ನಂಬಿಕೆ

ನಂಬಿಕೆ

ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ… ಹೂ…. ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ ಕಡೆಗೆ ಮುಖ ಮಾಡಿ ಮಲಗಿ ಗೊರಕೆ ಹೊಡೆಯುತ್ತಿದ್ದಳು. ಅವಳ ಉಸಿರಿನ ಏರಿಳತಕ್ಕೆ ಮೂಗಿನ ಹೊಳ್ಳೆಗಳು ಹಿರಿದು ಕಿರಿದಾಗುತ್ತಿದ್ದುವು. ಆಕಸ್ಮಿಕವಾಗಿ ಉಸಿರಾಟಕ್ಕೆ ತೊಂದರೆಯಾದರೆ ಮುಂಜಾಗ್ರತೆಯಾಗಿ ಇರಲಿ ಎಂಬಂತೆ ಅವಳ ಬಾಯಿ ತೆರೆದುಕೊಂಡೇ ಇತ್ತು. ಅವಳ ಅರೆ ತೆರೆದ ಎದೆಗೆ ತಲೆಯಿಟ್ಟು ಅವಳ ಒಂದು ವರ್ಷದ ಮಗು ಬಿದ್ದುಕೊಂಡಿತ್ತು. ಸಡಿಲು ಗಂಟು ಕಟ್ಟಿ ಇಟ್ಟ ಬಟ್ಟೆಯ ಮೂಟೆಯಂತೆ ಅವಳ ಹೊಟ್ಟೆ ಚಾಪೆಯ ಮೇಲೆ ಬಿದ್ದಿತ್ತು. ಅವಳ ಬೆನ್ನಿಗೆ ಆತುಕೊಂಡು ಮತ್ತೆ ಮೂರು ಮಕ್ಕಳು ಅಡ್ಡಾದಿಡ್ಡಿ ಬಿದ್ದು ಕೊಂಡಿದ್ದುವು. ಎಲ್ಲರಿಗೂ ಗಾಡ ನಿದ್ರೆ. ತನಗೆ ಮಾತ್ರ ನಿದ್ರೆ ಬರುವುದಿಲ್ಲವೆಂದು ನೆನೆಸಿ ಕಾದ್ರಿಗೆ ಅಸೂಯೆಯಾಯಿತು. ಕಾದ್ರಿ ತಲೆ ದಿಂಬಿನಡಿಗೆ ಕೈ ಹಾಕಿ ಬೀಡಿ ಕಟ್ಟು ಹಾಗೂ ಬೆಂಕಿಪೆಟ್ಟಿಗೆ ಹೊರ ತೆಗೆದ. ಬೀಡಿ ಹೊತ್ತಿಸಿ ಒಂದು ದಮ್ಮು ಎಳೆದ. ಉರಿಯುವ ಬೀಡಿಯ ತುದಿಗೆ ತನ್ನ ಎಡಗೈಯನ್ನು ತಂದು ವಾಚು ನೋಡಿದ. ರಾತ್ರಿ ಹನ್ನೆರಡು ಗಂಟೆ. ಬರೇ ಎರಡು ಗಂಟೆಯ ನಿದ್ರೆ. ಇನ್ನು ಬೆಳಗ್ಗಿನವರೆಗೂ ನಿದ್ದೆ ಬಾರದು. ಬೀಡಿಯಿಂದ ಒಂದೊಂದೇ ದಮ್ಮು ಎಳೆದಾಗಲೆಲ್ಲಾ ಅವನು ಪಾತುವನ್ನು ನೋಡುತ್ತಿದ್ದ. ಬೀಡಿ ಎಳೆದು ಮುಗಿಯಿತು. ಕೋಣೆ ತುಂಬಾ ತಂಬಾಕಿನ ವಾಸನೆ, ಬೀಡಿಯ ಕುತ್ತಿಯನ್ನು ಗೋಡೆಗೆ ಒತ್ತಿ ಹಿಡಿದು ಬೆಂಕಿಯನ್ನು ನಂದಿಸಿ ಅಲ್ಲೇ ಕುತ್ತಿಯನ್ನು ಮೂಲೆಗೆ ಬಿಸಾಡಿದ. ಕಾದ್ರಿ ಕುಳಿತಲ್ಲಿಂದಲೇ ಸ್ವಲ್ಪ ಮುಂದೆ ಬಾಗಿ ಪಾತುವಿನ ಭುಜ ಮುಟ್ಟಿ ಅಲುಗಾಡಿಸಿ ಮೆಲುಧ್ವನಿಯಲ್ಲಿ “ಪಾತು… ಏ ಪಾತು…” ಎಂದು ಕರೆದ. ಪಾತುವಿಗೆ ಎಚ್ಚರವಾಗಲಿಲ್ಲ. ಹಾಗೇ ಸುಲಭದಲ್ಲಿ ಎಚ್ಚರವಾಗುವ ಜಾಯಮಾನವೂ ಅವಳದಲ್ಲ. ಬೆಳಿಗ್ಗೆಯಿಂದ ರಾತ್ರಿ ಹತ್ತುಗಂಟೆಯವರೆಗೂ ಮನೆ ಕೆಲಸ, ಅಡುಗೆ ಕೆಲಸ, ಬಟ್ಟೆ ಒಗೆಯುವ ಕೆಲಸ, ಮಕ್ಕಳ ಆರೈಕೆ ಹಾಗೂ ಬಿಡುವಾದಾಗಲೆಲ್ಲಾ ಮೈ ಬಗ್ಗಿಸಿ, ಬೀಡಿ ಕಟ್ಟಿ ಕಟ್ಟಿ ಸುಸ್ತಾಗಿ, ಚಾಪೆ ಕಂಡ ಕೂಡಲೇ ನಿದ್ರೆ ಹೋಗುವ ಪಾತು ಮತ್ತೆ ಎಚ್ಚರಗೊಳ್ಳುವುದು ಬೆಳಗ್ಗಿನ ಮಸೀದಿಯ ಬಾಂಗಿನ ಶಬ್ದಕ್ಕೆ, ತಪ್ಪಿದರೆ ಸಣ್ಣ ಮಗು ಏನಾದರೂ ಅತ್ತರೆ ಎಚ್ಚರಗೊಳ್ಳುತ್ತಿದ್ದಳು. ಕಾದ್ರಿ ಮತ್ತೊಮ್ಮೆ ಬಾಗಿ “ಪಾತು…. ಏ ಪಾತೂ….” ಅಂದ. ಪಕ್ಕಕ್ಕೆ ವಾಲಿ ಮಲಗಿದ ಪಾತು ಕೊಸರಿಕೊಂಡು “ಏನು….” ಎಂದು ನಿದ್ದೆಗಣ್ಣಿನಲ್ಲಿ ಉಲಿಯುತ್ತಾ ಅಂಗಾತ ಮಲಗಿದಾಗ ಅವಳ ಹೊಟ್ಟೆಯ ಕಟ್ಟು, ಒಮ್ಮೆ ಲಘು ಕಂಪನವಾದಂತೆ ಅಲುಗಾಡಿ ಸ್ವಸ್ಥಿತಿಗೆ ಬಂದು ಕುಳಿತಿತು. ಕಾದ್ರಿ ಮತ್ತೊಮ್ಮೆ ತಲೆ ಕರೆದ. ತನ್ನ ಹರಿದ ಲುಂಗಿಯನ್ನು ಕೂತಲ್ಲೇ ಸರಿಪಡಿಸಿದ. ತೊಡೆಯ ಸಂಧಿಯನ್ನು ಪರಪರ ಕರೆದ. “ಗುಂಯ್…” ಎಂದು ಎಡ ಕಿವಿಯ ಹತ್ತಿರ ಲಾಲಿ ಹಾಡಿದ ಸೊಳ್ಳೆಗೆ ತನ್ನ ಬಲಕೈಯಿಂದ ಬಲವಾಗಿ ಹೊಡೆದಾಗ ಪೆಟ್ಟು ಆಯತಪ್ಪಿ ಅವನ ಕಿವಿಗೆ ಬಿದ್ದು ನೋವಾದಾಗ ಅವನ ಕೋಪ ನೆತ್ತಿಗೇರಿತು. “ಮೂಗಿನವರೆಗೂ ತಿಂದು ಮುದಿ ಹೆಣ್ಣು ಹಂದಿಯಂತೆ ಬಿದ್ದು ಕೊಂಡಿದ್ದಾಳೆ. ಸ್ವಲ್ಪವಾದರೂ ಲೋಕದ ಅರಿವು ಬೇಡವೇ? ಕಳ್ಳಕಾಕರು ಬಂದು ಲೂಟಿ ಮಾಡಿ ಇವಳನ್ನು ಎತ್ತಿಕೊಂಡು ಹೋದರೂ ಇವಳಿಗೆ ಎಚ್ಚರವಾಗುವುದಿಲ್ಲ. ಜವಾಬ್ದಾರಿ ಇದ್ದರೆ ತಾನೇ?” ಎಂದು ಗುಣುಗುಟ್ಟುತ್ತಾ ಮತ್ತೊಮ್ಮೆ ಜೋರಾಗಿ ಕರೆದ.

“ಪಾತೂ…. ಏ… ಕತ್ತೇ….”

ಏನೋ ಶಬ್ದ ಆದಂತಾಗಿ ಪಾತು ಕಣ್ಣು ಬಿಟ್ಟು ನೋಡಿದಳು. ಕಾದ್ರಿ ಬಾಗಿ ಅವಳನ್ನೇ ನೋಡುತ್ತಿದ್ದ. ಅವಳು ಜೋರಾಗಿ ಆಕಳಿಸಿದಳು. ರಾತ್ರಿಯ ಮೀನಿನ ಊಟದ ವಾಸನೆ ಅವಳ ಬಾಯಿಂದ ಹೊರ ಬಂದು ಅವನ ಮೂಗಿಗೆ ಬಡಿದಾಗ ಅವನು ಮುಖ ತಿರುಗಿಸಿದ. ಪಾತು ಎಚ್ಚರಗೊಂಡು ತನ್ನನ್ನೇ ಎವೆಯಿಕ್ಕದೆ ನೋಡುತ್ತಿದ್ದ ಕಾದ್ರಿಯನ್ನು “ಏನು…” ಎಂದು ಕೇಳಿದಳು.

“ನೀನು ಮಲಗಿದ್ದೀಯಾ…?” ಕಾದ್ರಿ ತಲೆ ಓರೆ ಮಾಡಿಕೊಂಡು ತನ್ನ ಗಡ್ಡವನ್ನು ಒಮ್ಮೆ ಎಡಗೈಯಿಂದ ತೀಡಿದ.

“ಇಲ್ಲ….. ಕುಳಿತುಕೊಂಡು ಜೋಗುಳ ಹಾಡುತ್ತಿದ್ದೇನೆ. ದಿನಾಲೂ ಇದೇ ಅವಸ್ಥೆ. ತಾನು ಮಲಗುವುದಿಲ್ಲ, ಮಲಗುವವರನ್ನು ಸುಮ್ಮನೆ ಮಲಗಲೂ ಬಿಡುದಿಲ್ಲ. ರಾತ್ರಿಯ ಈ ಕಸರತ್ತಿಗೇನೂ ಬರಯಿಲ್ಲ, ಈ ಮನೆಯಲ್ಲಿ, ದುಡಿಯಲು ಹೇಳಿದಾಗ ಮಾತ್ರ ಎಲ್ಲಾ ಕಾಯಿಲೆ ಶುರು ಆಗುತ್ತದೆ.” ಪಾತು ಒಂದೇ ಸವನೆ ಲೊಟಗುಟ್ಟುತ್ತಾ ಎಡಕ್ಕೆ ಸರಿದು ತನ್ನ ಎರಡೂ ಕಾಲುಗಳನ್ನು ಜೋಡಿಸಿಕೊಂಡು ಕಣ್ಣು ಮುಚ್ಚಿದಳು. ಕಾದ್ರಿ ನೋಡು ನೋಡುತ್ತಿದ್ದಂತೆ ಅವಳು ಬಾಯಿಯನ್ನು ತೆರೆದಿಟ್ಟು ಗೊರಕೆ ಹೊಡೆಯ ತೊಡಗಿದಳು. ಬಂದ ದಾರಿಗೆ ಸುಂಕವಿಲ್ಲವೆಂದು ನೆನೆದು ಕಾದ್ರಿ ಬೀಡಿಕಟ್ಟು ಮತ್ತು ಬೆಂಕಿ ಪೆಟ್ಟಿಗೆ ಹಿಡಿದುಕೊಂಡು ಕೋಣೆಯ ಹೊರಗೆ ಬಂದ. ವರಾಂಡದಲ್ಲಿ ಇನ್ನಿಬ್ಬರು ಮಕ್ಕಳು ಬಿದ್ದುಕೊಂಡಿದ್ದರು. ಒಬ್ಬನ ತಲೆ ಕುರ್ಚಿಯ ಅಡಿಗೆ ಹೊಕ್ಕಿದ್ದರೆ ಮತ್ತೊಬ್ಬನ ಕಾಲು ತಲೆದಿಂಬಿನ ಮೇಲಿತ್ತು. ಕಾದ್ರಿ ಹೊರಗಿನ ಬಾಗಿಲು ತೆರೆದು ಅಂಗಳದ ಮೂಲೆಯಲ್ಲಿರುವ ತೆಂಗಿನ ಮರದ ಹತ್ತಿರ ಕುಳಿತು ಉಚ್ಚೆ ಹೋದ. ಅಲ್ಲಿಯೇ ಇದ್ದ ನೀರು ತುಂಬಿದ ಬಕೆಟಿಗೆ ಕೈಯಾಡಿಸಿ ಕಾಲು ತೊಳೆದುಕೊಂಡ. ಪಕ್ಕದಲ್ಲಿದ್ದ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಕುಳಿತು ಇನ್ನೊಂದು ಬೀಡಿಗೆ ಕೈ ಹಾಕಿದ.

ಮಧ್ಯ ವಯಸ್ಸಿನ ಕಾದ್ರಿಗೆ ಹೊಸತಾಗಿ ಕಾಡಿದ ಕಾಯಿಲೆ ಎಂದರೆ ರಾತ್ರಿ ನಿದ್ರೆ ಬರುವುದಿಲ್ಲ. ಸುಮಾರು ಹತ್ತು ಗಂಟೆಗೆ ಮಲಗಿದರೆ ಹನ್ನೆರಡು ಗಂಟೆಗೆ ಎಚ್ಚರಗೊಳ್ಳುತ್ತಿದ್ದ. ಮತ್ತೆ ಬೆಳಗ್ಗಿನ ಮಸೀದಿಯ ಬಾಂಗಿನ ಶಬ್ದ ಕೇಳುವವರೆಗೂ ಹೊರಳಾಟ, ಕಾದ್ರಿ ಸ್ವಲ್ಪಮಟ್ಟಿಗೆ ಸೋಮಾರಿ. ವಾರದಲ್ಲಿ ಮೂರು ದಿನ ಮೈ ಮುರಿದು ಕೂಲಿ ಮಾಡಿದರೆ ನಾಲ್ಕು ದಿನ ತಿರುಗಾಡುತ್ತಿದ್ದ. ಸ್ವಲ್ಪ ಸಿನಿಮಾ ಹಾಗೂ ಇಸ್ಪೀಟಿನ ಹುಚ್ಚು. ನಿದ್ರೆ ಬಾರದ ಬಗ್ಗೆ ತನ್ನ ಗೆಳೆಯರೊಂದಿಗೆ ಅಹವಾಲು ತೋಡಿಕೊಂಡ. “ನಿನಗೆ ನಿದ್ರೆ ಬರುವುದು ಹೇಗೆ? ಮೈ ಮುರಿದು ದಿನಾಲೂ ದುಡಿ, ನಿದ್ರೆ ತನ್ನಷ್ಟಕ್ಕೆ ಬರುತ್ತದೆ” ಎಂದರು. ಕಾದ್ರಿ ಒಮ್ಮೊಮ್ಮೆ ಒಂದೊಂದು ವಾರ ಎಡೆಬಿಡದೆ ಕೂಲಿ ಮಾಡಿದ. ಊಹೂ…. ನಿದ್ರೆ ಬರಲೊಲ್ಲದು. ಬರೇ ನಿದ್ರೆ ಬರದಿದ್ದರೆ ಅವನಿಗೆ ಸಮಸ್ಯೆ ಇಲ್ಲ. ಅಲ್ಪಸ್ವಲ್ಪ ಬರುವ ನಿದ್ರೆಯ ಮಧ್ಯೆ ಎಂತೆಂತಹ ಭಯಾನಕ ಕನಸುಗಳು! ಕೆಲವು ರೌಡಿಗಳು ಚಾಕು, ಮಚ್ಚು ಹಿಡಿದುಕೊಂಡು ಅಟ್ಟಿಸಿ ಬಂದ ಹಾಗೇ, ಕಾದ್ರಿ ಓಡುತ್ತಾ ಓಡುತ್ತಾ ಹಾಳು ಬಾವಿಗೆ ಬಿದ್ದ ಹಾಗೇ. ಕೆಲವೊಮ್ಮೆ ರಸ್ತೆ ಬದಿಯಲ್ಲಿ ನಡೆದಾಡುವಾಗ ಕಾಳಿಂಗ ಸರ್ಪಗಳು ಬೆನ್ನಟ್ಟಿ ಕಚ್ಚಿದ ಹಾಗೇ ಇತ್ಯಾದಿ… ಇತ್ಯಾದಿ… ಈ ರೀತಿ ಕನಸುಗಳು ಬಿದ್ದಾಗ ಅವನ ಇಡೀ ಮೈ ಬೆವರುತ್ತಿತ್ತು. ದೇಹ ನಡುಗುತ್ತಿತ್ತು. ಅವನು ಚೀರಿಕೊಂಡು ಕುಳಿತು ಬಿಡುತ್ತಿದ್ದ. ಮತ್ತೆ ಬೆಳಿಗ್ಗೆಯವರೆಗೂ ನಿದ್ರೆ ಇಲ್ಲ.

ಆ ಊರಿಗೆ ಒಬ್ಬರೇ ಒಬ್ಬರು ಹೋಮಿಯೋಪತಿ ಡಾಕ್ಟರು. ಅದೂ ಅವರು ಮಧ್ಯಾಹ್ನದವರೆಗೆ ಮಾತ್ರ ಇರುತ್ತಿದ್ದರು. ಭಾನುವಾರ ರಜೆ. ತನ್ನ ಗೆಳೆಯರ ಸಲಹೆಯಂತೆ ಕಾದ್ರಿ ಡಾಕ್ಟರಲ್ಲಿ ಹೋದ. ಎಲ್ಲಾ ವಿಷಯ ಕೇಳಿದ ಡಾಕ್ಟರು ಅವನಿಗೆ ಕೆಲವು ಮಾತ್ರೆ ಹಾಗೂ ತಲೆಗೆ ಹಾಕಲು ತೈಲ ಕೊಟ್ಟರು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಕಾದ್ರಿಯ ನಿದ್ದೆಯಿಲ್ಲದ ರಾತ್ರಿಗಳ ಸಂಖ್ಯೆ ಜಾಸ್ತಿಯಾಗ ತೊಡಗಿತು. ಒಂದು ದಿನ ಕಾದ್ರಿ ಮಸೀದಿಯ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೂಸೆ ಎದುರಾದ. ಮೂಸೆಯನ್ನು ಕಂಡರೆ ಕಾದ್ರಿಗೆ ಯಾವಾಗಲೂ
ಮುಜುಗರ. ಯಾಕೆಂದರೆ ಮೂಸೆ ದಿನದ ಐದು ಹೊತ್ತು ಮಸೀದಿಗೆ ನಮಾಜಿಗೆ ಹೋಗುತ್ತಿದ್ದ ಮತ್ತು ಮಸೀದಿಯ ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ಸಕ್ರಿಯವಾಗಿ ಪಾಲುಗೊಳ್ಳುತ್ತಿದ್ದ. ಆದರೆ ಕಾದ್ರಿ ನಿಯತ್ತಿನಲ್ಲಿ ಶುಕ್ರವಾರ ಕೂಡಾ ಮಸೀದಿಗೆ ಹೋಗುವುದು ಬಹಳ ಅಪರೂಪ. ಬಾಂಗಿನ ಶಬ್ದ ಕಿವಿಗೆ ಅಪ್ಪಳಿಸಿದರೂ ಅವನು ಮಸೀದಿ ಕಡೆ ಹೆಜ್ಜೆ ಹಾಕುತ್ತಿರಲಿಲ್ಲ. ಈ ಕುರಿತು ಮೂಸೆ, ಕಾದ್ರಿಗೆ ಹಲವು ಬಾರಿ ಉಪದೇಶ ಮಾಡಿದ್ದ. ಆದರೆ ಅದಾವುದೂ ಪ್ರಯೋಜನಕ್ಕೆ ಬೀಳಲಿಲ್ಲ. ಈಗ ಮೂಸೆಯನ್ನು ಕಂಡು ಕಾಣದಂತೆ ತಪ್ಪಿಸಿ ಹೋಗಲು ಕಾದ್ರಿಗೆ ಆಗಲಿಲ್ಲ. ಕಾದ್ರಿಯನ್ನು ತಡೆದು ನಿಲ್ಲಿಸಿ ಮೂಸೆ ಕೆಲವು ಉಪದೇಶ ನೀಡಿದ. ಕಾದ್ರಿ ತನ್ನ ನಿದ್ರಾಹೀನತೆಯ ಬಗ್ಗೆ ಅವನಲ್ಲಿ ಅಹವಾಲು ತೋಡಿಕೊಂಡ. ಮೂಸೆಗೆ ಕಾದ್ರಿಯನ್ನು ತಿದ್ದಲು ಒಳ್ಳೆಯ ಅವಕಾಶ ಸಿಕ್ಕಿತು.

“ನೋಡು ಕಾದ್ರಿ, ಮನುಷ್ಯ ಜನ್ಮಕ್ಕೆ ಒಂದು ಅರ್ಥ ಇದೆ. ಈ ಲೋಕದ ಬಾಳು ಕ್ಷಣಿಕ, ನಶ್ವರ, ಪರಲೋಕದ ಶಾಶ್ವತ ಸುಖಕ್ಕಾಗಿ ನೀನು ಏನಾದರೂ ಗಳಿಸಿದ್ದೀಯಾ? ಇಲ್ಲ. ನಾಳೆ ಪಶ್ಚಾತ್ತಾಪ ಪಡುವ ದಿನ ಬರುತ್ತದೆ. ಆಗ ನಿನ್ನ ಸಹಾಯಕ್ಕೆ ಯಾರೂ ಬರುದಿಲ್ಲ, ತಿಳಿದುಕೋ.” ಮೂಸೆ ಲಘುವಾಗಿ ತನ್ನ ಭಾಷಣ ಜಾರಿ ಮಾಡಿದ.

“ನೀನು ಹೇಳುವುದು ಸರಿ ಮೂಸೆ. ಆದರೆ ನಾನು ತುಂಬಾ ತೊಂದರೆಯಲ್ಲಿದ್ದೇನೆ. ನನಗೆ ಕೆಲವು ತಿಂಗಳಿಂದ ರಾತ್ರಿ ನಿದ್ದೆ ಬರುವುದಿಲ್ಲ. ಹುಚ್ಚು ಹಿಡಿಯಲು ಮಾತ್ರ ಬಾಕಿಯಿದೆ. ನೀನು ನಿನ್ನದೇ ಮಾತು ಆಡುತ್ತೀಯಾ. ನಿನಗೆ ಮಕ್ಕಳಿಂದ ಹಣ ಸೌದಿಯಿಂದ ಬರುತ್ತದೆ. ಆರಾಮವಾಗಿದ್ದೀಯಾ, ನಮ್ಮ ಬಡವರ ಕಷ್ಟ ನಿನಗೇನು ಗೊತ್ತು. ಬೇಕಾದಷ್ಟು ಸಂಪತ್ತು ಇದ್ದರೆ ನಾನು ಕೂಡಾ ಭಾಷಣ ಬಿಗಿಯುತ್ತೇನೆ” ಕಾದ್ರಿ ಸ್ವಲ್ಪ ಖಾರವಾಗಿ ಉತ್ತರಿಸಿದ. ಮೂಸೆಗೆ ಕಾದ್ರಿಯ ಮಾತು ಸ್ವಲ್ಪ ತಾಗಿತು. ಅವನು ತನ್ನ ಮಾತಿನ ವರಸೆ ಬದಲು ಮಾಡಿದ.

“ಅಲ್ಲಾ ಕಾದ್ರಿ, ನಾನು ಹೇಳುವುದು ಸ್ವಲ್ಪ ನಿಯತ್ತಿನಲ್ಲಿ ನೀನು ಬದುಕಬೇಕೆಂದು. ದೇವರ ಭಯ ಸ್ವಲ್ಪ ಇರಲಿ ಅಂತ ನಿನಗೆ ಎಚ್ಚರಿಸಿದೆ. ರಾತ್ರಿ ಮಸೀದಿಗೆ ಬಾ. ಗುರುಗಳಲ್ಲಿ ಮಾತಾಡುವ. ನಿನ್ನ ನಿದ್ರೆ ಬಾರದ ಕಾಯಿಲೆಗೆ ಅವರಲ್ಲಿ ಖಂಡಿತ ಮದ್ದುಂಟು. ಎಂತೆಂತಹ ಕಾಯಿಲೆಗಳನ್ನು ಅವರು ವಾಸಿ ಮಾಡಿದ್ದಾರೆ ಗೊತ್ತಾ? ತಪ್ಪದೆ ಬಾ, ನಿನಗಾಗಿ ಕಾಯುತ್ತಿರುತ್ತೇನೆ.” ಕಾದ್ರಿಯ ಉತ್ತರಕ್ಕೂ ಕಾಯದೆ ಮೂಸೆ ಹೊರಟು ಹೋದ. ಕಾದ್ರಿಗೆ ಮೂಸೆ ಮಾತು ಸರಿ ಕಂಡಿತು. ಗುರುಗಳ ಬಗ್ಗೆ ಅವನಿಗೆ ಹೆಚ್ಚಿನ ಸಂಪರ್‍ಕವಿಲ್ಲದಿದ್ದರೂ ಅವರ ಬಗ್ಗೆ ಜಮಾತಿನವರು ಹೊಗಳುತ್ತಿರುವುದನ್ನು ಕೇಳಿದ್ದ. ನೋಡೋಣ. ಇದೂ ಒಂದು ಪ್ರಯತ್ನ ಮಾಡುವ ಎಂದು ತೀರ್ಮಾನಿಸಿ ರಾತ್ರಿ ಮಸೀದಿಗೆ ಹೋದ. ರಾತ್ರಿಯ ಪ್ರಾರ್ಥನೆ ಮುಗಿದ ಮೇಲೆ ಮೂಸೆ ಕಾದ್ರಿಯ ನಿದ್ರೆಯಿಲ್ಲದ ರಾತ್ರಿಯ ಬಗ್ಗೆ ಗುರುಗಳಲ್ಲಿ ವಿವರವಾಗಿ ಹೇಳಿದ. ಎಲ್ಲವನ್ನೂ ಕೇಳಿಸಿಕೊಂಡ ಗುರುಗಳು ಮುಗುಳ್ನಕ್ಕರು. ತನ್ನ ಪಕ್ಕದಲ್ಲಿದ್ದ ಪೆಟ್ಟಿಗೆಯಿಂದ ಒಂದು ಸಣ್ಣ ಜಪದ ಉಂಗುರ ಹೊರ ತೆಗೆದರು. ಅದನ್ನು ಕಾದ್ರಿಯ ಎಡಕೈಯ ತೋರು ಬೆರಳಿಗೆ ಸಿಕ್ಕಿಸಿದರು. ಕಾದ್ರಿಯ ಬಲಕೈಯನ್ನು ತನ್ನ ಎರಡೂ ಕೈಯಿಂದ ಎತ್ತಿ ಅದುಮುತ್ತಾ ಹೇಳಿದರು. “ಸೃಷ್ಟಿಕರ್ತನ ಬಗ್ಗೆ ನಂಬಿಕೆ ಅಚಲವಾಗಿರಲಿ. ಒಳಿತೂ ಕೆಡುಕೂ ಅವನಿಂದಲೇ ಬರುತ್ತದೆ. ನಿನ್ನ ನಿಯತ್ತು ಯಾವಾಗಲೂ ಸಡಿಲವಾಗಲು ಬಿಡಬೇಡ, ಈ ನಿನ್ನ ಬೆರಳಲ್ಲಿರುವ ಬೆಳ್ಳಿ ಉಂಗುರದ ಮೇಲೆ ಒಂದು ಬಟನ್ ಇದೆ. ಅದನ್ನು ಒತ್ತುತ್ತಾ ದೇವರ ನಾಮವನ್ನು ಸ್ತುತಿಸು. ನಿನಗೆ ಸಮಯ ಸಿಕ್ಕಾಗಲೆಲ್ಲಾ ಸ್ತುತಿಸುತ್ತಾ ಇರು. ಶೈತಾನ ಓಡಿ ಹೋಗುತ್ತಾನೆ. ಖಂಡಿತ ನಿನ್ನ ಕಾಯಿಲೆ ಗುಣವಾಗುತ್ತದೆ. ಅಂದ ಹಾಗೇ ಮಸೀದಿಗೆ ನಮಾಜಿಗೆ ಬರುವುದನ್ನು ತಪ್ಪಿಸಬೇಡ” ಗುರುಗಳು ಎದ್ದು ವಿಶ್ರಾಂತಿಗೆ ಹೋದರು. ಅವರು ಹೆಚ್ಚು ಮಾತಾಡುವವರಲ್ಲ ಎಂಬ ಪ್ರತೀತಿ ಮೊದಲೇ ಇತ್ತು. ಯಾಕೋ ಗುರುಗಳ ಮಾತು ಸರಿ ಕಂಡಿತು ಕಾದ್ರಿಗೆ, ಕಾದ್ರಿ ಗುರುಗಳ ಆದೇಶದಂತೆ ನಡೆಯತೊಡಗಿದ. ಅವನಲ್ಲಾದ ಬದಲಾವಣೆಯಿಂದ ಊರಿನ ಬಾಂಧವರಿಗೆ, ಹೆಂಡತಿ ಮಕ್ಕಳಿಗೆ ಸಂತೋಷವಾಯಿತು. ಕಾದ್ರಿ ಮೂಸೆಯ ಅನುಯಾಯಿಯಾದ. ಆದರೆ ನಿದ್ರೆಯಿಲ್ಲದ ರಾತ್ರಿಗಳ ಸಂಖ್ಯೆ ಇನ್ನೂ ಜಾಸ್ತಿಯಾಗ ತೊಡಗಿದುವು.

ಮೂಸೆಗೆ ಗಾಬರಿಯಾಗ ತೊಡಗಿತು. ಕಾದ್ರಿ ಹೆಚ್ಚಿನ ಸಮಯವನ್ನು ಮಸೀದಿಯಲ್ಲೇ ಕಳೆಯ ತೊಡಗಿದ. ಕೆಲಸಕ್ಕೂ ಸರಿಯಾಗಿ ಹೋಗುತ್ತಿರಲಿಲ್ಲ. ನಡುರಾತ್ರಿ ಎದ್ದು ಕೊಂಡು ಕುಳಿತು ಜಪಿಸುತ್ತಿದ್ದ. ಕೊನೆ ಕೊನೆಗೆ ಮಸೀದಿಯ ಒಳಗೂ ಹೊರಗೂ ನಡೆದಾಡುತ್ತಾ, ಮಂತ್ರ ಜಪಿಸುತ್ತಾ ಇರುತ್ತಿದ್ದ. ಆದರೆ ಅವನ ನಿದ್ರಾಹೀನತೆಯ ಕಾಯಿಲೆ ಗುಣವಾಗಲಿಲ್ಲ. ಕೊನೆಗೆ ಮೂಸೆ, ಕಾದ್ರಿಯನ್ನು ಮಂಗಳೂರಿನ ಪ್ರಖ್ಯಾತ ಮಾನಸಿಕ ತಜ್ಞರಲ್ಲಿ ಕರಕೊಂಡು ಹೋದ. ಎಲ್ಲಾ ರೀತಿಯ ಪರೀಕ್ಷೆಗಳು ನಡೆದುವು. ದೊಡ್ಡ ಪೈಲು ನಿರ್ಮಾಣವಾಯಿತು. ಡಾಕ್ಟರು ಅವನ ಪೈಲನ್ನು ಕೂಲಂಕುಶ ಓದಿದರು. ನಂತರ ಕಾದ್ರಿಯನ್ನು ದೀರ್ಘವಾಗಿ ಪರೀಕ್ಷಿಸಿದರು. ಅವರ ಮುಖದಲ್ಲಿ ಒಂದ ಸಣ್ಣಗೆ ನಗು ಮೂಡಿತು. ಕಿವಿಗಿಟ್ಟಿದ್ದ ತನ್ನ ಸ್ಟೆತಾಸ್ಕೋಪನ್ನು ಕೆಳಗಿಟ್ಟರು.

“ಇದು ಕಾಯಿಲೆಯೇ ಅಲ್ಲ. ಯಾಕೆ ಗಾಬರಿಯಾಗುತ್ತೀರಿ? ಎಲ್ಲಾ ಸರಿಯಾಗುತ್ತದೆ. ಇವರಿಗೆ ಬ್ಲಡ್‌ಪ್ರಶರ್ ಇಲ್ಲ, ಡಯಾಬಿಟಿಸ್ ಇಲ್ಲ, ಹೃದ್ರೋಗ ಇಲ್ಲ, ಮಾನಸಿಕ ಕಾಯಿಲೆ ಇಲ್ಲವೇ ಇಲ್ಲ. ಬರೇ ಪೌಷ್ಠಿಕ ಆಹಾರದ ಕೊರತೆ ಮತ್ತು ನಿರ್ಲಕ್ಷತನದಿಂದ ಈ ರೀತಿ ಇವರ ನಿದ್ರೆ ಹಾರಿ ಹೋಗಿದೆ. ನಾನು ಮೂರು ದಿನದ ಮದ್ದು ಕೊಡುತ್ತೇನೆ. ದಿನಕ್ಕೆ ಒಂದೇ ಮಾತ್ರ. ಅದೂ ರಾತ್ರಿ ಊಟದ ನಂತರ ಸೇವಿಸಬೇಕು. ಆದರೆ ಈ ಮಾತ್ರೆ ಬಹಳ ಪರಿಣಾಮಕಾರಿಯಾದ ಮಾತ್ರೆ. ಇದನ್ನು ತಿಂದ ಮೇಲೆ ನಡೆದಾಡಬಾರದು. ಕೂಡಲೇ ಮಲಗಿಬಿಡಬೇಕು. ಇಲ್ಲದಿದ್ದರೆ ಕ್ಷಣಾರ್ಧದಲ್ಲಿ ನಿದ್ರೆ ಬಂದು ಬಿದ್ದು ಬಿಡುವ ಸಾಧ್ಯತೆಯಿದೆ. ಆದುದರಿಂದ ಊಟ ಆದ ನಂತರ ಹಾಸಿಗೆಯಲ್ಲಿ ಕುಳಿತುಕೊಂಡು ಮಾತ್ರೆ ಕುಡಿದು ಕಣ್ಣು ಮುಚ್ಚಿ ಕೂಡಲೇ ಮಲಗಿ ಬಿಡಿ. ಏನೇ ಆದರೂ ಏಳಬಾರದು, ಯಾರು ಕರೆದರೂ ಎದ್ದು ಹೋಗಬಾರದು. ಯಾಕೆಂದರೆ ಒಂದು ಕ್ಷಣದಲ್ಲಿ ನಿದ್ರೆ ಬಂದು ಬಿಡುತ್ತದೆ, ಜಾಗ್ರತೆಯಿರಲಿ.” ಮೂಸೆ, ಕಾದ್ರಿಯ ಮುಖ ನೋಡಿದ. ಕಾದ್ರಿಯ ಮುಖ ಅರಳಿತು. ಎಷ್ಟೋ ತಿಂಗಳಿಂದ ಅವನ ಮುಖದಲ್ಲಿ ನಗೆ ಕಂಡಿರಲಿಲ್ಲ. ಮೂಸೆಗೆ ಸಂತೋಷವಾಯಿತು. ಡಾಕ್ಟರಿಂದ ಮಾತ್ರೆ ಪಡೆದು ಮನೆಗೆ ಬಂದ ಕಾದ್ರಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಬಾಯಲ್ಲಿ ಸಿನಿಮಾ ಹಾಡು ಗುಣುಗುಟ್ಟುತ್ತಿತ್ತು. ಹೆಂಡತಿಯೊಂದಿಗೆ ಬಹಳ ಅಕ್ಕರೆಯಿಂದ ಮಾತಾಡಿಸಿದ. ಮಕ್ಕಳನ್ನು ಮುದ್ದು ಮಾಡಿದ. ಅವರೊಂದಿಗೆ ಆಟ ಆಡಿದ. ಕಾದ್ರಿ ನಿದ್ರೆ ಬರುವ ರಾತ್ರಿಗಾಗಿ ಕಾಯುತ್ತಿದ್ದ.

ರಾತ್ರಿಯಾಯಿತು, ಊಟದ ಸಮಯ. ಬಂಗಡೆ ಮೀನಿನ ಪದಾರ್ಥ, ಹೊಟ್ಟೆ ತುಂಬಾ ಉಂಡ ಕಾದ್ರಿ, ಹೊರಗೆ ಹೋಗಿ ಉಚ್ಚೆ ಹೊಯ್ದು ಬಂದ. ಇದುವರೆಗೆ ಚಾಪೆಯನ್ನು ಹಾಸಿರದ ಕಾದ್ರಿ ತನ್ನ ಹರಕು-ಮುರುಕು ಚಾಪೆಯನ್ನು ವರಾಂಡದಲ್ಲಿ ಹಾಸಿದ. ತಲೆದಿಂಬಿನ ತೂತಿನಿಂದ ಹೊರಗೆ ಬಂದ ಚಿಂದಿ ಬಟ್ಟೆ ಚೂರುಗಳನ್ನು ತನ್ನ ಬೆರಳಿಂದ ಒಳಗೆ ದೂಡಿ, ಕೈಯಿಂದ ಗುದ್ದಿ, ತಲೆಯ ಬದಿಗೆ ತಲೆದಿಂಬನ್ನು ಇಟ್ಟ. ಹೊದ್ದುಕೊಳ್ಳಲು ಅಲ್ಲಿಯೇ ಹಗ್ಗದ ಮೇಲೆ ನೇತಾಡುತ್ತಿದ್ದ ಹಳೆಯ ಲುಂಗಿಯನ್ನು ಎಳಕೊಂಡು ಚಾಪೆಯ ಮೇಲೆ ಕುಳಿತ. ಕಿಸೆಯಲ್ಲಿದ್ದ ಬೀಡಿ ಕಟ್ಟು ಹಾಗೂ ಬೆಂಕಿ ಪೊಟ್ಟಣವನ್ನು ತಲೆದಿಂಬಿನ ಪಕ್ಕದಲ್ಲಿ ಕೈಗೆ ಎಟಕುವಂತೆ ಇಟ್ಟುಕೊಂಡ. ಡಾಕ್ಟರು ಕೊಟ್ಟ ಮಾತ್ರ ಕಟ್ಟನ್ನು ಬಿಚ್ಚಿ ಒಂದು ಮಾತ್ರೆಯನ್ನು ತೊಡೆಯ ಮೇಲಿಟ್ಟು ಉಳಿದ ಮಾತ್ರೆಯನ್ನು ಕಟ್ಟಿ ತಲೆದಿಂಬಿನ ಅಡಿಯಲ್ಲಿಟ್ಟ. ತೊಡೆಯ ಮೇಲಿನ ಮಾತ್ರೆಯನ್ನು ಎಡಕೈಯಲ್ಲಿ ಹಿಡಿದು ಜೋರಾಗಿ ಹೆಂಡತಿಯನ್ನು ಕೂಗಿದ.

“ಲೇ ಪಾತೂ… ಕುಡಿಯಲು ಒಂದು ಲೋಟ ನೀರು ತಾ.”

ಪಾತು ಲೋಟದಲ್ಲಿ ನೀರು ತಂದು ಕೊಟ್ಟಳು. ಅವಳಿಗೆ ನಗು ಬಂತು. ಯಾವಾಗಲೂ ಒಳಗೆ ಮಲಗುವ ಗಂಡ ಇವತ್ತು ಒಬ್ಬನೇ ವರಾಂಡದಲ್ಲಿ ಮಲಗಿದ್ದಾನೆ. ಅದೂ ತನ್ನ ಚಾಪೆಯನ್ನು ತಾನೇ ಹಾಸಿಕೊಂಡು, ಪಾತು ಹಿಂತಿರುಗಿ ಹೋಗುವಾಗ ಮೂಸ ಜೋರಾಗಿ ಹೇಳಿದ

“ಲೇ ಪಾತೂ… ಬಾಗಿಲು ಎಳೆದುಕೋ, ಮಧ್ಯೆ ರಾತ್ರಿ ಬಂದು ಎಬ್ಬಿಸಬೇಡ. ನಾನಿನ್ನು ಬೆಳಿಗ್ಗೆಯೇ ಏಳುವುದು. ಗೊತ್ತಾಯಿತಲ್ವಾ? ಡಾಕ್ಟರರ ಮಾತ್ರೆ ತುಂಬಾ ಸ್ಟ್ರಾಂಗ್ ಇದೆ. ಜಾಗ್ರತೆ ಮಾಡಲು ಹೇಳಿದ್ದಾರೆ. ಪಾತು ತಲೆ ಅಲ್ಲಾಡಿಸುತ್ತಾ ಬಾಗಿಲು ಎಳೆದು ಒಳಗೆ ನಡೆದಳು.

ಪಾತು ಬಾಗಿಲು ಎಳೆದು ಹೋದ ಕೂಡಲೇ ವರಾಂಡ ಕತ್ತಲಾಯಿತು. ಮೂಸೆ ಕತ್ತಲಲ್ಲಿಯೇ ಎಡಗೈಯಲ್ಲಿದ್ದ ಮಾತ್ರೆಯನ್ನು ಬಾಯಿಗೆ ಬಿಸಾಡಿ ಬಲಗೈಯಲ್ಲಿರುವ ಲೋಟದ ನೀರನ್ನು ಘಟ ಘಟನೆ ಕುಡಿದು ಖಾಲಿ ಲೋಟವನ್ನು ತಲೆದಿಂಬಿನ ಹಿಂಬದಿಯಲ್ಲಿಟ್ಟು ತಡಮಾಡದೆ ಕೂಡಲೆ ಮಲಗಿಬಿಟ್ಟ.

ಕಾದ್ರಿಗೆ ಬೆಳಿಗ್ಗೆ ಎಚ್ಚರವಾದಾಗ ಗಂಟೆ ಎಂಟು. ಹನ್ನೊಂದು ಗಂಟೆಯ ದೀರ್ಘ ನಿದ್ರೆ, ಕಾದ್ರಿಗೆ ಖುಷಿಯೋ ಖುಷಿ. ತನ್ನ ನಿದ್ರೆಯ ಖುಷಿಯನ್ನು ಪಾತುಗೆ ಹೇಳಲು ತಾನು ಹೊದ್ದ ಲುಂಗಿಯನ್ನು ತೆಗೆಯಲು ಬಾಗಿ ಲುಂಗಿಯ ತುದಿಗೆ ಕೈಕೊಂಡು ಹೋದ ಕಾದ್ರಿ. ಅವನಿಗೆ ಆಶ್ಚರ್ಯ ಕಾದಿತ್ತು. ರಾತ್ರಿ ಕತ್ತಲಲ್ಲಿ ಬಾಯಿಗೆ ಬಿಸಾಡಿದ ಬಿಳಿ ಮಾತ್ರೆ ಲುಂಗಿಯ ಮೇಲೆ ಅನಾಥವಾಗಿ ಬಿದ್ದಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ೧೯೯೯ರಲ್ಲಿ ಕಂಪಿಸಿದ ಚಮೋಲಿ
Next post ಇನ್ನು… ರಾಧೆ ಇಲ್ಲ…

ಸಣ್ಣ ಕತೆ

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

 • ತೊಳೆದ ಮುತ್ತು

  ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…