ್ಮ ವ್ಯಾಮೋಹಕ್ಕೆ ಬಲಿ ಅರ್ಪಿಸಿಸುವುದಕ್ಕೆ ಮಾತ್ರ ತಾವು ನನ್ನನ್ನು ಕರೆಸಿಕೊಂಡಿರೆಂದು ನನಗೆ ಪೂರ್ಣವಾಗಿ ಗೊತ್ತಿದ್ದೇ ತಮ್ಮಿಂದ ಪ್ರಮಾಣ ಪೂರ್ವಕವಾದ ವರವನ್ನು ಅಪೇಕ್ಷಿಸಿದೆ ಮತ್ತು ಆ ವರವು ಸಿಕ್ಕುವಪರಿಯಂತರ ತಮ್ಮ ಅಪೇಕ್ಷೆಯನ್ನು ಸಲ್ಲಿಸುವುದಕ್ಕೆ ಕಟ್ಟು ನಿಟ್ಟಾಗಿ ನಿರಾಕರಿಸಿದೆ. ಆದರೂ ನಾನು ಸೋಥೋದೆನಷ್ಟೆ! ಪರವಾ ಇಲ್ಲ. ತಾವು ನಿತ್ಯ ಪೂಜಿಸುವ ಪಟ್ಟದ ದೇವರ ಮೇಲೆ ತಮಗೆಷ್ಟು ಭಕ್ತಿಯಿದೆ ಎಂಬುದು ಮಿತಿಕಟ್ಟಲಿಕ್ಕೆ ತಮ್ಮ ಈಗಿನ ಮಾತಿನಿಂದ ಅನುಕೂಲವಿದೆ. ಅತಿಶಯೋಕ್ತಿಯಿಂದ ಏನು ಪುರುಷಾರ್ಥ ಸ್ವಾಮೀ! ತಮ್ಮ ವಾಗ್ದಾನದ ಮೌಲ್ಯ ತಿಳಿದ ಹಾಗಾಯಿತು. ಸಾಕು ತಮಗೂ ನನಗೂ ಪ್ರಾಯ ವೃದ್ಧಿ ಯಾಗುತ್ತಾ ಒಬ್ಬರ ಸಾಮೀಪ್ಯ ಇನ್ನೊಬ್ಬರಿಗೆ ಅಗತ್ಯವಿಲ್ಲದ ಸಮಯವು ಬರಲಿಕ್ಕಾಯಿತು. ನಮ್ಮ ನಮ್ಮ ಹಾದಿ ನಾವು ನಾನು ನೋಡುವುದಕ್ಕೆ ಇದೇ ಸಮಯವೆನ್ನಬಹುದು. ಇಂದಿನವರೆಗೆ ತನ್ಮು ಮಠದ ದ್ರವ್ಯದಿಂದ ಮೃಷ್ಟಾನ್ನಭೋಜನವೂ ಸಂಪತ್ತೂ ದನಲತ್ತೂ ತಮ್ಮ ವಿತ್ತಾಪಹಾರವೂ ನನಗೆ ನಿರಾಯಾಸವಾಗಿ ದೊರಕಿತು. ‘ನಾಯಿ ಹಸಿದಿತ್ತು ಅಂಬಲಿ ಹಳ ಸಿತ್ತು’ ಎಂಬ ಗಾದೆಯಂತೆ ನಮ್ಮಿಬ್ಬರ ಅವಸ್ಥೆಯಾಗಿತ್ತು. ನನ್ನ ರೂಪ ಲಾವಣ್ಯಕ್ಕೂ ಪ್ರಾಯಕ್ಕೂ ತಕ್ಕವನಾದ ವರನು ನನಗೆ ದೊರಕದೆ ಯಾರ ಬಯಕೆಗೂ ಒಳಪಡುವ ಅವಶ್ಯಕತೆಯುಳ್ಳ ಪ್ರಾಣಿಯಾಗಿದ್ದೆ. ಸನ್ಯಾಸದ ಪಾಶಬದ್ಧರಾಗಿ ಮದುವೆ ಆಗಕೂಡದೆ ಇಂದ್ರಿಯದಮನದ ಶಕ್ತಿಶೂನ್ಯರಾಗಿ ತಾವು ಇರುತಿದ್ದಿರಿ. ಹೀಗಾಗಿ ನಮ್ಮಿಬ್ಬರಿಗೆ ಸಂಘಟನ ಸುಲಭವಾಯಿತು. ತಾವು ಕೊಟ್ಟ ಭಾಷೆಯ ಮೇಲೆ ನಾನು ವಿಶ್ವಾಸವಿಟ್ಟದ್ದೊಂದು ತಪ್ಪು. ಅದರ ಫಲ ಉಣ್ಣತಕ್ಕವಳು ನಾನೇ! ಇನ್ನು ಅಪ್ಪಣೆಯಾಗಲಿ; ಹೋಗಿ ಬರುತ್ತೇನೆ.?

ಚಂಚಲ–“ಯಾವಲ್ಲಿಗೆ ಹೋಗುತ್ತೀ? ಏನು ಹುಚ್ಚು ಹರಕೋಥಿ! ನಿನಗೆ ದೈವ ಸೋಕಿತೇನು? ವಿವೇಕದಿಂದ ಇದು ದರೆಗೆ ಇದ್ದವಳು ಈಗ ಒಮ್ಮೆಯೇ ಕರ್ಕಶಳಾದೆಯಾ? ನಿನಗೆ ಕೊಟ್ಟ ಭಾಷೆ ಮರತವವರು ಯಾರು? ಭಲ ಯಾರಿಗೂ ಕ್ಷೇಮಕರವಲ್ಲ. ಅವಸರವ್ಯಾಕೆ? ನೀನು ಕಠಿಣ ಮಾತು ಗಳಾಡಿದಿ ಎಂದು ನಾವು ಆಗ್ರಹ ಪಡುವುದಿಲ್ಲ. ನಿನ್ನನ್ನು ಹಳಸಿ ಹೋದ ಅಂಬಲಿಗೂ ನಮ್ಮನ್ನು ನಾಯಿಗೂ ಹೋಲಿಸಿದರೂ ಚಿಂತಿಲ್ಲ. ಸಿಟ್ಟಿನ ಸಮ ಯದಲ್ಲಿ ಬಾಯಿಯಿಂದ ಯದ್ವಾತದ್ವಾ ಮಾತುಗಳು ಹೊರಡುವುದು ಲೋಕ ದಲ್ಲಿ ರೂಢಿಯಿದೆ.

ವಾಗ್ದೇವಿ– “ನಾನು ಕೊಟ್ಟ ಉಪಮೆಯು ಸರಿಯಾದ್ದೆ. ಮಾತು ಬಲ್ಲವಗೆ ಜಗಳವಿಲ್ಲ, ಊಟ ಬಲ್ಲವಗೆ ರೋಗವಿಲ್ಲವೆಂಬ ಸಾಮತಿಗೆ ಸರಿಯಾಗಿ ತಮ್ಮ ವಹಿವಾಟು ನಡಿಯುತ್ತದೆ. ನಾನನಕಾ ಅನಾಥೆ. ದೇವರೇ ನನ್ನನ್ನು ರಕ್ಷಣೆ ಮಾಡಬೇಕು. ನಾವು ಪರಸ್ಪರ ಮುಖಾವಲೋಕನ ಮಾಡಿಕೊಳ್ಳುವ ಕಡೆ ಕಾಲವು ಇದೇ. ಇನ್ನೊಮ್ಮೆ ಅಪ್ಪಣೆ ಬೇಡುತ್ತೇನೆ. ಬಡವಳ ಮೇಲೆ ಪ್ರೀತಿ ಇರಲಿ.”

ಹೀಗೆಂದು ಸಟ್ಟನೆ ವಾಗ್ದೇವಿಯು ಬೆನ್ನು ಹಾಕಿ ಹೊರಡುವ ವೇಳೆ ಯಲ್ಲಿ ಚಂಚಲನೇತ್ರರು ಅವಳ ಮುಖವನ್ನು ನೋಡಿದರೆ ಅವಳು ಸಿಟ್ಟು ತಡೆಯಲಾರದೆ ಗಡಗಡನೆ ನಡುಗುತ್ತಾ ಕರಾಳವದನಳಾಗಿರುವದನ್ನು ಕಂಡು ನಿಜವಾಗಿ ಹೆದರಿ ಅಧೋಮುಖರಾದರು. ವಾಗ್ದೇವಿಯು ಹಿಂದೆ ನೋಡದೆ ಅತಿ ವೇಗದಿಂದ ಬಿಡಾರಕ್ಕೆ ಬಂದು ಗಂಡನನ್ನು ಕರೆದು ಏನೋ ಅಂತರಂಗ ಸಂಭಾಷಣೆಯ ಮೂಲಕ ಅನುಜ್ಞೆಗಳನ್ನು ಕೊಟ್ಟು ನಿತ್ಯ ಉಪ ಯೋಗಕ್ಕೆ ಬೇಕಾದ ಅಡಿಗೆ ಪಾತ್ರಾದಿ ಸಾಹಿತ್ಯಗಳನ್ನು ಹೊರೆ ಕಟ್ಟಸಿ ತತ್ಕಾಲ ವೆಚ್ಚಕ್ಕೆ ಬೇಕಾಗುವಷ್ಟು ಹಣಕಾಸು ಚಿನ್ನಚಿಗುರು ಇತ್ಯಾದಿ ಕಟ್ಟಿಕೊಂಡು ಶೃಂಗಾರಿಯ ಸಮೇತ ಬಂಡಿ ಏರಿ ನಡೆದು ಬಿಟ್ಟಳು. ಮುಂಚಿತವಾಗಿಯೇ ಮತ್ತೊಂದು ಬಿಡಾರ ಹುಡುಕಲಿಕ್ಕೆ ಕಳುಹಿಸಲ್ಪಟ್ಟ ವಿಶ್ವಾಸಿ ಸೇವಕನು ನೇಮರಾಜನ ಭಂಡಸಾಲೆಯ ಸಮಾಪ ಅವನಿಗಿರುವ ಅನೇಕ ಕಟ್ಟೋಣಗಳಲ್ಲಿ ಒಂದನ್ನು ಬಾಡಿಗೆ ನಿಶ್ಚಯಿಸಿಟ್ಟಿರುತ್ತಿದ್ದನು. ಅದರಲ್ಲಿ ಅವಳು ನಿರಾತಂಕವಾಗಿ ಪ್ರವೇಶಿಸಿ ಸೂರ್ಯನಾರಾಯನನ್ನು ಕೂಡಾ ಶಾಲೆಯಿಂದ ಅಲ್ಲಿಗೆ ಬರುವ ಹಾಗೆ ಹೇಳಿಕಳುಹಿಸಿದಳು. ಮಾತೆ ಯಾಜ್ಞೆಯಂತೆ ಪುತ್ರನು ಪ್ರವರ್ತಿಸಿದನು. ತಾಯಿಯು ಬೇರೆ ಬಿಡಾರ ಮಾಡಿಕೊಂಡಿರುವ ಕಾರಣವೇನೆಂದು ತಿಳಿಯದೆ ಅವನು ಕೊಂಚ ಬೆರಗಾ ದನು. ಆದರೆ ಆ ವಿಷಯದಲ್ಲಿ ಅವ್ವನ ಕೂಡೆ ಪ್ರಸ್ತಾಪಿಸಲಿಕೆ ಅಂಜಿ ಮೌನ ವಾದನು.

