ಅಕ್ಕ ನೀಲಾಂಬಿಕೆ

ಅಕ್ಕ ನೀಲಾಂಬಿಕೆ

ಚಿತ್ರ: ಪಿಕ್ಸಾಬೇ
ಚಿತ್ರ: ಪಿಕ್ಸಾಬೇ

ಮಹಾರಾಜ ದೊಡ್ಡವೀರಪ್ಪ ನ್ಯಾಯಪೀಠದಲ್ಲಿ ನ್ಯಾಯಾಧೀಶನಾಗಿ ಕೂತಿದ್ದ. ಯುವರಾಜ ಅಪ್ಪಾಜಿ ಅಪ್ಪನೆದುರು ಅಪರಾಧಿಯಾಗಿ ತಲೆತಗ್ಗಿಸಿ ನಿಂತಿದ್ದ. ಅಪ್ಪಾಜಿರಾಜನ ಮಗ ಚಿಕ್ಕವೀರಪ್ಪ ಅಪ್ಪನಿಗೆ ಆತುಕೊಂಡು ತಾಯಿಯ ಮರಣಕ್ಕೆ ಕಣ್ಣೀರು ಹಾಕುತ್ತಿದ್ದ. ತನ್ನ ಭಾವನೆಗಳನ್ನು ನಿಯಂತ್ರಿಸಿಕೊಂಡು ದೊಡ್ಡ ವೀರಪ್ಪ ಮಹಾರಾಜ ಗಂಭೀರ ಸ್ವರದಲ್ಲಿ ಆರಂಭಿಸಿದ.

ಯುವರಾಜರ ವಿಚಾರಣೆಯನ್ನು ಹೀಗೆ ಸಾರ್ವಜನಿಕವಾಗಿ ಮಾಡಬೇಕಾಗಿ ಬಂದುದಕ್ಕೆ ನಮಗೆ ವಿಷಾದವಿದೆ. ಅಪರಾಧಿ ಸ್ಥಾನದಲ್ಲಿ ಯುವರಾಜರನ್ನು ಈ ವರೆಗೆ ಕಲ್ಪಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಿಲ್ಲ. ನಾಡಿನ ಪ್ರಭುವಾಗಿ ನ್ಯಾಯವನ್ನು ಕಾಪಾಡಬೇಕಾದ ಗುರುತರವಾದ ಹೊಣೆಗಾರಿಕೆ ನಮ್ಮದು. ನ್ಯಾಯಪೀಠದೆದುರು ಎಲ್ಲರೂ ಸಮಾನರು. ನ್ಯಾಯ ಉಳಿದರೆ ಮಾತ್ರ ಧರ್ಮ ಉಳಿಯುತ್ತದೆ. ಮಹಾರಾಜರಿಂದ ನ್ಯಾಯ ದೊರೆಯಲಾರದು ಎಂಬ ಸಂಶಯ ಯಾರಿಗೂ ಬೇಡ. ಮಹಾರಾಜರೇ ಯುವರಾಜರ ವಿಚಾರಣೆ ನಡೆಸುತ್ತಿರುವುದಕ್ಕೆ ಯಾರದಾದರೂ ಅಭ್ಯಂತರ ಇದ್ದರೆ ಹೇಳಬಹುದು. ನೀವು ಸೂಚಿಸುವವರನ್ನು ನ್ಯಾಯಾಧೀಶರು ಎಂದು ನಾವು ಅಂಗೀಕರಿಸುತ್ತೇವೆ.

ಸಭೆ ಮೌನವಾಗಿತ್ತು.

ನಿಮ್ಮ ಮೌನವನ್ನು ಸಮ್ಮತಿ ಎಂದು ತಿಳಿದುಕೊಂಡು ನಾವು ಮುಂದುವರಿಯುತ್ತೇವೆ. ಯುವರಾಜರು ತಮ್ಮ ಧರ್ಮಪತ್ನಿ ನೀಲಾಂಬಿಕೆಯ ಮರಣಕ್ಕೆ ಕಾರಣರು ಎಂದು ಮೃತರ ತೀರ್ಥರೂಪರಾದ ಕೊಡಗರ ಬಿದ್ದಯ್ಯನವರು ನ್ಯಾಯಪೀಠಕ್ಕೆ ದೂರಿತ್ತಿದ್ದಾರೆ. ಆಪಾದಿತರು ಈ ಪೀಠದೆದುರು ಏನನ್ನೂ ಬಚ್ಚಿಡದೆ ಎಲ್ಲವನ್ನೂ ಹೇಳಬೇಕು. ಆ ಬಳಿಕ ನ್ಯಾಯಪೀಠ ತೀರ್ಪು ನೀಡುತ್ತದೆ.

