ಬಲ್ಲಾಳರ ಭಾವಲೋಕ

ಬಲ್ಲಾಳರ ಭಾವಲೋಕ

ಶ್ರೀ ವ್ಯಾಸರಾಯ ಬಲ್ಲಾಳರ ಕಾದಂಬರಿಗಳನ್ನು ಅನಕೃ ಸಂಪ್ರದಾಯಕ್ಕೆ ಸೇರಿಸುತ್ತಾರೆ. ಅನಕೃರ ಸಂಭಾಷಣೆಯ ಬೆಡಗು, ಸುಕುಮಾರತೆ, ರೋಚಕತೆಗಳ ಕೆಲವಂಶ ಬಲ್ಲಾಳರ ಕಾದಂಬರಿಗಳಲ್ಲಿ ಕಾಣಿಸಿಕೊಳ್ಳುವ ಕಾರಣದಿಂದ ಈ ಅಭಿಪ್ರಾಯ ಅವರದಾದರೆ ಅದನ್ನು ಪೂರ್ತಿ ಒಪ್ಪಲಾಗುವುದಿಲ್ಲ. ಬಲ್ಲಾಳರ ಭಾವಲೋಕ ಮುಖ್ಯವಾಗಿ ಮುಂಬಯಿ ನಗರ. ಅವರು ಪ್ರಗತಿಶೀಲರು, ಲೋಹಿಯಾವಾದಿ, ಆದರ್ಶವಾದಿಗಳು. ಅನಕೃ ಜೀವನದ ಸಮಗ್ರ ಸಮಸ್ಯೆಗಳನ್ನು ಅವುಗಳ ಆಳಕ್ಕೆ ಹೋಗದೆ ತನ್ನ ಶೃಂಗಾರಪೂರ್ಣ ಶೈಲಿಯ ಮಾಧ್ಯಮದಿಂದ ಸರಳವಾಗಿ ಚಿತ್ರಿಸಿದರು. ಬಲ್ಲಾಳರು ತನ್ನ ಸಮಾಜದ ಪಾತ್ರಗಳ ಸೈಕನ್ನು ಕೆದಕಿ ನೋಡಿ ಭಾವಲೋಕವನ್ನು ತೆರೆಯುತ್ತ ಹೆಚ್ಚು ಗಾಢವಾಗಿ ನೋಡಿದರು. ಅವರಿಗೆ ಅಸಹ್ಯ ಸಿಟ್ಟು ಬರುತಿತ್ತು. ಮನಸ್ಸಿಗೆ ತೀವ್ರ ನೋವಾಗುತಿತ್ತು. ಆಗ ಅವರ ಗಲ್ಲ ಕೆಂಪಾಗುತಿತ್ತು. ಕಣ್ಣು ಮಂಜಾಗುತ್ತಿತ್ತು. ಮಾತಾಡುವ ತುಟಿ ಕಂಪಿಸುತ್ತಿತ್ತು. ಅವರ ಆದರ್ಶಕ್ಕೆ ವಿರುದ್ಧವಾದುದರ ಕುರಿತ ಕಳಕಳಿ ಅತ್ಯಂತ ವೈಯಕ್ತಿಕವಾದುದಾಗಿತ್ತು. ಅವೆಲ್ಲ ಅವರ ಭಾವಲೋಕದಲ್ಲಿ ಮಂಥನಗೊಂಡು ಕತೆ-ಕಾದಂಬರಿಗಳ ರೂಪದಲ್ಲಿ ಹೊರಗೆ ಬರುತ್ತಿತ್ತು. ಕಾರಣ ಸಾಹಿತಿಗೆ ತನ್ನ ಮಿತಿಯ ಅರಿವಿರುತ್ತದೆ. ಅವನ ರೋಷದಿಂದ, ಚಿಂತನೆಯಿಂದ ಯಾವುದೇ ಮನುಪ್ಯನ ಪ್ರವೃತ್ತಿಯನ್ನಾಗಲೀ, ಸಮಾಜದ ದೋಷಗಳನ್ನಾಗಲೀ ತಡೆಗಟ್ಟಲು ಸಾಧ್ಯವಿಲ್ಲ. ತನ್ನ ದಿವ್ಯ ಚಿಂತನೆಯ, ಕಲ್ಪನೆಯ ಸಮಾಜವನ್ನು ಸಾಮ್ರಾಜ್ಯವನ್ನು ಯಾವ ಲೇಖಕನಿಗೆ ಕಟ್ಟಲು ಸಾಧ್ಯ? ಬಲ್ಲಾಳರದು ಕೋಮಲ ಮನಸ್ಸು, ಶಾಂತಚಿತ್ತ. ಅವರ ಶಬ್ಧಗಳಲ್ಲಿ ಘೂತಕ ಶಕ್ತಿ ಇಲ್ಲ. ಅಂತಃಕರಣವನ್ನು ಕಲಕುವ ಪ್ರಭುತ್ವ ಮಾತ್ರ ಇದೆ.

ನಗರದ ಶಬ್ಬ ಚಿತ್ರ

‘ಉತ್ತರಾಯಣ’ದಲ್ಲಿ ನಗರದ ಯಾಂತ್ರಿಕತೆಯ ಶಬ್ದ ಚಿತ್ರ ನೋಡಿ-ಮೊದಲಿನ ಕೆಲವು ಪುಟಗಳಲ್ಲಿ ಬಲ್ಲಾಳರು ಮುಂಬಯಿಯ ಯಂತ್ರ ಸಮಾನ ಜೀವನದ ವಾಸ್ತವ ಚಿತ್ರವನ್ನು ಅರ್ಥಪೂರ್ಣವಾಗಿ ಕೊಡುತ್ತಾರೆ. ನಮ್ಮ ದಿನಚರ್ಯೆಗಳು ಎಷ್ಟು ನಿಷ್ಟುರವಾಗಿ ನಿರ್ದಯವಾಗಿ ಅದೇ ಅದೇ ಆಗಿವೆ. ಯಂತ್ರಗಳನ್ನು ಹೊಂದಿಕೊಂಡಿವೆ. ಗಾಡಿ ಹಿಡಿಯಲು, ಬಸ್ ಹಿಡಿಯಲು, ಟ್ಯಾಕ್ಸಿ ಇಲ್ಲವೆ ರಿಕ್ಷಾ ಹಿಡಿಯಲು ಅವಸರ, ಧಾವಂತ. ಅದೇ ಗಾಡಿ, ಅದೇ ಬಸ್ ಅದೇ ಆಫೀಸು ಅದೇ ಕೆಲಸ. ಎದುರಿಗೆ ಟೈಪ್‌ರೈಟರ್, ಫೈಲುಗಳು. ಉತ್ತಲೇಖನದ ಪುಸ್ತಕ, ಪೆಂಸಿಲು, ಸುತ್ತಮುತ್ತ ಅವೇ ಮುಖಗಳು. ವ್ಯಕ್ತಿಗಳು, ನಿನ್ನೆಯದೇ ನೀರಸ ನಗೆ. ಸಂಜೆ ನಾಲ್ಕು ಅಯ್ದರ ಹೊತ್ತಿಗೆ ಎಲ್ಲರ ಮುಖದಲ್ಲಿಯೂ ಪುನಃ ಆತಂಕ ಮನೆಗೆ ಹೊರಡುವ ತಹತಹ, ಕದ್ದು ಪಡೆದ ಇನಿಯಳ ಸಾಮೀಪ್ಯದಂತೆ. ಅದೇ ರಸ್ತೆ ಅದೇ ದೀಪ, ಅದೇ ಗಾಡಿಯ ದಕ್ಕಾಮುಕ್ಕಿ, ಜನಜಂಗುಳಿಯ ಸಾಧ್ಯವಾದಷ್ಟು ಬೇಗ ಮನೆ ಸೇರುವ ತವಕ, ದಣಿವು, ಢಗೆ, ನಿರುತ್ಸಾಹ, ಮನೆಯಲ್ಲಿ ಮಡದಿಯ ಮ್ಲಾನ ಸ್ವಗತ ಮತ್ತೆ ಸಾಧ್ಯವಾದರೆ ಸುಖದ ಕೆಲವು ಕ್ಷಣಗಳು. ನಂತರ ತಕರಾರು, ವೈಮನಸ್ಸು ಸಾಸ್ ಬಹು ಧಾರಾವಾಹಿಗಳ ಕಾಟ… ಬಾಲ್ಕನಿಯ ಕತ್ತಲಲ್ಲಿ ಕುಳಿತು ಸ್ಥಿತಪ್ರಜ್ಞನಾಗುವ ಬಯಕೆ.

ಕಡಿಮೆ ಕಾದಂಬರಿಗಳಲ್ಲಿ ಈ ಪ್ರಕಾರದ ಬದುಕಿನ ನೈಜ ಚಿತ್ರಣದ ವರ್ಣನೆ ಬಂದಿದೆ. ಇಲಿಯಟ್ಟನ ‘ವೇಷ್ಟ್‌ಲ್ಯಾಂಡಿ’ನಲ್ಲಿ ಸಿಕ್ಕುತ್ತದೆ. ಈ ನಗರದಲ್ಲಿಯ ಸಣ್ಣ ದೊಡ್ಡ ಕಂಪೆನಿಗಳಲ್ಲಿ ಪೇದೆಗಳು, ಕಾರಕೂನರು, ಅಧಿಕಾರಿಗಳು ಕಛೇರಿಯ ಅವಧಿಯಲ್ಲಿ ಬದುಕಿಗಾಗಿ, ಸಂಸಾರದ ಹೊಣೆಯನ್ನು ಹೊತ್ತು ದುಡಿಯುವ ಚಿತ್ರಣ, ಓದುಗನನ್ನು ಆ ಚಿತ್ರಣದೊಂದಿಗೆ ಸೇರಿಸಿಕೊಂಡು ಜೊತೆಗೊಯ್ಯುವ ಶೈಲಿ…. ಗಾಜಿನ ಬಾಗಿಲು ತೆರೆಯುತ್ತದೆ. ತನ್ನಷ್ಟಕ್ಕೆ ತಾನೇ ಮುಚ್ಚಿಕೊಳ್ಳುತ್ತದೆ. ಟೆಲಿಫೋನ್, ಟ್ರೀಂ, ಟ್ರೀಂ, ರಿಸೀವರ್ ಕೈ ಎತ್ತಿಕೊಳ್ಳುವಾಗ ಕೃತ್ರಿಮ ವಿನಯ ಸೋಗಿನ ಧ್ವನಿ… ದುಡಿಮೆಯ ವ್ಯವಹಾರಕ್ಕೆ ಶ್ರುತಿಯಾಗಿ ಟೈಪ್‌ರೈಟರ್‌ಗಳ, ಲೆಕ್ಕದ ಯಂತ್ರಗಳ ಸದ್ದು.. ಟೈಪ್‌ರೈಟರಿನ ಮೇಲಿನ ಕೈಬೆರಳುಗಳು ನರ್ತಿಸಲಾರಂಭಿಸುತ್ತವೆ.

ಉತ್ಕಟ ಭಾವಸತ್ವದ ಸ್ತ್ರೀಯರು

ಬಲ್ಲಾಳರ ಸ್ತ್ರೀ ಪಾತ್ರಗಳು ಭಾರತೀಯ ಸಂಪ್ರದಾಯ ಪ್ರಿಯರು. ಸ್ತ್ರೀಯರಲ್ಲಿರುವ ಸಂಯಮ, ಚಿತ್ತಶುದ್ಧಿ, ವಾತ್ಸಲ್ಯದ ಕುರಿತು ಬಲ್ಲಾಳರಿಗೆ ಆದರ, ಗೌರವವಿದೆ. ಅವರ ಪಾರಂಪರಿಕ, ಧಾರ್ಮಿಕ ಮಿತಿ ಮತ್ತು ಬಂಧನಗಳ ಕುರಿತು ಅನುಕಂಪವಿದೆ. ‘ಅನುರಕ್ತೆ’ಯ ಸುಮಿತ್ರಾ. ‘ಸಂಪಿಗೆಯ ಹೂವಿ’ನ ಯಶೋಧೆ, ‘ಉತ್ತರಾಯಣ’ದ ರುಕ್ಮಿಣಿ ಇವರೆಲ್ಲ ಈ ಮಾದರಿಯ ಸ್ತ್ರೀಯರು. ಉತ್ತಮ ಸಂಸ್ಕಾರ, ಪ್ರಬಲ ಅಂತಃಶಕ್ತಿಯಿಂದ ತಮ್ಮನ್ನು ಕರ್ತವ್ಯದ ಅಗ್ನಿ ಪರೀಕ್ಷೆಗಳಿಂದ ನೀಗಿಸಿಕೊಳ್ಳುವವರು. ಕಷ್ಟ, ನೋವು, ತ್ಯಾಗ, ಒತ್ತಾಯದ ಸಮಾಧಾನಗಳನ್ನು ಹೃದಯದಲ್ಲಿ ಅದುಮಿ ಮೌನವಾಗಿ ಜೀವನ ನಡೆಸುವ, ತಮ್ಮ ಅದೃಷ್ಟವನ್ನು ನಂಬಿ ಗೌರವಿಸುವ ಸ್ವಭಾವದವರು. ಒಂದೇ ಮಾತಿನಲ್ಲಿ ಹೇಳುವುದಾದರೆ ಅವರು ಅತಿ ಭಾವುಕರು. ಹೇಮಾ ಮಾತ್ರ ಈ ಭಾವಲೋಕವನ್ನು ಮೀರಿ, ತನ್ನದೇ ದಿಟ್ಟಭಾವಗಳ ಮೃಗಜಲದ ಹಿಂದೆ ಓಡಿದವಳು. ಹೇಮಾ ಬಲ್ಲಾಳರ ಮನಸ್ಸಿನಲ್ಲಿ ನಮ್ಮ ಸ್ತ್ರೀಯರ ಬಗ್ಗೆ ಇರುವ ಭಾವಸ್ಪಂದನದಿಂದ ಹೊರಬಂದ ಜೀವಂತ ಸೃಷ್ಟಿ. ಇಬ್ಸನಿನ ನೋರಾನ ಹಾಗೆ. ಪುಟ್ಟ ಸ್ವಾಮಯ್ಯರ ಅಭಿನೇತ್ರಿಯ ಹಾಗೆ. ಇನಾಂದಾರರ ಮೋಹಿನಿಯ ಹಾಗೆ, ಶರತ್ಚಂದ್ರರ ಕಿರಣ್ಮಯಿಯ ಹಾಗೆ. ಸ್ತ್ರೀ ಮತ್ತು ಭೂಮಿಯ ಸಹನೆಗೆ ಪಾರವಿಲ್ಲ. ಅನುರಕ್ತೆ ಮತ್ತು ಉತ್ತರಾಯಣದ ಕಥಾ ಬಿಂದು ಹೆಚ್ಚು- ಕಡಿಮೆ ಒಂದೆ. ಸಂಪಿಗೆಯ ಹೂವಿನದ್ದು ಹಾಗೆಯೆ. ಅನುರಕ್ತೆಯಲ್ಲಿ ಎರಡು ಮನೋಧರ್ಮದ ಅಕ್ಕ ತಂಗಿಯರು. ತಂಗಿ ಪದ್ಮಾ ಸುಮಾರಾಗಿ ಹೇಮಾಳ ಪಾಲಿಗೆ ಸೇರಿದವಳು. ಪದ್ಮಾಗೆ ಬೇಕಾದ ಗಂಡ ಸಿಕ್ಕಿದ. ಅವಳ ತನ್ನ ಗಂಡನ ಕಲ್ಪನೆ ಹೇಮಳಂತಲ್ಲ. ಆದ್ದರಿಂದ ಅವಳಿಗೆ ತೃಪ್ತಿ. ಹೇಮಾಳದು ಬೇರೆ ಬೇಡಿಕೆಗಳು. ಅವಳ ವ್ಯಕ್ತಿತ್ವಕ್ಕೆ ಸಮನಾದವ ಗಿರೀಶ ಅಲ್ಲ, ಮೋಹನ. ಆದರೆ ಮೋಹನ ದೂರದ ವಸ್ತು. ಹೇಮಾ ಮನೆಬಿಟ್ಟು ಹೋಗುವುದು ಪ್ರತಿಭಟನೆಯೆಂದು. ಮುಂದೆ ಯಾವುದೇ ಸ್ಪಷ್ಟ ಗುರಿಯಿಲ್ಲ. ಇನಾಂದಾರರ ಮೋಹಿನಿ ಗಂಡನ ಮನೆಯನ್ನು ಬಿಟ್ಟದ್ದೂ ಇದೇ ತರಹ. ಆದರೆ ಅವಳಿಗೆ ವಸಂತನ ಸಹಾನುಭೂತಿಪರ ಸ್ನೇಹವಿತ್ತು. ಹೇಮಾಗೆ ಅಂಥಾದ್ದೇನು ಇರಲಿಲ್ಲ. ಹೇಮಾಳ ಸ್ತ್ರೀತ್ವ ಅರಿಯಲಾಗದ ರಹಸ್ಯವಲ್ಲ. ಅವಳಿಗೆ ಬೇಕಾದುದು ತನ್ನ ವ್ಯಕ್ತಿ ಸ್ವಾತಂತ್ರ್ಯದ ಇಚ್ಛೆಗೆ ಎಡೆಕೊಡುವ ಪುರುಷನ ಸಂಪರ್ಕ, ಸಹಕಾರ. ಗಿರೀಶನಲ್ಲಿ ಅದಿಲ್ಲ. ಮೋಹನನಲ್ಲಿ ಅವಳ ಸೌಂದರ್ಯದ ಸ್ವಾಭಿಮಾನವನ್ನು ಮೀರಿಸುವ ವ್ಯಕ್ತಿತ್ವವಿದೆ. ಅದಕ್ಕವಳು ಆಕರ್ಷಿತಳಾಗಿ ಸೋಲುಂಡಳು. ಕಿರಣ್ಮಯಿ ಹಾಗಲ್ಲ. ಹೇಮಾಳಂತ ವ್ಯಕ್ತಿತ್ವ ಆದರೆ ಗಹನ ಜಟಿಲ. ಯಶೋಧೆ, ರುಕ್ಮಿಣಿ ಒಂದೇ ಸ್ವಭಾವಕ್ಕೆ ಸೇರಿದವರು. ಯಶೋದೆ ವಿಧವೆ, ರುಕ್ಮಿಣಿಯೂ ವಿಧವೆ, ಅವರಿಬ್ಬರ ಹೋರಾಟವೂ ತಮ್ಮ ಕುಟುಂಬದ ಒಳಿತಿಗಾಗಿ. ಜೊತೆಗೆ ಅದುಮಿಕೊಂಡ ಬಯಕೆ, ಪ್ರಭಾಕರ ಮತ್ತು ಮೋಹನನ ರೂಪದಲ್ಲಿ ಸುಮಿತ್ರೆಯ ಬದುಕು ಹಾಗಲ್ಲ. ಅವಳ ಆಶೆ ಗೋಪಿ, ತಂಗಿಯ ಗಂಡ, ತನಗಾಗಿ ಬಂದವ. ಆದರೆ ದೂರದ ಬೆಟ್ಟ, ಬಲ್ಲಾಳರ ಅತ್ಯಂತ ಪ್ರಿಯ ಪಾತ್ರಗಳು. ಅವರ ಪ್ರಕಾರ ಸ್ತ್ರೀಯರೆ ಭಾರತಿ, ಸಾವಿತ್ರಿ, ಹೇಮಾ, ಯಾಮಿನಿ, ಮಾಲತಿ.

ದುರಂತದ ಕಡೆಗಿನ ಒಲವು

ದುರಂತದ ಕಡೆಗೆ ಬಲ್ಲಾಳರ ಒಲವು ಹೆಚ್ಚೆಂದು ಕಾಣುತ್ತದೆ. ಜೀವನದ ನಿರಾಶೆಗಳಿಂದ ಬರುವ ಅಸಹ್ಯ ವಿರಕ್ತಿ ಅನಾಥ ಪ್ರಜ್ಞೆಯಲ್ಲಿ ಸಿಗುವ ಏಕಾಕಿತನ ದುರಂತದ ಅನಿಸಿಕೆಯ ಹೇತು. ಆದರೆ ಕಾದಂಬರಿಕಾರ ದುರಂತದ ಛಾಯೆಯಿಂದ ತನ್ನ ಪಾತ್ರಗಳನ್ನು ದೂರವಿಡುವುದು ಕೆಲವೊಮ್ಮೆ ಅಗತ್ಯವಾಗುತ್ತದೆ. ಲೇಖಕರು ದುರ್ಬಲ ಭಾವುಕತೆಗೆ ಒಳಗಾಗಿ ಪಾತ್ರಗಳನ್ನು ರಕ್ಷಿಸದಿದ್ದರೆ ಓದುಗರು ನಿರಾಶೆ ಪಡಬೇಕಾಗುತ್ತದೆ. ಬಲ್ಲಾಳರಲ್ಲಿ ಅತಿಯಾದ ಭಾವುಕತೆ, ಕೋಮಲತೆ ಇದೆ. ಇದು ಅವರ ಗಟ್ಟಿತನವನ್ನು ಮೀರಿ ನಿಲ್ಲುತ್ತದೆ. ರುಕ್ಮಿಣಿ ಕೊನೆಯವರೆಗೂ ಸಹಿಸಿಕೊಂಡು, ಕೊನೆಯ ಒಂದು ಹಂತದಲ್ಲಿ ಧೈರ್ಯಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದು ಹೇಮ ವಾಸ್ತವ ಸತ್ಯದಿಂದ ಕೊಸರಿಕೊಳ್ಳುವುದು, ‘ಹೇಮಂತಗಾನ’ದಲ್ಲಿ ಅನಂತ, ‘ಅನುರಕ್ತೆ’ಯಲ್ಲಿ ಪದ್ಮಾ ಅಕಾಲ ಮರಣಕ್ಕೆ ತುತ್ತಾದಂತೆಯೆ ಆಗಿದೆ. ಮುಖ್ಯ ಕಥೆಯಲ್ಲಿ ಈ ಪಾತ್ರಗಳ ಇರವನ್ನು ಕೊನೆಗೊಳಿಸುವ ಅವಸರ ಲೇಖಕರಿಗೆ ಇದ್ದಂತೆ ಕಾಣುತ್ತದೆ. ರುಕ್ಮಿಣಿಯ ಸಾವು ಸಹಜವಲ್ಲ. ಅವಳಿಗೆ ಸಾಯುವ ಇಚ್ಛೆಯಿರಲಿಲ್ಲ. ಆದರೆ ಕ್ಷಣಿಕ ಉದ್ವೇಗ. ಅನಂತ ಬದುಕಿನೊಡನೆ ಒಪ್ಪಂದ ಮಾಡಲು ಹೊರಟಿದ್ದ. ಆದರೆ ಸಹಜವಲ್ಲದ ರೀತಿಯಲ್ಲಿ ಅನಿರೀಕ್ಷಿತ ಅನಾಹುತ. ‘ಸಂಧ್ಯಾರಾಗ’ದ ಜಯಾನ ಅಕಾಲ ಮೃತ್ಯುವಿನಂತೆ, ಅಕಾರಣವಾಗಿ ಕಾಣುತ್ತದೆ. ಸುಮಿತ್ರೆಗಾದ ಅನ್ಯಾಯವನ್ನು ಪದ್ಮಾಳ ಸಾವಿನ ಮೂಲಕ ಸರಿಪಡಿಸಿದಂತೆ ಕಾಣುತ್ತದೆ. ರುಕ್ಮಿಣಿಯ ಸಾವಿನಲ್ಲೂ ಲೇಖಕರು ಹೆಚ್ಚು ಭಾವುಕರಾದಂತೆ ತೋರುತ್ತದೆ. ರುಕ್ಮಿಣಿಯ ಸಾವಿಗೆ ಅವಳ ತಂಗಿ ಕಾರಣವೆ. ಅವಳ ಭಾಗ್ಯದ ದೋಷಗಳು ಕಾರಣವೆ ಅಥವಾ ಕ್ಷಣಿಕ ಉದ್ದೇಗವೆ? ಆದರೆ ಇವು ಯಾವುವೂ ಅವಳ ಆತ್ಮಹತ್ಯೆಯನ್ನು ಬೇಡುವಷ್ಟು ಗಟ್ಟಿ ಕಾರಣವಾಗಲಾರದು. ಲೇಖಕರಾಗಿ ಬಲ್ಲಾಳರು ಮನಸ್ಸನ್ನು ಬಿಗಿಗೊಳಿಸದೆ ಪರಿಸ್ಥಿತಿಯನ್ನು ದುಃಖಾಂತಕ್ಕೆ ಒಳಪಡಿಸುತ್ತಾರೆ. ಪತಿಯ ಮರಣದ ನಂತರ ನಿರ್ಲಿಪ್ತವಾಗಿ ಪರಿವಾರಕ್ಕಾಗಿ ಬದುಕಿದ ರುಕ್ಮಿಣಿ ಮೋಹನನ ಪ್ರಲೋಭನೆಗೆ ಸಿಕ್ಕಿ ಆತ್ಮಾಹುತಿಗೊಳಗಾಗುತ್ತಾಳೆ. ಅಕೆಯ ಮನಸ್ಸು ಅಷ್ಟು ದುರ್ಬಲವಾಗುತ್ತದೆ. ‘ಹೆಜ್ಜೆ’ಯ ಸಾವಿತ್ರಿಯನ್ನು ಅನನ್ಯ ರೀತಿಯಲ್ಲಿ ಬೆಳೆಸುತ್ತಾ ಕೊನೆಗೆ ಗಾಂಧೀಯ ಆದರ್ಶದ ಶೋಧನೆಗೆ ಒಳಪಡಿಸಿ ಆಕೆಯ ಅಸ್ಮಿತೆಯೆ ಲುಪ್ತವಾಗುವಂತಾಗುತ್ತದೆ. ಹೇಮಾ ಆಧುನಿಕ ಮನೋಧರ್ಮದ ಗಟ್ಟಿ ನೆಲೆಯನ್ನು ಹುಡುಕುತ್ತಾ ಮುಖ್ಯ ತೆರೆಯ ಮರೆಯಾಗುತ್ತಾಳೆ. ಇವು ಕೆಲವು ಬಲ್ಲಾಳರ ಕಥನ ಕ್ರಿಯೆಯ ಚಿಂತನಾಕ್ರಮದ ಅಂಶಗಳು. ಇವನ್ನು ದುರಂತದ ಕಡೆಗಿನ ಒಲವು ಎಂದರೂ ಸರಿಯೆ. ಭಾವಜನ್ಯ ಎಂದರೂ ತಪ್ಪಿಲ್ಲ. ಭಾವಲೋಕದಲ್ಲಿ ಏನೂ ಸಾಧ್ಯ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೈ ತೊಳೆದು
Next post ಬೂತವೂ ಬಡಗಿಯೂ

ಸಣ್ಣ ಕತೆ

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಸಿಹಿಸುದ್ದಿ

  ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

 • ಬಸವನ ನಾಡಿನಲಿ

  ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys