ಬಣ್ಣದ ಗೊಂಬಿ

ಬಣ್ಣದ ಗೊಂಬಿ

ಚಿತ್ರ: ಗ್ರೆಡ್ ಆಲ್ಟ್‌ಮನ್
ಚಿತ್ರ: ಗ್ರೆಡ್ ಆಲ್ಟ್‌ಮನ್

ಎಂದೋ ಉರಿದು ಆರಿದ ಒಲೆಯ ತುಂಬಾ ಬೂದಿ ತುಂಬಿದ್ದರೆ ಒಲೆಯ ಮೇಲಿರಿಸುವ ಸಿಲಾವಾರ್ ಪಾತ್ರೆಗಳು ಖಾಲಿ ಖಾಲಿ. ಒಬ್ಬರು ಕಾಲು ಚಾಚಿ ಮಲಗುವಷ್ಟು ವಿಶಾಲವಲ್ಲದ ಹೆಂಚಿನ ಮನೆಯದು. ಗೆದ್ದಲು ಹಿಡಿದ ಪುಟ್ಟ ಬಾಗಿಲನ್ನು ಮುಚ್ಚಿಬಿಟ್ಟರೆ ಒಡೆದು ಹೋದ ಹೆಂಚುಗಳಿಂದಲೇ ಬೇಕಾದಷ್ಟು ಬೆಳಕು ಗಾಳಿಯನ್ನು ಒಳ ಚೆಲ್ಲುವ ಮಾಡು, ಕಿಟಿಕಿಗಳಿಲ್ಲದ ಕೊರತೆಯನ್ನು ನೀಗಿಸಿದೆ. ಬೇಸಿಗೆಯಲ್ಲಿ ಬಿಸಿಲ ರಂಧ್ರಗಳ ಕೋಲು ಮನೆಯ ಒಳಗೆ ಚಿತ್ತಾರ ಬಿಡಿಸಿ ಕಣ್ಣು ಕೋರೈಸಿದರೆ ಮಳೆಗಾಲದಲ್ಲಿ ಮಳೆಯನೀರು ಧಾರಾಳ ವಾಗಿ ಸುರಿದು ಮನೆಯೊಡತಿ ಗೋಣಿಚೀಲ ಹೊದ್ದು ಮೂಲೆ ಹಿಡಿದು ನಡುಗುತ್ತಾ ಕಣ್ಣುಮುಚ್ಚಿ ರಾತ್ರಿ ಕಳೆಯಬೇಕು. ಆಷಾಢದಲ್ಲಿ ಬೀದಿ ಧೂಳೆಲ್ಲಾ ಒಳಗೆ. ಚಳಿಗಾಲದಲ್ಲಂತೂ ಫ಼್ರಿಜ್ ನಲ್ಲೇ ಮಲಗಿದಷ್ಟು ಪರಮಸುಖ. ಮೂಲೆಯಲ್ಲೊಂದು ದೊಡ್ಡ ಸೋರೆ, ಅದರ ತುಂಬಾ ನೀರು. ನೀರಿಗೆಂತ ಕೊರತೆ ಇಲ್ಲ. ಒಲೆಯ ಪಕ್ಕ ಒಂದಷ್ಟು ಕಡ್ಡಿಪುಳ್ಳೆಗಳು, ಒಂದೆರಡು ಸಿಲಾವಾರ್ ಪಾತ್ರೆ ಪಡಗಗಳು, ಸ್ಟೀಲ್ ಲೋಟ ಒಂದು, ತಟ್ಟೆ ಕೂಡ ಉಂಟು. ಮಳೆ ನೀರು ನುಂಗಿ ತೊನ್ನು ಬಡಿದಂತೆ ತೋರುವ ಮೂಲ ಬಣ್ಣವನ್ನೇ ಕಳೆದುಕೊಂಡ ಗೋಡೆಗಳಿಗೆ ಹಳೇ ಚೀಲಗಳೇನೋ ನೇತು ಬಿದ್ದಿವೆ. ಆದರೆ ಅವು ತಮ್ಮೊಳಗೆ ಏನನ್ನಾದರು ತುಂಬಿಕೊಂಡ ಗ್ಯಾರಂಟಿಯಿಲ್ಲ. ನೆಲದ ಮೇಲೆ ಕಾಫಿ ಕರೆಗಟ್ಟಿದೆ. ನೊಣಗಳು ಮುತ್ತಿಕೊಂಡಿವೆ. ಈ ಪುಟ್ಟ ಮನೆ ಅಥವಾ ಗೂಡನ್ನು ಹೀಗೆಲ್ಲಾ ವಿಭಾಗಿಸಬಹುದು. ಒಲೆ ಇರುವ ಭಾಗವೇ ಕಿಚನ್ ರೂಮ್. ಕೂತಿದ್ದರೆ ಹಾಲ್, ಮಲಗಿದರೆ ಬೆಡ್ ರೂಮ್, ಬೆಳಗಾನೆ ಎದ್ದು ಒಂದಿಷ್ಟು ಮುಂದೆ ತೆವಳಿ ಕೂತು ಮೈ ಮೇಲೆ ನೀರು ಹೊಯ್ದುಕೊಂಡರೆ ಬಾತ್ ರೂಮು. ಬಾಗಿಲ ಕೆಳಗಿರುವ ದೊಡ್ಡ ರಂಧ್ರದಿಂದ ನೀರು ಹೋಗಿ ಹೊರಗಿನ ಚರಂಡಿ ಸೇರುತ್ತದೆ. ಬಹಿರ್ದೇಶೆಗೆ ಚೊಂಬು ಹಿಡಿದು ಮೈಲಿ ದೂರವಿರುವ ಗಣೇಶ ಸ್ಪಿನ್ನಿಂಗ್ ಮಿಲ್ ನ ಹಿಂಬದಿಯ ಪೊದೆಗಳ ಸಾಲಿಗೆ ಹೋಗಿ ಕುಂತು ಬಂದರೆ ಅಂದಿನ ಕಷ್ಟ ತೀರಿತು. ಬೆಳಿಗ್ಗೆ ಬಚ್ಚಲು ಮನೆ ಯಾದುದನ್ನು ಬಟ್ಟೆಯಿಂದ ಒರೆಸಿಬಿಟ್ಟರೆ ಅದೇ ಹಾಲ್. ರಾತ್ರಿ ಹಾಸಿಗೆಯಾದ ಹರಕು ಚಾಪೆಯೇ ಬಂದವರಿಗೆ ಕೂರಲು ಮೈ ಚಾಚಿ ದ್ವಿಪಾತ್ರ ಮಾಡುತ್ತದೆ. ಅದರಲ್ಲಿ ತಿಗಣೆಗಳಿವೆಯೆಂಬ ಗುಮಾನಿಯಿಂದ ಬಂದವರು ಕೂರುವುದಿಲ್ಲ. ಅಸಲು ಇಂತಹ ಮನಿಗೆ ಯಾಕಾದರೂ ಬರುತ್ತಾರೆ?

ಹಾಗಂತ ಈ ಮನೆಯ ಒಡತಿಯನ್ನು ಬೇಕಾರ್ ಅನ್ನಂಗಿಲ್ಲ. ಸುತ್ತಮುತ್ತಲಿನವರು ಈಕೇನಾ ಪಕೀರವ್ವ ಪಕೀರಜ್ಜಿ ಅಂತೆಲ್ಲಾ ಕರೀತಾರೆ. ಎಷ್ಟೇ ಬಡತನವಿದ್ದರೂ ಮುದುಕಿ ಇರುವ ಎರಡು ಸೀರೆಗಳನ್ನೇ ತೊಳೆದು ಉಡುತ್ತಾಳೆ. ಹೂವಿಗೆ ದುಡ್ಡಿಲ್ಲದಿದ್ದರೂ ತಲೆ ಕೂದಲಿಗೆ ಬರವಿಲ್ಲ. ತುರುಬು ಕಟ್ಟುತ್ತಾಳೆ. ಭ್ರೂಮಧ್ಯೆ ಮೂರೆಳೆ ಈಬತ್ತಿ ಹಚ್ಚಿದರೆ ಅಂದಿನ ಅಲಂಕಾರ ಮುಗಿಯಿತು. ಹೊಂಬಣ್ಣದ ಮೈನ ಮುದುಕಿ ವಯಸ್ಸಿನಲ್ಲಿ ಆಗ್ದಿ ಸುಂದರಿಯಾಗಿದ್ದಳೆಂಬ ಚಹರೆ ಮುಖದ ಮೇಲಿನ್ನೂ ಪೂರಾ ಕಲಾಸಾಗಿಲ್ಲ. ಆಗಲೋ ಈಗಲೋ ದುಪ್ಪನೆ ಬಿದ್ದು ಹೋಗುವ ಮನೆಯಂತಿರುವ ಮುದುಕಿಯನ್ನು ನೋಡಲು ಆಗೀಗ ಜನ ಬರುವುದುಂಟು. ಅದೂ ಸೂಟುಬೂಟಿನವರು. ಟೇಪ್ ರಿಕಾರ್ಡರ್ ಹಿಡಿದೊಬ್ಬ ಚೂಡಿದಾರ್ ನವಳು ಬಂದರೆ, ಹ್ಯಾಂಡಿ ಕ್ಯಾಮೆರಾ ಹಿಡಿದೊಬ್ಬ ಮಲ್ಟಿ ಕಲರಿನ ತರುಣನೂ ಬರೋದುಂಟು. ಪಕೀರವ್ವ ಬಂದವರಿಗೆ ಹೆಚ್ಚು ಉಪಚಾರ ಮಾಡೋವಾಕಿಯೇನು ಅಲ್ಲ. ಅದೇ ಹರಕು ಚಾಪೆ ತೋರಿಸುತ್ತಾಳೆ, ಬೆಲ್ಲ ಇದ್ದರೆ ಚಾ ಕಾಸಿ ಕೊಡುತ್ತಾಳೆ.

ಯಾರಮೇಲೂ ಸಿಡುಕದೆ ನಗುನಗುತ್ತಾ ಮಾತನಾಡುತ್ತಾಳೆ. ಆಕೆ ಹಾಡುವ ರಂಗಗೀತೆಗಳನ್ನು ಕೆಲವರು ಟೇಪ್ ಮಾಡಿಕೊಂಡರೆ ಹಲವರು ವಿಡಿಯೋ ಮಾಡುತ್ತಾರೆ. ಪಕೀರವ್ವನನ್ನು ಬಂದವರೆಲ್ಲಾ ’ಪದ್ಮಿನಿಯವರೆ’ ಅಂತಲೇ ಪ್ರೀತಿಯಿಂದ ಕರೆದು ಗೌರವ ತೋರುತ್ತಾರೆ. ಕೆಲವರಂತೂ ಆಕೆ ಮುಂದೆ ಶಾಲಾ ಮಕ್ಕಳಂತೆ ಕುಂತು ಹೇಳಿದ್ದನ್ನೆಲ್ಲಾ ನೋಟ್ಸ್ ಮಾಡಿಕೋತಾರೆ. ಹೇಳ್ತಾಹೇಳ್ತಾ ಆಕೆ ನಗ್ತಾಳೆ. ನಗ್ತಾ ನಗ್ತಾ ಅಳ್ತಾಳೆ. ಅಳ್ತಾ ಅಳ್ತಾ ಪದ್ಮಿನಿ ಹೋಗಿ ಪಕೀರವ್ವನಾಗಿ ರೂಪಾಂತರ ಪಡೆದು ಬಿಡುತ್ತಾಳೆ.

ಕಾಲೇಜು ಪ್ರೊಫೆಸರ ಚಂದ್ರಕಾಂತ ಅನ್ನೋನು ಈಕೆ ಮನೆಗೆ ತಿಂಗಳುಗಟ್ಟಲೆ ಅಲೆದಾಡಿದೋನು ಪುಟಗಟ್ಟಲೆ ಬರ್ಕೊಂಡೋನು ಟೇಪು ಮಾಡಿಕೊಂಡವ. ಪಕೀರವ್ವ ತನಗಲ್ಲದಿದ್ದರೂ ಈವಯ್ಯನಿಗೆ ’ಚಾ’ ಕಾಯಿಸಿ ಕೊಡದೇ ಎಂದೂ ಕಳಿಸಿದವಳಲ್ಲ. ಬೆಲ್ಲದ ಚಾನು ಆಕೆ ಮೋರೆ ನೋಡ್ತಾ ಅರಗಿಸಿಕೊಂಡ ಪ್ರೊಫೆಸರ ಆಕೆಯ ರಂಗಾನುಭವದ ರೋಚಕ ದಿನಗಳ ಬಗ್ಗೆ, ಏಳು-ಬೀಳುಗಳ ಬಗ್ಗೆ, ದೊಡ್ಡ ದೊಡ್ಡ ರಂಗನಟರು ಕಂಪನಿಯ ಮಾಲೀಕರು ಆಕೆಯ ಸೆರಗು ತಾಕಿ ಸಿರಿವಂತರಾಗಿ ಇಂದು ಉಪ್ಪರಿಗೆಯಲ್ಲಿ ಮೆರೆಯುತ್ತಾ ತಿಪ್ಪೆಗೆ ಸೇರಿದ ಪಕೀರವ್ವನನ್ನು ಮರೆತೇ ಹೋದ ಬಗ್ಗೆ ದಪ್ಪನಾದ ಪುಸ್ತಕವನ್ನೇ ಬರೆದ ಭೂಪ. ಪಕೀರವ್ವ ಅಭಿನಯಿಸಿದ ನಾಟಕಗಳ ರಂಗಬಿರಂಗಿ ಫೋಟೋಗಳನ್ನು ಅದೆಂಗೋ ಕಲೆಹಾಕಿ ಪುಸ್ತಕದಲ್ಲಿ ಛಾಪಿಸಿದ ಬಡ್ಡಿ ಮಗ. ಪಕೀರವ್ವ ಆನಂದದಿಂದ ತನ್ನ ತಾರುಣ್ಯದ ಫೋಟೋ ಮೇಲೆ ಕೈಯಾಡಿಸಿ ಮೈಮರೆತಿದ್ದಳು. ಮುಖಪುಟದಲ್ಲೇ ಆಕೇ ಫೋಟೋ ಫೋರ್ ಕಲರ್ ನಾಗೆ ಪ್ರಿಂಟಾಗ್ಯದೆ! ’ಪದ್ಮಿನಿ ಪಕೀರವ್ವನಾದ ಕಥೆ’ ಅಂತಲೇ ಹೆಸರು ಮಡಿಗ್ಯಾವನೆ. ಆಕೆ ಓದಿದಾಗೆಲ್ಲಾ ಅತ್ತು ಬಿಡೋದೇ ಹೆಚ್ಚು. ಹೀಗಾಗಿ ಅದನ್ನು ಮೂಲೆಗೆಸೆದಿದ್ದಾಳೆ.

ಅದೇ ಬೀದಿಯಾಗಿನ ಮಾಸ್ತರನೊಬ್ಬ ಪ್ರೊ.ಚಂದ್ರಕಾಂತನಿಗೆ ಡಾಕ್ಟರೇಟ್ ಬಂದೇತ್ ಕಣವ್ವ  ಅಂದ. ಈಕೆಗೇನೂ ಅನ್ನಿಸಲೇಯಿಲ್ಲ.  ಗೋಣು ಆಡಿಸಿದಳು. ನಿನ್ನ ಪುಸ್ತಕ ಬರೆದು ಮಸ್ತ ರೊಕ್ಕ ಮಾಡ್ದಾ-ನಾಕು ನಾಕು ಸಲ ಪ್ರಿಂಟ್ ಹಾಕ್ಸಿದ ಶಾಣ್ಯ.  ನಿನಗೇನ್ ಕೊಟ್ಟನಬೆ? ಅಂದಾಗಲು ಪಕೀರವ್ವ  ಮಂಕಾದವಳಲ್ಲ. ’ನಂದೇನ್ ಹೋದಾತು ಬಿಡು, ಆಕಿ ಇಂಟ್ರು ಮಾಡಿದೋಳೊಬ್ಬಳು ತುಟಿಗೆ ಲಿಫ್ ಸ್ಟಿಕ್ ಹಚ್ಚುತ್ತಾ ನಿಮ್ಮ ಸಂದರ್ಶನ ನೆಕ್ಶ್ಟ್ ವೀಕ್ ಟಿ.ವಿ ನಲ್ಲಿ ಬರುತ್ತೆ ನೋಡಿ ಅಂದಾಗ ಬರುವ ನಿಟ್ಟುಸಿರನ್ನು ಹೊರಗೆ ಬರದಂತೆ ತಡೆಹಿಡಿದಿದ್ದಳು. ಒಂದು ಸಲ ತನ್ನನ್ನು ತಾನು ಟಿವಿ. ನಾಗೆ ನೋಡ್ಕೋಬೇಕು ಅನ್ನೋ ಚಪಲ. ಅಂದು ಯಾರದೋ ಮನೆಗೆ ಹೋದಳು ಈಕೆ. ನಾಟಕದ ಹೆಂಗಸೆಂದೋ ನಿರ್ಗತಿಕಳೆಂದೋ ಒಬ್ಬರೂ ’ಬಾ ಇತತ್ತಾ’ ಅನ್ನಲಿಲ್ಲ. ಆಕೀನ ಹೋಗಿ ಕುಂತಳು. ಭಂಡತನ, ಭಂಡಧೈರ್ಯ ನಾಟಕದವರಿಗೆ ದೈವ ಕೊಟ್ಟ ಬಳುವಳಿ. ’ಅಮ್ಮ ನಾವು ಆ ಚಾನಲ್ ನೋಡೋಂಗಿಲ್ಲ. ಸಾರಿ ಅಜ್ಜಿ’ ಮನೆಯಾಕೆ ಅಂದಳು. ಮುಖಕ್ಕೆ ರಾಚಿದ ಅನುಭವ. ತನಗೇಕೆ ಇಷ್ಟೊಂದು ವ್ಯಾಮೋಹ ಸಾಯುವ ಕಾಲದಲ್ಲೂ ಅನಿಸಿತು ಪಕೀರವ್ವನಿಗೆ. ಆಕೆ ಮತ್ತೆಂದೂ ಇಂತಹ ತಪ್ಪು ಮಾಡಲಿಲ್ಲ. ಆದರೂ ಯಾರಾದರೊಬ್ಬರು ’ಪಕೀರವ್ವ ಉರುಫ್ ಪದ್ಮಿನಿ ನಿನ್ನೆ ಟಿ.ವಿ.ನಾಗೆ ನಿನ್ನ ನೋಡಿದ್ವಿ ಕಣಜ್ಜಿ. ಈಗ್ಲೆ ಹಿಂಗದಿ ವಯಸಿನಾಗೆ ಹೆಂಗಿದ್ದಿಯಾ ನೀ. ಏಟು ಮಸ್ತು ಹಾಡ್ತಿಯೇ ಮುದ್ಕಿ’ ಅಂತ ಪಡ್ಡೆ ಹುಡುಗರು ಗೇಲಿ ಮಾಡೋವಾಗ ಬೇಸರಿಸದೇ ಅದು ಅವರು ತನ್ನನ್ನು ಮಾಡಿದ ತಾರೀಫೆಂದೆ ಪುಳಕಗೊಳ್ಳುತ್ತಿದ್ದಳು. ಆಗೀಗ ಬದುಕಿನಲ್ಲಿ ಸಿಗುವ ಇಂತಹ ಸಣ್ಣ ಪುಟ್ಟ ಖುಷಿಗಳು. ಪಡ್ಡೆಗಳ ಚೇಷ್ಟೆಗಳು ಇವಿಂದಲೇ ಪಕೀರವ್ವನ ಪ್ರಾಣ ಪಕ್ಷಿಗಿನ್ನೂ ರೆಕ್ಕೆಗಳು ಮೂಡದೆ, ಮೂಡಿ ಹಾರದ ಮುರುಕಲು ಗೋಡಿನಲ್ಲೇ ಬಿದ್ದಿತ್ತು.

ರಂಗದ ಮೇಲೆ ತನ್ನನ್ನು ಕಂಡು ಬಾಯಿ ನೀರೂರಿಸುವ ಮಾತುಗಳಿಗೆ ಚಪ್ಪಾಳೆ ಇಕ್ಕುವ ಹಾಡುಗಳಿಗೆ ಒನ್ಸ್ ಮೋರ್ ಕೂಗುವ ಕಣ್ಣು ಪಿಳುಕಿಸದೇ ತನ್ನ ದೇಹದ ಕುಲುಕನ್ನೆಲ್ಲಾ ಕಣ್ಣು ತುಂಬಿಸಿಕೊಳ್ಳುವ ಮಂದಿ ಬೆಳಗಿನಲ್ಲಿ ಸೂಳೆಯರಿಗೆ ರೇಟ್ ಕಟ್ಟುವಂತೆ ತಮಗೂ ರೇಟು ಕಟ್ಟುವುದನ್ನಾಕೆ ಖಂಡಿಸಿದ್ದೂ ಉಂಟು. ರಾತ್ರಿ ಸ್ಟೇಜಿನ ಮೇಲೆ ಒಂದು ಬೆಳ್ಳಿ ವಿಗ್ರಹ ಕೊಟ್ಟು ಕಲಾದೇವತೆ ಯೆಂದೆಲ್ಲಾ ಮಂದಿ ಮುಂದೆ ಹಾಡಿ ಹೊಗಳುವ ಊರಿನ ಸಾಹುಕಾರ ಹೊಟ್ಟೆ ಚೆನ್ನಪ್ಪ ಕಂಪನಿ ಮನೆಗೆ ಬಂದು ಕಾರಿನಾಗೆ ಹೋಗೋಣ ಬರ್ತಿಯಾ ಬೇಕಾದ್ದು ಮಾಡಿಸಿ ಕೊಳ್ಳಿಗೆ ಹಾಕ್ತೀನಿ ಅಂತ ಜೊಲ್ಲು ಸುರಿಸಿ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದೂ ಅದೆ. ಹಾಗೆಲ್ಲಾ ಕಂಪನಿ ಮನೆಯಲ್ಲಿ ತನ್ನೊಟ್ಟಿಗಿರುವ ಓರಗೆ ನಟೆಯರಿಗೆ ಕೋಪವೋ ಕೋಪ. ಊರಿನಾಗಳ ದೊಡ್ಡಮಂದಿಗೆ ಅಪಮಾನ ಮಾಡಿದ್ರೆ ನಾಳೆ ನಾಟ್ಕ ನಡ್ದಿತಾ ಎಂಬ ಕಳವಳ. ಒಳ್ಳೆಯ ಕಲೆಕ್ಷನ್ ಇರುವಾಗ ನಿನ್ನಿಂದಾಗಿ ಕ್ಯಾಂಪ್ ಎತ್ತಬೇಕಾದೀತೆ…..ಹುಷಾರ್ ’ಕಂಪನಿ ಮಾಲೀಕನ ತಾಕೀತು’ ದೊಡ್ಡೋರು ಕರಿದ್ರೆ ಅವರ ಕಾರ್ ನಾಗೆ ಹೋಗಿ ಬರೋಕೇನ್ ಧಾಡಿ ನಿನಗೆ. ಮೈ ಹುಸಿಯಾಗಿರುವಾಗ್ಲೆ ರೊಕ್ಕ ಕಸೀಬೇಕು. ಆಮೇಲೆ ಮಣಿಮಂಜರಿ ಪಾಲ್ಟಿಂದ ಮುಸುರೆ ತಿಕ್ಕೋಳ ಪಾಲ್ಟಿಗೆ ’ಡಿ’ಗ್ರೇಡ್ ಆಗ್ತಿ ನೋಡ್ ಅಪಾಗ್ಯಾವನ್ ನಿನ್ ಮೂತಿನಾ ಕರಿತಾನೇ ಪಕ್ಕಿ; ಎಂದು ಕೂಗಾಡುವ ಗಂಡ ಅನ್ನಿಸಿಕೊಂಡ ಪ್ರಾಣಿಯ ತಲ್ಲಣ. ಏನೆಲ್ಲವನ್ನು ಆಕೆ ನುಂಗಿಕೊಂಡಿದ್ದಾಳೆ.

ಹಂಗ್ ನೋಡಿದರೆ ಆಕೀ ನಾಟಕದವರ ಕುಟುಂಬದಿಂದ ಬಂದಾಕಿಯೂ ಅಲ್ಲ. ಅವರ ವಂಶದಾಗೆ ನಾಟಕ ಮಾಡಿದವರಾಗ್ಲಿ ಬಣ್ಣ ಹಚ್ಚಿದೋರಾಗ್ಲಿ ಇದ್ದಿಲ್ಲ. ಪೀರ್ಲದೇವರ ಹಬ್ಬಕ್ಕೆ ಈಕಿ ಅಪ್ಪ ಹುಲಿ ವೇಷ ಹಾಕ್ಕೊಂಡು ಕುಣಿಯುತ್ತಿದ್ದನ್ನೆ ’ಕಲೆ’ ಅಂಬೋದಾದರೆ ಈಕಿ ಕಲಾವಿದರ ವಂಶದೊಳು ಅಂದ್ಕೋಬಹುದು. ಒಮ್ಮೆ ಚೆನ್ನಗಿರಿಗೆ ಶ್ರೀ ಶರಣಬಸಪ್ಪ ನಾಟಕ ಸಂಘ ಬಂತು. ಅಪ್ಪನ ಜೊತೆಯಾಗಿ ಇವಳು ನಾಟಕ ನೋಡಿದಳು. ಅದರಾಗೆ ಹಾಸ್ಯಪಾತ್ರ ಮಾಡುವ ಸೀನ್ಯಾ ಅನ್ನೋನ ಮಾತಿಗೆ ಬಿದ್ದು ಬಿದ್ದು ನಕ್ಕಳು. ತಾಳಿ ಕಟ್ಟೋಕೆ ಕೂಲೀನಾ ಅಂಬೋ ನಾಟಕವನ್ನು ನಾಲ್ಕಾರು ಸಲ ಅವನಿಗಾಗೆ ತನ್ನ ಗೆಳತಿಯರ ಕಟ್ಕೊಂಡು ಹೋಗಿ ನೋಡಿ ಬಂದಳು. ಸೀನ್ಯಾನ ಮಾತನಾಡಿಸೋ ಹಂಬಲವನ್ನಾಕಿ ಅದುಮಿಟ್ಟುಕೊಂಡಳು. ಅದ್ಯಾವ ಯೋಗ ಯೋಗವೋ ಆಕಿ ಪೆಟ್ಟಿಗೆ ಅಂಗಡಿಗೆ ಬೀಡಾ ಬೀಡಿ ಸೋಡಾ ಅಂತ ಅವನೇ ದಾಳಿಯಿಡಲಾರಂಭಿಸಿದ. ಪಕೀರವ್ವ ಇವನನ್ನು ಇವನ ನಾಟಕವನ್ನು ಖಂಡಾಬಟ್ಟೆ ಹೊಗಳಿದ್ದೇ ಹೊಗಳಿದ್ದು. ಸೀನ್ಯ ಲೋಕ ಕಂಡವನು. ಇದು ಬಲೆಗೆ ಬೀಳೋ ಹಕ್ಕಿ ಅಂದುಕೊಂಡ. ಪುಗಸಟ್ಟಿ ಬೀಡಿ ಕಟ್ಟು ಸೋಡಾ ಸಿಗೋವಾಗ ಅಂಗಡಿಯ ಪರ್ಮನಂಟ್ ಗಿರಾಕಿಯಾಗಿ ಹೋದ. ಮನಸು ಮಾಡಿ, ಇವಳನ್ನು ಜೋಳದಹಾಳ್ ಫಾರೆಸ್ಟ್ ಗೆ ಕರೆದೊಯ್ದು ಉಡಾಯಿಸಿಬಿಡಬಹುದು ಅಂದ್ಕೊಂಡ. ಸಣ್ಣ ಪುಟ್ಟ ಊರುಗಳಲ್ಲಿ ಇಂತಹ ಹೆಣ್ಣು ಹಕ್ಕಿಗಳಿಗೆ ಕುಕ್ಕಿ ಕ್ಯಾಂಪ್ ಕ್ಲೂಸ್ ಆದಾಗ ಮುಂದಿನ ಕ್ಯಾಂಪಿಗೆ ಹೊಸ ಹಕ್ಕಿ ತಲಾಷ್ ಗೆ ನಿಲ್ಲುವ ಚಟಗಾರ ಸೀನ್ಯನಂತವರಿಗೆ ಇದೆಲ್ಲಾ ಮಾಮೂಲು. “ನನ್ನ ಪ್ರಾಣ ಹೋದರೂ ನಿನ್ನೇ ಮದುವೆಯಾಗ್ತೀನಿ, ನೀನೆ ಏಳೇಳು ಜನ್ಮಕ್ಕೂ ನನ್ನ ಹೆಂಡ್ತಿ…..”ಅಂತೇಳೋದು ನಾಟಕದ ಡೈಲಾಗಿನಷ್ಟೇ ಸಲೀಸು.

ಕಂಪನಿಯಲ್ಲಿರುವ ಹುಡುಗಿಯರಿಗೆ ಕೈ ಹಾಕುವಂತಿಲ್ಲ. ಅವೆಲ್ಲಾ ತನ್ನ ಸೊತ್ತು ಎಂಬಂತಾಡುವ ಮಾಲೀಕನ ದರ್ಪ. ಇನ್ನು ಅವನ ಕಣ್ಣಿಗೆ ಬಿದ್ದರೆ ಕಂಪನಿಯ ಋಣ ತೀರಿದಂತೆಯೇ. ಅದಕ್ಕೆಂದೆ ಸೀನ್ಯನಂತ ಕಲಾವಿದರದೇನಿದ್ದರೂ ಹೊರಗಿನ ಬೇಟೆ. ಸೀನ್ಯ ಈ ಸಲ ದುಡುಕಲಿಲ್ಲ. ಸಿಕ್ಕಿರೋದು ದೇವಲೋಕದ ಪಾರಿಜಾತ. ನೇರವಾಗಿ ಅವರಪ್ಪನ ತಾವೇ ಮಾತಾಡಿ ಮದುವೆಗೆ ಒಪ್ಪಿಸಿದ. ತಾನು ಗೂಟುಕ್ ಅನ್ನೋದ್ರೋಳಗೆ ಮಗಳನ್ನು ದಡ ಮುಟ್ಟಿಸಬೇಕೆಂಬ ತರದೊದಿನಲ್ಲಿದ್ದ ಅವಳಪ್ಪನೂ ಒಪ್ಪಿಗೆ ಸೂಚಿಸಿದ. ನಾಟಕದ ಮಾಲೀಕ ಮಾತ್ರ ತರಲೆ ತೆಗೆದ. ’ನೀನು ಮಾಡೋ ಘನಂದಾರಿ ಪಾರ್ಟೀಗೆ ಇಬ್ಬರಿಗೆ ಊಟ ಹಾಕಂಗಿಲ್ಲ ಕಣಯ್ಯ ಈಕೇನೂ ಪಾರ್ಟು ಮಾಡೋದಾದ್ರೆ ಕಂಪನಿಯಾಗಿರ್ಲಿ. ಇಲ್ಲ ಮುಂದಿನ ಕ್ಯಾಂಪಿಗೆ ಬರಬೇಡ್ಲೆ ಅಂದಿದ್ದ. ರೋಗಿ ಬಯಸಿದ್ದು ಹಾಲು ಅನ್ನ , ವೈದ್ಯ ಹೇಳಿದ್ದು ಅದೇಯಾ. ಪಕೀರವ್ವ ತಾನು ಹಿಂದೆಲ್ಲಾ ತಿಂದು ಹಾಕಿದ ಹುಡ್ಗೀರ್ಗಿಂತ ವೈನಾಗವಳೆ. ಈ ಗೊಂಬಿಯಂತಹ ಹುಡುಗಿಗೆ ಬಣ್ಣ ಹಚ್ಚಿದ್ದರೆ ಚಲೋ ಸಂಪಾದ್ನೆ ಆದಿತೇನೋ ಅಂಬೋ ಲೆಕ್ಕಾಚಾರದ ಮೇಲೆಯೇ ಆಕಿಗೆ ತಾಳಿ ಕಟ್ಟಲು ಕೊಲಿ ಕೇಳಿರಲಿಲ್ಲ. ’ತಮ್ಮ ಮಾತಿಗೆ ಎದುರಾಡೇನ್ಯೆ ಯಜಮಾನ್ರೆ’ ಅಂದ ಸೀನ್ಯ ದಭಾರನೆ ಅಡ್ಡಬಿದ್ದು ಆಶೀರ್ವಾದವನ್ನು ಪಡದೇ ಬಿಟ್ಟೆ.

ಅಂಗಡಿ ಪಕೀರಪ್ಪ ನಾಟಕದ ಕಂಪನಿ ಪಾಲಾಗಿದ್ದು ಹಿಂಗೆ. ಆದರೆ ಆಕಿ ಮೈತುಂಬಾ ಸೆರಗು ಹೊದ್ದು ಯಾರೊಂದಿಗೂ ಬೆರೆಯದೆ ನಗದೆ ಮಾಲೀಕರು ಮಾತಾಡಿಸಿದರು ತಲೆ ಎತ್ತದೆ ತೋರುವ ಗೌರವ ಯಾರಿಗೂ ಬೇಕಿರಲಿಲ್ಲ. ಒಂದಿನ ಸೈಡ್ ವಿಂಗ್ಸ್ ನಾಗೆ ಕುಂತು ನಾಟಕ ನೋಡುತ್ತಿದ್ದಳು ಪಕೀರವ್ವ. ಗ್ರೀನ್ ರೂಮಿಂದ ಬಂದ ಸೀನ್ಯನೇ ಮಾಲೀಕರ ಮನದಾಸೆ ಹಿಂಗೈತೆ ಅಂತ ಪಿಸುಗಿದ. ’ನಾನು ನಾಟ್ಕದಾಗೆ ಕುಣಿಯೋದಾ? ಏನ್ ತಿಳ್ಕಂಡೆ ನನ್ನ ಬದ್ಮಾಷ್’ ಅಂಗಾರಾದಳು ಪಕೀರವ್ವ. ’ನಂಗೂ ಇಷ್ಟವಿಲ್ಲ ಕಣಮ್ಮಿ ಆದ್ರೆ ನನ್ಮಗ ಪಾರ್ಟು ಮಾಡಿದೊರ್ಗೆ ಮಾತ್ರ ನಾನು ಊಟ ಹಾಕೋದು. ಆಕೀನಾ ಊರಿಗೆ ಗದ್ಮು ಆಂತಾನೆ ಕಣಮ್ಮಿ ಏನ್ ಮಾಡನೇಳು’ ಸೀನ್ಯ ಅಲವತ್ತುಕೊಂಡ. ಆಕೆ ಕಣ್ಣೀರು ಕಪಾಳಕ್ಕಿಳಿದವು. ಕಂಪನಿಗೆ ಬಂದ ಮೇಲೆ ಅಲ್ಲಿನ ಸ್ಥಿತಿಗತಿಯನ್ನವಳು ಅರ್ಥ ಮಾಡಿಕೊಂಡಿದ್ದಳು. ರಾತ್ರಿ ಮಕ್ ಮಲ್ ಬಟ್ಟೆ ತೊಟ್ಟು ಕಿರೀಟ ಇಟ್ಟು ಕತ್ತಿ ಎತ್ತಿಕೊಂಡು ಕುಣಿಯುತ್ತಾ ಜಾಕಾಯಿ ಪೆಟ್ಟಿಗೆಯ ಸಿಂಹಾಸನ ಏರೋ ಮಾರಾಜ ಬೆಳಿಗ್ಗೆ ಥಿಯೇಟರ್ ಮುಂದೆ ಕುಕ್ಕುರಗಾಲಲ್ಲಿ ಕುಂತು ಅರ್ಧ ಬಿಟ್ಟಿ ’ಚಾ’ ಕುಡಿತಾ ಕವ್ ಕವ್ ಅಂತಾ ಕೆಮ್ತಾ ಕಫ ಉಗಿದು ಏದುಸಿರು ಬಿಡುವುದನ್ನವಳು ಕಂಡಿದ್ದಳು. ರಾತ್ರಿ ಪೀತಾಂಬರ ಉಟ್ಟು ದಂಡಿಗಟ್ಟಲೆ ಕಾಗದದ ಹೂ ಮುಡಿದು ಗಿಲೀಟಿನ ಚಿನ್ನಾಭರಣ ತೊಟ್ಟು ಹಾಡಿ ಕುಣಿವ ಮಾರಾಣಿ ಬೆಳಿಗ್ಗೆ ಬಿಸಿಲು ಕಾಯಿಸುತ್ತಾ ಪರಕು ಸೀರೆಯನು ಸೂಜಿ ದಾರದಿಂದ ಹೊಲಿದುಕೊಳ್ಳೋದನ್ನ ಮಗಳ ತಲೆಯ ಹೇನು ಕುಕ್ಕೋದನ್ನ ಸ್ನಾನದ ನೀರಿಗಾಗಿ ಪರದಾಡುವಂತಹ ಅಭದ್ರ ಜೀವನದ ಬಗ್ಗೆ ಕಂಗಾಲಾಗಿದ್ದಳು. ಕೆಲವು ದೊಡ್ಡ ನಟರನ್ನು ಬಿಟ್ಟರೆ ಉಳಿದವರನ್ನು ಅಡಿಗೆ ಶ್ರೀಕಂಠ ಕೂಡ ’ಕ್ಯಾರೆ’ ಅನ್ನುತ್ತಿರಲಿಲ್ಲ. ಬಡಿದಷ್ಟು ತಿಂದೇಳಬೇಕು. ನಾಯಕಿ ಪಾತ್ರ ಮಾಡೋಳು ಎಲ್ಲರಿಗಿಂತ ವಾಸಿ. ಅವಳು ಬೇಕೆಂದಾಗ ರೆಸ್ಟೋರೆಂಟ್ ನಿಂದ ಮಾಂಸದ ಊಟ ತರಿಸಿಕೊಳ್ಳುವಷ್ಟು ಸುಖಿ. ಮಾಲೀಕ ಶರಣಪ್ಪನೇ ಅವಳ ರೂಮಿಗೆ ಟಿಫಿನ್ ಕ್ಯಾರಿಯರ್ ಹಿಡಿದು ಹೋಗುವುದೂ ಉಂಟು. ಮಂಥರೆ ಪಾರ್ಟು ಮಾಡುವ ನೀಲವ್ವನಿಗೆ ಯಾಕಿಂಗೆ ಅಂದರೆ? ಅದಂಗೆಯಾ…..ಅವ್ಳು ಕುಣಿದ್ರೆ ಇವನಿಗೆ ಕಾಸು. ಅವಳು ಬ್ಯಾರೆ ಕಂಪನಿಗೆ ಓಡಿಹೋದ್ರೆ ಈವಯ್ಯನ ಕಂಪನಿ ಗೋವಿಂದ ಅನ್ನೋಳು. ದಿನವೂ ನಾಟಕ ನೋಡುವ ಪಕೀರವ್ವನಿಗೆ ಇವಳೇನ್ ಮಹಾ ಪಾರ್ಟು ಮಾಡ್ತಾಳೆ ನೆಟ್ಟಗೆ ಅಳಾಕೆ ಬರಲ್ಲ ನಗಾಕೆ ಬರಲ್ಲ ಅನ್ಸೋದು. ದಿನಾ ಹೊಗೆಸೊಪ್ಪು  ಹಾಕಿ ಹಲ್ಲುಗಳು ಕರೆಗಟ್ಟಿವೆ. ಜಂಭ ಮಾತ್ರ ಕಮ್ಮಿ ಏನಿಲ್ಲ ಅಂದುಕೊಳ್ಳೋಳು. ನಾಯಕಿ ಸುಭದ್ರೆ ಇವಳನ್ನೆಂದು ಮಾತನಾಡಿಸಿದವಳೇ ಅಲ್ಲ. ಅವಳಿಗಿಂತ ನೀನೇ ವೈನಾಗಿದಿ ಕಣೆ ಅನ್ನೋದು ಕನ್ನಡಿ. ಇದ್ದದ್ದನ್ನ ಇದ್ದಂಗೆ ತೋರಿಸೋದು ಪ್ರಪಂಚದಲ್ಲಿ ಕನ್ನಡಿ ಒಂದೇ ಎಂದು ಬೀಗುವ ಪಕೀರವ್ವನ ಮೇಲೆ ಪಾರ್ಟು ಮಾಡೋದಾದ್ರ ಇರು ಇಲ್ಲ ಜಾಗ ಖಾಲಿ ಮಾಡು ಎಂಬ ವರಾತ ಬಿದ್ದಾಗ ಮಾತ್ರ ಗಲಿಬಿಲಿಗೊಂಡಳು. ಸೀನ್ಯಾ ಸದಾರಾಮೆ ನಾಟಕದಲ್ಲಿ ಆದಿಮೂರ್ತಿ ಪಾರ್ಟು ಮಾಡೋದು ಬಿಟ್ಟರೆ ಉಳಿದ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳೆ. ಸೋಮಾರಿ ಕುಡುಕ ಬೇರೆ. ಅವನಿಲ್ಲದಿದ್ದರೂ ಕಂಪನಿಗೇನೂ ಬಾಧಕವಿಲ್ಲವೆಂಬುದು ಅವಳಿಗೂ ಮನದಟ್ಟಾದಾಗ ದುಡುಕಿದೆ ಎಂದು ಪರಿತಪಿಸಿದ್ದಳು.

ಒಂದು ದಿನ ಅವಳ ರೂಮಿಗೇ ನುಗ್ಗಿದ ಶರಣಪ್ಪ ಕಂಪನಿ ಬಿಟ್ಟು ಯಾರಾದರೊಬ್ಬರು ತೊಲಗಿ ಅಂತ ಗದ್ದಲ ಶುರುಮಾಡಿದ. ನಾಯಕಿ ಸುಭದ್ರೆ ತನ್ನನ್ನೇ ಆಕ್ರೋಶದಿಂದ ನೋಡುತ್ತಾ ’ಅವಳನ್ನು ಕತ್ತು ಹಿಡಿದು ಆಚೆ ತಳ್ಳಿ ಯಜಮಾನ್ರೆ. ಸೀನ್ಯನಿಗೆ ನಮ್ಮ ಕಂಪನಿಯಾಗೆ ಪಾರ್ಟು ಮಾಡೋ ನೀಲಿನೇ ಲಗ್ನ ಮಾಡೋಣ’ ಅಂತ ಹುರಿದುಂಬಿಸಿದ್ದಳು. ಊರಿಗೆ ಹೋದ್ರೆ ನಿನಗಾನಾ ಮುದಿ ಅಪ್ಪ ಅವ್ನೆ…..ನನಗ್ಯಾರು ಅವರೆ? ಪಕ್ಕಿ……ನನಗೆ ಯಜಮಾನ್ರೆ ತಂದೆ ತಾಯಿ ಎಲ್ಲ. ನಾವು ಅವರು ಹೇಳ್ದಂಗೆ ಕೇಳಿದ್ರೆಯಾ ಅನ್ನ ಬಟ್ಟೆ ಕೈಯಾಗೆ ನಾಕು ಕಾಸು’ ಎಂದು ತಲೆ ತಗ್ಗಿಸಿಬಿಟ್ಟ ಸೀನ್ಯ.

’ಕೇಳಿದ್ಯಾ ನಿನ್ ಗಂಡನ ಮಾತ್ನ ಕಟ್ಟು ಗಂಟು ಮೂಟೆ’ ಯಜಮಾನರಿಗಿಂತ ಜೋರು ಮಾಡಿದವಳು ನಾಯಕಿ ಪಾರ್ಟಿನ ಸುಭದ್ರ. ಪಕೀರವ್ವನ ಸ್ವಾಭಿಮಾನ ಹೆಡೆಯಾಡಿತು. ಊರಿನಾಗೆ ಅಪ್ಪನ ಸ್ಥಿತಿಯು ಅಷ್ಟಕಷ್ಟೆ ಒಂದು ಸ್ವಂತ ಗೂಡಿಲ್ಲ. ಅಂಗಡಿ ಒಳಗೆ ಮಗಳು, ಹೊರಗಿನ ಕಟ್ಟೆ ಮ್ಯಾಗೆ ಅಪ್ಪ ರಾತ್ರಿ ಮಲಗುತ್ತಿದ್ದುದು ನೆನಪಾಗಿ ಪಕೀರವ್ವ ಬಾಣಲೆಯಿಂದ ಮತ್ತೆ ಬೆಂಕಿಗೆ ಬೀಳುವುದು ಜಾಣತನವಲ್ಲವೆಂದುಕೊಂಡಳು. ತೀರಾ ಮುಳುಗಿದವರಿಗೆ ಚಳಿ ಎಂತದು ಗಾಳಿ ಎಂತದು. ’ನಂಗೆ ಪಾರ್ಟು ಹೆಂಗೆ ಮಾಡೋದಂತ ಗೊತ್ತಿಲ್ರಿ. ನೀವು ಹೇಳಿ ಕೊಟ್ಟರೆ ಮಾಡ್ತೀನ್ರಿ’ ಅಂದ ಪಕೀರವ್ವ ದೇಹದಲ್ಲಿ ಕತ್ತು ಹುದುಗಿಸಿದಳು. ’ನೀ ಪಾರ್ಟು ಮಾಡಬ್ಯಾಡ್ವೆ ಪಕೀರವ್ವ ಮೇಕಪ್ ಹಾಕ್ಯಂಡು ಸ್ಟೇಜ್ ಮ್ಯಾಗೆ ಹಂಗ್ ಬಂದು ಹಿಂಗ್ ಹೋಗ್ ಸಾಕು. ಜನ ನಿನ್ನ ಮಾರಿ ನೋಡಾಕಂತ್ಲೆ ದಿನಾ ಬತ್ತಾರೆ…..ಆಕ್ಟಿಂಗ್ ಹೇಳಿ ಕೊಡೋಕೆ ವಾಸುದೇವಾಚಾರಿ ಅವ್ನೆ ಹಾಡು ಕಲಿಸಾಕೆ ಪೇಟಗಿ ಮಾಸ್ತರು ಅದಾರೆ ಅದರ ಚಿಂತೆ ಬಿಡು ನೀ. ಹಂಗೆ ಒಂದು ಮಾತು……ಪಕೀರವ್ವ ಅನ್ನೋ ಹೆಸರು ಚೆಂದಾಗಿಲ್ ತೆಗಿ, ಪದ್ಮ, ಪದ್ಮಮುಖಿ, ಪದ್ಮಜ….ಪದ್ಮಿನಿ ತಿಳಿತಿಲ್ಲೋ’ ಅಂದ ಶರಣಪ್ಪ. ’ಅಲೆ ಕೇಳಿಸ್ತೇನ್ರಲೆ ಎಲ್ಲರ್ಗೂ….’ ಸಿಂಹ ಘರ್ಜನೆ ಮಾಡಿದ. ಎಲ್ಲರೂ ಅಷ್ಟೇನು ಖುಷಿಪಡದಿದ್ದರೂ ಗೋಣು ಆಡಿಸಿದರು. ಸುಭದ್ರೆ ಅಲ್ಲಿ ಕಾಣಸಿಗಲಿಲ್ಲ. ಸೀನ್ಯನಂತು ತೇಲಾಡುವಂತೆಯೇ ಕಂಡ. ಅಂದು ಒಂದು ಬಾಟಲಿ ಹೆಚ್ಚು ಏರಿಸಿದ.

ಪಕೀರವ್ವನ ಮೋರೆಗೆ ಬಣ್ಣ ಬಿದ್ದು ಅದ್ಯಾವ ಘಳಿಗೆಯಲ್ಲಿ ಪದ್ಮಿನಿ ಯಾಗಿ ರೂಪಾಂತರ ಪಡೆದಳೋ ಅವಳ ಜೀವನದ ಗತಿಯೇ ಬದಲಾಯಿತು. ’ದೇವದಾಸಿ’ ನಾಟಕದಲ್ಲಿ ಪುಟ್ಟ ವಿಮಲೆಯ ಪಾತ್ರ ದೊರೆತಾಗ ಆಕಿಗೆ ನಿರಾತಂಕ. ರಂಗದ ಮೇಲೆ ಪುಟ್ಟ ಪಾತ್ರವಾದರೊ ಪಕೀರವ್ವನಿಗೆ ಶರಣಪ್ಪ ನೀಡುತ್ತಿದ್ದ ಪ್ರೋತ್ಸಾಹ ಅವಳ ಬೇಕು ಬೇಡಗಳ ಬಗ್ಗೆ ತೋರುತ್ತಿದ್ದ ಉತ್ಸಾಹ ಹೆಚ್ಚಾಗಿ ಅವಳ ಕೋಣೆಗೆ ನಡೆದ ಓಡಾಟ ಮಾತ್ರ ಸುಭದ್ರೆಯಲ್ಲಿ ಹೆಚ್ಚಿನ ಅಭದ್ರತೆ ಮೂಡಿಸಿತು. ಗಿಡವಾಗಿರೋವಾಗ್ಲೇ ಚಿವುಟೋದು ಸುಲಭ. ಮರವಾದರೆ ಕೊಡಲಿ ಏಟೇ ಹಾಕಬೇಕೆಂದು ತರ್ಕಿಸಿದ ಸುಭದ್ರೆ, ಶರಣಪ್ಪನಲ್ಲಿ ಪಕೀರವ್ವನ ಬಗ್ಗೆ ತಾತ್ಸಾರದ ಮಾತನಾಡಿದಳು. ಅವನು ಪದ್ಮಿನಿ ಅನ್ನು ಅಂದರೂ ಪಕೀರವ್ವ ಅಂದೇ ಅಸೂಯ ಕಾರಿದಳು. ’ನೀವು ಗಂಡಸರೇ ಇಷ್ಟು ಬಿಡು……ಕಲೆಗೆ ಬೆಲೆ ಕೋಡೋರಲ್ಲ. ಹೂವಿಂದ ಹೂವಿಗೆ ಹಾರೋ ದುಂಬಿಗಳು’ ಅಂದು ಮುನಿದಳು ಮಾತು ಬಿಟ್ಟಳು. ಶರಣಪ್ಪ ತಲಿ ಕೆಡಿಸಿಕೊಳ್ಳಲಿಲ್ಲ. ಪಕೀರವ್ವನ ಸಂಗವನ್ನೂ ಬಿಡಲಿಲ್ಲ. ಸೀನ್ಯನೇ ತೆಪ್ಪಗಿರೋವಾಗ ಸುಭದ್ರೆಯದೇನು!  ಆದರೆ ಸುಭದ್ರೆ ಒಂದು ಸಂಜೆ ನಾಪತ್ತೆಯಾದಳು. ರೂಮಲ್ಲಿ ಅವಳ ಟ್ರಂಕೊ ಇಲ್ಲ.

ರಾತ್ರಿ ನಾಟಕದ ಗತಿ? ಮಣಿಮಂಜರಿ ಇಲ್ಲದೆ ನಾಟಕ ನಡೆದೀತೆ? ಗರಬಡಿದು ಹೋದ ಶರಣಪ್ಪ  ಅಂದು ನಾಟಕ ನಿಲ್ಲಸುವುದೇ ಮೇಲು ಎಂಬ ತೀರ್ಮಾನಕ್ಕ ಬಂದ. ಎಲ್ಲರ ಮೋರೆಗಳೂ ಕಬ್ಬು ಹೀರಿದ ಸಿಪ್ಪೆಗಳಾದವು. ’ಸುಭದ್ರೆ ನಾಳೆಯೂ ಬಾರದಿದ್ದರೆ? ತಟ್ನೆ ಪ್ರಶ್ನಿಸಿದಳು ಪಕೀರವ್ವ.. ಉತ್ತರಮಾತ್ರ ಯಾರಲ್ಲೂ ಇಲ್ಲ. ಯಾರು ಇರಲಿ ಇಲ್ಲದಿರಲಿ ನಾಟಕ ನಡೀಬೇಕು…..ಅಂತಹ ತಂಡ ಕಟ್ಟಬೇಕು ಯಜಮಾನ್ರೆ’ ಮತ್ತೆ ಅವಳೇ ಅಂದಳು. ಅಂದಂತೆಯೇ ಆಯಿತೇ! ಏದುಸಿರು ಬಿಟ್ಟ ಶರಣಪ್ಪ ’ನಾನ್ ಮಣಿಮಂಜರಿ ಪಾರ್ಟ್ ಮಾಡ್ತೀನಿ. ವಿಮಲಾ ಪಾತ್ರಕ್ಕೆ ಹೆಂಗೂ ನೀಲವ್ವ ಇದ್ದೇ ಆದಾಳೆ’ ಅಂದಳು. ಉಸಿರು ತಿರುಗಿಸಿಕೊಂಡ ಶರಣಪ್ಪ ಅಂದಂತೆಯೇ ರಂಗದಮೇಲೆ ತನ್ನ ತಳುಕು ಬಳುಕು ಒನಪು ವೈಯ್ಯಾರಗಳಿಂದ ವಿಜೃಂಭಿಸಿಯೇ ಬಿಟ್ಟಳು. ವಾರ ಬಿಟ್ಟು ಬಂದಳು ಸುಭದ್ರೆ. ತನ್ನ ತಾಯಿಗೆ ಸೀರಿಯಸ್ ಆಗಿತ್ತು ಹೋಗಿದ್ದ ಅಂತ ಪರಿ ಪರಿಯಾಗಿ ನಿವೇದಿಸಿಕೊಂಡರೂ ಶರಣಪ್ಪ ಕರಗಲಿಲ್ಲ. ಮತ್ತೆ ಮಣಿಮಂಜರಿ ಪಾತ್ರ ಸುಭದ್ರಗೆ ದಕ್ಕಲಿಲ್ಲ.

ನಾನ್ ವೆಜ್ ಐಟಮ್, ಟಿಫನ್ ಕ್ಯಾರಿಯರು ನಲ್ಲಿ ಪಕೀರವ್ವನ ಕೋಣೆಗೆ ಹೋಗುವಂತಾದಾಗ ಸುಭದ್ರೆ ತಾನಾಗಿಯೇ ಶರಣಪ್ಪನ ಕಂಪನಿ ಬಿಟ್ಟಳು. ಮುಂದೆಲ್ಲಾ ಪಕೀರವ್ವನದೇ ದರ್ಬಾರು. ಶಕುಂತಲೆಯಲ್ಲಿ ಶಾಕುಂತಲೆ, ಸದಾರಾಮೆಯಲ್ಲಿ ಸದಾರಮೆ, ಕಿತ್ತೂರು ರಾಣಿ ನಾಟಕದಲ್ಲಿ ಕಿತ್ತೂರು ಚೆನ್ನಮ್ಮ ಕೃಷ್ಣಲೀಲೆ ಯಲ್ಲಿ ಬಾಮೆ ಎಲ್ಲವೂ ಅದಳು. ಪಕೀರವ್ವನಿಗೆ ಪಾತ್ರ ಕಲಿಸಿಕೊಡುವ ನಟ ವಾಸುದೇವಾಚಾರಿಯೇ ನಾಟಕದ ಹೀರೋ. ಅವರಿಬ್ಬರ ಸಹಜ ಅಭಿನಯ ಹಾಡುಗಾರಿಕೆಗೆ ಪ್ರೇಕ್ಷಕರು ಮೆಚ್ಚಿ ರಂಗದ ಮೇಲೆ ಕಾಸು ಎಸೆದರು. ’ಆ ಸುಖಮಂದಿರ ಪ್ರೇಮವಿಲಾಸ/ಆಸೆಯೂ ಇಲ್ಲದ ನಿಜ ಶಿಕಾರಿ/ ಆ ಸುಖಮಂದಿರ ಪ್ರೇಮವಿಲಾಸ’ ಎಂದವರಿಬ್ಬರೂ ಹಾಡಿದರೆ ಒನ್ಸ್ ಮೋರ್ ಬೀಳಲೇಬೇಕು. ಇದೀಗ ಶರಣಪ್ಪನಿಲ್ಲದಿದ್ದಾಗ ಪಕೀರವ್ವನ ಕೋಣೆಯಲ್ಲಿ ವಾಸುದೇವನ ವಾಸ. ಇದು ಸುದ್ದಿಯಾದಾಗ ಶರಣಪ್ಪ ರುದ್ರನಾದ. ಲಕ್ಷಾಂತರ ರುಪಾಯಿಗಳು ತಿಜೋರಿಗೆ ಬಂದು  ಬೀಳುತ್ತಿದ್ದರೂ ಮನಸ್ಸೀಗ ಖಾಲಿ. ಸಣ್ಣ ತಪ್ಪಿಗಲ್ಲಾ ವಾಸುದೇವಾಚಾರಿಯನ್ನು  ಬಾಯಿಗೆ ಬಂದಂತೆ ಬಯ್ಯೋದು ಹೆಚ್ಚಿತು.

ಒಂದು ದುರ್ದಿನ ’ನಿನ್ನ ಲೆಕ್ಕ ಚುಕ್ತಾ ಮಾಡ್ತೀದಿನಯ್ಯಾ……ಹೊರಟು ಹೋಗು’ ಕೂಗಾಡಿದ ಶರಣಪ್ಪ ರಾತ್ರಿ ನಾಟಕದ ಗತಿಯೇನ್ರಿ? ಪಕೀರವ್ವ ಹೌಹಾರಿದಳು. ಯಾರು ಇರಲಿ ಯಾರು ಇಲ್ಲದಿರ್ಲಿ ನಾಟಕ ನಡೀಬೇಕು ಅಂತ ನೀನೆ ಅಂದ್ಯಲ್ಲೆ. ನಮ್ಮ ರಾಮಯ್ಯನೆ ದುಷ್ಟಂತನ ಪಾರ್ಟು ಮಾಡ್ತಾನೆ.” ಸಿಡುಕಿದ ಶರಣಪ್ಪ ’ಅವನ ಸಿಡುಬಿನ ಮೋರೆ ಮೊಂಡ ಮೂಗಿಗೆ ದೂರ್ವಾಸಮುನಿ ಪಾತ್ರವೇ ಲಾಯಕ್ಕು’ ವಾದಿಸಿದಳು. ’ವಾದ ಮಾಡಿದರೆ ನಿನ್ಗೊ ಗೇಟ್ ಪಾಸ್….ಹುಷಾರ್’ ಅಂದೇಬಿಟ್ಟೆ ಶರಣಪ್ಪ ಪಕೀರವ್ವ ಜಾಣೆ ತಾನೂ ಮಾತೂ ಬೆಳೆಸಲಿಲ್ಲ. ’ನಟರೇ ಇಲ್ಲದಿದ್ದ ಮೇಲೆ ಇವನ ದುಡ್ಡು ಬಂದು ಪಾರ್ಟು ಮಾಡುತ್ತಾ? ನಾವೇ ಒಂದು ಕಂಪನಿ ಮಾಡೋಣ…..ನೀನು ಹೂಂ ಅನ್ನು ಪದ್ಮಿನಿ ಬಂದು ಕರ್ಕೊಂಡ್ ಹೋಗ್ತೀನಿ’ ಹುರುಪು ತುಂಬಿಯೇ ಹೋದ ವಾಸುದೇವಾಚಾರಿ.

ಅವನು ಹೋದ ಮೇಲೆ ನಾಟಕಗಳು ಕಳೆ ಹತ್ತಲಿಲ್ಲ. ಫೋನ್ ನಲ್ಲಿ ಸ್ವಂತ ಕಂಪನಿ ಮಾಡುವ ಮಾತನಾಡಿದ ವಾಸುದೇವ. ಒಪ್ಪಿಕೊಂಡಳು ಪಕೀರವ್ವ. ಅವಳು ಕಂಪನಿ ಬಿಡುತ್ತೇನೆಂದಾಗ ಶರಣಪ್ಪ ಕಾಲು ಹಿಡಿಯುವುದೊಂದು ಬಾಕಿ. ಅವಳು ವಾರದ ಮೊದಲು ಹೇಳಿಯೇ ಕಂಪನಿ ಬಿಟ್ಟಳು.”ಅಲೇ ಸೀನ್ಯ….ನಿನ್ನ ಹೆಂಡ್ರನ್ನ ಆ ಆಚಾರಿ ನನ್ಮಗ ಇಟ್ಕೊಂಡಾವ್ನೆ ಕಾಣ್ಲಾ ಅವನ್ನ ನಂಬ್ಯಾಡ’ ಎಂದು ಶರಣಪ್ಪ ಪಕೀರವ್ವನ ಎದುರೇ ಕಡೇ ಅಸ್ತ್ರಬಿಟ್ಟ. ’ನೀನ್ ಇಟ್ಕೊಂಡ್ರೇನ್ ಅವನು ಇಟ್ಕೊಂಡ್ರೇನ್ ಎಲ್ಡು ಹೊತ್ತು ಕೂಳು ಬಿದ್ರಾತು ನನ್ಗೆ ಅಷ್ಟೆಯಾ’ ಎಂದು ಬಿಟ್ಟ ಸೀನ್ಯ. ಪಕೀರವ್ವನ ಜೊತೆ ಇನ್ನೂ ಹಲವರು ಶರಣಪ್ಪನಿಗೆ ಗುಡ್ ಬೈ ಹೇಳಬೇಕೆ!

ಹಿಂಗಾಗಿ ನಾಟ್ಯರಾಣಿ ಪದ್ಮಿನಿ ಡ್ರಾಮಾ ಕಂಪನಿ ಉದಯವಾಯಿತು. ಆದಾಯದಲ್ಲಿ ಇಬ್ಬರದು ಸಮಪಾಲೆಂದು ವಾಸುದೇವಾಚಾರಿ ಮೊದಲೇ ಮಾತಾಡಿದ್ದ. ಈಗೀಗ ಸೀನ್ಯ ಪಾರ್ಟು ಮಾಡುವುದಕ್ಕಿಂತ ಕುಡಿದು ಗಲಾಟೆ ಮಾಡುವುದೇ ಹೆಚ್ಚಾಯಿತು. ಅವನನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ದುತ್ತರಗಿ, ಮಾಂಡ್ರೆ ಯೋಗಣ್ಣನಂತಹ ಕವಿಗಳಿಂದ ಹೊಸ ಹೊಸ ನಾಟಕಗಳನ್ನು ಪಕೀರವ್ವ ಬರೆಸಿದಳು. ದುಡಿದ ಹಣ ವಾಸುದೇವಾಚಾರಿ ತನ್ನ ಕುಟುಂಬಕ್ಕೆ ರವಾನಿಸಿದರೆ ದುಡಿದದ್ದನ್ನೆಲ್ಲಾ ನಾಟಕದ ಸೀನರಿ, ಡ್ರೆಸ್ಸು ಲೈಟಿಂಗ್ಸ್ ಗ್ರೀನ್ ರೂಮು ಅಲಂಕಾರ, ಸೆಟ್ ಪ್ರಾಪರ್ಟಿ ಗಳೆಂದು ಖರ್ಚು ಮಾಡಿದಳು. ಪಾತ್ರಕ್ಕೆ ತಕ್ಕಂತೆ ಆಭರಣಗಳಾನ್ನು ಖರೀದಿಸಿ ಐತಿಹಾಸಿಕ ಪೌರಾಣಿಕ ನಾಟಕಕ್ಕೆ ಕಳೆದು ಹೋದ ಮೆರಗು ಮತ್ತೆ ತಂದುಕೊಟ್ಟಳು. ರಂಗದ ಮೇಲೆ ಆನೆ ಕುದುರೆಗಳೂ ಓಡಾಡಿದವು. ನಾಟಕದ ಕಂಪನಿಯನ್ನೇ ಕುಟುಂಬವೆಂದುಕೊಂಡಳು ಪಕೀರವ್ವ. ನಟರ ಸಂಬಳ ಸಾರಿಗೆ ನಿಲ್ಲಲಿಲ್ಲ. ಕಷ್ಟದಲ್ಲಿದ್ದವರಿಗೆ ಅವರಿವರ ಮದುವೆ ಮುಂಜಿಗೆ ಬೆನಿಫಿಟ್ ನಾಟಕಗಳನ್ನು ಆಡಿಸಿ ಸಹಾಯಕ್ಕೆ ನಿಂತಳು. ವರ್ಷಗಳು ಉರುಳಿದವು – ಬರುವ ಆದಾಯದಲ್ಲಿ ಊರಿಗೆ ಸಾಗಿಸುವ ವಾಸುದೇವಾಚಾರಿ ಬಗ್ಗೆ ನೀಲವ್ವ ಆಗಾಗ ಹೇಳಿ ಪಕೀರವ್ವನನ್ನು ಎಚ್ಚರಿಸಿದಳು. ಆದರೆ ಹೆಣ್ಣಹೆಂಗಸು ಅವಳು ತಾನೆ ಏನು ಮಾಡ್ಯಾಳು? ಉಸ್ತುವಾರಿ ನೋಡಿಕೊಳ್ಳಬೇಕಾದ ಗಂಡನೇ ಮೂರು ಹೊತ್ತೂ ಕುಡಿದು ಚಿತ್ತಾಗಿರುತ್ತಿದ್ದ. ಪಕೀರವ್ವ ಅವನಿಗೆ ದುಡ್ಡುಕಾಸಿಗೆಂದೂ  ಕಡಿಮೆ ಮಾಡಲಿಲ್ಲವಾದರೂ ಹತ್ತಿರ ಸೇರಿಸುತ್ತಿರಲಿಲ್ಲ. ಇಂತಹ ದಿನಗಳಲ್ಲೇ ಪಕೀರವ್ವ ಗರ್ಭಿಣಿಯೂ ಆದಳು. ನಲವತ್ತಾದ ಮೇಲೆ ಹೆರಿಗೆ ಕಷ್ಟ ಹುಷಾರಾಗಿರಿ. …ಹೆಚ್ಚು ಶ್ರಮ ಮಾಡ್ಕೋಬೇಡಿ ಅಂತ ವೈದ್ಯರು ತೆಳಿಹೇಳಿದರೂ ಅರವತ್ತು ಜನರ ಹೊಟ್ಟೆ ಪಾಡು ನಡೆಯಬೇಕಲ್ಲ. ಹೊಟ್ಟೆಗೆ ಬಟ್ಟೆ ಬಿಗಿದು ಹೆರಿಗೆ ದಿನದವರೆಗೂ ಪಾರ್ಟು ಮಾಡಿದಳು. ಸಿಜೇರಿಯನ ಹೆರಿಗೆ ಯಾಗಿ ಬದುಕುಳಿದ ಪಕೀರವ್ವ ಚೆಂದವಾದ ಹೆಣ್ಣು ಮಗುವಿನ ತಾಯಿಯೂ ಆದಳು. ಮೂರು ತಿಂಗಳು ಕಳೆದುದೇ ದುಸ್ತರವಾಯಿತು. ನಾಟಕದ ಕಂಪನಿ ಅವಳಿಲ್ಲದೆ ಅವಳ ನಾಟ್ಯವಿಲ್ಲದೆ ಜನರನ್ನು ಸೆಳೆಯುವುದರಲ್ಲಿ ಬಸವಳಿದಿತ್ತು. ಮೂರು ತಿಂಗಳಿಗೆ ಬಾಣಂತನ ಮುಗಿಸಿ ರಂಗಕ್ಕೆ ಬಂದಳು ಪಕೀರವ್ವ. ಮಗು ನಿದ್ರೆಯಿಂದೆದ್ದು ಚೇರಿ-ಚೇರಿ ಅಳುತ್ತಿದ್ದರೂ ರಂಗ ಬಿಟ್ಟು ಈಚಿ ಬರುವಂತಿಲ್ಲ. ಕಂದನನ್ನು ಕಳೆದುಕೊಂಡ ದೇವಕಿಯಾಗಿ ಆಕೆ ಅಳುತ್ತಿದ್ದರೆ, ಜನ ಆಕೆಯ ಸಹಜಾಭಿನಯ ಕಂಡು ಅಳುತ್ತಿದ್ದರು. ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ನೀಲವ್ವನದಾಗಿತ್ತು ’ಅದು ತನಗೆ ಹುಟ್ಟಿದ್ದಲ್ಲ ಕಣ್ರಲೆ’ ಎಂದೆಲ್ಲಾ ಕೂಗಾಡುವ ಸೀನ್ಯಾ ಇತ್ತೀಚೆಗೆ ತಲೆ ನೋವಾಗಿಬಿಟ್ಟಿದ್ದ. ಅವನನ್ನು ಹೊಡೆದಟ್ಟೋಣ ಎಂದು ಅನೇಕರು ಮುನಿದರೂ, ಪಕೀರವ್ವ ಮುನಿಯಲಿಲ್ಲ. ’ಅವನು ಅನ್ನೋದಾಗ್ರೆ ತಪ್ಪೇನೈತ್ ಬಿಡ್ರಿ….ಅಂದ್ಕೊಳ್ಳಿ’ ಎಂದು ಕೇಳುಗರನ್ನು ತಲ್ಲಣಗೊಳಿಸಿದಳು. ಹೊಸ ಕಲಾವಿದರನ್ನು ಕರೆಸಿ ತನ್ನ ಪಾತ್ರಗಳ ತರಬೇತಿಯನ್ನು ಅವರಿಗೆ ಕೊಡಹತ್ತಿದ್ದಳು. ಅದೇ ಬದಲಾವಣೆ ಬಗ್ಗೆ ವಾಸುದೇವಾಚಾರಿ ಬಳಿ ಹೇಳಿದಾಗ, ತಾನು ಸಾಯೋವರ್ಗೂ ಹೀರೋನೇ ಎಂದು ಗುಡುಗಿದ್ದಷ್ಟೇ ಅಲ್ಲ ಅದೇ ನೆಪವಾಗಿ ಕಂಪನಿಯನ್ನು ಬಿಟ್ಟು ಹೋದ. ಆದರೂ ಗಂಡೆದೆಯ ಪಕೀರವ್ವ ಹೊಸಬರೊಂದಿಗೆ ಹೊಸ ನಾಟಕಗಳಿಗೆ ತಯಾರಿ ನಡೆಸಿದಳು. ತಾನು ದಪ್ಪಗಾಗಬಾರದೆಂದು ಊಟ ಬಿಟ್ಟರೂ ದೇಹ ತೆಳ್ಳಗಾಗಬಾರದೆಂದು ಹಠ ತೊಟ್ಟಂತೆ ತೋರ್ತಿತ್ತು. ದ್ರೌಪದಿಯಿಂದ ಕುಂತಿ ಪಾತ್ರಕ್ಕೆ ತಾನೇ ಸ್ಥಾನ ಪಲ್ಲಟವಾದಳು. ಏನಾದರೇನು ನಾಟಕಗಳಿಗೆ ಮೊದಲಿನ ಕದರ್ ಬರಲಿಲ್ಲ. ’ಬೇಕಾದೋಟು ರೊಕ್ಕ ಮಾಡಿಕೊಂಡು ಬೆಂಗಳೂರ್ನಾಗೆ ಎಲ್ಡೆಲ್ಡು ಬಂಗ್ಲೆ ಕಟ್ಟಿಸಿಕ್ಯಂಡು ಟಿ.ವಿ.ಸೀರಿಯಲ್ ನಾಗೂ ಮಾಡ್ತಾ ಮಜವಾಗವ್ನೆ ನಿನ್ನ ವಾಸುದೇವಾಚಾರಿ’ ನೀಲವ್ವ ಸುದ್ದಿ ಮುಟ್ಟಿಸಿದಾಗ, ಕನಿಷ್ಠ ನಿಟ್ಟುಸಿರನ್ನೂ ಬಿಟ್ಟವಳಲ್ಲ ಪಕೀರವ್ವ.

ಪಕೀರವ್ವ ನಷ್ಟೇ ಬದಲಾಗಲಿಲ್ಲ, ಕಾಲವೂ ಬದಲಾಗಿತ್ತು. ಟಿ.ವಿ. ಎಂಬ ಮೂರ್ಖರ ಪೆಟ್ಟಿಗೆ ಮನೆ ಮನೆಗೆ ಮನೋರಂಜನೆ ತಂದಿತ್ತು ಕಂಪನಿ ನಾಟಕಗಳಿಗೆ ಜನವೇ ಬರದಾದಾಗ ’ಕ್ಯಾಬರೆ ಮಾಡಿಸೋಣ, ದಾರಿ ದೃಶ್ಯದಾಗ ಒಂದೀಟು ಸೊಂಟದ ಕೆಳಗಿನ ಮಾತಾರ ಆಡಿಸಾನ ಬಾಯೇರ ಇಲ್ಲಂದ್ರೆ…..ಕಂಪನಿ ಬರ್ಬಾದಾಗಿ ಹೋಗ್ತದೆ. ಎಂದು ಪೆಟಗಿ ಮಾಸ್ತರ ಶೇಷಾಚಾರಿ ಇನ್ನಿಲ್ಲದಂತೆ ಹೇಳಿದಾಗಲೂ ಪಕೀರವ್ವ ಸಿಟ್ಟಿಗೆದ್ದಳು. ಒಂದೊಂದೇ ಕಂಪನಿಗಳು ಸರದಿ ಮೇಲೆ ದಿವಾಳಿ ಏಳುವುದನ್ನು ನೋಡುತ್ತಾ ನೆರೆತ ಕೂದಲಿಗೆ ಬಣ್ಣ ಹಚ್ಚುವುದನ್ನೇ ಮರೆತ ಪಕೀರವ್ವ ಮುಂದಿನ ದಿನಗಳ ಬಗ್ಗೆ ನೆನೆದು ಒಳಗೇ ನಡುಗಿದಳು. ಓಡಾಡಲು ತನಗೊಂದು ಕಾರು, ಕಂಪನಿಗೊಂದು ಕಾರು, ಪೆಟ್ಟಿಗೆ ತುಂಬಾ ಬಂಗಾರದ ಆಭರಣಗಳು, ಬಂಗಲೆ ತುಂಬಾ ಬೆಳ್ಳಿ ಸಾಮಾನುಗಳು, ಸಾವಿರಾರು ರೂಪಾಯಿ ಫರ್ನಿಚರ್ಸ್ ನಾಳೆ ತನ್ನ ಸ್ಥಾನ ತುಂಬುವಂತೆ ಬೆಳೆದು ನಿಂತಿದ್ದ ಸ್ಫುರದ್ರೂಪಿ ಮಗಳು ಯಾವುದೂ ಮುಂದೆ ತನ್ನದಗಿ ಉಳಿಯುವುದಿಲ್ಲವೆಂಬ ಭಯ ಅವಳ ಮೈ ಮನವನ್ನಾವರಿಸಿ ಬಿಟ್ಟಿತ್ತು. ಜನ ತಮ್ಮನ್ನು ನೋಡಲು ಬರುವುದನ್ನೇ ಬಿಡಹತ್ತಿದಾಗ ಟಿ.ವಿ. ಪೆಟ್ಟಿಗೆಯನ್ನು ನುಚ್ಚು ನೂರು ಮಾಡುವಷ್ಟು ರೋಷದಿಂದ ಪಕೀರವ್ವ ಕುದಿದಳು. ತನ್ನ ಬಳಗದವರ ಸಂಬಳ ಸಾರಿಗೆ ನಡೆಯಬೇಕು ಅನ್ನ ತಿಳಿಸಾರನ್ನಾದರೂ ಒದಗಿಸಬೇಕು. ಹೌಸ್ ಫುಲ್ ಕಾಣದೇ ವರ್ಷಗಳೇ ಸವೆದಿದ.

ಸರ್ಕಾರಕ್ಕೂ ನಾಟಕದ ಕಂಪನಿಗಳ ಬಗ್ಗೆ ಅಲಕ್ಷ್ಯ ವಶೀಲಿಬಾಜಿ ಮಾಡಿದವರಿಗೆ ಸಹಾಯಧನ, ಅಕಾಡೆಮಿ ಪ್ರಶಸ್ತಿ. ಪಕೀರವ್ವ ಪದ್ಮಿನಿಯಾದರೇನು ನಾಟಕದಲ್ಲಿ ನಟಿಸುವುದನ್ನು ಬಿಟ್ಟು ಹೊರಗೆ ನಟಿಸಿ ಗೊತ್ತಿಲ್ಲದಾಕೆ. “ಕಂಪನಿ ನಿಲ್ಲಿಸಿ ಬಿಡ್ಲೆ ರಂಡೆ. ಸಾಲಮಾಡಿ ಯಾಕೆ ಕಂಪನಿ ನಡೆಸ್ತಿ ಕತ್ತೆ ಸೂಳೆ” ಎಂದು ಥಿಯೇಟರಿನ ಮುಂದೆಯೇ ಕುಡಿದು ರಂಪ ಮಾಡುತ್ತಿದ್ದ ಸೀನ್ಯನೇ ಅವಳ ಪಾಲಿನ ದೊಡ್ಡ ಶತ್ರುವೀಗ. ಕೂತು ಉಂಡರ ಕುಡಿಕೆ ಹೊನ್ನು ಸಾಲದೆಂಬ ಮಾತನ್ನು ನಂಬಿದ್ದ ಪಕೀರವ್ವ ಸಾಲ-ಸೊಲಕ್ಕೆ ಅಂಜಲಿಲ್ಲ. ಕಂಪನಿಯನ್ನು ನಿಲ್ಲಿಸಲಿಲ್ಲ.

ಒಂದು ರಾತ್ರಿ ನಾಟಕ ಮುಗಿಸಿ ಬಂದು ಮಗಳ ತೆಕ್ಕೆಯಲ್ಲಿ ಮಲಗಿದ್ದ ಪಕೀರವ್ವ ಹೊರಗಿನ ಗದ್ದಲದಿಂದ ಬೆಚ್ಚು ಬಿದ್ದು ಎದ್ದು ಬಾಗಿಲು ತೆರೆದಳು. “ನಾಟಕದ ಥೇಟ್ರಿಗೆ ಬೆಂಕಿ ಬಿದ್ದೇತ್ರಿ ಬಾಯೇರಾ” ಬಾಯಿಬಡಿದುಕೊಂಡ ಪೆಟ್ಟಿಗೆ ಮಾಸ್ತರ. ಈಕೆಯ ಕಾರು ಥಿಯೇಟರ್ ಬಳಿ ಹೋಗಿ ನಿಂತಿತು. ಧಗಧಗನೆ ಉರಿದ ಥಿಯೇಟರ್ ಕರಗಿ ಕರಕಲಾಗುತ್ತಿರುವ ಲಕ್ಷಾಂತರ ರೂಪಾಯಿನ ನಾಟಕದ ಪರಿಕರಗಳು ಸೀನರಿಗಳು ಕಂಡವು. ಫೈರ್‍ ಎಂಜಿನ್ ಬರುವುದರೊಳಗೆ ಥಿಯೇಟರ್ ಪೂರಾ ಸುಟ್ಟು ಬೂದಿ ಉಳಿದಿತ್ತು. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂತ ಅವರವರೆ ಮಾತಾಡಿಕೊಂಡರು. ಬೆಂಕಿ ಗುರುತು ಸಿಗದಂತೆ ಸುಟ್ಟು ಉಂಡೆಗಟ್ಟಿದ ಶವವೊಂದು ಕಂಡಿತು. ನಿಧಾನವಾಗಿ ಅದನ್ನು ತನ್ನ ಗಂಡ ಸೀನ್ಯನದೇ ಎಂದು ಗುರುತಿಸಿದಾಗಲೂ ಅವಳಿಗೆ ಅಳಬೇಕೆನಿಸಲಿಲ್ಲ. ಸುಟ್ಟು ಭಸ್ಮವಾದ ಥಿಯೇಟರಿನ ಮುಂದೆ ಅನಾಥರಂತೆ ನಿಂತ ತನ್ನ ನಾಟಕ ಬಳಗದವರನ್ನು ನೋಡುತ್ತಲೇ ಬುಳು ಬುಳು ಅತ್ತಳು. ಥಿಯೇಟರಿನ ಮಾಲೀಕ ಬಂದ ಕುರ್ಚಿಯವರು ಲೈಟಿನವನು ಇನ್ನುಳಿದ ಸಾಲಗಾರರು ಬಂದರು. ತಮ್ಮ ತಮ್ಮ ಹಣಕ್ಕೆ  ಜಬರ್ದಸ್ತ್ ಮಾಡಿದರು. ಮನೆಯಲ್ಲಿರುವುದನ್ನೆಲ್ಲಾ ಮಾರಿ ಎಲ್ಲರ ಬಾಕಿ ಕೊಟ್ಟಳು. ಬಂಗಾರದ ಸಾಮಾನುಗಳಿಗೆಂದು ಪೆಟ್ಟಿಗೆ ತೆರೆದಾಗ ಅದರಲ್ಲಿರಿಸಿದ್ದ ಒಂದು ಪೆಟ್ಟಿಗೆಯೂ ಕಾಣಲಿಲ್ಲ. ಹೊಸ ಹೀರೋ ಅಭಿಷೇಕನೂ ಪತ್ತೆಯಿಲ್ಲ. ಮಗಳೂ ಪತ್ತೆಯಿಲ್ಲ. ಹೆಂಗೋ ಸಾಲ ತೀರಿಸಿ ಅದೇ ಊರಲ್ಲಿ ಕೊಂಡಿದ್ದ ಸೈಟು ಮಾರಿ ಅದರಿಂದ ಬಂದ ಹಣವನ್ನು ತನ್ನನೇ ನಂಬಿದ್ದ ಕಲಾವಿದರಿಗೆಲ್ಲಾ ಹಂಚಿ ಕೈ ಮುಗಿದ ನಾಟ್ಯ ರಾಣಿ ಪದ್ಮಿನಿ ಈಗ ಋಣಮುಕ್ತೆ.

ಆತ್ಮಹತ್ಯೆ ಮಾಡಿಕೊಳ್ಳಲೇ  ಎಂದು ಯೋಚಿಸಿದ್ದುಂಟು. ಇರೋ ಒಬ್ಬಳು ಹೆಂಗೋ ನಡೆದೀತೆಂದು ಪುಟ್ಟ ಮನೆ ಹಿಡಿದಳು. ಸರ್ಕಾರಕ್ಕೆ ಅರ್ಜಿ ಬರೆಸಿದಳು. ತಾನೆ ಕುಂತು ಬರೆದಳು. ಕೈ ನಡುಗುವಂತಾಗಿ ಕಣ್ಣು ಮಂಜಾದ ಮೇಲೆ ಸರ್ಕಾರ ಒಂದಿದ ಎಂಬುದನ್ನೇ ಮರೆತಳು. ಇರೋ ಪುಡಿಗಾಸು ಮುಗಿದ ಮೇಲೆ ವಿಭೂತಿ ಧರಿಸಿ ಬಿಳಿಸೀರೆ ಉಟ್ಟು ಕಂತೆ ಭಿಕ್ಷೆ ಮಾಡಿ ಹೊಟ್ಟೆ ಹೊರೆಯುವ ದಾರಿ ಕಂಡುಕೊಂಡಳು. ಅದೂ ಕೂಡಾ ಒಂತರಾ ಪಾರ್ಟು ಅಂದುಕೊಂಡು ನಗು ನಗುತ್ತಲೇ ಕಂತೆ ಭಿಕ್ಷೆ ಮುದುಕಿಯ ಪಾತ್ರಕ್ಕೂ ಜೀವ ತುಂಬಿದಳು. ಹೊಟ್ಟೆಗೆ ಸರಿಯಾದ ಊಟವಿಲ್ಲ ಮೈಯಲ್ಲಿ ಬಲವಿಲ್ಲ ಮಂಡಿ ನೋವಿನ ಜೊತೆಗೆ ತಗುಲಿಕೊಂಡ ಸಕ್ಕರೆ ರೋಗ ಬೇರೆ ಅವಳನ್ನು ಚೂರು-ಚೂರಾಗಿ ತಿಂದು ಹಾಕುತ್ತಲಿತ್ತು. ಹೊಟ್ಟೆಗೆ ಊಟಬಿಟ್ಟರು ಮಾತ್ರೆಗಳಿಗೆ ದುಡ್ಡು ತೆರಬೇಕು…….. ಎಲ್ಲಿಂದ? ಕಡೆಗೊಂದು ದಿನ ಸರ್ಕಾರ ಐನೂರು ರೂಪಾಯಿ ಮಾಸಾಶನ ಕಳಿಸಿ ಸಕ್ಕರೆ ರೋಗಕ್ಕೆ ಸಹಾಯ ಮಾಡಿತು.

*     *        *
ಇವತ್ತಿನ ಪತ್ರಿಕೆಯಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿಬಿಟ್ಟಿದೆ. ನಾಟ್ಯರಾಣಿ ಪದ್ಮಿನಿ ಅನ್ನೋ ಫೋಟೋದ ಕೆಳಗೆ ವಿವರವೂ ಬಂದಿದೆ. ಊರಿನ ಹಳೆಯ ಮಂದಿ ಹುಡುಕಿ ಬಂದರು. ಮಾಲೆ ಹಾಕಿ ಅಭಿನಂದಿಸಿದರು. ಆಕೆ ಅವರಿಗೂ ಕೂರಲೂ ಹೇಳಲಿಲ್ಲ. ಅವರೂ ಅದಕ್ಕಾಗಿ ಬಂದವರಲ್ಲ ನಿಂತೇ ಫೋಟೋ ಹಿಡಿಸಿಕೊಂಡರು. “ಮುಂದಿನ ವಾರ ನಿಮಗೆ ಮತ್ತು ಸಿನಿಮಾ ನಟರಿಗೆ ಭಾರಿ ಸನ್ಮಾನ ಇಟ್ಕೊಂಡೀವ್ರಿ ಪದ್ಮಿನಿಯೋರೆ. ಮಂತ್ರಿಗಳೂ ಬತ್ತಾರೆ. ನಮ್ಮ ಸಂಘದ ರಜತ ಮಹೋತ್ಸವ ಬ್ಯಾರೆ ಐತ್ರಿ” ಎಂದೊಬ್ಬ ಕೊಚ್ಚಿಕೊಂಡ. ಒಂದು ಬೆಳಿಗ್ಗೆ ಪಕೀರವ್ವನ ಮನೆಗೆ ಆಹ್ವಾನ ಪತ್ರಿಕೆಯು ಬಂದು ಬಿತ್ತು. ಪೇಪರ್ ನಾಗು ಸುದ್ದಿ ಆತು. ಮಂತ್ರಿಗಳೂ ಸಿನಿಮಾ ನಟರ ಚಿತ್ರಗಳೂ ಕಂಡವು. ತನ್ನ ಚಿತ್ರವೇ ಇಲ್ಲ. ಸಿನಿಮಾದವರ ಜೊತೆಗೆ ಸನ್ಮಾನ ಅಷ್ಟಕ್ಕೇ ನಿಡುಸುಯ್ದಿತು ಮುದುಕಿ. ಕಂತೆ ಭಿಕ್ಷೆ ತರಲೂ ನಡೆದು ಹೋಗದೆ ಬಿದ್ದುಕೊಂಡಿದ್ದ ಆಕಿಯನ್ನು ಹಸಿವು ಕಾಡಹತ್ತಿತು. ತಲೆ ಸುತ್ತು ವಾಂತಿ ಬೇರೆ. ಶುಗರ್ ಜಾಸ್ತಿಯಾಗೈತೆ ಅಂದಿದ್ದ ಹೋದ ವಾರ ನೋಡಿದ ಆಸ್ಪತ್ರೆ ವೈದ್ಯ. “ಅನ್ನ ಜಾಸ್ತಿ ತಿನ್ ಬ್ಯಾಡ್ರಿ.” ಅಂದಾಗ ಮಾತ್ರ ಪಕೀರವ್ವ ಆ ಸಂಕಟದಲ್ಲೂ ನಕ್ಕಿದಳು. ಆಕಿ ಹೊಟ್ಟೆ ಮುದ್ದೆ ಕಾಣದೆಯೇ ಮೂರು ದಿನವಾಗಿತ್ತು. ಆಸ್ಪತ್ರೆಯಿಂದ ಬಂದೋಳು ಮೇಲೆದ್ದಿರಲಿಲ್ಲ.

ಸಮಾರಂಭದ ಕಾರ್ಯಕರ್ತರು ಬಂದರು. ಆಕೆ ತನ್ನಿಂದ ಬರಲಾಗದೆಂದು ಗೋಗರೆದರೂ ಬಿಡಲಿಲ್ಲ. “ಕಾರು ತಂದೀವಿ, ಬರ್ರಲಾ” ಎಂದು ಮಾತನಾಡಲು ಬಿಡದೆ ಹೋತ್ತೊಯ್ದು ಕಾರಿನಲ್ಲಿ ಕೂರಿಸಿದರು. ಅಂತಹ ಸ್ಥಿತಿಯಲ್ಲೂ ಆಕಿ ಅವರು ಕೊಟ್ಟ ಬಿಸಿಲೇರಿ ನೀರು ಹೀರಿ ಆದರಲ್ಲೇ ಮುಖ ತೊಳೆದು ಸರಗಿನಿಂದ ಒರೆಸಿಕೊಂಡು ಇದ್ದುದರಲ್ಲೇ ತಲೆ ನೇವರಿಸಿ ತರುಬು ಗಂಟು ಹಾಕಿಕೊಂಡಳು.

ಜಗಮಗಿಸುವ ವೇದಿಕೆ. ಬಣ್ಣ ಬಣ್ಣದ ಲೈಟುಗಳಿಗೆ ಸರಿಯಾಗಿ ಕಣ್ಣುಬಿಡಲೂ ತ್ರಾಣವಿಲ್ಲ.ಸಾಮಾರಂಭದಲ್ಲಿ ಹಾಡು ಹಸೆ ಕುಣಿತ ಡಿಸ್ಕೋ ಬ್ರೇಕು ಏನೇನೋ ಗದ್ದಲ. ಸಾವಿರಾರು ಜನರನ್ನು ಒಟ್ಟಿಗೆ ನೋಡಿ ಅದೆಷ್ಟೋ ವರ್ಷಗಳಾಗಿದ್ದವು. ದೇಹದಲ್ಲೀಗ ಮತ್ತೆ ಲವಲವಿಕೆ. ಬದುಕುವ ಆಸೆ ಇಣುಕಿತು. ಮೊದಲು ಸಿನಿಮಾನಟರಿಗೆ ಮಾನ-ಸನ್ಮಾನ, ಆಮೇಲೆ ಈಕೆಗೂ ಹೊರಲಾರದ ಗುಲಾಬಿ ಹಾರ ಹಾಕಿ ರೇಷ್ಮೆ ಶಾಲು ಹೊದಿಸಿದರು. ವಿವಿಧ ಹಣ್ಣುಗಳ ಬುಟ್ಟಿಯನ್ನು ಕೈಗಿಟ್ಟರು. “ಈಗ ಪದ್ಮಿನಿಯೋರಿಂದ ರಂಗಗೀತೆ” ಎಂದೊಬ್ಬ ಒದರಿದ. ಯಾರೋ ಹಿಡಿದು ತಂದು ಮೈಕ್ ಮುಂದೆ ನಿಲ್ಲಿಸಿದರು. ಅದೆಲ್ಲಿ ಹುದುಗಿತ್ತೋ ಶಕ್ತಿ ಸಾವಿರಾರು ಮಂದಿ ಚಪ್ಪಾಳೆ ಬಿದ್ದೊಡನೆ ಕಂಠ ಸರಿಪಡಿಸಿಕೊಂಡಳು ಪಕೀರವ್ವ.

ಎಲ್ಲಿಂದ ನೀ ಬಂದೆ ಅಲ್ಲಿಂದ ಏನ್ ತಂದೆ
ಇಲ್ಲಿಂದ ಏನ್ ಹೊಯ್ವ ಮುಂದೆ/
ನೀನಾರೋ ಅವನಾರೋ ಬಲ್ಲೋರು ಇಲ್ಲಾರೋ /
’ಇದ ತಿಳಿಯದೇ ಮನುಜ  ನೊಂದೆ // ಎಲ್ಲಿಂದ//

ಮತ್ತೆ ಚಪ್ಪಾಳೆ. ಸಾವರಿಸಿಕೊಂಡು ಬಂದು ಕುಂತಳು. ಸಮಾರಂಭದಲ್ಲಿ ರಾಜಕಾರಣಿಗಳ ಭಾಷಣಗಳ ಸುರಿಮಳೆಯಿಂದಾಗಿ ಆಕಿ ಅರೆ ಜೀವವಾದಳು. ರಂಗಕಲೆ ಬೆಳಗಬೇಕೆಂದರು. ರಂಗಕಲಾವಿದರಿಗೆ ಉಚಿತ ನಿವೇಶನ ಕೊಡುತ್ತೇವೆ. ಮಾಸಾಶನವನ್ನು ದುಪ್ಪಟ್ಟು ಮಾಡುತ್ತೇವೆ ಅಂದು ಚಪ್ಪಾಳೆ ಗಿಟ್ಟಿಸಿದರು. ಈಕೆಯನ್ನು ಮಾತ್ರ ಯಾರೂ ಮಾತಾಡಿಸಲೇ ಇಲ್ಲ! ಒಬ್ಬ ಮಾತ್ರ ಬಂದು ಕಿವಿ ಯಲ್ಲಿ ಪಿಸುಗಿದ. ‘ಚೇತನ್ ಹೋಟೆಲ್ದಾಗ ಭರ್ಜರಿ ಊಟ ಐತೆ  ಪಾರ್ಟಿ ಅನ್ಯಳಿ. ನಾನ್ ವೆಜ್ಜು ಐತ್ರಿ ಬರ್ದೆ ಹೋಗಿರ ಮತ್ತೆ’ ಆಕೆಗೆ ಮತ್ತೆ ಬದುಕುವ ಆಸೆ ಟಿಸಿಲೊಡೆಯಿತು. ಸಮಾರಂಭ ಮುಗಿದಾಗ ಮಧ್ಯರಾತ್ರಿ. ಮುದುಕಿ ನಿರಾಳವಾಗಿ ಉಸಿರು ಬಿಟ್ಟಿತು. ಆದರೇನು ಕ್ಷಣದಲ್ಲೇ ಜನರ ನೂಕು ನುಗ್ಗಲು. ಸಿನಿಮಾ ಮಂದಿಗಾಗಿ ಮುಗಿಬಿದ್ದರು. ಪೋಲಿಸರಿಂದ ಲಾಠಿಚಾರ್ಜ್, ಗಲಬೆ ಗದ್ದಲ ಪೋಲಿಸ್ ವ್ಯಾನ್ ಗಳು, ಎಲ್ಲಿ ನೋಡಿದರೂ ದಿಕ್ಕಟ್ಟು ಓಡುವವರೇ! ಪಕೀರವ್ವನನ್ನಾದರೂ ಕೇಳೋರು ಯಾರು? ಹಣ್ಣಿನ ಬುಟ್ಟಿ ಹಿಡಿದು ತೊರಾಡುತ್ತಾ ಬೀದಿಗೆ ಬಂದು ನಿಂತಳು. ತನ್ನ ಮನೆ ಇರುವ ದೂರವನ್ನು ನೆನೆದೇ ಸಿಡಿಲು ಬಡಿದ ಹಕ್ಕಿಯಂತಾದಳು. ತನಗೆ ಈವತ್ತು ಫುಟ್ ಪಾತೇ ಗತಿ ಅಂದುಕೊಂಡಳು. ತನ್ನ ಮನೆಗಿಂತ ಫುಟ್ ಪಾತೇ ಕ್ಲೀನಾಗಿದೆ ಅನಿಸಿತು. ಅಟೋದವ ಆಟೋ ನಿಲ್ಲಿಸಿದ. ’ಎಲ್ಲಿಗ್ರಿ ಅಜ್ಜಿ….ಬರ್ರಲಾ? ಅಂದ. ’ನಂತಾವ ದುಡ್ಡಿಲ್ಲಪ್ಪ’ ಎಷ್ಠು ತಡೆದರೂ ಬಿಕ್ಕುಗಳು ಬಂದೇಬಿಟ್ಟವು. ’ನೀವು ಪದ್ಮಿನಿಯೋರಲ್ಲೇನ್ರಿ! ನಾಟಕಾದಾಗ ಎಷ್ಟು ಚೆಂದ ಮಾಡ್ತಿದ್ರಿ ನೀವು. ಸರೋಜಾದೇವಿನಾ ನಿಮ್ಮ ಮುಂದೆ ನಿವಾಳಿಸಿ ಹೋಗಿಯಂಗಿದ್ದರಲ್ರಿ….. ನಿಮ್ಮ ನಾಟ್ಯ ಭಾಳ ನೋಡಿನ್ರಿ ನಾ…. ಹತ್ಕೋರಿ ಪರ್ವಾಗಿಲ್ಲ ನಿಮ್ಮ ಸೇವೆ ಮಾಡ್ದಂಗಾತು.’ ತನ್ನ ಬಿಳಿಗಡ್ಡ ಕೆರೆದುಕೊಂಡ. ಮುದುಕಿ ಉಬ್ಬಿ ಹೋತು. ಈ ಕಾಲದಾಗೂ ನಾಟಕದವರಿಗೆ ಗೌರವ ಕೊಡೋ ಪುಣ್ಯಾತ್ಮರು ಇದಾರಲ್ಲ ಅಂತ ಒಂತರಾ ಮೈ ಪುಳಕ. ಪುಟ್ಟ ಮನೆ ಮುಂದೆ ಆಟೋ ನಿಂತಿತು. ಮನೆಗೆ ಬೀಗವೇ ಹಾಕಿಲ್ಲ ನಾಯಿಯೊಂದು ಒಳಗೆ ಬೆಚ್ಚಗೆ ಮಲಗೈತೆ. ಆಟೋದವನೇ ಓಡಿಸಿದ. ಮೆಟ್ಟಿಲು ಹತ್ತಿಸಿ ಒಳಗೆ ಬಿಟ್ಟ ’ದೇವರು ನಿನ್ನ ಚೆಂದಾಗಿಟ್ಟಿರ್ಲಿ ನನ್ನಪ್ಪಾ. ನಿನ್ನ ಹಡೆದವ್ವನ ಹೊಟ್ಟೆ ತಣ್ಣಗಿರ್ಲಿ.’ ಅಂದ ಪಕೀರವ್ವ ಹಣ್ಣಿನ ಬುಟ್ಟಿ ಅವನ ಕೈಗಿಟ್ಟಳು. ’ಅಯ್ ಬ್ಯಾಡ್ರಿ’ ಎಂದವ ಹಿಡಿಯಷ್ಟಾದ. ’ತಮ್ಮಾ ನನಗೆ ಶುಗರ್ ಐತಪ್ಪಾ ನಾನ್ ತಿನ್ನಂಗಿಲ್ಲ……ತಗೋ ತಂದೆ’ ಎಂದಾಕೆ ಅವನ ಕೈಗೆ ಬುಟ್ಟಿ ಇಟ್ಟಳು. ಅವನತ್ತ ಹೋದೊಡನೆ ಚಾಪೆ ಮೇಲೆ ಕುಸಿದಳು. ಲಾಟೀನನ್ನು ಹಚ್ಚಬೇಕನಿಸಲಿಲ್ಲ. ಒಂದೇ ಒಂದು ತುತ್ತು ಅನ್ನ ಸಿಕ್ಕಿದರೆ ಇನ್ನಷ್ಟು ದಿನ ಬದುಕುತ್ತಿದ್ದೆನೇನೋ ಅಂದಿತು ಜೀವ. ಹೊಟ್ಟೆಯಲ್ಲೆಲ್ಲಾ ವಿಚಿತ್ರ ತಳಮಳ. ಹೊರಳಾಟ ನರಳಾಟ ಕೊನೆಗೆ ಹೊರಳಲೂ ನರಳಲೂ ಶಕ್ತಿ ಯಿಲ್ಲ. ನಾಲಿಗೆ ಒಣಗಿದ ಕೊರಡಿನಂತಾಗಿದೆ “ನೀರು….ನೀ….ರು” ಬಡಬಡಿಸಿದಳು. ಹೊರಗೂ ಒಳಗೂ ಕತ್ತಲು. ಮೇಲೆ ನೋಡಿದಳು. ಮಿನುಗುವ ನಕ್ಷತ್ರ ಲೋಕವೇ ಕಂಡಿತು. ಒಂದೊಂದೇ ನಕ್ಷತ್ರಗಳು ಬೆಂಕಿಯುಂಡೆಗಳಾಗಿ ಕಳಚಿಕೊಂಡು ನೆಲಕ್ಕೆ ಬೀಳುತ್ತಿವೆ. ಭಯಗ್ರಸ್ತ ಮುದುಕಿ ಗಪ್ಪನೆ ಕಣ್ಣು ಮುಚ್ಚಿತು.

ಈಗ ನಕ್ಷತ್ರಗಳೇ ಇಲ್ಲ. ಕತ್ತಲೆ ಕಳೆದು ಬೆಳಕು ಮೂಡಿದೆ. ಸೂರ್ಯನ ಕಿರಣಗಳು ಹೆಂಚುಗಳ ಮೂಲಕ ಹಾದು ಮನೆ ತುಂಬಾ ಕೋಲು ಕೋಲಾಗಿ ಬಿದ್ದು ಪಕೀರವ್ವನ ಸುತ್ತ ಚಿತ್ರ ಬಿಡಿಸಹತ್ತಿವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಬಕರ್ಣರು
Next post ಮಿಂಚುಳ್ಳಿ ಬೆಳಕಿಂಡಿ – ೭

ಸಣ್ಣ ಕತೆ

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…