ಪಾಪ ನಿವೇದನೆ

ಪಾಪ ನಿವೇದನೆ

ಚಿತ್ರ: ಹನ್ಸ್ ಬ್ರಕ್ಸಮೀರ್‍
ಚಿತ್ರ: ಹನ್ಸ್ ಬ್ರಕ್ಸಮೀರ್‍

ಕೊಡಗಿನ ದೊಡ್ಡ ವೀರರಾಜ ರುಗ್ಲಶಯ್ಯಯೆಯಲ್ಲಿದ್ದ. ಅವನ ಮಾನಸಿಕ ಚಿಕಿತ್ಸೆಗೆಂದು ಈಸ್ಟಿಂಡಿಯಾ ಕಂಪೆನಿ ಮನೋವೈದ್ಯ ಇಂಗಲ್‌ ಡ್ಯೂನನ್ನು ಕಳುಹಿಸಿಕೊಟ್ಟಿತ್ತು.

ನಾನು ಹುಚ್ಚನೆಂದು ಜನರು ಆಡಿಕೊಳ್ಳುತ್ತಿದ್ದಾರೆಂದು ಕೇಳಿದೆ. ನಿಮಗೆ ಹಾಗನ್ನಿಸುತ್ತದೆಯೇ ಇಂಗಳ ಸಾಹೇಬರೆ?
ಇಂಗಲ್‌ ಡ್ಯೂ ರಾಜನ ಬಲಗೈ ಹಿಡಿದುಕೊಂಡು ಸವರಿದ.
ಜನ ಹೇಳುವುದಕ್ಕೆಲ್ಲಾ ತಲೆ ಕೆಡಿಸಿಕೊಂಡರೆ ಹುಚ್ಚು ಹಿಡಿದೀತು ಪ್ರಭೂ. ನಾನು ನನ್ನ ಅನುಭವದಿಂದ ಹೇಳುತ್ತಿದ್ದೇನೆ. ನಿಮಗೆ ಖಂಡಿತಾ ಹುಚ್ಚು ಹಿಡಿದಿಲ್ಲ.
ನೀವು ನನ್ನನ್ನು ನೋಯಿಸಬಾರದೆಂದು ಈ ಮಾತು ಹೇಳುತ್ತಿಲ್ಲವಷ್ಟೆ?
ವೈದ್ಯ ಯಾವತ್ತೂ ನಿಜವನ್ನು ಹೇಳಬೇಕು. ಮನಶಾಸ್ತ್ರ ಏನು ಹೇಳುತ್ತದೆ ಗೊತ್ತಾ ಪ್ರಭೂ? ಈ ಜಗತ್ತಿನಲ್ಲಿ ಇರುವವರೆಲ್ಲಾ ಹುಚ್ಚರೇ ಅಂತೆ. ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸವಂತೆ. ನೂರಕ್ಕೆ ನೂರರಷ್ಟು ತಲೆ ನೆಟ್ಟಗಿರುವವರು ಯಾರೂ ಇಲ್ಲವಂತೆ.
ದೊಡ್ಡವೀರ ರಾಜನ ಮುಖದಲ್ಲಿ ನಗು ಕಾಣಿಸಿಕೊಂಡಿತು.
ಆದರೂ ಸಾಹೇಬರೇ, ಮನಸ್ಸನ್ನು ಕೆಲವು ವಿಷಯಗಳು ಕೊರೆಯುತ್ತಿರುತ್ತವೆ. ಅವುಗಳಿಂದ ಮುಕ್ತಿ ದೊರೆಯುವುದು ಹೇಗೆ?
ಅದೇನೂ ಅಷ್ಟು ದೊಡ್ಡ ವಿಷಯವಲ್ಲ ಮಹಾಪ್ರಭೂ. ನಮ್ಮ ಮನಸ್ಸಿನಲ್ಲಿರುವುದನ್ನು ಇನ್ನೊಬ್ಬರಲ್ಲಿ ಹೇಳಿಕೊಂಡು ಹಗುರಾಗಬೇಕು. ಎಲ್ಲವೂ ಸರಿಯಾಗುತ್ತದೆ.
ಆದರೆ ಹೇಳಿಕೊಳ್ಳುವುದು ಯಾರಲ್ಲಿ ಸಾಹೇಬರೇ? ನನ್ನ ಪಟ್ಟದ ರಾಣಿ ದೇವಮ್ಮಾಜಿ ನನಗಿಂತ ಮೊದಲೇ ಶಿವನ ಪಾದ ಸೇರಿಕೊಂಡಳು.
ದೊಡ್ಡ ವೀರನ ಕಣ್ಣುಗಳು ಕಂಬನಿ ಮಿಡಿದವು.
ಅಲ್ಲಿ ಸೇವಕರಿರಲಿಲ್ಲ. ಇಂಗಲ್‌ ಡ್ಯೂನೇ ಕಣ್ಣೀರನ್ನು ರಾಜನ ಮೇಲ್ವಸ್ತ್ರದಿಂದ ತೊಡೆದ.
ನಿಮ್ಮಂತಹ ಸಾಹೇಬರಿಂದ ನಾನು ಸೇವೆ ಮಾಡಿಸಿಕೊಳ್ಳುವುದೆ?
ನಾನೇನು ದೊಡ್ಡವನಲ್ಲ. ನೀವು ಹೆಸರಲ್ಲೂ ದೊಡ್ಡವರು, ಸಾಧನೆಯಲ್ಲೂ. ವಿಶಾಲವಾದ ಕೊಡಗು ಎಂಬ ನಾಡನ್ನು ಕಟ್ಟಿದವರು ನೀವು. ನಾನು ತಿಂಗಳ ಸಂಬಳಕ್ಕೆ ದುಡಿವ ವೈದ್ಯ. ನೀವೆಲ್ಲಿ? ನಾನೆಲ್ಲಿ? ನಿಮ್ಮ ಸೇವೆ ಮಾಡುವುದು ನನಗೆ ಸಂತೋಷದ ವಿಷಯ.
ದೊಡ್ಡ ವೀರನ ಮುಖದಲ್ಲಿ ಪ್ರಸನ್ನತೆ ಕಾಣಿಸಿಕೊಂಡಿತು.
ಮಹಾರಾಜಾ, ಮಹಾದೇವಮ್ಮಾಜಿ ಹೋದ ಮೇಲೆ ನೀವು ನಿಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಲಿಲ್ಲ. ಅದಕ್ಕೇ ಹೀಗಾಗುತ್ತಿರುವುದು. ನೀವು ಬೇರೆ ಯಾರಲ್ಲಾದರೂ ನಿಮ್ಮ ಅಂತರಂಗವನ್ನು ತೋಡಿಕೊಳ್ಳಲು ಸಾಧ್ಯವಾಗಬೇಕು.
ಆ ಮಾತು ಬಿಡಿ ಸಾಹೇಬರೇ. ನಾನು ಯಾರನ್ನೂ ನಂಬುವುದಿಲ್ಲ. ಮನುಷ್ಯರ ಮೇಲೆ ನನಗೆ ನಂಬಿಕೆ ಹೋಗಿ ಬಿಟ್ಟಿದೆ.
ಹೋಗಲಿ. ದೇವರಲ್ಲಾದರೂ ಹೇಳಿಕೊಳ್ಳಬಹುದಲ್ಲಾ? ನಾವು ಪ್ರತಿ ಭಾನುವಾರ ಚರ್ಚಿಗೆ ಹೋಗುತ್ತೇವೆ. ಅಲ್ಲಿ ಪಾದ್ರಿಗಳಲ್ಲಿ ನಮ್ಮ ಪಾಪಗಳನ್ನು ನಿವೇದಿಸಿಕೊಂಡು ಹಗುರಾಗುತ್ತೇವೆ. ಪಾದ್ರಿಗಳು ನಮ್ಮ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಅಲ್ಲಿಗೆ ನಮ್ಮ ಮನಸ್ಸು ಸರಿಯಾಗುತ್ತದೆ.
ನಾನೀಗ ದೇವರನ್ನೂ ನಂಬುತ್ತಿಲ್ಲ ಸಾಹೇಬರೇ. ನಾನು ಪ್ರಾಣಕ್ಕಿಂತ ಪ್ರೀತಿಸುತ್ತಿದ್ದ ನನ್ನ ಮಹಾದೇವಮ್ಮಾಜಿಯನ್ನು ಅನ್ಯಾಯವಾಗಿ ನನ್ನಿಂದ ಕಸಿದುಕೊಂಡ ದೇವರ ಮೇಲಿನ ನಂಬಿಕೆ ಅಂದೇ ಹೊರಟು ಹೋಗಿಬಿಟ್ಟಿದೆ.
ಅದರಲ್ಲಿ ತಪ್ಪೇನಿಲ್ಲ ಪ್ರಭೂ. ದೇವರಾದರೇನಂತೆ? ನಿಮ್ಮ ವಿಷಯದಲ್ಲಿ ಅವನು ಮಾಡಿದ್ದು ಅನ್ಯಾಯವೇ. ಆದರೆ ಮಹಾರಾಣಿಯವರು ಹೋದಂದಿನಿಂದ ನಿಮ್ಮ ಮನಸ್ಸಲ್ಲಿ ಮಡುಗಟ್ಟಿರುವ ನೋವು ಹೊರಬರಲೇಬೇಕು. ವೈದ್ಯರಲ್ಲಿ ಸುಳ್ಳು ಹೇಳಬಾರದು ಎಂಬ ಮಾತಿದೆ. ನಿಮ್ಮನ್ನು ಕೊರೆಯುತ್ತಲಿರುವ ಎಲ್ಲಾ ವಿಷಯಗಳನ್ನು ನನ್ನಲ್ಲಿ ಹೇಳಿದರೆ ಮಾತ್ರ ನಾನು ಚಿಕಿತ್ಸೆಯನ್ನು ಸೂಚಿಸಲು ಸಾಧ್ಯ.
ಇಲ್ಲದಿದ್ದರೆ?
ಇಲ್ಲದಿದ್ದರೆ ನಾನು ಮುಂಬಯಿಗೆ ಹೋಗಿಬಿಡುತ್ತೇನೆ.
ದೊಡ್ಡ ವೀರರಾಜ ಇಂಗಲ್‌ಡ್ಯೂನ ಕೈ ಹಿಡಿದುಕೊಂಡ.
ಬೇಡ. ನಿಮ್ಮನ್ನು ನಾನು ನಂಬುತ್ತೇನೆ. ಹೇಳಿ ನಾನು ಏನನ್ನು ಹೇಳಬೇಕು?
ನೀವು ಮನುಷ್ಯರನ್ನು ನಂಬುವುದಿಲ್ಲವೆಂದಿರಿ. ಅದಕ್ಕೊಂದು ಕಾರಣ ಇರಬೇಕಲ್ಲಾ?
ನನ್ನ ಅಪ್ಪನ ದಾಯಾದಿ ದೇವಯ್ಯರಾಜ ಅಪ್ಪನನ್ನು ಮಡಿಕೇರಿಯಿಂದ ಓಡಿಸಿ ತಾನು ಪಟ್ಟವೇರಿದ. ನನ್ನ ಅಪ್ಪ ಶ್ರೀರಂಗಪಟ್ಟಣಕ್ಕೆ ಹೋಗಿ ಹೈದರಾಲಿಯ ನೆರವು ಪಡೆದು ದೇವಯ್ಯರಾಜನನ್ನು ಕೊಂದು ಕೊಡಗಿನ ರಾಜನಾದ. ನನ್ನಪ್ಪ ಸಾಯುವಾಗ ನಾನು ತಿಳಿವಳಿಕೆ ಮೂಡದ ಬಾಲಕ. ನನ್ನನ್ನು ತಮ್ಮಂದಿರೊಡನೆ ಹೈದರ್‌ ಪಿರಿಯಾಪಟ್ಟಣದ ಸೆರೆಯಲ್ಲಿರಿಸಿದ. ಸುನ್ನತ್‌ ಮಾಡಿಸಿ ಅಪಮಾನಗೊಳಿಸಿದ. ಅದೊಂದು ನೋವಾಗಿ ನನ್ನನ್ನು ಕಾಡುತ್ತಿದೆ ಸಾಹೇಬರೆ?
ನಮ್ಮ ಕೈ ಮೀರಿದ ವಿಷಯದ ಬಗ್ಗೆ ಚಿಂತಿಸಬಾರದು ಎಂದು ಮನಶ್ಶಾಸ್ತ್ರ ಹೇಳುತ್ತದೆ ಪ್ರಭೂ. ಹೈದರಾಲಿ ಮಾಡಿದ್ದು ತಪ್ಪೇ. ಆದರೆ ಆರೋಗ್ಯ ಶಾಸ್ತ್ರದ ಪ್ರಕಾರ ಸುನ್ನತಿ ಯಾರು ಬೇಕಾದರೂ ಮಾಡಿಸಿಕೊಳ್ಳಬಹುದು. ಅದು ಆರೋಗ್ಯಕ್ಕೆ ಒಳ್ಳೆಯದು. ಅದಕ್ಕೆ ಧರ್ಮದ ಲೇಪ ನೀಡಬೇಡಿ. ಎಂದೋ ಸತ್ತು ಹೋಗಿರುವ ಹೈದರ್‌ನನ್ನು ಕ್ಷಮಿಸಿಬಿಡಿ.
ಸರಿ ಸಾಹೇಬರೇ, ನನಗೆ ನಮಕು ಹರಾಮು ನಾಗಪ್ಪಯ್ಯ ಕುರುಚ್ಚಿ ಅರಮನೆ ಯಲ್ಲಿ ಸುಟ್ಟು ಹಾಕಿದ ನನ್ನ ಬಂಧು ಬಾಂಧವರ ನೆನಪಾಗುತ್ತಿದೆ.
ಅದು ಸಹಜವೇ. ನಿಮ್ಮ ಇಂಡಿಯನ್‌ ಫಿಲಾಸಫಿ ಪ್ರಕಾರ ಅವರವರ ಕರ್ಮಫಲ ಅವರವರು ಉಣ್ಣುತ್ತಾರೆ. ಈಗಾಗಲೇ ನಾಗಪ್ಪಯ್ಯ ಸತ್ತು ಹೋಗಿರಬೇಕು. ಹೈದರನನ್ನು ಕ್ಷಮಿಸಿದಂತೆ ನಾಗಪ್ಪಯ್ಯನನ್ನೂ ಕ್ಷಮಿಸಿ ದೊರೆ. ಶಿಲುಬೆಗೇರಿಸಿದಾಗಲೂ ಜೀಸಸ್‌ ಹೇಳಿದ್ದೇನು ಗೊತ್ತೇ ಪ್ರಭೂದಯಾಮಯನಾದ ದೇವರೇ ಅವರನ್ನು ಕ್ಷಮಿಸುವ ಅವರೇನು ಮಾಡುತ್ತಿದ್ದಾರೆಂದು ಅವರಿಗೇ ತಿಳಿದಿಲ್ಲ ಎಂದು.
ದೊಡ್ಡ ವೀರ ರಾಜನ ಮುಖದಲ್ಲಿ ನಗು ಮೂಡಿತು.
ಅದೇನೋ ಸರಿ ಸಾಹೇಬರೇ. ನಾನು ನಾಲ್ಕು ನಾಡು ಅರಮನೆ ಕಟ್ಟಿಸುತ್ತಿದ್ದಾಗ ಪುಲಿಯಂಡ ಕಾರಿಚ್ಚ ಪಾಲೇರಿ ಒಡೆಯಂಡ ಕುತ್ತಿ ಮುತ್ತುತು ಪೋಡು ಎಂದು ಮರವೇರಿ ಶಾಪ ನೀಡುತ್ತಿದ್ದ. ಅವನನ್ನು ಆನೆಕಾಲಿಗೆ ಕಟ್ಟಿ ಕೊಲ್ಲಿಸಿಬಿಟ್ಟೆ. ನಾನು ಮಾಡಿದ್ದು ಪಾಪವಲ್ಲವೇ ಸಾಹೇಬರೆ?
ಅಲ್ಲ ದೊರೆ. ಅದು ಕ್ರಿಯೆಗೆ ಪ್ರತಿಕ್ರಿಯೆ ಅಷ್ಟೇ. ಅವನು ಶಾಪ ಕೊಡದಿರುತ್ತಿದ್ದರೆ ನೀವು ಅವನ ತಂಟೆಗೆ ಹೋಗುತ್ತಿರಲಿಲ್ಲ. ಅವನಾಗಿ ತಂದುಕೊಂಡದ್ದು ಅದು. ನಿಮ್ಮ ಕಾಡುಗಳಲ್ಲಿ ಎಷ್ಟು ಜಿಗಣೆಗಳಿವೆ ಮಹಾರಾಜಾ ನೀವು ಅವನ್ನೆಲ್ಲಾ ಕೊಂದು ಹಾಕುತ್ತೀರಾ?
ಇಲ್ಲ. ನಮ್ಮ ರಕ್ತ ಹೀರುವ ಜಿಗಣೆಗಳನ್ನು ಮಾತ್ರ ನಾವು ಕೊಲ್ಲುವುದು.
ಸರಿ ಮಹಾರಾಜಾ. ಕಾರಿಚ್ಚ ರಕ್ತ ಹೀರುವ ಜಿಗಣೆಯಾಗಿ ಬಿಟ್ಟ. ನೀವವನನ್ನು ಕೊಲ್ಲಿಸುವುದು ಅನಿವಾರ್ಯವಾಯಿತು. ಒಂದು ನಾಡನ್ನು ಕಟ್ಟ ಹೊರಟಾಗ ಇಂಥದ್ದೆಲ್ಲಾ ಸಂಭವಿಸುವುದು ಸಹಜ ಪ್ರಭೂ.
ದೊಡ್ಡ ವೀರರಾಜ ತಲೆ ಕೆರೆದುಕೊಂಡ.
ಆದರೆ ಸಾಹೇಬರೇ, ನಾನು ನನ್ನ ತಮ್ಮಂದಿರನ್ನು ಕೊಲ್ಲಲು ಹವಣಿಸಿದೆ. ಪಾಪ, ಹಿರಿಯ ತಮ್ಮ ಅಪ್ಪಾಜಿರಾಜ ನನ್ನಿಂದಾಗಿ ಕೊಲೆಗೀಡಾದ. ಅವನ ತಲೆಯನ್ನು ಹರಿವಾಣದಲ್ಲಿಟ್ಟು ಸೇವಕರು ನನ್ನ ಮುಂದಿರಿಸಿದರು. ಅದನ್ನು ನನ್ನಿಂದ ಮರೆಯಲಾಗುತ್ತಿಲ್ಲ.
ಪ್ರಭೂ, ಕ್ರಿಯೆಯಿಲ್ಲದೆ ಪ್ರತಿಕ್ರಿಯೆ ಇರುವುದಿಲ್ಲ. ನಿಮಗೆ ಅಪ್ಪಾಜಿರಾಜನ ಬಗ್ಗೆ ಮನದಾಳದಲ್ಲೆಲ್ಲೋ ಒಂದು ಸೇಡಿನ ಕಿಡಿ ಉಳಿದಿರಬೇಕು. ಅದಕ್ಕೊಂದು ಕಾರಣವೂ ಇರಬೇಕು. ಒಮ್ಮೆ ಕೆದಕಿ ನೋಡಿ.
ದೊಡ್ಡ ವೀರರಾಜ ನೆನಪಿಸಿಕೊಂಡ.
ಹೌದು ಸಾಹೇಬರೇ, ಅವನು ಅಪ್ಪಾಜಿರಾಜ ಹಿಂದೆ ನನ್ನ ಕೊಲೆಗೆ ಸಂಚು ಹೂಡಿದ್ದ. ಅಂತಿಮ ಕ್ಷಣದಲ್ಲಿ ನನಗೆ ಅದು ಗೊತ್ತಾಗಿ ನಾನು ಹೇಗೋ ಅದರಿಂದ ಬಚಾವಾದೆ.
ಪಟ್ಟಕ್ಕೆ ಇಬ್ಬರು ಒಡೆಯರಿರಲು ಸಾಧ್ಯವಾ ಪ್ರಭೂ ಅಪ್ಪಾಜಿ ರಾಜ ತನ್ನ ಸಂಚಿನಲ್ಲಿ ಜಯಶಾಲಿಯಾಗಿದ್ದರೆ ನೀವು ಈಗ ನೆನಪಾಗಿ ಉಳಿದು ಬಿಡುತ್ತಿದ್ದಿರಿ. ದೇವರು ನಿಮ್ಮ ಕಡೆಗಿದ್ದುದಕ್ಕೆ ಬದುಕಿಕೊಂಡಿರಿ. ಅಪ್ಪಾಜಿರಾಜ ಕೊಲೆಗೀಡಾದ ಎಂದರೆ ದೇವರು ಅವನ ಕಡೆ ಇರಲಿಲ್ಲ ಎಂದರ್ಥ. ಅದು ಅವನ ಪಾಪಕ್ಕೆ ದೇವರು ನೀಡಿದ ಶಿಕ್ಷೆ. ಅಂದ ಮೇಲೆ ಅದರಲ್ಲಿ ನಿಮ್ಮ ತಪ್ಪೇನೂ ನನಗೆ ಕಾಣುತ್ತಿಲ್ಲ ಪ್ರಭೂ.
ದೊಡ್ಡ ವೀರರಾಜ ನಿರುಮ್ಮಳನಾದಂತೆ ಕಂಡುಬಂದ. ಸ್ವಲ್ಪ ಹೊತ್ತಲ್ಲಿ ಅವನಿಗೆ ಮತ್ತೇನೋ ನೆನಪಾಯಿತು.
ಆದರೆ ಸಾಹೇಬರೇ, ಇಲ್ಲಿ ರಾಜಾಂಗಣದಲ್ಲಿ ನಾನು ನನ್ನ ಜೋಡು ನಳಿಗೆಯ ಕೋವಿಯಿಂದ ಗುಂಡು ಹಾರಿಸಿ ನೂರಾರು ಅಂಗರಕ್ಷಕರನ್ನು ಕೊಂದೆ. ಅವರ ರಕ್ತ ಹರಿದು ಹೋಗುವ ಕನಸು ಪದೇ ಪದೇ ಬೀಳುತ್ತಿದೆ. ಅದಕ್ಕೇನಾದರೂ ಪರಿಹಾರವಿದೆಯೇ ಸಾಹೇಬರೆ?
ಪರಿಹಾರವಿಲ್ಲದ ಯಾವುದೇ ಸಮಸ್ಯೆ ಪ್ರಪಂಚದಲ್ಲಿ ಇಲ್ಲ ಪ್ರಭೂ. ಸಂದರ್ಭ ಹೇಳಿದರೆ ಪರಿಹಾರ ಸೂಚಿಸಿಯೇನು?
ನನ್ನ ಅಂಗರಕ್ಷಕರು ನನ್ನನ್ನು ಅಂತಃಪುರದಲ್ಲಿ ಕೊಲ್ಲಲು ಪಿತೂರಿ ನಡೆಸಿದ್ದರು ಸಾಹೇಬರೇ. ಅದು ನನ್ನ ವಿಶ್ವಸನೀಯರಿಂದ ನನಗೆ ತಿಳಿದು ಬಂತು. ನಾನು ಹಾಸಿಗೆಯಲ್ಲಿ ದಿಂಬುಗಳನ್ನು ಮನುಷ್ಯಾಕೃತಿಯಲ್ಲಿ ಜೋಡಿಸಿ ಬಟ್ಟೆ ಹೊದಿಸಿದೆ. ಅಂಗರಕ್ಷಕರು ನಿಶ್ಶಬ್ದ ವಾಗಿ ಶಯನಾಗಾರವನ್ನು ಪ್ರವೇಶಿಸಿ ನಾನೆಂದೇ ತಿಳಿದು ದಿಂಬುಗಳನ್ನು ತರಿದು ಹಾಕಿದರು. ಅವರನ್ನೂ, ಇತರ ಪಿತೂರಿಗಾರರನ್ನೂ ರಾಜಾಂಗಣದಲ್ಲಿ ನಿಲ್ಲಿಸಿ ಗುಂಡು ಹಾರಿಸಿ ಕೊಂದುಬಿಟ್ಟೆ.
ಇಂಗಲ್‌ ಡ್ಯೂ ಗಟ್ಟಿಯಾಗಿ ನಕ್ಕುಬಿಟ್ಟ.
ರಾಜನ ವಿರುದ್ಧ ಪಿತೂರಿ ನಡೆಸಿದವರನ್ನು ಕೊಲ್ಲಲೇಬೇಕು. ನೀವು ನ್ಯಾಯ ನಿರ್ಣಯ ಮಾಡಿ ಶಿಕ್ಷೆ ವಿಧಿಸಿದ್ದೀರಿ. ಪಿತೂರಿ ಬಯಲಾಗದಿರುತ್ತಿದ್ದರೆ ನೀವೀಗ ಉಳಿಯುತ್ತಿದ್ದಿರಾ ಮಹಾರಾಜಾ, ತಪ್ಪಿತಸ್ಥರಿಗೆ ಶಿಕ್ಷ ವಿಧಿಸಬೇಕಾದದ್ದು ರಾಜಧರ್ಮ. ಅದಕ್ಕಾಗಿ ಕೊರಗುವುದು ತಪ್ಪು.
ಹಾಗಾದರೆ ನನ್ನ ಆಲೋಚನಾ ಕ್ರಮದಲ್ಲಿ ತಪ್ಪಿದೆ ಎನ್ನುತ್ತೀರಾ ಸಾಹೇಬರೆ?
ಹೌದು ಪ್ರಭೂ. ನೀವು ಪರಿಣಾಮವನ್ನು ನೆನಪಿಸಿಕೊಳ್ಳುತ್ತೀದ್ದೀರಿ. ಕಾರಣ ಇಲ್ಲದೆ ಪರಿಣಾಮ ಇರುವುದಿಲ್ಲವಲ್ಲಾ? ಕಾರಣಗಳನ್ನು ಮರೆತುದಕ್ಕೆ ನಿಮ್ಮ ಮನಸ್ಸು ದುರ್ಬಲವಾಗಿದೆ. ನಿಜ ಹೇಳುತ್ತಿದ್ದೇನೆ ಪ್ರಭೂ. ನೀವು ಮಾಡಿದುದರಲ್ಲಿ ನನಗೆ ಯಾವುದೂ ಪಾಪಕೃತ್ಯವಾಗಿ ಕಾಣುತ್ತಿಲ್ಲ. ಸಂದರ್ಭ ನಿಮ್ಮಿಂದ ಹಾಗೆ ಮಾಡಿಸಿದ್ದಕ್ಕೆ ನೀವು ಹೊಣೆಗಾರರಾಗುವುದಿಲ್ಲ.
ದೊಡ್ಡವೀರ ರಾಜ ಮತ್ತೆ ಯೋಚನಾ ಮಗ್ನನಾದ.
ನೀವು ಹೇಳಿದ್ದು ಸರಿ ಎನಿಸುತ್ತದೆ. ಅವೆಲ್ಲಾ ನಾನಾಗಿ ಮಾಡಿದ ಕೃತ್ಯಗಳಲ್ಲ. ಆದರೆ ಒಂದು ವಿಷಯ ನನ್ನನ್ನು ಕಾಡುತ್ತಿದೆ ಸಾಹೇಬರೇ? ಟಿಪ್ಪುವಿನ ಮರಣಕ್ಕೆ ನಾನು ಕಾರಣನಾದೆ ಎಂಬ ಕೊರಗು ನನ್ನನ್ನು ಕಾಡುತ್ತಿದೆ.
ಅಂತಹ ಭಾವನೆ ನಿಮಗೆ ಯಾಕೆ ಬರಬೇಕು?
ನಾನು ಕಂಪೆನಿ ಸರಕಾರದೊಡನೆ ಒಪ್ಪಂದ ಮಾಡಿಕೊಳ್ಳದಿರುತ್ತಿದ್ದರೆ ಕೊಡಗಿನ ಮೂಲಕ ಬ್ರಿಟಿಷ್‌ ಸೇನೆ ಶ್ರೀರಂಗಪಟ್ಟಣಕ್ಕೆ ಹೋಗಲು ಸಾಧ್ಯವಿರಲಿಲ್ಲ. ನಿಮ್ಮ ಸೈನಿಕರಿಗೆ ನಾನು ಆರು ತಿಂಗಳು ಆಹಾರ ಕೊಡದಿರುತ್ತಿದ್ದರೆ ಅವರಿಗೆ ಶ್ರೀರಂಗಪಟ್ಟಣ ಯುದ್ಧದಲ್ಲಿ ಟಿಪ್ಪುವನ್ನು ಸೋಲಿಸಲು ಅಸಾಧ್ಯವಾಗುತ್ತಿತ್ತು. ಏನೇ ಆದರೂ ಟಿಪ್ಪು ಮಹಾವೀರ. ತಾಯ್ನೆಲದ ಬಗ್ಗೆ ಅವನ ನಿಷ್ಠೆ ಪ್ರಶ್ನಾತೀತವಾದುದು. ಅವನು ಸಾಯಬಾರದಿತ್ತು.
ಅವನ ವೀರತ್ವದ ಬಗ್ಗೆ ನನಗೂ ಗೌರವವಿದೆ. ಆದರೆ ಅವನು ಫ್ರೆಂಚರೊಡನೆ ಸೇರಿದಾಗ ನೀವು ಬೇರೇನು ಮಾಡಲು ಸಾಧ್ಯವಿತ್ತು? ನೀವು ಕಂಪೆನಿ ಸರಕಾರದೊಡನೆ ಒಪ್ಪಂದ ಮಾಡಿಕೊಂಡದ್ದರಿಂದ ಕೊಡಗು ಈಗಲೂ ಸ್ವತಂತ್ರವಾಗಿ ಉಳಿದಿದೆ. ಇಲ್ಲದಿರುತ್ತಿದ್ದರೆ ಟಿಪ್ಪು ಇದನ್ನು ವಶಪಡಿಸಿಕೊಳ್ಳುತ್ತಿದ್ದ. ಟಿಪ್ಪು ಸತ್ತಾಗ ಕೊಡಗು ಕೂಡಾ ಕಂಪೆನಿ ಸರ್ಕಾರಕ್ಕೆ ಹೋಗುತ್ತಿತ್ತು. ನೀವು ಮಾಡಿದ್ದು ತುಂಬಾ ಮುತ್ಸದ್ಧಿತನದ ಕಾರ್ಯ ಮಹಾರಾಜಾ. ದೇವರಿಗಿಂತಲೂ ದೊಡ್ಡದು ಒಂದಿದೆ ಗೊತ್ತಾ? ಅದುವೇ ಸ್ವಾತಂತ್ರ್ಯ.
ದೊಡ್ಡ ವೀರರಾಜ ತಲೆದೂಗಿದ.
ಹಾಗಾದರೆ ನನ್ನ ಚಿಂತೆಗಳೆಲ್ಲಾ ಮಾನಸಿಕ ದೌರ್ಬಲ್ಯದ ಪರಿಣಾಮಗಳೆನ್ನುತ್ತೀರಾ ಸಾಹೇಬರೆ?
ನಿಸ್ಸಂದೇಹವಾಗಿ ಮಹಾಪ್ರಭೂ. ಮನೋದೌರ್ಬಲ್ಯವನ್ನು ಹಾಗೇ ಬೆಳೆಯಗೊಟ್ಟರೆ ಅದು ಹುಚ್ಚಾಗಿ ಬಿಡಬಹುದು.
ಮನೋದೌರ್ಬಲ್ಯವನ್ನು ನಿಗ್ರಹಿಸುವುದು ಹೇಗೆ?
ಸುಲಭ ಪ್ರಭೂ. ನಮ್ಮ ಆಲೋಚನೆಗಳಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಎಂಬ ಎರಡು ಪ್ರಕಾರಗಳಿವೆ. ಟಿಪ್ಪು ನನ್ನಿಂದಾಗಿ ಸತ್ತ ಎನ್ನುವ ನಿಮ್ಮ ಆಲೋಚನೆ ಋಣಾತ್ಮಕವಾದುದು. ಟಿಪ್ಪು ಬದುಕುಳಿಯುತ್ತಿದ್ದರೆ ಕೊಡಗು ಸ್ವಾತಂತ್ರ್ಯ ಕಳೆದುಕೊಳ್ಳುತ್ತಿತ್ತು. ಟಿಪ್ಪು ಸತ್ತ ಕಾರಣ ಕೊಡಗು ಸ್ವತಂತ್ರವಾಗಿ ಉಳಿದಿದೆ ಎನ್ನುವುದು ಧನಾತ್ಮಕ ಚಿಂತನೆ. ನಿಮ್ಮನ್ನು ಕಾಡುತ್ತಿರುವ ಸಮಸ್ಯೆಗಳನ್ನು ಋಣಾತ್ಮಕ ನೆಲೆಗಟ್ಟಿನಿಂದ ನೋಡದೆ ಧನಾತ್ಮಕವಾಗಿ ನೋಡಿದರೆ ನಿಮ್ಮ ಸಮಸ್ಯೆಗಳು ತಾವಾಗಿಯೇ ಪರಿಹಾರಗೊಳ್ಳುತ್ತವೆ.
ಹಾಗಾದರೆ ಮನೋನಿವೇದನೆಯ ಅಗತ್ಯವೇನು?
ಮಾನವ ಸದಾ ಪ್ರೀತಿಯ ಹುಡುಕಾಟದಲ್ಲಿರುತ್ತಾನೆ. ತನ್ನ ಪ್ರೀತಿ ಪಾತ್ರರಿಂದ ಸಂಕಷ್ಟ ಕಾಲದಲ್ಲಿ ಸಾಂತ್ವನವನ್ನು ಬಯಸುತ್ತಾನೆ. ಭಾವನೆಗಳನ್ನು ಹಿಟ್ಟಿನಂತೆ ಅದುಮಿಡ ಬಾರದು ಪ್ರಭೂ. ಮಹಾರಾಣಿಯವರಿಲ್ಲದಿದ್ದರೇನಂತೆ? ನೀವು ಅಪಾರವಾಗಿ ಪ್ರೀತಿಸುವ ಮಗಳು ಇಲ್ಲವೆ? ಈಗ ನಾನಿದ್ದೇನೆ. ನೀವು ಹೇಳುವ ಯಾವುದೇ ರಹಸ್ಯಗಳು ನನ್ನಿಂದ ಸೋರಿ ಹೋಗುವುದಿಲ್ಲ.
ಸರಿ ಸಾಹೇಬರೇ, ಈಗಾಗಲೇ ನನ್ನ ಮನಸ್ಸು ಹಗುರವಾಗಿ ಬಿಟ್ಟಿದೆ. ಮಗಳು ತೀರಾ ಚಿಕ್ಕವಳು. ಅವಳಲ್ಲಿ ಕೆಲವನ್ನು ಹೇಳಲು ಮನಸ್ಸು ಬರುತ್ತಿಲ್ಲ.
ಅವಳಲ್ಲಿ ಹೇಳಬಹುದಾದುದನ್ನು ಹೇಳಿ. ಹೇಳಬಾರದ್ದನ್ನು ದೇವರಲ್ಲಿ ಹೇಳಿಕೊಳ್ಳಿ. ದೇವರು ಇದ್ದಾನೋ ಇಲ್ಲವೋ ಖಚಿತವಾಗಿ ನನಗೆ ಗೊತ್ತಿಲ್ಲ. ಇದ್ದಾನೆಂದು ತಿಳಿದುಕೊಂಡರೆ ನಮ್ಮ ಮನಸ್ಸನ್ನೋ, ಪಾಪವನ್ನೋ ಅವನಲ್ಲಿ ನಿವೇದಿಸಿಕೊಳ್ಳಬಹುದು. ನೆಮ್ಮದಿಯಿಂದ ನಮ್ಮ ಕೆಲಸಕಾರ್ಯಗಳನ್ನು ಮಾಡಬಹುದು.
ಕೊನೆಯದೊಂದು ಪ್ರಶ್ನೆ ಸಾಹೇಬರೆ? ನಾವು ಸಂತೋಷವಾಗಿರಲು ಏನು ಮಾಡಬೇಕು?
ಸಂತೋಷವೆನ್ನುವದು ಹೊರಗೆಲ್ಲೂ ದೊರೆಯುವುದಿಲ್ಲ ಪ್ರಭೂ. ನಮ್ಮೊಳಗೆ ನಾವು ಕಂಡುಕೊಳ್ಳಬೇಕು. ಕ್ಷಮಿಸು ಮತ್ತು ಮರೆತು ಬಿಡು. ಇದು ಸಂತೋಷದ ಸೂತ್ರ.
*****

ಕೀಲಿಕರಣ : ಲೇಖಕರಿಂದ ದೊರೆತ ಗಣಕೀಕೃತ ಪ್ರತಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಜಕಾರಣ ಧರ್ಮ ಸಿನೆಮಾ ಚೌಚೌ
Next post ಅಳಿಯ ಅಯಿಪಂಣ

ಸಣ್ಣ ಕತೆ

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಮೋಟರ ಮಹಮ್ಮದ

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…