ಇಳಾ – ೧೧

ಇಳಾ – ೧೧

ಚಿತ್ರ: ರೂಬೆನ್ ಲಗಾಡಾನ್

ಸ್ಫೂರ್ತಿ ಊರಿಂದ ಬಂದ ಮೇಲೆ ಮತ್ತೆ ಊರಿಗೆ ಹೋಗಬಾರದೆಂದು ನಿರ್ಧರಿಸಿದ್ದಳು. ತನ್ನದಿನ್ನು ಓದು ಮುಗಿದಿಲ್ಲ-ಆಗಲೇ ಅಪ್ಪ ಮದುವೆ ಮಾಡುವ ಪ್ರಯತ್ನ ನಡೆಸಿದ್ದು ಅವಳಿಗೆ ತುಂಬಾ ನೋವಾಗಿತ್ತು. ಯಾಕಾಗಿ ಅಪ್ಪ ಇಷ್ಟು ಅವಸರಿಸಿದ್ದು ಎಂದೇ ತಿಳಿಯಲಿಲ್ಲ. ಓದಿನಲ್ಲಿ ತೊಡಗಿಸಿಕೊಳ್ಳಬೇಕು ಆ ವಿಚಾರಗಳಿಗೆಲ್ಲ ತಲೆ ಕೆಡಿಸಿಕೊಳ್ಳಬಾರದೆಂದು ಮನಸ್ಸಿನಿಂದ ಗಂಡು ಬಂದಿದ್ದು. ತನ್ನನ್ನು ನೋಡಿದ್ದು. ಎಲ್ಲವನ್ನು ಕಿತ್ತುಹಾಕಲು ಪ್ರಯತ್ನಿಸಿದಳು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ವಾರದ ನಂತರ ಮಗಳನ್ನು ನೋಡಲು ಬಂದ ಸ್ಫೂರ್ತಿಯ ಅಪ್ಪ ‘ಮಗಾ, ಗಂಡಿನ ಕಡೆಯವರು ನಿನ್ನ ಒಪ್ಕೊಂಡಿದಾರೆ. ಈ ವರ್ಷವೇ ಮದ್ವೆ ಮಾಡಿ ಕೊಡಿ ಅಂದಿದ್ದಾರೆ. ಹುಡುಗನ ಮನೆಯವರು ಬಾರಿ ಅನುಕೂಲಸ್ಥರು, ಅಂತ ಸಂಬಂಧ ನಮ್ಗೆ ಸಿಕ್ತಾ ಇರೋದೇ ಅದೃಷ್ಟ ಕಣವ್ವ, ವರದಕ್ಷಿಣೆನೂ ಕಮ್ಮಿನೇ ಕೇಳ್ತ ಇದಾರೆ. ಮಾತುಕತೆಗೆ ಮುಂದಿನ ವಾರ ಬರ್ತರಂತೆ, ಅವತ್ತೆ ಎಂಗೇಜುಮೆಂಟು ಮುಗ್ಸಿಬಿಡಿ ಅಂತಿದಾರೆ. ರೂಮ್ ಖಾಲಿ ಮಾಡ್ಕೊಂಡು ಬಂದು ಬಿಡವ್ವ, ಇನ್ಯಾಕೆ ಕಾಲೇಜು…’ ಅಂದಾಗ ಬೆಚ್ಚಿಬಿದ್ದಳು. ಅಪಾಯ ಹತ್ತಿರದಲ್ಲಿಯೇ ಬಂದು ವಕ್ಕರಿಸಿತ್ತು.

‘ಏನಪ್ಪ ನೀನು, ಮೊದ್ಲು ನಾನೊಂದು ಡಿಗ್ರಿ ಮಾಡಬಾರದ, ಆ ಮೇಲೆ ಮದ್ವೆ ಆಗೋದು ಇದ್ದೇ ಇದೆ, ಪ್ರಪಂಚದಲ್ಲಿ ಇದೊಂದೇ ಸಂಬಂಧವಾ ಇರೋದು. ಮುಂದಕ್ಕೆ ನಂಗೆ ಗಂಡೇ ಸಿಗಲ್ವಾ’ ನಯವಾಗಿಯೇ ಹೇಳಿದಳು.

‘ಹಂಗಲ್ಲ ಕಣವ್ವ ಅವರಾಗಿಯೇ ಬಂದಿದ್ದಾರೆ. ಹುಡುಗ ನಿನ್ನ ಮೇಲೆ ಶಾನೆ ಆಸೆ ಇಟ್ಕೊಂಡಿದಾನೆ, ನಿನ್ನ ಅವರೂರಿಗೆ ಹೋಗಿದ್ದಾಗಲೇ ನೋಡಿ ಮೆಚ್ಚಿಕೊಂಡಿದ್ದನಂತೆ, ಅದೇನು ಬೇಸಾಯದ ಬಗ್ಗೆ ಬೋ ಚೆಂದಾಗಿ ಮಾತಾಡ್ತ ಇದ್ದೀಯಂತೆ. ಅವನಿಗೂ ಬೇಸಾಯದ ಮೇಲೆ ಆಸೆ ಅಂತೆ, ತುಂಬಾ ಓದ್ಕೊಂಡಿದಾನಂತೆ. ನಿನ್ನ ಮಾಡ್ಕೊಬೇಕು ಅಂತ ಬಂದಿದಾನೆ. ನಾವು ಬೇಡಾ ಅನ್ನಕ್ಕಾಗುತ್ತಾ, ಹೆಂಗೂ ನಿಂಗೂ ಬೇಸಾಯ ಅದೂ ಇದು ಅಂತ ಆಸಕ್ತಿ, ನಿನ್ನ ಥರವೇ ಅವನಿಗೂ ಆಸಕ್ತಿ ಇದೆ, ಹೇಳಿ ಮಾಡಿಸಿದ ಜೋಡಿ ಆಗಾಕಿಲ್ವಾ’ ಅಂದಾಗ ಶಾಕ್ ಆಗಿತ್ತು.

ಅರೆ ನನ್ನನ್ನು ಯಾವಾಗ ಇವನು ನೋಡಿದ್ದು, ಯಾವ ಹಳ್ಳಿಲಿ ನನ್ನ ನೋಡಿದ. ಅಯ್ಯೋ ನನ್ನ ಮಾತುಗಳೇ, ನನ್ನ ವಿಚಾರಗಳೇ ನನಗೆ ಕುತ್ತು ತಂದಿತಲ್ಲಪ್ಪ. ನಾನು ಯಾರನ್ನೊ ಬಯಸಿದರೆ, ನನ್ನನ್ನು ಯಾರೋ ಬಯಸಿದರಲ್ಲಪ್ಪ! ಹೇಗೋ ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಆಲೋಚಿಸಿದಳು.

‘ಅಪ್ಪ, ಅವನು ನನ್ನ ಮೆಚ್ಚಿರಬಹುದು. ಆದರೆ ನನಗೆ ಅವನು ಇಷ್ಟವಾಗಬೇಕಲ್ಲ, ನಾನು ಮೊದಲು ಡಿಗ್ರಿ ಮಾಡಬೇಕು ಆಮೇಲೆ ಮದ್ವೆ ಗಿದ್ವೆ ಎಲ್ಲಾ’ ನಿರ್ಧಾರಿತ ದನಿಯಲ್ಲಿ ಹೇಳಿದಾಗ.

‘ಅಲ್ಲಾ ಕಣವ್ವ, ಮದ್ವೆ ಆದಮೇಲೂ ಓದಬಹುದು ಅಲ್ವಾ. ಅವರ ಮನೆಯಿಂದಲೇ ಕಾಲೇಜಿಗೆ ಹೋಗುವಂತೆ, ಅವರೂರಿಗೆ ಹತ್ರದಲ್ಲೇ ಕಾಲೇಜು ಇದೆಯಂತೆ, ದಿನಾ ನಿನ್ನ ಗಂಡನೇ ಬಿಟ್ಟು ಬರ್ತಾನೆ.’

‘ಥೂ ಹೋಗಪ್ಪ, ಮದ್ವೇನೇ ಆಗಿಲ್ಲ. ಆಗ್ಲೆ ಗಂಡ ಅಂತಿಯಲ್ಲ. ವರದಕ್ಷಿಣೆ ಬೇರೆ ಕೇಳ್ತ ಇದಾರೆ ಅಂತಿಯಾ. ನಾನು ವರದಕ್ಷಿಣೆ ತಗೋಳೋ ಗಂಡನ್ನ ಮದ್ವೆ ಆಗೋದಿಲ್ಲ. ನನ್ನ ನನ್ನ ಪಾಡಿಗೆ ಬಿಟ್ಟು ನೀನು ಊರಿಗೆ ಹೋಗು, ನಂಗೆ ನಾಳೆ ಟೆಸ್ಟಿದೆ ಓದ್ಕೊಬೇಕು’ ಸಿಡುಕುತ್ತ ಹೇಳಿದಳು.

ಮಗಳಿಗೆ ಏನೂ ಹೇಳಲಾರದೆ, ಅವಳನ್ನು ನೋಯಿಸಲು ಇಷ್ಟಪಡದೆ ‘ನಿಧಾನವಾಗಿ ಯೋಚ್ನೆ ಮಾಡು ಮಗಾ. ಒಳ್ಳೆ ಸಂಬಂಧ, ಹುಡುಗ ತುಂಬಾ ಒಳ್ಳೆಯವನು, ಅನುಕೂಲಸ್ಥರು, ಒಂದೇ ಸಲಕ್ಕೆ ಬೇಡಾ ಅನ್ನಬೇಡ’ ಅಂತ ಹೇಳಿ ಹೊರಟರು. ನಿರಾಶೆ ಕಪ್ಪಾದ ಮೋಡದಂತೆ ಅವರ ಮೋರೆ ತುಂಬ ಕವಿದಿತ್ತು. ಗಂಡಿನ ಕಡೆಯವರಿಗೆ ಏನು ಉತ್ತರ ಹೇಳವುದು, ತಮ್ಮ ಮಗಳು ಒಪ್ತ ಇಲ್ಲಾ ಅಂದರೆ ಏನು ಅಂದುಕೊಳ್ಳುತ್ತಾರೆ, ತಾವಾಗಿಯೇ ಹೆಣ್ಣು ಕೇಳಿಕೊಂಡು ಬಂದರೆ ಎಷ್ಟು ಅಹಂಕಾರ ತೋರಿಸುತ್ತಾರೆ ಎಂತ ಅಂದುಕೊಳ್ಳುವುದಿಲ್ಲವೇ. ಈ ಹುಡುಗಿನಾ ಓದೋಕೆ ಕಾಲೇಜಿಗೆ ಕಳಿಸಿದ್ದೆ ತಪ್ಪಾಯ್ತು. ವರದಕ್ಷಿಣೆ ಕೊಡಲ್ಲ ಅಂದ್ರೆ ಆಗುತ್ತಾ. ಕೊಡದೆ ಇದ್ರೆ ಯಾರು ಮದ್ವೆ ಮಾಡ್ಕೊತಾರೆ, ಮಗಳಿಗೆ ಬುದ್ದೀ ಕಡಿಮೆ ಈ ವಿಚಾರದಲ್ಲಿ ಅನ್ನೊ ನಿರ್ಧಾರಕ್ಕೆ ಬಂದರು.

ಅಪ್ಪ ಸುಮ್ನೆ ಎದ್ದು ಹೆಚ್ಚು ತಕರಾರು ಮಾಡದೆ ಹೂರಟಾಗ ಎದೆಯ ಮೇಲಿನ ಭಾರ ಇಳಿದಂತಾಗಿ ನಿರುಮ್ಮಳಾದಳು. ಸಧ್ಯ ಗಂಡಾಂತರ ತಪ್ಪಿತೆಂಬ ಉತ್ಸಾಹ ಮೂಡಿತು. ಆದರೆ ಗಂಡಾಂತರ ಬೇರೊಂದು ರೂಪದಲ್ಲಿ ಅವಳ ಮುಂದೆ ನಿಂತಿತು. ಸಂಜೆ ಕಾಲೇಜು ಮುಗಿಸಿ ಹೊರ ಬರುವಷ್ಟರಲ್ಲಿ ನಿವಾಸ ಕಾಯ್ತ ನಿಂತಿದ್ದ. ಅವನನ್ನು ನೋಡಿ ಅವಳಿಗೆಷ್ಟು, ಸಡಗರವಾಯಿತೆಂದರೆ ನವಿಲು ಮಳೆಯನ್ನು ಕಂಡು ಕುಣಿದಾಡುವಂತೆ ಅವಳಿಗೂ ಕುಣಿದಾಡಬೇಕೆನಿಸಿತು. ಕುಣಿತದ ನಡೆಯಲ್ಲಿಯೇ ಅವನಿದ್ದಲ್ಲಿಗೆ ಓಡಿ ಬಂದಳು.

ನಿವಾಸನನ್ನು ಇಲ್ಲಿ ಅವಳು ನಿರೀಕ್ಷಿಸಿರಲೇ ಇಲ್ಲ. ‘ಸ್ಫೂರ್ತಿ ನಿನ್ನೊಂದಿಗೆ ಮಾತಾಡಬೇಕು ಅಂತ ಯಾರು ಬಂದಿದಾರೆ ನೋಡು’ ಎಂದ ಕೂಡಲೇ ನಿವಾಸನ ಪಕ್ಕದಲ್ಲಿ ನಸುನಗುತ್ತ ನಿಂತಾತನನ್ನು ಕಂಡು ಶಕ್ತಿಯೆಲ್ಲ ತೂರಿ ಹೋದಂತಾಗಿ ನಿಂತಲ್ಲಿಯೇ ನಿಂತುಬಿಟ್ಟಳು.

‘ಅರೆ ಸ್ಫೂರ್ತಿ, ಇವರ್ಯಾರು ಅಂತ ಗೊತ್ತಾಗ್ತ ಇಲ್ವಾ, ಅಥವಾ ಸಂಕೋಚನಾ? ನಮ್ಮಹೆಣ್ಣುಮಕ್ಕಳೇ ಹೀಗೆ. ಎಷ್ಟೇ ಬೋಲ್ಡಾಗಿದ್ದರೂ ಮದ್ವೆ ವಿಚಾರ ಬಂದಕೂಡಲೇ ನಾಚಿಕೊಳ್ತಾರೆ, ಒಬ್ನೆ ನಿನ್ನ ನೋಡೋಕೆ ಸುದರ್ಶನ ಕೂಡ ಸಂಕೋಚ ಪಟ್ಕೊಂಡಿದ್ದರು. ಅದಕ್ಕೆ ನಾನೇ ಕರ್ಕೊಂಡು ಬಂದೆ. ನೀವಿಬ್ರೂ ಅದೇನು ಮಾತನಾಡಬೇಕೋ ಮಾತಾಡಿಕೊಳ್ಳಿ. ನಾನು ಮಧ್ಯೆ ಇರೊದಿಲ್ಲ, ನಂಗೂ ಸಿಟಿ ಒಳಗೆ ಕೆಲಸ ಇದೆ, ನಾನು ಬರ್‍ಲ’ ಅಂತ ರೇಗಿಸಿ ಹಾರಿಹೋಗುವಂತೆ ಹೊರಟೇ ಬಿಟ್ಟಾಗ ಅವನತ್ತಲೇ ನೋಡುತ್ತ ನಿಂತುಬಿಟ್ಟಳು.

‘ಹೋಗೋಣ’ ಸುದರ್ಶನ ಮೆಲುವಾಗಿ ನುಡಿದಾಗ, ತಲೆತಗ್ಗಸಿ ತಲೆಯಾಡಿಸಿದಳು. ಅವನ ಜೊತೆ ಹೋಗದೆ ವಿಧಿಯೇ ಇರಲಿಲ್ಲ. ಸೋತ ಹೆಜ್ಜೆಗಳನ್ನು ಬಲವಂತವಾಗಿ ಕೀಳುತ್ತ ಅವನ ಹಿಂದೆ ನಡೆದಳು. ‘ಎಲ್ಲಿಗೆ ಹೋಗೋಣ ಹೊಟೇಲಿಗೆ ಹೋಗೋಣವೇ’ ಅಂತ ಕೇಳಿದ. ಅವಳಿಂದ ಉತ್ತರವೇ ಬರದಿದ್ದಾಗ ‘ಹೊಟೇಲಿಗೆ ಹೋಗೋಣವೇ’ ಎಂದನು. ಬೇಡ ಎನ್ನುವಂತೆ ತಲೆಯಾಡಿಸಿದಳು.

‘ಸರಿ ಪಾರ್ಕಿಗೆ ಹೋಗೋಣ ಬನ್ನಿ. ನಾವಿಬ್ಬರೂ ಮನಸ್ಸು ಬಿಚ್ಚಿ ಮಾತಾಡೋಕೆ ಸರಿಯಾದ ಜಾಗ’ ಎಂದವನೇ ಮುಂದಾಗಿ ಅವನೇ ಹೆಜ್ಜೆ ಹಾಕಿದ. ಕಾಲೇಜಿನಿಂದ ಪಾರ್ಕು ಹತ್ತೇ ಹೆಜ್ಜೆಯ ದೂರದಲ್ಲಿತ್ತು. ಪಾರ್ಕು ಹೊಕ್ಕು ಒಂದು ಮರದ ಕೆಳಗೆ ಕುಳಿತನು ಸುದರ್ಶನ. ಅವನಿಂದ ದೂರವೇ ಕುಳಿತುಕೊಂಡಳು ಸ್ಫೂರ್ತಿ, ಕತ್ತೆತ್ತುವ ಸಾಹಸ ಮಾಡಲಿಲ್ಲ.

ಅವಳ ಸಂಕೋಚ ಕಂಡು ಸುದರ್ಶನನಿಗೆ ನಗು ಬಂತು. ‘ಏನ್ರಿ, ಹೆಣ್ಣು ನೋಡುವ ಶಾಸ್ತ್ರ ಇಲ್ಲೂ ಮುಂದುವರಿಸಬೇಕಾ? ನೀವು ಕತ್ತು ಬಗ್ಗಿಸಿ ಕುತ್ಕೊಂಡುಬಿಟ್ರೆ, ನಾನು ಮಾತಾಡೋದು ಹೇಗೆ?’ ಛೇಡಿಸಿದ- ಮೆಲ್ಲನೆ ಕತ್ತೆತ್ತಿದವಳೇ ಅವನೆಡೆ ನೋಡಿದಳು. ಸುದರ್ಶನ ಮುಖ ತುಂಟತನದಿಂದ ಹೊಳೆಯುತ್ತಿತ್ತು. ಕಣ್ಣುಗಳಲ್ಲಿ ಅಭಿಮಾನದ ಮಹಾಪೂರವೇ ಕಂಡಂತಾಗಿ ತಟ್ಟನೆ ನೋಟ ಬದಲಿಸಿಬಿಟ್ಟಳು.

‘ಸ್ಫೂರ್ತಿ ನಿಮ್ಮ ಹೆಸರು ಅದೆಷ್ಟು ಚೆನ್ನಾಗಿದೆ ಗೊತ್ತಾ’ ಜೇನಿನಲ್ಲಿ ಅದ್ದಿದಂತಿತ್ತು ಧ್ವನಿ.

‘ನನ್ನ ಬದುಕಿಗೂ ಸ್ಫೂರ್ತಿಯಾಗಬೇಕು ನೀವು, ನಿಮ್ಮ ಅವತ್ತಿನ ಮಾತು, ನಿಮ್ಮ ದಿಟ್ಟ ನಡೆ, ನಿಮ್ಮ ಗುಣ ಎಲ್ಲವನ್ನು ಮೆಚ್ಚಿಕೊಂಡಿದ್ದೇನೆ. ನಿಮ್ಮಂತ ಸಂಗಾತಿಯೇ ಬೇಕೆಂದು ನನ್ನ ಮನಸ್ಸು ನಿರ್ಧರಿಸಿಬಿಟ್ಟದೆ. ಪ್ಲೀಸ್ ಏನಾದ್ರೂ ಮಾತಾಡಿ’ ಬೇಡಿದ.

ಈಗ ನಾನು ಸುಮ್ಮನಿದ್ದುಬಿಟ್ಟರೆ ಅಭಾಸವಾಗಿಬಿಡುತ್ತದೆ ಎಂದು ಎಚ್ಚೆತ್ತು ಕೊಂಡವಳೇ ‘ನಾನು ಡಿಗ್ರಿ ಮಾಡಬೇಕು. ಅಮೇಲೆ ಮಾಸ್ಟರ್ ಡಿಗ್ರಿ ಮಾಡಬೇಕು ಅನ್ನೋ ಆಸೆ ಇದೆ. ಇಷ್ಟು ಬೇಗ ಮದ್ವೆ ಆಗೋಕೆ ಇಷ್ಟ ಇಲ್ಲ.’

‘ಅಬ್ಬಾ ಬದುಕಿಕೊಂಡೇ, ನನ್ನನ್ನೇ ಇಷ್ಟ ಇಲ್ಲ ಅಂತ ಎಲ್ಲಿ ಹೇಳಿಬಿಡ್ತೀರೊ ಅಂತ ಹೆದರಿಕೆಯಾಗಿತ್ತು. ಈಗ ಸಮಾಧಾನ ಆಯಿತು. ನೀವು ಡಿಗ್ರಿನಾದ್ರೂ ಮಾಡಿ, ಪಿಹೆಚ್ಡಿಯನ್ನಾದ್ರೂ ಮಾಡಿ. ನಂದೇನು ಅಭ್ಯಂತರವಿಲ್ಲ. ನೀವೇನು ಓದ್ತಿನಿ ಅಂದ್ರೂ ಒದಿಸೊ ಜವಾಬ್ದಾರಿ ನಂದು. ಅದ್ರೆ ನನ್ನ ಮದ್ವೆ ಆಗಲ್ಲ ಅಂತ ಮಾತ್ರ ಹೇಳಬೇಡಿ’ ಎಂದಾಗ.

ಆಯ್ಯೋ ದೇವ್ರೆ ಈ ಮನುಷ್ಯ ನನ್ನ ಆರ್ಥನೇ ಮಾಡಿಕೊಳ್ತ ಇಲ್ವಲ್ಲಪ್ಪ. ಈಗ್ಲೆ ಮದ್ವೆ ಬೇಡ ಆಂದ್ರೆ ನೀನು ಇಷ್ಟ ಇಲ್ಲಾ ಅಂತ ತಾನೇ ಅರ್ಥ, ಅದನ್ನ ಹೇಗಪ್ಪ ನೇರವಾಗಿ ಹೇಳಲಿ, ಈಗ್ಲೆ ಈ ಮನುಷ್ಯ ಏನೇನೋ ಕನಸು ಕಾಣ್ತಾ ಇರುವಂತಿದೆ. ನನ್ನ ಕನಸುಗಳು ಬೇರೆಯವೇ ಇದೆ. ಹೇಗೆ ಇವನಿಂದ ಪಾರಾಗುವುದು?

‘ನಂಗೆ ಈ ವರದಕ್ಷಿಣೆ, ಅದ್ದೂರಿ ಮದುವೆ ಇವೆಲ್ಲ ಇಷ್ಟವಾಗಲ್ಲ. ವರದಕ್ಷಿಣೆ ಕೇಳೋದನ್ನ ಕಂಡ್ರೆ ನಂಗಾಗಲ್ಲ’ ಪರೋಕ್ಷವಾಗಿ ಅವನನ್ನು ಧಿಕ್ಕರಿಸಲು ಪ್ರಯತ್ನಿಸಿದಳು.

‘ನಾನೂ ವರದಕ್ಷಿಣೆಯ ವಿರೋಧಿಯೇ, ನನಗೂ ಅದ್ದೂರಿ ಮದ್ವೆ ಇಷ್ಟ ಇಲ್ಲ…’ ಎಂದುಬಿಟ್ಟಾಗ ಅಯೋಮಯ ಎನಿಸಿ ಅವನನ್ನು ನೋಡಿದಳು. ಕುಹಕ ಮಾಡ್ತಾ ಇದ್ದಾನಾ, ತಮಾಶೆ ಮಾಡ್ತ ಇದ್ದಾನಾ. ನಾನು ಹೇಳಿದ್ದನ್ನ ಪುನರುಚ್ಚರಿಸುತ್ತಿದ್ದಾನಾ…

ಗಂಭೀರವಾಗಿಯೇ ಇದ್ದಾನೆ, ಅವನ ಮುಖದಲ್ಲಿ ರೋಚಕವಾಗಲಿ ತಮಾಷೆಯಾಗಲಿ ಕಾಣಿಸುತ್ತ ಇಲ್ಲ. ಮತ್ತೇ ವರದಕ್ಷಿಣೆ ಕೇಳ್ತಿದಾರೆ… ಆದರೆ ಬೇರೆಯವರು ಕೇಳೋದಕ್ಕಿಂತ ಕಡಿಮೆ ಕೇಳ್ತಾ ಇದ್ದಾರೆ ಅಂತ ಅಪ್ಪ ಹೇಳಿದ್ದು ನಿಜನೋ ಸುಳ್ಳೋ, ನಿಜಾನೇ ಇರಬೇಕು. ಈ ಮನುಷ್ಯನಿಗೆ ವರದಕ್ಷಿಣೆ ಬೇಡ ಎನಿಸಿರಬೇಕು. ಆದರೆ ಅವರ ಅಪ್ಪ ಅಮ್ಮ ಬಿಟ್ಟುಬಿಡ್ತಾರಾ? ಬಿಟ್ಟಿಯಾಗಿ ಬರುತ್ತೆ ಅಂದ್ರೆ ಯಾರು ಬಿಡ್ತಾರೆ…

‘ಯಾಕೆ, ಸುಮ್ಮನಾಗಿ ಬಿಟ್ಟಿರಿ, ನಮ್ಮ ಮನೆಯಲ್ಲೂ ಕೂಡ ಯಾರು ವರದಕ್ಷಿಣೆ ಬಯಸಲ್ಲ. ನಮ್ಗೆ ಏನು ಕಡಿಮೆ ಆಗಿದೆ. ಅಪ್ಪ ಸಂಪಾದಿಸಿದ ಆಸ್ತಿನೇ ಬೇಕಾದಷ್ಟು ಇದೆ. ಬೇರೆಯವರ ದುಡ್ಡಿನ ಮೇಲೆ ನಮ್ಗೆ ಆಸೆ ಇಲ್ಲ. ನಿಮ್ಮ ಇಷ್ಟದ ಪ್ರಕಾರ ಸರಳ ವಿವಾಹನೇ ಆಗೋಣ, ಮದ್ವೆ ಆದ ಮೇಲೆ ಓದೋಕ್ಕೆ ಹೋಗಬಹುದು. ನಿಮ್ಮ ಸ್ವತಂತ್ರಕ್ಕೆ, ನಿಮ್ಮ ಆಸಕ್ತಿ, ಅಭಿರುಚಿಗೆ ಅಡ್ಡಿ ಬರೊಲ್ಲ ನಾನು, ನಿಮ್ಮ ಸಂಘಟನೆ ವಿಚಾರವನ್ನು ನಿವಾಸ್ ಹೇಳಿದ್ರು. ನಾನು ಆ ಸಂಘಟನೆಗೆ ಸೇರಿಕೊಳ್ತಿನಿ. ನಿವಾಸ್ ಬಗ್ಗೆ ನಂಗೆ ತುಂಬಾ ಗೌರವ ಇದೆ. ಅವರ ರೀತಿನೇ ನಾನು ಕೂಡ ವ್ಯವಸಾಯದಲ್ಲಿ ಆಚರಣೆಗೆ ತರಬೇಕು ಅಂತ ಇದ್ದೀನಿ. ಮದ್ವೆ ಆದ ಮೇಲೆ ನಿಮ್ಮ ಸಹಕಾರನೂ ಸಿಗುತ್ತೆ. ನಾವು ಮಾದರಿ ರೈತ ಕುಟುಂಬ ಎನಿಸಿಕೊಳ್ಳೋಣ’ ಒಬ್ಬನೇ ಎಲ್ಲವನ್ನು ಮಾತಾಡ್ತ ಇದ್ದಾನೆ. ನನ್ನ ಇಷ್ಟ ಕಷ್ಟದ ಪ್ರಶ್ನೆಯೇ ಅವನಿಗಿಲ್ಲವೇ, ಸಿಟ್ಟು ಬಂತು.

‘ನಂಗೆ ಲೇಟಾಗುತ್ತೆ, ನಾನು ಬರ್ತಿನಿ’ ಎಂದವಳು ಎದ್ದು ನಿಂತಳು. ಅವನೂ ಅವಳ ಜೊತೆ ನಿಂತು ‘ನಡೆಯಿರಿ ಅಷ್ಟು ದೂರ ಬರ್ತಿನಿ, ಕತ್ಲೆ ಆಗ್ತ ಇದೆ’ ಎಂದು ಅವಳ ಉತ್ತರ ನಿರೀಕ್ಷಿಸದವನಂತೆ ಅವಳೊಂದಿಗೆ ಹೆಜ್ಜೆ ಹಾಕಿದ.

‘ನಾನೊಬ್ಬಳೆ ಹೋಗ್ತಿನಿ ಪರ್ವಾಗಿಲ್ಲ, ನಂಗೆ ಅಭ್ಯಾಸ ಇದೆ’ ಎಂದು ಹೇಳಿದವಳೇ ಸರ ಸರನೆ ಹೊರಟೇಬಿಟ್ಟಾಗ ಕ್ಷಣ ಪೆಚ್ಚಾದರೂ ‘ನಾಚಿಕೆ ಪಾಪ’ ಎಂದು ಆಕ್ಷಣವೇ ಅವಳನ್ನು ಕ್ಷಮಿಸಿಬಿಟ್ಟು ಉಲ್ಲಾಸದಿಂದ ಬಸ್‌ಸ್ಟ್ಯಾಂಡಿಗೆ ನಡೆದನು.

ನಿವಾಸ್ನೊಂದಿಗೆ ಈಗ ಸ್ಫೂರ್ತಿ ಮಾತನಾಡಲೇಬೇಕಿತ್ತು. ತನ್ನ ಮನದೊಳಗೆ ಏನಿದೆ ಎಂಬುದನ್ನು ಹೊರಹಾಕಿ, ಅವನ ಮನದೊಳಗೆ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಕುತೊಹಲದಿಂದ ನಿವಾಸನ ಮನೆಗೆ ಹೊರಟಳು. ತಮ್ಮೂರಿನಿಂದ ಈಚೆಗೆ ಅವನು ಜಮೀನು ಕೊಂಡು ಮನೆ ಕಟ್ಟಿಕೊಂಡಿದ್ದಾನೆ. ತಂದೆ ತಾಯಿ ಬೇರೆ ಊರಿನಲ್ಲಿದ್ದಾರೆ. ತಾನೊಬ್ಬನೆ ಜಮೀನಿನ ಮೇಲೆ ಪ್ರಯೋಗ ಮಾಡುತ್ತ ತಾನೇ ಅಡುಗೆ ಬೇಯಿಸಿಕೊಂಡು ಎಲ್ಲಾ ಕೆಲಸ ಮಾಡಿಕೊಂಡು ಕಷ್ಟಜೀವಿ ಎನಿಸಿಕೊಂಡಿದ್ದಾನೆ. ಕೈತುಂಬಾ ಸಂಬಳ ಬರುವ ಕೆಲಸಬಿಟ್ಟು ಭೂಮಿ ಜೊತೆ ಹೊಡೆದಾಡುವ ಅವನ ಆಯ್ಕೆಗೆ ಕೆಲವರು ಹುಚ್ಚುತನ ಎಂದರೆ ಕೆಲವರು ಮೂರ್ಖ ಎಂದೇ ಭಾವಿಸಿದ್ದಾರೆ. ಒಣ ಆದರ್ಶದಿಂದ ಎನನ್ನಾದರೂ ಸಾಧಿಸಲು ಸಾಧ್ಯವೇ, ಪಡೆದುಕೊಳ್ಳುವುದು ಸಾಧ್ಯವೇ ಎಂಬುದು ಹಲವರ ಅಭಿಪ್ರಾಯ. ಆದರೆ ನಿವಾಸ್ ಬೇರೆಯವರಿಗಾಗಿ ಬದುಕದೆ ತನಗಾಗಿ ಬದುಕುತ್ತಿದ್ದಾನೆ. ಯಾರು ಏನೆಂದರೂ ತಲೆ ಕೆಡಿಸಿಕೊಳ್ಳದೆ ತಾನು ಮಾಡುವುದನ್ನು ಮಾಡುತ್ತಲೇ ಬಂದಿದ್ದಾನೆ.

ಐದು ವರ್ಷದ ಹಿಂದೆ ನಿವಾಸ್ ಅಲ್ಲಿ ಭೂಮಿ ಕೊಂಡು ಸಾವಯುವ ಕೃಷಿ ಮಾಡುತ್ತ ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಂಡು ಯಶಸ್ವಿ ರೈತನೆನಿಸಿಕೊಂಡಿದ್ದಾನೆ. ಸಾವಯವ ಬೇಸಾಯವೆಂದರೆ ರಾಸಾಯನಿಕ ಗೊಬ್ಬರ ಬಳಸದೆ ಇರುವುದು ಮಾತ್ರವಲ್ಲ, ಬಿದ್ದ ಮಳೆ ನೀರನ್ನು ಸರಿಯಾಗಿ ಬಳಸಿಕೊಂಡು ಬೆಳೆ ಬೆಳೆಯುವ ಪರ್ಯಾಯ ವಿಧಾನಗಳನ್ನು ಅನುಸರಿಸಿ, ಮಳೆಯ ನೀರನ್ನು ಅವಲಂಬಿಸಿ ಭೂಮಿಯ ಫಲವತ್ತತೆ ಮತ್ತು ತೇವಾಂಶ ಹೆಚ್ಚಿಸಿಕೊಳ್ಳಲು ಸಾಧ್ಯ ಎಂಬುದನ್ನು ಕಾರ್ಯರೂಪಕ್ಕೆ ತಂದು ತೋರಿಸಿದ್ದಾನೆ.

ತಮ್ಮ ಜಮೀನಿನಲ್ಲಿ ಒಂದು ಭಾಗದಲ್ಲಿ ಶೇಂಗಾ ಬೆಳೆದರೆ, ಮತ್ತೊಂದು ಕಡೆ ಹಿಪ್ಪುನೇರಳೆ ಬೆಳೆದಿದ್ದಾನೆ. ಈಚೆಗಷ್ಟೆ ಆಲೂಗಡ್ಡೆ ಬೆಳೆದು ಒಂದು ಲಕ್ಷದವರೆಗೂ ಲಾಭಗಳಿಸಿದ್ದಾನೆ. ಹಿಪ್ಪು ನೇರಳೆ ಕಡ್ಡಿಗಳನ್ನು ನಾಟಿ ಮಾಡಿದ ಬಳಿಕ ಎರಡು ಸಾಲುಗಳ ನಡುವಿನ ಅಂತರದಲ್ಲಿ ಹುರುಳಿಬೀಜ ಚೆಲ್ಲಿ ಹಸುರೆಲೆ ಗೊಬ್ಬರಕ್ಕಾಗಿ ಬೆಳೆಸಿ ಅದನ್ನು ಕಟಾವ್ ಮಾಡಿ ಮಣ್ಣಿಗೆ ಬೆರೆಸಿ ಭೂಮಿಸತ್ವ ಹೆಚ್ಚಿಸಿದ್ದಾನೆ. ಹುರುಳಿ ಗಿಡಗಳ ಬೇರುಗಳು ನೆಲದಲ್ಲಿರುವಷ್ಟು ದಿನ ಮಣ್ಣಿನಲ್ಲಿ ಇರುವ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ವಿಶಿಷ್ಟ ಶಕ್ತಿ ಪಡೆದಿರುತ್ತವೆ. ಹಾಗಾಗಿ ತೇವಾಂಶ ಉಳಿದು ಹಿಪ್ಪುನೇರಳೆ ಗಿಡದ ಬೆಳೆಗೆ ಸಹಾಯವಾಗಿದೆ. ಹುರುಳಿ ಬೇರುಗಳಲ್ಲಿರುವ ಪೌಷ್ಟಿಕಾಂಶವೂ ಹಿಪ್ಪುನೇರಳೆಗೆ ಲಭಿಸಿವೆ. ಈ ರೀತಿ ಮಾಡುವುದರಿಂದ ಬೆಳೆ ವಿಫಲವಾಗುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ನೀರಿನ ಬಳಕೆ ಕಡಿಮೆ ಮಾಡಬಹುದು. ಮಳೆ ಕೈಕೊಟ್ಟ ಸಂದರ್ಭಗಳಲ್ಲಿ ಬೆಳೆ ಒಣಗದೆ ಉಳಿಸಿಕೊಳ್ಳಲು ಸಾಧ್ಯ. ಇವೆಲ್ಲವನ್ನು ನೋಡಿಯೇ ಸ್ಫೂರ್ತಿಯ ತಂದೆ ನಿವಾಸನ ಸಲಹೆ ಪಡೆದು ಆತನ ಮಾರ್ಗದರ್ಶನದಲ್ಲಿ ಕೃಷಿ ಮಾಡಿ ಇಂದು ಒಳ್ಳೆ ಸಂಪಾದನೆಯಲ್ಲಿದ್ದಾರೆ. ತಮ್ಮ ಮನೆಯನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ ನಿವಾಸನನ್ನು ಕಂಡರೆ ಸ್ಫೂರ್ತಿಯ ಮನೆಯವರಿಗೆಲ್ಲ ಅಭಿಮಾನ. ಆದರೆ ಸ್ಫೂರ್ತಿಗೆ ಅಭಿಮಾನದ ಜೊತೆ ಅದೆಂತಹುದೊ ಭಾವ. ಆ ಭಾವ ಪ್ರೇಮವಿರಬಹುದೆ. ಅಂತಹುದೇ ಭಾವ ನಿವಾಸನಲ್ಲಿಯೂ ಇದೆಯೇ ಎಂಬ ತೊಳಲಾಟದಿಂದ ಬಳಲಿ ಹೋಗಿದ್ದಾಳೆ. ಸುದರ್ಶನ ಬಾರದೆ ಹೋಗಿದ್ದರೆ, ಈ ತೊಳಲಾಟ ಅವಳಲ್ಲಿ ಕಾಣಿಸಿಕೊಳ್ಳುತ್ತಲೇ ಇರಲಿಲ್ಲವೇನೂ…

ಸ್ಫೂರ್ತಿಯನ್ನು ಈ ಸಮಯದಲ್ಲಿ ತನ್ನ ಮನೆಯಲ್ಲಿ ಕಂಡು ನಿವಾಸನಿಗೆ ಆಶ್ಚರ್ಯವಾಗಿ ಹೋಯಿತು. ‘ಅರೆ ಸ್ಫೂರ್ತಿ, ಕಾಲೇಜು ಇಲ್ವಾ, ಇಲ್ಲಿವರೆಗೂ ಬಂದುಬಿಟ್ಟಿದ್ದೀಯಾ’ ಪ್ರಶ್ನಿಸಿದ. ’ನೀವೇ ಬರೋ ಹಾಗೆ ಮಾಡಿದ್ರಿ. ನಾನು ನೆಮ್ಮದಿಯಿಂದ ಕಾಲೇಜಿಗೆ ಹೋಗಲು ನೀವು ಬಿಡ್ತ ಇಲ್ಲ’ ದೂರಿದಳು.

ತಕ್ಷಣ ಯಾಕೆ ಹೀಗೆ ಹೇಳ್ತ ಇದ್ದಾಳೆ ಅಂತ ಅರ್ಥವೇ ಆಗದೆ ಅವಳನ್ನೆ ನೋಡಿ ಪಕ್ಕನೆ ನಕ್ಕುಬಿಟ್ಟ.

‘ಓಹೊ, ನೆನ್ನೆ ಸುದರ್ಶನನನ್ನು ಕರ್ಕೊಂಡು ಬಂದಿದ್ದೆ ಅಂತನಾ, ಅದೃಷ್ಟ ಮಾಡಿದ್ದೆ ನೀನು, ಒಳ್ಳೆ ಹುಡುಗ, ನಿನ್ನ ಮೆಚ್ಚಿ ಆರಾಧಿಸುತ್ತ ಇದ್ದಾನೆ. ಎಷ್ಟು ಹೆಣ್ಣುಮಕ್ಕಳಿಗೆ ಈ ಭಾಗ್ಯ ಸಿಗುತ್ತೆ ಹೇಳು. ನಿನ್ನ ಅವನ ಆಸಕ್ತಿ, ಅಭಿರುಚಿ ಎಲ್ಲಾ ಒಂದೇ ಇದೆ. ನಿನಗೋಸ್ಕರ ಏನು ಮಾಡೋಕು ಸಿದ್ದನಿದ್ದಾನೆ, ನಿಮ್ಮ ಮನೆಯವರು ಅವನ ಮನೆಯವರು ಎಲ್ಲಾ ಒಪ್ಪಿದ್ದಾರೆ, ಇನ್ನೇನು ಆಗಬೇಕು ಹೇಳು.’

‘ಎಲ್ಲಾ ಒಪ್ಪಿಬಿಟ್ರೆ ಆಯ್ತಾ, ನಾನು ಒಪ್ಪುವುದು ಬೇಡವೇ’ ಸಿಡುಕಿದಳು.

‘ಅಂತಹ ಹುಡುಗನನ್ನು ಒಪ್ಪದೆ ಇರುವುದಕ್ಕೆ ನಿನಗೇನಾಗಿದೆ ದಾಡಿ, ಪುಣ್ಯ ಮಾಡಿದೆ ಸುದರ್ಶನನ್ನು ಮದುವೆ ಮಾಡಿಕೊಳ್ಳೋಕೆ’

ಸಹಜವಾಗಿಯೇ ನಿವಾಸ್ ನುಡಿದ.

ಇವನ ಮನಸ್ಸಿನಲ್ಲಿ ನನ್ನ ಬಗ್ಗೆ ಯಾವ ಭಾವನೆಗಳೂ ಇಲ್ಲವೇ. ತನ್ನನ್ನು ಎಲ್ಲರೂ ರೂಪವಂತೆ ಎನ್ನುತ್ತಾರೆ. ಈ ರೂಪವಾದರೂ ಅವನನ್ನು ಸೆಳೆಯಲಿಲ್ಲವೇ. ಹೋಗಲಿ ಅವನಂತೆಯೇ ನನಗೂ ಅವನ ವಿಚಾರಗಳ ಬಗ್ಗೆಯೇ ಆಸಕ್ತಿ ಇದೆ. ಇಬ್ಬರೂ ಒಟ್ಟೊಟ್ಟಿಗೆ ಅದೆಷ್ಟು ದಿನ ಇಲ್ಲಾ. ಯಾವ ಗಳಿಗೆಯಲ್ಲಾದರೂ ನನ್ನ ಬಗ್ಗೆ ಕೊಂಚ ಮಧುರ ಭಾವನೆ ಮೂಡಲಿಲ್ಲವೇ. ಹೆಣ್ಣು ಅಂತ ಒಂದು ಕ್ಷಣವಾದರೂ ಕಾಡಲಿಲ್ಲವೇ. ಇವನು ಮನುಷ್ಯನೇ ಅಲ್ಲ ಕಲ್ಲು. ಸೌಂದರ್ಯ ತುಂಬಿದ ಹೆಣ್ಣೊಬ್ಬಳು ಸನಿಹದಲ್ಲಿರುವಾಗಲೂ ಸಹಜವಾಗಿರುತ್ತಾನೆ ಅಂದರೆ ಈತನಿಗೆ ಮನಸ್ಸೇ ಇಲ್ಲವೇ, ಮನಸ್ಸಿನ ತುಂಬ ಆಲೋಚನೆ ಕಾಡಿದರೂ ಬಾಯಿಬಿಟ್ಟು ಹೇಳದಾದಳು ಏನನ್ನೂ. ಅವನಿಗೆ ಮನಸ್ಸಿದ್ದರೆ ಸಂತೋಷವಾಗಿ ಸುದರ್ಶನನ್ನು ಕರೆದುಕೊಂಡು ಬರುತ್ತಿದ್ದನೆ, ಆದರೂ ನಿವಾಸ್ ಯಾರನ್ನಾದರೂ ಮದುವೆ ಆಗಲೇಬೇಕು. ಅದು ತನ್ನನ್ನೇಕೆ ಆಗಬಾರದು. ಹಾಗೆಂದು ಯೋಚಿಸಿದವಳೇ ನೇರವಾಗಿಯೇ ಕೇಳಬೇಕೆಂದು ಧೈರ್ಯ ಮಾಡಿಬಿಟ್ಟಳು.

‘ನೀವಿನ್ನೂ ಮದುವೆ ಆಗದೆ ವ್ಯವಸಾಯ, ಸಂಘಟನೆ, ಅಂತ ದುಡಿಯುತ್ತಿರುವಾಗ, ನಾನಿನ್ನೂ ಚಿಕ್ಕವಳು, ನಿಮಗಿಂತ ಮುಂಚೆನೇ ಹೇಗೆ ಮದ್ವೆ ಆಗಲಿ’ ನೇರವಾಗಿ ಹೇಳಲು ಬಾಯಿ ಬರದೇ ಪರೋಕ್ಷವಾಗಿ ಕೇಳಿಬಿಟ್ಟಳು.

‘ಅಯ್ಯೋ ನನ್ನ ಮದ್ವೆನಾ. ನಾನು ಮದ್ವೆ ಆಗ್ತೇನೋ ಬಿಡ್ತೀನೋ, ನನ್ನದು ಹೇಗೊ ನಡೆದು ಹೋಗಿಬಿಡುತ್ತದೆ. ಆದರೆ ನೀನು ಹೆಣ್ಣುಮಗಳು, ಇವತ್ತಲ್ಲದಿದ್ದರೂ ನಾಳೆ ಮದ್ವೆ ಆಗಲೇಬೇಕು. ಎಲ್ಲಾ ಅನುಕೂಲ ಕೂಡಿ ಬಂದಿರುವಾಗ ಮದ್ವೆನಾ ಮುಂದೆ ಹಾಕೋದು ಮೂರ್ಖತನ.’

‘ನೀವ್ಯಾಕೆ ಮದ್ವೆ ಆಗಲ್ಲ. ನಿಮ್ಮ ಮನಸ್ಸಿಗೆ ಹಿಡಿಸೋ ಹುಡುಗಿ ಇನ್ನೂ ಸಿಕ್ಕಿಲ್ವಾ’ ಕೆದಕಿದಳು.

‘ಹುಡುಕ್ತಾ ಇದ್ರೆ ಸಿಕ್ತ ಇದ್ದಳೇನೋ! ಆದ್ರೆ ನಾನು ಆ ಪ್ರಯತ್ನವೇ ಮಾಡಿಲ್ಲವಲ್ಲ. ನಿಂಗೊಂದು ವಿಚಾರ ಗೊತ್ತಿಲ್ಲ ಸ್ಫೂರ್ತಿ. ನನ್ನ ಮನೆಯವರ ಬಗ್ಗೆ, ನನ್ನ ಬಗ್ಗೆ. ಯಾರ ಬಳಿಯೂ ನಾನು ಏನನ್ನೂ ಹೇಳಿಲ್ಲ. ನನಗಿರೋ ಮನಸ್ಥಿತೀಲಿ ಮದ್ವೆ ಸಂಸಾರ ಎಲ್ಲಾ ದೂರವೇ’ ದುಗುಡದಿಂದ ಹೇಳಿದ.

‘ನನ್ನ ಹತ್ರಾನೂ ಹೇಳಬಾರದಂತದ್ದೆ ನಿಮ್ಮ ಮನೆಯ ವಿಚಾರ. ಹೇಳಬಾರದು ಅಂದ್ರೆ ನಾನು ಬಲವಂತಿಸುವುದಿಲ್ಲ’ ಅವನ ದುಗುಡ ಅರ್ಥಮಾಡಿಕೊಂಡು ಮೆಲ್ಲನೆ ಹೇಳಿದಳು.

‘ಹೇಳಬಾರದು ಅಂತೇನಿಲ್ಲ. ಯಾರಿಗೂ ಇದುವರೆಗೂ ನಾನು ಹೇಳಿಲ್ಲ, ಹೇಳುವ ಪ್ರಸಂಗವೇ ಬಂದಿರಲಿಲ್ಲ. ಈಗ ನೀನು ಕೇಳ್ತಾ ಇದ್ದೀಯಾ, ನಿನಗೂ ಗೊತ್ತಾಗಲಿ ನಮ್ಮ ಮನೆಯ ವಿಚಾರಗಳು’- ತನ್ನ ಮನೆಯನ್ನು, ಹೆತ್ತವರನ್ನು ನೆನೆಸಿಕೊಂಡು ಕ್ಷಣ ವ್ಯಥಿತನಾದನು.

ನಿವಾಸನ ತಂದೆ ದೊಡ್ಡ ರೈತ. ಚಿಕ್ಕಪ್ಪ ತಾನು ಮೆಚ್ಚಿದ ಹುಡುಗಿಯೊಂದಿಗೆ ಮದುವೆಯಾದ ಎಂದು ತಮ್ಮನೊಂದಿಗೆ ಸಂಪರ್ಕವನ್ನೇ ತ್ಯಜಿಸಿದ್ದ ನಿವಾಸನ ತಂದೆ. ತಮ್ಮ ಆಕ್ಸಿಡೆಂಟ್ನಲ್ಲಿ ಸತ್ತಾಗಲೂ ನೋಡಲು ಹೋಗಿರಲಿಲ್ಲ. ತಮ್ಮನ ಹೆಂಡತಿಗೆ ಸೇರಬೇಕಾದ ಆಸ್ತಿಯನ್ನು ಕೊಡದೆ ತಾವೇ ಅನುಭವಿಸುತ್ತಿದ್ದು, ತಮ್ಮನ ಹೆಂಡತಿ ಗಂಡನನ್ನು ಕಳೆದುಕೊಂಡು ಇರುವ ಒಬ್ಬ ಮಗನನ್ನು ಕಷ್ಟದಿಂದ ಸಾಕುತ್ತಿದ್ದರೆ ಕನಿಕರ ತೋರಿಸಲಿಲ್ಲ. ನಿವಾಸನಿಗೂ ಒಬ್ಬಳೇ ಅಕ್ಕ. ಅವಳು ಕೂಡ ಚಿಕ್ಕಪ್ಪನಂತೆ ಯಾರನ್ನೋ ಮೆಚ್ಚಿ ಮದುವೆಯಾಗುತ್ತೇನೆ ಎಂದಾಗ ಅಪ್ಪನು ಅದನ್ನು ವಿರೋಧಿಸಿ ಮನೆಯೊಳಗೆ ಕೂಡಿಹಾಕಿದ್ದರು. ಅಪ್ಪನ ಬುದ್ಧಿ ಗೊತ್ತಿದ್ದ ನಿವಾಸನ ಅಕ್ಕ ತನ್ನ ಆಸೆ ಕೈಗೂಡದೆಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಸಾವಿನ ನೋವು ನಿವಾಸನ ತಾಯಿಗೆ ಆಘಾತವುಂಟಾಗಿ ಕೊರಗಿ ಕೊರಗಿ ಪ್ರಾಣ ಬಿಟ್ಟಿದ್ದರು. ಮಗಳ ಸಾವು, ಹೆಂಡತಿಯ ಸಾವು ತಂದೆಯನ್ನು ಸಾಕಷ್ಟು ಹಣ್ಣು ಮಾಡಿತ್ತು.

ಹುಣ್ಣಿನ ಮೇಲೆ ಬರೆ ಎಂಬಂತೆ ಅವರ ಜಮೀನನ್ನು ಸರ್ಕಾರ ನಿವೇಶನಕ್ಕಾಗಿ ವಶವಡಿಸಿಕೊಂಡಿತ್ತು. ದ್ಯೆತನಾಗಿಯೇ ಬದುಕುತ್ತಿದ್ದ ತಂದೆಗೆ ಇದು ತಡೆಯಲಾರದ ಆಘಾತ ತಂದಿತು. ಪರಿಣಾಮ ತಂದೆ ಇಂದು ಮಾನಸಿಕ ರೋಗಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ತೆ ಪಡೆಯುತ್ತಿದ್ದಾರೆ. ಸರ್ಕಾರ ಕೊಟ್ಟ ಹಣ ಬ್ಯಾಂಕಿನಲ್ಲಿದೆ. ಈ ದುರಂತಗಳೆಲ್ಲ ಒಂದರ ಹಿಂದೆ ಒಂದು ತಮ್ಮ ಕುಟುಂಬದಲ್ಲಿ ಆದದ್ದನ್ನು ಕಂಡು ಜಿಗುಪ್ಸೆಗೊಂಡು ಕೆಲಸವನ್ನು ಬಿಟ್ಟು ಇಲ್ಲಿ ಭೂಮಿ ಕೊಂಡು ಭೂಮಿ ಕೆಲಸ ಮಾಡುತ್ತ ಎಲ್ಲವನ್ನು ಮರೆಯುವ ಯತ್ನದಲ್ಲಿ ಇದ್ದೇನೆ. ತಂದೆಯವರಿಗೆ ಚಿಕಿತ್ಸೆ ಕೊಡುತ್ತಿದ್ದು, ಅವರು ಹುಷಾರಾದ ಕೂಡಲೇ ಇಲ್ಲಿಗೆ ಕರೆತರಬೇಕು. ರೈತನಾಗಿಯೇ ಬದುಕಿದ್ದ ತಂದೆ ಇಲ್ಲಿ ಕೊನೆವರೆಗೂ ರೈತನಾಗಿ ದುಡಿಯುತ್ತಿರಲಿ ಎಂಬುದು ತನ್ನಾಸೆ. ಈ ಎಲ್ಲಾ ದುರಂತಗಳ ನಡುವೆ ತನಗೆ ಮದುವೆ ಬಗ್ಗೆಯಾಗಲಿ ಸಂಸಾರದ ಬಗ್ಗೆಯಾಗಲೀ ಆಸಕ್ತಿಯೇ ಇಲ್ಲ. ಅಪ್ಪ ಹು‍ಷಾರಾಗಿ ಬರುವ ತನಕ ಯಾವುದರ ಬಗ್ಗೆಯೂ ಯೋಚಿಸಲಾರೆ. ಚಿಕ್ಕಮ್ಮನ ಶಾಪ ನಮ್ಮ ಕುಟುಂಬಕ್ಕೆ ತಗುಲಿರಬಹುದು. ಅವರು ಎಲ್ಲಿದ್ದಾರೆಂದು ಹುಡುಕಿ ಅವರಿಗೆ ಸಲ್ಲಬೇಕಾಗಿರುವುದನ್ನು ಸಲ್ಲಿಸಿದ ಮೇಲೆಯೇ ತನಗೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗುವುದು. ಅಲ್ಲಿವರೆಗೆ ಬೇರೆ ಯೋಚನೆಗಳೇ ಇಲ್ಲ- ಎಂದು ಮನೆಯ ಬಗ್ಗೆ ವಿವರ ವಿವರವಾಗಿ ತಿಳಿಸಿದಾಗ ಸ್ಫೂರ್ತಿ ಕೆಲ ನಿಮಿಷ ಮಾತೇ ಆಡಲಿಲ್ಲ.

ಇಷ್ಟೊಂದು ನೋವು ತುಂಬಿಕೊಂಡಿರುವ ನಿವಾಸ್ – ಆ ನೋವು ಒಂದು ಚೂರೂ ಯಾರಿಗೂ ಗೊತ್ತಾಗದಂತೆ ನಡೆದುಕೊಂಡಿದ್ದಾನೆ. ಅಷ್ಟೊಂದು ಹತ್ತಿರ ಎಂದುಕೊಂಡಿದ್ದ ತನಗೂ ಇದರ ಸುಳಿವು ನೀಡಿರಲಿಲ್ಲ. ಪಾಪ ನಿವಾಸ್ ಎಲ್ಲರನ್ನು ಕಳೆದುಕೊಂಡು ಒಂಟಿಯಾಗಿದ್ದಾನೆ. ಆ ಒಂಟಿತನವನ್ನು ತಾನು ನೀಗುವಂತಾದರೆ… ಕತ್ತಲೆ ತುಂಬಿರುವ ಅವನ ಬದುಕಿನಲ್ಲಿ ಬೆಳದಿಂಗಳಾಗುವ ಅವಕಾಶ ನನ್ನದಾಗುವಂತಿದ್ದರೆ… ಈ ಪ್ರಪಂಚದಲ್ಲಿ ನಾನೇ ಹೆಚ್ಚು ಸುಖಿ.

‘ನಿಮ್ಮ ಕಥೆ ಕೇಳುತ್ತಿದ್ದರೆ ಹೃದಯ ದ್ರವಿಸಿ ಹೋಗುತ್ತದೆ. ನೊಂದಿರುವ ಬಾಳಿಗೆ ನೆಮ್ಮದಿ ನೀಡುವ ಅವಕಾಶವನ್ನು ಯಾರಿಗಾದರೂ ನೀವು ಮಾಡಿಕೊಡಬಾರದೆ? ನಿಮ್ಮೊಂದಿಗೆ ಬರುವಾಕೆ ನಿಮ್ಮ ಬಾಳಿಗೆ ಬೆಳಕಾಗಬಾರದೇಕೆ…?’

‘ಬೆಳಕು, ಇನ್ನೆಲ್ಲಿಯ ಬೆಳಕು, ಚಿಕ್ಕಮ್ಮನ ಶಾಪ ತಟ್ಟಿರುವ ನಮ್ಮ ಮನೆಗೆ ಸೇರುವ ಬೆಳಕು ನಂದಿಹೋದರೆ… ಈಗಿರುವ ನೋವುಗಳ ಜೊತೆಗೆ ಮತ್ತೊಂದು ನೋವನ್ನು ಸೇರಿಸಿಕೊಳ್ಳಲು ಸಿದ್ದವಾಗಲೇ? ಬೇಡ ಸ್ಫೂರ್ತಿ ಅಂತ ಯಾವ ದುರಂತವೂ ನನ್ನ ಬಾಳಿನಲ್ಲಿ ಮುಂದೆ ಆಗಬಾರದು. ನನ್ನ ಕಣ್ಮುಂದೆ ಮತ್ತೊಂದು ಹೆಣ್ಣು ನಲುಗುವುದು ಬೇಡ, ಇದೆಲ್ಲ ಭ್ರಮೆ ಅಂತ ನಿನಗನ್ನಿಸಬಹುದು. ನನಗೂ ಒಮ್ಮೊಮ್ಮೆ ಹೀಗೆ ಆಗುತ್ತದೆಯೋ, ಒಳ್ಳೆಯದು ಯಾಕಾಗಬಾರದು ಎಂದು ಅನ್ನಿಸುತ್ತದೆ. ಆದರೆ ರಿಸ್ಕ್ ತೆಗೆದುಕೊಳ್ಳುವಷ್ಟು ದೈರ್ಯವಿಲ್ಲ’ ವಿಷಾದಭರಿತನಾಗಿ ನುಡಿದ.

‘ಅಂತ ರಿಸ್ಕ್ ತಗೋಳ್ಳೋಕೆ ನಾನು ಒಪ್ಪಿದರೆ…’ ನಡುಗುವ ದನಿಯಲ್ಲಿ ಕೇಳಿಯೇಬಿಟ್ಟಳು. ‘ನೀನಾ, ನಿಂಗ್ಯಾಕೆ ಅಂಥ ಸಂಕಷ್ಟ, ಅದೃಷ್ಟವೇ ನಿನ್ನ ಬಳಿಗೆ ಬಂದಿರುವಾಗ ಅಂಥ ಅದೃಷ್ಟ ಕೈ ಬಿಟ್ಟು ಮೂರ್ಖಳಂತೆ ಮಾತಾಡಬೇಡ’ ಮಾತು ಮುಂದುವರಿಸಲು ಇಚ್ಛೆ ಇಲ್ಲದವನಂತೆ ಹೇಳಿದ.

‘ನೋಡಿ, ನಾನು ನಿಮ್ಮನ್ನು ತುಂಬಾ ಇಷ್ಟಪಡ್ತಾ ಇದೀನಿ, ನನ್ನನ್ನ ಅರ್ಥ ಮಾಡಿಕೊಳ್ಳೋಕೆ ನಿಮ್ಗೆ ಆಗಲೇ ಇಲ್ಲ, ಅದಕ್ಕೆ ನೇರವಾಗಿ ಹೇಳ್ತಾ ಇದೀನಿ. ನೀವಂದ್ರೆ ನನಗೆ ಇಷ್ಟ. ನಿಮ್ಮ ಜೊತೆ ಇರೋದು ನಂಗಿಷ್ಟ, ನಿಮ್ಮ ಆಸಕ್ತಿ ನಂಗಿಷ್ಟ. ಒಟ್ಟಿನಲ್ಲಿ ನೀವೇ ನಂಗಿಷ್ಟ. ಇದು ಪ್ರೀತಿ ಅಂತಾ ನಾ ತಿಳ್ಕೊಂಡಿದ್ದೀನಿ. ನಿಮ್ಮನ್ನು ಪ್ರೀತಿಸುತ್ತಾ ಇದ್ದೇನೆ. ನನ್ನ ಮದ್ವೆ ಮಾಡಿಕೊಳ್ಳಿ’ ಅವನ ಮುಂದೆ ಮಂಡಿ ಊರಿ ಕುಳಿತು ತನ್ನ ಹೃದಯದ ಭಾವನೆಗಳನ್ನೆಲ್ಲ ನಿವೇದಿಸಿಕೊಂಡಳು. ಆಘಾತಗೊಂಡನು ನಿವಾಸ್.

‘ಸ್ಫೂರ್ತಿ, ಏನು ಮಾಡುತ್ತಾ ಇದ್ದೀಯಾ. ನೀನು ನನ್ನನ್ನು ಪ್ರೀತಿಸ್ತಾ ಇದ್ದೀಯಾ, ನೋ, ಐ ಕಾಂಟ್ ಬಿಲೀವ್ ಇಟ್. ನಾನು ಯಾವತ್ತಾದ್ರೂ ನಿನ್ನೊಂದಿಗೆ ಹಾಗೆ ನಡ್ಕೊಂಡಿದ್ದೀನಾ? ಅಂಥ ಭಾವನೆಯೇ ನನ್ನಲ್ಲಿ ಇಲ್ಲ. ನೀನು ನನ್ನ ಸ್ನೇಹಿತೆ, ಪುಟ್ಟ ಗೆಳತಿ, ಆ ಭಾವ ಮಾತ್ರ ನನ್ನಲ್ಲಿ ಇದೆ. ನಿನ್ನ ಒಳಿತನ್ನು ಸದಾ ಬಯಸೋ ಹಿತೈಷಿ ನಾನು. ನಿನ್ನ ಗುಣ ಸ್ವಭಾವ ಮೆಚ್ಚಿದ್ದೀನಿ- ಆದ್ರೆ ಒಬ್ಬ ನ್ನೇಹಿತನಾಗಿ ಮಾತ್ರ. ನನ್ನಲ್ಲಿ ಒಮ್ಮೆ ಕೂಡ ಈ ಭಾವನೆ ಬಿಟ್ರೆ ಬೇರೆ ಭಾವನೆ ಬಂದಿಲ್ಲ. ಎರಡು ಹೃದಯ ಸೇರಿದಾಗ ಪ್ರೀತಿ ಹುಟ್ಟುತ್ತೆ ಅಂತ ಅಂದುಕೊಂಡಿರುವವನು ನಾನು. ನಿನಗ್ಯಾಕೆ ಆ ಭಾವನೆ ಬಂತು ಸ್ಫೂರ್ತಿ. ಬೇಡಾ… ಬೇಡಾ… ಆ ಭಾವನೇನಾ ಇಲ್ಲಿಗೇ ಬಿಟ್ಟುಬಿಡು. ನಿನ್ನ ಮನಸ್ಸಿನಲ್ಲಿರೋದನ್ನ ಕಿತ್ತುಹಾಕು. ಪ್ಲೀಸ್ ಸ್ಫೂರ್ತಿ ನನ್ನ ಕ್ಷಮಿಸಿಬಿಡು. ನಿನ್ನ ಭಾವನೆಗಳಿಗೆ ನನ್ನಲ್ಲಿ ಯಾವುದೇ ರೀತಿಯ ಸ್ಪಂದನೆ ಇಲ್ಲ. ನಾನು ನಿನ್ನ ಗೆಳೆಯ ಮಾತ್ರ’ ದೀರ್ಘವಾಗಿ ನುಡಿದು ಅವಳ ಕೈ ಹಿಡಿದು ಬೇಡಿಕೊಳ್ಳುತ್ತಾ ಭಾವುಕನಾಗಿಬಿಟ್ಟ.

ಅವನ ಕೈಗಳಿಗೆ ಕಣ್ಣು ಒತ್ತಿ ಬಿಕ್ಕಿ ಬಿಕ್ಕಿ ಅತ್ತಳು. ಅವಳ ಭಾವನಾ ಸಾಮ್ರಾಜ್ಯದ ಕೋಟೆ ಸ್ಫೋಟಿಸಿಬಿಟ್ಟಿತ್ತು. ಅವಳ ಆಸೆಗಳ ಜಲಪಾತ ಬರಿದಾಗಿ ಹೋಯಿತು. ಅವಳ ಕನಸುಗಳ ಕೂಸು ಹುಟ್ಟುವದಕ್ಕೆ ಮುಂಚೆಯೇ ಸಾವಿನ ಹಾದಿ ಹಿಡಿಯಿತು. ಅವನೊಂದಿಗಿನ ಭವ್ಯ ಭವಿಷ್ಯ ಪ್ರಪಾತ ಸೇರಿತ್ತು. ನಿರಾಶೆಯ ನೋವು ಹೃದಯ ಹಿಂಡಿ ಆ ನೋವಿನಿಂದ ನರಳಿದಳು, ಕೊರಗಿದಳು, ಒದ್ದಾಡಿದಳು. ಏನೇ ಆದರೂ ವಾಸ್ತವ ನಗುತ್ತಿತ್ತು. ನಿವಾಸನ ಹೃದಯದಲ್ಲಿ ತನಗೆ ಜಾಗವಿಲ್ಲವೆಂಬ ಘೋರ ಸತ್ಯ ಅವಳಿಗರಿವಾಗಿತ್ತು. ಮುಂದೆಂದೂ ಅದು ದಕ್ಕಲಾರದು ಎಂಬುದು ಕೂಡ ಅರ್ಥವಾಗಿತ್ತು. ಮೆಲ್ಲನೆ ಅವಳ ತಲೆ ನೇಮಿಸಿ ‘ಸ್ಫೂರ್ತಿ, ಇಷ್ಟೊಂದು ಹತಾಶಳಾಗಬೇಡ. ನಿನ್ನನ್ನೇ ನಂಬಿರುವ, ನಿನಗಾಗಿಯೇ ತನ್ನೆಲ್ಲ ಪ್ರೀತಿ ತುಂಬಿ ನಿನಗಾಗಿ ಕಾಯುತ್ತಿರುವ ಸುದರ್ಶನನನ್ನು ನೋಡು. ಈಗ ನಿನಗಾದ ನಿರಾಶೆ ಅವನಿಗಾಗುವುದು ಬೇಡ, ನಿನಗಾದ ನೋವು ಅವನಿಗಾಗುವುದು ಬೇಡ. ನಕ್ಷತ್ರಕ್ಕಾಗಿ ಆಸೆ ಪಟ್ಟು ಸೂರ್ಯನನ್ನು ಕಳೆದುಕೊಳ್ಳಬೇಡ. ನಿನ್ನ ಬದುಕಿನ ಸೂರ್ಯ ನಿನ್ನ ಬಾಳನ್ನು ಬೆಳೆಗಿಸಲು ಕಾಯುತ್ತಿದ್ದಾನೆ. ಇಲ್ಲಿ ಖಾಲಿಯಾದ ಸ್ಥಾನ ಅಲ್ಲಿ ತುಂಬುತ್ತದೆ. ನೊಂದುಕೊಳ್ಳಬೇಡ ಸ್ಫೂರ್ತಿ. ನನಗಿಂತ ಸಾವಿರ ಪಾಲು ಉತ್ತಮ ಸಂಗಾತಿಯಾಗ್ತಾನೆ ಸುದರ್ಶನ. ಪಾಲಿಗೆ ಬಂದಿರುವುದನ್ನು ಸ್ವೀಕರಿಸು. ದುಡುಕಬೇಡ. ನನ್ನಾಣೆ ಇದೆ. ನೀನು ಸುದರ್ಶನನೊಂದಿಗೆ ವೈವಾಹಿಕ ಬದುಕಿಗೆ ಕಾಲಿಡಲೇಬೇಕು. ಇದು ನನ್ನಾಸೆ ಕೂಡ’-ಮಗುವಿಗೆ ಹೇಳಿ ರಮಿಸುವಂತೆ ಹೇಳಿದ. ಅಳುತ್ತಲೇ ಇದ್ದ ಅವಳ ಮುಖವನ್ನು ಬೆರಳಿನಿಂದ ಎತ್ತಿ ಕಣ್ಣೀರು ಒರೆಸಿದ.

‘ನಮ್ಮ ಸ್ಫೂರ್ತಿ ಇನ್ನೆಂದಿಗೂ ಅಳಬಾರದು. ಅವಳು ದೈರ್ಯವಂತೆ, ಬದುಕು ಹೇಗೆ ಬರುತ್ತೆ ಹಾಗೆ ಸ್ವೀಕರಿಸುವ ಹೃದಯವಂತೆ, ಸಾಕು ಅತ್ತದ್ದು’ ಸಮಾಧಾನಿಸಿದ.

ನೀರು ತುಂಬಿದ ಕಣ್ಣುಗಳಿಂದಲೇ ಅವನನ್ನು ನೋಡುತ್ತ-

‘ನಿಮ್ಮ ಸ್ನೇಹಾನಾದ್ರೂ ನಂಗೆ ಕೊನೆವರೆಗೆ ಕೊಡ್ತೀರಾ. ನಿಮ್ಮ ಗೆಳತಿಯಾಗಿಯೇ ಉಳಿದುಬಿಡ್ತೀನಿ’ ಆ ನಿರಾಶೆಯಲ್ಲೂ ಮುದ್ದಾಗಿ ಕಂಡಳು.

‘ಮುದ್ದೂ ಸ್ಫೂರ್ತಿ. ಅದು ಯಾವಾಗಲೂ ನಿಂದೇ. ಈ ಹೃದಯದ ಗೆಳತಿ ನೀನು’ ಭರವಸೆ ನೀಡಿದ.

ಭರವಸೆಯ ಕೋಲ್ಮಿಂಚು ಹಿಡಿದು ಸಮಾಧಾನಿಸಿಕೊಂಡಳು. ನಗು ಬಾರದಿದ್ದರೂ ಪೇಲವವಾಗಿ ನಕ್ಕಳು.

‘ಹೀಗೆ ನಗಬೇಡ, ಹೀಗೆ ನಕ್ಕು ನನ್ನೆದೆಗೆ ಇರಿಯಬೇಡ. ಸಂತೋಷವಾಗಿ ನಗು, ಆ ನಗು ನನಗೆ ಸ್ಫೂರ್ತಿ ನೀಡಬೇಕು. ಮೊದಲು ಸುದರ್ಶನ್‌ಗೆ ಫೋನ್ ಮಾಡು, ಸಿಹಿ ಸುದ್ದಿ ತಿಳಿಸು ಅವನಿಗೆ. ನೀವಿಬ್ಬರೂ ಸಂತೋಷವಾಗಿ ನೂರು ಕಾಲ ಬದುಕಬೇಕು’- ಹೃದಯ ತುಂಬಿ ಹರಸಿದ.

ನೋವಿನಲ್ಲೂ ನಕ್ಕಳು. ಆ ನಗು ಜೀವಂತವಾಗಿರಲಿಲ್ಲ. ಅದನ್ನು ಮನಗಂಡ ನಿವಾಸ್ ಕಾಲ ಎಲ್ಲವನ್ನೂ ಮರೆಸುತ್ತೆ ಎಂಬ ವೇದಾಂತದ ಮೊರೆ ಹೊಕ್ಕನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪೂರ್ವ ಸಂಧ್ಯಾಚಿತ್ರ
Next post ಮಿಂಚುಳ್ಳಿ ಬೆಳಕಿಂಡಿ – ೪೯

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…