ಅಪೂರ್ವ ಸಂಧ್ಯಾಚಿತ್ರ

ನಾಗರಿಕ ಜೀವನದ ಗರ್ಭದೊಳಗಡೆ ಸಿಲುಕಿ
ಕತ್ತಲೆಯೆ ಬೆಳಕೆನಿಸಿ, ಬೆಳಗು ಬೈಗುಗಳೆಂಬ
ಭೇದ ಬರಿ ನೆನಪಾಗಿ, ಗಾಣದೆತ್ತಿನ ದುಡಿತ
ಹವಣಿಸುವ ಬೇಸರದ ಜೊತೆಗೆ, ನಿತ್ಯವು ಹೊಟ್ಟೆ
ಬಟ್ಟೆಗಳ ಹಂಚಿಕೆಯ ಹೊಂಚಿಕೆಯ ಹುಸಿ ಬಾಳ
ಲಂಚ ಪ್ರಪಂಚದಲಿ ಸತ್ಯನಿಷ್ಠನ ಸಾವು-
ಬದುಕಿನಾ ಧಗೆಯ ಬಿರು ಹೊಯ್ಲಿನಲಿ, ಭಾರತದ
ಯಾವುದೋ ಮೂಲೆಯಲಿ ಹೊತ್ತಿ ಹಬ್ಬಿದ ಮತ-
ದ್ವೇಷದನಿರೀಕ್ಷಿತದ ಕಾಳ್ಕಿಚ್ಚಿನಿಂದೊಗೆದ
ಹೊಗೆಯ ಹಬ್ಬುಗೆಯ ಮಬ್ಬಿನ ನಿರಾಶೆಯ ಸರ್ವ
ಶೂನ್ಯದಲಿ – ಕಂಡಿದ್ದುದಿಲ್ಲೆನಗೆ ಒಮ್ಮೆಯುಂ
ಸಂಜೆವೆಣ್ಣಿನ ರಾಗಪೂರ್ಣ ಮುಖ ಸರಸಿಜವು.
ಇದ್ದಕಿದ್ದಂತೆಯೇ ಕಂಡೆತೆನಗಿಂದು, ಹಾ!
ದೂರ ಪ್ರತೀಚಿ ದಿಙ್ಮಂಡಲದ ರಾಜ್ಯದಲಿ –
ಕೆಂಪು ಕಡುಗೆಂಪು ಕೆಂಗೆಂಪು ಕಗ್ಗೆಂಪು, ಬರಿ
ಕೆಂಪು – ಹೋಲಿಕೆಗಾಗಿ ಕಲ್ಪನೆಯೆ ಕಂಗೆಟ್ಟು
ಬೇಸತ್ತು ಬಸವಳಿದು ಬಿದ್ದು ರಕ್ತವ ಕಾರೆ,
ಒಡನೆಯೇ ಕಲ್ಪನೆಗೆ ಹೊಳೆಯಿತ್ತು – ಆದೊಡೇಂ,
ಹೋಲಿಕೆಯದಲ್ಲ: ಸಂಧ್ಯಾರಮಣಿ ತಲೆಯಲ್ಲಿ
ತಳೆದ ಬಯ್‌ತಲೆಯ ಮಹ ಮಾಣಿಕದ ಕೆಂಬೆಳಕೊ,
ದಿಗ್ವಧುವಿನಧರ ರಾಗದ ಹರಹೊ – ಎಂಬಿವೇ
ಮೊದಲಪ್ಪ ಕಾವ್ಯದುತ್ಪ್ರೇಕ್ಷೆಗಳ ಹೊಸ ರೂಪ
ತಾನಲ್ಲ: ಅಲ್ಲಲ್ಲಿ ಎಲ್ಲೆಲ್ಲು ನಡೆಯುತಿಹ,
ಯುದ್ಧ ಅಂತಃಕಲಹ ಹಗಲುಕೊಲೆ ಮೊದಲಪ್ಪ
ಘಟನೆಗಳ ಘೋರ ವಾಸ್ತವ ವರ್ಣಚಿತ್ರವದು:
ದಿಕ್ಕು ದಿಕ್ಕುಗಳಿಂದ ಕೆನ್ನೀರ ಕಾಲ್ವೆಗಳು
ಹರಿದು ಬಂದಿಲ್ಲಿ ಹೆಮ್ಮಡುವಾಗಿ ಕೂಡಿಕೊಳೆ,
ಕೆನ್ನೀರ ಕೋಡಿಯಲಿ ತೇಲಿಬಂದಟ್ಟೆಗಳು
ಒಟ್ಟೈಸಿ ನಿಂದಿಹವು: ಇದುವೆ ಪಶ್ಚಿಮ ದಿಶಾ
ಪಟದ ಮೇಲಣ ರಕ್ತ ವರ್ಣ ಚಿತ್ರವದು.

ಇರಲಿರಲು, ನೆತ್ತರ ಸರೋವರದ ನೈದಿಲೆಯೊ
ಎಂಬಂತೆ ಮೂಡಿದನು ಬಾಲ ಶಶಿ: ಮೂಡಿ, ತಾನ್
ನಕ್ಕು ನುಡಿದನು ಇಂತು: “ಧೈರ್‍ಯಗೆಡದಿರು ಗೆಳೆಯ:
ನಂಜುನೆತ್ತರು ಹೊರಗೆ ಬಂದಿತೆಂದೆಂದುಕೊಳು;
ಶಾಂತಿ ಮೂಡುವುದು: ಬರವಸೆಯಾಶೆಗಳ ತಾಳು.”
ಬಾಲಚಂದ್ರನ ಕಾಂತಿ ಕಿರಣಗಳು ನಸು ಬೆಳಗಿ
ಕೆಂಬಣ್ಣ ಮಾಸುತಿರೆ, – ‘ಹುಣ್ಣಿಮೆಯು ಬರದಿಹುದೆ?
ಪೂರ್ಣಚಂದ್ರನು ಪೂರ್ಣ ಕಾಂತಿ ಚಂದ್ರಿಕೆಯನ್ನು
ಚೆಲ್ಲಿ ಸೂಸನೆ?’ – ಎಂಬ ಮಾರ್ದನಿಯು ಮನದಲ್ಲಿ
ಮೊರೆಯುತಿರೆ, ಮರೆಯಾಯ್ತಪೂರ್ವ ಸಂಧ್ಯಾಚಿತ್ರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅತ್ತ ದರಿ ಇತ್ತ ಪುಲಿ
Next post ಇಳಾ – ೧೧

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…