ಅಬಾಚಾರ್ಯನು ಮಠದಲ್ಲಿಯೇ ಇದ್ದು ಅಲ್ಲಿಯೇ ಭೋಜನ ತೀರಿಸಿ ಕೊಂಡು ದಿನಕೊಮ್ಮೆಯಾಗಲೀ ಹೆಚ್ಚು ಸಲವಾಗಲೀ ಪತ್ನಿಯ ಬಿಡಾರಕ್ಕೆ ಬಂದು ಲವಕಾಲ ಅಂತರಂಗ ಮಾತಾಡಿ ಬಿಟ್ಟು ಹಿಂತಿರುಗಿ ಹೋಗುವನು. ಶೃಂಗಾರಿಗೂ ಅಕ್ಕನು ಮಠವನ್ಶು ಬಿಟ್ಟು ಪ್ರತ್ಯೇಕ ವಾಸಮಾಡಿಕೊಂಡಿರುವ ಗುಟ್ಟು ತಿಳಿಯಬೇಕೆಂಬ ಕುತೂಹಲವಿದ್ದರೂ ಅವಳ ಕೂಡೆ ಪ್ರಸ್ತಾಸ ಮಾಡಲಿಕ್ಕೆ ಧೈರ್ಯವಿರಲಿಲ್ಲ. ಮಠದಿಂದ ಹೊರಟು ಬೇರೆ ಠಾವಿನಲ್ಲಿ ಉಳಕೊಂಡ ಸಂಬಂಧ ಜೀವನ ನಡಿಸಿಕೊಳ್ಳಲಿಕ್ಕೆ ಸಾಲ ಕಡ ಮಾಡುವ ಅವಶ್ಯತೆಯಿಲ್ಲದಿದ್ದರೂ ಕೈಯಲಿ ಕಾಸೊಂದೂ ಇಲ್ಲದವಳಂತೆ ಅವಳು ದಿನ ದಿನದ ಸಾಹಿತ್ಯಗಳನ್ನು ನೇಮರಾಜನ ಅಂಗಡಿಯಿಂದ ಬೇಕಾದ ಹಾಗೆ ಕಡವಾಗಿ ತರಿಸಿಕೊಂಡು ನಿಶ್ಚಿಂತಳಂತೆ ತೋರಿಸಿಕೊಂಡು ಕಾಲಹರಣ ಮಾಡುವವಳಾದಳು. ಒಂದೆರಡು ದಿನಗಳ ತರುವಾಯ ಆ ಬಿಡಾರವು ಬಹು ಒಳ್ಳೆಯದೆಂಬ ಹಾಗೆ ಶೃಂಗಾರಿಯ ಮನಸಿಗೆ ತೋಚಿ ಅಲ್ಲಿಯೇ ಉಳಕೊಳ್ಳುವದು ಬಹು ಸೌಖ್ಯವೆಂತ ಅವಳು ತಿಳಕೊಂಡಳು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲ್ಲುಮೂರ್ತಿ
Next post ಶಿವನಾಮ

ಸಣ್ಣ ಕತೆ

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

 • ಜೋತಿಷ್ಯ

  ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ಸಾವು

  ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys