ಇದು ಚಲಚ್ಚಿತ್ರಗಳ ಛತ್ರ, ಕಾಣುವದಿಲ್ಲಿ
ಎಲ್ಲ ಸೃಷ್ಟಿ, ವಿಚಿತ್ರ. ರವಿಯ ಪಟ್ಟದ ಮಹಿಷಿ-
ಯಾದ ಛಾಯಾದೇವಿ ಇದರ ಭಾರವ ವಹಿಸಿ
ಬಳಗದೊಡನೆಯೆ ಬಂದು ಪ್ರತಿಬಿಂಬಿಸುವಳಿಲ್ಲಿ
ಲೋಗರಾ ದುಗುಡ-ನಲುಮೆಗಳ, ಕೇಂದ್ರಿಸುತಿಲ್ಲಿ
ಕಿರಣವ್ಯೂಹವನವಳು ಉಸಿರಾಗಿ ಮಾರ್‍ಪಡಿಸಿ
ನಿಲ್ಲುವಳು, ಉಸಿರ ಬೆಳಕಾಗಿಸುತ. ಇಮ್ಮಡಿಸಿ
ಕಾಣುವದು ಸೂಗವವಳ ಮಾಯ ಬೀಸಿರುವಲ್ಲಿ!
ಸತಿಯ ನಡತೆಯ ಕಂಡು ರವಿಯು ಮುನಿದಿಹನಂತೆ;
ಮತ್ತವಳ ಮೈದುನನು, ಗುರು ತಾನು! ಇದಕೆ ಸಾ-
ಕಿಹುದಂತೆ ಕಣ್ಣೆರಡು, ಒಳಗಣ್ಣು ಬೇಕಿಲ್ಲ-
ಶ್ಯಾವ್ಯ ಕಾವ್ಯವ ಮರತ ದೃಶ್ಯಕನೆ ಇದೆಯಂತೆ
ಇಂದ್ರಿಯಗಳಿಂದ್ರವೈಭವವಿಲ್ಲ ಇಂದ್ರಿಯಾ-
ತೀತವನು ಸಲೆ ಮರತು, ಭರತಮುನಿ ಇದ ಬಲ್ಲ!
*****