ಅಪ್ಪಾಜಿ ರಾಜ ತಲೆತಗ್ಗಿಸಿ ನಿಂತಿದ್ದ. ಅವನ ಕಣ್ಣೆದುರು ನೀಲಾಂಬಿಕೆಯ ಸುಂದರ ವದನಾರವಿಂದ ಹಾದು ಹೋಯಿತು. ಕೊಡಗಿನ ಹೆಣ್ಣು ಗೌರಮ್ಮಳಿಗೆ ಲಿಂಗಧಾರಣೆ ಮಾಡಿಸಿ ಶಿವಾಚಾರದವಳನ್ನಾಗಿ ಮತಾಂತರಿಸಿ ಹಾಲೇರಿ ಅರಮನೆಯನ್ನು ತುಂಬಿಸಿಕೊಳ್ಳಲು ಮಹಾರಾಜ ದೊಡ್ಡವೀರಪ್ಪ ಅಡ್ಡಿ ಹೇಳಲು ಸಾಧ್ಯವಿರಲಿಲ್ಲ. ಅಪ್ಪಾಜಿಯ ತಾಯಿಯೂ ಮೂಲತಃ ಕೊಡಗರ ಕನ್ಯೆಯೇ. ಪತ್ನಿ ನೀಲಾಂಬಿಕೆ ಸಾಯಬೇಕೆಂದು ಅಪ್ಪಾಜಿ ರಾಜ ಒಮ್ಮೆಯೂ ಬಯಸಿರಲಿಲ್ಲ. ಅವಳು ಆತ್ಮಹತ್ಯೆ ಮಾಡಿಕೊಂಡಾಳೆಂದು ಕನಸು ಮನಸಲ್ಲೂ ಊಹಿಸಿರಲಿಲ್ಲ. ಒಂದು ಸಣ್ಣ ಸುಳಿವು ಸಿಕ್ಕರೂ ಸಾಕಿತ್ತು, ಈ ಅನಾಹುತವನ್ನು ನಿಲ್ಲಿಸಿ ಬಿಡಬಹುದಿತ್ತು.

ಯುವರಾಜರ ಮೌನವನ್ನು ನಾವು ಏನೆಂದು ಅರ್ಥೈಸಿಕೊಳ್ಳಬೇಕು?

ಎತ್ತರದ ನಿಲುವಿನ ಭವ್ಯಾಕೃತಿಯ ದೊಡ್ಡವೀರಪ್ಪ ರಾಜರದು ಧೀರ ಗಂಭೀರ ಸ್ವರ. ಅವರು ದನಿ ಏರಿಸಿ ಮಾತಾಡಿದರೆ ಅಳ್ಳೆದೆಯವರ ಎದೆ ಬಿರಿಯಬೇಕು. ಅಪ್ಪಾಜಿರಾಜ ಅಪ್ಪನ ದನಿಗೆ ನಡುಗಿಬಿಟ್ಟ. ತಲೆ ತಗ್ಗಿಸಿ ಉತ್ತರಿಸಿದ.

ನೀಲಾಂಬಿಕೆ ನನ್ನ ಧರ್ಮಪತ್ನಿ. ಗುರು ಹಿರಿಯರ ಸಂಪೂರ್ಣ ಸಹಮತಿಯಿಂದ ಲಿಂಗಧಾರಣೆ ಮಾಡಿ ಶಿವಾಚಾರದವಳಾಗಿ ಹಾಲೇರಿಯ ಅರಮನೆಯನ್ನು ತುಂಬಿದವಳು. ಈ ಚಿಕ್ಕವೀರಪ್ಪನನ್ನು ಹಡೆದು ಕೊಡಗಿಗೆ ಒಬ್ಬ ಉತ್ತರಾಧಿಕಾರಿಯನ್ನು ಕೊಟ್ಟವಳು. ಮೆಚ್ಚಿ ಮದುವೆಯಾದ ಹೆಣ್ಣನ್ನು ಕೊಲ್ಲುವ ಅಧರ್ಮಿ ನಾನಲ್ಲ. ನ್ಯಾಯವನ್ನು, ಧರ್ಮವನ್ನು, ಲೋಕರೂಢಿಯನ್ನು ತಿಳಿದಿರುವ ನಿಮ್ಮೆಲ್ಲರೆದುರು ನನ್ನ ಏಕಮಾತ್ರ ಪುತ್ರ ಈ ಚಿಕ್ಕವೀರಪ್ಪನ ತಲೆಯ ಮೇಲೆ ಕೈಯಿಟ್ಟು ಪ್ರಮಾಣ ಮಾಡಿ ಹೇಳುತ್ತಿದ್ದೇನೆ, ನಾನು ರಾಣಿ ನೀಲಾಂಬಿಕೆಯನ್ನು ಅಣ್ಣ ಬಸವಣ್ಣನಾಣೆಗೂ ಕೊಂದಿಲ್ಲ.

ಮಹಾರಾಜ ದೊಡ್ಡವೀರಪ್ಪ ಸ್ವರ ಏರಿಸಿದ.
ಯುವರಾಜರು ತಮ್ಮ ಕೈಯಾರೆ ನೀಲಾಂಬಿಕೆಯನ್ನು ಕೊಂದು ಕೊಳಕ್ಕೆ ಎಸೆದದ್ದು ಎಂದು ನ್ಯಾಯಪೀಠ ಹೇಳುತ್ತಿಲ್ಲ. ಕೊಡಗಿನ ಮುಂದಿನ ಮಹಾರಾಣಿಯಾಗಿ, ರಾಜಮಾತೆಯಾಗಿ ಮೆರೆಯಬೇಕಾಗಿದ್ದ ನೀಲಾಂಬಿಕಾದೇವಿ ಅರಮನೆಯೆದುರಿಗೆ ಕೊಳಕ್ಕೆ ಹಾರಿ ಪ್ರಾಣ ಕಳಕೊಂಡದ್ದಕ್ಕೆ ಪ್ರೇರಣೆ ಏನು? ಯುವರಾಜರು ತಮ್ಮ ಪಟ್ಟದ ರಾಣಿಯನ್ನು ನ್ಯಾಯಯುತವಾಗಿ ನಡೆಸಿಕೊಂಡಿದ್ದರೆ ಅಂತಹ ಪ್ರಮೇಯ ಉದ್ಭವಿಸುತ್ತಿತ್ತೆ? ಆದುದರಿಂದ ನ್ಯಾಯ ಪೀಠವು ಈ ಅಸಹಜ ಸಾವನ್ನು ಕೊಲೆಯೆಂದು ಪರಿಗಣಿಸಿ ತೀರ್ಪು ನೀಡಬೇಕಾಗುತ್ತದೆ.

ಅಪ್ಪಾಜಿ ರಾಜ ಈಗಲೂ ತಲೆತಗ್ಗಿಸಿ ನಿಂತಿದ್ದ. ಅವನು ನೀಲಾಂಬಿಕೆಯಿಂದ ಒಂದು ಸಮಸ್ಯೆಗೆ ಪರಿಹಾರ ಬಯಸಿದ್ದ. ಅವಳು ಅನಗತ್ಯವಾಗಿ ಕೊಳಕ್ಕೆ ಹಾರಿ ಪರಿಹಾರವೇ ಇಲ್ಲದ ಸಮಸ್ಯೆಯನ್ನು ಸೃಷ್ಟಿಸಿದ್ದಳು. ಅವಳೇನು ಅಳುಬುರುಕಿ, ಜಗಳಗಂಟಿ ಹೆಣ್ಣಲ್ಲ. ಅವಳು ದಾಂಪತ್ಯವನ್ನು ಪರಿಭಾವಿಸಿದ ರೀತಿಯೇ ಬೇರಿತ್ತು. ಪತಿವ್ರತೆಯಾದವಳು ಗಂಡನೆದುರು ಗಟ್ಟಿಯಾಗಿ ಮಾತಾಡುವುದನ್ನು ತಪ್ಪು ಎಂದುಕೊಂಡವಳು. ಪತಿ ಬಯಸಿ ದಾಗಲೆಲ್ಲಾ ಮರು ಮಾತಾಡದೆ ತನ್ನನ್ನು ಅರ್ಪಿಸಿಕೊಳ್ಳುವುದನ್ನು ಸತೀಧರ್ಮ ಎಂದು ಭಾವಿಸಿದವಳು. ಅವಳಿಗೆ ಸಮಾಗಮವು ಒಂದು ಧಾರ್ಮಿಕ ಕ್ರಿಯೆಯಾಗಿತ್ತು. ಅವಳ ಬಾಯಲ್ಲಿ, ಅಪ್ಪಿತಪ್ಪಿಯೂ ಒಂದೇ ಒಂದು ಸಲ ಒಂದು ರಸಿಕತನದ ಮಾತು ಬಂದುದಿಲ್ಲ. ಇವನೇನಾದರೂ ಆಡಿದರೆ ಶಿವಾ ಶಿವಾ, ರಾಜವಂಶಸ್ಥರ ಬಾಯಲ್ಲಿ ಅಂಥಾ ಮಾತು ಬರಬಾರದು ಎಂದು ಆಕ್ಷೇಪಿಸುತ್ತಿದ್ದಳು. ಅಪ್ಪಾಜಿರಾಜನಾದರೋ ಮಹಾರಸಿಕ. ವಾತ್ಸಾಯನನ ಕಾಮಸೂತ್ರಗಳನ್ನು ಓದಿ ತಿಳಕೊಂಡವನು, ಅವುಗಳ ಅನುಷ್ಠಾನಕ್ಕೆ ನೀಲಾಂಬಿಕೆಯನ್ನು ಒತ್ತಾಯಿಸುತ್ತಿದ್ದನು. ಅವಳು ಆಸನ ಬದಲಾವಣೆಗೂ ಒಪ್ಪುತ್ತಿರಲಿಲ್ಲ. ಸುಮ್ಮನೆ ಸ್ಪಂದನವಿಲ್ಲದೆ ಮರದ ಕೊರಡಿನಂತೆ ಬಿದ್ದುಕೊಂಡು, ಸಮಾಗಮದ ಬಳಿಕ ಮಗ್ಗುಲಾಗಿ ನಿದ್ದೆ ಹೋಗುತ್ತಿದ್ದಳು.

ದಾಂಪತ್ಯ ಜೀವನ ನೀರಸವೆನಿಸತೊಡಗಿದಾಗ ಅಪ್ಪಾಜಿ ರಾಜನ ಬಾಳಲ್ಲಿ ಪ್ರವೇಶಿಸಿದವಳು ಕಾವೇರಿ. ಅವಳೂ ಕೊಡಗರ ಹೆಣ್ಣೇ. ಅವಳದು ಹಸ್ತಿನಿ, ಚಿತ್ತಿನಿ, ಶಂಖಿನಿ, ಪದ್ಮನಿ ಎಲ್ಲಾ ಜಾತಿಗಳ ಹೆಣ್ಣುಗಳ ಏಕೀಕೃತ ಎರಕ. ಯವ್ವನದಿಂದ ಪುಟಿಯುವ ತುಂಬಿದ ಅಂಗಾಂಗಗಳ, ಹೂನಗೆಯ ಕಾವೇರಿ ಅಪ್ಪಾಜಿರಾಜನನ್ನು ರಸಿಕತನದ ಮಾತುಗಳಿಂದ ಯಾವಾಗ ಬೇಕಾದರೂ ಕೆರಳಿಸುವ ಸಾಮರ್ಥ್ಯದವಳು. ಇವನು ಕೆರಳಿದಾಗಲೆಲ್ಲಾ ಅವಳು ಸಮೃದ್ಧವಾಗಿ ಅರಳಿಕೊಳ್ಳುತ್ತಿದ್ದಳು. ಇರುವ ಒಂದೇ ಒಂದು ಜನ್ಮ ಆವಿಷ್ಕಾರಿಕ ಮೈಥುನದಿಂದ ಸಾರ್ಥಕವಾಗಬೇಕೆಂದು ಬಯಸುವವಳು. ತುಂಬು ಉತ್ಸಾಹದಿಂದ ಮನಃಪೂರ್ವಕವಾಗಿ ತನ್ನನ್ನು ಸಮರ್ಪಿಸಿಕೊಂಡು ದೇಹದ ಎಲ್ಲಾ ಅಂಗಗಳಿಗೆ ಸಾರ್ಥಕತೆಯ ಭಾವ ತುಂಬುವವಳು. ಕಾವೇರಿಯೊಡನೆ ಸಮಾಗಮವೆಂದರೆ ಎಂದೂ ಬತ್ತದ ಜೀವಸೆಲೆಯ ಪ್ರಕೃತಿ ಆರಾಧನೆಯೆಂದು ಅವನಿಗನ್ನಿಸುತ್ತಿತ್ತು. ಅವಳು ಸದಾಕಾಲ ಅವನ ನರನಾಡಿಗಳಲ್ಲಿ ಹೊಸ ಜೀವ ತುಂಬುವ, ಮನದಲ್ಲಿ ವರ್ಣ ಭಾವಗಳನ್ನು ಮೂಡಿಸುವ ಸ್ಫೂರ್ತಿಯ ಸೆಲೆಯಾಗಿದ್ದಳು. ಬೇಕೆಂದಾಗಲೆಲ್ಲಾ ಭೋರ್ಗರೆವ ಆಷಾಢದ ಕಾವೇರಿಯಾಗಿ ಬಿಡುತ್ತಿದ್ದಳು.

ರಾಣಿ ನೀಲಾಂಬಿಕೆಯಾದರೋ ತದ್ವಿರುದ್ಧ ಸ್ವಭಾವದವಳು. ಸಮಾಗಮ ಕಾಲದ ಅವಳ ಜಡತೆ ದೈಹಿಕ ತೊಂದರೆಯೋ, ಮಾನಸಿಕವೋ ಎಂದು ಅಪ್ಪಾಜಿರಾಜನಿಗೆ ಗೊತ್ತಾಗುತ್ತಿರಲಿಲ್ಲ. ಕೊಡಗರ ಹೆಣ್ಣು ಲಿಂಗಧಾರಣೆ ಮಾಡಿ ನೀಲಾಂಬಿಕೆಯಾದ ಮೇಲೆ ಅವಳು ಹಾಗಾಗಿರಬಹುದೆಂದು ಅಪ್ಪಾಜಿ ರಾಜ ಅಂದುಕೊಳ್ಳುತ್ತಿದ್ದ. ಶಿವಾಚಾರದ ಅರಮನೆಯಲ್ಲಿ ಆಗಾಗ ವ್ರತಗಳು, ಪೂಜೆಗಳು ನಡೆಯುತ್ತಿದ್ದವು. ಆಗೆಲ್ಲಾ ಮಡಿಯುಟ್ಟುಕೊಂಡು ನೀಲಾಂಬಿಕೆ ಸಮಾಗಮವನ್ನು ಸಂಪೂರ್ಣ ನಿರಾಕರಿಸುತ್ತಿದ್ದಳು. ಆ ದಿನಗಳಲ್ಲಿ ಅಪ್ಪಾಜಿ ರಾಜ ಅವಳ ಮೈ ಮುಟ್ಟುವಂತೆಯೇ ಇರಲಿಲ್ಲ. ಅವಳ ಹೊಟ್ಟೆಯಲ್ಲಿ ಚಿಕ್ಕವೀರಪ್ಪ ಬೆಳೆಯುತ್ತಿದ್ದಾಗ ಅವಳಿಗೆ ಅಕ್ಕನ ವಚನಗಳು ಓದಲು ಸಿಕ್ಕಿದವು. ಅವುಗಳಲ್ಲಿ ಅವಳು ತನ್ನ ಭಾವಗಳನ್ನು ಕಂಡುಕೊಳ್ಳಲು ಯತ್ನಿಸಿದಳು.

ಚಿಕ್ಕವೀರಪ್ಪನನ್ನು ಹೆತ್ತಮೇಲೆ ಅವಳಿಗೆ ಮೈಥುನದಲ್ಲಿ ಆಸಕ್ತಿ ಹೊರಟು ಹೋಯಿತು.

ಶರಣಸತಿ, ಲಿಂಗಪತಿ
ಚೆನ್ನಮಲ್ಲಿಕಾರ್ಜುನನೆ ಪತಿಯೆನಗೆ
ಎಂದು ಅವಳು ದೃಢವಾಗಿ ನಂಬಿಬಿಟ್ಟಳು.

ಈ ಸಾವ ಕೆಡುವ ಗಂಡರನೊಯ್ದು
ಒಲೆಯೊಳಗಿಕ್ಕು ತಾಯೇ
ಎಂದು ಅಪ್ಪಾಜಿ ರಾಜ ಸಮಾಗಮಕ್ಕೆಂದು ಬಂದಾಗ ಹೇಳಿ ಅವನನ್ನು ನಿರಾಕರಿಸುತ್ತಿದ್ದಳು.

ನೀಲಾಂಬಿಕೆ ಒಂದು ರಾತ್ರಿ, ಯಾವುದೋ ವ್ರತದ ನೆವವೊಡ್ಡಿ ಅಪ್ಪಾಜಿ ರಾಜನನ್ನು ನಿರಾಕರಿಸಿದಂದು ಅವನು ಕೋಪದಿಂದ ಬುಸುಗುಟ್ಟಿದ. ನೀನು ಹೀಗೆ ನನ್ನನ್ನು ನಿರಾಕರಿಸುತ್ತಿರುವುದಕ್ಕೇ ನಾನು ಅವಳ ಮನೆಗೆ ಹೋಗುತ್ತಿರುವುದು. ನೀಲಾಂಬಿಕೆ ಶಾಂತ ಸ್ವರದಲ್ಲಿ ಕೇಳಿದಳು. ಯಾರ ಮನೆಗೆ? ಕಾವೇರಿಯ ಮನೆಗೆ. ಅವಳೆಂದೂ ನನ್ನನ್ನು ನಿರಾಕರಿಸಿಲ್ಲ. ಸರಿ ಮತ್ತೆ. ಇಂದು ವ್ರತವೆಂದು ತಿಳಿದ ಮೇಲೂ ಯಾಕೆ ಇಲ್ಲಿಗೆ ಬರಬೇಕಿತ್ತು? ಅಲ್ಲೇ ಉಳಕೊಳ್ಳಬಹುದಿತ್ತಲ್ಲಾ?
ಅಪ್ಪಾಜಿ ರಾಜನಿಗೆ ಆಶ್ಚರ್ಯವಾಯಿತು.
ನಿನ್ನ ಪತಿ ಹೀಗೆ ಮಾಡುತ್ತಿರುವುದಕ್ಕೆ ನೀನೇ ಕಾರಣ. ಆದರೂ ನಿನಗೆ ನನ್ನ ಮೇಲೆ ಕೋಪ ಬರಬೇಕಿತ್ತು. ಇಲ್ಲದ ಸಂಬಂಧವನ್ನು ಹುಡುಕಿ ಗಂಡನೊಡನೆ ಜಗಳ ಮಾಡುವುದು ಹೆಂಡತಿಯ ಗುಣವೆನ್ನುವುದನ್ನು ನಾನು ನಮ್ಮ ಸಂಸ್ಥಾನದಲ್ಲಿ ಕಂಡುಕೊಂಡಿದ್ದೇನೆ. ನಿನಗೆ ಏನೂ ಅನ್ನಿಸುವುದಿಲ್ಲವೆ?

ನೀಲಾಂಬಿಕೆಯ ಸ್ವರ ಆಗಲೂ ಏರಲಿಲ್ಲ.
ಇಲ್ಲ. ರಾಜವಂಶೀಯರು ಕೇವಲ ಒಂದೇ ಹೆಣ್ಣಿನಲ್ಲಿ ಸಂತೃಪ್ತಿ ಅರಸುವುದಿಲ್ಲ. ರಾಜಾನೋ ಬಹೂವಲ್ಲಭಾ ಎಂದು ಓದಿದ್ದೇನೆ. ನೀವು ಅವಳನ್ನು ಅರಮನೆಗೆ ತಂದಿರಿಸಿ ಕೊಂಡರೂ ನಾನೇನೂ ಅನ್ನುವುದಿಲ್ಲ. ನನಗೆ ದೇಹ ವ್ಯಾಮೋಹ ಅಳಿದುಹೋಗಿದೆ. ನೀವು ನನ್ನಂತಾಗಬೇಕೆಂದು ನಾನು ಬಯಸುವುದಿಲ್ಲ. ನೀವು ಯಾವುದನ್ನು ದೇಹಸುಖ ಎಂದು ಕರೆಯುತ್ತೀರೋ ಅದು ನನಗೊಂದು ಹಿಂಸೆಯಾಗಿ ಬಿಟ್ಟಿದೆ. ನನ್ನಿಂದ ಕೊಡಲಾಗದ್ದನ್ನು ಮತ್ತು ನಿಮಗೆ ಅಗತ್ಯವಿರುವುದನ್ನು ಬೇರೆಯವರಿಂದ ಪಡೆಯುವುದು ತಪ್ಪಲ್ಲವೆಂದು ಅಂದು ಕೊಂಡಿದ್ದೇನೆ. ನಾನು ಅಭ್ಯಂತರ ಹೇಳಿ ನಿಮ್ಮ ಸುಖಕ್ಕೆ ಅಡ್ಡಿಯಾಗುವುದಿಲ್ಲ.

ಅಂದಿನಿಂದ ಅಪ್ಪಾಜಿರಾಜ ಕಾವೇರಿಯ ಮನೆಯಲ್ಲಿ ಹೆಚ್ಚು ಹೆಚ್ಚು ಸಮಯ ಕಳೆಯತೊಡಗಿದ. ಆದರೆ ಕಾವೇರಿಯ ಗರ್ಭದಲ್ಲಿ ಅಪ್ಪಾಜಿರಾಜನ ಬೀಜ ಮೊಳೆಯಲಿಲ್ಲ. ಹುಟ್ಟುತ್ತಿದ್ದರೆ ನೀಲಾಂಬಿಕೆಯ ಹೊಟ್ಟೆಯಲ್ಲಿ ಜನಿಸಿದ ಚಿಕ್ಕವೀರಪ್ಪನಿಗೆ ಒಬ್ಬ ಎದುರಾಳಿ ಹುಟ್ಟಿಕೊಳ್ಳುತ್ತಿದ್ದ. ಆಗುತ್ತಿರುವುದೆಲ್ಲಾ ಒಳ್ಳೆಯದಕ್ಕೇ ಎಂದುಕೊಂಡು ಅಪ್ಪಾಜಿರಾಜ ನೆಮ್ಮದಿಯಿಂದಿದ್ದ.

ನೆಮ್ಮದಿಯಿಂದಿರಲು ಸಾಧ್ಯವಾಗದ್ದು ಕಾವೇರಿಗೆ ಮಾತ್ರ. ತನ್ನ ಗರ್ಭದಲ್ಲಿ ಅಪ್ಪಾಜಿ ರಾಜ ಪಡಿಮೂಡದಾದಾಗ ಅವಳಲ್ಲಿ ಅಸ್ಥಿರತೆಯ ಭಾವ ತೀವ್ರವಾಗತೊಡಗಿತು. ಈಗೇನೋ ದೇಹ ಸರಿಯಿದೆ. ಮುಪ್ಪಿನಲ್ಲಿ ತನ್ನ ಗತಿಯೇನು? ಅಪ್ಪಾಜಿ ರಾಜನಿಗೆ ಏನಾದರೂ ಆಗಿಬಿಟ್ಟರೆ ಮತ್ತೆ ತನ್ನನ್ನು ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆ ಅವಳನ್ನು ಮತ್ತೆ ಮತ್ತೆ ಕಾಡತೊಡಗಿತು.

ಒಂದು ದಿನ ಅಪ್ಪಾಜಿರಾಜನ ತೋಳತೆಕ್ಕೆಯಲ್ಲಿ ಬಂಧಿಯಾಗಿದ್ದಾಗ ಅವಳು ಜೇನು ದನಿಯಲ್ಲಿ ಉಲಿದಳು. ಒಡೆಯರಲ್ಲಿ ಅಂತರಂಗವನ್ನು ತೋಡಿಕೊಳ್ಳಬೇಕೆಂದಿದ್ದೇನೆ. ತಪ್ಪು ತಿಳಿಯಬಾರದು. ನಿನ್ನ ಯಾವ ಮಾತಿಗೆ ನಾನು ತಪ್ಪು ತಿಳಿದಿದ್ದೇನೆ? ಅದು ಒಡೆಯರ ದೊಡ್ಡ ಗುಣ. ಆದರೂ ಒಡೆಯರು ತಪ್ಪು ತಿಳಿದುಕೊಳ್ಳುತ್ತಾರೇನೋ ಎಂಬ ಅಳುಕು. ಪ್ರೀತಿ ಮೂಡಿದ ಆರಂಭದ ವರ್ಷಗಳಲ್ಲಿ ನಾನು ನಾಳೆಗಳ ಬಗ್ಗೆ ಚಿಂತಿಸಿದವಳಲ್ಲ. ಯವ್ವನ ಜಾರುತ್ತಿದೆ. ಈಗ ಕೊರತೆ ಕಾಡುತ್ತಿದೆ. ನಿಮ್ಮ ಪಟ್ಟದ ರಾಣಿ ನೀಲಾಂಬಿಕೆ ಕೊಡಗಿಗೆ ಒಬ್ಬ ಉತ್ತರಾಧಿಕಾರಿಯನ್ನು ನೀಡಿ ಜನ್ಮ ಸಾರ್ಥಕಪಡಿಸಿ ಕೊಂಡಳು. ಈ ಕಾವೇರಿಯ ಬಾಳಿನಲ್ಲಿ ಯಾವ ಸಾರ್ಥಕತೆ ಇದೆ ಪ್ರಭೂ?

ನಾನು ನೀಲಾಂಬಿಕೆಯ ಮೈಯನ್ನು ಮುಟ್ಟದೆ ಎಷ್ಟೋ ಸಮಯವಾಯಿತು. ಈಗ ಸಂಪೂರ್ಣವಾಗಿ ನಿನ್ನವನಾಗಿಯೇ ಇದ್ದೇನಲ್ಲಾ? ಇನ್ನೇನಾಗಬೇಕು ನಿನಗೆ? ಈಗೇನೋ ಹೌದು. ಮುಂದೇನು? ನಿಮಗೇನಾದರೂ ಆದರೆ ನಾನು ಬದುಕುವುದು ಹೇಗೆ? ವೃದ್ಧಾಪ್ಯದಲ್ಲಿ ನನ್ನನ್ನು ನೋಡಿಕೊಳ್ಳುವವರು ಯಾರಿದ್ದಾರೆ? ಅಲ್ಲದೆ ಜನರು ನನ್ನನ್ನು ಕರೆಯುತ್ತಿರುವುದು ಹೇಗೆ? ಅಪ್ಪಾಜಿ ರಾಜರು ಇಟ್ಟುಕೊಂಡವಳು. ಆ ಹೆಸರನ್ನು ತಪ್ಪಿಸುತ್ತೀರಾ ದೊರೆ?

ನನ್ನನ್ನು ಏನು ಮಾಡೂಂತೀಯಾ?
ಪಟ್ಟದ ರಾಣಿ ಎಂದು ನನ್ನನ್ನು ಸ್ವೀಕರಿಸಲು ಸಾಧ್ಯವೆ?
ಅಪ್ಪಾಜಿ ರಾಜ ಅವಳನ್ನು ತನ್ನ ಬಾಹುಗಳಿಂದ ಬಿಡುಗಡೆಗೊಳಿಸಿದ. ಪಟ್ಟದ ರಾಣಿ ನೀಲಾಂಬಿಕೆ ಜೀವಂತವಾಗಿದ್ದಾಳೆ. ಅವಳಿಗೆ ಒಬ್ಬ ಮಗನಿದ್ದಾನೆ. ಅವನು ಸಿಂಹಾಸನಕ್ಕೆ ಉತ್ತರಾಧಿಕಾರಿ. ಕಾವೇರಿಯನ್ನು ಅಪ್ಪಾಜಿರಾಜ ಶಾಸ್ತ್ರೋಕ್ತವಾಗಿ ವಿವಾಹವಾಗಿರಲಿಲ್ಲ. ಈಗ ಯಾವ ಕಾರಣ ನೀಡಿ ಇನ್ನೊಬ್ಬಳನ್ನು ಪಟ್ಟದ ರಾಣಿಯನ್ನಾಗಿ ಮಾಡಿಕೊಳ್ಳುವುದು? ಸಂಪ್ರದಾಯಕ್ಕೆ ವಿರುದ್ಧವಾದುದನ್ನು ಯಾರೂ ಒಪ್ಪುವುದಿಲ್ಲ.

ಅವನ ಮೌನಕ್ಕೆ ಕಾವೇರಿ ಕಣ್ಣೀರು ಸುರಿಸಿದಳು.
ನನಗೆ ಪಟ್ಟದ ರಾಣಿಯ ಯಾವ ಅಧಿಕಾರವೂ ಬೇಡ. ದೊಡ್ಡವೀರಪ್ಪ ದೊರೆಗಳ ಬಳಿಕ ನೀವು ಸಿಂಹಾಸನವೇರುವಾಗ ಪಕ್ಕದಲ್ಲಿ ನೀಲಾಂಬಿಕೆಯೇ ಆಸೀನಳಾಗಲಿ. ನನಗೆ ಅರಮನೆಯ ಅಧಿಕಾರದ ವ್ಯಾಮೋಹವಿಲ್ಲ. ಚಿನ್ನದ ಆಭರಣಗಳ ಮೋಹವೂ ಇಲ್ಲ. ಇಟ್ಟುಕೊಂಡವಳು ಎಂಬ ಪಟ್ಟ ಹೋಗಬೇಕಾಗಿದೆ. ನಾನು ಪಟ್ಟದ ರಾಣಿಯಾದರೆ ಮಾತ್ರ ಅದು ಸಾಧ್ಯ. ಒಮ್ಮೆ ಅರಮನೆ ಸೇರಿದ ಮೇಲೆ ನಿಮ್ಮೆಲ್ಲರ ಸೇವೆ ಮಾಡಿಕೊಂಡು ಜೀವನಕ್ಕೆ ಒಂದು ಹೊಸ ಅರ್ಥವನ್ನು ಕಂಡುಕೊಳ್ಳುತ್ತೇನೆ. ಇಲ್ಲವೆನ್ನಬೇಡಿ ಪ್ರಭೂ.

ಕಾವೇರಿಯ ಕಣ್ಣೀರನ್ನು ಅಪ್ಪಾಜಿರಾಜ ತನ್ನ ಹೆಗಲ ಉತ್ತರೀಯದಿಂದ ತೊಡೆದ. ಅವಳ ಬೇಡಿಕೆ ತಪ್ಪೆಂದು ಅವನಿಗೆ ಅನ್ನಿಸಲಿಲ್ಲ. ಆದರೆ ಕಾರ್ಯಸಾಧ್ಯವೆ? ಯೋಚಿಸಿ ಯೋಚಿಸಿ ಅವನೊಂದು ತೀರ್ಮಾನಕ್ಕೆ ಬಂದ. ಮೊದಲು ನೀಲಾಂಬಿಕೆಯನ್ನು ಒಪ್ಪಿಸಬೇಕು. ಅವಳಿಂದ ಮಹಾರಾಜರಿಗೆ ವಿಷಯ ಮನವರಿಕೆ ಮಾಡಿಸಬೇಕು. ಸೊಸೆಯನ್ನು ಅಕ್ಕಮಹಾದೇವಿಯ ಅವತಾರವೆಂದು ಭಾವಿಸಿ ಗೌರವಿಸುವ ಮಹಾರಾಜ ಒಪ್ಪದೆ ಇರಲಾರರು. ಅಪ್ಪಾಜಿರಾಜ ಕಾವೇರಿಯ ಕೈಯನ್ನು ಪ್ರೀತಿಯಿಂದ ಅದುಮಿದ.

ರಾತ್ರಿ ಎಂದಿನಂತೆ ನೀಲಾಂಬಿಕೆ ತಡವಾಗಿ ಪಲ್ಲಂಗಕ್ಕೆ ಬಂದಳು. ಅವಳು ಬರುವಾಗ ಗಾಢ ನಿದ್ರೆಯಲ್ಲಿರುತ್ತಿದ್ದ ಅಪ್ಪಾಜಿರಾಜ ಅಂದು ನಿದ್ದೆ ಬಾರದೆ ಹೊರಳಾಡುತ್ತಿರುವುದು ಅವಳ ಗಮನಕ್ಕೆ ಬಂತು.

ಮಹಾರಾಜರು ನೆಮ್ಮದಿಯಿಂದ ರಾಜ್ಯಭಾರ ಮಾಡುತ್ತಿದ್ದಾರೆ. ಯುವರಾಜರು ನಿದ್ದೆಯಿಲ್ಲದೆ ಹೊರಳುವುದೇಕೋ?

ಅಪ್ಪಾಜಿ ರಾಜ ಎದ್ದು ಕೂತ.
ಒಂದು ವಿಷಯ ನನ್ನನ್ನು ಕೊರೆಯುತ್ತಿದೆ. ಅದರ ಪರಿಹಾರಕ್ಕೆ ನಿನ್ನ ಸಲಹೆ ಬೇಕು. ಹೇಳಿಕೊಳ್ಳಬಹುದಾ?
ಹೇಳಿ. ಪರಿಹಾರ ಹೊಳೆದರೆ ಸೂಚಿಸಿಯೇನು.
ಅಪ್ಪಾಜಿ ರಾಜ ಇಳಿದನಿಯಲ್ಲೆಂದ.
ಅದು ಕಾವೇರಿಗೆ ಸಂಬಂಧಿಸಿದ್ದು. ಅವಳು ನನಗೆ ನಿಷ್ಠಳಾಗಿ ಈವರೆಗೆ ಬಾಳಿದವಳು. ಮಹಾದೇವ ಕಣ್ಣು ತೆರೆದು ಅವಳಿಗೆ ಪ್ರಸಾದ ಕರುಣಿಸಲಿಲ್ಲ. ಅವಳನ್ನು ನಾಳಿನ ಚಿಂತೆ ಕಾಡುತ್ತಿದೆ. ಅವಳಲ್ಲಿ ಅಭದ್ರತೆಯ ಭಾವ ಮೂಡಿದೆ.
ಅದಕ್ಕೆ ನೀವೇನು ಮಾಡಬೇಕಂತೆ?
ಅವಳನ್ನು ಪಟ್ಟದ ರಾಣಿಯನ್ನಾಗಿ ಮಾಡಬೇಕಂತೆ. ಇಟ್ಟುಕೊಂಡವಳು ಎಂಬ ಹೆಸರನ್ನು ತಪ್ಪಿಸಬೇಕಂತೆ. ಈಗ ಏನು ಮಾಡೋಣ?
ನೀವೇನು ಹೇಳಿದಿರಿ?
ನೀಲಾಂಬಿಕೆ ಮನಸ್ಸು ಮಾಡಿದರೆ ಆದೀತು. ಅವಳೊಂದು ಮಾತು ಹೇಳಿದರೆ ಮಹಾರಾಜ ದೊಡ್ಡವೀರಪ್ಪ ಪ್ರಭುಗಳು ಇಲ್ಲವೆನ್ನಲಾರರು ಎಂದೆ.
ಸರಿ. ನೀವೀಗ ಮಲಗಿ ನಿದ್ದೆಮಾಡಿ. ಮಹಾದೇವ ಪರಿಹಾರ ಸೂಚಿಸುತ್ತಾನೆ.
ಮರುದಿನ ಅರಮನೆ ಎದುರಿನ ಕೊಳದಲ್ಲಿ ನೀಲಾಂಬಿಕೆಯ ದೇಹ ತೇಲುತ್ತಿತ್ತು.
ಅಪ್ಪಾಜಿ ರಾಜ ಎಲ್ಲವನ್ನೂ ಹೇಳಿ ನಿಟ್ಟುಸಿರು ಬಿಟ್ಟ.
ಇದು ನಿಜವಾಗಿ ನಡೆದ ಘಟನೆ. ನ್ಯಾಯಪೀಠ ಈಗಲೂ ನನ್ನನ್ನು ಅಪರಾಧಿಯೆಂದು ಭಾವಿಸುತ್ತದೆ ಎಂದಾದರೆ ಶಿಕ್ಷೆಯನ್ನು ಅನುಭವಿಸಲು ನಾನು ಸಿದ್ಧನಿದ್ದೇನೆ.

ಆಸ್ಥಾನದಲ್ಲಿ ನೀರವ ಮೌನ. ಸ್ವಲ್ಪ ಹೊತ್ತು ಯೋಚಿಸಿ ದೊಡ್ಡವೀರಪ್ಪ ತೀರ್ಮಾನ ನೀಡಿದ.
ನೀಲಾಂಬಿಕೆ ತುಂಬಾ ಸೂಕ್ಷ್ಮ ಮನಸ್ಸಿನವಳು. ಪಟ್ಟದ ರಾಣಿಯಾಗಿ ತಾನಿರುವಾಗ ಇನ್ನೊಬ್ಬಳನ್ನು ಪಟ್ಟದ ರಾಣಿಯಾಗಿಸಲು ಮಹಾರಾಜರು ಒಪ್ಪಲಾರರು ಎಂದು ಅವಳು ಭಾವಿಸಿರಬೇಕು. ಪತಿಯ ಸುಖಕ್ಕೆ ಅಡ್ಡಿಯಾಗುವುದು ಬೇಡವೆಂದು ಅವಳು ಪ್ರಾಣತ್ಯಾಗ ಮಾಡಿದ್ದಾಳೆ. ಯುವರಾಜರು ಕಾವೇರಿಯನ್ನು ಇಟ್ಟುಕೊಳ್ಳುವ ಬದಲು ಶಾಸ್ತ್ರೋಕ್ತವಾಗಿ ಮದುವೆಯಾಗುತ್ತಿದ್ದರೆ ಅವಳಲ್ಲಿ ಅಭದ್ರತೆಯ ಭಾವ ಮೂಡುತ್ತಿರಲಿಲ್ಲ. ನೀಲಾಂಬಿಕೆ ಹೀಗೆ ಪ್ರಾಣ ಕಳಕೊಳ್ಳುವ ಪ್ರಮೇಯ ಬರುತ್ತಿರಲಿಲ್ಲ. ಯುವರಾಜರು ತಪ್ಪು ಮಾಡಿದ್ದಾರೆ. ಅವರಿಗೆ ಆಜೀವ ಪರ್ಯಂತ ಕಾರಾಗೃಹ ವಾಸದ ಶಿಕ್ಷೆಯನ್ನು ಈ ನ್ಯಾಯಪೀಠ ನೀಡುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದ ಓಕೆ ಸಾಬರ (ಅ) ಉಸಾಬರಿ ಎಲ್ಲಾ ಯಾಕೆ?
Next post ಉಮರನ ಒಸಗೆ

ಸಣ್ಣ ಕತೆ

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys