ದಣಿದ ದಾರಿ

ದಣಿದ ದಾರಿ

‘ಅಗದೀ ಹರಕತ್ತ ಐತಿ, ನಿಮ್ಮಣ್ಣಗ ಕೇಳಿ ಒಂದೈದು ಸಾವಿರ ಇಸ್ಕೊಂಬಾ’ – ಎಂದು ನನ್ನ ಗಂಡ ತವರಿಗೆ ಕಳಿಸಾಕ ಮೊದಲ ವರಾತ ಹಚ್ಚಿದ್ದರು. ಮತ್ತ ಮತ್ತ ಒತ್ತಾಯಿಸೋ ಗಂಡನ ಹಿಂಥಾ ಮಾತು ಬಿಸೇ ತುಪ್ಪ ಆಗಿತ್ತು. ಅವರ ಹರಕತ್ತು ಏನೂಂತ ನಂಗ ಗೊತ್ತಿಲ್ಲೇನ್?

ನಾನೂ ಮಾತಿಗೆ ಮಾತು ಬೆಳೆಸಿ ‘ಹಿಂದಲ ಸಲ ಕೈಗಡ ಇಸ್ಕೊಂಬುದಿರಾದು ನುಂಗಿ ನೀರಕುಡದ್ರಿ, ಮತ್ತೊಮ್ಮೆ ಕೇಳಾಕ ನನಗ ಮಕ ಇಲ್ಲ. ಅಷ್ಟಕ್ಕೂ ತವರಿನವರು ರೊಕ್ಕದ ಗಿಡಾ ಹಚ್ಚಿಲ್ಲ’ ಅಂತ ಗೊಣಗಾಕಾರ ಮುಂಜಾನಿಯ ಥಂಡ್ಯಾಗೂ ಬೆಂವರಿಬಿಟ್ಟಿದ್ದೆ. ತವರಿನ ಕಡೀಗೆ ನಿಂತ ನನ್ನ ನಿಲುವಿಗೆ ಇರಸು ಮುರಸಾದರೂ ತೋರಗೊಡದಾಂಗ ತಕ್ಷಣಕ್ಕೆ ಸಿಟ್ಟು ಏರಿಸಿಗ್ಯಂಡಿದ್ರು. ‘ಎದುರುವಾದಿ ಮಾಡಿ ನನಗ ಸಿಟ್ಟು ತರಸಬ್ಯಾಡ. ಸುಮ್ಮಕ ಹೇಳಿದಾಂಗ ಕೇಳು’ ಎಂದು ಹುಬ್ಬು ಹಾರಿಸಿದವರು ಬಾಯಿಗೆ ಬಂದಾಂಗ ಬಯ್ದಿದ್ದರು. ಕೇಳಿಯೂ ಕೇಳದಾಂಗ ಮುಸುಮುಸು ಅತ್ತು ಸುಮ್ಮಕಾಗದ್ರಾಗ, ನಮ್ಮವರು ಬೀಡಿಗೆ ಕಡ್ಡಿ ಮುಟ್ಟಿಸಿ, ದಮ್ ಎಳೀತಾ ಹಿತ್ತಲಕ್ಕೆ ಹ್ವಾಗಿದ್ದರು.

ಕ್ಯಾಕರಿಸಿ ಉಗುಳಿ, ನಿರಾಳ ಕಾಲು ಮಡಿದು ಬಂದವರು ಒಮ್ಮಕಲೆ ಕೆರಳಿನಿಂತರು. ‘ಇವತ್ತು ಎರಡರಾಗ ಒಂದಾಗ್ಲಿ, ರೊಕ್ಕಾ ತರಾಕಿಯಲ್ಲ ಅಂದ್ರೆ ನಿನಗ ಈ ಮನ್ಯಾಗ ಪ್ರವೇಶಿಲ್ಲ ನೋಡು. ತವರು ಮನ್ಯಾಗರ ಇರು, ಹಾಳು ಬಾಂವ್ಯಾಗರ ಬೀಳು’ ಎಂದು ಜಾಡು ತಪ್ಪಿಸಿ ನನಗೆ ಹೂಲಿ ಎಬಿಸಿದರು. ಕೆಟ್ಟ ಚಟಕ್ಕೆ ಬಿದ್ದು, ಏಟೊಂದು ಸಣ್ಣತನ ತೋರಸ್ತಾರ ಅಂತ ಬ್ಯಾಸರಾತು. ನನಗೆ ಹಗ್ಗ ಹರಿಯೂದು ಬೇಕಾಗಿರಲಿಲ್ಲ. ಆದರೂ ಸಿಟ್ಟಿಗೆ ಬುಸಗುಡಾ ನನ್ನ ಮಾರಿ ನೋಡಿ, ‘ಹಂಗ್ಯಾಕ ತಿನ್ನೋರಾಂಗ ನೋಡತೀ? ಮಕ್ಕಕ್ಕ ಬಿಟ್ಟನಂದ್ರ ಹಲ್ಲು ಉದುರ್‍ಯಾವು ಬೋಸುಡೀ’ ಎಂದವರು ತುರುಬು ಹಿಡಿದು ಚಂಡಿಗೆ ಗುದ್ದಿ ಬಿಟ್ಟಿದ್ದರು. ಏಕಾ‌ಏಕಿ ನೀಡಿದ ಹೊಡೆತಕ್ಕ ಹೊರಗ ಬರದಾಂಗ ತರಗುಟ್ಟಿ ಹ್ವಾಗಿದ್ದೆ. ಹಿಂದಲಿಂದ ತಲೀಗೆ ಚಕ್ರ ಬಂದಂಗಾಗಿ ಅಲ್ಲೇ ಕುಸಿದುಕುಂತಿದ್ದೆ.

ಹೆತ್ತವರನ್ನ ಕಾಣಾಕ ಹೊಂಟೀನಿ ಅನ್ನೋ ಒಂದು ಖುಷೀನ ಒಳಗಡೀಗೆ ತುಂಬಿಕೊಂಡಿದ್ದ ನನಗ ಚಂಡಿಗೆ ಗುದ್ದಿದಾಗ, ಒಮ್ಮಕಲೇ ಖುಷೀನ ಎತ್ತಿ ಹೊರಗ ಬಿಸಾಕಿದಾಂಗ ಆಗಿತ್ತು.

ಒಳಗ ಹತಾಶೆ, ನೋವು ತುಂಬಿದರೂ ಅವುಡು ಗಚ್ಚಿಕೊಂಡು, ಒಂದೆರಡು ಗುಕ್ಕು ತಂಗಳ ರೊಟ್ಟಿ ಬಾಯಿಗೆ ತುರುಕಿಕೊಂಡಿದ್ದೆ. ಅದು ಗಂಟಲದಾಗ ಇಳೀಲೊಲ್ಲದಾದಾಗ ಆಟೀಟು ಜಮಡಿ ನೀರಿನ ಜತೀಗೆ ನುಂಗಿದ್ದೆ.

ಕೂಸಿನ ಚಚಗ್ಯಂಡು ಹೊಂಟುನಿಂತಾಗ ಹೇಳಿಹೋಗಲೋ, ಹಂಗಽ ಹೋಗಲೋ ಅಂಬ ಚಿಂತಿ ಇಟಗಂತು. ಅದಽ ವ್ಯಾಳ್ಯಾಕ್ಕ ಕರ್ಚೀಪಿನಾಗಿನ ಒಂದೆರಡು ನಾಣ್ಯಗಳು ಕಡಪಾ ಕಲ್ಲಿನ ಮ್ಯಾಲೆ ಝಣ ಝಣ ಕುಣಿದಾಗ, ಗಂಡನ ಗಮನ ಆ ರೊಕ್ಕದ ಮ್ಯಾಲೆ ಗಿರಕಿ ಹೊಡ್ಯಾಕ ಹತ್ತಿತ್ತು. ಖರ್ಚಿಗೆ ರೊಕ್ಕಾ ಬೇಕೇನು ಅಂತ ಕೇಳಬೇಕಾದವರು ‘ನಾ ಹೇಳಿದ್ದು ನೆಪ್ಪೈತಲ್ಲಾ’ ಅಂದಾಗ ಹಾರಾ ಎದೀನ ಹಿಡದಿಡಾಕಾಗದಽ ಬವಳಿ ಬಂದಂಗಾಗಿತ್ತು. ಭಂಡ ಮಾತು ನನ್ನ ತಲೀ ತಿನ್ನಾದರ ನಡುವ ಸಾವರಿಸಿಕೊಂಡು ಪಂಚಮೀ ನಾಳೆ ಅನ್ನಕಾರ ತವರಿಗೆ ಹೊಂಟು ಬಂದೀನಿ.

ಸಣ್ಣಾಕಿದ್ದಾಗ ಕಂಡುಂಡ ಈ ಮಣ್ಣಿನ ಮ್ಯಾಲ ಕಾಲಿಟ್ಟಾಗ, ಊರೆಲ್ಲಾ ಪಾಕದ ವಾಸನೀ ಕಮ್ಮಗ ಹೊಡ್ಯಾಕ ಹತ್ತಿತ್ತು. ಹಳೇ ದ್ಯಾಸ ಧುತ್ತೆಂದು ಕಾಡಿಸಾಕಾರ ಓಣ್ಯಾನ ಹುಡುಗೂರ ‘ಅಕ್ಕ ಬಂದಳು… ಅಕ್ಕ ಬಂದಳು’ ಕೂಗಿಗೆ ಮನೀ ದಂಡಽ ಜಗುಲಿ ಮ್ಯಾಲೆ ನೆರೆದಿತ್ತು. ಹೊಟ್ಟ್ಯಾಗ ಉರಿ ಇಟಗೊಂಡು ಮಾರೀ ಮ್ಯಾಲೆ ಒತ್ತಾಯದ ನಗಿ ನಕ್ಕೋತ ಪಾವಟಿಗೆ ಏರಿದೆ. ಮನೀ ಮಂದೆಲ್ಲಾ ಪ್ರೀತಿಯ ಸೆಲೇನ ಕಣ್ಣಾಗ ತುಂಬಿಕೊಂಡು ಬರಮಾಡಿಕೊಂಡಿದ್ದರು. ನಮ್ಮವ್ವಂತೂ ‘ಐ ನನ್ ಬಂಗಾರ’ ಅಂತಾನ ಕೂಸೀನ ಅವಚಿಕೊಂಡು ಹಲ್ಲಿಲ್ಲದ ಬಾಯಿಲೆ ಮುದ್ದಿಟ್ಟಿದ್ದಳು. ಅಲ್ಲಿದ್ದೋರೆಲ್ಲಾ ಒಮ್ಮೆ ಕೂಸೀನ ಕೈ ಬದಲಿಸಿಕಣಕಾರ ನಾನು ತಲಬಾಗಿಲ ದಾಟಿ ಹಿತ್ತಲಕ್ಕೆ ನಡೆದಿದ್ದೆ.

ಇವರು ದುಡಿದು ಗುಡ್ಡಾ ಹಾಕಿರಾದು ಆಟರಾಗ ಐತಿ. ಒಂಟಿ ಹೆಣ್ಣ ಮಗಳ ಮ್ಯಾಲೆ ಧಮಕೀ ಇಡಾದಾ, ತಮ್ಮ ತೋಳ್ಬಾಲಾನೂ ತೋರಿಸದಾ ಇನ್ನೇನು ಮಾಡ್ಯಾರು? ಹೇಳವರು, ಕೇಳವರು ಯಾರೂ ಇಲ್ಲ. ಅನಕಂಡಿರಬೇಕು. ತವರು ಮನ್ಯಾಗ ನಿಂತು ಹೀಂಗ ಗತ್ತೀಲೆ ಅನಕಂಡರೂ ನಾನು ಭಯಕ್ಕೆ ಬಿದ್ದಿದ್ದು ಖರೆ. ಹಂಗಂತ ಆ ಭಯದಾಗ ಏಟು ದೂರ ಓಡಾಕ ಬಂದೀತು?

ನನ್ನ ಗಂಡ ಅನಕಂಡಷ್ಟು ಸರಳ ಇಲ್ಲ ಅನ್ನೋದು ಯಾವತ್ತೋ ಗೊತ್ತಾಗಿತ್ತು. ಆದರೂ ಗಂಡನ್ನ ಬಿಟ್ಟು, ತವರಿನ ಹಂಗಿನಾಗ ಇರಾಕೂ ನಾ ತಯಾರಿರಲಿಲ್ಲ. ಗಂಡನಿಂದ ಒಂದು ಬೊಗಸೆ ಪ್ರೀತಿ ಬಿಟ್ಟರೆ ಮದವೀ ಆದ ಸುಟು ಯಾವುದಽ ನಿರೀಕ್ಷೆ ಇಟ್ಟಾಕಿಯಲ್ಲ. ಹಂಗಾಗಿ ಹತ್ತಿರ ಕೂಟ ಹನ್ನೊಂದಾಗಿ ಈ ದಾರಿ ಸವೆಸಾಕ ಹೊಂಟೀನಿ.

ಅತ್ತಾಗ ಗಂಡಂದಽ ಒಂದು ಕತೀಯಾದ್ರ, ಈ ತವರಿನ ವ್ಯಥೇನ ಬ್ಯಾರೆ.

ವರ್ಷ ದೀಡ ವರ್ಷಾತು, ಜಿಡ್ಡು ಜಿಡ್ಡಾದ ಮಗ್ಗಗಳು ಮೂಲಿ ಹಿಡದು ಕುಂತಾವ. ಇದ್ದಿದ್ರಾಗ ಒಂದೆರಡು ಚಲೋವು ಜಗ್ಗಲೋ ಬ್ಯಾಡೋ ಜಗ್ಗಾಕ ಹತ್ಯಾವ. ಆ ಮಗ್ಗದಾಗ ನೇಯ್ದದ್ದು ಮೊಮ್ಮಕ್ಕಳ ಉಡದಾರಕೂ ಆಗಬರಾಣಿಲ್ಲ.

ಒಂದ ಕಾಲದಾಗ ಲಡೀ ಸುತ್ತೋರು, ಮಗ್ಗಾ ಎಳಿಯೋರು, ಉಂಡಿ ಹೂಡೋರು, ನೂಲು ಬಿಡಿಸೋರು, ಮನೀಯಲ್ಲಾ ತುಂಬಿ ಕಾಲು ಹಾಕಾಕ ಜಾಗೇವು ಇರತಿರಲಿಲ್ಲ. ಅವರೆಲ್ಲಾ ವಾರದ ಬಟವಾಡೆ ಮಾಡಾಕಾರ ಲೆಕ್ಕ ಇಡಾಕಿ ನಾನು ಆಗಿದ್ದೆ. ನಾ ಏನ್ ಹೇಳತೀನಂದ್ರೂ, ಸಣ್ಣಾಕಿ ಇದ್ದಾಗಿನ ಆ ಖುಷಿ ಈಗ ಬರೂದಿಲ್ಲ. ಈಗಿಗಂತೂ ತವರು ಮನ್ಯಾರು, ಸಾಲದ ಪಟ್ಟಿ ತೀರಸಾದು ಒತ್ತಟ್ಟಿಗಿರಲಿ, ನೇಕಾರಕಿ ಮಾಲು ಕೊಳ್ಳೋರಿಲ್ಲದಾ ಅವರು ಬದುಕೋ ಆಸೀನ ಕಳಕೊಂಡಾರ. ಇದರ ನಡುವ ಬರಗಾಲ ಬಂದು ಬಡತನ ಕಾಡದಿದ್ರೂ, ಮನೀ ಮಂದಿಯ ಕತ್ತರಿಗೈಯಾಗ ರೊಕ್ಕಂತೂ ನಿಲ್ಲಾಂಗಿಲ್ಲ. ಹಂಗಂತ ಅವರಾರೂ ಪಡಷೋಶಿಯಾಗಿರಲಿಲ್ಲ. ಬಂದ ಆಟೀಟು ಫಸಲಿನಾಗ ಹಬ್ಬಾ ಹುಣವೀಲಿ ಬಿಡದಾಂಗ ಹೋಳಗಿ ಉಂಡು ಮಜಾ ಉಡಾಯಿಸತಿದ್ದರು.

ಹೊತ್ತುಂಟ್ಲೆ ಎದ್ದು ತಲೀ ಎರಕೊಂಡು ರೇಷ್ಮೆ ಸೀರೆ ಉಟ್ಟಿದ್ದೆ. ಮಲ್ಲಿಗೆ ಮೊಗ್ಗಿನ ಜಡೀ ಹೆಣೆದಿದ್ದರು. ಹೊಳಿಯೋ ಎಳೆ ಬಿಸಿಲಿನಾಗ ಕಲ್ಲಿನ ನಾಗಪ್ಪಗ ಹಾಲೆರೆಯೋ ಸಂಭ್ರಮದ ನಡುವ ನಾನು ಹೆಜ್ಜೆ ಇಕ್ಕಿದಲ್ಲೆಲ್ಲಾ ಹಿಂಬಾಲ ಬಿದ್ದು ಬರುತ್ತಿದ್ದ ಗಂಡನ ದನೀನ ತುಂಬಿತ್ತು.

ನನ್ನ ಕಿವಿಗೆ ಹಾಕಿ ಕಳಿಸಿದ ಆ ಜೀಂವ ಹಿಂಡೋ ಮಾತುಗಳು ಒಳಗೆಲ್ಲಾ ಕೊರೆಕೊರೆದು ಹದಗೆಡಿಸಾಕ ಹತ್ತಿತ್ತು. ಮತ್ತೊಮ್ಮೆ ಯಾವ ಮಕ ಎತಗೊಂಡು ರೊಕ್ಕ ಕೇಳಲಿ? ಮದುವ್ಯಾಗ ತವರಿನವರು ಹಾಕಿ ಕಳಿಸಿದ್ದ ಜಡೆಬಿಲ್ಲೆ, ಗುಂಡಿನ ಸರ, ವಂಕಿ ಉಂಗುರ, ಬೆಂಡೋಲಿ, ಜುಮ್ಕಿ ಇವ್ಯಾವುವೂ ಈಗ ನಂತಾವ ಇಲ್ಲ. ಕಿವಿಯಾಗ ಗಿಲೀಟಿನ ಓಲೆ ಇಟಗಂಡೀನಿ, ಯಾರರ ಕೇಳಿದರ ನನಗಂತೂ ಅಳು ಬಂದು ಬಿಡತಿತ್ತು. ಇಂಥ ನಿಗಿನಿಗಿಸುವ ಕುಲುಮೆಯಿಂದ ದೂರ ಸರೀಬೇಕನ್ನೊ ಬಯಕೆ ಯಾಕಽ ಬರಾಕ ಹತ್ತೇತಿ.

ಪಂಚಮೀ ತಟಾಯ್ದು ವಾರ ಕಳೆದಿಲ್ಲ. ತಂಬಿಟ್ಟು ಒಂದು ಬಿಟ್ಟು ಇನ್ಯಾವ ಉಂಡಿಗೂ ಉಳದಿರೋ ಮಾತಿರಲಿಲ್ಲ. ಮನೀ ತುಂಬಾ ಮಕ್ಕಳು, ಮರಿಗಳ ಚಿನ್ನಾಟದೊಳಗ ನಮ್ಮವ್ವಗಂತೂ ಕುಂಡಿ ಕೆರಕಣಾಕೂ ಪುರಸತ್ತಿರಲಿಲ್ಲ.

ಎರಡು ಮಳಿಗಾಲ ಕೈಕೊಟ್ಟಿದ್ದವು. ಈ ಮುಂಗಾರೂ ಹೋತು ಅನ್ನದ್ರಾಗ ಅದೇನೋ ಸೈಕ್ಲೋನು ಅಂತಾರಲ್ಲ, ಅದರ ವಾಸ್ತೆ ಬೆಳತನಕ ಹಸೆಗೆ ಹಿಡಿದ ಹೇಲಿನಂಗ ಜಿಟಿ ಜಿಟಿ ಹತ್ತಿದ ಮಳೆ ಇನ್ನಾ ಬಿಡಾ ಲಕ್ಷಣಾ ಕಾಣವಲ್ದು.

ಹತ್ತು ಗಂಟೆ ಕಳದಿರಬೇಕು. ಮಾಡ ಮುಸುಕಿದ ಮನೀ ಹಿಂದಲ ಬೇವಿನ ಕಟ್ಟಾಗ ಮೊಣಕಾಲ ಸಂದಿಗೆ ಮಖ ಹುದಿಗಿಸಿ ಕುಂತಿದ್ದೆ. ಮ್ಯಾಗ ಕಾಗಿ ಕ್ರಾವ್ ಕ್ರಾವ್ ಅಂತಿತ್ತು. ಥಂಡಿ ಗಾಳಿಗೆ ಮೈ ಒಡ್ಡಿ ಕುಂತರೂ, ಮನೀಂದ ಹೊರಗಾಕೋ ಭಯದ ದಳ್ಳುರಿ ಎದಿಯಾಗ ಕೆನ್ನಾಲಗಿ ಚಾಚಿ ಕುಂತು ಚಡಪಡಕಿ ಹಚ್ಚಿತ್ತು. ಅವ್ವ ಬಾಜೂ ಬಂದು ಕುಂತಿರಾದೂ ನನ್ನ ಅರಿವಿಗೆ ಬಂದಿರಲಿಲ್ಲ. ಮೆಲ್ಲಕ ನನ್ನ ತಲಿ ಸವರಿದಾಗ ಬೆಚ್ಚಿ ಬಿದ್ದಿದ್ದೆ. ಅವ್ವ ‘ಹಂಗ್ಯಾಕ ಸಪ್ಪಗದೀಯ ತಂಗಿ?’ ಅಂದ್ಲು.

ಹೌದು. ಪಾಲಿಗೆ ಬಂದದ್ದು ಪಂಚಾಮೃತ ಅನಕೊಂಡಿದ್ದಕ್ಕ ನಾನು ಹೀಂಗ ಸಪ್ಪಗ ಕುಂದ್ರ ಪಾಳಿ ಬಂದಿರಾದು. ನಾನು ಬಂದೀನಿ ಅಂದ್ರ ಜಮಕಾಯಿಸೋ ಗೆಳತೇರ ಜತೀಗೆ ಪಂಟು ಹೊಡಕಂತ ಇರೋ ಪರೀನ ಬ್ಯಾರೆ ಇತ್ತು. ಈಗೀಗ ಅವ್ಯಾವುವೂ ಬೇಕಿಲ್ಲಲ್ಲ? ನಾನಾತು, ನನ್ನ ವ್ಯಸನಾತು ಅನಕೊಂಡು ಸುಮ್ಮಕ ಕುಂತ್ರೂ ಒಳಗಿನ ಚಿಂತೀ ಕಣ್ಣಾಗ ನೀರು ಉಕ್ಕಸಿತ್ತು.

ಗಂಡನ ಕೆಟ್ಟ ಚಾಳಿ ಈ ಗಳಿಗ್ಗೂ ಕಣ್ಣಿಗೆ ಕಟ್ಟಿದಾಂಗೈತಿ. ಆತ ಕೊಟ್ಟ ಹಿಂಸೇನ ಹಡದವ್ವಗೂ ಹೇಳಲಾರದ ಸ್ಥಿತೀನ ನಾನು ತಂದಕೊಂಡಿರಾದು. ನೋವನ್ನ ಹಂಚಿಕೊಳ್ಳದ ಮನಸ್ಸು ಹಿಡಿಯಾಗುತ್ತಿತ್ತು. ನಂಬಿದ ಗಂಡನೇ ನನಗೆ ಎದುರು ನಿಂತಿರಾದಕ್ಕೆ ಮಾತು ಮೌನವಾಗಿ, ಮೌನದ ಕುದಿ ಹೆಚ್ಚಾಗುತ್ತಿತ್ತು. ಅವ್ವ ಮತ್ತೊಮ್ಮೆ ಕೇಳ್ಯಾಳು ಅಂತ ಎದ್ದು ಒಳಗಡೀಗೆ ಹ್ವಾದೆ.

ರಾತ್ರಿ ಮಲಗಿದಾಗ ಅವ್ವನ ಕೂಟ ಮಾತು ತಗದಿದ್ದೆ. ‘ಬಂದಾಗಿನಿಂದ ನೋಡಾಕ ಹತ್ತೀನಿ, ಯಾಕಽ ಮಾರಿ ತಪ್ಪಿಸಿ ಅಡ್ಡಾಡಕ ಹತ್ತೀದಿ. ಈಗ ನಿಚ್ಚಳಾತು ನೋಡು…’ ಅಂದಾಕಿ ಮುಂದುವರಿದು, ‘ನಿಮ್ಮಣ್ಣಂತಲ್ಲಿ ರೊಕ್ಕಿಲ್ಲ ಬಿಡು. ತಲೀಗಿದ್ರ ಕಾಲಿಗಿಲ್ಲ, ಕಾಲಿಗಿದ್ರ ತಲೀಗಿಲ್ಲದ ಬದುಕು ಆತಂದಾಗೇದ.’ ಅಂದು ಮಗ ಆಡಬಹುದಾದ ಮಾತನ್ನ ತಾನು ಆಡಿದಳು. ‘ನಿನಗ ಕೊಟ್ರ ಆತ ಚಿಪ್ಪು ಹಿಡಿದು ಹೊಂಡಬೇಕಾಗ್ತದ. ನಿನ್ನ ಮದುವಿಗೆ ಮಾಡಿದ ಸಾಲಾನ ಇನ್ನೂ ಬಗಿಹರಿದಿಲ್ಲ. ಈಗ್ಯಾಕ ಆ ಮಾತು ಹೋಗ-ಮುಂದ ನೋಡಾನು. ಈಗನಕ ಸುಮ್ಮಕ ಮಕ್ಕ’ ಅಂತ ಮಾತು ಮುರಿದಾಕಿಗೆ ಮಗಳ ನಿದ್ದೆ ಕೆಡಿಸಿದ್ದು ಅರಿವಿಗೆ ಬಂದಿರಲಿಲ್ಲಿ. ನಾನು ಹಿಡಿದಿಡಿದು ಮಾತಾಡಿದರೂ ಸಂಶೇ ಪಡಾ ಕಾರಣ ಇರಲಿಲ್ಲ. ನನ್ನ ಗಂಡನ ಘನಂದಾರಿ ಕೆಲಸಕ್ಕೆ ರೊಕ್ಕದ ಜರೂರಿರೋದನ್ನ ಯಾವ ಬಾಯಿ ತಗದು ಹೇಳಲಿ? ದೊಡ್ಡದೊಂದು ಉಸುರು ಎಳಕೊಂಡ ನನ್ನ ತೊಳಲಾಟ ಹಗಲಾಗಿದ್ರೆ ಗುರುತಿಸೋಳು. ಕತ್ತಲದಾಗ ಏನೂ ಆಗಿಲ್ಲ ಅನ್ನೋಹಾಂಗ ಕಿಬ್ಬದಿಯ ಕೀಲು ನೋವಿಗೆ ಮುಲುಗುತ್ತಾ ನಿದ್ದಿ ಹೋಗಿದ್ದಳು.

ಇತ್ಲಾಗ ತವರುಮನಿ ಮರ್ಯಾದಿ ಕಾಯಲೋ, ಅತ್ತಾಗ, ಗಂಡನ ಮಾತು ನಡೆಸಲೋ ಗೊತ್ತಾಗದಾ ಇಕ್ಕಟ್ಟಿನಾಗ ಸಿಕ್ಕೊಂಡೆ. ಎಂಥಾ ಪರಿಕ್ಷಾ ಒಡ್ಡಿದ್ಯೋ ಯಪ್ಪಾ ನೀನು? ಹೀಂಗ ಕಾಡಾದರ ಬದಲು ಲಗೂನ ನಿನ್ನ ಪಾದ ಸೇರಿಸ್ಕೋ ಎಂದದ್ದು ಸಶಬ್ದ ಆಗದ್ಽ. ದುರ್ಬಲ ನಿಟ್ಟುಸಿರೊಂದು ಹೊರಗೆ ಬಂದಿತ್ತು. ಹಿಂದಽ ಬಾಯಿಗೆ ಸೆರಗು ಹಚ್ಚಿ ಬಿಕ್ಕಿ ಬಿಕ್ಕಿ ಅಳಾಕಹತ್ತಿದ್ದೆ.

ರಾತ್ರೆಲ್ಲಾ ಮನಸ್ಸು ಭಾರ ಆಗಿತ್ತು. ಗುಂಗಾಡು ಬೇರೆ ಕಾಡಸ್ತಿತ್ತು. ಆಗಾಗ ಉಸಿರುಗಟ್ಟಿ ಬಾಯಾನ ಉಸಿರಾಟಾನೂ ನೆಮ್ಮದಿ ಕೊಟ್ಟಿರಲಿಲ್ಲ.

ದೂರದ ಬಾನಿನಾಗ ಚುಕ್ಕಿಗಳು ಮಿನಗಲೋ ಬ್ಯಾಡೋ ಮಿನುಗಾಕ ಹತ್ತಿದ್ವು, ನಾನು ಮಕಕ್ಕ ನೀರು ಹಾಕ್ಕೊಂಡು ಬಂದು ನಿಂತ ಮೆಟ್ಟಿನಾಗ ನನ್ನನ್ನ ಕಳಿಸಿಕೊಡಿ ಅಂತ ದುಂಬಾಲು ಬಿದ್ದೆ. ಮುಂಜಾನಿಯ ಸಕ್ಕರಿ ನಿದ್ಯಾಗಿದ್ದ ಮನೀಗ ಮನೀನ ಸಿಡಿಲು ಬಡಿದಾಂಗ ತತ್ತರಿಸಿತು. ಹೀಂಗ್ಯಾಕವ್ವ? ಯಾರೇನಂದ್ರು? ಅಂತ ಬಡಿಬಡಿಸಾಕಾರ ಮಕ ತಿರುಗಿಸಿ ಸರಬರ ಸಿಂಗಳಾ ಒರಸಿಕೊಂಡ ತವರು ಮನಿಯ ಇಂಚಿಂಚೂ ನಾನು ಕಳೆದ ಕ್ಷಣಗಳನ್ನು ನೆನಪಿಸಿ ನನಗ ಕುಂತಲ್ಲಿ ಕೂರಗೊಟ್ಟಿರಲಿಲ್ಲ. ನನಗಂಡ ಸುರಳೀತ ಇದ್ದಿದ್ರ ಈಟೆಲ್ಲಾ ಸಂಕಟ ಪಡಬೇಕಿತ್ತಾ?…

ಇವತ್ತು ಮಂಗಳವಾರ, ಮಗಳನ್ನ ಕಳಿಸಾಕ ಬರೂದಿಲ್ಲ. ನಾಳೀಕ ಹೋಗವಲ್ಯಾಕ ಅಂದರು.. ಉಡಿಯಕ್ಕಿ ತುಂಬಿ ಹರಸಿದಾಗ ಜೊತಿಗೆ ರೊಕ್ಕಾ ಇಟ್ಟಾರೇನೋ ಅಂತ ಭ್ರಮಿಸಿ ಒಮ್ಮೆ ಮನ ಕುಣಿದಾಡಿತು. ಬರೀ ಪಾನಪಟ್ಟಿ ನೋಡಿದ ಮಕ ಸಣ್ಣದಾಗಿತ್ತು. ತವರಿನವರನ್ನ ಸೆರಗೊಡ್ಡಿ ಅಂಗಲಾಚದ ಸ್ಥಿತಿಗೆ ನನ್ನನ್ನ ನಾನಽ ಹಳಿದುಕೊಂಡೆ. ಬಾಯಿ ಸತ್ತಾಕಿಗೆ ಯಾರರ ದನಿ ಕೊಡಾದೂ ದೂರದ ಮಾತಾಗಿತ್ತು.

ಮರುದಿನ ಲಗೂನ ಎದ್ದರೂ ನಿಧಾನ ಇರಲಿಲ್ಲ. ತಂಬಗಿ ತಗೊಂಡು ಬಯಲ ಕಡೀಗೆ ಹ್ವಾಗಿ ಬಂದ ಅವ್ವಗ ನಾನಽ ನೀರ, ಹಣಿಸಿ ‘ಹೊಸಲ ಒಳಗೆ ಬಾರಬೇ, ಅಡ್ಡ ಬೀಳತೀನಿ, ಆಶೀರ್ವಾದ ಮಾಡು ಅಂತ ಅವಸರಿಸಿದೆ. ಮೊದಲು ಕೂಸೀನ ಅಡ್ಡ ಬೀಳಿಸಿ ನಾನೂ ಬಿದ್ದೆ. ಆಮ್ಯಾಲೆ ದೇವರ ಪಟಕ್ಕ ಸಣ್‌ ಮಾಡಿದೆ. ರಾತ್ರೆಲ್ಲಾ ಅತ್ತಿದ್ದಕ್ಕೊ ನೆಗಡಿಯಾಗಿದ್ದಕ್ಕೂ ಮೂಗಿನ ಹೊಳ್ಳಿ ಕೆಪೋಗಾಗಿತ್ತು.

ಅವ್ವ ನನ್ನ ತಲೀ ಸವರಿದಾಗ ಕಣ್ಣಂಚು ನೀರಾಡಿತು. ‘ರೊಕ್ಕಕ್ಕ ಹೆಂಗ ಮಾಡತೀ ಮತ್ತ’ ಅಂತ ಕೇಳಿದ್ಲು. ‘ಅಣ್ಣಾ ಕೊಡೋ ರೊಕ್ಕ ಯಾವ ತೂತು ಮುಚ್ಚಾಕ ಬಂದೀತು? ಬ್ಯಾಡ ಬುಡು’ ಅಂದು ಚಂಡು ತಳಗ ಹಾಕಿದೆ. ಮಾತಿನ ಒಳವು ಆಕೀ ತಲ್ಯಾಗ ಹೋದಾಂಗ ಕಾಣಲಿಲ್ಲ.

ಚಕ್ಕಡಿ ಏರಿದಾಗ ಯಾಕಽ ಏನಽ ಕಳಕಂಡೀನಿ ಅನಿಸಾಕ ಹತ್ತಿತು. ಹೀಂಗ ಅನಿಸಿದ್ದು ಇದಽ ಮೊದಲಲ್ಲ. ಮದುವಿಯಾದ ಮರುದಿನಾನ ನನ್ನದೆಲ್ಲಾನೂ ಯಾರಿಗೋ ಒತ್ತಿಟ್ಟು, ಬರಿಗೈಯಾದ ಭಾವನೀ ಮೂಡಿತ್ತು.

ಬಂಡಿ ಜಾಡಿನಾಗ ಮುಂದಕ್ಕೆ ಹೋದಾಂಗೆಲ್ಲಾ ಮಂಜು ಮುಸುಕಿದ ದಾರಿ ಮಬ್ಬಾಗಿತ್ತು. ತಿರುವಿನಾಗ ಸಿಕ್ಕ ಗುಡಿಸಲುಗಳೂ, ಗೆಳತೇರ ಮೇಲ್ಮುದ್ದಿ ಮನಿಗಳೂ, ಜಾಲಿ ಮಠಗಳಲ್ಲದಾ ಅವುಗಳ ಕೊಂಬಿ ಮ್ಯಾಲ ಪತರಗುಡೋ ಹಕ್ಕಿಗಳು ಇವ್ಯಾವುವೂ ನನಗೆ ಮುದ ನೀಡಲಿಲ್ಲ. ಇಲ್ಲೀತನ ಹಾದು ಬಂದ ಹಾದಿಯ ದಡಕಿನ ನಡುವ ಬಾಲ್ಯದ ಕನಸಿನ ದಿನಾನ ಮತ್ತೆ ನೆನೆದು ಕಸಿವಿಸಿ ಕಾಣಿಸಿತು.

ವಯಸ್ಸಿನ ಮದದಿಂದ ಹೆಂಗಸರನ್ನ ಆಳುವ ಅವಸರದಾಗ ಸ್ವಾಭಿಮಾನ ಬಲಿಕೊಟ್ಟ ಗಂಡನ ಹೆಜ್ಜೀ ಅರಿವು ನನಗೈತಿ. ಹಣದ ದಾಹದ ಈ ಮೂಲ ನಿಲ್ಲಿಸಲಾಗದಽ ಸೋತು ಸುಣ್ಣ ಆಗೀನಿ. ಈ ವಿಚಾರ ಮೂಡಿದಾಗೆಲ್ಲಾ ಹಿಂಸ ಆಕ್ಕಿತ್ತು. ಒಡಲು ಮತ್ತ ಮತ್ತ ಧಗಧಗಿಸಿ ಸುಡತಿತ್ತು. ಬರೀ ಕಳಿಯೂ ಲೆಕ್ಕ ಕಲಿತಿದ್ದ ಗಂಡನ ಮ್ಯಾಲಿನ ಸಿಟ್ಟು ಬಾಳ ಹೊತ್ತು ನಿಲ್ಲತಿರಲಿಲ್ಲ. ಗಂಡನ್ನ ದ್ವೇಷಿಸಾಕೂ ಆಗದಽ, ಇತ್ತಾಗ ನನ್ನ ಬದುಕಿನ ದಾರಿ ಹುಡುಕಾಕೂ ಆಗದಽ ಒಳಗಽ ಗುದಮುರಗಿ ಇಡತಿತ್ತು. ಇಕ್ಕಟ್ಟಿನಾಗ ನನ್ನನ್ನ ನಾನಾಽ ಯಾಕ ಶಿಕ್ಷಿಸಿಕೊಳ್ಳಬಾರದು ಎಂದು ಕೇಳಿಕೊಂಡ ಪ್ರಶ್ನೇಕ್ಕ ಯಾವ ಉತ್ತರಾ ಸಿಕ್ಕರೂ ನನ್ನ ಮಟ್ಟಿಗೆ ತಪ್ಪಿರಲಿಲ್ಲ.

ಹಾಳು ಸುರಿಯೋ ನಮ್ಮೋಣಿಗೆ ಹೆಜ್ಜೀ ಊರತಿದ್ದಾಂಗ ಬೆನ್ನ ಕೋಲಾಗ ಸಾಲುಗಟ್ಟಿದ ಬೆವರಿನ ಹನಿಗಳು ನನ್ನ ತೊಡೆಗುಳಾಗ ನಡುಕ ಸೇರಕ್ಯಣಾಕ ಕಾರಣ ಆತು. ಹೊಸಲ ಒಳಗ ಕಾಲಿಡತಾನಽ ಮಳೆ ನಿಂತ ಮ್ಯಾಲಿನ ಮರದ ತಳಗ ನಿಂತಾಂಗ ಆಗಿತ್ತು. ಆ ಮುಜುಗರಕ್ಕೆ ನಾಚಕೀ ಮುಳ್ಳಿನಾಂಗ ಮುದುಡಿದ ನನ್ನ ಜೀಂವ, ಮಂದಿ ರೊಕ್ಕಕ್ಕ ಬಾಯಿ ತೆರೆದು ನಿಂತ ಗಂಡನ ಕಡೀಗೆ ಕಣ್ಣು ಹಾಯಿಸಾಕ ಹೇಸಗಿ ಪಟ್ಟಿತು. ನಮ್ಮಿಬ್ಬರ ನಡುವ ರೊಕ್ಕದ ನೆರಳಷ್ಟಽ ತೂಗಾಡಾಕ ಹತ್ತಿ ಮಾತಿಗಲ್ಲಿ ಸದು ಇರಲಿಲ್ಲ.

ನಮ್ಮವರು ನನ್ನ ಕಡೀಗೆ ಹೆಬ್ಬೆರಳು ಚಿಮ್ಮಿಸಿ ಸನ್ನಿಲೆ ಪ್ರಶ್ನಿಸಿದರು. ಅಳುಕಿನಿಂದ ಉಗುಳು ನುಂಗಿ

‘ನಾನು ಬದುಕಿರಬೇಕಂದ್ರ ಇಂಥ ಕುತ್ತಿನ ವಿಚಾರ ಇನ್ನ ಮ್ಯಾಲ ಎತ್ತಬಾರದು’ ಎಂದು ಭಾರ ತುಂಬಿದ ಅಗದೀ ತಣ್ಣಗಿನ ದನಿಯಾಗ ಹೇಳಾಕಾರ ದನಿ ನಡುಗಾಕಹತ್ತಿತ್ತು. ಗಂಡಗ ಆಗ ಸುಡೋ ನೀರನ್ನ ಮಕಕ್ಕೆ ಉಗ್ಗಿದಾಂಗ ಆಗಿರಬೇಕು. ನಾನು ತರೋ ಹಡಬಿಟ್ಟಿ ರೊಕ್ಕದ ಮ್ಯಾಲ ಕನಸುಗಳನ್ನ ಅರಸುತ್ತಿದ್ದಾತಗ ನಿರಾಸೆ ಹೆಪ್ಪುಗಟ್ಟಿತು…

‘ನನ್ನ ಪರದಾಟ ನಿನಗ ಹೆಂಗ ಅರ್ಥ ಆದೀತು? ನನ್ನ ಮಾತಂದ್ರ ನಿನಗೆ ಖಬರ ಇದ್ದಾಂಗಿಲ್ಲಲ್ಲ?’… ಅಂದವರ ದನಿಯಾಗ ವಿಷ ತುಂಬಿತ್ತು. ‘ಅನುವು ಆಪತ್ತಿಗೂ ಆಗಲಿಲ್ಲಾಂದ್ರ ಈ ಸಂಬಂಧ ಎದಕ್ಕೆ?’ ಎಂದು ವಲ್ಲಿ ಕೊಡವಿ ಕೇಳಿದರು.

ಮನಸ್ಸು ಕಲ್ಲು ಮಾಡಿಕೊಂಡು ಬಾಯಿಗೆ ಸೆರಗು ಹಚ್ಚಿ ನಿಂತಿದ್ದೆ… ವಿಪರೀತ ಆಯಾಸ ಕಾಣಿಸಿಕೊಂಡು, ಅಳಲಿಗೆ ನಿತ್ರಾಣ ಅನಿಸಿತು. ಕೂಸೀನ ತೊಡಿ ಮ್ಯಾಲ ಇಟಗಂಡು, ಗೆದ್ದಲಿಡಿದ ಹಜಾರದ ಕಂಬಕ್ಕ ಆತು ಕುಂತೆ.

‘ನನ್ನೆಲ್ಲಾ ರೊಕ್ಕದ ಮುಗ್ಗಟ್ಟಿಗೆ ನೀನ್ಽ ಕಾರಣ. ನನ್ನ ಮರ್ಜಿ ಹಿಡಿದು ಹ್ವಾದರ ಬವಣೆ ಸಲೀಸಾಗಿ ಬಗೆಹರೀತತಿ, ಇಲ್ಲಾಂದ್ರ ಈ ಸಂಬಂಧ ಇವತ್ತಿಗೇ ಕೊನಿ’ ಎಂದವರು ಲುಂಗಿ ಎತ್ತಿ ಕಟ್ಟಿ ಹೊಂಟುಹ್ವಾದರು.

ಗಂಡನ ಒಳಗಿದ್ದ ಹಿಂಸೆಯು ಅಪರಾಧ ಅಂಬಾ ಯೋಚನೀ ನನಗೆ ನಿಲುಕದ್ದು. ಗಂಡನೇ ದೇವರೆಂಬೋ ಸಾಮಾಜಿಕ ನೆಲೆ ನನ್ನನ್ನ ಎಡವುಹಾಂಗ ಮಾಡೇದ. ಎಂಟೆಂಟು ದಿನಕ್ಕೊಮ್ಮೆ ಒಣನ್ಯಾಯಾ ತಗದ್ರೂ, ತಾಳಿ ಗಟ್ಟಿ ಇರಬೇಕು ಅಂಬೋ ಹುಂಬತನದಾಗ ಗಂಡನ ತಪ್ಪನ್ನ ಹೊಟ್ಟ್ಯಾಗ ಹಾಕ್ಕಂಡಿದ್ದಽ ತಪ್ಪಾಗೇತಿ.

ರಾತ್ರಿಯ ಊಟ ಒತ್ತಟ್ಟಿಗಿರಲಿ; ಒಂದು ಲೋಟ ನೀರು ದೇಕಿಲೆ ಕುಡದಿರಲಿಲ್ಲ. ಕೂಸು ಹಾಲು ಒಸರದ ಮಲಿ ಜಮಡಿ ಮಲಗಿತ್ತು. ಹಂಗಽ ಕಡಪಾದ ಮ್ಯಾಲೆ ಮುದುಡಿ ಅಡ್ಡ ಆಗಿದ್ದೆ. ನಿದ್ದಿ ಹಾದಿರಲಿಲ್ಲ.

ಇದ್ದಕ್ಕಿದ್ದಾಂಗ ಮೆಟ್ಟಿ ಬಿದ್ದಾಗ ಸರಹೊತ್ತಾಗಿರಬೇಕು. ಬಿಟ್ಟ ಕಣ್ಣು ಬಿಟ್ಟಂತೆ
‘ಇದೇನು ಹಾಳ ಕನಸು ಬಿತ್ತಽ ನಮ್ಮವ್ವಾ’ ಅನಕೊಂಡು ಕಣ್ಣು ಉಜ್ಜಿಕ್ಯಂಡೆ. ಗೊಂದಲಕ್ಕ ಹೆಪ್ಪಿಟ್ಟ ಕತ್ತಲ ಇನ್ನೀಟು ಹೆದರಸ್ತು. ಎಡಮಗ್ಗಲಾಗ ಏಳಾಕಾರ ಬಗಲಾಗ ಮಲಗಿದ ಕೂಸು ಮಗ್ಗಲಾ ಬದಲಸ್ತು.

ಕಳ್ಳಬಳ್ಳಿ ಅಂಬೋ ಕಣ್ಣಿ ಕಡಕಣ ನಿರ್ಧಾರ ನೆನಪಿನಾಗ ಹಾದು ಕರುಳು ಚಳಕ್ ಅಂತು. ಇಡೀ ಮೈಯೆಂಬೋ ಮೈ ನಡುಗಿ, ನೀರೊಡೀತು. ಇಂಥಾ ಹೊತ್ನಾಗ ಮನಸಿಗಾದರೂ ನಿಧಾನ ಹಂಗಾದೀತು? ನಿಟ್ಟುಸಿರಿನ ನಡುವ ತುಂಬಿ ನಿಂತ ಕಣ್ಣಿರು ಕಪಾಲಕ್ಕ ಇಳಿಯಾಕಾರ ನಡಗೋ ಬಲಗೈ ಕೂಸಿನ ತಲೀ ಸವರಾಕ ಹತ್ತಿತ್ತು.

ಗಂಟಲು ಒಣಗಿ ನಾಲಗಿ ಸೇದಿ ಹೋಗಿತ್ತು. ಚರಗೀ ತುಂಬಾ ನೀರು ಕುಡಿದರೂ ದಾಹ ನಿಲ್ಲವಲ್ದು, ಉಡಿಯಾಗಿನ ಉರಿ ತಡೀಲಾರದು ಓಡಿ ಬಂದು ಕೂಸಿನ ಎತ್ತಿ ಎದಿಗೆ ಅವಚಿಕೊಂಡೆ.

ಗಂಡನ ಮೊಂಡತನ ಒಂದಽ ಸಂವ ಚಿಂತೀಗೆ ಹಚ್ಚಿ ಮನಸ್ಸು ಚಿನ್ನಾಚಿದ್ರಿ ಆಗಿತ್ತು. ಬದುಕಿನ ನೋವು ಅಷ್ಟಷ್ಟಽ ತಿಂತಾ ಹೋದಾಂಗೆಲ್ಲಾ ನನ್ನ ಮುಂದಕ ದೊಡ್ಡದೊಂದು ಪೂಜಿ ಮನೆ ಮಾಡಿತು. ಹತಾಶೆನ ಹದ್ದುಬಸ್ತಿನಾಗ ಇಟಗಣಾದು ತ್ರಾಸಾತು. ಈಟ ದಿನ ಜೀವಂತ ಇದ್ದೂ ಹೌದು ಅನಿಸಿಗ್ಯಂಡಿಲ್ಲ. ಹೆಣ್ಣಾಗಿ ನನ್ನ ಬವಣೆ ಸಾಕು, ದಿನಾ ಸುಡೋ ಅಡಾವುಡಿ ಬದುಕಿಗಿಂತ ನಿರಾಳ ಸಾವು ಚಂದ ಅನಿಸಿತು.

ತತ್ತೇರಿ! ಗಂಡನ ಒಲವು ದಕ್ಕಲಿಲ್ಲದ್ದಕ್ಕೆ ದೆವ್ವ ಹೊಕ್ಕಂಗ ಇಂದ್ಯಾಕ ಹೀಂಗ ಬರಬಾರದ ವಿಚಾರ ಬಂದು ಕಾಡಾಕ ಹತ್ತೇತಿ? ಹಂಗೊಮ್ಮೆ ನಾ ಸತ್ತರ ನನ್ನ ಕೂಸು ಅನಾಥ ಆಗದಾಂಗ ಆ ದೇವರಽ ಕಾಪಾಡಬೇಕು. ನಮಗ ಹೊರತಾದ ಬದುಕು ಅದರ ಅಪ್ಪಂದಾಗೇದ. ನನ್ನಲ್ಲಿಲ್ಲದ್ದು ಮಂದೀ ತಾವ ಅದೇನು ಕಂಡಿದ್ದಾರು? ಇವತ್ತು ರೊಕ್ಕಕ್ಕ ಪೀಡಿಸಂವರು, ನಾಳೀಕ ನನ್ನನ್ನ ಮಾರಾಕೂ ಹೇಂಸವರಲ್ಲ. ಹೀಂಗ ನನಗ ಕಾಡಸಾ ಹ್ಯಾಂಗ ಯಾಕ ತೊಟ್ಟಿದ್ದಾರು?

ಈಗ ನನ್ನವರು ವಿವೇಕ ಕಳಕಂಡಿರಾದು ಖರೆ. ಇಂದಲ್ಲ ನಾಳೆ ಸರಿ ಹೋದಾರು, ತಮ್ಮ ತಪ್ಪನ್ನು ತಿದ್ದಿಕೊಂಡು ಚಂದನ ಬಾಳುವೆ ನಡೆಸ್ಯಾರು ಅಂತ ಕಾದು ಕಾದು ದಣದೀನಿ, ಯಾರೂ ಬಳ್ಳು ತೋರಿಸದಾಂಗ, ಒಂದು ಹದಕ್ಕ ಬರೂತನ ಎಚ್ಚರದಾಗಿದ್ದು ಮುಂದಲ ದಾರಿ ನನಗಾಗಿ, ನನ್ನ ಕೂಸಿಗಾಗಿ ಯಾವತ್ತೂ ತುಳೀಬೇಕು ಅಂಬ ಛಲ ಮೂಡಿತು.
* * *

ನನ್ನ ಬದುಕಿನ ಬವಣೆಯ ನಡುವ ನಾ ಅನಕೊಂಡಿದ್ದಽ ಒಂದು. ಆದದ್ದಽ ಒಂದು…

ನಾನು ‘ಆತ್ಮಹತ್ಯೆ’ ಮಾಡಿಕೊಂಡಿರೋ ಸುದ್ದಿ ಬಾಯಿಂದ ಬಾಯಿಗೆ ಮಿಂಚಿನಾಂಗ ಹರಡಿತ್ತು. ತವರಿನವರು ಓಡೋಡಿ ಬಂದು, ಹಳೆ ಕವುದೀಲಿ ಮುಚ್ಚಿದ್ದ ನನ್ನ ಹೆಣದ ಮ್ಯಾಲ ಬಿದ್ದು ಹೊಯ್ಕ್ಯಣಕಾರ, ಅಲ್ಲೆಲ್ಲಾ ಕರುಳು ಹಿಂಡೋ ಸಾವಿನ ಸೂತಕ ಕಳೆಕಟ್ಟಿತ್ತು.

ಸುತ್ತಲೂ ನಿಂತ ಉಪ್ಪರಸಲು ಗೋಡೆ, ಆ ಗೋಡೆ ಮ್ಯಾಲಿನ ಮೊಳೆಗೆ ಸಿಗೇ ಬಡಿದ ದೇವರ ಪಟ, ಬಗಲಾಗ ಬಿದ್ದಿದ್ದ ಖಾಲಿ ಬಾಟಲಿ ಇವೆಲ್ಲ ಜೀವನ ಒಡ್ಡಿದ ಸವಾಲಿಗೆ ನಾನು ಹೆದರಿ ಓಡಿ ಹೋಗಿದ್ದನ್ನು ಸಾಕ್ಷೀಕರಿಸಾಕ ಸಜ್ಜಾಗಿದ್ದವು.

ಯಾವತ್ತೂ ಹೂನಗಿ ತಾರದ ನನ್ನಂಥ ಭಂಡ ಬಾಳೇವು ಇದ್ದರೆಷ್ಟು ಬಿಟ್ಟರೆಷ್ಟು ಅನಿಸಿದ್ದು ಖರೆ. ಈ ಮಾತಿಗೆ ಮಂದಿ ಹೌದಂತಾರೋ, ಅಲ್ಲಂತಾರೋ ಗೊತ್ತಿಲ್ಲ. ಆದರೆ ನನ್ನ ಬದುಕು ಒಮ್ಮಕಲೇ ಹೀಂಗ ಮುಕ್ಕಾಗಿರದಕ್ಕ ಕಾರಣ ನಾನಲ್ಲ. ಇಲ್ಲೀತನ, ನನ್ನ ಕೂಸಿಗಾಗಿ ಎಲ್ಲಾನೂ ಸಹಿಸಿಕೊಂಡು ಬದುಕಿದ್ದೆ. ಈಗದು ತಬ್ಬಲಿ ಆಗೇತಿ. ಮತ್ತೆ ಪುಟ್ಟ ಪೂರಾ ಹಸದೇತಿ. ನಾನು ಹಾಲುಣಿಸಬೇಕಾದಾಕಿ ಸತ್ತು ಬಿದ್ದೀನಿ… ಅದರಪ್ಪ ನಡೆಸಿದ ಭಾನಗಡೀಗೆ ಅದೋ ಅಲ್ಲಿ ನಡಮನಿ ಮೂಲ್ಯಾಗ ಕೂಸು ಅತ್ತು ಅತ್ತು ಬಾರಲು ಬಿದ್ದೇತಿ, ನನ್ನ ಸಾವು ತವರಿನವರ ಎದಿ ಹಿಂಡಾಕಾರ ಕೂಸಿನ ಕಡೀಗೆ ಗಮನ ಹೋದಾಂಗಿಲ್ಲ. ಅದೋ, ನಮ್ಮವ್ವ ಹೊಯ್ಕಂತನ ಬಂದು ಕೂಸಿನ ಅವುಚಿಕೊಂತು. ಇನ್ನೇನು ನಿರುಮ್ಮಳ ಆತು ಬಿಡಿ, ಅದು ಅದರಪ್ಪ ಎತ್ತಿಕೊಳ್ಳಾಕ ಹೋದಾಗ ಚಿಟ್ಟನ ಚೀರಿತ್ತು. ಅದಕೂ ಅದ್ರಪ್ಪನ ಗುಣ ಗೊತ್ತಾಗಿರಬೇಕು.

ಮಂದಿಯ ನಿತ್ಯದ ನಡವಳಕೀನ ಅಷ್ಟಾಗಿ ಯಾರೂ ಲೆಕ್ಕಕ್ಕ ತಗೊಳ್ಳೋದಿಲ್ಲ. ಆದರ, ಸಾವಿನ ಹಿಂದಲ ಕ್ಷಣಕ್ಕ ಜೋತುಬಿದ್ದು ಸಾವಿನ ಮನ್ಯಾಗ ನೆನಪಿಸಿಕೊಳ್ಳೋದು ಮನುಷಾನ ಗುಣ, ಹೆಣಾ ಎದುರಿಗಿಟಗಂಡು ಸಾವಿನ ಮೂಲ ಕೆದಕೋ ಮಂದಿ ಅಲ್ಲೆಲ್ಲಾ ಸಂತೀ ಗದ್ದಲಾ ಎಬಸಿದ್ದರು.

ಒಮ್ಮೆ ಒಪ್ಪಿ ಬದುಕು ಸವೆಸಿದಾಕಿ, ಹೀಂಗ ಸಾವನ್ನ ಮೈಮ್ಯಾಗ ಎಳಕಂಡಿರಾದು ತಪ್ಪು; ಪಕ್ಕನ ಹೀಂಗ ಹೊಟ್ಟ್ಯಾನ ತ್ರಾಸ ಹೊರಗ ಹಾಕಾ ಹರಕತ್ತು ಆಕಿಗಿರಲಿಲ್ಲ ಬಿಡ್ರಿ; ಸಿಟ್ಟಿನ ಕೈಯಾಗ ಬುದ್ದಿ ಕೊಡಬಾರದಿತ್ತು; ಸಾವಿನಾಗ ಎಲ್ಲಾ ನಿರಾಕರಿಸತದ ಅನಕಂಡಿದ್ದಾಳು. ನೀವಽ ನೋಡುವಂತ್ರಿ, ಸಾವು ಏಟು ತೊಡಕಾಗಿ ಕುಂದ್ರತದ – ಹೀಂಗ ತಲೀಗೊಬ್ಬರು ನಂದಽ ತಪ್ಪು ಅಂತ ಆರೋಪ ಹಚ್ಚ್ಯಾರ. ಅಮಾಯಕರು ಬಾಯಿಗೆ ಸೆರಗು ಹಚ್ಚಿ ಅಳಾಕಾರ ನೆರದ ಗುಂಪಿನಿಂದ ಗಂಡಾನ್ನೋ ಗಣಮಗನ ತರಾವರಿ ನಗು ತೂರಿದಾಂಗ ಕೇಳಿಸಿತು. ಇವಕ್ಕೆಲ್ಲಾ ಒಂದು ಕೊನಿ ಕೊಡಾಕು. ನನ್ನ ಸಾವು ಆತಗ ಸೋವಿಲೆ ದಕ್ಕಾಕ ಬಿಡಬಾರದು. ಇದು ನಕ್ಕು ಮರೆಮಾಚೋ ವಿಚಾರಲ್ಲ. ಬೇಕಾದ್ರ ಸ್ವಲ್ಪ ಕೈಹಚ್ಚರಿ. ಈ ಹೆಣ್ಣಮಗಳು ಏನು ಅನ್ನೋದನ್ನ ತೋರಿಸ್ತೀನಿ.
* * *

ಹೊರಗ ಜಿಬುರು ಮಳೆ ನಿಂತು ತೋಯ್ದ ನೆಲ ಚಪಾಟಿಯಾಗಿತ್ತು. ಕಾಲಿಟ್ಟಲ್ಲೆಲ್ಲಾ ಕರಲು ಮೆತ್ತಿ ಜಾರಸ್ತಿತ್ತು. ನಡಬರಕ ಜನ ಹೋಗಾದು ಬರಾದು ನಡೆಸಿದ್ದರು.

ವಿಷಯ ತಿಳಿಯುತ್ಲೆ ಈ ಅರಿವುಗೇಡೀನ ಹೆಂಗ ಬಳಸಿಗ್ಯಾಬೇಕು ಅಂತ ಪೋಲೀಸರು ಗಂಟು ಕಟ್ಟಾಕ ಹತ್ತಿದ್ದರು.

ಬರೀ ಸಾವಿನ ಕತೆ ಕೇಳಿಬರುತ್ತಿದ್ದ ವಾತಾವರಣದಾಗ ಪೋಲೀಸರು ಬಂದವರು ಮುಸುಕು ಸರಿಸಿ, ಇದು ಆತ್ಮಹತ್ಯೆ ಅಲ್ಲ ಅಂತ ಒದರಿದರು. ಕೇಳಿದವರು ಒಮ್ಮೆ ನಿಂತಲ್ಲೇ ಮೆಟ್ಟಿ ಬಿದ್ದಿದ್ದರು.

ಅನಾಮತ್ತು ತೂರಿಬಂದ ಮಾತಿಗೆ ಗಂಡ ಅದರು ಬದರಾದರೂ ತೋರಗೊಡದಽ ಭಂಡ ಧೈರ್ಯದಿಂದ ನಿಂತಿದ್ದ. ಮೂರ್ಖರಿಗೆ ಧೈರ್ಯ ಹೆಚ್ಚಂತ, ಹಿರೇರು ಹೇಳತಾರ. ಗಂಡನ ಮುಖದಾಗ ತನ್ನಿಂದನಽ ಈ ಸಾವು ನಡೆದದ್ದು ಅನ್ನೋ ಯಾವ ಲಕ್ಷಣ ಕಾಣಲಿಲ್ಲ. ಆದರ ಪೋಲೀಸರು ಬಂದಾಗಿಂದ ನೋಡತೀನಿ, ಆತನ ಮೈಯೆಲ್ಲಾ ಬೆಂವರಿ ನೀರಿಳಿಯಾಕ ಹತ್ತಿದ್ದು ಖರೆ. ಪೋಲೀಸರು ತನಿಖೆ ನಡೆಸಾಕ ಮುಂದಾಗುತ್ತೆ ಎಲ್ಲರ ಎದುರಽ ನಮ್ಮಣ್ಣ ‘ಇಲ್ಲೀತನ ಚಲೋತ್ನಾಗ ಬಾಳುವೆ ಮಾಡತಿದ್ದಾಕಿ, ಆತ್ಮಹತ್ಯೆ ಮಾಡಿಕೊಳ್ಳೋ ಕಾರಣಾನ ಇಲ್ಲಾ. ಪಂಚಮೀ ಮುಗಿಸಿ ನಿನ್ನೀನ್ನಽ ಬಂದಾಳ, ಬಂದಾಕಿ ಸತ್ತಾಳ ಅಂದ್ರ ಇದು ಕೊಲೇನ’ ಎಂದು ಮುಟಗೀನ ಗಾಳ್ಯಾಗ ಗುದ್ದಿ ಸವಾಲು ವಗಾಯಿಸಿದ. ಗಂಡ ಒಮ್ಮೆಲೆ ಕೆಂಡಾಮಂಡಲ ಆದಂವ ಮರುಕ್ಷಣ ನಿಶ್ಯಕ್ತ ಆಗಾಕಹತ್ತಿದ್ದು ಕಂಡು ಬಂತು. ನನ್ನ ಸಾವು ಈಟೆಲ್ಲಾ ಪಡಿಪಾಟಲ ಒಡ್ಡೀತು ಅನಕಂಡಿರಲಿಕ್ಕಿಲ್ಲ.

ಹಿಂದಕ ಮುಂದಕ ಅಂಡಲೀತಾ ಕಾತರಿಸೋ ಮಂದಿಗೆ ಇದು ಆತ್ಮಹತ್ಯೆಯೇ, ಕೊಲೆಯೇ ಬಗೆಹರಿದಿರಲಿಲ್ಲ. ಹೆಣದ ಭಾರಕ್ಕ ಮನೀ ಜಂತಿಗಳು ಕುಸಿಯಾಕ ಹತ್ತಿದ್ದವು. ಮನೀಗ ಮನೀನ ಭಾರ ಇಳಿಸೋರಿಗಾಗಿ ಕಾತರದಿಂದ ಕಾಯಾಕಹತ್ತಿತ್ತು. ಕಾರಣಿಲ್ಲದಾ ಹೇಂತಿ ಮ್ಯಾಲ ಸವಾರಿ ಮಾಡತಿದ್ದಾತಗ, ಆ ಹೆಂತೀನ ಕಳಕಂಡು, ತಾ ಕಳಕಂಡಿರಾದು ಏನು ಅಂತ ಗೊತ್ತಾಗಕಽ ಬೇಕು.

ಮಾಡ ಮುಸುಕಿದ ಮಬ್ಬಿನಾಗೂ ಪೋಲೀಸರು ಜಮಾಯಿಸಿದ ಗುಂಪಿನತ್ತ ಸವಾಲು ಎಸೆಯಾದು ನಿಲ್ಲಿಸಿರಲಿಲ್ಲ. ಆದಷ್ಟು ಲಗೂನ ಮಣ್ಣು ಮಾಡಬೇಕಂತ ಕಾದ ಕುಲಸ್ತರಿಗೆ ಬ್ಯಾಸರಾಗಿತ್ತು. ಪೋಲೀಸರು ಒಣ ನ್ಯಾಯಾ ತೆಗಿಯಾಕ ಹತ್ತಿರಾದು ಜನರ ಪಿಸಿಪಿಸಿಗೆ ಕಾರಣ ಆತು. ಆದರೂ ‘ಆಗದು ಆಗೇದ, ಸಹಜ ಸಾವು ಅನ್ನರಿ’ ಅಂತ ಹಿರೇರು ಕೇಳಿಕೊಂಡರು. ಪೋಲೀಸರಿಗೆ ನೆರೆದವರ ಕೂಡ ಜಗ್ಗಾಡಾದು ಬೇಕಿರಲಿಲ್ಲ.

ನನ್ನ ಗಂಡನ್ನ ಬಗಲಿಗೆ ಕರೆದು ಆತನ್ನ ಈಗಿಂದೀಗ ಬಂಧಿಸಾದಲ್ದಾಽ ಮಾಡಿದ ಗುನ್ನೇಕ್ಕ ನೇಣಿಗೇರಿಸೋ ಲಾಠಿ ಜಬರದಸ್ತೀಲೆ ಜಳಪಿಸಿದರು.

ಪೊಲೀಸರ ಗೌಡಕೀ ಮಾತಿಗೆ ಮೊದಲಽ. ಗಂಡ, ಹಿಂದಕ ಬೀಳದಾಂಗ ಕೈ ಮುಕ್ಕಂತ ‘ನಾನ್ಯಾವ ಅಪರಾಧಾನೂ ಮಾಡಿಲ್ರಿ ಸಾಹೇಬ್ರ. ರಾತ್ರಿ ಸಸಽ ಉಂಡು ಮಲಗಿದಾಕೀ ಮುಂಜಾನಿ ನೋಡಿದ್ರ ಈಟೆಲ್ಲಾ ಅದ್ವಾನ ಮಾಡಕ್ಯಂಡಾಳ್ರೀ ಸರ’ ಅಂದವ ನಿರೀಕ್ಷಣಾ ಜಾಮೀನು ಪಡೆದವರಾಂಗ ಹಾರಾಡಾಕ ಹತ್ತಿದ್ದ.

ಈಟೆಲ್ಲಾ ಕತಿ ನಡದಿರಾಕಾರ ಹಿಂದಽ ಬರತೀವಿ ಅಂತ ಹೇಳಿದ್ದ ತಹಶೀಲ್ದಾರರು ಇನ್ನೂ ಬಂದಿರಲಿಲ್ಲ. ನಿಯಮದ ಪ್ರಕಾರ ತಹಶೀಲ್ದಾರರು ಮಹಜರು ನಡೆಸಿ ಸಹಿ ಹಾಕಬೇಕಿತ್ತು.

ಊರಾನ ದೊಡ್ಡಗೌಡರ ಸಮ್ಮುಖ ರೊಕ್ಕದ ಪ್ರಸ್ತಾವ ಮೂಡಿತು. ಮೊದಲಿಗೆ ಗಂಡ ಮಿಸುಕಾಡಿರಲಿಲ್ಲ. ಆಮ್ಯಾಲ ಭಾರ ಇಳಿಸಿ, ಭುಜ ಕೊಡವಿಕೊಂಡ್ರ ಸಾಕು ಅನಿಸಿರಬೇಕು. ರೊಕ್ಕದ ಮಾತುಕತೆ ಬಗೆಹರಿಯುತ್ಲೆ, ಕತ್ತಲದಾಗ ಆಟೀಟು ಶವಪರೀಕ್ಷೇನ ಕಾಟಾಚಾರಕ್ಕೆ ಮಾಡಿದ ವೈದ್ಯರು, ಪೋಲೀಸರ ಹೇಳಕೀನ ಎತ್ತಿಹಿಡಿದು, ಸಾವು ಆತ್ಮಹತ್ಯೆಯಿಂದ ಆಗೇದ ಎಂಬ ವರದಿಗೆ ರುಜು ಹಾಕಿದರು. ಹಂಗಂತ ತಪಾಸಣೆ ಅಖೈರು ಮಾಡಿ ಕೈತೊಕ್ಕಣಾಕೂ ಆಗಿಬರಲಿಲ್ಲ. ಇನ್ನೂ ಬಾರದ ತಹಶೀಲ್ದಾರರ ಸಹೀನ ಹಿಂದ್ಲಿಂದ ಪಡೆದರಾತು ಅಂಬ ಭಂಡ ನಂಬಿಕೆಯೊಳಗ ಹೆಣಾನ ಸುಡೋ ತಾಕೀತು ಪಡೆದರು. ರಿಪೋರ್‍ಟಿಗೆ ಒಪ್ಪಿ ಸಹಿ ಹಾಕೋ ಮೊದಲು ಮೂಕ ಬಸವಣ್ಣ ಆಗಿದ್ದ ತವರಿನವರು ಮನೀ ಮಗಳ ಶ್ರಮ ನಾವಽ ಮಾಡತೀವಿ ಅಂಥ ಹಟ ಹಿಡಿದು ಹೆಣದ ಖಬಜಾ ಪಡೆದಿದ್ದರು.

ಪೋಲೀಸು ಜೀಪ ಹೊಂಟು ಹ್ವಾದ ಮ್ಯಾಲ, ಕುಲಸ್ತರನ್ನ ಬಿಟ್ಟು ಉಳಿದವರು ಸಾವಕಾಶ ಜಾಗ ಖಾಲಿ ಮಾಡಿದರು. ಈ ಮಳೀ ತ್ಯಾವಸಕ್ಕ ಹೆಣ ಸುಡಾಕ ಹೆಂಗಾದೀತು? ನಮ್ಮ ಪದ್ಧತಿ ನಮಗ. ನಮ್ಮ ಜಾತ್ಯಾಗ ಇದ್ದಾಂಗ ಹೊಳದಕ್ಕೆ ತಯಾರಿ ಮಾಡಾನ ಅಂದರು. ಪೋಲೀಸರ ಆಣತಿ ಕಡೆಗಣಿಸಿ ಕಲೆತ ಕುಲಸ್ತರೆಲ್ಲ ನಿಂತಿದ್ದು, ತಣ್ಣಗಿನ ಗುದ್ದಿನಾಗಿಟ್ಟು ಸಮಾಧಿ ಮಾಡಿ ಮುಗಿಸಾಕಾರ ಕತ್ತಲಾಗಿತ್ತು.
* * *

ರಾತ್ರಿ ಎಂಟೂವರಿಗೆ ತಹಶೀಲ್ದಾರರ ಜೀಪು ಮನೀ ಮುಂದಕ ಬಂದು ನಿಂತಿತು. ಯಾವುದೋ ಕೆಲಸದ ನಿಮಿತ್ತ ಹೋದವರಿಗೆ ಮಳೆಯ ಕಾರಣಕ್ಕೆ ಲೇಟಾಗಿತ್ತು. ಅವರು ಸಿಪಾಯಿ ನೇಮಣೂಕಿಯಲ್ಲಿದ್ದವರು. ಬಂದವರಽ ಹೆಣಾ ಎಲ್ಲಿ? ಪೋಲೀಸರೆಲ್ಲಿ? ಎಂದು ಪ್ರಶ್ನೇದ ಮ್ಯಾಲ ಪ್ರಶ್ನೆ ಹಾಕಿದರು. ಅಲ್ಲಿದ್ದವರು ತಡಬಡಿಸಾಕಾರ, ಜನ ಜಾತ್ರಿ ಮತ್ತೊಮ್ಮೆ ನೆರೆದು ಕಾತರಿಸಾಕ ಹತ್ತಿತ್ತು.

ಇದು ಕೊಲೆ ಅಂತ ನನಗ ಅನಾಮಧೇಯ ಕರೆ ಬಂದಽತೀ. ರಾತ್ರಿ ಕತ್ತಲದಾಗ ಅದೆಂಥಾ ಶವಚ್ಛೇದ ನಡೆಸಿದರು? ನಾನಿಲ್ಲದೇ ಅದ್ಹೆಂಗ ಪಂಚನಾಮೆ ರೆಕಾರ್ಡ ಮಾಡತಾರ ನಾನೂ ನೋಡತೀನಿ. ಕೊಲೇನ ಮುಚ್ಚಿ ಹಾಕದಕ್ಕ ಅದೆಷ್ಟು ರೊಕ್ಕಾ ಕೊಟ್ಟೀರಿ? ಅನ್ನೋ ಗತ್ತಿಗೆ ಸಮಂಜಸ ಉತ್ತರಾ ಸಿಕ್ಕಿರಲಿಲ್ಲ.

ಮರುದಿನ ತಾಲೂಕು ಆಫೀಸಿನಾಗ ಎರಡೂ ಇಲಾಖೆಗಳ ನಡುವೆ ಮಾತಿನ ಚಕಮಕಿ ನಡೀತು. ನಾ ಏನು ಮಾತಾಡಿದರೂ ಅದಕ್ಕೆ ಕಾನೂನಿನ ಬೆಂಬಲಾ ಐತಿ ಅನ್ನೋದನ್ನ ಮರೀಬ್ಯಾಡಿ, ಕಾನೂನು ಬಿಟ್ಟು ದೂಸರಾ ಮಾತು ಎತ್ತಾಂಗಿಲ್ಲ ಅಂತ ಖಡಾಖಂಡಿತ ಹೇಳಿದಾಗ, ಆ ನಿಯತ್ತಿನ ತಹಶೀಲ್ದಾರನ್ನ ಎದುರಿಸಿ ನಿಲ್ಲೋ ಧೈರ್ಯ ಯಾಂವಗೂ ಬರಲಿಲ್ಲ. ಪೋಲೀಸರು ತಾಂವು ಕಟ್ಟಿದ ಗಂಟು ಬಿಡಿಸಾಕ ಬಾರದಽ ಒದ್ದಾಡಿದರು. ವಿಷ ಕುಡಿದು ಸತ್ತೋರ ಹೆಣಾನ ರಾತ್ರಿ ಮಬ್ಬಿನಾಗ ಕುಯ್ದರ, ವಿಷದಿಂದಾದ ಮೈಯಾನ ಬಣ್ಣಗೇಡು ನಿಖರ ಗೊತ್ತಾಗೋದಿಲ್ಲ. ಹಂಗಾಗಿ, ಸರ್ಕಾರಿ ಆದೇಶ ಏನಾ ಇದ್ರೂ ಹಗಲು ಹೊತ್ತಿನಾಗ ಶವಪರೀಕ್ಷೆ ನಡೆಸಬೇಕಿತ್ತು. ಘನ ಸರ್ಕಾರದ ಹೊಣೆಗೇಡಿ ಅಧಿಕಾರಿಗಳು ತೊಂಬಲಾ ತಿಂದು ತಾವು ಎಸಗಿದ ಮುಟ್ಟಾಳ ಕೆಲಸಕ್ಕ ತಲಿ ತಗ್ಗಿಸಿ ನಿಂತಿದ್ದರು.

ತಹಶೀಲ್ದಾರರ ಆಣತಿ ಹೊಂಟಿಂದ ತವರಿನವರಿಗೆ ಒಮ್ಮೆ ತಳಗ ಮ್ಯಾಲ ಆದರೂ, ಭರವಸೆಯ ನಗಿ ಮೂಡಿಸಿದ್ದು ಸುಳ್ಳಲ್ಲ. ಆದರ, ಗಂಡ ಅನಿಸಿಕೊಂಡಾತಗ ಭಾರವಾದ ಎದಿ ಹೊಡಕಣಾಕ ಹತ್ತಿ, ನನ್ನ ಸಾವು ಯಾವುದಽ ನ್ಯಾಯಾಲಯ ಕೊಡೋ ಶಿಕ್ಷೆಗಿಂತ ಕ್ರೂರ ಅನಿಸಿದ್ದು ಖರೆ.

ಊರ ಹಿರೇರು, ಕುಲಸ್ತರ ಸಮಕ್ಷಮ ಸುಡಗಾಡದಾಗ ಹೂತಿದ್ದ ಹೆಣಾನ ಎತ್ತಿಸಿದರು.

ಮದುವಿ ಆಗಿ ಇನ್ನೂ ಎರಡು ವರ್ಷ ತುಂಬಿರಲಿಲ್ಲ. ಈ ಸಂಶೇದ ಸಾವು ವರದಕ್ಷಿಣೆ ಕಿರುಕುಳದ ತಳಗ ಬರೂದಲ್ಲದಾ, ಮೊದಲಿನ ಮರಣೋತ್ತರ ಪರೀಕ್ಷಾ ದಾರಿ ತಪ್ಪಿದ್ದಕ್ಕೆ ನಿಯಮದ ಪ್ರಕಾರ ಇಬ್ಳಾರು ವೈದ್ಯರು ನಡೆಸಿದರು.

ಮೊದಲು ದಾಖಲಿಸಿದ ವರದಿ ಅಪೂಟ ಬದಲಿ ಆಗಿ ಸಂಬಂಧಪಟ್ಟೋರಿಗೆಲ್ಲಾ ಹೆಣಾನ ಎದ್ದು ಬಂದು ಎದೀಗೆ ಒದ್ದಾಂಗ ಆಗಿತ್ತು.

ಕಾನೂನು, ವೈದ್ಯಶಾಸ್ತ್ರ ಜೊತಿ ಜೊತೀಲೆ ತಪಾಸಣೆ ನಡೆಸಿ ವರದಿ ಒಪ್ಪಿಸಿತು. ಈಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೈಕಾಲು ಕಟ್ಟಿ ಹಾಕಿ, ಕತ್ತು ಹಿಸುಕಿದ್ದು ಕಂಡು ಬಂದಽತೀ, ಆಟೀಟು ಮೇಲುಸಿರು ಇರೋಕಾರ ಜುಲಮೀಲೆ ವಿಷ ಕುಡಿಸಿ, ಆತ್ಮಹತ್ಯೆಯ ಬಣ್ಣ ಹಚ್ಚಾಕ ನೋಡ್ಯಾರ. ಸಾಯೋ ಸಂಕಟದಾಗ ಒದ್ದಾಡಿ, ಒದ್ದಾಡಿ ಮೂಗಾಗ ಬಾಯಾಗ ವಿಷ ತುಂಬಿ ಸತ್ತ ಗುರುತು ಕೊಲೆ ನಡೆದಿರುವುದನ್ನು ಸಾಬೀತು ಪಡಿಸ್ಯಾವ.

ಗಂಡನನ್ನ ಗದರಿಸಿ ಕೇಳಿದವರಿಗೆ ಆಕೀದು ಸುಖದ ಸಾವಾಗಿರಲಿಲ್ಲ ಅಂತ ಆಡಾ ಹುಡುಗೂರಾಂಗ ನಿಚ್ಚಳ ಒಪ್ಪಿಟ್ಟಿದ್ದು. ಬೆಳಕಿನಾಗ ಸಿಕ್ಕ ಸಾಕ್ಷಿಗೆ ಪೂರಕ ಆಗಿತ್ತು.

‘ಅಬ್ಬಾ! ಖರೇ ವಿಚಾರ ನನ್ನ ಹೆಣದ ಜತೀಗೆ ಹೂತು ಹೋಗಿದ್ದನ್ನ ಈಟೊತ್ತನ ಹೇಳತಾ ಹೇಳತಾ ನನಗ ದಮ್ಮು ಹತ್ತಿ ಹೋಗೇತಿ.

ಅಂದಂಗ, ಹೆಣಾ ಹೆಂಗ ಮಾತಾಡೀತು ಅಂದಿರಲ್ಲ? ಬೆರಗಾಗ ಕಾರಣಾನಽ ಇಲ್ಲ. ಯಾಕಂದ್ರ ನಾನೀಗ ಸತ್ತು ಬದುಕೀನಿ! ನನಗ ಗಂಡ ಆಗಿದ್ದಾತ ಕೊಲೆಪಾತಕ ಆಗಿ ಬದುಕಿದ್ದೂ ಸತ್ತಂಗ ಆಗ್ಯಾನ.
*****
(೧೧.೧೧.೦೪)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಂಡ
Next post ಆತ್ಮಾರ್ಪಣೆ

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…