ಚಿನ್ನೂ… ಇಷ್ಟೆಲ್ಲಾ ನಡೆದ ಮೇಲೂ ನನಗೆ ನಿದ್ದೆ ಬರಲು ಹೇಗೆ ಸಾಧ್ಯ ಹೇಳು? ಮಧ್ಯೆ ಮಧ್ಯೆ ರಾತ್ರಿಯ ವೇಳೆಯಲ್ಲೇ ಹೆಚ್ಚಾಗಿ ಬರುತ್ತಿದ್ದ ರೋಗಿಗಳು… ಹೆರಿಗೆ, ಸಿಝೇರಿಯನ್ ಶಸ್ತ್ರಕ್ರಿಯೆ, ಹೆಚ್ಚೇ ಇರುತ್ತಿತ್ತು. ಒಂದೊಂದು ದಿನಾ ಪ್ರಶಾಂತವಾಗಿರುತ್ತಿತ್ತು. ಆಗೆಲ್ಲಾ ನಾನು ನಿದ್ದೆ ಬಾರದೆ ಎಷ್ಟೋ ಬಾರಿ ಎಚ್ಚರವಾಗಿದ್ದುಕೊಂಡೇ ಬೆಳಗು ಮಾಡಿಬಿಡುತ್ತಿದ್ದೆ. ಸಿಹಿ ಕಹಿ ಗೀತಾ, ಚಂದ್ರು ಅವರಿಂದ ಬೀಳ್ಕೊಟ್ಟ ನಂತರ ನಾನು ಅಪಾರ್ಟ್‌ಮೆಂಟಿಗೇ ಹೋಗಲೇಬೇಕಿತ್ತು. ಬೇರೆ ಮನೆ ಎಲ್ಲಿತ್ತು?
ಮಧ್ಯರಾತ್ರಿ ಒಂದು ಗಂಟೆಗೆ ನನ್ನ ‘ಗಂಡ’ ಮನೆಗೆ ಬಂದಿದ್ದ. ಅವನ ಬಳಿಯಿದ್ದ ಮತ್ತೊಂದು ‘ಕೀ…’ ಯಿಂದ ಬಾಗಿಲು ತೆರೆದುಕೊಂಡು ಬಂದಿದ್ದ. ದೀಪ ಹಾಕಿದ ಅವನು ಅಲ್ಲಿಯೇ ಸೋಫಾದ ಮೇಲೆ ಕುಳಿತಿದ್ದ. ನನ್ನನ್ನು ನೋಡಿ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದ. ಸಾವರಿಸಿಕೊಂಡು ಉಡುಪು ಬದಲಾಯಿಸಲು, ರೂಮಿಗೆ ಹೋಗಿದ್ದ.
“ಊಟಕ್ಕೇನಾದ್ರೂ ತೆಗೆದುಕೊಂಡು ಬರಲಾ?”- ಕೇಳಿದ್ದ.
“ಊಹೂಂ…”
“ಹಸಿದು ಕೊಂಡು ಹೇಗೆ…” ಅವನ ಮಾತನ್ನು ಅರ್ಧದಲ್ಲಿ ಕಡಿದು, “ನಂದು ಊಟವಾಗಿದೆ…” ಎಂದಿದ್ದೆ.
“ಸರಿ…” ಎನ್ನುತ್ತಾ ಒಳಗೆ ಹೋಗಿದ್ದ. ನಾನವನನ್ನು ವಿಚಾರಿಸಿರಲಿಲ್ಲ. ಅವನ ಮುಖ ನೋಡಿಯೇ ಗ್ರಹಿಸಿದ್ದೆ. ಎಲ್ಲವನ್ನೂ ಮುಗಿಸಿಕೊಂಡೇ ಬಂದಿದ್ದ. ಆಶ್ಚರ್ಯವೆಂದರೆ ಆ ದಿನ ಅವನು ಕುಡಿದು ಬಂದಿರಲಿಲ್ಲ! ಒಳಗೆ ಹೋದವನು ಫೋನಿನಲ್ಲಿ ಮಾತನಾಡುತ್ತಿರುವುದು ಕೇಳಿಸಿತ್ತು.
ನಾನು ಸೋಫಾದ ಮೇಲೆಯೇ ಕಣ್ಣುಬಿಟ್ಟುಕೊಂಡೇ ಕುಳಿತಿದ್ದೆ. ನನ್ನ ಬದುಕು ಹೀಗೇಕಾಯ್ತು? ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕೆಂದು ಎಲ್ಲರೂ ಹೇಳುತ್ತಾರೆ. ಹಾಗಾದರೆ ನಾನು ಪ್ರತಿ ಹಂತದಲ್ಲೂ ಸೋತಿದ್ದೆನಾ? ಎಲ್ಲಾ ಹಣೆಬರಹವೆಂದು ಸುಳ್ಳು ಸಮಾಧಾನ ಪಡೆದುಕೊಳ್ಳಲು ನನ್ನ ಮನಸ್ಸು ಹಿಂಜರಿಯುತ್ತಿತ್ತು… ಅವ್ವಾ.. ಪದೇ ಪದೇ ಹೇಳ್ತಾಯಿದ್ದುದೊಂದೇ ಮಾತು,
“ನಿನ್ನ ಜೀವನಾನಾ ನೀನೇ ಕೈಯ್ಯಾರೆ ಹಾಳು ಮಾಡಿಕೊಂಡುಬಿಟ್ಟೆ…” ಎಂಬುದಾಗಿತ್ತು. ಅದೇ ನಿಜಾನಾ? ಯಾರು ತಾನೇ ಕೈಯ್ಯಾರೆ ಹಾಳು ಮಾಡಿಕೊಳ್ತಾರೆ? ನಾಳೆ ಏನಾಗಬಹುದೋ… ಏನೋ… ಎಲ್ಲರಿಗೂ ಚಿಂತೆ, ಭಯ ಕಾಡುತ್ತಿರುತ್ತದೆ. ನಮಗೆ ಮುಂದೇನಾಗಬಹುದೋಂತ ಯಾರಿಗೂ ಗೊತ್ತಾಗೋದೆ ಇಲ್ಲ. ಅಂದರೆ ಬದುಕಿನಲ್ಲಿ ತೊಂದರೆಗಳು, ಸಮಸ್ಯೆಗಳು ದಾಂಗುಡಿಯಿಟ್ಟ ಮೇಲೇನೇ ತಾನೆ ಗೊತ್ತಾಗೋದು? ಹಾಗಾದ್ರೆ ತಪ್ಪು ಯಾರದಾಗಿರುತ್ತದೆ ಮಗಳೇ?
ಮೈಸೂರಿನಲ್ಲಿ ಮೆಡಿಕಲ್ ಕಾಲೇಜು ಓದುತ್ತಿರುವಾಗ ನನಗಿಂತ ಹಿರಿಯ ಅಸಿಸ್ಟೆಂಟ್ ಪ್ರೊಫೆಸರ್ ಮೇಲೆ ನನಗೆ ಪ್ರೀತಿಯುಂಟಾಗಿತ್ತು. ಆದರೆ ಅವರು ನಿರಾಕರಿಸಿ, ಭಾವಿಸಿದ್ದನಂತೆ! ಇದರಿಂದ ನನ್ನ ಮೊದಲ ಪ್ರೇಮವೇ ಸೋತುಹೋಗಿತ್ತು. ಮತ್ತೆಂದೂ ಯಾರನ್ನೂ ಪ್ರೀತಿ ಮಾಡದಂತೆ ನನ್ನ ಕೋಮಲ ಭಾವನೆಗಳನ್ನು ಸುಟ್ಟು ಹಾಕಿತ್ತು. ಹೃದಯವನ್ನೇ ಚೂರು ಚೂರು ಮಾಡಿಬಿಟ್ಟಿತ್ತು. ಹಾಗಂತ ಯಾರಿಗೆ ಹೇಳಲಿ? ಪ್ರೀತಿಸಿದ್ದೇ ನನ್ನ ತಪ್ಪಾಗಿತ್ತು!
ಸ್ನಾತಕೋತ್ತರ ಪದವಿಗಾಗಿ ಓದು, ಕೆಲವು ಕಹಿ ಮನಸ್ಸಿನ ಅಹಂಕಾರದ ಶಿಕ್ಷಕರು ನನ್ನ ಶೋಷಣೆ ಮಾಡಿದಾಗ ನಾನು ಬಂಡಾಯವೆದ್ದಿದ್ದೆ. ಗುರುಗಳಿಗೇ ಅಪಮಾನ ಮಾಡಿದ್ದೆ… ನನಗೆಷ್ಟಾದರೂ ಕಿರುಕುಳ ಅವಮಾನವಾಗಿರಲಿ ತುಟಿಬಿಚ್ಚಬಾರದಿತ್ತು. ಆದರೆ ನಾನು ಅವರ ಮುಖದ ಮೇಲೆಯೇ ಪ್ರಬಂಧ ಬರೆದಿದ್ದ ಪೇಪರುಗಳನ್ನು ಎಸೆದು ಬಂದಿದ್ದೆ. ಇದೂ ನನ್ನ ತಪ್ಪಾಗಿತ್ತು.
ಸರ್ಕಾರಿ ನೌಕರಿ ಸಿಕ್ಕು ಮೊದಲ ಬಾರಿಗೆ ಉತ್ಸಾಹದಿಂದ ಆ ಊರಿನ ಆಸ್ಪತ್ರೆಗೆ ಕೆಲಸ ಮಾಡಲು ಹೋದಾಗ, “ಒಳ್ಳೆಯ ವೈದ್ಯೆಯೆನ್ನಿಸುವುದೊಂದೇ ಒಳ್ಳೆಯ ವೈದ್ಯೆಯಾಗಿ ನನ್ನ ವೃತ್ತಿಗೆ ಗೌರವ ತರಬೇಕೆಂದುಕೊಂಡಿದ್ದೆ. ಅಲ್ಲಿ ಆಗಿದ್ದೇ ಬೇರೆ. ಅಲ್ಲಿನ ವೈದ್ಯರುಗಳ ಜೊತೆ ಒಂದಾಗಲೇ ಇಲ್ಲ. ಭ್ರಷ್ಟಾಚಾರವೇ ಅವರುಗಳ ಮುಖ್ಯ ಧೈಯವಾಗಿತ್ತು. ನಾನು ಪ್ರತಿಭಟಿಸಿದೆ. ಸರ್ಕಾರಿ ಕೆಲಸ ಬಿಟ್ಟೆ ಅದೂ ನನ್ನ ತಪ್ಪಾಗಿತ್ತು…!
ಕೆಲವೇ ದಿನಗಳ ಸ್ನೇಹದಿಂದ ಮೈಮರೆತು ‘ಮೈದಾನ’ ಮಾಡಿದ್ದೆ. ಅಲ್ಲಿಯವರೆಗೂ ಮುಂದುವರೆದರೆ ಮದ್ವಯಾಗಲೇ ಬೇಕೆಂದುಕೊಂಡಿದ್ದೆ. ಅದೆಲ್ಲಾ ಸುಳ್ಳು ಎಂದು ಮದುವೆಯಾಗೋಕೆ ಸಾಧ್ಯವಿಲ್ಲವೆಂದು ಮುಖಕ್ಕೆ ರಾಚುವಂತೆ ಆ ವ್ಯಕ್ತಿ ನನಗೆ ತಿರಸ್ಕರಿಸಿ ಹೊರಟು ಹೋಗಿದ್ದ. ಇದು ಅವ್ವ, ಮನೆಯವರಿಗೆಲ್ಲಾ ತಿಳಿದಿದ್ದು, ನನ್ನನ್ನು “ಮನೆಗೆ ಕಾಲಿಡಕೂಡದು” ಎಂದು ಮುಖದ ಮೇಲೆ ಬಾಗಿಲು ಹಾಕಿದ್ದರು. ನಾನೇನಾದ್ರೂ ಮನಸ್ಸು ತಡೆಯದೆ ಮನೆಯವರನ್ನು ನೋಡಲು ಹೋದರೆ, ನನ್ನ ತಂಗಿಯ ಗಂಡ ಆ ಕೂಡಲೇ ಬ್ರೀಫ್‌ಕೇಸ್ ಹಿಡಿದು ಹೊರಗೆ ಹೋಗಿಬಿಡುತ್ತಿದ್ದರು. ನಾನು “ಕುಲಗೆಟ್ಟವಳು ಮನೆತನಕ್ಕೆ ಕೆಟ್ಟ ಹೆಸರು ತಂದುಕೊಟ್ಟೆ. ಮುಂದಿನ ದಿನಗಳಲ್ಲಿ ನಮ್ಮ ಮನೆಯ ಸಂಬಂಧ ಯಾರು ಮಾಡೋಕೆ ಬರೋಲ್ಲ…” ಎನ್ನುತ್ತಿದ್ದರಂತೆ. ಅವ್ವನಿಗೆ ಯಾವಾಗಲೂ ಆ ಚಿಕ್ಕ ಮಗಳ, ಮಗಳ ಮೇಲೆ ಒಂಥರಾ ವ್ಯಾಮೋಹ, ಅವಳ ಮಕ್ಕಳ ಮೇಲೆ ಅತ್ಯಂತ ಮಮಕಾರ, ನನ್ನ ತಂಗಿ ಹಾಗೆಯೇ ಇದ್ದಳು. ಯಾರೊಂದಿಗೂ ವೈಮನಸ್ಯ ಮಾಡಿಕೊಳ್ಳೋದಿಲ್ಲ. ಆಗಲೇ ಹೇಳಿದ್ದೆನಲ್ಲ ಅವಳು Submissive ಅಂತ, ಅವಳು ತಾನೇ ಏನು ಮಾಡಿಯಾಳು. ನಾನು ಬೆಂಗಳೂರಿಗೆ ಬಂದ ನಂತರ ‘ಗಂಡ’ನ ಮನೆಯವರು, ನನ್ನ ತವರು ಮನೆಯವರು ಬಂದು ಹೋಗತೊಡಗಿದ್ದರು. ನನ್ನನ್ನು ಮನೆಯಿಂದ ಹೊರ ಹಾಕಿದ್ದರಲ್ಲಿ ಅವರ ತಪ್ಪೇನೂ ಇರಲಿಲ್ಲ. ಇದೂ ನನ್ನ ತಪ್ಪೇ..!
ಕಾಣದ ಕೆಸರಲ್ಲಿ ಕಾಲಿಟ್ಟು ಕೊಳೆ ಮಾಡಿಕೊಂಡಿದ್ದೆ. ಆದರೂ ಅವನ ತಮ್ಮನನ್ನೇ ಮದುವೆಯಾಗಿ ಪೂರ್ತಿಯಾಗಿ ಕೆಸರು ಗುಂಡಿಯಲ್ಲಿ ನಾನೇ ಬಿದ್ದುಬಿಟ್ಟಿದ್ದೆ. ಅಂದು ಸಾಮಾಜಿಕ ಭದ್ರತೆ ಒಂಟಿಯಾಗಿ ಬೆಂಗಳೂರಿನಲ್ಲಿ ಬದುಕುವ ಭಯ ಇವನ್ನು ಮಾಡಿಸಿತ್ತು. ಇದೂ ನನ್ನ ತಪ್ಪೇ..!
ಬೆಂಗಳೂರಿಗೆ ಬಂದ ನಂತರ ಬದಲಾಗಿ ಹೋಗಿತ್ತು ನನ್ನ ಬದುಕು ಬದಲಾಗುತ್ತಾ ಬಂದಿತ್ತು. ನನ್ನ ಮೊದಲಿನ ವ್ಯಕ್ತಿತ್ವವನ್ನು ಬೆಂಗಳೂರಿನಲ್ಲಿರುವ ಸ್ನೇಹ ಬಳಗ, ಮಾಧ್ಯಮದವರ ಪ್ರೀತಿ-ಗೌರವ ಸಹಾಯ ಮಾಡುವುದು ನನ್ನಲ್ಲಿ ನನಗೆ ಆತ್ಮವಿಶ್ವಾಸವನ್ನು ವಿಶಾಲ ದೃಷ್ಟಿಯನ್ನು ಕಲಿಸಿತ್ತು. ವಯಸ್ಸಾಗುತ್ತಾ ಬಂದಿತ್ತು ಪ್ರೌಢತೆ, ಪ್ರಬುದ್ಧತೆ ನನ್ನ ಕೆಲವು ಮುಗ್ಧ ಭಾವಗಳನ್ನು ತೊಲಗಿಸಿತ್ತು. ಒಂಟಿಯಾಗಿ ಎಲ್ಲಿಯಾದರೂ ಬದುಕಬಲ್ಲೆನೆಂಬ ಮಾನಸಿಕ ಬಲ ಬಂದಿತ್ತು. ಹೀಗಾಗಿ ನಾನು ಮಾಡಿದ್ದ ‘ತಪ್ಪು’ಗಳನ್ನು ಶಾಂತವಾಗಿ ತುಲನೆ ಮಾಡಿಕೊಳ್ಳುವಂತೆ ಮಾಡಿತ್ತು.
ನಾನು ಸಾಮಾಜಿಕ ಭಯ, ಅಪವಾದ, ಸಾಮಾಜಿಕ ಭದ್ರತೆಯ ಬಗ್ಗೆ ಅದೆಷ್ಟು ಯೋಚಿಸಿ ಭಯ ಪಡುತ್ತಿದ್ದೆ. ಈಗಿನ ಯುವಕ, ಯುವತಿಯರು, ತಾವೇ ಹೇಳಿಕೊಳ್ಳುವಂತೆ, “ನಮ್ಮ ವೈಯಕ್ತಿಕ ಬದುಕಿನ ಬಗ್ಗೆ ಬೇರೆ ಯಾರೂ ನಿರ್ಧಾರ ತೆಗೆದುಕೊಳ್ಳುವ ನೈತಿಕ ಹಕ್ಕು ಇಲ್ಲ. ನಮ್ಮ ತಂದೆ-ತಾಯಿಯರಿಗೂ ಸಹಾ…” ಎಂದು ಅದೆಷ್ಟು ನಿರ್ಭಯವಾಗಿ, ನಿರ್ಭಿಡೆಯಿಂದ ಹೇಳುತ್ತಾರೆ! ಅಂದು ನನಗೆ ಆ ಧೈರ್ಯವಿರಲಿಲ್ಲ ಅಂತೀಯಾ, ಚಿನ್ನು?
ಈಗಿನ Generation ನೋಡಿದ್ರೆ ಅದೆಷ್ಟು Gap ಇದೇಂತ ಅನ್ನಿಸುತ್ತೆ. “Live in Together” ಅಂತ ಹೇಳಿಕೊಂಡು ಮದುವೇನೇ ಆಗದ ಗಂಡ ಹೆಂಡತಿಯರಂತೆ ಜೀವಿಸುತ್ತಾರೆ. ಬೇಸರವಾದರೆ ಬೇರೆ ಬೇರೆಯಾಗಿ ಬಿಡುತ್ತಾರೆ. ಈ ದಿನ ಪ್ರೀತಿ ಮಾಡಿ ಮದುವೆ ಮಾಡಿಕೊಂಡು ಮರುದಿನವೇ ವಿಚ್ಛೇದನಕ್ಕೆ ಮೊರೆ ಹೋಗುತ್ತಾರೆ. ಮತ್ತೆರೆಡು ವಾರಗಳಲ್ಲಿ ಮತ್ತೆ ಒಂದು ಪ್ರೀತಿ ಮದುವೆಗೆ ತಯಾರಾಗುತ್ತಾರೆ. ಇಲ್ಲಿ ನಾನು ಮೌಲ್ಯಗಳನ್ನು ಹುಡುಕುತ್ತಿಲ್ಲ ಮಗಳೇ. ನನ್ನಂತಹವರನ್ನು ಕಂಡರೆ ಕರುಣೆ, ನಗು ಬರುವುದು ಸಹಜವೇ… ಆದರೆ ಬಾಲ್ಯದಿಂದಲೇ ನಮ್ಮಂತಹವರ ಮೇಲೆ ಪ್ರಭಾವ, ಹೇರಿಕೆಯಿಂದ ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲಾಗದು. ಇದು ಮಧ್ಯಮ ವರ್ಗದವರ ಪಡಿಪಾಟಲು.
ಸಮಾಜದಲ್ಲಿ ಅದೆಷ್ಟು ಜನ ಕೊನೆಯವರೆಗೂ ಅವಿವಾಹಿತರಾಗಿಯೇ ಉಳಿದಿಲ್ಲ? ಭದ್ರತೆ ಎನ್ನುವುದೆಲ್ಲವನ್ನೂ ನಮ್ಮಲ್ಲಿಯೇ ಬೆಳೆಸಿಕೊಳ್ಳಬೇಕು. ಈಗ ಅನ್ನಿಸ್ತಾಯಿದೆ ನನಗೆ. ನಾನು ಬಂದ ದಾರಿಯಲ್ಲಿನ ಘಟನೆಗಳಲ್ಲಿ ಹೆಚ್ಚಾಗಿ ನನ್ನದೇ ತಪ್ಪು ಎಂದೆನ್ನಿಸತೊಡಗಿತ್ತು ಕಣೆ. ಯೋಚನೆಗಳಿಂದ ತಲೆಕೆಡಿಸಿಕೊಳ್ಳುತ್ತಿದ್ದ ನನಗೆ ಯಾವಾಗ ನಿದ್ದೆ ಬಂದಿತ್ತೋ ಏನೋ ಗೊತ್ತಿಲ್ಲ.
*****
ಮುಂದುವರೆಯುವುದು